ವಿಷಯದ ವಿವರಗಳಿಗೆ ದಾಟಿರಿ

ಜೂನ್ 2, 2015

ವಚನ ಸಾರ: 2 (ದಕ್ಕಿದಷ್ಟು)

‍ನಿಲುಮೆ ಮೂಲಕ

– ಡಾ. ಸಂತೋಷ್ ಕುಮಾರ್ ಪಿ.ಕೆ

ಉಳ್ಳವರು ಶಿವಾಲಯವ ಮಾಡುವರುವಚನ ಸಾರ - ನಿಲುಮೆ

ನಾನೇನು ಮಾಡಲಿ ಬಡವನಯ್ಯ?

ಎನ್ನ ಕಾಲೇ ಕಂಬ ದೇಹವೆ ದೇಗುಲ

ಶಿರವೇ ಹೊನ್ನ ಕಳಸವಯ್ಯ!

ಕೂಡಲಸಂಗಮ ದೇವ ಕೇಳಯ್ಯ, ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ! (ಬಸವಣ್ಣ)

ಬಸವಣ್ಣನವರ ಈ ವಚನವು ತುಂಬಾ ಸುಪ್ರಸಿದ್ಧವಾದುದು, ಪ್ರಾಥಮಿಕ ಶಾಲಾ ತರಗತಿಯಿಂದ ಓದುತ್ತಾ ಬಂದಿರುವುದು ಎಲ್ಲರಿಗೂ ನೆನೆಪಿರಬಹುದು. ಇದಕ್ಕೆ ಸಂಬಂಧಿಸಿದಂತೆ ಎರಡು ರೀತಿಯ ವಿವರಣೆಯನ್ನು ಸಾಮಾನ್ಯವಾಗಿ ನೀಡುತ್ತಾ ಬರಲಾಗುತ್ತಿದೆ. ಮೊದಲನೆಯದಾಗಿ, ಬಸವಣ್ಣ ತೀರಾ ಬಡವರಾಗಿದ್ದರಿಂದ ದೇವಾಲಯವನ್ನು ನಿರ್ಮಿಸುವ ಶಕ್ತಿ ಅವರಿಗಿರಲಿಲ್ಲ, ಆದ್ದರಿಂದ ತಮ್ಮ ಅಸಹಾಯಕತೆಯನ್ನು ವಚನದ ಮೂಲಕ ಹೊರಹಾಕಿದ್ದಾರೆ. ಎರಡನೆಯದಾಗಿ, ಬಸವಣ್ಣ ಮತ್ತು ಇಡೀ ವಚನಕಾರರ ಸಮುದಾಯವು ಮೇಲ್ಜಾತಿಗಳನ್ನು ಹಲವಾರು ಆಯಾಮಗಳಲ್ಲಿ ವಿರೋಧಿಸುತ್ತಿದ್ದರು, ಹಾಗಾಗಿ ಅವರಿಗೆ ಸಂಬಂಧಪಟ್ಟ ದೇವಾಲಯ, ಗ್ರಂಥಗಳು ಹಾಗೂ ಅವರ ಸಂಸ್ಕೃತಿಗಳನ್ನು ವಿರೋಧಿಸಿ ಹೊಸ ಸಂಪ್ರದಾಯವನ್ನು ಹುಟ್ಟುಹಾಕಿದರು ಎಂಬುದು ಮತ್ತೊಂದು ವಿವರಣೆಯಾಗಿದೆ.

ಮೊದಲನೆಯ ವಿವರಣೆ ಆರ್ಥಿಕ ಚೌಕಟ್ಟಿನಿಂದ ಕೂಡಿದ್ದರೆ, ಎರಡನೆ ವಿವರಣೆ ಒಂದು ರೀತಿಯ ಪೂರ್ವಾಗ್ರಹದಿಂದ ಕೂಡಿದೆ ಎಂದು ಹೇಳಬಹುದು. ಮೇಲಿನ ವಚನಕ್ಕೆ ಸಂಬಂಧಿಸಿದಂತೆ ಈ ಎರಡೂ ವಿವರಣೆಗಳು ಅಪ್ಯಾಯಮಾನವಾಗುತ್ತವೆಯೇ ಎಂಬುದನ್ನು ಒಮ್ಮೆ ನೋಡಬೇಕಾಗುತ್ತದೆ. ಬಸವಣ್ಣನವರು ಬಡವರೇ ಆಗಿದ್ದರು ಎಂಬುದನ್ನು ಒಂದು ಕ್ಷಣಕ್ಕೆ ಒಪ್ಪಿಕೊಂಡರೂ ಸಹ, ಅವರೇಕೆ ದೇವಾಲಯವನ್ನು ಕಟ್ಟಲಾಗಲಿಲ್ಲ ಎಂಬ ಅಂಬೋಣವನ್ನು ಹೊರಹಾಕಬೇಕು? ಸೇವಿಸಲು ಆಹಾರ, ಇರಲು ವಸತಿ ಇಲ್ಲ ಎಂದು ಒಂದು ಪಕ್ಷ ಹೇಳಿದ್ದರೆ, ಬಡತನದ ಬೇಯ್ಗೆಯಿಂದ ಹಾಗೆ ಹೇಳುತ್ತಿದ್ದಾರೆ ಎಂದು ಅಂದಾಜಿಸಬಹುದಿತ್ತು. ಆದರೆ ಅಂತಹ ವಿಷಯಗಳನ್ನು ಹೇಳದೆ ದೇವಾಲಯವನ್ನು ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿರುವುದು ಮತ್ತೆ ಅದಕ್ಕೆ ಪರ್ಯಾಯವಾಗಿ ತನ್ನ ದೇಹವೇ ಅಂತಹ ರಚನೆಯನ್ನು ಹೊಂದಿದೆ ಎನ್ನುವುದರಲ್ಲಿ ಬಡತನದ ಪ್ರಸ್ತಾಪ ಇಲ್ಲದಿರುವುದು ಗೋಚರಿಸುತ್ತದೆ. ಹಾಗಾದರೆ ಎರಡನೇ ವಿವರಣೆಯಾದರೂ ಇದಕ್ಕೆ ಆಪ್ತವಾಗುತ್ತದೆಯೆ?

ವಚನಕಾರರು ಮೇಲ್ಜಾತಿಗಳಿಂದಾಗುತ್ತಿದ್ದ ಶೋಷಣೆಗಳಿಂದ ಸಾಮಾನ್ಯ ಜನರನ್ನು ಮುಕ್ತಿಗೊಳಿಸಲು ಇಡೀ ವಚನ ಚಳುವಳಿಯನ್ನು ಹುಟ್ಟುಹಾಕಿದರು ಎಂಬುದು ಎರಡನೆ ವಿವರಣೆಯ ತಳಹದಿಯಾಗಿದೆ. ಆದರೆ ಅಂತಹ ವಿವರಣೆಯನ್ನು ಪ್ರಶ್ನಿಸುವ ಮತ್ತು ಅನುಮಾನಕ್ಕೆ ಈಡು ಮಾಡುವಂತಹ ಹೊಸ ಹೊಸ ವಿಚಾರಗಳು ಮುನ್ನಲೆಗೆ ಬರುತ್ತಿವೆ. ಒಂದೊಮ್ಮೆ ಬಸವಣ್ಣ ಮೇಲ್ಜಾತಿಯನ್ನು ವಿರೋಧಿಸಲು ಸಾಂಕೇತಿಕವಾಗಿ ಶಿವಾಲಯಗಳು ಅಥವಾ ದೇವಾಲಯಗಳ ಅಗತ್ಯವಿಲ್ಲ ಎಂದು ಹೇಳಿದ್ದರೆ, ಮೊಟ್ಟ ಮೊದಲನೆಯದಾಗಿ ಶಿವನನ್ನು ವಿರೋಧಿಸಬೇಕಿತ್ತು, ಏಕೆಂದರೆ ಆತ ಮೇಲ್ಜಾತಿಯ ದೇವರು ಎಂದು, ಆದರೆ ಬಹುತೇಕ ವಚನಕಾರರು ಶೈವ ಸಂಪ್ರದಾಯವನ್ನೇ ಅನುಸರಿಸಿದ್ದನು ನೋಡಿದರೆ, ಶಿವನನ್ನು ವಿರೋಧಿಸುವ ಕಾರ್ಯ ಅವರದ್ದಾಗಿರಲಿಲ್ಲ ಎಂದು ಮೇಲ್ನೋಟಕ್ಕೆ ಕಾಣಸಿಗುತ್ತದೆ. ಅಷ್ಟಕ್ಕೂ ಶಿವನನ್ನು ಮೇಲ್ಜಾತಿಯವರು ಮಾತ್ರ ಪೂಜಿಸುತ್ತಿದ್ದರು ಎಂಬುದನ್ನು ಮೊದಲು ಸಾದರ ಪಡಿಸಬೇಕಾಗುತ್ತದೆ, ಅದಕ್ಕೂ ಹೆಚ್ಚಿನದಾಗಿ, ಗುಡಿ ಸಂಸ್ಕೃತಿ ಕೇವಲ ಮೇಲ್ಜಾತಿಯವರದ್ದು, ಇತರ ಜಾತಿಗಳು ಗುಡಿಯನ್ನು ಹೊಂದಿರಲಿಲ್ಲ ಎಂಬುದನ್ನು ಸಾಬೀತು ಮಾಡಬೇಕಾಗುತ್ತದೆ. ಆದರೆ ಈ ಎರಡೂ ಕೆಲಸಗಳು ಸಾಧ್ಯವಿಲ್ಲ ಏಕೆಂದರೆ ವಾಸ್ತವ ಅವೆರಡಕ್ಕೂ ವಿರುದ್ಧವಾಗಿ ನಿಲ್ಲುತ್ತದೆ. ಹಾಗಾಗಿ ಮೇಲ್ನೋಟದ ಸಾಕ್ಷ್ಯಗಳೇ ಯಾವುದೇ ಸಮುದಾಯವನ್ನು ವಿರೋಧಿಸಲು ವಚನಕಾರರು ಪ್ರಯತ್ನಪಡಲಿಲ್ಲ, ಅಥವಾ ಅದುವೇ ಅವರ ಕಾಯಕವಾಗಿರಲಿಲ್ಲ ಎಂಬುದನ್ನು ತೋರಿಸಿಕೊಡುತ್ತವೆ. ಹಾಗಾದರೆ ಮೇಲಿನ ವಚನದಲ್ಲಿ ಮೇಲ್ನೋಟಕ್ಕೆ ದೇವಾಲಯವನ್ನು ನಿರಾಕರಿಸುವುದು ಕಂಡುಬರುವುದಿಲ್ಲವೆ? ಎಂಬ ಪ್ರಶ್ನೆ ಏಳುತ್ತದೆ. ಹೌದು ಅಲ್ಲಿ ನಿಚ್ಚಳವಾಗಿ ದೇವಾಲಯದ ನಿರಾಕರಣೆಯು ಎದ್ದು ಕಾಣುತ್ತದೆ, ಆದರೆ ಅದನ್ನು ಈಗಾಗಲೆ ಮೇಲೆ ಉಲ್ಲೇಖಿಸಿರುವ ಎರಡೂ ರೀತಿಯ ವಿವರಣೆಗಳು ತೃಪ್ತಿದಾಯಕವಾಗಿ ವಿವರಿಸುವುದಿಲ್ಲ. ಈ ಬರಹದಲ್ಲಿ ಮೇಲಿನ ವಚನವನ್ನು ಅರ್ಥೈಸಲು ಇರುವ ಸಾಧ್ಯತೆಯ ಇನ್ನೊಂದು  ನೆಲೆಯನ್ನು ಗುರುತಿಸುವ ಪ್ರಯತ್ನವನ್ನು ಮಾಡಲಾಗುತ್ತದೆ.

ವಚನ ಸಾಹಿತ್ಯದ ಬಹುಮುಖ್ಯ ಆಶಯ ಆತ್ಮಜ್ಞಾನವನ್ನು ಪಡೆಯುವುದು. ಅಂದರೆ ‘ನಾನು’ ಅಥವಾ ಆತ್ಮವನ್ನು ಅರಿತು ಆನಂದವನ್ನು ಹೊಂದುವುದೇ ಆಗಿದೆ. ಈ ನಿಟ್ಟಿನಲ್ಲಿ ಜನರು ಹಲವಾರು ಕಾರ್ಯಗಳಲ್ಲಿ ತೊಡಗುತ್ತಾರೆ, ಅಥವಾ ಹಲವಾರು ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಸಂಸಾರವನ್ನೇ ತೊರೆದು ಕಾಡು ಮೇಡುಗಳಲ್ಲಿ ಒಂಟಿಯಾಗಿ ಜೀವನ ಸವೆಸುವುದು, ಸಂಸಾರದಲ್ಲೇ ಇದ್ದು ತಮ್ಮ ಕಾರ್ಯಗಳಲ್ಲೆ ಮುಕ್ತಿಯನ್ನು ಪಡೆಯುವುದು, ಭಕ್ತ ಮಾರ್ಗ, ಜ್ಞಾನ ಮಾರ್ಗ, ಇತ್ಯಾದಿ ಇತ್ಯಾದಿ., ಅಂತಹ ಮಾರ್ಗಗಳಲ್ಲಿ ದೇವಾಲಯವೂ ಒಂದು. ದೇವರ ಪ್ರತಿಮೆಗಳನ್ನು ನಿರ್ಮಿಸಿಕೊಂಡು ಆ ಮಾರ್ಗದ ಮೂಲಕ ಆತ್ಮಜ್ಞಾನವನ್ನು ಪಡೆಯುವುದು. ಆಧ್ಯಾತ್ಮ ಮಾರ್ಗದಲ್ಲಿ ಮುಂದುವರೆದ ಸಾಧಕರು ದೇವರುಗಳ ಆರಾಧನೆಯು ಶಿವಸಾಯುಜ್ಯವನ್ನು ಪಡೆಯುವಲ್ಲಿ ಒಂದು ಮಾರ್ಗ ಎಂದು ಒಪ್ಪುತ್ತಾರೆ. ಆದರೆ ಇಂತಹ ಮಾರ್ಗದಲ್ಲಿ ಒಂದು ಅಡಚಣೆ ಇದೆ ಎಂಬುದು ವಚನಕಾರರ ಮೇಲಿನ ವಚನದಿಂದ ತಿಳಿಯಲ್ಪಡುತ್ತದೆ. ಅದೆಂದರೆ, ದೇವಾಲಯದಲ್ಲಿ ದೇವರ ಪೂಜೆ ಮಾಡಿಕೊಂಡು ಅದುವೇ ಅಂತಿಮ ಹಾಗೂ ಅದರಿಂದಲೇ ಮೋಕ್ಷಸಾಧ್ಯ ಎಂಬ ತಿಳುವಳಿಕೆಯನ್ನು ತಿದ್ದುವ ರೀತಿಯಲ್ಲಿ ಈ ವಚನವು ರೂಪುಗೊಂಡಿದೆ.

ದೇವಾಲಯವು ಮೋಕ್ಷ ಸಾಧನೆಗೆ ಅಗತ್ಯವಿರುವ ಒಂದು ಪ್ರಾರಂಭಬಿಂದುವಷ್ಟೆ, ಯಾವುದೇ ಒಂದು ಕಾರ್ಯವನ್ನು ಮಾಡಬೇಕಾದರೆ, ಅದನ್ನು ಎಲ್ಲಿಂದಾದರೂ ಪ್ರಾರಂಭಿಸಲೇ ಬೇಕು. ಅಂತಿಮವಾಗಿ, ದೇವಾಲಯ ಮತ್ತು ದೇವರುಗಳು ಮೋಕ್ಷಸಾಧನೆಗೆ ಕೇವಲ ಮಾರ್ಗಗಳಷ್ಟೆ. ಅವುಗಳೆ ಅತ್ಯಂತಿಕವಾಗಿರಲು ಸಾಧ್ಯವಿಲ್ಲ. ಆದರೆ ಸಾಮಾನ್ಯವಾಗಿ ಬಹುತೇಕರು ದಾರಿಮಧ್ಯದಲ್ಲಿ ನಿಂತು, ಅದುವೇ ಅಂತಿಮ ಎಂದು ಭಾವಿಸುತ್ತಾರೆ, ಅಂತಹ ಭಾವನೆಯಿಂದ ಹೊರತರಲು, ಅಥವಾ ತಾವೇ ಹೊರಬರಲು ಮೇಲಿನಂತಹ ವಚನಗಳು ರೂಪುಗೊಂಡಿವೆ ಎಂದು ಹೇಳಬಹುದು. ಆದರೆ, ನಿಜವಾದ ಜ್ಞಾನವನ್ನು ಪಡೆಯಬೇಕಾದರೆ ಅದನ್ನೂ ಸಹ ಮೀರಬೇಕಾಗುತ್ತದೆ. ಅವುಗಳನ್ನು ಮೀರುವುದು ಎಂದರೆ, ಯಾವುದಕ್ಕಾಗಿ ನೀನು ಹೊರಗೆಲ್ಲೋ ಹುಡುಕುತ್ತಿದ್ದೀಯೋ ಅವೆಲ್ಲವೂ ನಿನ್ನೊಳಗೇ ಇದೆ ಎಂಬುದೇ ಆಗಿದೆ. ನಮ್ಮ ತನುವನ್ನು ಬದಿಗಿರಿಸಿ ಅದರ ಮೂಲಕವೇ ಪಡೆಯಬಹುದಾದ ಆತ್ಮಜ್ಞಾನವನ್ನು ನಿರ್ಲಕ್ಷಿಸಿ ಇನ್ನೆಲ್ಲೋ ಹುಡುಕುವ ವಿಧಾನದಿಂದ ಏನೂ ಸಾಧನೆಯಾಗಲಾರದು ಎಂಬುದು ವಚನಕಾರರ ಆಶಯವಾಗಿದ್ದಿರಬಹುದು. ಇದನ್ನು ಇನ್ನೂ ಚೆನ್ನಾಗಿ ಅರ್ಥೈಸಿಕೊಳ್ಳಬೇಕಾದರೆ, ಎಲ್ಲೋ ಹುಡುಕಿದ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ…ಎಂಬ ಗೀತೆಯನ್ನು ಮತ್ತೆ ಮತ್ತೆ ಕೇಳುವುದು ಒಳಿತು ಎಂದೆನಿಸುತ್ತದೆ.. ನಮ್ಮೊಳಗೆ ಎಲ್ಲಾ ಇದೆ, ಆದರೆ ಅದನ್ನು ಒಂದು ಸರಿ ಇಣುಕಿ ನೋಡಿ ಎಂಬುದು ಇದರ ವಾಚ್ಯಾರ್ಥ ಮತ್ತು ಸೂಚ್ಯಾರ್ಥವಾಗಿದೆ. ಇದರೊಟ್ಟಿಗೆ ಅಲ್ಲಮರ ಒಂದು ವಚನವು ಹೆಚ್ಚು ಸಾಂದರ್ಭಿಕತೆಯನ್ನು ಹೊಂದಿದೆ, “ದೇಹದೊಳಗೆ ದೇವಾಲಯವಿದ್ದು, ಮತ್ತೆ ಬೇರೆ ದೇಗುಲವೇಕಯ್ಯಾ? ಎರಡಕ್ಕೆ ಹೇಳಲಿಲ್ಲಯ್ಯಾ, ಗುಹೇಶ್ವರಾ ನೀನು ಕಲ್ಲಾದಡೆ ನಾನು ಏನಪ್ಪನು?”

ಇಂತಹ ನಿರಾಕರಣೆಯು ಕೇವಲ ದೇವಾಲಯಗಳನ್ನು ಮಾತ್ರ ಒಳಗೊಂಡಿರುವುದಿಲ್ಲ, ದೇವರನ್ನೂ ಒಳಗೊಂಡಿರುವುದು ಕಂಡುಬರುತ್ತದೆ. ಹಾಗಂದ ಮಾತ್ರಕ್ಕೆ ಅವರು ವಾಸ್ತವ ಜಗತ್ತಿನ ಸಂಗತಿಗಳನ್ನು ನಿರಾಕರಿಸುತ್ತಿದ್ದಾರೆ ಎಂಬ ಅವಸರದ ತೀರ್ಮಾನಕ್ಕೆ ಬರುವ ಅಗತ್ಯವಿಲ್ಲ. ಬದಲಿಗೆ ಅವರು ನಿರಾಕರಿಸುತ್ತಿರುವುದು ಜಗತ್ತಿನ ಕುರಿತು ನಮ್ಮ ತಲೆ ಹೊಕ್ಕಿರುವ ರಚನೆಗಳನ್ನು ಮಾತ್ರ. ದೇವಾಲಯವೇ ಅತ್ಯಂತಿಕ ಎಂಬುದು ವಾಸ್ತವವೋ ಅಥವಾ ನಮ್ಮ ತಲೆಯಲ್ಲಿರುವ ಕಲ್ಪನೆಯೋ ಎಂದು ಆಲೋಚಿಸಿದರೆ, ಅವರು ಏನನ್ನು ನಿರಾಕರಿಸುತ್ತಿದ್ದಾರೆ ಎಂಬುದು ಹೆಚ್ಚು ಸ್ಪಷ್ಟವಾಗುತ್ತಾ ಹೋಗುತ್ತದೆ.

Read more from ವಚನ ಸಾರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments