ವಿಷಯದ ವಿವರಗಳಿಗೆ ದಾಟಿರಿ

ಜುಲೈ 25, 2015

ಬೌದ್ಧಿಕ ದಾಸ್ಯದಲ್ಲಿ ಭಾರತ -ಪುಸ್ತಕ ವಿಮರ್ಶೆ

‍CSLC Ka ಮೂಲಕ

10486303_10203241844001574_2174162009372000721_n‘ಒಪ್ಪಿತ ಸತ್ಯ’ಗಳನ್ನು ಪ್ರಶ್ನಿಸುವ ಕೃತಿ

 – ಡಾ. ಪ್ರವೀಣ ಟಿ. ಎಲ್. & ಶಿವಕುಮಾರ ಪಿ. ವಿ. ಶಿವಮೊಗ್ಗ

   ಬೌದ್ಧಿಕ ದಾಸ್ಯದಲ್ಲಿ ಭಾರತ ಎಂಬ ಕೃತಿಯು ನಿಲುಮೆ ಪ್ರಕಾಶನದ ಚೊಚ್ಚಲ ಪುಸ್ತಕವಾಗಿ ದಿನಾಂಕ-01-03-2015ರಂದು ಲೋಕಾರ್ಪಣೆಗೊಂಡಿತು. ಈ ಕೃತಿಯು ಬಾಲಗಂಗಾಧರರವರ ವಿಚಾರಗಳ ಕನ್ನಡ ರೂಪಾಂತರವಾಗಿದೆ. ಬಾಲುರವರು ಕಳೆದ ಒಂದು ದಶಕದಿಂದಲೂ ಕನ್ನಡದ ಬುದ್ಧಿಜೀವಿ ವಲಯದಲ್ಲಿ ಚಿರಪರಿಚಿತರು. ಅವರ ಹೀದನ್ ಇನ್ ಹಿಸ್ ಬ್ಲೈಂಡ್ನೆಸ್ ಎಂಬ ಕೃತಿಯು ಸ್ಮೃತಿ-ವಿಸ್ಮೃತಿ ಭಾರತೀಯ ಸಂಸ್ಕೃತಿ ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದಗೊಂಡಿದ್ದು ಸಾಂಸ್ಕೃತಿಕ ವಿಭಿನ್ನತೆ ಹಾಗೂ ಭಾರತೀಯ ಸಮಾಜದ ಕುರಿತ ಜ್ಞಾನದ ಹುಡುಕಾಟಕ್ಕೆ ಹೊಸ ಆಯಾಮಗಳನ್ನು ನೀಡಿದೆ. ಬಹುತೇಕ ಚಿಂತಕರು ಹೇಳುವಂತೆ ಅದು ಇತರ ವೈಜ್ಞಾನಿಕ ಸಂಶೋಧನೆಗಳಿಗೆ ಮಾದರಿ ಎಂಬ ಹೆಗ್ಗಳಿಕೆ ಪಡೆದಿದೆ. ಹಾಗಾಗಿಯೇ ಅದರ ಓದಿಗೆ ಕೆಲವು ಭೌದ್ಧಿಕ ಅಗತ್ಯ ಹಾಗೂ ಪ್ರಯತ್ನಗಳು ಬೇಕಾಗುತ್ತವೆ. ಅಂತಹ ಗಹನವಾದ ಸೈದ್ಧಾಂತಿಕ ವಿಚಾರಗಳಿಗೆ ಸಾಮಾನ್ಯ ಓದುಗರಿಗೂ ಸಹ ಪ್ರವೇಶ ಕಲ್ಪಿಸಿಕೊಡುವಲ್ಲಿ ರಾಜರಾಮ ಹೆಗಡೆಯವರ ಸರಳ ನಿರೂಪಣೆಯ 31 ಚಿಕ್ಕ ಅಂಕಣಗಳ ಪ್ರಸ್ತುತ ಕೃತಿಯು ಯಶಸ್ವಿಯಾಗಿದ್ದು ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಮರು ಮುದ್ರಣವನ್ನೂ ಕಂಡಿದೆ.

   ಭಾರತವು ವಸಾಹತುಶಾಹಿ ಆಳ್ವಿಕೆಯಿಂದ ಮುಕ್ತವಾಗಿ ಅರವತ್ತಕ್ಕೂ ಹೆಚ್ಚು ವರ್ಷಗಳೇ ಕಳೆದಿವೆ. ಆದರೆ ಐರೋಪ್ಯರ ಆಳ್ವಿಕೆಯಿಂದ ಸ್ವತಂತ್ರವಾದರೂ ಸಹ ಅವರ ಚಿಂತನೆಯ ದಾಸ್ಯದಿಂದ ಇನ್ನೂ ಸ್ವತಂತ್ರರಾಗಿಲ್ಲ. ವಸಾಹತು ಪ್ರಜ್ಞೆಯು ನಮ್ಮೆಲ್ಲರನ್ನು ಇನ್ನೂ ಐರೋಪ್ಯರ ದಾಸ್ಯದಲ್ಲಿಯೇ ಬಂಧಿಸಿಟ್ಟಿದೆ ಎಂದು ಈ ಕೃತಿಯು ಪ್ರತಿಪಾದಿಸುತ್ತದೆ. ದಿಗಿಲು ಬಡಿಸುವ ಈ ಹೇಳಿಕೆಯೇ ನಮ್ಮ ಸಮಾಜದ ಕುರಿತ ಈವರೆಗಿನ ಭೌದ್ಧಿಕ ಬೆಳವಣಿಗೆಯ ಬಗ್ಗೆ ಮೂಲಭೂತ ಅನುಮಾನ ಹುಟ್ಟಿಸುತ್ತದೆ. ಇಂತಹ ಹೇಳಿಕೆಗಳು ವಸಾಹತೋತ್ತರವಾದಗಳಲ್ಲಿ ಈಗಾಗಲೇ ಬಂದಿವೆ. ಆದರೆ ಅವುಗಳೂ ಸಹ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಐರೋಪ್ಯ ಚಿಂತನೆಗಳ ಮಿತಿಯಲ್ಲಿ ಬಳಲುತ್ತಿವೆ. ಅಂತಹ ಮಿತಿಗಳನ್ನು ದಾಟುವ ಪ್ರಸ್ತುತ ಕೃತಿಯ ಮೇಲಿನ ಪ್ರತಿಪಾದನೆಯು ಬಹುಮುಖ್ಯವೆನಿಸುತ್ತದೆ. ನಾವು ತೀರಾ ಸಹಜವೆಂಬಂತೆ ಒಪ್ಪಿರುವ ‘ಸತ್ಯ’ಗಳನ್ನು ಪ್ರಶ್ನಿಸಿ ಆ ಭೌದ್ಧಿಕದಾಸ್ಯದ ಸ್ವರೂಪ ಹೇಗಿದೆ? ಅದು ನಮ್ಮ ದಿನನಿತ್ಯದ ಸಮಸ್ಯೆಗಳಾಗಿ ವಿಭಿನ್ನ ರೂಪಗಳಲ್ಲಿ ಹೇಗೆ ಪ್ರವೇಶ ಪಡೆಯುತ್ತದೆ? ಅದರಿಂದಾಗುತ್ತಿರುವ ಅನಾಹುತಗಳೇನು? ಎಂಬುದನ್ನು ಕೃತಿಯಲ್ಲಿನ ಒಂದೊಂದು ಲೇಖನಗಳು ವಿಭಿನ್ನ ಸಮಸ್ಯೆಯನ್ನು ಎತ್ತಿಕೊಂಡು ಎಳೆಎಳೆಯಾಗಿ ಬಿಡಿಸಿಡುತ್ತವೆ. ಅದು ಕೃತಿಯ ನಾಲ್ಕು ಹಂತಗಳಲ್ಲಿ ನಡೆಯುತ್ತದೆ.

   ಮೊದಲನೆಯ ಭಾಗದಲ್ಲಿ, ನಾವು ಬದುಕುವ ಸಮಾಜ ನಮಗೊಂದು ರೀತಿಯ ತಿಳುವಳಿಕೆಯನ್ನು ನೀಡಿದರೆ, ನಾವು ಪಡೆಯುತ್ತಿರುವ ಶಿಕ್ಷಣವು ನಮಗೆ ಬೇರೆಯದೇ ರೀತಿಯ ತಿಳುವಳಿಕೆಯನ್ನು ರೂಪಿಸುತ್ತದೆ. ಹಾಗಾಗಿ ನಮ್ಮಲ್ಲಿ ಎರಡು ಜಗತ್ತುಗಳು ಸೃಷ್ಟಿಯಾಗಿವೆ. ಅವು ಪರಸ್ಪರ ವಿರುದ್ಧವಾಗಿವೆ. ಶಿಕ್ಷಣವು ನಮಗೆ ನೀಡುವ ತಿಳುವಳಿಕೆಯು ವಸಾಹತುಶಾಹಿಯ ಬಳುವಳಿ. ಅದು ವಸಾಹತು ಪ್ರಜ್ಞೆಯನ್ನು ಕ್ರಮಬದ್ಧವಾಗಿ ರೂಪಿಸುವ ಕೆಲಸವನ್ನು ಮಾಡುತ್ತದೆ. ವಸಾಹತು ಪ್ರಜ್ಞೆ ಎಂದರೆ ಏನು ಎಂಬುದಕ್ಕೆ ಕೃತಿಯು ನೀಡುವ ಉತ್ತರ ಹೀಗಿದೆ: ಪಾಶ್ಚಾತ್ಯ ಚಿತ್ರಣಗಳನ್ನೇ ಸತ್ಯವೆಂಬುದಾಗಿ ನಂಬಿಕೊಂಡು ನಮ್ಮ ಅನುಭವವನ್ನು ಆ ಚಿತ್ರಣಗಳ ಬೆಳಕಿನಲ್ಲಿ ವಿಕಾರವಾಗಿ ಜೋಡಿಸಿಕೊಳ್ಳುವಂತೆ ಮಾಡುವುದೇ ವಸಾಹತು ಪ್ರಜ್ಞೆ ಇದು ನಮ್ಮ ಅನುಭವದ ಕುರಿತು ಆಲೋಚಿಸದಂತೆ ಮಾಡುತ್ತದೆ. ಮುಂದುವರೆದು, ಬಲತ್ಕಾರ ಮತ್ತು ಹಿಂಸೆಯ ಮೂಲಕ ಒಬ್ಬ ಮನುಷ್ಯನ ಅನುಭವಗಳು ಅವನಿಗೇ ದಕ್ಕದಂತೆ ತಡೆಯುವುದೇ ವಸಾಹತುಶಾಹಿಯ ಅನೈತಿಕತೆಯಾಗಿದೆ ಎಂದು ವಿಶ್ಲೇಷಿಸುತ್ತದೆ. ವಸಾಹತು ವಿವರಣೆಗಳ ಹಿಂದೆ ವೈಜ್ಞಾನಿಕ ಚಿಂತನೆಯ ತಳಹದಿಯ ಬದಲು ಕ್ರಿಶ್ಚಿಯಾನಿಟಿಯ ಚೌಕಟ್ಟೇ ಆವರಿಸಿದೆ ಎಂಬುದನ್ನು ತೋರಿಸುತ್ತದೆ.

   ಎರಡನೆಯ ಭಾಗದಲ್ಲಿ, ಐರೋಪ್ಯ ವಸಾಹತುಶಾಹಿಯ ಸಂದರ್ಭದಲ್ಲಿ ಭಾರತದಲ್ಲಿ ಹಿಂದೂಯಿಸಂನ ಹುಡುಕಾಟ ನಡೆದ ಪರಿಯನ್ನು ತಿಳಿಸುತ್ತಾರೆ. ಜಗತ್ತಿನ ಎಲ್ಲೆಡೆಯಲ್ಲೂ ರಿಲಿಜನ್ನುಗಳನ್ನು ಹುಡುಕುವ ಕಸರತ್ತಿನ ಪರಿಣಾಮವಾಗಿ ರಿಲಿಜನ್ನೆಂದರೆ ಏನೆಂಬುದೇ ಪಾಶ್ಚಾತ್ಯ ವಿದ್ವಾಂಸರಿಗೆ ಒಗಟಾಗಿ ಹೋಗಿತ್ತು. ಈ ವೈಚಾರಿಕ ಗೊಂದಲಗಳನ್ನು ರಿಲಿಜನ್ನಿನ ಅಧ್ಯಯನಗಳು ಭಾರತೀಯರಿಗೆ ದಾಟಿಸಿರುವುದರಿಂದ ಹಿಂದೂಯಿಸಂ ಎಂಬ ರಿಲಿಜನ್ನಿಲ್ಲ ಎಂಬ ಸರಳ ಸತ್ಯವೂ ಇಂದು ನಮಗೆ ಕಾಣದಂತಾಗಿದೆ.

   ಹಿಂದೂಯಿಸಂ ಎಂಬ ರಿಲಿಜನ್ ಭಾರತದಲ್ಲಿ ಅಸ್ತಿತ್ವದಲ್ಲಿ ಇಲ್ಲ, ಆ ರೀತಿಯ ವಿವರಣೆ ವಸಾಹತುಶಾಹಿಯ ಬಳುವಳಿಯಾಗಿದ್ದರೂ ಸಹ ಹಿಂದೂಯಿಸಂ ಎಂಬ ಭ್ರಷ್ಟ ರಿಲಿಜನ್ನಿದೆ, ಅದರ ಉಪ ಉತ್ಪನ್ನವಾದ ಜಾತಿವ್ಯವಸ್ಥೆಯು ಅಸ್ತಿತ್ವದಲ್ಲಿದೆ. ಬ್ರಾಹ್ಮಣ ಪುರೋಹಿತಶಾಹಿಗಳ ಕುತಂತ್ರವೇ ಹಿಂದೂ ರಿಲಿಜನ್ನಿನ ಭ್ರಷ್ಟತೆಗೂ, ಜಾತಿವ್ಯವಸ್ಥೆಯ ಸೃಷ್ಟಿಗೂ ಕಾರಣ ಎಂಬ ತಿಳುವಳಿಕೆಯೇ ಪ್ರಬಲವಾಗಿದೆ. ಆ ಹಿನ್ನೆಲೆಯಲ್ಲಿಯೇ ಸಮಾಜದ ಹಲವಾರು ಸಂಗತಿಗಳನ್ನು ವಿವರಿಸಲಾಗುತ್ತಿದೆ. ಈ ಐರೋಪ್ಯ ವಿವರಣೆಗಳ ಭಾಗವಾಗುವ ಮೂಲಕ ಬೌದ್ಧಿಕ ದಾಸ್ಯಕ್ಕೆ ಭಾರತೀಯರು ಒಳಗಾಗುತ್ತಿರುವ ರೀತಿಯನ್ನು ಸ್ಪಷ್ಟಗೊಳಿಸುತ್ತಾರೆ. ಅಷ್ಟು ಮಾತ್ರವಲ್ಲ ಇಂತಹ ಬೌದ್ಧಿಕ ದಾಸ್ಯದಿಂದ ಹೊರಬರುವ ಬಗೆಯನ್ನು ಸರಳವಾಗಿ ವಿವರಿಸುವ ಪರಿ ಅತ್ಯುತ್ತಮವಾಗಿದೆ. ಅವರೇ ಹೇಳುವಂತೆ, ವಸಾಹತು ಪ್ರಜ್ಞೆಯು ಹುಟ್ಟುಹಾಕುವ ಇಂಥ ಚರ್ಚೆಯನ್ನು ನಡೆಸುತ್ತಿರುವಾಗ ಮತ್ಯಾವುದೋ ಜಗತ್ತಿನ ಸಮಸ್ಯೆಗಳನ್ನು ನಮ್ಮಲ್ಲಿದೆ ಎಂಬುದಾಗಿ ಭಾವಿಸಿಕೊಂಡು ಚರ್ಚಿಸುತ್ತಿರುತ್ತೇವೆ. ಆ ಕಾರಣದಿಂದಾಗಿಯೇ ಇಂಥ ಸಮಸ್ಯೆಗಳನ್ನು ಕುರಿತು ನಮ್ಮ ಅನುಭವಕ್ಕೆ ಸರಿ ಎನ್ನಿಸುವಂತೆ ತರ್ಕಬದ್ಧವಾಗಿ ಯೋಚಿಸುವುದೂ ಸಾಧ್ಯವಿಲ್ಲ. ಜನರಿಗೆ ಮನದಟ್ಟಾಗುವಂತೆ ವಿವರಿಸುವುದೂ ಸಾಧ್ಯವಿಲ್ಲ. ಇನ್ನು ಪರಿಹರಿಸುವುದಂತೂ ದೂರದ ಮಾತು. ವಸಾಹತು ಪ್ರಜ್ಞೆಯ ಅವಾಂತರಗಳನ್ನು ಗುರುತಿಸುತ್ತ ಅವುಗಳ ಪರಾಮರ್ಶೆಯನ್ನು ನಡೆಸಿದರೆ ಮಾತ್ರವೇ ಅಂಥ ಬೌದ್ಧಿಕ ಸಮಸ್ಯೆಗಳಿಂದ ಹೊರಬರುವ ಮಾರ್ಗಗಳು ಗೋಚರಿಸಬಹುದು ಹಾಗೂ ನಮ್ಮ ಸಮಾಜದಲ್ಲಿರುವ ಸಮಸ್ಯೆಗಳ ನೈಜ ಸ್ವರೂಪವನ್ನು ತಿಳಿಯಬಹುದು.

   ಮೂರನೇ ಭಾಗದಲ್ಲಿ, ಭಾರತದಲ್ಲಿ ರಿಲಿಜನ್ ಇಲ್ಲ ಎಂದಾದರೆ ಮತ್ತೇನಿದೆ? ಎಂಬ ಪ್ರಶ್ನೆಗೆ ಉತ್ತರಿಸುತ್ತಾರೆ. ಇಲ್ಲಿ ‘ಸಂಪ್ರದಾಯಗಳಿವೆ, ಅವು ಪೌರ್ವಾತ್ಯ ಸಂಸ್ಕೃತಿಗೆ ರೂಪಕೊಟ್ಟಿವೆ’. ರಿಲಿಜನ್ನಿಗಿರುವಂತೆ ಡಾಕ್ಟ್ರಿನ್ ಹಾಗೂ ಕಾರಣಗಳು ಇಲ್ಲದಿರುವುದರಿಂದಲೇ ಸಂಪ್ರದಾಯಗಳಿಗೆ ಕಾಲ ಸಂದರ್ಭಗಳಿಗೆ ತಕ್ಕಂತೆ ರೂಪಾಂತರ ಹೊಂದುವ ಶಕ್ತಿ ಪ್ರಾಪ್ತವಾಗಿದೆ. ಅಲ್ಲದೇ ಅವು ರಿಲಿಜನ್ನಿನಂತೆ ತಮ್ಮದೇ ಸತ್ಯವೆಂದು ಸ್ಪರ್ಧೆಗಿಳಿಯುವುದಿಲ್ಲ. ಹಾಗಾಗಿಯೇ ಸಂಪ್ರದಾಯಗಳು ಬಹುತ್ವವನ್ನುಒಪ್ಪಿಕೊಳ್ಳುತ್ತವೆ ಎಂಬುದನ್ನು ತರ್ಕಬದ್ಧವಾಗಿ ತೋರಿಸಲಾಗಿದೆ. ಆದರೆ, ಇಲ್ಲಿನ ಸಂಪ್ರದಾಯಗಳು, ವಿಧಿ ಆಚರಣೆಗಳು ಮೂಢನಂಬಿಕೆಗಳಾಗಿ ಬದಲಾಗಿದ್ದು ಐರೋಪ್ಯ ಚಿತ್ರಣಗಳಲ್ಲಿ. ಅಂದರೆ, ಭಾರತೀಯ ಸಂಪ್ರದಾಯ ವಿಧಿ ಆಚರಣೆಗಳೆಂದರೆ ಅಸಡ್ಡೆಯಿಂದ ನೋಡಿ ಮೂಗು ಮುರಿಯುವ ಚಿತ್ರಣಗಳ ಹಿಂದೆ ಐರೋಪ್ಯರ ರಿಲಿಜನ್ನಿನ ಸಾಂಸ್ಕೃತಿಕ ಮಿತಿಯು ಕೆಲಸಮಾಡಿದೆ ಎಂಬುದನ್ನು ವಿಭಿನ್ನ ದೃಷ್ಟಾಂತಗಳ ಮೂಲಕ ವಿವರಿಸಲಾಗಿದೆ. ಐರೋಪ್ಯ ಚಿಂತನೆಗಳು ಇಲ್ಲಿನ ಸಂಪ್ರದಾಯಗಳನ್ನು ಕುರಿತು ಎತ್ತುವ ಪ್ರಶ್ನೆಗಳೇ ಹೇಗೆ ಅವೈಜ್ಞಾನಿಕ ಎಂಬುದನ್ನು ತೋರಿಸುವ ಮೂಲಕ ಇಲ್ಲಿನ ಸಂಪ್ರದಾಯಗಳ ಕುರಿತ ಚರ್ವಿತಚರ್ವಣ ಕಥೆಗಳಿಗೆ ಪರ್ಯಾಯ ವಿವರಣೆ ನೀಡಲಾಗಿದೆ. ಅದು ನಮ್ಮ ದಿನ ನಿತ್ಯದ ಅನುಭವವನ್ನೇ ಒರೆಗೆ ಹಚ್ಚುವುದರಿಂದ ಹೆಚ್ಚು ಸಮರ್ಪಕವೆನಿಸುತ್ತದೆ.

  ನಾಲ್ಕನೆಯ ಭಾಗದಲ್ಲಿ, ಇಂದು ಸರ್ವೇಸಾಮಾನ್ಯವಾಗಿ ನಾಗರೀಕತೆಯ ಸಂಕೇತವೆಂಬಂತೆ ಒಪ್ಪಿಕೊಂಡಿರುವ ಸೆಕ್ಯುಲರ್ ತತ್ವದ ಅರ್ಥ ನಿರೂಪಣೆಗಳಲ್ಲಿನ ಎಡವಟ್ಟುಗಳನ್ನು, ಐರೋಪ್ಯ ಸಾಂಸ್ಕೃತಿಕ ಅಗತ್ಯತೆಯಲ್ಲಿ ಜನಿಸಿದ ಸೆಕ್ಯುಲರಿಸಂ ಭಾರತದಲ್ಲಿ ಸೃಷ್ಟಿಸಿರುವ ಅನಾಹುತಗಳನ್ನು ನಿದರ್ಶಿಸಲಾಗಿದೆ. ಸೆಕ್ಯುಲರ್ ಚಿಂತಕರು ಹೇಗೆ ರಿಲಿಜನ್ನಿನ ಚೌಕಟ್ಟಿನಲ್ಲಿಯೇ ಇದ್ದಾರೆ, ಸೆಕ್ಯುಲರ್ ಆಗುವುದೆದಂರೆ ರಿಲಿಜನ್ನಿನದೇ ಮತ್ತೊಂದು ರೂಪ ಧರಿಸುವುದು. ಕೋಮು ಸಂಘರ್ಷಗಳಿಗೆ ಪರಿಹಾರವೆಂಬಂತೆ ಸೆಕ್ಯುಲರಿಸಂ ಮಂತ್ರ ಜಪಿಸುವುದು ಸಾಮಾನ್ಯವಾಗಿದೆ. ಆದರೆ, ಸೆಕ್ಯುಲರಿಸಂನ ಅಳವಡಿಕೆಯ ನಂತರವೇ ಅಂತಹ ಸಂಘರ್ಷಗಳು ಸೃಷ್ಟಿಯಾದವು ಎಂಬುದನ್ನು ಪ್ರಸ್ತುತ ಕೃತಿಯು ತೋರಿಸುವುದು ಬೆರಗುಗೊಳಿಸುವ ಕಟು ವಾಸ್ತವ. ಇಲ್ಲಿನ ಕೋಮು ಸಮಸ್ಯೆಗಳಿಗೆ ‘ಸರ್ವಧರ್ಮ ಸಮಭಾವ’ ಅಥವಾ ‘ಸೆಕ್ಯುಲರಿಸಂ’ ಪರಿಹಾರವಾಗುವುದಿಲ್ಲ. ಬದಲಾಗಿ ಅದು ಮತ್ತಷ್ಟು ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ. ಮತ್ತು ಪ್ರಭುತ್ವವೂ ಕೂಡ ಪಕ್ಷಪಾತಿಯಾಗಬೇಕಾಗುತ್ತದೆ. ಈ ಸಮಸ್ಯೆಯನ್ನು ಗುರುತಿಸುವ ಹಾಗೂ ಸಾಂಸ್ಕೃತಿಕ ವಿಭಿನ್ನತೆಯನ್ನು ಕುರಿತ ಗಂಭೀರ ಸಂಶೋಧನೆಯಲ್ಲಿ ತೊಡಗಿಕೊಳ್ಳದ ಹೊರತು ಸಮಸ್ಯೆಯು ಪರಿವಾಗುವುದಿಲ್ಲ ಎನ್ನುವ ಬೌದ್ಧಿಕ ಸವಾಲನ್ನು ಕೃತಿಯು ಎತ್ತುತ್ತದೆ. ಆ ಮೂಲಕ ಕೋಮು ಸಂಘರ್ಷಗಳಂತ ಸಮಸ್ಯೆಗಳಿಗೆ ಪರಿಹಾರದ ದಾರಿಯನ್ನು ಸೂಚಿಸುತ್ತದೆ.

   ಒಟ್ಟಾರೆ, ಸಮಕಾಲೀನ ಸಂದರ್ಭದ ಹಲವಾರು ವಿವಾದ, ಚರ್ಚೆಗಳ ಕುರಿತು ಬೆಳಕು ಚೆಲ್ಲುವ ಮಹತ್ತರ ಲೇಖನಗಳನ್ನು ಈ ಕೃತಿಯು ಒಳಗೊಂಡಿದೆ. ಭಗವಧ್ಗೀತೆ ಕುರಿತ ವಿವಾದ, ಮೂರ್ತಿಪೂಜೆ, ಮತಾಂತರದ ಗೊಂದಲ, ಮೂಢನಂಬಿಕೆಗಳ ಕುರಿತ ವಿವಾದ, ಸೆಕ್ಯುಲರಿಸಂನ ಬಗ್ಗೆ ಇಂದು ನಡೆಯುತ್ತಿರುವ ಚರ್ಚೆಗಳು ವಸಾಹತುಶಾಹಿ ಚೌಕಟ್ಟನ್ನೇ ಹಂಚಿಕೊಂಡಿವೆ ಎಂದು ತೋರಿಸುತ್ತದೆ. ಆ ಮೂಲಕ ಭಾರತ ಇನ್ನೂ ಹೇಗೆ ಬೌದ್ಧಿಕ ದಾಸ್ಯದಲ್ಲಿದೆ ಎಂಬುದು ತನ್ನಷ್ಟಕ್ಕೆ ತಾನೇ ವೇದ್ಯವಾಗುತ್ತದೆ. ಕೃತಿಯು ಇಷ್ಟಕ್ಕೆ ಮಾತ್ರ ಸೀಮಿತವಾಗದೇ ಅಂತಹ ಭೌದ್ಧಿಕದಾಸ್ಯದ ಪೊರೆಯನ್ನು ಕಳಚುವ ಹೊಸ ದಾರಿಗಳನ್ನು, ಸಾಧ್ಯತೆಗಳನ್ನು ತೆರೆಯುತ್ತದೆ. ಜೊತೆಗೆ ನಮ್ಮ ಸಮಾಜ ಮತ್ತು ಸಂಸ್ಕೃತಿ ಕುರಿತಾಗಿ ಜನಸಾಮಾನ್ಯರ ಸಹಜಜ್ಞಾನವನ್ನು ಒಳಗೊಳ್ಳುವುದರಲ್ಲೇ ಕೃತಿಯ ಯಶಸ್ಸು ಅಡಗಿದೆ. ಆ ಮಟ್ಟಿಗೆ ಸಮಾಜ ವಿಜ್ಞಾನಕ್ಕೆ ಇದೊಂದು ಉತ್ತಮ ಕೊಡುಗೆ ಎಂಬುದರಲ್ಲಿ ಸಂದೇಹವಿಲ್ಲ. ಶತಾಯಗತಾಯ ಸಾಮಾಜಿಕ ಸಮಸ್ಯೆಗಳನ್ನು ತೊಲಗಿಸಲು ಯತ್ನಿಸುತ್ತಿರುವ ಈ ಹೊತ್ತಿನಲ್ಲಿ ಅವುಗಳನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳಬೇಕಾದುದು ಅತ್ಯಗತ್ಯ. ಹಾಗಾಗಿ ಐಡಿಯಾಲಜಿಯ ಹಣೆಪಟ್ಟಿಯನ್ನು ಬದಿಗಿಡುವ ತೆರೆದ ಮನಸ್ಸಿನ ಓದು ಮುಖ್ಯ.

Read more from ಲೇಖನಗಳು

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments