ಕಂಡವರ ಮಕ್ಕಳನ್ನು ಕಾಡಿಗಟ್ಟುತ್ತಿರುವವರು ಯಾರು?
– ವಿಘ್ನೇಶ್, ಯಲ್ಲಾಪುರ
ಮೊನ್ನೆ ಮೊನ್ನೆ ನಡೆದ ಕಾರ್ಗಿಲ್ ವಿಜಯೋತ್ಸವ ಸಂಭ್ರಮಾಚರಣೆಯನ್ನು ನೋಡಿ ಕೆಲವು ಪ್ರಗತಿಪರರು “ಯೋಧ”ರನ್ನು ಕುರಿತು,ಬಡವರ ಮಕ್ಕಳನ್ನು ಬಾವಿಗೆ ತಳ್ಳುತ್ತಾರೆ ಎಂದು ಬೊಬ್ಬೆ ಹಾಕುತಿದ್ದರು.ಇದು 24 – 11- 2008ರಂದು ಕನ್ನಡ ಪ್ರಭದಲ್ಲಿ ಪ್ರಕಟವಾಗಿದ್ದ ಲೇಖನ.ಈ ಲೇಖನವನ್ನೊಮ್ಮೆ ಓದಿ.ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿದವರು ಯಾರು ಎಂಬುದು ಅರ್ಥವಾಗಬಹುದು
ಅವಳು ಪಾರ್ವತಿ!
ಕೊಪ್ಪ ತಾಲೂಕಿನ ಸೂರ್ಯದೇವಸ್ಥಾನದ ಹುಡುಗಿ. ಕಾಲೇಜು ವಿದ್ಯಾಭ್ಯಾಸಕ್ಕೆಂದು ಹೋಗಿ ಸೇರಿದ್ದು ಶಿವಮೊಗ್ಗೆಯನ್ನು. ತನ್ನ ಕುಟುಂಬದಲ್ಲಿದ್ದ ಬಡತನ ಅವಳಲ್ಲಿ ಸಾಮಾಜಿಕ ಕಳಕಳಿಯನ್ನು ಹುಟ್ಟುಹಾಕಿತ್ತು; ಶಿವಮೊಗ್ಗದಲ್ಲಿದ್ದಷ್ಟು ವರ್ಷವೂ ಒಂದಲ್ಲ ಒಂದು ಸಾಮಾಜಿಕ ವಿಷಯದ ಕುರಿತು ಹೋರಾಟ ಮಾಡಲು ಪ್ರೇರೇಪಿಸಿತ್ತು. ಅದಕ್ಕಾಗಿ ವಿವಿಧ ಸಂಘಟನೆಗಳನ್ನು ಸೇರಿದಳು. ‘ಮಹಿಳಾ ಜಾಗೃತಿ’ಯ ಕಾರ್ಯಕರ್ತೆಯಾಗಿ ಹಗಲಿರುಳು ದುಡಿದಳು, ನಾಯಕಿಯಾಗಿ ಬೆಳೆದಳು. ಶಿವಮೊಗ್ಗದ ಕೆಲ ಉಪನ್ಯಾಸಕರು ದೂರದ ಆಂಧ್ರದಿಂದ ಗದ್ದರ್‍ನನ್ನು ಕರೆಸಿ ನಡೆಸಿದ ಸಭೆಗಳಲ್ಲಿ ನಡುರಾತ್ರಿಯವರೆಗೂ ಭಾಗವಹಿಸಿದಳು. ರೈತ ಹೋರಾಟದಿಂದ ಹಿಡಿದು ನದೀಮೂಲ ರಕ್ಷಣೆಯಂತಹ ವಿಷಯದವರೆಗೆ, ಕಾಲೇಜು ವಿದ್ಯಾರ್ಥಿನಿಯರ ಸಮಸ್ಯೆಯಿಂದ ಹಿಡಿದು ಕೊಳಚೆ ನಿವಾಸಿಗಳ ದನಿಯಾಗುವವರೆಗೆ ಸಾಮಾಜಿಕವಾಗಿ ತನ್ನನ್ನು ತೊಡಗಿಸಿಕೊಂಡಳು. ಹೀಗೆ ಅತ್ಯಂತ ಕ್ರಿಯಾಶೀಲಳಾಗಿದ್ದ ಹುಡುಗಿ, ಇದ್ದಕ್ಕಿದ್ದಂತೆ ಒಂದು ದಿನ ಕಣ್ಮರೆಯಾದಳು. ನಾಲ್ಕೈದು ವರ್ಷ ಪಾರ್ವತಿ ಎಲ್ಲಿದ್ದಾಳೆ ಎಂಬುದೇ ನಾಗರಿಕ ಸಮಾಜಕ್ಕೆ ತಿಳಿದಿರಲಿಲ್ಲ. ಸಮಾಜದ ಕುರಿತು ಅಪಾರ ಕಳಕಳಿಯನ್ನಿಟ್ಟುಕೊಂಡು ಹಗಲಿರುಳೂ ಸೈಕಲ್ ತುಳಿಯುತ್ತಿದ್ದ ಹುಡುಗಿ ಹೀಗೆ ಇದ್ದಕ್ಕಿದಂತೆ ಕಣ್ಮರೆಯಾಗಿದ್ದು ಏಕೆ? ಎಲ್ಲಿ ಹೋದಳು?
ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, 2003ರ ನವೆಂಬರ್ 17ನೇ ತಾರೀಖು. ಕಾರ್ಕಳ ತಾಲೂಕಿನ ಈದು ಬಳಿಯ ಬೊಲ್ಲೊಟ್ಟುವಿನ ಮನೆಯೊಂದರಲ್ಲಿ ರಾತ್ರಿ ಸಿಡಿದ ಪೋಲೀಸರ ಗುಂಡಿನ ಬೆಳಕಲ್ಲಿ ಪಾರ್ವತಿ ಗೋಚರಿಸಿದಳು. ಹರೆಯದ ಕನಸುಗಳೆಲ್ಲ ಅರಳಿ,ಬದುಕಿನ ಗಾಂಭೀರ್ಯದತ್ತ ಹೊರಳಬೇಕಾದ ವಯಸ್ಸಿನಲ್ಲಿ ಪಾರ್ವತಿ ಹೆಣವಾಗಿ ಬಿದ್ದಿದ್ದಳು! ಅವಳ ಜೊತೆಗೇ ಮಸಣ ಸೇರಿದ ಹಾಜಿಮಾಳ ಕಥೆಯೂ ಇದಕ್ಕಿಂತ ಭಿನ್ನವೇನಲ್ಲ!
ಅಂದು ಪಾರ್ವತಿಯೊಂದಿಗಿದ್ದ ಇನ್ನೋರ್ವ ಯುವತಿ ಯಶೋದಾ. ಪೋಲೀಸರ ಗುಂಡೇಟು ತಿಂದು, ಆಸ್ಪತ್ರೆಗೆ ದಾಖಲಾಗಿ, ಗುಣಮುಖಳಾಗಿ ಈಗ ಕಳಸ ಸಮೀಪದ ತನ್ನ ಮನೆಯಲ್ಲಿರುವ ಯಶೋದಾ ಕೂಡ ಹೊತ್ತಿನ ತುತ್ತಿಗೂ ಚಿಂತಿಸಬೇಕಾದ ಸ್ಥಿತಿಯಲ್ಲಿರುವ ಬಡ ಕುಟುಂಬದಿಂದ ಬಂದವಳೇ! ದುರಂತವೆಂದರೆ, ಸಾವಿನ ಮನೆಯ ಬಾಗಿಲು ಬಡಿದ ಯಶೋದಾ ಮರಳಿ ಮನೆಗೆ ಬರುವಷ್ಟರಲ್ಲಿ ಅವಳ ತಂಗಿ ಕನ್ಯಾಕುಮಾರಿ ಕಾಡು ಸೇರಿಯಾಗಿತ್ತು! ಯಶೋದಾಳ ಹತ್ತಿರದ ಸಂಬಂಧಿಯೊಬ್ಬಳೂ ಆ ದಾರಿಯಲ್ಲೇ ನಡೆದಿದ್ದಳು.
ಕೇವಲ ಈ ಹುಡುಗಿಯರ ಕಥೆಯಷ್ಟೇನಾ ಇದು? ಖಂಡಿತಾ ಅಲ್ಲ. 2005ರಲ್ಲಿ ಮೆಣಸಿನಹಾಡ್ಯದಲ್ಲಿ ನಡೆದ ಎನ್‍ಕೌಂಟರ್‍ನಲ್ಲಿ ಸತ್ತ ಸಾಕೇತ್‍ರಾಜನ್ ಕೂಡ, ಅಪಾರ ಸಾಮಾಜಿಕ ಕಳಕಳಿ ಹೊಂದಿದ್ದ; ಕೂಲಿಕಾರ್ಮಿಕರ ಬದುಕಿನ ಒಳಹೊರಗುಗಳನ್ನು ಅರಿತಿದ್ದ; ಸಂಘಟನಾ ಕುಶಲಿಯಾಗಿದ್ದ. ಕರ್ನಾಟಕದ ಬೌದ್ಧಿಕ ವಲಯವನ್ನು ಪ್ರಭಾವಿಸಬಲ್ಲ ಸಾಮರ್ಥ್ಯವಂತನಾಗಿದ್ದ. ಆದರೆ ಪ್ರಯೋಜನವೇನು? ಶಿವಲಿಂಗು ಎಂಬ ಅಮಾಯಕ ಹುಡುಗನನ್ನು ಜೊತೆಯಲ್ಲಿ ಕರೆದುಕೊಂದು ಕಾಡಿನಲ್ಲಿ ಹೆಣವಾದ.
ಬೆಳಗಾವಿಯ ಅಜಿತ್‍ಕುಸುಬಿ ಇನ್ನೊಬ್ಬ ನತದೃಷ್ಟ. ಅಜಿತ್‍ಕುಸುಬಿಯ ತಂದೆ ಕರ್ನಾಟಕ ವಿಮೋಚನಾ ರಂಗವೆಂಬ ಸಂಘಟನೆಯ ನಾಯಕ. ತಾಯಿ, ಯಾವ ಪಾರ್ವತಿ ಕಾರ್ಯಕರ್ತೆಯಾಗಿ, ನಾಯಕಿಯಾಗಿ ಕೆಲಸ ಮಾಡಿದ್ದಳೊ ಅದೇ ಮಹಿಳಾ ಜಾಗೃತಿ ಸಂಘಟನೆಯ ಪ್ರಮುಖ ಜವಾಬ್ದಾರಿ ಹೊಂದಿದ್ದವಳು. ಮಗ, ಅವೇ ಸಂಘಟನೆಗಳು ತಲೆಯಲ್ಲಿ ತುಂಬಿದ ಭ್ರಮೆಯ ಜಾಡು ಹಿಡಿದು ಕೊಲ್ಲೂರಿನ ಕಾಡಿಗೆ ಬಂದ,ಪೊಲೀಸರ ಗುಂಡಿಗೆ ಬಲಿಯಾದ.
… 2
ಮೆಣಸಿನಹಾಡ್ಯದ ಪರಮೇಶ್ವರನ ಹೆಸರು ಕೇಳಿದರೆ, ಈಗಲೂ ಮಲೆನಾಡಿನ ಗಿರಿಜನರ ಕಣ್ಣು ತೇವವಾಗುತ್ತದೆ. ಈತ ಓದಿದ್ದು ಕಡಮೆಯಾದರೂ ತನ್ನವರ ಪರವಾಗಿ ಓಡಿದ್ದು ಜಾಸ್ತಿ. ಪರಿಸರ, ಗಣಿಗಾರಿಕೆ, ನದೀಮೂಲ, ಕುದುರೆಮುಖ ರಾಷ್ಟ್ರೀಯ ಉದ್ಯಾನ, ಗಿರಿಜನರ ಎತ್ತಂಗಡಿ.. ಹೀಗೆ ಯಾವುದೇ ವಿಷಯವಿರಲಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದ ಪ್ರಮುಖ ಹೋರಾಟಗಳಿಗೆ ಆಧಾರಸ್ತಂಭವಾಗಿದ್ದವನು ಈ ಪರಮೇಶ್ವರ. ಕುತೂಹಲದಿಂದ ಬಂದೂಕು ಚಲಾಯಿಸುವುದನ್ನು ಕಲಿಯಲು ಹೋಗಿ, ತಾನು ಹಾರಿಸಿದ ಗುಂಡು ತನ್ನದೇ ಊರಿನ ಚೀರಮ್ಮ ಎಂಬ ವೃದ್ಧ ಮಹಿಳೆಯ ಕಾಲಿಗೆ ತಾಗಿದಾಗ, ಮೂರ್ನಾಲ್ಕು ದಿನಗಳ ಕಾಲ ಮನೆಗೂ ಬರದೆ, ಅನ್ನ ನೀರೂ ಇಲ್ಲದೆ ಕಾಡಲ್ಲಿ ಅಡಗಿದ್ದ ಮುಗ್ಧ. ಆದರೆ, ಪ್ರಗತಿಪರ ಸಂಘಟನೆಗಳಲ್ಲಿ ತೊಡಗಿಸಿಕೊಳ್ಳುತ್ತ ನಡೆದಂತೆ, ನಾಲ್ಕೈದು ವರ್ಷಗಳಲ್ಲಿ ಆತ ಸವೆಸಿದ ದಾರಿ ಅವನನ್ನು ದುರಂತದತ್ತ ಕೊಂಡೊಯ್ದಿತು. 2007ರ ಜುಲೈನಲ್ಲಿ ಗೌತಮ್ ಎಂಬ ನಕ್ಸಲೀಯನೊಟ್ಟಿಗೆ ಆತ ಒಡೆಯರ ಮಠದಲ್ಲಿ ಬಲಿಯಾದ.
ಮೊನ್ನೆ ಮೊನ್ನೆ ಸತ್ತ ಮನೋಹರ ಕೂಡ ಕಡಮೆ ಆಸಾಮಿಯೇನಾಗಿರಲಿಲ್ಲ.ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಓದುತ್ತಿರುವಾಗಲೇ ಪ್ರಗತಿಪರ ವಿದ್ಯಾರ್ಥಿ ಕೇಂದ್ರದ ಸಂಪರ್ಕಕ್ಕೆ ಬಂದು, ನಂತರ ಕರ್ನಾಟಕ ವಿಮೋಚನಾ ರಂಗದಲ್ಲಿ ಕೆಲಸ ಮಾಡಿ, ಕ್ರಮೇಣ ರಾಯಚೂರಿನತ್ತ ಹೊರಳಿದ. ನಕ್ಸಲ್ ನಾಯಕ ರಮೇಶನೊಟ್ಟಿಗೆ ಸೇರಿಕೊಂಡು,ಭೂಗತನಾಗಿ ಕೆಲಸ ಮಾಡುತ್ತಿದ್ದಾಗಲೇ ಸೆರೆಸಿಕ್ಕು ಮೂರು ವರ್ಷ ಜೈಲಲ್ಲಿ ಕಳೆದ. ಬಿಡುಗಡೆಯಾಗಿ ಬಂದ ಮೇಲೆ, ಶಿವಮೊಗ್ಗದ ಸ್ಥಳೀಯ ಪತ್ರಿಕೆಯೊಂದರಲ್ಲಿ ವರದಿಗಾರನಾಗಿ ಸೇರಿಕೊಂಡ.
ಶಿವಮೊಗ್ಗದಲ್ಲಿದ್ದಷ್ಟು ದಿನವೂ ಆತನ ಒಡನಾಟವಿದ್ದುದು ಕೆಲವೇ ಕೆಲವು ಜನರೊಂದಿಗೆ. ಅದೂ ಕೂಡ ಕರ್ನಾಟಕ ವಿಮೋಚನಾ ರಂಗ, ಕೋಮು ಸೌಹಾರ್ದ ವೇದಿಕೆ, ಸಿವಿಲ್ ಲಿಬರ್ಟೀಸ್ ಫೋರಂ ಮೊದಲಾದ ಪ್ರಗತಿಪರ ಸಂಘಟನೆಗಳ ನಾಯಕರೊಂದಿಗೆ!
ಕೇವಲ ಸತ್ತವರು ಮಾತ್ರವಲ್ಲ; ಜೀವಂತವಾಗಿಯೇ ಸೆರೆಹಿಡಿಯಲ್ಪಟ್ಟ ದೂಬಳದ ಮಲ್ಲಿಕಾ, ಗದಗಿನ ಚೆನ್ನವ್ವ, ಬಾಳೆಹೊಳೆಯ ಕೃಷ್ಣ, ಇತ್ತೀಚೆಗೆ ಸಿಕ್ಕಿಬಿದ್ದ ಜಗನ್ನಾಥ… ಈ ಮೊದಲಾದವರೂ ಕೂಡ, ಬೆಳಕಿಗೆ ಬಂದಿದ್ದು ಈ ಪ್ರಗತಿಪರ ಸಂಘಟನೆಗಳ ಮೂಲಕವೇ. ಇವರೆಲ್ಲರೂ ತಮ್ಮ ಸಾಮಾಜಿಕ ಬದುಕನ್ನು ಪ್ರಾರಂಭಿಸಿದ್ದು, ಪ್ರಗತಿಪರ ವಿದ್ಯಾರ್ಥಿ ಕೇಂದ್ರ, ಕರ್ನಾಟಕ ಕೋಮು ಸೌಹಾರ್ದವೇದಿಕೆ, ಕರ್ನಾಟಕ ವಿಮೋಚನಾ ರಂಗ, ಸಿವಿಲ್ ಲಿಬರ್ಟೀಸ್ ಫೋರಂ (ಸಿ.ಎಲ್.ಎಫ್.), ತುಂಗಾಮೂಲ ಉಳಿಸಿ ಹೋರಾಟ ಒಕ್ಕೂಟ, ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಒಕ್ಕೂಟ ಈ ಮುಂತಾದ ಪ್ರಗತಿಪರ ಸಂಘಟನೆಗಳ ಮೂಲಕವೇ. ಈ ಸಂಘಟನೆಗಳ ಅಂಗಳದಲ್ಲಿ ಕುಣಿದವರೆಲ್ಲ ಕ್ರಮೇಣ ನಕ್ಸಲ್‍ವಾದಕ್ಕೆ ಮಣಿದು, ಕಾಡಲ್ಲಿ ಅಡಗಿದರು; ಭೂಗತರಾದರು. ಆಗೀಗ ನಡೆಯುವ ಗುಂಡಿನ ಚಕಮಕಿಯಲ್ಲಿ ಕೆಲವರು ಮಡಿದರು; ಸಾವಿನ ಮನೆಯ ಬಾಗಿಲು ತಟ್ಟಿ, ಕೂದಲೆಳೆಯ ಅಂತರದಲ್ಲಿ ಪಾರಾದವರು ತಮ್ಮೊಂದಿಗೆ ಇನ್ನಷ್ಟು ಜನ ಮಗ್ಧರನ್ನು ಸೇರಿಸಿಕೊಳ್ಳುತ್ತ ನಡೆದರು.
ಮಲೆನಾಡಿನ ಈ ನಕ್ಸಲ್ ಇತಿಹಾಸದಲ್ಲಿ ಪೊಲೀಸರ ಗುಂಡಿಗೆ ಮೊದಲು ಬಲಿಯಾದ ಪಾರ್ವತಿಯ ಅಂತ್ಯಸಂಸ್ಕಾರದಲ್ಲಿ ಶಿವಮೊಗ್ಗದ ಸಿ.ಎಲ್.ಎಫ್. ನಾಯಕರೊಬ್ಬರು ಭಾಗವಹಿಸಿದ್ದರು. ಅಂದು ಚಿತೆಗೆ ಬೆಂಕಿಯಿಡುತ್ತಿದ್ದಂತೆ ಹೊತ್ತಿದ ಆಕ್ರೋಶದ ಜ್ವಾಲೆಯಲ್ಲಿ ಅವರು ಅನೇಕ ಕ್ರಾಂತಿಗೀತೆಗಳನ್ನು ಹಾಡಿದರು, ಘೋಷಣೆಗಳನ್ನು ಕೂಗಿದರು. ಪುಟ್ಟ ಭಾಷಣವನ್ನೂ ಮಾಡಿದರು. ಮಲೆನಾಡಿನಲ್ಲಿ ಗುಂಡಿನ ಸದ್ದು ಮೊಳಗಿದಾಗಲೆಲ್ಲಾ ಅವರ ಮಾತು ನೆನಪಿಗೆ ಬರುತ್ತದೆ. ಅವರು ಹೇಳಿದ್ದರು: “ಪಾರ್ವತಿಯ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ; ಇದಕ್ಕೆ ಕಾರಣರಾದವರಿಗೆ ಬುದ್ಧಿ ಕಲಿಸುತ್ತೇವೆ.”
ಸಿ.ಎಲ್.ಎಫ್. ನಾಯಕರು ಬುದ್ಧಿ ಕಲಿಸಿದ್ದು ಯಾರಿಗೆ? ಓದಲೆಂದು ಕಾಲೇಜಿಗೆ ಬಂದ ಜಗನ್ನಾಥನನ್ನು ಹಿಡಿದರು;’ ಸಂಘಟನೆಯ ಕೆಲಸ ಮಾಡಿಸಿದರು; ಮತ್ತದೇ ಭ್ರಮೆಗಳನ್ನು ತಲೆಗೆ ತುಂಬಿದರು; ದೂರದ ಆಂಧ್ರಕ್ಕೆ ತರಬೇತಿಗೆ ಕಳಿಸಿದರು; ತಿರುಗಿ ಬಂದವನನ್ನು ಕಾಡಿನಲ್ಲಿದ್ದ ನಕ್ಸಲ್ ತಂಡಕ್ಕೆ ಸೇರಿಸಿದರು. ತಮ್ಮ ಬಕ್ಕತಲೆಯನ್ನು ಸವರಿಕೊಳ್ಳುತ್ತ ಬಡಕುಟುಂಬದಿಂದ ಬಂದ ಜಗನ್ನಾಥನ ಮೇಲೆ ಸೇಡು ತೀರಿಸಿಕೊಂಡರು! ಇದೆಂಥ ವಿಪರ್ಯಾಸ?!
… 3
ಪಾರ್ವತಿಯಿಂದ ಹಿಡಿದು ಮೊನ್ನೆ ಮೊನ್ನೆ ಸತ್ತ ಮನೋಹರನವರೆಗೆ, ಸೆರೆಮನೆಯಲ್ಲಿರುವ ಮಲ್ಲಿಕಾಳಿಂದ ಹಿಡಿದು ಜಗನ್ನಾಥನವರೆಗೆ ಎಲ್ಲರೂ ಇವೇ ಪ್ರಗತಿಪರ ಸಂಘಟನೆಗಳ ಪ್ರಾಡಕ್ಟ್ ಗಳು! ಇವೇ ಸಂಘಟನೆಗಳಲ್ಲಿ ತರಬೇತುಗೊಂಡವರು! ಅಂತಿಮವಾಗಿ ಮಲೆನಾಡಿನ ಕಾಡು ಇವರೆಲ್ಲರ ಕಾರ್ಯಕ್ಷೇತ್ರವಾಯಿತು. ಕೈಯಲ್ಲಿ ಬಂದೂಕು, ಗ್ರೆನೇಡ್ ಹಿಡಿದು ಇವರೆಲ್ಲ ನಕ್ಸಲೀಯರಾದರು. ಮಲೆನಾಡಿನ ಮನೆ ಮನೆಗಳಿಂದ – ಅದು ಗಿರಿಜನರದಿರಲಿ, ಒಕ್ಕಲಿಗರದಿರಲಿ, ಬ್ರಾಹ್ಮಣರದಿರಲಿ- ಹಫ್ತಾ ವಸೂಲಿ ಮಾಡಿದರು. ಹೆಮ್ಮಿಗೆ ಚಂದ್ರಕಾಂತನ ಕೈಕಾಲು ಮುರಿದರು; ಮೆಣಸಿನಹಾಡ್ಯದ ಗಿರಿಜನ ಶೇಷಪ್ಪಗೌಡನನ್ನು ಕೊಂದರು, ಹೆಂಡತಿ, ಮಗುವಿನ ಎದುರೇ ಗಂಡಘಟ್ಟದ ವೆಂಕಟೇಶನ ಎದೆ ಬಗೆದರು. ಸೋಮೇಶ್ವರದ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದುಕೊಂಡೇ ಸಾಮಾಜಿಕ ಚಟುವಟಿಕೆಗಳನ್ನು ಮಾಡಿಕೊಂಡಿದ್ದ ಭೋಜಶೆಟ್ಟಿಯವರನ್ನು ಗುಂಡಿಟ್ಟು ಕೊಂದರು. ಎಂಥ ಕ್ರೌರ್ಯ! ಪ್ರಗತಿಪರ ಚಿಂತನೆಯ ಮೂಸೆಯಲ್ಲಿ ಅರಳಿದವರ ಮನದಲ್ಲಿ ಇಂಥ ಬರ್ಬರತೆ ಮನೆ ಮಾಡಿದ್ದಾದರೂ ಹೇಗೆ?
ಉತ್ತರ ಹುಡುಕಿ ಹೊರಟರೆ ದಿಗಿಲಾಗುತ್ತದೆ. ಮಲೆನಾಡಿನ ಮುಗ್ಧ ಯುವಕ-ಯುವತಿಯರ ಮನದಲ್ಲಿ ಈ ಬರ್ಬರತೆಯನ್ನು ಬಿತ್ತಿ ಬೆಳೆಯಲೆಂದೇ ಹುಟ್ಟಿಕೊಂಡ ಪ್ರಗತಿಪರ ಸಂಘಟನೆಗಳ ಜಾಲ ಬೆಚ್ಚಿಬೀಳಿಸುತ್ತದೆ. ಈ ಪ್ರಗತಿಪರ ಕೂಟದಲ್ಲಿರುವ ಸಂಘಟನೆಗಳ ಹೆಸರುಗಳು ಅನೇಕ; ಆದರೆ ಸಂಘಟಕರು ಮಾತ್ರ ಅದೇ ವ್ಯಕ್ತಿಗಳು. ಪ್ರತಿಯೊಂದು ಸಂಘಟನೆಯ ತಂತ್ರವೂ ಬೇರೆ ಬೇರೆ; ಮಂತ್ರ ಮಾತ್ರ ಒಂದೇ. ಅವರೆಲ್ಲರ ದಾರಿ, ಗುರಿ ಕೂಡಾ ಒಂದೇ. ಈ ಪ್ರಗತಿಪರ ಸಂಘಟನೆಗಳು ಒಂದರ್ಥದಲ್ಲಿ, ಟಿ.ವಿ. ಧಾರಾವಾಹಿಗಳಿದ್ದಂತೆ. ಪ್ರತಿ ಚಾನೆಲ್‍ನಲ್ಲಿ ಪ್ರಸಾರವಾಗುವ ಧಾರಾವಾಹಿಯ ರಾಗವೂ ಒಂದೇ; ಪಾತ್ರಧಾರಿಗಳಲ್ಲೂ ಅಂಥ ವ್ಯತ್ಯಾಸವೇನಿಲ್ಲ. ಆದರೆ ಪ್ರತಿ ಧಾರಾವಾಹಿಯ ಹೆಸರು ಮಾತ್ರ ಬೇರೆ ಬೇರೆ! ನಾಲ್ಕೈದು ವರ್ಷಗಳ ಹಿಂದೆ ಶಿವಮೊಗ್ಗದಲ್ಲೊಂದು ಪ್ರತಿಭಟನೆ; ರಸ್ತೆ ತಡೆ ನಡೆದಿತ್ತು. ಈ ಪ್ರತಿಭಟನೆಗೆ ಕರೆಕೊಟ್ಟಿದ್ದು ಒಂದೆರಡು ಸಂಘಟನೆಗಳಲ್ಲ; ಬರೋಬ್ಬರಿ 28 ಸಂಘಟನೆಗಳು ಸೇರಿ, ಒಂದೇ ದಿನ, ಒಂದೇ ಸಮಯಕ್ಕೆ ಪ್ರತಿಭಟನೆಯನ್ನು ನಡೆಸಲು ನಿರ್ಧರಿಸಿದ್ದವು. ನಿಗದಿಯಂತೆ ಪ್ರತಿಭಟನೆ, ರಸ್ತೆ ತಡೆ ನಡೆಯಿತು. ಆದರೆ ಅಂದು ಪ್ರತಿಭಟನೆಯಲ್ಲಿದ್ದವರು ಮಾತ್ರ 23 ಮಂದಿ! ವಿಶೇಷವೆಂದರೆ ಎಲ್ಲ 28 ಸಂಘಟನೆಗಳ ಎಲ್ಲ ಪದಾಧಿಕಾರಿಗಳೂ ಅಂದಿನ ಪ್ರತಿಭಟನೆಯಲ್ಲಿದ್ದರು!
ಇಂಥ ಪ್ರಗತಿಪರ ಸಂಘಟನೆಗಳ ಬಗ್ಗೆ ಹೆಚ್ಚಿನ ಗಮನಹರಿಸಬೇಕಾದ ಸಂದರ್ಭ ಬಂದೊದಗಿದೆ. 2004ರಲ್ಲಿ ಹೊನ್ನಾಳಿ ತಾಲೂಕಿನ ಚೀಲೂರಿನ ಮಸೀದಿಯಲ್ಲಿ ಪಾಕಿಸ್ತಾನದ ಧ್ವಜ ಹಾರಾಡಿ, ಪೊಲೀಸ್ ಎಫ್.ಐ.ಆರ್.ನಲ್ಲೂ ಅದು ದಾಖಲಾಗಿ, ತಿಂಗಳು ಕಳೆದ ಮೇಲೆ ಇದೇ ಕೋಮು ಸೌಹಾರ್ದ ವೇದಿಕೆಯ ಸತ್ಯಶೋಧನಾ ಸಮಿತಿ ಮಸೀದಿಗೆ ಭೇಟಿ ನೀಡಿ, ಅದು ಪಾಕಿಸ್ತಾನದ ಧ್ವಜವಾಗಿರಲಿಲ್ಲ ಎಂದು ವಾದಿಸಿತ್ತು. ಆದರಿಂದು ಅದೇ ಹೊನ್ನಾಳಿ ತಾಲೂಕಿನಲ್ಲಿ ಭಯೋತ್ಪಾದಕರ ಹೆಜ್ಜೆ ಗುರುತುಗಳು ಮೂಡಿವೆ.
ಸಾಕೇತ್‍ರಾಜನ್ ಸತ್ತಾಗ, ಗದ್ದರ್‍ನನ್ನು ಬೆಂಗಳೂರಿಗೆ ಕರೆಸಿ, ಪ್ರತಿಭಟನೆ ಮಾಡಿದ್ದ `ಶಾಂತಿಗಾಗಿ ನಾಗರಿಕರು’ ವೇದಿಕೆಯ ಕಾರ್ಯಕರ್ತೆ, ಮಹಿಳಾಜಾಗೃತಿಯ ನಾಯಕಿಯೊಬ್ಬಳು, ನಕ್ಸಲ್ ಜಗನ್ನಾಥನ ಬಂಧನವಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದಾಳೆ. ಇನ್ನು ಜಗನ್ನಾಥನಂತೂ ಕಾಡಿಗೆ ಹೋಗುವ ಹಿಂದಿನ ದಿನದವರೆಗೂ, ಅನಾರೋಗ್ಯದಿಂದಾಗಿ ಕಾಡಲ್ಲಿರಲಾಗದೆ ನಾಡಿಗೆ ಮರಳಿದ ಮೇಲೂ ಸಿ.ಎಲ್.ಎಫ್. ನ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ಎನ್ನುವುದು ಜಗಜ್ಜಾಹೀರಾಗಿದೆ. ನಕ್ಸಲೀಯರ ಮೂಲಬೇರುಗಳೆಲ್ಲ ಶಿವಮೊಗ್ಗದ ಪ್ರಗತಿಪರ ಚಟುವಟಿಕೆಗಳು, ಸಂಘಟನೆಗಳಲ್ಲಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಹೀಗಿರುವಾಗ ಈ ಪ್ರಗತಿಪರ ಸಂಘಟನೆಗಳ ಕುರಿತಂತೆ ಕಣ್ಮುಚ್ಚಿ ಕುಳಿತುಕೊಳ್ಳುವುದು ಸಾಧ್ಯವೆ?
ಪೊಲೀಸ್ ಹಾಗೂ ಗುಪ್ತಚರ ಇಲಾಖೆ ಈ ಕುರಿತಂತೆ ತುರ್ತು ಗಮನ ಹರಿಸಬೇಕು. ಇನ್ನಷ್ಟು ಜನ ಮುಗ್ಧರು, ಅಮಾಯಕರು, ಸಮಾಜದ ಕುರಿತಂತೆ ಕಳಕಳಿಯುಳ್ಳ ಯುವಕ – ಯುವತಿಯರು ಈ ಪ್ರಗತಿಪರ ಸಂಘಟನೆಗಳ ಬಣ್ಣದ ಮಾತಿಗೆ ಮರುಳಾಗಿ ಕಾಡು ಸೇರದಂತೆ, ಹಿಂಸಾಮಾರ್ಗದಲ್ಲಿ ನಡೆಯದಂತೆ ಎಚ್ಚರ ವಹಿಸಬೇಕು. “ನಕ್ಸಲ್ ಪಾಠ ಹೇಳೋರು ಉಳೀತಾರೆ… ನನ್ನ ಮಗನಂಥ ಅಮಾಯಕರು ಹೆಣವಾಗ್ತಾರೆ…” ಎಂದು ಕಣ್ಣೀರು ಹಾಕಿದ ಮನೋಹರನ ತಂದೆಯಂತೆ, ಇನ್ನುಳಿದವರ ಪಾಲಕರು-ಪೋಷಕರು ಪ್ರಲಾಪಿಸುವ ಸ್ಥಿತಿ ಬರದಂತೆ ಎಚ್ಚರ ವಹಿಸಬೇಕು. ಈಗಾಗಲೇ ಕಾಡು ಸೇರಿದ ನಕ್ಸಲ್ ಯುವಕ-ಯುವತಿಯರೂ ನಾಡಿಗೆ ಮರಳಿ, ಸಮಾಜಮುಖಿಯಾಗಿ ಕೆಲಸಮಾಡುವಂತಾಗಬೇಕು.
… 4
ಕೇವಲ ನಕ್ಸಲೀಯರನ್ನು ಬೇಟೆಯಾಡುವುದರಿಂದಲೇ ಇದೆಲ್ಲ ಸಾಧ್ಯವಾಗತ್ತಾ? ಖಂಡಿತ ಇಲ್ಲ. ಮುಳ್ಳಿನ ಗಿಡವನ್ನು ಎಷ್ಟು ಸಾರಿ ಕಡಿದರೂ ಅದು ಮತ್ತೆ ಚಿಗುರುತ್ತದೆ. ಹಾಗೇ ಈ ಸಮಸ್ಯೆ ಕೂಡ. ಇದರ ಪರಿಹಾರವಾಗಬೇಕಾದರೆ, ಮೊದಲು ನಕ್ಸಲೀಯರನ್ನು ರೂಪಿಸುತ್ತಿರುವ ಈ ಪ್ರಗತಿಪರ ಸಂಘಟನೆಗಳನ್ನು ಹದ್ದುಬಸ್ತಿನಲ್ಲಿಡಬೇಕು. ಇದರರ್ಥ ಈ ಪ್ರಗತಿಪರ ಸಂಘಟನೆಗಳನ್ನು ಏಕಾಏಕಿ ನಿಷೇಧಿಸಬೇಕು ಎಂದಲ್ಲ. ಈ ಎಲ್ಲ ಸಂಘಟನೆಗಳ ಹುಟ್ಟಿನ ಹಿನ್ನೆಲೆಯಿಂದ ಹಿಡಿದು ಇಂದಿನವರೆಗಿನ ಎಲ್ಲ ಚಟುವಟಿಕೆಗಳ, ನಾನಾ ಮುಖವಾಡಗಳ, ಈ ಸಂಘಟನೆಗಳ ನಾಯಕರುಗಳು ನಡೆಸಿದ ಎಲ್ಲ ಅಕ್ರಮಗಳ ಸಮಗ್ರ ತನಿಖೆ ನಡೆಯಬೇಕು. ಆಗ ಸಹಜವಾಗಿಯೇ,ಕಾಡಲ್ಲಿರುವ ನಕ್ಸಲೀಯರಿಗೆ ಹೊಸಬರ, ಶಸ್ತ್ರಾಸ್ತ್ರಗಳ ಸರಬರಾಜೂ ನಿಲ್ಲುತ್ತದೆ. ಬೇರಿಲ್ಲದ ಮರದಂತೆ ಅದು ತನ್ನಿಂತಾನೆ ಬಾಡುತ್ತದೆ.
ಚಿತ್ರ ಕೃಪೆ : articles.economictimes.indiatimes.com