ವಿಷಯದ ವಿವರಗಳಿಗೆ ದಾಟಿರಿ

ಜುಲೈ 15, 2015

ಅಭಿಮಾನ ಹೇಗಿರಬೇಕೆಂದರೆ… ಅಭಿಮಾನದ ಮೇಲೆಯೇ ಅಭಿಮಾನ ಮೂಡುವಂತಿರಬೇಕು.

‍ನಿಲುಮೆ ಮೂಲಕ

– ಗುರುಪ್ರಸಾದ್ ಆಚಾರ್ಯ, ಕುಂಜೂರು

ಅತಿರೇಕದ ಅಭಿಮಾನನಮ್ಮಲ್ಲಿ ಸರ್ವೇ ಸಾಧಾರಣವಾಗಿ ಪ್ರತಿಯೊಬ್ಬರಿಗೂ ಹೆಚ್ಚಾಗಿ ಮೆಚ್ಚಿನ ನಟ ಅಥವಾ ಮೆಚ್ಚಿನ ರಾಜಕಾರಣಿ ಅಥವಾ ಮೆಚ್ಚಿನ ವ್ಯಕ್ತಿ ಅನ್ನೋ ಯಾವುದಾದರೂ ವ್ಯಕ್ತಿಗಳು ಇದ್ದೇ ಇರುತ್ತಾರೆ. ಅವರನ್ನ ಆರಾಧಿಸುವಷ್ಟು ನಮಗೆ ಅವರ ಮೇಲೆ ಅಭಿಮಾನ. ಅಂದರೆ ಗರ್ವ… ನನ್ನ ಮೆಚ್ಚಿನ ವ್ಯಕ್ತಿಯ ಯಾವುದೇ ನಡೆ ಕೂಡಾ ನಮಗೆ ಶ್ಲಾಘನೀಯವಾಗಿ ಬಿಡುತ್ತದೆ. ಅವರನ್ನ ಯಾರಾದರೂ ಟೀಕಿಸಿದರೆ ನಮಗೆ ಇನ್ನೆಲ್ಲಿಲ್ಲದ ಕೋಪ ಬಂದು ಬಿಡುತ್ತದೆ.ಇದು ಹೆಚ್ಚಾಗಿ ಕಾಣಸಿಗುವುದು ಸಿನಿಮಾ ನಟ/ಟಿ ವಿಷಯದಲ್ಲಿ ಅಥವಾ ರಾಜಕೀಯ ನಾಯಕರ ವಿಷಯದಲ್ಲಿ.ಈ ಅಭಿಮಾನ ಎಲ್ಲಿಯವರೆಗೆ ಸಾಗುತ್ತದೆ ಎಂದರೆ ನಾವು ನಮ್ಮ ನಮ್ಮಲ್ಲೇ ಜಗಳವಾಡಲೂ,ಸಂಬಂಧಗಳನ್ನು ಮುರಿಯಲೂ ಸಿದ್ಧರಾಗುತ್ತೇವೆ. ಹಾಗಾಗಿ ನಮ್ಮಲ್ಲಿ ನಮ್ಮಲ್ಲಿ ಇಂತಹಾ ಪ್ರಭಾವ ಬೀರಬಲ್ಲ ಈ ” ಅಭಿಮಾನ ” ಅನ್ನುವುದರ ಕುರಿತಾಗಿ ನಾವೊಮ್ಮೆ ಆಳವಾಗಿ ಚಿಂತಿಸಬೇಕಾಗಿದೆ ಅಂತನಿಸುವುದಿಲ್ಲವೇ…?

ಮೇಲೆ ಹೇಳಿದ ಹಾಗೇ ಸಿನಿಮಾ ನಟರ ಮೇಲಿನ ಅಭಿಮಾನ ಮತ್ತು ರಾಜಕೀಯ ನಾಯಕರ ಮೇಲಿನ ಅಭಿಮಾನ ಈ ಎರಡು ವಿಭಾಗವನ್ನೂ ಆಯ್ದುಕೊಂಡು ನನ್ನೊಳಗಿನ ಚಿಂತನೆಯನ್ನ ನಿಮ್ಮಲ್ಲಿ ಹಂಚಿಕೊಳ್ಳುವ ಆಸೆ…ಅದೇ ಈ ಲೇಖನದ ಮೂಲ ಆಶಯ.

ಮೊದಲಿಗೆ ಸಿನಿಮಾ ಕ್ಷೇತ್ರವನ್ನು ಕೈಗೆತ್ತಿಕೊಳ್ಳೋಣ.ವಾಸ್ತವದಲ್ಲಿ ನಮಗೆ ಯಾರೋ ನಟ ಅಥವಾ ನಟಿ ಯಾಕೆ ಇಷ್ಟವಾಗುತ್ತಾರೆ?ಯಾವುದೋ ಸಿನಿಮಾದಲ್ಲಿನ ನಟನೆಯಲ್ಲಿ ಅವರು ತೋರುವ ನಟನೆ ನಮ್ಮನ್ನ ಮನಸೋಲುವಂತೆ ಮಾಡಿರುತ್ತದೆ ಅಥವಾ ಅವರ ಮುಖ ಸೌಂದರ್ಯ ದೇಹಧಾರ್ಡ್ಯತೆ ಇತ್ಯಾದಿ… ಇಲ್ಲಿ ಸೌಂದರ್ಯ ಪ್ರಾಕೃತಿಕವಾಗಿ ಸಿಕ್ಕಿರುವುದರಿಂದ ( ಈಗ ಹಾಗೆ ಹೇಳುವಂತೆಯೂ ಇಲ್ಲ ಮೇಕಪ್ ತೆಗೆದರೆ ನಾನು ಮೆಚ್ಚುವ ನಟ/ಟಿ ಇವರೇನಾ ಅನ್ನುವ ಗೊಂದಲವೂ ನಮ್ಮನ್ನ ಕಾಡೀತು… ಅದನ್ನ ಬಿಟ್ಟು ಬಿಡೋಣ ) ಅದನ್ನ ಬದಿಗಿಡೋಣ.ನಮಗೆ ಮುಖ್ಯವಾಗಿ ಬೇಕಾಗಿರುವುದು ” ಅಭಿಮಾನ ” ಅಲ್ವೇ.ಹೀಗೆ ಯಾವುದೋ ಒಂದು ಅಂಶ ನಮ್ಮ ಮನಸ್ಸಿಗೆ ಮುದ ನೀಡಿತು ಅಂದಾಗ ಅವರ ಮೇಲೆ ಅಭಿಮಾನ ಮೂಡುತ್ತದೆ. ಸಾಧಾರಣವಾಗಿ ಕಥೆಯಲ್ಲಿ ಉತ್ತಮ ವ್ಯಕ್ತಿತ್ವವನ್ನು ಪ್ರದರ್ಶಿಸುವ ನಟರು ವಾಸ್ತವದಲ್ಲಿ ಅದೇ ರೀತಿ ಇರಬೇಕು ಅಂತೇನಿಲ್ಲ.ಆದರೂ,ನಾವು ಯಾವುದೋ ಸಿನಿಮಾದಲ್ಲಿನ ನಟನೆಯ ಭಾಗವಾದ ಒಳ್ಳೆಯತನವನ್ನ ಅವರದ್ದೇ ಸ್ವಂತ ಗುಣ ಅಂತ ತಿಳಿದುಬಿಡುತ್ತೇವೆ.ಇದು ಒಂದು ವಿಪರ್ಯಾಸವೇ ಆದರೂ ಅದರ ಆಧಾರದ ಮೇಲೆಯೇ ಅಭಿಮಾನವನ್ನ ಬೆಳೆಸಿಕೊಂಡು ಬಿಡುತ್ತೇವೆ.

ಈಗ ಒಂದೆರಡು ಘಟನೆಗಳನ್ನ ಆಯ್ದುಕೊಳ್ಳೋಣ.. ಹಿಂದೊಮ್ಮೆ ಕನ್ನಡದ ನಾಯಕ ನಟ ದರ್ಶನ್ ತಮ್ಮ ಪತ್ನಿಯ ಮೇಲೆ ಹಲ್ಲೆ ಮಾಡಿದ್ದಾಗ,ಅದು ತಪ್ಪು ಎಂದುದಕ್ಕೆ ನನ್ನ ಬಳಿ ಸ್ನೇಹಿತೆಯೊಬ್ಬಳು ಬಹಳಷ್ಟು ಚರ್ಚೆ ಮಾಡಿದ್ದಳು.” ಅವರ ಹೆಂಡತಿಯೇ ಹಾಗಿದ್ದರೆ ಇವರೇನು ಮಾಡಬಲ್ಲರು? ಗಂಡನಾಗಿ ಕೈಯೆತ್ತುವ ಅಧಿಕಾರ ಅವರಿಗಿದೆ ಅಲ್ವಾ… ” ಅಂತೆಲ್ಲಾ ಹೇಳಿದ್ದ ನೆನಪು.(ಒಬ್ಬ ಹೆಣ್ಣಾಗಿ ಹೆಣ್ಣಿನ ಮೇಲಿನ ದೌರ್ಜನ್ಯವನ್ನ ವಿರೋಧಿಸುವ ಬದಲಾಗಿ ತನ್ನ ಮೆಚ್ಚಿನ ನಟನ ಪರ ವಹಿಸಿದ್ದು ಆ ಕ್ಷಣಕ್ಕೆ ನನ್ನನ್ನ ದಂಗಾಗಿಸಿಬಿಟ್ಟಿತ್ತು) ಈ ಘಟನೆಯ ಕುರಿತು ಯೋಚಿಸುವಾಗ ನನಗನಿಸೋದು… ಒಂದು ವೇಳೆ ದರ್ಶನ್ ಹೆಂಡತಿಯ ಜಾಗದಲ್ಲಿ ಇವರ ಆಪ್ತರಿದ್ದು… ಯಾವುದೋ ಗಂಡು ಒಬ್ಬ ಅವಳ ಮೇಲೆ ಹಲ್ಲೆ ಮಾಡಿದ್ದಿದ್ದರೆ…???

ಇತ್ತೀಚೆಗಷ್ಟೇ ಬಹುಚರ್ಚಿತ ವಿಷಯ ರಸ್ತೆಯ ಬದಿಯಲ್ಲಿ ಮಲಗಿದ್ದವರ ಮೇಲೆ ಕುಡಿದು ಕಾರು ಹಾಯಿಸಿದ್ದ ಸಲ್ಮಾನ್ ಖಾನ್ ರ ಹಿಟ್ ಆಂಡ್ ರನ್ ಕೇಸ್… ಬಹುಶ ಸಲ್ಮಾನ್ ಪರವಾಗಿ ಬಾಲಿವುಡ್ ನ ಹಲವರು ಧ್ವನಿ ಎತ್ತಿ ಬಿಟ್ಟಿದ್ದರು…. ( ತೀರ್ಪು ಮತ್ತು ಅದರ ಹಿಂದಿನ ರಾಜಕೀಯ ಬಿಟ್ಟು ಬಿಡೋಣ ) ಇಲ್ಲೂ ಒಂದು ವೇಳೆ ದಾರಿ ಬದಿಯಲ್ಲಿ ಮಲಗಿದವರು ಸಲ್ಮಾನ್ ಪರ ನಿಂತವರ ಮನೆಯವರಾಗಿದ್ದಿದ್ದರೆ…???

ಈ ಎರಡೂ ಘಟನೆಯಲ್ಲಿ ನೋವುಂಡವರು ನಮಗೇನೂ ಆಗಬೇಕಾಗಿಲ್ಲ.ನನ್ನ ಮನಸ್ಸಿಗೆ ತೀರಾ ಆಪ್ತರೇನಲ್ಲ, ಹಾಗಾಗಿ ನನ್ನ ಮನಸ್ಸಿಗೆ ಮುದ ನೀಡುವ ನಟನ ಪರ ವಕಾಲತ್ತು ವಹಿಸಲು ನಾವು ಸಜ್ಜಾಗುತ್ತೇವೆ.ಅದೇ ಒಂದು ವೇಳೆ ಆ ನಟನ ಬದಲಾಗಿ ಇನ್ಯಾರೋ ಗೊತ್ತಿಲ್ಲದ ಅಪರಿಚಿತ ವ್ಯಕ್ತಿ ಇಂತಹಾ ಕೃತ್ಯ ಮಾಡಿ,ನೋವಿಗೊಳಗಾದವರು ನಮ್ಮ ಆಪ್ತರಾದಾಗ ಖಂಡಿತವಾಗಿಯೂ ನಮ್ಮ ನಿಲುವು ನ್ಯಾಯದ ಪರವಾಗಿರುತ್ತದೆ ಅಲ್ಲವೇ…? ಹಾಗಿದ್ದರೆ ಅಭಿಮಾನ ಅನ್ನುವುದು ನಮ್ಮನ್ನ ಸಾಮಾಜಿಕ ನ್ಯಾಯದಿಂದ ವಿಮುಖವಾಗುವಂತೆ ಮಾಡುತ್ತದೆಯಾ? ಒಂದು ವೇಳೆ ನಿಮ್ಮ ಉತ್ತರ ಹೌದು ಅಂತಾಗಿದ್ದಲ್ಲಿ ಇಂತಹಾ ” ಅಭಿಮಾನ ” ಸಮಾಜದ ಒಳಿತಿಗೆ ಮಾರಕವಲ್ಲವೇ? ಈ ಪ್ರಶ್ನೆಗೆ ಉತ್ತರ ಖಂಡಿತವಾಗಿಯೂ ನಾನು ಕೊಡೋದಿಲ್ಲ ಆ ಉತ್ತರ ನಿಮ್ಮ ಮನಸ್ಸಿನಿಂದಲೇ ಬರಲಿ ಅನ್ನೋದು ನನ್ನ ಆಶಯ…

ಇನ್ನು ಎರಡನೇ ರೀತಿಯ ಅಭಿಮಾನವನ್ನ ಕೈಗೆತ್ತಿ ಕೊಳ್ಳೋಣ… ಇದು ರಾಜಕೀಯ ನೇತಾರರ ಮೇಲಿನ ಅಭಿಮಾನ… ಇದು ಸ್ವಲ್ಪ ವಿಭಿನ್ನ.ಇಲ್ಲಿ ಪಕ್ಷದ ಸಿದ್ಧಾಂತಗಳೂ ಪ್ರಾಮುಖ್ಯವಾಗುತ್ತದೆ ಮತ್ತು ವ್ಯಕ್ತಿಯ ವೈಯಕ್ತಿಕ ವರ್ಚಸ್ಸು ಕೂಡಾ ಪ್ರಧಾನ ಪಾತ್ರ ವಹಿಸುತ್ತದೆ.ರಾಜಕೀಯ ವ್ಯಕ್ತಿಗಳ ಮೇಲೆ ಅಭಿಮಾನ ಮೂಡುವಲ್ಲಿ ಪ್ರಮುಖ ಪಾತ್ರ ವಹಿಸುವಂಥಾದ್ದು ಆತನಿರುವ ಪಕ್ಷದ ಸಿದ್ಧಾಂತ ಮತ್ತು ವ್ಯಕ್ತಿಗಿರುವ ಸಾಮಾಜಿಕ ಕಳಕಳಿ ಅಥವ ಆತ ಕೈಗೊಂಡಿರೋ ಜನಪರ ಸೇವೆಗಳು.ಇಲ್ಲಿ ಅಭಿಮಾನ ಅನ್ನುವುದು ವ್ಯಕ್ತಿಯ ಮೇಲೂ ಇದ್ದಿರಬಹುದು ಅಥವಾ ಪಕ್ಷದ ಮೇಲೂ ಇದ್ದಿರಬಹುದು ಅಥವಾ ಸಿದ್ಧಾಂತಗಳ ಮೇಲೂ ಇದ್ದಿರಬಹುದು ಆದರೆ ವ್ಯಕ್ತಿಯ ಮೇಲೆ ಅಥವಾ ಪಕ್ಷದ ಮೇಲೆ ಅಭಿಮಾನವಿದ್ದು ಸಿದ್ಧಾಂತಗಳ ಮೇಲಿರದಿದ್ದಾಗ ಅನರ್ಥಗಳಾಗುವ ಸಂಭವವೇ ಹೆಚ್ಚು.ಉದಾಹರಣೆಗೆ,ವ್ಯಕ್ತಿಯ ಮೇಲಿನ ಅಭಿಮಾನಕ್ಕೆ ಇತ್ತೀಚಿನ ಪ್ರಕರಣ ಜಯಲಲಿತಾ ಅವರ ಲಂಚ ಪ್ರಕರಣ ಬಲು ಸೂಕ್ತ ಅಂತನಿಸುತ್ತದೆ. ಅಲ್ಲಿ ಪಕ್ಷ ಅಥವಾ ಸಿದ್ಧಾಂತಕ್ಕಿಂತಲೂ ವ್ಯಕ್ತಿ ಮುಖ್ಯವಾಗಿರುವುದು ಕಾಣಸಿಗುತ್ತದೆ.ಹಾಗಾಗೇ ಅಲ್ಲಿ ವ್ಯಕ್ತಿಯ ಮೇಲಿನ ಅಭಿಮಾನದಿಂದಾಗಿ ಅವರ ಪರ ವಹಿಸುತ್ತಾ ಆತ್ಮಹತ್ಯೆ ಮಾಡಿಕೊಳ್ಳಲೂ ಹಿಂಜರಿಯದ ಜನರೆಷ್ಟೋ ಇದ್ದರು.ಒಂದು ವೇಳೆ ಆ ಪಕ್ಷದ ಮೇಲೆ ಆರೋಪವಾಗಿರುತ್ತಿದ್ದಿದ್ದರೆ ಆ ರೀತಿ ಮಾಡುತ್ತಿರಲಿಲ್ಲ ಅಲ್ಲವೇ? ಇಲ್ಲಿ ಅವರಿಂದ ಲಾಭ ಪಡೆದ ಜನಗಳು ಅವರ ಮೇಲಿಡುವ ಕೃತಜ್ಞತಾಪೂರ್ವಕ ಅಭಿಮಾನ ಬೇರೆಯೇ ಅಂತವರ ಅಭಿಮಾನ ತೀರಾ ಅತಿರೇಕದ್ದಾಗಿರುತ್ತದೆ… ಅಂತವರನ್ನ ಬದಿಗಿಡೋಣ.

ಅದರ ಹೊರತಾಗಿಯೂ ಅಭಿಮಾನ ಇಡೋ ಜನರು ಆ ನಾಯಕ/ಕಿಯ ತಪ್ಪುಗಳನೆಲ್ಲಾ ಮರೆಮಾಚೋದು ಅಥವಾ ಅದೇನೂ ದೊಡ್ಡದಲ್ಲ ಅನ್ನುವುದು ಎಷ್ಟು ಸರಿ…? ಜಯಲಲಿತಾ ಅವರ ಅಕ್ರಮ ಆಸ್ತಿ ಶೇಕಡಾ ಹತ್ತರೊಳಗೆ ಇದೆ ಅದು ಅಪರಾಧವಲ್ಲ ಅನ್ನುವ ತೀರ್ಪಿದೆ… ಅಂದರೆ ವಾಸ್ತವದಲ್ಲಿ ಇರಬೇಕಾದುದಕ್ಕಿಂತ ಜಾಸ್ತಿ ಇದೆ ಎನ್ನುವುದು ಖಾತ್ರಿಯಾಗಿದೆ… ಇದು ಗೊತ್ತಾದ ಮೇಲೂ ಅವರೇನೂ ಮಾಡಿಲ್ಲ ಅನ್ನುವುದು ಅವರ ತಪ್ಪನ್ನು ಪೋಷಿಸಿದಂತೆಯೇ ಅಲ್ವಾ…. ಈ ರೀತಿಯ ಪೋಷಣೆ ಮುಂದೆ ತಪ್ಪುಗಳ ಸಂಖ್ಯೆಯನ್ನ ಹೆಚ್ಚಿಸುವುದಿಲ್ಲವೇ…?

ಇನ್ನೊಂದು ರೀತಿಯ ಅಭಿಮಾನ ಅಂದರೆ ಅದು ಪಕ್ಷದ ಮೇಲಿನ ಅಭಿಮಾನ.ಇಲ್ಲಿ ವ್ಯಕ್ತಿಯ ಮೇಲಿನ ಅಭಿಮಾನವಿರದೆ, ಪಕ್ಷ ಮಾಡಿದ್ದೆಲ್ಲವನ್ನೂ ಸಮರ್ಥಿಸುವುದನ್ನ ಕಾಣುತ್ತೇವೆ.ತಮ್ಮ ಪಕ್ಷದಲ್ಲದವರ ಮೇಲೆ ಅಥವಾ ಅದರಲ್ಲಿರೋ ನಾಯಕರ ಮೇಲೆ,ಅವರ ನಿಲುವಿನ ಮೇಲೆ,ತೀರಾ ಹೆಚ್ಚಿನ ಆಕ್ರೋಶವನ್ನಿಟ್ಟುಕೊಳ್ಳುತ್ತಾರೆ.ಇದಕ್ಕೆ ಬೇಕಾದಷ್ಟು ಉದಾಹರಣೆಗಳು ನಮಗೆ ಸಿಗುತ್ತದೆ.ಆಡಳಿತ ಪಕ್ಷದ ಯಾವುದೋ ಒಂದು ಒಳ್ಳೆಯ ನಿರ್ಧಾರ ನಮ್ಮ ಪಕ್ಷದ ಯೋಜನೆಯದ್ದೇ ಬದಲಾದ ರೂಪ ಅನ್ನುವಂಥಾದ್ದು ಅಥವಾ ಯೋಧರ ಕಾರ್ಯಾಚಾರಣೆಯ ಶ್ರೇಯಸ್ಸನ್ನ ಬರೀ ಸೈನಿಕರಿಗೆ ಮಾತ್ರ ಕೊಡಬೇಕು ಮಂತ್ರಿಗಳಿಗೆ ಕೊಡಬಾರದು ಅನ್ನುವುದು ಅಥವಾ ಪ್ರಧಾನ ಮಂತ್ರಿಗಳ ವಿದೇಶ ಪ್ರವಾಸವನ್ನ ಟೀಕಿಸುವುದು ಹಿಂದಿನ ಸರಕಾರದ ನೀತಿಯನ್ನು ವಿರೋಧಿಸಿ ತಮಗೆ ಆಡಳಿತ ಸಿಕಾಗ ಅದನ್ನೇ ಪ್ರತಿಪಾದಿಸುವುದು.ಈ ರೀತಿ… ( ಅದರಲ್ಲೂ ಹಾಸ್ಯಾಸ್ಪದವಾದ ಅಭಿಮಾನದ ಪ್ರತ್ಯಕ್ಷ ಪ್ರಮಾಣ ಅಂದರೆ ಪೆಟ್ರೋಲು ಬೆಲೆ ಇಳಿಕೆಗೆ ಪ್ರಧಾನಿ ಕಾರಣರಲ್ಲದಕ್ಕೆಅಂತಾರಾಷ್ಟ್ರ‍ೀಯ ಕಚ್ಚಾ ತೈಲದ ಬೆಲೆ ಇಳಿಕೆ ಕಾರಣ ಅನ್ನುತ್ತಿದ್ದ ಅಭಿಮಾನೀ ವೃಂದವೊಂದು ಬೆಲೆಯೇರಿಕೆಯಾಗುತ್ತಿದ್ದಂತೆ ಪ್ರಧಾನಿಯವರನ್ನ ಟೀಕಿಸಲು ಪ್ರಾರಂಭಿಸಿದ್ದು…) ಕೆಲವೊಂದು ಬಾರಿ ಈ ಅಭಿಮಾನದ ಅತಿರೇಕ ಎಲ್ಲಿಯವರೆಗೆ ಸಾಗುತ್ತದೆ ಅಂದರೆ ಕೊಲೆ ಅಥವ ಕೊಲೆಯ ಸರಣಿಯೇ ನಡೆದು ಬಿಡುತ್ತದೆ.ಕಾರ್ಯಕರ್ತರ ಮಾರಣಹೋಮ ನಡೆದುಬಿಡುತ್ತದೆ.

ಬಹುಶಃ ಇಂಥಾ ರಾಜಕೀಯ ಪ್ರೇರಿತ ಅಭಿಮಾನ ದೇಶದ ಹಿತದೃಷ್ಟಿಯಿಂದ ಸಮಾಜದ ಹಿತದೃಷ್ಟಿಯಿಂದ ಬಹಳಾನೇ ಕೆಟ್ಟದ್ದು… ಅಷ್ಟೊಂದು ಕೆಟ್ಟದ್ದಾ…? ಅನ್ನುವುದಕ್ಕೊಂದು ಉದಾಹರಣೆಯಾಗಿ ಒಂದೆರಡು ವಿಷಯಗಳನ್ನ ಕೈಗೆತ್ತಿಕೊಳ್ಳೋಣ… ಭಾರತದ ಪ್ರಧಾನ ಮಂತ್ರಿಗಳು ಸ್ವಚ್ಛಭಾರತ ಅಭಿಯಾನ ಕೈಗೊಳ್ಳುವಾಗ ಅವರು ” ದೇಶವಾಸಿಗಳೇ ಭಾರತವನ್ನ ಸ್ವಚ್ಛಗೊಳಿಸಲು ನಿಮ್ಮ ಒಂದು ಗಂಟೆ ಸಮಯ ನನಗೆ ಕೊಡಿ… ಸ್ವಚ್ಛತಾ ಅಭಿಯಾನದಲ್ಲಿ ತೊಡಗಿಕೊಳ್ಳಿ ” ಅಂದರು …. ಇಲ್ಲಿ ದೇಶದ ಪ್ರಧಾನ ಮಂತ್ರಿಗಳು ಹೇಳುತ್ತಿರುವುದು ದೇಶದ ಹಿತದೃಷ್ಟಿಯಿಂದ ಅನ್ನುವುದನ್ನ ನಾವು ತೆಗೆದುಕೊಳ್ಳಬೇಕೆ ಹೊರತು ಪ್ರಧಾನ ಮಂತ್ರಿಗಳು ಯಾವ ಪಕ್ಷದವರು? ನಾವೇನಾದರೂ ಸ್ವಚ್ಛತೆಯ ಕೆಲಸದಲ್ಲಿ ಕೈ ಜೋಡಿಸಿದರೆ ನಮ್ಮ ಪಕ್ಷಕ್ಕೆ ನಷ್ಟವಾಗಿ ಆ ಪಕ್ಷಕ್ಕೆ ಲಾಭವಾದರೆ…? ನಮ್ಮ ಪಕ್ಷಕ್ಕೇನೂ ಲಾಭವಿಲ್ಲ ಅನ್ನುವ ಲೆಕ್ಕಾಚಾರ ಹಾಕತೊಡಗಿದರೆ ನಷ್ಟ ನಮ್ಮ ದೇಶಕ್ಕೇನೆ ಅಲ್ವಾ…. ಇಲ್ಲಿ ನಮ್ಮ ಅಭಿಮಾನ ನಮ್ಮ ದೇಶಕ್ಕೆ ಮಾರಕವಾಯಿತು ತಾನೇ…

ಇಂತಹದ್ದೇ ಇನ್ನೊಂದು ವಿಚಾರ ತೀರಾ ಇತ್ತೀಚಿನದು ನಮ್ಮ ಹದಿನೆಂಟು ಯೋಧರ ಕೊಂದು ಹಾಕಿದ ಉಗ್ರರನ್ನ ನಮ್ಮ ಸೇನೆಯು ನೆರೆರಾಷ್ಟ್ರದ ಗಡಿರೇಖೆಯೊಳಕ್ಕೆ ಹೊಕ್ಕು ಸಂಹಾರ ಮಾಡಿ ಸೇಡು ತೀರಿಸಿಕೊಂಡಿತು.ಈ ಕಾರ್ಯಾಚಾರಣೆ ಭಾರತೀಯರಾದ ನಮಗೆಲ್ಲರಿಗೂ ಅಭಿಮಾನದ ಸಂಕೇತವಾಗಿರಬೇಕಿತ್ತು.ಆದರೆ,ಕೆಲವೊಂದು ಪತ್ರಕರ್ತರು ಇದನ್ನ ವಿಶ್ಲೇಷಿಸಿದ ರೀತಿ ದೇಶದ ಸಮಗ್ರತೆಗೆ ಧಕ್ಕೆ ತರುವಂತಾದ್ದಾಗಿತ್ತು.ಇದು ದೇಶದ ಒಗ್ಗಟ್ಟಿಗೆ ಮಾರಕವಲ್ಲವೇ?ಶತ್ರು ರಾಷ್ಟ್ರಕ್ಕೆ ದೇಶದೊಳಗೆ ಒಡಕಿದೆ ಅನ್ನುವುದು ಗೊತ್ತಾದಾಗ ಅವರ ಆತ್ಮಬಲ ಹೆಚ್ಚಾಗುವುದು ಶತಸ್ಸಿದ್ದವಲ್ಲವೇ?

ಹೀಗೆ ವ್ಯಕ್ತಿ ಅಥವಾ ಪಕ್ಷದ ಮೇಲಿನ ಅಭಿಮಾನ ಅತಿರೇಕವಾದಾಗ ದೊಡ್ಡ ಪೆಟ್ಟು ಬೀಳುವುದು ಸಾಮಾಜಿಕ ನ್ಯಾಯಕ್ಕೆ.ಜನರು ತಮ್ಮ ಕುರುಡು ಅಭಿಮಾನದಿಂದಾಗಿ ಸಾಮಾಜಿಕ ನ್ಯಾಯವನ್ನ ಮರೆತು ಬಿಡುತ್ತಾರೆ.ಹಾಗಾಗಿ ನಮ್ಮ ಅಭಿಮಾನದ ಮೇಲೆ ಬಿಗಿ ಹಿಡಿತ ಇರುವುದು ಸಮಾಜದ ಒಳಿತಿನ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ.ವ್ಯಕ್ತಿ ಯಾರೇ ಆಗಿರಲಿ,ಪಕ್ಷ ಯಾವುದೇ ಆಗಿರಲಿ,ಅವರ ಅಥವಾ ಆ ಪಕ್ಷದ ಒಳ್ಳೆಯ ನಿಲುವಿಗೆ ಬೆಂಬಲ ಕೊಡೋದು ನಮ್ಮ ಕರ್ತವ್ಯ.ಅರ್ಥಾತ್ ಸಮಾಜದ ಸೌಹಾರ್ದತೆಗೆ,ದೇಶದ ಘನತೆಗೆ,ಸಾಂಸ್ಕೃತಿಕ ಮೌಲ್ಯಗಳ ಉಳಿಯುವಿಕೆಗೆ ಪೂರಕವಾಗಿದ್ದಲ್ಲಿ ನಮ್ಮ ಅಭಿಮಾನವನ್ನ ಬದಿಗಿಟ್ಟಾದರೂ ಸರಿ ಆ ನಿಲುವನ್ನು ಬೆಂಬಲಿಸುವ ಗುಣ ಬೆಳೆಸಿಕೊಂಡಲ್ಲಿ ಆಗ ದೇಶ ಮತ್ತಷ್ಟು ಬೆಳಗುತ್ತದೆ ತಾನೇ? ಅದಕ್ಕಾಗಿಯೇ ಹೇಳಿದ್ದು,ಅಭಿಮಾನ ಹೇಗಿರಬೇಕೆಂದರೆ… ಅಭಿಮಾನದ ಮೇಲೆಯೇ ಅಭಿಮಾನ ಮೂಡುವಂತಿರಬೇಕು ಅಂತ… ನಿಮಗೇನನಿಸುತ್ತದೆ…?

ಚಿತ್ರಕೃಪೆ : ದಿ.ಹಿಂದೂ

Read more from ಲೇಖನಗಳು

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments