ಪರಿಹಾರಭಾಗ್ಯದ ಆಸೆಗೆ ಪ್ರಾಣ ಕಳೆದುಕೊಂಡ ಶಾಸಕ
– ಪ್ರವೀಣ್ ಕುಮಾರ್ ಮಾವಿನಕಾಡು
ಶಾಸಕರು ಅಥವಾ ಮಂತ್ರಿಗಳು ಆತ್ಮಹತ್ಯೆ ಮಾಡಿಕೊಂಡರೆ ರೈತ ಸಂಘಟನೆಗಳ ವತಿಯಿಂದ ಪರಿಹಾರ ನೀಡಲಾಗುವುದು ಎನ್ನುವ ಘೋಷಣೆಯನ್ನು ನಂಬಿ ಶಾಸಕನೊಬ್ಬ ಅಧಿವೇಶನದ ನಡುವೆಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ!ಶೂನ್ಯ ವೇಳೆಯಲ್ಲಿ ಶೌಚಾಲಯದಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ ಶಾಸಕನನ್ನು ಕೆಳಗಿಳಿಸಿ ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಮಾರ್ಗಮದ್ಯದಲ್ಲಿಯೇ ಅಸುನೀಗಿದ್ದಾನೆ.
ಇದರಿಂದ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣಗೊಂಡಿದ್ದು ಇತರ ಶಾಸಕರು ರಾಜ್ಯ ಹೆದ್ದಾರಿಯಲ್ಲಿ ಟೈರ್ ಗಳನ್ನು ಸುಟ್ಟು ಪ್ರತಿಭಟನೆ ನಡೆಸಿದರು.ರೈತ ಸಂಘಟನೆಗಳ ರಾಜ್ಯ ಮುಖಂಡರು ಬಂದು ಪರಿಹಾರ ನೀಡುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದ ಶಾಸಕರು,ಮೃತ ದೇಹವನ್ನು ಪೋಸ್ಟ್ ಮಾರ್ಟಮ್ ಗೆ ಒಯ್ಯಲೂ ಅವಕಾಶ ನೀಡದೇ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು.ನಂತರ ಸ್ಥಳಕ್ಕೆ ಬಂದ ಸ್ಥಳೀಯ ರೈತ ಮುಖಂಡನ ಬೈಕ್ ಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ನಂತರ ಸ್ಥಳದಲ್ಲಿದ್ದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಬೇಕಾಯಿತು.
ಜಿಲ್ಲಾ ರೈತ ಸೇನೆಯ ಮುಖಂಡ ನಗುವಿನಹಳ್ಳಿಬಾಳಪ್ಪ ಸ್ಥಳಕ್ಕೆ ಬಂದು ಪ್ರತಿಭಟನಾ ನಿರತ ಶಾಸಕರನ್ನುದ್ದೇಶಿಸಿ ಮಾತನಾಡಿ,ಸದ್ಯಕ್ಕೆ ವೈಯುಕ್ತಿಕವಾಗಿ ಮೃತ ಶಾಸಕನ ಕುಟುಂಬಕ್ಕೆ 501 ರೂ ಗಳನ್ನು ನೀಡುತ್ತಿದ್ದು ಮುಂದೆ ರೈತ ಸಂಘಟನೆಗಳ ಪರವಾಗಿ ಇನ್ನೂ ಹೆಚ್ಚಿನ ಮೊತ್ತ ನೀಡಲಾಗುವುದು ಎಂದು ತಿಳಿಸಿದರು.ಇದಕ್ಕೂ ಮೊದಲು ಅವರು 100 ರೂ. ಚೆಕ್ ಅನ್ನು ಪರಿಹಾರ ರೂಪದಲ್ಲಿ ನೀಡಲು ಮುಂದಾದಾಗ ಶಾಸಕರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದರು.ಸ್ಥಳಕ್ಕೆ ಭೇಟಿ ನೀಡಿದ ಕಬ್ಬುಬೆಳೆಗಾರರ ಸಂಘದ ಮುಖಂಡ ಮಲ್ಲಪ್ಪ ಬೆಲ್ಲದ,ಮೃತ ಶಾಸಕನ ಕುಟುಂಬಕ್ಕೆ ಸಾಂತ್ವನ ಹೇಳಿ ಸ್ಥಳದಲ್ಲೇ 250 ರೂ.ಪರಿಹಾರವನ್ನು ನೀಡಿದ್ದಾರೆ.ಜತೆಗೆ ಮೃತರ ಪುತ್ರ ಮತ್ತು ಅವರ ಪತ್ನಿಗೆ ತನ್ನ ತಮ್ಮನ ಕಬ್ಬಿನ ಗದ್ದೆಯಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದಾರೆ.
ಮೃತ ಶಾಸಕರು ಇತ್ತೀಚಿಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹೈಕಮಾಂಡ್ ನ ಆದೇಶದಂತೆ ಇಡೀ ಜಿಲ್ಲೆಯಲ್ಲಿ ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಅತೀ ಹೆಚ್ಚು ಸಂಖ್ಯೆಯಲ್ಲಿ ಗೆಲ್ಲಿಸುವುದಕ್ಕೋಸ್ಕರ ಸುಮಾರು 80 ಕೋಟಿಗಳಷ್ಟು ಹಣವನ್ನು ಖರ್ಚು ಮಾಡಿದ್ದರು.ಅಷ್ಟೇ ಅಲ್ಲದೆ ಇದೇ ಉದ್ದೇಶಕ್ಕಾಗಿ ಬೇರೆ ಬೇರೆ ಬ್ಯಾಂಕ್ ಗಳಲ್ಲಿ ಸುಮಾರು 55 ಲಕ್ಷ ರೂ.ಸಾಲ ಪಡೆದಿದ್ದರು.ಅತೀ ಹೆಚ್ಚು ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಮಂತ್ರಿಗಿರಿ ನೀಡುವುದಾಗಿ ಹೈಕಮಾಂಡ್ ಆಮಿಷ ಒಡ್ಡಿತ್ತು ಎನ್ನಲಾಗಿದೆ.ಚುನಾವಣೆಯ ನಂತರ ಮಂತ್ರಿಗಿರಿ ನೀಡುವ ಬಗ್ಗೆ ಪಕ್ಷದ ಹೈಕಮಾಂಡ್ ಮೌನ ವಹಿಸಿದ್ದು ಅವರಿಗೆ ಆಘಾತ ತಂದಿತ್ತು.ಅಲ್ಲದೆ ಕೇವಲ ಗ್ರಾಮಪಂಚಾಯಿತಿಗಳ ಮೂಲಕ ತಾನು ಖರ್ಚು ಮಾಡಿದ ಅಷ್ಟೂ ಹಣ ಮರಳಿ ಗಳಿಸುವುದು ಸಾಧ್ಯವಿಲ್ಲ ಎನ್ನುವುದನ್ನು ತಿಳಿದು ಹಲವು ದಿನಗಳಿಂದ ಖಿನ್ನರಾಗಿದ್ದರು ಎಂದು ನಿಕಟವರ್ತಿ ಶಾಸಕರು ಮಾಧ್ಯಮಗಳಿಗೆ ತಿಳಿಸಿದರು.
ಈ ಮಧ್ಯೆ ಪ್ರಕರಣದ ಬಗ್ಗೆ ಮುಖ್ಯಮಂತ್ರಿಗಳ ಪ್ರತಿಕ್ರಿಯೆ ಕೇಳಲು ತೆರಳಿದ ಪತ್ರಕರ್ತರ ತಂಡವೊಂದು ಅವರನ್ನು ನಿದ್ದೆಯಿಂದ ಎಬ್ಬಿಸಲು ಸಾಧ್ಯವಾಗದೆ ಬರಿಗೈಯಲ್ಲಿ ಮರಳಿದ ಘಟನೆಯೂ ನಡೆಯಿತು!
*ವಿ.ಸೂ: ಈ ಸುದ್ದಿಯು ಕೇವಲ ಸುಳ್ಸುದ್ದಿ ಹಾಗೂ ಕಾಲ್ಪನಿಕವಾಗಿದ್ದು ನಮ್ಮ ದೇಶದಲ್ಲಿ ಈ ರೀತಿಯ ಘಟನೆಗಳು ನಡೆಯಲು ಸಾಧ್ಯವೇ ಇಲ್ಲ ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತಿರುವ ವಿಷವೇ ಆಗಿರುತ್ತದೆ.ಈ ಸುದ್ದಿಯು ಕೇವಲ ಮನರಂಜನೆಗಾಗಿ ಮಾತ್ರ.
Super….