ಗೀತೆಯನ್ನು ಅರ್ಥೈಸಿಕೊಳ್ಳಲಾಗದವರು ಬದುಕಿನ ವಾಸ್ತವಗಳನ್ನು ಅರಗಿಸಿಕೊಳ್ಳಲಾರರು
– ಮಯೂರ ಲಕ್ಷ್ಮಿ
“ಈ ಜಗತ್ತು ಭಗವಂತನ ಸೃಷ್ಟಿ ಎನ್ನುವ ವಿಚಾರವು ಭಗವದ್ಗೀತೆಯನ್ನು ಓದಿದಾಗ ಅರಿವಾಯಿತು… ಈ ವಿಚಾರದ ಮುಂದೆ ಇನ್ನೆಲ್ಲಾ ಆಲೋಚನೆಗಳೂ ಗೌಣವೆನಿಸಿತು” – ಆಲ್ಬರ್ಟ್ ಐನ್ ಸ್ಟೀನ್
ಭಗವದ್ಗೀತೆಯನ್ನು ಉದಾತ್ತ ಮನಸ್ಸುಗಳಿಂದ ವಿಶಾಲ ಹೃದಯಗಳಿಂದ ಅರ್ಥಮಾಡಿಕೊಳ್ಳುವವರಿಗೆ ಅದು ಸಕ್ಕರೆಯಂತೆ ಸಿಹಿ, ಅತ್ಯಂತ ಸರಳವಾದ ರೀತಿಯಲ್ಲಿ ಮನುಷ್ಯನು ಈ ಭೂಮಿಯಲ್ಲಿ ನಡೆದುಕೊಳ್ಳಬೇಕಾದ ರೀತಿಯನ್ನು ತಿಳಿಸುವ ಸುಲಭ ಸಾಧನ, ಸಂಕುಚಿತ ಮನಸ್ಸುಗಳಿಂದ ಅದರ ವ್ಯಾಪ್ತಿಯನ್ನು ಪೂರ್ವಾಗ್ರಹಪೀಡಿತರಾಗಿ ತಪ್ಪುಗಳನ್ನೇ ಹುಡುಕಿ ನೋಡುವವರಿಗೆ ಅದು ಅರ್ಥವಾಗದ ಕ್ಲಿಷ್ಟ ಗ್ರಂಥವೇ ಸರಿ! ಇನ್ನು ಗೀತೆ ಎಂದರೆ ಕೋಮುವಾದಿ ಗ್ರಂಥ ಶ್ರೀಕೃಷ್ಣನೆಂದರೆ ಸ್ತ್ರೀಲೋಲ ಎಂಬ ಭಾವನೆಯಿಂದಲೇ ನೋಡುವವರಿಗೆ ಇದು ಅರ್ಥವಾದೀತಾದರೂ ಹೇಗೆ? ಕೃಷ್ಣನ ರಾಜನೀತಿಯ ನೈಪುಣ್ಯತೆಯನ್ನು ಮುತ್ಸದ್ದಿತನವನ್ನೂ ಅವನ ಸಮಾಜ ಪರಿವರ್ತನೆಯ ಮತ್ತು ಧರ್ಮರಕ್ಷಣೆಯ ಸಂಕಲ್ಪವನ್ನು ಒಪ್ಪದವರು ಅವನ ವಾಣಿಯಾದ ಗೀತೆಯನ್ನು ಸ್ವೀಕರಿಸುವುದು ಸಾಧ್ಯವಿಲ್ಲಾ. ಹಿಂದೂ ಧರ್ಮಗ್ರಂಥಗಳನ್ನು ಟೀಕಿಸಿ ಬುದ್ಧಿವಂತರೆನಿಸಿಕೊಳ್ಳುವುದು ಕೆಲವರ ಹವ್ಯಾಸ.
ಪ್ರಪಂಚದ ಎಲ್ಲಾ ಮಹನೀಯರೂ ದಾರ್ಶನಿಕರೂ ಗೀತೆಯನ್ನು ಕೋಮುವಾದವನ್ನು ಪ್ರಚೋದಿಸುವ ಗ್ರಂಥವೆಂದೇ ನೋಡಿದ್ದಲ್ಲಿ ಭಗವದ್ಗೀತೆ ವಿಶ್ವವ್ಯಾಪಿ ಎನಿಸಿಕೊಳ್ಳುತ್ತಿತ್ತೇ? ಸಾಹಿತ್ಯವೆಂದರೆ ಜ್ಞಾನದ ಸಾಧನಗಳು,ಜಾಗೃತಿಯ ಚೇತನಗಳು.. ಇಂತಹ ಪುಸ್ತಕಗಳನ್ನೋದಿ ವಿವೇಕಿಗಳಾಗಲೂ ಬಹುದು, ವಿಮರ್ಶಕರಾಗಲೂಬಹುದು.ಪುಸ್ತಕಗಳ ವಿಮರ್ಶೆ ಓದುಗರಿಗೆ ಬಿಟ್ಟದ್ದು, ಅಭಿವ್ಯಕ್ತಿ ಸ್ವಾತಂತ್ರ ಎಲ್ಲರಿಗೂ ಇದೆ ಎನ್ನವುದು ನಿಜವಾದರೂ ಅಭಿವ್ಯಕ್ತಿಯ ಹೆಸರಲ್ಲಿ ಮನಬಂದಂತೆ ಹೇಳಿಕೆಗಳನ್ನು ನೀಡಿ ಪುಸ್ತಕಗಳನ್ನು ಸುಡುವುದು ಪರಿಹಾರವೆಂದು ವಾದಿಸುವುದು ಭ್ರಮೆಯಲ್ಲದೇ ಇನ್ನೇನು? ಪ್ರತಿಯೊಂದನ್ನೂ ತಾರ್ಕಿಕ ಮಟ್ಟದಲ್ಲೇ ವಿಮರ್ಶಿಸುತ್ತಾ ಹೋದರೆ ಹೊಸ ಹೊಸ ರೀತಿಯ ‘ಇಸಂ’ಗಳ ಸೃಷ್ಟಿಯಾಗುತ್ತಾ ಹೋಗುವುದೇ ಹೊರತು ಬೌದ್ಧಿಕ ಪರಾಮರ್ಶೆಯಾಗದು.
ದ ಬರ್ನಿಂಗ್ ಆಫ್ ದ ಬುಕ್ಸ್….ಬರ್‍ಟಾಲ್ಟ್ ಬ್ರೆಟ್‍ನ ಈ ಕವನ ನೆನಪಾಗುತ್ತದೆ….
10 ಮೇ, 1933..ಜರ್ಮನಿಯ ಬರ್ಲಿನ್‍ನ ಸ್ಟೇಟ್ ಅಪೇರಾದ ಮುಖ್ಯ ಸ್ಥಳದಲ್ಲಿ 25,000 ಜನರು ಸೇರಿದ್ದರು. ಹಿಟ್ಲರ್‍ನ ಆಜ್ಞೆಯಂತೆ ಜರ್ಮನಿಯ ನಾಝೀ ಪ್ರಚಾರಕ ಮಂತ್ರಿ ಜೋಸೆಫ್ ಗೋಬೆಲ್ಸ್ ನೇತೃತ್ವದಲ್ಲಿ 25,000 ಪುಸ್ತಕಗಳು ಅಗ್ನಿಜ್ವಾಲೆಗೆ ಬಲಿಯಾಯಿತು. ಇವುಗಳಲ್ಲಿ ಪ್ರಮುಖವಾದವು ವಾಲ್ಟರ್ ಬೆಂಜಮಿನ್, ಐನ್‍ಸ್ಟೀನ್, ವಿಕ್ಟರ್ ಹ್ಯೂಗೋ, ಟಾಲ್‍ಸ್ಟಾಯ್ ಮುಂತಾದ ಪ್ರಸಿದ್ಧ ವಿಜ್ಞಾನಿಗಳೂ, ಬರಹಗಾರರೂ ಚಿಂತಕರ ಪುಸ್ತಕಗಳೇ ಪ್ರಮುಖವಾದವು. ಜರ್ಮನಿಯ ಮೂಲ ಸಂಸ್ಕೃತಿಯ ಪತನದೊಂದಿಗೆ ಹೊಸ ಸಂಸ್ಕೃತಿಯನ್ನೇ ಹುಟ್ಟು ಹಾಕುವ ಉದ್ದೇಶದಿಂದ ಸರ್ವಾಧಿಕಾರಿಯಾಗಿದ್ದ ಹಿಟ್ಲರ್‍ನ ಯೋಜನೆಯಂತೆ ಪ್ರಜೆಗಳಲ್ಲಿ ಜರ್ಮನಿಯ ಮೂಲ ಆಚರಣೆ, ರೀತಿ-ನೀತಿ ಮತ್ತು ಸಾಂಸ್ಕೃತಿಕ ಇತಿಹಾಸವನ್ನೇ ಅಳಿಸಿ ತನಗೆ ಶರಣಾಗದವರನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷಿಸುತ್ತಿದ್ದ ನಾಝೀ ಸರ್ಕಾರದ ಎಲ್ಲಾ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿದ್ದ ಗೋಬೆಲ್ಸ್ ಈ ಪುಸ್ತಕಗಳ ದಹನ ಕಾರ್ಯದ ಮೇಲ್ವಿಚಾರಣೆ ಹೊತ್ತಿದ್ದ. ಜನರಲ್ಲಿ ವಾಸ್ತವದ ಅರಿವುಂಟು ಮಾಡಿ ಸರ್ಕಾರದ ವಿರುದ್ಧ ದಂಗೆ ಏಳುವುದನ್ನು ತಪ್ಪಿಸಲು ನೂರಾರು ವರ್ಷಗಳ ಮೂಲ ಸಂಸ್ಕೃತಿಯನ್ನು ಬಿಂಬಿಸುತ್ತಿದ್ದ ಸಾಹಿತ್ಯ ಪ್ರಕಾರಗಳು, ಮೂಲ ಪ್ರತಿಗಳೊಂದಿಗೆ ಅಂದಿನ ಪ್ರಮುಖ ಸಾಹಿತಿಗಳು, ವಿಜ್ಞಾನಿಗಳ ಮತ್ತು ಚಿಂತಕರ ಎಲ್ಲಾ ಪುಸ್ತಕಗಳು ಅಗ್ನಿಗೆ ಆಹುತಿಯಾದವು.ಗೋಬೆಲ್ಸ್ ನ ವಾದ ಸರಣಿಯೂ ವಿಚಿತ್ರವಾಗಿತ್ತು. ಸಾವಿರಾರು ಪುಸ್ತಕಗಳನ್ನು ಸುಟ್ಟು ಉರಿಯುತ್ತಿದ್ದ ಅಗ್ನಿಯನ್ನು ಕುರಿತ ಅವನ ಮಾತುಗಳು: “ಉರಿಯುತ್ತಿರುವ ಈ ಪುಸ್ತಕಗಳ ಬೆಂಕಿಯು ಹಳೆಯ ಸಂಸ್ಕೃತಿಯನ್ನು ಸುಟ್ಟು ಹೊಸ ಸಂಸ್ಕೃತಿಯನ್ನೇ ಹುಟ್ಟು ಹಾಕುವುದು, ಇದು ಹೊಸ ನಾಗರೀಕತೆಗೆ ನಾಂದಿ”.
1943ರಲ್ಲಿ ಸೋಲಿನ ಸಮಯದಲ್ಲಿ ತನ್ನ ಡೈರಿಯಲ್ಲಿ ತಾನೇ “ನಮ್ಮ ಸೇತುವೆಗಳನ್ನು ನಾವೇ ಸುಟ್ಟಾಯಿತು, ಇನ್ನು ಹಿಂದಿರುಗುವ ಮಾತಿಲ್ಲ.” ಎಂದು ಬರೆಯುತ್ತಾನೆ. ನವ ನಾಗರೀಕತೆಯ ಸೋಗಿನಲ್ಲಿ ಸರ್ವಾಧಿಕಾರಿಯ ಮುಖ್ಯ ಸಹಾಯಕನಾಗಿ ರೇಡಿಯೋ, ಪತ್ರಿಕೆ, ರಂಗಭೂಮಿ, ವಿಶ್ವವಿದ್ಯಾಲಯ.. ಹೀಗೆ ಎಲ್ಲಾ ಮಾಧ್ಯಮಗಳಲ್ಲೂ ತನ್ನ ಪ್ರಭಾವ ಬೀರಿ ಜನರಲ್ಲಿ ಭೀತಿ ಹುಟ್ಟಿಸಿ, ಯಾರನ್ನೂ ಪ್ರೀತಿಸದೆ ಯಾರಿಂದಲೂ ಪ್ರೀತಿಸಲ್ಪಡದೆ ಕೊನೆಗೆ ತನ್ನ ಅಂತ್ಯವನ್ನು ತಾನೇ ಕಂಡ ಹಿಟ್ಲರ್ ಮತ್ತು ಗೋಬೆಲ್ಸ್ ಕೊನೆಗೆ ಸಾಧಿಸಿದ್ದಾದರೂ ಏನು? ತನ್ನ ಜೀವಿತಾವಧಿಯ ಮುಖ್ಯ ಸಮಯದಲ್ಲಿ ದೇಶದಿಂದ ದೂರವಿದ್ದು ಅಜ್ಞಾತನಾಗಿದ್ದ ….ಬರ್‍ಟಾಲ್ಟ್ ಬ್ರೆಟ್ ದ ಬರ್ನಿಂಗ್ ಆಫ್ ದ ಬುಕ್ಸ್ ಕವನದಲ್ಲಿ “ನನ್ನ ಪುಸ್ತಕಗಳಲ್ಲಿ ನಾನು ಸತ್ಯವನ್ನಲ್ಲದೆ ಬೇರೇನನ್ನೂ ನುಡಿದಿಲ್ಲಾ…ಈ ರೀತಿ ಪುಸ್ತಕಗಳನ್ನು ಸುಡುವ ಬದಲು ನನ್ನನ್ನೇ ಸುಟ್ಟುಬಿಡಿ… ಇದು ನನ್ನ ಆಜ್ನೆ… ನನ್ನನ್ನೇ ಸುಟ್ಟುಬಿಡಿ..” ಎಂದು ಬರೆದು ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುವ ಸರ್ವಾಧಿಕಾರದ ವಿರುದ್ಧ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ. ಜ್ಞಾನವು ಅರಿವಿನ ಮೂಲವಾದ್ದರಿಂದ ಅದು ಕೈಗೆಟುಕದಂತೆ ನಾಶಮಾಡಬೇಕೆಂದು ಆಜ್ಞೆ ನೀಡಿದರೂ ಇತಿಹಾಸದ ಪುಟಗಳಲ್ಲಿ ಮತ್ತೆ ಮತ್ತೆ ತಲೆಯೆತ್ತಿ ನಿಂತದ್ದು ಹುದುಗಿಹೋದ ಸತ್ಯರೂಪಿ ಜ್ಞಾನವಷ್ಟೇ!
ಎಂತಹ ಕಷ್ಟದಲ್ಲೂ ಕಠಿಣ ಪರಿಸ್ಥಿತಿಯಲ್ಲೂ ಗೀತೆಯತ್ತ ತಿರುಗುತ್ತಿದ್ದ ಗಾಂಧೀಜಿಯವರು ನಂಬಿದ್ದ ತತ್ವಗಳಾದ ಸ್ಥಿತಪ್ರಜ್ಞನು ನಿಷ್ಕಾಮ ಕರ್ಮವನ್ನು ಅನುಸರಿಸಬೇಕು ಮತ್ತು ಅಪರಿಗ್ರಹಕ್ಕೂ ಸಮಭಾವಕ್ಕೂ ಅವಶ್ಯವಾದದು ಹೃದಯ ಪರಿವರ್ತನೆ ಮತ್ತು ಮನೋಧರ್ಮ ಪರಿವರ್ತನೆ ಎನ್ನುವವುದನ್ನು ಅರಿತುಕೊಂಡದ್ದು ಗೀತೆಯು ನೀಡಿದ ಬೆಳಕಿನಿಂದಲ್ಲವೇ? ಗಾಂಧೀಜಿಯವರ ಆದರ್ಶಗಳನ್ನು ಒಪ್ಪುವ ನಾವು ಇದನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆಯಿಲ್ಲವೇ?
20ನೆಯ ಶತಮಾನದ ಇಂಗ್ಲಿಷ್ ಕವಿ ಮತ್ತು ದಾರ್ಶನಿಕ ಟಿ.ಎಸ್.ಎಲಿಯಟ್ ತನ್ನ ನೋಬೆಲ್ ಪುರಸ್ಕೃತ ಗ್ರಂಥದಲ್ಲಿ ಬೃಹದಾರಣ್ಯಕ ಉಪನಿಷತ್ತಿನ ಸಂಸ್ಕೃತದಲ್ಲಿನ ನೇರ ವಾಕ್ಯಗಳನ್ನು ಬಳಸಿ ಮನುಷ್ಯನು ಬದುಕಲು ಅವಶ್ಯಕವಾದ ದತ್ತ, ದಮ್ಯತೆ ಮತ್ತು ದಯೆಯನ್ನು ಕುರಿತು ಪ್ರಸ್ತಾಪಿಸಿದ್ದಾನೆ. ಇದಲ್ಲದೆ ತನ್ನ ‘ಫೋರ್ ಕ್ವಾರ್ಟೆಟ್ಸ್’ ಎಂಬ ಕವನದಲ್ಲಿ ಆಧ್ಯಾತ್ಮಿಕ ಒಲವನ್ನು ಭಗವದ್ಗೀತೆಯ ಅರ್ಥಗಳನ್ನು ಉಲ್ಲೇಖಿಸಿದ್ದಾನೆ. ಸಮಯದ ಅನಂತತೆಯನ್ನು ಕುರಿತು ತಿಳಿಸುತ್ತಾ ಕಾಲವೆಂಬುದು ಉತ್ಪಾದಕವೂ ಅಂತೆಯೇ ವಿನಾಶಕಾರಿಯೂ ಎಂಬ ‘ಕಾಲೋಸ್ಮಿ’ ಎನ್ನುವ ಗೀತಾವಾಕ್ಯವನ್ನೇ ಹೇಳಿದ್ದಾನೆ. ಪರದೇಶದವನಾಗಿ ಭಾರತೀಯ ಸಂಸ್ಕೃತಿಯ ಮತ್ತು ಸಂಸ್ಕೃತವನ್ನು ಕಲಿತು ಗೀತೆಯನ್ನು ಗೌರವಿಸಿದ ವಿಶ್ವವಿಖ್ಯಾತ ಕವಿ ಎಲಿಯಟ್ ಕೋಮುವಾದಿಯೇ?
ಗೀತೆಯಿಂದ ಬದುಕಲ್ಲಿ ಬೆಳಕು ಕಂಡ ಭಾರತೀಯ ಮೂಲದ ತುಳಸಿ ಗಬ್ಬರ್ಡ್ ಅಮೇರಿಕಾದ ಡೆಮೋಕ್ರಾಟಿಕ್ ಪಾರ್ಟಿಯಿಂದ ಅಮೇರಿಕಾದ ಕಾಂಗ್ರೆಸ್‍ಗೆ ಆಯ್ಕೆಯಾದಾಗ ಭಗವದ್ಗೀತೆಯ ಮೇಲೆ ಪ್ರಮಾಣ ಮಾಡಿ ತಮ್ಮ ಕಛೇರಿಯ ಕಾರ್ಯ ವಹಿಸಿಕೊಂಡಾಗ ನುಡಿದದ್ದು: “ಭಗವದ್ಗೀತೆಯು ಅಗ್ರಮಾನ್ಯರೆನಿಸಿಕೊಳ್ಳಬಯಸುವ ಎಲ್ಲರೂ ಅಭ್ಯಸಿಸಬೇಕಾದ ಗ್ರಂಥ, ಶ್ರೀಕೃಷ್ಣ ಹಾಗೂ ಗೀತೆ ನನ್ನ ಬದುಕಿನ ಆತ್ಮದಂತೆ, ನನ್ನೆಲ್ಲಾ ಕಾರ್ಯಗಳಿಗೂ ಸಾಧನೆಗಳಿಗೂ ಆಧಾರ ಗೀತೆ” ಎಂದು ನುಡಿದು ಗೀತೆಯ ಕುರಿತ ತಮ್ಮ ಗೌರವದಿಂದ ಎಲ್ಲರ ಗಮನ ಸೆಳೆದು ಮಾನ್ಯತೆ ಪಡೆದರು. ಅಮೇರಿಕಾದ ನೌಕಾದಳದಲ್ಲಿ ಅಧಿಕಾರಿಯಾಗಿದ್ದು ನ್ಯಾಸಾದ ಗಗನಯಾತ್ರಿಯಾಗಿ ಅಂತರ್ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಏರ್ಪಡಿಸಿದ್ದ ಎಕ್ಸಪೆಡಿಷನ್-14ರ ಗಗನಯಾತ್ರಿ ಸುನೀತಾ ವಿಲಿಯಂಸ್ ಬಾಹ್ಯಾಕಾಶ ನೌಕೆಯಲ್ಲಿ ಅತಿ ಹೆಚ್ಚು ಸಮಯ ಕಳೆದು ದಾಖಲೆ ನಿರ್ಮಿಸಿದರು. ಇಂತಹ ಭಾರತೀಯ ಮೂಲದ ಹೆಮ್ಮೆಯ ಪುತ್ರಿ ಬಾಹ್ಯಾಕಾಶಕ್ಕೆ ಹೊರಟಾಗ ಮರೆಯದೆ ಹೊತ್ತೊಯ್ದದ್ದು ತಾನು ಅಧ್ಯಯನ ಮಾಡುವ ಭಗವದ್ಗೀತೆಯನ್ನೇ!
ತನ್ನ ಅಪಾರ ಜ್ಞಾನದಿಂದ ಅಣು ವಿಜ್ಞಾನಿಯಾಗಿದ್ದ ಅಮೇರಿಕಾದ ರಾಬರ್ಟ್ ಓಪನ್‍ಹೀಮರ್ ತನ್ನ ಸಂಶೋಧನೆಯ ಸಮಯದಲ್ಲಿ ಅಣು ಬಾಂಬಿನ ಮೊದಲ ಸ್ಫೋಟದ ಸಮಯದಲ್ಲಿ ತಾನು ಅಧ್ಯಯನ ಮಾಡಿ ಜ್ಞಾನ ಪಡೆದಿದ್ದ ಗೀತೆಯ ವಾಕ್ಯವನ್ನೇ ನುಡಿದು “ಇದು ಬರಿಯ ಸ್ಫೋಟವಲ್ಲ, ಇದರಲ್ಲಿ ನನಗೆ ಕಾಣುತ್ತಿರುವುದು ಯುದ್ಧಭೂಮಿಯಲ್ಲಿ ಕೃಷ್ಣನ ವಿಶ್ವರೂಪದ ದರ್ಶನ, ಸಹಸ್ರಾರು ಕಿರಣಗಳ ಸೂರ್ಯನ ಕಾಂತಿ… ಕಾಲೋಸ್ಮಿ. ಎಂದ ಕೃಷ್ಣ,…” ಎಂದ ರಾಬರ್ಟ್ ಓಪನ್‍ಹೀಮರ್ ಅಣು ಬಾಂಬಿನ ಪಿತಾಮಹ (ಫಾದರ್ ಆಫ್ ಅಟಾಮಿಕ್ ಬಾಂಬ್) ಎಂದೇ ಹೆಸರಾದವನು. ಒಂದು ವೈಜ್ಞಾನಿಕ ಪ್ರಯೋಗದ ಭೂಮಿಯಲ್ಲಿ ಗೀತೆಯ ವಿಶ್ವರೂಪವನ್ನು ಕಂಡ ಓಪನ್‍ಹೀಮರ್ ದಾರ್ಶನಿಕ ಅಲ್ಲವೇ? ವಿದೇಶೀಯರಿಗೆ ಗೋಚರಿಸಿದ ಸತ್ಯವನ್ನು ಕಾಣಲಾರದಷ್ಟು ನಾವು ಅಂಧರೇ?
ಅವರವರ ಗುಣ ಮತ್ತು ಸ್ವಭಾವಕ್ಕನುಗುಣವಾಗಿ ಸೃಷ್ಟಿ ಮನುಷ್ಯರ ಗುಣಸ್ವಭಾವ ಮತ್ತು ಬದುಕುವ ರೀತಿಯನ್ನುಸರಿಸಿ ವೃತ್ತಿ ಪ್ರವೃತ್ತಿಗಳೇ ಹೊರತು ಇಲ್ಲಿ ಜಾತಿಯ ಪ್ರಸ್ತಾಪವೆಲ್ಲಿದೆ? ಜಾತಿಯ ಹೆಸರಲ್ಲಿ ಅನ್ಯಾಯವಾಗಿದ್ದು ನಿಜ, ಆದರೆ ಇಂದಿನ ಪರಿಸ್ಥಿತಿಯಲ್ಲಿ ಸಮಾಜದಲ್ಲಿ ಸಹಬಾಳ್ವೆಯಿಲ್ಲವೇ? ದೇಶದ ರಕ್ಷಣೆಯ ಪ್ರಶ್ನೆ ಬಂದಾಗ ಸೈನಿಕರು ತಾವೆಲ್ಲರೂ ಈ ದೇಶದ ರಕ್ಷಣೆಗೆ ನಿಂತಿರುವ ಭಾರತಮಾತೆಯ ಪುತ್ರರೆಂದು ಭಾವಿಸುವರೇ ಹೊರತು ಜಾತಿ ಮತಗಳನ್ನಲ್ಲಾ!
ಭಾಗವತದಲ್ಲಿ ತನಗೆ ಪಾರಂಪರಾಗತವಾಗಿ ಬಂದಿದ್ದ ಮಾಂಸ ಮಾರುವ ವೃತ್ತಿಯಲ್ಲಿ ಶ್ರದ್ಧೆಯಿಟ್ಟು ಕೇವಲ ತನ್ನ ಕರ್ತವ್ಯ ಎನ್ನುವಂತೆ ಅದನ್ನನುಸರಿಸಿ ತನ್ನ ಮಾತಾ-ಪಿತರನ್ನು ಸಲುಹಿದ ಧರ್ಮವ್ಯಾಧನು ಚಂಡಕೌಶಿಕನಿಗೆ ಅರ್ಥಮಾಡಿಸಿದ್ದೂ ಇದನ್ನೇ! ಪರರಿಗೆ ಹಿಂಸೆ ನೀಡದೆ ಸಾತ್ವಿಕ ಜೀವನವನ್ನನುಸರಿಸಿ ಭಗವಂತನಲ್ಲಿ ಶರಣಾಗತರಾಗುವುದೇ ಮೋಕ್ಷದ ಮಾರ್ಗ ಎಂದು.ಇನ್ನು ಮೋಕ್ಷದ ವಿಚಾರದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಗೀತೆಯಲ್ಲಿ ಮೋಕ್ಷಕ್ಕೆ ಸ್ತ್ರೀಯರೂ ಮತ್ತು ಎಲ್ಲಾ ವರ್ಗದವರೂ ಮೋಕ್ಷಕ್ಕೆ ಅರ್ಹರೆಂಬ ವಾಕ್ಯ ಇಂದಿರುವ ಗೊಂದಲ ಮತ್ತು ಜಿಜ್ಞಾಸೆಗಳಿಗೆ ಸ್ಪಷ್ಟ ಉತ್ತರ ನೀಡಿದೆ. ಈ ವಾಕ್ಯಗಳನ್ನು ವಿಶಾಲ ದೃಷ್ಟಿಯಿಂದ ಗುರು ಕೃಪೆಯಿಂದ ಅಧ್ಯಯನ ಮಾಡಿದಲ್ಲಿ ಗೀತೆಯ ಸಾರವನ್ನು ಗ್ರಹಿಸುವುದು ಸುಲಭ.
ನಮಗಾಗದ ಗ್ರಂಥಗಳನ್ನೆಲ್ಲಾ ಸುಡುವ ಮನೋಭಾವ ಈ ದೇಶದ ಸಂಸ್ಕೃತಿಯಲ್ಲಾ, ಹಾಗಿದ್ದಲ್ಲಿ ಸ್ತ್ರೀಯರು ಭೋಗಕ್ಕಾಗಿಯೇ ಸೃಷ್ಟಿಸಲ್ಪಟ್ಟವರು, ಆತ್ಮವಿಲ್ಲದವರು ಎಂದೆಲ್ಲಾ ಸಾರುವ ಅಸಂಖ್ಯಾತ ಅನ್ಯ ಧರ್ಮ ಗ್ರಂಥಗಳನ್ನು ಸುಟ್ಟುಹಾಕುವ ಆಲೋಚನೆಗಳು ಎಂದೋ ಮೂಡಬೇಕಿತ್ತು. ಇನ್ನೂ ಹಾಸ್ಯಾಸ್ಪದವೆಂದರೆ ಸುಡುವುದಾದರೂ ಎಷ್ಟು ಪುಸ್ತಕಗಳನ್ನು? ಈ ದೇಶದಲ್ಲಿ ಅಚ್ಚಾಗಿರುವ ಗೀತೆಗಳ ಪ್ರತಿಗಳನ್ನೋ? ಮನೆಮನೆಗಳಲ್ಲಿ ಗಂಗೆಯಷ್ಟೇ ಪವಿತ್ರವೆಂದು ಪೂಜನೀಯವಾಗಿರುವ ಗೀತೆಯನ್ನೋ ಅಥವಾ ಗೀತೆಯ ತತ್ವಗಳನ್ನೋ? ಒಂದು ಅಂದಾಜಿನಲ್ಲಿ 1965ರಿಂದ ಇಂದಿನವರೆಗೂ ಇಸ್ಕಾನಿನ ಭಕ್ತಿವೇದಾಂತ ಬುಕ್ ಟ್ರಸ್ಟ್‍ನ ಭಗವದ್ಗೀತೆಯ ಅರ್ಧ ಬಿಲಿಯನ್ ಭಗವದ್ಗೀತೆಯ ಪ್ರತಿಗಳು ವಿಶ್ವದೆಲ್ಲೆಡೆ ತಲುಪಿದೆ. ಹಾಗೆ ಗೀತೆಯನ್ನು ತಮ್ಮದಾಗಿಸಿಕೊಂಡ ಅನ್ಯ ದೇಶದವರು ನಿಜಕ್ಕೂ ಗೌರವಾನ್ವಿತರಲ್ಲವೇ?
ಗೀತೆಯನ್ನು ಇಷ್ಟಪಡದವರೂ ತಪ್ಪುಗಳನ್ನೇ ಹುಡುಕುವ ಮೇಧಾವಿಗಳೂ ಅನ್ಯ ಧರ್ಮ ಗ್ರಂಥಗಳಲ್ಲಿರುವ ಒಂದು ವಾಕ್ಯದಲ್ಲೇನಾದರೂ ತಪ್ಪುಗಳನ್ನು ಕಂಡಿಲ್ಲವೇ? ಅನ್ಯಾಯಗಳನ್ನೂ ಹಿಂಸೆಯನ್ನೂ ಕಂಡಿಲ್ಲವೇ? ಅಥವಾ ಬೇಕಿಲ್ಲವೇ?
ಸುಡಬೇಕಿರುವುದು ಅಜ್ಞಾನವನ್ನು, ಇಷ್ಟಕ್ಕೂ ಸನಾತನ ಧರ್ಮವು ಎಲ್ಲಾ ಯುಗಗಳಲ್ಲೂ ಎಲ್ಲಾ ಕಾಲಗಳಲ್ಲೂ ಸ್ಥಿರವಾಗಿ ನಿಲ್ಲುವ ಧರ್ಮ… ಅದು ತನ್ನ ರಕ್ಷಣೆ ತಾನೇ ಮಾಡಿಕೊಳ್ಳಬಲ್ಲದು.. ಪುಸ್ತಕಗಳ ಪ್ರತಿಗಳನ್ನು ಸುಟ್ಟರೂ ಯಾವ ನಷ್ಟವೂ ಆಗದು.. ಏಕೆಂದರೆ “ನೈನಂ ಛಿಂದಂತಿ ಶಾಸ್ತ್ರಾಣಿ… ನೈನಂ ದಹತಿ ಪಾವಕ:…” ಎಂದು ಗೀತಾವಾಕ್ಯವೇ ಹೇಳುವಂತೆ ಭಗವದ್ಗೀತೆ ಈ ದೇಶದ ಆತ್ಮ…..
ಅವಿನಾಶೀಯಾಗಿರುವ ಆತ್ಮವನ್ನೂ.. ಜ್ಞಾನವನ್ನೂ ಯಾರೂ ಸುಡಲಾರರು….
ಜನಸಾಮಾನ್ಯರಿಗೆ ಅರ್ಥವಾಗದ ಯಾವುದೇ ಸಾಹಿತ್ಯವೂ ನಿರುಪಯೋಗಿಯೇ ಹೌದು.
ಬೈಬಲ, ಕುರಾನ್, ಬುದ್ಧನ ಪಾಳೀ ಬೋಧನೆಗಳು, ಜೈನರ ಹಳೆಯ ಧರ್ಮಗ್ರಂಥಗಳು, ಹೋಗಲಿ ಪ್ರಾಚೀನಕಾಲದ ಕನ್ನಡದ್ದೇ ಆದ ರನ್ನ ಪಂಪರ ಕಾವ್ಯಗಳು, ಅದೂ ಹೋಗಲಿ ಇಪ್ಪತ್ತನೇ ಶತಮಾನದಲ್ಲೇ ಬರೆದ ಕುವೆಂಪು ರಾಮಾಯಣ ದರ್ಶನಂ ಗ್ರಂಥ ಇವೆಲ್ಲಾ ನನ್ನ ನಿಮ್ಮಂಥ ಪಾಮರರಿಗೆ ಎಲ್ಲಿ ಅರ್ಥವಾಗುತ್ತವೆ? ಅದೂ ಹೋಗಲಿ ಆಧುನಿಕ ಕವಿತೆಗಳಾದರು ಅರ್ಥವಾಗುತ್ತವೆಯಾ ಸಾಮಾನ್ಯರಿಗೆ? ಕಲಿತ ಹುಡುಗಿ ಕುದರಿ ನಡಿಗಿ ಹಿಡಿದ ಹೊಂಟಿತ್ತ ಅರ್ಥವಾದಂತೆ ನಮಗೆ ನಾಕುತಂತಿ ಅರ್ಥವಾದೀತೆ? ಅಂದ ಮೇಲೆ ಇವೆಲ್ಲ ನಿರರ್ಥಕ ಸಾಹಿತ್ಯವೆಂದು ತೀರ್ಮಾನಿಸಿ ಸಿನಿಮಾ ಹಾಡುಗಳನ್ನು ಮಾತ್ರ ಪ್ರಕಟಿಸೋಣ ಏನಂತೀರಿ?? ಕತ್ತಲೇಲಿ ಕರಡೀಗೆ ಜಾಮೂನು ತಿನಿಸಕ್ಕೆ ಹೋಗಬಾರದೂರಿ ಇಂಥ ಸರಳ ಸಾಹಿತ್ಯದ ಅರ್ಥವು ನನಗಾಗಿಲ್ಲ. ಇನ್ನೂ ಸಾಹಿತ್ಯ ಸರಳವಾಗಿರಲಿ. ಅಂದರೆ ಮಾತೇ ಹಾಡಾಗಿರಲಿ. ವ್ಯಂಗೋಕ್ತಿ ಕೂಟೋಕ್ತಿ ಚತುರೋಕ್ತಿಗಳಲ್ಲಾ. ನೆನಪಿಡಿ. ಯಾಕೆಂದರೆ ಅವೂ ನಮಗೆ ಅರ್ಥವಾಗಲ್ಲ. ಬಂದ್ಯಾ, ಉಂಡ್ಯಾ, ಮಲಗು, ಕೂಡು ಏಳು ಇಂಥ ಹಾಡಿರಲಿ. ಸರೀನಾ??
ನಿಮ್ಮ ಲೇಖನದಲ್ಲಿ ಗೀತೆಯ ಪರ ವಹಿಸಿ ವಾದ ಮಂಡಿಸಿರುವಿರಿ. ಯಾರೋ ಒಂದಷ್ಟು ಮಂದಿ ಗೀತೆ ಕೋಮುವಾದಿ ಗ್ರಂಥ ಎಂದು ತೀರ್ಮಾನಿಸಿ ಬುದ್ಧಿವಂತರೆನಿಸಿಕೊಂಡರೆ ನೀವೇಕೆ ಬಾಧೆ ಅನುಭವಿಸಬೇಕು?
ಇಲ್ಲಿ ನೀವು ಹಿಟ್ಲರ್, ಗೋಬೆಲ್ಸ್ ಮುಂತಾದವರನ್ನು ಉಲ್ಲೇಖಿಸುತ್ತ ಗೀತೆಯನ್ನು ವಿರೋಧಿಸುವ ಪ್ರಗತಿಪರರನ್ನು ಆಕ್ಷೇಪಿಸಿರುವುದು ಸರಿ ಕಾಣದು.
ಹಿಟ್ಲರ್, ಗೋಬೆಲ್ಸ್, ಖಲೀಫ್ ಉಮರ್, ಛಂಗೀಸ್ ಖಾನ್‌ರಂತಹ ರಾಕ್ಷಸರ ಧೋರಣೆಗಳಿಗೂ, ಗೀತೆಯನ್ನು ವಿರೋಧಿಸುವ ಪ್ರಗತಿಪರರಿಗೂ ನಡುವೆ ಅಗಾಧವಾದ ವ್ಯತ್ಯಾಸವಿದೆ. ಬಾಲು ಮತ್ತು ಅವರು ಸಂಗಡಿಗರು ಭಾವಿಸುವಂತೆ ಭಾರತದಲ್ಲಿ ಶಾಸ್ತ್ರಗ್ರಂಥಗಳನ್ನು ಟೀಕಿಸುವ ಪರಿಪಾಟ ಬ್ರಿಟಿಷರಿಂದಲೋ ಅಥವಾ ಮುಸ್ಲಿಮರಿಂದಲೋ ಬಂದುದಲ್ಲ. ಈ ಟೀಕಿಸುವ ಪರಂಪರೆ ಬುದ್ಧ, ಮಹಾವೀರ, ಆದಿಶಂಕರರ ಕಾಲದಿಂದಲೇ ಶುರುವಾಗುತ್ತದೆ. ಪ್ರಗತಿಪರರದ್ದು ಇದೇ ಪರಂಪರೆಯ ಮುಂದುವರಿಕೆಯಾಗಿದೆ. ನಿಮ್ಮ ತರ್ಕವನ್ನೇ ಅನುಸರಿಸಿ ಸಾಂಖ್ಯ ದರ್ಶನದ ಹಿರಿಮೆಯನ್ನು ಎತ್ತಿ ಹಿಡಿಯಲು ಹೋದರೆ ಆದಿಶಂಕರರ ನಿಲುವುಗಳನ್ನೂ ಪ್ರಶ್ನಿಸಬೇಕಾಗುತ್ತದೆ. ಅಥವಾ ಮಹಾವೀರ, ಮಖಲೀ ಗೋಶಾಲ ಮುಂತಾದವರ ತತ್ವಗಳ ಹಿರಿಮೆಯನ್ನು ಸಾರಲು ಹೊರಟರೆ ಅವರುಗಳನ್ನು ಟೀಕಿಸುವ ಗೌತಮ ಬುದ್ಧನನ್ನೂ ಅಪರಾಧಿಯ ಸ್ಥಾನದಲ್ಲಿ ನಿಲ್ಲಿಸಬೇಕಾಗುತ್ತದೆ.
ಗೀತೆಯಲ್ಲಿರಲಿ, ಸಾಂಖ್ಯದಲ್ಲಿರಲಿ ಅಥವಾ ಬೌದ್ಧತತ್ವಗಳಲ್ಲಿರಲಿ ನೀವು ಹೇಳುವ ಸಕ್ಕರೆಯಷ್ಟೇ ಸವಿಯಾದ ಅಂಶಗಳು ಇಲ್ಲದೆ ಏನಿಲ್ಲ. ಇದು ಸಕ್ಕರೆಯಷ್ಟೇ ಸಿಹಿಯಾದ ಹಿತನುಡಿಗಳನ್ನು ಒಳಗೊಂಡಿದೆ ಎಂದ ಮಾತ್ರಕ್ಕೆ ಇದನ್ನು ವಿರೋಧಿಸಬಾರದು ಎಂದೂ ಹೇಳಲು ಬರುವುದಿಲ್ಲ.
ನಿಮ್ಮಂತಹ ಗೀತೆಯ ಓದುಗರು ಇಂತಹ ಟೀಕೆಗಳಿಂದ ವಿಚಲಿತರಾಗುವುದಿಲ್ಲ ಎಂದ ಮೇಲೆ ಸಮಸ್ಯೆ ಎಲ್ಲಿದೆ? ಆದರೆ ಹಾಗೆ ಟೀಕಿಸದೆ ಎಲ್ಲರೂ ನಿಮ್ಮಂತೆಯೇ ಗೀತೆಯನ್ನು ಪೂಜಿಸಲು ತೊಡಗಿದರೆ ಮತ್ತು ಟೀಕಿಸುವವರನ್ನು ಆಕ್ಷೇಪಿಸುವವರ ಸಂತತಿ ಹೀಗೆಯೇ ಬೆಳೆದರೆ ಗತಿ ಏನಾಗುತ್ತದೆ ಎಂದು ಒಮ್ಮೆ ಯೋಚಿಸಿ. ಇಂದು ಅರಬ್ಬರಿಗಷ್ಟೇ ಅಲ್ಲ, ಭಾರತದ ಪ್ರಗತಿಪರರಿಗೂ ಕುರಾನನ್ನು ಟೀಕಿಸುವ ಛಾತಿ ಇಲ್ಲವಾಗಿದೆ. ಅಥವಾ ಕುರಾನ್ ಸಹ ಗೀತೆಯಷ್ಟೇ ಟೀಕೆಗಳಿಗೆ ಒಳಗಾಗಿದ್ದಿದ್ದರೆ ಮಧ್ಯಪೂರ್ವ ದೇಶಗಳಲ್ಲಿ ಇಂದಿನ ಆತಂಕದ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲವೇನೋ. ಆರಾಧಕರ ಭಾವನೆಗಳು ಸಾಮೂಹಿಕ ರೂಪ ಪಡೆದುಕೊಂಡರೆ ಅದು ಇಡೀ ಸಮಾಜವನ್ನೇ ನುಂಗುವಂತಹ ದೈತ್ಯಾಕಾರವನ್ನು ಪಡೆದುಬಿಡುತ್ತದೆ. ಪ್ರಗತಿಪರರಾದದರೂ ಅಂತಹ ದೈತ್ಯಶಕ್ತಿಗಳು ಹುಟ್ಟದಂತೆ ಸಮಾಜವನ್ನು ರಕ್ಷಿಸುತ್ತಿರುವರು. ಪ್ರಗತಿಪರರ ಇಂತಹ ರಕ್ಷಣೆ ಮತ್ತು ಎಚ್ಚರಗಳು ಆದಿಶಂಕರರ ಕಾಲದಿಂದಲೂ ಭಾರತವನ್ನು ಕಾಪಾಡಿಕೊಂಡೇ ಬಂದಿದೆ.
ಗೀತೆಯ ಹಿರಿಮೆಯನ್ನು ಸ್ಥಾಪಿಸಲು ಗಾಂಧಿ, ಟಿ.ಎಸ್. ಎಲಿಯೆಟ್, ತುಳಸಿ ಗಬ್ಬಾರ್ಡ್, ಸುನೀತಾ ವಿಲಿಯಂಸ್ ಮುಂತಾದ ಊರುಗೋಲುಗಳ ಆಸರೆ ಬೇಕೇ? ಯೋಚಿಸಿ. ಇಸ್ಕಾನ್‌ನವರು ಲಕ್ಷಾಂತರ ಕೃತಿಗಳನ್ನು ಮಾರಾಟ ಮಾಡಿರುವುದು ಗೀತೆಯ ಹಿರಿಮೆಗೆ ಮಾನದಂಡವಾಗುವುದಿಲ್ಲ. ಗೀತೆ ಮಾರುಕಟ್ಟೆಯ ಸರಕಾದರೆ ಗೀತಾ ಪೂಜಕರಿಗೂ ಶ್ರೇಯಸ್ಕರವಲ್ಲ ಮತ್ತು ನಮಗೂ (ಪ್ರಗತಿಪರರಿಗೂ) ಅದು ಹಿತಕರವೆನಿಸುವುದಿಲ್ಲ.
ನೀವು ಹೇಳುವಂತೆ ವಿದೇಶೀಯರಿಗೆ ಗೋಚರಿಸದ ಸತ್ಯವನ್ನು ಕಾಣಲಾರದಷ್ಟು ಕುರುಡುತನ ಪ್ರಗತಿಪರರಿಗೇನೂ ಬಂದಿಲ್ಲ. ಗೀತೆ ಜಾತಿ ವರ್ಣ ಸಂಕರಗಳನ್ನು ಬೆಂಬಲಿಸುತ್ತದೆಯೋ ಇಲ್ಲವೋ ಎಂಬುದು ಎರಡನೆಯ ಪ್ರಶ್ನೆ. ಆದರೆ ಗೀತೆಯಂತಹ ಗ್ರಂಥಗಳು ಪ್ರಭುತ್ವದ ಕೈಗೆ ಸಿಲುಕಿ ದುರ್ಬಳಕೆಯಾಗಬಹುದಲ್ಲವೇ? ಅಣುಶಕ್ತಿ ತನ್ನಲ್ಲಿ ತಾನು ಕೆಟ್ಟದಲ್ಲದಿರಬಹುದು ಆದರೆ ಅದು ದುರ್ಬಳಕೆಯಾದ ನಿದರ್ಶನಗಳಿಲ್ಲವೇ? ಗೀತೆಯಂತಹ ಗ್ರಂಥವನ್ನು ಸಾಮಾಜಿಕ ನೆಲೆಗೆ ತಂದರೆ ಮೈಲಿಗೆಯಾಗುವುದೆಂದು ಮಡಿವಂತಿಕೆ ಆಚರಿಸುವವರಿಗೆ ಮರೆತು ಹೋಗಿದೆಯೇ?
ಇನ್ನು ಗೀತೆಯನ್ನು ಸುಡುವುದು ಒಂದು ಸಂಕೇತವಾಗಿದೆ. ಸದ್ಯಕ್ಕೆ ನಮಗದು ಅಪ್ರಸ್ತುತವಾಗಿದೆ ಎಂಬುದರ ಸೂಚನೆ ಅಷ್ಟೇ.
ಅನ್ಯ ಧರ್ಮಗ್ರಂಥಗಳಲ್ಲಿರುವ ತಪ್ಪು ಕಂಡಿಲ್ಲವೇ ಎಂದು ಕೇಳಿರುವಿರಿ. ಪಕ್ಕದ ಮನೆಯವರ ಗೊಡವೆ ನಮಗೇಕೆ? ನಮ್ಮ ಮನೆ ಹೊಲಸಾಗದಂತೆ ನೋಡಿಕೊಂಡರೆ ಅಷ್ಟೇ ನಮಗೆ ಸಾಕಾಗಿದೆ. ಗೀತೆ ಅಂತರಂಗವನ್ನು ಪ್ರವೇಶಿಸಿದರೆ ಮನಸ್ಸು ಶುದ್ಧವಾಗಬಹುದೋ ಏನೋ ಆದರೆ ಬಹಿರಂಗದಲ್ಲಿ ವ್ಯಾಪಿಸಿದರೆ ನಿಸ್ಸಂಶಯವಾಗಿ ಅದು ಹೊಲಸೆಬ್ಬಿಸುತ್ತದೆ.
ಆದಿ ಶಂಕರರನ್ನು ಪ್ರಗತಿಪರರಿಗೆ ಹೋಲಿಸುತ್ತಿದ್ದೀರಿ ನೀವು. ಆದಿ ಶಂಕರರು ತಮ್ಮ ಭಾಷ್ಯದಲ್ಲಿ ಎಲ್ಲಿ ಬುದ್ಧ ಕಪಿಲರನ್ನು ವೈಯಕ್ತಿಕವಾಗಿ ಟೀಕಿಸಿದ್ದಾರೆ? ಅವರ ತತ್ತ್ವಗಳು ವೈದಿಕವು ಹೌದೋ ಅಲ್ಲವೋ ಎಂಬ ಪರಾಮರ್ಶೆಯನ್ನು ಮಾಡುವಾಗ ಅವರು ಅದರ ಆರಂಭವನ್ನು “ಅತ್ರ ಕೇಚಿತ್ ಆಹುಃ” (ಇಲ್ಲಿ ಯಾರೋ ಹೇಳಿದ್ದಾರೆ) ಎಂದೇ ಆರಂಭಿಸಿದ್ದಾರಲ್ಲವೇ? ದರ್ಶನಗಳನ್ನು ಪರಾಮರ್ಶಿಸುವಾಗ ದಾರ್ಶನಿಕರನ್ನು ಬೈಯುವದಿರಲಿ ಅವರ ಹೆಸರನ್ನಾದರೂ ಎತ್ತಿದ್ದಾರೆಯೇ? ಇನ್ನು ಬೌದ್ಧನಾದ ಅಮರಸಿಂಹನ ಅಮರಕೋಶವನ್ನೂ ಶಂಕರರೇ ಅಲ್ಲವೇ ರಕ್ಷಿಸಿದ್ದು? ವೇದಗಳಿಗೆ ಒಪ್ಪಿಗೆಯಾಗಿರುವ ಪರಮತಗಳಲ್ಲಿನ ಅಂಶಗಳನ್ನು ಮುಕ್ತವಾಗಿ ಒಪ್ಪಿ ಪ್ರಶಂಸಿಸುವ ವಾಕ್ಯಗಳು ಶಂಕರ ಭಾಷ್ಯಗಳಲ್ಲಿ ನಿಮಗೆ ಕಾಣಲಿಲ್ಲವೇ? “ಹಿಂದೂ ದೇವತೆಗಳ ಕೈಲಿ ಶಸ್ತ್ರಾಸ್ತ್ರಗಳಿರುವದರಿಂದ ಇದೇ ನಿಜವಾಗಿಯೂ ಭಯೋತ್ಪಾದಕ ಧರ್ಮ”, “ಮೂರ್ತಿಯ ಮೇಲೆ ಉಚ್ಚೆ ಹೊಯ್ದರೂ ಏನೂ ಆಗಲಿಲ್ಲ”, “ಭೈರಪ್ಪ ಕಾದಂಬರಿಕಾರನೂ ಅಲ್ಲ, ಇತಿಹಾಸಕಾರನೂ ಅಲ್ಲ” ಎಂದು ವೈಯಕ್ತಿಕವಾಗಿ ತೀರ ಕೀಳುಮಟ್ಟದಲ್ಲಿ ಬೈಯುವವರನ್ನು ಶಂಕರರಿಗೆ ಹೋಲಿಸುವದು ಯಾವ ನ್ಯಾಯ?
ಗೀತೆಯನ್ನು ಟೀಕಿಸುವದರಿಂದ ಗೀತೆಗೂ ನಷ್ಟವಿಲ್ಲ, ಅದರ ಅನುಯಾಯಿಗಳಿಗೂ ಬಾಧೆಯಿಲ್ಲ. ಗೀತಾಜಯಂತಿಯ ದಿನ ಇಡೀ ರಾಜ್ಯಾದ್ಯಂತ ಹಲವಾರು ಕಾರ್ಯಕ್ರಮಗಳು ಗೀತೆಯನ್ನು ವಿಷಯವಾಗಿಸಿಕೊಂಡು ನಡೆಯುತ್ತವೆ. ಆದರೆ ಅವುಗಳಲ್ಲೆಲ್ಲ ಮುಖಪುಟದ ಸುದ್ದಿಯಾಗುವದು ಯಾವದು? ಮುಖಪುಟದಲ್ಲಿ ಸುದ್ದಿಯಾಗಬೇಕಾದರೆ, ಟಿವಿಗಳಲ್ಲಿ ಕಾಣಿಸಿಕೊಳ್ಳಬೇಕಾದರೆ ಏನು ಮಾಡಬೇಕು ಎಂಬುದು ಈ ದುರ್ಬುದ್ಧಿಜೀವಿಗಳಿಗೆ ಸರಿಯಾಗಿ ಗೊತ್ತಿದೆ. ಅದನ್ನು ಜಗತ್ತಿಗೇ ತೋರಿಸುವದೇ ಈ ಲೇಖನದ ಉದ್ದೇಶ ಎಂಬುದು ನಿಮಗೇ ಅರಿವಿಗೇ ಬರಲಿಲ್ಲವೇ? ಗೀತೆಯ ತತ್ತ್ವಗಳನ್ನು ನಿರಾಕರಿಸುವದೇ ಅವರ ವಾದವಾಗಿದ್ದಲ್ಲಿ ಚರ್ಚೆಗೆ ಹೆದರಿ ಓಡಿಹೋದ ಉತ್ತರಕುಮಾರಾಗಿದ್ದು ಯಾಕೆ? ಇದೆಲ್ಲ ಪಬ್ಲಿಸಿಟಿ ಸ್ಟಂಟುಗಳು ಎಂಬ ಅಂಗೈ ಹುಣ್ಣಿಗೂ ಕನ್ನಡಿ ಏಕೆ ಬೇಡುತ್ತಿದ್ದೀರಿ?
ಇನ್ನು ಪರಮತಗಳ ಹಂಗು ನಮಗೇಕೆ ಎಂದಿರಿ? ಕಾಶ್ಮೀರವನ್ನು ವಶಪಡಿಸಲು ಪಾಕಿಸ್ತಾನ ಪೇಷಾವರದಲ್ಲಿ ಸಂಚು ಮಾಡಿದರೆ ಅವರ ದೇಶ, ಅವರ ಸೈನ್ಯ, ಅವರೇನಾದರೂ ಸಂಚು ಮಾಡಲಿ ಎಂದು ಸುಮ್ಮನಿರಲಾಗುತ್ತದೆಯೇ? ಇಂದು ವೇದಾರ್ಥಗಳನ್ನು ತಿರುಚಿ, ಪ್ರಕೃತಿ ಪೂಜೆ, ಮೂರ್ತಿಪೂಜೆ ವೇದಗಳಲ್ಲಿಯೇ ಇಲ್ಲ ಎಂದು ಬೊಬ್ಬಿರಿಯುತ್ತ ಹಿಂದೂ ಧರ್ಮ ನೀಡಿದ ಮೂರ್ತಿಪೂಜೆ, ಪ್ರಕೃತಿ ಪೂಜೆಯಂಥ ಧಾರ್ಮಿಕ ಸ್ವಾತಂತ್ರ್ಯವನ್ನೇ ಪ್ರಶ್ನಿಸುವ ಅನ್ಯಮತೀಯರ ಪರಿಚಯ ನಿಮಗೇ ಬೇಕೆ? ಹಾಗಾದರೆ ಬನ್ನಿ ಇಲ್ಲಿ ನಾನು ಮಾಡಿಕೊಡುತ್ತೇನೆ. ಆರಾಧಕರ ಭಾವನೆಗಳು ಸಾಮಾಜಿಕವಾದರೆ ದೈತ್ಯರೂಪ ಪಡೆಯುತ್ತದೆ ಎಂದಿರಿ, ನಮ್ಮ ದೇಶದಲ್ಲಿ ಮುಂಚಿನಿಂದಲೂ ಎಷ್ಟು ಆರಾಧನಾ ಪದ್ಧತಿಗಳಿವೆ? ನೀವೆಷ್ಟು ನೋಡಿದ್ದೀರಿ? ಎಲ್ಲಿಯಾದರೂ ಒಂದು ಪದ್ಧತಿ ಇನ್ನೊಂದು ಪದ್ಧತಿಯನ್ನು ಹಳಿಯುವದನ್ನು ಕಂಡಿದ್ದೀರಾ? ಬಲಮುರಿ ಗಣಪತಿಯನ್ನು ಪೂಜಿಸುವವ ಎಡಮುರಿಯನ್ನು ನೋಡಿ ಮೂಗು ಮುರಿದು ನಮಿಸದೇ ಹೋಗಿದ್ದು ನಿಮ್ಮ ಗಮನಕ್ಕಿದೆಯೇ? ನಾವು ಹೇಳಿದಂತೆಯೇ ಪೂಜಿಸಬೇಕು ಎಂಬ ಧಾರ್ಷ್ಟ್ಯದಿಂದಲೇ ಅಲ್ಲವೇ ಮಧ್ಯಪ್ರಾಚ್ಯ ಹೀಗಾಗಿದ್ದು? ಆ ಒತ್ತಾಯ ಒತ್ತಡ ಇಲ್ಲಿನ ಸ್ಮೃತಿಗಳಲ್ಲಿ ಕಂಡಿದ್ದೀರಾ? ದಕ್ಷಿಣದಲ್ಲಿ ಬರೀ ಪಂಚೆಯುಟ್ಟು ಪೂಜೆ ಮಾಡುವವರು, ಬದರಿಯಲ್ಲಿ ಸಂಪೂರ್ಣ ಮೈ ಮುಚ್ಚಿ ಪೂಜಿಸುವವರು, ತಮಗಿಷ್ಟವಾದ ಹೂವುಗಳಿಂದ ತಮಗಿಷ್ಟವಾದ ಮಂತ್ರಗಳಿಂದ ಪೂಜಿಸುವ ಸ್ವಾತಂತ್ರ್ಯ ಇಲ್ಲಲ್ಲದೇ ಇನ್ನಾವ ರಿಲಿಜನ್ನಿನಲ್ಲಿ ದೊರಕೀತು? ಇದೇ ಗೀತೆಯಲ್ಲಿ ತಾನೇ “ಪತ್ರಂ ಪುಷ್ಪಂ ಫಲಂ ತೋಯಂ” ಎಂಬ ಮಾತಿರುವದು? ಇದೇ ಗೀತೆಯಲ್ಲಿ ತಾನೇ “ಯೋ ಯೋ ಯಾಂ ಯಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಂ” ಎಂದಿದ್ದು? ಇನ್ನಾವ ರಿಲಿಜನ್ನಿನ ಗ್ರಂಥದಲ್ಲಿ ಈ ಮಾತಿದೆ? ಇಂಥ ಉದಾತ್ತ ಗ್ರಂಥ ಸಾವಿರಾರು ವರ್ಷಗಳಿಂದ ಎಲ್ಲ ಜಾನಪದಗಳಲ್ಲಿ, ಎಲ್ಲ ಜಾತಿಯ ಜನಮಾನಸದಲ್ಲಿ ನೆಲೆಸಿತ್ತಲ್ಲ, ಸಮಾಜ ಸುಖಿಯಾಗಿಯೇ ಇತ್ತು.
ನಿಮಗೆ ಬಿಡುವಿದ್ದಾಗ ಕೊಲ್ಲೂರಿನಿಂದ ಸ್ವಲ್ಪ ದೂರದಲ್ಲಿನ ಕೊಡಚಾದ್ರಿ ಬೆಟ್ಟವನ್ನು ಹತ್ತಿ. ಅಲ್ಲಿ ಶಂಕರಾಚಾರ್ಯರ ಮೂರ್ತಿಯಿದೆ. ಅದರ ಮುಂದೆ ಒಂದು ಕಬ್ಬಿಣದ ಕಂಬವೊಂದು ಕಾಣುತ್ತದೆ, ಅದರ ಇತಿಹಾಸ ಏನೆಂದು ತಿಳಿಯಿರಿ. ಅದು ಶಂಕರಾಚಾರ್ಯರು ಬಂದ ನೆನಪಿಗಾಗಿ ಅಲ್ಲಿನ ಆದಿವಾಸಿ ಬುಡಕಟ್ಟು ಜನರು ನಿರ್ಮಿಸಿದ ಕಬ್ಬಿಣದ ಕಂಬ. ಅಲ್ಲಿಗೆ ಬ್ರಾಹ್ಮಣರಿಗೂ ಇತರರಿಗೂ ಎಂಥ ಅನ್ಯೋನ್ಯತೆ ಇತ್ತು ಎಂಬುದರ ಅಧ್ಯಯನವನ್ನು ನಿಮಗೇ ಬಿಡುತ್ತೇನೆ. ಅದಕ್ಕಿಂತ ಮುಖ್ಯವಾಗಿ ೮ನೇ ಶತಮಾನದ ಆ ಕಂಬ ಇನ್ನೂ ತುಕ್ಕು ಹಿಡಿಯದೇ ನಿಂತಿದೆ ಎಂದರೆ ಆ ಆದಿವಾಸಿಗಳ ಪ್ರತಿಭೆ ಎಂಥದ್ದು? ಅವರ ಜ್ಞಾನ ಎಷ್ಟು ಆಳ? ಒಂದು ವೇಳೇ ಬುದ್ಧಿಜೀವಿಗಳು ಹೇಳಿದಂತೆ ಅವರು ವೇದಕಾಲದಿಂದಲೂ ತುಳಿತಕ್ಕೊಳಗಾಗಿದ್ದರೆ ಇಂಥ ಪ್ರತಿಭೆ ಅವರಿಂದ ಬರಲು ಸಾಧ್ಯವಾಗುತ್ತಿತ್ತೇ? ಇಂಥ ಅನ್ಯೋನ್ಯತೆ ಸಿದ್ಧಿಸುತ್ತಿತ್ತೇ? ೮ನೇ ಶತಮಾನದವರೆಗೂ ಅತ್ಯಂತ ಜ್ಞಾನಿಗಳಾಗಿದ್ದ ಆ ಆದಿವಾಸಿಗಳು ೧೮ನೇ ಶತಮಾನದ ಹೊತ್ತಿಗೆ ಏಕೆ ತುಳಿತಕ್ಕೊಳಗಾದರು? ೧೦೦೦ ವರ್ಷದಲ್ಲಿ ಅಂಥ ಮಹತ್ತರ ಬದಲಾವಣೆ ಏನಾಯಿತು ನಮ್ಮ ದೇಶದಲ್ಲಿ? ಪರಕೀಯರ ದಾಳಿಯೇ ಅಲ್ಲವೇ ನಮ್ಮ ಆರ್ಥಿಕತೆಯನ್ನು, ಸಾಮಾಜಿಕ ಸಾಮರಸ್ಯವನ್ನು ಕದಡಿದ್ದು? ಹಿಂದೆಯೂ ರಾಜರಲ್ಲಿ ಯುದ್ಧಗಳಾಗುತ್ತಿದ್ದವು, ಆದರೆ ಪ್ರಜೆಗಳ ಮೇಲೆ ಇದು ಯಾವ ಹೆಚ್ಚಿನ ಪ್ರಭಾವವನ್ನೂ ಬೀರುತ್ತಿರಲಿಲ್ಲ, ಆದರೆ ರಾಜ ಸೋತನಂತರ ಅವನ ಊರನ್ನು ಸುಡುವದು, ಜನರನ್ನು ಲೂಟಿ ಮಾಡುವದು, ಮಹಿಳೆಯರನ್ನು ಅತ್ಯಾಚಾರಗೈಯುವದು ಇವೆಲ್ಲ ಇಲ್ಲಿ ಯಾವಾಗ ಆರಂಭವಾಯಿತು ಎನ್ನುವದನ್ನು ಬಿಡಿಸಿ ಹೇಳಬೇಕೆ?
ಹಿಂದೂ ಧರ್ಮ, ವೈದಿಕ ಧರ್ಮ, ಇವೆಲ್ಲ ಹಾಗಿರಲಿ, ಮೂಲ ಉದ್ದೇಶ ಆಧ್ಯಾತ್ಮಿಕ, ತಾತ್ತ್ವಿಕ ಮತ್ತು ಧಾರ್ಮಿಕ ಸ್ವಾತಂತ್ರ್ಯ ಈ ಸನಾತನ ಸಂಸ್ಕೃತಿ ನಮಗೆ ದಯಪಾಲಿಸಿದೆ. ಇನ್ನಾವ ರಿಲಿಜನ್ನೂ ನೀಡದ ಈ ಸಂಸ್ಕೃತಿಯನ್ನು ಉಳಿಸಿಕೊಂಡರೆ ಮಾತ್ರ ಈ ಸ್ವಾತಂತ್ರ್ಯ ಇರಲು ಸಾಧ್ಯ, ಸನಾತನ ಧರ್ಮ ನಶಿಸಿ ಭಾರತದಿಂದ ಬೇರೆಯಾದ ಗಾಂಧಾರ, ವಂಗ ದೇಶಗಳು ಇಂದು ಏನಾಗಿ ಹೋಗಿವೆ? ತಸ್ಲಿಮಾ ನಂಥ ಅಲ್ಲಿನ ಬುದ್ಧಿಜೀವಿಗಳ ಪಾಡನ್ನು ಹಿಂದೂ ಧರ್ಮವನ್ನು ಟೀಕಿಸುವ ಬುದ್ಧಿಜೀವಿಗಳೊಂದಿಗೆ ಹೋಲಿಸಿ ನೋಡಿದ್ದೀರಾ? ವ್ಯತ್ಯಾಸಕ್ಕೆ ಮೂಲ ಕಾರಣವೇ ನಮ್ಮ ಸಂಸ್ಕೃತಿ ಎಂಬುದನ್ನೂ ಬಿಚ್ಚಿ ಹೇಳಬೇಕೇ?
ನನ್ನ ಮನದ ಸಕಲ ಭಾವನೆಗಳನ್ನು ಅಕ್ಷರಗಳ ರೂಪದಲ್ಲಿ ಸ್ಫುಟವಾಗಿ ತಂದಿದ್ದೀರಿ.ಧನ್ಯವಾದ
ಶಂಕರರು ಚಂಡಾಳನ ವಿಷಯದಲ್ಲಿ ಬಹಳ ನಿರ್ದಯಿಯಾಗಿ ವರ್ತಿಸಿದರು. ಇದು ನೀವೆಲ್ಲರೂ ನಿರಕಾರಿಸಲಾಗದ ಕಟು ಸತ್ಯ. ಶ್ರೇಣೀಕೃತ ಸಮಾಜವನ್ನು ಧಿಕ್ಕರಿಸಲಾಗದ ದಾರ್ಶನಿಕ ತತ್ವಮಸಿ ಅಂದರೆ ಅರ್ಥವಿದೆಯೇ?
ಚಾಂಡಾಲೋಸ್ತು ಸತು ದ್ವಿಜೋಸ್ತು ಗುರುರಿತ್ಯೇಷಾ ಮನೀಷಾ ಮಮ ಎಂಬುದು ಶಂಕರಾಚಾರ್ಯರ ವಾಕ್ಯವೇ ಅಲ್ಲವೇ? ಚಾಂಡಾಲನನ್ನು ಕಂಡು ದೂರ ಸರಿ ಎಂದಾಗ “ದೂರ ಸರಿಯಲು ನನ್ನ ದೇಹ ನಿನ್ನ ದೇಹ ಒಂದೇ ತೆರೆ, ಈ ದೇಹಗಳ ಆತ್ಮ ಒಂದೇ, ಹಾಗಿದ್ದಲ್ಲಿ ಈ ಮಡಿವಂತಿಕೆಯೇಕೆ?” ಎಂದು ಚಾಂಡಾಲ ಪ್ರಶ್ನೆ ಮಾಡಿದಾಗ ಆ ಚಾಂಡಾಲನನ್ನೇ ಗುರು ಎಂದು ಪೂಜಿಸಲಿಲ್ಲವೇ ಶಂಕರರು? ಅಲ್ಲಿಗೆ ಆತ್ಮಾತತ್ತ್ವಮಸಿ ಎಂಬುದರ ಸಹಾಯದಿಂದಲೇ ಮಡಿವಂತಿಕೆಯನ್ನು ಅಲ್ಲಗಳೆಯಲಿಲ್ಲವೇ ಆ ಚಾಂಡಾಲ? ಶಂಕರರೂ ಅದನ್ನು ಮುಕ್ತ ಮನಸ್ಸಿನಿಂದ ಒಪ್ಪಿದರಲ್ಲವೇ?
ಇನ್ನೊಬ್ಬರ ಜ್ಞಾನಕ್ಕೆ ಶಂಕರರು ಮಹತ್ವ ಕೊಟ್ಟಿದ್ದಾರೆಯೇ ಹೊರತು ಅವರ ಜಾತಿಯನ್ನಾಧರಿಸಿ ಗೌರವಿಸಿಲ್ಲ. ನಾನೂ ಶಂಕರರನ್ನು ಗೌರವಿಸುವದು ಅವರು ಮೊದಲು ಬ್ರಾಹ್ಮಣರಾಗಿದ್ದರು ಎಂದಲ್ಲ. ಅವರ ಜ್ಞಾನವನ್ನು ಕಂಡು. ಡಾ|| ಶಿವಕುಮಾರ ಸ್ವಾಮೀಜಿಗಳಿಗೆ ಯಾರು ಗೌರವ ಕೊಡುವದಿಲ್ಲ? ಅವರ ಜಾತಿಯನ್ನು ಯಾರಾದರೂ ಪ್ರಶ್ನಿಸಿ ನಂತರ ಗೌರವಿಸುವವರು ಮನುಷ್ಯ ಎಂದು ಕರೆಯಿಸಿಕೊಳ್ಳಲೂ ಯೋಗ್ಯತೆಯಿಲ್ಲದವರು, ಅದೇ ಮಾತು ಶಂಕರರ ಜಾತಿಯನ್ನು ದೃಷ್ಟಿಯಲ್ಲಿರಿಸಿ ಅವರನ್ನು ದ್ವೇಷಿಸುವವರಿಗೂ ಅನ್ವಯವಾಗುತ್ತದೆ.
ರಾಯರೇ ನಿಮ್ಮ ವಿಚಾರ ಸರಣಿ ಚನ್ನಾಗಿದೆ. “ಬೈಯುವವ ೇಬೇವಿನ ಗಿಡವಂತೆ ಬೈಸಿಕೊಂಡವ ಮಾವಿನ ಗಿಡವಂತೆ”. ಪುರಂದರದಾಸರ ಹಾಡೊಂದು ನೆನಪಾಗುತ್ತದೆ. ಊರಿನ ಹೊಲಸು ಸ್ವಚ್ಛ ಮಾಡಲು ಬೇಕಂತೆ ಅಲ್ವಾ ಹಾಗೆ ಪ್ರಗತಿಪರರೂ ಸಮಾಜಕ್ಕೆ ಬೇಕು