ವಿಷಯದ ವಿವರಗಳಿಗೆ ದಾಟಿರಿ

ಜುಲೈ 4, 2015

2

ಏನಿದು ಯುವಾ ಬ್ರಿಗೇಡ್?

‍ನಿಲುಮೆ ಮೂಲಕ

– ಯುವಾ ಬ್ರಿಗೇಡ್

Yuva Brigadeಯುವಾ ಬ್ರಿಗೇಡ್ ಭಾರತವನ್ನು ವಿಶ್ವಗುರುವನ್ನಾಗಿಸುವ ಕನಸು ಕಟ್ಟಿಕೊಂಡ 18 ರಿಂದ 30 ವಯಸ್ಸಿನ ಯುವಕರ ಪಡೆ. ಯುವ ಶಕ್ತಿಯನ್ನು ದೇಶಪ್ರೇಮದ ನಿಟ್ಟಿನಲ್ಲಿ ತಿರುಗಿಸಿ ಅದನ್ನು ರಾಷ್ಟ್ರನಿರ್ಮಾಣದ ಕಾಯಕಕ್ಕೆ ಹಚ್ಚಿ ಅದರಿಂದ ಬಂದ ಫಲಿತಾಂಶವನ್ನು ಭಾರತ ಮಾತೆಯ ಚರಣಗಳಿಗೆ ಅರ್ಪಣೆ ಮಾಡುವ ಅಭಿಲಾಷೆ ಹೊತ್ತ ಯುವಕರ ಸಮೂಹ. ಪ್ರಖರ ರಾಷ್ಟ್ರವಾದಿ ಶ್ರೀ ಚಕ್ರವರ್ತಿ ಸೂಲಿಬೆಲೆಯವರ ನೇತೃತ್ವದಲ್ಲಿ ನಾಡಿನ ಹಿರಿಯ ರಾಷ್ಟ್ರಪ್ರೇಮಿ ಸಾಧಕರ ಮಾರ್ಗದರ್ಶನದಲ್ಲಿ ಕರ್ನಾಟಕದ ಮೂಲೆ ಮೂಲೆಗೂ ತಲುಪುತ್ತಿರುವ ಈ ಸಂಘಟನೆ ಆರಂಭವಾಗಿ ಇನ್ನೂ ವರ್ಷವೂ ಕಳೆದಿಲ್ಲ ಎಂದರೆ ಅಚ್ಚರಿಯಾಗಬಹುದು.

8 ಜೂನ್ 2014 ರಂದು ಆರಂಭವಾದ ಯುವಾ ಬ್ರಿಗೇಡ್ ಇದುವರೆಗೂ ಹತ್ತಾರು ವಿಶಿಷ್ಟ ವೈವಿಧ್ಯಮಯ ಕಾರ್ಯ ಕಲಾಪಗಳ ಮೂಲಕ ವ್ಯಾಪಕವಾಗಿ ಜನಮಾನಸವನ್ನು ತಲುಪಿರುವುದು ಒಂದು ಸಾಧನೆಯೇ ಸರಿ. ಹಾಗಂತ ಇದೇನು ರಾತ್ರೋ ರಾತ್ರಿ ಸಂಭವಿಸಿದ ಘಟನೆಯಲ್ಲ. ಪ್ರಾರಂಭದಲ್ಲಿ ಫೇಸ್ ಬುಕ್ ಮುಂತಾದ ಸಾಮಾಜಿಕ ತಾಣಗಳ ಮೂಲಕ ತಾಯಿ ಭಾರತಿಯನ್ನು ವಿಶ್ವಗುರುವನ್ನಾಗಿಸುವ ಕಲ್ಪನೆಯನ್ನು ಬಿತ್ತರಿಸಿ ಮುಂದಿನ ದಿನಗಳಲ್ಲಿ ಒಂದೊಂದೇ ಯೋಜನೆಗಳ ಮೂಲಕ ಹಳ್ಳಿಗಾಡಿನ ಯುವಕನನ್ನೂ ಸಂಘಟನೆಯೊಂದಿಗೆ ಬೆಸೆದುಕೊಳ್ಳುವಂತೆ ಮಾಡಿದ ಯುವಾ ಬ್ರಿಗೇಡ್ ನ ಕಾರ್ಯಗಳನ್ನು ವೀಕ್ಷಿಸುವುದು ಒಂದು ಚೇತೋಹಾರಿ ಪಯಣವಾಗಿದೆ. ಜೂನ್ ತಿಂಗಳಲ್ಲಿ ಉದ್ಘಾಟನೆಯಾದ ಯುವಾ ಬ್ರಿಗೇಡ್ ತಂಡಕ್ಕೆ ಬಹುತೇಕ ಎಲ್ಲಾ ಜಿಲ್ಲೆಗಳಿಂದ ತರುಣರು ಆಗಮಿಸಿ ರಾಷ್ಟ್ರಕಾರ್ಯದಲ್ಲಿ ಕೈಜೋಡಿಸುವ ಪ್ರತಿಜ್ಞೆಗೈದರು.

ಜುಲೈ ತಿಂಗಳಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ ಇಡೀ ರಾಜ್ಯದಲ್ಲಿ ವಿಜೃಂಭಣೆಯಿಂದ ನಡೆಯಿತು. ಅನೇಕ ಜಿಲ್ಲಾ ಕೇಂದ್ರಗಳಲ್ಲಿ ಮಾಜಿ ಸೈನಿಕರನ್ನು ಕರೆದು ಗೌರವಿಸಲಾಯ್ತು. ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆಯ ಪರಾಕ್ರಮದ ಕುರಿತು ಸರಣಿ ಉಪನ್ಯಾಸಗಳು ನಡೆದವು. ಅನೇಕ ತರುಣರ ಹೃದಯದಲ್ಲಿ ಸೈನ್ಯ ಸೇರುವ ಆಸೆಯ ಕಿಡಿಯನ್ನು ಹೊತ್ತಿಸಲಾಯ್ತು. ಸಾರ್ವಜನಿಕರಿಗೆ ಸೇನೆಯ ಬಗ್ಗೆ ಕೃತಜ್ಞತಾ ಭಾವನೆ ಮೂಡಿ ಹೆಮ್ಮೆಯಿಂದ ತಲೆ ಎತ್ತಿ ನಿಲ್ಲಬಲ್ಲ ವಾತಾವರಣವನ್ನು ಕಲ್ಪಿಸಲಾಯ್ತು.

ಅಗಸ್ಟ್ ತಿಂಗಳಲ್ಲಿ ಯುವಾ ಬ್ರಿಗೇಡ್ ನ ರಾಜ್ಯ ಮಟ್ಟದ ಸಭೆ ನಡೆಯಿತು. ಅದರಲ್ಲಿ ರಾಜ್ಯ, ವಿಭಾಗ ಮತ್ತು ಜಿಲ್ಲೆಗಳಿಗೆ ಸಂಚಾಲಕರನ್ನು ಆರಿಸಲಾಯ್ತು. ತಾಲ್ಲೂಕು ಮಟ್ಟದಲ್ಲಿ ಯುವಾ ಬ್ರಿಗೇಡ್ ಆರಂಭಿಸಲು ತೀರ್ಮಾನ ಕೈಗೊಳ್ಳಲಾಯಿತು.

ಸೆಪ್ಟಂಬರ್ ತಿಂಗಳಲ್ಲಿ ವಿವೇಕಾನಂದರು ಚಿಕಾಗೋದಲ್ಲಿ ಮಾಡಿದ ಅವಿಸ್ಮರಣೀಯ ಭಾಷಣದ ನೆನಪಿನಲ್ಲಿ ದಿಗ್ವಿಜಯ ದಿವಸವನ್ನು ಬೆಂಗಳೂರಿನಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎವರೆಸ್ಟ್ ಶಿಖರ ಏರಿದ ಭಾರತದ ಮೊಟ್ಟಮೊದಲ ಅಂಗವಿಕಲ ಮಹಿಳಾ ಸಾಧಕಿ ಕು. ಅರುಣಿಮಾ ಸಿನ್ಹಾರವರು ತಮ್ಮ ಸಾಧನೆಯ ಕುರಿತಂತೆ ಆಡಿದ ಮಾತುಗಳು ನೆರೆದಿದ್ದ ಜನರ ಮನದಲ್ಲಿ ಸಾಧನೆಯ ಹಸಿವನ್ನು ಹುಟ್ಟಿಸುವಲ್ಲಿ ಸಫಲವಾಯ್ತು.

ಅಕ್ಟೋಬರ್ ತಿಂಗಳಲ್ಲಿ ಯುವಾ ಬ್ರಿಗೇಡ್ ನ ವತಿಯಿಂದ ಕನ್ಯಾಕುಮಾರಿಯ ವಿವೇಕಾನಂದ ಬಂಡೆಗೆ ಪ್ರವಾಸವನ್ನು ಆಯೋಜಿಸಲಾಯಿತು. ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದಿದ್ದ ಸುಮಾರು 50 ಜನ ಯುವಕರಿಗೆ ಅದ್ಭುತ ಪ್ರೇರಣೆ ದೊರೆಯಿತು. ತರುಣರೆಲ್ಲರೂ ಕನ್ಯಾಕುಮಾರಿಯ ವಿವೇಕಾನಂದರ ಮೂತರ್ಿಯ ಮುಂದೆ ನಿಂತು ಜೀವನದ ಒಂದು ಭಾಗವನ್ನು ರಾಷ್ಟ್ರಸೇವೆಗೆ ಮುಡಿಪಾಗಿಡುವುದಾಗಿ ಸಂಕಲ್ಪ ಸ್ವೀಕರಿಸಿದ್ದು ವಿಶೇಷವಾಗಿತ್ತು.

ನವಂಬರ್ ತಿಂಗಳಲ್ಲಿ ಯುವಾ ಬ್ರಿಗೇಡ್ ನ ಸದಸ್ಯತ್ವ ಅಭಿಯಾನ ಮತ್ತು ಹೋಟೇಲ್ ತಾಜ್ ನಲ್ಲಿ ರಾಷ್ಟ್ರಕ್ಕಾಗಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಯುವಾ ಬ್ರಿಗೇಡ್

ಡಿಸೆಂಬರ್ ತಿಂಗಳಲ್ಲಿ ವಿವೇಕಾನಂದರು ಕನ್ಯಾಕುಮಾರಿಯಲ್ಲಿ ಬಂಡೆಯ ಮೇಲೆ ಕುಳಿತು ತಪವನ್ನಾಚರಿಸಿ ತಮ್ಮ ಜೀವನದ ಗುರಿಯನ್ನು ಕಂಡುಕೊಂಡ ಸವಿನೆನಪಿಗಾಗಿ ರಾಕ್ ಡೇ ಎಂಬ ವಿನೂತನ ಕಾರ್ಯಕ್ರಮವನ್ನು ನಾಡಿಗೆ ಯುವಾಬ್ರಿಗೇಡ್ ಪರಿಚಯಿಸಿತು. ರಾಜ್ಯಾದ್ಯಂತ ಯುವಕರು ಈ ಕಾರ್ಯಕ್ರಮದ ನೆಪದಲ್ಲಿ ಸ್ವಾಮಿವಿವೇಕಾನಂದರ ಜೀವನ ಗಾಥೆಯನ್ನು ಆಲಿಸಿದರು.

ಜನವರಿ ತಿಂಗಳಲ್ಲಿ ಯುವಾ ಬ್ರಿಗೇಡ್ ಒಂದು ಮಹಾ ಸಾಹಸಕಾರ್ಯವನ್ನು ಕೈಗೆತ್ತಿಕೊಂಡಿತು. ಕರ್ನಾಟಕ ರಾಜ್ಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮವನ್ನು 1000 ಕಡೆಗಳಲ್ಲಿ ಆಚರಿಸಬೇಕೆಂಬುದೇ ಆ ಸಂಕಲ್ಪವಾಗಿತ್ತು. ಅನುಷ್ಠಾನ ಮಾಡುವುದಕ್ಕೆ ಅತ್ಯಂತ ಕಷ್ಟಸಾದ್ಯವಾಗಿದ್ದ ‘ಸಾವಿರದ ವಿವೇಕಾನಂದ’ ಎಂಬ ಹೆಸರಿನಲ್ಲಿದ್ದ ಈ ಯೋಜನೆಗೆ ನಾಡಿನ ಸಾವಿರ ಸಾವಿರ ಯುವಕ ಯುವತಿಯರು ಕೈಜೋಡಿಸಿದ್ದರ ಪರಿಣಾಮ 2150ಕ್ಕೂ ಹೆಚ್ಚು ಕಡೆಗಳಲ್ಲಿ   ವಿವೇಕಾನಂದ ಜಯಂತಿ ಕಾರ್ಯಕ್ರಮಗಳು ನಡೆದವು. ಯುವಾ ಬ್ರಿಗೇಡ್ ವತಿಯಿಂದ ನಡೆದ ಈ ಕಾರ್ಯಕ್ರಮಗಳು ಇಂದಿಗೂ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಶ್ರೀ ಚಕ್ರವರ್ತಿ ಸೂಲಿಬೆಲೆಯವರು ಈ ಕಾರ್ಯಕ್ರಮದ ಯಶಸ್ಸಿಗಾಗಿ ನಾಡಿನ ಮೂಲೆಮೂಲೆಗೂ ಪ್ರವಾಸ ಮಾಡಿದ್ದು ಯುವಾ ಬ್ರಿಗೇಡ್ ಗೆ ಕಾರ್ಯಕರ್ತರ ಮಹಾಪೂರವೇ ಹರಿದು ಬರುವಂತೆ ಮಾಡಿತ್ತು. ಅದರ ಪರಿಣಾಮ ಅದೇ ಜನವರಿ ತಿಂಗಳಲ್ಲಿ ಸುಭಾಷ್ ಚಂದ್ರ ಬೋಸರ ಜಯಂತಿಯನ್ನು ಪೋಸ್ಟರ್ ಪ್ರದರ್ಶನದ ಮೂಲಕ ಆಜಾದ್ ಹಿಂದ್ ಹೆಸರಿನಲ್ಲಿ ಆಚರಿಸುವಂತೆ ಮಾಡಿತು. ಸುಭಾಷರ ಜೀವನದ ಚಿತ್ರಕಥೆಯನ್ನು ಒಳಗೊಂಡ 16 ಪೋಸ್ಟರ್ ಗಳ ಸೆಟ್ ಅನ್ನು ರಾಜ್ಯದ ಸಾವಿರಾರು ಶಾಲಾ ಕಾಲೇಜುಗಳಲ್ಲಿ ಪ್ರದರ್ಶಿಸಲಾಯಿತು.

ಫೆಬ್ರವರಿ ತಿಂಗಳಲ್ಲಿ ನನ್ನ ದೇಶ ನನ್ನ ಪ್ರೀತಿ (ಮೈ ನೇಶನ್ ಮೈ ಲವ್) ಎಂಬ ವಿಶಿಷ್ಟ ರೀತಿಯ ಭಾರತ ಮಾತೆಯ ಪೂಜಾ ಕಾರ್ಯಕ್ರಮವನ್ನು ಯುವಾ ಬ್ರಿಗೇಡ್ ಏರ್ಪಡಿಸಿತು. ಡಿಜಿಟಲ್ ಪೋಸ್ಟರ್ ಡಿಸೈನಿಂಗ್ ಸ್ಪರ್ಧೆಗಳು ನಡೆದವು. ವಿಜೇತರಿಗೆ ಕನ್ಯಾಕುಮಾರಿ ಮತ್ತು ಕೋಲ್ಕತ್ತಾದ ರಾಮಕೃಷ್ಣ ಆಶ್ರಮಕ್ಕೆ ಪ್ರವಾಸ ಕರೆದುಕೊಂಡು ಹೋಗುವ ಬಹುಮಾಣಗಳನ್ನು ಇಡಲಾಗಿತ್ತು. ‘ದೇಹ ಪ್ರೇಮವಲ್ಲ ದೇಶಪ್ರೇಮ’ ಎಂಬ ಸಂದೇಶವನ್ನು ಹೊತ್ತ ಯುವಾ ಬ್ರಿಗೇಡ್ ನಿರ್ಮಿತ ಕಿರುಚಿತ್ರಗಳು ವಾಟ್ಸಪ್ ಮತ್ತು ಫೇಸ್ ಬುಕ್ ಮುಂತಾದ ಜಾಲತಾಣಗಳಲ್ಲಿ ಬಿರುಗಾಳಿಯನ್ನೆಬ್ಬಿಸಿತು. ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಬಿಸಿಬಿಸಿ ಚರ್ಚೆಗಳು ನಡೆದವು. ಒಟ್ಟಿನಲ್ಲಿ ಭಾರತೀಯ ಸಂಸ್ಕೃತಿಯನ್ನು ಮರೆತು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವ ಯುವಜನತೆಯೇ ಈ ಅಭಿಯಾನಕ್ಕೆ ವ್ಯಾಪಕ ಬೆಂಬಲ ನೀಡುವಂತೆ ಮಾಡಿದ್ದು ಯುವಾ ಬ್ರಿಗೇಡ್ ಸಾಧನೆಯಾಗಿತ್ತು.

ಮಾರ್ಚ್ ಒಂದೇ ತಿಂಗಳಲ್ಲಿ ಒಟ್ಟು ಮೂರು ಕಾರ್ಯಕ್ರಮಗಳನ್ನು ನಡೆಸುವ ಯೋಜನೆ ಸಿದ್ಧವಾಯ್ತು. ಭಗವದ್ಗೀತೆಯ ಕುರಿತಾದ “ಸುಡುವುದು ದೇಹ, ಆತ್ಮವಲ್ಲ” ಎಂಬ ಕಿರು ಪುಸ್ತಕದ 25,000 ಪ್ರತಿಗಳನ್ನು ಯುವಾ ಬ್ರಿಗೇಡ್ ಕಾರ್ಯಕರ್ತರು ಮನೆಮನೆಗೆ ಮಾರಾಟ ಮಾಡಿ ಭಗವದ್ಗೀತೆಯ ಸಂದೇಶವನ್ನು ರಾಜ್ಯಾದ್ಯಂತ ತಲುಪಿಸಿ ಅಜ್ಞಾನಿಗಳ ಆರೋಪಕ್ಕೆ ಸೂಕ್ತ ಉತ್ತರ ನೀಡಿತು. ಹುತಾತ್ಮ ಯೋಧ ಮೇಜರ್ ಸಂದೀಪ್ ಉನ್ನಿಕೃಷ್ಣನ್ ರ ಹುಟ್ಟಿದ ಹಬ್ಬವನ್ನು ಯಲಹಂಕದ ಅವರ ಮನೆಯಲ್ಲಿ ಅಕ್ಷರಶಃ ಸಾವಿರ ಯುವಕರೊಂದಿಗೆ ಆಚರಿಸಲಾಯ್ತು. ಭಗತ್ ಸಿಂಗ್ ರಾಜಗುರು ಸುಖದೇವರ ಬಲಿದಾನ ದಿವಸವನ್ನು ಸೈಕಲ್ ರ್ಯಾಲಿಯ ಮೂಲಕ ಇಡೀ ರಾಜ್ಯದಲ್ಲಿ ಆಚರಿಸಲಾಯಿತು. ಇಂಧನ ಉಳಿಸಿ ಪರಿಸರ ರಕ್ಷಣೆ ಮತ್ತು ರಾಷ್ಟ್ರದ ಆರ್ಥಿಕತೆಯ ರಕ್ಷಣೆ ಎರಡೂ ಉದ್ದೇಶಗಳನ್ನು ಒಳಗೊಂಡಿದ್ದ ಈ ಯೋಜನೆಗೆ ರಾಜ್ಯದಾದ್ಯಂತ ಎಲ್ಲ ಭಾಗಗಳಿಂದಲೂ ವ್ಯಾಪಕ ಸ್ಪಂದನೆ ದೊರೆಯಿತು.

ಏಪ್ರಿಲ್ ತಿಂಗಳಲ್ಲಿ ಏಪ್ರಿಲ್ ನಮನ್ ಎಂಬ ವಿಶಿಷ್ಟ ಯೋಜನೆಯಡಿಯಲ್ಲಿ ಆ ತಿಂಗಳು ಜನಿಸಿದ ದಾರ್ಶನಿಕರ ಮಹಾಪುರುಷರ ಜನ್ಮದಿನವನ್ನು ಒಟ್ಟಿಗೆ ಆಚರಿಸುವ ತೀರ್ಮಾನ ಕೈಗೊಳ್ಳಲಾಯಿತು.ಯುವಾ ಬ್ರಿಗೇಡ್ ನ ಸದ್ಭಾವನಾ ವಿಭಾಗದ ಆಸರೆಯಲ್ಲಿ ಅಂಬೇಡ್ಕರ್, ಶಂಕರಾಚಾರ್ಯ, ಬುದ್ಧ, ಬಸವಣ್ಣ, ರಾಮಾನುಜಾಚಾರ್ಯ, ಮಹಾವೀರರ ಜಯಂತಿಯನ್ನು ಒಂದೇ ದಿನ ಆಚರಿಸಿ ಮಹಾಪುರುಷರ ಉಪದೇಶಗಳಲ್ಲಿದ್ದ ಏಕತೆಯ ಮಂತ್ರವನ್ನು ಪಠಿಸಲಾಯ್ತು.

ಇದೆಲ್ಲವನ್ನೂ ಮುಗಿಸಿ ಮೇ ತಿಂಗಳಲ್ಲಿ ಆರಂಭವಾಗಿದ್ದೇ ಈ ಕಲ್ಯಾಣಿ ಪುನರುಜ್ಜೀವನ ಯೋಜನೆ. ಬಹುತೇಕ ಕಣ್ಮರೆಯಾಗಿದ್ದಂತಹಾ ಸುಮಾರು 36 ಕಲ್ಯಾಣಿಗಳನ್ನು ಇದುವರೆಗೂ ಯುವಾ ಬ್ರಿಗೇಡ್ ಕಾರ್ಯಕರ್ತರು ಪುನರುಜ್ಜೀವನಗೊಳಿಸಿದ್ದಾರೆ. ಅತ್ಯಂತ ಶ್ರಮದಾಯಕವಾದ ಈ ಕಾರ್ಯದಲ್ಲಿ ಯುವಾ ಬ್ರಿಗೇಡ್ ನ ಕಾರ್ಯಕರ್ತರು ಅದ್ಭುತ ಅನುಭವವನ್ನು ಪಡೆದಿದ್ದಾರೆ. ಮಳೆ ಬಂದು ಕಲ್ಯಾಣಿ ತುಂಬಿದರೆ ದೀಪೋತ್ಸವ ಕಾರ್ಯಕ್ರಮವನ್ನು ಆಯೋಜಿಸಿ ಕಲ್ಯಾಣಿಗಳ ಕುರಿತಂತೆ ಅಂತರ್ಜಲದ ಕುರಿತಂತೆ ಜನಶಿಕ್ಷಣ ನೀಡುವ ಆಕಾಂಕ್ಷೆಯನ್ನೂ ಹೊತ್ತಿದ್ದಾರೆ.

ಇಷ್ಟೆಲ್ಲಾ ಕೆಲಸಗಳನ್ನೂ ಕೇವಲ ಒಂದೇ ವರ್ಷದಲ್ಲಿ ಮಾಡಿದ್ದರ ಹಿಂದಿನ ರಹಸ್ಯವೇನೆಂದು ಕೇಳಿದರೆ ಒಂದೇ ಉತ್ತರ ಅದು ತಾಯಿ ಭಾರತಾಂಬೆಯ ಮೇಲಿನ ಭಕ್ತಿ ಮತ್ತು ಸ್ವಾಮಿವಿವೇಕಾನಂದರ ಮಾತಿನ ಮೇಲಿನ ನಂಬಿಕೆ. ಸ್ವಾಮಿ ವಿವೇಕಾನಂದರು ಯುವಕರ ಮೇಲಿಟ್ಟಿದ್ದ ಅಪಾರ ನಂಬಿಕೆಯನ್ನು ಸತ್ಯಮಾಡುವ ಹೆಬ್ಬಯಕೆಯೊಂದಿಗೆ ಪ್ರತಿ ದಿನವನ್ನೂ ರಾಷ್ಟ್ರ ನಿರ್ಮಾಣ ಚಿಂತನೆಯಲ್ಲಿ ಕಳೆಯುತ್ತಿರುವ ಶ್ರೀ ಚಕ್ರವರ್ತಿ ಸೂಲಿಬೆಲೆಯವರು ತಮ್ಮ ದೇಶ ಭಕ್ತ ಮಿತ್ರರನ್ನು ಒಂದುಗೂಡಿಸಿ ಅವರಿಗೆ ನಿರಂತರ ರಾಷ್ಟ್ರಸೇವೆಯ ಆದರ್ಶವನ್ನು ನೀಡಿದ್ದರಿಂದಾಗಿ ಇಂತಹಾ ಬದಲಾವಣೆ ಸಾಧ್ಯವಾಗಿದೆ. ಇನ್ನು ಮುಂದೆಯೂ ಇದೇ ವೇಗದಲ್ಲಿ ಈ ತಂಡ ಮುಂದುವರೆದರೆ ಬಹುಶಃ ನಾಡಿನ ಯುವಕರಿಗೆ ರಾಷ್ಟ್ರಸೇವೆಗೆ ಒಂದು ಉತ್ತಮ ಮೇಲ್ಪಂಕ್ತಿ ಹಾಕಿಕೊಡುವ ದಿನಗಳು ದೂರವಿಲ್ಲ ಎನ್ನಬಹುದು.

ಜೂನ್ ತಿಂಗಳಿನಲ್ಲಿ ಮತ್ತೊಂದು ಹೊಸ ಯೋಜನೆಯೊಂದಿಗೆ ಸಮಾಜದ ಮುಂದೆ ನಿಂತೆವು.ವಿಶ್ವ ಪರಿಸರ ದಿನ ಮತ್ತು ವಿಶ್ವ ಯೋಗ ದಿನ ಎರಡೂ ವಿಷೇಷ ದಿನಗಳ ಸಮಸ್ವಯವಾಗಿ ಪೃಥ್ವಿಯೋಗ ಎಂಬ ಹೆಸರಿನಲ್ಲಿ ಪೃಥ್ವಿಗೆ ಶ್ವಾಸಕೋಶಗಳಂತಿರುವ ಸಸ್ಯ ಸಂಪತ್ತನ್ನು ಬೆಳೆಸುವ ಕಾರ್ಯವನ್ನು ಕೈಗೊಳ್ಳಲು ನಿಶ್ಚಯಿಸಿದೆವು.

ಜೂನ್ 27ರ ಬೆಳಿಗ್ಗೆ 8 ಗಂಟೆಗೆ ಹಾದನೂರು ಗ್ರಾಮದ ಪುರಾತನ ಈಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅದೇ ದೇವಸ್ಥಾನದ ಆವರಣದಲ್ಲಿ ಅರಳಿ ಮತ್ತು ತೆಂಗು ಗಿಡವನ್ನು ನೆಟ್ಟು, ನೀರು ಹಾಕುವ ಮೂಲಕ ಪೃಥ್ವಿಯೋಗಕ್ಕೆ ಚಾಲನೆ ನೀಡಲಾಯಿತು. ಯುವಾ ಬ್ರಿಗೇಡ್ ಮಾರ್ಗದರ್ಶಕರಾದ ಶ್ರೀ ಚಕ್ರವರ್ತಿ ಸೂಲಿಬೆಲೆ, ಕೆ ಆರ್ ಪೇಟೆ ಯುವಾ ಬ್ರಿಗೇಡ್ ಮಾರ್ಗದರ್ಶಕರಾದ ಶ್ರೀ ಗೋಪಾಲ ಕೃಷ್ಣ ಅವಧಾನಿ, ರಾಜ್ಯ ಸಂಚಾಲಕರಾದ ಶ್ರೀ ನಿತ್ಯಾನಂದ ವಿವೇಕವಂಶಿ, ಪೃಥ್ವಿಯೋಗ ಯೋಜನಾ ಪ್ರಮುಖ್ ಶ್ರೀ ವಿನಯ್, ತಹಸೀಲ್ದಾರರಾದ ಶ್ರೀ ಎನ್ ಶಿವಕುಮಾರ್, ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಶ್ರೀ ಕೆಂಚಪ್ಪ ಹಾಜರಿದ್ದರು. ದೇವಸ್ಥಾನಕ್ಕೆ ಹೊಂದಿಕೊಂಡಂತೆ ಇರುವ 5 ಎಕರೆ ಗೋಮಾಳದಲ್ಲಿ ಸುಮಾರು 1000 ಕ್ಕೂ ಹೆಚ್ಚು ಸಸಿಗಳನ್ನು ಗ್ರಾಮಸ್ಥರ ಸಹಕಾರದೊಂದಿಗೆ ಸಂಜೆಯವರೆಗೂ ನೆಡಲಾಯಿತು.

10 ಗಂಟೆಗೆ ಗವಿಮಠದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಸಿಕೊಟ್ಟ ಶ್ರೀ ಚಕ್ರವರ್ತಿ ಸೂಲಿಬೆಲೆಯವರು ಅಲ್ಲೇ ಅರಳಿ ಸಸಿಯನ್ನು ನೆಡುವ ಮೂಲಕ ಪೃಥ್ವಿಯೋಗಕ್ಕೆ ಚಾಲನೆ ನೀಡಿದರು. ಮಕ್ಕಳೊಂದಿಗೆ ಸುಮಾರು 500 ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು. 11 ಗಂಟೆಗೆ ಸಂತೆ ಬಾಚಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ ಮುಗಿಸಿ 300 ಸಸಿಗಳನ್ನು ನೆಡಲಾಯಿತು. 12 ಗಂಟೆಗೆ ಆಘಲಯ ಗ್ರಾಮದ ಸರ್ಕಾರಿ ಕಾಲೇಜಿನಲ್ಲಿ ಸಂವಾದ ಕಾರ್ಯಕ್ರಮ ನಡೆಸಿ 1500 ಸಸಿಗಳನ್ನು ನೆಡಲಾಯ್ತು. ಬಹಳಷ್ಟು ಜಾಗಗಳಲ್ಲಿ ಸಸಿ ನೆಡಲು ಮತ್ತು ಬೇಲಿ ಹಾಕಲು ಮಕ್ಕಳು ತೋರಿದ ಉತ್ಸಾಹ ಉಳಿದವರಿಗೆ ಸ್ಪೂರ್ತಿಯಾಯಿತು.

ಅಷ್ಟೊತ್ತಿಗಾಗಲೇ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಯುವಾ ಬ್ರಿಗೇಡ್ ಕಾರ್ಯಕರ್ತರು ಬೇರೆ ಬೇರೆ ಶಾಲೆಗಳಲ್ಲಿ ಜಮಾಯಿಸಿದ್ದರು.ಹೆಚ್ಚು ಕಡಿಮೆ ಎಲ್ಲಾ ವಿಭಾಗಗಳಿಂದ ಆಗಮಿಸಿದ್ದ ಕಾರ್ಯಕರ್ತರ ಗುಂಪು ಇಡೀ ರಾಜ್ಯವನ್ನು ಪ್ರತಿನಿಧಿಸುತ್ತಿತ್ತು.ನಂತರ ಯುವಾ ಬ್ರಿಗೇಡ್ ಮಾರ್ಗದರ್ಶಕರಾದ ಶ್ರೀ ಚಕ್ರವರ್ತಿ ಸೂಲಿಬೆಲೆಯವರಿಂದ ‘ಪೃಥ್ವಿಯೋಗ’ ಉಪನ್ಯಾಸ ಆರಂಭವಾಯಿತು. ಕಿಕ್ಕಿರಿದು ನಿಂತಿದ್ದ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಅವರು ಬಾರತ ವಿಶ್ವಗುರುವಾಗುವ ಈ ಸಂದರ್ಭದಲ್ಲಿ ಯುವಕರು ಸಮಾಜಕಾರ್ಯ ಮಾಡುವುದು ಅತ್ಯಂತ ಅವಶ್ಯಕ, ಸಮಾಜದಲ್ಲಿ ತರಬೇಕಿರುವ ಬದಲಾವಣೆಯನ್ನು ಮೊದಲು ನಮ್ಮಲ್ಲಿ ಕಾಣೋಣ. ನಮ್ಮ ಸುತ್ತಲಿನ ಪರಿಸರವನ್ನು ಚೆನ್ನಾಗಿಡಲು ನಾವೇ ಕಾರಣವಾಗೋಣ. ಸಸಿಗಳನ್ನು ನೆಟ್ಟು ಕಾಪಾಡುವ ಪೃಥ್ವಿಯೋಗ ಯೋಜನೆಗೆ ತರುಣರು ನಮ್ಮೊಡನೆ ಸೇರಿಕೊಳ್ಳಬಹುದೆಂದು ಕರೆ ನೀಡಿದರು.

ಜೂನ್ 28 ಭಾನುವಾರ ಬೆಳಿಗ್ಗೆ ಬೇಗನೆ ಎದ್ದ ಕಾರ್ಯಕರ್ತರು ಸಾಮೂಹಿಕ ಪ್ರಾರ್ಥನೆ, ಆಟ, ಮತ್ತು ಬೌದ್ಧಿಕ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಹಲವು ಕಾರ್ಯಕರ್ತರಿಗೆ ಅದೊಂದು ಅಪೂರ್ವ ಅನುಭವವಾಗಿತ್ತು. ಅಲ್ಲಿಂದ ಪೃಥ್ವಿಯೋಗಕ್ಕೆ ಆಯ್ಕೆ ಮಾಡಲಾಗಿದ್ದ ಭಾರತೀಪುರ ಗ್ರಾಮಕ್ಕೆ ಬೇರೆ ಬೇರೆ ವಾಹನಗಳಲ್ಲಿ ಹೊರಟರು.ಭಾರತೀಪುರದಲ್ಲಿ ಅದಾಗಲೇ 25 ಎಕರೆ ಜಾಗದಲ್ಲಿ ಜೆ ಸಿ ಬಿ ಗಳು ಸಾವಿರಾರು ಗುಂಡಿಗಳನ್ನು ತೆಗೆದುಬಿಟ್ಟಿದ್ದವು. ಎಲ್ಲ ಕಾರ್ಯಕರ್ತರೂ ಉತ್ಸಾಹದಿಂದ ಗಿಡಗಳನ್ನು ತೆಗೆದುಕೊಂಡು ಗುಂಡಿಯೊಳಕ್ಕೆ ಇಟ್ಟು ಗುಂಡಿ ಮುಚ್ಚಿ ಧನ್ಯತಾ ಭಾವವನ್ನು ಅನುಭವಿಸಿದರು. ಕೆಲವರಿಗಂತೂ ತಮ್ಮ ಸಂತೋಷವನ್ನು ವರ್ಣಿಸಲು ಪದಗಳೇ ಸಾಲುತ್ತಿರಲಿಲ್ಲ. ಕಾರ್ಯಕರ್ತರ ಉತ್ಸಾಹ ಎಷ್ಟಿತ್ತೆಂದರೆ, ಮದ್ಯಾಹ್ನ ಊಟದ ಸಮಯದೊಳಗೆ ಇದ್ದ ಎಲಾ ಗುಂಡಿಗಳು ಮುಚ್ಚಿಹೋಗಿದ್ದವು. ಆದರೆ ಎಲ್ಲಾ ಗುಂಡಿಗಳಲ್ಲೂ ಹೊಸ ಜನ್ಮ ಪಡೆದ ಗಿಡಗಳು ತಲೆ ಎತ್ತಿ ನಿಂತಿದ್ದವು. ಅರಳಿ, ಅಲ ಬೆಲ, ನೇರಳೆ, ಮಾವು, ಬೇವು, ಹಲಸು, ರಕ್ತ ಚಂದನ ಇತ್ಯಾದಿ ಗಿಡಗಳು ಮುಂದಿನ ಹತ್ತು ವರ್ಷಗಳ ಕಾಡಿನ ಕನಸನ್ನು ಕಾರ್ಯಕರ್ತರಲ್ಲಿ ಬಿತ್ತಿದ್ದವು.ಒಟ್ಟಾರೆ ನಾಲ್ಕು ಸಾವಿರಕ್ಕೂ ಹೆಚ್ಚು ಗಿಡಗಳನ್ನು ಯುವಾ ಬ್ರಿಗೇಡ್ ಪೃಥ್ವಿಯೊಂದಿಗೆ ಜೋಡಿಸಿತ್ತು. ಕೊನೆಗೆ ಎಲ್ಲರೂ ರಾಮಕೃಷ್ಣ ದೇವಾಲಯದಲ್ಲಿ ಸಭೆ ಸೇರಿ ಮುಂದಿನ ಕೆಲಸಗಳ ಬಗ್ಗೆ ಚಿಂತನೆ ನಡೆಸಿದರು. ಸಭೆಯ ನಂತರ ಮುಂದಿನ ವಾರ ಬಾಗಲಕೋಟೆ ಜಿಲ್ಲೆಯ ತೇರದಾಳದ ಹಳಿಂಗಳಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಎರಡನೇ ಪೃಥ್ವಿಯೋಗದ ಕಾರ್ಯಕ್ರಮಕ್ಕೆ ಎಲ್ಲರನ್ನೂ ಆಹ್ವಾನಿಸಲಾಯಿತು.ಈ ಮಹಾಕಾರ್ಯದ ಯಶಸ್ಸಿಗೆ ನಿಮ್ಮ ಸಹಕಾರವನ್ನು ಬ್ರಿಗೇಡ್ ನಿರೀಕ್ಷಿಸುತ್ತಿದೆ.

 ಯುವಾ ಬ್ರಿಗೇಡ್ ನ ಮುಂದಿನ ಕಾರ್ಯಕ್ರಮಗಳು :
1. ಬೆಳಗಾವಿ ಜಿಲ್ಲೆಯ ಅಥಣಿ ಬಳಿಯ ಸಂಕೊನಟ್ಟಿ ಗ್ರಾಮದಲ್ಲಿ ಹುತಾತ್ಮ ಯೋಧ ಭರತೇಶ್ವರ ರ ಸ್ಮರಣೆಯಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ – ಜುಲೈ 4 ಶನಿವಾರ ಸಂಜೆ 5 ಗಂಟೆಗೆ.ಉಪಸ್ಥಿತಿ : ಶ್ರೀ ಚಕ್ರವರ್ತಿ ಸೂಲಿಬೆಲೆ.
2 . ಬಾಗಲಕೋಟೆ ಜಿಲ್ಲೆಯ ತೇರದಾಳ ಬಳಿಯ ಹಳಿಂಗಳಿಯ ಭದ್ರಗಿರಿ ಬೆಟ್ಟದಲ್ಲಿ ಬೃಹತ್ ಪೃಥ್ವಿಯೋಗ ಕಾರ್ಯಕ್ರಮ – ಜುಲೈ 5 ರ ಭಾನುವಾರ ಬೆಳಿಗ್ಗೆ 6 ರಿಂದ ಸಂಜೆ 4 ರವರೆಗೆ. ಉಪಸ್ಥಿತಿ : ಪೂಜ್ಯ ಕುಲರತ್ನ ಭೂಷಣ ಮಹಾರಾಜರು, ಭದ್ರಗಿರಿ ಕ್ಷೇತ್ರ. ಪೂಜ್ಯ ಅಭಿನವ ಹಾಲವೀರಪ್ಪಜ್ಜ ಸ್ವಾಮೀಜಿ, ಬಳ್ಳಾರಿ ಮತ್ತು ಶ್ರೀ ಚಕ್ರವರ್ತಿ ಸೂಲಿಬೆಲೆ, ಮಾರ್ಗದರ್ಶಕರು ಯುವಾ ಬ್ರಿಗೇಡ್
3 . ಇನ್ನುಳಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಜುಲೈ 4 ಮತ್ತು 5 ರ ಶನಿವಾರ ಮತ್ತು ಭಾನುವಾರಗಳಂದು ಪೃಥ್ವಿಯೋಗ ಕಾರ್ಯಕ್ರಮಗಳು ಎಂದಿನಂತೆ ನಡೆಯಲಿವೆ. ಉಪಸ್ಥಿತಿ : ವಿಭಾಗ ಮತ್ತು ಜಿಲ್ಲಾ ಸಂಚಾಲಕರು

2 ಟಿಪ್ಪಣಿಗಳು Post a comment
 1. ಜುಲೈ 5 2015

  ಹೊಸ ಬಾಟಲಿಯಲ್ಲಿ ಅದೇ ಹಳೆ ಹೆಂಡ. ಷೇಟು,ಕೆಳಗೊಂದು ಕಥೆ ಬರೆದಿರುವರು. ಓದಪ್ಪ.
  ಬುದ್ಧನ ಜ್ಞಾನೋದಯ ನಿನಗಿಲ್ಲ
  ಬಸವನ ಕಾಯಕ ನೀ ಮಾಡಿಲ್ಲ
  ಅಂಬೇಡ್ಕರನ ಬದ್ಧತೆ ನಿನಗಿಲ್ಲ. ಯಾಕೆ ಸುಮ್ಮನೆ ಅರಚುವೆ. ಹೋಗಿ ನಿದ್ದೆ ಮಾಡು.

  ಉತ್ತರ
 2. valavi
  ಜುಲೈ 5 2015

  ಮುಂದೆ ಗುರುವಿದ್ದಾಗ ಹಿಂದೆ ಶಿಷ್ಯ ಸಮೂಹ ಬಂದೇ ಬರುತ್ತದೆ. ಆದರೆ ನಮ್ಮ ಭಾರತದಲ್ಲಿ ಗುರುಗಳು ಮಾತ್ರ ಸರಿಯಾದ ಆಲೋಚನೆ ಕಾರ್ಯಯೋಜನೆಗಳಿಲ್ಲದೆ ನಗೆಪಾಟಲಾಗುತ್ತಿದ್ದರು. ಇದಕ್ಕೆ ಅಪವಾದವೆಂಬಂತೆ ನಮ್ಮ ಚಕ್ರವರ್ತಿಗಳು ಮಾತ್ರ ಹಾದಿ ಬಿಟ್ಟು ಹೋಗುತ್ತಿದ್ದ ಯುವಪಡೆಯನ್ನು ಸನ್ಮಾರ್ಗಕ್ಕೆ ಹಚ್ಚುತ್ತಿದ್ದಾರೆ. ಕೆಲಸ ದೊಡ್ಡದೋ ಸಣ್ಣದೋ ಆದರೆ ಮುಖ್ಯವಾಗಿ ಸತ್ಕಾರ್ಯವಾಗಿದೆ. ಮತ್ತು ಉತ್ತಮ ಮಾರ್ಗದರ್ಶನ ನೀಡಿ ಜನರನ್ನು ಯೋಗ್ಯತೆಯ ಕಡೆಗೆ ಸಾಗಿಸಿ ಭಾರತಿಯ ಸೇವೆಯನ್ನು ಮಾಡಿಸುವಂತಿದೆ. ಇದಕ್ಕಾಗಿ ಚಕ್ರವರ್ತಿ ಯವರಿಗೆ ಬರಹದ ಅಭಿನಂದನೆ ಮಾತ್ರ ಸಾಕಾ? ಅವರ ಶಿಷ್ಯೋತ್ತಮರಿಗೂ ಇಷ್ಟೇ ಅಭಿನಂದನೆ ಸಾಕಾ?? ನಾನು ಏನು ಹೇಳಿದರೂ ಅವರ ಕೆಲಸಕ್ಕೆ ಸಾಟಿ ಆಗಲ್ಲಾ. ಮಾತು, ಬರಹ ಮೀರಿದ ಕಾರ್ಯಗಳಿವು.ನಿಮ್ಮೆಲ್ಲರಿಗೂ ನನ್ನ ನಮೋನ್ನಮಃ. ಮುಖ್ಯವಾಗಿ ಈ ಪಡ್ಡೆಗಳನ್ನು ಉತ್ತಮ ಕಾರ್ಯಕ್ಕೆ ಅಣಿಗೊಳಿಸಿ ಅವರಿಗೆ ಅಭಿನಂದನೆ ಸಿಗುವಂತೆ ಮಾಡಿದ ಚಕ್ರವರ್ತಿಗಳಿಗೆ ಇನ್ನೊಮ್ಮೆ ನಮನಗಳು.(ಶಿರಬಾಗಿ)

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments