ವಿಷಯದ ವಿವರಗಳಿಗೆ ದಾಟಿರಿ

ಜುಲೈ 10, 2015

1

ಕಬ್ಬು ಸಕ್ಕರೆಗಷ್ಟೇ ಸೀಮಿತವೆ?

‍ನಿಲುಮೆ ಮೂಲಕ

– ರಾಘವೇಂದ್ರ ಅಡಿಗ

ಕಬ್ಬು ಬೆಳೆಗಾರರುರಾಜ್ಯದಲ್ಲಿ ಇದೇ ಇಪ್ಪತ್ತು ದಿನಗಳಲ್ಲಿ ಸುಮಾರು ಇಪ್ಪತ್ತೈದು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ ಬಹುಪಾಲು ಮಂದಿ ಕಬ್ಬು ಬೆಳೆಗಾರರೇ ಆಗಿದ್ದು ಸಾಲ ಮಾಡಿ ಬೆಳೆದ ಕಬ್ಬನ್ನು ಸಕ್ಕರೆ ಕಾರ್ಖಾನೆಗೆಳಿಗೆ ನೀಡಿದ ಬಳಿಕ ಕಾರ್ಖಾನೆ ಮಾಲೀಕರಿಂದ ಬರಬೇಕಾದ ಹಣ ಬರದೆ ಸಾಲದ ಬಡ್ಡಿಯನ್ನೂ ಕಟ್ಟಲಾಗದೆ ಆತ್ಮಹತ್ಯೆಯ ಮೊರೆ ಹೋಗುತ್ತಿದ್ದಾರೆ. ರೈತರ ಈ ಸರಣಿ ಆತ್ಮಹತ್ಯೆಗೆ ಸರ್ಕಾರ ಹಾಗೂ ಕಾರ್ಖಾನೆ ಮಾಲೀಕರೇ ನೇರ ಹೊಣೆ ಎಂದು ವಿರೋಧ ಪಕ್ಷಗಳ ನಾಯಕರೂ ಸೇರಿದಂತೆ ಎಲ್ಲರೂ ಗುಲ್ಲೆಬ್ಬಿಸುತ್ತಿದ್ದಾರೆ. ಇದು ತಕ್ಕಮಟ್ಟಿಗೆ ನಿಜವೂ ಆಗಿರಬಹುದು. ಆದರೆ ಇಂದಿನ ಕೃಷಿ ಪದ್ದತಿ, ರೈತರ ಮನಸ್ಥಿತಿಯೂ ಸಹ ಈ ದುರ್ದೆಸೆಗೆ ಕಾರಣೆವೆಂದರೆ ಅದು ತಪ್ಪಲ್ಲ.

ಸಕ್ಕರೆಗೆ ಸೀಮಿತವಲ್ಲ!
ಮೊದಲನೆಯದಾಗಿ ನಮ್ಮ ರೈತರ ಮನಸ್ಥಿತಿ ಬದಲಾಗಬೇಕು. ಕಾರ್ಖಾನೆಗಳು, ಸರ್ಕಾರಗಳನ್ನೇ ಅವಲಂಬಿಸಿಕೊಳ್ಳುವುದರಿಂದ ಹೊರಬಂದು ತಾವೇ ಸ್ವತಂತ್ರವಾಗಿ ಯೋಚಿಸುವುದನ್ನು ಕಲಿಯಬೇಕಿದೆ. ಇಂದು ತಂತ್ರಜ್ಜಾನ ಅದೆಷ್ಟು ಮುಂದುವರಿದಿದೆ, ಮಾನವನು ತಾನದೆಷ್ಟರ ಮಟ್ಟಿಗೆ ಅದರ ಅನುಕೂಲಗಳನ್ನು ಬಳಸಿಕೊಳ್ಳುತ್ತಿದ್ದಾನೆ ಎನ್ನುವುದನ್ನು ನಾವ್ಯಾರೂ ಇನ್ನೊಬ್ಬರಿಗೆ ಹೇಳಿಕೊಡಬೇಕಾಗಿಲ್ಲ. ಕೃಷಿ ಕ್ಷೇತ್ರದಲ್ಲಿಯೂ ಸಹ ಹಿಂದಿನ ಕಾಲಕ್ಕಿಂತ ಸಾಕಷ್ಟು ಬದಲಾವಣೆಗಾಳಾಗಿವೆ. ಕ್ರಾಂತಿಕಾರಿ ರೀತಿಯಲ್ಲಾಗಿರುವ ತಾಂತ್ರಿಕ ಪ್ರಗತಿಯನ್ನೂ ನಮ್ಮವರೇ ಕೆಲವು ಕೃಷಿಕರು ಅದರ ಲಾಭವನ್ನು ಯಶಸ್ವಿಯಾಗಿ ಬಳಸಿಕೊಳ್ಳುತ್ತಿರುವುದನ್ನೂ ನಾವು ನೋಡುತ್ತಿದ್ದೇವೆ. ಆದರೆ ಇಂತಹಾ ಸನ್ನಿವೇಶದಲ್ಲಿಯೂ ಕಬ್ಬು ಬೆಳೆಗಾರರು ಬೆಳೆದ ಕಬ್ಬನ್ನೇ ನೆಲಸಮ ಮಾಡುವುದು, ಸುಡುವುದು ಅಲ್ಲದೆ ತಾನೂ ಕೂಡ ಆತ್ಮಹತ್ಯೆಯಂತಹಾ ಕೃತ್ಯಕ್ಕೆ ಮುಂದಾಗುತ್ತಿರುವುದು ನೋಡಿದರೆ ನಮ್ಮ ಕೃಷಿಕರಿಗೆ ಈ  ತಂತ್ರಜ್ಞಾನ ಬೆಳವಣಿಗೆಯ ಕುರಿತ ಸಾಮಾನ್ಯ ಜ್ಞಾನವೂ ಇಲ್ಲವೆ ಎನ್ನುವ ಪ್ರಶ್ನೆ ಎದುರಾಗುತ್ತದೆ.

ಮುಖ್ಯವಾಗಿ ಕಬ್ಬು ಬೆಳೆಗಾರರು ಅರಿಯಬೇಕಾದ ವಿಚಾರವೆಂದರೆ ಕಬ್ಬು ಬೆಳೆಯುವುದು ಕೇವಲ ಸಕ್ಕರೆಗಾಗಿ ಮಾತ್ರವೇ ಅಲ್ಲ. ಕಬ್ಬಿನಿಂದ ಕಬ್ಬಿನ ಹಾಲು, ಜೋನಿಬೆಲ್ಲ, ಬೆಲ್ಲ, ಬೆಲ್ಲದ ಉಪಉತ್ಪನ್ನಗಳು, ವಿವಿಧ ಬಗೆಯ ಸಿಹಿ ಖಾದ್ಯಗಳು, ಚಾಕೋಲೇಟು, ಇತ್ಯಾದಿಗಳನ್ನೂ ಉತ್ಪಾದಿಸಬಹುದು. ಕಬ್ಬು ಬೆಳಯುವ ರೈತರು ತಾವು ಬೆಳೆದ ಬೆಳೆಯನ್ನೆಲ್ಲಾ ಕಾರ್ಖಾನೆಗಳಿಗೆ ಅವರು ಕೊಟ್ಟಷ್ಟು ಹಣಕ್ಕೆ ನೀಡುವುದರ ಬದಲಾಗಿ ಕ್ರಿಯಾತ್ಮಕವಾಗಿ ಆಲೋಚಿಸಿ ಹೊಸ ಹೊಸ ಉಪ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಟ್ಟರೆ ಖಂಡಿತಾ ಒಳ್ಳೆಯ ಲಾಭ ತೆಗೆಯಬಹುದು. ಕಬ್ಬು ವಿಶೇಷವಾಗಿ ಸಿಹಿ ವಸ್ತುವಾಗಿರುವ ಕಾರಣ ಚಾಕೋಲೇಟ್ ಉತ್ಪಾದನೆಗೆ ಹೇಳಿಮಾಡಿಸಿದ ವಸ್ತು. ಇಂದು ನಮ್ಮ ಮಕ್ಕಳಿಗೆ ನಾವು ಕೊಡಿಸುವ ಐದರಿಂದ ಐವತ್ತು ರೂಪಾಯಿಗಳವರೆಗಿನ ವಿದೇಶೀ ಕಂಪೆನಿಗಳ ಚಾಕೋಲೇಟ್ ಗಳು ನಮ್ಮ ಮಕ್ಕಳಲ್ಲಿ ಬಾಯಿ ಚಪಲವನ್ನು ಹೆಚ್ಚಿಸುವುದೇ ಅಲ್ಲದೆ ಹೊಟ್ಟೆಯನ್ನೂ ಕೆಡಿಸುತ್ತಿವೆ. ಇದರ ಬದಲಾಗಿ ಕಬ್ಬು, ಮತ್ತಿತರೆ ಸಿಹಿ ಪದಾರ್ಥಗಳಿಂದ ತಯಾರಾದ ದೇಸೀ ಚಾಕೋಲೇಟ್ ಗಳನ್ನು ತಯಾರಿಸಿ ಮಾರಾಟಕ್ಕೆ ಬಿಟ್ಟೆವಾದರೆ ನಮ್ಮ ಕೃಷಿಕರೂ ಸ್ವಾವಲಂಬಿಗಳಾಗುತ್ತಾರೆ. ನಮ್ಮ ಮಕ್ಕಳೂ ಸಹ ಆರೋಗ್ಯವಂತರಾಗುತ್ತಾರೆ.

ಹಿಂದೆಲ್ಲಾ ನಮ್ಮ ಹಿರಿಯರು ಪ್ರತೀ ಗ್ರಾಮದಲ್ಲಿಯೂ ಆಲೆಮನೆಗಳನ್ನು ನಿರ್ಮಿಸಿಕೊಂಡು (ಬೆಳೆದ ಕಬ್ಬನ್ನು ಗಾಣದಲ್ಲಿ ಹಾಕಿ ಹಾಲು ತೆಗೆದು ಬೆಲ್ಲ ಮಾಡುವ ಪ್ರಕ್ರಿಯೆ ನಡೆಯುವ ಸ್ಥಳ ಆಲೆಮನೆ.) ಕಬ್ಬನ್ನು ಅರೆದು ಕಬ್ಬಿನ ಹಾಲು, ಬೆಲ್ಲಗಳನ್ನು ತಯಾರು ಮಾಡುತ್ತಿದ್ದರು. ವಿಶೇಷವಾಗಿ ಮಲೆನಾಡ ಹಳ್ಳಿಗಳಲ್ಲಿ  ‘ಆಲೆಮನೆ’ಗೆ   ವಿಶೇಷ ಸಾಂಸ್ಕೃತಿಕ ಮಹತ್ವವಿತ್ತು.ಒಂದು ಊರಲ್ಲಿ ಯಾರ ತೋಟದಲ್ಲಿ ಆಲೆಮನೆ ಇದ್ದರೂ ಊರ ಜನರೆಲ್ಲ ಅಲ್ಲಿ ಸೇರಿ ಕಬ್ಬಿನ ಹಾಲಿನ ಜತೆ ಚುರುಮುರಿ, ಚಿಪ್ಸ್‌ಗಳನ್ನು ಮೆಲ್ಲುತ್ತಾ ಮಾತಿಗೆ ಕುಳಿತರೆ ಜಗದ ಸುದ್ದಿಗಳೆಲ್ಲ ಕಬ್ಬಿನ ಗಾಣದಲ್ಲಿ ರಸ ಉಕ್ಕುವಂತೆ ಉಕ್ಕಿ ಹರಿದು, ಕೊಪ್ಪರಿಗೆಯಲ್ಲಿನ ಹಾಲಿನಂತೆಯೇ ಕುದ್ದು ಆವಿಯಾಗಿ ಏನೆಲ್ಲವೂ ಆಗುತ್ತಿತ್ತು. ಹೀಗೆ ಆಲೆಮನೆ ಎನ್ನುವುದು  ಊರಿನ ನಾಗರಿಕ ಸಂಬಂಧಗಳ, ಹಲವಾರು ವಿಷಯಗಳ ವಿನಿಮಯದ ಕೇಂದ್ರವೂ ಆಗಿರುತ್ತಿತ್ತು.

ಆಲೆಮನೆಯ ವೈಭವ
ಅಂದಿನ ಕೃಷಿಕರು ತಾವು ಬೆಳೆದ ಕಬ್ಬನ್ನು ತಾವೇ ಅರೆದು ವಿವಿಧ ಬಗೆಯಲ್ಲಿ ಉಪ ಉತ್ಪನ್ನಗಳನ್ನು ತಯಾರಿಸಿಕೊಳ್ಳುತ್ತಿದ್ದರು. ಅಂದಿನವರಿಗೆ ಸಕ್ಕರೆ ಎನ್ನುವ ವಸ್ತುವಿನ ಪರಿಚಯವೂ ಇರಲಿಲ್ಲ. ಆದರೆ ಯಾವಾಗ ಸಕ್ಕರೆ ನಮ್ಮವರ ಮದ್ಯೆ ಪರಿಚಯವಾಯಿತೋ, ಸಕ್ಕರೆ ಉತ್ಪಾದನೆಯು ಉದ್ಯಮ ಸ್ವರೂಪವನ್ನು ತಾಳಿತೋ ಅಂದು ಕಬ್ಬು ಬೆಳೆದ ನಮ್ಮಯ ರೈತರುಗಳೆಲ್ಲಾ ಸಕ್ಕರೆಯ ಹಿಂದೆ ಓಡಲಾರಭಿಸಿದರು. ಸಕ್ಕರೆ ಕಾರ್ಖಾನೆಗಳು ತಾಲೂಕು, ಜಿಲ್ಲೆಗೊಂದರಂತೆ ಸ್ಥಾಪನೆಯಾದವು ಮೊದಲಿಗೆ ತಾವೇ ರೈತರ ಬಳಿ ಬಂದು ಕಬ್ಬನ್ನು ತಮಗೆ ಕೊಡುವಂತೆ ಪುಸಲಾಯಿಸಿ ರೈತರಿಂದ ನ್ಯಾಯವಾದ ಬೆಲೆಗೆ ಕಬ್ಬನ್ನು ಖರೀದಿಸಿ ಸಕ್ಕರೆ ತಯಾರಿಸುತ್ತಿದ ಕಾರ್ಖಾನೆಗಳು ಇಂದು ತಾವುಗಳು ಹೇಳಿದಷ್ಟು ಬೆಲೆಗೆ ಕಬ್ಬನ್ನು ಬೆಳೆಗಾರರು ನೀಡಬೇಕು ಇಲ್ಲವಾದಲ್ಲಿ ನಾವು ಕಬ್ಬು ಅರೆಯಲಾರೆವು ಎಂಬಲ್ಲಿ ಬಂದು ತಲುಪಿವೆ. ಇದಕ್ಕೆ ಮೂಲ ಕಾರಣ ಕೃಷಿಕರ ಪರಾವಲಂಬನೆ. ಸಕ್ಕರೆ ಕಾರ್ಖಾನೆಗಳಿಗಾಗಿಯೇ ತಾವು ಕಬ್ಬು ಬೆಳೆಯುತ್ತೇವೆ ಎನ್ನುವ ಮನೋಭಾವವೇ ಇಂದಿನ ರೈತರ ಈ ಅಧೋಗತಿಗೆ ಮೂಲ.

ಸಕ್ಕರೆ ಲಾಬಿ
ಇಂದು ಬ್ರೆಜಿಲ್ ಬಿಟ್ಟರೆ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ರಾಷ್ಟ್ರ ಭಾರತ; (ನಮ್ಮ ರಾಜ್ಯವೊಂದರಲ್ಲಿಯೇ ಒಟ್ಟು 58 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ) ಬಳಕೆಯಲ್ಲಿಯೂ ಅಗ್ರಸ್ಥಾನ. ದೇಶದಲ್ಲಿ ಉತ್ಪಾದನೆಯಾಗುವ ಸಕ್ಕರೆಯಲ್ಲಿ ಹೆಚ್ಚಿನ ಪ್ರಮಾಣವನ್ನು ನಾವೇ ತಿನ್ನುತ್ತೇವೆ, ಆದರೆ ಕಬ್ಬು ಬೆಳೆದ ರೈತರಿಗೆ ಮಾತ್ರ ಸಕ್ಕರೆ ಕಹಿಯಾಗಿದೆ. ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಬೆದರಿಕೆಯನ್ನೊಡ್ಡುತ್ತಿವೆ! ಇದಕ್ಕೆ ಹೊಣೆ ಯಾರು? ಇಲ್ಲಿ ಗಮನಿಸಬೇಕಾದ ಇನ್ನೊಂದು ಪ್ರಮುಖ ಅಂಶವೆಂದರೆ, ಹೆಚ್ಚಿನ ಪ್ರಮಾಣದ ಸಕ್ಕರೆ ಕಾರ್ಖಾನೆಗಳ ಮಾಲೀಕರು ಖಾಸಗಿ ವ್ಯಕ್ತಿಗಳಾಗಿದ್ದಾರೆ ಅದರಲ್ಲೂ ರಾಜಕಾರಣಿಗಳೇ ಸಿಂಹಪಾಲು! ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ಸಿಕ್ಕದೇ ಇರಲು ರಾಜಕಾರಣಿಗಳು ಕಾರ್ಖಾನೆಗಳ ಮಾಲೀಕರಾಗಿರುವುದೇ ಕಾರಣ ಎಂಬ ವಾದವಿದ್ದು, ಇದರಲ್ಲಿ ಸತ್ಯಾಂಶವಿಲ್ಲದಿಲ್ಲ.

ಒಂದು ಟನ್ ಕಬ್ಬಿನಿಂದ ಸಕ್ಕರೆ ಕಾರ್ಖಾನೆಗಳು ಸರಾಸರಿ  ರೂ. 4000-4500ದಷ್ಟು ಆದಾಯ ಗಳಿಸಿಕೊಳ್ಳುತ್ತವೆ ಟನ್ ಕಬ್ಬಿನಿಂದ ಸುಮಾರು 110 ಕಿಲೋ ಸಕ್ಕರೆ ತಯಾರಾಗುವುದ ಜತೆಗೆ ಕಬ್ಬಿನ ಸಿಪ್ಪ, ಕಾಕಂಬಿಗಳಿಂದಲೂ ಸಹ ಕಾರ್ಖಾನೆಗಳು ಆದಾಯ ಮಾಡಿಕೊಳ್ಳುತ್ತವೆ ಹೀಗೆ ಮಾಡಿಕೊಳ್ಳುವುದು ತಪ್ಪೆನ್ನಲಾಗದಿದ್ದರೂ ಕಬ್ಬು ಬೆಳೆದವರಿಗೂ ಸಹ ನ್ಯಾಯವಾದ ಬೆಲೆ ಸಿಗುವಂತೆ ಮಾಡುವುದು ಕಾರ್ಖಾನೆ ಮಾಲೀಕರ ಕರ್ತವ್ಯವಾಗಿದೆ.

ಉಪಸಂಹಾರ
ಅಂತಿಮವಾಗಿ ಹೇಳುವುದಾದರೆ, ಇದೆಲ್ಲವೂ ಸರಿಯಾಗಬೇಕಾದಲ್ಲಿ ಕೃಷಿಕರು ತಾವು ಜಾಗೃತರಾಗಬೇಕು.ತಾವು ಬೆಳೆದ ಎಲ್ಲಾ ಕಬ್ಬನ್ನೂ ಕಾರ್ಖಾನೆಗಳಿಗೆ ನೀಡುವುದರ ಬದಲು ಅದರಿಂದ ಇನ್ನೇನೇನು ಹೊಸ ಉತ್ಪನ್ನಗಳನ್ನು ತಯಾರಿಸಬಹುದು ಎನ್ನುವುದರ ಕುರಿತು ಸಂಶೋಧನೆ ನಡೆಸಬೇಕು. ರಾಜ್ಯ, ರಾಷ್ಟ್ರಗಳಲ್ಲಿರುವ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿನ ಕೃಷಿ ವಿಜ್ಞಾನ ಪಂಡಿತರೂ ಈ ಕುರಿತಂತೆ ಚಿಂತಿಸಬೇಕು. ಹೀಗಾದಾಗ ಮಾತ್ರ ಕಬ್ಬು ಬೆಳೆಗಾರರ ಸಮಸ್ಯೆಗೆ ಒಂದು ತಾರ್ಕಿಕ ಅಂತ್ಯ ಸಾಧ್ಯ.

ಕೃಷಿಕರೇ ಆತ್ಮಹತ್ಯೆಗೆ ಮುಂದಾಗಬೇಡಿ… ಪ್ರಯತ್ನಶೀಲರಾಗಿರಿ…ಪ್ರಯೋಗಶೀಲರಾಗಿರಿ…

ಚಿತ್ರಕೃಪೆ : ದಿಹಿಂದೂ

1 ಟಿಪ್ಪಣಿ Post a comment
  1. BNS
    ಜುಲೈ 11 2015

    ರಾಘವೇಂದ್ರ ಅಡಿಗರೆ,

    ತಮ್ಮ ಲೇಖನ ತುಂಬ ಸಮಂಜಸವಾಗಿದೆ. ಇದೇ ಮಾತನ್ನು ರಾಜ್ಯದ ಹಲವು ತಜ್ಞರು ಕೂಡಾ ಹೇಳುತ್ತಿದ್ದಾರೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಚ್ ಶಿವಣ್ಣ ಅವರ ಸಂದರ್ಶನ ದಿನಾಂಕ ೫ ಜುಲೈ, ೨೦೧೫ ರ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ. ಕೆಳಗೆ ಒಂದು ಕೊಂಡಿಯನ್ನು ಕೊಟ್ಟಿದ್ದೇನೆ. ವಾಚಕರು ನೋಡಬಹುದು.

    http://www.prajavani.net/article/ಸೋಲಿನ-ಅನುಕರಣೆ-ಸಾಕು-ರೈತರು-ಸಂಘಟಿತರಾಗಬೇಕು

    ಕೃಷಿಯಲ್ಲಿ ಕ್ಷಮತೆ ಹೆಚ್ಚಿಸುವ ಸಲುವಾಗಿ ಕೃಷಿಕರಿಗಾಗಿ ಒಂದು ತರಬೇತಿಯನ್ನು ಈ ವರೆಗೆ ಯಾವ ಸರ್ಕಾರಗಳೂ ಚಿಂತಿಸಲಿಲ್ಲ. ಈ ಬಗ್ಗೆ ನಾನೊಂದು ಪತ್ರವನ್ನು ನಿಲುಮೆಯಲ್ಲಿ ಬರೆದಿದ್ದೆ (ರೈತರ ಆತ್ಮಹತ್ಯೆ: ಹೀಗೊಂದು ಚಿಂತನೆ). ಸಾಮಾಜಿಕ ಕಳಕಳಿ ಇರುವ ಸಂಸ್ಥೆಗಳು ನಮ್ಮ ಅಸಂಖ್ಯ ಮಠಗಳ ನೆರವಿನಿಂದಾದರೂ ಇಂಥದ್ದೊಂದು ಕಾರ್ಯಕ್ರಮ ಪ್ರಾರಂಭಿಸಿ ಪುಣ್ಯಕಟ್ಟಿಕೊಳ್ಳಿ ಎಂದು ಮತ್ತೊಮ್ಮೆ ಕೋರುತ್ತೇನೆ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments