“ವಿಧ್ವಂಸಕತೆ”ಯೆಂಬುದು ಪ್ರಗತಿಪರರ ಹುಟ್ಟುಗುಣವೇ?
– ರಾಕೇಶ್ ಶೆಟ್ಟಿ
ಎಲ್ಲಾ ಚುನಾವಣಾ ಸಮೀಕ್ಷೆಗಳನ್ನು ತಲೆಕೆಳಗು ಮಾಡಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿಯೇ ಬಹುಮತ ಪಡೆದಾಗ,ದಶಕಗಳಿಂದ ನಡೆಸಿಕೊಂಡು ಬರಲಾಗಿದ್ದ “ಮೋದಿ ವಿರೋಧಿ ಕ್ಯಾಂಪೇನ್”ನ ಶವ ಪೆಟ್ಟಿಗೆಗೆ ಅಂತಿಮ ಮೊಳೆ ಬಿದ್ದಿತ್ತು.ಆದರೆ ಅತೃಪ್ತ ಆತ್ಮಗಳೇನು ಸುಮ್ಮನಿರುವ ಪೈಕಿಯೇ? ಅವುಗಳು ಶವಪೆಟ್ಟಿಗೆಯೊಳಗಿಂದಲೂ ಸದ್ದು ಮಾಡುತಿದ್ದವು.ಬಿಜೆಪಿಯ ವೋಟ್ ಶೇರ್ ಇರುವುದು ೩೧% ಮಾತ್ರ,ಇನ್ನು ೬೯% ಎಲ್ಲಿ ಅಂತ.ಪ್ರಗತಿಪರರ ಈ ಲೆಕ್ಕಾಚಾರವನ್ನು,ಕಷ್ಟಪಟ್ಟು ೩೫ ಅಂಕ ಪಡೆದು ಪಾಸ್ ಆದ ವಿದ್ಯಾರ್ಥಿಯೊಬ್ಬನ ಮುಂದೆ ನಿಂತು, “ನೋಡಪ್ಪಾ ನೀನು ತೆಗೆದಿರುವುದು ೩೫ ಮಾತ್ರ,ಇನ್ನು ೬೫ ತೆಗೆದಿಲ್ಲವಾದ್ದರಿಂದ ನೀನು ಪಾಸಾದರೂ,ಫೇಲ್ ಆದಂತೆ ಲೆಕ್ಕ” ಹೇಳಿದರೆ ಕೆನ್ನೆಯೂದುವುದು ಖಚಿತ.ಮೋದಿ ಸರ್ಕಾರದ ವಿರುದ್ಧ ಹೀಗೆ ಶುರುವಾದ ನರಳಾಟ ಮುಂದುವರೆಯುತ್ತಲೇ ಇದೆ.
Of course ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನ ಧ್ವನಿಗಳಿಗೆ ಮನ್ನಣೇ ನೀಡಲೇಬೇಕು.ಕೇಂದ್ರ ಸರ್ಕಾರವನ್ನು ವಿರೋಧಿಸಲೇ ಬಾರದೂ ಅಂತಲೂ ಏನಿಲ್ಲ.ಟೀಕೆ-ಟಿಪ್ಪಣಿಗಳಿರಲೇಬೇಕು.ಆದರೆ ಅವು ಸಕಾರಾತ್ಮಕವಾಗಿದ್ದರೆ ಸಮಾಜದ ಆರೋಗ್ಯಕ್ಕೂ ಒಳ್ಳೆಯದು.ಆದರೆ ನಮ್ಮ ಪ್ರಗತಿಪರರು ತಮ್ಮ “ಪುರಾತನ ಪದ್ಧತಿ”ಯಾದ ನಕಾರಾತ್ಮಕ ಟೀಕಾ ಶೈಲಿಯನ್ನೇ ಮುಂದುವರೆಸಿದ್ದಾರೆ.ಪುರಾತನ ಪದ್ಧತಿ ಎನ್ನಲು ಕಾರಣವಿದೆ.
ಮದರಾಸಿನ ಭಾಷಣವೊಂದರಲ್ಲಿ ಸ್ವಾಮಿ ವಿವೇಕಾನಂದರು,ಅಂದಿನ ಕಾಲದ ಸಮಾಜ ಸುಧಾರಕರ ಕುರಿತು “ಅವರದು ಧ್ವಂಸ ಮಾರ್ಗ.ನನ್ನದು ನಿರ್ಮಾಣ ಮಾರ್ಗ“ ಎಂದಿದ್ದರು.
ಇವತ್ತಿಗೂ ಈ ಜನರ ಮಾರ್ಗವೇನೂ ಬದಲಾಗಿಲ್ಲ.ಅವರಿನ್ನೂ ವಿಧ್ವಂಸಕ ಹಾದಿಯಲ್ಲಿಯೇ ಸಾಗುತಿದ್ದಾರೆ ಎನ್ನಲಿಕ್ಕೆ ಕಣ್ಣ ಮುಂದೆಯೇ ಹಲವಾರು ಉದಾಹರಣೆಗಳಿವೆ.ಬಹುಷಃ ಈ ವಿಧ್ವಂಸಕತೆಯೆಂಬುದು ಪ್ರಗತಿಪರರೆಂದು ಕರೆದುಕೊಳ್ಳುವ ಗುಂಪಿನವರ ಹುಟ್ಟುಗುಣವಿದ್ದಿರಬೇಕು.ಹಾಗಾಗಿಯೇ ಪ್ರತಿಯೊಂದು ಒಳ್ಳೆಯ ಕೆಲಸ,ಪ್ರಯತ್ನಗಳನ್ನೂ ಈ ಜನರು ಧ್ವಂಸ ಮಾಡುವಲ್ಲೇ ಸಂತೋಷ ಹುಡುಕುತ್ತಿರುತ್ತಾರೆ. ಉದಾಹರಣೆಗೇ,”ಸ್ವಚ್ಚ ಭಾರತ,ವಿಶ್ವಯೋಗ ದಿನ,ಹೆಣ್ಣು ಭ್ರೂಣ ಹತ್ಯೆ ತಡೆ ಮತ್ತು ಶಿಕ್ಷಣಕ್ಕೆ ನೀಡುವ ಮಹತ್ವದ ಕಾರ್ಯದ ಅಂಗವಾಗಿ ಆರಂಭಿಸಿದ #selfiewithdaughter ಅಭಿಯಾನ”ಗಳನ್ನು ತೆಗೆದುಕೊಳ್ಳಬಹುದು.
ಯುಪಿಎ ಸರ್ಕಾರದ ಹತ್ತು ವರ್ಷಗಳ ಅವಧಿಯಲ್ಲಿ ಭಾರತ ಎಂಬ ದೇಶವನ್ನು ಜಗತ್ತಿನ ಪುಟ್ಟ ದೇಶಗಳೂ ಕ್ಯಾರೇ ಎನ್ನದ ಮಟ್ಟಿಗೆ, ಈ ದೇಶದ ಆತ್ಮಸ್ಥೈರ್ಯವನ್ನು ಕುಗ್ಗಿಸಲಾಗಿತ್ತು. ಪ್ರಧಾನಿಯಾಗಿ ಮೋದಿಯವರು ಬಂದ ಮೇಲೆ ಪರಿಸ್ಥಿತಿ ಧನಾತ್ಮಕವಾಗಿ ಬದಲಾಗುತ್ತಲಿದೆ.ಅಧಿಕಾರ ಸ್ವೀಕಾರದಂದೇ ಮೋದಿಯವರು ಸಾರ್ಕ್ ರಾಷ್ಟ್ರಗಳೊಂದಿಗೆ ಕೈ ಮಿಲಾಯಿಸಿದರು. ಗಣರಾಜ್ಯೋತ್ಸವಕ್ಕೆ ಅಮೇರಿಕಾ ಅಧ್ಯಕ್ಷರನ್ನು ಆಹ್ವಾನಿಸಿ ಬರಾಕ್ ಒಬಾಮ ಅಥಿತಿಯಾಗಿ ಬಂದಾಗ ಸಹಜವಾಗಿಯೇ ದೇಶದ ಬಹಳಷ್ಟು ಜನರಿಗೆ ಖುಷಿಯಾಗಿತ್ತು.ಆಗ ಬೇಸರಪಟ್ಟುಕೊಂಡ ಕೆಲವೇ ಕೆಲವರಲ್ಲಿ,ಮೋದಿ ಪ್ರಧಾನಿ ಅಭ್ಯರ್ಥಿಯಾಗುವ ಮೊದಲೇ,ಅವರಿಗೆ ಅಮೇರಿಕಾ ವಿಸಾ ಕೊಡಬೇಡಿ ಎಂದು ಒಬಾರಮರಿಗೆ ಸಹಿ ಹಾಕಿದ್ದ “೬೫ ದೇಶದ್ರೋಹಿ”ಗಳಂತ ಮನಸ್ಸುಗಳವರಿದ್ದಿರಬೇಕಷ್ಟೇ.
ಮೋದಿಯವರು ಬಂದ ಮೇಲೆಯೇ ಆಗಸ್ಟ್ ೧೫ ಹಾಗೂ ಜನವರಿ ೨೬ರ ಭಾಷಣವೂ ದೇಶದ ಜನರಿಗೆ ಮುಖ್ಯವೆನಿಸಲಾರಂಭಿಸಿದ್ದು.ಅದಕ್ಕೆ ತಕ್ಕಂತೆ ಮೋದಿ,ಆಗಸ್ಟ್ ೧೫ರ ಸ್ವಾತಂತ್ರೋತ್ಸವ ಭಾಷಣದಲ್ಲಿ “ಸ್ವಚ್ಚ ಭಾರತ”ದ ಕನಸನ್ನು ಬಿತ್ತಿದರು ಮತ್ತದನ್ನು ಘೋಷಣೆಗೇ ಮಾತ್ರ ಸೀಮಿತವಾಗಿಸದೇ ಕಾರ್ಯರೂಪಕ್ಕೂ ತಂದರು.ಮೋದಿ ವಿರೋಧಿಗಳೂ ಈ ಕಾರ್ಯಕ್ರಮವನ್ನು ಬೆಂಬಲಿಸಿದರೂ,ಕಾಂಗ್ರೆಸ್ಸ್ ಅಳ್ವಿಕೆಯ ಕೆಲವು ರಾಜ್ಯ ಸರ್ಕಾರಗಳಂತೂ ಇದರಲ್ಲೂ ರಾಜಕೀಯ ಮಾಡಿದವು.ಅಂತ ರಾಜ್ಯ ಸರ್ಕಾರದಲ್ಲಿ ಕರ್ನಾಟಕದ ಕಾಂಗ್ರೆಸ್ಸ್ ಕೂಡ ಇತ್ತು ಎಂಬುದು ಗೊತ್ತಿರುವ ವಿಷಯವೇ.
ಇನ್ನು ವಿಶ್ವಸಂಸ್ಥೆಯಲ್ಲಿ ಮೋದಿಯವರು ನೀಡಿದ ಸಲಹೆಯಂತೆ “ವಿಶ್ವ ಯೋಗದಿನ”ದ ಘೋಷಣೆಯಾದಗಲಂತೂ ಅದೆಷ್ಟು ಪ್ರಗತಿಪರ ಮನಸ್ಸುಗಳ ವೇದನೆ ಅನುಭವಸಿದವೋ ಏನೋ.ಅವರ ವೇದನೆಗೆ ಕೈಗನ್ನಡಿಯಂತೇ,ರಾಜ್ಯದ ಪುರಾತನ ಪ್ರಗತಿಪರರೂ,ಮಾಜಿ ಪತ್ರಕರ್ತರೊಬ್ಬರು ಲೇಖನದ ಮೂಲಕ ಅದನ್ನು ಜಗಜ್ಜಾಹೀರು ಮಾಡಿಕೊಂಡರು.ನಮ್ಮ ಪ್ರಗತಿಪರರ ಬಾಯಲ್ಲಿ ಪದೇ ಪದೇ ಕೇಳಿಸುವ ಪದಗಳಾದ “ಹುನ್ನಾರ,ಸಾಂಸ್ಕೃತಿಕ ರಾಜಕಾರಣ”ವೆಂಬ ಹಳಸಲು ಪದಗಳು ಆ ಲೇಖನದಲ್ಲಿ ತುಂಬಿಕೊಂಡಿತ್ತು.
ಪ್ರಗತಿಪರರು ಬಳಸುವ “ಸಾಂಸ್ಕೃತಿಕ ರಾಜಕಾರಣ”ವೆಂಬ ಪದದ ಬಳಕೆಯನ್ನು ಗಮನಿಸಬೇಕು.ಸಂಘ ಪರಿವಾರದ ಸಾಂಸ್ಕೃತಿಕ ರಾಜಕಾರಣದ ಕುರಿತು ಬರೆವಾಗ ಇದೇನೋ ಮಹಾನ್ ವಿನಾಶಕಾರಿ ನಡೆಯೇನೋ ಎಂಬಂತೆ ಬರೆದುಕೊಳ್ಳುತ್ತಾರೆ.ಆದರೆ ಮಜಾ ನೋಡಿ,ಇವರುಗಳೂ ಸಹ ಇತ್ತೀಚೆಗೆ ಇದೇ ಮಹಾನ್ ವಿನಾಶಕಾರಿ “ಸಾಂಸ್ಕೃತಿಕ ರಾಜಕಾರಣ”ದ ಬಗ್ಗೆ ಮಾತನಾಡಲಾರಂಭಿಸಿದ್ದಾರೆ.ಈ ವರ್ಷದ ಆರಂಭದಲ್ಲಿ ಒಂದಷ್ಟು ಸಂಘಟನೆಗಳು ಸೇರಿಕೊಂಡು ಬೆಂಗಳೂರಿನಲ್ಲೊಂದು ಸಭೆ ಮಾಡಿಕೊಂಡಿದ್ದರು,ಅದಕ್ಕೊಂದು ಕರಪತ್ರವೂ ಇತ್ತು.ಆ ಕರಪತ್ರದಲ್ಲಿ,ಪರ್ಯಾಯ ಸಾಂಸ್ಕೃತಿಕ ರಾಜಕಾರಣ ಇಂದಿನ ಅನಿವಾರ್ಯ ಎಂದಿದ್ದರು.ಈಗ ನಡೆಯುತ್ತಿರುವ ಬಹುತೇಕ ಪ್ರಗತಿಪರರ ಸಭೆಗಳಲ್ಲಿ ಈ ಪದದ ಬಳಕೆಯಾಗುತ್ತದೆ,ಮತ್ತು ಅವರು ಈ ಪದವನ್ನು ಬಳಸುವುದು “ಸ್ವಾಭಿಮಾನ”ದ ಸಂಕೇತವಾಗಿ ಎಂದು ಹೇಳಿಕೊಳ್ಳುತ್ತಾರೆ.ಅಸಲಿಗೆ ಇವರು ಪ್ರತಿಪಾದಿಸುತ್ತಿರುವ ಸಾಂಸ್ಕೃತಿಕ ರಾಜಕಾರಣವೆಂದರೆ ತಮ್ಮ ತಮ್ಮ ಜಾತಿಗಳಿಗೆ ಪ್ರಾತಿನಿಧ್ಯ ಕೊಡಿಸುವ ಜಾತಿರಾಜಕಾರಣವಷ್ಟೇ.ಹೇಗಿದೆ ನೋಡಿ, ಬಲಪಂಥೀಯರೆಂದು ಕರೆಸಿಕೊಳ್ಳುವವರ ಸಾಂಸ್ಕೃತಿಕ ರಾಜಕಾರಣವೆಂಬುದು ಸರ್ವನಾಶ ಮಾಡುವುದಾದರೇ,ಪ್ರಗತಿಪರರ ಸಾಂಸ್ಕೃತಿಕ ರಾಜಕಾರಣ ಮಾತ್ರ ಸ್ವಾಭಿಮಾನದ ಸಂಕೇತವಂತೆ! ಧ್ವಂದ್ವ ಎಂಬುದು ಪ್ರಗತಿಪರರ ಮನೆದೇವರಾಗಿರುವುದರಿಂದ ಇದರಲ್ಲಿ ಆಶ್ಚರ್ಯವೇನೂ ಇಲ್ಲ.
ಯಾರನ್ನಾದರೂ ಬೇಕೆಂದಾಗ ಬಳಸಿ ಬಿಸಾಡುವಲ್ಲಿ ನಿಷ್ಣಾತರಾದವರಲ್ಲವೇ ಈ ಮಂದಿ.ಹಾಗಾಗಿಯೇ ಗೋ-ಹತ್ಯೆಯ ಕುರಿತು ಮಾತನಾಡುವಾಗ ಇವರು ಸಾವರ್ಕರ್ ಬೆನ್ನಹಿಂದೆ ಅಡಗಿಕೊಳ್ಳುತ್ತಾರೆ.ಇನ್ನೂ ಮಹಾತ್ಮ ಗಾಂಧೀಜಿಯವರ ಹೆಗಲ ಮೇಲೆ ಇವರ ಬಂದೂಕು ಖಾಯಂ ಆಗಿರುತ್ತದೆ.ಯೋಗವೆಂಬುದು ಭಾರತೀಯ ಸಂಸ್ಕೃತಿಯದ್ದು ಎಂದರೆ,ಅದು ಇಲ್ಲಿನ ಮುಸ್ಲಿಮರು,ಕ್ರಿಶ್ಚಿಯನ್ನರದಲ್ಲ ಎಂದಂತಾಗುತ್ತದೆಯೇ? ಕಿಡಿ ಹಚ್ಚುವಲ್ಲಿ ನಿಷ್ಣಾತರಾದ ಕೆಲವು ಪ್ರಗತಿಪರರಿಗೆ ಮಾತ್ರ ಹಾಗನ್ನಿಸಬಲ್ಲದು.
ಅಷ್ಟಕ್ಕೂ,ಯೋಗದಿನದಂದು ಈ ದೇಶದ ಪ್ರತಿಯೊಬ್ಬರು ಕಡ್ಡಾಯವಾಗಿ ಯೋಗ ಮಾಡಲೇಬೇಕೆಂಬ ಸರ್ವಾಧಿಕಾರಿ ನಿರ್ದೇಶನವನ್ನೇನೂ ಕೇಂದ್ರ ಸರ್ಕಾರ ನೀಡಿರಲಿಲ್ಲ.ಸರ್ವಾಧಿಕಾರಿ ನಿರ್ದೇಶನ ನೀಡಲೂ ಇದೇನು ೭೦ರ ದಶಕವೂ ಅಲ್ಲ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ಸೂ ಅಧಿಕಾರದಲ್ಲಿಲ್ಲ.ಆದರೂ,ತಮ್ಮ ಪುರಾತನ ಪದ್ಧತಿಯಾದ “ವಿಧ್ವಂಸಕತೆ” ಜಾಗೃತವಾಗಿ ಕೆಲವು ಪ್ರಗತಿಪರರು ಯೋಗದಿನಕ್ಕೂ ತಗಾದೆ ತೆಗೆದರು.ಈ ಜನರ ನರಳಾಟದ ನಡುವೆಯೂ ಭಾರತದಲ್ಲಷ್ಟೇ ಅಲ್ಲದೇ ವಿಶ್ವದೆಲ್ಲೆಡೆ ವಿಶ್ವ ಯೋಗದಿನ ಯಶಸ್ವಿಯಾಯಿತು.ಖುದ್ದು ಮುಸ್ಲಿಂ ದೇಶಗಳೇ ಖುಷಿಯಾಗಿ ಭಾಗವಹಿಸಿದ್ದವು.ಅಸಲಿಗೆ ಸಮಸ್ಯೆಯಿದ್ದಿದ್ದು ಮುಸ್ಲಿಮರದ್ದಲ್ಲ,ವಿಧ್ವಂಸಕ ಪ್ರಗತಿಪರ ಮನಸ್ಸುಗಳದ್ದು!
ವಿಶ್ವಯೋಗದಿನದ ನಂತರ ಈವರ ಕಣ್ಣಿಗೆ ಬಿದ್ದಿದ್ದು, ಬೇಟಿ ಪಢಾವೋ; ಬೇಟಿ ಬಚಾವೋ ಆಂದೋಲನದ ಅಂಗವಾಗಿ ಪಿ.ಎಂ ಕರೆಕೊಟ್ಟ #selfiewithdaughter ಅಭಿಯಾನ.ಪಿಎಂ ಮೋದಿಯವರು ಕೊಟ್ಟ ಕರೆಗೆ ಭರಪೂರ ಬೆಂಬಲ ವ್ಯಕ್ತವಾಗಿದ್ದರಿಂದ ಕೆಲವು ಪ್ರಗತಿಪರರಿಗೆ ಸಹಜವಾಗಿಯೇ ಮಂಡೆ ಬೆಚ್ಚವಾಗಿ ಕೌಸರ್ ಬಾನು ನೆನಪಾದಳು.ಕೌಸರ್ ಬಾನುವಿನ ಭೀಭತ್ಸ ಹತ್ಯೆಯ ಅರ್ಧ ಸತ್ಯದ ಕತೆಯನ್ನು ರಕ್ತಮಯವಾಗಿ ವರ್ಣಿಸುವುದರಿಂದ ಇನ್ನೊಂದಿಷ್ಟು ಮುಸ್ಲಿಂ ಯುವಕರನ್ನು ದ್ವೇಷದ ಹಾದಿಗೆ ತಲುಪಿಸಿ,ಆ ಯುವಕರನ್ನು ನಂಬಿಕೊಂಡ ತಂದೆ-ತಾಯಿಗಳನ್ನು ಬೀದಿಗೆ ತರಿಸಿಬಹುದಷ್ಟೇ.
ಗುಜರಾತ್ ಕೋಮುಗಲಭೆಯಲ್ಲಿ ಮೋದಿಯವರ ಪಾತ್ರದ ಬಗ್ಗೆ ಭಾರತದ ಸರ್ವೋಚ್ಚ ನ್ಯಾಯಾಲಯವೂ ಕ್ಲೀನ್ ಚಿಟ್ ಕೊಟ್ಟರೂ,ಇನ್ನೂ ಈ ಗುಂಪಿಗೆ ಅವರ ಮೇಲಿನ ದ್ವೇಷ ಕಡಿಮೆಯಾಗಿಲ್ಲ.ಒಂದು ಕಡೆ ಸಂವಿಧಾನವೇ ಶ್ರೇಷ್ಟ ಎನ್ನುವವರು ಇವರೇ,ಇನ್ನೊಂದು ಕಡೆ ಅದೇ ಸಂವಿಧಾನಕ್ಕೆ ಬದ್ಧವಾಗಿ ಕಾರ್ಯ ನಿರ್ವಹಿಸುವ ಈ ದೇಶದ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನೂ ಈ ಜನರು ಗೌರವಿಸುವುದಿಲ್ಲ.ಪ್ರಜೆಗಳೇ ಪ್ರಭುಗಳೆಂದು ಕರೆಸಿಕೊಳ್ಳುವ ಜನರಿಂದಲೇ ಬಹುಮತದಿಂದ ಆಯ್ಕೆಯಾದರೂ ಇವರು ಜನರಿಗೂ ಗೌರವ ನೀಡುವುದಿಲ್ಲ.ಇವರು ಮನುಷ್ಯರನ್ನು ಒಪ್ಪುವ ಪೈಕಿಯಲ್ಲ ದೇವರಿಂದಲೇ ಹೇಳಿಸೋಣವೆಂದರೆ ಇವರಿಗೆ ದೇವರಲ್ಲೂ ನಂಬಿಕೆಯಿಲ್ಲ.ಖಾಯಿಲೆಯಿಂದ ನರಳುತ್ತಿರುವವರಿಗೆ ಚಿಕಿತ್ಸೆ ಕೊಡಿಸಬಹುದು,ಆದರೆ ಖಾಯಿಲೆ ಬಂದವರಂತೆ ನಟಿಸುವವರಿಗೆ ಏನೂ ಮಾಡಲೂ ಸಾಧ್ಯವಿಲ್ಲ.ಪ್ರಗತಿಪರರು ೨೦೦೨ರಿಂದ ಪ್ರಗತಿ ಹೊಂದಿಯೇ ಇಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.
ಕೌಸರ್ ಬಾನು ಇದ್ದಿದ್ದರೆ ತನ್ನ ಮಗಳೊಂದಿಗೆ ಸೆಲ್ಫಿ ತೆಗೆಸಿಕೊಳ್ಳುತಿದ್ದಳೇನೋ ಎಂದು ಪ್ರಗತಿಪರರು ಅಳುವುದು ಕೇಳಿ ನನಗೂ ಮೂವರು ತಾಯಂದಿರು ನೆನಪಾಗುತಿದ್ದಾರೆ.
ಬಡ ಕುಟುಂಬದಲ್ಲಿ ಜನಿಸಿ ತನ್ನ ಪರಿಶ್ರಮದಿಂದ ಐ.ಎ.ಎಸ್ ಅಧಿಕಾರಿಯಾಗಿ ರಾಜ್ಯದ ಭ್ರಷ್ಟರ ನಿದ್ದೆಗೆಡಿಸಿ, ಅನುಮಾನಸ್ಪದವಾಗಿ ಸಾವಿಗೀಡಾದ ದಕ್ಷ ಅಧಿಕಾರಿ ಡಿ.ಕೆ ರವಿ.ರವಿಯರ ಪ್ರಕರಣವನ್ನು ಸಿಬಿಐಗೆ ವಹಿಸಿ ಎನ್ನಲು ಇಡೀ ರಾಜ್ಯದ ಜನರು ಒಂದು ವಾರಗಳ ಕಾಲ ಪ್ರತಿಭಟಿಸಬೇಕಾಯಿತು.ಖುದ್ದು ರವಿಯವರ ತಾಯಿ ವಿಧಾನಸೌಧದ ಮುಂದೆ ಕಣ್ಣೀರಿಟ್ಟರೂ,”ನೆಲಸಂವೇದನೆ,ಜೀವಪರ ಮನಸ್ಸು” ಇತ್ಯಾದಿ ಪದಪುಂಜಗಳನ್ನು ಪುಂಖಾನುಪುಂಖವಾಗಿ ಹರಿಯಬಿಡುವ ಪ್ರಗತಿಪರರ ಮನಸ್ಸುಗಳು ಕರಗಿರಲಿಲ್ಲ.ಅಷ್ಟೂ ಸಾಲದು ಎಂಬಂತೆ ತನಿಖೆ ಸಾಗುತ್ತಿರುವಾಗಲೇ ರವಿಯವರ ವ್ಯಕ್ತಿತ್ವಕ್ಕೆ ಹಾನಿ ಮಾಡುವಂತ ಎಲ್ಲಾ ಕೆಲಸಗಳನ್ನು ಈ ಸರ್ಕಾರ ಮಾಡಿದ್ದನ್ನು ಜನರು ಮರೆತಿಲ್ಲ,ಹಾಗೇ ತನಿಖೆಯ ಮಾಹಿತಿಯನ್ನು ಹೊರಗೆಳೆದು ಹಾದಿತಪ್ಪಿಸುವ ಕೆಲಸವನ್ನು ಸಮರ್ಥಿಸಿಕೊಂಡವರಲ್ಲಿ ಇದ್ದವರೂ ಪ್ರಗತಿಪರರ ಹಣೆಪಟ್ಟಿಕಟ್ಟಿಕೊಂಡವರೇ ಎಂಬುದೇನೂ ಗುಟ್ಟಾಗಿ ಉಳಿದಿಲ್ಲ.
ಇನ್ನು ಕಾಮಗಾರಿಯಲ್ಲಿ ನಡೆದಿರುವ ಭ್ರಷ್ಟಚಾರದ ವಿರುದ್ಧ ಬಗ್ಗೆ ವಾಹಿನಿಯೊಂದಕ್ಕೆ ಹೇಳಿಕೆ ನೀಡಿದ್ದಕ್ಕಾಗಿ ಕೊಲೆಯಾದ ಹರೆಯದ ಯುವಕ ಯಲ್ಲಾಲಿಂಗನ ತಾಯಿ ಮಾಧ್ಯಮಗಳ ಮುಂದೆ ನಿಂತು ಗ್ರಾಮದಲ್ಲಿ ನಮ್ಮ ಕುಟುಂಬದವರ ಮೇಲೆ ಬಹಿಷ್ಕಾರ ಹಾಕಲಾಗಿದೆ,ನಮಗೆ ನ್ಯಾಯ ಕೊಡಿಸಿ ಅಂತ ಕಣ್ಣೀರಿಟ್ಟು ಕೇಳುತಿದ್ದರೂ,ಪ್ರಕರಣದ ಆರೋಪಿಗಳನ್ನು ಪ್ರಭಾವಿ ಮಂತ್ರಿ ಶಿವರಾಜ್ ತಂಗಡಗಿ ರಕ್ಷಿಸುತಿದ್ದಾರೆ ಎಂಬ ಆರೋಪವಿದ್ದರೂ ರಾಜ್ಯ ಸರ್ಕಾರ ತುಟಿ ಬಿಚ್ಚುತ್ತಿಲ್ಲ.ಅದೇ ಗ್ರಾಮದಲ್ಲಿ ಪಡಿತರ ಸರಿಯಾಗಿ ಕೊಡತ್ತಿಲ್ಲ ಎಂದು ದನಿಯೆತ್ತಿದ ಸಣ್ಣ ಹನುಮಂತಪ್ಪ ಎಂಬುವವರ ಮೇಲೆ ಹಲ್ಲೆಯಾಯಿತು,ಕಡೆಗೆ ಹೊಡೆಸಿಕೊಂಡವನನ್ನೇ ಲಾಕಪ್ಪಿಗೆ ತಳ್ಳಲಾಯಿತು.ಅಷ್ಟೂ ಸಾಲದೆಂಬಂತೆ ಸಣ್ಣ ಹನುಮಂತಪ್ಪನ ತಾಯಿಯ ಮೇಲೂ ಹಲ್ಲೆಯಾಯಿತು.
ಕೌಸರ್ ಬಾನು ನೆನಪಾದ ಹಾಗೆ ನಮ್ಮ ಪ್ರಗತಿಪರರಿಗೆ ಡಿ.ಕೆ ರವಿಯವರ ತಾಯಿ,ಹದಿಹರೆಯದ ಯುವಕ ಯಲ್ಲಾಲಿಂಗನ ತಾಯಿ,ಹಲ್ಲೆಗೊಳಗಾದ ಸಣ್ಣಹನುಮಂತಪ್ಪನ ತಾಯಿ ನೆನಪಾಗುವುದಿಲ್ಲ.ನೆನಪಾಗುವುದೂ ಇಲ್ಲ.ಯಾಕೆಂದರೆ ಧ್ವಂದ್ವ ಎಂಬುದು ಇವರ ಮನೆದೇವರಲ್ಲವೇ.
ಇತಿಹಾಸ ಜ್ಞಾನವಿದ್ದವರಿಗೆ ಕೌಸರ್ ಬಾನು ನೆನಪಾಗುತ್ತಿದ್ದಳು,ಆದರೆ ನಮ್ಮ ಯುವಕರಿಗೆ ಇತಿಹಾಸ ಜ್ಞಾನವಿಲ್ಲ ಎಂಬುದು, #selfiewithdaughter ವಿರೋಧಿಸಿದ ಪ್ರಗತಿಪರರ ಅಂಬೋಣವಾಗಿತ್ತು.ಯುವಕರ ಅಜ್ಞಾನವನ್ನು ನೋಡಿ ಅವರಿಗೆ ನಿದ್ದೆ ಬರಲಿಲ್ಲವಂತೆ.
ಎಂತವರೆಲ್ಲ ನಮ್ಮನ್ನು ಆಳುತಿದ್ದಾರೆ ಮತ್ತು ಎಂತೆಂತವರೆಲ್ಲ ಸಲಹೆ,ಸೂಚನೆಗಳನ್ನು ಕೊಡುವ ಸ್ಥಾನದಲ್ಲಿ ಕುಳಿತಿದ್ದಾರೆ ಎನ್ನುವುದನ್ನೆಲ್ಲಾ ಯೋಚಿಸಿದರೆ, ನಮಗೂ ನಿದ್ರೆ ಬರುವುದಿಲ್ಲ,ಇನ್ನೂ ಇತಿಹಾಸವನ್ನು ಕೆದಕುತ್ತ ಹೊರಟರೆ ನಾವು ಗ್ರಂಥಗಳನ್ನು ಬರೆಯುವಷ್ಟು ಈ ಸಂಸ್ಕೃತಿಯ ಮೇಲೆ,ಈ ಸಂಸ್ಕೃತಿಯ ಜನರ ಮೇಲೆ ದಾಳಿಗಳಾಗಿವೆ.ಅವೆಲ್ಲವನ್ನೂ ನೆನೆಸಿಕೊಂಡರೇ ನಿದ್ರೆ ಎಂಬ ಮಾತೇ ಸುಳಿಯಲಾರದು.ಆದರೆ ಅವುಗಳನ್ನೇ ಕೆದಕುತ್ತಾ ಕೂರುವುದರಿಂದ ಬದುಕಿನ ಬಂಡಿ ಸಾಗುವುದಿಲ್ಲವಲ್ಲ!
ಹಾಗಾಗಿಯೇ,ಇಂತ ಮಂಡೆಬಿಸಿಗಳ ನಡುವೆಯೂ ಒಂದಿಷ್ಟು ಒಳ್ಳೆ ಕೆಲಸಗಳನ್ನು ಯಾರಾದರೂ ಮಾಡುತಿದ್ದಾರೆ ಎಂದರೆ ಅದನ್ನು ಬೆಂಬಲಿಸಬೇಕು,ಬೆಂಬಲಿಸುವ ಮನಸ್ಸಿಲ್ಲದಿದ್ದರೆ ಕನಿಷ್ಟ ತೆಪ್ಪಗಾದರೂ ಇರಬೇಕು.ಆದರೆ, “ವಿಧ್ವಂಸಕತೆ”ಯೆಂಬುದು ಹುಟ್ಟುಗುಣವಾಗಿರುವಾಗ ಪ್ರಗತಿಪರರು ಹೇಗೆ ತೆಪ್ಪಗಿದ್ದಾರು ಹೇಳಿ?
Some criticism is unfair but not all. Modi government has gone very soft on corruption issue. Even BJP loyalists feel so.
“Some criticism is unfair but not all” clarification needed
Modi is being criticized unfairly for land acquisition bill. He’s being fairly criticized for no progress in black money investigation. Hope this clarification satisfies you.
ಇಂಥಾ ಪ್ರಗತಿಪರರರ ವಿಲಕ್ಷಣ ವಿರೋಧದಿಂದಲೇ ಇಂದು ದೇಶದಲ್ಲಿ ಸ್ಥಿರ ಸರ್ಕಾರ ಸ್ಥಾಪಿತವಾಗಿರುವುದು.ಮೋದಿಯಂಥಾ ವಿಶ್ವನಾಯಕನೊಬ್ಬ ಭಾರತದ ನೆಲದಿಂದ ಹೊರ ಹೊಮ್ಮಿರುವುದು.
ಸದ್ಯಕ್ಕೆ ಇಂತಹಾ ಪ್ರಗತಿಪರರ ಸಂಖ್ಯೆ ಅಗತ್ಯಕ್ಕಿಂತ ತೀರಾ ಕಡಿಮೆ ಇದೆ!ಇವರ ಸಂತತಿ ಸಾವಿರವಾಗಲಿ ಎಂದು ಆಶಿಸೋಣ..
You are right! Modi ought to give us clarification on why he’s going slow on corruption and black money investigations.
Good article
ಅತ್ಯುತ್ತಮ ಲೇಖನ