ಈಶಾನ್ಯ ಭಾರತದೆಡೆಗೂ ಕ್ಯಾಮೆರಾ ತಿರುಗಿಸಿ ಮಾಧ್ಯಮಗಳೇ
– ವಿದ್ಯಾ ಕಾಶೀಕರ
ಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ ಮುದುವರಿಯುತ್ತಿರುವ ದೇಶದಲ್ಲಿ ಭಾರತ ಒಂದು.ಐತಿಹಾಸಿಕ,ಸಾಂಸ್ಕೃತಿಕ,ಪರಂಪರೆ ಮತ್ತು ಉದಾರ ವ್ಯಕ್ತಿತ್ವಕ್ಕಾಗಿ ಈ ದೇಶ ಯಾವಗಲೂ ಬೇರೆ ದೇಶಗಳಿಂದ ಗೌರವ ಪಡೆದಿದೆ.ವಿಶ್ವಕ್ಕೆ ಶಾಂತಿ,ಸಹಬಾಳ್ವೆಪ್ರಜಾಪ್ರಭುತ್ವವನ್ನು ಅಪ್ಪಿಕೊಂಡು ಬಾಳುತ್ತಿರುವ ಈ ದೇಶವನ್ನು ಎಷ್ಟೆಲ್ಲಾ ಆಕ್ರಮಣ, ದೌರ್ಜನ್ಯಗಳು ನಡೆದರೂ ಮತ್ತೆ ವಿಶ್ವದಲ್ಲಿ ತನ್ನ ಛಾಪನ್ನುಮೂಡಿಸಿದೆ.ಶೋಚನೀಯ ಸಂಗತಿಯೆಂದರೆ, ಯಾವ ಕಾರಣಕ್ಕಾಗಿ ನಾವು ಗೌರವಿಸುವಿಸಲ್ಪಡುತ್ತಿದ್ದೇವೋ ಅದನ್ನು ತೊರೆದು,ಬೇರೊಂದು ಸಂಸ್ಕೃತಿಯೆಡೆಗೆ ಆಕರ್ಷಿತರಾಗಿ ಅಂಧಾನುಕರಣೆ ಮಾಡುವುದಲ್ಲದೇ, ನಮ್ಮ ಮೂಲವನ್ನೇ ಅವಹೇಳನ ಮಾಡುವ ಸ್ಥಿತಿಗೆ ಈಗಿನ ಯುವ ಜನಾಂಗ ತಲುಪಿರುವುದು. ನಮ್ಮ ಜನರ ಭಕ್ತಿಯು ಕೇವಲ ಮಂದಿರ-ಗುಡಿಗಳಲ್ಲಿ ಪ್ರಾರ್ಥಿಸುವಾಗ ಮಾತ್ರ ಉದ್ಭವವಾಗುತ್ತದೆ. ಅಲ್ಲಿಂದ ಹೊರಬಂದ ಮರುಕ್ಷಣದ ಸನ್ನಿವೇಶವೇ ಬೇರೆ.ನೈಜಭಕ್ತಿಯು,ನನ್ನ ದೇಶ, ನನ್ನ ನಾಡು-ಭಾಷೆ, ವಿಷಯಗಳಲ್ಲಿ ವ್ಯಕ್ತವಾಗಬೇಕು. ಮಂದಿರಗಳಲ್ಲಿ ಶುದ್ಧನಾಗಿ ಸೇವೆ ಸಲ್ಲಿಸಿ ,ಮಂದಿರದ ಸುತ್ತ ಹೊಲಸು ಮಾಡಿದರೆ ಮೆಚ್ಚನಾ ಪರಮಾತ್ಮನು, ಹಣ್ಣಿನ ಸಿಪ್ಪೆಯನ್ನೋ, ಇನ್ನಾವುದೋ ತ್ಯಾಜ್ಯವನ್ನೋ ಬೀದಿಯಲ್ಲಿ ಚೆಲ್ಲಿದರೆ, ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದರೆ, ಅದು ಅನಾಗರೀಕತೆಯ ಪರಮಾವಧಿಯಲ್ಲದೆ ಮತ್ತೇನು?
ಒಮ್ಮಿಂದೊಮ್ಮೆಲೇ ಸಮಾಜದಲ್ಲಿ ಇಂತಹ ಆಚರಣೆಗಳು ಕಾಲಿಡುವುದಿಲ್ಲ. ಇದಕ್ಕೆ, ಮಾಧ್ಯಮಗಳ ಕೊಡುಗೆ ಅಪಾರವಾಗಿದೆ. ಮನೋರಂಜನೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ, ಟಿ.ಆರ್.ಪಿ. ಹೆಚ್ಚಿಸಲು ವಿಧ-ವಿಧದ ಕಾರ್ಯಕ್ರಮಗಳನ್ನು ನೀಡುತ್ತವೆ. ಹಲವು ಮೂಲಭೂತ ಸಮಸ್ಯೆಗಳು ನಮ್ಮ ಸುತ್ತಲೂ ತಲೆ ಎತ್ತಿ ನರ್ತಿಸುತ್ತಿದ್ದರೂ, ಅದನ್ನು ಮೂಲೆಗುಂಪಾಗಿಸಿ,ಮಹಿಳಾ ಸ್ವಾತಂತ್ರದ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದವನ್ನು ,ಜಾತಿ,ಧರ್ಮಗಳನ್ನ ನಿಂದಿಸಿದವರನ್ನು ಪುಕ್ಕಟೆ ಪ್ರಚಾರ ಕೊಟ್ಟು, ಬುದ್ದಿಜೀವಿಗಳೆಂದು ನಾಮಕರಣ ಮಾಡಿ ಜನಪ್ರಿಯ ವ್ಯಕ್ತಿಯನ್ನಾಗಿ ಮಾಡುತ್ತವೆ.ಕಟ್ಟಡದ ಆಧಾರವೇ ಕುಸಿಯುತಿರುವಾಗ, ಬಣ್ಣ ಬಳಿದು ಚಂದವಾಗಿಸುವುದು ಸರಿಯೇ?”
ರಾಷ್ಟ್ರದ ಪ್ರಜೆಗಳ ಸಂಕಟಗಳನ್ನು ಅರಿತು, ಅವುಗಳ ಪರಿಹಾರಕ್ಕೆ ನೆರವಾಗುವುದು ರಾಷ್ಟ್ರೀಯ ಚಾನೆಲ್ಲುಗಳ ಕರ್ತವ್ಯ.ಭಾರತದಲ್ಲಿ ಅದೆಷ್ಟೋ ಪ್ರದೇಶಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿ ಅಲ್ಲಿನ ಜನಗಳು ನರಕಯಾತನೆ ಅನುಭವಿಸುವಂತಾಗಿದೆ.ಭಾರತ ಗಡಿಗಳಲ್ಲಿ ವಾಸಿಸುವ ಜನರು,ಈಶಾನ್ಯ ರಾಜ್ಯಗಳ ಜನರು ಸಹ ಇದರಿಂದ ಹೊರತಾಗಿಲ್ಲ,ಯಾಕೆ ನಮ್ಮ ದೇಶದ ಮುಖ್ಯ ವಾಹಿನಿ ಮಾಧ್ಯಮಗಳಿಗೆ ಇವರ ಸಮಸ್ಯೆಗಳು ಮುಖ್ಯ ವರದಿ ಆಗುವದಿಲ್ಲ ,ಟಿ.ಆರ.ಪಿ ಯ ಈ ಯುಗದಲ್ಲಿ ನಾವೆಂದಿಗೂ ಈ ಜನರ ಸಮಸ್ಯೆಗಳನ್ನು ಅರಿಯಲಾಗಿಲ್ಲ.ದೇಶದ ಒಂದು ಮುಖ್ಯ ಭಾಗವಾಗಿದ್ದರೂ, ನೈಸರ್ಗಿಕ ಸಂಪನ್ಮೂಲಗಳಿಂದ ಕೂಡಿದ್ದರೂ,ಅನಾಮಿಕವಾಗಿರುವ ಎಷ್ಟೋ ಪ್ರದೇಶಗಳು ಭಾರತಲ್ಲಿವೆ. ಇತ್ತೀಚೆಗೆ, ’ಭಾರತೀಯ ಪ್ರಾದೇಶಿಕ ಸಂಸ್ಥಾನ, ಮದ್ರಾಸ್’ನಲ್ಲಿ ’ಸಾಧೀನಾರ್’ ಎಂದು ಈಶಾನ್ಯ ಭಾರತ ರಾಜ್ಯದ ವಿದ್ಯಾರ್ಥಿಗಳು ಒಂದು ಕಾರ್ಯಕ್ರಮ ಹಮ್ಮಿಕೊಂಡಿದ್ದರು.ಕೇವಲ ೩೦-೪೦ ವಿದ್ಯಾರ್ಥಿಗಳಿರುವ ಒಂದು ಒಕ್ಕೂಟ ಎಷ್ಟು ಅದ್ಭುತವಾಗಿ ಕಾರ್ಯಕ್ರಮ ಆಯೋಜಿಸಿದ್ದರೆಂದರೆ, ನೆರೆದವರೆಲ್ಲರೂ ತಲೆದೂಗುವಂತಿತ್ತು. ಕಾರ್ಯಕ್ರಮದ ಉದ್ದೇಶ, ಈ ರಾಜ್ಯಗಳ ಸಂಸ್ಕೃತಿ, ಜನರ ಜೀವನ ಕ್ರಮ ಮತ್ತು ಮುಖ್ಯವಾಗಿ, ಅವರು ಅನುಭವಿಸುತ್ತಿರುವ ಮೂಲ ಸಮಸ್ಯೆಗಳನ್ನು ಇತರೆ ಎಲ್ಲಾ ವಿದ್ಯಾರ್ಥಿಗಳಿಗೆ ಅರ್ಥೈಸುವುದಾಗಿತ್ತು. ಒಕ್ಕೂಟದ ಮುಖ್ಯಸ್ಥಳಾದ ಈಸ್ತರ್ ಹೇಳಿದ ಮಾತು ನಿಜಕ್ಕೂ ಮಾನನೀಯ. “ನಾನು ಓದಿದ ಇತಿಹಾಸ ವಿಷಯದಲ್ಲಿ ಭಾರತದ ಎಲ್ಲಾ ರಾಜ್ಯಗಳ ಇತಿಹಾಸ, ಸಂಸ್ಕೃತಿಯ ಬಗ್ಗೆ ಬರೆದಿತ್ತು. ಆದರೆ, ಸ್ವತಃ ನನ್ನ ರಾಜ್ಯದ ಇತಿಹಾಸವನ್ನು ನಾನು ಎಂದೂ ಓದಲೇ ಇಲ್ಲ. ನನ್ನ ಭಾಗದ ರಾಜ್ಯಗಳ ರಾಜಧಾನಿ, ಅಲ್ಲಿನ ಮುಖ್ಯಮಂತ್ರಿಗಳ ಹೆಸರುಗಳು, ಮುಖ್ಯ ಊರುಗಳು ಇತರೆ ರಾಜ್ಯಗಳ ಜನರಿಗೆ ಸ್ವಲ್ಪವೂ ತಿಳಿರುವುದಿಲ್ಲ. ಎಷ್ಟೋ ಬಾರಿ, ನಾವು ಚೀನಿಯರು, ಟಿಬೆಟಿಯನ್ನಾರಾಗಿ ಅವರಿಗೆ ಕಾಣುತ್ತೇವೆ. ಆದರೆ, ನಾವೂ ಸಹ ಭಾರತೀಯರು. ಭಾರತದ ಪ್ರತೀ ಚುನಾವಣೆಯಲ್ಲಿ ಭಾಗವಹಿಸುತ್ತೇವೆ.ಆದರೆ ಚುನಾವಣೆಯಿಂದ ಆಯ್ಕೆಯಾದ ಪ್ರತೀ ಸರ್ಕಾರವೂ ನಮ್ಮನ್ನು ಪ್ರಗತಿಯ ವಿಷಯದಲ್ಲಿ ದೂರ ಇಡುತ್ತದೆ. ಇಲ್ಲಿರುವ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ, ಯಾವ ಸರ್ಕಾರವಾಗಲೀ, ರಾಷ್ಟ್ರೀಯ ಮಾಧ್ಯಮಗಳಾಗಲೀ ಕೈ ಹಾಕುವುದಿಲ್ಲ.ಸಮಸ್ಯೆಯ ಕುರಿತು, ಲೇಖನ ಪ್ರಕಟಿಸುವುದು ಹಾಗಿರಲಿ, ವರದಿ ಮಾಡಲೂ ಯಾವ “ಮೇನ್ ಸ್ಟ್ರೀಮ್” ಪತ್ರಿಕೆಗಳು ಮುಂದಾಗುವುದಿಲ್ಲ. ಯಾಕೆ ಹೀಗೆ?” ಎಂದು ಕೇಳಿದಾಗ, ತುಂಬಿದ ಸಭಾಂಗಣ ಸ್ಥಬ್ಧವಾಯಿತು ಒಂದು ಕ್ಷಣ. ಅವಳ ಈ ಮಾತು, ಹಣದ ಮದದಿಂದ ಮೆರೆಯುವ, ಜಾತಿಯ ಹೆಸರಿನಲ್ಲಿ ಹೀನ ಕಾರ್ಯವೆಸಗುವ, ರಾಜಕೀಯವೆಂಬ ನಾಟಕದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಎಷ್ಟೋ ಜನರಿಗೆ ನೇರವಾಗಿ ಹೊಡೆದ ಬಾಣದಂತಿತ್ತು.
ಕಾಶ್ಮೀರ ವಿಷಯಕ್ಕೆ ನಾವು ಕೊಡುವ ಪ್ರಚಾರ ಈ ಭಾಗಗಳಿಗೆ ಕಿಂಚಿತ್ತು ಕೊಡುವದಿಲ್ಲ ರಾಷ್ಟ್ರೀಯ ಚಾನೆಲ್ ಗಳು ನಮ್ಮ ದೇಶದ ಒಂದು ಭೂಭಾಗವನ್ನು ನಮ್ಮದೇ ಅಲ್ಲ ಎಂಬಂತೆ ಇರುತ್ತವೆ. ಎಷ್ಟೋ ಮಂದಿ ಬಾಂಗ್ಲಾದೇಶೀಯರು ಅಕ್ರಮವಾಗಿ ಬಂದು ನೆಲೆಸಿ, ಕ್ರಮೇಣ ಇಲ್ಲಿನ ನಾಗರೀಕರಾಗುತ್ತಿದ್ದಾರೆ. ಹೆಚ್ಚುವರಿ ವೆಚ್ಚದ ಜೊತೆಗೆ, ದೇಶದ ಭದ್ರತೆಗೇ ಕೇಡು ಬರುವಂತಹ ಸ್ಥಿತಿ ಇದೆ.
ಇನ್ನು ಮುಂದೆ ಆದರೂ ನಮ್ಮ ರಾಷ್ಟ್ರೀಯ ಚಾನೆಲ್ ಗಳು ಈ ರಾಜ್ಯಗಳತ್ತ ಮುಖ ಮಾಡಲಿ. ತನ್ಮೂಲಕ, ಸರ್ಕಾರದ ಗಮನ ಸೆಳೆದು ಜನರ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ನೆರವಾಗಲಿ. ನಮ್ಮ ದೇಶದ ಬುದ್ಧಿಜೀವಿಗಳು, ಸಾಹಿತಿಗಳು ಕ್ಷುಲ್ಲಕ ವಿಷಯಗಳ ಕುರಿತು ಚರ್ಚೆ, ವಿಮರ್ಶೆ ಮಾಡುವುದನ್ನು ಬದಿಗಿಟ್ಟು, ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಹರಿಸಿದರೆ, ಹಲವರ ಬದುಕು ಹಸನಾದೀತು, ಭಾರತದ ಶಾಂತಿ-ಕೀರ್ತಿ ಇಮ್ಮಡಿಯಾದೀತು. ಹಾಗೆಯೇ ಇಂದಿನ ನಾಗರೀಕ ಸಮಾಜ ಕೇವಲ ಉಡುಗೆ-ಅಡುಗೆಯಲ್ಲಷ್ಟೇ ಅನುಕರಿಸದೇ, ಸ್ವಚ್ಛತಾ ಪರಿಪಾಲನೆಯಲ್ಲೂ ಪಾಶ್ಚಿಮಾತ್ಯರನ್ನು ಅನುಸರಿಸಿದರೆ, ಈ ನೆಲ ನಿಜಕ್ಕೂ ಭವ್ಯವಾದೀತು!