ವಿಷಯದ ವಿವರಗಳಿಗೆ ದಾಟಿರಿ

ಜುಲೈ 26, 2015

2

ಕಾರ್ಗಿಲ್ ವಿಜಯ ದಿನ

‍ನಿಲುಮೆ ಮೂಲಕ

– ಮಯೂರಲಕ್ಷ್ಮಿ

ಕಾರ್ಗಿಲ್ ವಿಜಯ ದಿವಸಅವರ ಕನಸುಗಳಲ್ಲಿ ನಾಳಿನ ನೆಮ್ಮದಿಯ ಬದುಕಿಲ್ಲ….
ಅವರ ಮನಸುಗಳಲ್ಲಿ ಬದುಕಿ ಬರುವ ಸುಳಿವಿಲ್ಲ….
ಮರಳಿ ಮನೆಗೆ ಹಿಂದಿರುಗಲೆಂದು ಹೆತ್ತವರ ಆಶಯ..
ಕೊರೆವ ಹಿಮದ ತಮದಲ್ಲಿ ಅಹರ್ನಿಶೆ ಕಾದಾಟದ ಭಯ…
ತ್ಯಾಗ-ಬಲಿದಾನವೇ ಸಾರ್ಥಕತೆಯ ವಿಜಯ!

ಹೌದು, ದೇಶವು ನಿದ್ರಿಸುತ್ತಿರಲು ಸುಂದರ ಭವಿಷ್ಯದ ಕನಸಿಲ್ಲದೆ, ವೈಯುಕ್ತಿಕ ಸುಖದ ಮರೀಚಿಕೆಯ ಸೋಗಿಲ್ಲದೆ, ರಕ್ತಸಿಕ್ತ ದೇಹಗಳಲ್ಲಾಗುವ ಗಾಯಗಳ ಕಿಂಚಿತ್ತೂ ನೋವಿಲ್ಲದಂತೆ ಕ್ಷಣಕ್ಷಣದಲ್ಲೂ ಆಪತ್ತಿನ ಕತ್ತಲೆಯ ಕಂದಕಗಳಲ್ಲಿ ಎಚ್ಚರದಿಂದಿದ್ದು ಗಡಿ ಕಾಯುವ ಅವರೇ ದೇಶದ ನಿಜ ನಾಯಕರು.ನಮ್ಮ ದೇಶದ ಅತ್ಯಧಿಕವೆನಿಸುವ ಆಪತ್ತುಗಳ ಪ್ರವಾಹ ಹರಿದಾಗ,ಭೂಕಂಪವಾದಾಗ, ಗಲಭೆಗಳಾದಾಗ, ನಿರಾಶ್ರಿತರಿಗೆ ನೆರವಾಗಲು ಅವರು ಸದಾ ಸಿದ್ಧ! ಗಡಿಗಡಿಗಳಲ್ಲಿ ಜೀವಭಯವಿಲ್ಲದೆ ಕಣಕಣಗಳಲ್ಲಿ ರಕ್ಷಣೆಯ ಹೊಣೆ ಹೊತ್ತು ನಮ್ಮನ್ನು ಕಾಪಾಡಲು ಧಾವಿಸುವ ಕೊನೆಯ ಆಸರೆಯೇ ಸೈನಿಕರು.

ಸೇನೆಯನ್ನು ಸೇರುವಾಗ ಭಾರತದ ಅಧ್ಯಕ್ಷರ ಆಣತಿಯಂತೆ ತನ್ನ ಮೇಲಾಧಿಕಾರಿಯ ಮಾತನ್ನು ಪಾಲಿಸುತ್ತೇವೆಂದು ನೀಡಿದ ವಚನದಂತೆ ಎಂತಹ ಆತಂಕದ ಪರಿಸ್ಥಿತಿಯಲ್ಲೂ ಧೃತಿಗೆಡದೆ ನೆಲ, ಜಲ, ಮತ್ತು ಅಂತರಿಕ್ಷದಲ್ಲಿ ಸತತವಾಗಿ ಹೋರಾಡುತ್ತಾ ಬಲಿದಾನಗೈಯುವ ಸೈನಿಕರೇ ಈ ದೇಶದ ಮಹಾತ್ಮರು.ಪಾಕಿಸ್ಥಾನದ ಹೇಡಿತನ ನೇರ ಯುದ್ಧಕ್ಕಿಲ್ಲದ ಧೈರ್ಯದ ಪ್ರದರ್ಶನ ನಡೆದದ್ದು ಗಡಿಯಲ್ಲಿ ನುಸುಳಿ ನಮ್ಮ ದೇಶವನ್ನಾಕ್ರಮಿಸಿಕೊಳ್ಳುವ ಪ್ರಯತ್ನಗಳು ಈ ದೇಶ ವಿಭಜನೆಯಾದಂದಿನಿಂದ ಎನ್ನುವ ಸತ್ಯವು ಇತಿಹಾಸದಲ್ಲಿ ದಾಖಲೆಯಾಗಿದೆ. ಆದರೆ ಈ ಇತಿಹಾಸದಿಂದ ನಾವು ಕಲಿತದ್ದೆಷ್ಟು? ಸೀಮೆಯ ಅತಿಕ್ರಮಣ…ಮತ್ತೆ ಮತ್ತೆ ನಡೆಯುವ ಸಂಧಿ ಪ್ರಕ್ರಿಯೆಗಳು.. ಪಾಕಿಸ್ತಾನದಿಂದ ಅದೇ ಅತಿಕ್ರಮಣ, ಮತ್ತದೇ ದ್ರೋಹ. ಲಿಖಿತ ನಿರ್ಧಾರಗಳ ಒಪ್ಪಂದಗಳ ನಂತರ ಅದೇ ಪಾಕಿಸ್ಥಾನದ ಮತ್ತದೇ ದ್ರೋಹ.

ವಾಸ್ತವವಾಗಿ ದೇಶದ ವಿಭಜನೆಯಾದಂದಿನಿಂದಲೇ ಆರಂಭವಾದದ್ದು ‘ಕಾಶ್ಮೀರ ಸಮಸ್ಯೆ’, ಇಂದು ಬೃಹತ್ ವೃಕ್ಷದಂತೆ ಬೆಳದು ಸಮಸ್ಯೆಗಳ ಫಲವನ್ನೇ ನೀಡುತ್ತಿದೆ.ಆಳುಗರ ಸ್ವಾರ್ಥಕ್ಕೆ ಸಿಲುಕಿ ದೇಶ ಇಬ್ಭಾಗವಾದಾಗ ಜಮ್ಮು ಕಾಶ್ಮೀರ ಸ್ವತಂತ್ರವಾಗಿ ರಾಜರಿಂದ ಆಳಲ್ಪಟ್ಟ ರಾಜ್ಯವಾಗಿತ್ತು. ಸ್ವಾತಂತ್ರ್ಯಾನಂತರ 22ನೇ ಅಕ್ಟೋಬರ್, 1947ರಂದು ಭಾರತ ಸ್ವತಂತ್ರ ದೇಶವಾದಾಗ ‘ಇಂಡಿಯನ್ ಇಂಡಿಪೆಂಡೆನ್ಸ್ ಆ್ಯಕ್ಟ್’ ಎನ್ನುವ ಕಾನೂನನ್ನು ಭಾರತದಲ್ಲಿ ಜಾರಿ ಮಾಡಲಾಯ್ತು. ವಿಪರ್ಯಾಸವೆಂದರೆ ಈ ಕಾನೂನು ರಚಿತವಾದದ್ದು ಲಂಡನ್ನಿನಲ್ಲಿ, ಇಂತಹ ಒಂದು ಕಾನೂನು ಭಾರತದಲ್ಲಿ ಜಾರಿ..! ನಮ್ಮದೇ ಸಂಸತ್ತಿನಲ್ಲಿ ನಮ್ಮದೇ ಸ್ವಾತಂತ್ರ ಕಾನೂನನ್ನೂ ನಾವು ಜಾರಿ ಮಾಡಲಾಗಲಿಲ್ಲ…..ಎಂತಹ ಅಸಹಾಯಕತೆ…!

ಈ ಕಾನೂನಿನ ವಿಚಿತ್ರ ಸಂಗತಿಗಳು

4 ಜೂನ್, 1947ರಂದು ಲಾರ್ಡ್ ಮೌಂಟ್‍ಬ್ಯಾಟನ್ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ “ಭಾರತದಲ್ಲಿನ 635 ರಾಜರುಗಳ ರಾಜ್ಯಗಳೊಂದಿಗೆ ಬ್ರಿಟನ್ನಿನ ಸಂಬಂಧವು ಕೊನೆಗೊಳ್ಳುವುದೆಂದು, ಅಂದಿನಿಂದ ಅವು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬಹುದು, ಅಥವಾ ಮುಂದೆ ಭಾರತ ಮತ್ತು ಪಾಕಿಸ್ಥಾನವಾಗಿ ಡೊಮೀನಿಯನ್ ಆಗುವುದರಿಂದ ಯಾವುದನ್ನಾದರೂ ಸೇರಬಹುದು” ಎಂದು ಘೋಷಿಸಿದ್ದು ಭಾರತ ಮತ್ತು ಪಾಕಿಸ್ಥಾನವು ಬೇರೆಯಾದದ್ದು ಎರಡು ‘ಡೊಮೀನಿಯನ್’ ಪ್ರಾಂತ್ಯಗಳಾಗಿ, ಪಂಜಾಬ್ ಮತ್ತು ಬಂಗಾಲದ ಪ್ರಾಂತ್ಯಗಳ ಹಂಚಿಕೆಯೊಡನೆ.ಈ ಹಂಚಿಕೆಯು ಕೇವಲ ಪ್ರಾಂತ್ಯಗಳದ್ದಾಗಿರಲಿಲ್ಲ, ಇದರೊಡನೆ, ಸೇನೆ, ಸಂಪತ್ತು, ನೆಲ ಮತ್ತು ಜಲಗಳ ಹಂಚಿಕೆ. ಪೂರ್ವ-ಪಶ್ಚಿಮ ಬಂಗಾಳ, ಸಿಂಧ್ ಮತ್ತು ಬಲೂಚಿಸ್ಥಾನದ ಪ್ರಾಂತಗಳು ಪಾಕಿಸ್ಥಾನಕ್ಕೆ. ಪೂರ್ವ ಪಶ್ಚಿಮ ಪಂಜಾಬ್ ಇಬ್ಭಾಗವಾಯ್ತು.

ಎರಡೂ ದೇಶಗಳ ಪರಿಧಿಯನ್ನು ರೇಖೆಯನ್ನು ನಿರ್ಧರಿಸಿದ್ದು ಅಂದಿನ ಗವರ್ನರ್ ಜನರಲ್. ಅನೇಕ ರಾಜರುಗಳಾಳಿದ್ದ ವಿವಿಧ ಪುಟ್ಟ ರಾಜ್ಯಗಳ ಹಂಚಿಕೆಯೂ ಆಗಿತ್ತು. ಈ ರಾಜರುಗಳಿಗೆ ಭಾರತ ಅಥವಾ ಪಾಕಿಸ್ಥಾನದಲ್ಲಿ ಯಾವುದಾದರೂ ಒಂದನ್ನು ಆರಿಸಿಕೊಳ್ಳುವ ಅಥವಾ ತನ್ನ ರಾಜ್ಯವನ್ನು ‘ಸ್ವತಂತ್ರ’ವಾಗಿಯೇ ಇರಿಸಿಕೊಳ್ಳುವ ಆಯ್ಕೆಯಿತ್ತು.ತನ್ನ ದೇಶಕ್ಕೆ ತೆರಳುವ ಮುನ್ನ ಭಾರತವನ್ನು ಒಡೆಯುವ ಬ್ರಿಟಿಷರ ಹುನ್ನಾರ ಇದಾಗಿತ್ತು. ಈ ಕಾನೂನನ್ನು ಜಾರಿಗೊಳಿಸದಂತೆ ಮೊದಲು ಪ್ರತಿಭಟಿಸಿದ್ದವರು ಸರ್ದಾರ್ ವಲ್ಲಭಭಾಯಿ ಪಟೇಲ್.ಈ ಎಲ್ಲಾ ರಾಜರನ್ನೂ ಭಾರತದಲ್ಲಿ ವಿಲೀನಗೊಳಿಸುವ ಮಹದಾಸೆ ಅವರದಾಗಿತ್ತು. ಕಾಶ್ಮೀರದ ರಾಜ ‘ಹರಿ ಸಿಂಗ್’, ಟ್ರಾವಂಕೋರಿನ ರಾಜ, ಜುನಾಗಡದ ರಾಜ ಮತ್ತು ಹೈದರಾಬಾದಿನ ನಿಜ್ಹಾಮ್ ಮುಂತಾದವರಿಗೆ ಇತ್ತ ಭಾರತವೂ ಬೇಡ, ಅತ್ತ ಪಾಕಿಸ್ಥಾನವೂ ಬೇಡ, ಸ್ವತಂತ್ರವಾಗುದೇ ನಿರ್ಧಾರವಾಗಿತ್ತು.ಸರ್ದಾರರ ಪ್ರಯತ್ನಗಳ ಫಲಶೃತಿಯಾಗಿ ಅನೇಕ ಪ್ರಾಂತ್ಯಗಳು ಭಾರತದೊಂದಿಗೆ ಸ್ವಾತಂತ್ರದ ಸಮಯದಲ್ಲಿ ವಿಲೀನವಾಯ್ತು.ಜಮ್ಮು-ಕಾಶ್ಮೀರವನ್ನು ಬಿಟ್ಟು! ಅಲ್ಲಿನ ಅಂದಿನ ರಾಜ ಭಾರತದ ಭಾಗವಾಗಿರಿಸಿರಲಿಲ್ಲ.ಅದೇ ಈ ದೇಶಕ್ಕೆ ಮುಳುವಾಯ್ತು.

ಕಾಶ್ಮೀರವನ್ನು ಕಬಳಿಸುವ ಪಾಕಿಸ್ಥಾನದ ಬೇಟೆ ಅಂದೇ ಆರಂಭ! ಭಾರತ ಸ್ವತಂತ್ರಗೊಂಡ ಎರಡೇ ತಿಂಗಳಲ್ಲಿ ಯುದ್ಧ ಸಾರಿತು.
ವಿಲೀನಗೊಂಡಿರದ ಜಮ್ಮು-ಕಾಶ್ಮೀರದಿಂದ ಆಕ್ರಮಣ ತಡೆಯಲಾಗಲಿಲ್ಲ, ಯುದ್ಧ ಆರಂಭಗೊಂಡ ನಾಲಕ್ಕೇ ದಿನಗಳೊಳಗೆ ರಾಜಾ ಹರಿ ಸಿಂಗ್ ಪಾಕಿಸ್ಥಾನಕ್ಕೆ ಶರಣಾದ. ಭಾರತವು ತನ್ನ ಕೈಯಲ್ಲಿಲ್ಲದ ಈ ರಾಜ್ಯವನ್ನು ಕಾಪಾಡುವ ಪ್ರಯತ್ನ ಮಾಡಲಿಲ್ಲ, ಅಷ್ಟರಲ್ಲಿ ಶ್ರೀನಗರದ ಬಳಿ ಪಾಕಿಸ್ಥಾನ ಬಂದಾಗಿತ್ತು, ಭಯಗೊಂಡ ರಾಜ ಅಂದಿನ ಗೃಹಮಂತ್ರಿ ಸರ್ದಾರರಿಗೆ ಕಾಪಾಡುವ ಮನವಿ ಮಾಡಿ ಪ್ರಾಂತ್ಯವನ್ನು ಭಾರತದೊಂದಿಗೆ ವಿಲೀನಗೊಳಿಸುವ ಲಿಖಿತ ಒಪ್ಪಂದ ಸಹಿ ಮಾಡಿದ ನಂತರ ಭಾರತವು ಜಮ್ಮು ಕಾಶ್ಮೀರದ ರಕ್ಷಣೆಗೆ ಧಾವಿಸಿತು.ಜಮ್ಮು ಕಾಶ್ಮೀರವನ್ನು ವಿಶೇಷ ಸ್ಥಾನಮಾನ ಭಾರತದಲ್ಲಿ ಕೊಡುವ ಆಶ್ವಾಸನೆಯೊಂದಿಗೆ ವಿಲೀನಗೊಂಡ ಹಲವಾರು ದಿನಗಳ ನಂತರ ಪಾಕಿಸ್ಥಾನ ಸೇನೆಯನ್ನು ಭಾರತದ ಸೇನೆ ಹಿಮ್ಮೆಟಿತು.
ಇದರಿಂದ ವಿಚಲಿತಗೊಂಡ ಪಾಕಿಸ್ಥಾನವು ಅಂದಿನಿಂದ ಭಾರತದಲ್ಲಿ ಆಕ್ರಮಿಸಿಕೊಂಡಿದ್ದ ಇಲಾಖೆಗಳನ್ನು ವಶಪಡಿಸಿಕೊಳ್ಳುವ ಕೂಟ ನೀತಿಯನ್ನು ಆರಂಭಿಸಿತು. ಇದಕ್ಕಾಗಿ ‘ಯುನೈಟೆಡ್ ನೇಶನ್ಸ್’ (ಯು.ಎನ್.) ಮೊರೆ ಹೋಯ್ತು.
ಎರಡೂ ರಾಷ್ಟ್ರಗಳ ನಡುವೆ ಯುದ್ಧ ವಿರಾಮವನ್ನು ಯುಎನ್ ಸೂಚಿಸಿತು. ಅಂದಿನ ಪ್ರಧಾನಿ ಪಂಡಿತ್ ನೆಹರೂ ಇದಕ್ಕೊಪ್ಪಿದ್ದರಿಂದ ಭಾರತ-ಪಾಕಿಸ್ಥಾನಗಳ ನಡುವೆ ಒಪ್ಪಂದ ಏರ್ಪಟ್ಟಿತು.

ಆದರೆ, ಅಂದಿನ ಆ ಒಪ್ಪಂದವು ಭಾರತದ ಹಿತಕ್ಕಾಗಿ ಇರಲಿಲ್ಲ.ಏಕೆಂದರೆ ಆ ಒಪ್ಪಂದದ ಪ್ರಕಾರ ಅದುವರೆಗೂ ಎರಡೂ ಸೇನೆಗಳು ಯಾವ ಸ್ಥಳವನ್ನು ವಶಪಡಿಸಿಕೊಂಡಿತ್ತೋ ಅದನ್ನು ಆದೇ ದೇಶವು ಪಡೆಯಬಹುದೆಂದಾಗಿತ್ತು. ಇದರಂತೆ ಭಾರತಕ್ಕೆ ಸೇರಿದ ಸಾವಿರಾರು ಮೈಲಿಗಳ ಪ್ರದೇಶಗಳು ಪಾಕಿಸ್ಥಾನವನ್ನು ಸೇರಿತು. “ಲೈನ್ ಆಫ್ ಕಂಟ್ರೋಲ್ -ಎಲ್.ಓ.ಸಿ” ಅಥವಾ ಗಡಿ ನಿಯಂತ್ರಣ ರೇಖೆಯ ರಚನೆಯಾಯ್ತು.ಭಾರತದ ಮೇಲೆ ಎಂದೂ ಆಕ್ರಮಣ ಮಾಡುವುದಿಲ್ಲ ಎಂದು ಪಾಕಿಸ್ಥಾನವೇನೋ ಪ್ರಮಾಣ ಮಾಡಿತು.ಆದರೆ,ನಿರಂತರ ಆಕ್ರಮಣ ಮತ್ತು ಗಡಿಯ ರೇಖೆಯನ್ನು ಪಾಕಿಸ್ಥಾನ ಸೇನೆಯ ಉಲ್ಲಂಘನೆ ಎಡಬಿಡೆ ಸಾಗಿತ್ತು.

1965ರಲ್ಲಿ ‘ಆಪರೇಶನ್ ಜಿಬ್ರಾಲ್ಟರ್’ ಹೆಸರಲ್ಲಿ ಪಾಕಿಸ್ಥಾನದಿಂದ ಭಾರತದ ಮೇಲೆ ಆಕ್ರಮಣ.ಸತತ ಹೋರಾಟದಿಂದ ಭಾರತದ ಮೇಲುಗೈ.ನಂತರ ಅಂದಿನ ಸೋವಿಯತ್ ಯೂನಿಯನ್ ಮತ್ತು ಅಮೇರಿಕಾ ಮಧ್ಯಪ್ರವೇಶದಿಂದ ಕದನ ವಿರಾಮ ಘೋಷಣೆ.1971… ಈ ದೇಶದ ಸರ್ವಶ್ರೇಷ್ಠ ಪ್ರಧಾನ ಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರೀಜಿಯವರ ನಿಧನದ ನಂತರ ಮತ್ತೆ ನಮ್ಮ ದೇಶದ ಗಡಿಯ ಮೇಲೆ ಆಕ್ರಮಣ.ಪೂರ್ವ ಪಾಕಿಸ್ಥಾನದಿಂದ-ಬಂಗಾಲದ ಸೀಮೆಯಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ನುಸುಳುವಿಕೆ ಮತ್ತು ಇದರ ಸುಳಿವು ಸಿಕ್ಕ ಭಾರತದ ಸೇನೆಯೊಂದಿಗೆ ಯುದ್ಧ.ಆದರೆ ಈ ಯುದ್ಧದಲ್ಲಿ ಪಾಕಿಸ್ಥಾನವನ್ನು ಹೆಡೆಮುರಿ ಕಟ್ಟಿದ ಭಾರತಕ್ಕೇ ಜಯ.ಅತಿ ಹೆಚ್ಚು ಭಾರತದ ಸೈನಿಕರ ಬಲಿದಾನ, ಪಾಕಿಸ್ಥಾನದ ಸೇನೆಗೂ ಅಪಾರ ನಷ್ಟ.ಭಾರತವನ್ನು ಸೋವಿಯತ್ ಯೂನಿಯನ್ ಸಮರ್ಥಿಸಿದರೆ ಅಮೇರಿಕಾದ ಬೆಂಬಲ ಪಾಕಿಸ್ಥಾನಕ್ಕೆ…! ಶರಣಾದ ಪಾಕಿ ಸೇನೆ.ಕದನ ವಿರಾಮ ಘೋಷಣೆ.ಬಾಂಗ್ಲಾದೇಶ ಸ್ವತಂತ್ರ ರಾಷ್ಟ್ರವಾಯಿತು.’ಜಿ-7′ ದೇಶಗಳಿಂದ ಭಾರತದ ಸಮರ್ಥನೆ.ಮತ್ತೆ ಉಭಯ ದೇಶಗಳ ನಡುವೆ ಒಪ್ಪಂದವಾಯಿತುಯಥಾಪ್ರಕಾರ ತನ್ನ ಸೈನಿಕರನ್ನು ಭಾರತದ ಗಡಿಯೊಳಗೆ ನುಸುಳಿಸಿ ಒಪ್ಪಂದದ ನಿಯಮ ಮುರಿದ ಪಾಕಿಸ್ಥಾನ 1987ರಲ್ಲಿ ರಾಜೀವ ಗಾಂಧಿಯವರು ಪ್ರಧಾನಿಗಳಾಗಿದ್ದಾಗ ಮತ್ತೆ ಕಾಲು ಕೆರೆದುಕೊಂಡು ಭಾರತದೊಳಗೆ ಆಕ್ರಮಣಗೈದಿತು. ಇದರ ಸುಳಿವು ಮೊದಲೇ ದೊರೆತಿದ್ದರಿಂದ ಭಾರತವು ತನ್ನ ಸೇನೆಯ 30,000 ಸೈನಿಕರನ್ನು ಜಮ್ಮು-ಕಾಶ್ಮೀರಕ್ಕೆ ಕಳುಹಿಸಿದ ನಂತರ ಅನ್ಯ ಮಾರ್ಗವಿರದೇ,ಪಾಕ್ ಸೇನೆ ಹಿಂದಿರುಗಿತು, ತದನಂತರ ಬೆನಝೀರ್ ಭುಟ್ಟೋ-ರಾಜೀವ್ ಗಾಂಧಿ ನಡುವೆ ಮಾತುಕತೆ ನಡೆದು ಸಂಧಿ ಪ್ರಕ್ರಿಯೆ ನಡೆಯಿತು.ಎರಡೂ ದೇಶಗಳ ನಿರ್ಧಾರ ಯಾವುದೇ ದೇಶದ ಅತಿಕ್ರಮಣ ಮಾಡುವುದಿಲ್ಲ ಎಂದು.

ಆಕ್ರಮಣದ ನಂತರ ಒಪ್ಪಂದ… ಒಪ್ಪಂದಗಳ ನಡುವೆ ಆಕ್ರಮಣ… ಇದು ಭಾರತದಿಂದ ಸಿಡಿದು ಹೋದ ಪಾಕಿಸ್ಥಾನದ ರೀತಿ….ಈ ಸಿಡಿದು ಹೋದ ನಮ್ಮದಲ್ಲದ ನಮ್ಮದಾಗದ ಶತ್ರುದೇಶದ ನಂತರದ ಚಟುವಟಿಕೆಯು ‘ಪಾಕಿಸ್ಥಾನ ಆಕ್ರಮಿತ ಭಾರತ’ವಾಗಿ ಬೃಹತ್ ರೂಪ ಪಡೆಯಲು ಕಾರಣ ತನ್ನ ಸ್ವಂತ ನಿಲುವಿಲ್ಲದೆ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ವಿಶ್ವದಲ್ಲಿ ತನ್ನ ಛಾಪು ಮೂಡಿಸಲಾಗದ ಒಂದು ದೇಶ ನಮ್ಮ ದೇಶದ ಕಾಶ್ಮೀರದ ಮೇಲೆ ನಿರಂತರ ನಡೆಸುತ್ತಿರುವ ಕಾಶ್ಮೀರ ಪ್ರತ್ಯೇಕವಾದಿಗಳ ಆಕ್ರಮಣಗಳ ಮುಂದಿನ ಪರಿಣಾಮ.

‘ಕಾರ್ಗಿಲ್ ಯುದ್ಧ’!
ಇಲ್ಲಿ ಒಂದು ವಿಲಕ್ಷಣ ವಿಚಾರವೇನೆಂದರೆ ಆರಂಭದಿಂದಲೂ ನಮ್ಮ ದೇಶದ ಗಡಿಗಳನ್ನಾಕ್ರಮಿಸಿಕೊಳ್ಳಲು ಹೊಂಚು ಹಾಕುತ್ತಿದ್ದ ಪಾಕಿಸ್ಥಾನವು ಕಾರ್ಗಿಲ್ ಯುದ್ಧದ ಆರಂಭದಲ್ಲಿ ತನ್ನ ಸೇನೆಯ ಗಡಿಯಲ್ಲಿರುವುದನ್ನು ಒಪ್ಪಿಕೊಳ್ಳದೆ ಮುಜಾಹಿದೀನ್‍ನಂತಹ ಕಾಶ್ಮೀರ ಪ್ರತ್ಯೇಕವಾದಿಗಳ ಮೇಲೆ ದೋಷಾರೋಪಣೆ ಮಾಡಿದ್ದು ಅದರ ಕುಟಿಲ ರೀತಿಯಲ್ಲದೇ ಇನ್ನೇನು? ಶ್ರೀನಗರದಿಂದ 205 ಕಿಲೋ ಮೀಟರ್ ದೂರದಲ್ಲಿರುವ “ಕಾರ್ಗಿಲ್’ ಜಿಲ್ಲೆ, ಸಿಂಧು ನದಿಯ ಬತಾಲಿಕ್ ವಲಯಗಳ ಭಾರತ-ಪಾಕಿಸ್ತಾನ ಉಭಯ ರಾಷ್ಟ್ರಗಳ ಗಡಿ ನಿಯಂತ್ರಣ ರೇಖೆಯ ಉತ್ತರದ ಕಡೆಗೆ ರಾಷ್ಟ್ರೀಯ ಹೆದ್ದಾರಿ-1ರ ಕಡೆಗೆ ಪಾಕ್ ಸೈನಿಕರು ನುಸುಳಿದ್ದನ್ನು ಕಂಡು ಅಲ್ಲಿನ ದನಗಾಹಿಗಳು ನಮ್ಮ ಸೈನಿಕರ ಗಮನಕ್ಕೆ ತಂದ ನಂತರ ಆರಂಭವಾದ ಸಶಸ್ತ್ರ ಯುದ್ಧವೇ ‘ಕಾರ್ಗಿಲ್ ಯುದ್ಧ’!

ಮೇ 3, 1999ರಿಂದ ಆರಂಭವಾಗಿ ಜುಲೈ ತಿಂಗಳ 26ರರವರೆಗೆ ನಡೆದ ಈ ಯುದ್ಧದಲ್ಲಿ ಮೇ ಎರಡನೇ ವಾರದಲ್ಲಿ ಪಾಕ್ ಸೈನಿಕರು ಡ್ರಾಸ್, ಮುಷೋಕ್ ಇನ್ನಿತರ ಪ್ರಾಂತ್ಯಗಳಲ್ಲಿ ಕಾದಾಟ ಆರಂಭವಾಗಿ   ಕ್ಯಾಪ್ಟನ್ ಸೌರವ್ ಕಾಲಿಯಾ ನೇತೃತ್ವದಲ್ಲಿ ಮುಂದುವರೆಯಿತು….ಮೇ 26 ಫ್ಲೈಟ್ ಲೆಫ್ಟಿನೆಂಟ್ ನಚಿಕೇತ ಅವರು ಮಿಗ್-27 ಬೆಂಕಿಗಾಹುತಿಯಾದಾಗ ಪಾಕ್ ಕೈವಶ.ಸಿಂಹದಂತೆ ಘರ್ಜಿಸಿ ದಿಟ್ಟತನದಿಂದ ಹೋರಾಡಿದ ಸ್ಕ್ವಾಡ್ರನ್ ಲೀಡರ್ ಅಜಯ್ ಅಹುಜಾ ತನ್ನ ವಾಯುವಿಮಾನದಿಂದ ‘ಲ್ಯಾಂಡಿಂಗ್’ನಲ್ಲಿದ್ದಾಗಲೇ ಗುಂಡು ಹಾರಿತು…ನಂತರ ಸತತ ಗುಂಡಿನ ಪ್ರಹಾರದಿಂದ ಅವರ ಹತ್ಯೆ.

ತೀವ್ರಗೊಂಡ ಯುದ್ಧದ ಪರಿಸ್ಥಿತಿ….ಜೂನ್ 13 ನಮ್ಮ ಸೈನಿಕರಿಂದ ಮುಖ್ಯವಾದ ‘ಟೋಲೋರಿಂಗ್ ಪರ್ವತ’ವನ್ನು ಮತ್ತೆ ಪಡೆದದ್ದು, 22 ದಿನಗಳು ಪಾಕ್ ಸೇನೆಯ ವಶದಲ್ಲಿದ್ದ ಸೌರವ್ ಕಾಲಿಯಾ ಮತ್ತವರ ಸಂಗಡಿಗರನ್ನು ಚಿತ್ರಹಿಂಸೆಯಿಂದ ನಿರ್ದಾಕ್ಷಿಣ್ಯವಾಗಿ ಕೊಂದದ್ದಲ್ಲದೇ ಅವರ ಶರೀರ ದೊರೆತಾಗ ಅಂಗಹೀನವಾಗಿದ್ದ ಸ್ಥಿತಿ…ಇಷ್ಟೇ ಅಲ್ಲಾ… ಕ್ಯಾಪ್ಟನ್ ವಿಕ್ರಂ ಬಾತ್ರಾ, ಮೇಜರ್ ಪದ್ಮಪಾಣಿ ಆಚಾರ್ಯ, ಲೆಫ್ಟಿನೆಂಟ್ ಭಟ್ಟಾಚಾರ್ಯ, ಕೇಸಿಂಗ್ ನಿಂಗ್ರಾಂ…. ಇನ್ನೂ 527 ವೀರರು…. ಬದುಕುಳಿದ ಫ್ಲೈಟ್ ಲೆಫ್ಟಿನೆಂಟ್ ನಚಿಕೇತ್, ಮೇಜರ್ ಸೋನಂ ವಾಂಗ್‍ಚುಕ್, ಇನ್ನೂ ಮುಂತಾದ 1300ಕ್ಕೂ ಹೆಚ್ಚಿನ ಭಾರತದ ಯೋಧರು. ಇವರೆಲ್ಲರ ಬಲಿದಾನ ಮತ್ತು ತ್ಯಾಗಗಳ ಫಲವೇ, ತನ್ನ ದೇಶವನ್ನು ಶತೃಗಳ ಕರಾಳ ಹಸ್ತದಿಂದ ಮುಕ್ತಗೊಳಿಸುವ ಛಲವೇ ಅಂತಿಮವಾಗಿ ವಿಜಯದ ಸಂಕೇತವಾಯ್ತು…200,000ಕ್ಕೂ ಹೆಚ್ಚು ಸೈನಿಕರನ್ನೊಳಗೊಂಡ ಸೇನೆಯ ತುಕಡಿಗಳು ಹಗಲು ರಾತ್ರಿಯೆನ್ನದೇ, ಕೊರೆವ ಛಳಿಯಲ್ಲಿ ಹಿಮದಲ್ಲಿ ನಡೆಸಿದ ‘ಆಪರೇಶನ್ ವಿಜಯ್’ ಮತ್ತು ವಾಯಸೇನೆಯ ‘ಆಪರೇಶನ್ ಸಫೇದ್ ಸಾಗರ್’.

ಕಾರ್ಗಿಲ್-ಡ್ರಾಸ್ ಪ್ರಾಂತ್ಯಗಳಲ್ಲಿ ನಿರಂತರವಾಗಿ ಸಾಗಿದ 2 ತಿಂಗಳ ಸಂಘರ್ಷದ ನಂತರ ಅನೇಕ ಶಿಖರಗಳನ್ನು ಭಾರತದ ಪಡೆಗಳು ಮರುವಶಕ್ಕೆ ತೆಗೆದುಕೊಂಡÀವು. ಭಾರತದ ಶಕ್ತಿಯ ಅರಿವಿದ್ದ ಪಾಕ್ ಸೋಲು ಖಚಿತವೆಂದು ಅರಿವಾದಾಗ ತನ್ನ ವಶದಲ್ಲಿದ್ದ ಭಾರತದ ಸೈನಿಕರನ್ನು ನಡೆಸಿಕೊಂಡ ಮತ್ತು ಚಿತ್ರಹಿಂಸೆಗಳಿಂದ ಕೊಂದ ರೀತಿಯನ್ನು ವಿಶ್ವದೆಲ್ಲೆಡೆ ವಿರೋಧ ವ್ಯಕ್ತವಾದಾಗ ಹೆದರಿದ ಪಾಕ್,ತನ್ನ ಹೀನಾಯ ಸೋಲನ್ನು ತಾನೇ ಕಾಣುವಂತಾಯ್ತು.

ಮಧ್ಯ ಪ್ರವೇಶಿಸಲು ಪಾಕ್ ಅಮೇರಿಕಾವನ್ನು ಕೇಳಿದಾಗ ಪಾಕ್ ತನ್ನ ಸೇನೆಯನ್ನು ಮತ್ತೆ ಕರೆಸಿಕೊಳ್ಳದ ಹೊರತು ಆಗದೆಂದು ಅಮೆರಿಕಾ ನಿರಾಕರಿಸಿದ್ದು ಒಂದೆಡೆಯಾದರೆ,ಅಂದಿನ ಜಿ-8 ರಾಷ್ಟ್ರಗಳು ಪಾಕಿಸ್ಥಾನದ ಈ ಕೃತ್ಯವನ್ನು ತೀವ್ರವಾಗಿ ಪ್ರತಿಭಟಿಸಿ ಭಾರತವನ್ನು ಸಮರ್ಥಿಸಿದಾಗ, ಪಾಕ್ ಅಧ್ಯಕ್ಷ ಮುಷಾರಫ್‍ರಿಗಾದ ಮುಖಭಂಗ ಮತ್ತು ಭಾರತದ ಅಂದಿನ ಪ್ರಧಾನಿ  ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಕೂಡಲೇ ನಮ್ಮ ರಕ್ಷಣಾ ವ್ಯವಸ್ಥೆಯ ಆದೇಶ ಮತ್ತು ನಿಯಂತ್ರಣ ರಚನೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಸಮರ್ಥನೆ!

ಭಾರತಮಾತೆಯ ಮಡಿಲಲ್ಲಿ ದೇಶರಕ್ಷಣೆಯ ಕಂಕಣ ಕಟ್ಟಿದ್ದ ನಮ್ಮ ಸೈನಿಕರು ವೀರಸ್ವರ್ಗವನ್ನೇ ಪಡೆದರು. ಜಮ್ಮು ಕಾಶ್ಮೀರದಲ್ಲಿ ಕಾರ್ಗಿಲ್, ಡ್ರಾಸ್, ಬತಾಲಿಕ್ ಸತತವಾಗಿ ಎರಡು ತಿಂಗಳ ಕಾಲ ನಡೆದ ಕಾರ್ಗಿಲ್ ಯುದ್ಧದಲ್ಲಿ 400ಕ್ಕೂ ಹೆಚ್ಚು ಸೈನಿಕರನ್ನ ಈ ದೇಶ ಕಳೆದುಕೊಂಡಿತು.ಅಧಿಕಾರದ ಸ್ವಾರ್ಥದ ಹುನ್ನಾರದಿಂದ ನಮ್ಮಿಂದ ಸಿಡಿದು ಹೋದ ತನ್ನತನವೇ ಇಲ್ಲದ, ಅಧರ್ಮದ ತಳಹದಿಯಲ್ಲಿ ನಿಂತಿರುವ ಪ್ರಾಂತ್ಯದೊಂದಿಗೆ ಶಾಂತಿ ಪ್ರಕ್ರಿಯೆ ಎನ್ನುವುದು ಕಷ್ಟಕರ. ಅಧಿಕಾರಿಗಳೂ ಸೈನಿಕರೂ… ಕಳೆದುಹೋದವರು, ಮಂಜಿನಲ್ಲಿ ಹುದುಗಿಹೋದವರು ಅಥವಾ ಪಾಕಿಸ್ತಾನದ ಸೇನೆಗೆ ಬಲಿಯಾದವರು… ಇವರೆಲ್ಲರೂ ಭಾರತಮಾತೆಯ ಮಕುಟದ ರತ್ನಗಳು….ವೀರ ಚಕ್ರ ಪರಮ ವೀರ ಚಕ್ರಗಳು ‘ಬದುಕಿದರೆ ಯುದ್ಧವಿಜಯವನ್ನು ಕಾಣುವ ಭಾಗ್ಯ, ಮಡಿದರೆ ವೀರಸ್ವರ್ಗ’ ಎನ್ನುವ ಇವರ ಧ್ಯೇಯಕ್ಕೆ ಸಂದ ಗೌರವ.ಈ ಎಲ್ಲರ ಆತ್ಮಗಳಿಗೆ ಶಾಂತಿ ದೊರೆಯುವುದು ನಮ್ಮ ದೇಶವು ಸುರಕ್ಷಿತವಾದ ಗಡಿಯ ನೆರಳಿನಡಿ ನೆಮ್ಮದಿಯ ನಿಟ್ಟುಸಿರು ಪಡೆದಾಗಲೇ, ಅದೇ ‘ವಿಜಯ ದಿನ’ದ ನಿಜವಾದ ಸಾರ್ಥಕತೆ, ದೇಶದ ಅಭ್ಯುದಯ!

2 ಟಿಪ್ಪಣಿಗಳು Post a comment
 1. shripad
  ಜುಲೈ 26 2015

  ಚಿಂತನಾರ್ಹ ಲೇಖನ. ಅಭಿನಂದನೆಗಳು.

  ಉತ್ತರ
 2. WITIAN
  ಜುಲೈ 28 2015

  ಉತ್ತಮ ಲೇಖನ, ಆದರೆ ಒಂದು ಸಣ್ಣ ದೋಷ ನುಸುಳಿದೆ. ಕಾಶ್ಮೀರಕ್ಕೆ ಪಾಕಿಸ್ತಾನದ ದಾಳಿಕೋರರು ನುಗ್ಗಿದಾಗ ಸಮಸ್ಯೆಯನ್ನು ವಿಶ್ವಸಂಸ್ಥೆಯ ಸೆಕ್ಯುರಿಟಿ ಕೌನ್ಸಿಲ್ ಗೆ ತೆಗೆದುಕೊಂಡು ಹೋಗಿದ್ದು ಪಾಕಿಸ್ತಾನ ಅಲ್ಲ! ಬದಲಿಗೆ ಅಂದು ನಮ್ಮ ದೇಶದ ಪ್ರಧಾನಿಯಾಗಿದ್ದ ಪಂ. ಜವಹರಲಾಲ್ ನೆಹರು!

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments