ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 4, 2015

“ಬೌದ್ಧಿಕ ದಾಸ್ಯದಲ್ಲಿ ಭಾರತ” ಪುಸ್ತಕದ ಕುರಿತ ಓದುಗರ ಅಭಿಪ್ರಾಯಗಳು

‍ನಿಲುಮೆ ಮೂಲಕ

– ವಿನಾಯಕ್ ಹಂಪಿಹೊಳಿ

ಬೌದ್ಧಿಕ ದಾಸ್ಯದಲ್ಲಿ ಭಾರತಬೌದ್ಧಿಕ ದಾಸ್ಯದಲ್ಲಿ ಭಾರತವನ್ನು ಬಹಳ ಮುಂಚೆಯೇ ಖರೀದಿಸಿದ್ದೆನಾದರೂ ಅದನ್ನು ಮರುದಿನವೇ ಮನೆಯಲ್ಲಿ ಇಟ್ಟು ಬರಬೇಕಾಯಿತು. ಹೀಗಾಗಿ ಸರಿಯಾಗಿ ಓದಲು ಆಗಿರಲಿಲ್ಲ. ಹೀಗಾಗಿ ನಿನ್ನೆ ಇನ್ನೊಂದು ಪ್ರತಿಯನ್ನು ಖರೀದಿಸಿ ಇವತ್ತು ಅದನ್ನು heathen in his blindness ಮತ್ತು ಸ್ಮೃತಿ ವಿಸ್ಮೃತಿ: ಭಾರತೀಯ ಸಂಸ್ಕೃತಿ ಪುಸ್ತಕಗಳ ಪಿಡಿಎಫ಼್ ಪ್ರತಿಗಳೊಂದಿಗೆ ತಾಳೆ ಮಾಡಿ ಸರಿಯಾಗಿ ಓದಿದೆ. ಪುಸ್ತಕ ಚೆನ್ನಾಗಿ ಮೂಡಿ ಬಂದಿದೆ. ಪುಸ್ತಕದ ಶೀರ್ಷಿಕೆ ಅಕ್ಷರಶಃ ಸಿದ್ಧವಾಗುತ್ತದೆ.

ಮೊದಲನೇಯದಾಗಿ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರವನ್ನು ಬುದ್ಧಿಜೀವಿಗಳು ಏಕೆ ಮುಚ್ಚಿಸಿದ್ದಾರೆ ಎಂಬುದು ಈಗ ತಿಳಿಯಿತು. ಏಕೆಂದರೆ ಹಿಂದೂ-ಸಂಪ್ರದಾಯಗಳನ್ನು ರಿಲಿಜನ್ನಿನ ಅಡಿಯಲ್ಲಿ ತಂದರಷ್ಟೇ ಅಲ್ಲವೇ, ಅದರಲ್ಲಿನ ಗ್ರಂಥಗಳ ಆಧಾರವಿಲ್ಲದ ಸಂಪ್ರದಾಯಗಳನ್ನು ತೆಗಳಿ, ಪ್ರಗತಿಪರರೆಂದೆನಿಸಿಕೊಂಡು ಇವರು “ಬುದ್ಧಿಜೀವಿ”ಗಳಾಗುವದು? ರಿಲಿಜನ್ನೇ ಇಲ್ಲದ ಸಮಾಜದಲ್ಲಿ ಬುದ್ಧಿಜೀವಿಗೇನು ಕೆಲಸ?

ನನಗೆ ತುಂಬ ಮೆಚ್ಚಿಗೆಯಾದ ಅಂಶ ಕ್ರಿಯೆಯಿಂದ ಜ್ಞಾನವನ್ನು ಪಡೆಯುವದು ಭಾರತೀಯ ಪದ್ಧತಿ ಎಂಬ ಅಂಶವನ್ನು ಇದು ತೋರಿಸಿರುವದು. ನನ್ನ+ಅಣ್ಣ=ನನ್ನಣ್ಣ ಆಗುವದರಿಂದ ಕನ್ನಡದಲ್ಲಿ ಲೋಪಸಂಧಿ ಹುಟ್ಟಿಕೊಂಡಿದೆಯೋ ಅಥವಾ ಲೋಪಸಂಧಿ ಇರುವದರಿಂದ ನನ್ನ+ಅಣ್ಣ=ನನ್ನಣ್ಣ ಎಂದು ಮಾಡಲು ಭಾಷೆ ಅನುಮತಿ ನೀಡುತ್ತದೆಯೋ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಮೊದಲು ಪ್ರಯೋಗ, ನಂತರ ವ್ಯಾಕರಣ ಎಂಬುದು ಅನುಭವಕ್ಕೆ ಸರಿಹೊಂದುತ್ತಿದ್ದರೂ ಅದಕ್ಕೆ ಸರಿಯಾದ ವಾದ ಇಲ್ಲಿ ಸಿಕ್ಕಿತು.
ಸಿದ್ಧಾಂತಕ್ಕೂ ಆಚರಣೆಗಳಿಗೂ ಕಾರಣ-ಕಾರ್ಯಭಾವವಿರಲೇಬೇಕೆಂಬ ನಿಯಮವೇ ತಪ್ಪು ಎಂಬುದನ್ನು ಒಪ್ಪಿಕೊಳ್ಳಲು ಮೊದಮೊದಲು ಕಷ್ಟವಾಯಿತು. ಶಾಲೆಯಲ್ಲಿ ಗ್ರಹಣಗಳ ಸಿದ್ಧಾಂತ ಹೇಳಿ ಮನೆಯಲ್ಲಿ ರಾಹವೇ ಕೇತವೇ ನಮಃ ಎನ್ನುವದು ಮುಂಚಿನಿಂದ ಬಂದ ಅನುಭವವಾದರೂ ಈ ಕ್ರಿಯೆ, ಹೇಳೋದು ಆಚಾರ ತಿನ್ನೋದು ಬದನೆಗಿಂತ ಹೇಗೆ ಭಿನ್ನ ಎಂಬುದು ಇಲ್ಲಿ ಚೆನ್ನಾಗಿ ಅರಿವಿಗೆ ಬಂತು. ಈ ಪೂರ್ವಾಗ್ರಹವನ್ನು ಕಳೆಯಲು ಇದರ ಕುರಿತೇ ಇನ್ನಷ್ಟು ಹೆಚ್ಚಿನ ಸಂಶೋಧನೆಗಳು ಹೊರಬರಲಿ ಎಂದು ಆಶಿಸುತ್ತೇನೆ. ಏಕೆಂದರೆ ಎಲ್ಲ ಪೂರ್ವಾಗ್ರಹಗಳಲ್ಲಿ ಇದು ಅತ್ಯಂತ ಪ್ರಬಲವಾದದ್ದು ಎಂದು ನನ್ನ ಅನಿಸಿಕೆ.

ನಿಜ ಹೇಳಬೇಕೆಂದರೆ ಈ ಪುಸ್ತಕವನ್ನು ಸಮಾಜವೆಂಬ ಪಠ್ಯಕ್ಕೆ ವಿರುದ್ಧವಾದ ಅನುಭವವನ್ನೇ ಪಡೆದ ನಮ್ಮಂಥ ಜನಸಾಮಾನ್ಯರು ಹೆಚ್ಚು ಸುಲಭವಾಗಿ ಅರ್ಥಮಾಡಿಕೊಳ್ಳಬಲ್ಲರು, ಆದರೆ ಸಮಾಜವಿಜ್ಞಾನದ ವಿದ್ಯಾರ್ಥಿಗಳಿಗೇ ಇದು ಕಬ್ಬಿಣದ ಕಡಲೆಯಾಗಬಹುದೋ ಏನೋ.ಏಕೆಂದರೆ ಈಗಾಗಲೇ ಅವರ ತಲೆಯಲ್ಲಿ ತುಂಬಿರುವ ಮೂಲ ಪೂರ್ವಾಗ್ರಹಗಳ ಬುಡವನ್ನೇ ಇದು ಅಲ್ಲಾಡಿಸುತ್ತದೆ. ರಿಲಿಜನ್ನು-ಸೆಕ್ಯುಲರಿಸಂಗಳು ಇಲ್ಲದ ಸಮಾಜ ಅಂದಾಕ್ಷಣ ಅವರು ಕತ್ತಲೆಯ ಶೂನ್ಯವನ್ನೇ ಕಲ್ಪಿಸಿಕೊಂಡರೂ ಆಶ್ಚರ್ಯವಿಲ್ಲ.

ಈ ಪುಸ್ತಕದಲ್ಲಿನ ವಿಚಾರಗಳು ನಿಜವಾಗಿಯೂ ಎಲ್ಲರಿಗೂ ಮುಟ್ಟಬೇಕಾಗಿರುವಂಥದ್ದು. ಇದು ಭಾರತದ ಎಲ್ಲ ಯುವವರ್ಗಗಳನ್ನು ತಲುಪಿದ್ದೇ ಆದಲ್ಲಿ ನಮ್ಮ ಸಂವಿಧಾನದಲ್ಲೂ ಮೂಲ ಬದಲಾವಣೆಗಳನ್ನು ತರಬೇಕಾಗುತ್ತದೆ. ಕಾರಣ ಈಗಾಗಲೇ ಆಗಿರುವ ಅನರ್ಥಗಳಿಗೆ ಈ ರಿಲಿಜನ್-ಸೆಕ್ಯುಲರ್ ಹೇರಿಕೆಗಳೇ ಕಾರಣ ಎಂಬುದು ಮನದಟ್ಟಾಗುತ್ತದೆ. ನಮ್ಮ ಸಮಾಜಕ್ಕೆ ರಿಲಿಜನ್ನೂ ಪರಿಹಾರವಲ್ಲ, ಸೆಕ್ಯುಲರಿಸಂ ಕೂಡ ಪರಿಹಾರವಲ್ಲ ಎಂಬುದು ಸಿದ್ಧವಾಗುತ್ತದೆ. ಆಗಲೇ ನಿಜವಾದ ಸಾಮಾಜಿಕ ಮತ್ತು ರಾಜಕೀಯ ಕ್ರಾಂತಿಯೊಂದಕ್ಕೆ ಭಾರತ ಸಾಕ್ಷಿಯಾಗಲಿದೆ.
***   ***   ***
– ಶ್ರೀಧರ್ ಕಲ್ಹಳ್ಳ

ಪ್ರೊ.ಬಾಲಗಂಗಾಧರ್ ಅವರ ” ಬೌಧಿಕ ದಾಸ್ಯದಲ್ಲಿ ಭಾರತ” (ನಿರೂಪಣೆ: ರಾಜಾರಾಮ ಹೆಗಡೆ) ಎಂಬ ಪುಸ್ತಕವನ್ನು ಓದಿದ ನಂತರ ನಾನು ಕೇಳಿಕೊಂಡು ಬರುತ್ತಿರುವ ಭಾರತವು ಈಗ ಭಿನ್ನವಾಗಿ ಕಾಣಿಸುತ್ತಿದೆ. ಇದರಿಂದ ಧಾರ್ಮಿಕರಾಗಿ ಬದ್ದರಾಗಿ ಬದುಕುವ ಕ್ರೈಸ್ಥ, ಮುಸಲ್ಮಾನ ಸಹೋದರರು ಇನ್ನೂ ಹೆಚ್ಚು ಹತ್ತಿರದವರಾಗಿ ಕಾಣುತ್ತಿದ್ದಾರೆ. ಇವತ್ತಿನ ಸಮಾಜದ ನಮ್ಮಲ್ಲಾ ಜಾತಿಯ ಜನರೂ ಅವರ ಒಳತೋಟಿಗಳೂ ಹೆಚ್ಚು ಸ್ಪಷ್ಟವಾಗಿ ಕಾಣಲು ಹೊಸ ಕಣ್ಣು ಮೂಡಿದಂತೆ, ಚರಿತ್ರೆಯೇ ಪುನಹ ಹೊಸದಾಗಿ ಬಿಚ್ಚಿಕೊಳ್ಳುತ್ತಿದ್ದಂತೆ ಕಾಣುತ್ತಿದೆ. ಇಷ್ಟರ ವರೆಗಿನ ನನ್ನ ಗ್ರಹಿಕೆಗಳು ನನ್ನಬಗೆಗೇ ನಗುವನ್ನೂ ಉಂಟುಮಾಡುತ್ತಿದೆ.

ಭಾರತೀಯನಾಗಿ ಇಷ್ಟರವರೆಗೂ ನನಗೆ ಕಂಡುಕೊಳ್ಳಲಾಗದಿದ್ದ ಒಂದು ಐಡೆಂಟಿಟಿ ಈಗ ಪ್ರಾಪ್ತವಾಗುತ್ತಿದೆ….

ಅದೇನೆಂದರೆ ಹಿಂದೂ ಧರ್ಮವೆಂಬುದು ಇರದ ನಮ್ಮ ದೇಶದಲ್ಲಿ ಇಂದು ಸೀರಿಯಸ್ಸಾಗಿ ಗುರುತಿಸಿಕೊಳ್ಳಬಹುದಾದದ್ದು ರಾಜಕೀಯ ಪಕ್ಷಗಳನ್ನು. ಆದರೆ ಯಾವುದೇ ‘ಒಂದನ್ನು’ ಮಾತ್ರ ನಿಷ್ಠೆಯಿಂದ ಅನುಸರಿಸಲಾಗದ ನಮ್ಮ ಸಾಂಪ್ರದಾಯಿಕ ಮನಸ್ಸು ಎಲ್ಲ ಪಕ್ಷಗಳ ಒಳ್ಳೆಯದನ್ನೂ ಮೆಚ್ಚಿಕೊಳ್ಳುವಂತೆ ಮಾಡುತ್ತದೆ. ಅದಕ್ಕಾಗಿ ಗುಜರಾತಿನ ಮೋದಿಯವರನ್ನು ನಿರಾಕರಿಸುವ ನಾನು ಕೆಲವೊಮ್ಮೆ ದೆಹಲಿಯ ಮೋದಿಯವರನ್ನು ಮೆಚ್ಚಲು ಸಾಧ್ಯ. ಅರವಿಂದ್ ಅವರ ಏಕಾಧಿಪತ್ಯವನ್ನು ವಿರೋಧಿಸುತ್ತಲೇ ಅವರ ಮತ್ತೊಂದು ತೀವ್ರ ಕಾಳಜಿಗಳನ್ನು ಬೆಂಬಲಿಸಲು ಸಾಧ್ಯ. ಸದ್ಯದ ಸ್ವರಾಜ್ ಅಭಿಯಾನದಲ್ಲೂ ಆಪ್ ಜೊತೆ ಇರಲು ಸಾಧ್ಯ. ರಾಹುಲ್ ಗಾಂಧಿಯನ್ನು ತಮ್ಮನಂತೆ ಕಾಣಲು ಸಾಧ್ಯ. ಹಿಂದುಳಿದ ಪಂಗಡದ ನೇತಾರ ಸಿದ್ದರಾಮಯ್ಯನವರನ್ನು ಭರವಸೆಯಿಂದ ನಿರೀಕ್ಷಿಸಲು ಸಾಧ್ಯ…

ಇವೆಲ್ಲವೂ ನನಗೆ ಮಾತ್ರವಲ್ಲ.. ಬಹುಷ: ಬಹಳಷ್ಟು ಭಾರತೀಯರೇ ಹೀಗೆ ಅನ್ನಿಸುತ್ತದೆ. ಇದು ನಿಜವಾಗಿ ಇಷ್ಟರವರೆಗೂ ನಾವು ಪಾಲಿಸಿಕೊಂಡು ಬಂದ ರಾಜಕಾರಣವೇ ಬೇರೊಂದು ರೀತಿಯಲ್ಲಿ ನಡೆಯಬೇಕೆಂಬುದನ್ನು ಹೇಳುತಿರಲು ಸಾಕು.

ನನ್ನಂತಹವನಂತೂ ಪಕ್ಷ ಕೇಂದ್ರಿತವಾಗಿ ತಮ್ಮವರದ್ದೆಲ್ಲ ಸರಿ ಎಂಬಂತೆ, ಇತರ ಪಕ್ಷಗಳ ಒಳ್ಳೆಯದನ್ನು ಕಾಣದೇ ಇರಲು ಸಾಧ್ಯವೇ ಇಲ್ಲ. ಈ ನನ್ನ ಸ್ಥಿತಿಯು ಅನೈಸರ್ಗಿಕವಲ್ಲ ಎಂಬುದನ್ನಂತೂ ತಿಳಿಯಲು ಶ್ರೀ ಬಾಲುರವರ ವಿಚಾರಗಳು ಸಹಾಯಮಾಡಿವೆ. ಅದಕ್ಕಾಗಿ ಅವರಿಗೆ ಧನ್ಯವಾದಗಳು.

ಗಾಂಧೀಜಿಯವರ ಮನಸ್ಥಿತಿಯು ಮಾತ್ರ ಅಮೋಘವಾಗಿಯೇ ಸತ್ಯದ ತಳಹದಿಯಲ್ಲಿತ್ತು ಮತ್ತು ಅದು ಭಾರತೀಯವಾಗಿತ್ತು ಎಂಬುದು ಮತ್ತೆ ಮತ್ತೆ ಅಭಿಮಾನ ಮೂಡಿಸುತ್ತಿದೆ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments