ವಿಷಯದ ವಿವರಗಳಿಗೆ ದಾಟಿರಿ

ಜುಲೈ 14, 2015

32

ಬಡವರಿರಬೇಕು, ಮಾತ್ರವಲ್ಲ, ಅವರು ಹೆಚ್ಚಬೇಕು!

‍ನಿಲುಮೆ ಮೂಲಕ

– ಡಾ. ಶ್ರೀಪಾದ ಭಟ್, ಸಹಾಯಕ ಪ್ರಾಧ್ಯಾಪಕ
ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ,ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

Anna Bhaagyaಮೊದಲು ಒಂದು ಸಂಗತಿಯನ್ನು ಸ್ಪಷ್ಟಮಾಡಿಕೊಳ್ಳಬೇಕು: ಜನತಂತ್ರ ವ್ಯವಸ್ಥೆಯಲ್ಲಿ ಸರ್ಕಾರಗಳು ಜನರ ಕಲ್ಯಾಣಕ್ಕಾಗಿವೆಯೇ ವಿನಾ ಲಾಭ ಮಾಡುವುದಕ್ಕಲ್ಲ. ಆದರೆ ಸಮಾಜಕ್ಕೆ ಲಾಭವಾಗುವಂತೆ ಮಾಡುವುದು ಅವುಗಳ ಕರ್ತವ್ಯ. ಅಂಥ ಲಾಭ ದೀರ್ಘಕಾಲಿಕವಾಗುವಂತೆ ಅದು ನೋಡಿಕೊಳ್ಳಬೇಕಾಗುತ್ತದೆ. ಸಾಧ್ಯವಾದಷ್ಟು ವರ್ಷ ಅಧಿಕಾರದಲ್ಲಿ ಇರುವ ಆಸೆಯಿಂದ ಚುನಾಯಿತ ಸರ್ಕಾರಗಳು ಜನರನ್ನು ಓಲೈಸುವ ಅಗ್ಗದ ಜನಪ್ರಿಯ ಯೋಜನೆಗಳನ್ನು ಕೈಗೊಳ್ಳುವುದರಲ್ಲೇ ಆಸಕ್ತಿ ತೋರಿಸುತ್ತವೆ. ಇಂಥ ಯೋಜನೆಗಳ ಉದ್ದೇಶವನ್ನು ಯಾರೂ ಪ್ರಶ್ನಿಸುವಂತಿರುವುದಿಲ್ಲ, ಆದರೆ ಅವುಗಳ ಜಾರಿ, ಅವು ಉಂಟುಮಾಡುವ ದೀರ್ಘಕಾಲಿಕ ಪರಿಣಾಮ ಮೊದಲಾದ ಸಂಗತಿಗಳು ಚಿಂತನಾರ್ಹ.

ಹಿಂದೆ ವಯಸ್ಕ ಶಿಕ್ಷಣ ಎಂಬ ಸಾಕ್ಷರ ಯೋಜನೆಯೊಂದಿತ್ತು. ಎಲ್ಲರನ್ನೂ ಸಾಕ್ಷರರನ್ನಾಗಿಸಲು ಸಾವಿರಾರು ಕೋಟಿ ರೂ.ಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುರಿದವು. ಈಗಾಗಲೇ ಮಧ್ಯವಯಸ್ಸು ದಾಟಿದ, ಆದರೆ ಸಾಕ್ಷರರಲ್ಲದ ಜನಸಂಖ್ಯೆಯನ್ನು ಗುರುತಿಸಿ, ಸರಾಸರಿ ಆಯುರ್ಮಾನವನ್ನು ಎಣಿಸಿ ಅದರಂತೆ ಯೋಜನೆ ರೂಪಿಸಲಾಯಿತು. ಹೊಸದಾಗಿ ಜನಿಸುವವರಿಗೆ ಕಡ್ಡಾಯ ಶಿಕ್ಷಣದ ಮೂಲಕ ಸಾಕ್ಷರರನ್ನಾಗಿಸುವ ಯೋಜನೆ ಇದ್ದುದರಿಂದ ಅನಕ್ಷರಸ್ಥರು ಹುಟ್ಟುವ ಸಾಧ್ಯತೆ ಇರಲಿಲ್ಲ ಹಾಗೂ ದೇಶದ ಜನರ ಸರಾಸರಿ ಆಯಸ್ಸು 56-60 ಇದ್ದುದರಿಂದ ಈ ಯೋಜನೆಗೆ ನಿಗದಿತ ಅವಧಿ ಹಾಕಿಕೊಳ್ಳಲಾಯಿತು. 10ನೇ ಯೋಜನೆ ಮುಕ್ತಾಯದ ವೇಳೆಗೆ ನಿಗದಿತ ಗುರಿ ತಲಪುವಂತೆ ಕಾಲಮಿತಿ ಹಾಕಿಕೊಂಡ ಈ ಯೋಜನೆ ಈಗ ತನ್ನ ಸ್ವರೂಪ ಬದಲಿಸಿಕೊಂಡು ಔಪಚಾರಿಕ ಶಿಕ್ಷಣ ದೊರಕದವರಿಗೆ ಕೌಶಲ್ಯ ಕಲಿಸತೊಡಗಿ, ಸಾಕ್ಷರರಿಗೆ ಸ್ವಾವಲಂಬನೆ ಮಾರ್ಗ ತೋರಿಸುತ್ತಿದೆ. ಇದು ನಿಜಕ್ಕೂ ಸ್ತುತ್ಯರ್ಹವಾದುದು. ಹೀಗೆ ಸದುದ್ದೇಶದ ಯೋಜನೆಯೊಂದು ಬೆಳವಣಿಗೆ ಕಾಣಬೇಕು; ಸಮಾಜವನ್ನು ಸ್ವಾಸ್ಥ್ಯದತ್ತ ಕೊಂಡೊಯ್ಯಬೇಕು. ಸರ್ಕಾರಗಳ ಬಹಳಷ್ಟು ಯೋಜನೆಗಳಲ್ಲಿ ಇಂಥ ಬೆಳವಣಿಗೆಯೇ ಇರುವುದಿಲ್ಲ.

ಎಲ್ಲರಿಗೂ ಪುಷ್ಟಿಕರ ಆಹಾರ ದೊರಕುವಂತೆ ಮಾಡುವುದು ಹಾಗೂ ದೈಹಿಕ ಮತ್ತು ಮಾನಸಿಕ ಆರೋಗ್ಯ ಇರುವಂತೆ ಮಾಡುವುದು ದೇಶದ ಬಹುದೊಡ್ಡ ಸಮಸ್ಯೆಗಳಲ್ಲೊಂದು. ಆಹಾರ ಮತ್ತು ಆರೋಗ್ಯ ನೀಡುವುದು 1960ರ ದಶಕದ ವೇಳೆಗೆ ದೇಶಾದ್ಯಂತ ಜಾರಿಗೆ ಬಂದ ಪಡಿತರ ವ್ಯವಸ್ಥೆಯ ನಿಜವಾದ ಉದ್ದೇಶವಾಗಿತ್ತು. ಅಂದಿನಿಂದ ಇಂದಿನವರೆಗೆ ಈ ಯೋಜನೆಯನ್ನು ರಾಜಕೀಯ ಲಾಭಕ್ಕಾಗಿ ಸರ್ಕಾರಗಳು ಬೇಕಾಬಿಟ್ಟಿ ಬಳಸುತ್ತ, ಬದಲಿಸುತ್ತ ಬಂದಿವೆಯೇ ವಿನಾ ನಿಜವಾದ ಲಾಭ ಏನಾಗಿದೆ ಎಂದು ಅರಿಯುವ ಗೋಜಿಗೇ ಹೋಗಿಲ್ಲ.

ಕರ್ನಾಟಕದಲ್ಲೇ ಪರಿಸ್ಥಿತಿಯನ್ನು ಗಮನಿಸಿದರೆ ಈ ಸಂಗತಿ ಸ್ಪಷ್ಟವಾಗುತ್ತದೆ. ಹಿಂದಿನ ಸರ್ಕಾರ ಅಂತ್ಯೋದಯ ಯೋಜನೆಯಡಿ 3 ರೂ.ಗಳಿಗೆ ಒಂದು ಕೆಜಿ ಅಕ್ಕಿ ನೀಡುತ್ತಿದ್ದುದನ್ನು ಇಂದಿನ ಸರ್ಕಾರ 1.ರೂಗೆ ಒಂದು ಕೆಜಿ ಅಕ್ಕಿ ಎಂದು ಭಾಗ್ಯದ ಯೋಜನೆಯಾಗಿ ಬದಲಿಸಿಕೊಂಡಿದೆ. ಈಗಂತೂ ಸಂಪೂರ್ಣ ಉಚಿತವಾಗಿ ನೀಡುತ್ತಿದೆ. ಬಡತನ ರೇಖೆಗಿಂತ ಕೆಳಗೆ (ಬಿಪಿಎಲ್) ಇರುವವರಿಗೆ ಆಹಾರ ನೀಡುವುದು ಈ ಯೋಜನೆಯ ಉದ್ದೇಶ. ಹೀಗೆ ಬಡತನ ರೇಖೆ ಕೆಳಗೆ ಎಷ್ಟು ಜನರಿದ್ದಾರೆ,ಈ ಸಂಖ್ಯೆ ಎಷ್ಟು ಕಾಲ ಹೀಗೆಯೇ ಇರುತ್ತದೆ, ಅಥವಾ ಇವರ ಸಂಖ್ಯೆ ಯೋಜನೆಗಳಿಂದ ಇಳಿಯುತ್ತಿದೆಯೇ, ಇವರ ಸಂಖ್ಯೆ ಇಲ್ಲವಾಗುವುದು ಯಾವಾಗ ಎಂಬ ಯಾವುದೇ ನಕಾಶೆ ಸರ್ಕಾರದ ಬಳಿ ಇಲ್ಲ!

ಪಡಿತರ ಅವ್ಯವಸ್ಥೆ ಕುರಿತು 2001ರಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣವೊಂದು ದಾಖಲಾಯಿತು (ರಿಟ್ ಅರ್ಜಿ ಸಂಖ್ಯೆ (ಸಿ).196, 2001). ಈ ಸಂಬಂಧ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ವಾಧ್ವಾ ಸಮಿತಿ ರಚನೆಯಾಗಿ ಅದು ಲೋಪದೋಷ ಸರಿಪಡಿಸುವ ಕೂಲಂಕಷ ವರದಿ ನೀಡಿತು. 2008ರಲ್ಲಿ ಪ್ರಕರಣ ಇತ್ಯರ್ಥಪಡಿಸುವಾಗ ಈ ವರದಿಯನ್ನು ದೇಶಾದ್ಯಂತ ಅನುಸರಿಸಲು ಕ್ರಮಕೈಗೊಳ್ಳುವಂತೆ ಘನ ನ್ಯಾಯಾಲಯ ಆದೇಶ ನೀಡಿತು. ವರದಿಯಲ್ಲಿ ಬಿಪಿಎಲ್ ಕಾರ್ಡುದಾರರನ್ನು ಸರಿಯಾಗಿ ಗುರುತಿಸುವ ಕೆಲಸ ಎಲ್ಲೂ ಆಗಿಲ್ಲ, ರಾಜಕೀಯ ಪ್ರೇರಿತ ಇಂಥ ಯೋಜನೆಯಿಂದ ಸಮಾಜದಲ್ಲಿ ಶ್ರಮ ಸಂಸ್ಕೃತಿಗೆ ಉತ್ತೇಜನ ದೊರಕುವುದಿಲ್ಲ ಎಂದು ವಾಧ್ವಾ ಸಮಿತಿ ಸ್ಪಷ್ಟವಾಗಿ ಹೇಳಿದೆ. ಏನು ಮಾಡಬೇಕು ಎಂದೂ ಹೇಳಿದೆ (ಇದರ ಪಾಠ http://www.prsindia.org ಇದರಲ್ಲಿ ಲಭ್ಯ).

ವಾಧ್ವಾ ಸಮಿತಿ ಗುರುತಿಸಿದಂತೆ ಕರ್ನಾಟಕದಲ್ಲಿ ನ್ಯಾಯವಾಗಿ 31.29 ಲಕ್ಷ ಕಾರ್ಡುದಾರರಿರಬೇಕು. ಆದರೆ ಈ ಸಮಿತಿಗೆ ಸಿಕ್ಕ ಲೆಕ್ಕದಂತೆ 47.08 ಲಕ್ಷ ಹೆಚ್ಚುವರಿ ಕಾರ್ಡುದಾರರಿದ್ದಾರೆ. ಈ ಸಮಿತಿ ಹೇಳುವಂತೆ ಕರ್ನಾಟಕದಲ್ಲಿ ಇರುವ ಬಿಪಿಎಲ್ ಕಾರ್ಡುದಾರರ ಸಂಖ್ಯೆ 78.37 ಲಕ್ಷ. ಇದು 2006-07ರ ಲೆಕ್ಕ. 2013 ಜುಲೈ ವೇಳೆಗೆ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿ ಮಾಡುವಾಗ 87 ಲಕ್ಷ ಬಿಪಿಎಲ್ ಕಾರ್ಡುದಾರರೂ 11 ಲಕ್ಷ ಅಂತ್ಯೋದಯ ಜನರಿಗೂ ಇದರ ಉಪಯೋಗವಾಗುತ್ತದೆ ಎಂದು ಲೆಕ್ಕ ಕೊಟ್ಟಿದೆ. ಅಂದರೆ ಪ್ರತಿ ವರ್ಷ ಬಡವರ ಸಂಖ್ಯೆ ಲಕ್ಷ ಲಕ್ಷದಷ್ಟು ಹೆಚ್ಚುತ್ತಿದೆ ಎಂದರ್ಥ. ಹಾಗಾದರೆ ಬಡತನ ನಿರ್ಮೂಲನೆಗೆ ಸರ್ಕಾರಗಳು ಮಾಡುತ್ತಿರುವುದೇನು? ಯೋಜನೆಗಳಿವೆ, ಪರಿಣಾಮ ಮಾತ್ರ ಏನೂ ಇಲ್ಲ! ಯಾಕೆಂದರೆ ರಾಜಕೀಯ ಪಕ್ಷಗಳಿಗೆ ಬಡವರಿರಬೇಕು!

ನಗರ ಪ್ರದೇಶದಲ್ಲಿ ವಾರ್ಷಿಕ 17,000 ರೂ ಹಾಗೂ ಗ್ರಾಮೀಣ ಭಾಗದಲ್ಲಿ ವಾರ್ಷಿಕ 12,000 ರೂ.ಗಿಂತ ಕಡಿಮೆ ಆದಾಯ ಇರುವವರನ್ನು ಬಿಪಿಎಲ್ ಕಾರ್ಡುಪಡೆಯಲು ಅರ್ಹರೆಂದು ಗುರುತಿಸಲಾಗಿದೆ. ತಿಂಗಳಿಗೆ ಒಂದು ಅಥವಾ ಒಂದೂವರೆ ಸಾವಿರ ರೂ.ಗಳಲ್ಲಿ ಜೀವನ ಸಾಗಿಸುವ ಜನ ನಿಜಕ್ಕೂ ಎಲ್ಲಿ ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂಬ ಲೆಕ್ಕ ಎಲ್ಲೂ ಸರಿಯಾಗಿಲ್ಲ. ಕೃಷಿ ಕೂಲಿಗಳು, ಅಸಂಘಟಿತ ವಲಯದ ಕಾರ್ಮಿಕರು, ಮೊದಲಾದವರಿಗೆ ಕನಿಷ್ಠ ನಿತ್ಯ 100 ರೂ. ಆದಾಯವನ್ನು ರಾಷ್ಟ್ರೀಯ ಸಮೀಕ್ಷಾ ಸಂಘಟನೆ (ಎನ್‍ಎಸ್‍ಎಸ್‍ಒ) ನಿಗದಿ ಮಾಡಿದೆ. ತಿಂಗಳು ಪೂರ್ತಿ, ವರ್ಷಪೂರ್ತಿ ಇವರಿಗೆ ಕೆಲಸವಿರುವುದಿಲ್ಲ ಎಂಬ ದೃಷ್ಟಿಯಿಂದ ಇವರ ಆದಾಯ ಮೇಲ್ಕಂಡ ಮಿತಿಯಲ್ಲೇ ಬರುತ್ತದೆ. ಈ ದೃಷ್ಟಿಯಿಂದ ಇವರೆಲ್ಲ ಬಿಪಿಎಲ್ ಕಾರ್ಡು ಹೊಂದಲು ಅರ್ಹರಾಗುತ್ತಾರೆ. ಇದೇನೋ ಸರಿ. ಆದರೆ ಈ ಪಟ್ಟಿಯಲ್ಲಿ ಇನ್ನು ಯಾರೆಲ್ಲ ಸೇರಿದ್ದಾರೆ, ಸೇರುತ್ತಿದ್ದಾರೆ ಎಂಬುದನ್ನೇ ಸರ್ಕಾರಗಳು ಗಮನಿಸುತ್ತಿಲ್ಲ. ಇಂಥವರ ಸಂಖ್ಯೆ ಇಷ್ಟೇ ಎಂದು ಖಚಿತವಾಗಿಬಿಟ್ಟರೆ, ಬಡತನದ ಮೂಲ ಸಮಸ್ಯೆ ನಿವಾರಣೆ ಅನಿವಾರ್ಯವಾಗುತ್ತದೆ, ಅದಕ್ಕೊಂದು ಕಾಲಮಿತಿ ಹಾಕಿಕೊಳ್ಳಬೇಕಾಗುತ್ತದೆ! ಹಾಗಾದಾಗ ಚುನಾವಣಾ ಪ್ರಣಾಳಿಕೆಯಲ್ಲಿ ಅಗ್ಗದ ಆಶ್ವಾಸನೆ ಕೊಡುವ ಅವಕಾಶಗಳು ಇಲ್ಲವಾಗುತ್ತವೆ!

ನಮ್ಮ ಅನ್ನಭಾಗ್ಯ ಯೋಜನೆಯನ್ನೇ ನೋಡಿ. ಚೆನ್ನಾಗಿದೆ. ಒಂದು ಕೆಜಿ ಅಕ್ಕಿ ಸಿದ್ಧವಾಗಲು (ಬಿತ್ತನೆಯಿಂದ-ಮಿಲ್‍ನಿಂದ ಹೊರಬರುವತನಕ) ಒಂದು ಅಂದಾಜಿನಂತೆ ಕನಿಷ್ಠ 20.ರೂ ತಗಲುತ್ತದೆ. ಚತ್ತೀಸ್‍ಗಡದಿಂದ 23.30 ರೂ.ಗೆ ಪ್ರತಿ ಕೆಜಿ ಖರೀದಿಸಿ ಪುಕ್ಕಟೆ ಅಕ್ಕಿ ನೀಡುತ್ತಿದ್ದೇವೆ. ನಮ್ಮ ರಾಜ್ಯದ ರೈತರಿಗಾದರೂ ಇದರ ಲಾಭ ದೊರೆಯಿತೇ ಅದೂ ಇಲ್ಲ. ಇದರಿಂದ ವಾರ್ಷಿಕ ಸರ್ಕಾರದ ಬೊಕ್ಕಸಕ್ಕೆ 4,200 ಕೋಟಿ ರೂ. ಹೊರೆ ಬೀಳುತ್ತಿದೆ. ರಾಜ್ಯದಲ್ಲಿರುವ 1818 ರೈಸ್‍ಮಿಲ್‍ಗಳಿಂದ ಪಡೆಯುವ ಲೆವಿ ಅಕ್ಕಿ ಪ್ರಮಾಣ ಹೆಚ್ಚಿಸಿ ಯೋಜನೆ ಮುಂದುವರೆಸುವ ಉದ್ದೇಶ ಸರ್ಕಾರದ್ದು. ಆದರೆ ಮಿಲ್ ಮಾಲೀಕರು ವಾಸ್ತವದಲ್ಲಿ ಇದು ಅಸಾಧ್ಯ ಎಂದು ಪಟ್ಟು ಹಿಡಿದಿದ್ದಾರೆ. ಜನಪ್ರಿಯ ಯೋಜನೆ ಧಿಡೀರನೆ ಜಾರಿಯಾಗಿದೆ, ಅದರ ಸ್ವರೂಪವನ್ನು ಪರಾಮರ್ಶಿಸಿ ಸರಿಪಡಿಸುವ ದಿಟ್ಟ ಕ್ರಮ ಈಗ ಅಸಾಧ್ಯವಾಗಿಹೋಗಿದೆ. ಈಗ ಉಳಿದಿರುವುದು ಬಡವರ ಹೆಸರಲ್ಲಿ ಅದನ್ನು ಸಮರ್ಥಿಸಿಕೊಳ್ಳುತ್ತ ಹೋಗುವುದು; ಅದಕ್ಕೆ ಬೆಂಬಲ ಪಡೆಯಲು ಆದಷ್ಟೂ ಕಾಲ ಸತ್ಯವನ್ನು ಮುಚ್ಚಿಡುತ್ತ ಹೋಗುವುದು.

ಹೋಗಲಿ, ಸರ್ಕಾರದ ಉದ್ದೇಶ ಈಡೇರಿತೆ? ಇಲ್ಲ. ಅನ್ನಭಾಗ್ಯ ಸಹಾಯವಾಣಿ (1967)ಗೆ ಬರುವ ದೂರುಗಳನ್ನು ಕೇಳಿನೋಡಿ. ರಾಜ್ಯದ 20372 ನ್ಯಾಯಬೆಲೆ ಅಂಗಡಿಗಳಲ್ಲಿ ದೂರಿಲ್ಲದ ಅಂಗಡಿಯೇ ಬಹುಶಃ ಇರಲಾರದು. ಒಂದು ರೂ.ಗೆ ಅಕ್ಕಿ ಪಡೆಯುವ ಕುಟುಂಬಗಳನ್ನು ವಿಶ್ವಾಸದಿಂದ ಮಾತನಾಡಿಸಿ ನೋಡಿ. ಆಘಾತವೇ ಆಗುತ್ತದೆ. ಒಂದೇ ಮನೆಯಲ್ಲಿ ಮೂರ್ನಾಲ್ಕು ಕಾರ್ಡು ಇಟ್ಟುಕೊಂಡವರಿದ್ದಾರೆ. ಇವರಲ್ಲಿ ಪುಕ್ಕಟೆ ಅಕ್ಕಿ ಪಡೆದು 45ರೂ.ಗೆ ಮಾರುವವರೇ ಹೆಚ್ಚು. ಯೋಜನೆಯಿಂದ ಉಳಿತಾಯವಾದ “ಬಡವರ” ಹಣ ಎಲ್ಲಿ ಹೋಗುತ್ತಿದೆ ಎಂಬ ಸಮೀಕ್ಷೆಯನ್ನೂ ಸರ್ಕಾರ ಮಾಡುತ್ತಿಲ್ಲ. ಒರಿಸ್ಸ, ಆಂಧ್ರ ಮತ್ತು ತಮಿಳುನಾಡುಗಳಲ್ಲೂ ಇಂಥ ಜನಪ್ರಿಯ ಯೋಜನೆಗಳಿವೆ. ಇವೆಲ್ಲವೂ ರಾಜಕೀಯ ಲಾಭದವೇ ವಿನಾ ಸಮಾಜೋಪಕಾರಿಯಲ್ಲ. ತಮಿಳುನಾಡಿನಲ್ಲಿ ಅಮ್ಮಾಕ್ಯಾಂಟೀನು, ಅಮ್ಮಾ ನೀರು, ಹೀಗೆ ಎಲ್ಲವೂ ಅಮ್ಮಮಯ. ಅಲ್ಲಿಯೂ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ಬರೀ ಕ್ಯಾಂಟೀನಿನಿಂದ ನೂರಾರು ಕೋಟಿ ಹೊರೆಯಾಗುತ್ತಿದೆ.

ದೇಶದಲ್ಲಿ ಮೈಕೈ ಸರಿ ಇರುವ ಸ್ವಾಭಿಮಾನಿಗಳು ಯಾರೂ ಪುಗ್ಸಟ್ಟೆ ಅನ್ನಕ್ಕೆ ಸರದಿ ಸಾಲಿನಲ್ಲಿ ನಿಲ್ಲುವುದಿಲ್ಲ. ಆದರೆ ನಮ್ಮ ಜನ ಪುಗ್ಸಟ್ಟೆಯಾಗಿ ಬರುತ್ತದೆ ಅಂದರೆ ಯಾವುದನ್ನೂ ಬಿಡುವುದಿಲ್ಲ. ಅಷ್ಟು ಜಾಣತನ ಜನರಲ್ಲಿ ಇದ್ದೇ ಇದೆ. “ಅನ್ನಭಾಗ್ಯ ಅಂದರೆ ಭಿಕ್ಷೆಯಲ್ಲ” ಎನ್ನುವ ಜನ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಅರ್ಹ ಜನರಿಗೆ ನಿಯಮಾನುಸಾರ “ಭಿಕ್ಷೆ”ಯಾಗಿಯೇ ಯಾಕೆ ನೀಡುತ್ತಿಲ್ಲ ಎಂದು ಎಂದಾದರೂ ಯೋಚಿಸಿದ್ದಾರಾ? ಕರ್ನಾಟಕದಲ್ಲಿ ವಿವಿಧ ಇಲಾಖೆಗಳಲ್ಲಿ ಅನೇಕಾನೇಕ ವರ್ಷಗಳಿಂದ ಖಾಲಿ ಇರುವ ಹುದ್ದೆಗಳ ಸಂಖ್ಯೆ ನಾಲ್ಕು ಲಕ್ಷ ದಾಟುತ್ತದೆ. ಖಾಲಿ ಹುದ್ದೆಗಳನ್ನು ತುಂಬಿ, ಅವುಗಳ ಕನಿಷ್ಠ ವೇತನ, ನಿವೃತ್ತಿ ಸೌಲಭ್ಯ ಮೊದಲಾದವನ್ನು ಲೆಕ್ಕ ಹಾಕಿದರೆ ಪ್ರತಿ ತಿಂಗಳು ಇದೇ ಐದು ಸಾವಿರ ಕೋಟಿ ದಾಟುತ್ತದೆ ಎಂಬ ಅಂದಾಜಿದೆ. ಸುಮಾರು ನಾಲ್ಕೂವರೆ ಸಾವಿರ ಕೋಟಿ ರೂ.ನಲ್ಲಿ ಅನ್ನಭಾಗ್ಯದ ಹೆಸರಲ್ಲಿ ಉದ್ಯೋಗದಿಂದ ಹಸಿವು ನಿವಾರಿಸಿಕೊಳ್ಳುವ ಲೆಕ್ಕ ಮುಗಿದೇ ಹೋಗುತ್ತದೆ! ಇದರಲ್ಲಿ ಸಾಮಾಜಿಕ ನ್ಯಾಯವೂ ಬಂತು, ರಾಜಕೀಯ ಬೇಳೆಯೂ ಬೇಯಿತು! ಹೆಂಗಿದೆ?

ಇಂಥ ಜನಪ್ರಿಯ ಯೋಜನೆಗಳು ಬಡತನವನ್ನು ಎಂದು ನಿವಾರಿಸುತ್ತವೆ? ಎಂದೂ ಇಲ್ಲ. ಅನ್ನ ಕೊಟ್ಟರೆ ಹಸಿವು ಇಂಗುವುದಿಲ್ಲ, ಮತ್ತೆ ಹಸಿವಾಗುತ್ತದೆ. ಸರ್ಕಾರಗಳು ಜನರಿಗೆ ಅನ್ನ ಹುಟ್ಟಿಸಿಕೊಳ್ಳುವ ಮಾರ್ಗ ಕಾಣಿಸಬೇಕೇ ಹೊರತು ಅನ್ನವನ್ನೇ ಕೊಟ್ಟು ಸುಮ್ಮನಿರಿಸುವುದಲ್ಲ. ಒಂದು ಪಕ್ಷ ಪುಕ್ಕಟೆ ಅನ್ನ ಕೊಟ್ಟರೆ ಮತ್ತೊಂದು ಪಕ್ಷ ಮನೆ, ಹಾಸಿಗೆ, ಕಲರ್ ಟೀವಿ, ವಿದ್ಯುತ್ ಹೀಗೆ ಎಲ್ಲವನ್ನೂ ಕೊಡುತ್ತದೆ. ಹೀಗಾದರೆ ಸಮಾಜ ಶ್ರಮ ಸಂಸ್ಕೃತಿಯನ್ನು ಉಳಿಸಿಕೊಳ್ಳುತ್ತದೆಯೇ?

ಅನಾರೋಗ್ಯವಿದ್ದಾಗ ಮಾತ್ರ ಗ್ಲುಕೋಸು, ವಿಟಮಿನ್ ಮಾತ್ರೆ ತೆಗೆದುಕೊಳ್ಳಬೇಕೇ ಹೊರತು, ಆಹಾರ ಸ್ವೀಕರಿಸುವ ಬದಲು ಇವನ್ನೇ ಸ್ವೀಕರಿಸುತ್ತ ಇರಲಾಗುತ್ತದೆಯೇ? ಇವೆಲ್ಲ ತಾತ್ಕಾಲಿಕ ಶಮನಗಳು. ಆದರೆ ರಾಜಕೀಯ ಪಕ್ಷಗಳು ಇದನ್ನೇ ಕಾಯಂ ಮಾಡಿ ಸಮಾಜವನ್ನು ಕೆಡಿಸುತ್ತಿವೆ. ನಿರುದ್ಯೋಗ ನಿವಾರಿಸುವ, ಆಹಾರ ಬೆಲೆಯನ್ನು ನಿಯಂತ್ರಣದಲ್ಲಿರಿಸಿ, ಸ್ವಾವಲಂಬನೆ ಬೆಳೆಯುವಂತೆ ಮೂಲಸೌಕರ್ಯ ಒದಗಿಸಿ ಸಮಾಜವನ್ನು ಸಕ್ರಿಯಗೊಳಿಸುವ ಯೋಜನೆ ನೀಡುವ ಬದಲು ಸ್ಪರ್ಧಾತ್ಮಕ ರೀತಿಯಲ್ಲಿ ಅಗ್ಗದ ಯೋಜನೆ ನೀಡುತ್ತ ಸಮಾಜ ನಿಷ್ಕ್ರಿಯವಾಗುವಂತೆ ಇವು ಮಾಡುತ್ತಿರುವುದು ಮಾತ್ರ ಶೋಚನೀಯ.

32 ಟಿಪ್ಪಣಿಗಳು Post a comment
  1. ಎ ಶಿವ ಪ್ರಕಾಶ್
    ಜುಲೈ 14 2015

    ಸರಕಾರ ನಡಿಸುವವರು ಯೋಚಿಸಬೇಕು

    ಉತ್ತರ
    • shripad
      ಜುಲೈ 14 2015

      ಯೋಚಿಸಬೇಕಿತ್ತು. ದುರಂತ ನೋಡಿ-ಈ ಭಾಗ್ಯಗಳ ಹಣೆಬರಹವನ್ನು ಆಮೂಲಾಗ್ರ ವಿವೇಚಿಸಿದರೆ ಇದರ ಪೊಳ್ಳುತನ ಅರಿವಾಗುತ್ತದೆ. ಸರ್ವೋಚ್ಚ ನ್ಯಾಯಾಲಯದ ಸೂಚನೆಯನ್ನೂ ಗಮನಿಸದೇ ಯೋಜನೆ ರೂಪಿಸುತ್ತಾರಲ್ಲ, ಇದಕ್ಕೇನೆನ್ನಬೇಕು? ಪ್ರಗತಿಪರರು, ಸಮಾನತೆಯ ಪ್ರತಿಪಾದಕರು, ಸಮಾಜವಾದಿಗಳು ಎಂದೆಲ್ಲ ಕರೆದುಕೊಳ್ಳುವವರು ಎಲ್ಲದರಲ್ಲೂ ವೈಜ್ನಾನಿಕತೆಯನ್ನು ಬಯಸುತ್ತಾರೆ. ಆದರೆ ಇಂಥ ದಿಕ್ಕುತಪ್ಪಿಸುವ ಯೋಜನೆಯಲ್ಲಿ ವೈಜ್ನಾನಿಕತೆ ಎಲ್ಲಿದೆ ಎಂದು ಉದ್ದೇಶಪೂರ್ವಕವಾಗಿಯೇ ನೋಡುವುದಿಲ್ಲ! ಇಂಥ ಕಡೆ ಮಾತ್ರ ಅವರ ಭಾವುಕತೆ ತೀವ್ರವಾಗಿರುತ್ತದೆ ಎಂಬುದು ವ್ಯಂಗ್ಯ!!

      ಉತ್ತರ
  2. ಜುಲೈ 14 2015

    ಲೇಖನ ವಸ್ತುನಿಷ್ಟವಾಗಿದೆ. ವಾಸ್ತವತೆಯನ್ನು ಸಾಧಾರ ಬಿಂಬಿಸಿದೆ. ಧನ್ಯವಾದಗಳು ಶ್ರೀಪಾದ.

    ಉತ್ತರ
    • shripad
      ಜುಲೈ 14 2015

      ಸರ್ ಹಿರಿಯರಾದ ತಾವೇ ಓದಿ ಮೆಚ್ಚಿದ್ದೀರಿ. ಧನ್ಯವಾದಗಳು.

      ಉತ್ತರ
  3. ಜುಲೈ 14 2015

    ಸರ್‍ ಉತ್ತಮ ವಿಚಾರವನ್ನು ತಿಳಿಸಿದ್ದೀರಿ ಧನ್ಯವಾದ. ಆಳುವ ಆಡಳಿತ ವಿಚಾರಿಸಬೇಕಿತ್ತು.

    ಉತ್ತರ
  4. ಜುಲೈ 15 2015

    ಉಪಯುಕ್ತವಾಗಿದೆ. ವಿಚಾರ ಮಾಡಬೇಕಾದ ಲೇಖನ. ಧನ್ಯವಾದಗಳು

    ಉತ್ತರ
  5. ಚನ್ನಬಸವೇಶ್ವರ ಬಿದರಿ
    ಜುಲೈ 15 2015

    ಲೇಖಕರ ಅಭಿಪ್ರಾಯಗಳು ವಿಚಾರಪ್ರಚೋದಕವಾಗಿವೆ. ಆದರೆ ಅನ್ನಭಾಗ್ಯ ಯೋಜನೆ ಬಗ್ಗೆ ಭಿನ್ನವಾಗಿ ವಿಚಾರ ಮಾಡಲು ಸಾಧ್ಯವಿದೆ. ಅನ್ನಭಾಗ್ಯದ ಹಿಂದಿರುವ ತತ್ವಗಳು ಹೊಸದೇನಲ್ಲ, ಕನ್ನಡದ ಸಂಸ್ಕೃತಿಗೆ ಅನ್ಯವಾದುದೇನಲ್ಲ. ದಾಸೋಹ ತತ್ವವೇ ಅನ್ನಭಾಗ್ಯದ ರೂಪದಲ್ಲಿ ಹೊಸ ಅವತರಣಿಕೆಯನ್ನು ಪಡೆದಿದೆ. ಹಿಂದೆಲ್ಲ ನಾಡಿನಲ್ಲಿ ಪುಣ್ಯವಂತರಿದ್ದರು, ದಾನಧರ್ಮ ಮಾಡುತ್ತಿದ್ದರು. ಸಮಾಜ ಕೂಡ ದಾನಕ್ಕೆ ಮಹತ್ವ ನೀಡಿತ್ತು. ಆದರೆ ಇಂದು ರಾಜಕಾರಣಿಗಳಿಂದ ಹಿಡಿದು ಪ್ರಗತಿಪರರೂ ಸೇರಿದಂತೆ ಜನಸಾಮಾನ್ಯರೂ ಸ್ವಾರ್ಥಿಗಳು. ಇಂದಿನ ಬಿಸಿನೆಸ್ ಯುಗದಲ್ಲಿ ದಾನಧರ್ಮಗಳ ಬಗ್ಗೆ ಆಸ್ಥೆ ಶ್ರದ್ಧೆ ಕಡಿಮೆ ಆಗಿದೆ. ಆದರೆ ಬಡತನ ಕಡಿಮೆ ಆಗಿಲ್ಲ, ಹಸಿದವರ ಸಂಕಟ ಮಾಯವಾಗಿಲ್ಲ. ಆದುದರಿಂದ ಅನ್ನಭಾಗ್ಯದಂತಹ ಯೋಜನೆಗಳು ಅನಿವಾರ್ಯವಾಗಿವೆ. ಅನ್ನಭಾಗ್ಯವನ್ನು ವಿರೋಧಿಸುವವರು (ಭೈರಪ್ಪಯಾದಿಯಾಗಿ) ದಾನ ದಾಸೋಹವನ್ನು ವಿರೋಧಿಸಬೇಕಲ್ಲವೇ? ಸರಕಾರದ ಹಣದಿಂದ ಬಡವರ ಹೊಟ್ಟೆ ತುಂಬುತ್ತಿದೆ ಎಂಬ ಕಾರಣಕ್ಕೆ ಭೈರಪ್ಪ ಮೊದಲಾದವರು ಅನ್ನಭಾಗ್ಯವನ್ನು ವಿರೋಧಿಸಿದ್ದಾರೆ. ಆದರೆ ಇಲ್ಲಿ ಗಮನಿಸತಕ್ಕ ಸಂಗತಿ ಏನೆಂದರೆ ಸರಕಾರವು ಉಳ್ಳವರು ಕೊಡುವ ಕಂದಾಯದ ಹಣದಿಂದ ಅನ್ನಭಾಗ್ಯವನ್ನು ಬಡವರಿಗೆ ಕಲ್ಪಿಸಿದೆ. ಆದುದರಿಂದ ಅನ್ನಭಾಗ್ಯವು ಅಪರೋಕ್ಷ ದಾನವೇ ಆಗಿದೆ. ಉಳ್ಳವರು ತಾವಾಗಿಯೇ ಮುಂದೆ ಬಂದು ದಾನ ಮಾಡಿದ್ದರೆ ಅನ್ನಭಾಗ್ಯದ ಅಗತ್ಯವೇ ಇರುತ್ತಿರಲಿಲ್ಲ. ಸಂಪಾದಿಸಿದ್ದು ಎಲ್ಲವನ್ನೂ ತಾವೇ ಭಕ್ಷಿಸಬೇಕು ಎಂಬ ಸ್ವಾರ್ಥ ಭಾವನೆ ಸಮಾಜದಲ್ಲಿ ಮನೆ ಮಾಡಿರುವುದರಿಂದ ಸರಕಾರ ತಾನೇ ಕ್ರಮ ತೆಗೆದುಕೊಳ್ಳಬೇಕಾಗಿದೆ. ನಾಡಿನ ಘನ ಸರಕಾರವು ಅನ್ನಭಾಗ್ಯವನ್ನು ವಿರೋಧಿಸುವವರಿಗೂ (ಭೈರಪ್ಪಯಾದಿಯಾಗಿ) ಅನ್ನಭಾಗ್ಯ ಯೋಜನೆಯನ್ನು ವಿಸ್ತರಿಸತಕ್ಕದ್ದು, ತನ್ಮೂಲಕ ಬಡವರು ತಿನ್ನುವ ಅಕ್ಕಿ ದಾನ್ಯವನ್ನೇ ಉಳ್ಳವರೂ ತಿನ್ನುವನ್ತಾಗಲಿ.

    ಉತ್ತರ
    • shripad
      ಜುಲೈ 15 2015

      ಚೆನ್ನಬಸವೇಶ್ವರರೇ ಅನ್ನದಾನ ಪುಣ್ಯದ ಕೆಲಸ ಎಂದು ತಿಳಿದ ಈ ದೇಶದಲ್ಲಿ ಹಸಿದವರಿಗೆ ಆಹಾರ ಕೊಡುವುದನ್ನು ಯಾರೂ ಪ್ರಶ್ನಿಸುವುದಿಲ್ಲ. ಶರಣರೂ ಈ ದೇಶದ ಭಾಗ. ಅವರೂ ಅದನ್ನೇ ಹೇಳಿದ್ದು. ಅವರು ಬರುವ ಮುಂಚೆಯೂ ಅನ್ನದಾನ ಇತ್ತು. ದಾಸೋಹವನ್ನು ಮೆಚ್ಚುವ ಭರದಲ್ಲಿ ವಾಸ್ತವ ಮರೆಮಾಚುವ ಅಗತ್ಯವಿಲ್ಲ. ನಾನೂ ಯೋಜನೆಯನ್ನು ವಿರೋಧಿಸಿಲ್ಲ. ಮತ್ತೊಮ್ಮೆ ಲೇಖನ ಓದಿ (ಭಾವಾವೇಶ ಬಿಟ್ಟು). ವಿಲ್ ಡ್ಯುರಾಂಟ್ ತಮ್ಮ ಕೇಸ್ ಫಾರ್ ಇಂಡಿಯ ಕೃತಿಯಲ್ಲಿ ಭಾರತಕ್ಕೆ ವಸಾಹತು ಕಾಲಿಡುವವರೆಗೂ ಒಬ್ಬನೇ ಒಬ್ಬ ವ್ಯಕ್ತಿ ಹಸಿವಿನಿಂದ ಸತ್ತ ದಾಖಲೆ ಇಲ್ಲ ಎಂದು ದಾಖಲೆ ಸಹಿತ ಸ್ಪಷ್ಟವಾಗಿ ಹೇಳಿದ್ದಾರೆ. ಅಂದರೆ ಆಧುನಿಕ ಆಡಳಿತ ರೀತಿಗೂ ಹಸಿವಿಗೂ ಸಂಬಂಧ ಸ್ಪಷ್ಟವಾಗಿದೆ ಎಂದೇ ಅರ್ಥ. ಎಲ್ಲವನ್ನೂ ವೈಜ್ನಾನಿಕ ರೀತಿಯಲ್ಲಿ ನೋಡಬೇಕೆನ್ನುವವರು ಈ ಯೋಜನೆಯ ಸ್ವರೂಪದಲ್ಲಿ ಯಾವುದು ವೈಜ್ನಾನಿಕ ಎಂಬುದನ್ನು ದಯವಿಟ್ಟು ತಿಳಿಸಲಿ. ಹುಚ್ಚಿ ಮದ್ವೇಲಿ ಉಂಡವನು ಜಾಣ ಎನ್ನುವಂತೆ ಸರ್ಕಾರಿ ಯೋಜನೆಗಳಾಗಬಾರದು ಅಲ್ವಾ?

      ಉತ್ತರ
      • ಚನ್ನಬಸವೇಶ್ವರ ಬಿದರಿ
        ಜುಲೈ 15 2015

        ಮಾನ್ಯ ಶ್ರೀಪಾದ್ ಅವರೇ, ನನ್ನ ಅಭಿಪ್ರಾಯಗಳ ಹಿಂದೆ ಬಡವರ ಹಸಿವನ್ನು ಇಂಗಿಸುವ ಕಾಳಜಿ ಇದೆಯೇ ಹೊರತು ಯಾವುದೇ ಭಾವೋದ್ವೇಗವಿಲ್ಲ. ಅನ್ನಭಾಗ್ಯ ಯೋಜನೆಯ ಅನುಷ್ಠಾನದಲ್ಲಿ ಲೋಪಗಳಿರಬಹುದು ಆದರೆ ಅನ್ನಭಾಗ್ಯ ಯೋಜನೆಯೇ ಬೇಡ ಎನ್ನುವುದು ಹಸಿದವರ ಹೊಟ್ಟೆಯ ಮೇಲೆ ಬರೆ ಎಳೆದ ಹಾಗೆ. ಬಡವರಿಗಷ್ಟೇ ಅಲ್ಲ ಸಮಾಜದ ಸಮಸ್ತರಿಗೂ ಅನ್ನಭಾಗ್ಯದ ಲಾಭ ಸಿಗಲಿ. ಅಗತ್ಯ ಬಿದ್ದರೆ ಅನ್ನಭಾಗ್ಯ ಯೋಜನೆಯ ನಿರ್ವಹಣೆಗೆ ಸರ್ಕಾರ ಉದ್ಯಮಗಳ ಮೇಲೆ ಹಾಗೂ ಕಂದಾಯದಾರರ ಮೇಲೆ ೧% ಕಂದಾಯ ಹೆಚ್ಚಿಸಲಿ.

        ಉತ್ತರ
        • shripad
          ಜುಲೈ 15 2015

          ಲೋಪಗಳಿರಬಹುದು ಅಲ್ಲ, ಬರೀ ಲೋಪವೇ ತುಂಬಿದೆ. ಹಸಿದವರ ಬಗ್ಗೆ ಸರ್ವೋಚ್ಚ ನ್ಯಾಯಾಲಯಕ್ಕೂ ಕಾಳಜಿ ಇದೆ. ತಮಗೊಬ್ಬರಿಗೇ ಅಲ್ಲ. ಶೇ.೧೦ಕ್ಕಿಂತ ಕಡಿಮೆ ತೆರಿಗೆದಾರರ ಮೇಲೆ ಮತ್ತೆಷ್ಟು ಹೊರೆ ಹೆಚ್ಚಿಸಬೇಕು? ಉಳಿದವರು ಇರುವುದು ಯಾಕೆ? ಅವರಿಗೆ ದುಡಿಮೆಯ ಮಾರ್ಗ ತೋರಿಸಬೇಡವೇ?

          ಉತ್ತರ
          • ಚನ್ನಬಸವೇಶ್ವರ ಬಿದರಿ
            ಜುಲೈ 16 2015

            ಮಾನ್ಯ ಶ್ರೀಪಾದ್ ಅವರೇ, ಹಸಿದವರು ಕೆಲಸಗಳ್ಳರು ಅಂತ ಏಕೆ ಭಾವಿಸಿದ್ದೀರಿ? ಹಸಿದವರಿಗೆ ದುಡಿಮೆಯ ಮಾರ್ಗ ತೋರಿಸುವ ಬಗ್ಗೆ ಮಾತನಾಡುವ ನೀವು ದುಡಿಮೆಯ ಫಲವನ್ನು ಯೋಗ್ಯರೀತಿಯಲ್ಲಿ ಹಸಿದವರಿಗೆ ವಿತರಣೆ ಮಾಡುವ ಮಾರ್ಗದ ಬಗ್ಗೆಯೂ ಮಾತನಾಡಬೇಕಲ್ಲವೇ? ಭಾರತದಲ್ಲಿ ಅಷ್ಟೇ ಅಲ್ಲ ಎಲ್ಲಾ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆ ಇರುವ ರಾಷ್ಟ್ರಗಳಲ್ಲಿ ದುಡಿಮೆ ೯೦% ಫಲ ೧೦% ಗಿಂತ ಕಡಿಮೆ ಜನರ ಪಾಲಾಗಿರುತ್ತದೆ. ಆದುದರಿಂದ ೧೦% ಜನಸಂಖ್ಯೆಯ ಕಂದಾಯದಾರರು ಅನ್ನಭಾಗ್ಯಕ್ಕೆ ಹೆಚ್ಚಿನ ಕಂದಾಯ ಕಟ್ಟಿದರೆ ತಪ್ಪೇನಿಲ್ಲ.

            ಉತ್ತರ
            • shripad
              ಜುಲೈ 16 2015

              ಏನೋಪ್ಪ. ನಿಮ್ಮ ಈ ಅಂಕಿ ಅಂಶಗಳು ಯಾವ ಮೂಲದವೋ? ಶೇ.೯೦ ಜನ ದುಡಿದರೆ ಯಾವ ನಾಡಿಗೂ ಯಾವ ಭಾಗ್ಯಗಳೂ ಬೇಕಾಗುವುದಿಲ್ಲ. ನಿಮ್ಮ ಮಾತು ಸಮಾಜವಾದಿಗಳು ಎಂದುಕೊಂಡವರು ಹೇಳಿಕೊಳ್ಳುವ ಎಲ್ಲರನ್ನೂ ಮೆಚ್ಚಿಸುವ ಬೀಸುಹೇಳಿಕೆಯಂತಿದೆ.

              ಉತ್ತರ
            • ಜುಲೈ 16 2015

              ಬಿದರೆಯೊಳಗಿನ ಚದುರನಾರೆಂಬುದನರಿತೊಡೆ ಚನ್ನಬಸವಣ್ಣನ ಕೊರಳ ನಾಗನು ಕಾಂಬನಯ್ಯಾ

              ಉತ್ತರ
              • shripad
                ಜುಲೈ 16 2015
              • WITIAN
                ಜುಲೈ 16 2015

                ಹ ಹಾ ಸುದರ್ಶನರಾವ್ ಆಶುಕವಿತೆ ಚೆನ್ನಾಗಿದೆ. ‘ಬಿದರಿ’ನೊಳಗಿನ ಚದುರ ಎಂದಿದ್ದರೆ ಇನ್ನೂ ಅರ್ಥಪೂರ್ಣವಾಗಿರುತ್ತಿತ್ತು. ನನಗಂತೂ “…ತಕ್ಕದ್ದು” ಎಂಬ ಪೋಸ್ಟ್ ಫಿಕ್ಸ್ ನೋಡಿದ ತಕ್ಷಣ ತಿಳಿಯಿತು. Troll alert ಗೆ ಅಭಿನಂದನೆಗಳು!

                ಉತ್ತರ
            • ಜುಲೈ 17 2015

              “ದುಡಿಮೆಯ ಫಲವನ್ನು ಯೋಗ್ಯರೀತಿಯಲ್ಲಿ ಹಸಿದವರಿಗೆ ವಿತರಣೆ ಮಾಡುವ ಮಾರ್ಗದ ಬಗ್ಗೆ” ಸರಕಾರಗಳು ಯೋಚಿಸಬೇಕೆಂದೇ ನಮ್ಮ ಆಶಯ. ಹೇಗೆ ಅನ್ನಭಾಗ್ಯ ಯೋಜನೆಯನ್ನೇ ವಿರೋಧಿಸುವುದು ಸರಿಯಲ್ಲವೋ ಹಾಗೇ ಅದರಲ್ಲಿನ ಲೋಪಗಳನ್ನು ಸರಿಪಡಿಸದೆ ರಾಜಕೀಯ ಲಾಭಕ್ಕೋಸ್ಕರ ಅದನ್ನು ಮುಂದುವರೆಸಿಕೊಂಡು ಹೋಗುವುದೂ ತಪ್ಪು. ಇದರಿಂದ ೧೦% ಜನಸಂಖ್ಯೆಯ ಕಂದಾಯದಾರರು ಹೆಚ್ಚಿನ ಕಂದಾಯ ಕಟ್ಟಲು ಹೇಸಿಕೊಳ್ಳುತ್ತಾರೆ ಅಷ್ಟೇ. ಮೊದಲು ಈ ಯೋಜನೆಯು ಸರಿಯಾದ ಫಲಾನುಭವಿಗಳಿಗೆ ದೊರಕುವಂತಾಗಲಿ, ನೀವು ಹೇಳಿದ ೧೦% ಜನಸಂಖ್ಯೆಯ ಕಂದಾಯದಾರರೂ ಹೆಚ್ಚಿನ ಕಂದಾಯವನ್ನು ಮನಸ್ಪೂರ್ತಿಯಿಂದ ಕಟ್ಟುತ್ತಾರೆ ಎಂಬುದು ನನ್ನ ಭಾವನೆ. ಉದಾಹರಣೆ ಬೇಕೇ, ದಯವಿಟ್ಟು ಕೇಂದ್ರ ಸರಕಾರದ givitup ಯೋಜನೆ ನೋಡಿ.

              ಉತ್ತರ
              • shripad
                ಜುಲೈ 17 2015

                ಹೌದು. ಅನ್ನಭಾಗ್ಯದ ತಮಾಷೆ ನೋಡಿ: ನಿಜವಾಗಿ ಇದು ಅಕ್ಕಿಭಾಗ್ಯ. ಅಕ್ಕಿ ಅನ್ನವಾಗಲು ಶುದ್ಧನೀರು, ಇಂಧನ, ಪಾತ್ರೆ-ಪರಡೆ, ಅವನ್ನೆಲ್ಲ ಇಟ್ಟುಕೊಳ್ಳುವ ಜಾಗ, ನೆಂಚಿಕೆಗೆ ತರಕಾರಿ ಸಾಮಗ್ರಿ, ದವಸಧಾನ್ಯ…ಇತ್ಯಾದಿ ಏನೆಲ್ಲ ಬೇಕು. “ಅನ್ನಭಾಗ್ಯ” ಸಮರ್ಥಕರು ಹೇಳುವ ಫಲಾನುಭವಿಗಳ ದಾರುಣ ಕಥೆ ಅಥವಾ ಚಿತ್ರಣ ಕೇಳಿದರೆ ಇವೆಲ್ಲ ಅವರ ಬಳಿ ಇರಲು ಸಾಧ್ಯವೇ ಅನಿಸುತ್ತದೆ. ಇದೆ ಎಂದೇ ಇಟ್ಟುಕೊಳ್ಳೋಣ. ನನ್ನ ಪ್ರಶ್ನೆ: ಅವರ ಬಳಿ ಅಕ್ಕಿ ಮಾತ್ರ ಕೊರತೆಯಾಗಿದೆಯಾ? ಅಕ್ಕಿಯೊಂದನ್ನು ಪುಗ್ಸಟ್ಟೆ ಕೊಟ್ಟು ಉಳಿದ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆಯಲ್ಲ, ಅವನ್ನು ಅವರು ಹೊಂಚಿಕೊಳ್ಳುವುದು ಹೇಗೆ? ಹಾಗಾಗಿ ವೈಜ್ನಾನಿಕ ರೀತಿಯಲ್ಲಿ ಯೋಜನೆ ರೂಪಿಸಿ, ಆಹಾರ ಧಾನ್ಯಗಳ ಬೆಲೆ ನಿಯಂತ್ರಣದಲ್ಲಿರಿಸಿ. ಈಗ ಆಹಾರದ ಬೆಲೆ ನಿರ್ಧರಿಸುವವರು ರೈತರೂ ಅಲ್ಲ, ಸರ್ಕಾರವೂ ಅಲ್ಲ, ಗ್ರಾಹಕರೂ ಅಲ್ಲ. ದಲ್ಲಾಳಿಗಳು! ನಿಜವಾದ “ಭಾಗ್ಯ” ದಲ್ಲಾಳಿಗಳದು, ಬಡವರದಲ್ಲ.

                ಉತ್ತರ
            • ಚನ್ನಬಸವೇಶ್ವರ ಬಿದರಿ
              ಜುಲೈ 17 2015

              ಮಾನ್ಯ ಶ್ರೀಪಾದ್ ಅವರೇ, ಕನಸುಗಳ ನಾಡು ಅಮೆರಿಕೆಯಲ್ಲಿ ಸಂಪತ್ತಿನ ಹಂಚಿಕೆ ಹೇಗಿದೆ ಅಂತ ಇಲ್ಲಿದೆ:

              ಕೆಳಸ್ಥರದ ೪೦% ಜನರ ಸಂಪತ್ತನ್ನು ಕೂಡಿದರೆ ಅಮೆರಿಕೆಯ ಒಟ್ಟು ಸಂಪತ್ತಿನ ೦.೨% ಮಾತ್ರ ಆಗುತ್ತದೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಬಡವರ ಬದುಕು ಮೂರಾಬಟ್ಟೆ. ಅಮೆರಿಕೆಯಲ್ಲೂ ಅನ್ನಭಾಗ್ಯದಂತಹ ಯೋಜನೆಗಳಿವೆ – food stamps. ಅಮೆರಿಕೆಯ ೨೦% ಮಕ್ಕಳಿಗೆ ಈ ಯೋಜನೆಯೇ ಅನ್ನಕ್ಕೆ ಮಾರ್ಗ.

              ಉತ್ತರ
              • shripad
                ಜುಲೈ 17 2015

                ಸಂತೋಷ. ನಾನು ಕರ್ನಾಟಕದ ಅನ್ನಭಾಗ್ಯ ಯೋಜನೆ ಬಗ್ಗೆ ಹೇಳುತ್ತಿದ್ದೇನೆ ಗುರುಗಳೇ. ಇದಕ್ಕಿಂತಲೂ ಫ್ರೆಂಚ್ ಕ್ರಾಂತಿ ಸಂದರ್ಭದ ಫ್ರಾನ್ಸಿನ ಆರ್ಥಿಕತೆಯ ಅಂಕಿಅಂಶ ನೋಡಿ. ನಿಮ್ಮ ವಾದಕ್ಕೆ ಮತ್ತಷ್ಟು ಬಲ ಸಿಗಬಹುದು!!

                ಉತ್ತರ
                • ಚನ್ನಬಸವೇಶ್ವರ ಬಿದರಿ
                  ಜುಲೈ 18 2015

                  ಅಮೆರಿಕಯಲ್ಲಿ ಮಾತ್ರವಲ್ಲ, ಭಾರತದಲ್ಲೂ ಸಂಪತ್ತಿನ ಹಂಚಿಕೆ ಹೀಗೇ ಇದೆ.
                  http://www.thehindu.com/data/indias-staggering-wealth-gap-in-five-charts/article6672115.ece

                  ೨೦೧೪ರಲ್ಲಿ ಭಾರತದ ೭೫% ರಷ್ಟು ಸಂಪತ್ತು ೧೦%ಕ್ಕೂ ಕಡಿಮೆ ಜನರ ವಶದಲ್ಲಿತ್ತು:
                  https://docs.google.com/spreadsheets/d/1BfxSQqcIzDoukvCMOXC1P3aKxMkJe2l70QIe3rsiKeE/pubchart?oid=1711886035

                  ಗಮನಿಸತಕ್ಕ ಸಂಗತಿ ಏನೆಂದರೆ ಮುಕ್ತ ಮಾರುಕಟ್ಟೆ ಸಿದ್ಧಾಂತವನ್ನು ಭಾರತ ಅಪ್ಪಿಕೊಂಡ ಮೇಲೆ ಉಳ್ಳವರ ಸರಾಸರಿ ಸಂಪತ್ತು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ.
                  https://docs.google.com/spreadsheets/d/1BfxSQqcIzDoukvCMOXC1P3aKxMkJe2l70QIe3rsiKeE/pubchart?oid=2106883856

                  ಉತ್ತರ
                • ಚನ್ನಬಸವೇಶ್ವರ ಬಿದರಿ
                  ಜುಲೈ 18 2015

                  [ನಾನು ಕರ್ನಾಟಕದ ಅನ್ನಭಾಗ್ಯ ಯೋಜನೆ ಬಗ್ಗೆ ಹೇಳುತ್ತಿದ್ದೇನೆ ಗುರುಗಳೇ.]

                  ಅಮೆರಿಕಯಲ್ಲಿ ಮಾತ್ರವಲ್ಲ, ಭಾರತದಲ್ಲೂ ಸಂಪತ್ತಿನ ಹಂಚಿಕೆ ಹೀಗೇ ಇದೆ.
                  _http://www.thehindu.com/data/indias-staggering-wealth-gap-in-five-charts/article6672115.ece

                  ೨೦೧೪ರಲ್ಲಿ ಭಾರತದ ೭೫% ರಷ್ಟು ಸಂಪತ್ತು ೧೦%ಕ್ಕೂ ಕಡಿಮೆ ಜನರ ವಶದಲ್ಲಿತ್ತು: _http://goo.gl/Am3x3o
                  ಗಮನಿಸತಕ್ಕ ಸಂಗತಿ ಏನೆಂದರೆ ಮುಕ್ತ ಮಾರುಕಟ್ಟೆ ಸಿದ್ಧಾಂತವನ್ನು ಭಾರತ ಅಪ್ಪಿಕೊಂಡ ಮೇಲೆ ಉಳ್ಳವರ ಸರಾಸರಿ ಸಂಪತ್ತು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ: _http://goo.gl/coa1e9

                  ಉತ್ತರ
                  • ಜುಲೈ 18 2015

                    ಉರಗನಾದರು(ನಾಗ) ಇಲ್ಲ
                    ಹೋರಿ (ಬಸವ)ಯಾದರು ಸಲ್ಲ
                    ನೇರ ವಾದವದೆಂಬುದಿವಗಿಲ್ಲ ಬಗ್ಗಿದಾ ಬಿ
                    ದಿರೊಂದು ನೆಟ್ಟಗೆ ಆಪುದುಂಟೆ

                    ಮಣ್ಣಿನಾ ಮಕ್ಕಳು ಮಣ್ಣಾಗಿ ಹೋಗುತಿರೆ
                    ಕಣ್ಣೀರ ಕಡೆಯದಾ ಜೀವಪರನು
                    ಅನ್ನಭಾಗ್ಯದ ಹೆಸರು ಕನ್ನಹಾಕುವ ಜನರು
                    ಚನ್ನಬಸವನ ನೆನೆದು ಉಣ್ಣುವುದ ನೋಡಾ!!

                    ಉತ್ತರ
              • shripad
                ಜುಲೈ 18 2015

                ನೀವು ದಿ ಹಿಂದೂ ಪ್ರಕಟಿಸಿದ ಆಯ್ದ ವಿವರದ ವರದಿ ನೋಡಿದ್ದೀರೆಂದು ಕಾಣುತ್ತದೆ. ಮೂಲ ವರ್ದಿ ಪೂರ್ಣಓದಿ ()
                ಅದರ ಒಂದು ಕೋಷ್ಟಕ ವಿವರದಲ್ಲಿ ಭಾರತದ ಕಡಿಮೆ ಆದಾಯ ಗುಂಪಿನ ವಿವರ ನೀಡಲಾಗಿದೆ. ಇವರ ವಾರ್ಷಿಕ ತಲಾದಾಯ (ಯುಎಸ್ ಡಾಲರ್ ನಲ್ಲಿ) ೨,೬೯೪; ಸಂಪತ್ತಿನ ಪ್ರಮಾಣ ೨೦೦೦ದಲ್ಲಿ ೨,೦೩೬ ಇದ್ದುದು ೨೦೧೪ರಲ್ಲಿ ೪,೬೪೫ ಆಗಿದೆ. ಒಟ್ಟಾರೆ ಸಂಪತ್ತಿನ ಗುಣಮಟ್ಟ ಪರವಾಗಿಲ್ಲ (ಫೇರ್) ಎಂದಿದೆ. ನೋಡಿ: ಕ್ರೆಡಿಟ್ ಸ್ಯೂಸ್ ಗ್ಲೋಬಲ್ ವೆಲ್ತ್ ಡಾಟಬುಕ್ ೨೦೧೪ (ಪುಟ-೨೩). ಹಾಗೆಯೇ ಆ ವರದಿ ಉಲ್ಲೇಖಿಸಿದ” In developing countries, for example India and Indonesia, it is not unusual for 80% or more of total assets to be held in the form of non-financial assets, including housing, farms and small business assets. This pattern is also associated with the relative under-development of financial institutions in many lower income countries.” (ಪುಟ ೧೨೮) ಎಂದಿರುವುದನ್ನು ಮರೆಯಬಾರದು. ಈ ಸಮೀಕ್ಷೆ ನಡೆಯುವುದು ಮಾರುಕಟ್ಟೆಯ ಹಣಕಾಸಿನ ಆಧಾರದ ಮೇಲೆ. ನಿಮ್ಮ ಬಳಿ ಎರಡು ಸಾವಿರ ಕುರಿಗಳಿದ್ದರೆ ಅದನ್ನು ಇಲ್ಲಿ ಸಂಪತ್ತು ಎಂದು ಪರಿಗಣಿಸಲಾಗುವುದಿಲ್ಲ! ಅಲ್ಲದೇ ಅದೇ ವರದಿ “Among developing nations, the financial asset share in India has been relatively stable, but the trend is upwards in
                Indonesia, with a noticeably high level during the last five years” ಎಂದಿದೆ (ಪುಟ ೧೨೯). ಇಡೀ ವರದಿ ಓದಿ ನಿಮಗೆ ದೊರೆಯುವ ಚಿತ್ರ ಬೇರೆ.

                ಉತ್ತರ
        • ಜುಲೈ 17 2015

          “ಬಡವರಿಗಷ್ಟೇ ಅಲ್ಲ ಸಮಾಜದ ಸಮಸ್ತರಿಗೂ ಅನ್ನಭಾಗ್ಯದ ಲಾಭ ಸಿಗಲಿ”.. ಎಂತಹ ಮಾತು! ಈಗ ಆಗುತ್ತಿರುವ ಅನಾಹುತಗಳು ಸಾಲದೇ?

          ಉತ್ತರ
    • ACB_Undestroyable
      ಜುಲೈ 15 2015

      “ದಾಸೋಹ ತತ್ವವೇ ಅನ್ನಭಾಗ್ಯದ ರೂಪದಲ್ಲಿ ಹೊಸ ಅವತರಣಿಕೆಯನ್ನು ಪಡೆದಿದೆ”

      ನಮ್ಮ ಕಾಯಕದಿಂದ ಬಂದದ್ದನ್ನು ದೇವರ ಪ್ರಸಾದವಾಗಿ ಸ್ವೀಕರಿಸುವುದರ ಮೂಲಕ ಗಳಿಕೆಯ ಅಹಂನಿಂದ ಹೊರಬಂದು, ಆ ಗಳಿಸಿದ್ದನ್ನೆಲ್ಲ ನಮಗಾಗಿಯೇ ಖರ್ಚು ಮಾಡದೆ ಸಾಮಾಜಿಕ ಜವಾಬ್ದಾರಿಯನ್ನು ಸಮರ್ಪಣಾ ಭಾವದಿಂದ ನಿಭಾಯಿಸುವುದಕ್ಕೆ ದಾಸೋಹವೆಂದು ಕರೆಯುತ್ತಾರೆ… ಕಾಯಕವೆಂದರೆ ಯೋಗ್ಯವಾದುದನ್ನೇ ಉತ್ಪಾದಿಸುವ ಕ್ರಿಯೆ. ಪ್ರಸಾದವೆಂದರೆ ಯೋಗ್ಯ ಬಳಕೆ, ದಾಸೋಹವೆಂದರೆ ಯೋಗ್ಯ ವಿತರಣೆ…

      ಉತ್ತರ
    • ಭೀಮಗುಳಿ ಶ್ಯಾಮ್
      ಜುಲೈ 17 2015

      ……ಉಳ್ಳವರು ತಾವಾಗಿಯೇ ಮುಂದೆ ಬಂದು ದಾನ ಮಾಡಿದ್ದರೆ ಅನ್ನಭಾಗ್ಯದ ಅಗತ್ಯವೇ ಇರುತ್ತಿರಲಿಲ್ಲ. ಸಂಪಾದಿಸಿದ್ದು ಎಲ್ಲವನ್ನೂ ತಾವೇ ಭಕ್ಷಿಸಬೇಕು ಎಂಬ ಸ್ವಾರ್ಥ ಭಾವನೆ ಸಮಾಜದಲ್ಲಿ ಮನೆ ಮಾಡಿರುವುದರಿಂದ ಸರಕಾರ ತಾನೇ ಕ್ರಮ ತೆಗೆದುಕೊಳ್ಳಬೇಕಾಗಿದೆ……..
      .ಸಮಾಜದ ಭಾಗವೇ ಆಗಿರುವ ಸರಕಾರವೇ, ಎಲ್ಲರಂತೆ ಯೋಚಿಸಿ ಎಲ್ಲವನ್ನೂ ತಾನೇ ಭಕ್ಷಿಸಬೇಕು ಎಂದು ಭಾಗ್ಯ ಯೋಜನೆಗಳನ್ನು ತರುತ್ತಿದೆಯಲ್ಲ ಅದು ಸಮಸ್ಯೆ.ದುಡಿವ ಕೈಗಳಿಗೆ ಕೆಲಸ ಕೊಡಿ

      ಉತ್ತರ
  6. Sudarshana rao
    ಜುಲೈ 18 2015

    ಉರಗನಾದರು(ನಾಗ) ಇಲ್ಲ
    ಹೋರಿ (ಬಸವ)ಯಾದರು ಸಲ್ಲ
    ನೇರ ವಾದವದೆಂಬುದಿವಗಿಲ್ಲ ಬಗ್ಗಿದಾ ಬಿ
    ದಿರೊಂದು ನೆಟ್ಟಗೆ ಆಪುದುಂಟೆ

    ಮಣ್ಣಿನಾ ಮಕ್ಕಳು ಮಣ್ಣಾಗಿ ಹೋಗುತಿರೆ
    ಕಣ್ಣೀರ ಕಡೆಯದಾ ಜೀವಪರನು
    ಅನ್ನಭಾಗ್ಯದ ಹೆಸರು ಕನ್ನಹಾಕುವ ಜನರು
    ಚನ್ನಬಸವನ ನೆನೆದು ಉಣ್ಣುವುದ ನೋಡಾ!!

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments