ವಿಷಯದ ವಿವರಗಳಿಗೆ ದಾಟಿರಿ

ಜುಲೈ 23, 2015

14

ಇದು ಬೌದ್ಧಿಕ ಕ್ಷತ್ರಿಯರ ಯುದ್ಧ

‍ನಿಲುಮೆ ಮೂಲಕ

– ಚಕ್ರವರ್ತಿ ಸೂಲಿಬೆಲೆ

ರಾಜೀವ್ ಮಲ್ಹೋತ್ರಾಅಮೇರಿಕಾದ ಪ್ರಿಸ್ನಟನ್ ನ ಶಾಲೆ. ಅಲ್ಲಿನ ಶಿಕ್ಷರರೊಬ್ಬರು ದೆಹಲಿ ಮೂಲದ ಹಿಂದೂವೊಬ್ಬರನ್ನು ವಿವೇಕಾನಂದರು ಮತ್ತು ರಾಮಕೃಷ್ಣರ ಕುರಿತಂತೆ ಮಕ್ಕಳಿಗೆ ಪಾಠ ಮಾಡಬಾರದೆಂದು ನುಡಿದರು.ಆಶ್ಚರ್ಯಚಕಿತರಾದ ಆತ ಹುಬ್ಬೇರಿಸಿ ಏಕೆಂದು ಕೇಳಿದರೆ ಅವರು ಸಲಿಂಗಕಾಮಿಗಳಾಗಿದ್ದರಂತೆ ಎಂಬ ಉತ್ತರ ಬಂತು.ಬೆಚ್ಚಿ ಬಿದ್ದ ಭಾರತೀಯ ಮೂಲದ ವ್ಯಕ್ತಿ ಹಾಗೆ ಹೇಳಿದ್ದು ಯಾರೆಂದು ಕೇಳಿದ್ದಕ್ಕೆ ಅವರು ಆತನ ಕೈಗೊಂದು ಪುಸ್ತಕವಿತ್ತರು.ಅದು ಜೆಫ್ರಿ ಕೃಪಾಲ್ ಬರೆದಿದ್ದ ‘ಕಾಳಿಯ ಮಕ್ಕಳು’. ಕೃತಿಯುದ್ದಕ್ಕೂ ವಿಕೃತಿಗಳೇ ತುಂಬಿದ್ದುದನ್ನು ಕಂಡು ಅಸಹ್ಯದಿಂದ ಬೆಂದು ಹೋದ ಆತ ಅಮೇರಿಕಾದ ಬುದ್ಧಿವಂತರ ನಡುವೆ ತಿರುಗಾಡುತ್ತಿರುವ ಹಿಂದೂಗಳ ಅವಹೇಳನ ಮಾಡುವ ಅನೇಕ ಪುಸ್ತಕಗಳನ್ನು ಹುಡುಕಿದರು.ಅದರ ಕುರಿತಂತೆ ಇತರ ಹಿಂದೂಗಳಿಗೆ ಗೊತ್ತಿರಲಿಲ್ಲವೆಂದಲ್ಲ.ಆದರೆ ಅವರು ಅದೆಷ್ಟು ಅವಮಾನಿತರಾಗಿದ್ದರೆಂದರೆ ಬಾಯಿ ತೆರೆಯಲಾಗದೇ ಮೌನವಹಿಸಿ ಬಿಟ್ಟಿದ್ದರು.ಶಾಲೆಗಳಲ್ಲಿ ಹಿಂದೂವಾಗಿರುವುದು ಮಗುವೊಂದಕ್ಕೆ ಅತ್ಯಂತ ಕಠಿಣವಾಗಿತ್ತು.ಓರಗೆಯ ಕ್ರಿಶ್ಚಿಯನ್ನರು ಹಿಂದೂ ದೇವ-ದೇವಿಯರನ್ನು ಆಡಿಕೊಂಡು ನಗುವಾಗ ಇವರೆಲ್ಲ ಬರಿಯ ಮೂಕ ಪ್ರೇಕ್ಷಕರಷ್ಟೇ.

ರಾಜೀವ್ ಮಲ್ಹೋತ್ರಾ! ಬ್ರೇಕಿಂಗ್ ಇಂಡಿಯಾ, ಬೀಯಿಂಗ್ ಡಿಫರೆಂಟ್, ಇಂದ್ರಾಸ್ ನೆಟ್ ಗಳ ಮೂಲಕ ಅಮೇರಿಕಾದಾದ್ಯಂತ ಹರಡಿಕೊಂಡಿರುವ ಹಿಂದೂ ವಿರೋಧಿಗಳಿಗ ಸೂಕ್ತ ಉತ್ತರ ಕೊಡುತ್ತಿರುವ ವ್ಯಕ್ತಿ. ಎಡಪಂಥದ ಗಬ್ಬು ಘಾಟಿನಲ್ಲಿಯೇ ಕಾಲದೂಡುತ್ತಿರುವ ಭಾರತದ ಬುದ್ಧಿ ಜೀವಿಗಳ ಆರಾಧ್ಯವೆನಿಸಿದ್ದವರನ್ನೆಲ್ಲ ತನ್ನ ಬೌದ್ಧಿಕ ಗದಾಪ್ರಹಾರದಿಂದ ಝಾಡಿಸಿ ಕೊಡವಿ ಬಿಟ್ಟಿರುವ ಜಟ್ಟಿ ಆತ.

ತನ್ನ ಮಗು ಓದುತ್ತಿರುವ ಪ್ರಿನ್ಸ ಟನ್ ನ ಶಾಲೆಯೊಂದು ಆತನಲ್ಲಿ ಭಾರತದ ಕುರಿತಂತೆ, ಹಿಂದೂ ಧರ್ಮದ ಕುರಿತಂತೆ ಜಿಜ್ಞಾಸೆ ಹುಟ್ಟು ಹಾಕಿತ್ತು.ಅವರು ಅಮೇರಿಕದಲ್ಲಿ ನಡೆಯುವ ಸರ್ವಧರ್ಮ ಸಮ್ಮೇಳನಗಳಿಗೆ ಹೋಗಲು ಶುರು ಮಾಡಿದರು.ಅವರಿಗೆ ಅಲ್ಲಿ ಮತ್ತೊಂದು ಅಚ್ಚರಿ ಕಾದಿತ್ತು.ಜುದಾಯಿಸಂನ ಬಗ್ಗೆ ರಬ್ಬಿಗಳು,ಬುದ್ಧ ಪಂಥದ ಕುರಿತಾಗಿ ಭಿಕ್ಷುಗಳು,ಇಸ್ಲಾಂನ ಬಗ್ಗೆ ಇಮಾಮ್ ಗಳು ಮಾಡನಾಡಿದರೆ,ಹಿಂದೂ ಧರ್ಮದ ಕುರಿತಾಗಿ ಮಾತ್ರ ಹಿಂದೂಗಳೇ ಅಲ್ಲದ ಯನಿವರ್ಸಿಟಿಯ ಪ್ರೊಫೆಸರುಗಳು ಮಾಡನಾಡುತ್ತಿದ್ದರು.ಸಂಸ್ಕೃತವನ್ನು ತಿಳಿಯುವುದೆಂದರೆ ಹಿಂದೂ ಧರ್ಮದ ಸಾಹಿತ್ಯವನ್ನು ಅರೆದು ಕುಡಿದಿರುವಂತೆ ಎಂಬುದು ಅವರ ಭಾವನೆಯಾಗಿತ್ತು.ರಾಜೀವ್ ಗೆ ಇದು ಸರಿ ಕಾಣಲಿಲ್ಲ.ಅವರು ಅಮೇರಿಕನ್ನರ ಗ್ರಹಿಕೆಯನ್ನು ವ್ಯವಸ್ಥಿತವಾಗಿ ಖಂಡಿಸಿ ಪತ್ರಿಕೆಗಳಿಗೆ ಲೇಖನ ಬರೆಯಲಾರಂಭಿಸಿದರು.

ವೆಂಡಿ ಡೋನಿಗರ್ ಮತ್ತು ಆಕೆಯ ಶಿಷ್ಯ ವೃಂದ ಹಿಂದೂ ಧರ್ಮದ ಮೇಲೆ ಎಸಗಿರುವ ಆಘಾತ ಈಗ ಮುಕ್ತ ಚರ್ಚೆಗೆ ಬಂತು.ದೆಹಲಿಯ ವಕಿಲೇ ಮೋನಿಕಾ ಅರೋರಾ ಈ ಚರ್ಚೆಗಳಿಂದ ಪ್ರೇರೆಪಿತರಾಗಿ ವೆಂಡಿ ಡೋನಿಗರ್ ಳ ಹಿಂದೂ ಧರ್ಮಕ್ಕೆ ವಿರುದ್ಧವಾಗಿರುವ ಕೃತಿಯೊಂದರ ಮೇಲೆ ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿದಳು.ಅಲ್ಲಿಗೆ ಹಿಂದೂ ಧರ್ಮ ಇನ್ನು ಅಪದ್ಧಗಳನ್ನು ಸಹಿಸಲಾರದೆಂಬ ಸ್ಪಷ್ಟ ಸಂದೇಶ ಜಗತ್ತಿಗೆ ಹೋಯ್ತು.ಆಕೆಯ ಕೃತಿಯಲ್ಲಿದ್ದ ತಪ್ಪುಗಳನ್ನು ಪುಟಸಂಖ್ಯೆಗಳ ಸಮೇತ ಉಲ್ಲೇಖ ಮಾಡಿ ನ್ಯಾಯಾಲದ ಮುಂದಿರಸಲಾಯಿತು.ಆಕೆಯ ಭಾರತದ ಭಕ್ತರು,ಪಶ್ಚಿಮದ ಶಿಷ್ಯರು ಹಿಂದೂ ಧರ್ಮದ ಸಹಿಷ್ಣು ವಿಚಾರಧಾರೆ ಸತ್ತೇ ಹೊಯಿತೆಂದು ಒಂದೇ ಕಣ್ಣಿನಲ್ಲಿ ಅತ್ತರು.ಯಾರೂ ‘ಕ್ಯಾರೆ’ ಎನ್ನಲಿಲ್ಲ.ಕೊನೆಗೆ ಕೆಲವು ಗೂಂಡಾಗಳು ಈ ಕೃತಿಯ ವಿರುದ್ಧನಿಂತಿದ್ದಾರೆಂದು ಪುಕಾರು ಹಬ್ಬಿಸಿ ಜನಸ್ಪಂದನೆಗಾಗಿ ಕಾದರು.ಲಾಭವಾಗಲಿಲ್ಲ,ಪ್ರಕಾಶಕರಾದ ಪೆಂಗ್ವಿನ್ ಸಂಸ್ಥೆ ಈ ಪುಸ್ತಕವನ್ನು ಮರಳಿಪಡೆದು ಡೋನಿಯರ್ ತಪ್ಪು ಮಾಡಿದ್ದಾಳೆಂಬುದನ್ನು ಅನುಮೋದಿಸಿತು. ಹಾಗೆ ನೋಡಿದರೆ ಈ ಇಡಿಯ ಹೋರಾಟದಲ್ಲಿ ರಾಜೀವ್ ಮಲ್ಹೋತ್ರಾ ನೇರವಾಗಿ ಇಳಿದೇ ಇರಲಿಲ್ಲ ಆದರೆ ಅಮೇರಿಕಾದಲ್ಲಿ ಅವರು ಶುರು ಮಾಡಿದ ಬೌದ್ಧಿಕ ಸಮರ ಜಗತ್ತಿನ ಎಲ್ಲ ಹಿಂದೂಗಳ ಆತ್ಮಸ್ಥೈರ್ಯ ವೃದ್ಧಿಸಿತ್ತು.

ರಾಜೀವ್ ಮಲ್ಹೋತ್ರಾ ಅಮೇರಿಕನ್ನರ,ಬುದ್ಧಿಜೀವಿಗಳ,ಕ್ರಿಶ್ಚಿಯನ್ ಮಿಷಿನರಿಗಳ ವಿರುದ್ಧ ತೊಡೆತಟ್ಟಿ ಸಮರಕ್ಕೆ ನಿಂತರು.ಎಲ್ಲಿಯೂ ಭಾವನೆಗಳು ಬೌದ್ಧಿಕ ಯುದ್ಧವನ್ನು ಸೋಲಿಸದಂತೆ ಎಚ್ಚರಿಕೆ ವಹಿಸಿದರು.ಭಾರತದ ಕುರಿತಂತೆ,ಹಿಂದೂ ಧರ್ಮದ ಕುರಿತಂತೆ ಅಮೆರಿಕನ್ ಪಂಡಿತರು ಎತ್ತಿರುವ ಪ್ರಶ್ನೆಗಳಿಗೆ ಅವರದೇ ಶೈಲಿಯಲ್ಲಿ ಉತ್ತರಿಸಲಾರಂಭಿಸಿದರು.ಭಾರತನ್ನು ಅವಹೇಳನಗೈಯುವ, ಹಿಂದೂ ಧರ್ಮವನ್ನು ತುಚ್ಛವಾಗಿ ಕಾಣುವ ಬಿಳಿಯರ ಪ್ರಯತ್ನಕ್ಕೆ ತಡೆಗೋಡೆಯಾಗಿ ನಿಂತರು. ಅಲ್ಲಿಯವರೆಗೆ ಸುಪ್ತವಾಗಿದ್ದ ಹಿಂದೂ ಶ್ರದ್ಧೆ ಜಾಗೃತವಾಯ್ತು.ರಾಜೀವ್ ಮಲ್ಹೋತ್ರಾ ಹಿಂದೂಗಳನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಸಮರ್ಥಿಸಿಕೊಳ್ಳುವ ಸಮರ್ಥ ವ್ಯಕ್ತಿಯಾಗಿಬಿಟ್ಟಿದ್ದರು.ಅವರ ಬ್ರೇಕಿಂಗ್ ಇಂಡಿಯಾ ಅಂತೂ ಭಾರತವನ್ನು ಛಿದ್ರ ಛಿದ್ರವಾಗಿಸುವ ಮಿಶಿನರಿಗಳ ಕೈವಾಡಕ್ಕೆ ಹಿಡಿದ ಕೈಗನ್ನಡಿಯಾಯ್ತು.

ಸಹಜವಾಗಿಯೇ ಇಷ್ಟೂ ದಿನ ಸುಳ್ಳನ್ನು ಸತ್ಯವೆಂದುನಂಬಿಸುತ್ತಾ ಬಂದಿದ್ದ ಪಶ್ಚಿಮದ ಪಂಡಿತರ ಬೆವರು ಹರಿಯಿತು.ರಾಜೀವ್ ಮಲ್ಹೋತ್ರಾರನ್ನು ಚರ್ಚೆಗೆ ಆಹ್ವಾನಿಸುವುದನ್ನೇ ಬಿಟ್ಟು ಬಿಟ್ಟರು.ಅವರ ಪ್ರಶ್ನೆಗಳಿಗೆ ಉತ್ತರಿಸಲಾಗದವರು ಅವರ ಅಧ್ಯಯನದ ರಾಷ್ಟ್ರೀಯತೆಯ ಬಗ್ಗೆ ಪ್ರಶ್ನೆ ಎತ್ತಿದರು.ಅಮೆರಿಕದಲ್ಲಿ ಬಿಡಿ, ಭಾರತದಲ್ಲೂ ಸಮೂಹ ಮಾಧ್ಯಮದ ಆಯಕಟ್ಟಿನಲ್ಲಿರುವವರು ಈ ಎಲ್ಲ ಬೆಳವಣಿಗೆಗಳಿಂದ ವಿಚಲಿತರಾಗಿ ಮನಸ್ಸಿಗೆ ಬಂದಂತೆ ಮಾತನಾಡಿದರು.ಅದು ಹಾಗೆಯೇ. ಬರ್ಖಾ,ರಾಜ್ ದೀಪ್ ರಿಗಷ್ಟೇ ಅಲ್ಲ, ನಮ್ಮ ಅನೇಕ ವಿಶ್ವವಿದ್ಯಾಲಯಗಳ ಪ್ರಮುಖ ಪ್ರೊಫೆಸರುಗಳಿಗೆ ಈ ಅಮೇರಿಕದ ಪಂಡಿತರ ಕೃತಿಗಳೇ ಅಧ್ಯಯನಕ್ಕೆ ಆಹಾರ.ಇವರುಗಳೆಲ್ಲ ಭಾರತವನ್ನು ನೋಡುವುದು ಈ ಕೃತಿಗಳ ಕಣ್ಣಿನಿಂದಲೇ.

ಎಷ್ಟು ಅಚ್ಚರಿಯಲ್ಲವೆ? ಋಗ್ವೇದದ ಅನುವಾದ ನಮಗೆ ಮ್ಯಾಕ್ಸ್ ಮುಲ್ಲರನದೇ ಆಗಬೇಕು.ಹಿಂದೂ ಪ್ರಜ್ಞೆಯ ಕುರಿತಂತೆ ವೆಂಡಿ ಡೋನಿಗರಳೇ ಹೇಳಬೇಕು.ಕೊನೆಗೆ ಪೂರ್ವದ ಸಾಹಿತ್ಯದ ಕುರಿತಂತೆ ಅಧಿಕಾರಿಯುತವಾಗಿ ಮಾತನಾಡಲು ಶೆಲ್ಡನ್ ಪೊಲ್ಲಾಕ್ ನೇ ಬೇಕು.ಆತ ಮತ್ತೊಬ್ಬ ಮಹಾ ಮೋಸಗಾರ,ಆಚರಣೆಗಳಿಂದ ಹಿಂದುವಂತೆ ಕಾಣಿಸಿಕೊಳ್ಳುತ್ತಾನೆ.ನಿಮ್ಮ ಮನೆಗೋ,ಮಠಕ್ಕೋ ಬಂದರೆ ನೇರ ದೇವರೆದುರಿಗೆ ನಿಂತು ‘ಅಗ್ನಿಮೀಳೆ’ ಎಂದು ಮಂತ್ರ ಶುರು ಮಾಡಿಯೇಬಿಡುತ್ತಾನೆ.ಅಲ್ಲಿಗೆ ನೀವು ಕ್ಲೀನ್ ಬೊಲ್ಡ್.ನಿಧಾನವಾಗಿ ಆತ ಹಿಂದೂ ಧರ್ಮದ ಕುರಿತಂತೆ ಪ್ರಶ್ನಾರ್ಥಕವಾಗಿ ಮಾತನಾಡಲಾತಂಭಿಸುತ್ತಾನೆ.ನಾವು ತಲೆ ಅಲುಗಾಡಿಸುತ್ತಾ ಅಹುದಹುದೆನ್ನುತ್ತೇವೆ.ಈತನ ಪ್ರಭಾವದಿಂದ ಶೃಂಗೇರಿ ಮಠವೂ ಹೊರ ಬಂದಿಲ್ಲ.ಇನ್ ಫೋಸಿಸ್ ಸಂಸ್ಥೆಯಂತೂ ಪೂರ್ವದ ಸಾಹಿತ್ಯದ ಅನುವಾದಕ್ಕೆಂದು ಆತನಿಗೆ ಯಾರುಯಾರಿಗೂ ನೀಡದಷ್ಟು ಬಲುದೊಡ್ಡ ಮೊತ್ತವನ್ನು ದತ್ತಿಯಾಗಿ ನೀಡಿದೆ.ಈ ಗುಲಾಮ ಮಾನಸಿಕತೆಗೆ ಏನನ್ನುತ್ತೀರಿ?

ಜಗತ್ತೆಲ್ಲ ಈ ರೀತಿಯ ಢೋಂಗಿ ಜನರೊಂದಿಗೆ ನಿಂತಿರುವಾಗ ಏಕಾಂಗಿಯಾಗಿ ಹೋರಾಟ ಶುರು ಮಾಡಿದ್ದು ರಾಜೀವ್ ಮಲ್ಹೋತ್ರಾ.ಆದರೆ ಬರಬರುತ್ತಾ ಅವರ ಶಕ್ತಿ ವೃದ್ಧಿಯಾಯಿತು.ಭಾರತೀಯರು ಸಮಸ್ಯೆಯನ್ನು ಅರಿತುಕೊಳ್ಳಲಾರಂಭಿಸಿದರು. ಹಿಂದೂ ಧರ್ಮದ ಕುರಿತಂತೆ ಆಚರಣೆಯಲ್ಲಿ ನಿಷ್ಠರಾದ ಹಿಂದೂಗಳೇ ಮಾತನಾಡಬೇಕು,ಸಂಸ್ಕೃತದ ಕುರಿತಂತೆ ಅರಿತವರೇ ಹೇಳಬೇಕು ಇವೆಲ್ಲ ಪ್ರಜ್ಞೆ ಜಾಗೃತವಾಯಿತು.

16ನೇ ವಿಶ್ವ ಸಂಸ್ಕೃತ ಸಮ್ಮೇಳನ ಬ್ಯಾಂಕಾಕಿನಲ್ಲಿ ನಡೆದಾಗ ಅಲ್ಲಿಗೆ ರಾಜೀವ್ ಮಲ್ಹೋತ್ರಾ ವಿಶೇಷ ಅತಿಥಿ. ಅಲ್ಲಿ ಅವರು ಮಾತನಾಡುತ್ತಾ ತಾನು ಮುಂದೆ ಬರೆಯಲಿರುವ ಕೃತಿಯಲ್ಲಿ ದಾಖಲಿಸಲಿರುವ ಅಂಶಗಳ ಕುರಿತು ಗಮನ ಸೆಳೆದರು. ಪಶ್ಚಿಮದ ಜನ ಸಂಸ್ಕೃತ ಕಲಿತು ಹೇಳಿದ್ದನ್ನು ನಾವು ಕೇಳಬೇಕೆ? ನಾವು ಪಶ್ಚಿಮ ಕೊಟ್ಟದ್ದನ್ನು ಸ್ವೀಕರಿಸುವ ದಾಸರೆ ಅಥವಾ ಪಶ್ಚಿಮಕ್ಕೂ ಕೊಡಬಲ್ಲ ಸಾಮರ್ಥ್ಯ ನಮ್ಮಲ್ಲಿದೆಯೇ? ಹೀಗೆ ಅನೇಕ ಅಂಶಗಳು ಅದರಲ್ಲಿ ದಾಖಲಾಗಿವೆ ಎಂದಂತೆ ನೆರೆದಿದ್ದ ಸಾಂಪ್ರದಾಯಿಕರೆಲ್ಲ ಆನಂದದಿಂದ ಚಪ್ಪಾಳೆ ತಟ್ಟಿದರೆ ಕೆಲವರಿಗೆ ನಡುಕ ಉಂಟಾಗಿತ್ತು.ಹೇಗಾದರೂ ಮಾಡಿ ಈ ಕೃತಿ ಹೊರಬರದಂತೆ ತಡೆಯಬೇಕೆಂಬ ಪ್ರಯತ್ನ ಶುರುವಾಯ್ತು.

ಪ್ರಿನ್ಸ್ ಟನ್ ನ ಚರ್ಚ್ ಒಂದರಲ್ಲಿ ಶಿಕ್ಷಕನಾದ ರಿಚರ್ಡ್ ಫಾಕ್ಸ್ ಯಂಗ್ ಚಾಲಾಕುತನ ತೋರಿದ.ರಾಜೀವ್ ಮಲ್ಹೋತ್ರಾರ ಪುಸ್ತಕಗಳಲ್ಲಿ ಕೃತಿಚೌರ್ಯವಾಗಿದೆ ಎಂದು ಹುಯಿಲೆಬ್ಬಿಸಿದ.ಅವರ ಪುಸ್ತಕಗಳಲ್ಲಿ ತಾವು ಯಾರಿಂದ ಈ ವಿಚಾರವನ್ನು ಎರವಲು ಪಡೆದಿದ್ದಾರೋ ಅವರ ಹೆಸರನ್ನು ನಮೂದಿಸಿಲ್ಲವೆಂದು ಪುಸ್ತಕ ಪ್ರಕಾಶಕರಿಗೆ ದೂರು ಕೊಟ್ಟ.ಆತನ ಬೆಂಬಲಕ್ಕೆ ಪಿಟಿಷನ್ನಿಗೆಗೆ 192 ಜನ ಸಹಿ ಮಾಡಿದರು.ಭಾರತದಲ್ಲಿ ಅನೇಕ ಎಡಚರು ಅರ್ಧರಾತ್ರಿಯಲ್ಲೂ ಕೊಡೆ ಹಿಡಿದು ಕುಣಿದಾಡಿದರು. ಇತ್ತ ಮಧು ಕಿಶ್ವರ್ ರವರು ರಾಜೀವ್ ರ ಬೆಂವಲಕ್ಕೆ ಬಿಂತು ಪಿಟಿಷನ್ ಜನರ ಮುಂದಿಟ್ಟಾಗ ಏಳಿ ಸಾವಿರಕ್ಕೂ ಹೆಚ್ಚು ಜನ ಸಹಿ ಮಾಡಿದರು.ಹಾಂ! ಕದನ ಈಗಲೂ ನಡೆಯುತ್ತಿದೆ.

ಹೌದು, ಇದು ನಿರ್ಣಾಯಕ ಕದನವೇ.ಸುಳ್ಳನ್ನು ಸತ್ಯವೆಂದು ನಂಬಿಸಿ ಸೌಧ ಕಟ್ಟಿದವರ ಅಡಿಪಾಯವೇ ಅಲುಗಾಡುತ್ತಿದೆ.ಆ ಸೌಧವನ್ನು ತೋರಿಸಿ ಇಷ್ಟು ದಿನ ಭಾರತದಲ್ಲಿ ತಮ್ಮ ಬೇಳೆ ಬೇಯಿಸಿಕೊಂಡ ಪುಣ್ಯಾತ್ಮರೆಲ್ಲ ಬಿಳಿಚಿಕೊಂಡಿದ್ದಾರೆ. ನೆನಪಿಡಿ,ರಾಜೀವ್ ಮಲ್ಹೋತ್ರಾ ನೆಪ ಮಾತ್ರ. ಈ ಕದನ ನಮ್ಮೆಲ್ಲರಿಗೂ ಸೇರಿದ್ದು.ಸಮಯ ಸಿಕ್ಕಾಗ ನೀವೂ ಈ ಪಿಟಿಷನ್ನಿಗೆ ಒಂದು ಸಹಿ ಹಾಕಿ.

14 ಟಿಪ್ಪಣಿಗಳು Post a comment
  1. Dr.Nagaraj havalad
    ಜುಲೈ 23 2015

    Good one….

    ಉತ್ತರ
  2. ಚನ್ನಬಸವೇಶ್ವರ ಬಿದರಿ
    ಜುಲೈ 23 2015

    ನಿಲುಮೆಯ ಬೌದ್ಧಿಕ ಗುರು ಬಾಲಗಂಗಾಧರ ರಾವ್ ಅವರು ಮಲ್ಹೋತ್ರ ಬಗ್ಗೆ ಹೀಗೆ ಅಭಿಪ್ರಾಯ ಪಟ್ಟಿದ್ದಾರೆ:

    “Rajiv Malhotra has a mammoth ego, does not understand much about intellectual research and simply blathers on and on. In all probability, he partially read the second chapter of Heathen long ago and did not understand much of it. He sees himself as ‘the’ defender of ‘Dharma’ and, by the same token, thinks I am a post-colonialist! Do not take him seriously: he is a puffed up clown.”

    _https://groups.yahoo.com/neo/groups/TheHeathenInHisBlindness/conversations/messages/6720

    ಬಾಲಗಂಗಾಧರ ಅವರು ಯಾರನ್ನು “puffed up clown” ಅಂತ ಕರೆದಿದ್ದಾರೋ ಆ ವ್ಯಕ್ತಿಯ ಬೆಂಬಲಕ್ಕೆ ನಿಲುಮೆ ನಿಂತಿರುವುದು ತಮಾಷೆ ಎನಿಸಿದೆ.

    ಉತ್ತರ
    • ಸ್ವಲ್ಪ ಆತ್ಮರತಿಯನ್ನು ಕಡಿಮೆ ಮಾಡಿಕೊಳ್ಳಿ ಸ್ವಾಮಿ.
      ನಿಲುಮೆ ಒಂದು ವೇದಿಕೆ.ಇಲ್ಲಿ ಪ್ರಗತಿಪರರಂತೆ ಅವರ ಮೂಗಿನ ನೇರದ ವಾದಗಳಿಗೆ ಮಾತ್ರವೇ ಜಾಗ ಕೊಡುವ ನಿಲುವಿಲ್ಲ.ಎರಡೂ ಬದಿಯ ವಾದಗಳಿಗೂ ವೇದಿಕೆಯೊದಗಿಸುವುದು ನಿಲುಮೆಯ ನಿಲುವು.ಈ ಲೇಖನವೂ ಅದಕ್ಕೆ ಹೊರತಲ್ಲ.

      ಉತ್ತರ
      • ಚನ್ನಬಸವೇಶ್ವರ ಬಿದರಿ
        ಜುಲೈ 23 2015

        “ಸ್ವಲ್ಪ ಆತ್ಮರತಿಯನ್ನು ಕಡಿಮೆ ಮಾಡಿಕೊಳ್ಳಿ ಸ್ವಾಮಿ.”

        ಇದು ತಮ್ಮ ಸ್ವಗತ.

        “ಎರಡೂ ಬದಿಯ ವಾದಗಳಿಗೂ ವೇದಿಕೆಯೊದಗಿಸುವುದು ನಿಲುಮೆಯ ನಿಲುವು

        ಈ ನಿಲುವಿಗೆ ಸ್ವಾಗತ.

        ಉತ್ತರ
      • anonymous
        ಜುಲೈ 23 2015

        Clarification needed urgently. What is Nilume’s official stand on Rajiv Malhotra plagiarism controversy? And do you agree with Balagangadhara’s views on Rajiv Malhotraji?

        ಉತ್ತರ
        • ಕನ್ನಡ ಬರುವುದಾದರೇ,ನಾನು ಮೇಲೆ ಬರೆದ ಕಮೆಂಟನ್ನು ಮತ್ತೊಮ್ಮೆ ಓದಿಕೊಳ್ಳಿ. “ನಿಲುಮೆ ಒಂದು ವೇದಿಕೆ”

          ಉತ್ತರ
      • ಜುಲೈ 31 2015

        “ನಿಲುಮೆಯ ಗುರು” ಎನಿಸಿಕೊಂಡ ಗುರು ಯಾರೂ ನಿಲುಮೆಗಿಲ್ಲ ಎಂಬ ಮಾತು ರಾಕೇಶರ ಈ ನಿಲುವಿನಿಂದ ಸ್ಪಷ್ಟವಾಗಿದೆ

        ಉತ್ತರ
    • balachandra
      ಜುಲೈ 25 2015

      ನಿಮಗೆ ಗೊತ್ತಿರಲಿಕ್ಕಿಲ್ಲ. ರಾಜಿವ್ ಮಲ್ಹೊತ್ರಾರ ‘Invading sacred’ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದು ಬಾಲಗಂಗಾಧರ್.

      ಉತ್ತರ
  3. vasu
    ಜುಲೈ 23 2015

    ಬಾರತದಲ್ಲಿರುವ ಭೌದ್ದಿಕ ಕ್ಷತ್ರಿಯರು ಯಾರು? ಎಡ ಪಂಥೀಯರು, ಬಲ ಪಂಥೀಯರು, ಪೌರಾಣಿಕರು ಮುಂತಾದವರೆನ್ನಲ್ಲಾ ಭೌದ್ಧಿಕವಾಗಿ ಶಾಸ್ತ್ರಾರ್ಥದಲ್ಲಿ ಎದುರಿಸಿ ವಿಜಯಿಯಾದವರು ಆರ್ಯಸಮಾಜದವರು. ಭಾರತದ ಪೌರುಷ ಮತ್ತು ಪರಾಕ್ರಮಗಳನ್ನು ತೋರಿಸಿಕೊಟ್ಟ ಪ್ರಪಥಮ ಪುಸ್ತಕ ” ಸತ್ಯಾರ್ಥ ಪ್ರಕಾಶ” ಸ್ವಾತಂತ್ರ್ಯ ವೀರ ಸಾವರ್ಕರ ರವರ ಭಾಷೆಯಲ್ಲಿ ಹೇಳುವುದಾದರೆ ತಣ್ಣಗಿರುವ ಹಿಂದೂವಿನ ರಕ್ತದಲ್ಲಿ ಉಷ್ಣತೆಯನ್ನು ತುಂಬಿ ಅವನನ್ನು ಸಾಹಸಿಯನ್ನಾಗಿ ಮಾಡಿದ ಪ್ರಪಥಮ ಪುಸ್ತಕವಿದು. ಮುಸ್ಲಿಂ ಮತ್ತು ಕ್ರಿಶ್ಚಿಯನ್ನರನ್ನು ಭೌದ್ದಿಕವಾಗಿ ಎದುರಿಸಬೇಕಾದರೆ ನಮ್ಮಲ್ಲಿ ಆಕ್ರಮಕ ಮನೋಭಾವವೂ ಬೇಕು. ಇಂತಹ ಪ್ರತ್ಯಾಕ್ರಮಣವನ್ನು ಹಿಂದೂ ಸಹ ಮಾಡಬಲ್ಲ ಎಂದು ತೋರಿಸಿಕೊಟ್ಟಿದ್ದು ಈ ಪುಸ್ತಕ. ಭಾರತೀಯರು ಭೌದ್ದಿಕ ಕ್ಷತ್ರಿಯರಾಗಿ ಮೆರೆಯಬೇಕೆನಿಸದರೆ, ಸ್ವಾಮಿ ದಯಾನಂದರ ಅಮೋಘ ಕ್ರಾಂತಿ ಕೃತಿ ಸತ್ಯಾರ್ಥ ಪ್ರಕಾಶವನ್ನು ಓದಲೇ ಬೇಕು. ರಾಜೀವ್ ಮಲ್ಹೋತ್ರಾ ರವರು ಸಹ ಸ್ವಾಮಿ ದಯಾನಂದರ ತರ್ಕವನ್ನು ರೂಡಿಸಿಕೊಂಡಿದ್ದೇ ಆದಲ್ಲಿ ನಮ್ಮ ಸನಾತನ ಧರ್ಮ ಕ್ಕೆ ಸೋಲಿಲ್ಲ

    ಉತ್ತರ
  4. vasu
    ಜುಲೈ 23 2015

    ಆರ್ಯಸಮಾಜದವರನ್ನು ಭೌದ್ದಿಕ ಕ್ಷತ್ರಿಯರೆಂದು ಕರೆದದ್ದು ಪ್ರಂಚ್ ಪತ್ರಕರ್ತ ಪ್ರಾಂಕೊಯಿಸ್ ಗೌಟಿಯರ್. ಇದನ್ನೇ ನಾನು ಮೇಲೆ ದಾಖಲಿಸಿದ್ದೇನೆ.

    ಉತ್ತರ
    • ಜುಲೈ 31 2015

      ಫ್ರಾನ್ಸ್ ವಾ ಗೋತಿಯೇ. ಇದು ಸರಿಯಾದ ಹೆಸರು.

      ಉತ್ತರ
  5. ಮನೋಹರ ನಾಯ್ಕ
    ಜುಲೈ 23 2015

    @ಚನ್ನಬಸವಣ್ಣ ಬಿದರಿ

    “ಬಾಲಗಂಗಾಧರ ಅವರು ಯಾರನ್ನು “puffed up clown” ಅಂತ ಕರೆದಿದ್ದಾರೋ ಆ ವ್ಯಕ್ತಿಯ ಬೆಂಬಲಕ್ಕೆ ನಿಲುಮೆ ನಿಂತಿರುವುದು ತಮಾಷೆ ಎನಿಸಿದೆ.”
    ಲೇಖನ ಚಕ್ರವರ್ತಿ ಸೂಲಿಬೆಲೆಯವರದ್ದು, ನಿಲುಮೆಯ ಸಂಪಾದಕೀಯವಲ್ಲ!. ಪಿಟಿಶನ್ ಗೆ ಸಹಿ ಹಾಕಿ ಅಂತ ಕರೆ ಕೊಟ್ಟಿದ್ದು ನಿಲುಮೆಯಲ್ಲ. ಆದ್ದರಿಂದ ವಿಷಯ ಸರಿಯೊ ತಪ್ಪೊ ಎಂದು ನಿರ್ಧರಿಸಬೇಕಾದದ್ದು ಓದುಗರು. ನಿಮ್ಮ ತಮಾಷೆಗೆ ಭಂಗ ತಂದಿರುವುದಕ್ಕೆ ಕ್ಷಮೆ ಇರಲಿ.

    ಉತ್ತರ
    • anonymous
      ಜುಲೈ 23 2015

      Interesting clarification! If tomorrow Richard Fox Young sends you a letter asking readers to sign his petition will you publish it? 😁

      ಉತ್ತರ
  6. balachandra
    ಜುಲೈ 26 2015

    ಈ ಲೇಖನದ ಬಗ್ಗೆ ಹೇಳುವದಾದರೆ ಮುಖ್ಯವಾಗಿ ಹೇಳಬೇಕಾದ್ದನ್ನೆ ಹೇಳುವದಿಲ್ಲ.
    ಕೃತಿಚೌರ್ಯದಲ್ಲಿ ರಾಜಿವ್ ಮಲ್ಹೊತ್ರಾರ ಪಾತ್ರ ಇದೆಯೇ ಅಥವಾ ಇಲ್ಲವೇ ಎನ್ನುವದನ್ನು ಸ್ಪಷ್ಟಪಡಿಸಬೇಕಾಗಿತ್ತು. Andrew J. Nicholson ಅವರ ಕೃತಿಯಾದ ‘Unifying Hinduism’ ನ ಕೆಲವು ಸಾಲುಗಳು ರಾಜಿವ್ ಮಲ್ಹೊತ್ರಾರ ‘Indra’s net’ಕೃತಿಯಲ್ಲಿರುವದಂತೂ ನಿಜ. ಇದರ ಬಗ್ಗೆ ಲೇಖನ ಯಾವ ಸ್ಪಷ್ಟತೆಯನ್ನೂ ನೀಡುವ ಪ್ರಯತ್ನ ಮಾಡಿಲ್ಲ. ಈ ಲೇಖನದ ಪ್ರಕಾರ ರಾಜೀವ ಮಲ್ಹೊತ್ರಾ ಹಿಂದು ಪರ ಹಾಗೂ ಅವರ ವಿರುದ್ಧ ಕೇಳಿ ಬಂದಿರುವ ಅಪವಾದ ಹಿಂದೂ ವಿರೋಧಿಗಳಿಂದ ಎಂಬಂತಿದೆ. ಹಾಗಾಗಿ ಪೆಟಿಶನ್ನಿಗೆ ಸಹಿ ಹಾಕಿ ಎಂದು ಮನವಿ ಮಾಡಿಕೊಂಡಂತಿದೆ. ಹಾಗೆ ನೋಡಿದರೆ ಕೃತಿಚೌರ್ಯದ ಆಪಾದನೆ ಹೊರಿಸಿದ್ದಕ್ಕೂ ಹಿಂದೂ ವಿರೋಧಿತನಕ್ಕೂ ಯಾವುದೆ ಸಂಬಂಧ ಇಲ್ಲ. ಈ ವಿಷಯದಲ್ಲಿ ಲೇಖಕರು ರಾಜೀವ್ ಮಲ್ಹೋತ್ರಾರನ್ನು ಯಾವ ರೀತಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ ಎನ್ನುವದು ನನಗೆ ತಿಳಿಯುತ್ತಿಲ್ಲ

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments