ಗಾಂಧಿ ಮತ್ತು ದೇವನೂರ
– ರಾಜಕುಮಾರ.ವ್ಹಿ.ಕುಲಕರ್ಣಿ, ಬಾಗಲಕೋಟ
ಮೊನ್ನೆ ಗಾಂಧಿ ನೆನಪಾದರು. ನೆನಪಾದರು ಎನ್ನುವುದು ಅವರು ಮರೆತುಹೋಗಿರಬಹುದು ಎಂದೂ ಧ್ವನಿಸಬಹುದು. ನೆನಪು ಮತ್ತು ಮರೆತುಹೋಗುವಿಕೆ ಈ ಎರಡೂ ಸ್ಥಿತಿಗಳಲ್ಲಿ ಗಾಂಧಿ ಜೀವಂತವಾಗಿದ್ದು ನಮ್ಮನ್ನು ಕಾಡುತ್ತಲೇ ಇರುವರು. ಇದು ಗಾಂಧಿಯಂಥ ಗಾಂಧಿಯಿಂದ ಮಾತ್ರ ಸಾಧ್ಯವಾಗುವಂತಹದ್ದು. ಏಕೆಂದರೆ ಗಾಂಧಿ ಸೂಟು ಬೂಟು ಧರಿಸಿ, ಪಂಚೆ ಉಟ್ಟುಕೊಂಡು ಮತ್ತು ಲಂಗೋಟಿ ಸಿಕ್ಕಿಸಿಕೊಂಡು ಭಾರತೀಯ ಜೀವನಕ್ರಮದ ಎಲ್ಲ ವರ್ಗಗಳನ್ನು ತಮ್ಮೊಳಗೆ ಅಂತರ್ಗತಗೊಳಿಸಿಕೊಂಡವರು. ಒಬ್ಬನೇ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಭಾರತೀಯ ಜೀವನ ಕ್ರಮದ ಎಲ್ಲ ವರ್ಗಗಳನ್ನು ಪ್ರತಿನಿಧಿಸುವುದು ಅದು ಗಾಂಧೀಜಿಯಂಥ ವ್ಯಕ್ತಿಯಿಂದ ಮಾತ್ರ ಸಾಧ್ಯವಾಗುವ ಬಹುದೊಡ್ಡ ಸಾಮಾಜಿಕ ಪಲ್ಲಟ.
ಇನ್ನು ಗಾಂಧಿ ಏಕೆ ನೆನಪಾದರು ಎನ್ನುವ ವಿಷಯಕ್ಕೆ ಬರುತ್ತೇನೆ. ಆವತ್ತು ದಲಿತ ಸಂಘರ್ಷ ಸಮಿತಿಯವರ ಮೆರವಣಿಗೆ ರಸ್ತೆಯ ಮೇಲೆ ನಡೆದು ಹೋಗುತ್ತಿತ್ತು. ಬುದ್ಧ, ಬಸವ, ಅಂಬೇಡ್ಕರ್ ಎನ್ನುವ ಜಯಘೋಷ ಅಲ್ಲಿ ಮೊಳಗುತ್ತಿತ್ತು. ಜೊತೆಗೆ ಬುದ್ಧ-ಬಸವ-ಅಂಬೇಡ್ಕರರ ಆಳೆತ್ತರದ ಭಾವಚಿತ್ರಗಳು ರಾರಾಜಿಸುತ್ತಿದ್ದವು. ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಶತಮಾನಗಳಿಂದ ಮನೆಮಾಡಿಕೊಂಡಿದ್ದ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು ಮತ್ತು ಹಿಂದುಳಿದ ವರ್ಗದವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಲು ಈ ಮೂವರು ಮಾಡಿದ ಪ್ರಯತ್ನ ಮತ್ತು ಹೋರಾಟ ಅದು ಚರಿತ್ರೆಯ ಪುಟಗಳಲ್ಲಿ ಸದಾಕಾಲ ಅಳಿಸಲಾಗದ ಐತಿಹಾಸಿಕ ಪ್ರಯತ್ನವಾಗಿ ದಾಖಲಾಗಿ ಉಳಿದಿದೆ. ಆದರೆ ಆ ಸಂದರ್ಭ ಅಲ್ಲಿನ ಭಾವಚಿತ್ರಗಳಲ್ಲಿ ಮತ್ತು ಅವರು ಮೊಳಗಿಸುತ್ತಿದ್ದ ಜಯಘೋಷಗಳಲ್ಲಿ ಗಾಂಧಿ ಅನುಪಸ್ಥಿತಿ ನನಗೆ ಬಹುಮುಖ್ಯ ಕೊರತೆಯಾಗಿ ಕಾಣಿಸಿತು.
ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರಂತೆ ಗಾಂಧಿ ಸಹ ಅಸ್ಪೃಶ್ಯತಾ ನಿರ್ಮೂಲನೆಗಾಗಿ ತಮ್ಮ ಬದುಕಿನ ಬಹುಭಾಗವನ್ನು ಮೀಸಲಾಗಿರಿಸಿದವರು. ಭಾರತದ ಸ್ವಾತಂತ್ರ್ಯ ಚಳುವಳಿಯ ಜೊತೆ ಜೊತೆಗೆ ಹರಿಜನೋದ್ಧಾರವನ್ನು ಒಂದು ವ್ರತದಂತೆ ಪಾಲಿಸಿಕೊಂಡು ಬಂದವರು ಈ ಗಾಂಧಿ. ಹಿಂದುಳಿದ ವರ್ಗದ ಒಂದು ಸಮುದಾಯವನ್ನು ‘ಹರಿಜನರು’ ಎಂದರೆ ದೇವರ ಮಕ್ಕಳೆಂದು ಕರೆದದ್ದು ಇದೇ ಗಾಂಧಿ. ಹರಿಜನರು ವಾಸಿಸುತ್ತಿದ್ದ ಬೀದಿಗಳಲ್ಲಿನ ಮಲ ಬಳಿದು ಅವರಿಗೆ ಸ್ವಚ್ಛತೆಯ ಪಾಠ ಹೇಳಿದ ಗಾಂಧಿ ಅಸ್ಪೃಶ್ಯರನ್ನು ಸಮಾಜದ ಮುಖ್ಯವಾಹಿನಿಗೆ ತರಲು ನಿರಂತರವಾಗಿ ಪ್ರಯತ್ನಿಸಿದರು. ಹರಿಜನೋದ್ಧಾರ ಗಾಂಧೀಜಿ ಅವರ ಕನಸಾಗಿತ್ತು. ಹೀಗಿದ್ದೂ ಇಂದಿನ ಯುವ ದಲಿತರು ಗಾಂಧಿಯ ಮೇಲೆ ಮುನಿಸಿಕೊಂಡವರಂತೆ ಕಾಣಿಸುವರು. ಇವತ್ತು ಅವರಿಗೆ ಗಾಂಧಿ ಬೇಡವಾದ ವ್ಯಕ್ತಿ. ಬುದ್ಧ-ಬಸವ-ಅಂಬೇಡ್ಕರ್ರ ಸಾಲಿನಲ್ಲಿ ಗಾಂಧಿಯನ್ನು ನಿಲ್ಲಿಸಿಯೂ ನೋಡಲಾರದಷ್ಟು ಅಸಡ್ಡೆ ಮತ್ತು ಅಸಹನೆ ಅವರಿಗೆ ಗಾಂಧಿಯ ಮೇಲೆ. ಇಲ್ಲಿ ಗಾಂಧಿ ಮಾಡಿದ ತಪ್ಪಾದರೂ ಏನು? ಆತ ಊರೊಳಗಿದ್ದುಕೊಂಡೆ ಊರ ಹೊರಗಿನವರನ್ನು ತಬ್ಬಿಕೊಳ್ಳಲು ಪ್ರಯತ್ನಿಸಿದ. ಸಮಾಜದಲ್ಲಿ ಸ್ಥಾಪಿತವಾಗಿದ್ದ ಅಸಮಾನತೆಯ ಬೇರುಗಳನ್ನು ಕತ್ತರಿಸಲು ಹಾತೊರೆದ. ಹೀಗೆ ಗಾಂಧಿ ಮಾಡಿದ್ದು ತಪ್ಪು ಎನ್ನುವುದಾದರೆ ಆತ ಬೇರೆ ಯಾವ ರೀತಿ ಪ್ರಯತ್ನಿಸಬಹುದಿತ್ತು. ಇಂದಿನ ಯುವ ದಲಿತರಲ್ಲಿ ಇದಕ್ಕೆ ಉತ್ತರವಿದೆಯೇ? ಉತ್ತರಿಸುವಾಗ ಗಾಂಧಿ ಎದುರು ಗುಲಾಮಿ ಭಾರತದ ಕಟುವಾಸ್ತವ ಬೆತ್ತಲಾಗಿ ನಿಂತಿತ್ತು ಎನ್ನುವುದು ಗೊತ್ತಿರಲಿ.
ಈಗ ನಾನು ಹೇಳಬೇಕೆಂದಿರುವ ಮುಖ್ಯ ವಿಷಯಕ್ಕೆ ಬರುತ್ತೇನೆ. ಇಂದಿನ ಯುವ ದಲಿತರು ಗಾಂಧಿಯನ್ನು ಒಪ್ಪಿಕೊಳ್ಳುತ್ತಿಲ್ಲ ಎಂದ ಮಾತ್ರಕ್ಕೆ ಇಡೀ ದಲಿತ ಸಮುದಾಯಕ್ಕೆ ಬಾಪು ಬೇಡವಾದವರು ಎನ್ನುವ ಅತಾರ್ಕಿಕ ನಿಲುವಿಗೆ ಬಂದು ನಿಲ್ಲುವುದು ಸರಿಯಲ್ಲ. ಏಕೆಂದರೆ ದಲಿತರಲ್ಲೇ ಗಾಂಧಿಯನ್ನು ಒಪ್ಪಿಕೊಳ್ಳುವ ಒಂದು ಗುಂಪಿದೆ. ಅಂಥವರಲ್ಲಿ ನಾಡುಕಂಡ ಶ್ರೇಷ್ಠ ಬರಹಗಾರ ದೇವನೂರ ಮಹಾದೇವ ಪ್ರಮುಖರು. ದಲಿತ ಸಮುದಾಯದಲ್ಲಿ ಜನಿಸಿ ದಲಿತ ಸಂಘರ್ಷ ಸಮಿತಿಯೊಡನೆ ನಿಕಟ ಸಂಪರ್ಕವನ್ನಿಟ್ಟುಕೊಂಡಿರುವ ದೇವನೂರ ಮಹಾದೇವ ಗಾಂಧೀಜಿಯನ್ನು ಗಾಢವಾಗಿ ಪ್ರೀತಿಸುತ್ತಾರೆ. ಗಾಂಧೀಜಿ ಕುರಿತು ಬರೆಯಲು ಮತ್ತು ಮಾತನಾಡಲು ಪ್ರಾರಂಭಿಸಿದರೆ ಅವರೊಬ್ಬ ಗಾಂಧಿಯ ಕಡು ವ್ಯಾಮೋಹಿಯಂತೆ ಕಾಣಿಸುತ್ತಾರೆ. ಗಾಂಧಿಯಷ್ಟು ಬುದ್ಧ ಇನ್ನೂ ಮಹಾದೇವರ ಒಳಜಗತ್ತಿನ ಭಾಗವಾಗಿಲ್ಲವೆನಿಸುತ್ತದೆ ಎಂದ ಲೇಖಕ ಸತ್ಯನಾರಾಯಣರ ಮಾತನ್ನು ನಾವು ಇಲ್ಲಿ ಗಮನಿಸಬೇಕು. ‘ಗಾಂಧಿ ಕಾಠಿಣ್ಯದ ತಂದೆಯಂತೆ, ಜೆಪಿ ಅಸಹಾಯಕ ತಾಯಿ, ವಿನೋಬಾ ಮದುವೆಯಾಗದ ವ್ರತನಿಷ್ಟ ಅಕ್ಕನಂತೆ, ಲೋಹಿಯಾ ಊರೂರು ಅಲೆಯುವ ಮನೆ ಸೇರದ ಅಲೆಮಾರಿ ಮಗ, ಅಂಬೇಡ್ಕರ್ ತಾರತಮ್ಯಕ್ಕೆ ಒಳಗಾಗಿ ಮುನಿಸಿಕೊಂಡು ಮನೆಹೊರಗೆ ಇರುವ ಮಗ. ಇದು ನಮ್ಮ ಕುಟುಂಬ ನಾವು ಇಲ್ಲಿನ ಸಂತಾನ’ ಎಂದು ಹೇಳುತ್ತಲೇ ದೇವನೂರ ಮಹಾದೇವ ಗಾಂಧಿಯನ್ನು ತಂದೆಯ ಸ್ಥಾನದಲ್ಲಿಟ್ಟು ನೋಡುತ್ತಾರೆ.
ಗಾಂಧಿಯನ್ನು ಕೆಲವರು ಪ್ರೀತಿಸುತ್ತಿರುವ ಹೊತ್ತಿನಲ್ಲೇ ಇನ್ನೊಂದಿಷ್ಟು ಜನ ದ್ವೇಷಿಸಲು ತೊಡಗುವುದು ಮತ್ತು ಗಾಂಧಿ ವಿಚಾರಧಾರೆಯನ್ನೇ ಬಹಿಷ್ಕರಿಸಲು ಹೊರಡುವುದು ವಿಷಾದನೀಯ. ಗಾಂಧಿ ಮತ್ತು ಅಂಬೇಡ್ಕರ್ ನಡುವೆ ಭಿನ್ನಾಭಿಪ್ರಾಯವಿತ್ತೆಂದು ಹೇಳಲು ಹೊರಡುವ ಇತಿಹಾಸಕಾರರು ಗಾಂಧಿ ಮತ್ತು ಯುವ ದಲಿತರ ನಡುವೆ ಒಂದು ಕಂದಕವನ್ನೇ ಸೃಷ್ಟಿಸುತ್ತಾರೆ. ಆ ಮೂಲಕ ಗಾಂಧಿಯನ್ನು ದ್ವೇಷಿಸಲು ವೇದಿಕೆಯೊಂದನ್ನು ಸಿದ್ಧಪಡಿಸುವರು. ಇತಿಹಾಸವನ್ನೇ ನಂಬಿ ಮೋಸ ಹೋಗುವ ದಲಿತರ ಯುವ ಪೀಳಿಗೆ ಗಾಂಧೀಜಿಯ ಹರಿಜನೋದ್ಧಾರದ ಪ್ರಯತ್ನವನ್ನೇ ಮರೆತು ಬಿಡುವರು. ಆಗ ದೇವನೂರ ಮಹಾದೇವರಂಥ ಗಾಂಧೀಜಿಯನ್ನು ಪ್ರೀತಿಸುವವರು ಇತಿಹಾಸದ ಉತ್ಖನನಕ್ಕೆ ಮುಂದಾಗುತ್ತಾರೆ. ಇತಿಹಾಸವನ್ನು ಕೆದಕಿ ನೋಡಿದಾಗ ಮಹಾದೇವರಿಗೆ ಹೀಗೆ ಕಾಣಿಸುತ್ತದೆ ‘ಹಿಂದು ಧರ್ಮ ಎಂಬ ಮನೆಯೊಳಗೆ ಭಿನ್ನ ಭಾವ ಜಾತಿ ತಾರತಮ್ಯದ ಕಂಬಗಳನ್ನು ಒಳಗೊಳಗೇ ಕೊಯ್ಯುವವನಂತೆ ಗಾಂಧಿ ಕಾಣಿಸುತ್ತಾರೆ. ಅದೇ ಅಂಬೇಡ್ಕರ್ ಹೊರಗಿನಿಂದ ಆ ಅಸಮಾನತೆಯ ಮನೆಗೆ ಕಲ್ಲೆಸೆಯುವವನಂತೆ ಕಾಣಿಸುತ್ತಾರೆ. ಈ ಪ್ರಕ್ರಿಯೆಯಿಂದಾಗಿ ಅಂಬೇಡ್ಕರ್ ಎಸೆದ ಕಲ್ಲು ಒಳಗಿದ್ದ ಗಾಂಧಿಗೂ ಬಿದ್ದು ರಕ್ತ ಚೆಲ್ಲಿರಬಹುದು. ಇದನ್ನು ಕಂಡು ಹೊರಲೋಕವು ಗಾಂಧಿಗೂ ಅಂಬೇಡ್ಕರ್ಗೂ ಮಾರಾಮಾರಿ ಹೊಡೆದಾಟ ಎನ್ನಬಹುದು. ಆದರೆ ಇಬ್ಬರೂ ಮಾಡುತ್ತಿದ್ದುದ್ದು ಹೆಚ್ಚೂ ಕಮ್ಮಿ ಒಂದೇ ಕೆಲಸವನ್ನಲ್ಲವೇ?’
ದೇವನೂರ ಮಹಾದೇವ ಹೇಳುವಂತೆ ದಲಿತರ ಮೊದಲ ವಿದ್ಯಾವಂತ ತಲೆಮಾರು ತಮ್ಮ ಮನೆಗಳಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ಈ ಇಬ್ಬರ ಪೋಟೋಗಳನ್ನೂ ಇಟ್ಟುಕೊಂಡಿರುತ್ತಿತ್ತು. ಆದರೆ ಇದಕ್ಕೆ ವಿರುದ್ಧವಾಗಿ ದಲಿತರ ನವಪೀಳಿಗೆ ಅಂಬೇಡ್ಕರ್ ಫೋಟೋ ಮಾತ್ರ ಇಟ್ಟುಕೊಳ್ಳಲು ಪ್ರಾರಂಭಿಸಿದೆ. ಹಿಂದಿನ ತಲೆಮಾರಿನ ದಲಿತರಿಗೆ ಬೇಕಾದ ಗಾಂಧಿ ದಲಿತರ ಯುವ ಪೀಳಿಗೆಗೆ ಬೇಡವಾದ. ಅಸಮಾನತೆಯನ್ನು ಹೋಗಲಾಡಿಸಲು ಪ್ರಯತ್ನಿಸಿದ ಗಾಂಧಿ ಯಾಕೆ ನಂತರದ ದಿನಗಳಲ್ಲಿ ಯುವಪೀಳೆಗೆಯಿಂದ ಅಪಾರ್ಥಕ್ಕೊಳಗಾದರು? ಹಾಗಾದರೆ ದಲಿತ ಯುವಪೀಳಿಗೆ ಗಾಂಧಿಯಿಂದ ಏನನ್ನು ಬಯಸಿತ್ತು? ಅದನ್ನು ಮಹಾದೇವ ಈ ರೀತಿ ಊಹಿಸುತ್ತಾರೆ ‘ಗಾಂಧಿ ಅಸ್ಪೃಶ್ಯರನ್ನು ಮಕ್ಕಳು ಎಂಬಂತೆ ಭಾವಿಸಿ ವರ್ತಿಸುತ್ತಿದ್ದರು. ಅದರ ಬದಲಾಗಿ ಗಾಂಧಿ ಅಸ್ಪೃಶ್ಯರನ್ನು ಪಿತೃಗಳೆಂಬಂತೆ ಭಾವಿಸಿ ವರ್ತಿಸಿದ್ದರೆ ಆ ಅಪಾರ್ಥದಿಂದ ತಪ್ಪಿಸಿಕೊಳ್ಳಬಹುದಿತ್ತು. ಆ ಒಂದು ನೋಟವು ನಡಾವಳಿಯನ್ನೇ ಬದಲಿಸಿ ಬಿಡುತ್ತದೆ. ಉದಾಹರಣೆಗೆ ಅಸ್ಪೃಶ್ಯರಿಗೂ ಸವರ್ಣೀಯರಿಗೂ ಸ್ಪರ್ಧೆ ಬಂದಾಗ ಮಕ್ಕಳಂತೆ ಭಾವಿಸಿದ ಮನಸ್ಥಿತಿ ಇದ್ದರೆ ಎಲಾ ನಾನು ಸಾಕಿದವನ ಕೊಬ್ಬೆ ಎಂದು ಕ್ರೋಧ, ಅಸಹನೆ ಉಂಟಾಗುತ್ತದೆ. ಅದೇ ತಂದೆ ತಾಯಿಯಂತೆ ಭಾವಿಸಿದ್ದ ಮನಸ್ಥಿತಿ ಇದ್ದರೆ ನನ್ನನ್ನು ಸಾಕಿದವನು ನಾನೇ ಸೋತರೆ ಏನಾಯ್ತು? ಎಂಬ ಭಾವ ಉಂಟಾಗುತ್ತದೆ’. ಹೀಗೆ ಭಾವಿಸದಿರುವುದೇ ಗಾಂಧೀಜಿಯ ತಪ್ಪು ಎನ್ನುವುದಾದರೆ ಕಸ್ತೂರ ಬಾ ಅಸ್ಪೃಶ್ಯ ಮೂಲದವನ ಮಲ ಎತ್ತಲು ನಿರಾಕರಿಸಿದಾಗ ಉದ್ವಿಗ್ನಗೊಂಡ ಗಾಂಧಿ ಮನೆಯಿಂದಲೇ ತನ್ನ ಪತ್ನಿಯನ್ನು ಹೊರದೂಡುವ ವರ್ತನೆಗೆ ಏನನ್ನಬೇಕು? ಅಸ್ಪೃಶ್ಯತೆಯ ನಿರ್ಮೂಲನೆಗಾಗಿ ಅಸ್ಪೃಶ್ಯನಲ್ಲದವನ ಹೋರಾಟವೆಂದು ಅನುಮಾನದ ಕಣ್ಣುಗಳಿಂದ ನೋಡುವುದಾದರೆ ಗಾಂಧಿಯ ಹೋರಾಟಕ್ಕೆ ಅರ್ಥವೇ ಇಲ್ಲದಂತಾಗುತ್ತದೆ.
ಶಿಕ್ಷಣ, ಉದ್ಯೋಗ, ಕೈಗಾರಿಕೆ, ಕೃಷಿ ಈ ಎಲ್ಲವುಗಳನ್ನು ಕುರಿತು ಚಿಂತಿಸುವಾಗ ಗಾಂಧೀಜಿಯವರಲ್ಲಿ ದೇಸಿತನವಿರುತ್ತಿತ್ತು. ಆ ದೇಸಿತನದಲ್ಲೂ ಅವರು ಭಾರತೀಯ ಜೀವನ ಕ್ರಮದ ಮೂರನೇ ದರ್ಜೆಯನ್ನು ಪ್ರತಿನಿಧಿಸಲು ಇಚ್ಛಿಸುತ್ತಿದ್ದರು. ಅವರ ಚಿಂತನೆಯ ಮೂರನೇ ದರ್ಜೆಯ ಸಮುದಾಯ ಅಸ್ಪೃಶ್ಯರಿಂದ ಹೊರತಾಗಿರಲಿಲ್ಲ. ಇಂಥದ್ದೊಂದು ಸಮುದಾಯವನ್ನು ಕೈಹಿಡಿದೆತ್ತಬೇಕೆನ್ನುವ ಪ್ರಬಲ ಇಚ್ಛೆ ಗಾಂಧೀಜಿ ಅವರಲ್ಲಿ ಇದ್ದುದ್ದರಿಂದಲೇ ಅವರು ಆ ವರ್ಗದ ಬದುಕನ್ನು ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡಿಕೊಂಡರು. ಇಲ್ಲಿ ಮಹಾದೇವರ ಮಾತು ನಾವು ಗಮನಿಸಬೇಕು ಅವರು ಹೇಳುತ್ತಾರೆ ‘ಬೆತ್ತಲಾಗಿರುವವರ ಸಂಕಟಗಳನ್ನು ಅರ್ಥಮಾಡಿಕೊಳ್ಳಲೆಂದೇ ಗಾಂಧಿ ಲಂಗೋಟಿ ತೊಟ್ಟು ಬೆತ್ತಲಾಗಿ ಬದುಕಿದರು’. ಗಾಂಧಿ ಸುಖದ ನೆರಳಿನಡಿ ನಿಂತು ಅಸ್ಪೃಶ್ಯರ ಕುರಿತು ಚಿಂತಿಸಲಿಲ್ಲ. ಆ ಸಮುದಾಯದ ಬದುಕಿನೊಂದಿಗೆ ಬೆರೆತು ಅದನ್ನು ಅನುಭವಿಸಿ ಜಾತಿ ತಾರತಮ್ಯದ ನಿರ್ಮೂಲನೆಗೆ ಮುಂದಾದರು. ಇಲ್ಲಿ ಗಾಂಧೀಜಿಯ ತಪ್ಪು ಎಂದರೆ ಅದು ಅವರು ಅಸ್ಪೃಶ್ಯನಾಗಿ ಹುಟ್ಟದಿರುವುದು ಮಾತ್ರ.
ಈ ನಡುವೆ ಗಾಂಧಿ ತನ್ನನ್ನು ತಾನು ಸಂಪೂರ್ಣವಾಗಿ ಅಸಮಾನತೆಯ ವಿರುದ್ಧದ ಹೋರಾಟಕ್ಕೆ ಸಮರ್ಪಿಸಿಕೊಳ್ಳದಿರುವುದು ಕೂಡ ದಲಿತ ಯುವ ಪೀಳಿಗೆಯ ಅನುಮಾನ ಮತ್ತು ಅಪಾರ್ಥಗಳಿಗೆ ದಾರಿಮಾಡಿ ಕೊಟ್ಟಿರಲೂಬಹುದು. ಏಕೆಂದರೆ ಹೋರಾಟದ ವಿಷಯವಾಗಿ ಗಾಂಧೀಜಿಯ ಮೊದಲ ಆದ್ಯತೆ ಸ್ವತಂತ್ರ ಭಾರತದ ಸ್ಥಾಪನೆಯಾಗಿತ್ತು. ಬ್ರಿಟೀಷರಿಂದ ಭಾರತವನ್ನು ಬಂಧಮುಕ್ತಗೊಳಿಸುವುದೇ ಗಾಂಧೀಜಿಯ ಉದ್ದೇಶವಾಗಿತ್ತು. ಹೀಗಿದ್ದೂ ಗಾಂಧಿ ಹರಿಜನೋದ್ಧಾರದಲ್ಲಿಯೂ ತೊಡಗಿಸಿಕೊಂಡರು. ಈ ವಿಷಯವಾಗಿ ಅಂಬೇಡ್ಕರ್ ಅವರಲ್ಲಿದ್ದಷ್ಟೇ ಬದ್ಧತೆ ಗಾಂಧಿಯಲ್ಲಿ ಕೂಡ ಇತ್ತು. ಆದರೆ ಅಂಬೇಡ್ಕರ್ ಯಾವ ಸಮುದಾಯ ಅಸಮಾನತೆಗೆ ಇಡಾಗಿತ್ತೋ ಆ ಸಮುದಾಯದಿಂದಲೇ ಬಂದದ್ದು ಅವರ ಹೋರಾಟವನ್ನು ಮೆಚ್ಚುಗೆಯ ದೃಷ್ಟಿಯಿಂದ ನೋಡಲು ಕಾರಣವಾಯಿತು. ಆದರೆ ಗಾಂಧಿಯ ಅದೇ ಹೋರಾಟವನ್ನು ಅವರು ಊರೊಳಗಿನವರೆಂಬ ಕಾರಣಕ್ಕೆ ಅನುಮಾನದಿಂದ ನೋಡುವಂತಾಯಿತು. ಇದು ಗಾಂಧಿಯ ಹೋರಾಟದ ಬದುಕಿನ ದೌರ್ಭಾಗ್ಯ.
ಗಾಂಧೀಜಿಯವರ ಅಸ್ಪೃಶ್ಯತಾ ನಿರ್ಮೂಲನಾ ಹೋರಾಟ ಹೇಗಿತ್ತು ಎನ್ನುವುದಕ್ಕೊಂದು ನಿದರ್ಶನ ಹೀಗಿದೆ. ಗಾಂಧೀಜಿಯವರ ಆಪ್ತರೊಬ್ಬರು ಅಸ್ಪೃಶ್ಯ ಕುಟುಂಬವೊಂದನ್ನು ಸಾಬರಮತಿ ಆಶ್ರಮಕ್ಕೆ ತಂದು ಬಿಟ್ಟರು. ಆಶ್ರಮದ ನಿಯಮಾವಳಿಗಳನ್ನು ಒಪ್ಪಿಕೊಂಡು ಇರುವುದಾದರೆ ಅಭ್ಯಂತರವಿಲ್ಲವೆಂದು ಗಾಂಧಿ ಆ ಕುಟುಂಬ ವರ್ಗದವರಿಗೆ ಆಶ್ರಮದಲ್ಲಿರಲು ಒಪ್ಪಿಗೆ ನೀಡಿದರು. ಪರಿಣಾಮವಾಗಿ ಸಾಬರಮತಿ ಆಶ್ರಮ ಅನೇಕ ತೊಂದರೆಗಳನ್ನು ಎದುರಿಸಬೇಕಾಯಿತು. ಕೆಲವರು ಈ ಘಟನೆಯಿಂದಾಗಿ ಆಶ್ರಮಕ್ಕೆ ನೆರವು ನೀಡುವುದನ್ನು ನಿಲ್ಲಿಸಿದರು. ಆಶ್ರಮದ ಅಂಗಳದಲ್ಲೇ ಇದ್ದ ಭಾವಿಯ ನೀರನ್ನು ತೆಗೆದುಕೊಳ್ಳಲು ಆ ಜಾಗದ ಯಜಮಾನ ಆಕ್ಷೇಪಿಸತೊಡಗಿದ. ಮೈಲಿಗೆಯ ಕಾರಣ ನೀಡಿ ಅನೇಕರು ಕಿರುಕುಳ ನೀಡತೊಡಗಿದರು. ಗಾಂಧೀಜಿ ಇದನ್ನೆಲ್ಲ ಅತ್ಯಂತ ನಿರ್ಲಿಪ್ತತೆಯಿಂದಲೇ ಸಹಿಸಿಕೊಂಡರು. ಯಾರೂ ಆ ಜಾಗದ ಮಾಲೀಕನ ಮಾತುಗಳಿಗೆ ಪ್ರತಿಕ್ರಿಯೆ ನೀಡದಿರಲು ಮನವಿ ಮಾಡಿದರು. ಆಗ ಮಾಲೀಕನೆ ನಾಚಿಕೊಂಡು ತೊಂದರೆ ಕೊಡುವುದನ್ನು ನಿಲ್ಲಿಸಿದ. ಗಾಂಧೀಜಿಯ ಹೋರಾಟ ಅದು ಧುಮ್ಮಿಕ್ಕುವ ಜಲಪಾತವಲ್ಲ. ಅದು ಶಾಂತವಾಗಿ ಹರಿಯುವ ನದಿಯಂತೆ. ಗಾಂಧೀಜಿಯವರ ಹೋರಾಟದ ಈ ಮನೋಭಾವವೂ ಇಂದಿನ ದಲಿತ ಯುವಕರು ಅವರನ್ನು ತಪ್ಪಾಗಿ ಅರ್ಥೈಸಿಕೊಳ್ಳಲು ಒಂದು ಕಾರಣವಾಗಿರಬಹುದು.
ಬುದ್ಧನ ಅನುಯಾಯಿಗಳಾಗಲು ಹಾತೊರೆಯುವವರಿಗೆ, ಬಸವಣ್ಣನನ್ನು ಆನುದೇವ ಒಳಗಣವನು ಎಂದು ಅಪ್ಪಿಕೊಳ್ಳುವವರಿಗೆ, ಅಂಬೇಡ್ಕರ್ ತಮ್ಮವರೆಂದು ಪ್ರೀತಿಸುವವರಿಗೆ ಇಲ್ಲಿ ಗಾಂಧಿ ಮಾತ್ರ ಅಸ್ಪೃಶ್ಯನಂತೆ ಕಾಣುತ್ತಾರೆ. ಗಾಂಧಿ ಕುರಿತು ಸಿನಿಮಾವೊಂದು ಬಿಡುಗಡೆಯಾದಾಗ ಆ ಸಿನಿಮಾ ನೋಡದಂತೆ ಬಹಿಷ್ಕರಿಸಲಾಗುತ್ತದೆ. ಈ ನಡುವೆ ದೇವನೂರ ಮಹಾದೇವರಂಥ ದಲಿತ ಸಾಹಿತಿ ‘ಸಾಯಲು ಮಾನಸಿಕವಾಗಿ ದೃಢವಾಗಿ ಸಿದ್ಧನಾದವನು ಮಾತ್ರ ಗಾಂಧಿಯಾಗಬಲ್ಲ. ಅಂಹಿಸಾವಾದಿಯಾದ ಗಾಂಧಿಯ ದೇಹದ ಒಂದು ರೋಮದಲ್ಲೂ ಹೇಡಿತನದ ಸುಳಿವು ಇರಲಿಲ್ಲ. ಇಂಥ ಗಾಂಧಿಯನ್ನು ಅಪಾರ್ಥಕ್ಕೊಳಗಾಗಿಸಿದ್ದು ಅದು ನಮ್ಮ ಹೇಡಿತನ’ ಎಂದು ಮಾತನಾಡುವುದು ಮರುಭೂಮಿಯಲ್ಲಿ ಓಯಸಿಸ್ನಂತೆ ಗೋಚರಿಸುತ್ತದೆ.
ಈಗ ಮೊದಲು ಅಪಾರ್ಥಕ್ಕೊಳಗಾದ ಗಾಂಧಿಯನ್ನು ಇಂದಿನ ದಲಿತ ಯುವಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು. ಆ ಕೆಲಸವನ್ನು ದಲಿತ ಸಾಹಿತಿಗಳೇ ಮಾಡಿದರೂ ಇನ್ನಷ್ಟು ಒಳ್ಳೆಯದು. ದಲಿತೋದ್ಧಾರದ ಬಗ್ಗೆ ದಲಿತರ ಹಿತಾಸಕ್ತಿ ಕುರಿತು ಗಾಂಧಿ ಬರೆದ ಸಾಹಿತ್ಯವನ್ನು ಒಟ್ಟುಗೂಡಿಸಿ ಸಂಪಾದಿಸುವ ಕೆಲಸಕ್ಕೆ ಚಾಲನೆ ದೊರೆಯಬೇಕು. ಅಲ್ಲಲ್ಲಿ ಚದುರಿ ಹೋಗಿರುವ ದಲಿತರ ಒಡಲಿಗೆ ಒಗ್ಗುವ ಗಾಂಧಿ ವಿಚಾರಗಳು ನಮ್ಮ ಬೊಗಸೆಗೆ ಸಿಗಬೇಕು. ಒಟ್ಟಿನಲ್ಲಿ ಗಾಂಧಿ ಮರುಹುಟ್ಟು ಪಡೆಯಬೇಕು. ಈ ಹುಟ್ಟಿನಲ್ಲಿ ಗಾಂಧಿ ಸ್ವಾತಂತ್ರ್ಯ ಚಳುವಳಿಗಿಂತ ಹರಿಜನೋದ್ಧಾರಕ್ಕೆ ತೀರ ಹತ್ತಿರನಾಗಿರಬೇಕು. ಒಂದರ್ಥದಲ್ಲಿ ಆತ ಅಸ್ಪೃಶ್ಯನಾಗಿ ಹುಟ್ಟಿದರೂ ಸರಿಯೇ. ಅಂದಾಗ ಮಾತ್ರ ಗಾಂಧಿ ಅಪಾರ್ಥ ಮತ್ತು ಅನುಮಾನಗಳ ಪರಿಧಿಯಿಂದ ಹೊರಬಂದು ನಮ್ಮ ಇಂದಿನ ದಲಿತ ಯುವಪೀಳಿಗೆಗೆ ಆಪ್ತನಾಗಲು ಸಾಧ್ಯ. ಅಂಥದ್ದೊಂದು ಸಾಧ್ಯವಾಗಿಸುವ ಪ್ರಕ್ರಿಯೆಗೆ ದೇವನೂರ ಮಹಾದೇವ ನಾಂದಿ ಹಾಡಿದ್ದಾರೆ ಎನ್ನುವ ನಂಬಿಕೆ ನನ್ನದು.
ಸತ್ತು ಬದುಕಿದೆ ಕಣಾ
ಪ್ರಿಯ ಗಾಂಧಿ,
ಬುದ್ಧಬಸವಂಬೇಡ್ಕರ್ ಎಂದು ಒಟ್ಟಿಗೆ ನೆನೆವ
ಆಧುನಿಕ ತ್ರಿಮೂರ್ತಿಗಳಲಿ ನೀನೊಬ್ಬನಲ್ಲ.
ದಶಾವತಾರಿಗಳೊಳು ನಿನಗೆ ತಾವಿದೆಯೆ ?
ಪ್ರಚ್ಛನ್ನ ಕಲ್ಕಿಯೆಂದಿಹನು ಪುಟ್ಟಪ್ಪ ನಿನ್ನ !
ನೀನು ಮುಸ್ಲಿಮನಲ್ಲ, ನೀನು ಕ್ರೀಸ್ತುವನಲ್ಲ
ದಲಿತ ಬೌದ್ಧನು ಅಲ್ಲ, ಹಾರುವನುಮಲ್ಲ.
ತಮ್ಮ ಗುಂಪಲ್ಲದವ ತಮ್ಮ ಹಿತ ಕಾಯುವನೆ ?
ಯಾರು ನಿನ್ನನು ಪೂರ್ತಿ ನಂಬಲೇ ಇಲ್ಲ !
ಗೀತೆಯೋದುವ ಗೊಡ್ಡು, ಹಾರುವರ ಹಿಂಬಡುಕ
ಹಿಂದುವಲ್ಲದ ಜನರ ಹಿತವ ಕಾಯುವನೆ ?
ಹೇರಾಮ ಜಪದವನು ಜೈಭೀಮನೆನ್ನುವನೆ ?
ಜೆಹ್ಹಾದನೊಪ್ಪುತ್ತ ಕಾಫಿರರ ಕೊಲ್ಲುವನೆ ?
ಪಾಕಿಗಳ ಹಿತಬಯಸೊ ಮೂಢ ಕಾಯಸ್ಥನಿವ-
ನೆನ್ನುತ್ತ ಕೊಂದವನೆ ನಿನ್ನ ಹಿಂದು !
ಗೊತ್ತೆ ನೂತನ ಗಾದೆ ? ‘ಎಲ್ಲರ ಸ್ನೇಹಿತನು
ಯಾರ ಸ್ನೇಹಿತನೂ ಅಲ್ಲ’ ವೆಂದು !
ನಿನ್ನ ವಂಶದ ಜನರೆ ನಿನ್ನ ನಾಮದ ಬಲವ
ಬಳಕೆ ಮಾಡದೆ ಇಹರು, ಶರಣು ಎಂಬೆ.
ಚೋದ್ಯವಿದೊ ಕಾಶ್ಮೀರಿ ಪಂಡಿತನ ವಂಶಜರು
ವೋಟಿನಾಸೆಗೆ ನಿನ್ನ ಹೆಸರ ಹೊತ್ತಿಹರೋ !
ರಾಜಕಾರಣಿಗಳಿಗೆ ನೀನು ಒಳ್ಳೆಯ ದಾಳ
ದೇಶ ಮಾರುವ ಜನಕೆ ಇದು ಒಳ್ಳೆ ಕಾಲ !
ನಿನ್ನೆಲ್ಲ ಸಿದ್ಧಾಂತಗಳಿಂದು ಸರ್ವೋದಯದ
ಮುದುಕರೊಡನೆಯೆ ತಾವೂ ನಶಿಸಬಹುದೋ ?
ಅದಕೆಂದೆ ನವಜನ್ಮ ಪಡೆಯೆಂಬ ಕೂಗಿಹುದು,
ಮನಸುಕ್ಕಿ ನೀ ಮತ್ತೆ ಹುಟ್ಟೀಯೆ ಜೋಕೆ !
ತ್ಯಾಗ, ಪ್ರೇಮಗಳೆಲ್ಲ ಇಂದು ಬಳಕೆಯಲಿಲ್ಲ
ಅಹಿಂಸೆಯ ವ್ರತಕಿಲ್ಲಿ ಬೆಲೆಯೆ ಇಲ್ಲ.
ಇಂದು ಜೀವಂತಿಕೆಯ ಲಕ್ಷಣವು ತಾ
ಕರುಣೆ ತೋರುವುದಲ್ಲ ಲವಲವಿಕೆಯಲ್ಲ
ನೀನು ಬದುಕಿರುವಿಯೆಂದರೆ ಸುದ್ದಿ
ಮಾಡುತ್ತಿರಬೇಕು ; ಸ್ಫೋಟಿಸುತ್ತಿರಬೇಕು !
ಕಾಫಿರರನೆಲ್ಲ ಕೊಲ್ಲುತಿರಬೇಕು
ಹಾರುವರನೆಲ್ಲ ನೀ ಹಳಿಯುತಿರ ಬೇಕು
ಹೊರಗಟ್ಟು ಹೊರಗಟ್ಟು ಹೊಲಸು ಹಾರ್ವರನೆಲ್ಲ
ದೇಶ ತಾನುದ್ಧಾರವಾದೀತೋ ನೋಡು
ಇಷ್ಟು ಗೈದರೆ ಇಂದು ನಿನ್ನ ಕೊಂಡಾಡುವರು
ಇಲ್ಲದಿರೆ ಮತ್ತೆ ನಿನ್ ಹತ್ಯೆ ಗೈದಾರು !
ಇಲ್ಲ, ಬಹುಶಃ ಇಲ್ಲ, ಇದನೆಲ್ಲ ಕಂಡುಂಡು
ಆತ್ಮಹತ್ಯೆಗೆ ನೀನೆ ಶರಣು ಪೋಪೆ !
ಅದಕೆಂದೆ ನಾನೆಂಬೆ ಬದುಕಿ ಹಲುಬುದಕಿಂತ
ಹಲುಬಿ ಸಾವುದಕಿಂತ ಸತ್ತು ಬದುಕಿದೆ ಕಣಾ
ನೀ ಸತ್ತು ಬದುಕಿದೆ !!
*****
2006 – ಎಸ್ ಎನ್ ಸಿಂಹ, ಮೇಲುಕೋಟೆ.
ವಾಹ್, ಮನಮುಟ್ಟುವಂತೆ, ತಟ್ಟುವಂತೆ ಬರದಿ್್ದೀರಿ.
Thank you sir
ಗೊತ್ತೆ ನೂತನ ಗಾದೆ ? ‘ಎಲ್ಲರ ಸ್ನೇಹಿತನು
ಯಾರ ಸ್ನೇಹಿತನೂ ಅಲ್ಲ’ ವೆಂದು !
“”ಯಾರ ಸ್ನೇಹಿತನೂ ತಾನಲ್ಲವೆಂದು”” ಎಂದಾದರೆ, ಹೇಗೆ?
ಧನ್ಯವಾದ ರಾಯರೇ. ಇಡೀ ಭಾವವೇ ವ್ಯತ್ಯಾಸವಾಗುತ್ತೆ. ಮೊದಲನೆಯದು ಅನ್ಯರ ಅಭಿಪ್ರಾಯವನ್ನು ಸೂಚಿಸಿದರೆ, ತಿದ್ದುಪಡಿಯು ಅವನದೇ ಆಶಂಕೆಯನ್ನು ಬಿಂಬಿಸುತ್ತದೆ. ಅಲ್ಲವೇ?
LEKHANA TUMBA UTTAMA MATTU SAKALIKAVAGIDE.
Thank u BG
melukote simha avara kavana uttamavagide.
ಧನ್ಯವಾದ
ದಲಿತ ಯುವಕರಿಗೆ ಗಾಂಧಿ ಬಗ್ಗೆ ಇನ್ನೂ ಒಂದು ಸಿಟ್ಟಿದೆ. ಅದೆಂದರೆ ಅಂಬೇಡ್ಕರ ಅವರು ದಲಿತರಿಗೆ ಬೇರೆ ರಾಷ್ಟ್ರವನ್ನು ಕೇಳಿದರು. ಅದೂ ಬೇಡವೆಂದರೂ ಕೂಡ ಪ್ರತ್ಯೇಕ ಮತದಾನವನ್ನು ಬೇಡಿದರು . ಇವೆರಡನ್ನು ಗಾಂಧಿ ಉಪವಾಸ ಕುಳಿತು ಅಂಬೇಡ್ಕರರನ್ನು ಪುನಾ ಒಪ್ಪಂದದ ಬಲೆಯಲ್ಲಿ ಸಿಕ್ಕಿಸಿ ಹಾಳುಮಾಡಿದರು. ನಮಗೆ ಸಿಗಲೇಬೇಕಿದ್ದ ಸೌಲಭ್ಯ ತಪ್ಪಿಸಿದರು. ಇತ್ಯಾದಿ. ಹಾಗೆ ಅಂಬೇಡ್ಕರರನ್ನು ಒಪ್ಪಿಸಲು ಗಾಂಧಿ ಕೊಡುವ ಕಾರಣಗಳನ್ನು ನಾವು ಅರ್ಥ ಮಾಡಿಕೊಳ್ಳುವ ಗೋಜಿಗೆ ಹೋಗುವದಿಲ್ಲ. ಇವನ್ನೆಲ್ಲ ತಿಳಿಸಿ ಹೇಳಬೇಕಾದ ಇತಿಹಾಸಕಾರರಾಗಲಿ, ಸಾಹಿತಿಗಳಾಗಲಿ ತಮ್ಮ ಸ್ವಾರ್ಥ ಸಾಧನೆಗೆ ಗಾಂಧಿಯನ್ನು ತೆಗಳುತ್ತಾ ಆರ್ಯ ದ್ರಾವಿಡ, ಇತ್ಯಾದಿ ಸಿದ್ಧಾಂತಗಳನ್ನು ಯುವ ತಲೆಗೆ ತುಂಬಿ ದೇಶವನ್ನು ತುಂಡು ಮಾಡುವತ್ತಲೇ ಲಕ್ಷವಿರಿಸಿದ್ದಾರೆ. ಹೀಗಿದ್ದಾಗ ಗಾಂಧಿ ಯಾರಿಗೆ ಬೇಕು????????
ಸಹೋದರಿ ವಲವಿಯವರೇ,ಪೂನ ಒಪ್ಪಂದದಲ್ಲಿ ಗಾಂಧೀಜಿಯ ನಡೆ ಸರಿಯಿತ್ತಲ್ಲವೇ
ಇತಿಹಾಸವಾಗಿರುವ ಘಟನೆ ಮತ್ತು ವ್ಯಕ್ತಿಗಳ ಬಗ್ಗೆ ಎಷ್ಟು ಬಗೆದರೂ ನಮಗೆ ದೊರಕುವುದು ತುಣುಕು ಮಾಹಿತಿಗಳಷ್ಟೇ. ಆ ತುಣುಕುಗಳ ಆಧಾರದ ಮೇಲೆ ತೀರ್ಪುಕೊಡುವ ಧಾಟಿಯಲ್ಲಿ ವಾದಗಳನ್ನು ಹೆಣೆಯುತ್ತಾ ಹೋಗುವುದು ಗಾಯಗಳನ್ನು ನೆಕ್ಕುವ ಬದಲು ಬೆದಕುವ ಮೂರ್ಖತನದ ಕೆಲಸ.
ಪುಣೆಯ ಐತಿಹಾಸಿಕ ಒಪ್ಪಂದದ ಬಗ್ಗೆ ಅಂಬೇಡ್ಕರ್ ಅವರೇ ಹೇಳಿರುವುದನ್ನು ಕೇಳಿದರೆ ಇತಿಹಾಸದ ಗೋಜಲುಭರಿತ ಆಗಾಧತೆಯ – ಸನ್ನಿವೇಶಗಳ ಕಹಿಯ ಒಂದು ಪರಿಚಯ ದಕ್ಕಿದಂತಾಗುತ್ತೆ: http://www.youtube.com/watch?v=LbjRpB9cPoU
ಬಹಳ ಚೆನ್ನಾಗಿ ಬರೆದಿದ್ದೀರಿ ರಾಜಕುಮಾರರೇ
dhanyavadagalu