ವಿಷಯದ ವಿವರಗಳಿಗೆ ದಾಟಿರಿ

ಜೂನ್ 29, 2015

3

ಭಾರತೀಯ ಶಿಕ್ಷಣ ವ್ಯವಸ್ಥೆಯ ಮುಂದಿನ ಹಾದಿಯೇನು? – ಭಾಗ ೨

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

ಭಾರತೀಯ ಶಿಕ್ಷಣ ವ್ಯವಸ್ಥೆಯ ಮುಂದಿನ ಹಾದಿಯೇನು? – ಭಾಗ ೧

ಭಾರತೀಯ ಶಿಕ್ಷಣ ವ್ಯವಸ್ಥೆಇಂಗ್ಲೀಷ್ ಶಿಕ್ಷಣ ಮಾಧ್ಯಮದಲ್ಲಿ ಓದುವ ನಮ್ಮ ಹಳ್ಳಗಾಡಿನ,ಚಿಕ್ಕ-ಪುಟ್ಟ ಪಟ್ಟಣದ,ಸರ್ಕಾರಿ ಶಾಲೆಯವರು ಅನುಭವಿಸುವ ಕೀಳರಿಮೆ,ಅವಮಾನಗಳೆಂತದ್ದು ಎನ್ನುವುದು,ಕನ್ನಡ ಮಾಧ್ಯಮದಲ್ಲಿ ೧೦ನೇ ತರಗತಿಯವರೆಗೆ ಓದಿಕೊಂಡು ನಂತರ ವಿಜ್ಞಾನ ವಿಷಯದ ಮೇಲೆ ಪಿಯುಸಿ ಓದಿ,ಇಂಜೀನಿಯರಿಂಗ್ ಮಾಡಿದ ನನ್ನಂತವರಿಗೆ ತಿಳಿದಿದೆ.ಮೊದಲನೇ ವರ್ಷದ ಪಿಯುಸಿ ತರಗತಿಯಲ್ಲಿ ಇಂಗ್ಲೀಷಿನಲ್ಲೇ ಪಾಠ ನಡೆಯುವಾಗ ಕನ್ನಡ ಮಾಧ್ಯಮದಿಂದ ಬಂದ,ನನ್ನನ್ನೂ ಸೇರಿದಂತೆ ಉಳಿದ ೭-೮ ಹುಡುಗರಿಗೆ ಏನು ಅರ್ಥವಾಗದೇ, ಆ ಕೀಳರಿಮೆಯಿಂದ ಕ್ಲಾಸಿನಲ್ಲಿ ಕೂರಲಿಕ್ಕೂ ಆಗದೇ,ಇಂತ ಪಾಠಕ್ಕಿಂತ ಕ್ರಿಕೆಟ್ಟೇ ಮೇಲೂ ಎನಿಸಿ.ಕ್ಲಾಸ್ ಬಿಟ್ಟು ಕ್ರಿಕೆಟ್ ಆಡಲು ಹೋಗುತಿದ್ದೆವು.ಕಡೆಗೆ ನಮ್ಮಲ್ಲಿ ೩-೪ ಜನ ಇದು ನಮ್ಮಿಂದ ಸಾಧ್ಯವಿಲ್ಲ ಎಂದು ಅವರ ಶಿಕ್ಷಣಕ್ಕೇ ಎಳ್ಳು ನೀರು ಬಿಟ್ಟರು.ಅಲ್ಲಿಗೆ ಇಂಗ್ಲೀಷ್ ಅರಗಿಸಿಕೊಳ್ಳಲಾಗದೇ ಅವರ ಉನ್ನತ ವಿದ್ಯಾಭ್ಯಾಸ ಮರಿಚೀಕೆಯಾಯಿತು. ಹಾಗಂತ ಆ ವಿದ್ಯಾರ್ಥಿಗಳೇನು ಓದಿನಲ್ಲಿ ಹಿಂದೆ ಬಿದ್ದವರಲ್ಲ.ಇಂಗ್ಲೀಷ್ ನಮಗಲ್ಲ ಎನ್ನುವ ಕೀಳರಿಮೆಯಿಂದ ಅವರು ಪಿಯುಸಿಯಲ್ಲಿ ಹಿಂದೆ ಬಿದ್ದರು.ಕಡೆಗೆ ಉನ್ನತ ಶಿಕ್ಷಣವನ್ನೂ ಬಿಟ್ಟರು.

ಮಾಲಾವಿ ದೇಶದ ಉದಾಹರಣೆಗೆ ತದ್ವಿರುದ್ಧ ಉದಾಹರಣೆಯಾಗಿ,ಇಸ್ರೇಲ್ ದೇಶವನ್ನು ತೆಗೆದುಕೊಳ್ಳಬಹುದು.ರಾಜಕೀಯ ವಿಪ್ಲವ ಮತ್ತಿತ್ತರ ಕಾರಣಗಳಿಂದಾಗಿ ಜಗತ್ತಿನಾದ್ಯಂತ ಹರಿದು ಅಂಚಿಹೋಗಿ,ವಿವಿಧ ದೇಶಗಳಲ್ಲಿ ನೆಲೆಸಿ ಕಡೆಗೆ ೨೦ನೇ ಶತಮಾನದಲ್ಲಿ ಒಂದುಗೂಡಿ ಇಸ್ರೇಲ್ ದೇಶ ರಚಿಸಿಕೊಂಡ,ಯಹೂದಿಯರು ತಮ್ಮ ದೇಶವನ್ನು ಕಟಿಕೊಳ್ಳುವುದರ ಜೊತೆಗೆ ನಶಿಸುವ ಹಂತ ತಲುಪಿದ್ದ ಹಿಬ್ರೂ ಭಾಷೆಯನ್ನೇ ಶಿಕ್ಷಣ ಸೇರಿದಂತೆ ತಮ್ಮೆಲ್ಲಾ ರಂಗಗಳಲ್ಲೂ ಬಳಸಿಕೊಂಡರು.ಇವತ್ತು ಇಸ್ರೇಲ್ ಜಗತ್ತಿನ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿದೆ. ಇಸ್ರೇಲಿನ “ಟೆಕ್ನಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ” ವಿಶ್ವದ ಉತ್ತಮ ವಿದ್ಯಾಲಯಗಳಲ್ಲಿ ಒಂದು.ಅಲ್ಲಿ ಚಳಿಗಾಲದ ಮತ್ತು ಬೇಸಿಗೆ ಕಾಲದ ತರಗತಿಗಳಿಗೆ ದಾಖಲಾತಿ ಪಡೆದ ವಿದ್ಯಾರ್ಥಿಗಳಿಗೆ ೫ ವಾರಗಳ ಕಡ್ಡಾಯ ಹಿಬ್ರೂ ಭಾಷಾ ಕಲಿಕೆಯಾಗಬೇಕು.ಅದು ಮುಗಿದ ನಂತರವೇ ಮುಖ್ಯ ಪಠ್ಯಗಳು ಶುರುವಾಗುವುದು.

ಜಪಾನ್,ಕೊರಿಯಾ,ತೈವಾನ್ ನಂತ ರಾಷ್ಟ್ರಗಳಲ್ಲಿ ಶಿಕ್ಷಣದ ಮಾಧ್ಯಮ ಇಂಗ್ಲೀಷಿನಲ್ಲಿಲ್ಲ.ಬದಲಿಗೆ ಜಪಾನಿ,ಕೊರಿಯನ್ ಮತ್ತು ಚೈನಿಸ್ ಭಾಷೆಯಲ್ಲಿದೆ.ಏಷಿಯಾದ ಅತ್ಯುತ್ತಮ ಕಂಪೆನಿಗಳಾದ ಹೋಂಡಾ,ಸೋನಿ,ಸಾಮ್ ಸ್ಯಂಗ್,ಟೋಯೋಟಾ ಇವೆಲ್ಲ ಯಾವ ದೇಶದವು? ಅಂದರೆ,ಇಂಗ್ಲೀಷ್ ಇಲ್ಲದೆಯೂ ಒಂದು ದೇಶದ ತನ್ನದೇ ಭಾಷೆಯ ಮೂಲಕ ಅಭಿವೃದ್ಧಿ ಹೊಂದಲು ಸಾಧ್ಯ ಎಂದಾಯಿತಲ್ಲವೇ?ಹಾಗಿದ್ದ ಮೇಲೆ ಭಾರತೀಯರಿಗೇಕೆ ಇಂಗ್ಲೀಷ್ನಿಂದಾಗಿಯೇ ನಾವು ಈ ಹಂತ ತಲುಪಿರುವುದು ಎನ್ನುವ ಗುಲಾಮಿ ಮನಸ್ಥಿತಿ?

ಹಾಗಂತ ಜಗತ್ತಿನ ಮೊದಲ ೨೦ ಬಡರಾಷ್ಟ್ರಗಳು,ಬಡರಾಷ್ಟ್ರಗಳಾಗಲಿಕ್ಕೆ ಕೇವಲ “ಇಂಗ್ಲೀಷ್ ಮಾಧ್ಯಮದ ಶಿಕ್ಷಣ”ವೊಂದೇ ಕಾರಣವೆಂದು ಹೇಳಲಾಗದು.ಒಂದು ದೇಶದ ಅಭಿವೃದ್ಧಿಯ ಮಾನದಂಡ ಆ ದೇಶದ ಆಡಳಿತಗಾರರು,ಆಡಳಿತ ವ್ಯವಸ್ಥೆ,ಸಾಮಾಜಿಕ ವ್ಯವಸ್ಥೆ ಮತ್ತು ಸಂಪನ್ಮೂಲಗಳನ್ನೂ ಅವಲಂಬಿಸಿರುತ್ತದೆ.ಆದರೆ,ಅದರ ಜೊತೆಗೆ ಜಾಗತೀಕರಣದ ಈ ಯುಗದಲ್ಲಿ ಒಂದು ದೇಶವು ವಿಜ್ಞಾನ,ತಂತ್ರಜ್ಞಾನದಲ್ಲಿ ಮುಂದುವರೆಯಲಿಕ್ಕೆ ಅಗತ್ಯವಾದ ಶಿಕ್ಷಣ ಬಹುಮುಖ್ಯ ಪಾತ್ರವಹಿಸುತ್ತದೆ.

ಇಂಗ್ಲೀಷ್ ಮಾತೃ ಭಾಷೆಯಾಗಿರುವ ದೇಶಗಳ ಅಭಿವೃದ್ಧಿಗೂ ಮತ್ತು ಇಂಗ್ಲೀಷ್ ಸೇರಿದಂತೆ ಪರಕೀಯ ಭಾಷೆಗಳನ್ನು ತಮ್ಮ ಶಿಕ್ಷಣ ಮಾಧ್ಯಮವನ್ನಾಗಿ ಮಾಡಿಕೊಂಡಿರುವ ದೇಶಗಳು ಹಿಂದುಳಿಯಲಿಕ್ಕೂ ಸಂಬಂಧ ಇರಲೇಬೇಕಲ್ಲವೇ?

ಭಾರತದಲ್ಲಿ ಇಂಗ್ಲೀಷ್ ಪ್ರಾಮುಖ್ಯತೆಯ ಬಗ್ಗೆ ಮಾತನಾಡುವಾಗ, ಸಾಫ್ಟ್ವೇರ್ ರಂಗ ಇವತ್ತು ಅಭಿವೃದ್ಧಿಯಾಗಿರುವುದು ಇಂಗ್ಲೀಷ್ ಶಿಕ್ಷಣದಿಂದಾಗಿ ಎನ್ನುವ ಪ್ರಬಲವಾದವೊಂದಿದೆ.ಹಾಗಿದ್ದರೆ ಜಪಾನ್,ಇಸ್ರೇಲ್,ರಷ್ಯಾ,ಕೊರಿಯಾ,ಚೀನಾ ಇತ್ಯಾದಿ ದೇಶಗಳ ಜನರು ಇವತ್ತು ಸಾಫ್ಟ್ವೇರ್ ರಂಗದ ದೈತ್ಯ ಕಂಪೆನಿಗಳಲ್ಲಿ ಇರುವುದು ಹೇಗೆ? ಇಂಗ್ಲೀಷ್ ಮುಖ್ಯವೇ ಅಥವಾ ಕೆಲಸಕ್ಕೆ ಬೇಕಾದ ಕೌಶಲ್ಯ ಮುಖ್ಯವೇ? ೨೦೦೧ರ ಅಂಕಿ ಅಂಶಗಳ ಪ್ರಕಾರ ಭಾರತದ ಸಾಫ್ಟ್ವೇರ್ ರಫ್ತು $6.5 ಬಿಲಿಯನ್ ಆಗಿತ್ತು.ಇದೇ ಸಮಯದಲ್ಲಿ ನಮ್ಮ ರಾಜಧಾನಿ ದೆಹಲಿಯ ಜನಸಂಕ್ಯೆಗಿಂತಲೂ ಕಡಿಮೆಯಿರುವ ದೇಶವಾದ ಇಸ್ರೇಲ್ ನ ಸಾಫ್ಟ್ವೇರ್ ರಫ್ತು $2.5 ಬಿಲಿಯನ್ ಆಗಿತ್ತು! ಅಷ್ಟೇ ಅಲ್ಲ, ಇಸ್ರೇಲಿನ ಮೈಕ್ರೋಸಾಫ್ಟ್ ಆಫೀಸಿನಲ್ಲಿ ಹಿಬ್ರೂ ಭಾಷೆಯ ಕಂಪ್ಯೂಟರ್ ಕೀ-ಬೋರ್ಡುಗಳು ಹಾಗೂ ಕಚೇರಿಯ ಸಂವಹನದ ಭಾಷೆಯೂ ಸಹ ಹಿಬ್ರೂವೇ ಆಗಿರುವುದು.

ವಸ್ತುಸ್ಥಿತಿ ಹೀಗಿರುವಾಗ,ಇಂಗ್ಲೀಷ್ ಇಲ್ಲದೇ ಜಗವೇ ಇಲ್ಲ ಎನ್ನುವ ಮನಸ್ಥಿತಿಯನ್ನು ನಮ್ಮಲ್ಲಿ ಹುಟ್ಟುಹಾಕಿರುವುದು ಬ್ರಿಟಿಷರ ಬಳುವಳಿಯಾದ ’Colonial System’.ಸಂಸ್ಕೃತಿಯ ಅಭಿವ್ಯಕ್ತಿ ಮಾಧ್ಯಮವಾದ ಭಾಷೆಯನ್ನು ಜನರಿಂದ ದೂರ ಮಾಡಿದರೆ,ಕಾಲ ಕ್ರಮೇಣ ಅವರ ಮನಸ್ಥಿತಿಯೂ ಸಂಸ್ಕೃತಿಯ ದೂರ ಸರಿದಂತೆ (ಇದನ್ನೇ Decolonizing the Mind’ ಎಂಬ ಪುಸ್ತಕ ಬರೆದ ಕೀನ್ಯಾದ ಖ್ಯಾತ ಬರಹಗಾರ ’ನುಗ್ಯೋಗಿ ವಾ ಥಿಯೋಂಗೋ’ (Ngũgĩ waThiong’o) ಅವರು “Colonial Alienationಎಂದಿದ್ದು).ಇಂಗ್ಲೀಷಿಗೆ ಹತ್ತಿರವಾದಂತೆ ಅವರು ಪಾಶ್ಚಾತ್ಯ ರೀತಿ ರಿವಾಜುಗಳಿಗೆ ಮತ್ತು ಅಂತಿಮವಾಗಿ ಪಾಶ್ಚಾತ್ಯ ರಿಲಿಜನ್ನಿನೆಡೆಗೆ ಆಕರ್ಷಿತರಾಗುತ್ತಾರೆ ಎನ್ನುವಂತ ದೂ(ದು)ರಾಲೋಚನೆಯನ್ನಿಟ್ಟುಕೊಂಡು ಬ್ರಿಟಿಷರು ಇಂಗ್ಲೀಶ್ ಶಿಕ್ಷಣವನ್ನು ನಮ್ಮ ಮೇಲೆ ಹೇರಿದರು. ಹಾಗೊಂದು ದೂ(ದು)ರಾಲೋಚನೆಯಿಲ್ಲವಾಗಿದ್ದರೆ, ೧೮೩೫ರ ಇಂಗ್ಲೀಷ್ ಶಿಕ್ಷಣ ಕಾಯ್ದೆಯ ಪ್ರಕಾರ,ದೇಶಿಯ ಶಾಲೆಗಳಲ್ಲಿ ಇಂಗ್ಲೀಷನ್ನು ಶಿಕ್ಷಣದ ಮಾಧ್ಯಮಾವಾಗಲ್ಲದೇ ಕೇವಲ ಭಾಷೆಯನ್ನಾಗಿ ಬಳಸುವುದಕ್ಕೆ ನಿರ್ಬಂಧವನ್ನೇಕೆ ವಿಧಿಸಿದ್ದರು? ಜನರು ಇಂಗ್ಲೀಷ್ ಭಾಷೆಯ ಮೂಲಕ ತಮ್ಮ ಅನುಭವಗಳನ್ನು,ದೇಶಿಯ ಅರಿವಾಗಿ ಹೊಮ್ಮಿಸಬಲ್ಲರು ಎಂಬ ಭಯದಿಂದಾಗಿಯೇ?

ಭಾರತೀಯ ಶಿಕ್ಷಣ ವ್ಯವಸ್ಥೆಯ ಮುಂದಿನ ಹಾದಿಯೇನು?

ಹಾಗಿದ್ದರೆ ಇಂಗ್ಲೀಷಿಗೆ ಪರ್ಯಾಯವಾಗಿ ಭಾರತೀಯ ಭಾಷೆಗಳ ಶಿಕ್ಷಣ ಮಾಧ್ಯಮವನ್ನು ಬೆಳೆಸುವ ತುರ್ತು ಈಗ ನಮ್ಮ ಮುಂದಿದೆ.ಆದರೆ ಅದು ಕೈಗೊಳ್ಳುವ ಬಗೆ ಹೇಗೆ.ಶತಮಾನಗಳ ಈ ’Colonial System’ (ವಸಹಾತುಶಾಹಿ ವ್ಯವಸ್ಥೆ) ಅನ್ನು ’Decolonize’ ಮಾಡುವುದು ಹೇಗೆ ಎನ್ನುವ ಬಗ್ಗೆ ಯೋಚಿಸಬೇಕಾಗಿದೆ.ಆದರೆ ಅದಕ್ಕೂ ಮೊದಲು ನಾವು ‘Colonial Consciousness’ (ವಸಾಹತುಶಾಹಿ ಪ್ರಜ್ಞೆ)ನಿಂದ ಹೊರಬರುವುದು ಅತಿಮುಖ್ಯ.ಒಂದು ವೇಳೆ ವಸಾಹತುಶಾಹಿ ಪ್ರಜ್ಞೆಯಿಂದ ನಾವು ಹೊರಬರದಿದ್ದರೆ,ಇಂಗ್ಲೀಷಿಗೆ ಪರ್ಯಾಯವಾಗಿ ಹಿಂದಿಯನ್ನೂ ಬಳಸಿ ಅಂತಲೋ ಅಥವಾ ಸಂಸ್ಕೃತವನ್ನು ಬಳಸಿ ಅಂತಲೋ ಹೇಳಿ ಮತ್ತೆ ಬ್ರಿಟಿಷರು ಮಾಡಿದ್ದನ್ನೇ ಬೇರೊಂದು ರೀತಿಯಲ್ಲಿ ಮಾಡುತ್ತೇವೆ ಅಷ್ಟೇ.ಉದಾಹರಣೆಗೆ, ಹಿಂದಿಯಾಗಲಿ,ಇಂಗ್ಲೀಷ್ ಆಗಲಿ ಕನ್ನಡಿಗನೊಬ್ಬನಿಗೆ “ಸಂವಹನದ ಮಾಧ್ಯಮ”ವಾಗಬಲ್ಲವೇ ಹೊರತು ಅವನ “ಸಂಸ್ಕೃತಿಯ ಅಭಿವ್ಯಕ್ತಿ ಮಾಧ್ಯಮ”ವಾಗಲಾರದು.ಹೇಗೆ ಇಂಗ್ಲೀಷು, ಕನ್ನಡಿಗನೊಬ್ಬನ ಸಂಸ್ಕೃತಿಯನ್ನು ದೂರ ಸರಿಸಬಲ್ಲದೋ ಅದೇ ಕೆಲಸವನ್ನು ಹಿಂದಿಯೂ ಮಾಡಬಹುದಲ್ಲವೇ?

ಇದನ್ನೇ ನಾವು ಭಾರತದ ಇತರೇ ಭಾಷಿಕನಿಗೂ ಅನ್ವಯಿಸಬಹುದು.ಭಾರತದಂತಹ ವೈವಿಧ್ಯಮಯ ಭಾಷೆಗಳಿರುವ ದೇಶದಲ್ಲಿ ಮಾತೃ ಭಾಷೆಯ ಶಿಕ್ಷಣವೆಂದರೆ ಅದು ಆಯಾ ರಾಜ್ಯಗಳಲ್ಲಿ ಪ್ರಚಲಿತದಲ್ಲಿರುವ ಭಾಷೆಯ ಮೂಲಕವೇ ಆಗಬೇಕೆ ಅಥವಾ ಬ್ರಿಟಿಷರಿಂದ ನಾವು ಕಲಿತಿರುವ ಲಿಂಕಿಂಗ್ ಲಾಂಗ್ವೇಜ್ (ಸಂವಹನ ಭಾಷೆ) ಎಂಬ ಚುಂಗು ಹಿಡಿದು ಹೊರಡಬೇಕೋ ಗಂಭೀರವಾಗಿ ಯೋಚಿಸಬೇಕಾದ ವಿಷಯ.

ನಮ್ಮ ದೇಶದಲ್ಲಿ ಒರಿಸ್ಸಾದ ಭಾಷಾ ಚಳುವಳಿಗಳು,ಬಂಗಾಲದ ವಂಗ ಬಂಗ ಚಳುವಳಿಗಳಿಂದ ನಮ್ಮ ಭಾಷಾಧಾರಿತ ಚಳುವಳಿಗಳು ಶುರುವಾದವಲ್ಲ.ಅದಕ್ಕೂ ಮೊದಲು ಅಂದರೆ,ಬ್ರಿಟಿಷರು ಬರುವ ಅಥವ ಮುಸ್ಲಿಂರು ಬರುವ ಮೊದಲಿಗೆ ಇಲ್ಲಿನ ಜನರಿಗೆ ಒಂದು ಭಾಷೆ ಇನ್ನೊಂದು ಭಾಷೆಯಂತೆ ಎದುರಾಳಿಯಾಗಿತ್ತೇ (ಉದಾ : ಹಿಂದಿ ಹೇರಿಕೆ ವಿರೋಧಿಸುವ ದಕ್ಷಿಣ ಮತ್ತು ಈಶಾನ್ಯ ಭಾರತೀಯ ರಾಜ್ಯಗಳು. ಅಥವಾ ಕನ್ನಡ ವರ್ಸಸ್ ತಮಿಳು ಭಾಷಿಕರು) ಎನ್ನುವುದನ್ನು ನಾವು ನೋಡಬೇಕು.ಆಗ ಇರಲಿಲ್ಲವೆಂದಾದರೆ,ಈಗ ಅವು ಎದುರಾಳಿಗಳಾಗುವಂತೆ ನಮ್ಮಿಂದ ಮಾಡಿಸುತ್ತಿರುವುದು ನಮ್ಮ ವಸಹಾತುಶಾಹಿ ವ್ಯವಸ್ಥೆಯೋ ಅಥವಾ ನಮ್ಮೊಳಗಿನ ವಸಹಾತುಶಾಹಿ ಪ್ರಜ್ಞೆಯೋ ಯೋಚಿಸಬೇಕಲ್ಲವೇ? ಕನ್ನಡ ರಾಷ್ಟ್ರೀಯತೆ,ತಮಿಳು ರಾಷ್ಟ್ರೀಯತೆ,ಹಿಂದಿಯೆಂಬ ರಾಷ್ಟ್ರಭಾಷೆ ಇತ್ಯಾದಿಗಳೆಲ್ಲವೂ ವಸಹಾತುಶಾಹಿ ಪ್ರಜ್ಞೆಯ ಮುಂದುವರಿದ ಭಾಗಗಳೇ.

ಅಂತಿಮವಾಗಿ ಹೇಳುವುದಾದರೆ,‘Colonial Consciousness’ ನಿಂದ ಹೊರಬರದೇ ನಾವು Colonial Systemಅನ್ನು ನಾವು Decolonize’ ಮಾಡಲಾರೆವು.ಕೇವಲ ಇಂಗ್ಲೀಷನ್ನು ತೆಗೆದು “ಹಿಂದಿಯನ್ನೋ,ಸಂಸ್ಕೃತವನ್ನೋ” ಶಿಕ್ಷಣದ ಮಾಧ್ಯಮವನ್ನಗಿಸುವುದೂ ಸಹ Colonial Systemನ ಪರ್ಯಾಯವೇ ಆಗುತ್ತದೆ.ಹಾಗಿದ್ದರೆ ಇದರಿಂದ ಭಾರತೀಯರು ಪಾರಾಗಲಿಕ್ಕೆ ದಾರಿ ಯಾವುದು?

ನಾವು ಕಲಿಯುತ್ತಿರುವ ವಿಜ್ಞಾನ,ಸಮಾಜವಿಜ್ಞಾನದ ಜ್ಞಾನವೆಲ್ಲವೂ ಬೆಳೆದಿರುವುದು ಯುರೋಪಿನಲ್ಲಿಯೇ.ಹೀಗಿರುವಾಗ ಉನ್ನತ ಶಿಕ್ಷಣದಲ್ಲಿ ’ಇಂಗ್ಲೀಷ್’ ಜಾಗಕ್ಕೆ ’ಕನ್ನಡ’ ತಂದು ಕೂರಿಸಿದರೆ, ವಿಜ್ಞಾನದ ಟರ್ಮಿನಾಲಜಿಗಳನ್ನು ಕನ್ನಡದಲ್ಲಿ ಸಂವಹನ ಮಾಡುವಂತಹ ಬೌದ್ಧಿಕ ಸಂಪನ್ಮೂಲಗಳು ನಮ್ಮಲ್ಲಿವೆಯೇ ಅಂತಲೂ ನೋಡಿಕೊಳ್ಳಬೇಕಲ್ಲವೇ.ಹಾಗಾಗಿ ಇಂಗ್ಲೀಷ್ ಎಂಬ ಭಾಷೆಯನ್ನು ವಿರೋಧಿಸುವ ಮೊದಲಿಗೆ ಉದ್ಯಮವಾಗಿರುವ ಶಿಕ್ಷಣ ಕ್ಷೇತ್ರದ ಗುಣಮಟ್ಟ ಹೆಚ್ಚಿಸುವ,ಬೌದ್ಧಿಕ ಸಂಪನ್ಮೂಲಗಳನ್ನು ಸೃಷ್ಟಿಸುವ ಬಗ್ಗೆ ಮತ್ತು ನಮ್ಮ ಸಂಸ್ಕೃತಿಗೆ ಪೂರಕವಾಗಿ ಇಂದಿನ ಶಿಕ್ಷಣ ವ್ಯವಸ್ಥೆಯನ್ನು ಬಳಸಿಕೊಳ್ಳುವ ಬಗ್ಗೆಯೂ ಗಂಭೀರವಾಗಿ ಯೋಚಿಸಬೇಕಾಗುತ್ತದೆ.

ನನ್ನ ಅನಿಸಿಕೆಯ ಮಟ್ಟಿಗೆ, ಈ ದುರ್ಗಮ ಹಾದಿಯಿಂದ ಹೊರಬರಲಿಕ್ಕೆ ನಾವು ಅತ್ಯಂತ ತುರ್ತಾಗಿ ಮಾಡಬೇಕಾಗಿರುವುದು, ಬ್ರಿಟಿಷ್ ಶಿಕ್ಷಣ ವ್ಯವಸ್ಥೆಯಿಂದ ನಾವು ಕಲಿತುಕೊಂಡ ಸಮಾಜ ವಿಜ್ಞಾನದ ಸಿದ್ಧಾಂತಗಳನ್ನು ಬದಿಗಿಟ್ಟು, ಭಾರತೀಯ ಸಮಾಜ ವಿಜ್ಞಾನ ಸಿದ್ಧಾಂತಗಳನ್ನು ಕಟ್ಟಿಕೊಳ್ಳುವುದು ಮತ್ತು ಅಕಾಡೆಮಿಕ್ ಆಗಿ ಭಾರತೀಯ ಸಮಾಜ ವಿಜ್ಞಾನದ ಅಧ್ಯಯನದಲ್ಲಿ ತೊಡಗಿಕೊಳ್ಳುವುದು.ಒಮ್ಮೆ ನಾವು ನಮ್ಮ ಸಮಾಜವನ್ನು, ನಮ್ಮದೇ “ಅನುಭವ”ಗಳ ಆಧಾರದ ಮೇಲೆ ಗುರುತಿಸಿಕೊಂಡರೆ, ಆ ನಂತರ ಆ “ಅನುಭವ”ವನ್ನು “ಅರಿವು” ಮೂಡಿಸಲು ಬಳಸಬಹುದು.ಆ “ಅರಿವು” ಈ ದೇಶದ ಪ್ರತಿ ಭಾಗದ ಜನರ ಭಾಷೆ,ಆಚರಣೆ,ಸಂಸ್ಕೃತಿಗಳ ಸಮ್ಮಿಲನವ ಸಾಧಿಸಬಲ್ಲಂತ ಭವ್ಯ ಭಾರತ ಭವಿಷ್ಯವಾಗಬೇಕು.ಆಗಷ್ಟೇ ನಮ್ಮ ನೆಮ್ಮದಿಯ ನಾಳೆಗಳಿಗಾಗಿ ತಮ್ಮ ಪ್ರಾಣಾರ್ಪಣೆ ಮಾಡಿದವರ ತ್ಯಾಗಕ್ಕೂ ಒಂದು ಗೌರವ.

ಅಂತ ಪ್ರಯತ್ನವೊಂದು ಶುರುವಾಗಲಿ.

References:

3 ಟಿಪ್ಪಣಿಗಳು Post a comment
  1. ಜೂನ್ 29 2015

    ಆಲೋಚನೆ ಆಳುವವರಿಗೂ,ಜನಗಳಿಗೂ ಬರದ ಹೊರತು ಇದು ಕನಸಾಗಿಯೇ ಉಳಿದು ಬಿಡುವ ಅಪಾಯವಿದೆ.

    ಉತ್ತರ
  2. Mallappa
    ಜೂನ್ 29 2015

    ನಾವು ನೂರು ಯೋಚನೆ ಮಾಡಿದರು ಆಳುವವರು, ಇಂಪ್ಲಿಮೆಂಟ ಮಾಡುವವರು ಯೋಚಿಸದೆ ಹೋದರೆ ಯಾವ ಶೈಕ್ಷಣಿಕ ಬದಲಾವಣೆಗಳು ಸಾಧ್ಯವಿಲ್ಲ. ನೀವು ಯೋಚಿಸಿದ ವಿಚಾರಗಳು ಅವರಿಗೆ ತಿಳಿಹೇಳುವವರು ಯಾರು? ರಾಜಕೀಯದವರು ತಮ್ಮ ರಾಜಕೀಯದ ಆಟದಲ್ಲಿಯೇ ವ್ಯಸ್ಥರಾಗಿದ್ದಾರೆ.ಅವರಿಗೆ ಯೋಚಿಸಲು ಸಮಯವೂ ಇಲ್ಲ, ವ್ಯವಧಾನವೂ ಇಲ್ಲ, ಅವಶ್ಯಕತೆಯೂ ಇಲ್ಲ. ಇನ್ನು ಬದಲಾವಣೆ ಹ್ಯಾಗೆ? ನಾಗರಿಕನೋಬ್ಬ ತಯಾರಾಗುವುದು ಬಾಲ್ಯದಿಂದಲೂ ಪಡೆದ ಶಿಕ್ಷಣದಿಂದ. ಶಿಕ್ಷಣವೇ ಸರಿಇಲ್ಲದಾಗ ಎಂಥಹ ನಾಗರಿಕ ತಯಾರಾಗುತ್ತವೆ? ಅದಕ್ಕಾಗಿ ಮೊದಲ ಶಿಕ್ಷಣ ವ್ಯವಸ್ಥೆ Colonial Systemನಿಂದ ಹೊರ ಬರಬೇಕಿದೆ.ಎನ್ನುತ್ತಿರಿ.

    ಉತ್ತರ
  3. Praveen Kumar Mavinakadu
    ಜೂನ್ 29 2015

    ಸಂವಹನ ಭಾಷೆಯಾಗಿ ಇಂಗ್ಲಿಷ್ ಇರಲಿ.ಅದು ಇವತ್ತಿನ ಸ್ಥಿತಿಯಲ್ಲಿ ನಾವೇ ತಂದುಕೊಂಡ ಅನಿವಾರ್ಯ.ಆದರೆ ಕಲಿಕೆಯ ಮಾಧ್ಯಮವೇ ಇಂಗ್ಲಿಷ್ ಯಾಕಾಗಬೇಕು?ಮಾತೃಭಾಷಾ ಮಾಧ್ಯಮದಲ್ಲೇ ಕಲಿಸಿ ಇಂಗ್ಲೀಷನ್ನು ಒಂದು ಭಾಷೆಯಾಗಿ ಓದಲು,ಬರೆಯಲು,ಮಾತನಾಡಲು ಕಲಿಸಿದರೆ ಸಾಲದೇ?
    ಸಂವಹನ ಭಾಷೆ ಕೇವಲ ಭಾಷೆಯಾಗಿದ್ದರೆ ಸಾಲದೇ? ವೇಷ,ಭೂಷಣ,ಹಾವ,ಭಾವ.ಆಹಾರ,ವಿಹಾರ ಎಲ್ಲದರಲ್ಲೂ ಅನುಕರಣೆ ಬೇಕೇ?
    ಇಂಗ್ಲೀಷರ ನಾಡಿನಲ್ಲಿ ಛಳಿ ಇದ್ದರೆ ಇಲ್ಲಿ 35 ಡಿಗ್ರೀ ಸೆಖೆಯಲ್ಲೂ ನಮ್ಮ ಮಗುವಿಗೆ ಸ್ವೆಟರ್ ಹಾಕಿ ಶಾಲೆಗೆ ಕಳಿಸೋದು ನೋಡಿದರೆ ಗುಲಾಮೀತನ ಎಷ್ಟು ಆಳಕ್ಕಿಳಿದಿದೆ ಅನ್ನೋದು ಗೊತ್ತಾಗುವುದಿಲ್ಲವೇ?
    ಇದುವರೆಗೂ ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ ಗೆ ಸರಿಸಾಠಿಯಾಗಬಲ್ಲ ನಾಲ್ಕು ಸಾಲಿನ ಪದ್ಯ ಬರೆಯೋಕೆ ಇಡೀ ಭಾರತದಲ್ಲಿ ಯಾರೊಬ್ಬರ ಕೈನಲ್ಲೂ ಸಾಧ್ಯವಾಗಿಲ್ಲ ಯಾಕೆ?ಬೌದ್ಧಿಕ ದಿವಾಳಿತನವೆ? Colonial Consciousneಸ್ಸೇ?

    ಯಾರಲ್ಲಿ ಕೇಳೋದು??

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments