ವಿಷಯದ ವಿವರಗಳಿಗೆ ದಾಟಿರಿ

ಜುಲೈ 24, 2015

15

ಅನ್ನಭಾಗ್ಯ ಹಸಿದವರಿಗೋ,ರೈತರ ಅಧಃಪತನಕ್ಕೋ?

‍ನಿಲುಮೆ ಮೂಲಕ

– ಡಾ. ಪ್ರವೀಣ ಟಿ. ಎಲ್, ಶಿವಮೊಗ್ಗ

Anna Bhaagyaಅನ್ನಭಾಗ್ಯ ಯೋಜನೆಯ ಕುರಿತ ಚರ್ಚೆ ದಿನೇ ದಿನೇ ಕಾವು ಪಡೆಯುತ್ತಿರುವುದು ಸ್ಪಷ್ಟ. ಇಡೀ ಚರ್ಚೆಯಲ್ಲಿ ಅನ್ನಭಾಗ್ಯ ಯೋಜನೆಯನ್ನು ಟೀಕಿಸುವವರನ್ನು ಹಸಿದವರ ವಿರೋಧಿಗಳೆಂದೂ, ಬಿ.ಜೆ.ಪಿಯವರೆಂದೂ,ಮೇಲ್ವರ್ಗದ ಜಮೀನ್ದಾರೀ ಮನಸುಗಳೆಂದೂ, ಮಾನವೀಯತೆಯನ್ನು ಮರೆತವರೆಂದೂ ಬಿಂಬಿಸಿ, ವಿಮರ್ಶೆಗಳನ್ನು ಮೂಲೆಗುಂಪುಮಾಡಲಾಗುತ್ತಿದೆ. ಆದರೆ ಈ ಆರೋಪಗಳು ವಿಮರ್ಶೆಯ ತೀಕ್ಷ್ಣತೆಯನ್ನು ಕಡಿಮೆಗೊಳಿಸಬಹುದೇ ವಿನಃ, ‘ಅನ್ನಭಾಗ್ಯ’ದ ಸಮಸ್ಯೆಯನ್ನು ಬಗೆಹರಿಸುವುದಿಲ್ಲ ಎಂಬುದು ಅಷ್ಟೇ ಸತ್ಯ.

ಹಸಿದವರಿಗೆ ‘ಅನ್ನ’ ನೀಡುವ ‘ಭಾಗ್ಯ’ ಎಂದು ಬಿಂಬಿಸುತ್ತಿರುವ ಈ ಯೋಜನೆಯು ನಿಜವಾಗಿಯೂ ಹಸಿದವರಿಗೆ, ದುರ್ಬಲರಿಗೆ ಅನ್ನನೀಡುವ ಕೆಲಸವಾಗಿದ್ದರೆ ಭಾರತದ ಯಾರೊಬ್ಬರೂ ವಿರೋಧಿಸುವ ಪ್ರಮೆಯವೇ ಎದುರಾಗುತ್ತಿರಲಿಲ್ಲ. ಏಕೆಂದರೆ, ಹಸಿದವರಿಗೆ, ದುರ್ಬಲರಿಗೆ ಭಿಕ್ಷೆನೀಡಿ ಸಾಕುವ ಸಂಪ್ರದಾಯ ತಲೆತಲಾಂತರಗಳಿಂದಲೂ ನಡೆದುಬಂದಿರುವುದು ನಮ್ಮ ಸಂಸ್ಕೃತಿಯ ವಿಶೇಷಗಳಲ್ಲೊಂದು. ಹಸಿದವರು, ದುರ್ಬಲರು ಮಾತ್ರವೇ ಈ ಯೋಜನೆಯ ಫಲಾನುಭವಿಗಳೇ? ಖಂಡಿತ ಇಲ್ಲ. ಬಿ.ಪಿ.ಎಲ್. ಕಾರ್ಡುದಾರರೆಲ್ಲರೂ ಈ ಯೋಜನೆಗೆ ಅರ್ಹರು. ಈ ಪಡಿತರ ಕಾರ್ಡು ಪಡೆಯುವುದು ‘ಆದಾಯ ಪ್ರಮಾಣ ಪತ್ರ’ ಪಡೆದಂತೆಯೇ. ಲಕ್ಷಾಂತರ ರೂಪಾಯಿ ಆದಾಯವಿದ್ದರೂ 11000/- ಅಥವಾ 15000/- ಎಂದೇ ನಮೂದಾಗುವುದು ಬಹಿರಂಗ ಸತ್ಯ. ಹೀಗಿರುವಾಗ, ನಿಜವಾದ ದುರ್ಬಲರನ್ನು, ಹಸಿದವರನ್ನು ಗುರುತಿಸದೆಯೇ ಈ ರೀತಿಯ ಬೃಹತ್ ಮೊತ್ತದ ಯೋಜನೆಗಳನ್ನು ರೂಪಿಸಿ, ಅನುಷ್ಟಾನಗೊಳಿಸುವುದು ಹಲವಾರು ದುಷ್ಪರಿಣಾಮಗಳಿಗೆ, ದುರುಪಯೋಗಕ್ಕೆ ಕಾರಣವಾಗುತ್ತದೆಯೇ ವಿನಃ ನಿಜವಾದ ಉದ್ದೇಶ ಈಡೇರಲಾರದು.

ನಿಜವಾದ ಹಸಿದ ಅನಾಥರು, ಭಿಕ್ಷುಕರು, ದುರ್ಬಲರು, ಅಂಗವಿಕಲರು, ವಯೋವೃದ್ಧರು ಇದರ ಫಲಾನುಭವಿಗಳಾಗುವ ಬದಲಿಗೆ ಹಸಿದವರ ಹೆಸರಿನಲ್ಲಿ ಹಲವರು ತಮ್ಮ ‘ಅನ್ನ’ಕ್ಕೆ ‘ಭಾಗ್ಯ’ವನ್ನು ಮಾಡಿಕೊಂಡಿದ್ದಾರೆ. ಸರ್ಕಾರದ ಕೋಟ್ಯಾಂತರ ಹಣವನ್ನು ಭ್ರಷ್ಟ ಅಧಿಕಾರಿಗಳು ಲೂಟಿ ಮಾಡುತ್ತಿರುವ ವರದಿಗಳು ವ್ಯಾಪಕವಾಗಿ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುತ್ತಿರುವುದೇ ಇದಕ್ಕೆ ಸಾಕ್ಷಿ. ಹಲವರು ಇದನ್ನೊಂದು ಶಾಶ್ವತ ಉಧ್ಯಮವನ್ನಾಗಿ ಮಾಡಿಕೊಂಡಿದ್ದರೂ ಆಶ್ಚರ್ಯ ಪಡಬೇಕಿಲ್ಲ. ಇದನ್ನು ತಡೆಯಲು ಸರ್ಕಾರದ ಬಳಿ ಯಾವ ‘ವ್ಯವಸ್ಥೆ’ ಇದೆ? ಜನರಲ್ಲಿ ಸ್ವಲ್ಪ ನಂಬಿಕೆ ಹುಟ್ಟಿಸುತ್ತಿದ್ದ ‘ಲೋಕಾಯುಕ್ತ’ವೇ ಇಂದು ಛೀಮಾರಿ ಹಾಕಿಸಿಕೊಳ್ಳುತ್ತಿದೆ. ಲೋಕಾಯುಕ್ತವನ್ನೇ ಕಾಯಲು ಮತ್ತೊಂದು ವ್ಯವಸ್ಥೆಯನ್ನು ಸೃಷ್ಟಿಸಬೇಕಾದ ಸಂದರ್ಭ ಎದುರಾಗಿದೆ.

ಯಾವುದೇ ಯೋಜನೆಯು ನೂರಕ್ಕೆ ನೂರರಷ್ಟು ಯಶಸ್ವಿಯಾಗಲು ಸಾಧ್ಯವಿಲ್ಲ ಎಂಬ ಮಾತನ್ನು ಖಂಡಿತಾ ಒಪ್ಪುವಂತದ್ದೇ. ಆ ಹುಸಿ ನಿರೀಕ್ಷೆಯನ್ನು ಸದ್ಯಕ್ಕೆ ಸ್ವತಃ ಜಾರಿಗೆ ತಂದ ಮುಖ್ಯಮಂತ್ರಿಗಳಾಗಲೀ, ಪ್ರಧಾನಮಂತ್ರಿಗಳಾಗಲೀ ಇಡುವುದಿಲ್ಲ. ಹೀಗಿರುವಾಗ ಸಾಮಾನ್ಯ ಪ್ರಜೆಗಳಾದ ನಾವು ನಿರೀಕ್ಷಿಸಲು ಸಾಧ್ಯವೇ? ಆದರೆ ಪ್ರಶ್ನೆ ಇರುವುದು ಎಷ್ಟು ಪ್ರಮಾಣದಲ್ಲಿ ಜನಸಾಮಾನ್ಯರಿಗೆ ಸಹಾಯವಾಗುತ್ತಿದೆ? ಅಂದರೆ 5-10% ಜನರಿಗೋಸ್ಕರ 80-90% ಜನರ ಹೊಟ್ಟೆಹೊರೆಯುವ ಕೆಲಸ ಮಾಡುವ ಸರ್ಕಾರ ಜನರ ಕ್ರಿಯಾಶೀಲತೆಯನ್ನು ಹಾಳುಮಾಡುತ್ತಿದೆ. ಇಷ್ಟು ಸಾಕಾಗುವುದಿಲ್ಲವೆಂದು ಈ ಯೋಜನೆಯನ್ನು ಎ.ಪಿ.ಎಲ್ ಕಾರ್ಡುದಾರರಿಗೂ ವಿಸ್ತರಿಸುವ ಮೂಲಕ ಅಳಿದುಳಿದವರನ್ನು ನಿಷ್ಕ್ರಿಯರನ್ನಾಗಿ ಮಾಡಹೊರಟಿದೆ. ಇದರ ಕುರಿತು ಮುಖ್ಯಮಂತ್ರಿಗಳ ಗಮನಸೆಳೆದರೆ, “ಶತಮಾನಗಳಿಂದ ದುಡಿದ ಈ ಜನರು ಈಗ ವಿಶ್ರಾಂತಿ ಪಡೆಯಲಿ ಬಿಡಿ” ಎಂಬ ಹೇಳಿಕೆ ನೀಡುವ ಮೂಲಕ ಯೋಜನೆಯನ್ನು ಸಮರ್ಥಿಸಿಕೊಳ್ಳುತ್ತಾರೆ. ಆದರೆ ಆ ಸಮರ್ಥನೆಯ ಗಂಭೀರತೆಯನ್ನು ಅರಿಯಬೇಕಿದೆ. ಅಂದರೆ ದುಡಿಯುವ ಸಮುದಾಯವೊಂದು ವಿಶ್ರಾಂತಿ ಪಡೆದರೆ ರಾಜ್ಯದ ಉತ್ಪಾಧನಾ ಸಾಮರ್ಥ್ಯದ ಸ್ಥಿತಿ ಹೇಗಿರುತ್ತದೆ?

ಕೃಷಿ ಸಂಸ್ಕೃತಿಯ ಮೇಲಾಗುತ್ತಿರುವ ಪರಿಣಾಮಗಳ ಪರಿವೇ ಇಲ್ಲದವರಂತೆ ಸರ್ಕಾರ ಮತ್ತು ಈ ಯೋಜನೆಯ ಸಮರ್ಥಕರು ನಡೆದುಕೊಳ್ಳುತ್ತಿರುವುದು  ಅಚ್ಚರಿಯನ್ನು ಹುಟ್ಟುಹಾಕುತ್ತದೆ. ವ್ಯಕ್ತಿ ಗೌರವದ ಬಗ್ಗೆ ಉದ್ದುದ್ದ ಭಾಷಣ ಮಾಡುವ ಸಮರ್ಥಕರು ಅನ್ನಕ್ಕೂ ಕನಿಷ್ಠ ಗೌರವ ನೀಡಬೇಕು ಎಂದು ಗೊತ್ತಿರುವುದಿಲ್ಲವೇ? ಒಂದು ಕೆ. ಜಿ ಅಕ್ಕಿಯನ್ನು ತಯಾರಿಸಲು ರೈತರು ಪಡುವ ಶ್ರಮ ಎಷ್ಟು ಎಂದು ಗೊತ್ತಿದೆಯೇ? ಅದನ್ನು ಒಂದು ರೂ.ಗೆ ನೀಡುವ ಮೂಲಕ ಅನ್ನದ ಬೆಲೆಯನ್ನು ಕಳೆಯುತ್ತಿರುವುದು, ರೈತರಿಗೆ ಗೌರವದ ವಿಚಾರವೋ, ಅಗೌರವದ ಸಂಗತಿಯೋ? ಕಳೆದ ಕೆಲವು ವರ್ಷಗಳಿಂದ ಇತರೇ ಸಾಮಾಗ್ರಿಗಳ ಬೆಲೆ ಏರಿಕೆಗೂ, ಭತ್ತದ ಬೆಲೆ ಏರಿಕೆಗೂ ತುಲನೆ ಮಾಡಿದ್ದೀರಾ? ಭತ್ತ ಬೆಳೆಯುವವನ ಹೀನ ಸ್ಥಿತಿಗೆ ಸರ್ಕಾರದ ಇಂತಹ ಅವೈಜ್ಞಾನಿಕ ಯೋಜನೆಗಳು ಕಾರಣವಲ್ಲವೇ? ಬೆಲೆಕುಸಿತದಿಂದಾಗಿ, ಹಾಗೂ ಕೆಲಸಗಾರರ ಕೊರತೆ ಇಂದಾಗಿ, ಎಷ್ಟೋ ಜಮೀನುಗಳು ಪಾಳುಬಿದ್ದಿವೆ ಇಲ್ಲವೇ ಯಾವುದೋ ವಾಣಿಜ್ಯ ಬೆಳೆಗೆ ಮಾರುಹೋಗಿ, ಸಾಲಮಾಡಿ, ಬೆಳೆ ಕೈಕೊಟ್ಟಾಗ ಆತ್ಮಹತ್ಯೆಗೆ ಮುಂದಾಗುವ ಪ್ರಸಂಗಗಳು ದಿನ ನಿತ್ಯ ಕಾಣುತ್ತಿದ್ದೇವೆ. ಈ ಭತ್ತದ ಬೆಲೆ ಕುಸಿತಕ್ಕೂ, ಕೆಲಸಗಾರರ ಕೊರತೆಗೂ, ಆತ್ಮಹತ್ಯೆ ಪ್ರಸಂಗಗಳಿಗೂ ಏನೂ ಸಂಬಂಧ ಇಲ್ಲವೇ? ಶೇ. 60ಕ್ಕೂ ಅಧಿಕ ಸಂಖ್ಯೆಯ ಜನರು ಕೃಷಿಯನ್ನು ಅವಲಂಭಿಸಿರುವ ಈ ಗ್ರಾಮಗಳಲ್ಲಿ, ಜನರಿದ್ದಾರೆ ಆದರೆ ಕೆಲಸ ಮಾಡುವವರು ಇಲ್ಲವಾಗಿದ್ದಾರೆ. ಗ್ರಾಮೀಣ ಸಮಾಜ ಕೃಷಿ ಪ್ರಧಾನ ಎಂದಾದರೆ, ಕೃಷಿಯಲ್ಲಿ ತೊಡಗುವವರ ಸಂಖ್ಯೆ ಹೆಚ್ಚಿರಬೇಕಲ್ಲವೇ? ಇದು ಹಳ್ಳಿಗಳ ಪರಿಚಯವಿರುವ ಯಾರಿಗಾದರೂ ಅನುಭವಕ್ಕೆ ಬರುವ ವಿಚಾರ. ಹಾಗೆಂದು ರೈತರ ಆತ್ಮಹತ್ಯೆಯನ್ನು ತಡೆಯಲು ಪೂರಕ ಕ್ರಮಗಳನ್ನು ಕೈಗೊಳ್ಳಬೇಕೇ ಹೊರತು, ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ನೀಡುವ, ಲಕ್ಷಾಂತರ ರೂ ಪರಿಹಾರ ನೀಡುವ ಯೋಜನೆಗಳನ್ನು ಘೋಷಿಸುವುದಲ್ಲ. ಅವುಗಳು ಮತ್ತಷ್ಟು ಸಮಸ್ಯೆಗಳ ಹುಟ್ಟಿಗೆ ಕಾರಣವಾಗುತ್ತವೆ. ಅವುಗಳನ್ನು ತಡೆಯಲು ಮತ್ತಷ್ಟು ಹೊಸ ಯೋಜನೆಗಳನ್ನು ರೂಪಿಸುತ್ತಾ ಹೋಗಬೇಕಾಗುತ್ತದೆ.

ಕೆಲವು ಸಮರ್ಥಕರು ಅನ್ನಭಾಗ್ಯವನ್ನು ಸರ್ಕಾರ ರೈತರಿಗೆ ನೀಡುವ ಸಬ್ಸಿಡಿ ಮತ್ತು ಸಂಶೋಧಕರಿಗೆ ನೀಡುವ ಸಹಾಯಧನಗಳಿಗೆ ಹೋಲಿಕೆ ಮಾಡಿ, ಅನ್ನಭಾಗ್ಯವನ್ನು ಸಮರ್ಥಿಸುತ್ತಾರೆ. ಆದರೆ ರೈತರಿಗೆ ನೀಡುವ ಸಬ್ಸಿಡಿ 20% ಅಥವಾ 30% ಇರುತ್ತದೆ ಉಳಿದ ಹಣವನ್ನು ರೈತರು ವ್ಯಯಿಸಬೇಕಾಗುತ್ತದೆ. ಅದಕ್ಕಿಂತ ಹೆಚ್ಚಿನ ಸಬ್ಸಿಡಿ ನೀಡುವ ಕ್ರಮವಿದ್ದರೆ ಅದು ಸಹ ಟೀಕೆಗೆ ಅರ್ಹ ಎಂಬ ನಿಲುವಿನಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಅಲ್ಲದೇ ಈ ಹೋಲಿಕೆಯ ಯೋಜನೆಗಳು ತದ್ವಿರುದ್ಧ ಪರಿಣಾಮಗಳನ್ನು ಹೊಂದಿರುವುದು: ಸಬ್ಸಿಡಿಯು ಕೃಷಿಯನ್ನು ಉತ್ತೇಜಿಸಲಿಕ್ಕಾದರೆ, ಅನ್ನಭಾಗ್ಯ ಕೃಷಿಯ ಅಧಃಪತನಕ್ಕೆ. ಸಂಶೋಧನಾ ಸಹಾಯಧನಕ್ಕೆ ಹೋಲಿಸುವ ಮೂಲಕ ಕೆಲವು ‘ಸಂಶೋಧಕರು’ ಎನಿಸಿಕೊಂಡವರು ಪಾಂಡಿತ್ಯ ಪ್ರದರ್ಶಿಸುತ್ತಾರೆ. ಸಂಶೋಧನೆಗೆ ನೀಡುವ ಸಹಾಯಧನದಿಂದ ಒಂದೊಳ್ಳೆ ಸಂಶೋಧನೆಯನ್ನು ಸರ್ಕಾರ ನಿರೀಕ್ಷೆ ಮಾಡುತ್ತದೆ. ಅದು ಸಂಶೋಧಕರು ಕ್ಷೇತ್ರ ಕಾರ್ಯ ಮಾಡಲು, ಹಾಗೂ ಸಂಶೋಧನೆಗೆ ಸಂಬಂಧಪಟ್ಟ ಪುಸ್ತಕಗಳನ್ನು ಪಡೆಯಲು, ಗ್ರಂಥಾಲಯಗಳಿಗೆ ಭೇಟಿನೀಡಲು ನೀಡುವ ಹಣವೇ ಹೊರತು ಕಾಶೀ ಯಾತ್ರೆಗೋ, ವಾರಾಂತ್ಯದ ಮೋಜುಮಸ್ತಿಗೋ ನೀಡುವುದಲ್ಲ ಎಂಬ ಸಣ್ಣ ಅರಿವು ಇದ್ದಂತಿಲ್ಲ. ಅಂದರೆ ಸಮರ್ಥಿಸುವ ಭರದಲ್ಲಿ ಮೂರ್ಖತನದ ಪ್ರದರ್ಶನಕ್ಕೆ ಇಳಿದುಬಿಡುವ ಇವರುಗಳು ಸರ್ಕಾರದ ‘ಸಲಹೆಗಾರ’ರೂ, ‘ಚಿಂತಕವಲಯ’ವೂ ಆಗಿರುವುದು ನಮ್ಮ ದೌರ್ಭಾಗ್ಯ.

‘ಹಸಿದವರ ಹಿತಕಾಯುತ್ತೇವೆ’ ಎಂದು ಭಾರತದ ಬೆನ್ನೆಲುಬಾಗಿರುವ ರೈತನ ಬದುಕನ್ನು ಕಸಿದುಕೊಳ್ಳುವ ಹಕ್ಕನ್ನು ಸರ್ಕಾರಕ್ಕೆ ನೀಡಿದವರಾದರೂ ಯಾರು? ಅತ್ತ ಹಸಿದವರ ಹಿತ ಕಾಯುವಲ್ಲಿಯೂ ಸೋಲುವ, ಇತ್ತ ರೈತರ ಸಮಸ್ಯೆಗಳಿಗೆ ಕಾರಣವಾಗುವ  ಈ ಯೋಜನೆಯ ಕುರಿತು ಮಾತನಾಡುವುದೇ ತಪ್ಪು ಎಂಬಂತೆ ಕೆಲವು ಸಮರ್ಥಕರು ಆಗ್ರಹಿಸುವ ಪರಿ ವಿಚಿತ್ರವಾದುದು. ಈ ಯೋಜನೆಯನ್ನು ಸಮರ್ಥಿಸುವುದಕ್ಕಿಂತ ವಿರೋಧಿಸುವುದಕ್ಕೇ ಹೆಚ್ಚು ಕಾರಣಗಳಿವೆ. ಹಾಗಾಗಿಯೇ, ಕುಂ. ವೀರಭದ್ರಪ್ಪ, ಭೈರಪ್ಪ ಮತ್ತಿತರ ಹಲವು ಪ್ರಮುಖ ಚಿಂತಕರು ಇದರ ವಿರುದ್ಧ ಧ್ವನಿ ಎತ್ತಿರುವುದು. ಆದರೆ ಇದನ್ನು ವಿರೋಧಿಸುವವರೆಲ್ಲಾ  ಮೋದಿ ಭಕ್ತರೆಂದೂ, ಕಾಂಗ್ರೆಸ್ಸಿನ ಜನಪರಯೋಜನೆಗಳನ್ನು ಸಹಿಸಲಾರದವರೆಂದೂ ತೀರ್ಪಿಡುವುದು ತಪ್ಪು. ಇಂತಹ ಯೋಜನೆಯನ್ನು ಮೋದಿ ಸರ್ಕಾರವೇ ಜಾರಿಗೆ ತರಲಿ, ಅಥವಾ ಇನ್ಯಾವುದೇ ಸರ್ಕಾರ ಜಾರಿಗೆ ತಂದರೂ ಮೇಲಿನ ಟೀಕೆಗೆ ಅರ್ಹವಾಗಿರುತ್ತದೆ. ಇಲ್ಲಿ ಪಕ್ಷದ ಕಾರಣಕ್ಕೆ ಸಮರ್ಥಿಸುವುದಾಗಲೀ, ವಿರೋಧಿಸುವುದಾಗಲೀ ಮೂರ್ಖತನವಾಗಲಿದೆ. ಈ ಸಂದರ್ಭದಲ್ಲಿ ಅನ್ನಭಾಗ್ಯದ ಕುರಿತು ಟೀಕಿಸುತ್ತಿದ್ದೇವೆ, ಇಂತಹ  ಹಲವು ಯೋಜನೆಗಳ ಕುರಿತು ಸರ್ಕಾರಗಳು(ರಾಜ್ಯ, ಕೇಂದ್ರ) ಪುನಾರವಲೋಕನ ಮಾಡಿಕೊಳ್ಳಬೇಕಿದೆ.

15 ಟಿಪ್ಪಣಿಗಳು Post a comment
  1. ಜುಲೈ 24 2015

    ಸರಿಯಾಗಿ ಹೇಳಿದಿರಿ ಸಾರ್‍: ಆದರೆ ಈ ವಿರೋಧಿಗಳಿಗೆ ಎಷ್ಟು ವಿವರಿಸಿ ಹೇಳಿದರೇನು ತಿಳಿಯುವುದಿಲ್ಲ.

    ಉತ್ತರ
  2. ಪಕಳಕುಂಜ ಗೋಪಾಲಕೃಷ್ಣ ಭಟ್
    ಜುಲೈ 25 2015

    ಧನ್ಯವಾದ…ಅತ್ಯುತ್ತಮ ಬರಹದ ಮೂಲಕ .ತುಂಬ ಸಮಯೋಚಿತವಾಗಿ ಗಹನವಾದ ವಿಚಾರಗದ ಬಗ್ಗೆ ಬೆಳಕು ಚೆಲ್ಲಿ ಉಪಯುಕ್ತ ವಿಶ್ಲೇಷಣೆ ನೀಡಿದ್ದೀರಿ…….ದಪ್ಪ ಚರ್ಮದವರು ನಿದ್ದೆ ಬಿಟ್ಟು ಎಚ್ಚೆತ್ತು ಈಬಗ್ಗೆ ಚಿಂತಿಸುವ ಕನಸು ನಾವು ಕಾಣಬಹುದು

    ಉತ್ತರ
  3. Manjunath
    ಜುಲೈ 27 2015

    ಪ್ರವೀಣ ಅವರೆ

    ಬಹಳ ಸರಳವಾಗಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಬರೆದಿರುವುದಕ್ಕೆ ಧನ್ಯವಾದಗಳು. ಇದರ ಕುರಿತು ನನ್ನ ಕೆಲವೊಂದು ಅನಿಸಿಕೆಗಳನ್ನು ಬರೆಯಲು ಇಚ್ಚಿಸುತ್ತೇನೆ.
    ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರುವಲ್ಲಿ ಅಧಿಕಾರಿಗಳ ಸಮಸ್ಯೆಯಿಂದ ಹಿಡಿದು ಫಲಾನುಭವಿಗಳಿಗೆ ತಲುಪಿಸುವವರೆಗಿನ ಸಮಸ್ಯೆಯನ್ನು ಚರ್ಚಿಸಿದ್ದೀರಿ, ಇದರ ಅರ್ಥ, ಅನ್ನಭಾಗ್ಯವನ್ನು ಮತ್ತಷ್ಟು ಸಮರ್ಪಕವಾಗಿ ಜಾರಿಗೆ ತರಬೇಕಿತ್ತು ಎಂಬುದು ತಮ್ಮ ಆಶಯವೆ? ಯಾಕೆಂದರೆ, ಹಸಿದವರಿಗೆ ಕೊಟ್ಟರೆ ಅದನ್ನು ವಿರೋಧಿಸುವ ಪ್ರಮಯವೇ ಇಲ್ಲ ಎಂದಾದರೆ, ಆ ಯೋಜನೆಯನ್ನು ಜಾರಿಗೆ ತರುವಲ್ಲಿ ಮಾತ್ರ ತಮಗೆ ತೊಂದರೆ ಕಾಣಿಸುತ್ತಿದೆ ಎಂದೆನಿಸುತ್ತದೆ, ಹೌದೆ?

    ರಾಜ್ಯದ ಉತ್ಪಾದನಾ ಸ್ಥಿತಿಯ ಮೇಲೆ ಅನ್ನಭಾಗ್ಯದ ಯೋಜನೆ ದುಷ್ಪರಿಣಾಮ ಬೀರುತ್ತದೆ ಎಂಬುದು ಸದ್ಯಕ್ಕೆ ಬೀಸು ಹೇಳಿಕೆ ಎನಿಸುತ್ತದೆ, ಉತ್ಪಾದನಾ ವಿಧಾನ ಹಾಗು ಪ್ರಮಾಣವನ್ನು ಮತ್ತು ಮಾನವ ಸಂಪನ್ಮೂಲದ ತೊಡಗಿಸಿಕೊಳ್ಳುವಿಕೆಯನ್ನು ಆನ್ನಭಾಗ್ಯದ ಮುನ್ನ ಹಾಗೂ ಜಾರಿಯಾದ ನಂತರದ ಸನ್ನವೇಶಗಳನ್ನು ಹೋಲಿಸಿ ವಿವರಿಸಿದರೆ, ತಮ್ಮ ಹೇಳಿಕೆಗೆ ಹೆಚ್ಚು ಸ್ಪಷ್ಟತೆ ಮತ್ತು ಬಲ ಬರುತ್ತದೆ, ಇಲ್ಲವಾದರೆ ಮೂಲಾಧಾರವಿಲ್ಲದೆ ನೀಡುವಂತಹ ನಿರಾಧಾರ ಹೇಳಿಕೆ ಆಗುವುದಿಲ್ಲವೆ? ಜನರ ಕ್ರಿಯಾಶೀಲತೆಯನ್ನು ಹಾಳುಗೆಡುವವಲಲ್ಲಿ ಅನ್ನಭಾಗ್ಯ ಬಹುಮುಖ್ಯ ಪಾತ್ರವಹಿಸುತ್ತಿದೆ ಎಂದಾದರೆ, ಆ ಬದಲಾವಣೆಯನ್ನು ಅಥವ ಶಿಫ್ಟ್ ನ್ನು ಗುರುತಿಸಲು ಸಾಧ್ಯವಾಗಬೇಕು.

    ಅನ್ನವನ್ನು ಅಥವಾ ಮತ್ಯಾವುದ್ದೋ ವಸ್ತುವಿನ ಬೆಲೆ ಅಥವ ದರ ಆಧಾರದ ಮೇಲೆ ಅದರ ಗೌರವ ನಿರ್ಧಾರವಾಗುತ್ತದೆ ಎಂಬುದು ಸ್ವಲ್ಪ ಅನುಮಾನ ಮೂಡಿಸುತ್ತದೆ. ದಿನಂಪ್ರತಿ ಏರು ಪೇರಾಗುವ ಚಿನ್ನದ ದರದಿಂದಾಗಿ ಅದರ ಗೌರವವೂ ಏರು ಪೇರಾಗಬೇಕಾಗುತ್ತದೆ, ದರವೇ ಇಲ್ಲದ ಎಷ್ಟೋ ವಸ್ತುಗಳಿಗೆ ಬೆಲೆ ಕಟ್ಟಲಾಗದ ಗೌರವಗಳಿರುತ್ತವೆ, ಇದರ ಕುರಿತು ಏನು ಹೇಳಬಹುದು?

    ನಿಮ್ಮ ಲೇಖನದಿಂದ ಒಂದು ಇಂಟರೆಸ್ಟಿಂಗ್ ವಿಚಾರ ಹೊರಬರಬಹುದು, ಅನ್ನಭಾಗ್ಯದಂತಹ ಯೋಜನೆಗಳಿಗೂ ಬಡತನ ನಿರ್ಮೂಲನದಂತಹ ಆಶಯಗಳಿಗೂ ಏನಾದರೂ ಸಂಬಂಧವಿದೆಯೇ ಎಂದು ನೋಡಿದರೆ ಹೆಚ್ಚು ಆಸಕ್ತಿದಾಯಕವಾಗುತ್ತದೆ. ಅನ್ನಬಾಗ್ಯವನ್ನು ಜಾರಿಗೊಳಿಸುವಲ್ಲಿ ಇರುವ ಸಮಸ್ಯೆಗಳಿಗಿಂತ ಅದರ ಮೂಲ ಆಶಯದಲ್ಲಿ ಯಾವ ತೊಂದರೆ ಇದೆ ಎಂದು ಗುರುತಿಸಿಕೊಂಡರೆ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಹೆಚ್ಚು ಸಹಾಯವಾಗಬಹುದು.

    ಬಡತನ ನಿರ್ಮೂಲನೆ ಮತ್ತು ಕೃಷಿ, ಕೃಷಿಕರ ಸಮಸ್ಯೆಗಳು ಬೇರೆ ಬೇರೆಯಾದವು. ಅನ್ನಭಾಗ್ಯ ಬಡತನ ನಿರ್ಮೂಲನೆಗಾಗಿ ತಂದಂತಹ ಯೋಜನೆಯಾಗಿದೆ, ಅದನ್ನು ಕೃಷಿ ಸಮಸ್ಯೆ ಪರಿಹರಿಸಲು ತಂದಿರುವ ಪರಿಹಾರವಲ್ಲ. ಅವೆರಡನ್ನೂ ಕಲಸುಮೇಲೋಗರ ಮಾಡದಿದ್ದರೆ ಹೆಚ್ಚು ಸ್ಪಷ್ಟವಾಗಿ ಸಮಸ್ಯೆಯ ಆಳಕ್ಕೆ ಇಳಿಯಬಹುದು ಎನಿಸುತ್ತದೆ

    –ಮಂಜುನಾಥ್

    ಉತ್ತರ
  4. praveen Konandur
    ಜುಲೈ 28 2015

    ಮಂಜುನಾಥ್ ರವರೇ,
    1. ಅನ್ನಭಾಗ್ಯ ಜಾರಿಯಲ್ಲಿ ಸಮಸ್ಯೆ ಅವ್ಯಾಹತವಾಗಿ ನಡೆಯುತ್ತಿದೆ ಎಂಬುದೊಂದು ಅಂಶ. ಅದಕ್ಕಿಂತ ಮುಖ್ಯವಾಗಿ ಈ ಯೋಜನೆಯ ರೂಪು ರೇಷೆಯ್ಲಲಿಯೇ ಸಮಸ್ಯೆ ಇದೆ ಎಂಬುದನ್ನು ತೋರಿಸಿದ್ದೇನೆ. ಅಂದರೆ ಕೇವಲ 5% ಜನರನ್ನು ಗಮನದಲ್ಲಿಟ್ಟುಕೊಂಡು ತರಬೇಕಿದ್ದ ಯೋಜನೆಯೊಂದು ದಾರಿತಪ್ಪಿದೆ. ಅಂದರೆ ಹಸಿದವರಿಗೆ, ದುರ್ಬಲರಿಗೆ(ದುಡಿಯಲು ಅಶಕ್ತರು) ಅನ್ನನೀಡುವ ಪ್ರಯತ್ನವಾಗಿದ್ದರೆ, ಅದನ್ನು ಖಂಡಿತ ಒಪ್ಪುತ್ತಿದ್ದೇವು. ಆದರೆ ಅಂತಹ ಯೋಜನೆ ಇದಲ್ಲ. ಎಂದರೆ ಯೋಜನೆಯ ಮೂಲದಲ್ಲಿಯೇ ಸಮಸ್ಯೆ ಇದೆ ಎಂದರ್ಥ.
    2. ಬದಲಾವಣೆ ಅಥವಾ ಶಿಫ್ಟ್ಅನ್ನು ಎಲ್ಲಿ ಗುರುತಿಸಬೇಕು? ಸಮಾಜದಲ್ಲಿ ತಾನೇ. ಸಮಾಜದ ಬಹುತೇಕರ ಅಭಿಪ್ರಾಯಗಳನ್ನು, ಹಾಗೂ ನನ್ನದೇ ಅನುಭವ- ಅವಲೋಕನಗಳನ್ನು ಒಳಗೊಂಡು ಜನಪ್ರಿಯ ಲೇಖನವೊಂದನ್ನು ಬರೆಯಲು ಸಾಧ್ಯ. ಇಲ್ಲಿ ಅಂಕಿ ಅಂಶಗಳನ್ನು ನೀಡಲು ಹೊರಟರೆ ಅದೊಂದು ಸಂಶೋಧನಾ ಲೇಖನವಾಗುತ್ತದೆ. ಹಲವಾರು ಜನರು “ನಾನು ಕೃಷಿ ಮಾಡುವುದಕ್ಕಿಂತ, ಬಿ.ಪಿ.ಎಲ್. ಕಾರ್ಡು ಮಾಡಿಸುವುದೇ ಉತ್ತಮ ಹಾಗೂ ಕಡಿಮೆ ಶ್ರಮದಾಯಕ” ಎಂದೂ, ಹಾಗೂ ಇನ್ನು ಹಲವರು “ಭತ್ತ ಬೆಳೆಯುವುದಕ್ಕಿಂತ ಪಾಳುಬಿಡುವುದೇ ಲೇಸು” ಎಂದೂ ಅಭಿಪ್ರಾಯ ಪಟ್ಟಿದ್ದಾರೆ. ಈ ಅನುಭವ, ಅವಲೋಕನಗಳ ಮೇಲೆ ಊಹಾಸಿದ್ದಾಂತ ರೂಪಿಸಲಾಗಿದೆ. ಹಾಗಾಗಿ ಹಳ್ಳಿಯ ಪರಿಚಯವಿರುವ ಯಾರಿಗೂ ಇದೊಂದು ಬೀಸು ಹೇಳಿಕೆಯಂತೆ ಕಾಣಲು ಸಾಧ್ಯವಿಲ್ಲವೆಂದು ಭಾವಿಸಿದ್ದೇನೆ..
    3. ಅಕ್ಕಿಯನ್ನು ಪಡಿಯ ರೂಪದಲ್ಲೋ, ದಾನ-ಧರ್ಮದ ರೂಪದಲ್ಲೋ ಮೂಟೆಗಟ್ಟಲೇ ಕೊಡುವ ಸಂಪ್ರದಾಯ, ಆಚರಣೆಗಳನ್ನು ನಾನು ನೋಡಿದ್ದೇನೆ. ಹಾಗೆಂದು ಅದರ ಗೌರವ ಕಡಿಮೆಯಾಗುವುದಿಲ್ಲ, ಬದಲಿಗೆ ಹೆಚ್ಚಾಗುತ್ತೆ. ಆದರೆ ಇಲ್ಲಿ 1 ರೂ. ಕೆ.ಜಿ ಅಕ್ಕಿ ನೀಡುವುದು ರೈತರಿಗೆ ಗೌರವದ ವಿಚಾರವೇ? ಎಂಬುದು ನನ್ನ ಮುಖ್ಯ ಪ್ರಶ್ನೆ. ಅದನ್ನು ಬದಿಗಿರಿಸಿ, ವಸ್ತುಗಳಿಗೆ ಗೌರವ-ಅಗೌರವದ ಪ್ರಶ್ನೆಯನ್ನು ಮುಂದೊತ್ತಿದ್ದೀರಿ.
    4. ಅನ್ನಭಾಗ್ಯ ಬಡತನ ನಿರ್ಮೂಲನೆಗಾಗಿ ತಂದಂತಹ ಯೋಜನೆ ಎಂಬುದೇನೋ ನಿಜ ಆದರೆ ಅದರ ಪರಿಣಾಮ ಕೃಷಿಯ ಮೇಲಾಗಬಾರದೆಂದೇನೂ ಇಲ್ಲವಲ್ಲ? ನಾನು ಗುರುತಿಸ ಹೊರಟಿರುವುದು ಈ ಅಂಶವನ್ನು: ಅನ್ನಭಾಗ್ಯ ಯೋಜನೆಯು ಒಂದು ಕೃಷಿ ಸಂಸ್ಕೃತಿಯ ಮೇಲೆ ಎಂತಹ ದುಷ್ಪರಿಣಾಮಗಳನ್ನುಂಟು ಮಾಡುತ್ತಿದೆ.

    ಉತ್ತರ
  5. Manjunath
    ಜುಲೈ 28 2015

    ಧನ್ಯವಾದ ಪ್ರವೀಣ್ ಜಿ

    ಫೇರ್ ಎನಫ್, ಮೊದಲನೆಯ ಅಂಶ ಸ್ಪಷ್ಟವಾಗಿದೆ, ಯೋಜನೆಯ ಮೂಲದಲ್ಲಿಯೆ ಸಮಸ್ಯೆ ಇರುವುದು ಖಂಡಿತ, ಅದರಲ್ಲಿ ಯಾವ ಅನುಮಾನವಿಲ್ಲ, ಆದರೆ ಶೇ5 ರಷ್ಟು ಜನರಿಗೆ ತರಬೇಕಿದ್ದ ಯೋಜನೆ ಎನ್ನುವ ನಿಮ್ಮ ಸ್ವೀಪಿಂಗ್ ಹೇಳಿಕೆ ತುಸು ತ್ರಾಸದಾಯಕವಾಗಿದೆ, ಗ್ರಾಮೀಣ ಪ್ರದೇಶದಲ್ಲಿ ಶೇ26.5 ರಷ್ಟು ನಗರ ಪ್ರದೇಶಗಳಲ್ಲಿ ಶೇ10.5 ರಷ್ಟು ಬಿಪಿಎಲ್ ಕಾರ್ಡನ್ನು ಜನರು ಹೊಂದಿದ್ದಾರೆ. ಅಂದರೆ 35% ರಷ್ಟು ಜನ ಬಡತನ ರೇಖೆಗಿಂತ ಕೆಳಗಿದ್ದಾರೆ ಎನ್ನುವುದು ಸರ್ಕಾರದ ಅಂಕಿಅಂಶ. ಅವುಗಳಲ್ಲಿ ಒಂದಷ್ಟು ಫೇಕು, ನಾಲಾಯಕ್ಕು ಆಗಿದ್ದರೂ ನೀವು ಹೇಳುವ ಶೇ 5 ರಷ್ಟು ಜನ ಮಾತ್ರವೇ ಬಡತನದಲ್ಲಿ ಇಲ್ಲ ಎಂಬುದು ನನ್ನ ಸರಳ ಲೆಕ್ಕಾಚಾರ.

    ಭತ್ತದ ಬೆಲೆ ಕುಸಿಯುವುದಕ್ಕೂ ಅನ್ನಭಾಗ್ಯಕ್ಕೂ ಸಂಬಂಧವಿದೆ ಎಂದೆನಿಸುವುದಿಲ್ಲ. ಬಿಪಿಎಲ್ ಕಾರ್ಡ್ ನ್ನು ಕೇವಲ ಅಕ್ಕಿ ಪಡೆಯಲು ಮಾತ್ರ ಬಳಸುವುದಿಲ್ಲ, ಹಾಸ್ಪಿಟಲ್ ಗಳಲ್ಲಿಯೂ ಅದರಿಂದ ಸಾಕಷ್ಟು ಪ್ರಯೋಜನಗಳಿವೆ, ಈ ಕಾರಣಕ್ಕೆ ಜನರು ಬಿಪಿಎಲ್ ಕಾರ್ಡ್ ನ್ನು ಪಡೆಯಲು ಇಚ್ಚಿಸಬಹುದು. ಪ್ರಯೋಜನ ಹೆಚ್ಚಿದ್ದಷ್ಟು ಪಡೆಯುವ ಆಸಕ್ತಿ ಎಲ್ಲರಿಗೂ ಇದ್ದೇ ಇರುತ್ತದೆ, ಇದು ಮನುಷ್ಯರ ಕಾಮನ್ ಗುಣ. ನಿಮಗೆ ಅಂತಹ ಹೇಳಿಕೆಗಳು ಸಮಾಜದಲ್ಲಿ ದೊರಕಿದ್ದರೆ ನಮಗೆ ಇಂತಹ ಹೇಳಿಕೆಗಳೂ ಸಿಗುತ್ತವೆ. ಅಂಕಿಅಂಶಗಳ ಕುರಿತಂತೆ ತಮಗೆ ಯಾವ ಅಭಿಪ್ರಾಯವಿದೆಯೊ ಗೊತ್ತಿಲ್ಲ, ಆದರೆ ಉತ್ಪಾದನಾ ಸ್ಥಿತಿಯ ಕುರಿತು ಆಗಿರುವ ಬದಲಾವಣೆಯನ್ನು ಸೂಚಿಸಲು ದೊಡ್ಡದಾದ ಅಂಕಿಅಂಶಗಳ ಕೋಷ್ಠಕಗಳು ಅಗತ್ಯ ಬೀಳುವುದಿಲ್ಲ, ನನಗೆ ಜನಪ್ರಿಯ ಸಂಶೋಧನಾ ಲೇಖನ ವ್ಯತ್ಯಾಸ ತಿಳಿಯದು, ಆದರೆ ಒಂದು ವಿಷಯವನ್ನು ಹೇಳುವಾಗ ಓದುಗರಿಗೆ ಕೆಲವೊಂದು ಅನುಮಾನ ಬರುತ್ತವೆ, ಅದನ್ನು ನಾನು ಕೇಳಿದ್ದೇನೆ, ಉತ್ತರಿಸಲು ಸಾಧ್ಯವಾದರೆ ಉತ್ತರಿಸಿ, ಮತ್ತು ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲೇಬೆಕೆಂಬ ಕಂಪಲ್ಶನ್ ಖಂಡಿತ ಯಾರ ಮೇಲೂ ಇರುವುದಿಲ್ಲ.

    1 ರೂ ಗೆ ಅಕ್ಕಿನೀಡುವುದು ರೈತರಿಗೆ ಗೌರವವೋ ಎಂಬುದು ನಿಮ್ಮ 2 ನೇ ಪ್ರಶ್ನೆ, ನಿಮ್ಮ ಮೂಲ ಪ್ರಶ್ನೆ ಪ್ರಾರಂಭವಾಗುವುದೆ ಅನ್ನಕ್ಕೆ ಗೌರವ ಇರುತ್ತದೆಯೆ ಎಂದು, ನಿಮ್ಮದೆ ಮಾತುಗಳಲ್ಲಿ ನೋಡಿ “ವ್ಯಕ್ತಿ ಗೌರವದ ಬಗ್ಗೆ ಉದ್ದುದ್ದ ಭಾಷಣ ಮಾಡುವ ಸಮರ್ಥಕರು ಅನ್ನಕ್ಕೂ ಕನಿಷ್ಠ ಗೌರವ ನೀಡಬೇಕು ಎಂದು ಗೊತ್ತಿರುವುದಿಲ್ಲವೇ?”…

    ಅನ್ನಭಾಗ್ಯದಿಂದ ಕೃಷಿ ಅಷ್ಟೇ ಅಲ್ಲ ಬೇರೆ ಯಾವ್ಯಾವುದೋ ಕ್ಷೇತ್ರದ ಮೇಲೆ ಪರಿಣಾಮ ಬಿದ್ದಿರಬಹುದು, ಕೃಷಿಯ ಸಮಸ್ಯೆ ಭಿನ್ನವಾದುದು ಎಂಬುದು ನಿಮಗೂ ತಿಳಿದಿರಬಹುದು, ಅನ್ನಭಾಗ್ಯದ ಆಶಯ ಯಾವ ಸಮಸ್ಯೆಯನ್ನು ಪರಿಹರಿಸಲು ಬಂದಿದೆ ಎಂದು ತಮಗೆ ತಿಳಿದಿದೆ. ಎರಡಕ್ಕೂ ವ್ಯತ್ಯಾಸ ಇದೆ ಎಂದು ನಾನು ಹೇಳುತ್ತಿರುವುದು. ಯಾವುದು ಯಾವುದರ ಮೇಲೆ ಪರಿಣಾಮ ಬೀರಿದೆ ಎಂಬುದರಿಂದ ಏನು ಪರಿಣಾಮ ಬೀರಿದೆ ಎಂದು ಗೊತ್ತಾಗುತ್ತದೆಯೇ ಹೊರತು ಮತ್ತೇನಲ್ಲ, ನೀವು ಅನ್ನಭಾಗ್ಯದಿಂದ ಕೃಷಿ ಮೇಲಾಗುತ್ತಿರುವ ಸಮಸ್ಯೆಯ ಕುರಿತೇ ಹೆಚ್ಚು ಒಲವನ್ನು ಹೊಂದಿದ್ದರೆ, ಅದನ್ನೇ ಹೆಚ್ಚು ವಿವರವಾಗಿ ಬರೆಯಬಹುದಿತ್ತು. ಇಡೀ ಲೇಖನದಲ್ಲಿ ಒಂದು ಪ್ಯಾರಾ ಮಾತ್ರ ಕೃಷಿಮೇಲಾಗಿರುವ ಸಮಸ್ಯೆಗಳು ಹೇಳುತ್ತದೆ, ಅವು ಎಲ್ಲವೂ ಕೇವಲ ಹೇಳಿಕೆಗಳಾಗಿ ಕಾಣುತ್ತವೆ, ಅವುಗಳಿಗೆ ವಿವರಣೆ ಇದ್ದಿದ್ದರೆ ಉತ್ತಮವಾಗಿರುತ್ತಿತ್ತು..

    –ಮಂಜುನಾಥ್

    ಉತ್ತರ
  6. Praveen Konandur
    ಜುಲೈ 29 2015

    ಪ್ರಿಯ ಮಂಜುನಾಥ್,
    1. ಶೇ. 5ರಷ್ಟು ಅಂದರೆ, ಕೆಲವೇ ಜನರಿಗಾಗಿ ರೂಪಿಸಬೇಕಾಗಿರುವಂತದ್ದು ಎಂದರ್ಥ. ನಿಮಗೆ ನಿಖರ ಉತ್ತರ ಬೇಕೆಂದರೆ, 35% ಜನರಲ್ಲಿ ನೀವು ಹೇಳುವ ಒಂದಷ್ಟನ್ನು ಕಳೆದರೆ ಎಷ್ಟು % ಆಗುತ್ತದೆಯೋ ಅಷ್ಟು.! ಹಾಗೆಂದು ನಾನು ಬಡವರಿಗೆಲ್ಲಾ ಈ ಯೋಜನೆ ಸಲ್ಲಬೇಕೆಂದೇನೂ ಹೇಳಿಲ್ಲ. ಏಕೆಂದರೆ “ಬಡವ” ಎಂದರೆ ಯಾರು ಎಂಬುದೇ ದೊಡ್ಡ ಪ್ರಶ್ನೆಯಾಗಿರುವಾಗ ಬಡವರೆಲ್ಲರೂ ಹಸಿದವರು, ದುರ್ಬಲರು ಎಂಬುದನ್ನು ನಾನಂತೂ ಒಪ್ಪುವುದಿಲ್ಲ.

    2. ಬಿ.ಪಿ.ಎಲ್ ಕಾರ್ಡಿಂದ ಒಂದಿಷ್ಟು ಅನುಕೂಲಗಳು ಇರಬಹುದು ಹಾಗೆಯೇ ಹಲವಷ್ಟು ಅನಾನುಕೂಲಗಳೂ ಇರಬಹುದು. ನನ್ನ ವಿಚಾರ ಅದಲ್ಲವಲ್ಲ. ನಾನು ಹೇಳಲು ಹೊರಟಿರುವುದು ಭತ್ತ ಬೆಳೆದು ಆಹಾರಧಾನ್ಯವನ್ನು ಉತ್ಪಾಧಿಸುವ ಶ್ರಮಕ್ಕಿಂತ, ಕಾರ್ಡು ಮಾಡಿಸುವುದು ಒಳ್ಳೆಯದು ಎಂಬ ಅವರ ಅಭಿಪ್ರಾಯವನ್ನು. ಏಕೆಂದರೆ ಬಡವ ಎಂಬುದು ಸರ್ಕಾರ ನೀಡುವ ಕಾರ್ಡಿನಿಂದ ನಿರ್ಧಾರವಾಗುವುದರಿಂದ !!

    3. ಹೌದು, ಉತ್ಪಾಧನಾ ಸ್ಥಿತಿಯ ಕುರಿತು ವಿವರಿಸಲು ಅಂಕಿಅಂಶಗಳ ಅಗತ್ಯವಿದೆ ಎಂಬ ನಿಮ್ಮ ಅಭಿಪ್ರಾಯವನ್ನು ಗೌರವಿಸುತ್ತೇನೆ. ಆದರೆ ಅದನ್ನು ನಿಖರವಾಗಿ ಹೇಳಲು ಸಾಧ್ಯವೇ? ಅಂತಹ ಸಮೀಕ್ಷೆಗಳು ನಡೆದಿವೆಯೇ? ಕೋಟ್ಯಾಂತರ ಹಣ ಖರ್ಚುಮಾಡಿ ಮಾಡಿದ “ಜಾತಿ ಸಮೀಕ್ಷೆ”ಯಿಂದಲೇ ನಿಖರವಾಗಿ ಜಾತಿಗಳ ಅಂಕಿ ಅಂಶಗಳನ್ನು ನೀಡಲು ಸಾಧ್ಯವಾಗದಿರುವಾಗ ಇನ್ನೂ ಆಹಾರಧಾನ್ಯಗಳ ಉತ್ಪಾಧನೆ ಕುರಿತು ಹೇಳಲು ಸಾಧ್ಯವೇ? ನಾನು ನೀಡಿದರೂ ಅಂದಾಜು (ಊಹೆ ಮಾಡಿದ) ಅಂಕಿಅಂಶಗಳನ್ನು ನೀಡಬಹುದಷ್ಟೆ.
    ಮತ್ತೆ ಜನಪ್ರಿಯ ಲೇಖನಗಳು ಎಂದರೆ ಅವುಗಳು ಸಮಸ್ಯೆಯ ಕುರಿತು ಒಂದಷ್ಟು ಒಳನೋಟಗಳನ್ನು ನೀಡುತ್ತವೆ, ಅದನ್ನು ಅಂಕಿ-ಅಂಶಗಳ ಮೂಲಕ ಸಾಭೀತು ಮಾಡುವುದು ಸಂಶೋಧನಾ ಲೇಖನಗಳಲ್ಲಿ ನಡೆಯುವ ಪ್ರಕ್ರಿಯೆ. ಹಾಗೆಂದು ಬಾಯಿಗೆ ಬಂದತೆ ಸ್ವೀಪಿಂಗ್ ಹೇಳಿಕೆಯನ್ನೇನೂ ನೀಡಿಲ್ಲ.

    4. ಲಕ್ಷ ರೂ ಬೆಲೆಯ ವಸ್ತುವೊಂದು ಹಾದಿ ಬೀದಿಯಲ್ಲಿ ಸಿಕ್ಕಿದರೆ ಅದರ ಮೌಲ್ಯ ಹಾಗೆಯೇ ಇರುತ್ತದೆಯೇ? ನಾನು ಪದವಿ ಓದುವಾಗ ಮೊಬೈಲ್ ಗಳನ್ನು ನೋಡುವ ರೀತಿಗೂ ಈಗ ನೋಡುತ್ತಿರುವ ರೀತಿಗೂ ವ್ಯತ್ಯಾಸವಿದೆ. ಕಾರಣವಿಷ್ಟೆ, ಆಗ ಅದಕ್ಕಿದ್ದ ಮೌಲ್ಯಕ್ಕೂ ಈಗಿನ ವ್ಯಾಲ್ಯೂಗೂ ತುಂಬಾನೆ ವ್ಯತ್ಯಾಸವಿದೆ. ಈಗ ಹಾದಿಬೀದಿಯಲ್ಲಿ ಸಿಗುವ ವಸ್ತುವಾಗಿದೆ. ಈ ಅರ್ಥದಲ್ಲಿ ಕಷ್ಟಪಟ್ಟು ಉತ್ಪಾಧಿಸುವ ವಸ್ತುವಿಗೆ ಕನಿಷ್ಟ ಗೌರವ ಸಿಗಲು ಯಾವಾಗ ಸಾಧ್ಯ ಎಂದರೆ ಅದಕ್ಕೆ ತಗಲುವ ವ್ಯಚ್ಚದ ಬಹುಪಾಲನ್ನು ನೀಡಿ ಕೊಳ್ಳುವ ಸ್ಥಿತಿ ಇದ್ದಾಗ ಮಾತ್ರ. ಇದಕ್ಕೆ ಅಂಕಿ ಅಂಶಗಳ ವಿವರಣೆ ಅನಗತ್ಯ ಎಂದು ಭಾವಿಸುತ್ತೇನೆ.

    5. “ಲೇಖನ ಹೀಗೆಯೇ ಬರೆಯಬೇಕು” ಎಂಬ ನಿಮ್ಮ ನಿರೀಕ್ಷೆಯನ್ನು ಸಾಧಿಸುವುದಲ್ಲ ನನ್ನ ಲೇಖನದ ಆಶಯ. ಅನ್ನಭಾಗ್ಯದ ಮೂಲ ಸ್ವರೂಪದಲ್ಲಿ ಏನೇನು ಸಮಸ್ಯೆ ಇದೆ? ಅದರಿಂದಾಗಿ ಜಾರಿಯಾದ ಮೇಲೆ ಎಂತಹ ದುಷ್ಪರಿಣಾಮಗಳು ಎದುರಾಗಿವೆ ಎಂಬುದು ಒಟ್ಟಾರೆ ಲೇಖನದ ತಿರುಳು. ಅನ್ನಭಾಗ್ಯ ಎಂದರೆ ಆಹಾರಧಾನ್ಯಗಳನ್ನು ಹೆಚ್ಚುಕಡಿಮೆ ಪುಕ್ಕಟೆಯಾಗಿ ನೀಡುವುದು! ಆಹಾರಧಾನ್ಯವನ್ನು ನೀಡುವುದಕ್ಕೂ ಅದನ್ನು ಉತ್ಪಾಧಿಸುವುದಕ್ಕೂ ಸಂಬಂಧವಿಲ್ಲ ಎನ್ನುವ ನೀವು, ಅದನ್ನು ವಿವರಿಸುವ ಹೆಚ್ಚಿನ ಜವಾಬ್ದಾರಿಯನ್ನು ಹೊರುತ್ತೀರೇ ಹೊರತು ನಾನಲ್ಲ. ಹಾಗೂ ಒಂದು ವಸ್ತುವನ್ನು ನೀಡುವ ಬಗ್ಗೆ ಯೋಚಿಸುವ ಸರ್ಕಾರ ಅದರ ಉತ್ಪಾಧನೆಯ ಕಡೆಗೂ ಗಮನ ಕೊಡಬೇಕು. ಅದನ್ನು ಮಾಡದೇ ಹೋದರೆ ಅಸಮತೋಲನ ಉಂಟಾಗುತ್ತದೆ ಎಂಬುದನ್ನು ಒಪ್ಪದೇ ವಿಧಿಯಿಲ್ಲ.

    -ಧನ್ಯವಾದಗಳು

    ಉತ್ತರ
  7. Manjunath
    ಜುಲೈ 31 2015

    ಕೆಲವೆ ಜನರು ಎಂದರೆ ನೀವು ಹೇಳುವ 5% ಅಲ್ಲ ಎಂದಾಯಿತು, ಏಕೆಂದರೆ ಅದೆಷ್ಟಿದೆ ಎಂಬುದು ನಿಮಗೂ ತಿಳಿದಿಲ್ಲ, ಪ್ರಶ್ನೆ ಕೇಳಿದರೆ ಅಂದಾಜು ಮಾಡಿಕೊಳ್ಳಿ ಎಂಬ ಉತ್ತರ. ಅದರ ಬದಲು ಒಂದಷ್ಟು ಕೆಲವು ಎಂದು ಮೊದಲೇ ಹೇಳಿದ್ದರೆ ಈಗ ನಮ್ಮ ತಲೆಯ ಮೇಲೆ ಹಾಕುವ ಪ್ರಮೆಯವೇ ಬರುತ್ತಿರಲಿಲ್ಲ. ಓ. ಕೆ, ಅಂಕಿಸಂಖ್ಯೆಯನ್ನು ಬದಿಯಲ್ಲಿಡುವ, ಬಡವ ಎಂದರೆ ಯಾರು ಎಂಬುದು ದೊಡ್ಡ ಪ್ರಶ್ನೆಯೇನಲ್ಲ, ಪ್ರಶ್ನೆ ಚಿಕ್ಕದೆ ಸರ್, ಆದರೆ ಉತ್ತರ ದೊಡ್ಡದಿರಬಹುದು. ವಿಶ್ವಬ್ಯಾಂಕ್, ಮತ್ತಿತರ ಸಂಘಸಂಸ್ಥೆಗಳು ಬಡತನದ ವ್ಯಾಖ್ಯಾನವನ್ನು ನೀಡಿವೆ, ಸಾಧ್ಯವಾದರೆ ಓದಿ ನೋಡಿ. ಅವುಗಳು ಬಡತನದ ಬಗ್ಗೆ ಕೆಲವೊಂದು ವಿವರಣೆಯನ್ನು ಹಾಗು ನಿರ್ಧಾರಕ ಅಂಶಗಳನ್ನು ನೀಡಿವೆ, ಆಹಾರದ ಸೇವನೆ (ಕ್ಯಾಲೋರಿ ಪ್ರಮಾಣ), ಆದಾಯ, ವಾಸಿಸುವ ಮನೆ ಮುಂತಾದವುಗಳನ್ನು ಮಾನದಂಡವನ್ನಾಗಿರಿಸಿಕೊಂಡಿವೆ. ಅವೆಲ್ಲವೂ ಎಲ್ಲಾ ದೇಶಗಳಲ್ಲಿಯೂ ಎಲ್ಲಾ ಜನರಿಗೂ ಅನ್ವಯವಾಗುವುದಿಲ್ಲ, ಅದನ್ನು ವಿಶ್ವಬ್ಯಾಂಕ್ ಕೂಡ ಸ್ಪಷ್ಟಪಡಿಸಿದ್ದು, 2 ರೀತಿಯಲ್ಲಿ ಬಡತವನ್ನು ವಿಭಾಗಿಸಬಹುದು ಎಂದು ಹೇಳುತ್ತದೆ. ಆ ಮಾಹಿತಿ ಸಿಕ್ಕರೆ ಓದಿ ನೋಡಿ, ಇಷ್ಟೆಲ್ಲಾ ಹೇಳಿದ್ದಕ್ಕೆ ಕಾರಣ, ಈವರೆಗೂ ಬಡತನ ಮತ್ತು ಬಡವನ ಕುರಿತು ಇರುವ ನಿರ್ಧಾರಕ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಅಷ್ಟಿದ್ದರೂ ಬಡವ ಎಂದರೆ ಗೊತ್ತಾಗುತ್ತಿಲ್ಲವಾದರೆ, ನೀವು ಕೇಳುವ ಪ್ರಶ್ನೆಗೆ ಗಹನತೆ ಬರುತ್ತದೆ. ಇಲ್ಲವಾದರೆ ಅವೆಲ್ಲವನ್ನೂ ನೀವು ಕಡೆಗಣಿಸಿ ಆರಾಮಾಗಿ ಬಡವ ಎಂದರೆ ಯಾರು ಎಂಬುದೇ ದೊಡ್ಡ ಪ್ರಶ್ನೆ ಎಂದು ಹೇಳಿದರೆ ಅರ್ಥವಾಗುವುದಿಲ್ಲ. ನೀವು ಯಾವುದನ್ನು ಒಪ್ಪುತ್ತೀರೋ ಅದನ್ನೆ ಎಲ್ಲರೂ ಒಪ್ಪಬೇಕೆಂದಿಲ್ಲ,. ನೀವು ಒಪ್ಪುವುದು ಬಿಡುವುದು ನಿಮ್ಮ ಸ್ವಂತಕ್ಕೆ ಬಿಟ್ಟ ವಿಷಯ ಆದರೆ ಹೇಳಿಕೆಲ್ಲಿನ ಸಮಸ್ಯೆಗಳನ್ನು ತೋರಿಸುವುದು ಅವುಗಳನ್ನು ಒಪ್ಪುವುದು ಬಿಡುವುದು ಬೇರೆ ಬೇರೆ ವಿಷಯ. ಒಪ್ಪಿಸಬೇಕಾಗಿರುವುದನ್ನು ಸ್ಪಷ್ಟವಾಗಿ ಒಪ್ಪಿಸಿದರೆ, ನಿಮ್ಮ ಒಪ್ಪಿಗೆ ತಿರಸ್ಕಾರಗಳು ರಂಗ ಪ್ರವೇಶ ಮಾಡುವುದಿಲ್ಲ, ಅದರಿಂದ ಹೊರಗೆ ವಿಷಯದ ಕುರಿತ ಚರ್ಚೆಯಾಗುತ್ತದೆ.

    –ಮಂಜುನಾಥ್

    ಉತ್ತರ
  8. Manjunath
    ಜುಲೈ 31 2015

    ಬಿಪಿಎಲ್ ಕಾರ್ಡಿನಿಂದ ಬೇರೆ ಅನುಕೂಲ ಅನಾನುಕೂಲ ಗಳಿವೆ, ಅವನ್ನು ನಾನು ಹೇಳಿಲ್ಲವಲ್ಲ ಎಂದರೆ ಹೇಗೆ ಸರ್. ಅದರ ಅನುಕೂಲದ ಒಂದು ಮಗ್ಗಲನ್ನು ತಾವು ಹೇಳಿದರೆ, ಮತ್ತೊಂದನ್ನು ನಾನು ಹೇಳಿದೆ. ಅದರ ಅನುಕೂಲದ ಪ್ರಸ್ತಾಪ ಪ್ರಾರಂಭವಾಗಿದ್ದೇ ನಿಮ್ಮಿಂದ, ನಾ ಅದನ್ನು ಮುಂದುವರೆಸಿದೆ. ಬಡವ ಎಂಬುದು ಸರ್ಕಾರದ ಕಾರ್ಡಿನಿಂದ ನಿರ್ದಾರವಾಗುತ್ತದೆಯೆ? ಇದೊಂದು ರೀತಿ ಕೋಳಿ ಮೊದಲಾ ಮೊಟ್ಟೆ ಮೊದಲಾ ಅಂದಂಗೆ ಅನಿಸುತ್ತದೆ. ಹಾಗಲ್ಲವಾದರೆ ಅದ್ಹೇಗೆ ಕಾರ್ಡಿನಿಂದ ನಿರ್ದಾರವಾಗುತ್ತದೆಯೋ ನನಗೆ ಅರ್ಥವಾಗುತ್ತಿಲ್ಲ ಸರ್

    ನೀವು ಉತ್ತರಗಳಿಂದ ನಾನು ಕಂಡುಕೊಂಡಂತೆ ರೈತರು ಬೆಳೆದ ಉತ್ಪನ್ನಗಳಿಗೆ ಹೆಚ್ಚಿನ ಬೆಂಬಲಬೆಲೆ ನೀಡಬೇಕು, ಆಗ ಅದರ ಮೌಲ್ಯ ಹೆಚ್ಚುತ್ತದೆ ಎಂಬುದೆ? ಒಂದು ಪಕ್ಷ ಹಾಗೆ ಆಯಿತು ಎಂದುಕೊಳ್ಳಿ, ಆಗ ಅನ್ನಭಾಗ್ಯದ ಸಮಸ್ಯೆಗೂ ಕೃಷಿ ಸಮಸ್ಯೆಗೂ ಹೇಗೆ ಸಂಬಂಧ ಕಲ್ಪಿಸುತ್ತೀರಿ?

    ನೀವು ಲೇಖನ ಹೇಗೆ ಬರೆಯುತ್ತಿದ್ದಿರಿ, ಹೇಗೆ ಬರೆಯುತ್ತೀರಿ ಎಂದು ನಿಜವಾಗಿಯೂ ನನಗೆ ಯಾವ ನಿರೀಕ್ಷೆಯೂ ಇರಲಿಲ್ಲ. ಆದ್ದರಿಂದ ನನ್ನ ನಿರೀಕ್ಷೆಗಳೇನಿದ್ದವು ನೀವು ಏನು ಬರೆಯುತ್ತಿದ್ದಿರಿ ಎನ್ನುವುದು ಪರಸ್ಪರ ಸಂಧಿಸಿಯೇ ಇಲ್ಲವಾದ್ದರಿಂದ ಈ ನಿಮ್ಮ ಹೇಳಿಕೆಗೆ” “ಲೇಖನ ಹೀಗೆಯೇ ಬರೆಯಬೇಕು” ಎಂಬ ನಿಮ್ಮ ನಿರೀಕ್ಷೆಯನ್ನು ಸಾಧಿಸುವುದಲ್ಲ ನನ್ನ ಲೇಖನದ ಆಶಯ” ಯಾವ ಅರ್ಥವೂ ಇಲ್ಲ.( ಚೇತನ್ ಭಗತ್ ತನ್ನ ಹಾಫ್ ಗರ್ಲ್ ಫ್ರೆಂಡ್ ಪುಸ್ತಕ ಬರೆಯುವ 1 ವರ್ಷ ಮುಂಚೆಯೇ ಇಂತದ್ದೊಂದು ಪುಸ್ತಕ ಬರೆಯುತ್ತೇನೆ ಎಂದು ಪೇಪರ್ ನಲ್ಲಿ ಸುದ್ದಿ ಮಾಡಿ ಜನರಿಗೆ ನಿರೀಕ್ಷೆ ಹುಟ್ಟಿಸಿ ಪುಸ್ತಕ ಬರೆದಿದ್ದಾರಂತೆ,. ಅಂತಹ ನಿರೀಕ್ಷೆಯನ್ನು ಜನರಲ್ಲಿ ನೀವು ಬಿತ್ತಿದ್ದಿರಿ ಎಂದರೆ ನನಗೆ ತಲೆಕೆಟ್ಟಿದೆ ಎಂದು ನೀವೇ ಹೇಳೇಬಿಡುತ್ತೀರಿ)
    ಅದು ನಿಮ್ಮ ಲೇಖನ ನೀವು ಬರೆಯುವುದು ಹೇಗಾದರೂ ಬರೆದುಕೊಳ್ಳಿ, ನೋ ಪ್ರಾಬ್ಲಮ್, ನಾನು ಯಾವ ಸಲಹೆಯನ್ನೂ ತೆಗೆದುಕೊಳ್ಳಲು ತಯಾರಿಲ್ಲ ಎಂದು ಡೋರ್ ಕ್ಲೋಸ್ ಮಾಡಿಕೊಂಡು ಮಾತನಾಡುತ್ತಿದ್ದೀರಿ ಎಂದಾದರೆ, ಲೆಟ್ ಅಸ್ ಕ್ಲೋಸ್ ಟೈಮ್ ವೇಸ್ಟ್ ಬಿಸಿನೆಸ್.

    –ಮಂಜುನಾಥ್

    ಉತ್ತರ
  9. praveen Konandur
    ಆಗಸ್ಟ್ 4 2015

    – ಆಟವೇ ಗೊತ್ತಿಲ್ಲದವನೊಂದಿಗೆ ಚೆಸ್ ಆಡಿದಂತಾಯಿತು ನಿಮ್ಮೊಂದಿಗಿನ ನನ್ನ ಚರ್ಚೆ. ಹಿಂದಿನ ಪ್ರತಿಕ್ರಿಯೆಗಳಲ್ಲಿ ನಿಮ್ಮ ಅನುಮಾನ, ಪ್ರಶ್ನೆಗಳನ್ನು ಪ್ರಾಮಾಣಿಕವಾಗಿ ಬಗೆಹರಿಸುವ ಪ್ರಯತ್ನಮಾಡಿದ್ದೇನೆ. ಆದರೆ ಒಬ್ಬರು ಕೇಳುವ ಅನುಮಾನ, ಪ್ರಶ್ನೆಗಳೇ ಫೇಕ್ ಆಗಿದ್ದರೆ ಕೊನೆಗೆ ಹೀಗೇ ಆಗುವುದು. ಚರ್ಚೆಯಲ್ಲಿ ನೀವು ಹೇಗೆ ಬೇಕಾದರೂ ಮಾತನಾಡಬಹುದು, ಎದುರಾಳಿ ಮಾತ್ರ ಸೌಮ್ಯವಾಗಿ, ಸಾತ್ವಿಕರಾಗಿರಬೇಕೆಂಬುದನ್ನು ಬಯಸಿದರೆ, ಅದು ಅಸಹಜ.
    -ಬಡತನದ ಕುರಿತು, ಕೃಷಿಯ ಕುರಿತು, ಬೆಲೆ ನಿಗಧಿಯ ಕುರಿತು ಸಣ್ಣ ಸಂಸ್ಥೆಗಳಿಂದ ಹಿಡಿದು ವಿಶ್ವಸಂಸ್ಥೆ ವರೆಗೂ ವರದಿಗಳು ರಾಶಿ ರಾಶಿ ಬಿದ್ದಿವೆ. ಅದನ್ನೆಲ್ಲಾ ಓದಿ ಎಂದಾಕ್ಷಣ ದೊಡ್ಡ ಚರ್ಚಾಪಟು ಆಗುತ್ತೀರೆಂಬ ಕನಸು ಕಾಣಬೇಡಿ. ಇದು ಚರ್ಚೆಯ ತಂತ್ರಗಳಲ್ಲಿ ಅತ್ಯಂತ ಹಳೆಯದು. ಅದು ವಾದಮಂಡನೆಯ ಕ್ರಮವೇನೂ ಅಲ್ಲ. ಉದಾ: ನ್ಯೂಟನ್ ಗುರುತ್ವಾಕರ್ಷಣೆಯ ಕುರಿತು ವಾದಮಂಡಿಸುವಾಗ ಅಧ್ಯಯನ ಮಾಡಿರುವುದು ಕೆಲವೇ ವಸ್ತುಗಳನ್ನು, ಹಾಗೆಂದು ಭಾರತದಲ್ಲಿನ ಹಲಸಿನ ಹಣ್ಣನ್ನು, ಮಾವಿನ ಹಣ್ಣನ್ನು, ದ್ರಾಕ್ಷಿ ಹಣ್ಣನ್ನು ಆತ ಅಧ್ಯಯನ ಮಾಡಿಲ್ಲ ಎಂದು ಯಾರಾದರೂ ಆಕ್ಷೇಪಿಸಿದರೆ ಅದು ಆತನ ಮೂರ್ಖತನವಾಗುತ್ತದೆಯೇ ಹೊರತು ನ್ಯೂಟನದಲ್ಲ. ಏಕೆಂದರೆ ಇವುಗಳನ್ನು ಅಧ್ಯಯನ ಮಾಡಿ ನ್ಯೂಟನ್ ಹೇಳಿರುವುದರಲ್ಲಿ ಏನು ತಪ್ಪಿದೆ ಎಂದು ತೋರಿಸುವ ಜವಾಬ್ದಾರಿ ಆಕ್ಷೇಪಣಾಕಾರನದಾಗುತ್ತದೆಯೇ ಹೊರತು ನ್ಯೂಟನದಲ್ಲ.
    -ಭಾರತದಲ್ಲಿ ಬಡತನ ರೇಖೆಗಿಂತ ಕೆಳಗಿರುವವರನ್ನು ಹೇಗೆ ಗುರುತಿಸುತ್ತಿದ್ದಾರೆ? ಬಿ.ಪಿ.ಎಲ್. ಕಾರ್ಡು. ಆ ಕಾರ್ಡುಗಳು ಹೇಗೆ ನೀಡಲ್ಪಟ್ಟಿವೆ ಎಂಬುದನ್ನು ತಿಳಿಯಲು ವಿಶ್ವಸಂಸ್ಥೆಯ ವರದಿಗಳು ಬೇಕಿಲ್ಲ. ಒಂದು ಎಕರೆ ಜಮೀನಿರುವ ಅದೆಷ್ಟೋ ಕುಟುಂಬಗಳು ಎ.ಪಿ.ಎಲ್(above poverty line) ಎಂದೂ, 4ರಿಂದ 5 ಎಕರೆ ಜಮೀನಿರುವ ಎಷ್ಟೋ ಕುಟುಂಬಗಳು ಬಿ.ಪಿ.ಎಲ್ (below poverty line) ಎಂದು ಗುರುತಿಸಲ್ಪಟ್ಟಿವೆ(ಅದೂ ಒಂದೇ ಗ್ರಾಮದಲ್ಲಿ) . ಹೀಗಿರುವಾಗ ಬಡತನದ ಕುರಿತ ವಿಶ್ವಸಂಸ್ಥೆಯ ವ್ಯಾಖ್ಯಾನವನ್ನಿಟ್ಟುಕೊಂಡು ಏನು ಮಾಡುವಿರಿ? ಇಲ್ಲವೆಂದಾದರೆ ಮೇದಾವಿಗಳಾದ ನೀವಾದರೂ ಸ್ಪಷ್ಟಪಡಿಸಬೇಕು ಬಡತನ ಎಂದರೆ ಇದು ಎಂದು… ಆಗ ಚರ್ಚೆ ಮುಂದುವರೆಸಬಹುದು.. ಅದನ್ನು ಬಿಟ್ಟು ಸ್ವೀಪಿಂಗ್ ಹೇಳಿಕೆ, (ಈಗಾಗಲೇ ಹೇಳಿದಂತೆ ಬಿ.ಪಿ.ಎಲ್ ಕಾರ್ಡಿನ ಅನುಕೂಲ, ಅನಾನುಕೂಲದ ಪ್ರಶ್ನೆಯನ್ನು ಲೇಖನ ಚರ್ಚಿಸುತ್ತಿಲ್ಲ. ಹೀಗಿರುವಾಗ ಅದರ ಅನುಕೂಲತೆಗಳ ಪಟ್ಟಿಯನ್ನು ಯಾವ ಪುರುಷಾರ್ಥ ಸಾಧನೆಗೆ ನೀಡುತ್ತಿದ್ದೀರಿ? )
    – ಬೆಂಬಲ ಬೆಲೆ ಪರಿಹಾರವಲ್ಲ, ಆದರೆ ಅನ್ನಭಾಗ್ಯವನ್ನು ಸೀಮಿತಗೊಳಿಸಿದರೆ, ಅನಿವಾರ್ಯವಾಗಿ ಅಕ್ಕಿ, ಗೋಧಿ, ರಾಗಿಯನ್ನು ಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ, ಆಗ ಬೆಂಬಲ ಬೆಲೆ ಘೋಷಿಸುವ ಅಗತ್ಯವೇ ಇಲ್ಲ, ತಾನಾಗಿಯೇ ಈ ಆಹಾರಧಾನ್ಯಗಳಿಗೆ ಬೆಲೆ ಹೆಚ್ಚಾಗುತ್ತೆ, ಕೃಷಿಗೂ ಪ್ರೋತ್ಸಾಹ ಸಿಗುತ್ತದೆ. ಇಷ್ಟು ಸರಳ ವಿಚಾರವನ್ನೇಕೆ ಕಗ್ಗಂಟು ಮಾಡುತ್ತಿರುವಿರೋ ತಿಳಿಯದು…
    -finally one more thing I have no time to flirt (time waste business) with you… okay…

    ಉತ್ತರ
  10. Manjunath
    ಆಗಸ್ಟ್ 4 2015

    ನಿಮ್ಮ ರಿಪ್ಲೆ ನೋಡಿ ಮೊದಲು ಟೈಪ್ ಮಾಡಿದ್ದನ್ನು ಅಳಿಸಿಹಾಕಿದ್ದೇನೆ, ಅದನ್ನು ಹಾಕಿದ್ದರೆ ನಮಗೂ ನಿಮಗೂ ವ್ಯತ್ಯಾಸವಿರುವುದಿಲ್ಲ
    ನೀವು ಹಲವಾರು ಗೇಮ್ ಗಳಲ್ಲಿ ನಿಪುಣರಿರಬಹುದು ಅದನ್ನು ನಿಮ್ಮ ನೆರೆಹೊರೆಯವರೊಂದಿಗೆ ಆಟವಾಡಿಕೊಳ್ಳಿ, ಇಂತ ವೈಯಕ್ತಿಕ ದೋಷಾರೋಪಣೆ ಬಿಟ್ಟು (ಚರ್ಚಾಪಟು ಕನಸು ಪುರುಷಾರ್ಥದಸಾಧನೆ ಆಟವೇ ಗೊತ್ತಿಲ್ಲದವರು) ಉತ್ತರ ಗೊತ್ತಿದ್ದರೆ ಉತ್ತರಿಸಿ ಇಲ್ಲವಾದರೆ..ಹೋಗಲಿ ನಿಮ್ಮಷ್ಟು ಹೊಲಸಾಗಿ ಮಾತನಾಡುವುದು ಬೇಡ. ನೀವು ಮೇಧಾವಿಗಳು ಉತ್ತರ ನೀಡಿ ಸಾಕು, ಉಳಿದದ್ದನ್ನು ಮತ್ತೆ ಮಾತನಾಡುವ
    ಯಾವ ಪ್ರಶ್ನೆಗಳು ಫೇಕ್? ಮತ್ತೆ ಯಾಕೆ ಫೇಕ್?
    ನಿಮ್ಮಿಂದ ಸೌಮ್ಯವಾದ ಪ್ರತ್ಯತ್ತರದ ನಿರೀಕ್ಷೆ ನನಗಿಲ್ಲ, ಎಷ್ಟು ಖಾರವಾಗಿ ಕೊಡಲು ಸಾಧ್ಯವಿದಯೊ ಅಷ್ಟು ಕೊಡಿ, ಮತ್ತೆ ಹಾಗೆಯೇ ವಾಪಾಸು ತೆಗೆದುಕೊಳ್ಳುಲು ರೆಡಿ ಇರಿ.
    -ಮಂಜುನಾಥ್

    ಉತ್ತರ
  11. Manjunath
    ಆಗಸ್ಟ್ 5 2015

    ನ್ಯೂಟನ್ ನ ಉದಾಹರಣೆಯನ್ನು ತೆಗೆದುಕೊಂಡಿದ್ದೀರಿ ಒಳ್ಳೆಯದೆ ಆಯಿತು. ಕನಿಷ್ಟ ನ್ಯೂಟನ್ ಅಧ್ಯಯನ ನಡೆಸಿದ ರೀತಿಯಲ್ಲಿ ಬಡತನವನ್ನುನೀವು ಅಧ್ಯಯನ ಮಾಡಿಲ್ಲ, ಅದನ್ನು ನಾನು ಹೇಳುತ್ತಿರುವುದು, ಎಲ್ಲಿಯಾದರೂ ಬಡತನದ ಎಂದರೆ ಇದು ಅಥವ ಅದು, ಇಲ್ಲವೆ ಈಗಿರುವ ಹೇಳಿಕೆಗಳಲ್ಲಿ ತೊಂದರೆ ಇದೆ ಎಂದು ತೋರಿಸಿದ್ದೀರಾ, ಇಲ್ಲ ಅದನ್ನೆಲ್ಲವನ್ನೂ ಮಾಡದೆ ಬಡವ ಎಂದು ಗುರುತಿಸುವುದೇ ದೊಡ್ಡ ಸಮಸ್ಯೆ ಎಂದಿರಿ, ಅದಕ್ಕೆ ಅದಕ್ಕೆ ಕೆಲವು ವಿವರಣೆಗಳಿವೆ ಎಂದರೆ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತೀರಿ ಇದು ಯಾವುದೇ ತಂತ್ರ ಷಡ್ಯಂತ್ರ ಅಲ್ಲ ನಿಮ್ಮ ರಿಪ್ಲೆಗೆ ನೀಡುತ್ತುರುವ ರಿಪ್ಲೆ ಅಷ್ಟೆ. ನೀವು ಸ್ಪಷ್ಟವಾಗಿ ಮಾತನಾಡದೆ ವೈಯುಕ್ತಿಕವಾಗಿ ನಿಂದನೆಗಿಳಿಯುವುದು ಮಾಡಿದರೆ ಅದಕ್ಕೂ ರೆಡಿ,
    ಬಡತನದಬಗ್ಗೆ ಸರ್ಕಾರಗಳು ಎಂದಿನಿಂದ ಮಾತನಾಡುತ್ತಿವೆ, ಬಿಪಿಎಲ್ ಕಾರ್ಡ್ ಎಂದಿನಿಂದ ನೀಡುತ್ತಿದ್ದಾರೆ ಎಂಬ ಸ್ವಲ್ಪ ಮಾಹಿತಿಯನ್ನಾದರೂ ಕಲೆಹಾಕಿ, ಆ ಎರಡೂ ಕ್ರಿಯೆಗಳ ಕಾಲಗಳ ನಡುವೆ ವ್ಯತ್ಯಾಸ ವಿದೆ (ಇದು ಚರ್ಚಾಪಟು ಆಗುವ ಕನಸಿನಿಂದ ಹೇಳುತ್ತಿಲ್ಲ) ಬಿಪಿ ಎಲ್ ನಿಂದಲೇ ಬಡತನದ ವ್ಯಾಖ್ಯಾನ ಶುರುವಾಗಿಲ್ಲ ಕಾರ್ಡುಬಂದದ್ದು ನಂತರದ ಕಾಲಘಟ್ಟದಲ್ಲಿ, ಬಡವರಿಗೆ ಅನುಕೂಲವಾಗಲೆಂದು ಬಿಪಿಎಲ್ ನ್ನು ಪ್ರಾರಂಭಿಸಿದ್ದು, ಅದರ ಅರ್ಥ ಬಿಪಿಎಲ್ ಗಿಂತ ಮುಂಚೆ ಬಡತನವನ್ನು ವಿವರಿಸಿದ್ದಾರೆ.ಬಿಪಿಎಲ್ ನಿಂದ ಬಡತನದ ವ್ಯಾಖ್ಯಾನ ಹುಟ್ಟಿದೆಯೋ ಅಥವಾ ಬಡತನ ಇರುವುದಕ್ಕೆ ಬಿಪಿಎಲ್ ಬಂದಿದಿಯೋ ? ಇಷ್ಟನ್ನೂ ತಿಳಿಯದೆ ರೇಗಿದರೆ ಅದರಲ್ಲಿ ಯಾವ ಪುರುಷಾರ್ಥವೂ ಸಾಧನೆಯಾಗಲಾರದು.

    ತುಂಬಾ ಸರಳ ವಿಚಾರ ಹೇಳಿತ್ತೀದ್ದೀರ ಅಲ್ಲವೆ, ಅನ್ನಭಾಗ್ಯಕ್ಕಿಂತ ಮುಂಚೆ ಬೆಂಬಲ ನೀಡದೇ ಇದ್ದಿದ್ದರೂ ನೀವು ಹೇಳುವ ಸಮಸ್ಯೆ ಇರಬಾರದಿತ್ತು, ಅದು ಸತ್ಯವೆ? ಅನ್ನಭಾಗ್ಯಕ್ಕಿಂತ ಮುಂಚೆ ಅನ್ನಭಾಗ್ಯದಿಂದ ಕೃಷಿಯ ಮೇಲಾಗಿದೆ ಎಂದು ಗುರುತಿಸಿವ ಸಮಸ್ಯೆ ಅದಕ್ಕಿಂತ ಮುಂಚೆ ಇರಲಿಲ್ಲ ಎನ್ನಬಹುದೆ?

    ಸಿಟ್ಟು ಸೆಡವು ನಿಮಗಿಂತ ಹೆಚ್ಚಾಗಿ ನಮಗೂ ಬರುತ್ತದೆ, ವಿಷಯದ ಕುರಿತು ಚರ್ಚೆ ಮಾಡುವಾಗ ಅನಗತ್ಯ

    ನೀವೇನೋ ಪ್ರಾಮಾಣಿಕವಾಗಿ ಉತ್ತರ ಕೊಡುವುದು ನಾವೇನೋ ಗುಲಾಮರ ರೀತಿಯಲ್ಲಿ ಕೇಳಬೇಕಾಗಿರುವುದು,ಬಿಡಿ ಅಂತಹ ಧೋರಣೆ ಇಂತಹ ವಾಗ್ವಾದಗಳಿಗೆ ಅಗತ್ಯವಿಲ್ಲ. ನಿಮಗೆ ಇಷ್ಟೆಲ್ಲಾ ಪ್ರಶ್ನೆ ಕೇಳುತ್ತಿರುವುದು ನಾನು ಹತ್ತಿಬೆಳೆಗಾರರ ಸಮಸ್ಯೆಯ ಕುರಿತು ಅಧ್ಯಯನ ನಡೆಸುತ್ತಿದ್ದೇನೆ, ಯಾರೋ ಸ್ನೇಹಿತರು ಈ ಲೇಖನವನು ಹೇಳಿದರು, ನೋಡಿ ಅನುಮಾನ ಕೇಳಿದರೆ ವಿಚಿತ್ರವಾಗಿ ಆಡುತ್ತಿದ್ದೀರಿ, ನಿಮಗೆ ಮಾತನಾಡಲು ಇರಿಟೇಟ್ ಆಗುತ್ತಿದ್ದರೆ ಬಿಟ್ಟುಬಿಡಿ ನೋ ಪ್ರಾಬ್ಲಂ, ತೀರಾ ವೈಯುಕ್ತಿವಾಗಿ ತೆಗೆದುಕೊಂಡು ರೋದಿಸುವ ಻ಗತ್ಯವಿಲ್ಲ.

    ಉತ್ತರ
  12. Manjunath
    ಆಗಸ್ಟ್ 6 2015

    ನಿಮ್ಮ ಕೆಲವು ಚರ್ಚೆಗಳನ್ನು ಫೇಸ್ ಬುಕ್ ನಲ್ಲಿ ನೋಡಿರುವೆ ಅದರಲ್ಲಿ ನೀವು ಹಲವು ಸಂಶೋಧಕರು ಆ ಪುಸ್ತಕ ಓದಿಲ್ಲ ಈ ಪುಸ್ತಕ ಓದಿಲ್ಲ ಅದನ್ನು ಓದಿಕೊಂಡು ಬನ್ನಿ ಚರ್ಚಿಸೋಣ ಎಂದು ಹೇಳಿದ್ದೀರಿ, ಈಗ ನಾನು ಹೇಳಿದ್ದಕ್ಕೆ ತಂತ್ರ ಎಂದು ಹೇಳ್ತೀರಿ, ಹಾಗಾದ್ರೆ ನಿಮ್ಮ ಚರ್ಚೆಗಳಲ್ಲಿ ನೀವು ಮಾಡಿದ್ದೂ ತಂತ್ರವೆ?

    ಉತ್ತರ
  13. Praveen Konandur
    ಆಗಸ್ಟ್ 6 2015

    ಗುರುವೇ ನನ್ನ ಇಡೀ ಚರ್ಚೆಯಲ್ಲಿ ಸಿಟ್ಟು ಸೆಡವಿನ ತೋರ್ಪಡಿಕೆ ಎಲ್ಲಿದೆ? ಚರ್ಚೆಯಲ್ಲಿ ಭಾಗವಹಿಸಲು ಬರುವುದಿಲ್ಲ ಎಂದು ಹೇಳಿದ್ದೇನೆ. ಈಗಲೂ ಅದನ್ನೇ ಹೇಳುತ್ತಿರುವೆ. ಮೇಲಿನ ಚರ್ಚೆಯನ್ನು ಗಮನಿಸಿದ ಯಾರಿಗಾದರೂ ಸ್ಪಷ್ಟವಾಗುತ್ತದೆ. ಅದಕ್ಕೆ ಸ್ಪಷ್ಟ ಕಾರಣಗಳನ್ನು ನೀಡುತ್ತೇನೆ.
    1. ನಿಮಗೆ ಜನಪ್ರಿಯ ಲೇಖನ, ಸಂಶೋಧನಾ ಲೇಖನಕ್ಕೂ ಇರುವ ವ್ಯತ್ಯಾಸ ತಿಳಿಯುವುದಿಲ್ಲ ಎನ್ನುತ್ತೀರಿ. ಮತ್ತೊಂದುಕಡೆ, ನಾನು ಹತ್ತಿಬೆಳೆಗಾರರ ಸಮಸ್ಯೆಯ ಕುರಿತು ಅಧ್ಯಯನ ಮಾಡುತ್ತಿದ್ದೇನೆಂದು ಹೇಳುತ್ತಿರುವಿರಿ. ಅಧ್ಯಯನಕಾರನೊಬ್ಬನು ಪ್ರಾಥಮಿಕವಾಗಿ ತಿಳಿಯ ಬೇಕಿರುವ ವಿಚಾರ ಇದಲ್ಲವೇ?

    2. ಬಡತನ ಮೊದಲೋ, ಬಿ.ಪಿ.ಎಲ್ ಕಾರ್ಡು ಮೊದಲೋ ಎಂಬ ಘನ ಪ್ರಶ್ನೆಯನ್ನು ಕೇಳಿದ್ದೀರಿ, ನಾನು ಎಲ್ಲಾದರೂ ಬಿ.ಪಿ. ಎಲ್ ಕಾರ್ಡಿನಿಂದಾಗಿ ಬಡತನದ ಸಮಸ್ಯೆ ಉದ್ಬವಿಸಿದೆ ಎಂದು ವಾದಿಸಿದ್ದೇನೆಯೇ? ಬಡತನ ಹಿಂದೆಯೂ ಇತ್ತು, ಈಗಲೂ ಇದೆ. ಆದರೆ ಇಂದು ಬಡತನವನ್ನು ಗುರುತಿಸುವ ಮಾನದಂಡ ಯಾವುದು ಎಂಬುದನ್ನು ವಿವರಿಸಿದ್ದೇನೆ. ನೀವು ಹೇಳುವ ಆಹಾರ ಸೇವನೆ, ವಾಸಸ್ಥಾನ, ಆಸ್ತಿ ಇತ್ಯಾದಿ ಎಲ್ಲಾ ಎಷ್ಟರ ಮಟ್ಟಿಗೆ ಬಡತನವನ್ನು ನಿರ್ಧರಿಸುವ ಅಂಶಗಳಾಗಿವೆ? ಈ ಅಂಶಗಳು ಆಗಿಲ್ಲ ಎಂಬುದನ್ನು ತೋರಿಸಲು ನ್ಯೂಟನ್ ಮಾಡಿದ ರೀತಿಯ ಸಂಶೋಧನೆ ಅಗತ್ಯವಿಲ್ಲ ಎಂಬುದನ್ನು ಮೇಲೆಯೇ ತೋರಿಸಿದ್ದೇನೆ. ಅಂದರೆ ಹೆಚ್ಚು ಆಸ್ತಿ, ಕಾರು, ಬಂಗಲೆ ಹೊಂಧಿರುವ ಅದೆಷ್ಟೋ ಮನೆಗಳಲ್ಲಿ ಬಿಪಿಎಲ್ ಇದೆ ಎಂದರೆ ನೀವು ಹೇಳುವ ಅಂಶಗಳ್ಯಾವು ಸಹ ಬಡತನವನ್ನು ನಿರ್ಧರಿಸುತ್ತಿಲ್ಲ ಎಂದರ್ಥ.
    ಹೀಗೆ ಸ್ಪಷ್ಟವಾಗಿ ವಿವರಿಸಿದ ಮೇಲೆಯೂ ಬಿ.ಪಿ.ಎಲ್ ಕಾರ್ಡಿನಿಂದಾಗಿ ಬಡತನ ಹುಟ್ಟುತ್ತಿದೆ ಎನ್ನುವ ಎಳಸು ವಾದವನ್ನು ನಾನು ಮಾಡುತ್ತಿರುವೆನೆಂದು ಗ್ರಹಿಸುತ್ತೀರಿ.. ಹೀಗಿರುವಾಗ ನಿಮ್ಮೊಂದಿಗೆ ಚರ್ಚೆ ಹೇಗೆ ಸಾಧ್ಯ?

    3. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಿದ ಮೇಲೂ ಸ್ವೀಪಿಂಗ್ ಹೇಳಿಕೆ ಎಂದು ಹೇಳುತ್ತೀರ, ಸ್ವೀಪಿಂಗ್ ಹೇಳಿಕೆ ಎನ್ನಲು ನಿಮಗೆ ಅಂಕಿ ಅಂಶಗಳ ಅಗತ್ಯ ಇಲ್ಲವೇ ಇಲ್ಲ. ಬದಲಾಗಿ ಉಳಿದ ಎಲ್ಲದಕ್ಕೂ ನಿಮಗೆ ಅಂಕಿ ಅಂಶಗಳು ಅಗತ್ಯವಾಗಿ ಬಿಡುತ್ತದೆ. ಅಂಕಿ ಅಂಶಗಳ ಸತ್ಯಾಸತ್ಯತೆಯ ಪ್ರಶ್ನೆಯನ್ನು ನಾನು ಎತ್ತಿದ್ದೇನೆ. ಆ ಕುರಿತು ನಿಮ್ಮದು ದಿವ್ಯಮೌನ. ಕೋಟಿಗಟ್ಟಲೇ ಖರ್ಚುಮಾಡಿರುವ ಜಾತಿ ಸಮೀಕ್ಷೆಯೇ ಸರಿಯಾದ ಮಾಹಿತಿಯನ್ನು ನೀಡಲು ವಿಫಲವಾಗಿರುವಾಗ, ಅಂತಹ ಸಮೀಕ್ಷೆಯೇ ನಡೆಯದ ಆಹಾರಧಾನ್ಯಗಳ ಕುರಿತು ಖಚಿತ ಮಾಹಿತಿ ನೀಡಲು ಸಾಧ್ಯವೇ? ಸಾಧ್ಯ ಎಂಬುದಾದರೆ, ನೀವು ಅದನ್ನು ತೋರಿಸಬೇಕಾಗುತ್ತದೆ ಎಂದು ಈ ಹಿಂದೆ ಹೇಳಿದ್ದೇನೆ. ಅಂತಹ ಪ್ರಶ್ನೆಗಳಿಗೆ ಉತ್ತರಿಸುವ ಗೋಜಿಗೆ ಹೋಗದ ನೀವು, ನಮ್ಮ ಚರ್ಚೆಯನ್ನು “ಟೈಮ್ ವೇಸ್ಟ್ ಬಿಸಿನೆಸ್” ಎಂದು ತೀರ್ಪಿಡುತ್ತೀರ. ಇದು ಚರ್ಚಿಸುವ ಪರಿಯೇ? ಅದೂ ಓರ್ವ ಅಧ್ಯಯನಕಾರರಾಗಿ…!

    ಉತ್ತರ
  14. Manjunath
    ಆಗಸ್ಟ್ 6 2015

    ಶಿಷ್ಯ ಹತ್ತಿಬೆಳೆಗಾರರ ಬಗ್ಗೆ ಅಧ್ಯಯನ ನಡೆಸಲಿಕ್ಕೆ ಅಥವ ಅಧ್ಯಯನಕಾರನೊಬ್ಬನಿಗೆ ನೀವು ಹೇಳುವ ಪ್ರಾಥಮಿಕ ಜ್ಞಾನದ ಅಗತ್ಯವಿಲ್ಲ, ಅದನ್ನು ಯಾವ ಸಂಶೋಧನಾ ಗ್ರಂತವೂ ತಿಳಿಸಿಲ್ಲ,
    “ಏಕೆಂದರೆ ಬಡವ ಎಂಬುದು ಸರ್ಕಾರ ನೀಡುವ ಕಾರ್ಡಿನಿಂದ ನಿರ್ಧಾರವಾಗುವುದರಿಂದ” ಇದು ನಿಮ್ಮದೇ ಹೇಳಿಕೆ ಇದರ ಮೇಲೆ ನಾನು ಪ್ರಶ್ನೆಯನ್ನು ಕೇಳಿದ್ದು, ಬಿಪಿಎಲ್ ಕೊಡುವುದರಲ್ಲಿ ಸಮಸ್ಯೆ ನೂರರಿಬಹುದು ಅದನ್ನ ನಾನುಒಪ್ಪುತ್ತೇನೆ, ತಾರಸಿ ಮನೆ ಕಾರುಗಳನ್ನು ಇಟ್ಟುಕೊಂಡವರೂ ಆ ಕಾರ್ಡನ್ನು ಹೊಂದಿದ್ದಾರೆ. ಪ್ರಶ್ನೆ ಅದಲ್ಲ, ಕಾರ್ಡಿನ ಹೊರತಾಗಿ ಬಡತವನ್ನು ವ್ಯಾಖ್ಯಾನಿಸಿದ್ದಾರೆ, ಅಂತಹ ವ್ಯಾಖ್ಯಾನಕ್ಕೆ ಜೊತೆಯಾಗಿ ಬಂದಿರುವುದು ಈ ಕಾರ್ಡುಗಳು. ಆದ್ದರಿಂದ ನಿಮ್ಮ ಹೇಳಿಕೆಯ ಅರ್ಥವೇನು ಎಂದು ಗೊತ್ತಾಗಲಿಲ್ಲ.
    ನಾನು ಎಲ್ಲಿಯಾದರೂ ಬಿಪಿಎಲ್ ನಿಂದಾಗಿ ಬಡತನದ ಸಮಸ್ಯೆ ಉದ್ಭವಿಸಿದೆ ಎಂದು ತಾವು ಹೇಳಿದ್ದೀರಾ ಅಂತ ಹೇಳಿದ್ದೇನೆಯೆ? ನೀವ್ಯಾಕೆ ಅವಸರದಲ್ಲಿ ಓದಿ ಅಪಾರ್ಥಮಾಡಿಕೊಂಡು ನಾನು ಹೇಳದೆ ಇರುವುದನ್ನು ಹೇಳಿದ್ದೇನೆಂದು ಭಾವಿಸುತ್ತೀರಿ.
    ಚರ್ಚೆಯಲ್ಲಿ ಭಾಗವಹಿಸಲು ನಿಮಗೆ ಬರದಿರಬಹುದು ಅದಕ್ಕೆ ನಾನೇನು ಮಾಡಲು ಆಗುವುದಿಲ್ಲ
    ಫೇಕ್ ಪ್ರಶ್ನೆಗಾಳವುವು ಅವ್ಯಾಕೆ ಫೇಕ್ ಎಂದು ಕೃಪೆಮಾಡಿ ತಿಳಿಸಿಕೊಡಬೇಕು, ಅದರ ನಂತರ ನನ್ನ ಉತ್ತರ ನೀಡುತ್ತೇನೆ,
    ಚರ್ಚೆ ಮಾಡುವುದಕ್ಕೆ ಯಾರಿಗೆ ಬರುತ್ತದೆಯೋ ಇಲ್ಲವೋ ಎನ್ನುವುದನ್ನು ನಾನೂ ಕೊನೆಗೆ ಸಾರಾಂಶಿಕರಿಸಿ ಹೇಳುತ್ತೇನೆ, ಅದಕ್ಕೆ ನಿಮ್ಮ ನೋಟರಿ ಬೇಕಾಗಿಲ್ಲ

    ಉತ್ತರ
  15. Praveen Konandur
    ಆಗಸ್ಟ್ 8 2015

    -ಅಧ್ಯಯನಕಾರನಿಗೆ ಗೊತ್ತಿರಬೇಕಾದ ಪ್ರಾಥಮಿಕ ಜ್ಞಾನ ಅಲ್ಲವೇ?!!! ಹೋಗಲಿ ಬಿಡಿ…
    -ಬಡತನದ ಕುರಿತು ನೀವು ಒಪ್ಪಿ ಮೆಚ್ಚಿರುವ ವ್ಯಾಖ್ಯಾನವನ್ನು ನೀಡಿ,. ಹಾಗೂ ಆ ವ್ಯಾಖ್ಯಾನವು ಈ ಲೇಖನದ ವಾದವನ್ನು ಹೇಗೆ ತಿರಸ್ಕರಿಸುತ್ತದೆ ವಿವರಿಸಿ… ಮುಂದೆ ಚರ್ಚಿಸುವ ಗುರುಗಳೇ…!!
    -ಇಲ್ಲವೆಂದಾದರೆ, ಚರ್ಚೆಮಾಡಲು ನನಗೆ ಬರುವುದಿಲ್ಲ ಎಂಬುದನ್ನ ಸಾರಾಂಶೀಕರಿಸಿ ತೋರಿಸಿ..
    .

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments