ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 7, 2015

7

ರಿವೈಂಡ್ ಮಾಡಲಾಗದ ಫಿಲ್ಮಿನ ರೀಲು ಮುಗಿಯುವ ಮುನ್ನ

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

ಪೋರ್ನ್ಪ್ರೀತಿಯ ಅಶ್ವಿನ್,

ಈ ಮಾತನ್ನು ನಿನಗೆ ಹೇಳಬೇಕೋ ಬೇಡವೋ ಅನ್ನುವ ವಿಷಯದಲ್ಲಿ ನನಗೆ ಖಂಡಿತ ಗೊಂದಲವಿಲ್ಲ. ಆದರೆ, ಹೇಗೆ ಹೇಳಬೇಕು ಅನ್ನುವ ಸಂಗತಿ ಮಾತ್ರ ನನ್ನ ತಲೆತಿನ್ನುತ್ತಿದೆ. ಎಷ್ಟೋ ಸಲ, ನಮ್ಮ ಇಡೀ ಜೀವಮಾನವೇ ಇಂತಹ ಮೂಲಭೂತ ಪ್ರಶ್ನೆಗಳನ್ನು ಚಿಂತಿಸುತ್ತ ಕೂರುವುದರಲ್ಲೇ ಹೋಗಿಬಿಡುತ್ತದೆ. ಆಗೆಲ್ಲ, ಯೋಚನೆಯೇ ಮಾಡದೆ ಮುನ್ನುಗ್ಗಿ ಕೆಲಸ ಮುಗಿಸಿದವರೇ ಎಷ್ಟೋ ವಾಸಿ; ನಿಂತು ತಲೆ ತುರಿಸಿಕೊಳ್ಳೋ ಬದಲು ಕೆಲವು ಫರ್ಲಾಂಗಾದರೂ ನಡೆದರು ಅಂತ ಹೇಳಬಹುದು. ಹಾಗಾಗಿ, ನಾನು ನನ್ನ ವಿಷಯ ನಿರೂಪಣೆಯಲ್ಲಿ, ಹೇಳುವ ಕ್ರಮದಲ್ಲಿ, ಮುಚ್ಚುಮರೆಯಿಲ್ಲದ ನಿರ್ಭಿಡೆಯಲ್ಲಿ ಸ್ವಲ್ಪ ಹೆಚ್ಚೇ ಸ್ವಾತಂತ್ರ್ಯ ತೆಗೆದುಕೊಂಡೆ ಅನ್ನಿಸಿದರೆ, ಧಾರಾಳವಾಗಿ ಮಗನಾಗಿ ಕ್ಷಮಿಸಿಬಿಡು!

ಅಸಲಿಗೆ ಈ ವಿಷಯವನ್ನು ಶಾಲೆ-ಕಾಲೇಜಲ್ಲಿ ಹೇಳುವುದಿಲ್ಲ; ಪಠ್ಯಪುಸ್ತಕದಲ್ಲಿ ಬರೆಯುವುದಿಲ್ಲ; ಇದರ ಬಗ್ಗೆ ಪರೀಕ್ಷೆಯಲ್ಲಿ ಪ್ರಶ್ನೆಗಳಾಗಲೀ ಅಂಕಗಳಾಗಲೀ ಇಲ್ಲ; ಪ್ರಾಕ್ಟಿಕಲ್ ತರಗತಿಯಲ್ಲಿ ಇದರ ಮೇಲೆ ವೈವಾ ಇಲ್ಲ. ಆದರೆ, ನಮ್ಮ ಹುಡುಗರ ಬಹುಪಾಲು ಸಮಯ, ದುಡ್ಡು, ಮನೋಲೋಕವನ್ನು ತಿನ್ನುವ ಸಂಗತಿ ಇದು. ಎಷ್ಟೋ ಜನ ಇದರ ಬೆನ್ನುಬಿದ್ದು, ಹಿಂದೆ ಬರಲಾಗದಷ್ಟು ದೂರ ನಡೆದುಬಿಟ್ಟಿದ್ದಾರೆ. ಕೆಲವರು ಇದರ ಹಿಡಿತದಿಂದ ತಪ್ಪಿಸಿಕೊಂಡು ಹೊರಬಂದರೂ ಅದು ಮಾಡಿದ ಗಾಯ, ಎಳೆದ ಗೀರು ಮಾಯದೆ ನೋವಿನಿಂದ ನರಳಿದ್ದಾರೆ. ಯಾರೂ ಈ ಬಗ್ಗೆ ಹೊರಗೆ ಸಾರ್ವಜನಿಕವಾಗಿ ಮಾತಾಡೋದಿಲ್ಲ. ಸಭ್ಯರ ಸಮ್ಮುಖದಲ್ಲಿ ಇದಕ್ಕೆ ಎಂಟ್ರಿ ಇಲ್ಲ. ಮುಚ್ಚಿದ ಕೋಣೆಗಳ ಹಿಂದೆ, ಅಡಗಿಸಿಟ್ಟ ಪುಸ್ತಕಗಳ ಹಾಳೆಗಳ ಮಧ್ಯೆ, “ಇಂಪಾರ್ಟೆಂಟ್ ಅಸೈನ್‍ಮೆಂಟ್ಸ್” ಎಂದಿರುವ ಲಾಕ್ ಮಾಡಿದ ಫೋಲ್ಡರ್‍ಗಳೊಳಗೆ ಇದು ತೆಪ್ಪಗೆ, ತಣ್ಣಗೆ ಕೂತಿದೆ. ಜಗತ್ತು ಇದನ್ನು ‘ಪೋರ್ನ್’ ಎನ್ನುತ್ತದೆ.
ನಮ್ಮ ಕಾಲದ ಕತೆ ಹೇಳುತ್ತೇನೆ ಕೇಳು. ನಮಗೆ ಹನ್ನೆರಡು-ಹದಿಮೂರು ವರ್ಷ ಆಗುವ ಹೊತ್ತಿಗೆ ಅದೇನೋ ಹೇಗೋ ಒಂದೆರಡು ಕಪ್ಪುಬಿಳುಪಿನ ಪುಸ್ತಕಗಳು ಸಿಗುತ್ತಿದ್ದವು. ಅಲ್ಲಿನ ಕತೆಗಳನ್ನು ಚಪ್ಪರಿಸಿಕೊಂಡು ಓದುವ, ಎದೆಬಡಿತ ಹೆಚ್ಚಿಸುವ ಚಿತ್ರಗಳನ್ನು ಕಣ್ಕಣ್ಣು ಬಿಟ್ಟು ನೋಡುವ ಪ್ರಾಯ ಅದು. ಹಳೆಯ ಪೊರೆ ಜಾರಿಸಿ ಹೊಸದನ್ನು ಬೆಳೆಸಿಕೊಂಡು ಮುಂದಿನ ಮುಳ್ಳಿನದಾರಿಯಲ್ಲಿ ಸರಿಯುವ ಹಾವಿನಂತೆ, ಬಾಲ್ಯದ ಮಧುರಕಾಲವನ್ನು ಕಳೆದು ಯೌವನದ ಹುಚ್ಚುಹೊಳೆ ಹರಿಯಲು ಶುರುವಾಗುವ ವಯಸ್ಸು. ಹಾರ್ಮೋನುಗಳ ಆಟವೋ ಏನೋ, ಮನಸ್ಸು ಹುಚ್ಚುಕುದುರೆ. ಆ ಕಾಲದಲ್ಲಿ ನಮ್ಮ ಬದುಕು ಎಂಥಾ ನಿಧಾನಗತಿಯಲ್ಲಿ ಗ್ರಾಮಫೋನಂತೆ ತಿರುಗುತ್ತಿತ್ತೆಂದರೆ, ಕಾಲೇಜು ಹತ್ತಿ ಡಿಗ್ರಿಕ್ಲಾಸುಗಳಿಗೆ ಎಂಟ್ರಿ ಹೊಡೆಯುವವರೆಗೂ ನಾವು ನೀಲಿಚಿತ್ರ ನೋಡಿದ್ದಿಲ್ಲ! ಆದರೆ ಅಂತರ್ಜಾಲ ತನ್ನ ಬಾಹುಗಳು ಚಾಚಿ ಇಡೀ ಜಗತ್ತನ್ನು ಆವರಿಸಿಕೊಳ್ಳತೊಡಗಿದ ಮೇಲೆ, ಸೈಬರ್‍ಕೆಫೆಗಳೂ ಅವುಗಳ ಪುಟ್ಟಕೋಣೆಗಳಿಗೆ ಚಿಲಕದ ಬಾಗಿಲುಗಳೂ ಬಂದವು. ಹುಡುಗರಿಗೆ ಪಾಕೆಟ್ಟುಮನಿ ಸಿಕ್ಕಿತು. ಮನೆಮನೆಗೆ ಕಂಪ್ಯೂಟರ್ ಬಂತು. ಅಜ್ಜ-ಅಜ್ಜಿ, ಮಾವ, ಅತ್ತೆ, ಭಾವ ಎನ್ನುವ ಹತ್ತಾರು ಕೊಂಬೆಗಳೆಲ್ಲ ಕಡಿದುಹೋಗಿ ಮರವೇ ಉರುಳಿ ಅದರ ಜಾಗದಲ್ಲಿ ಎರಡೇ ಎಲೆಗಳಿರುವ “ನ್ಯೂಕ್ಲಿಯರ್ ಫ್ಯಾಮಿಲಿ”ಗಳೆಂಬ ಪುಟ್ಟಬಳ್ಳಿಗಳು ಹುಟ್ಟಿಕೊಂಡವು. ಇನ್ನು ಈಗಿನ ಸೂಪರ್-ಆಧುನಿಕ ಜಗತ್ತಿನ ಬಗ್ಗೆ ಏನು ಹೇಳಲಿ! ಹೈಸ್ಕೂಲ್ ಹುಡುಗರ ಕೈಯಲ್ಲೂ ಸ್ಮಾರ್ಟ್‍ಫೋನಿದೆ. ಕೇವಲ ನೂರು ರೂಪಾಯಿಗೆ ತಿಂಗಳಿಡೀ ಇಂಟರ್ನೆಟ್ಟು ಸಿಗುವ ಪ್ಲ್ಯಾನುಗಳು ಬಂದಿವೆ. ವಾಟ್ಸ್‍ಆಪಿನಲ್ಲಿ ಚಿತ್ರ, ವಿಡಿಯೋಗಳನ್ನೆಲ್ಲ ಸರಾಗವಾಗಿ ಒಂದೇ ಒಂದು ಕ್ಲಿಕ್ಕಿಂದಲೇ ದಾಟಿಸಿಬಿಡಬಹುದಾದ ಕಾಲ ಇದು. ಹತ್ತುವರ್ಷಕ್ಕೆಲ್ಲ ಹತ್ತಾರು ನೀಲಿಚಿತ್ರಗಳನ್ನು ನೋಡಿಬಿಟ್ಟಿರುವುದೇನೂ ದೊಡ್ಡ ಮಾತಾಗಿ ಉಳಿದಿಲ್ಲ!

ಹಿಂದಿನ ಕಾಲದಲ್ಲಿ, ಮಗನ ಕೈಗೊಬ್ಬಳು ಹೆಂಡತಿ ಅನ್ನೋಳು ಬಂದ ಮೇಲೆ ಅಮ್ಮನಿಗೆ ಅಸೂಯೆಯ ಬೆಂಕಿ ಹೊಗೆಯಾಡುವುದಕ್ಕೆ ಶುರುವಾಗುತ್ತಿತ್ತಂತೆ. ಅಯ್ಯೋ, ನನ್ನ ಪ್ರೀತಿಯಲ್ಲೂ ಪಾಲು ಪಡೆಯುವವಳು ಬಂದಳಲ್ಲಾ ಅನ್ನೋ ಮಾತ್ಸರ್ಯದ ಉರಿ ಅದು! ಆದರೆ, ಈಗಿನ ಕಾಲದಲ್ಲಿ, ಮಗರಾಯ ತನ್ನ ಪ್ರೀತಿ-ಸಮಯಗಳನ್ನು ಹಂಚಿಕೊಡಲು ಮದುವೆಯಾಗುವವರೆಗೂ ಕಾಯಬೇಕಾ? ಅವನ ಸಮಯ-ನಿಷ್ಠೆ-ಪ್ರೀತಿಗಳು ಅದಾಗಲೇ ಹತ್ತುಕಡೆ ಹಂಚಿಹೋಗಿರೋದಿಲ್ಲವೆ? ಇಂದಿನ ಹುಡುಗರಿಗೆ ಮೊಬೈಲ್ – ಕಂಪ್ಯೂಟರ್ – ಗೆಳೆಯರು – ಪಾರ್ಟಿಗಳು – ಟಿವಿ – ಎಫ್‍ಎಮ್ ರೇಡಿಯೋಗಳನ್ನೆಲ್ಲ ಬದಿಗಿಟ್ಟು ಅಮ್ಮನ ಜೊತೆ ಆರಾಮಾಗಿ ಕೂತು ಸಂಜೆ ಕಾಫಿ ಕುಡಿಯುವಷ್ಟು ಪುರುಸೊತ್ತು ಇದೆಯೆ? ಆಧುನಿಕ ತಂತ್ರಜ್ಞಾನ ಮತ್ತು ಥಳುಕಿನ ಜೀವನಶೈಲಿಯ ಬೀಸುಬಿರುಗಾಳಿಗೆ ಸಿಕ್ಕಿ, ಕಾಲೇಜುಮೆಟ್ಟಿಲು ಹತ್ತುವಷ್ಟರಲ್ಲೇ ನಮ್ಮಲ್ಲಿ ಹಲವು ಮಕ್ಕಳು ತಮ್ಮ ತಂದೆತಾಯಂದಿರಿಂದ ಮಾನಸಿಕವಾಗಿ ಬಹುದೂರ ಹೋಗಿಬಿಟ್ಟಿರುತ್ತಾರೆ. “ತನ್ನ” ಮಗ “ತನ್ನ” ಕೈಯಿಂದ ಜಾರಿಹೋಗುತ್ತಿದ್ದಾನೆ, ತನ್ನ ಸೆರಗಿಂದ ತುಂಬದೂರ ನಡೆದಿದ್ದಾನೆ ಎನ್ನುವ ಸತ್ಯ ಗೊತ್ತಾದಾಗ ಅಮ್ಮ ಏನು ಮಾಡುತ್ತಾಳೆ ಗೊತ್ತಾ? ತನಗೆ ಸಾಧ್ಯವಾಗುವ ಎಲ್ಲ ತಂತ್ರಗಳನ್ನೂ ಪ್ರಯೋಗಿಸಲು ಶುರು ಮಾಡಿಬಿಡುತ್ತಾಳೆ; ಸಾಲದ್ದಕ್ಕೆ ಗಂಡನಿಗೆ “ನೋಡ್ರೀ ನಮ್ಮ ಮಗ ಹೀಗೆ..” ಎಂದು ಪತಿರಾಯನ ಕಿವಿಯೂ ಸಾಕಷ್ಟು ಕಚ್ಚಿ ಒಲೆಗೆ ಸೌದೆ ಇಕ್ಕುತ್ತಾಳೆ. ಅಪ್ಪ-ಅಮ್ಮ ಇಬ್ಬರೂ ಸೇರಿಕೊಂಡು, ತಾವೇ ಈ ಹುಡುಗನ ಅಪ್ಪ-ಅಮ್ಮ ಎನ್ನುವುದನ್ನು ಸಾಧಿಸಲು, ಅವನನ್ನು ಕಡಿದು ಕೊಲ್ಲಲೂ ತಮಗೆ ಪೂರ್ಣ ಹಕ್ಕಿದೆ ಎನ್ನುವಂತೆ ವರ್ತಿಸತೊಡಗುತ್ತಾರೆ. ಮಗರಾಯನ ಮೊಬೈಲ್ ಕಟ್, ಅದರಲ್ಲಿ ಇಂಟರ್ನೆಟ್ ಕನೆಕ್ಷನ್ ಕಟ್, ಮನೆಯ ಟಿವಿಗೆ ಕೇಬಲ್ ಕಟ್, ಗೆಳೆಯರ ಜೊತೆ ಓತ್ಲಾ ಹೊಡೆಯುವುದು ಕಟ್ – ಹೀಗೆ ಹತ್ತಾರು ಕಟ್ಟುಗಳ ಬೆಟ್ಟ ಬೆಳೆಸುತ್ತಾರೆ. ಅವನಿಗೆ “ಇದೆಲ್ಲ ನಿನ್ನಂಥವರು ನೋಡೇನೋಡುವ, ಮಾಡೇಮಾಡುವ (ಮತ್ತು ತುಂಬ ಮಜ ಕೊಡುವ) ಸಂಗತಿಗಳು. ಅದಕ್ಕೇ ಅವನ್ನು ನಿರ್ಬಂಧಿಸಿದ್ದೇವೆ” ಎನ್ನುವ ಸಂದೇಶ ಇವರಿಂದ ಹೋಗುತ್ತದೆ. ಮಗ ಆಗ ಇದುವರೆಗೆ ಮಾಡದ ಪಾಪ ಕಾರ್ಯಗಳನ್ನು ಮಾಡುತ್ತಾನೆ. ಕದಿಯುತ್ತಾನೆ; ಸುಳ್ಳು ಕತೆ ಕಟ್ಟಲು ಶುರು ಮಾಡುತ್ತಾನೆ; ಅಪ್ಪಮ್ಮನ ಬಂಧನದಿಂದ ದೂರವಾಗಿ ಗೆಳೆಯರ ಸಂಗಕ್ಕೆ ಇನ್ನಷ್ಟು ಹತ್ತಿರ ಸರಿಯುತ್ತಾನೆ. ಬಂಧಿಸಿಟ್ಟ ಹಕ್ಕಿ ಮಾನಸಿಕವಾಗಿ ಆ ಗೂಡಿಂದ ಅದ್ಯಾವಾಗಲೋ ತುಂಬದೂರ ಹೋಗಿಬಿಟ್ಟಿರುತ್ತದೆ. ಮುಚ್ಚಿಟ್ಟ ಸಕ್ಕರೆಗೆ ರುಚಿ ಹೆಚ್ಚಲ್ಲವೆ?

ಈ ಎಲ್ಲ ಹಿನ್ನೆಲೆಯನ್ನಿಟ್ಟುಕೊಂಡು, ನಾನು ನಿನಗೆ ಪೋರ್ನ್ ಬಗ್ಗೆ ಮಾತಾಡಬೇಕು ಅಂದುಕೊಂಡೆ. ಪೋರ್ನ್ ಕೆಟ್ಟದು; ಅದನ್ನು ನೋಡಲೇಬಾರದು ಎಂದು ನಾನು ನಿನಗೆ ಉಪದೇಶಿಸುವುದರಲ್ಲಿ ಅರ್ಥವಿಲ್ಲ. ಅಮೆರಿಕದಲ್ಲಿ ಹತ್ತರ ಕೆಳಗಿನ 90% ಮಕ್ಕಳು ಪೋರ್ನ್ ನೋಡುತ್ತಾರಂತೆ. ಅಪ್ಪಮ್ಮನ ತೆಕ್ಕೆಯಿಂದ ದೂರದಲ್ಲಿ ಕಾಲೇಜು-ಹಾಸ್ಟೆಲುಗಳ ಜೀವನ ನಡೆಸುತ್ತಿರುವ ನಿನಗೆ ಅದು ಹೇಗೇಗೆ ಬೇಕಾದರೂ ಸಿಗುವ ಸರಕು. ಮನೆಯಲ್ಲಿರುವ ಮಕ್ಕಳೇ ಆರಾಮಾಗಿ ತಮ್ಮ ಕಂಪ್ಯೂಟರ್-ಫೋನುಗಳಲ್ಲಿ ಅವನ್ನು ನೋಡುತ್ತಾರಂತೆ! ಹಾಗಾಗಿ, ನಾವು ದೊಡ್ಡವರು ನಿಮ್ಮನ್ನು “ನೋಡಬೇಡ!” ಎಂದು ಕಿರುಚಿ ಹದ್ದುಬಸ್ತಿನಲ್ಲಿಡುವುದು, ಕೈಕೋಳ ತೊಡಿಸುವುದು ಬಾಲಿಶವಾಗುತ್ತದೆ. ನಾವಾದರೂ ಅವನ್ನೆಲ್ಲ ಒಂದಲ್ಲ ಒಂದು ಸಮಯದಲ್ಲಿ ನೋಡಿದವರೇ ಅಲ್ಲವೆ? ಅದು ಕೆಟ್ಟದು ಎನ್ನುವುದೇನೋ ಸರಿ, ಆದರೆ ಯಾಕೆ ಎನ್ನುವವರು ಎಲ್ಲಿದ್ದಾರೆ? ಸಂಸ್ಕøತಿ, ಪರಂಪರೆ, ಇತಿಹಾಸ, ಮೌಲ್ಯಗಳು ಇತ್ಯಾದಿ ಯಾವುದರ ಬಗ್ಗೆಯೂ ಹೇಳದೆ, ಅದರ ಇನ್ನೊಂದು ಮುಖವನ್ನು ನಿನಗೆ ಕಾಣಿಸುವ ಪ್ರಯತ್ನ ಮಾಡುತ್ತೇನೆ.

ನಿನಗೆ ಬಾಲಿವುಡ್ ಇಂಡಸ್ಟ್ರಿಯ ಬಗ್ಗೆ ಅಲ್ಪಸ್ವಲ್ಪವಾದರೂ ಗೊತ್ತಲ್ಲವಾ? ಫ್ಯಾಶನ್-ನಂತಹ ಸಿನೆಮಗಳಲ್ಲಿ ಈ ಫಿಲ್ಮೋದ್ಯಮದ ಬಗ್ಗೆಯೇ ಚಾರುಚೂರು ಹೇಳುವ ಕೆಲಸ ಮಾಡಿದ್ದಾರೆ. ನಮಗೆಲ್ಲ ಗೊತ್ತಿರುವ ಸಂಗತಿ ಎಂದರೆ, ನೂರರಲ್ಲಿ, ಅಥವಾ ಸಾವಿರದಲ್ಲಿ ಒಬ್ಬಳು ಫಿಲ್ಮಿನಲ್ಲಿ ಮುಖ ತೋರಿಸುವ ಛಾನ್ಸ್ ಗಿಟ್ಟಿಸುತ್ತಾಳೆ. ಉಳಿದ 999 ಜನ ರಿಜೆಕ್ಟ್ ಆಗಿಬಿಡುತ್ತಾರೆ. ಹಾಗೆ ರಿಜೆಕ್ಟ್ ಅನ್ನಿಸಿಕೊಳ್ಳುವ ಹೊತ್ತಿಗೆ ಅವರ ಜೀವನದ ಸರ್ವವೂ ನಾಶವಾಗಿರುತ್ತದೆ. ಅಮೂಲ್ಯವಾದ ಯೌವನ, ಕೂಡಿಟ್ಟ ಕಾಸು, ಉಳಿಸಿಕೊಂಡಿದ್ದ ಶೀಲ – ಎಲ್ಲವೂ ಬೆಂಕಿಯಲ್ಲಿ ಬಿದ್ದ ಹಕ್ಕಿಯಂತೆ ಗರಿಸುಟ್ಟು ಬಿದ್ದಿರುತ್ತದೆ. ಪೋರ್ನ್ ಇಂಡಸ್ಟ್ರಿಯ ಕತೆ ಇದಕ್ಕಿಂತ ಭಿನ್ನವಲ್ಲ! ಅಲ್ಲಿಯೂ ಒಬ್ಬಾಕೆಯನ್ನು “ನೀನು ಚೆನ್ನಾಗಿ ಪರ್ಫಾಮ್ ಮಾಡುತ್ತೀಯ!” ಎಂದು ಹೊಗಳಿ ಸೆಲೆಕ್ಟ್ ಮಾಡುವ ಮೊದಲು ಆ ನಿರ್ದೇಶಕ ಸಾವಿರ ಹುಡುಗಿಯರನ್ನು ರಿಜೆಕ್ಟ್ ಮಾಡಿರುತ್ತಾನೆ. ಆದರೆ, ಆ ಅಷ್ಟೂ ಜನರ ಚಿತ್ರಗಳನ್ನು-ಸಿನೆಮಗಳನ್ನು ಆಡಿಷನ್‍ನ ಹೆಸರಲ್ಲಿ ತೆಗೆದು ಕೋಟ್ಯಂತರ ದುಡ್ಡನ್ನು ಜೇಬಿಗಿಳಿಸುತ್ತಾನೆ. ಅದರಲ್ಲಿ ಒಂದು ದೊಡ್ಡ ಪಾಲು, ಆ ಹುಡುಗಿಯರನ್ನು “ಸಪ್ಲೈ” ಮಾಡುವ ಏಜೆನ್ಸಿಗಳಿಗೆ ಹೋಗುತ್ತದೆ. ರಿಜೆಕ್ಟ್ ಆದ ಹುಡುಗಿಯ ಬದುಕು ಘೋರವಾಗಿರುತ್ತದೆ. ಎಲ್ಲವನ್ನೂ ಕಳೆದುಕೊಂಡು ಅಕ್ಷರಶಃ ಬತ್ತಲಾಗಿರುವ ಅವಳಿಗೆ ಮನೆಮಠಗಳಿಲ್ಲ; ಮತ್ತೆ ವಾಪಸು ಹೋಗಿ ಸಹಜವಾಗಿ ಬದುಕುವಂತಿಲ್ಲ; ಅಪ್ಪಮ್ಮನನ್ನೂ ಕೂಡಿಕೊಳ್ಳುವಂತಿಲ್ಲ; ಸಮಾಜದಲ್ಲಿ ತಲೆ ಎತ್ತಿ ಓಡಾಡುವಂತಿಲ್ಲ; ಎಲ್ಲಕಡೆಗಳಿಂದ ಇರಿಯುವ ನೋಟದ ಈಟಿಗಳನ್ನು ಎದುರಿಸಲಾಗದೆ ಕೊನೆಗೆ ಅವಳು ವೇಶ್ಯಾಗೃಹಗಳ ಪಾಲಾಗುತ್ತಾಳೆ. ಅಲ್ಲಿಗೆ ಅವಳನ್ನು ಸಾಗಿಸಿ ಏಜೆನ್ಸಿಗಳು ಮತ್ತಷ್ಟು ದುಡ್ಡು ಮಾಡಿಕೊಳ್ಳುತ್ತವೆ. ಕೋಳಿ ಇಟ್ಟರೆ ಮೊಟ್ಟೆ, ಕಡಿದರೆ ಮಾಂಸ ಅನ್ನುವ ಹಾಗೆ, ಈ ಹೆಣ್ಣುಗಳ ಮಾಂಸವನ್ನೇ ಬಂಡವಾಳ ಮಾಡಿಕೊಂಡು ನೂರಾರು ರಾಕ್ಷಸರು ಸುಖವಾಗಿ ಬಾಳುತ್ತಾರೆ.
ಪೋರ್ನಿನ ಮುಖ್ಯ ಉದ್ಧೇಶ ಏನು? ಆ ಕ್ಷಣದ ಬಿಸಿಯನ್ನು ತಣಿಸುವುದು; ತಕ್ಷಣದ ಆಸೆಗಳನ್ನು ಪೂರೈಸುವುದು – ಅಷ್ಟೆ. ಒಂದು ಒಳ್ಳೆಯ ಪುಸ್ತಕ ಓದಿದಾಗ, ಸುಮಧುರವಾದ ಸಂಗೀತ ಕೇಳಿದಾಗ, ಅದ್ಭುತವಾದ ಸಿನೆಮ ನೋಡಿದಾಗ ಸಿಗುವ ರೋಮಾಂಚನ, ಥ್ರಿಲ್, ರಸಾನುಭೂತಿ – ಇವೆಲ್ಲ ಯಾವುದೂ ಇರದ, ಕೇವಲ ಉದ್ರೇಕವನ್ನಷ್ಟೆ ಎನ್‍ಕ್ಯಾಶ್ ಮಾಡಿಕೊಳ್ಳುವ ಏಕಮೇವ ಗುರಿ ಅಲ್ಲಿರುತ್ತದೆ. ಅದಕ್ಕೆ ಸರಿಯಾಗಿ ಅಲ್ಲಿ ಮಿಲನವಾದ ಗಂಡುಹೆಣ್ಣುಗಳ ನಡುವೆ ಪ್ರೀತಿ, ಉತ್ತೆಜನ, ಖುಷಿಯನ್ನು ಹಂಚಿಕೊಳ್ಳುವ ಮಧುರಕ್ಷಣಗಳು – ಯಾವುದೂ ಇರುವುದಿಲ್ಲ. ಗಂಡು, ತನ್ನ ಅಂಗಾಂಗಳನ್ನು ಕ್ಯಾಮರಕ್ಕೆ ತೋರಿಸಲಿಕ್ಕೆಂದೇ, ಕೈಗಳನ್ನು ಬೆನ್ನಿಗೆ ಮರೆಸಿಕೊಂಡು ನಿಂತಿರುತ್ತಾನೆ. ನಿಜವಾದ ಪ್ರೀತಿಯ ಉತ್ತುಂಗದಲ್ಲಿ ನಡೆಯಬೇಕಿದ್ದ ಬೆರಳುಗಳಾಟಕ್ಕೆ ಇಲ್ಲಿ ಯಾವ ಮಹತ್ವವೂ ಇಲ್ಲ. ಏನಿದ್ದರೂ ಅದು ಕೇವಲ ಎರಡು ಅಂಗಗಳ ನಡುವಿನ ಕ್ರಿಯೆ; ಕಾಮ ಎಂದರೆ ಇಷ್ಟೇ – ಎಂದು ತೋರಿಸುವ ಮೂರನೇದರ್ಜೆಯ ಕೀಳುಮನಸ್ಸಿನ ಅಭಿವ್ಯಕ್ತಿ ಅದು. ಭಾಷೆ ಎಂದರೆ ಶಬ್ದಗಳು ಎಂದು ಡಿಕ್ಷನರಿ ತೋರಿಸಿದರೆ ಸಾಕೆ?

ಅಲ್ಲಿ ತೊರಿಸಿದಷ್ಟು ತಾನು ಪೌರುಷವಂತನೇ? ನಿಜವಾದ ಪುರುಷಾಕಾರ ಹಾಗಿರುತ್ತದೆಯೇ? ತನ್ನವಳನ್ನು ತೃಪ್ತಿಪಡಿಸಬೇಕಾದರೂ ತಾನು ಹಾಗೆ ಗಂಟೆಗಟ್ಟಲೆ ಕುಣಿಯುತ್ತಲೇ ಇರಬೇಕೆ – ಎಂಬೆಲ್ಲ ಪ್ರಶ್ನೆಗಳು ಚಿತ್ರ ನೋಡಿದ ಗಂಡಿಗೆ ಕಾಡಲು ಶುರುವಾಗುತ್ತವೆ. ತಾನು ಆ ಚಿತ್ರದ ಗಂಡಿಗೆ ಸಮನಲ್ಲ, ತುಂಬಾ ಎಳಸು ಎನ್ನುವ ಕೀಳರಿಮೆ ಹುಟ್ಟುತ್ತದೆ. ಅದನ್ನು ಸರಿದೂಗಿಸಲು, ಆತ ತನಗೇ ಗೊತ್ತಿಲ್ಲದಂತೆ ವ್ಯಗ್ರನಾಗಲು, ಆಕ್ರಮಣದ ಪ್ರವೃತ್ತಿ ಬೆಳೆಸಿಕೊಳ್ಳಲು ಹೋಗುತ್ತಾನೆ. ಹೆಂಗಸನ್ನು ಬಗ್ಗುಬಡಿದಾದರೂ ತನ್ನ ತೃಷೆ ತೀರಿಸಿಕೊಳ್ಳಬೇಕು ಎನ್ನುವ ಬಯಕೆ ಒಳಗಿಂದ ಚಿಗುರೊಡೆಯುತ್ತದೆ. ಮನಸ್ಸಿಗಾದ ಗೀರು ನಾರಲು ತೊಡಗುತ್ತದೆ. ನಮ್ಮ ಮನಸ್ಸು ತನ್ನ ನಿಯಂತ್ರಣ ಕಳೆದುಕೊಳ್ಳುತ್ತಿದೆ, ಮತ್ತೆಮತ್ತೆ ಯಾವುದೋ ಸಂಗತಿಯನ್ನು ಬಯಸುತ್ತಿದೆ, ಉಗ್ರಗೊಳ್ಳುತ್ತಿದೆ ಅನ್ನಿಸುವಾಗಲೇ ಒಂದು ಸಣ್ಣ “ಬೈ” ಹೇಳಿ ಹೊರನಡೆದುಬಿಡುವುದು ಉತ್ತಮ. ಈ ವಿಕೃತರತಿಯನ್ನು, ಹಿಂಸಾವಿನೋದವನ್ನು ನೋಡಿ ನನ್ನ ಮನಸ್ಸಿನ ಯಾವ ಭಾಗ ಹೆಚ್ಚು ಉದ್ರೇಕಗೊಳ್ಳುತ್ತಿದೆ- ಒಳ್ಳೆಯದೋ ಕೆಟ್ಟದ್ದೋ? ಕೆಟ್ಟದ್ದೇ ಆದರೆ, ಅದನ್ನು ಮೊಟಕುವುದು ಹೇಗೆ? ಹಸಿದ ತೋಳಕ್ಕೆ ಆಹಾರ ಸಿಗದಂತೆ ಮಾಡಿ ನನ್ನನ್ನು ಕಾಪಾಡಿಕೊಳ್ಳುವುದು ಹೇಗೆ? ಯೋಚಿಸಬೇಕು.

ಮಗೂ, ನೀನು ಇವತ್ತು ಕೂತು ಪೋರ್ನ್ ನೋಡಲು ಜಗತ್ತಿನ ಯಾವುದೋ ಮೂಲೆಯಲ್ಲಿ ಹೆಣ್ಣುಗಳ ಸಪ್ಲೈ ಆಗುತ್ತಿದೆ ಎನ್ನುವುದನ್ನು ನೀನು ಅರಿಯಬೇಕು. ನೀನು ಏಷ್ಯನ್ ಹೆಣ್ಣುಗಳ ಕಾಮಕೇಳಿ ನೋಡಬೇಕಾದರೆ, ಬೇರೆಲ್ಲೋ ಒಂದೆಡೆ, ಏಷ್ಯನ್ ಹೆಣ್ಣುಗಳು ಈ ಕ್ರೂರಜಗತ್ತಿಗೆ ನೂಕಿಸಿಕೊಂಡು ಕಮರುತ್ತಿದ್ದಾರೆ. ಹನ್ನೆರಡು ವರ್ಷದ ಎಳೆಹುಡುಗಿಯರ ಮೇಲೆ ಗಂಡಸರು ಎರಗುವುದನ್ನು ಜಗತ್ತು ನೋಡುತ್ತಿದೆ ಎಂದಾದರೆ, ಅಂತಹ ಅಪ್ರಾಪ್ತ ಪ್ರಾಯದ ಮಕ್ಕಳನ್ನು ಈ ಬ್ಯುಸಿನೆಸ್ಸಿಗೆ ಕರೆತರುವ ಕೆಲಸವೂ ಆಗುತ್ತಿದೆ. ಅಂದರೆ, ಪರೋಕ್ಷವಾಗಿ ಅದನ್ನು ನೋಡುವವರೆಲ್ಲ, ಆ ಜಗತ್ತಿನ ಒಂದು ಭಾಗವೂ ಆಗಿದ್ದಾರೆ. ಡೌನ್‍ಲೋಡ್ ಆಗುವ ಒಂದೊಂದು ಸಿನೆಮವೂ, ಬಿಕರಿಯಾಗುವ ಒಂದೊಂದು ಸಿಡಿಯೂ, ಪೋರ್ನ್‍ಜಗತ್ತಿನ ದೈತ್ಯರ ಬ್ಯಾಂಕ್‍ಖಾತೆಗಳಿಗೆ ಇನ್ನಷ್ಟು ಲಕ್ಷಗಳನ್ನು ಜಮೆ ಮಾಡುತ್ತಿದೆ. ಹುಲಿಯನ್ನು ರಕ್ಷಿಸಲಿಕ್ಕಾಗಿ ನಾವು ಹೇಗೆ ಅದರ ತುಪ್ಪಳದ ವ್ಯಾನಿಟಿಬ್ಯಾಗನ್ನು ಕೊಳ್ಳದೆ ಪ್ರತಿಭಟಿಸುತ್ತೇವೋ, ಹಾಗೆಯೇ, ಈ ಮಾಂಸಮಾರಾಟದ ಜಾಲದ ಬೆಂಕಿಬಲೆಯನ್ನು ತಗ್ಗಿಸಲು (ನಿಲ್ಲಿಸಲಂತೂ ಸಾಧ್ಯವೇ ಇಲ್ಲ) ನಾವು ಮಾಡಬಹುದಾದ ಪುಟ್ಟಪ್ರಯತ್ನ – ಪೋರ್ನ್‍ಅನ್ನು ನೋಡುವುದನ್ನು ನಿಲ್ಲಿಸಿಬಿಡುವುದು. ಆದರೆ ಪೂರ್ತಿಯಾಗಿ ನಿಲ್ಲಿಸಬೇಕು. ಓಡುವ ರೈಲಿನ ಹಳಿಗೆ ಒಂದು ಕೈ ಮಾತ್ರ ಇಡೋಣ ಎನ್ನುವುದು ಬುದ್ಧಿವಂತಿಕೆ ಆಗುವುದಿಲ್ಲ.

ಈ ಜಗತ್ತಲ್ಲಿ ಕೊನೆಗೂ ಉಳಿಯುವುದು ಗಾಂಧಿ, ಬುದ್ಧ, ಲಿಂಕನ್, ಟಾಲ್‍ಸ್ಟಾಯೇ ಹೊರತು, ನೀಲಿಚಿತ್ರದ ಅಭಿನಯರಾಕ್ಷಸರಲ್ಲ. ಅವರ ಬದುಕು ಏನಿದ್ದರೂ ಮುಚ್ಚಿಟ್ಟ ಬಾಗಿಲುಗಳ ಹಿಂದೆ, ಪರದೆಯ ಮುಸುಕಿನಲ್ಲೇ ಕಳೆದುಹೋಗುತ್ತದೆ. ಪೋರ್ನ್ ನಮ್ಮನ್ನು ಆಹುತಿ ತೆಗೆದುಕೊಳ್ಳುವ ಮೊದಲೇ ಎಚ್ಚೆತ್ತು ಸ್ವಯಂನಿಯಂತ್ರಣ ಹಾಕಿಕೊಂಡು, ಅದರ ಗುಂಗಿಂದ ಹೊರಬರುವುದರಲ್ಲಿ ಜಾಣತನವಿದೆ. ಪೋರ್ನ್‍ಚಿತ್ರಗಳನ್ನು ಮತ್ತೆಮತ್ತೆ ರಿವೈಂಡ್ ಮಾಡಿ ನೋಡಿ ಚಪ್ಪರಿಸಿದಂತೆ ಕಳೆದುಹೋದ ಮುತ್ತಂಥ ಕ್ಷಣಗಳನ್ನು ಮತ್ತೆ ಬದುಕಲು ನಮ್ಮ ಬದುಕಿನ ಅಮೂಲ್ಯ ಯೌವನಕ್ಕೆ ರಿವೈಂಡ್ ಬಟನ್ನೇ ಇಲ್ಲವಲ್ಲ!

– ನಿನ್ನ ಅಪ್ಪ

7 ಟಿಪ್ಪಣಿಗಳು Post a comment
 1. Ganesh
  ಆಗಸ್ಟ್ 7 2015

  Tumba chennagi nirupisiddira.

  ಉತ್ತರ
 2. ಆಗಸ್ಟ್ 7 2015
 3. Shripad
  ಆಗಸ್ಟ್ 7 2015
 4. Yogi
  ಆಗಸ್ಟ್ 7 2015

  ಅದ್ಬುತವಾಗಿ ಮನಸ್ಸಿಗೆ ಮುಟ್ಟುವಂತೆ / ನಾಟುವಂತೆ ಬರೆದಿದ್ದೀರಿ… ಸಮಾಜಮುಖಿ ಬರಹಗಳು ನಿಮ್ಮಿಂದ ಬಹಳಷ್ಟು ಬರಲಿ ಎಂದು ಅಪೇಕ್ಷಿಸುತ್ತೇನೆ …

  ಉತ್ತರ
 5. ಆಗಸ್ಟ್ 8 2015

  ಕರೆಕ್ಟಾಗಿ ಹೇಳಿದ್ದೀರಿ…ಆದರೆ ಕೆಟ್ಟದ್ದಕ್ಕೆ ಮಾರ್ಕೆಟ್ ಜಾಸ್ತಿ ಏನ್ ಮಾಡೋಣ

  ಉತ್ತರ
 6. ಆಗಸ್ಟ್ 9 2015

  sakat lekhana !!

  ಉತ್ತರ
 7. ಆಗಸ್ಟ್ 7 2016

  ಧನ್ಯವಾದಗಳು….ತುಂಬ ಚಂದವಾಗಿದೆ ನಿಮ್ಮ ಬರವಣಿಗೆ… ವಿಷಯ ಸಮರ್ಥನೆ…ಮತ್ತು ಪ್ರತಿಪಾದನೆ…

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments