ವಿಷಯದ ವಿವರಗಳಿಗೆ ದಾಟಿರಿ

ಜೂನ್ 9, 2015

4

ಯೋಗದಿನಕ್ಕಾಗಿ ಮೋದಿ ಸರಕಾರದ ವಿಶೇಷ ಶವಾಸನ

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

Yoga Dayನಮ್ಮ ದೇಶ ಜಾತ್ಯತೀತ ದೇಶ. ಆದರೆ ಹೆಜ್ಜೆಹೆಜ್ಜೆಗೂ ನಿಮಗಿಲ್ಲಿ ನಿಮ್ಮ ಜಾತಿಯ ನೆನಪು ಅಳಿಯದಂತೆ ನೋಡಿಕೊಳ್ಳಲಾಗುತ್ತದೆ. ಶಾಲೆಗೆ ಸೇರುವ ಮೊದಲ ದಿನ ಅಡ್ಮಿಷನ್ ಮಾಡಿಕೊಳ್ಳುವ ಮುಖ್ಯೋಪಾಧ್ಯಾಯರು ಹೆಸರು, ಅಪ್ಪನ ಹೆಸರು, ಜಾತಿ ಎಂದು ಬರೆದ ಅಪ್ಲಿಕೇಶನ್ನನ್ನು ಕಣ್ಣಮುಂದೆ ಹಿಡಿಯುತ್ತಾರೆ. ಪರೀಕ್ಷೆ ಬರೆಯಲು ಅರ್ಜಿ ತುಂಬುವಾಗ ಯಾವ ಜಾತಿ ಎಂದು ಕೆದಕಿ ವಿಚಾರಿಸಿಕೊಂಡು ನೀವು ಕಟ್ಟಬೇಕಾದ ಫೀಸು ನಿರ್ಧರಿಸುತ್ತಾರೆ. ಕೆಲಸಕ್ಕೆ ಹೋಗುವಾಗ ನಿಮ್ಮ ಪದವಿ ಸರ್ಟಿಫಿಕೇಟು ಯಾರಿಗೆ ಬೇಕು ಸ್ವಾಮಿ! ನಾಯಿಯೂ ಮೂಸುವುದಿಲ್ಲ ಅದನ್ನು! ನೀವು ಯಾವ ಜಾತಿ ಹೇಳಿ, ಅದರ ಆಧಾರದ ಮೇಲೆ ನಿಮಗೆ ಕೆಲಸ ಸಿಗುತ್ತದೋ ಇಲ್ಲವೋ ಎನ್ನುವುದು ನಿರ್ಧಾರಿತವಾಗುತ್ತದೆ. ಈ ದೇಶದಲ್ಲಿ ಶಿಕ್ಷಣ, ಉದ್ಯೋಗ, ಮದುವೆ, ಮುಂಜಿ, ಸಾವು, ತಿಥಿಗಳೆಲ್ಲ ನಿರ್ಧಾರವಾಗುವುದು ನಿಮ್ಮ ಜಾತಿಯ ಮೇಲೆ. ಯಾಕೆಂದರೆ ನಾವು ಬದುಕುತ್ತಿರುವುದು ಜಾತ್ಯತೀತ ದೇಶದಲ್ಲಿ ನೋಡಿ!

ಜೂನ್ 21ರಂದು ವಿಶ್ವ ಯೋಗದಿನ ಆಚರಿಸಬೇಕು ಎಂದು ನಮ್ಮ ದೇಶದ ಪ್ರಧಾನಿ ಕರೆಕೊಟ್ಟರು. ಅವರು ಅಲ್ಲಿ ಅದನ್ನು ಹೇಳಿ ಮುಗಿಸಿದ್ದರೋ ಇಲ್ಲವೋ ಇತ್ತ ಜಾತ್ಯತೀತ ಕೋಮುಸೌಹಾರ್ದ ಬಳಗದ ಬುಜೀಗಳಿಗೆ ಕಡಿತ ಶುರುವಾಯಿತು. ಈ ಮೋದಿ ಮಹಾ ಜಾತೀವಾದಿ. ಹಿಂದೂಗಳ ಯೋಗವನ್ನು ಸನಾತನಿಗಳಂತೆಯೇ ಜಾತಿಧರ್ಮಗಳಿಗೆ ಅತೀತರಾದ ಪ್ರಗತಿಪರ ಅಲ್ಪಸಂಖ್ಯಾಕ ಪಂಗಡಗಳಿಗೂ ವಿಸ್ತರಿಸುವ ಯೋಜನೆ ಹಾಕಿದ್ದಾರೆ ಎಂದು ಅವರಿಗೆ ಗುಮಾನಿ ಬಂತು. ಅಷ್ಟಲ್ಲದೆ ಜೂನ್ ಇಪ್ಪತ್ತೊಂದು – ಮುಸ್ಲಿಮರ ಹಬ್ಬ ಬೇರೆ. ಹೋಗಿಹೋಗಿ ಆ ದಿನ ಯೋಗ ಮಾಡುವುದೇ? ಸಾಧ್ಯವೇ ಇಲ್ಲ ಎಂದು ಈ ಅಲ್ಪಸಂಖ್ಯಾತ ಮತದ ನಾಯಕ ಓವೈಸಿ ಕೂಗಿದ. ಅವನ ಹಿಂದೆ ಅವನ ಇಡೀ ಗಾಂಪರ ಗುಂಪೇ ಎದ್ದುನಿಲ್ಲುವ ಸೂಚನೆ ಸಿಕ್ಕಿತು. ಕೇಂದ್ರ ಸರಕಾರ ಈಗ ನಿಜವಾಗಿಯೂ ಇಲ್ಲದ ಇಕ್ಕಳದಲ್ಲಿ ತಲೆ ಸಿಕ್ಕಿಸಿಕೊಂಡಿದ್ದೇನೆಂದು ಸುಳ್ಳೇ ಭಾವಿಸಿ ನಡುಗಿತು. ಯೋಗದಿನ ಮಾಡೋಣ, ಆದರೆ ಸೂರ್ಯನಮಸ್ಕಾರ ಕೈಬಿಡೋಣ ಎಂದು ಠರಾವು ಮಂಡಿಸಿತು. ಮೋದಿ ಹೇಳಿಕೊಟ್ಟಂತೆ ಅವರ ಸರಕಾರದ ಎಲ್ಲ ಮಂತ್ರಿಗಳೂ “ಸೂರ್ಯನಮಸ್ಕಾರ ಕಠಿಣ ಆಸನ. ಹಾಗಾಗಿ, ಅದನ್ನು ಬಿಟ್ಟು ಮಿಕ್ಕಿದ್ದನ್ನು ಮಾಡಲು ಚಿಂತನೆ ನಡೆಸಿದ್ದೇವೆ” ಎಂದು ತಿಪ್ಪೆ ಸಾರಿಸಿದರು.

ಮೊದಲನೆಯದಾಗಿ ಮೋದಿಗೆ ಜೂನ್ 21ನ್ನು ಯೋಗದಿನವಾಗಿ ಆಚರಿಸಬೇಕೆಂದು ಯಾರಾದರೂ ಪ್ರಾರ್ಥನೆ ಮಾಡಿಕೊಂಡಿದ್ದರಾ ಎಂದು ಕೇಳಬೇಕಾಗಿದೆ. ಹಿಂದೂಗಳು ಯಾರೂ ಯೋಗಕ್ಕಾಗಿ ಒಂದು ದಿನ ಮೀಸಲಿಡಿ ಎಂದು ಸರಕಾರವನ್ನು ಅಲವತ್ತುಕೊಂಡಿರಲಿಲ್ಲ. ಹಾಗೇನಾದರೂ ಇದ್ದರೆ ಪಾಪ, ಅಂಥವರು ವೈಯಕ್ತಿಕ ಲಾಭಗಳಿಗಾಗಿ ಮಾಡಿಕೊಂಡಿದ್ದಾರೇನೋ ಎಂದು ನಕ್ಕುಬಿಡುವುದು ಒಳ್ಳೆಯದು. ಯೋಗದಿನ ಆಚರಿಸಿ ಎಂದು ವಿಶ್ವಸಂಸ್ಥೆಯಲ್ಲಿ ನೂರಿಪ್ಪತ್ತು ದೇಶಗಳ ನಾಯಕರನ್ನು ಒಪ್ಪಿಸಿದ ನಮ್ಮ ಪ್ರಧಾನಿಗಳಿಗೆ ನಮ್ಮ ದೇಶದ ಜಾತ್ಯತೀತರನ್ನು ಒಪ್ಪಿಸುವುದಕ್ಕೆ ಆಗಲಿಲ್ಲ ಎಂದರೆ ಅದಕ್ಕಿಂತ ಹಾಸ್ಯಾಸ್ಪದ ಸಂಗತಿ ಬೇರೆ ಇದೆಯೆ? ಮೋದಿಗೆ, ಯೋಗದಿನದ ಘೋಷಣೆ ಮಾಡುವ ದಿನ ಇದು ಜಾತಿಧರ್ಮಗಳನ್ನು ಮೀರಿದ ಒಂದು ವಿಶ್ವಮಾನವ ಚಿಂತನೆ ಎನ್ನುವುದು ಗೊತ್ತಿರಲಿಲ್ಲವೆ? ಅಥವಾ ಆಗ ಗೊತ್ತಿದ್ದ ಸತ್ಯ ಈಗ ಓವೈಸಿಗಳು ಕಿರುಚಾಡತೊಡಗಿದಾಗ ಇದ್ದಕ್ಕಿದ್ದಂತೆ ಮರೆತುಹೋಯಿತೇ?

ಇನ್ನು ಓವೈಸಿಯಾದರೂ ತಾನು ಸೂರ್ಯ ನಮಸ್ಕಾರ ಮಾಡುವುದಿಲ್ಲ ಎನ್ನುವುದಕ್ಕೆ ಕೊಟ್ಟ ಕಾರಣ ಏನು? ಅದು ತನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎನ್ನುವುದು! ಅಂದರೆ ಈ ಮನುಷ್ಯ ಸೂರ್ಯನ ಬೆಳಕೇ ಇಲ್ಲದೆ ಬೆಳೆದ (ಮತ್ತು ಅದೇ ಕಾರಣಕ್ಕೆ ಬುದ್ಧಿಮಾಂದ್ಯನಾಗಿರಬಹುದಾದ) ಅಪಕ್ವ ವ್ಯಕ್ತಿ ಎಂದು ಹೇಳಬೇಕಾಗುತ್ತದೆ! ನಾವು ಚಿಕ್ಕವರಿದ್ದಾಗ ಒಂದು ಜನಪದ ಕತೆ ಓದುತ್ತಿದ್ದೆವು. ಅದರಲ್ಲಿ ಸೂರ್ಯ ಹೆಚ್ಚೋ ಚಂದ್ರ ಹೆಚ್ಚೋ ಎಂಬ ವಾದ ಬರುತ್ತದೆ. ಕೊನೆಗೆ ಗಾಂಪರು, ಸೂರ್ಯ ನಮಗೆ ಹಗಲು ಹೊತ್ತು ಬೆಳಕು ಕೊಡುತ್ತಾನೆ. ಹಗಲಿನಲ್ಲಿ ಅವನು ಉರಿಯುವ ಅಗತ್ಯವೇ ಇಲ್ಲ; ಬೆಳಕು ನಿಜವಾಗಿಯೂ ಬೇಕಾದ್ದು ರಾತ್ರಿಯಲ್ಲಿ. ಹಾಗಾಗಿ ರಾತ್ರಿ ಬೆಳಗುವ ಚಂದ್ರನೇ ಹೆಚ್ಚು ಎಂದು ತೀರ್ಮಾನಕ್ಕೆ ಬರುತ್ತಾರೆ. ಓವೈಸಿ ಮಾಡುತ್ತಿರುವ ಮೊಂಡುವಾದ ಈ ಬಗೆಯದ್ದು ಮತ್ತು ಇಷ್ಟೇ ಬಾಲಿಶವಾದದ್ದು ಎನ್ನಬೇಕಾಗುತ್ತದೆ. ಸೂರ್ಯನಮಸ್ಕಾರವನ್ನು ಧರ್ಮದ ಆಧಾರದಲ್ಲಿ ವಿರೋಧಿಸುವುದಾಗಿದ್ದರೆ, ಸೂರ್ಯ ನಮಸ್ಕಾರದ ಮಂತ್ರದಲ್ಲಿ ಧಾರ್ಮಿಕ ಭಾವನೆಗಳು ತುಂಬಿತುಳುಕಬೇಕಾಗಿತ್ತು. ಆದರೆ, ಅದರಲ್ಲಿ ಹೇಳುವುದು ಏನು? ಮಿತ್ರಾಯ ನಮಃ, ರವಯೇ ನಮಃ, ಸೂರ್ಯಾಯ ನಮಃ, ಭಾನವೇ ನಮಃ, ಖಗಾಯ ನಮಃ, ಪೂಷ್ಣೇ ನಮಃ, ಹಿರಣ್ಯಗರ್ಭಾಯ ನಮಃ, ಮರೀಚಯೇ ನಮಃ, ಸವಿತ್ರೇ ನಮಃ, ಅರ್ಕಾಯ ನಮಃ, ಆದಿತ್ಯಾಯ ನಮಃ, ಭಾಸ್ಕರಾಯ ನಮಃ – ಎಂದಷ್ಟೇ. ಓವೈಸಿ ಮತ್ತು ಅವನ ಬಾಲಬಡುಕ ಹಿಂಬಾಲಗಳು ಸ್ವಲ್ಪವಾದರೂ ಕಾಮನ್‍ಸೆನ್ಸ್ ಉಪಯೋಗಿಸಿದ್ದರೆ ಈ ಇಷ್ಟೂ ಹೆಸರುಗಳು ಸೂರ್ಯನ ಹೆಸರಿನ ಸಿನಾನಿಮ್‍ಗಳು (ಅರ್ಥಾತ್ ಸಮಾನಾರ್ಥಕ ಪದಗಳು) ಎನ್ನುವುದು ಗೊತ್ತಾಗುತ್ತಿತ್ತು. ಇಡೀ ಮಂತ್ರದಲ್ಲಿ ಯಾವುದೇ ದೇವರ ಸ್ತುತಿ ಇಲ್ಲ. ಯಾವ ಧರ್ಮದ ಆಚರಣೆಯ ಬಗ್ಗೆ ಉಲ್ಲೇಖ ಇಲ್ಲ. ಹಿಂದೂ ಧರ್ಮದ ಬಗ್ಗೆಯಂತೂ ಎಲ್ಲೂ ಮಾತೇ ಇಲ್ಲ! ಹಾಗಿದ್ದರೂ ನಮ್ಮ ಸಿಕ್ಯುಲರ್‍ವಾದಿ ಭ್ರಾಂತಿಜೀವಿಗಳಿಗೆ ಇದರಲ್ಲಿ ಹಿಂದುತ್ವದ ವಾಸನೆ ಹೊಡೆಯುತ್ತಿದೆ ಎಂದಾದರೆ ಅವರು ಮೊದಲು ತಮ್ಮ ಮೂಗಿನ ಹೊಳ್ಳೆಗಳನ್ನೇ ಸ್ವಚ್ಛ ಮಾಡಿಕೊಳ್ಳಬೇಕು ಎಂದು ತಾನೇ ಅರ್ಥ?

ಊರಿನ ಜನ ದೇವಸ್ಥಾನ ಕಟ್ಟಬೇಕು ಅಂತ ಹೋದರಂತೆ. ಆದರೆ, ಅವರು ಕಟ್ಟಿಸುವ ದೇವಸ್ಥಾನದ ಬಗ್ಗೆ ಆ ಊರಿಗೆ ಸಂಬಂಧವೇ ಇಲ್ಲದ ಒಂದಷ್ಟು ತಲೆನೋವು ಗಿರಾಕಿಗಳು ತಕರಾರು ಎತ್ತಿದರಂತೆ. ಕೊನೆಗೆ ಈ ಜನ, ದೇವಸ್ಥಾನ ಕಟ್ಟೋಣ; ಆದರೆ ಗರ್ಭಗುಡಿ ಖಾಲಿ ಬಿಡೋಣ. ಆಗ ಅನಗತ್ಯ ಜಗಳ ತಪ್ಪಿಸಬಹುದು – ಎಂದು ಮಹಾನ್ ಬುದ್ಧಿವಂತ ನಿರ್ಧಾರಕ್ಕೆ ಬಂದರಂತೆ. ನಮ್ಮ ಸರಕಾರ ಈಗ ಕೈಗೊಂಡಿರುವ ನಿರ್ಣಯಕ್ಕೂ ಈ ಉದಾಹರಣೆಗೂ ಹೆಚ್ಚು ವ್ಯತ್ಯಾಸವೇನೂ ಇಲ್ಲ! ಯೋಗದಿನ ಮಾಡೋಣ, ಆದರೆ ಸೂರ್ಯ ನಮಸ್ಕಾರ ಬಿಡೋಣ ಎಂದರೆ ಏನರ್ಥ? ಅಷ್ಟು ಕಷ್ಟದಲ್ಲಿ ನಿಮಗೆ ಯೋಗದಿನ ಮಾಡುವ ದರ್ದಾದರೂ ಯಾಕೆ ಸ್ವಾಮಿ! ನೀವು ಅಧಿಕಾರಕ್ಕೆ ಬಂದಿರಿ ಎಂದಮಾತ್ರಕ್ಕೆ ಯೋಗಶಾಸ್ತ್ರಕ್ಕೆ ಜೀವ ಬಂದದ್ದಲ್ಲ; ನೀವು ಅಧಿಕಾರದಲ್ಲಿ ಇಲ್ಲವಾದರೆ ಯೋಗ ಸತ್ತುಹೋಗುವುದೂ ಇಲ್ಲ! ಅದು ಅದರ ಪಾಡಿಗೆ ಈ ದೇಶದ ಕೋಟ್ಯಂತರ ಬಾಳುಗಳನ್ನು ಅರಳಿಸುವ ಕೆಲಸದಲ್ಲಿ ಸದ್ದಿಲ್ಲದೆ ತೊಡಗಿಸಿಕೊಂಡಿರುತ್ತದೆ. ಕಳೆದ ಎರಡು ಸಾವಿರ ವರ್ಷಗಳಿಂದ ಯೋಗ ಈ ನಾಡಿನಲ್ಲಿ ಬದುಕಿಬಂದಿದೆ. ಸರಕಾರವನ್ನು ನಂಬಿಕೊಳ್ಳುವ ಪರಾವಲಂಬಿಯಾಗಿದ್ದರೆ ಅದನ್ನು ಇಷ್ಟರೊಳಗೆ ಬಂದುಹೋಗಿರುವ ಸರಕಾರಗಳು ನುಂಗಿ ನೀರುಕುಡಿಯುತ್ತಿದ್ದವು! ಸರಕಾರಕ್ಕೆ, ಯಾವುದೇ ಘೋಷಣೆ – ಅದೂ ಜಾಗತಿಕ ಮಟ್ಟದಲ್ಲಿ ಮಾಡುವಾಗ ಬದ್ಧತೆ ಇರಬೇಕು. ಆ ವಿಷಯದ ಸಂಪೂರ್ಣ ಮಾಹಿತಿ ಇರಬೇಕು. ಅದು ಹುಟ್ಟಿಸುವ ಎಲ್ಲ ತರಂಗಗಳ ಬಗ್ಗೆಯೂ ಮುಂದಾಲೋಚನೆ ಇರಬೇಕು. ಯಾವನೋ ಒಬ್ಬ ಹೇಳಿದನೆಂದ ಮಾತ್ರಕ್ಕೆ ತನ್ನ ಘೋಷಣೆಯಿಂದ ಹಿಂದೆಸರಿಯುವ ದುಡುಕು ಇರಬಾರದು. ಸೂರ್ಯನಮಸ್ಕಾರ ಮಾಡುವವರು ಮಾಡಲಿ; ಇಷ್ಟವಿಲ್ಲದವರು ಬಿಡಲಿ – ಎಂದು ಹೇಳುವುದು ನಿಜವಾದ ಜಾತ್ಯತೀತತೆ. ಅದುಬಿಟ್ಟು ಯೋಗದ ಬಹುಮುಖ್ಯ ಅಂಗವನ್ನೇ – ಅದು ಕಠಿಣ ಎಂಬ ಪುಟಗೋಸಿ ಕಾರಣ ಕೊಟ್ಟು ಕೈಬಿಡುವುದು ಅತ್ಯಂತ ಹಾಸ್ಯಾಸ್ಪದ.

ನಮ್ಮ ದೇಶ, ಆಗಲೇ ಹೇಳಿದಂತೆ – ಜಾತ್ಯತೀತ ದೇಶ. ಹಾಗಾಗಿ ಇಲ್ಲಿ ಬಹುಸಂಖ್ಯಾತ ಜನರ ಭಾವನೆಗಳಿಗೆ ಕವಡೆ ಕಿಮ್ಮತ್ತೂ ಇಲ್ಲ. ದೇಶದ ಅಧಿಕಾರದ ಚುಕ್ಕಾಣಿ ಹಿಡಿದು ನಾಲ್ಕು ತಿಂಗಳು ದೆಹಲಿಯ ನೀರು ಕುಡಿದೊಡನೆ ಇಲ್ಲಿನ ನಾಯಕರ ತಲೆ ಕೆಡುತ್ತದೆ; ಕಾಲು ನೆಲ ಬಿಟ್ಟು ಮೇಲೇರುತ್ತದೆ. ದೇಶದಲ್ಲಿ ಅವರಿಗೆ ಅಲ್ಪಸಂಖ್ಯಾತರು ಮಾತ್ರ ಕಾಣುವುದಕ್ಕೆ ಶುರುವಾಗುತ್ತಾರೆ. ಬಹುಸಂಖ್ಯಾತರು ಏನಿದ್ದರೂ ಐದು ವರ್ಷಕ್ಕೊಮ್ಮೆ ನೆನಪಾಗುವ ಆಪತ್ಕಾಲದ ಸ್ಟೆಪ್ನಿಗಳು. ಚುನಾವಣೆಯ ಸಮಯದಲ್ಲಿ ರಾಮಮಂದಿರದ ಘೋಷಣೆ ಮಾಡಿದವರು, ಚುನಾವಣೆ ಮುಗಿದು ಗದ್ದುಗೆ ಹಿಡಿದ ಮೇಲೆ, ಅದು ನಮ್ಮ ಪ್ರಣಾಳಿಕೆಯಲ್ಲೇ ಇರಲಿಲ್ಲ ಎಂದು ಕಾಗೆ, ಪಾರಿವಾಳ, ಗೂಬೆಗಳನ್ನೆಲ್ಲ ಸಮಯ ಸಂದರ್ಭಕ್ಕೆ ತಕ್ಕಂತೆ ಹಾರಿಸಬಲ್ಲರು. ದೇಶದ 90% ಜನರ ಕನಸಾದ ರಾಮಮಂದಿರವನ್ನು ಕಟ್ಟುವುದಿಲ್ಲ ಎಂದು ಪ್ರಧಾನಿಗಳು ಹೇಳಿದರೆ – ಅದು “ಜಾತ್ಯತೀತ ಹೇಳಿಕೆ”. ಆದರೆ, ಮಂದಿರ ಆಗಲೇಬೇಕು ಎಂದು ಶುದ್ಧಮನಸ್ಸಿನ ಒಂದೇ ನಾಲಗೆಯ ಪ್ರಾಮಾಣಿಕ ಹೇಳಿದರೆ ನಮ್ಮ ಮಾಧ್ಯಮಗಳ ಭಾಷೆಯಲ್ಲಿ ಅದು “ವಿವಾದಾತ್ಮಕ ಹೇಳಿಕೆ”! ಅಂದರೆ, ಈ ದೇಶದಲ್ಲಿ ಯಾವುದು ವಿವಾದ, ಯಾವುದು ಅಲ್ಲ ಎನ್ನುವುದು ನಾವು ಯಾವ ಜಾತಿ-ಧರ್ಮದ ಪರವಾಗಿ ಮಾತಾಡುತ್ತೇವೆ ಎನ್ನುವುದರ ಮೇಲೆ ನಿಂತಿದೆ ಎಂದಾಯಿತು. ಧರ್ಮಾತೀತವಾದ ಯೋಗಶಾಸ್ತ್ರವನ್ನು ಹಿಗ್ಗಾಮುಗ್ಗಾ ಬಯ್ದು ಹೀಯಾಳಿಸುವುದು ಜಾತ್ಯತೀತ ಹೇಳಿಕೆ. ಆದರೆ, ಒಂದು ಜಾತಿಯವರು ದಿನಕ್ಕೆ ಐದು ಸಲ ಸಾರ್ವಜನಿಕವಾಗಿ ಗದ್ದಲ ಮಾಡುವುದನ್ನು ಅನಿವಾರ್ಯವಾಗಿ ಕೇಳಿಸಿಕೊಳ್ಳಲು ಉಳಿದವರು ಯಾವ ಪಾಪ ಮಾಡಿದ್ದಾರೆ – ಎಂದರೆ, ಅದೊಂದು ವಿವಾದ!

ಎಲ್ಲರನ್ನು ಮೆಚ್ಚಿಸುವುದು ದಡ್ಡತನ ಎಂಬ ಮಾತಿದೆ. ನಮ್ಮ ದೇಶದ ಘನಪ್ರಧಾನಿಗಳಿಗೆ ಈ ಮಾತು ಅರ್ಥವಾದರೆ ಒಳ್ಳೆಯದು. ಇಲ್ಲವಾದರೆ, ಎಲ್ಲರನ್ನೂ ಮೆಚ್ಚಿಸಹೋಗಿ ಯಾರಿಗೂ ದಕ್ಕದೆ ಎಲ್ಲೋ ಕಳೆದುಹೋಗುತ್ತಾರೆ ಅಷ್ಟೆ. ಅವರ ಈ ಓವೈಸಿ ಓಲೈಕೆಗಳು ಇನ್ನೂ ನಾಲ್ಕು ವರ್ಷ ಮುಂದುವರಿದರೆ, ನಾವು ಅವರನ್ನು ಕೈಬಿಟ್ಟು ಹೆಚ್ಚು ವಿಶ್ವಾಸಾರ್ಹ ನಾಯಕರನ್ನು ಹುಡುಕಿಕೊಳ್ಳಬೇಕಾದ ಅನಿವಾರ್ಯತೆ ಬರುತ್ತದೆ. ಹಿಂದೂ ಎಂಬ ಕೋಡಿಲ್ಲದ ಹಸು, ಹಿಂಡಿದಾಗೆಲ್ಲ ಹಾಲು ಕೊಡುವುದನ್ನು ಬಿಟ್ಟು ಒಂದೆರಡು ಸಲ ಒದೆಯುವುದನ್ನೂ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.

4 ಟಿಪ್ಪಣಿಗಳು Post a comment
 1. charan kumar
  ಜೂನ್ 9 2015

  this is really wrong turn from a BJP lead govt. also in the matter of RAM MANDIR. we everybody has to condemn when this wrong thing is turning as when we hail MODI when he did a good thing. then only they will understand that we never do the Personalty praising.

  ಉತ್ತರ
 2. Praveen Kumar Mavinakadu
  ಜೂನ್ 9 2015

  ಮೊದಲನೆಯದಾಗಿ ಇದು “ವಿಶ್ವ ಯೋಗದಿನ”.ಅಂದರೆ ಮುಸ್ಲಿಂ,ಕ್ರಿಶ್ಚಿಯನ್ ರಾಷ್ಟ್ರಗಳೂ ಒಳಗೊಂಡಂತೆ ಇಡೀ ವಿಶ್ವವೇ ಅಧಿಕೃತವಾಗಿ ಯೋಗಕ್ಕಾಗಿ ಒಂದು ದಿನವನ್ನು ಮೀಸಲಿಟ್ಟಿದೆ.ಆ ಪ್ರಯತ್ನಕ್ಕಾಗಿ ನಾವು ಮೋದಿಯವರಿಗೆ ಧನ್ಯವಾದ ಹೇಳಲೇ ಬೇಕು.

  ಕೇವಲ ನಮ್ಮ ದೇಶದ ಕೆಲವು ಉಗ್ರವಾದಿಗಳು ಈ ಆಚರಣೆಯನ್ನು ವಿರೋಧಿಸಿದಾಕ್ಷಣ ಯೋಗವೇನೂ ಮುಳುಗಿ ಹೋಗಲ್ಲ.ಅಲ್ಲದೆ ಈ ವಿರೋಧದಿಂದಾಗಿ ಭಾರತದಲ್ಲಿಯೇ ಇರುವ ಇತರ ಧರ್ಮದವರ ಧಾರ್ಮಿಕ ಅಸಹನೆಯನ್ನು ಇಡೀ ವಿಶ್ವವೇ ಗುರುತಿಸಲು ಈ ಸಂಧರ್ಭ ತಾನೇ ತಾನಾಗಿ ಕೂಡಿ ಬಂದಂತಿದೆ.

  ಇದಿಷ್ಟೇ ಅಲ್ಲದೆ ಒತ್ತಾಯಪೂರ್ವಕವಾಗಿ ಒಲ್ಲದವರ ಕೈಲಿ ಸೂರ್ಯನಿಗೆ ನಮಸ್ಕಾರ ಮಾಡಿಸಿ ನಮ್ಮ ಸಂಸ್ಕೃತಿಯನ್ನು ನಾವೇ ಯಾಕೆ ಕೊಂದುಕೊಳ್ಳಬೇಕು?

  ಉತ್ತರ
 3. ಜೂನ್ 10 2015

  ಅದ್ಭುತವಾಗಿ ಮೂಡಿ ಬಂದಿದೆ…I support This 🙂

  ಉತ್ತರ
 4. ಮಲ್ಲಪ್ಪ
  ಜೂನ್ 10 2015

  ರೋಹಿತ್‌ನನ್ನು ಚಕ್ರತೀರ್ಥ ಸರ್,
  ನಿಮ್ಮ ಮೊದಲ ಪ್ಯಾರಾದಲ್ಲಿ ಕಟುವಾಸ್ಥವವನ್ನು ಅದ್ಭುತವಾಗಿ ಬರೆದಿದ್ದಿರಿ. ಮಾನ್ಯ ಪ್ರಧಾನ ಮಂತ್ರಿಗಳು ಯೋಗದ ಬಗ್ಗೆ ಘೋಷಣೆಯನ್ನು ಮಾಡುವ ಬದಲು, ಜ್ಯಾತ್ಯಾತೀತ ದೇಶದಲ್ಲಿ ವೈಯುಕ್ತಿಕ ಜಾತಿ /ಧರ್ಮದ ವಿವರ ಏಕೆ? ಎಂದು ಸದ್ದಿಲ್ಲದೇ ಸರಕಾರಿ ದಾಖಲೆಗಳಿಂದ ಜಾತಿ /ಧರ್ಮದ ಕಾಲಂ ಮಾಯ ಮಾಡದ್ದರೆ ಭಾರತದ ಆಡಳಿತದಲ್ಲಿ ದೊಡ್ಡ ತಿರುವು ಕೊಟ್ಟಂತಾಗುತ್ತದೆ. ಆದರೆ ಅವರಿಗೆ ಕಿವಿ ಮಾತು ಹೇಳುವವರು ಯಾರು?
  ಇನ್ನು ಎರಡನೆಯದಾಗಿ ನಮ್ಮ ದುರ್ದೈವ ಎಂದರೆ ನಮ್ಮವರೇ ಧರ್ಮಕ್ಕೂ ಭಾಷೆಗೂ ತಳಕು ಹಾಕಿದ್ದಾರೆ. ಸಂಸ್ಕೃತ ಎಂದರೆ ಸನಾತನಿಗಳದ್ದು, ಶುದ್ಧ ಕನ್ನಡ ಎಂದರೆ ಆಯಾ ಭಕ್ತಿ ಪಂಥದವರದ್ದು. ಸಿಖ್ ರದ್ದೆ ಬೇರೆ ಭಾಷೆ. ಹಾಗೇ ಉರ್ದು ಒಂದು ಧರ್ಮದವರದ್ದು. ಅವರು ತಮ್ಮ ಧರ್ಮವನ್ನು ರಕ್ಷಿಸುವ ತುರ್ತು ಬಂದಾಗ ಬೇರೆ ಧರ್ಮದ ಭಾಷೆಯನ್ನು ವಿರೋಧಿಸುತ್ತಾರೆ.ಹೀಗಾಗಿ ಸಂಸ್ಕೃತದಲ್ಲಿಯ ಎಲ್ಲವೂ ತ್ಯಾಜ್ಯ. ಈ ನೆಲದ ಪರಂಪರೆಯ ಯಾವ ಸಂಸ್ಕೃತಿಯ ಅವರಿಗೆ ಬೇಡ. ಇಂತಹ ವಿಚಾರಗಳಲ್ಲಿ ಆಡಳಿತದ ಹಿರಿಯರು ನೆಲದ ಸಂಸ್ಕೃತಿಯ ಬಗ್ಗೆ ಕಾಳಜಿ ಹೊಂದಿ ಸೂಕ್ಷ್ಮವಾಗಿ, ಯೋಚನೆ ಮಾಡಿ, ದೃಢವಾಗಿ ಹೆಜ್ಜೆಗಳನ್ನು ಇಡಬೇಕು. ಎನನ್ನುತ್ತೀರಿ?

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments