ನ್ಯಾಯಕ್ಕಾಗಿ ಶೋಷಿತ ಯುವಕನ ಜೀವಪರ ಹೋರಾಟ
– ಪ್ರವೀಣ್ ಕುಮಾರ್ ಮಾವಿನಕಾಡು
ಬೆಂಗಳೂರು: ಕೇವಲ ಭಯೋತ್ಪಾದಕ ಎನ್ನುವ ಕ್ಷುಲ್ಲಕ ಕಾರಣಕ್ಕಾಗಿ ಯುವಕನೋರ್ವನಿಗೆ ಮನೆಯನ್ನು ಬಾಡಿಗೆಗೆ ನೀಡುವುದಿಲ್ಲ ಎಂದು ನಿರಾಕರಿಸಿದ ಘಟನೆ ಬೆಂಗಳೂರಿನಿಂದ ವರದಿಯಾಗಿದೆ.ಹೈದರಾಬಾದ್ ಮೂಲದ ಮನೋಜ್ ಕುಮಾರ್(ಹೆಸರು ಮತ್ತು ಧರ್ಮ ಬದಲಿಸಿದೆ) ಎನ್ನುವ ಯುವಕ ತಾನು ಗೆರೆ ನಗರದ ಮನೆಯ ಮಾಲೀಕರೊಬ್ಬರ ಬಳಿ ಬಾಡಿಗೆಗೆ ಮನೆ ಬೇಕೆಂದು ಕೇಳಿದಾಗ ಅವರು ಕೆಲವಾರು ಭಯೋತ್ಪಾದನೆ ಪ್ರಕರಣಗಳಲ್ಲಿ ಆರೋಪಿಯಾಗಿರುವ (ಕೇವಲ ಆರೋಪಿಯಾಗಿರುವ) ನನ್ನನ್ನು ಗುರುತಿಸಿದರು ಮತ್ತು ನಾವು ನಿಮ್ಮಂತವರಿಗೆ ಮನೆ ನೀಡುವುದಿಲ್ಲ ಹೇಳಿ ಬಾಗಿಲು ಮುಚ್ಚಿಕೊಂಡರು ಎಂದು ಆರೋಪಿಸಿದ್ದಾನೆ.
ಇಂತಹಾ ಘಟನೆ ರಾಜ್ಯದಲ್ಲಿ ಜಾತ್ಯತೀತ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ನಡೆದಿದ್ದು ದೇಶದಾದ್ಯಂತ ತೀವ್ರ ಸಂಚಲನ ಉಂಟುಮಾಡಿದೆ.
ನಿಜಕ್ಕೂ ಇದೊಂದು ದುರದೃಷ್ಟಕರ ಘಟನೆ ಎಂದು ಪ್ರತಿಕ್ರಿಯಿಸಿದ ಗೃಹ ಸಚಿವರು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಮೂರು ದಿನಗಳ ಒಳಗಾಗಿ ತನಗೆ ವರದಿ ನೀಡುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು,ತಪ್ಪಿತಸ್ತರು ಎಷ್ಟೇ ದೊಡ್ದವರಾಗಿದ್ದರೂ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ನಡುವೆ ಘಟನೆಯು ದೇಶದಾದ್ಯಂತ ಚರ್ಚೆಗೊಳಗಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಹೈಕಮಾಂಡ್, ಮುಖ್ಯಮಂತ್ರಿಯವರಿಗೆ ದೆಹಲಿಗೆ ಬರುವಂತೆ ಬುಲಾವ್ ನೀಡಿದೆ. ಹೀಗಾಗಿ ಮುಖ್ಯಮಂತ್ರಿಗಳು ನಾಳೆ ದೆಹಲಿಗೆ ಹಾರಲಿದ್ದಾರೆ.ಈಗಾಗಲೇ ಪಕ್ಷದ ಅಧಿನಾಯಕಿಯವರ ರಾಜಕೀಯ ಕಾರ್ಯದರ್ಶಿ ಪ.ಡೀಲ್ ಅವರು ಮುಖ್ಯಮಂತ್ರಿಗಳೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿ ಪ್ರಕರಣದ ಬಗ್ಗೆ ಮತ್ತು ತೆಗೆದುಕೊಂಡ ಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಈ ಮಾತುಕತೆಯ ವೇಳೆ ಆತನಿಗೆ ಬೇಕಾದ ವಸತಿ ಸೌಲಭ್ಯವನ್ನು ಸರ್ಕಾರದ ವತಿಯಿಂದಲೇ ಶಾಶ್ವವತವಾಗಿ ಒದಗಿಸಿಕೊಡಲು ಸಿದ್ದ ಎಂದು ಮಾನ್ಯ ಮುಖ್ಯಮಂತ್ರಿಗಳು ಹೈಕಮಾಂಡ್ ಗೆ ಭರವಸೆ ನೀಡಿದ್ದಾರೆ.ಇಷ್ಟೇ ಅಲ್ಲದೆ ಸರ್ಕಾರದ ಯಾವುದಾದರೂ ಭಾಗ್ಯ ಸ್ಕೀಮ್ ನಡಿಯಲ್ಲಿ ಆತನಿಗೆ ಮನೆ ಕೊಡಿಸುವುದರ ಜೊತೆಗೆ ಮದುವೆ ಮಾಡಿಸಲು ಮತ್ತು ಮನೆಗೆ ಬೇಕಾದ ಸಾಮಗ್ರಿಗಳನ್ನು ನೀಡಲು ಸಾಧ್ಯವೇ ಎನ್ನುವುದನ್ನೂ ಸಹಾ ಪರಿಶೀಲಿಸುತ್ತಿರುವುದಾಗಿ ತಿಳಿಸಿದ್ದಾರೆ ಎಂದು ಅನಧಿಕೃತ ಮೂಲಗಳಿಂದ ತಿಳಿದುಬಂದಿದೆ.ಕೇಂದ್ರ ಮಾನವರ ಹಕ್ಕುಗಳ ಸುರಕ್ಷಾ ಸಮಿತಿಯೂ ಸಹಾ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು ಈಗಾಗಲೇ ಮನೆಯ ಮಾಲೀಕನಿಗೆ ಕಾರಣ ಕೇಳಿ ನೋಟೀಸ್ ಕಳಿಸಿರುವುದಾಗಿ ತಿಳಿದುಬಂದಿದೆ.
ಇಂದು ಬೆಳಿಗ್ಗೆ ಈ ದುರ್ಘಟನೆಯನ್ನು ವಿರೋಧಿಸಿ ನಗರದ ಟೋನ್ ಹಾಲ್ ಬಳಿ ಮಾನವ ಹಕ್ಕುಗಳ ಕಾರ್ಯಕರ್ತರು ಹತ್ತಿಪ್ಪತ್ತು ಸಂಖ್ಯೆಯಲ್ಲಿ ಸೇರಿ ಬೃಹತ್ ಮಾನವ ಸರಪಳಿ ನಿರ್ಮಿಸಿ ತಮ್ಮ ಪ್ರತಿಭಟನೆಯನ್ನು ದಾಖಲಿಸಿದರು.ಮನೆ ಮಾಲೀಕನ ನಿಲುವಿಗೆ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.ನಿಮಗೆ ಇಷ್ಟವಿದ್ದರೆ ಆತನಿಗೆ ಮನೆಯನ್ನು ಕೊಡಿ.ಇಲ್ಲದಿದ್ದರೆ ನೀವೇ ಇಟ್ಟುಕೊಳ್ಳಿ.ಆದರೆ ಕೇವಲ ಭಯೋತ್ಪಾದಕ ಸಂಘಟನೆಗೆ ಸೇರಿದವನೆಂಬ ಒಂದೇ ಕಾರಣಕ್ಕಾಗಿ ಈ ರೀತಿ ತಿರಸ್ಕರಿಸುವುದು ಸರಿಯಲ್ಲ ಎಂದು ಅನೇಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈ ನಡುವೆ ಈ ಘಟನೆಯು ಟ್ವಿಟ್ಟರ್’ನಲ್ಲಿ ದೊಡ್ಡ ಅಲೆಯನ್ನೇ ಎಬ್ಬಿಸಿದ್ದು #Nohouseforterrorist ಎಂಬುದು ಟ್ವಿಟ್ಟರ್ ನಲ್ಲಿ ಟಾಪ್ ಟ್ರೆಂಡ್ ಆಗಿದೆ.
ಇದೆಲ್ಲದರ ನಡುವೆ ಪ್ರಧಾನಿಯವರಿಗೆ ಪತ್ರ ಬರೆದಿರುವ ಆ ಯುವಕ ನೀವು ದೇಶದಲ್ಲಿ ಸರ್ವರನ್ನೂ ಒಳಗೊಂಡ ಸಮಗ್ರ ಅಭಿವೃದ್ಧಿ ಬಗ್ಗೆ ಮಾತನಾಡುತ್ತೀರಿ,ಆದರೆ ಇಲ್ಲಿ ನಾನು ಕೇವಲ ಭಯೋತ್ಪಾದಕ ಎನ್ನುವ ಕಾರಣಕ್ಕಾಗಿ ಮನೆ ಬಾಡಿಗೆಗೆ ಕೊಡಲು ನಿರಾಕರಿಸಿದ್ದಾರೆ.ಈ ಬಗ್ಗೆ ನೀವು ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದಾನೆ.
ಕಳೆದ ತಿಂಗಳು ಪಕ್ಕದ ರಾಜ್ಯದ ವಿಮಾನ ನಿಲ್ದಾಣವೊಂದರಲ್ಲಿ ಕೇವಲ 2 K.G .ಮಾದಕವಸ್ತು ಕೆಟಾಮಿನ್ ಅನ್ನು ಒಯ್ಯುತ್ತಿದ್ದಾನೆಂಬ ಏಕೈಕ ಕಾರಣಕ್ಕಾಗಿ ಯುವಕನೊಬ್ಬನಿಗೆ ವಿಮಾನವೇರಲು ನಿರಾಕರಿಸಿದ್ದು ಇದೇ ರೀತಿ ವ್ಯಾಪಕ ವಿವಾದಕ್ಕೆ ಕಾರಣವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.ಕೇಂದ್ರದಲ್ಲಿ ಸರ್ಕಾರ ಬದಲಾದ ನಂತರ ದೇಶದಲ್ಲಿ ಪದೇ ಪದೇ ಇಂತಹಾ ಘಟನೆಗಳು ಹೆಚ್ಚಾಗುತ್ತಿವೆ ಎಂದು ಪ್ರಗತಿಪರರು,ಬುದ್ಧಿಜೀವಿಗಳೂ ಸೇರಿದಂತೆ ಎಡಪಕ್ಷಗಳು ಮತ್ತು ಕೆಲ ಮಾಧ್ಯಮಗಳೂ ಸಹಾ ಆತಂಕ ವ್ಯಕ್ತಪಡಿಸಿವೆ.
#ಸುಳ್ಸುದ್ದಿ
*ವಿ.ಸೂ:ಈ ಸುದ್ದಿಯು ಕೇವಲ ಸುಳ್ಸುದ್ದಿ ಹಾಗೂ ಕಾಲ್ಪನಿಕವಾಗಿದ್ದು ಮೇಲೆ ಹೆಸರಿಸಿದ ಆಯಾ ಪಕ್ಷ,ವ್ಯಕ್ತಿ,ಸಂಸ್ಥೆ,ಸಂಘಟನೆಗಳ ಇದುವರೆಗಿನ ನಡವಳಿಕೆಗಳನ್ನಾಧರಿಸಿ ಕಲ್ಪಿಸಿಕೊಂಡಿದ್ದಾಗಿರುತ್ತದೆ.ಈ ಸುದ್ದಿಯು ಕೇವಲ ಮನರಂಜನೆಗಾಗಿ.
ಹ್ಹೆ ಹ್ಹೆ ಹ್ಹೆ! ನಿಮ್ಮ “ವಿ.ಸೂ” ಓದುವ ತನಕ ನೈಜವಾದ ಸುದ್ದಿಯೆಂದೆ ತಿಳಿದಿದ್ದೆ…! ಭಲೇ #ಸುಳ್ಸುದ್ದಿ… ಭೇಷ್ xD