ವಿಷಯದ ವಿವರಗಳಿಗೆ ದಾಟಿರಿ

ಜೂನ್ 1, 2015

28

ನಾಡು-ನುಡಿ ಮರುಚಿಂತನೆ : ಸಾಹಿತಿಗಳು ಮತ್ತು ಸಮಾಜದ ಕುರಿತ ಜ್ಞಾನ

‍ನಿಲುಮೆ ಮೂಲಕ

– ಪ್ರೊ.ರಾಜಾರಾಮ್ ಹೆಗಡೆ
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ

empty_mind_440ನನ್ನ ಅಣ್ಣ ಒಮ್ಮೆ ನನ್ನಲ್ಲಿ ಕುತೂಹಲದಿಂದ ವಿಚಾರಿಸಿದ್ದರು.‘ಅಲ್ಲ, ಈ ಜ್ಞಾನಪೀಠ ಪ್ರಶಸ್ತಿ ಯಾವಾಗಲೂ ಸಾಹಿತಿಗಳಿಗೇ ಬರುತ್ತದೆಯಲ್ಲ. ಅಂದರೆ ಸಾಹಿತಿಗಳು ಮಾತ್ರವೇ ಜ್ಞಾನಿಗಳು ಎಂದು ಅದನ್ನು ನೀಡುವವರ ಅಭಿಪ್ರಾಯವೆ?’. ನಾನು ಸಮಜಾಯಷಿ ನೀಡಿದ್ದೆ, ‘ಹಾಗಲ್ಲ, ಮೂಲತಃ ಅದು ಸಾಹಿತ್ಯಕ್ಕೆ ನೀಡುವ ಪ್ರಶಸ್ತಿ. ಪ್ರಶಸ್ತಿಗೆ ಒಂದು ಹೆಸರಿಡಬೇಕಲ್ಲ. ಜ್ಞಾನಪೀಠ ಅಂತ ಹೆಸರಿಟ್ಟಿದ್ದಾರೆ. ಆ ಪ್ರಶಸ್ತಿಯನ್ನು ಪಡೆದವರನ್ನು ಜ್ಞಾನಪೀಠ ಪುರಸ್ಕೃತರು ಎನ್ನುತ್ತಾರೆಯೇ ವಿನಃ ಜ್ಞಾನಿಗಳು ಎಂದೇನೂ ಕರೆಯುವುದಿಲ್ಲವಲ್ಲ?’. ನನ್ನ ಉತ್ತರ ಸರಿ ಎಂದೇ ನನಗೆ ಇನ್ನೂ ಅನಿಸುತ್ತದೆ. ಆದರೆ ಕೆಲವೊಮ್ಮೆ ನನ್ನ ಅಣ್ಣ ಹೇಳಿದ ಹಾಗೇ ಸಾಹಿತಿಗಳು ಮಾತ್ರವೇ ಜ್ಞಾನಿಗಳು ಎಂಬುದಾಗಿ ಕೆಲವು ಸಾಹಿತಿಗಳೂ ಭಾವಿಸಿಕೊಂಡಿದ್ದಾರೇನೋ ಎಂದೂ ಅನ್ನಿಸುತ್ತದೆ. ಅದು ನನ್ನ ಅನುಭವಕ್ಕೆ ಬಂದದ್ದು ಇತ್ತೀಚಿನ ವರ್ಷಗಳಲ್ಲಿ. ನಾವು ಮಾಡುತ್ತಿರುವ ಸಮಾಜಶಾಸ್ತ್ರೀಯ ಸಂಶೋಧನೆಗಳನ್ನು ನಿಲ್ಲಿಸಬೇಕೆಂದು ಈ ಸಾಹಿತಿಗಳು ಸರ್ಕಾರದ ಮೇಲೆ ಒತ್ತಡ ಹೇರಿದರು. ನಾವು ಯಾವ ಯಾವ ವಿಶ್ವವಿದ್ಯಾಲಯಗಳಲ್ಲಿ ಏನೇನು ಸಂಶೋಧನಾ ಚಟುವಟಿಕೆಗಳನ್ನು ನಡೆಸಿದ್ದೇವೆ ಎಂದು ಗೂಢಚರ್ಯೆಯನ್ನು ನಡೆಸಿ, ನಮ್ಮನ್ನು ನಿಯಂತ್ರಿಸಿ ನಾವು ಏನನ್ನು ಹೇಳಬೇಕೆಂದು ಅಪ್ಪಣೆ ಕೊಡಿಸುವ ಮಟ್ಟಕ್ಕೆ ಕೂಡ ಹೋದರು.ಇವರಿಗೆಲ್ಲ ತಾವು ಎಲ್ಲಾ ಕ್ಷೇತ್ರಗಳಲ್ಲೂ ಜ್ಞಾನಿಗಳೆಂಬ ಭ್ರಮೆಯು ನೆತ್ತಿಗೇರಿರದಿದ್ದರೆ ಇಷ್ಟು ಅಸಭ್ಯವಾಗಿ ವರ್ತಿಸಲು ಕಾರಣಗಳಿರಲಿಲ್ಲ.

ಕಳೆದ ಕೆಲವು ವರ್ಷಗಳಿಂದ ನನಗೆ ಇದು ಅಭ್ಯಾಸವಾಗಿ ಬಿಟ್ಟಿದೆ. ಹಾಗೇ ಕೆಲವು ಹೇಳಿಕೆಗಳು ಕೂಡಾ. ‘ಈ ರಾಜಾರಾಮ ಹೆಗಡೆಯವರು ಬಾಲಗಂಗಾಧರರನ್ನು ಸೇರಿ ಹಾಳಾಗಿ ಹೋದರು’ ಎಂಬ ತೀರ್ಪನ್ನು ಇವರು ಸುಪ್ರೀಂ ಕೋರ್ಟಿನ ಜಡ್ಜುಗಳಿಗಿಂತ ಆತ್ಮ ವಿಶ್ವಾಸಪೂರ್ವಕವಾಗಿ ಕೊಡಬಲ್ಲರು. ಹಾಗಂತ ಇಂಥ ತೀರ್ಮಾನವನ್ನು ಕೊಡುವವರಲ್ಲಿ ಯಾರೂ ಬಾಲಗಂಗಾಧರರನ್ನು ಓದಿಯೇ ಇಲ್ಲ, ಓದಿದರೂ ಚೂರುಪಾರು ಓದಿರುತ್ತಾರೆ. ಸಮಾಜ ಶಾಸ್ತ್ರಜ್ಞರ ಕುರಿತು ಇಂಥ ಹೇಳಿಕೆಗಳನ್ನು ಉದುರಿಸಲಿಕ್ಕೆ ಅವರ ಕೃತಿಗಳನ್ನು ಓದುವ ಅಗತ್ಯವಿಲ್ಲ, ಬದಲಾಗಿ ನೀವು ಒಂದಷ್ಟು ಕಥೆ ಕವನಗಳನ್ನು ಅಥವಾ ಅವುಗಳ ಕುರಿತ ವಿಮರ್ಶಾ ಲೇಖನಗಳನ್ನು ಬರೆದಿದ್ದರೆ ಸಾಕು. ಈ ಧೋರಣೆ ಎಲ್ಲಿಂದ ಹುಟ್ಟುತ್ತದೆ? ಅದೇ ರೀತಿ ‘ ನಾನು ಬಾಲಗಂಗಾಧರರ ವಾದವನ್ನು ಒಪ್ಪುವುದಿಲ್ಲ.’ ‘ಬಾಲಗಂಗಾಧರರ ವಾದಗಳ ಕುರಿತು ನನಗೆ ನನ್ನದೇ ಅನುಮಾನಗಳಿವೆ’, ಎಂಬುದು ಮತ್ತೊಂದು ಪ್ರಕಾರದ ವರಸೆ. ಇವರೂ ಕೂಡ ಬಾಲಗಂಗಾಧರರನ್ನು ಓದಬೇಕೆಂದಿಲ್ಲ. ‘ಏನು ಅನುಮಾನಗಳಿವೆ?’ ಎಂದು ಮರು ಪ್ರಶ್ನಿಸಿದರೆ ಚಾಲ್ತಿಯಲ್ಲಿರುವ ಐಡಿಯಾಲಜಿಗಳ ಕ್ಲೀಷೆಗಳನ್ನು ತಿಳಿಸುತ್ತಿರುತ್ತಾರೆ. ‘ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್’ ಎಂಬ ವಾಕ್ಯದಲ್ಲಿ ಮೊದಲನೆಯ ಶಬ್ದವನ್ನು ಇವರೆಲ್ಲ ಗಂಭೀರವಾಗಿಯೇ ಅಳವಡಿಸಿಕೊಂಡಂತಿದೆ.

ಇನ್ನು ನಮ್ಮ ಸಂಶೋಧನೆಯನ್ನು ವಿರೋಧಿಸುವ  ಹಾಗೂ ನಿಲ್ಲಿಸುವ ಕುರಿತು ಕೂಡ ಇವರಲ್ಲಿ ಕೆಲವರು ಕಾರ್ಯಪೃವೃತ್ತರಾಗಿದ್ದಾರೆ. ಕೆಲವು ವರ್ಷಗಳ ಹಿಂದೆ ನನ್ನ ಸುಪರಿಚಿತರೊಬ್ಬರನ್ನು ನಮ್ಮ ಸಂಶೋಧನಾ ಕೇಂದ್ರಕ್ಕೆ ಆಹ್ವಾನಿಸಿದೆ. ‘ನನಗೆ ನಿಮ್ಮ ಜೊತೆ ಗುರುತಿಸಿಕೊಳ್ಳಲಿಕ್ಕೆ ಇಷ್ಟವಿಲ್ಲ’ ಎಂಬ ಉತ್ತರ ಬಂತು. ಅವರು ನನ್ನ ಲೇಖನಗಳನ್ನು ಹಾಡಿ ಹೊಗಳುತ್ತಿದ್ದ ವಿದ್ವಾಂಸರು. ಇವರಿಗೇನಾಯ್ತಪ್ಪ ಎಂದು ವಿಚಾರಿಸಿದರೆ ತಿಳಿದು ಬಂದದ್ದೆಂದರೆ ನಾವು ಬಿಜೆಪಿ ಹಾಗೂ ಸಂಘ ಪರಿವಾರದ ಜೊತೆಗೆ ಶಾಮೀಲಾಗಿದ್ದೇವೆ ಎಂಬುದಾಗಿ ಅವರ ಅಭಿಪ್ರಾಯ. ಇಂಥವರು ನಕ್ಸಲರ ಜೊತೆಗೆ ಹೆಮ್ಮೆಯಿಂದ ಗುರುತಿಸಿಕೊಳ್ಳಬಲ್ಲರು. ಕಾಂಗ್ರೆಸ್ಸಿನ ಪಕ್ಷ ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬಲ್ಲವರು. ತಮಗಿಷ್ಟವಾದ ಕೋಮು/ಜಾತಿ ಸಭೆಗಳಲ್ಲಿ ನೀರಿನಲ್ಲಿ ಮೀನುಗಳಿರುವಂತೇ ಇರಬಲ್ಲರು. ಅವರ ಪರವಾಗಿ ಲಾಬಿ ಕೂಡ ಮಾಡಬಲ್ಲರು. ಬಹುಶಃ ನಮ್ಮ ಕುರಿತು ಸಮಸ್ಯೆ ಅಲ್ಲಿಂದಲೇ ಹುಟ್ಟುತ್ತದೆಯೇ ವಿನಃ ನಮ್ಮ ಸಂಶೋಧನೆಗೂ ಅದಕ್ಕೂ ಏನೂ ಸಂಬಂಧವಿಲ್ಲ. ಅಂದರೆ ನಮ್ಮ ಸಂಶೋಧನೆಯ ಕುರಿತು ಪ್ರತಿಕ್ರಿಯಿಸಲಿಕ್ಕೆ ತಮ್ಮ ರಾಜಕೀಯ ನಿಲುವುಗಳು ಸಾಕು ಎಂಬ ಧೋರಣೆಯನ್ನು ಇಂಥ ಅನೇಕ ಸಾಹಿತಿಗಳು ಹಾಗೂ ವಿಮರ್ಶಕರಲ್ಲಿ ಕಂಡಿದ್ದೇನೆ. ಹಾಗಾಗಿಯೇ ‘ಇವರ ವಾದವನ್ನು ನಾನು ಖಂಡಿಸುತ್ತೇನೆ’ ಎಂಬ ಹೇಳಿಕೆಗಳು ನಿಜವಾಗಿಯೂ ವಾದಕ್ಕೆ ಸಂಬಂಧಿಸಿರುವುದಿಲ್ಲ, ಅವರು ನಮ್ಮದೆಂದು ಭ್ರಮಿಸಿಕೊಂಡ ರಾಜಕೀಯ ನಿಲುವಿಗೆ ಸಂಬಂಧಿಸಿವೆ. ಅಂದರೆ ಇವರೆಲ್ಲ ರಾಜಕೀಯ ಘೋಷಣೆಗಳನ್ನೇ ಚಿಂತನೆ ಎಂದು ತಪ್ಪು ತಿಳಿದಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ರಾಜಕೀಯ ನಿಲುವುಗಳನ್ನು ಪ್ರಚಾರ ಮಾಡುವುದೇ ಸಂಶೋಧನೆ ಎಂದೂ ತಿಳಿದಂತಿದೆ.

ಇವರಿಗೆ ಕಥೆ, ಕಾವ್ಯ ಹಾಗೂ ಕಾದಂಬರಿಗಳನ್ನು ಬರೆಯುವ ಪ್ರತಿಭೆ ಇರಬಹುದು. ಕಥೆ ಕಾವ್ಯಗಳನ್ನು ರಚಿಸುವವನೊಬ್ಬ ಕಲಾಕಾರ. ಕಲಾಕಾರನಿಗೆ ತನ್ನದೇ ಜೀವನ ದರ್ಶನಗಳು ಇರಬಹುದು ಹಾಗೂ ಅದನ್ನು ಅವನು ತನ್ನ ಕಾವ್ಯ ಕಥೆಗಳಲ್ಲಿ ವ್ಯಕ್ತಪಡಿಸಿರಬಹುದು. ಆ ಕಾರಣದಿಂದ ಈ ಸಮಾಜದ ಕುರಿತು ಸಮಾಜ ವಿಜ್ಞಾನಿಗಳಿಗಿಂತ ಜಾಸ್ತಿ ತಿಳುವಳಿಕೆ ಇರುತ್ತದೆ ಎಂಬುದು ಅಸಂಬದ್ಧ. ಏಕೆಂದರೆ ಸಮಾಜದ ಕುರಿತ ಅವರ ಚಿತ್ರಣಗಳು ಈಗಾಗಲೇ ಇರುವ  ಸಮಾಜಶಾಸ್ತ್ರೀಯ ಬರವಣಿಗೆಗಳನ್ನು ಆಧರಿಸಿರುತ್ತವೆ. ನಮ್ಮ ಕನ್ನಡದ ಅನೇಕ ಕಥೆ ಕಾದಂಬರಿಗಳಲ್ಲಿ ವ್ಯಕ್ತವಾಗುವ ಸಾಮಾಜಿಕ ಚಿತ್ರಣಗಳು ಹಾಗೂ ಅವುಗಳ ವಿಮರ್ಶೆಗಳು ಪಾಶ್ಚಾತ್ಯರು ಭಾರತೀಯ ಸಮಾಜದ ಕುರಿತು ಎಂದೋ ರೂಢಿಯಲ್ಲಿ ತಂದ ಸ್ಟೀರಿಯೋಟೈಪುಗಳನ್ನೇ ಆಧರಿಸಿವೆಯೇ ಹೊರತೂ ಸ್ವತಃ ಲೇಖಕರದೇ ಅನುಭವವನ್ನೂ ಆಧರಿಸಿಲ್ಲ, ಅಥವಾ ಇತ್ತೀಚಿನ ಸಮಾಜಶಾಸ್ತ್ರೀಯ ವಾಗ್ವಾದಗಳನ್ನೂ ಒಳಗೊಳ್ಳುವುದಿಲ್ಲ ಎಂಬುದನ್ನು ನಿದರ್ಶಿಸಿ ತೋರಿಸಬಹುದು.

ಅಂದರೆ ವೈಜ್ಞಾನಿಕ ಸಂಶೋಧನೆಯ ಕ್ಷೇತ್ರಕ್ಕೆ ಬಂದಾಗ ಸಾಹಿತಿಗಳು ಹಾಗೂ ವಿಮರ್ಶಕರು ಸ್ವೀಕರಿಸುವ ಪಕ್ಷದಲ್ಲಿರುತ್ತಾರೆ. ಅವರಿಗೆ ಯಾವುದು ಸ್ವೀಕಾರಾರ್ಹ,ಯಾವುದು ಅಲ್ಲ ಎಂಬುದನ್ನು ಒರೆಗೆ ಹಚ್ಚುವ ಪರಿಣತಿ ಕೂಡ ಇರುವುದಿಲ್ಲ. ಕಳೆದ ಕೆಲವು ದಶಕಗಳಿಂದೀಚೆಗೆ ಸಾಹಿತ್ಯ ಕ್ಷೇತ್ರವು ರಾಜಕೀಯದಲ್ಲಿ ಸಕ್ರಿಯವಾಗಿದೆ. ವಿಭಿನ್ನ ಸಾಮಾಜಿಕ ಹೋರಾಟಗಳ ಮುಖವಾಣಿಯಾಗಿದೆ. ಹಾಗಾಗಿ ವಿಭಿನ್ನ ಹೋರಾಟಗಳಿಗೆ ಆಧಾರವಾದ ಐಡಿಯಾಲಜಿಗಳ ಪ್ರಚಾರವೇ ಇಂಥ ಸಾಹಿತ್ಯ ಚಳವಳಿಗಳ ಗುರಿಯಾಗಿದೆ. ಹೀಗಿರುವಾಗ ತಮತಮಗೆ ಸೂಕ್ತವಾದ ಸಾಮಾಜಿಕ ಸಿದ್ಧಾಂತಗಳನ್ನು ಅವರು ಸತ್ಯವೆಂಬುದಾಗಿ ಆಯ್ದುಕೊಳ್ಳುವುದು ಸಹಜ. ಇಂಥ ಸಿದ್ಧಾಂತಗಳನ್ನು ಪ್ರಶ್ನಿಸುವ ಕೆಲಸವು ಸಮಾಜಶಾಸ್ತ್ರದ ಸಂಶೋಧನೆಯಲ್ಲಿ ನಡೆಯುತ್ತದೆ. ಆದರೆ ತಾವು ಸ್ವೀಕರಿಸಿದ ಸಿದ್ಧಾಂತಗಳನ್ನು ಪ್ರಶ್ನಿಸುತ್ತಿದ್ದಾರೆ ಎಂದು ಸಮಾಜ ಶಾಸ್ತ್ರಜ್ಞರ ಮೇಲೇ ಹರಿಹಾಯುವುದು ಕೊಂಬೆಯ ತುದಿಯಲ್ಲಿ ಕುಳಿತು ಬುಡವನ್ನು ಕಡಿಯುವ ಘನಾಂದಾರಿ ಕೆಲಸದಂತಿದೆ. ಅಂದರೆ ಯಾವುದೋ ಓಬಿರಾಯನ ಕಾಲದ ವಿಚಾರಗಳನ್ನು ಸಮಾಜ ಶಾಸ್ತ್ರದಿಂದಲೇ  ಅರ್ಧಂಬರ್ಧ ಸ್ವೀಕರಿಸಿ ಇಂದಿನ ಸಮಾಜ ಶಾಸ್ತ್ರಜ್ಞರಿಗಿಂತ ಹೆಚ್ಚು ತಮಗೆ ಗೊತ್ತಿದೆ, ಎಂದು ಭಾವಿಸುವುದು ಅಹಂಕಾರವೊ,ದಡ್ಡತನವೊ, ಮೂರ್ಖತನವೋ ತಿಳಿಯದಾಗಿದೆ.

ಇತಿಹಾಸ ಕ್ಷೇತ್ರದಲ್ಲಿ ಸಂಶೋಧನೆ ಮಾಡಿದಾಕ್ಷಣ ರಾಜ್ಯಶಾಸ್ತ್ರದಲ್ಲಿ ಸಂಶೋಧನೆ ಹೀಗೇ ನಡೆಯಬೇಕು ಎನ್ನುವ ಅರ್ಹತೆ ಬರುತ್ತದೆಯೆ? ಸಮಾಜ ವಿಜ್ಞಾನಿಯೊಬ್ಬನು ಭೌತಶಾಸ್ತ್ರಜ್ಞನು ಹೇಗೆ ಸಂಶೋಧನೆ ಮಾಡಬೇಕೆಂದು ಪಟ್ಟುಹಿಡಿಯಬಹುದೆ? ಅದೇ ರೀತಿ ಸಮಾಜ ವಿಜ್ಞಾನಿಗಳು ಸಾಹಿತಿಗಳಿಗೆ ಕಥೆ ಕವನಗಳನ್ನು ಹೇಗೆ ಬರೆಯಬೇಕೆಂಬುದರ ಕುರಿತು ಪಾಠ ಮಾಡಲಿಕ್ಕೆ ಸಾಧ್ಯವೆ? ಅಥವಾ ಇವರಲ್ಲಿ ಯಾರೊಬ್ಬರಾದರೂ ಬಟ್ಟೆ ನೇಯುವವ ಅಥವಾ ಚಪ್ಪಲಿ ಮಾಡುವವನೊಬ್ಬನಿಗೆ ತನ್ನ ಕೆಲಸವನ್ನು ಹೇಗೆ ಮಾಡಬೇಕೆಂದು ಪಾಠ ಮಾಡುವ ಕನಿಷ್ಠ ಅರ್ಹತೆಯನ್ನು ಪಡೆದಿದ್ದಾರೆಯೆ? ಹಾಗೆ ಅರ್ಹತೆಯನ್ನು ಪಡೆಯಬೇಕಾದರೆ ಆಯಾ ಕ್ಷೇತ್ರದಲ್ಲಿ ಪರಿಣತಿಯನ್ನೂ ಹೊಂದಿರಬೇಕು. ನಮ್ಮ ಸಂಶೋಧನೆಗೆ ಇವರಿಂದ ಬರುತ್ತಿರುವ ಪ್ರತಿಕ್ರಿಯೆಗಳನ್ನು ನೋಡಿದರೆ ನಮ್ಮ ಕೆಲವು ಸಾಹಿತಿಗಳು ಹಾಗೂ ವಿಮರ್ಶಕರಿಗೆ ಇಂಥ ಸರಳ ವಿಚಾರಗಳೂ ತಲೆಗೆ ಹೋಗದಷ್ಟು ಭ್ರಮೆ ಅಡರಿಕೊಂಡಿರುವುದಂತೂ ಸತ್ಯ.

28 ಟಿಪ್ಪಣಿಗಳು Post a comment
 1. ಸಾಹಿತ್ಯ ಅಭಿಮಾನಿ
  ಜೂನ್ 1 2015

  ಹೆಗಡೆಯವರು ಅತಿಬುದ್ಧಿವಂತರಿಗೆ ಸರಿಯಾಗಿ ಝಾಡಿಸಿದ್ದಾರೆ.ಒಬ್ಬ ಸಾಹಿತ್ಯಾಭಿಮಾನಿಯಾಗಿಯೂ ನಿಮ್ಮ ಮಾತನ್ನು ಒಪ್ಪುತ್ತೇನೆ

  ಉತ್ತರ
 2. ಗಣನಾಥ , ಮೈಸೂರು
  ಜೂನ್ 1 2015

  ನಿಮ್ಮ ಲೇಖನವನ್ನು ಓದುತ್ತಿದ್ದರೆ ನನ್ನ ಮನಸ್ಸಿನಾಳದ ಮಾತುಗಳನ್ನೇ ಇನ್ನೊಮ್ಮೆ ಕೇಳಿದಂತಾಯಿತು. ಹೆಚ್ಚಿನ ‘ಸಾಹಿತಿ’ಗಳಿಗೆ ಭಾಷೆಯನ್ನು ಆಕರ್ಷಕವಾಗಿ ಬಳಸುವುದು ಮಾತ್ರ ಗೊತ್ತಿದೆ ; ಅವರ ‘ಪ್ರತಿಭೆ’ ಅಷ್ಟಕ್ಕೇ ಸೀಮಿತವಾಗಿದೆ ಎಂಬ ಭಾವನೆ ಸಕಾರಣವಾಗಿಯೇ ಬರುತ್ತದೆ. ಅದಕ್ಕಿಂತ ಹೆಚ್ಚಿನದೇನೂ ಅವರಲ್ಲಿಲ್ಲ. ಅದನ್ನು ನಿರೀಕ್ಷಿಸಿದರೆ ತಪ್ಪು ನಮ್ಮದೇ .
  ತುಂಬಾ ಮೆಚ್ಚುಗೆಯಾಯಿತು. ಹೀಗೇ ಬರೆಯುತ್ತಿರಿ.

  ನಿಮ್ಮ ಇ ಮೇಲ್ ವಿಳಾಸ ಸಿಗಬಹುದೇ?

  sngananath@gmail.com

  ಉತ್ತರ
 3. ಜೂನ್ 1 2015

  ಜ್ಞಾನಪೀಠಪುರಸ್ಕೃತರನೇಕರು ಅಜ್ಞಾನಿಗಳೇ ಆಗಿದ್ದಾರೆ ಎನ್ನುವುದು ವಾಸ್ತವ.

  ಉತ್ತರ
  • Nagashetty Shetkar
   ಜೂನ್ 2 2015

   Bendre, Karantha, Masti, Gokak are not leftists. Spare at least them from your mindless attack on Jnanapeetha winners.

   ಉತ್ತರ
   • ಜೂನ್ 5 2015

    ಅವರು “ಎಲ್ಲಾ ಜ್ಞಾನಪೀಠಿಗಳು” ಅಂತ ಹೇಳಿಲ್ಲ. ವಾಕ್ಯದ ಅರ್ಥವನ್ನು, ಸರಿಯಾಗಿ ಗ್ರಹಿಸತಕ್ಕದ್ದು.
    ಅದು ಯಾರು ಎಂಬುದು ಸರ್ವವೇದ್ಯವಾದ ಕಾರಣ ತಮ್ಮ ತಿಳುವಳಿಕೆಯನ್ನು ಒರೆಗೆ ಹಚ್ಚತಕ್ಕದ್ದು

    ಉತ್ತರ
    • Nagshetty Shetkar
     ಜೂನ್ 5 2015

     ಅದಕ್ಕೇ ರಾಯರೇ ನಾನು ನಿಮಗೆಲ್ಲ ಹೇಳಿದ್ದು ನೀವು ಯಾರನ್ನು ಕುರಿತು ಟೀಕೆ ಮಾಡುತ್ತಿದ್ದೀರೋ ಅವರ ಹೆಸರನ್ನು ಹೇಳಿಯೇ ಟೀಕೆ ಮಾಡಿ ಅಂತ! ಹೆಸರು ಹೇಳಲು ಧೈರ್ಯ ಸಾಲದಿದ್ದರೆ ಬೀಸು ಹೇಳಿಕೆ ಕೊದುವುದನ್ನಾದರೂ ನಿಲ್ಲಿಸಿ.

     ಉತ್ತರ
    • ರಂಜನಾ ರಾಮ್ ದುರ್ಗ
     ಜೂನ್ 5 2015

     ಸಹೋದರರು ಉಲ್ಲೇಖಿಸಿರುವವರನ್ನು ಬಿಟ್ಟು ಉಳಿದವರನ್ನು ವಿಚಾರಿಕೊಳ್ಳಬಹುದು

     ಉತ್ತರ
 4. Shripad
  ಜೂನ್ 3 2015

  ಕನ್ನಡ ವಲಯದ ಸಮಾಜವಿಜ್ನಾನ ಹಾಗೂ ಸಾಹಿತ್ಯ “ವಿದ್ವಾಂಸರ” ಢೋಂಗೀತನ ಹೇಳಿ ಮುಗಿಯಲಾರದು. ಪಂಚಾಯ್ತಿಯಿಂದ ಹಿಡಿದು ಲೋಕಸಭಾ ಚುನಾವಣೆವರೆಗೆ ಪ್ರಚಾರದ ಹಾಡು ಬರೆದುಕೊಡುವುದರಿಂದ ಹಿಡಿದು ಅವರ ಪಕ್ಷ-ಸಿದ್ಧಾಂತ ಪ್ರೇಮ ಶುರುವಾಗುತ್ತದೆ. ಇವೆಲ್ಲ ಅವರ ಸೈದ್ಧಾಂತಿಕ ಬದ್ಧತೆ ಎಂದು ತಿಳಿದರೆ ತಪ್ಪು! ಈಚೆಗೆ ನಿಧನರಾದ ಮಹಾನ್ ಸಾಹಿತಿಯೊಬ್ಬರು ಕಡೆಯ ದಿನಗಳಲ್ಲಿ ‘ನಾನು ಇದುವರೆಗೆ ನಂಬಿಕೊಂಡು ಬಂದಿದ್ದು ಸರಿ ಇರಲಿಲ್ಲ ಎಂದು ಕಾಣುತ್ತದೆ ಕಣ್ರಿ’ ಎಂದು ಆಪ್ತರ ಬಳಿ ಅಲವತ್ತುಕೊಂಡರೂ ಬಹಿರಂಗವಾಗಿ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿದ್ದರು-ಕಾರಣ ಅದುವರೆಗೆ ತಮ್ಮ ಸುತ್ತ ಕಟ್ಟಿಕೊಂಡು ಬಂದಿದ್ದ ಫಾಲ್ಸ್ ಎಡಿಫಸಿ ಕುಸಿಯುವ ಭೀತಿ! ಆದರೆ ಅವರ ಉತ್ತರಕ್ರಿಯಾದಿಗಳು ಅವರ ಬಯಕೆಯಂತೆಯೇ ನಡೆಯಿತು-ಅದುವರೆಗಿನ ಅವರ ನಂಬಿಕೆಗೆ ವಿರುದ್ಧವಾಗಿ-ಅವರ ಕೊನೆಯೆ ಇಚ್ಛೆಯಂತೆ!!

  ಉತ್ತರ
  • ರಂಜನಾ ರಾಮ್ ದುರ್ಗ
   ಜೂನ್ 3 2015

   ಆದರೆ ಪ್ರಗತಿಪರರು ಅದನ್ನು ಸರ್ಕಾರದ ಇಚ್ಚೆ ಎಂಬಂತೆ ತಿಪ್ಪೆ ಸಾರಿಸಿದರು.ಆ ಹಿರಿಯ ಸಾಹಿತಿಯನ್ನೇ ಸಾಕ್ಷಿ ಪ್ರಜ್ನೆಯಾಗಿಸಿಕೊಂಡಿದ್ದ ಕಿರಿಯರಿಗೆ ಸ್ವಂತ ಬುದ್ದಿ ಎನ್ನುವುದಿದ್ದರೆ ಇದು ಅರ್ಥವಾಗಬೇಕಿತ್ತು

   ಉತ್ತರ
   • Nagashetty Shetkar
    ಜೂನ್ 3 2015

    He was critical insider. He had said Brahmanya never left him. He was a Brahmin. Tremendous pressure on family by Brahmin relatives and Purohitashahi to do his last rites in Brahmanical way. Why blame him? Blame the society which is still in the grips of Manuvadis.

    ಉತ್ತರ
    • shripad
     ಜೂನ್ 3 2015
     • ರಂಜನಾ ರಾಮ್ ದುರ್ಗ
      ಜೂನ್ 4 2015

      😀 😀

      ಉತ್ತರ
      • Nagshetty Shetkar
       ಜೂನ್ 4 2015

       ಅವರ ಕುಟುಂಬದವರಿಗೆ ದುಷ್ಕರ್ಮಿಗಳು ಫೋನ್ ಮುಖಾಂತರ ಬೆದರಿಕೆ ಹಾಕಿದರು ಅಂತ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇಂದಿಗೂ ಹಿಂದುತ್ವವಾದಿಗಳ ಭಯದಲ್ಲೇ ಅವರ ಕುಟುಂಬದವರು ಜೀವಿಸುತ್ತಿದ್ದಾರೆ. ಅಂತ್ಯಕ್ರಿಯೆಯನ್ನು ವೈದಿಕ ಕ್ರಮದಲ್ಲಿ ನಡೆಸದೆ ಜಾತ್ಯತೀತವಾಗಿ ನಡೆಸಿದ್ದರೆ ಹಿಂದುತ್ವವಾದಿಗಳು ರೊಚ್ಚಿಗೇಳುತ್ತಿದ್ದರು. ಆಗ ಕೋಮು ಗಲಭೆಗಳಾಗುವ ಸಾಧ್ಯತೆ ಇತ್ತು. ಹೀಗಾಗಿ ಸರಕಾರ ವೈದಿಕ ಕ್ರಿಯಾಕರ್ಮಗಳಿಗೆ ಓಕೆ ನೀಡಿತು ಅಂತ ನನ್ನ ಭಾವನೆ. ನಾಡಿನ ಪ್ರಜ್ಞಾವಂತರಿಗೇ ಬಿಟ್ಟಿದ್ದರೆ ಅವರ ಪಾರ್ಥಿವ ಶರೀರವನ್ನು ವೈದಿಕ ಕ್ರಮದಲ್ಲಿ ಸುಡುವ ಬದಲು ಮಮ್ಮೀಫಿಕೆಶನ್ ಮೂಲಕ ಭೌತಿಕವಾಗಿ ಉಳಿಸಿಕೊಂಡು ಗಂಗೋತ್ರಿಯಲ್ಲಿ ಒಂದು ಸ್ಮಾರಕವಾಗಿಸುತ್ತಿದ್ದರು. ಆದರೆ ವೈದಿಕಶಾಹಿಯೇ ಆ ಸಂದರ್ಭದಲ್ಲಿ ಜಯಿಸಿತು.

       ಉತ್ತರ
       • WITIAN
        ಜೂನ್ 4 2015

        ಈ ಜ್ಞಾನಪೀಠ ಪ್ರಶಸ್ತಿ ವಿಜೇತರು ತಮ್ಮ ಹೊಸ ಮನೆಗೆ ಒಕ್ಕಲಾಗುವ ಸಂದರ್ಭ, ಆಗ ಪಕ್ಕಾ ಬ್ರಾಹ್ಮಣರಂತೆ ತಮ್ಮ ಮನೆಯ ಗೃಹಪ್ರವೇಶದ ವಿಧಿ-ವಿಧಾನಗಳನ್ನು ನೆರವೇರಿಸಿದ ಈ ಸಾಹಿತಿಗಳು ಹಲವರು ಹುಬ್ಬೇರಿಸಿದಾಗ “ತಮ್ಮ ತಾಯಿಯ ಮನಸ್ಸಂತೋಷಕ್ಕಾಗಿ” ಎನ್ನುವ ನೆಪ ಮುಂದಿಟ್ಟಿದ್ದರು. ಅವರ ಒಬ್ಬ ಮಗನ ಉಪನಯನವನ್ನೂ ಶಾಸ್ತ್ರೋಕ್ತವಾಗಿ, ವೈದಿಕ ಪದ್ಧತಿಗೆ ಅಡ್ಡಬಿದ್ದು ಮಾಡಿಸಿದರು. ಅರುವತ್ತು ವರ್ಷದ ಶಾಂತಿಯನ್ನು ಪೇಜಾವರ ಮಠಾಧೀಶರ ಉಪಸ್ಥಿತಿಯಲ್ಲಿ (ವೈದಿಕ ಪದ್ಧತಿಯಲ್ಲೇ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲವಷ್ಟೆ) ನಡೆಸಿದರು. ಇಂಥವರು ತಮ್ಮ ಅಂತ್ಯಕ್ರಿಯೆಯನ್ನು ವೈದಿಕ ಪದ್ಧತಿಯಲ್ಲೇ ನಡೆಸಬೇಕೆಂದು ಅಪೇಕ್ಷೆಪಟ್ಟಿದ್ದು ಕೂಡಾ ಸುಳ್ಳಲ್ಲ. ಆದರೆ ಬದುಕಿದ್ದಷ್ಟು ದಿನ ತಮ್ಮ ಕೃತಿಯೊಂದರ ಪಾತ್ರದಂತೆಯೇ ಬದುಕಿದ್ದು ಸಹ ಸುಳ್ಳಲ್ಲ. ಇಂಥ ಆಷಾಢಭೂತಿಗಳ ಸಮರ್ಥನೆಗೆ ನಾಶೆಶೇ ಅಂತಹ ಬೂಟಾಟಿಕೆಯ ಜನರೇ ಮುಂದೆಬರುವುದು ನನಗೆ ಆಶ್ಚರ್ಯವನ್ನು ಉಂಟು ಮಾಡುವುದಿಲ್ಲ.

        ಉತ್ತರ
       • Shripad
        ಜೂನ್ 4 2015

        “ನಾಡಿನ ಪ್ರಜ್ಞಾವಂತರಿಗೇ ಬಿಟ್ಟಿದ್ದರೆ ಅವರ ಪಾರ್ಥಿವ ಶರೀರವನ್ನು ವೈದಿಕ ಕ್ರಮದಲ್ಲಿ ಸುಡುವ ಬದಲು ಮಮ್ಮೀಫಿಕೆಶನ್ ಮೂಲಕ ಭೌತಿಕವಾಗಿ ಉಳಿಸಿಕೊಂಡು ಗಂಗೋತ್ರಿಯಲ್ಲಿ ಒಂದು ಸ್ಮಾರಕವಾಗಿಸುತ್ತಿದ್ದರು” ಪ್ರಜ್ನಾವಂತರ ಮಾತಾ ಇದು? ತಮ್ಮಂಥ ಕೆಲವರು ಪೂಜೆ ಶುರುವಿಟ್ಟುಕೊಳ್ಳುತ್ತಿದ್ದರು…ನಿಧಾನವಾಗಿ ಹೊಸ ಪುರೋಹಿತಶಾಹಿ ಸೃಷ್ಟಿಯಾಗುತ್ತಿತ್ತು… ವೈದಿಕಶಾಹಿಯಂತೆ!

        ಉತ್ತರ
        • Nagshetty Shetkar
         ಜೂನ್ 5 2015

         “ತಮ್ಮಂಥ ಕೆಲವರು ಪೂಜೆ ಶುರುವಿಟ್ಟುಕೊಳ್ಳುತ್ತಿದ್ದರು…ನಿಧಾನವಾಗಿ ಹೊಸ ಪುರೋಹಿತಶಾಹಿ ಸೃಷ್ಟಿಯಾಗುತ್ತಿತ್ತು”

         ಅವರು ತಮ್ಮನ್ನೆಂದೂ ದೇವರೆಂದು ಕರೆದುಕೊಳ್ಳಲಿಲ್ಲ, ದೇವಪುತ್ರನೆಂದೂ ಕರೆದುಕೊಳ್ಳಲಿಲ್ಲ, ಪ್ರವಾದಿ ಎಂದೂ ಕರೆದುಕೊಳ್ಳಲಿಲ್ಲ. ದೈವತ್ವದ ಯಾವ ಭ್ರಮೆಯೂ ಅವರಿಗಿರಲಿಲ್ಲ, ಪವಾಡಪುರುಷನ ಸೋಗನ್ನು ಅವರೆಂದೂ ಬಯಸಲಿಲ್ಲ. ಮನುಷ್ಯತ್ವವೇ ಅವರಿಗೆ ವಾಸ್ತವವಾಗಿತ್ತು.

         ಉತ್ತರ
         • Shripad
          ಜೂನ್ 5 2015

          ಆಗುವುದೆಲ್ಲ ಬೇರೆಯವರಿಂದ! ತಮ್ಮದೇನೂ ಕಾಣಿಕೆ ಇಲ್ಲ. ಇದನ್ನೇ ವಿಧಿ ಎನ್ನುವುದು. ಅದು ಮಾಡಿಸಿಕೊಳ್ಳುತ್ತದೆ. ಪ್ರಜ್ನಾವಂತರಾದ ತಮ್ಮಂಥವರಿಗೆ “ಮಮ್ಮೀಫಿಕೆಶನ್” ಯಾಕೆ? “ಭೌತಿಕವಾಗಿ ಉಳಿಸಿಕೊಂಡು ಗಂಗೋತ್ರಿಯಲ್ಲಿ ಒಂದು ಸ್ಮಾರಕವಾಗಿಸುವ” ಹಂಬಲವೇಕೆ?

          ಉತ್ತರ
        • ರಂಜನಾ ರಾಮ್ ದುರ್ಗ
         ಜೂನ್ 5 2015

         ಯಾರು ಏನೇ ಹೇಳಲಿ.ನಾನು ನಮ್ಮ ಸಹೋದರರ ಹಾಸ್ಯ ಪ್ರಜ್ನೆಯನ್ನು ಗೌರವಿಸುತ್ತೇನೆ 😀

         ಐಡಿಯಾಲಜಿಯ ಭೂತ ಮೆಟ್ಟಿಸಿಕೊಂಡ ಜನರನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದಕ್ಕೆ ಆ ಸಾಹಿತಿ ಉದಾಹರಣೆಯಾಗಿದ್ದರು ಎಂಬುದು ಸರ್ವವಿಧಿತವಾಗಿದೆ

         ಉತ್ತರ
       • Shripad
        ಜೂನ್ 5 2015

        @ ಶೆಟ್ಕರ್: ತಾವು ಶೋಕಿ ಶರಣರು ಎಂಬುದನ್ನು ಮತ್ತೆ ಮತ್ತೆ ಸಾಬೀತುಮಾಡುತ್ತಿದ್ದೀರಿ. ತಮ್ಮ ವಚನ ಕುರಿತ ಜ್ನಾನ ಅಷ್ಟರದ್ದೇ ಎಂಬುದು ಇಲ್ಲೇ ಹಲವಾರು ಬಾರಿ ಸಾಬೀತಾಗಿದೆ. “ಮಮ್ಮೀಫಿಕೆಶನ್” ಮತ್ತು “ಭೌತಿಕವಾಗಿ ಉಳಿಸಿಕೊಂಡು ಗಂಗೋತ್ರಿಯಲ್ಲಿ ಒಂದು ಸ್ಮಾರಕವಾಗಿಸುವ” ಬಯಕೆಯ ಮೂಲಕ ಸ್ಥಾವರ ಕಟ್ಟುವ ಆಸೆ ವ್ಯಕ್ತಪಡಿಸಿ ಶರಣ ಚಿಂತನೆಯೂ ತಮಗೆ ಅರ್ಥವಾಗಿದ್ದು ಅಷ್ಟೇ ಎಂಬುದನ್ನೂ ತೋರಿಸಿಕೊಂಡಿದ್ದೀರಿ!

        ಉತ್ತರ
        • Nagshetty Shetkar
         ಜೂನ್ 6 2015

         ಸ್ಥಾವರ ಎಂಬುದನ್ನು ವಚನಕಾರರು ನೀವು ಅಂದುಕೊಂಡ ಅರ್ಥದಲ್ಲಿ ಬಳಸಿಲ್ಲ. ದರ್ಗಾ ಸರ್ ಅವರು ಸ್ಥಾವರ-ಜಂಗಮ ತತ್ವಗಳ ಬಗ್ಗೆ ಬರೆದಿರುವುದನ್ನು ಓದಿದ್ದರೆ ಇಂತಹ ಪ್ರಾಥಮಿಕ ಮಟ್ಟದ ಪ್ರಶ್ನೆಯನ್ನು ಕೇಳುತ್ತಿರಲಿಲ್ಲ.

         ಉತ್ತರ
         • Nagshetty Shetkar
          ಜೂನ್ 8 2015

          ಎಡಪಂಥೀಯರ ಕಾಮೆಂಟುಗಳನ್ನು ಮಾತ್ರ ಮಾಡರೇಶನಿಗೆ ಒಳಪಡಿಸಿ ಪ್ರಗತಿಪರರ ಅಭಿವ್ಯಕ್ತಿಯನ್ನೂ ಹಾಗೂ ಅಭಿಪ್ರಾಯ ಸ್ವಾತಂತ್ರ್ಯವನ್ನೂ ಹತ್ತಿಕ್ಕುವ ಕೆಲಸ ಮಾಡುತ್ತಿರುವ ನಿಲುಮೆಯ ಮಾಡರೇಟರ್ ಅವರ ಸರ್ವಾಧಿಕಾರಿ ವರ್ತನೆಯನ್ನು ಪ್ರತಿಭಟಿಸಿ ನಿಲುಮೆಗೆ ತಿಲಾಂಜಲಿ ಅರ್ಪಿಸುತ್ತಿದ್ದೇನೆ.

          ವಿ.ಸೂ. ನನ್ನ ಮಿಕ್ಕ ಕಾಮೆಂಟುಗಳನ್ನು ಪ್ರಕಟಿಸದ ಶೆಟ್ಟಿ ಅವರು ಈ ಕಾಮೆಂಟನ್ನು ಮಾತ್ರ ಪ್ರಕಟಿಸುತ್ತಾರೆ ಅಂತ ನನಗೆ ತಿಳಿದಿದೆ, ಅಷ್ಟೇ ಅಲ್ಲ ಅವರ ಕೇಸರಿ ಸಹೋದರರ ಪಡೆಯೂ ಈ ಕಮೆಂಟಿನ ಮೇಲೆ ಮುಗಿದು ಬೀಳಲಿದ್ದಾರೆ ಅಂತ ಅನುಮಾನವೇ ಇಲ್ಲ.

          ಉತ್ತರ
          • shripad
           ಜೂನ್ 9 2015

           @ಶೆಟ್ಕರ್: ನೋಡಿ, ಮಾತೆತ್ತಿದರೆ ವೈದಿಕವನ್ನು ಟೀಕಿಸುವ ತಾವು “ನಿಲುಮೆಗೆ ತಿಲಾಂಜಲಿ ಅರ್ಪಿಸುತ್ತಿದ್ದೇನೆ” ಎನ್ನುವ ಮೂಲಕ “ಮಹಾನ್ ಸಾಹಿತಿ”ಯಂತೆಯೇ ಅಂತ್ಯದಲ್ಲಿ ವೈದಿಕ ಕ್ರಮದಲ್ಲಿ ಅಥವಾ ಮನುವಾದಿಯಂತೆ “ತಿಲಾಂಜಲಿ” ನೀಡುತ್ತಿದ್ದೀರಿ. ನೈಜ ಶರಣನಿಗೆ ಅಥವಾ ಪ್ರಗತಿಪರ ಎಂದು ಹೇಳಿಕೊಳ್ಳುವವರಿಗೆ ಇದು ಶೋಭಿಸುವುದೇ? ಇಂಥ ಅನೇಕಾನೇಕ ಗೊಂದಲಗಳು ತಮ್ಮಲ್ಲಿವೆ. ಹಾಗಾಗಿಯೇ ಹೇಳಿದ್ದು ತಾವು ಶೋಕಿ ಶರಣರು ಎಂದು. ಇನ್ನೇನು ಸಮರ್ಥನೆ ಬೇಕು ಹೇಳಿ? ಏನಾದರೂ ಆಗಲಿ ತಾವು ಬಿಟ್ಟ ತಿಲಾಂಜಲಿಯಿಂದ ನೋವಾಗಿದೆ-ಆರ್ ಐ ಪಿ!

        • Nagshetty Shetkar
         ಜೂನ್ 6 2015

         “ಶೆಟ್ಕರ್: ತಾವು ಶೋಕಿ ಶರಣರು”
         “ನಾಶೆಶೇ ಅಂತಹ ಬೂಟಾಟಿಕೆಯ ಜನ”

         ಗೆಳೆಯರೇ, ವೈಯಕ್ತಿಕ ನಿಂದನೆಯನ್ನೇಕೆ ಮಾಡುತ್ತೀರಿ? ನಾನು ನಿಮ್ಮನ್ನು ನಿಂದಿಸಿದ್ದೇನೆಯೇ? ಅಥವಾ ಲೇಖನದ ವಸ್ತುವಿಗೆ ಸಂಬಂಧವಲ್ಲದ ವಿಚಾರವನ್ನು ಪ್ರಸ್ತಾಪಿಸಿದ್ದೆನೆಯೇ? ನಿಮ್ಮ ವರ್ತನೆ ಸಮರ್ಥನೀಯವೇ?

         ಉತ್ತರ
         • shripad
          ಜೂನ್ 8 2015

          ಶೋಕಿ ಶರಣ ಎಂದಿದ್ದು ಸಮರ್ಥನೀಯ. ತೋರಿಕೆಗಾಗಿ ಅಥವಾ ಸೋಗಲಾಡಿ ಎಂದಾದರೂ ತಿದ್ದಿಕೊಳ್ಳಬಹುದು. ಇದು ಹೇಗೆ ವೈಯಕ್ತಿಕ ನಿಂದನೆ? ಶರಣ ತತ್ತ್ವಗಳನ್ನು ಬೇಕಾದಾಗ ಬೇಕಾದಂತೆ ಓದಿಕೊಳ್ಳುವುದಲ್ಲ. ಇಂಥವರನ್ನು ಅಕ್ಕಮಹಾದೇವಿಯೂ ಕಂಡಿದ್ದಾಳೆ-“ಬೆಳಗಾದರೆ ಭಕ್ತನಿಲ್ಲ; ರಾತ್ರಿಯಾದರೆ ಶರಣನಿಲ್ಲ” ಎಂದು ಮಾರ್ಮಿಕವಾಗಿ ಅಕ್ಕ ಹೇಳಿದ್ದು ಇದಕ್ಕೇ ಇರಬೇಕು!

          ಉತ್ತರ
    • ramakrishna
     ಜೂನ್ 4 2015

     he may be a critical insider. but if at all he had agreed to superstitions it should be blamed and condemned. to a progressive thinker nobody is 24 carat gold.

     ಉತ್ತರ
     • Shripad
      ಜೂನ್ 4 2015

      ” it should be blamed and condemned” Why not this concept be superstition? Everybody believes that he himself is a progressive!

      ಉತ್ತರ
     • Nagshetty Shetkar
      ಜೂನ್ 5 2015

      ಅವರ ‘ದ್ವಂದ್ವ’ ಬಹುಚರ್ಚಿತ ವಿಷಯವೇ ಆಗಿದೆ. ಆದರೆ ಅದು ಮಾನವೀಯ ನೆಲೆಯ ದ್ವಂದ್ವ. ಅನುಕೂಲಸಿಂಧು ದ್ವಂದ್ವವೇನಲ್ಲ. ಅವರು ಜೀವಿತದ ಉದ್ದಕ್ಕೂ ಬ್ರಾಹ್ಮಣರೇ ಆಗಿದ್ದರು, ಆದರೆ ಬ್ರಾಹ್ಮಣ್ಯದ ಜೀವವಿರೋಧಿತ್ವವನ್ನು ಮನಗಂಡಿದ್ದರು. ಬ್ರಾಹ್ಮಣ್ಯ ನಿವಾರಣೆಗೆ ಪ್ರಯತ್ನ ಮಾಡಿದರೂ ಪೂರ್ಣವಾಗಿ ಯಶಸ್ಸನ್ನು ಕಾಣಲಿಲ್ಲ.

      ಇನ್ನು ಉಪನಯನದ ವಿಚಾರದ ಬಗ್ಗೆ. ಅವರು ಎಂದೂ ಸಂಧ್ಯಾವಂದನೆ ಮಾಡಲಿಲ್ಲ ಗಾಯತ್ರಿ ಮಂತ್ರ ಜಪಿಸಲಿಲ್ಲ. ಪೇಜಾವರರರೊಡನೆ ಸ್ನೇಹವಿದ್ದರೂ ಬ್ರಾಹ್ಮಣಿಕೆ ನಡೆಸಲಿಲ್ಲ. ಅವರ ಮನೆಯ ಕಾರ್ಯಕ್ರಮಗಳಲ್ಲಿ ಪಂಕ್ತಿ ಭೇದವನ್ನು ಆಚರಿಸಲಿಲ್ಲ. ದಲಿತ ಸ್ನೇಹಿತರೊಡನೆ ತಮ್ಮ ಮನೆಯಲ್ಲಿ ಒಂದೇ ಟೇಬಲ್ಲಿನಲ್ಲಿ ಕುಳಿತು ಊಟ ಮಾಡುತ್ತಿದ್ದರು. ಪೇಜಾವರ ಅಧೀಶರು ದಲಿತ ವಟುವನ್ನೇ ತಮ್ಮ ಉತ್ತರಾಧಿಕಾರಿಯಾಗಿಸತಕ್ಕದ್ದು ಎಂಬುದು ಅವರ ಆಗ್ರಹವಾಗಿತ್ತು. ದಲಿತ ಹೋರಾಟಗಾರರೊಡನೆ ಅವರ ಒಡನಾಟವಿತ್ತು.

      ಜ್ಞಾನಪೀಠ ಪಡೆದುದರಿಂದ ಅವರಿಗೇನೂ ಲಾಭವಾಗಲಿಲ್ಲ, ಜ್ಞಾನಪೀಠದ ಕಾರಣ ಅವರನ್ನು ದ್ವೇಷಿಸುವವರ ಸಂಖ್ಯೆ ಹೆಚ್ಚಿತು. ಆದರೆ ಜ್ಞಾನಪೀಠ ಪ್ರಶಸ್ತಿಗೆ ಅವರ ಕರಿಷ್ಮಾದಿಂದ ಸಾಕಷ್ಟು ಲಾಭವಾಯಿತು, ಜ್ಞಾನಪೀಠವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಪಡೆಯಿತು.

      ಉತ್ತರ
      • Nagshetty Shetkar
       ಜೂನ್ 5 2015

       ಜ್ಞಾನಪೀಠವಿರಲಿ ಬಸವಶ್ರೀ ಪ್ರಶಸ್ತಿಯಿಂದ ಕೂಡ ಅವರಿಗೆ ಟೀಕಾಪ್ರಹಾರ ಎದುರಿಸಬೇಕಾಯ್ತು. ಬಸವಶ್ರೀ ಪ್ರಶಸ್ತಿಗೆ ರಾಷ್ಟ್ರ ಮಟ್ಟದ ಘನತೆ ಒದಗಿಸಿಕೊಟ್ಟವರೇ ಅವರು ಹಾಗೂ ದರ್ಗಾ ಸರ್. ಇಬ್ಬರಿಗೂ ಪ್ರಶಸ್ತಿಯಿಂದ ಲಾಭವಾಗಲಿಲ್ಲ, ಅನಗತ್ಯ ವಿವಾದಕ್ಕೆ ಗುರಿಯಾಗುವ ಪರಿಸ್ಥಿತಿ ಉಂಟಾಯಿತು.

       ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments