ವಿಷಯದ ವಿವರಗಳಿಗೆ ದಾಟಿರಿ

ಜೂನ್ 27, 2015

1

ನಕಾರಾತ್ಮಕ ಸಾಮಾಜಿಕ ವಿಮರ್ಶಾ ಸಮೂಹ

‍ನಿಲುಮೆ ಮೂಲಕ

– ಡಾ.ಸಂಗಮೇಶ ಸವದತ್ತಿಮಠ

ನಕಾರಾತ್ಮಕಬೆಂಗಳೂರಿನಲ್ಲಿ ಸುಪ್ರೀಮ್‍ಕೋರ್ಟ ವಿಶ್ರಾಂತ ನ್ಯಾಯಮೂರ್ತಿ ಶ್ರೀ ಎಂ.ಎನ್.ವೆಂಕಟಾಚಲಯ್ಯ ಅವರು,ದಿನಾಂಕ 29-7-2012 ರಂದು ಮಾಜಿ ಕೇಂದ್ರ ಸಚಿವ ಹಾಗೂ ಪತ್ರಕರ್ತ ಅರುಣ ಶೌರಿ ಅವರ ನಾಲ್ಕು ಪುಸ್ತಕಗಳ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತ ಈಚೆಗೆ ನಮ್ಮ ದೇಶದಲ್ಲಿ `ನಕಾರಾತ್ಮಕ ಸಾಮಾಜಿಕ ವಿಮರ್ಶಾ ಸಮೂಹ’ದ (Negetive Social Critical mass) ಮಟ್ಟಕ್ಕೆ ನಾವು ಬಂದು ನಿಂತಿದ್ದೇವೆ ಎಂದು ಹೇಳಿದ್ದು ನಮ್ಮನ್ನು  ಯೋಚಿಸುವಂತೆ ಮಾಡಿದೆ. ಅವರು ಹೇಳಿದ ’Social Critical mass’, ಎಂಬುದು ಎಲ್ಲ ವಲಯಗಳಲ್ಲಿ ತನ್ನ ಕಬಂಧ ಬಾಹುಗಳನ್ನು ಹಬ್ಬಿಸುತ್ತಲಿದೆ. ಸಾಮಾಜಿಕ ಸಮೂಹ ಎಂಬುದು ಒಂದು ಜಾತಿ ಅಥವಾ ಒಂದು ಧರ್ಮ ಇಲ್ಲವೆ ರಾಜಕೀಯ ಪಕ್ಷದ ಒಬ್ಬ ಮುಖಂಡನ ಸುತ್ತ ಗಿರಕಿಹೊಡೆಯುತ್ತ ಇರುತ್ತದೆ. ಮುಖಂಡನು ತನ್ನ ಸುತ್ತಮುತ್ತಣದವರ ಸ್ವಾರ್ಥ ಲಾಲಸೆಗಳನ್ನು ಪೂರೈಸಲೋಸುಗ ಒಂದು ಅಥವಾ ಹಲವು ಸಮಾನ ಮನಸ್ಕ ಜನತಾಗುಂಪುಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುತ್ತಾನೆ. ಅಂಥ ಗುಂಪಿನ ಜನ ಹತ್ತಾರು ಸಾವಿರವಿದ್ದರೂ ಆಯಿತು, ಆತನು ಮೊದಲು ಕೈಹಾಕುವುದು ಆಡಳಿತದಲ್ಲಿದ್ದ ಸರ್ಕಾರದ ಕುತ್ತಿಗೆಗೆ. ನನಗೆ ಇಷ್ಟು ಜನಬೆಂಬಲವಿದೆ, ನಮ್ಮ ಸಮುದಾಯವನ್ನು ಸರ್ಕಾರ ನಿರ್ಲಕ್ಷಿಸಿದೆ. ಅದಕ್ಕೆ ಇಂತಿಂಥ ಸೌಲಭ್ಯಗಳು ನಮ್ಮವರಿಗೆ ಬೇಕು ಎಂದು ಒಂದು ದೊಡ್ಡ ಪಟ್ಟಿಯನ್ನು ಮುಂದಿಡುತ್ತಾನೆ. ಇಂಥ ಮುಖಂಡರು ಭಸ್ಮಾಸುರರಿದ್ದಂತೆ. ಒಂದು ಪಕ್ಷವು ಆಡಳಿತದಲ್ಲಿ ಇದ್ದಾಗ ಆ ಪಕ್ಷದಿಂದ ಏನು ಬೇಕೋ ಅದನ್ನೆಲ್ಲ ವಾಮಮಾರ್ಗದಿಂದಾದರೂ ಸರಿಯೆ, ಇನ್ನಿತರರಿಗೆ ಕಷ್ಟವಾದರೂ ಸರಿಯೆ ಬಾಚಿಕೊಳ್ಳುವುದು. ನಂತರ  ಮತ್ತೊಂದು ಪಕ್ಷವು ಆಡಳಿತಕ್ಕೆ ಬಂದರೆ ಅಲ್ಲಿಯೂ ಅವನು ಅದೇ ಬಗೆಯ ತಂತ್ರಗಾರಿಕೆಯನ್ನು ಉಪಯೋಗಿಸುತ್ತಾನೆ. ಅವನಿಗೆ ಯಾರು ಅಧಿಕಾರದಲ್ಲಿ ಇದ್ದರೇನು? ತನ್ನ ಮತ್ತು ತನ್ನವರ ಕಾರ್ಯ ಸುಲಭವಾಗಿ ಸಾಗುವಂತಿದ್ದರೆ ಆಯಿತು. ಇದೀಗ ಮಠಾಧೀಶರೂ ಅದೇ ಪ್ರವೃತ್ತಿಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಅದಕ್ಕಾಗೆ ಜಾತಿಗೊಂದು ಮಠಗಳು ಹುಟ್ಟಿಕೊಳ್ಳುತ್ತಿವೆ. ಮಠಾಧೀಶರಿಗೆ ರಾಜಕಾರಣಿಗಳಿಗೆ ಈಗ ವ್ಯತ್ಯಾಸ ಕಡಿಮೆಯಾಗುತ್ತಿದೆ. ತಮ್ಮ ತಮ್ಮ ಜಾತಿ ಗುಂಪುಗಳ ಅನುಕೂಲಸಿಂಧು ಚಟುವಟಿಕೆಗಳೇ ತಮತಮಗೆ ಮುಖ್ಯ ಎಂಬುದನ್ನು ಬಹಿರಂಗವಾಗಿಯೇ ಅವರು ತೋರ್ಪಡಿಸಿಕೊಳ್ಳುತ್ತಿದ್ದಾರೆ. ಇದು ಭಾರತವನ್ನು ಧರ್ಮ-ಜಾತಿ-ಪಕ್ಷ ಆಧಾರಿತ ಗುಂಪುಗಳಲ್ಲಿ ಛಿದ್ರಗೊಳಿಸುವ ಬಹು ಕೆಟ್ಟ ಬೆಳವಣಿಗೆ.
ಧರ್ಮ ಜಾತಿಗಳಲ್ಲಿದ್ದಂತೆ ರಾಜಕೀಯ ಪಕ್ಷಗಳೂ ಜಾತಿ ಉಪಜಾತಿ ಉಪಗುಂಪುಗಳನ್ನು ಕಟ್ಟಿಕೊಂಡು ಇಂತಿಂಥ ಜಾತಿಯವರಿಗೆ ಇಷ್ಟು ಮಂತ್ರಿಗಿರಿ, ಅಧ್ಯಕ್ಷಗಿರಿ ಇಷ್ಟುಸೀಟು, ಇಷ್ಟುಹಣ ಎಂದು ಒಗೊಳಗೇ ಹೊಡೆದಾಡುತ್ತಿರುವುದು ಬೆಳಕಿಗೆ ಬರತೊಡಗಿದೆ. ಒಂದು ಜಾತಿ ಧರ್ಮದ ಮುಖಂಡನ ತಪ್ಪು ಕೃತ್ಯಗಳ ಬಗೆಗೆ ಯಾರಾದರೂ ಮಾತನಾಡಿದರೆ ಅವರನ್ನು ಹೀನಾಯವಾಗಿ ನಿಂದಿಸಿ ಅವಹೇಳನವನ್ನು ಮಾಡುವುದಕ್ಕೆ ಆ ಜಾತಿಯವರು ತುದಿಗಾಲಮೇಲೆ ನಿಂತಿರುತ್ತಾರೆ. ತಮ್ಮ ಗುಂಪಿನವರನ್ನು ಬಿಟ್ಟು ಬೇರೆ ಯಾರಿಗೂ ಅವಕಾಶಗಳು ಸಿಗಬಾರದೆಂಬ ದುಷ್ಟಭಾವನೆಗಳ ಬೀಜವನ್ನೂ ಗುಂಪಿನ ಮುಖಂಡರು ಸಮಾಜದಲ್ಲಿ ಬಿತ್ತುತ್ತಾರೆ. ಭಾರತದಲ್ಲಿ ಲೆಕ್ಕವಿಲ್ಲದಷ್ಟು ಜಾತಿ ಉಪಜಾತಿಗಳಿವೆ. ಎಲ್ಲ ಜಾತಿ ಉಪಜಾತಿಯವರೂ ತಮ್ಮದಷ್ಟೇ ಹಿತ ನೋಡಿಕೊಂಡರೆ ಜಾತಿಯಲ್ಲಿ ನಂಬುಗೆ ಇಲ್ಲದ ಅಸಂಖ್ಯಾತರು ಏನು ಮಾಡಬೇಕು? ಅವರು ಪ್ರಗತಿಪರ ವಿಚಾರ ಬಿಟ್ಟು ಯಾವುದಾದರೂ ಜಾತಿಗುಂಪಿನೊಂದಿಗೆ ಗುರುತಿಸಿಕೊಳ್ಳಬೇಕೆ? ಇದು ಪ್ರಗತಿಪರರಿಗೆ ಆಗದ ಕೆಲಸ. ಜ್ಯಾತ್ಯಾತೀತ ರಾಷ್ಟ್ರವಾದ ನಮ್ಮ ದೇಶದಲ್ಲಿ ಪ್ರತಿಯೊಬ್ಬನು ಒಂದಿಲ್ಲೊಂದು ಜಾತಿಗುಂಪಿನವನೆಂದು ಹೇಳಿಕೊಳ್ಳುತ್ತ ಹೋಗುವ ಅನಿವಾರ್ಯತೆಯನ್ನು ನಮ್ಮನ್ನು ಸ್ವತಂತ್ರ ಭಾರತದಲ್ಲಿ ಆಳುತ್ತಿರುವವರು ತಂದು ಒಡ್ಡಿದ ಮಹಾಘೋರ ದುರಂತ.

ಜಾತಿ ಧರ್ಮಗಳು ಮನುಷ್ಯನ ಏಕಕಾಲಕ್ಕೆ ವೈಯಕ್ತಿಕ ಮತ್ತು ಸಾಮಾಜಿಕ ಉನ್ನತಿಗೆ ಕಾರಣವಾಗಬೇಕೆ ವಿನಾ ಮನುಷ್ಯ ಮನುಷ್ಯರಲ್ಲಿ ಭೇದಭಾವ, ಗುಂಪುಗಾರಿಕೆ, ದ್ವೇಷ ಅಸೂಯೆಗಳನ್ನು ಹುಟ್ಟುಹಾಕಬಾರದು. ಆದರೆ ನಮ್ಮರಾಜಕಾರಣಿಗಳು ತಮ್ಮ ಮತ್ತು ತಮ್ಮವರ ಸ್ವಾರ್ಥಪ್ರೇರಿತ ಹಿತಕ್ಕಾಗಿ ಭೇದಭಾವಗಳನ್ನು ಬೆಳೆಸುತ್ತಾರೆ. ಇನ್ನು ಬುದ್ಧಿಜೀವಿಗಳು ತಮ್ಮ ಮೂಗಿನ ನೇರಕ್ಕೆ ವಿಚಾರಗಳನ್ನು ಹರಿಬಿಡುತ್ತಾರೆ. ಸಾಹಿತ್ಯ ಸಂಸ್ಕೃತಿ ಸಂಶೋಧನೆಗಳಂಥ ಕ್ಷೇತ್ರಗಳಲ್ಲೂ ಈ ಭೇದ ಪರಿಕಲ್ಪನೆ 20ನೇ ಶತಮಾನದಿಂದೀಚೆ ಹೆಚ್ಚು ಅಪಾಯಕಾರಿಯಾಗಿ ಬೆಳೆಯುತ್ತಿದೆ. ನಕಾರಾತ್ಮಕ ವಿಚಾರಗಳನ್ನು ಒಳಗೊಂಡ ಬರಹಗಳ ಮೂಲಕ ಒಕ್ಕಟ್ಟಾಗಿದ್ದ ಸಮುದಾಯಗಳನ್ನು ಒಡೆಯುವ ಸಾಹಿತಿಗಳು, ಸಂಶೋಧಕರು, ಪತ್ರಕರ್ತರು ಭಾರತದ ಕೋಮುಸೌಹಾರ್ದತೆಗೆ ಸಾಕಷ್ಟು ಧಕ್ಕೆಯನ್ನು ತರುತ್ತಿದ್ದಾರೆ. ರಾಜಕಾರಣಿಗಳು ವೋಟಬ್ಯಾಂಕಿಗಾಗಿ ಜಾತಿಗುಂಪುಗಳನ್ನು ಓಲೈಸುವಂತೆ ಈ ಬುದ್ಧಿಜೀವಿಗಳು ಕೀಳು ಪ್ರಚಾರಕ್ಕಾಗಿ ತಮ್ಮ ಅನಾರೋಗ್ಯಕರ ಮಾನಸಿಕ ಒತ್ತಡದಿಂದಾಗಿ ಮನುಷ್ಯಕುಲವನ್ನು ಕಾಡುತ್ತಿರುವ ಕುಲಜಾತಿಭೇದಕ್ಕೆ ನೀರೆರೆಯುತ್ತಲಿದ್ದಾರೆ. ಸಮಾಜದಲ್ಲಿನ ಜನರನ್ನು ನಕಾರಾತ್ಮಕ ದೃಷ್ಟಿಯಿಂದಲೇ ಕಾಣುವ ಇಂಥವರನ್ನು ಅರುಣ ಶೌರಿ ಅವರು ನಕಾರಾತ್ಮಕ ಸಾಮಾಜಿಕ ವಿಮರ್ಶಾ ಸಮೂಹದಲ್ಲಿ ಸೇರಿಸಿ ಹೇಳಿದ್ದಾರೆ.

ನಕಾರಾತ್ಮಕ ಸಾಮಾಜಿಕ ವಿಮರ್ಶಾ ಸಮೂಹದಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವವರು ಬುದ್ಧಿಜೀವಿಗಳು, ನಂತರ ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು, ಕೊನೆಯದಾಗಿ ಮಠಾಧೀಶರು. ಸರಾಸಗಟಾಗಿ ಇವರೆಲ್ಲರೂ ನಕಾರಾತ್ಮಕ ವಿಚಾರದವರೇ ಎಂದು ಹೇಳಲು ಆಗದಿದ್ದರೂ ಇವರ ಕಾಣಿಕೆ ಸಮಾಜವನ್ನು ಛಿದ್ರಗೊಳಿಸುವಲ್ಲಿ ಹೆಚ್ಚಾಗಿಯೇ ಇರುತ್ತದೆ. ಸಮಾಜವನ್ನು ಬುದ್ಧಿಜೀವಿಗಳು ಹೇಗೆ ಒಡೆಯುತ್ತಾರೆ ಎಂಬುದಕ್ಕೆ ಪಂಜಾಬಿನ ಸಿಖ್‍ಧರ್ಮೀಯರ ಉದಾಹರಣೆ ಕಣ್ಣಮುಂದೆಯೇ ಇದೆ. 2009ರ ಮೇ ತಿಂಗಳಲ್ಲಿ ವ್ಹಿಎನ್ನಾದಲ್ಲಿ ಖಲಿಸ್ಥಾನ ಜಿಂದಾಬಾದ್ ಸಂಘಟಕರು,ದಾರಾ ಸಚ್ ಖಂಡ್ ಮುಖ್ಯಸ್ಥ ನಿರಂಜನದಾಸ್ ಅವರನ್ನು ಕೊಲೆ ಮಾಡಲು ಯತ್ನಿಸಿದ್ದರು. ಪಂಜಾಬಿಗಳಲ್ಲಿ ಗುರುನಾನಕ್ ಅವರ ಕಟ್ಟಾಭಕ್ತರು ಮತ್ತು ಸಂತ ರವಿದಾಸ್ ಅವರ ಭಕ್ತರು ಹೀಗೆ ಎರಡು ಕಟ್ಟಾ ವಿರೋಧಿಗುಂಪುಗಳು ಬೆಳೆಯಲು ಬುದ್ಧಿಜೀವಿಗಳೇ ಕಾರಣ. ಈ ಗುಂಪುಗಳ ನಡುವೆ  ಘನಘೋರ ಕಾದಾಟ ನಡೆದಿವೆ. ಎರಡೂ ಗುಂಪುಗಳಿಗೆ ಗುರುನಾನಕರೇ ಗುರುಗಳು. ಗ್ರಂಥಸಾಹಿಬ್‍ವೇ ಧರ್ಮಗ್ರಂಥ. 1920ರ ವರೆಗೂ ಯಾವುದೇ ಭೇದಭಾವ ಇರಲಿಲ್ಲ. ನಂತರ ಮಂಗೂದಾಸ್ ಎಂಬ ವಿಚಾರವಾದಿಯು ರವಿದಾಸರ ವಿಚಾರಧಾರೆಯೇ ಶ್ರೇಷ್ಠ ಎಂದು ವಾದಿಸುತ್ತ ಸಿಖ್‍ಧರ್ಮದಲ್ಲಿ ರವಿದಾಸೀಯಪಂಥವನ್ನು ಪ್ರತ್ಯೇಕವೆಂದು ಸ್ಥಾಪಿಸತೊಡಗಿದ್ದೇ ಘರ್ಷಣೆಗೆ ಕಾರಣವಾಯಿತು. ಮಂಗೂದಾಸನ ಬೆಂಬಲಿಗರು ಪ್ರತ್ಯೇಕ ಧರ್ಮವೆಂದು ಹೇಳುತ್ತ `ಅದ್ಧರ್ಮ’ ಚಳುವಳಿಯನ್ನು ಆರಂಭಿಸಿದರು. 2007ರಲ್ಲಿ ಈ ಎರಡೂ ಪಂಥಗಳ ಜಗಳ ತಾರಕಕ್ಕೇರಿ ಗುರುಮೀತ್ ರಾಮರಹೀಮಸಿಂಗ ಎಂಬುವವರು ದೇರಾ ಸಾಚಾ ಸೌದಾ ಎಂಬ ಹೆಸರಿನಲ್ಲಿ ಸ್ವತಂತ್ರ ಪಂಥವನ್ನು ಸ್ಥಾಪಿಸಿದ್ದಾಗಿ ಘೋಷಿಸಿದರು. ಅಲ್ಲಿಂದ ಜಗತ್ತಿನಾದ್ಯಂತ ಇರುವ ಅಖಂಡ ಸಿಖ್‍ರು ಎರಡು ಗುಂಪುಗಳಲ್ಲಿ ಒಡೆದುಹೋದರು. ಪರಸ್ಪರ ಕಚ್ಚಾಟ, ಹೊಡೆದಾಟ, ಹಿಂಸೆ, ಕೊಲೆ ಒಬ್ಬರಮೇಲೊಬ್ಬರು ಕೆಸರೆರಚುವುದು ಆರಂಭವಾಯಿತು. ಇಡೀ ಸಿಖ್ ಸಮುದಾಯ ಆತಂಕದಲ್ಲಿ ಹೊರಳಾಡುತ್ತ ಪ್ರಗತಿಯನ್ನೇ ಕಾಣದೆ ದ್ವೇಷ ಅಸೂಯೆಗಳ ಮಧ್ಯೆ ಒದ್ದಾಡುವ ಸ್ಥಿತಿ ಉಂಟಾಗಿದೆ. ಇಂಥ ಪರಿಸ್ಥಿತಿಗೆ ಕಟ್ಟಾ ಸಂಪ್ರದಾಯವಾದಿಗಳು ಹಾಗೂ ಪ್ರಗತಿವಾದಿಗಳು ಇಬ್ಬರೂ ಕಾರಣರು. ಇಬ್ಬರಲ್ಲೂ ಇರುವ ನಕಾರಾತ್ಮಕ ಸಾಮಾಜಿಕ ವಿಮರ್ಶಕರು ಮುಖ್ಯವಾಗಿ ಕಾರಣಕರ್ತರು.

ತರುಣರಲ್ಲಿ ಮಕ್ಕಳಲ್ಲಿ ಸಮಾಜ ಮತ್ತು ಧರ್ಮಗಳ ಬಗ್ಗೆ ಸಕಾರಾತ್ಮಕ ವಿಚಾರಗಳನ್ನು ಮೊದಲೇ ಬಿತ್ತಿದರೆ ಧರ್ಮ, ಜಾತಿ, ಸಮುದಾಯಗಳಲ್ಲಿ ಪರಸ್ಪರ ಅಪನಂಬಿಕೆಗಳಿಗೆ ಅವಕಾಶ ಸಿಗುವುದಿಲ್ಲ. ಇನ್ನೊಂದು ಗುಂಪಿನ ಬಗೆಗೆ ಸಹಿಷ್ಣುತೆ, ಇನ್ನೊಬ್ಬರ ವಿಚಾರಗಳನ್ನು ಗೌರವಿಸುವ ಭಾವನೆ ಇರದೇ ಇದ್ದರೆ ಯಾವ ಬರೆಹ ಯಾವ ಸಂಶೋಧನೆ ಏತಕ್ಕೆ ಪ್ರಯೋಜನ?  ಉದಾಹರಣೆಗೆ ಡಾ. ಎಂ.ಎಂ. ಕಲಬುರ್ಗಿ ಅವರ ಹೇಳಿಕೆಗಳನ್ನೇ ನೀಡಬಹುದು. ಅವರ ಕೆಲವು ಹೇಳಿಕೆಗಳು ಹೀಗಿವೆ: “ಕೃಷ್ಣದೇವರಾಯ ಕನ್ನಡದ ವಿರೋಧಿ. ಶೈವರು ಅನ್ಯಧರ್ಮದವನ್ನು ಕೊಲೆಮಾಡುವ ಕ್ರೂರಿಗಳಾಗಿದ್ದರು. ಕರ್ನಾಟಕದಲ್ಲಿ ತಮಿಳು ಪ್ರಾಬಲ್ಯವಾಗಲು ಮೈಸೂರು ಅರಸರು ಕಾರಣರು. ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪಿಸುವುದರಿಂದ ಪುರೋಹಿತರು ಹುಟ್ಟುತ್ತಾರೆ. 12ನೇ ಶತಮಾನದ ಲಿಂಗಾಯತದಲ್ಲಿ 14ನೇ ಶತಮಾನದ ನಂತರ ವೀರಶೈವರು ಬಂದು ಸೇರಿಕೊಂಡು ಲಿಂಗಾಯತರ ಮೇಲೆ ಸವಾರಿಮಾಡಿದರು. ವೀರಶೈವವು ಧರ್ಮವಲ್ಲ ಲಿಂಗಾಯತವೇ ಕರ್ನಾಟಕದಲ್ಲಿ ಹುಟ್ಟಿದ ಧರ್ಮ” ಇತ್ಯಾದಿ. ಈ ಬಗೆಯ ನಕಾರಾತ್ಮಕ ಹೇಳಿಕೆಗಳು ಯಾವತ್ತೂ ಸತ್ಯಗಳಲ್ಲ ಮತ್ತು ಅಂಥವು ಸಿದ್ಧವಾಗುವಂತಹವುಗಳಲ್ಲ ಇಂತಹ ಹೇಳಿಕೆಗಳನ್ನು ಯಾವ ನಿಜ ಸಂಶೋಧಕರೂ ವಿಚಾರವಾದಿಗಳೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ.

ಆದರೆ ಬೇಜವಾಬ್ದಾರಿ ಬುದ್ಧಿಜೀವಿಗಳ ಪ್ರಚಾರಪ್ರಿಯತೆಯ ತೆವಲಿನಿಂದಾಗಿ ನಕಾರಾತ್ಮಕ ವಿಚಾರಗಳು ಸಮುದಾಯಗಳನ್ನು ಒಡೆಯುತ್ತವೆ, ಸೌಹಾರ್ದತೆಗೆ ಧಕ್ಕೆ ತರುತ್ತವೆ. ಪರಸ್ಪರ ಅಪನಂಬಿಕೆಗಳನ್ನು ಹುಟ್ಟುಹಾಕುತ್ತವೆ. ನಕಾರಾತ್ಮಕ ವಿಚಾರಧಾರೆಯುಳ್ಳವರ ಮನಸ್ಸು ಒಂದು ರೀತಿಯ ರೋಗಗ್ರಸ್ಥ ವಿಕೃತ ಮನಸ್ಸಾಗಿರುತ್ತದೆ. ಅವರಿಗೆ ಕೆಲವು ಪೂರ್ವಾಗ್ರಹಗಳು ಕಾಡುತ್ತಿರುತ್ತವೆ. ಆ ಪೂರ್ವಾಗ್ರಹಗಳೇ ಅವರನ್ನು ನಕಾರಾತ್ಮಕ ಆಲೋಚನೆಗಳೆಡೆಗೆ ಎಳೆದೊಯ್ಯುತ್ತವೆ.

ಒಂದು ಗುಂಪು ಇನ್ನೊಂದು ಗುಂಪಿನವರಿಗೆ ಯಾವುದೋ ಕಾರಣಕ್ಕೆ ಬೇಡವಾಗಿರುತ್ತದೆ. ಅಂಥ ಗುಂಪಿನ ಕೆಲ ವ್ಯಕ್ತಿಗಳು ಈ ಬಗೆಯ ನಕಾರಾತ್ಮಕ ವಿಚಾರಧಾರೆಯನ್ನು ಬೆಂಬಲಿಸುತ್ತಾರೆ. ಬೆಂಬಲಸಿಕ್ಕಿತೆಂದು ನಕಾರಾತ್ಮಕ ವಿಚಾರ ಹೇಳಿದವರು ಹೆಮ್ಮೆಯಿಂದ ಬೀಗುತ್ತಾರೆ, ನಾನು ಹೇಳಿದ್ದು ಜನರಿಗೆ ಹಿಡಿಸುತ್ತದೆ ಎಂಬ ಭ್ರಮೆಯಲ್ಲಿ ಅವರು ಇನ್ನಷ್ಟು ಇಂತಹ ವಿಚಾರಗಳನ್ನು ಹರಿಬಿಡತೊಡಗುತ್ತಾರೆ. ಅದೊಂದು ಚಟವಾಗಿ ಸನ್ನಿಯಾಗಿ ಅವರಿಗೆ ಅಂಟಿಕೊಳ್ಳುತ್ತದೆ. ಒಮ್ಮುಖ ವಿಚಾರವಾದಿಗಳಲ್ಲಿ ಈ ಭ್ರಮೆ ಯಾವಾಗಲೂ ಇರುತ್ತದೆ. ಈ ಬಗೆಯ ನಕಾರಾತ್ಮಕ ವಿಚಾರಧಾರೆಯ ಗುಂಪುಗಳನ್ನೇ `ನಕಾರಾತ್ಮಕ ಸಾಮಾಜಿಕ ವಿಮರ್ಶಾ ಸಮೂಹ (Negetive Social Critical mass) ಎನ್ನುವುದು.

ಸಮಾಜ, ಧರ್ಮ, ಜಾತಿಗಳನ್ನು ಸಾಮಾಜಿಕ ತಕ್ಕಡಿಯಲ್ಲಿ ಇಟ್ಟು ವಿಮರ್ಶೆ ಮಾಡುವಾಗ ಮೈತುಂಬ ಎಚ್ಚರಿಕೆ ಇರಬೇಕು. ಮಕ್ಕಳನ್ನು, ಯುವಕರನ್ನು ಮಹಿಳೆಯರನ್ನು ಈ ಬಗೆಯ ನಕಾರಾತ್ಮಕ ವಿಚಾರಗಳಿಂದ ದೂರವಿಡಬೇಕು. ಸಕಾರಾತ್ಮಕ ವಿಚಾರಗಳು ಅವರಿಗೆ ಬರುವಂತಹ ವಾತಾವರಣವನ್ನು ನಿರ್ಮಿಸಬೇಕು. ಅದಕ್ಕೆ ಯೋಗ, ಅಧ್ಯಾತ್ಮ, ಸತ್ಸಂಗ, ಸದಾಚಾರ,ಅನುಭಾವಿಗಳ ಉಪದೇಶ, ಸಕಾರಾತ್ಮಕ ವಿಚಾರಗಳ ಪುಸ್ತಕಗಳ / ಬರೆಹಗಳ ಓದು ಇವೇ ಮುಂತಾದ ಚಟುವಟಿಕೆಗಳನ್ನು ಅವರಿಗೆ ಒದಗಿಸಿಕೊಡಬೇಕು. ಶಾಲಾಪಠ್ಯಕ್ರಮದಲ್ಲೂ ಇವು ಸೇರಬೇಕು. ಅದರಿಂದ ಮಾತ್ರ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಆಗುತ್ತದೆ. ಭ್ರಷ್ಟಾಚಾರ,ಅನೈತಿಕತೆ, ಹಿಂಸಾಪ್ರವೃತ್ತಿ, ಅಸೂಯೆ, ಜಾತೀಯತೆಯ ಪೂರ್ವಾಗ್ರಹಗಳು ಮುಂತಾದ ವಿಕೃತಿಗಳು ದೂರವಾಗಬೇಕಾದರೆ ನಕಾರಾತ್ಮಕ ಲೇಖಕರ ಬರೆಹಗಳಿಂದ ಮಕ್ಕಳು ಯುವಕರು ದೂರವಿರುವಂತೆ ನೋಡಿಕೊಳ್ಳಬೇಕು.

(ನನ್ನ ಸಂಶೋಧನ ವ್ಯಾಸಂಗ ದ್ವೈಮಾಸಿಕ ಪತ್ರಿಕೆಯಲ್ಲಿ ಈ ಹಿಂದೆ ಪ್ರಕಟಿತ ಲೇಖನದ ಪರಿಷ್ಕೃತ ಬರೆಹ: ನಿಲುಮೆ ಓದುಗರಿಗಾಗಿ)

1 ಟಿಪ್ಪಣಿ Post a comment
  1. ಜೂನ್ 27 2015

    ಸಕಾಲಿಕ ವಿಚಾರಪೂರ್ಣ ಬರಹ. ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಡಿಸಿ ಬರೆದ ಶೈಲಿ ಇಷ್ಟವಾಯ್ತು.
    ಇತ್ತೀಚೆಗೆ ನಾನೂ ಸೇರಿದಂತೆ ನಿಲುಮೆಯಲ್ಲಿ ಕೆಸರಿಂದ ಕೆಸರು ತೊಳೆಯುವ ಆಟದಲ್ಲಿ ಕೆಲವರು ಭಾಗವಹಿದ್ದೆವು. ಬ್ರದರ್ ಒಬ್ಬರು ಮೇಲೆ ವಿವರಿನಸಿದ `ನಕಾರಾತ್ಮಕ ಸಾಮಾಜಿಕ ವಿಮರ್ಶಾ ಸಮೂಹ’ದ (Negetive Social Critical mass) ಮಟ್ಟಕ್ಕೆ ಬಂದಿರುವ ಸಮಾಜ,ಅದರ ಗುಂಪನ್ನು ಪ್ರತಿನಿಧಿಸಿದರು.
    ಆ ಪ್ರಕ್ರಿಯೆಯಲ್ಲಿ ನನ್ನ ಮನಸ್ಸಿನಲ್ಲಿ ಮೂಡಿದ ಹಲವಾರು ಅವ್ಯಕ್ತ ಪ್ರಶ್ನಗಳಿಗೆ ಈ ಲೇಖನ ಉತ್ತರ ಕೊಟ್ಿದೆ. ಧನ್ಯವಾದ

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments