ವಿಷಯದ ವಿವರಗಳಿಗೆ ದಾಟಿರಿ

ಜೂನ್ 12, 2015

3

ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ – ಭಾಗ ೩

‍ನಿಲುಮೆ ಮೂಲಕ

– ವಿನಾಯಕ ಹಂಪಿಹೊಳಿ

ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ – ಭಾಗ ೧
ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ – ಭಾಗ ೨

ದರ್ಶನಗಳಲ್ಲಿ ತರ್ಕ:

“ಭಗವಂತನಲ್ಲಿ ತನ್ನನ್ನು ಆರಾಧಿಸುವವರ ಮೇಲೆ ಪ್ರೀತಿ, ತನ್ನನ್ನು ಆರಾಧಿಸದವರ ಮೇಲೆ ಕ್ರೋಧ, ತನಗಿಷ್ಟ ಬಂದ ಹಾಗೆ ಮಾಡುವ ಸ್ವೇಚ್ಛೆ ಇವೆಲ್ಲವೂ ತುಂಬಿಕೊಂಡಿವೆ.” ಎಂಬ ಈ ಸೆಮೆಟಿಕ್ ರಿಲಿಜನ್ನಿನ ವಾಕ್ಯವನ್ನು ಭಾರತೀಯ ದಾರ್ಶನಿಕನೊಬ್ಬನಿಗೆ ಹೇಳಿ ನೋಡಿ. ಆಗ ಆತನ ಪ್ರತಿಕ್ರಿಯೆ ಹೇಗಿರುತ್ತದೆ? “ಛೇ! ಕೋಪ, ಆಸೆಗಳನ್ನು ಇಟ್ಟುಕೊಂಡವನು ಭಗವಂತ ಹೇಗಾದಾನು?” ಎಂದೇ ಪ್ರತಿಕ್ರಿಯೆ ನೀಡುತ್ತಾನಲ್ಲವೇ? ಕಾರಣ ನಮ್ಮ ಭಾರತೀಯ ದರ್ಶನಗಳ ತಳಹದಿಯೇ ಬೇರೆ. ದರ್ಶನಗಳಲ್ಲಿಯೂ ತರ್ಕಕ್ಕೆ ರಿಲಿಜನ್ನುಗಳಂತೆ ಪ್ರಥಮ ಪ್ರಾಶಸ್ತ್ಯವಿಲ್ಲ. ತರ್ಕದಿಂದ ಭಗವತ್ಪ್ರಾಪ್ತಿಯೂ ಇಲ್ಲ, ಮೋಕ್ಷವೂ ಇಲ್ಲ. ಆದರೆ “ಈ ಸಿದ್ಧಾಂತವೇ ಸತ್ಯ” ಎಂದು ಎದ್ದು ನಿಂತು ಒಬ್ಬ ಹೇಳಬೇಕಾದರೆ, ಆತ ಆ ತನ್ನ ಸಿದ್ಧಾಂತವನ್ನು ತರ್ಕಾಗ್ನಿಪರೀಕ್ಷೆಗೆ ದೂಡಿ ಪವಿತ್ರವಾಗಿ ಹೊರತರಬೇಕು. ರಿಲಿಜನ್ನುಗಳಂತೆ ಪುಸ್ತಕವೇ ಪರಮ ಸತ್ಯವಲ್ಲ ಈ ದರ್ಶನಗಳಲ್ಲಿ. ಅನುಭವವೇ ಪ್ರಧಾನ. “ವೇದಗಳು ಅಗ್ನಿ ತಣ್ಣಗಿದೆ ಎಂದು ಸಾವಿರ ಸಾರಿ ಹೇಳಿದರೂ ಅನುಭವವನ್ನೇ ಅನುಸರಿಸಬೇಕು” ಎಂದು ಶಂಕರರು ಹೇಳಿದ್ದಾರೆ. ಉಪನಿಷತ್ತುಗಳೂ ಕೂಡ “ಇಲ್ಲಿ ವೇದಗಳು ವೇದಗಳಾಗಿರುವದಿಲ್ಲ” ಎಂದು ಸಾರುತ್ತವೆ. ಅಂದರೆ ವೇದಕ್ಕಿಂತಲೂ ಅನುಭವಕ್ಕೇ ಪ್ರಥಮ ಪ್ರಾಶಸ್ತ್ಯ. ಸಹಸ್ರಾರು ಅನುಭವಿಗಳ ಅನುಭವದೊಂದಿಗೆ ತಾಳೆಯಾಗುವದರಿಂದಲೇ ವೇದ ಉಪನಿಷತ್ತು, ಗೀತೆಗಳಿಗೆ ನಮ್ಮಲ್ಲಿ ಹೆಚ್ಚು ಗೌರವ.

ಅನೇಕ ದರ್ಶನಗಳು ಅನೇಕ ತರ್ಕಗಳನ್ನನುಸರಿಸಿವೆ. ವೇದವನ್ನೊಪ್ಪದ ಬೌದ್ಧ ಮತ್ತು ಚಾರ್ವಾಕ ದರ್ಶನಗಳು ತಮ್ಮದೇ ತರ್ಕ ವ್ಯವಸ್ಥೆಯನ್ನು ಹಾಕಿಕೊಂಡಿವೆ. ವೇದಗಳನ್ನೊಪ್ಪುವ ಸಾಂಖ್ಯ, ಪೂರ್ವಮೀಮಾಂಸ ಮತ್ತು ವೇದಾಂತ ಮತಗಳೂ ಕೂಡ ವೇದ/ಉಪನಿಷತ್ತುಗಳಲ್ಲಿ ಬರುವ ತರ್ಕವನ್ನು ಆಧಾರವಾಗಿಟ್ಟುಕೊಂಡಿವೆ. ಇಲ್ಲಿ ಭಾರತದಲ್ಲಿ ಅತ್ಯಂತ ಜನಪ್ರಿಯವಾದ ಮತ್ತು ದೇಶಾದ್ಯಂತ ಅನೇಕ ವಿದ್ವಜ್ಜನರು ಒಪ್ಪಿರುವ ಅದ್ವೈತ ವೇದಾಂತ ದರ್ಶನವನ್ನು ತೆಗೆದುಕೊಳ್ಳೋಣ. ಮುಖ್ಯವಾಗಿ ವೇದಾಂತಗಳಲ್ಲಿ ಕಾಣುವ ತರ್ಕ ಅತ್ಯಂತ ಜಟಿಲ. ಕಾರಣ ಉಪನಿಷತ್ತುಗಳು ಅನುಸರಿಸುವ ತರ್ಕ ರೋಮಾಂಚನಗೊಳಿಸುವಂಥದ್ದು. ಏಕೆಂದರೆ ಅದು ಮನುಷ್ಯನ ಮೂಲಭೂತ ನಂಬಿಕೆಗಳನ್ನೇ ಪ್ರಶ್ನಿಸುತ್ತದೆ. “ಆತ್ಮದ ವಿಷಯದಲ್ಲಿ, ಇದೆ ಎಂದು ಕೆಲವರು ಇಲ್ಲ ಎಂದು ಕೆಲವರು” ಎಂಬುದರೊಂದಿಗೆ ಆರಂಭವಾಗುವ ಕಠೋಪನಿಷತ್ತು, “ಆತ್ಮನು ಇದ್ದಾನೆ” ಎಂಬುದನ್ನು ತಾರ್ಕಿಕವಾಗಿ ಸಾಧಿಸಿ ಮುಕ್ತಾಯಗೊಳ್ಳುತ್ತದೆ. ಹಾಗೆಯೇ, ಶಂಕರರು “ಮನುಷ್ಯನಿಗೆ ಇಷ್ಟವಾದದ್ದನ್ನು ಪಡೆದುಕೊಳ್ಳುವದು ಮತ್ತು ಅನಿಷ್ಟವಾದದ್ದನ್ನು ಕಳೆದುಕೊಳ್ಳುವದು ಸ್ವಾಭಾವಿಕವಾಗಿದೆ. ಈ ಇಷ್ಟಪ್ರಾಪ್ತಿ-ಅನಿಷ್ಟಪರಿಹಾರವೆಂಬುದು ಜೀವಿಗಳ ಸ್ವಭಾವವು. ಉಪನಿಷತ್ತುಗಳ ಉದ್ದೇಶವೇ ಈ ಸ್ವಭಾವದ ಕಾರಣವನ್ನು ಅರಿಯುವದು” ಎಂದು ಹೇಳಿದ್ದಾರೆ. ಹೀಗೆ ಮನುಷ್ಯನ ಮೂಲ ನಂಬಿಕೆಯನ್ನೇ ತರ್ಕಕ್ಕೆ ಒಡ್ಡುವಲ್ಲಿ ಉಪನಿಷತ್ತುಗಳು ತೋರಿದ ಧೈರ್ಯ ಯಾವ ರಿಲಿಜನ್ನುಗಳಲ್ಲೂ ಕಂಡು ಬಂದಿಲ್ಲ.

ಉದಾಹರಣೆಯಾಗಿ ಈ ಇಷ್ಟಪ್ರಾಪ್ತಿ-ಅನಿಷ್ಟಪರಿಹಾರವನ್ನೇ ತೆಗೆದುಕೊಳ್ಳೋಣ. ಇಷ್ಟವಾದದ್ದನ್ನು ಪಡೆಯುವದು ಅನಿಷ್ಟವಾದದ್ದನ್ನು ತೊರೆಯುವದು ಮನುಷ್ಯನ ಸಹಜ ಧರ್ಮವಷ್ಟೇ. ಅಲ್ಲದೇ ದೊಡ್ಡ ಇಷ್ಟ ಪ್ರಾಪ್ತಿಗಾಗಿ ಚಿಕ್ಕ ಅನಿಷ್ಟಗಳನ್ನು ಸ್ವೀಕರಿಸುತ್ತೇವೆ. ದೊಡ್ಡ ಅನಿಷ್ಟವೊಂದರ ನಿವಾರಣೆಗಾಗಿ ಚಿಕ್ಕ ಇಷ್ಟಗಳನ್ನು ತ್ಯಜಿಸುತ್ತೇವೆ. ನಾವು ಮಾಡುವ ಪ್ರತಿ ಕ್ರಿಯೆಯೂ ಒಂದೋ ಇಷ್ಟ ಪ್ರಾಪ್ತಿಗಾಗಿ ಇಲ್ಲವೇ ಅನಿಷ್ಟ ಪರಿಹಾರಕ್ಕಾಗಿ. ಬೆಳಗ್ಗೆದ್ದು ಕೆಲಸಕ್ಕೆ ಹೋಗುವದು ಕೆಲವೊಮ್ಮೆ ಇಷ್ಟವಾಗದಿದ್ದರೂ ಹೋಗುತ್ತೇವೆ ಕಾರಣ ಅದರಿಂದ ಬರುವ ಹಣ ಹೆಚ್ಚು ಇಷ್ಟವಾಗಿರುತ್ತದೆ. ಉಪವಾಸ ಕೂಡುವದು ಇಷ್ಟವಿಲ್ಲದಿದ್ದರೂ, ಹೊಟ್ಟೆ ನೋವಿನ ಅನಿಷ್ಟದಿಂದ ಪರಿಹಾರ ಹೊಂದಲು ಉಪವಾಸ ಮಾಡುತ್ತೇವೆ. ಎಷ್ಟರ ಮಟ್ಟಿಗೆ ಎಂದರೆ ಆತ್ಮಹತ್ಯೆ ಮಾಡಿಕೊಳ್ಳುವವನೂ ಕೂಡ ಈ ನಿಯಮದಿಂದ ಹೊರಬರಲಾರ. ತನ್ನ ಜೀವನದಲ್ಲಿ ಪರಿಹಾರವಾಗಲಾರದ ಅನಿಷ್ಟವೊಂದು ಬಂದಿರುವದು ತಡೆದುಕೊಳ್ಳಲಾರದೇ ಆತ್ಮಹತ್ಯೆಗೆ ಶರಣಾಗುತ್ತಾನೆ, ತನ್ಮೂಲಕ ಆ ಅನಿಷ್ಟದಿಂದ ಬಿಡುಗಡೆ ಹೊಂದುತ್ತಾನೆ. ಅಷ್ಟೇ ಏಕೆ “ಅಧರ್ಮ ಹೆಚ್ಚಾದಾಗ, ಸಜ್ಜನರನ್ನು ಉಳಿಸಿ ಅಧರ್ಮವನ್ನು ನಾಶ ಮಾಡಲು ಯುಗಯುಗದಲ್ಲಿ ಬರುತ್ತೇನೆ” ಎಂದು ವಚನ ಕೊಡಬೇಕಾಗಿ ಬಂದ ಭಗವಂತನೂ, ಈ ಇಷ್ಟಾನಿಷ್ಟಪ್ರಾಪ್ತಿಪರಿಹಾರದ ನಿಯಮದಿಂದ ಹೊರತಾಗಿಲ್ಲ. ದುರ್ಜನರ ಜಯ ಭಗವಂತನಿಗೆ ಇಷ್ಟವಿಲ್ಲ, ಧರ್ಮದ ನಾಶ ಭಗವಂತನಿಗೆ ಅನಿಷ್ಟ. ಅದನ್ನು ಪರಿಹರಿಸಲು ಆತ ಬಂದೇ ಬರುತ್ತಾನೆ. ಹೀಗಾಗಿ ಭಗವಂತನಿಗೆ ಮನುಷ್ಯರೂಪ ಕೊಟ್ಟಾಕ್ಷಣ ಆತನೂ ಈ ನಿಯಮಕ್ಕೆ ಕಟಿಬದ್ಧನಾಗಲೇಬೇಕು.

ಈ ಮೂಲನಿಯಮ ಜೀವಿಗಳಿಗೆ ಏಕೆ ಅನ್ವಯವಾಗಿದೆ, ಏಕೆ ನಾವು ನರಕವನ್ನು ದ್ವೇಷಿಸುತ್ತೇವೆ, ಏಕೆ ಸ್ವರ್ಗಪ್ರಾಪ್ತಿ ನಮಗೆ ಇಷ್ಟ, ಮೋಕ್ಷ ಏಕೆ ಬೇಕು, ಜೀವನದಲ್ಲಿ ದುಃಖ ಏಕೆ ಅನಿಷ್ಟ, ಏಕೆ ಸುಖ ಇಷ್ಟ ಎಂಬ ತಾರ್ಕಿಕ ಪ್ರಶ್ನೆಗಳು ಚರ್ಚೆಗಳು ಉಪನಿಷತ್ತುಗಳನ್ನು ಹೊರತು ಪಡಿಸಿ ಇನ್ನೆಲ್ಲೂ ಸಿಗುವದಿಲ್ಲ. ಸೆಮೆಟಿಕ್ ರಿಲಿಜನ್ನುಗಳು, ಸಕಲ ಶಾಸ್ತ್ರಗಳು ಎಲ್ಲವೂ ಸ್ವರ್ಗಕ್ಕಾಗಿ ಪುಣ್ಯ ಸಂಪಾದಿಸಲು ಹೇಳುತ್ತವೆ. ಆದರೆ ಉಪನಿಷತ್ತುಗಳು ಮಾತ್ರ ಸ್ವರ್ಗಸುಖವನ್ನು ಮಾನವ ಅಪೇಕ್ಷಿಸಲು ಕಾರಣವೇನು, ನರಕದ ದುಃಖವನ್ನು ಮಾನವ ನೀಗಿಕೊಳ್ಳಲು ಏಕೆ ಬಯಸುತ್ತಾನೆ ಎಂದು ಚರ್ಚಿಸುತ್ತವೆ. ಛಾಂದೋಗ್ಯ ಮತ್ತು ಆರಣ್ಯಕಗಳಲ್ಲಂತೂ “ದೇಹವು ಮರ್ತ್ಯವಾಗಿರುವದರಿಂದ ಆತ್ಮವು ಅಮರ, ಜೀವಿಯು ಅಲ್ಪನಾಗಿರುವದರಿಂದ ಆತ್ಮವು ಅನಂತ, ಮಾನವನು ಅಲ್ಪಜ್ಞ, ಅಲ್ಪಶಕ್ತನಾಗಿರುವದರಿಂದ ಭಗವಂತ ಸರ್ವಜ್ಞ, ಸರ್ವಶಕ್ತನಾಗಿದ್ದಾನೆ. ಆದರೆ ಮೂಲತಃ ಆತ್ಮವು ನಿರ್ಗುಣ” ಎಂದಿದೆ. ಇಂಥ ತರ್ಕ ಇನ್ನೆಲ್ಲೂ ಸಿಗುವದಿಲ್ಲ. ನಿರ್ಗುಣನಾದ ಪರಮಾತ್ಮನಿಗೆ ಅನಂತತ್ವ, ಸರ್ವಶಕ್ತಿತ್ವ ಮುಂತಾದ ಗುಣಗಳೂ ಕೂಡ ನಾವೇ ಆರೋಪಿಸಿರುವದು ಎಂಬುದನ್ನು ಉಪನಿಷತ್ತುಗಳಲ್ಲಿ ಮಾತ್ರ ಕಾಣಲು ಸಾಧ್ಯ.

ಉಪನಿಷತ್ತುಗಳಲ್ಲಿ ಕಾಣುವ ತರ್ಕ ಇಲ್ಲಿಗೇ ನಿಲ್ಲುವದಿಲ್ಲ. ಜಗತ್ತಿಗೆ ಉತ್ಪತ್ತಿ ಪ್ರಳಯಗಳು ಇವೆ ಎಂಬುದನ್ನು ವೈಜ್ಞಾನಿಕ ರೀತಿಯಲ್ಲಿ ಅಚ್ಚುಕಟ್ಟಾಗಿ ಅಲ್ಲದಿದ್ದರೂ, ತಾರ್ಕಿಕವಾಗಿ ತೋರಿಸುತ್ತವೆ. ಐನ್ಸ್ಟೈನಿನ ಸಾಮಾನ್ಯ ಸಾಪೇಕ್ಷತೆಯಲ್ಲಿ ಗುರುತ್ವದ ಚೌಕಟ್ಟು ಮತ್ತು ವೇಗೋತ್ಕರ್ಷದ ಚೌಕಟ್ಟುಗಳಲ್ಲಿ ಊಹಿಸಲ್ಪಟ್ಟ ಪರಿಣಾಮ ಸಮಾನತೆಯಂತೆಯೇ ಉಪನಿಷತ್ತುಗಳು ಎಚ್ಚರ ಮತ್ತು ಕನಸಿನ ಅನುಭವಗಳ ನಡುವೆ ಪರಿಣಾಮ ಸಮಾನತೆಯನ್ನು ಸಾಧಿಸಿ ಆಕಾಶ ಮತ್ತು ಕಾಲಗಳ ಉಗಮವನ್ನು ತಾರ್ಕಿಕವಾಗಿ ಸಾಧಿಸಲಾಗಿದೆ. ಆಕಾಶ ಮತ್ತು ಕಾಲಗಳ ಉಗಮದ ಕಲ್ಪನೆ ಮಹಾಸ್ಫೋಟದಿಂದೀಚೆಗೆ ಪಾಶ್ಚಿಮಾತ್ಯರಲ್ಲಿ ಬಂದಿದ್ದು. ಆತ್ಮನು ಜಗತ್ತೆಂಬ ಮಡಕೆಗೆ ಕುಂಬಾರನೋ, ಮಣ್ಣೋ ಎಂಬ ಚರ್ಚೆಯನ್ನು ಆರಂಭಿಸಿ, ಆತ್ಮವು ಜಗತ್ತಿಗೆ ಉಪಾದಾನ ಕಾರಣವೂ ಹೌದು, ನೈಮಿತ್ತಿಕ ಕಾರಣವೂ ಹೌದು ಎಂದು ಸಾರಿದೆ. ಪುನಃ ಪುನಃ ಜನ್ಮ ಮರಣಗಳ ಪುನರ್ಜನ್ಮಕ್ಕೂ ತರ್ಕದ ಆಧಾರವನ್ನಿತ್ತೇ ಮುಂದುವರೆಯುತ್ತದೆ. ಸೆಮೆಟಿಕ್ ರಿಲಿಜನ್ನುಗಳ ಅನಂತ ಸ್ವರ್ಗ ಮತ್ತು ಅನಂತ ನರಕಗಳನ್ನೂ ವೇದಾಂತವು ಒಪ್ಪುವದಿಲ್ಲ. ಅದಕ್ಕೂ ಸಹ ತರ್ಕಬದ್ಧವಾದ ಉತ್ತರ ನೀಡುತ್ತದೆ.

ಜೀವಿಗಳಲ್ಲಿನ ನಾನು ಎಂಬ ಅಸ್ತಿತ್ವಕ್ಕೆ ಕಾರಣವಾದ ಆತ್ಮದ ಬಗ್ಗೆ ವೇದಾಂತಗಳನ್ನು ಹೊರತು ಪಡಿಸಿ ಉಳಿದ ಯಾವ ಮತಗಳೂ ರಿಲಿಜನ್ನುಗಳೂ ಪ್ರವರ್ತಿಸುವದಿಲ್ಲ. ಭಗವಂತನ ಬಗ್ಗೆ ಎಲ್ಲ ರಿಲಿಜನ್ನುಗಳು ಅಧ್ಯಯನ ಮಾಡುತ್ತವಾದರೂ ನಾನು ಯಾರು ಎಂಬುದನ್ನು ವೇದಾಂತಗಳು ಮಾತ್ರ ಚರ್ಚಿಸುತ್ತವೆ. “ಈ ಜಗತ್ತನ್ನು ನಿರ್ಮಿಸಿ, ಅದನ್ನೇ ಒಳಹೊಕ್ಕನು” ಎಂಬ ಉಪನಿಷತ್ತಿನ ವಾಕ್ಯವು ಜೀವರೂಪದಲ್ಲಿ ನಾನು ಎಂಬುವವನ ಮೂಲ ಅಸ್ತಿತ್ವ ಜಗತ್ತನ್ನೇ ನಿರ್ಮಿಸದ ಭಗವಂತನೇ ಹೊರತು ಬೇರೇನೂ ಅಲ್ಲ ಎಂದು ಸಾರುವ ತರ್ಕ ಇನ್ನಾವ ಪಂಥದಲ್ಲಿ ಸಿಗಲು ಸಾಧ್ಯ?

ಇನ್ನು ವೇದಾಂತಗಳಲ್ಲಿ ಮೋಕ್ಷದ ಕಲ್ಪನೆಯೂ ವಿಶೇಷ. ಯಾವದು ಬರುತ್ತದೋ, ಅದು ಹೋಗಲೇಬೇಕು. ಮೋಕ್ಷ ಬಂದರೆ ಹೋಗುವದು ಯಾವಾಗ ಎಂಬ ಮೊದಲನೇ ಪ್ರಶ್ನೆಯಲ್ಲಿಯೇ ಉಪನಿಷತ್ತುಗಳು ನಮಗೆ ಮೋಕ್ಷದ ಮೂಲ ಕಲ್ಪನೆಯನ್ನು ಬಿತ್ತುತ್ತದೆ. ಕೇವಲ ವಸ್ತುಸುಖ ಮತ್ತು ಸ್ತ್ರೀಸುಖಗಳೇ ಸ್ವರ್ಗಸುಖ ಎಂದು ಬಿಂಬಿಸುವ ಸೆಮೆಟಿಕ್ ರಿಲಿಜನ್ನುಗಳ ಮೋಕ್ಷದಂತೆ, ವೇದಾಂತಗಳು ಮೋಕ್ಷವನ್ನು ಬೋಧಿಸುವದಿಲ್ಲ. ಸುಖ ಮತ್ತು ದುಃಖಗಳೆರಡನ್ನೂ ತ್ಯಜಿಸಿ ಅದನ್ನು ಮೀರಿದ ಅನುಭೂತಿಯೇ ಮೋಕ್ಷ ಎಂಬ ಕಲ್ಪನೆ ಇಲ್ಲಿ ಮಾತ್ರ ಕಾಣಲು ಸಾಧ್ಯ. ಒಂದು ಜೀವಿಯ ಮೂಲ ಸ್ವರೂಪವೇ ಮೋಕ್ಷ, ಅದೇ ಸಹಜ ಸ್ವಭಾವ, ದೇಶ-ಕಾಲಾತೀತವಾಗಿ ಇದ್ದುಕೊಂಡಿರುವಂಥದ್ದು, ಪ್ರತಿಯೊಂದು ಜೀವಿಯು ಸ್ವಭಾವತಃ ಮುಕ್ತವಾಗಿಯೇ ಇರುತ್ತದೆ ಎಂಬ ಪ್ರಬಲವಾದ ವಾದ ಕೇವಲ ವೇದಾಂತಗಳಲ್ಲಿ ಮಾತ್ರ ಕಾಣಲು ಸಾಧ್ಯ. ಯಾವುದಾದರೊಂದು ಕಾರಣದಿಂದಾಗಿ ಮೋಕ್ಷವುಂಟಾದರೆ, ಅಲ್ಲಿ ಕಾರ್ಯ-ಕಾರಣ ಸಂಬಂಧ ಬೆಸೆದು, ದೇಶ-ಕಾಲ ಕಟ್ಟಳೆಗೆ ಒಳಪಟ್ಟು ಬಿಡುತ್ತದೆ. ಹೀಗಾಗಿ ಅದು ಎಂದಿಗೂ ಆತ್ಯಂತಿಕ ಮೋಕ್ಷವಾಗಲಾರದು.

ಆಧುನಿಕ ಭೌತವಿಜ್ಞಾನದ ಬೆಳವಣಿಗೆಯಲ್ಲಿ ವೇದಾಂತವು ನೀಡುವ ಉನ್ನತ ತರ್ಕ ಅತ್ಯಂತ ಸಹಾಯಕಾರಿಯಾಗಿ ಪರಿಣಮಿಸಿತು. ಸ್ಕ್ರೊಡಿಂಜರ್ ಎಂಬ ವಿಜ್ಞಾನಿ ಅದ್ವೈತದ ಆತ್ಮವಾದ ಮತ್ತು ಬೌದ್ಧರ ವಿಜ್ಞಾನವಾದದಿಂದ ಅದೆಷ್ಟು ಪ್ರಭಾವಿತನಾಗಿದ್ದ, ಅವನು ನಿರ್ಮಿಸಿದ ಕ್ವಾಂಟಂ ಭೌತಶಾಸ್ತ್ರಕ್ಕೆ ವೇದಾಂತದ ಕೊಡುಗೆ ಏನು ಎಂಬುದು ಅವನ ಮಾತುಗಳಲ್ಲೇ ವ್ಯಕ್ತವಾಗುತ್ತದೆ. “ನಿರ್ವಾಣ ಎಂಬುದು ಆನಂದಮಯ ಜ್ಞಾನದ ಸ್ಥಿತಿ. ಅದು ವ್ಯಕ್ತಿಯೊಬ್ಬನ ಪ್ರತ್ಯೇಕತೆಗೆ ಸಂಬಂಧಿಸಿದ್ದಲ್ಲ. ನಾನಾತ್ವ ಎಂಬುದು ಕೇವಲ ತೋರಿಕೆ. ಆದರೆ ಇರುವದು ಒಂದೇ ಸತ್ಯ. ನನಗೆ ಗೊತ್ತಿದ್ದ ಮಟ್ಟಿಗೆ ಆತ್ಮ=ಬ್ರಹ್ಮ ಎಂಬ ಸತ್ಯದ ಸಾಕ್ಷಾತ್ಕಾರ ಮೂಲತಃ ಭಾರತೀಯರ ಚಿಂತನೆ.” ಈ ಮೇಲಿನ ಮಾತುಗಳು ಸ್ವತಃ ಸ್ಕ್ರೊಡಿಂಜರ್ ಹೇಳಿರುವಂಥದ್ದು. ವಸ್ತು, ಕಾಲ, ದೇಶಗಳನ್ನು ಕೇವಲ ಒಂದೇ ಅಸ್ತಿತ್ವದ ಅಲೆಗಳ ಸಂಭವನೀಯ ಗೋಚರ ಎಂದು ಆತ ಗಣಿತೀಯವಾಗಿ ಸಾಧಿಸಿ ತೋರಿಸಬೇಕಾದರೆ ಅವನಿಗೆ ವೇದಾಂತಗಳು ಎಷ್ಟರ ಮಟ್ಟಿಗೆ ಪ್ರಭಾವ ಬೀರಿರಬಹುದು ಎಂಬುದು ಇಲ್ಲಿ ವ್ಯಕ್ತವಾಗುತ್ತವೆ. ಹೀಗಾಗಿ ಕ್ವಾಂಟಂ ಭೌತಶಾಸ್ತ್ರಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಕೀರ್ತಿಯನ್ನು ನಮ್ಮ ವೇದಾಂತದರ್ಶನಕ್ಕೆ ಮುಕ್ತ ಮನಸ್ಸಿನಿಂದ ಸಲ್ಲಿಸಿದ್ದಾನೆ ಈ ಸ್ಕ್ರೊಡಿಂಜರ್.

ಮನೋನಿಯಂತ್ರಣ, ಸ್ವಂತ ಅನುಭವದಿಂದ ಕಂಡುಕೊಂಡದ್ದನ್ನೇ ತರ್ಕದ ಆಧಾರದಿಂದ ವಿದ್ವಾಂಸರಲ್ಲಿ ಸಾಧಿಸುವದು ನಮ್ಮ ಪರಂಪರೆ. ಬ್ರಹ್ಮ ಅಥವಾ ಆತ್ಮನಲ್ಲಿ ಒಂದು ಗುಣವನ್ನು ಆರೋಪಿಸಿ, ಅದನ್ನು ವರ್ಣಿಸಿ ನಂತರ ಆ ಗುಣವನ್ನೂ ತೆಗೆದುಹಾಕುವದು ವೇದಾಂತಗಳು ಅನುಸರಿಸುವ ವಿಶೇಷ ತರ್ಕದ ವಿಧಾನ. ಹೀಗಾಗಿ ಒಂದೇ ಬ್ರಹ್ಮವನ್ನೇ ಬೇರೆ ಬೇರೆ ಗುಣಗಳ ಕನ್ನಡಕವನ್ನು ಹಾಕಿ ವರ್ಣಿಸಿರುವದರಿಂದ ನಮ್ಮಲ್ಲಿ ಅನೇಕ ಶಾಸ್ತ್ರಗಳಿವೆ. ಅನೇಕ ಮೂರ್ತಿಗಳಿವೆ. ಅನೇಕ ಕಥೆಗಳಿವೆ ಮತ್ತು ಅನೇಕ ಆಚರಣೆಗಳಿವೆ. ಹೀಗೆ ಭಾರತೀಯ ದರ್ಶನಗಳು ಕೇವಲ ಒಂದು ನಂಬಿಕೆ ಅಥವಾ ಒಂದು ಪುಸ್ತಕದ ಆಧಾರವಾಗಿರದೇ ಸ್ವಂತ ಅನುಭವವನ್ನು ಆಶ್ರಯಿಸಿ ನಿಂತಿದೆ. ದೇವನೊಬ್ಬ ನಾಮ ಹಲವು ಎಂಬುದು ನಮ್ಮಲ್ಲಿ ಅನುಭವದ ಮಾತೇ ಹೊರತು ಪುಸ್ತಕದ ವಾಕ್ಯವಲ್ಲ. ಭಕ್ತಿ ಜ್ಞಾನದಿಂದಲೇ ಮೋಕ್ಷ ಎಂಬುದೇ ಸತ್ಯವಾದರೂ, ತನ್ನ ಜ್ಞಾನವನ್ನು ತರ್ಕದ ಅಗ್ನಿ ಪರೀಕ್ಷೆಗೆ ಒಡ್ಡಿ ತನ್ನ ಜ್ಞಾನವನ್ನು ವಿದ್ವನ್ಮಂಡಲಿಯಲ್ಲಿ ಸಾಧಿಸಿ ನಂತರ ಅದನ್ನು ಸಾರುವದು ನಮ್ಮ ಪರಂಪರೆ. ತರ್ಕದಿಂದ ಅನುಭವ ಸಿಗುವದಿಲ್ಲವಾದರೂ, ಒಬ್ಬನ ಅನುಭವವನ್ನು ಪರಾಮರ್ಶಿಸಿ, ಆತನ ವಾಕ್ಯಗಳು ಸತ್ಯವೇ ಎಂಬುದನ್ನು ಮನಗಾಣುವಲ್ಲಿ ತರ್ಕ ಬೇಕೇ ಬೇಕು.

3 ಟಿಪ್ಪಣಿಗಳು Post a comment
 1. vasu
  ಜೂನ್ 19 2015

  ಆತ್ಮನು ಜಗತ್ತಿಗೆ ಉಪಾದಾನ ಕಾರಣವೂ ಅಲ್ಲ. ನೈಮಿತ್ತಿಕ ಕಾರಣವೂ ಅಲ್ಲ. ನಮ್ಮ ನಡುವೆ ಪ್ರಕೃತಿ ಇದೆ [ primordial matter] ಇದೆ. ಇದೇ ಜಗತ್ತಿನ ಉಪಾದಾನ ಕಾರಣ. ಮಡಿಕೆಗೆ ಮಣ್ನಿನಂತೆ ಇದೆ. ಕಾಲ,ಇತ್ಯಾದಿ ಸಾಧಾರಣ ಕಾರಣಗಳು. ಈ ಕಾರಣವನ್ನು ಉಪಯೋಗಿಸಿಕೊಂಡು ಈಶ್ವರನು ಸೃಷ್ಟಿ ಕಾರ್ಯ ಮಾಡುತ್ತಾನೆ. ಕೇವಲ ಅಭಾವದಿಂದ ಸೃಷ್ಟಿಯಾಗದು. ಅಭಾವದಿಂದ ಭಾವವಿಲ್ಲ. ಸೆಮಟಿಕ್ ಮತಗಳು ಅಭಾವದಿಂದ ಸೃಷ್ಟಿಯಾಗಿದೆ ಎಂಬ ಅತಾರ್ಕಿಕ ನಿಲುವ ತಾಳಿವೆ. ಈಶ್ವರನು ಸರ್ವಶಕ್ತನು ಎಂದರೆ ಅವನು ಎಲ್ಲವನ್ನೂ ಮಾಡಬಲ್ಲ ಎಂದಲ್ಲ. ಸರ್ವಶಕ್ತನಾಗಿ ಅವನು ಮತ್ತೊಬ್ಬ ಈಶ್ವರನನ್ನು ಸೃಷ್ಟಿಸಬಲ್ಲನೇ? ಸರ್ವಶಕ್ತನೆಂದು ಅವನು ತನ್ನನ್ನು ಕೊಂದು ಕೊಳ್ಲಬಲ್ಲನೇ? ಎಂದರೆ ಯಾರ ಸಹಾಯವನ್ನು ಪಡೆಯದೆ, ಪ್ರಕೃತಿಯೆಂಬ ಉಪಾದಾನದಿಂದ ಅವನು ಈ ಜಗತ್ತನ್ನು ಸೃಷ್ಟಿಸಿದ್ದಾನೆ. ಅವನು ಈ ಜಗತ್ತಿಗೆ ನಿಮಿತ್ತ ಕಾರಣ. ಜಗತ್ತು ಹುಟ್ಟಿದ್ದು ಏಕೆ? ಈಶ್ವರನು ಈ ಜಗತ್ತನ್ನು ಎಕೆ ಸೃಷ್ಟಿ ಮಾಡಿದ? ಈ ವಿಷಯವನ್ನು ಪ್ರಸ್ತಾವಿಸುತ್ತಾ ಸ್ವಾಮಿ ದಯಾನಂದರು ತಮ್ಮ ಻ಅಮೋಘ ಕೃತಿ ಸತ್ಯಾರ್ಥ ಪ್ರಕಾಶದಲ್ಲಿ ಹೇಳುತ್ತಾರೆ. ಕಣ್ಣಿನ ಕೆಲಸ ನೋಡುವುದು. ಹಾಗೆಯೇ ಪ್ರತಿಯೊಬ್ಬ ಜೀವಿಯು ಸುಖ ಸಂತೋಷ ದಿಂದಿರಲು ಅವನಿಗಾಗಿ ಈ ಸೃಷ್ಟಿಯಾಗಿದೆಯೇ ಹೊರತು ಸ್ವತಃ ಈಶ್ವರಿನಿಗಲ್ಲ. ಪರಮಾತ್ಮನ ಪರೋಪಕಾರಿ ಗುಣ ಈ ಸೃಷ್ಟಿಯಿಂದ ವೈಕ್ತವಾಗುತ್ತದೆ ಎಂದು ಸ್ಪಷ್ಟ ಪಡಿಸಿದ್ದಾರೆ. ಜಗತ್ತಿನ ಉತ್ಪತ್ತಿ ಕುರಿತು ಲೇಖಕರು ಒಮ್ಮೆ ಯಾದರೂ ಸತ್ಯಾರ್ಥ ಪ್ರಕಾಶವನ್ನು ಓದಿದರೆ ವೇದಗಳ ನಿಲುವು ಈ ಸಂದರ್ಭದಲ್ಲಿ ಏನು ಎಂಬುದು ತಿಳಿಯುತ್ತದೆ.

  ಉತ್ತರ
 2. vinayakhampiholi
  ಜೂನ್ 23 2015

  ಆಗಲಿ, ಮೂಲ ಪ್ರಕೃತಿಯಿಂದ ಇವೆಲ್ಲವೂ ಸೃಷ್ಟಿಯಾಗಿವೆ ಎಂದೇ ಇಟ್ಟುಕೊಳ್ಳೋಣ. ಆದರೆ ಆ ಮೂಲಪ್ರಕೃತಿಯು ಸೃಷ್ಟಿಸಲ್ಪಟ್ಟಿದ್ದೇ ಅಥವಾ ಅದೂ ಸರ್ವಶಕ್ತನಂತೆ ಅನಾದಿ ಅನಂತವೇ? ಭಗವಂತನಿಂದ ಸೃಷ್ಟಿಸಲಾಗದ ಅಥವಾ ನಾಶಮಾಡಲಾಗದ ಪ್ರಕೃತಿಯೊಂದಿದೆ ಎಂದಾದಲ್ಲಿ ಸರ್ವಶಕ್ತ ಎಂಬುದನ್ನು ಹೇಗೆ ವ್ಯಾಖ್ಯಾನಿಸಬಹುದು?

  ಉತ್ತರ
 3. vasu
  ಜೂನ್ 26 2015

  ಜಗತ್ತಿನಲ್ಲಿ ಮೂರು ಅನಾದಿ, ಅವಿನಾಶಿ ತತ್ವಗಳಿವೆ. ಒಂದು ಪರಮಾತ್ಮ. ಎರಡನೆಯದು ಆತ್ಮ ಮತ್ತು ಮೂರನೇಯದು ಪ್ರಕೃತಿ. ಇದು ವೇದಗಳು ಹೇಳುವ ವಿಚಾರ. ಇನ್ನು ಪರಮಾತ್ಮ ಪ್ರಕೃತಿಯನ್ನು ಸೃಷ್ಟಿಸಿಲ್ಲ ಹಾಗಾದರೆ ಅವನು ಸರ್ವಶಕ್ತ ಹೇಗೆ ? ಎಂಬ ಮಾತಿಗೆ ಸರ್ವಶಕ್ತ ಎಂದರೇನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ದೇವರು ಸರ್ವಶಕ್ತ ನಾದುದರಿಂದ ಅವನು ತಾನೇ ಎತ್ತಿ ಹಿಡಿಯಲಾರದ ವಸ್ತುವನ್ನು ರಚಿಸಬಲ್ಲನೇ ಎಂದು ಪ್ರಶ್ನಿಸಬೇಕಾಗಿದೆ. ಹೌದು ರಚಿಸಬಲ್ಲ ಎಂದು ನೀವು ಹೇಳಿದರೆ ಅವನು ಆ ವಸ್ತುವನ್ನು ಎತ್ತಿ ಹಿಡಿಯಲಾರ. ಹೀಗೆ ಅವನ ಸರ್ವಶಕ್ತಿತ್ವ ಕುಂಠಿತವಾಯಿತು. ಎಂದು ಒಪ್ಪಬೇಕಾಗುತ್ತದೆ. ರಚಿಸಲಾರ ಎಂದರಂತೂ ಅವನ ಸರ್ವಶಕ್ತಿತ್ವಕ್ಕೆ ಚ್ಯುತಿ ಸ್ಪಷ್ಟ. ಆದುದರಿಂದ ಬೇರೆಯವರ ಸಹಾಯವಿಲ್ಲದೆ ತನ್ನ ಗುಣ ಕರ್ಮ ಮತ್ತು ಸ್ವಭಾವಕ್ಕನುಸಾರವಾಗಿ ಸೃಷ್ಟಿ ಸ್ಥಿತಿ ಮತ್ತು ಲಯಗಳನ್ನು ಪ್ರವಾಹರೂಪದಲ್ಲಿ ಮಾಡುತ್ತಾ ಹೋಗುವುದೇ ಸರ್ವಶಕ್ತಿ.ಮಾನ್ ಎಂಬ ಪದದ ಅರ್ಥ.
  ಸತ್ಯಾರ್ಥ ಪ್ರಕಾಶದಲ್ಲಿ ಸ್ವಾಮಿ ದಯಾನಂದರು ಪರಮಾತ್ಮನು ಎಲ್ಲವನ್ನೂ ಮಾಡಬಲ್ಲ ಸಾಮರ್ಥ್ಯವಿದೆ ಎಂಬ ಪ್ರಶ್ನೆಗ ಉತ್ತರಿಸುತ್ತಾ ಹೀಗೆ ಹೇಳಿದ್ದಾರೆ.
  “ಈಶ್ವರನು ತನ್ನನ್ನೇ ಕೊಂದುಕೊಂಡು ಅನೇಕ ಈಶ್ವರರನ್ನು ಸೃಜಿಸಿ ಸ್ವತಃ ಅವಿದ್ಯಾಂಸನಾಗಿ, ಚೌರ್ಯ ಮೊದಲಾರ ಪಾಪ ಕರ್ಮಗಳನ್ನು ಮಾಡಿ ಮತ್ತು ದುಃಖಿಯೂ ಕೂಡ ಅಗಬಲ್ಲನೇ ಎಂದು ನಾವು ಪ್ರಶ್ನಿಸುತ್ತೇವೆ. ಹೇಗೆ ಈ ಕಾರ್ಯಗಳು ಈಶ್ವರನ ಗುಣ- ಕರ್ಮ- ಸ್ಬಭಾವಕ್ಕೆ ವಿರುದ್ಧ ವಾಗಿದೆಯೋ ಹಾಗೆಯೇ ” ಅವನು ಎಲ್ಲವನ್ನೂ ಮಾಡಬಲ್ಲನು” ಎಂಬ ನಿಮ್ಮ ಕಥನವಿದೆಯೋ ಅದು ಎಂದಿಗೂ ಅನ್ವಯಿಸಲಾರದು. ಆದುದರಿಂದ ಸರ್ವಶಕ್ತಿಮಾನ್ ಎಂಬ ಶಬ್ಧಕ್ಕೆ ತನ್ನ ಕಾರ್ಯಗಳನ್ನು ಯಾರಿಂದಲೂ ಸಹಾಯ ಪಡೆಯದೆ ಮಾಡುವವನು ಎಂಬರ್ಥ ಎಂದಾಗುತ್ತದೆ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments