ವಿಷಯದ ವಿವರಗಳಿಗೆ ದಾಟಿರಿ

ಜೂನ್ 25, 2015

3

ಮೂಢನಂಬಿಕೆ ನಿಷೇಧ ಕಾಯ್ದೆ ಮಂಡನೆಗೆ ಆಷಾಢಮಾಸ ಅಡ್ಡಿ!

‍ನಿಲುಮೆ ಮೂಲಕ

– ಪ್ರವೀಣ್ ಕುಮಾರ್ ಮಾವಿನಕಾಡು

Sulsuddi - Moudya Virodhi Kaaydeಆಷಾಢಮಾಸ ಯಾವುದೇ ಶುಭ ಕಾರ್ಯಗಳಿಗೆ ಸೂಕ್ತವಲ್ಲ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ “ಮೂಢನಂಬಿಕೆ ಆಚರಣೆ ಪ್ರತಿಬಂಧಕ ವಿಧೇಯಕ”ವನ್ನು ಬರಲಿರುವ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸದಿರಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.ಈ ವಿಧೇಯಕವನ್ನು ಬರಲಿರುವ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸುವ ಕುರಿತಂತೆ ಮೂಢ ನಂಬಿಕೆ ವಿರೋಧೀ ಹೋರಾಟ ಸಮಿತಿಯ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಮಾತನಾಡುತ್ತಾ ಮಾನ್ಯ ಮುಖ್ಯಮಂತ್ರಿಗಳು ಈ ವಿಷಯ ತಿಳಿಸಿದರು.ಇದೇ ಸಂಧರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು,ತಾವು ಈಗಾಗಲೇ ನಗರದ ಲಾಡ್ಜ್ ಒಂದರಲ್ಲಿ ವಾಸ್ತವ್ಯ ಹೂಡಿರುವ ಖ್ಯಾತ ಜ್ಯೋತಿಷಿಯೊಬ್ಬರನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸಿದ್ದು ಅವರೂ ಸಹ ಈ ಬಾರಿ ಅಧಿಕ ಆಷಾಢ ಬಂದಿರುವುದರಿಂದ ವಿಧೇಯಕ ಮಂಡನೆ ಬೇಡ ಎಂದು ತಮಗೆ ಸಲಹೆ ನೀಡಿದ್ದಾರೆ ಎಂದು ತಿಳಿಸಿದರು.ಅಲ್ಲದೇ ಹಾಗೊಂದು ವೇಳೆ ಆಷಾಢದಲ್ಲೇ ವಿಧೇಯಕ ಮಂಡಿಸಿದರೆ ತಮ್ಮ ಸ್ಥಾನಕ್ಕೆ ಕುತ್ತು ಬರಲಿದೆ ಮತ್ತು ರಾಜ್ಯದಲ್ಲಿ ದಲಿತರೊಬ್ಬರು ಮುಖ್ಯಮಂತ್ರಿಗಳಾಗುವ ಸಂಭವವಿದೆ.ಹಾಗೇನಾದರೂ ಆದಲ್ಲಿ ತಾವು ಮುಖ್ಯಮಂತ್ರಿ ಹುದ್ದೆಗಾಗಿ ಪಕ್ಷಾಂತರ ಮಾಡಿ,ಹಲವು ವರ್ಗಗಳನ್ನು ಸಮಾಜದ ಮುಖ್ಯ ವಾಹಿನಿಯಿಂದ ಬೇರ್ಪಡಿಸಿ,ಇದುವರೆಗೆ ಮಾಡಿದ ರಾಜಕೀಯವೆಲ್ಲವೂ ವ್ಯರ್ಥವಾಗಲಿದೆ ಎಂದು ಎಚ್ಚರಿಸಿದ್ದಾರೆ. ಹಾಗಾಗಿ ಸಧ್ಯಕ್ಕೆ ಈ ವಿಧೇಯಕವನ್ನು ಮಂಡಿಸದಿರಲು ನಿರ್ಧರಿಸಿರುವುದಾಗಿ ತಿಳಿಸಿದರು.

ಮುಖ್ಯಮಂತ್ರಿಗಳ ಈ ಹೇಳಿಕೆಯಿಂದ ಸಿಡಿ’ಮಿಡಿ’ಗೊಂಡ ಪರಗತಿಪರ ಸ್ವಾಮಿಗಳೊಬ್ಬರು,ಈ ದಿನ ನಾವು ಮನೆಯಿಂದ ಹೊರಟಾಗಲೇ ನಮ್ಮ ಕಾರಿಗೆ ಕಪ್ಪು ಬೆಕ್ಕೊಂದು ಅಡ್ಡ ಹೋಯಿತು.ಆಗಲೇ ನಾವು ಇವತ್ತಿನ ನಮ್ಮ ಕಾರ್ಯವೆಲ್ಲವೂ ವಿಫಲವಾಗುವುದು ಎಂದು ಯೋಚಿಸಿದ್ದೆವು.ಕಡೆಗೂ ಅದು ನಾವಂದುಕೊಂಡಂತೆಯೇ ಆಯಿತು ಎಂದು ಬೇಸರ ವ್ಯಕ್ತಪಡಿಸಿ ಉತ್ತರ ದಿಕ್ಕಿನ ದ್ವಾರದ ಮೂಲಕ ಸಭಾತ್ಯಾಗ ಮಾಡಿದರು.

ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಾನ್ಯ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರು,ಮೂಢನಂಬಿಕೆ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ಸದಸ್ಯರು ಅನಗತ್ಯ ಗೊಂದಲ ಸೃಷ್ಠಿಸುತ್ತಿದ್ದಾರೆ ಎಂದು ಸಭೆಗೆ ತಿಳಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಸಮಿತಿಯ ಸದಸ್ಯರೂ ಆದ ಕ್ಯಾತೆ ಪತ್ರಕರ್ತೆಯೊಬ್ಬರು,ನಾನು ಇತ್ತೀಚಿಗೆ ನನ್ನ ಕೆಲವು ಕಮ್ಮಿನಿಷ್ಟ ಸ್ನೇಹಿತರನ್ನು ಭೇಟಿಯಾಗಲು ಬಂಗಾಳಕ್ಕೆ ಭೇಟಿ ನೀಡಿದಾಗ ಅಲ್ಲಿ ಒಬ್ಬ ಪ್ರಖ್ಯಾತ ವಶೀಕರಣ ತಜ್ಞರೊಬ್ಬರ ಪರಿಚಯವಾಗಿದೆ.ವಿರೋಧ ಪಕ್ಷಗಳ ಸದಸ್ಯರನ್ನು ವಶೀಕರಣ ಮಾಡಿಕೊಳ್ಳಲು ಆ ಮಾಂತ್ರಿಕರ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ.ಇದಕ್ಕಾಗಿ ಸುಮಾರು ಒಂದೂವರೆ ಕೋಟಿ ವೆಚ್ಚ ಭರಿಸಬೇಕಾಗಬಹುದು.ಸರ್ಕಾರ ಬಯಸಿದಲ್ಲಿ ತಾನು ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಭರವಸೆ ನೀಡಿದರು.ಆದರೆ ಪತ್ರಕರ್ತೆಯ ಈ ಸಲಹೆಯನ್ನು ಒಪ್ಪಲು ನಿರಾಕರಿಸಿದ ಮುಖ್ಯಮಂತ್ರಿಗಳು,ಅಂತಹಾ ವಶೀಕರಣ ಸ್ಪೆಷಲಿಸ್ಟ್ ಗಳು ನಮ್ಮ ಸೊಳ್ಳೆಗಾಲದಲ್ಲಿಯೇ ಬೇಕಾದಷ್ಟು ಜನರಿದ್ದು ಅವರುಗಳು ಕೇವಲ ಐದಾರು ಸಾವಿರ ರೂ.ಗಳಿಗೆ ವಶೀಕರಣ ಮಾಡಿಕೊಡುತ್ತಾರೆ.ಆದ್ದರಿಂದ ಅಂಥವರನ್ನು ಹೊರ ರಾಜ್ಯಗಳಿಂದ ಕರೆಸಿ ಸಮಾಜವಾದೀ ಸಿದ್ಧಾಂತದಿಂದ ಮೇಲಕ್ಕೆ ಬಂದ ನಾವುಗಳೇ ದುಂದು ವೆಚ್ಚಕ್ಕೆ ಆಸ್ಪದ ನೀಡುವುದು ಬೇಡ ಎಂದರು.

ನಂತರ ಮಾತನಾಡಿದ ಕ್ಯಾತೆ ವಿಚಾರವಾದಿಗಳೂ,ಅರೆಕಾಲಿಕ ವಿಜ್ಞಾನಿಗಳೂ ಆದ ಸಮಿತಿಯ ಸದಸ್ಯರೊಬ್ಬರು ಮುಖ್ಯಮಂತ್ರಿಗಳು ಪ್ರಯಾಣಿಸುವ ಹೆಲಿಕಾಪ್ಟರ್ ನಲ್ಲಿ ಪದೇ ಪದೇ ತಾಂತ್ರಿಕ ದೋಷ ಕಂಡುಬರುತ್ತಿರುವುದರ ಬಗ್ಗೆ ತಮ್ಮ ತೀವ್ರ ಆತಂಕ ವ್ಯಕ್ತಪಡಿಸಿದರು.ತಮ್ಮ ಕಛೇರಿಯ ಎರಡು ಕೋಣೆಗಳ ನಡುವೆ ಇರುವ ಗೋಡೆಯನ್ನು ಸರಕಾರೀ ಖರ್ಚಿನಲ್ಲಿ ಕೆಡವಿ ಮುಖ್ಯ ದ್ವಾರವನ್ನು ಪೂರ್ವ ದಿಕ್ಕಿಗೆ ಬದಲಾಯಿಸಿದರೆ ಇಂತಹಾ ದೋಷಗಳು ಪರಿಹಾರವಾಗುತ್ತವೆ.ಈಗಾಗಲೇ ನಿಮ್ಮದೇ ಸಂಪುಟದ ಕೆಲವು ಸಹೋದ್ಯೋಗಿಗಳು ಇದನ್ನು ಮಾಡಿ ತಮ್ಮ ಸಣ್ಣ ಪುಟ್ಟ ದೋಷಗಳನ್ನು ಪರಿಹರಿಸಿಕೊಂಡು ನೆಮ್ಮದಿಯನ್ನು ಕಂಡುಕೊಂಡಿದ್ದು ಈ ನಾಡಿನ ಸಕಲ ಸೌ”ಭಾಗ್ಯ”ಕ್ಕಾಗಿ ತಾವೂ ಸಹಾ ಇದನ್ನು ಮಾಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಕೇಳಿಕೊಂಡರು.

ಇದೇ ಸಮಯದಲ್ಲಿ ಸಭಾಂಗಣದ ಗೋಡೆಯ ಮೇಲೆ ಹಲ್ಲಿಯೊಂದು ಲೊಚಗುಟ್ಟಿದ್ದನ್ನು ಕೇಳಿಸಿಕೊಂಡ ಸಭೆ ಮುಖ್ಯಮಂತ್ರಿಗಳು ಹೇಳಿದಂತೆ ಮಸೂದೆಯನ್ನು ಆಷಾಢ ಕಳೆದ ನಂತರವೇ ಮಂಡಿಸುವುದು ಸೂಕ್ತ ಎಂಬ ಸರ್ವಾನುಮತದ ನಿರ್ಣಯವನ್ನು ಕೈಗೊಂಡಿತು.

ಸಭೆಯ ನಂತರ ಮಾನ್ಯ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರು ಬುದ್ಧಿಜೀವಿಗಳೊಂದಿಗೆ ಅನೌಪಚಾರಿಕವಾಗಿ ಮಾತನಾಡುತ್ತಾ,ಈ ರಾಜ್ಯದಲ್ಲಿ ಮುಜರಾಯಿ ಇಲಾಖೆ ಹೊಂದಿರುವ ಯಾವುದೇ ಮಂತ್ರಿಗಳೂ ತಮ್ಮ ಅಧಿಕಾರಾವಧಿ ಪೂರ್ಣಗೊಳಿಸುವುದಿಲ್ಲ ಎಂಬ ನಂಬಿಕೆಯಿದೆ.ಅದಕ್ಕಾಗಿ ತಾವು ನನಗೆ ನೀಡಿದ ಮುಜರಾಯಿ ಇಲಾಖೆಯ ಹೆಚ್ಚುವರಿ ಹೊಣೆಯನ್ನು ಹಿಂಪಡೆಯಬೇಕೆಂದು ಹಲವು ಬಾರಿ ಮುಖ್ಯಮಂತ್ರಿಗಳಲ್ಲಿ ಕೇಳಿಕೊಂಡಿದ್ದು,ಅವರು ನನ್ನ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.

#ಸುಳ್ಸುದ್ದಿ

*ವಿ.ಸೂ:ಈ ಸುದ್ದಿಯು ಕೇವಲ ಸುಳ್ಸುದ್ದಿ ಹಾಗೂ ಕಾಲ್ಪನಿಕವಾಗಿದ್ದು ಮೇಲೆ ಹೆಸರಿಸಿದ ಆಯಾ ಪಕ್ಷ,ವ್ಯಕ್ತಿ,ಸಂಸ್ಥೆ,ಸಂಘಟನೆಗಳ ಇದುವರೆಗಿನ ನಡವಳಿಕೆಗಳನ್ನಾಧರಿಸಿ ಕಲ್ಪಿಸಿಕೊಂಡಿದ್ದಾಗಿರುತ್ತದೆ.ಈ ಸುದ್ದಿಯು ಕೇವಲ ಮನರಂಜನೆಗಾಗಿ ಮಾತ್ರ.

3 ಟಿಪ್ಪಣಿಗಳು Post a comment
 1. hemapathy
  ಜೂನ್ 25 2015

  ಆಷಾಢ ಮಾಸವೆಂಬುದೇ ಮೂಢಜನರ ಒಂದು ಮೂಢನಂಬಿಕೆ.

  ಉತ್ತರ
 2. ಸ್ಪಂದನ ರಾಮ್
  ಜೂನ್ 25 2015

  ಬೊಂಬಾಟ್ 😀 😀 😀

  ಉತ್ತರ
 3. ಜೂನ್ 26 2015

  ಅತ್ಯದ್ಭುತ ವಿಡಂಬನೆ

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments