ಇನ್ಮುಂದೆ ಕೆಡುಕಿ ಫ್ರೈಡ್ ಚಿಕನ್ ಜೊತೆಗೆ ಶಾರ್ಪಿಕ್ ಬಾಟಲ್ ಸಂಪೂರ್ಣ ಉಚಿತ!
– ಪ್ರವೀಣ್ ಕುಮಾರ್ ಮಾವಿನಕಾಡು
ಇತ್ತೀಚಿನ ದಿನಗಳಲ್ಲಿ ಸಿದ್ಧ ಆಹಾರಗಳ ತಯಾರಿಕೆಯಲ್ಲಿ ತೀವ್ರ ನಿರ್ಲಕ್ಷ್ಯ ಕಂಡುಬರುತ್ತಿದ್ದು,ಮ್ಯಾಗಿಯಲ್ಲಿ ಸೀಸ,ಹಾಲಿನ ಪುಡಿಯಲ್ಲಿ ಡಿಟರ್ಜೆಂಟ್ ಪತ್ತೆಯಾದಂತೆ ಫ್ರೈಡ್ ಚಿಕನ್ ನಲ್ಲಿ ಸಾಮಾನ್ಯವಾಗಿ ಚರಂಡಿಯಲ್ಲಿ ಕಂಡುಬರುವ ಬ್ಯಾಕ್ಟೀರಿಯಾಗಳು ಕಂಡುಬಂದಿವೆ.
ಘಟನೆಯ ವಿವರ: ಇತ್ತೀಚಿಗೆ ಬಹುರಾಷ್ಟ್ರೀಯ ರೆಸ್ಟೋರೆಂಟ್ ಸರಪಣಿಯ ಚಿಕನ್ಪುರ್ ಜಿಲ್ಲೆಯ ಔಟ್ ಲೆಟ್ ಒಂದರಲ್ಲಿ ಫ್ರೈಡ್ ಚಿಕನ್ಗೆ ಆರ್ಡರ್ ಮಾಡಿ ಬಾಯಲ್ಲಿ ನೀರೂರಿಸುತ್ತಾ ಕುಳಿತಿದ್ದ ಗ್ರಾಹಕರೊಬ್ಬರು ತಮಗೆ ಸರ್ವ್ ಮಾಡಿದ ಚಿಕನ್ ಜೊತೆ ಬ್ಯಾಕ್ಟೀರಿಯಾಗಳು ಇರುವುದನ್ನು ತಿಳಿದು ಹೌಹಾರಿದ್ದಾರೆ.ಈ ಬಗ್ಗೆ ಮಳಿಗೆಯ ಸಿಬ್ಬಂದಿಗೆ ತಿಳಿಸಿದಾಗ ಅದು ಹೊರಗಿನಿಂದ ತಾವೇ ತಂದುಕೊಂಡ ಆಹಾರ ಎಂದು ವಾದ ಮಾಡಿದ್ದಾರೆ.ಆದರೆ ದೂರು ಸ್ವೀಕರಿಸಲು ಸ್ಥಳಕ್ಕೆ ಬಂದ ಅಧಿಕಾರಿಗಳಿಗೆ ಈ ಬಗ್ಗೆ ಪುರಾವೆ ಲಭಿಸಿದ್ದು,ಬ್ಯಾಕ್ಟೀರಿಯಾಗಳಿದ್ದ ಮಾಂಸದ ತುಂಡುಗಳನ್ನು ಹೆಚ್ಚುವರಿ ಪರೀಕ್ಷೆಗೆ ಕಳುಹಿಸಲಾಗಿತ್ತು.ಪ್ರಯೋಗಾಲಯದ ವರದಿಯಲ್ಲಿ ಚಿಕನ್ ನಲ್ಲಿ ಬ್ಯಾಕ್ಟೀರಿಯಾಗಳು ಇರುವುದು ಧೃಢಪಟ್ಟಿದೆ!
ಇತ್ತೀಚೆಗಷ್ಟೇ ಮ್ಯಾಗಿ ತಯಾರಕರ ನಿರ್ಲಕ್ಷ್ಯದಿಂದ ನೆಸ್ಲೆ ಸಂಸ್ಥೆಗಾದ ಅಪಾರ ನಷ್ಟವನ್ನು ಮನಗಂಡಿದ್ದ ಕೆ.ಎಫ್.ಸಿ. ಈ ಬಗ್ಗೆ ತಕ್ಷಣ ಎಚ್ಚೆತ್ತುಕೊಂಡು ಹಾನಿ ಸರಿಪಡಿಸಲು ಮುಂದಾಗಿದೆ. ಕೆ.ಎಫ್.ಸಿ ಯ ದಕ್ಷಿಣ ಏಷ್ಯಾ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರೋಬರ್ಟ್ ಗಾಂಧಿ ಮೊನ್ನೆಯೇ ಮುಂಬೈ ನಗರಕ್ಕೆ ಬಂದಿಳಿದಿದ್ದಾರೆ.ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೆ.ಎಫ್.ಸಿ ಒಂದು ಬಹುರಾಷ್ಟ್ರೀಯ ಕಂಪನಿಯಾಗಿದ್ದು ಎಲ್ಲ ದೇಶಗಳಲ್ಲೂ ಒಂದೇ ಮಾದರಿಯಲ್ಲಿ ಆಹಾರವನ್ನು ತಯಾರು ಮಾಡಲಾಗುತ್ತದೆ.ನಮ್ಮ ಭಾರತದ ಉತ್ಪನ್ನಗಳಲ್ಲಿ ಬ್ಯಾಕ್ಟೀರಿಯಾಗಳು ಕಂಡುಬಂದಾಕ್ಷಣ ನಾವು ಫ್ರೈಡ್ ಚಿಕನ್ ತಯಾರು ಮಾಡುವ ವಿಧಾನವನ್ನೇ ಬದಲಿಸಿಕೊಳ್ಳಲು ಸಾಧ್ಯವಿಲ್ಲ.ಆದ್ದರಿಂದ ಶೇ.99.9ರಷ್ಟು ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಶಾರ್ಪಿಕ್ ನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು ಇನ್ನು ಮುಂದೆ ನಾವು ಗ್ರಾಹಕರಿಗೆ ಪೂರೈಸುವ ಎಲ್ಲಾ ಕೆ.ಎಫ್.ಸಿ ತಿನಿಸುಗಳೊಂದಿಗೆ ಒಂದು ಶಾರ್ಪಿಕ್ ಬಾಟಲನ್ನು ಉಚಿತವಾಗಿ ನೀಡಲು ತೀರ್ಮಾನಿಸಲಾಗಿದೆ.ಇದಕ್ಕಾಗಿ ಶಾರ್ಪಿಕ್ ಕಂಪನಿಯ ಜೊತೆ ಸುಮಾರು 178 ಕೋಟಿ ರೂ.ಗಳ ಒಪ್ಪಂದ ಮಾಡಿಕೊಳ್ಳಲಾಗಿದೆ,ಇದರಿಂದಾಗಿ ನಮ್ಮ ಗ್ರಾಹಕರು ಇನ್ನುಮುಂದೆ ಬ್ಯಾಕ್ಟೀರಿಯಾಗಳಿಗೆ ಹೆದರುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.ಈ ಕೊಡುಗೆಯು ಭಾರತದ ನಮ್ಮ ಎಲ್ಲಾ ಔಟ್ ಲೆಟ್ ಗಳಲ್ಲಿಯೂ ಮುಂದಿನ ಒಂದು ವರ್ಷಗಳವರೆಗೆ ಲಭ್ಯವಿರುತ್ತದೆ ಎಂದು ಅವರು ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಶಾರ್ಪಿಕ್ ನ ಮಾರುಕಟ್ಟೆ ನಿರ್ದೇಶಕರಾದ ಕ್ಲೀನೇಶ್ ಚೌಧರಿ ಈ ಡೀಲ್ ನ ಬಗ್ಗೆ ತಮ್ಮ ಅತೀವ ಹರ್ಷ ವ್ಯಕ್ತಪಡಿಸಿದರು.ಇದಲ್ಲದೇ ಇತರ ಆಹಾರೋತ್ಪನ್ನ ಕಂಪೆನಿಗಳು ಮುಂದೆ ಬಂದಲ್ಲಿ ಅವುಗಳೊಂದಿಗೂ ಇದೇ ರೀತಿಯ ಒಡಂಬಡಿಕೆ ಮಾಡಿಕೊಳ್ಳಲು ತಾವು ಉತ್ಸುಕರಾಗಿರುವುದಾಗಿ ತಿಳಿಸಿದರು.
ಈ ನಡುವೆ ಮಕ್ಕಳ ಅಚ್ಚು ಮೆಚ್ಚಿನ ಪೇಯ ಡುಂಪ್ಲಾನ್ ನಲ್ಲಿ ಕೀಟಾಣುಗಳು ಕಂಡುಬಂದಿದ್ದು ಆ ಸಂಸ್ಥೆಯೂ ಸಹಾ ಕೆ.ಎಫ್.ಸಿಯ ಮಾದರಿಯಲ್ಲೇ ಮೆಂಟಾಲ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಯೋಚಿಸುತ್ತಿದೆ ಎಂದು DealGossip ನಿಯತಕಾಲಿಕ ವರದಿ ಮಾಡಿದೆ.ಮೆಂಟಾಲ್ ಸಹ ಶೇ.99.9 ರಷ್ಟು ಕೀಟಾಣುಗಳನ್ನು ಹೊಡೆದೋಡಿಸುವ ಭರವಸೆ ನೀಡಿದೆ!
*ವಿ.ಸೂ:ಈ ಸುದ್ದಿಯು ಕೇವಲ ಸುಳ್ಸುದ್ದಿ ಹಾಗೂ ಕಾಲ್ಪನಿಕವಾಗಿದ್ದು,ಇತ್ತೀಚಿನ ದಿನಗಳಲ್ಲಿ ಆಹಾರ ಪದಾರ್ಥಗಳಲ್ಲಿ ಪದೇ ಪದೇ ಕಂಡುಬರುತ್ತಿರುವ ಹಾನಿಕಾರಕ ಪದಾರ್ಥಗಳ ಸುದ್ದಿಗಳನ್ನೋದಿ ಕಲ್ಪಿಸಿಕೊಂಡಿದ್ದಾಗಿರುತ್ತದೆ.ಈ ಸುದ್ದಿಯು ಕೇವಲ ಮನರಂಜನೆಗಾಗಿ ಮಾತ್ರ.