ರಂಗಿತರಂಗ
– ಚಿರು ಭಟ್
#ರಂಗಿತರಂಗ!
ಒಂದೇ ಮಾತಲ್ಲಿ ಹೇಳುವುದಾದರೆ, ನಾನು ಕೆಲವು ವರ್ಷಗಳ ನಂತರ ಮನಸಾರೆ ಇಷ್ಟ ಪಟ್ಟ ಚಿತ್ರ. ಈಗ ಚಿತ್ರದ ಬಗ್ಗೆ ಮಾತಾಡೋಣ. ಅಸಲಿಗೆ ಚಿತ್ರದ ಬಗ್ಗೆ ನಾವು ವಿಮರ್ಶೆ ಬರೆದರೆ ಅದು ತಪ್ಪಾಗುತ್ತದೆ. ಕಥೆ ಅರ್ಧ ಹೇಳಿದರೆ ನಿಮಗೆ ಅರ್ಥವಾಗುವುದಿಲ್ಲ, ಪೂರ್ತಿ ಹೇಳಿದರೆ ಮಜಾ ಬರಲ್ಲ. ಗುಡ್ಡದ ಭೂತ, ಅಂಗಾರನ ಭೂತ, ಸಾಲು ಸಾಲು ಬಸುರಿ ಹೆಂಗಸರ ಕೊಲೆ, ತನ್ನ ಸುತ್ತ ಏನಾಗುತ್ತಿದೆ ಎಂದೇ ತಿಳಿಯದ ನಾಯಕ, ಅವನ ಹೆಂಡತಿ ಮತ್ತು ಅದೇ ನಾಯಕನನ್ನು ಒಂದು ಉದ್ದೇಶದಿಂದ ಹುಡುಕುತ್ತಾ ಅಲೆದಾಡುತ್ತಿರುವ ಮತ್ತೊಬ್ಬ ಜರ್ನಲಿಸ್ಟ್ ಹುಡುಗಿ.
ಇವಿಷ್ಟು ಸಾಮಾನ್ಯ ಜನರ ಕೈಯಲ್ಲಿ ಕೊಟ್ಟರೆ ಪುಳಿಯೊಗರೆ ಚಿತ್ರಾನ್ನ ಸೇರಿಸಿ ಉಪ್ಪಿಟ್ಟು ಮಾಡುತ್ತಿದ್ದರೇನೋ ಆದರೆ ಅನುಪ್ ಭಂಡಾರಿಯವರಿಗೆ ಕೊಟ್ಟಿದ್ದರಿಂದ ಅದು “ರಂಗಿತರಂಗ”ವಾಗಿದೆ. ನಿಜಕ್ಕೂ ಒಂದು ಸದಭಿರುಚಿಯ ಚಿತ್ರ. ಅಪ್ಪ ಹಾಕಿದ ಆಲದ ಮರಕ್ಕೇ ಜೋತುಬಿದ್ದಿರುವ ನಾಯಕನ ಚಿತ್ರಕ್ಕೆ ಹೋಗುವುದಕ್ಕಿಂತ ಇಂಥ ಒಂದು ಚಿತ್ರ ನೋಡಿದರೆ, ಕಾಸು ಕೊಟ್ಟಿದ್ದಕ್ಕೂ ಮೈ ಉರಿಯುವುದಿಲ್ಲ. ಸಿನಿಮಾದ ಒಂದೊಂದು ಫ್ರೇಮ್ ಕೂಡ ಕಮರೊಟ್ಟುಗೇ ನಮ್ಮನ್ನು ಫ್ರೀಯಾಗಿ ಕರೆದುಕೊಂಡು ಹೋದಂತಿದೆ. ಛಾಯಾಗ್ರಹಣ ನಿರ್ದೇಶನದಲ್ಲಿ ಲ್ಯಾನ್ಸ್ ಕ್ಯಾಪ್ಲನ್ ಗೆದ್ದಿದ್ದಾರೆ. ಸಿನಿಮಾದ ಹಿನ್ನೆಲೆ ಸಂಗೀತ ಮತ್ತು ಸಂಗೀತ ಬಹಳ ಅದ್ಭುತವಾಗಿ ಮೂಡಿಬಂದಿದೆ. ರಾಧಿಕಾ ಚೇತನ್ ನಟನೆ ಚೆನ್ನಾಗಿದೆ. ಅವಂತಿಕ ಶೆಟ್ಟಿ ನಟನೆಯೂ ಚೆನ್ನಾಗಿದೆ ಆದರೆ, ಮತ್ತಷ್ಟು ಎಫರ್ಟ್ ಹಾಕಬೇಕು. ನಾಯಕ ನಟ ನಿರುಪ್ ನಟನೆಯಲ್ಲಿ ಸುಧಾರಿಸುವುದು ಬಹಳ ಇದೆ. ಆದರೆ ಈ ಚಿತ್ರಕ್ಕೆ ಅವರ ನಟನೆ ತಕ್ಕ ಮಟ್ಟಿಗಿದೆ ಅಷ್ಟೆ. ಚಿತ್ರ ನಿಂತಿರುವುದೇ ಸಾಯಿಕುಮಾರ್ರ ನಟನೆಯ ಮೇಲೆ, ಅವರ ಪಾತ್ರದ ಮೇಲೆ ಎಂದರೆ ತಪ್ಪಾಗುವುದಿಲ್ಲ. ಅವರ ಬಗ್ಗೆ ಹೇಳಬೇಕೆಂದರೆ “Guys, Saikumar is backkkk!!”
ಸಹನಟರೆಲ್ಲರೂ ಅವರವರ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸಿನಿಮಾ ಅಂತೂ ಸೂಪರ್. ಆದರೆ ಹೋಲ್ಡಾನ್! ಅನೇಕ ತಪ್ಪುಗಳಿವೆ. ಕೆಲವಂತೂ ತುಂಬಾ ಸಿಲ್ಲಿ ಮಿಸ್ಟೇಕ್ಸ್! ಜರ್ನಲಿಸ್ಟ್ ಹುಡುಗಿಯ ಕೈಯಲ್ಲಿ ಮೊದಲು ಬ್ಲಾಕ್ಬೆರಿ ಮೊಬೈಲಿರುತ್ತೆ. ಆದರೆ ಪೊಲೀಸ್ ಅದನ್ನು ವಶಕ್ಕೆ ತೆಗೆದುಕೊಂಡು ಮತ್ತೊಬ್ಬ ಗೂಂಡಾಗೆ ಕೊಡುವಾಗ ಅದು ಸ್ಯಾಮ್ಸಂಗ್ ಟಚ್ಸ್ಕ್ರೀನ್ ಆಗಿಬಿಟ್ಟಿದೆ. ಇದು ಗುಡ್ಡದ ಭೂತದ ಮಹಿಮೆಯೇನೋ ಗೊತ್ತಿಲ್ಲ. ವಿರಾಮದ ನಂತರ ಹಾಡುಗಳು ಅತಿಯಾಯಿತೇನೋ ಎನಿಸುತ್ತದೆ. ಪ್ರೇಕ್ಷಕನ ಮೂಡ್ ಡೈವರ್ಟ್ ಮಾಡುತ್ತದೆ. ಹಾಡುಗಳಾದ ನಂತರವೇ ಚಿತ್ರದ ಮುಖ್ಯ ಕತೆಯನ್ನು ಸೇರಿಸಿರುವುದರಿಂದ ಜನರಿಗೆ ಎಲ್ಲಿ ಏನಾಯಿತು ಎನ್ನುವುದೇ ಗೊತ್ತಾಗದೇ ಕನ್ಫ್ಯೂಸ್ ಆಗಬಹುದು. ಹೀಗೇ ಸುಮಾರಿದೆ. ಪ್ರೇಕ್ಷಕ ಮೋಬೈಲನ್ನು ಸೈಲೆಂಟ್ ಮೋಡ್ಗೆ ಹಾಕಿ ಕುರ್ಚಿಯ ತುದಿಯಲ್ಲಿ ಕುಳಿತು ಚಾಚು ತಪ್ಪದೇ ನೋಡಿದರೆ ಮಾತ್ರ ಸಿನಿಮಾ ಕಿಕ್ ಬರುತ್ತದೆ.
ಒಟ್ಟಾರೆಯಾಗಿ ಕನ್ನಡದಲ್ಲಿ ಇಂಥದ್ದೊಂದು ಸಿನಿಮಾ ನಿಜಕ್ಕೂ ಬೇಕಿತ್ತು. ಸ್ಟೈಲಾಗಿ “ಕನ್ನಡ ಸಿನಿಮಾ ನೋಡೋದೇ ಬಿಟ್ಟಿದ್ದೀನಿ ಮಗಾ.. ಏನೂ ಮಜಾನೇ ಇಲ್ಲ” ಎನ್ನುವವರು ಈ ಚಿತ್ರ ನೋಡಲೇ ಬೇಕು. ನಾಯಕ ನಟ ಈಗಿನ ಕಾಲದ ಹುಡುಗಾಟಿಕೆಯ ಹುಡುಗ, ಫ್ಲಾಶ್ಬ್ಯಾಕ್ ಹೋದರೆ ಅವನೊಬ್ಬ ದೊಡ್ಡ ಮನುಷ್ಯನ ಮೊಮ್ಮೊಗನಾಗಿರುವ ಸಿನಿಮಾ ನೋಡಿ ಇರಿಟೇಟ್ ಆಗಿತ್ತು. ಅಂದಹಾಗೆ ಈ ಚಿತ್ರ ಹೆಚ್ಚು ದಿನ ಚಿತ್ರಮಂದಿರದಲ್ಲಿರುವುದಿಲ್ಲ ಎಂದು ಭವಿಷ್ಯ ನುಡಿಯುತ್ತಿದ್ದೇನೆ. ಏಕೆಂದರೆ ಪರಭಾಷೆ ಚಿತ್ರ ಬಾಹುಬಲಿ, ಗುಡ್ಡದ ಭೂತವನ್ನು ಹೊಡೆದೋಡಿಸಬಹುದು. ಪ್ಲೀಸ್ ಬೇಗ ಹೋಗಿ ಚಿತ್ರ ನೋಡಿ ಬನ್ನಿ. Else you will miss something. 4 out of 5 stars from my side.
*** *** *** *** *** *** *** *** *** *** *** *** ***
– ಧರ್ಮಶ್ರೀ ಅಯ್ಯಂಗಾರ್
ಕಳೆದೊಂದು ವಾರದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಅಚ್ಚ ಕನ್ನಡದ ಚಿತ್ರ. ಹೊಸಬರಿಂದ ಹೊಸತನಕ್ಕಾಗಿ ಮಾಡಿದ ಸದಭಿರುಚಿಯ ಚಿತ್ರ. ಇತ್ತೀಚಿನ ಚಿತ್ರಗಳ ಏಕತಾನತೆಯಿಂದ ಬೇಸತ್ತಿರುವ ಕನ್ನಡ ಚಿತ್ರರಸಿಕರಿಗೆ ಒಂದು ಬದಲಾವಣೆಯ ಘಮಲು ಹೊತ್ತು ತಂದ ಚಿತ್ರವೆಂದರೂ ತಪ್ಪಿಲ್ಲ. ಕನ್ನಡದಲ್ಲಿ ಥ್ರಿಲ್ಲರ್/ಸಸ್ಪೆನ್ಸ್ ಚಿತ್ರಗಳ ಪರಂಪರೆ ವಿರಳ. ತರ್ಕ, ಶ್ ನಂತಹ ಬೆರಳೆಣಿಕೆಯ ಚಿತ್ರಗಳಷ್ಟೆ ನೆನಪಿಗೆ ಬರೋದು. ಇಂತಹ ಚಿತ್ರಗಳ ಸಾಲಿಗೆ ಮತ್ತೊಂದು ಸೇರ್ಪಡೆ ರಂಗಿತರಂಗ.
ವಿನೂತನ ಶೀರ್ಷಿಕೆ, ವಿನೂತನ ಭಿತ್ತಿಚಿತ್ರಗಳೊಂದಿಗೆ ಕುತೂಹಲಿ ಪ್ರೇಕ್ಷಕನನ್ನು ಯಶಸ್ವಿಯಾಗಿ ಚಿತ್ರಮಂದಿರದತ್ತ ಎಳೆದೊಯ್ಯುತ್ತದೆ ಈ ಚಿತ್ರ. ಮುಂದಿನದು ರಂಗಿ ರಂಗಿ ವೃತ್ತಾಂತ.
ಹೈಲೈಟ್ಸ್: ಅಚ್ಚುಕಟ್ಟಾದ ಬಿಗಿಯಾದ ಕತೆ, ಕ್ಷಣಕ್ಕೊಮ್ಮೆ ಅನಿರೀಕ್ಷಿತ ತಿರುವುಗಳು, ಪೂರಕವಾದ ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣ, ಸಾಯಿಕುಮಾರ್ ಅವರ ಪವರ್ಫುಲ್ ಅಭಿನಯ ಮತ್ತು ಕ್ಲೈಮ್ಯಾಕ್ಸ್
ಹೊಸ ನಾಯಕನಾಯಕಿಯರ ಪೇಲವ ಅಭಿನಯದಿಂದ ಕೊಂಚ ಭಾವಭಂಗವಾದರೂ ಕತೆಯಲ್ಲಿನ ಬಿಗಿ ಅದನ್ನು ಮರೆಮಾಚುತ್ತದೆ. ಚಿತ್ರದ ದ್ವಿತೀಯಾರ್ಧದಲ್ಲಿ ಅತಿಯೆನುವ ಹಾಡುಗಳು ಚಿತ್ರದ ಓಟಕ್ಕೆ ಭಂಗ ತರದೇ ಹೋದರೂ ತುಸು ರಸಭಂಗ ಮಾಡಿಸುವುದಂತೂ ಖರೆ. ಥ್ರಿಲ್ಲರ್ ಚಿತ್ರಗಳಲ್ಲಿ ಅಸಾಂದರ್ಭಿಕವಾದ ಹಾಡುಗಳು ಖಾರವಾದ ಚುರುಮುರಿ ಮಧ್ಯೆ ಕಲ್ಲು ಸಿಕ್ಕಂತೆ ಕಿರಿಕಿರಿ ಮಾಡುತ್ತವೆ. ಕತೆಯ ಪಾತ್ರಗಳ ಮಾತಿನಲ್ಲಿ ಕರಾವಳಿ ಭಾಷೆಯ ಸೊಗಡು ಮೂಡದೇ ಕೆಲ ಸಂಭಾಷಣೆಗಳು ಕೊಂಚ ನಾಟಕೀಯವೆನಿಸುತ್ತದೆ.
ಯಕ್ಷಗಾನದ ಡೋಸ್ ಇನ್ನಷ್ಟು ಹೆಚ್ಚಿಸಿದ್ದರೆ ಚಿತ್ರದ ಭಾವ ಮತ್ತೂ ಗಾಢವಾಗುತ್ತಿತ್ತೇನೋ. ಆದರೂ ಈ ಎಲ್ಲ ಕೊರೆಗಳನ್ನೂ ಹೊರತುಪಡಿಸಿಯೂ ಚಿತ್ರವನ್ನು ಇಷ್ಟವಾಗುವಂತೆ ನಿರೂಪಿಸಿರುವ ನಿರ್ದೇಶಕ ಅನೂಪ್ ಭಂಢಾರಿ ಅಭಿನಂದನಾರ್ಹರು. ಕನ್ನಡದಲ್ಲಿ ಹೊಸರೀತಿಯ ಚಿತ್ರಪರಂಪರೆ ಬೆಳೆಯಬೇಕು. ಹೊಸತನ ಉಣಿಸಲು ಕಾತುರರಾದವರಿಗೆ ಪ್ರೇಕ್ಷಕರಿಂದಲೂ ಉತ್ತೇಜನ ಸಿಗಬೇಕು. ರಂಗಿತರಂಗ ಯಶಸ್ಸು ಕಾಣಲಿ.
ಗುಡ್ ಲಕ್ ರಂಗಿತರಂಗ!