ಭಾರತದ ಆಹಾರ ಕ್ಷೇತ್ರದಲ್ಲಿ ವಿದೇಶೀ ಬಹುರಾಷ್ಟ್ರೀಯ ಕಂಪನಿಗಳ ಕೈವಾಡ
– ಮಯೂರಲಕ್ಷ್ಮಿ,ಮೈಸೂರು
ಭಾರತಕ್ಕೆ ವಿಷವುಣಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ವಿದೇಶೀ ಬಹುರಾಷ್ಟ್ರೀಯ ಕಂಪನಿಗಳು ನಮ್ಮ ದೇಶಕ್ಕೆ ನೀಡುತ್ತಿರುವುದಾದರೂ ಏನನ್ನು? ಶಕ್ತಿಶಾಲಿ ರಾಷ್ಟ್ರವೆನಿಸಿ ವಿಶ್ವದ ನಾಯಕತ್ವ ಹೊಂದುವ ಸಾಮರ್ಥ್ಯವಿರುವ ಭಾರತೀಯರನ್ನು ಅತಿ ಸುಲಭವಾಗಿ ಕೇವಲ ‘ಗ್ರಾಹಕ’ರನ್ನಾಗಿಸಿ ಕೋಟಿಗಟ್ಟಲೆ ಲಾಭ ಪಡೆದು ತಮ್ಮ ದೇಶವನ್ನು ಸುಭಿಕ್ಷಗೊಳಿಸುವುದು ಮತ್ತು ಬಡರಾಷ್ಟ್ರಗಳನ್ನು ಗುರಿಯಾಗಿರಿಸಿಕೊಂಡು ವ್ಯಾಪಾರ ನಡೆಸಿ ಮೋಸಗೊಳಿಸಿವುದು!
ಸ್ವತಂತ್ರ ಪೂರ್ವದ ಭಾರತದಲ್ಲಿನ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿಲ್ಲ, ಆದರೆ ವಿದೇಶೀ ಸಾಲವಿರಲಿಲ್ಲ, ಭಾರತದಲ್ಲಿ ಸ್ವದೇಶೀ ವಸ್ತುಗಳ ಬಳಕೆ, ಸಾವಯವ ಕೃಷಿ ಮತ್ತು ಉತ್ತಮ ಆಹಾರ ಹಾಗೂ ಮೌಲ್ಯಗಳಿಂದ ಕೂಡಿದ ಜೀವನಶೈಲಿ ನಮ್ಮದಾಗಿತ್ತು. ಆದರೆ ಕೇವಲ ವ್ಯಾಪಾರೀ ಮನೋಭಾವದಿಂದ ಕೂಡಿದ ಜಾಗತೀಕರಣ ಮತ್ತು ಉದಾರೀಕರಣ ನೀತಿಗಳನ್ನು ತನ್ನದಾಗಿಸಿಕೊಂಡ ಭಾರತಕ್ಕೆ ಲಗ್ಗೆಯಿಟ್ಟ ವಿದೇಶೀ ಕಂಪನಿಗಳು ಆಹಾರ ಮತ್ತು ಕೃಷಿ ಕ್ಷೇತ್ರಗಳಲ್ಲಿ ತಮ್ಮ ಕರಾಳ ಹಸ್ತಗಳನ್ನು ಚಾಚಿದವು. ಕೊಳ್ಳುಬಾಕ ಸಂಸ್ಕೃತಿಯನ್ನು ಹೇರುತ್ತಾ ಗ್ರಾಹಕರನ್ನು ಕೇವಲ ತಮ್ಮ ವಸ್ತುಗಳನ್ನೇ ಕೊಳ್ಳುವ ಸ್ಥಿತಿಗೆ ತಲುಪಿಸಿದವು.ಭಾರತದ ಆಹಾರ ಉದ್ಯಮದಲ್ಲಿ ತನ್ನ ಅಲ್ಪ ಬಂಡವಾಳವನ್ನು ಹೂಡಿ ವಹಿವಾಟು ನಡೆಸಿ ಲಾಭ ಪಡೆದುಕೊಳ್ಳುತ್ತಿರುವ ಎಲ್ಲಾ ವಿದೇಶೀ ಕಂಪನಿಗಳಿಂದಾಗುತ್ತಿರುವ ಪರಿಣಾಮಗಳು ಊಹಿಸಲಸಾಧ್ಯ! ಇಂದು ಹಿರಿಯರೆನಿಸಿರುವ ಅಂದಿನ ಮಕ್ಕಳಾಗಿದ್ದ, ಯುವಕರಾಗಿದ್ದ ನಮ್ಮ ದೇಶದ ಸಾಮಾನ್ಯ ನಾಗರೀಕರ ಬದುಕು ಸರಳ-ಸಜ್ಜನಿಕೆಯಿಂದ ಕೂಡಿತ್ತು…ಅರಿವೇ ಗುರು ನುಡಿ ಎನ್ನುವುದ ನಂಬಿತ್ತು.. ಎಲ್ಲಕ್ಕಿಂತಾ ಹೆಚ್ಚಾಗಿ ಆಯ್ಕೆಗಳು ಅತಿ ಕಡಿಮೆಯಿದ್ದವು.ಆರೋಗ್ಯಕರ ಆಹಾರವಲ್ಲದೇ ಯಾವುದೇ ‘ಫಾಸ್ಟ್ ಫುಡ್‍ಗಳು’ ನಿತ್ಯಜೀವನದ ಭಾಗವಾಗಿರಲಿಲ್ಲಾ! ಕ್ರಮೇಣ ಎಲ್ಲವೂ ಬದಲಾಗತೊಡಗಿದವು..
ನಮ್ಮ ಹಿರಿಯರು ತಮ್ಮ ಬಾಲ್ಯದಲ್ಲಿ ಬಡತನವಿದ್ದರೂ ತೃಪ್ತ ಜೀವನವನ್ನು ಕಂಡಿದ್ದರು. ಮನರಂಜನೆಯ ಮೂಲ ಸಂಗೀತ, ನಾಟಕ, ಪಾಠ ಪ್ರವಚನಗಳಾಗಿದ್ದವು. ಆಹಾರಕ್ರಮವೂ ನಿಯಮಿತವಾಗಿತ್ತು.ಮನೆಯಲ್ಲಿ ತಾಯಿ ತಯಾರಿಸಿದ ಪ್ರೀತಿಯ ತಿನಿಸುಗಳಲ್ಲೇ ಸುಖ ಕಾಣುತ್ತಿದ್ದರು.ಬರುಬರುತ್ತಾ ಜಾಗತೀಕರಣ, ಉದಾರೀಕರಣ ನೀತಿಗಳಿಂದ ವಿದೇಶೀ ಬಹುರಾಷ್ಟ್ರೀಯ ಕಂಪನಿಗಳು ಭಾರತಕ್ಕೆ ಅತಿ ಸುಲಭವಾಗಿ ಬಂದು ಗ್ರಾಹಕರಿಗೆ ಯಾವುದೇ ವಸ್ತು ಸ್ವದೇಶಿಯೋ ಅಥವಾ ವಿದೇಶಿಯೋ? ಎನ್ನುವುದರ ಅರಿವಿಲ್ಲದಂತೆ ಈ ದೇಶದಲ್ಲಿ ಸುಸ್ಥಿರವಾಗಿ ಮಾರುಕಟ್ಟೆ ಕಂಡು ನಮ್ಮ ಜೀವನಶೈಲಿಯನ್ನೇ ಬದಲಿಸಿದವು.
ಸುದ್ದಿ ಮತ್ತು ಜ್ಞಾನಕ್ಕಷ್ಟೇ ಮೀಸಲಿದ್ದ ರೇಡಿಯೋ ಮತ್ತು ದೂರದರ್ಶನಗಳು ಖಾಸಗೀ ವಾಹಿನಿಗಳಿಂದಾಗಿ, ಅದರಲ್ಲೂ ಬಹುತೇಕ ವಿದೇಶೀ ಬಹುರಾಷ್ಟ್ರೀಯ ಕಂಪನಿಗಳ ಮಾಲೀಕತ್ವ ಹೊಂದಿದ ವಾಹಿನಿಗಳು ಬಿತ್ತರಿಸತೊಡಗಿದ ಜಾಹೀರಾತುಗಳು ಮೊದಲು ಮಕ್ಕಳನ್ನೂ ಕ್ರಮೇಣ ನಮ್ಮ ಯುವಜನತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನೀಡತೊಡಗಿದ ಎಲ್ಲಾ ವಸ್ತುಗಳೂ ಬದುಕಿನ ಬದಲಾವಣೆಯ ಸಂಕೇತಗಳಾಗತೊಡಗಿದವು. ಜಂಕ್ ಫುಡ್ ಅಥವಾ ಘನೀಕರಿಸಿದ ಆಹಾರಗಳು ಮಾರುಕಟ್ಟೆಯಿಂದ ಮನೆಗೆ ದಾಳಿಯಿಟ್ಟವು. ಪೆಪ್ಸಿ-ಕೋಕ್‍ಗಳಂತಹ ವಿಷಯುಕ್ತ, ರಾಸಾಯನಿಕಯುಕ್ತ ಪೇಯಗಳು ಅಂದಿನಿಂದ ಆರಂಭವಾಗಿ ಇಂದಿನವರೆಗೂ ನಮ್ಮ ಮಕ್ಕಳ ಯುವಕರ ಆರೋಗ್ಯಕ್ಕೆ ಮಾರಕವೆನಿಸುತ್ತಲೇ ಇದೆ. ಇದಕ್ಕೆ ಪೂರಕವಾಗಿ ತಮ್ಮ ಸ್ವಾರ್ಥದಿಂದ ಯುವಕರ ಮೇಲಾಗುವ ಪರಿಣಾಮಗಳನ್ನೂ ಯೋಚಿಸದೆ ಈ ದೇಶದ ಭವಿಷ್ಯವನ್ನು ಹಾಳುಗೆಡವ ವಿದೇಶೀ ಕಂಪನಿಗಳಿಗೆ ಜಾಹೀರಾತುಗಳನ್ನು ನೀಡಿ ತಪ್ಪು ದಾರಿಗೆಳೆಯಲಾರಂಭಿಸಿದ್ದು ಇನ್ಯಾರೂ ಅಲ್ಲಾ, ಈ ದೇಶದ ಸಿನೆಮಾ ತಾರೆಯರು, ಕ್ರಿಕೆಟ್ ತಾರೆಯರು…
ಜಂಕ್ ಫುಡ್‍ಗಳಿಗೆ ನಮ್ಮ ದೇಶದ ಮಕ್ಕಳು ಬಲಿಯಾಗುತ್ತಿರುವುದು ಎಂದಿನಿಂದ? ಕಳೆದ 3 ದಶಕಗಳಲ್ಲಿಯೇ ನಮ್ಮ ನಗರ ಜೀವನದಲ್ಲಿ ಮಹತ್ತರ ಬದಲಾವಣೆಗಳಾಗಿವೆ.ಸರಿಸುಮಾರು 30 ವರ್ಷಗಳ ಹಿಂದಿನವರ ಬಾಲ್ಯವನ್ನು ಇಂದಿನ ಮಕ್ಕಳ ಬಾಲ್ಯಕ್ಕೆ ಹೋಲಿಸಿದರೆ ಕಂಡುಬರುವ ವ್ಯತ್ಯಾಸ ಅಪಾರ.ಯಾವುದೇ ಆಡಂಬರವಿಲ್ಲದ ಜೀವನಶೈಲಿ, ಸರಳ ಬದುಕು, ಕೂಡು ಕುಟುಂಬದಲ್ಲಿ ತಮ್ಮ ಹೆತ್ತವರೊಂದಿಗೆ ಅಜ್ಜ-ಅಜ್ಜಿ ಅಷ್ಟೇ ಅಲ್ಲದೆ ಚಿಕ್ಕಪ್ಪ, ಚಿಕ್ಕಮ್ಮ, ಅವರ ಮಕ್ಕಳು, ಇದರೊಂದಿಗೆ ಮನೆಯವರೊಂದಿಗೆ ಒಂದಾಗಿ ಬದುಕುತ್ತಿದ್ದವರು ಕೆಲವೊಮ್ಮೆ ವಿದ್ಯಾಭ್ಯಾಸದ ನೆರವು ಕೋರಿ ಹಳ್ಳಿಗಳಿಂದ ಬರುತ್ತಿದ್ದ ಬಡ ಮಕ್ಕಳು….ಮನೆಯಲ್ಲಿ ಗೋವುಗಳು…ಇದೆಲ್ಲವೂ ಜಾಗತೀಕರಣದ ಕೆಲವೇ ವರ್ಷಗಳ ಹಿಂದಣ ಚಿತ್ರಣ. ಆದರೆ ಇಂದು?
ಪರಸ್ಪರ ಪ್ರೀತಿ ವಿಶ್ವಾಸ, ನಂಬಿಕೆಗಳ ಕೊರತೆಯಿಂದ ಬದುಕುವ ಹಿರಿಯರು, ಹಿರಿಯರ ಪ್ರೀತಿಯ ಕೊರತೆಯಿಂದ ಕೊರಗಿ ತಮ್ಮ ನೆಮ್ಮದಿಗಾಗಿ ಅನ್ಯ ದಾರಿಗಳನ್ನು ಹುಡುಕುವ ಯುವಕರು….ಆಧುನಿಕ ಬದುಕಿನ ಮರೀಚಿಕೆಯಿಂದ ತಮ್ಮ ಗುರಿಗಳನ್ನು ತಲುಪಲಾಗದ, ಕನಸುಗಳನ್ನು ಸಾಕಾರಗೊಳಿಸಲಾಗದ ಹತಾಶೆಯಿಂದ ಮಕ್ಕಳನ್ನು ಉಪೇಕ್ಷಿಸಿ ನೆಮ್ಮದಿಯ ಜೀವನ ಜೀವಿಸದ ಹಿರಿಯರು….ಜಾಗತೀಕರಣದಿಂದ ಪಾಶ್ಚ್ಯಾತ್ಯ ಸಂಸ್ಕೃತಿಯ ಗುಲಾಮರಾಗತೊಡಗಿ, ತಮ್ಮ ವರ್ತನೆ, ವಿಚಾರಗಳಷ್ಟೇ ಅಲ್ಲದೇ ಆಹಾರಶೈಲಿಯೂ ಬದಲಾದತೊಡಗಿ ಅನೇಕ ದಶಕಗಳೇ ಸಂದಿವೆ.ಇವುಗಳ ವಿರುದ್ಧ ಸತತವಾಗಿ ಹೋರಾಡಿ ದೇಶದ ಎಲ್ಲೆಡೆ ಸಂಚರಿಸಿ ಸ್ವದೇಶೀ ಚಿಂತನೆಗಳಿಂದ ಮೌಲ್ಯಾಧಾರಿತ ಬದುಕಿನ ಪರಿಕಲ್ಪನೆಯನ್ನು ರಾಜೀವ್ ದೀಕ್ಷಿತರಂತಹವರು ನೀಡುತ್ತಲೇ ಬಂದರು.
ಆದರೆ ಉದಾರೀಕರಣ ನೀತಿ, ವಿದೇಶೀ ಸಾಲ, ಗ್ಯಾಟ್ ಒಪ್ಪಂದ, ಡಂಕೆಲ್ ಪ್ರಸ್ತಾವನೆಗಳನ್ನು ಜಾಗತಿಕ ಮಟ್ಟದಲ್ಲಿ ಒಪ್ಪಕೊಂಡ ನಮ್ಮ ದೇಶವು ವಿದೇಶೀ ಕಂಪನಿಗಳ ಮಾಯಾಜಾಲಕ್ಕೆ ಸಿಲುಕಿ ಹೊಂದಿರುವ ನಷ್ಟದ ತೀವ್ರತೆ ಎಷ್ಟಿದೆಯೆಂದರೆ, ಕೈಮೀರಿದ ಪರಿಸ್ಥಿತಿಯನ್ನು ಸರಿಪಡಿಸಲು ಎಷ್ಟೇ ಪ್ರಯತ್ನಿಸಿದರೂ ಆಗದ ಅಸಹಾಯಕ ಸ್ಥಿತಿಯನ್ನು ನಾವಿಂದು ತಲುಪಿಯಾಗಿದೆ!
ವ್ಯಾಪಾರ ಮತ್ತು ಉದ್ಯೋಗಗಲ್ಲಿ ಮೇಲ್ವಿಚಾರಣೆ ಮತ್ತು ಉದಾರೀಕರಣದ ಉದ್ದೇಶಗಳಿಂದ ಎಲ್ಲಾ ರಾಷ್ಟ್ರಗಳಲ್ಲಿ ಅಂಗೀಕೃತ ಒಪ್ಪಂದವೊಂದನ್ನು ರಚಿಸುವ ಉದ್ದೇಶದಿಂದ ಆರಂಭವಾದದ್ದು ‘ಗ್ಯಾಟ್’ – ಸುಂಕಗಳು ಮತ್ತು ವ್ಯಾಪಾರದ ಮೇಲಿನ ಸಾಮಾನ್ಯ ಒಪ್ಪಂದ’ ಈ ಸಂಸ್ಥೆ ನಂತರ 1995ರಲ್ಲಿ ಹಲವು ಮಾರ್ಪಾಡುಗಳೊಂದಿಗೆ ‘ಡಬ್ಲ್ಯು.ಟಿ.ಓ.’ ಅಥವಾ ವಿಶ್ವ ವ್ಯಾಪಾರ ಒಕ್ಕೂಟ ಎಂದು ನಾಮಕರಣಗೊಂಡು ನಂತರ 124 ವಿವಿಧ ದೇಶಗಳ ಒಪ್ಪಂದ ಪಡೆಯುವುದರಲ್ಲಿ ಯಶಸ್ವಿಯಾಯಿತು. ಈ ಒಪ್ಪಂದವು ಮುಂದುವರೆದ ದೇಶಗಳೊಂದಿಗೆ ಇದ್ದರೂ ಅಭಿವೃದ್ಧಿಶೀಲ ದೇಶಗಳ ಒಪ್ಪಿಗೆ ಪಡೆದು ಆ ದೇಶಗಳಲ್ಲಿ ತನ್ನ ವ್ಯಾಪಾರದಿಂದ ಅಪಾರ ಲಾಭ ಪಡೆಯುವುದು ಇದರ ಮೂಲ ಧ್ಯೇಯಗಳಲ್ಲೊಂದು. 1990ರವರೆಗೂ ಈ ವಿದೇಶೀ ಕಂಪನಿಗಳ ವಹಿವಾಟು ಭಾರತದಲ್ಲಿ ಅಧಿಕವಾಗಿರಲಿಲ್ಲ…. ನಂತರ ಹೆಚ್ಚಾಗತೊಡಗಿತು…. ಇದಕ್ಕೆ ಕಾರಣ ವ್ಯಾಪಾರೀಕರಣದ ಸುಲಭ ಸೂತ್ರ ಪಾಶ್ಚ್ಯಾತ್ಯೀಕರಣ!
ಅಂದಿನ ಯುವಜನತೆಯಲ್ಲಿ ಬದಲಾವಣೆ ತರಲೇಬೇಕಿತ್ತು… ತಮ್ಮ ದೇಶದಲ್ಲೇ ಬಿಕರಿಯಾಗದೆ ತಿರಸ್ಕೃತ ಹೊಂದುವ ವಸ್ತುಗಳನ್ನು ಇತರ ಅಭಿವೃದ್ಧಿಶೀಲ ಅಥವಾ ಬಡರಾಷ್ಟ್ರಗಳಿಗೆ ತಲುಪಿಸಿ ಲಾಭ ಪಡೆಯುವುದು ವಿದೇಶೀ ಬಹುರಾಷ್ಟ್ರೀಯ ಕಂಪನಿಗಳ ಗುರಿ! ತಾವು ಹಾಕುವ ಅಲ್ಪ ಬಂಡವಾಳದಿಂದಲೇ ತಮ್ಮ ದೇಶಕ್ಕೆ ಕೊಂಡೊಯ್ಯುವ ಲಾಭ ಹತ್ತರಷ್ಟು! ನೂರರಷ್ಟು!ಉದಾಹರಣೆಗೆ ಒಂದು ವಿದೇಶೀ ಕಂಪನಿಯು ಭಾರತದಲ್ಲಿ 40 ರೂಪಾಯಿಯಷ್ಟು ಯಾವುದೇ ಒಂದು ಗ್ರಾಹಕ ವಸ್ತುವಿನ ಬಂಡವಾಳವಾಗಿ ಹಣ ಹೂಡಿದೆಯೆಂದಾದರೆ ಅದು ಪಡೆಯುವ ಲಾಭ 150ರಷ್ಟು!
ಪ್ರತಿಯೊಬ್ಬ ಭಾರತೀಯನನ್ನು ಒಬ್ಬ ಗ್ರಾಹಕ (ಕನ್ಸ್ಯೂಮರ್) ಎನ್ನುವ ದೃಷ್ಟಿಯಿಂದಲೇ ನೋಡುವ ಈ ವಿದೇಶೀ ಕಂಪನಿಗಳು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳುವುದು ನಮ್ಮ ಯುವಜನತೆಯನ್ನು. ಪುಟ್ಟ ಮಕ್ಕಳನ್ನು.ಹಿಂದೂಸ್ಥಾನ್ ಲೀವರ್ ಲಿಮಿಟೆಡ್. ಕೋಲ್ಗೇಟ್-ಪಾಮೋಲೀವ್, ನೆಸ್ಲೆ ಮುಂತಾದ ಅನೇಕ ಕಂಪನಿಗಳು ಎಲ್ಲಾ ಗ್ರಾಹಕ ಕ್ಷೇತ್ರಕ್ಕೂ ಲಗ್ಗೆಯಿಟ್ಟರೂ ಅಲ್ಪ ಬಂಡವಾಳದಿಂದ ದುಪ್ಪಟ್ಟು ಲಾಭಪಡೆಯತೊಡಗಿದ್ದು ಆಹಾರ ಉತ್ಪಾದನಾ ಕ್ಷೇತ್ರದಲ್ಲಿ. ಇಂದು ಬಹು ಚರ್ಚಿತವಾಗಿರುವ ಎಲ್ಲರ ಪ್ರೀತಿಯ ದಿನನಿತ್ಯ ಆಹಾರ ‘ಮ್ಯಾಗಿ’ ಸರಿಸುಮಾರು 20 ವರ್ಷಗಳ ನಂತರ ಇಂದು ನಿಧಾನ ವಿಷ ಆಗಿದ್ದು, ಇಷ್ಟು ತಡವಾದದ್ದು ಏಕೆ? ಎನ್ನುವ ಚಿಂತನೆಗೆ ದೂಡುವುದು ಸಹಜ. ಇಷ್ಟಕ್ಕೂ ಈ ನೆಸ್ಲೆ ಕಂಪನಿಯ ವ್ಯಾಪಾರ ವಹಿವಾಟುಗಳ ಅರಿವು ನಮಗೆ ಅವಶ್ಯಕ!
ನೆಸ್ಲೆ: ಸ್ವಿಟ್ಸರ್ಲೆಂಡ್‍ನ ಒಂದು ಬಹುರಾಷ್ಟ್ರೀಯ ಆಹಾರ ಮತ್ತು ಪೇಯಗಳ ಕಂಪನಿ. ಇದರ ಆದಾಯದ ದೃಷ್ಟಿಯಿಂದ ನೋಡಿದರೆ ವಿಶ್ವದ ಅತ್ಯಂತ ದೊಡ್ಡ ಆಹಾರ ಕಂಪನಿಯೆನಿಸಿಕೊಂಡಿದೆ. ಇದರ ಉತ್ಪನ್ನಗಳು ಶಿಶು ಆಹಾರ, ಬಾಟಲೀಕೃತ ನೀರು, ಉಪಾಹಾರದ ಧಾನ್ಯಗಳು, ಕಾಫೀ, ಚಹಾ, ಸಿಹಿ ತಿನಿಸುಗಳು, ಕ್ಷೀರೋತ್ಪನ್ನಗಳು, ಐಸ್‍ಕ್ರೀಂ, ಶೈತ್ಯೀಕರಿತ ಆಹಾರ, ಸಾಕುಪ್ರಾಣಿಗಳ ಆಹಾರಗಳಲ್ಲದೇ ನೂರಾರು ಬಗೆಯ ಲಘು ಆಹಾರಗಳನ್ನು ಒಳಗೊಂಡಿರುವ ಈ ಕಂಪನಿಯು ಸ್ವಿಟ್ಸರ್ಲೆಂಡ್‍ನಿಂದ ತನ್ನ ವಹಿವಾಟನ್ನು ವಿಸ್ತರಿಸುತ್ತಾ ಅಮೇರಿಕಾ ಮತ್ತು ಯೂರೋಪನ್ನು ತಲುಪಿತು ಆದರೆ 1977ರಲ್ಲಿ ಈ ಕಂಪನಿಯ ಉತ್ಪನ್ನಗಳನ್ನು ನಿಲ್ಲಿಸುವ ನಿಟ್ಟಿನಲ್ಲಿ ಅಂತರ್ರಾಷ್ಟ್ರೀಯ ಮಕ್ಕಳ ಆಹಾರ ಸಂರಕ್ಷಣೆ ಸಂಸ್ಥೆಯಿಂದ ಪ್ರತಿರೋಧ ಆರಂಭವಾಯಿತು. ಇದಕ್ಕೆ ಕಾರಣ ತಾಯಿಯ ಹಾಲಿಗೂ ನೆಸ್ಲೆ ಕಂಪನಿಯ ಶಿಶು ಆಹಾರಕ್ಕೂ ಇದ್ದ ವ್ಯತ್ಯಾಸ ಆರೋಗ್ಯದ ದೃಷ್ಟಿಯಿಂದ ಮಾರಕ ಎನ್ನುವ ಕಾರಣದಿಂದ. ಇಂಗ್ಲೆಂಡಿನ ‘ನ್ಯೂ ಇಂಟರ್‍ನ್ಯಾಶನಲಿಸ್ಟ್’ ಎನ್ನುವ ನಿಯತಕಾಲಿಕೆಯಲ್ಲಿ ಈ ಕುರಿತು ಎಚ್ಚರಿಕೆಯ ಲೇಖನ ಮುದ್ರಣಗೊಂಡಿತು. ನಂತರ ಮತ್ತೊಂದು ಸರ್ಕಾರೇತರ ಸಂಸ್ಥೆಯಿಂದ ‘ದ ಬೇಬಿ ಕಿಲ್ಲರ್’ ಎನ್ನುವ ಕಿರುಹೊತ್ತಿಗೆಯೂ ಹೊರಬಂದಿತು. ಇದರ ನಡುವೆ ಅನೇಕ ಪ್ರತಿರೋಧಗಳು ವಿವಿಧ ಸಂಘಸಂಸ್ಥೆಗಳಿಂದ ನಡೆಯಿತು. 1977ರಲ್ಲಿ ಅಮೇರಿಕಾದಲ್ಲೂ ಹಾಗೂ 1980ರ ಸುಮಾರಿಗೆ ಯೂರೋಪನಲ್ಲಿ ಇದರ ನಿಷೇಧ ಪ್ರಕ್ರಿಯೆ ಆರಂಭವಾಯಿತು.
‘ವರ್ಲ್ಡ್ ಹೆಲ್ತ್ ಅಸೆಂಬ್ಲಿ’ಯ ಶಿಶುವಿನ ಅಗತ್ಯ ಆಹಾರವಾದ ಎದೆಹಾಲಿನ ಬದಲಿ ಆಹಾರಗಳ ಕುರಿತು ಅಂತರ್ರಾಷ್ಟ್ರೀಯ ಕಾನೂನು ಕಾಯ್ದೆಯ ಅನ್ವಯದಲ್ಲಿ ಈ ಬದಲಿ ಆಹಾರವು ಆರೋಗ್ಯಕ್ಕೆ ಮಾರಕ ಎನ್ನುವ ನಿಲುವನ್ನು ವ್ಯಕ್ತಪಡಿಸಿತು. ತಾಯಿಯ ಹಾಲು ಮಾತ್ರ ಮಗುವಿನ ಆರೋಗ್ಯ ಮತ್ತು ಪೋಷಣೆಗೆ ಪೂರಕ ಎನ್ನುವ ಕಾರಣದಿಂದ ಎಲ್ಲೆಡೆ ಸಹಜ ವಿರೋಧಗಳಿದ್ದವು. ಇದರೊಂದಿಗೆ ತಾಯಿ ಹಾಲಿನ ಬದಲಿಗೆ ಆಹಾರವಾದ ನೆಸ್ಲೆ ಕಂಪನಿಯ ಈ ಹಾಲಿನ ಪುಡಿಯಿಂದ ಸಿದ್ಧಪಡಿಸಲಾಗುವ ಹಾಲಿನಲ್ಲಿ ಅನೇಕ ಆರೋಗ್ಯಪೂರಕ ಅಂಶಗಳ ಮತ್ತು ಹಲವು ಪೋಷಕಾಂಶಗಳ ಕೊರತೆಯಿಂದಾಗಬಹುದಾದ ವ್ಯತಿರಿಕ್ತ ಪರಿಣಾಮಗಳನ್ನೂ ಪರಿಗಣಿಸಿ ಶಿಶುವಿಗೆ ಅಗತ್ಯವಾದ ಆಹಾರವು ಆರೋಗ್ಯಕ್ಕೆ ಮಾರಕವಾಗದಂತಹ ಕಟ್ಟಳೆಗಳನ್ನು ಆಹಾರ ಕಂಪನಿಗಳಿಗೆ ಅಂತ್ರಾಷ್ಟ್ರೀಯ ಶಿಶು ಆಹಾರ ನಿಯಮಿತ ಅಥವಾ ‘ಐ.ಬಿ.ಎಫ್.ಬಿ.ಏನ್’ ಸಂಸ್ಥೆ ರೂಪಿಸಿತು.
ಈ ನಿಷೇಧವನ್ನು ಜಾರಿಗೊಳಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತಿದ್ದ ಕಾರ್ಯಕರ್ತರೊಂದಿಗೆ ನೆಸ್ಲೆ ಕಂಪನಿಯ ಮಾತುಕತೆ ನಡೆದ ಪರಿಣಾಮ 1984ರಲ್ಲಿ ಪರಿಷ್ಕೃತ ರೂಪದಲ್ಲಿ ನೆಸ್ಲೆ ಕಂಪನಿಯ ಶಿಶು ಹಾಲಿನ ಉತ್ಪನ್ನ ಮತ್ತೆ ಮಾರಕಟ್ಟೆ ತಲುಪಲು ಯಶಸ್ವಿಯಾಯಿತು.1998ರಲ್ಲಿ ಈ ಉತ್ಪನ್ನಗಳು ಕಳಪೆ ಗುಣಮಟ್ಟವೆಂದು ನಿರೂಪಿತವಾದ ಪ್ರತಿರೋಧದಿಂದಾಗಿ ನಿಷೇಧ ಮತ್ತೆ ಜಾರಿಯಾಯಿತು.ಈ ವಿರೋಧ ಮತ್ತು ಪುನರ್‍ಸ್ಥಾಪನೆಯ ಪ್ರಕ್ರಿಯೆಗಳು ನಡೆಯುತ್ತಲೇ ಇದ್ದು. ನೆಸ್ಲೆ ಕಂಪನಿಯ ವ್ಯವಹಾರವಂತೂ ಎಲ್ಲಾ ದೇಶಗಳಲ್ಲಿ ಯಶಸ್ವಿಯಾಗಿ ನಡೆಯುತ್ತಲೇ ಹೋಯಿತು.2013ರ ಹೊತ್ತಿನಲ್ಲಿ ಯು.ಕೆ,ಯ ‘ಇಂಟರ್‍ನ್ಯಾಶನಲ್ ನೆಸ್ಲೆ ಬಾಯ್‍ಕಾಟ್ ಕಮಿಟಿ’ ಎನ್ನುವ ಶಿಶು ಆಹಾರ ಸಂರಕ್ಷಣಾ ಸಮಿತಿಯ ಪರಿಶೀಲನೆಯಡಿಯಲ್ಲಿಯೇ ನೆಸ್ಲೆ ತನ್ನ ಕಾರ್ಯ ನಿರ್ವಹಿಸುತ್ತಲಿದೆ.
ಅನೇಕ ವಿಶ್ವವಿದ್ಯಾಲಯಗಳೂ, ಶಾಲಾ-ಕಾಲೇಜುಗಳು ನೆಸ್ಲೆ ಕಂಪನಿಯ ಉತ್ಪನ್ನಗಳನ್ನು ಬ್ಯಾನ್ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಲೇ ಇದೆ.ಆದರೆ ಅಚ್ಚರಿಯ ಸಂಗತಿಯೆಂದರೆ ನೆಸ್ಲೆ ಕಂಪನಿಯು ತಾನು ಅಂತರ್ರಾಷ್ಟ್ರೀಯ ಕಾನೂನಿನ ಕಟ್ಟಳೆಗೆ ಬದ್ಧವೆಂದೂ ವಾರ್ಷಿಕ ಆಡಿಟ್‍ಗಳನ್ನು ಕಂಪನಿಯು ನಿರ್ವಹಿಸುತ್ತಿದೆಯೆಂದೇ ನಿಲುವು ಸ್ಥಪಿಸುತ್ತಿದೆ. 2011ರಲ್ಲಿ ನೆಸ್ಲೆ ಕಂಪನಿಯ ಶಿಶು ಉತ್ಪನ್ನಗಳ ಗುಣಮಟ್ಟಗಳ ಕುರಿತ ಚರ್ಚೆ ‘ಏಷಿಯಾ-ಪೆಸಿಫಿಕ್’ ಪ್ರಾಂತ್ಯದಲ್ಲಿ ತೀವ್ರ ರೂಪ ಪಡೆಯಿತು. ಈ ಕಂಪನಿಯು ತನ್ನ ಗುಣಮಟ್ಟ ಪರಿಶೀಲನೆಯಲ್ಲಿ ಸೋತಿದೆಯೆಂದೂ, ವ್ಯಾಪಾರದ ಕಾರ್ಯವೈಖರಿಯಲ್ಲೂ ಸಮರ್ಪಕವಾಗಿಲ್ಲವೆನ್ನುವ ವಿಚಾರಗಳು ಬಹುಚರ್ಚಿತವಾದವು. ಇಷ್ಟೆಲ್ಲಾ ಆದರೂ ಯಾವುದಕ್ಕೂ ಹೆದರದ ಈ ಕಂಪನಿಯು ತನ್ನ ಬೇರೆ ಬೇರೆ ರೀತಿಯ ಉತ್ಪನ್ನಗಳಿಂದ ವ್ಯಾಪಾರವನ್ನು ವಿಸ್ತರಿಸುತ್ತಲೇ ಹೋಯಿತು…. ಶಿಶು ಆಹಾರವಾದ ‘ಸೆರೆಲ್ಯಾಕ್’ನಿಂದಾ ಹಿಡಿದು ನೀರಿನ ಬಾಟಲಿ, ಚಾಕೋಲೇಟ್‍ಗಳು, ಕುಕೀಸ್ ಅಥವಾ ಬಿಸ್ಕತ್ತುಗಳು, ಕಾಫೀ-ಟೀ ಪುಡಿಗಳು, ಹಾಲಿನ ಉತ್ಪನ್ನಗಳು, ಐಸ್‍ಕ್ರೀಂಗಳು… ಇಂತಹ ನೂರಾರು ಗ್ರಾಹಕ ವಸ್ತುಗಳನ್ನು ಪ್ರಪಂಚದೆಲ್ಲೆಡೆ ಕೊಂಡೊಯ್ದ ಈ ಕಂಪನಿಯು ಸತತವಾಗಿ ಲಾಭ ಪಡೆಯುತ್ತಲೇ ಹೋಯಿತು…ಇತ್ತ ಭಾರತದಂತಹ ಅಭಿವೃದ್ಧಿಶೀಲ ದೇಶಗಳಷ್ಟೇ ಅಲ್ಲದೆ ಬಡ ದೇಶಗಳೂ ‘ನೆಸ್ಲೆ’ಯಂತಹ ಸಾವಿರಾರು ಅಮೇರಿಕಾ, ಜರ್ಮನಿ ಮತ್ತು ಯೂರೋಪ್ ಮೂಲದ ಬಹುರಾಷ್ಟ್ರೀಯ ಕಂಪನಿಗಳ ಬಲಿಪಶುಗಳಾದವು.
1994ರಲ್ಲಿ ಇದೇ ನೆಸ್ಲೆ ಕಂಪನಿಯು ಭಾರತದ ಮಾರುಕಟ್ಟೆಯಲ್ಲ ‘ಮ್ಯಾಗೀ 1-2-3 ನೂಡಲ್ಸ್’ ಆರಂಭಿಸಿತು. ಇದು ಆರಂಭದಲ್ಲಿ ಕೇವಲ ಶ್ರೀಮಂತ ವರ್ಗದ ಆಹಾರವೆನಿಸಿದ್ದು ಕ್ರಮೇಣ ಮಧ್ಯಮ ವರ್ಗದ ಜನರನ್ನೂ ತಲುಪಿತು. ‘ದಿ ಎಕನಾಮಿಕ್ ಟೈಮ್ಸ್’ ನ 2003ರ ವರದಿ: ಅಂದಿನ ‘ನೆಸ್ಲೆ-ಇಂಡಿಯಾ’ದ ಹೆಸರಲ್ಲಿ ವ್ಯಾಪಾರ ನಡೆಸುತ್ತಿದ್ದ ಈ ಕಂಪನಿಯ ಅಂದಿನ ಛೇರ್‍ಮನ್ ನೀಡಿದ ಹೇಳಿಕೆಯ ಪ್ರಕಾರ ಪ್ರಪಂಚದಲ್ಲಿ ಅತಿ ಹೆಚ್ಚು ಮ್ಯಾಗೀ ನೂಡಲ್ಸ್ ಮಾರಾಟವಾಗುತ್ತಿರುವುದು ಭಾರತದಲ್ಲೇ!ಇದರರ್ಥ ಮಧ್ಯಮ ವರ್ಗ ತಲುಪಿದ ಈ ಆಹಾರವು ಕ್ರಮೇಣ ಬಡವರಿಗೂ ಸಿಗುವ 5 ರೂಪಾಯಿ ಸುಲಭ ದರದ ರೂಪದಲ್ಲಿ ಬಿಕರಿಗೊಂಡು ಎಲ್ಲರ ದಿನನಿತ್ಯದ ಅಮ್ಮ ಅತಿ ಸುಲಭವಾಗಿ ಮಾಡಿಕೊಡುವ ಸಂತಸ ಮತ್ತು ಆರೋಗ್ಯಕರ ಆಹಾರದ ಪ್ರತೀಕವೆನಿಸಿತು.
ಇದು ಕೇವಲ ನೆಸ್ಲೆಯ ಕಥೆಯಲ್ಲಾ, ಆಹಾರ, ಮನರಂಜನೆ, ವಿದ್ಯಾಭ್ಯಾಸ ಮುಂತಾದ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಮೇಲುಗೈ ಸಾಧಿಸಿದ ಹಿಂದೂಸ್ಥಾನ್ ಲೀವರ್, ಕೋಲ್ಗೇಟ್ ಪಾಮೋಲೀವ್, ಮುಂತಾದ ಸಾವಿರಾರು ಕಂಪನಿಗಳು ಒಂದು ಅಭಿವೃದ್ಧಿಶೀಲ ರಾಷ್ಟ್ರದ ಸತ್ಪ್ರಜೆಗಳನ್ನು ಯಕಶ್ಚಿತ್ ಗ್ರಾಹಕನ ಮಟ್ಟಕ್ಕೆ ತಂದು ನಿಲ್ಲಿಸಿತು. ಈ ಎಲ್ಲಾ ಗ್ರಾಹಕ ವಸ್ತುಗಳ ಗುಣಮಟ್ಟದಲ್ಲಿನ ನಿಜವಾದ ಪರಿಶೀಲನೆ ಆಗಿದೆಯಾ? ಹಾಗಿದ್ದಲ್ಲಿ ಕಳೆದ ಹಲವಾರು ವರ್ಷಗಳಿಂದಾ ನಮ್ಮ ಆರೋಗ್ಯಕ್ಕೆ ತೀವ್ರ ಪರಿಣಾಮಗಳನ್ನುಂಟು ಮಾಡುತ್ತಿರುವ ಈ ಎಲ್ಲಾ ಆಹಾರ ವಸ್ತುಗಳ ಸತ್ಯಾಸತ್ಯತೆಯನ್ನು ಕಂಡುಹಿಡಿಯಲು ನಮ್ಮಲ್ಲಿ ಪ್ರಯೋಗಾಲಯಗಳು ಪ್ರಯತ್ನಿಸಿದೆಯೇ? ಒಂದು ವಿದೇಶೀ ಕಂಪನಿಯು ಸುಲಭ ಆಹಾರ ಎನ್ನುವ ನೆಪದಲ್ಲಿ ‘ಮ್ಯಾಗೀ’ ಎನ್ನುವ ನಿಧಾನ ವಿಷವನ್ನುಣಿಸಲಾರಂಭಿಸಿತು. ಇಂತಹ ಆಹಾರಗಳ ಕುರಿತು ರಾಜೀವ್ ದೀಕ್ಷಿತರಂತಹ ಮಹನೀಯರು ಸತತವಾಗಿ ಎಚ್ಚರಿಸುತ್ತಲೇ ಬಂದಿದ್ದರು. 20 ವರ್ಷಗಳು ತನ್ನ ಮೋಸದಿಂದ ಈ ದೇಶದ ದೌರ್ಬಲ್ಯದ ಲಾಭ ಪಡೆದು ಇದೀಗ ಇಂತಹ ಆಹಾರವನ್ನು ನಿಷೇಧಿಸುವ ಮಾತುಗಳು ಕೇಳಿಬರುತ್ತಿವೆ… ಇಂತಹ ನೂರಾರು ಕಂಪನಿಗಳ ಆಹಾರಗಳು ಸಂಪೂರ್ಣವಾಗಿ ನಿಷೇಧಗೊಂಡು, ತನ್ನ ನಷ್ಟದಿಂದ ತಾನಾಗೇ ಈ ದೇಶವನ್ನು ಬಿಡುವ ಪರಿಸ್ಥಿತಿ ಬರುವವರೆಗೂ ನಮ್ಮ ಮಕ್ಕಳು ಆರೋಗ್ಯಕರ ಭವಿಷ್ಯದಲ್ಲಿ ಜೀವಿಸುವ ಕನಸು ಕನಸಾಗಿಯೇ ಉಳಿಯುವುದು ನಿಶ್ಚಿತ!
Uttama lekhana akkaa…