ನಾಡು-ನುಡಿ ಮರುಚಿಂತನೆ : ಬೌದ್ಧ ಮತ – ಸಂಘ ಮತ್ತು ಸಂಸಾರ
– ಪ್ರೊ.ರಾಜಾರಾಮ್ ಹೆಗಡೆ
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ
ನಾವು ಇಂದು ಓದುತ್ತಿರುವ ಬೌದ್ಧ ಮತದ ಜನಪ್ರಿಯ ಇತಿಹಾಸದಲ್ಲಿ ಒಂದು ಸಮಸ್ಯೆಯಿದೆ. ಅದೆಂದರೆ ನಾವು ಕ್ರಿಶ್ಚಿಯಾನಿಟಿ ಹಾಗೂ ಇಸ್ಲಾಮಿನ ಮಾದರಿಗಳನ್ನಿಟ್ಟುಕೊಂಡು ಅವುಗಳ ಲಕ್ಷಣಗಳನ್ನು ಆರೋಪಿಸಿಕೊಂಡು ಬೌದ್ಧ ಮತ ಎಂಬುದನ್ನು ಊಹಿಸಿಕೊಳ್ಳುತ್ತಿರುತ್ತೇವೆ. ಅಂದರೆ ಬೌದ್ಧ ಮತವನ್ನು ಒಂದು ರಿಲಿಜನ್ನು ಎಂಬದಾಗಿ ಭಾವಿಸಿಕೊಂಡು ಪಾಶ್ಚಾತ್ಯ ವಿದ್ವಾಂಸರು ಮೊತ್ತಮೊದಲು ಅದನ್ನು ಅಧ್ಯಯನಕ್ಕೊಳಪಡಿಸಿದರು ಹಾಗೂ ಅವರನ್ನನುಸರಿಸಿ ಭಾರತೀಯರೂ ಇಂಥ ಅಧ್ಯಯನಗಳನ್ನು ಮುಂದುವರಿಸಿದರು.
ಬೌದ್ಧ ಮತದ ಕುರಿತು ನಮ್ಮ ಜನಪ್ರಿಯ ಇತಿಹಾಸದ ಪ್ರಕಾರ ಬುದ್ಧನು ಬುದ್ಧಿಸಂ ಎಂಬ ಒಂದು ಹೊಸ ಜಾತ್ಯತೀತ ಸಮಾಜದ ಹುಟ್ಟಿಗೆ ಕಾರಣನಾದನು. ಅವನು ಮಾಡಿದ ಉಪದೇಶಗಳು ಅವನ ಅನುಯಾಯಿಗಳ ಜೀವನವನ್ನು ನಿರ್ದೇಶಿಸುವ ನಿಯಮಗಳಾದವು. ಇಂಥ ನಿಯಮಗಳನ್ನು ತಿಳಿಸುವ ಬೌದ್ಧರ ಪವಿತ್ರ ಗ್ರಂಥವೇ ಪಾಳಿ ತ್ರಿಪಿಟಕ. ಇಂಥ ನಿಯಮಗಳಾದರೂ ಯಾವವು? ನಮಗೆ ಸದ್ಯಕ್ಕೆ ಗೊತ್ತಿರುವುದು ಒಂದೇ ಒಂದು ನಿಯಮ: ಅದೆಂದರೆ ಜಾತಿ ಭೇದವನ್ನು ನಿರಾಕರಿಸಿದ್ದು. ಅಂದರೆ ಬೌದ್ಧರ ಆಚರಣೆಗಳಲ್ಲಿ ಜಾತಿಯನ್ನಾಧರಿಸಿ ತರತಮಗಳನ್ನಾಗಲೀ, ವ್ಯತ್ಯಾಸವನ್ನಾಗಲೀ ಮಾಡುವಂತಿಲ್ಲ. ಬೌದ್ಧ ಸಂಘಗಳೆಂದರೆ ಚರ್ಚುಗಳಂತೇ. ಅವುಗಳ ಕೆಲಸ ಬೌದ್ಧರಲ್ಲದವರನ್ನು ಬೌದ್ಧ ಮತಕ್ಕೆ ಪರಿವರ್ತನೆ ಮಾಡುವುದು. ಬೌದ್ಧ ಮತದ ಜಾತ್ಯತೀತತೆಗೆ ಮನಸೋತು ವರ್ಣ ಸಮಾಜದಲ್ಲಿ ಸಾಮಾಜಿಕ ಸ್ಥಾನಮಾನಗಳನ್ನು ಕಳೆದುಕೊಂಡ ಜಾತಿಗಳೆಲ್ಲವೂ ಬೌದ್ಧರಾಗಿ ಸಮಾನತೆಯನ್ನು ಪಡೆದರು.ಈ ರೀತಿಯಲ್ಲಿ ಬೌದ್ಧ ಮತವು ಭಾರತ ಹಾಗೂ ಪೂರ್ವ ಏಶಿಯಾದಲ್ಲೆಲ್ಲ ಜನಪ್ರಿಯತೆಯನ್ನು ಪಡೆದು ವ್ಯಾಪಿಸಿಕೊಂಡಿತು. ಆದರೆ ಮಧ್ಯಕಾಲದಲ್ಲಿ ಭಾರತೀಯರೆಲ್ಲರೂ ಮತ್ತೆ ಬೌದ್ಧ ಮತವನ್ನು ಬಿಟ್ಟು ಹಿಂದೂಯಿಸಂಗೇ ಸೇರಿಕೊಂಡರು. ಬೌದ್ಧ ಮತವು ಭಾರತದಲ್ಲಿ ಅವನತಿ ಹೊಂದಿತು. ಆದರೆ ಉಳಿದೆಡೆ ಉಳಿದುಕೊಂಡಿತು.
ಈ ಕಥೆಯು ತನ್ನದೇ ಆದ ಮತ್ತೊಂದು ಆಯಾಮವನ್ನು ಕೂಡ ಹೊಂದಿದೆ. ಆ ಕಥೆಯ ಪ್ರಕಾರ ಬೌದ್ಧ ಮತವು ಹುಟ್ಟಿದ್ದೇ ವೈದಿಕ ಮತದ ವರ್ಣವ್ಯವಸ್ಥೆಯ ವಿರುದ್ಧ ಪ್ರತಿಭಟನೆಯಾಗಿ. ಆದರೆ ಅದು ಕೊನೆಗೂ ವೈದಿಕ ಮತದ ಮೇಲಾಟಕ್ಕೆ ಸೋತುಹೋಯಿತು. ಅಂದರೆ ವೈದಿಕರ ಜಾತಿ ವ್ಯವಸ್ಥೆ ಎಂಬುದು ಬೌದ್ಧರ ಜಾತ್ಯತೀತ ಚಳವಳಿಯನ್ನು ಕೊನೆಗೂ ನುಂಗಿ ನೀರು ಕುಡಿಯಿತು. ಇಂಥ ಇತಿಹಾಸವು ಭಾರತದಲ್ಲಿ ಬೌದ್ಧ ಮತದ ಕುರಿತು ಒಂದು ವಿಷಾದವನ್ನೂ ಹಾಗೂ ಕನಿಕರವನ್ನೂ, ವೈದಿಕ ಮತದ ಕುರಿತು ಕಹಿಭಾವನೆಯನ್ನೂ ಹಾಗೂ ರೋಷವನ್ನೂ ಹುಟ್ಟಿಸುವ ಶಕ್ತಿಯನ್ನು ಪಡೆದಿದೆ. ಇಂದು ಬುದ್ಧನ ಕುರಿತು ನಮ್ಮ ತಲೆಮಾರಿನ ಬಹುತೇಕರಿಗೆ ಏನಾದರೂ ಆಸಕ್ತಿ ಹಾಗೂ ತಿಳುವಳಿಕೆ ಇದ್ದರೆ ಅದು ಇಲ್ಲಿಗೇ ನಿಲ್ಲುತ್ತದೆ. ಅವನ ಜೀವನವು ಯಾವುದರ ಕುರಿತ ಹುಡುಕಾಟವಾಗಿತ್ತು ಹಾಗೂ ಅವನು ಏನನ್ನು ಪಡೆದ ಎಂಬ ಕುರಿತು ಇಂಥ ಇತಿಹಾಸವನ್ನು ಕಥಿಸುವ ಯಾರೂ ಸೊಲ್ಲೆತ್ತಿದ್ದನ್ನು ಕಂಡಿಲ್ಲ. ಅಂದರೆ ಈ ಜನಪ್ರಿಯ ಇತಿಹಾಸವು ಬೌದ್ಧ ಮತಕ್ಕೆ ಸಂಬಂಧಿಸಿದಂತೆ ತೌಡು ಕುಟ್ಟುವ ಕೆಲಸವನ್ನು ಮಾತ್ರ ಮಾಡುತ್ತಿದೆ. ಇದು ಈ ಕೆಳಗಿನ ಅಂಶಗಳನ್ನು ಗಮನಿಸಿದಾಗ ಸ್ಪಷ್ಟವಾಗುತ್ತದೆ.
ಬುದ್ಧನ ಶ್ರಮಣ ಸಂಘವನ್ನು ಸೇರಿ ಮೋಕ್ಷ ಸಾಧನೆಯನ್ನು ಮಾಡಲು ಬರುವವರು ಬೇರೆ ಬೇರೆ ವರ್ಣ ಹಾಗೂ ಜಾತಿಗಳ ಹಿನ್ನೆಲೆಯನ್ನು ತ್ಯಜಿಸಿ ಬಂದಿದ್ದರು. ಏಕೆಂದರೆ ಸಂಸಾರವನ್ನು ಪರಿತ್ಯಜಿಸಿದವರಿಗೆ ಮಾತ್ರವೇ ಸಂಘದ ಬಾಗಿಲು ತೆರೆದಿತ್ತು. ಸಂಸಾರವನ್ನು ಪರಿತ್ಯಜಿಸುವುದೆಂದರೆ ಅವರವರ ಪೂರ್ವಾಶ್ರಮದ ಜಾತಿ ಕುಲಗಳೊಂದೇ ಅಲ್ಲದೇ ಸಾಂಸಾರಿಕ ಸಂಬಂಧಗಳು, ಸುಖೋಪಭೋಗ, ಅಧಿಕಾರ, ಆಸ್ತಿ, ಧನ ಕನಕ, ಇತ್ಯಾದಿಗಳೆಲ್ಲವನ್ನೂ ತ್ಯಜಿಸಬೇಕಾಗಿತ್ತು. ಭಿಕ್ಷುಗಳದ್ದು ಅಕ್ಷರಶಃ ಸನ್ಯಾಸ ಆಶ್ರಮವಾಗಿತ್ತು. ಬುದ್ಧನ ಮಾರ್ಗದಲ್ಲಿ ಸಾಗಲು ಇದು ಅತ್ಯಗತ್ಯ ಪೂರ್ವಸಿದ್ಧತೆ. ಬುದ್ಧನು ಒಬ್ಬ ಭಿಕ್ಷುವಾಗಿ ಜಾತಿ ಪದ್ಧತಿಯನ್ನೊಂದೇ ಅಲ್ಲ, ಸಂಸಾರವನ್ನೇ ತಿರಸ್ಕರಿಸಿದ. ಜಾತಿಯನ್ನೊಂದು ಬಿಟ್ಟು ಉಳಿದ ಸಾಂಸಾರಿಕ ಪ್ರಲೋಭನೆಗಳನ್ನು ಉಳಿಸಿಕೊಳ್ಳುತ್ತೇನೆ ಎಂದರೆ ಅವನು ಬೌದ್ಧ ಭಿಕ್ಷುವಾಗಲಾರ. ವಿನಯ ಪಿಟಕದ ಚುಲ್ಲವಗ್ಗ ಹಾಗೂ ಮಹಾವಗ್ಗಗಳಲ್ಲಿ ಬೌದ್ಧ ಭಿಕ್ಷುಗಳಿಗೆ ವಿಧಿಸಿದ ಕಟ್ಟು ನಿಟ್ಟಿನ ಜೀವನದ ಪರಿಚಯವಾಗುತ್ತದೆ.
ಬೌದ್ಧ ಮತದಲ್ಲಿ ಮತ್ತೊಂದೆಡೆ ಸಂಸಾರಸ್ಥ ಉಪಾಸಕರೂ ಕೂಡ ಇದ್ದರು ಎಂಬುದನ್ನು ಮರೆಯಲು ಸಾಧ್ಯವಿಲ್ಲ. ಅವರು ಈ ಭಿಕ್ಷು ಸಂಘಗಳಿಗೆ ದಾನ ಹಾಗೂ ಆಶ್ರಯವನ್ನು ನೀಡಿ ಅವುಗಳನ್ನು ಪೋಷಣೆ ಮಾಡುತ್ತಿದ್ದರು. ಇಂಥವರಲ್ಲಿ ರಾಜರು, ವರ್ತಕರು, ವಿಭಿನ್ನ ಕುಶಲಕರ್ಮಿಗಳು, ಬ್ರಾಹ್ಮಣರು, ವಿದೇಶೀಯರು ಇತ್ಯಾದಿ ನಾನಾ ಪ್ರಕಾರದ ಸಾಮಾಜಿಕ ಹಿನ್ನೆಲೆಯವರಿದ್ದರು. ಇವರು ಬೌದ್ಧ ಉಪಾಸಕರು ಎಂಬುದಾಗಿ ಕರೆಸಿಕೊಂಡಿದ್ದರು. ಇವರಲ್ಲಿ ಯಾರೂ ತಮ್ಮ ಜಾತಿ ಕುಲಗಳನ್ನಾಗಲೀ, ಸಾಮಾಜಿಕ ಅಂತಸ್ತು ಅಧಿಕಾರಗಳನ್ನಾಗಲೀ, ಆಸ್ತಿ ಪಾಸ್ತಿಗಳನ್ನಾಗಲೀ, ಹೆಂಡತಿ ಮಕ್ಕಳನ್ನಾಗಲೀ ಬಿಟ್ಟಿರಲಿಲ್ಲ ಹಾಗೂ ಬಿಡಬೇಕಾದ ಷರತ್ತೂ ಇರಲಿಲ್ಲ. ಇಂಥ ಸಂಸಾರಸ್ಥರು ಇಲ್ಲದೇ ಬೌದ್ಧ ಸಂಘಗಳು ಅಸ್ತಿತ್ವವನ್ನು ಇಟ್ಟುಕೊಳ್ಳುವುದು ಸಾಧ್ಯವೇ ಇರಲಿಲ್ಲ. ಭಿಕ್ಷೆಯನ್ನು ಹಾಕುವವರಿಲ್ಲದೇ ಭಿಕ್ಷುಗಳು ಇರಲಿಕ್ಕೆ ಹೇಗೆ ಸಾಧ್ಯ? ಅಂದರೆ ಇಂಥ ಸಂಸಾರಸ್ಥರು ಹಾಗೂ ಅವರ ಜಗತ್ತನ್ನು ನಿರಾಕರಿಸುವುದು ಬೌದ್ಧ ಮತಕ್ಕೆ ತನ್ನ ಅಸ್ತಿತ್ವವನ್ನೇ ನಿರಾಕರಿಸಿದಂತೆ.
ಪ್ರಾಚೀನ ಕಾಲದಲ್ಲಿ ಮಗಧ, ಕಾಶಿ ಹಾಗೂ ಕೋಸಲಗಳ ರಾಜರು, ಗಣ ಪ್ರಮುಖರು, ಶ್ರೇಷ್ಠಿಗಳು ಹಾಗೂ ಇನ್ನುಳಿದ ಸಂಸಾರಸ್ಥರು ಬುದ್ಧನೊಡನೆ ಒಡನಾಡಿದ್ದರು. ಅವರೆಲ್ಲ ಬುದ್ಧನ ಜೊತೆ ಸಂವಾದ ನಡೆಸಿ ಮನಸ್ಸಿನ ಸಮಾಧಾನವನ್ನು ಹೊಂದುತ್ತಿದ್ದರು. ಅಂದರೆ ಬುದ್ಧನು ತನ್ನ ಸಂಘದ ಭಿಕ್ಷುಗಳನ್ನು ಸಂಘದ ಮಾರ್ಗದಲ್ಲಿ ಮುನ್ನಡೆಸಿದರೆ ಇಂಥ ಸಂಸಾರಸ್ಥರನ್ನು ಮತ್ತೊಂದು ಮಾರ್ಗದ ಮೂಲಕ ಮುನ್ನಡೆಸಿದ್ದನು. ಇಂಥ ಸಂಸಾರಸ್ಥರಿಗೆ ಅವರ ಸಂಸಾರದ ಬಂಧನವನ್ನು ಹಾಗೂ ಭೇದಗಳನ್ನು ತ್ಯಜಿಸುವ ಷರತ್ತನ್ನು ಹಾಕಲಿಲ್ಲ. ಸಾಮ್ರಾಟ್ ಅಶೋಕನು ಬೌದ್ಧ ಮತದ ಪೋಷಣೆಗಾಗಿ ಕೈಗೊಂಡ ಕಾರ್ಯಗಳನ್ನು ಆತನ ಶಾಸನಗಳೇ ದಾಖಲಿಸುತ್ತವೆ. ಆತನು ಯುದ್ಧವನ್ನು ತ್ಯಜಿಸಿ ಅಹಿಂಸಾ ಧರ್ಮವನ್ನು ಪಾಲಿಸಿದರೂ ಕೂಡ ಸೈನ್ಯವನ್ನಾಗಲೀ, ಅಧಿಕಾರವನ್ನಾಗಲೀ ತ್ಯಜಿಸಲಿಲ್ಲ. ಬೌದ್ಧರನ್ನು ಪೋಷಿಸಿದ ಇನ್ನುಳಿದ ರಾಜರಂತೂ ಯುದ್ಧವನ್ನು ಕೂಡ ಬಿಟ್ಟದ್ದು ಕಾಣುವುದಿಲ್ಲ. ಬುದ್ಧನು ಗಂಗಾ ಬಯಲಿನ ಸುಪ್ರಸಿದ್ಧ ನಗರಗಳಲ್ಲೆಲ್ಲ ಸಂಚರಿಸುತ್ತಿದ್ದಾಗ ಅಲ್ಲಿನ ಕೋಟ್ಯಾಧೀಶ ಶ್ರೇಷ್ಠಿಗಳೆಲ್ಲ ನಾ ಮುಂದು ತಾ ಮುಂದು ಎಂದು ಆತನಿಗೆ ವಿಹಾರಗಳನ್ನು, ಆರಾಮಗಳನ್ನು ಕಟ್ಟಿಸಿದರು. ಶ್ರಾವಸ್ತಿಯಲ್ಲಿ ಅನಾಥ ಪಿಂಡಕ ಎನ್ನುವ ಶ್ರೇಷ್ಠಿಯು ಜೇಟ ಎಂಬ ರಾಜನಿಗೆ ಸೇರಿದ ವನವನ್ನು ಅವನ ಷರತ್ತಿನಂತೆ ನೆಲಕ್ಕೆಲ್ಲ ಹಣವನ್ನು ಹಾಸಿ ಖರೀದಿಸಿದನು. ಇವರೆಲ್ಲರೂ ಬುದ್ಧನಲ್ಲಿ ಅಂಥದ್ದೇನನ್ನೋ ಕಂಡಿದ್ದರು. ತಮ್ಮ ಜಾತಿಯ ವಿನಾಶಕ್ಕಾಗಿ ಇದನ್ನೆಲ್ಲ ಮಾಡಿದ್ದಂತೂ ಸುಳ್ಳು.
ಬುದ್ಧನ ಉಪಾಸಕ ವರ್ಗದವರು ಆಯಾ ಜಾತಿಯವರೇ ಆಗಿ ಬೌದ್ಧ ಸಂಘಗಳನ್ನು ಪೋಷಿಸಿದರು.ಪ್ರಾಚೀನ ಬೌದ್ಧ ಸ್ಮಾರಕಗಳಾದ ಸಾಂಚಿ, ಪಶ್ಚಿಮ ಮಹಾರಾಷ್ಟ್ರದ ಗುಹಾಲಯಗಳು, ಸನ್ನತಿ ಹಾಗೂ ಆಂಧ್ರದ ಬೌದ್ಧ ಸ್ಮಾರಕಗಳಲ್ಲಿ ಇಂಥ ಉಪಾಸಕ ಸಮುದಾಯದ ದಾನಗಳನ್ನು ದಾಖಲಿಸುವ ಸಾವಿರಾರು ಶಾಸನಗಳು ಸಿಗುತ್ತವೆ. ಅವರಲ್ಲಿ ಬ್ರಾಹ್ಮಣರು ಬ್ರಾಹ್ಮಣರಾಗಿಯೇ ದಾನ ನೀಡಿದ್ದಾರೆ, ಸೆಟ್ಟಿಗಳು ಸೆಟ್ಟಿಗಳಾಗಿ, ತೈಲಿಗರು ತೈಲಿಗರಾಗಿಯೇ ದಾನ ನೀಡಿದ್ದಾರೆ. ಆದರೆ ಅದನ್ನು ಸ್ವೀಕರಿಸಿದ ಭಿಕ್ಷುಗಳಿಗೆ ಮಾತ್ರ ಯಾವ ಜಾತಿಯೂ ಇರಲಿಲ್ಲ ಹಾಗೂ ಅವರಿಗೆ ಎಲ್ಲರೂ ಒಂದೇ ಆಗಿ ಕಾಣಿಸಿದ್ದರು. ಅಂದರೆ ಈ ಶಾಸನಗಳಲ್ಲಿ ಜಾತಿ ವೈವಿಧ್ಯತೆಯ ಸಮಾಜವು ಜಾತ್ಯತೀತ ಶ್ರಮಣರ ಸಮೂಹವನ್ನು ಪೋಷಿಸುವ ಅದ್ಭುತಕ್ಕೆ ನಾವು ಸಾಕ್ಷಿಗಳಾಗುತ್ತೇವೆಯೇ ಹೊರತೂ ಜಾತಿಯೇ ಇಲ್ಲದ ಸಮಾಜವನ್ನು ಕಾಣುವುದಿಲ್ಲ. ಇದನ್ನು ಅರ್ಥಮಾಡಿಕೊಳ್ಳಲಿಕ್ಕೆ ಕ್ರಿಶ್ಚಿಯಾನಿಟಿ ಅಥವಾ ಇಸ್ಲಾಂ ಮತಗಳ ಕುರಿತ ಜ್ಞಾನವು ಸಹಕರಿಸಲಾರದು.
ಚಿತ್ರಕೃಪೆ : santabanta.com
ಬೌದ್ಧ ಮತದ ಮತ್ತೊಂದು ಮಜಲನ್ನು ತಿಳಿಸಿದಕ್ಕೆ ಧನ್ಯವಾದಗಳು
ಹೆಗಡೆಯವರೇ ಇದೆಲ್ಲ ಸರಿ. ನಾವೀಗ ಯಾವುದೇ ಮೂಲ ಪಠ್ಯವನ್ನೂ ಓದುವ ಸ್ಥಿತಿಯಲ್ಲಿಲ್ಲ. ಎಲ್ಲವೂ ರೆಡಿಮೇಡ್ ಆದ ಕಾರಣ ಓದಿಗೂ ಗೈಡನ್ನೋ ಆ ಸಂಗಾತಿ, ಈ ಕೋಶಗಳನ್ನೋ ಓದುತ್ತೇವೆ. ಅಲ್ಲಿ ಯಾರು ಏನು ಒಂದು ವಾಕ್ಯ ಕೆತ್ತಿರುತ್ತಾರೋ ಅದೇ ನಮಗೆ ಪ್ರಮಾಣ! ಆತ ಏನನ್ನು ಹೇಗೆ ಓದಿಕೊಂಡು ಆ ವಾಕ್ಯ ಕೆತ್ತಿದ ಎಂಬುದೆಲ್ಲ ಬೇಕಿಲ್ಲ! ‘ಕಾಯಕವೇ ಕೈಲಾಸ’ ಎಂದು ಬಸವಣ್ಣ ಹೇಳಿದರು ಎಂದು ಯಾರೋ ಹೇಳಿದ್ದು ಈಗ ಸ್ಥಾಪಿತವಾಕ್ಯವೇ ಆಗಿಬಿಟ್ಟಿದೆ. ಜಾತಿ ವ್ಯವಸ್ಥೆಗೆ ಬ್ರಾಹ್ಮಣರೇ ಕಾರಣ ಎಂದು ಅಂಬೇಡ್ಕರ್ ಹೇಳಿದ್ದಾರೆ ಎಂದು ಯಾರೋ ಹೇಳಿದ್ದು ಕೂಡ ಹೀಗೆಯೇ. ಬಸವಣ್ಣ ಹಾಗೆ ಎಲ್ಲಿ ಹೇಳಿದ್ದಾರೆ? ಅಂಬೇಡ್ಕರ್ ಹಾಗೆಲ್ಲಿ ಹೇಳಿದ್ದಾರೆ ಅಂದರೆ ಹಾಗೆ ಪ್ರಶ್ನೆ ಕೇಳುವುದು ಪುರೋಹಿತಶಾಹಿ ತಲೆಹರಟೆಯ ಲಕ್ಷಣ ಎಂದು ಭಾವಿಸಲಾಗುತ್ತದೆ.
ಬುದ್ಧನ ವಿಷಯದಲ್ಲಿ ಆದುದೂ ಇಷ್ಟೇ. ಯಾವುದು ‘ನಮಗೆ’ ಉಲ್ಟಾ ಹೊಡೆಯುತ್ತದೋ ಅವೆಲ್ಲ, (ಬಸವಣ್ಣ, ಬುದ್ಧ ಮುಂತಾದವರ ವಿಚಾರದಲ್ಲಿ) ‘ಆ ಮೇಲೆ ಯಾರೋ ಸೇರಿಸಿದ’ ಸಂಗತಿಗಳು! ಹೀಗಿದೆ ನಮ್ಮ ಅಧ್ಯಯನ.
ಬುದ್ಧ ಮತ ವೈದಿಕ ಧರ್ಮದ ವಿರುದ್ಧ ಹೋರಾಡಲು ಅಸಮರ್ಥವಾಗಿ ಭಾರತದಲ್ಲಿ ನೆಲಕಚ್ಚಿತು. ಇದು ಸ್ವಲ್ಪಮಟ್ಟಿಗೆ ಸತ್ಯ. ಆದರೆ ಭೌದ್ಧಮತದ ಹ್ರಾಸವಾಗಿದ್ದು ಮುಸ್ಲಿಂ ಷಾಹಿಯಿಂದ. ಇದನ್ನು ಡಾ|| ಅಂಬೇಡ್ಕರ್ ಸಾರಿ ಸಾರಿ ಹೇಳಿದ್ದಾರೆ.
ಮಹರ್ಷಿ ಮಾರ್ಕ್ಸ್ ಒಬ್ಬರೇ ವೈದಿಕರ ವಿರುದ್ಧ ಹೋರಾಡಿ ಗೆಲ್ಲಬಲ್ಲವರಾಗಿದ್ದಾರೆ
ಹಾಗಾದರೆ ನಿಮ್ಮ ಆ ಮಹರ್ಷಿಗಳೇಕೆ ವೈದಿಕರ ವಿರುದ್ಧ ಹೋರಾಡಲು ಸಮಾಧಿಯಿಂದ ಇನ್ನೂ ಎದ್ದು ಬಂದಿಲ್ಲ?
ಮಾನ್ಯ ರಾಜಾರಾಮ್ ಸರ್, ಮತ್ತು ವಾಸು ಅವರೆ ಭಾರತದಲ್ಲಿ ಬೌದ್ಧರ ಅವನತಿಗೆ ಮುಸಲ್ಮಾನರು ಕಾರಣರೆಂದು ಅಂಬೇಡ್ಕರ್ ತಿಳಿಸಿದ್ದಾರೆಂದು ಹೇಳಿದಿರಿ. ಆದರೆ ಭಾರತದ ಹೊರಗೆ ಮುಸ್ಲೀಂರು ಬೌದ್ಧರಿಗೆ ಯಾವ ತೊಂದರೆ ಕೊಡಲಿಲ್ಲವೆ? ಅಥವಾ ಅಲ್ಲಿ ಮುಸಲ್ಮಾನರು ಹೋಗಲೇ ಇಲ್ಲವೆ? ಅಂದರೆ ಚೀನಾ, ಬರ್ಮಾ, ಜಪಾನ್, ಕೋರಿಯಾ ಶ್ರೀಲಂಕಾ ಇಲ್ಲಿ ಮುಸ್ಲೀಂ ದಾಳಿಗಳಾಗಲಿಲ್ಲವೆ? ಅಥವಾ ದಾಳಿಗಳಾದರೂ ಬೌದ್ಧರು ಅಸ್ತಿತ್ವ ಉಳಿಸಿಕೊಂಡರೆ? ಅಲ್ಲಿ ಅಸ್ತಿತ್ವ ಉಳಿಸಿಕೊಂಡವರಿಗೆ ಇಲ್ಲಿ ಯಾಕೆ ಉಳಿಸಿಕೊಳ್ಳಲಾಗಲಿಲ್ಲ? ಅಥವಾ ದಾಳಿಯ ತೀವ್ರತೆ ಭಾರತದ ಮೇಲಾದಷ್ಟು ಅತಿರೆಕ ವಾಗಿರಲಿಲ್ಲವೆ? ಕಾರಣಗಳೇನಿರಬಹುದು? ಮುಸಲ್ಮಾನರು ಹಿಂದುಗಳನ್ನು ಹಾಗೂ ಬೌದ್ಧರನ್ನು ಕೂಡಿಯೇ ಮತಾಂತರ ಮಾಡಿದರೂ ಹಿಂದುಗಳ ಸಂಖ್ಯೆ ಉಳಿದು ಕೇವಲ ಬೌದ್ಧರ ಸಂಖ್ಯೆ ಇಳಿಮುಖವಾಗಲು ಕಾರಣಗಳೇನು? ಅಥವಾ ಭಾರತದಲ್ಲಿ ನಾವಂದುಕೊಂಡಷ್ಟು ಸಂಖ್ಯೆಯಲ್ಲಿ ಬೌದ್ಧರಿರಲಿಲ್ಲವೆ? ಬೌದ್ಧರ ನಿಜವಾದ ಅವನತಿಗೆ ನಿಜವಾದ ಕಾರಣಗಳೇನೆನಿಸುತ್ತದೆ? ಮತ್ತು ಹೊರ ದೇಶಗಳಲ್ಲಿ ಅದು ಉಳಿದುಕೊಳ್ಳಲು ಕಾರಣಗಳೇನೆನಿಸುತ್ತದೆ? ನಿಮಗೆ. ಉತ್ತರಿಸುವಿರಾ?
ಮಹರ್ಷಿ ಯಾರು? ಸತ್ಯ ದರ್ಶನಾತ್ ಋಷಿಃ ಎಂದು ಋಷಿಯನ್ನು ಕುರಿತು ಹೇಳಿದ್ದಾರೆ. ಎಂದರೆ ಯಾರಿಗೆ ಸತ್ಯದರ್ಶನವಾಗಿದೆಯೋ ಅವರೇ ಋಷಿ ಎಂದು ಬಲ್ಲವರು ಹೇಳಿದ್ದಾರೆ. ಮಾರ್ಕ್ಸ ತನ್ನ ದಾಸ್ ಕ್ಯಾಪಿಟಲ್ ಬರೆಯಲು ಸುಮಾರು 30 ವರ್ಷಗಳೇ ತೆಗೆದುಕೊಂಡ. ವೈದಿಕ ಸತ್ಯ ದರ್ಶನ ಮಾಡಿದ ಸ್ವಾಮಿ ದಯಾನಂದರು ತಮ್ಮ ಅಭೂತ ಪೂರ್ವ ಕ್ರಾಂತಿ ಗ್ರಂಥ ಸತ್ಯಾರ್ಥ ಪ್ರಕಾಶವನ್ನು ಬರೆಯಲು ಕೇವಲ 3 ತಿಂಗಳು ತೆಗೆದು ಕೊಂಡರು. ಜಗತ್ತಿನಲ್ಲಿ ಕುರಾನ್, ಬೈಬಲ್ ಬಿಟ್ಟರೆ ಅತ್ಯಂತ ಹೆಚ್ಚು ಜನಪ್ರಿಯ ಗ್ರಂಥ ಈ ಪುಸ್ತಕವಾಗಿದೆ. ವೇದಗಳಲ್ಲಿ ಹೇಳಿರುವ ಸತ್ಯಗಳು ಯಾವಕಾಲಕ್ಕೂ ಸತ್ಯವಾಗಿಯೇ ಉಳಿದಿದೆ. ಅಂದ ಮೇಲೆ, ಜಾತಿ ಪದ್ದತಿ ಇತ್ಯಾದಿ ಅನಿಷ್ಟ ಪದ್ಧತಿಗಳನ್ನು ವೇದಗಳಿಗೆ ಆರೋಪಿಸುವುದು ಬೇಡ.
ಮಾರ್ಕ್ಸ ನ ವಿಷಯಗಳ ಪ್ರಯೋಗ ಶಾಲೆಯಾದ ರಷಿಯಾದಲ್ಲಿ ಮಾರ್ಕ್ಸ್ ವಿಚಾರಗಳು ಯಾವ ಸ್ಥಾನದಲ್ಲಿದೆ? ಮಾರ್ಕ್ಸ ನ ಮತ್ತೊಂದು ಪ್ರಯೋಗ ಶಾಲೆಯಾದ ಚೀನಾದಲ್ಲಿ ಅವನ ವಿಚಾರಗಳು ಯಾವ ಸ್ಥಾನದಲ್ಲಿದೆ ಎಂಬುದನ್ನು ಮಾರ್ಕ್ಸ ನಿಷ್ಟರು ತಿಳಿಸಬೇಕು. ಬಹುಶಃ ಕ್ಯೂಬಾ ಬಿಟ್ಟಲ್ಲಿ ಎಲ್ಲೂ ಮಾರ್ಕ್ಸ ನ ಘಂಟಾನಾದವಿಲ್ಲ. ಎಲ್ಲೆಲ್ಲಿಯೂ ಮಾರ್ಕ್ಸ ವಿಚಾರಗಳು ಶಾಶ್ವತ ಸತ್ಯದ ಮುಂದೆ ಕೊಚ್ಚಿ ಹೋಗುತ್ತಿವೆ. ಇದನ್ನು ಗಮನಿಸಬೇಕು.
ಸೌದಿಯಿಂದ ಬರುತ್ತಿದ್ದಾರೆ ಹುಷಾರ್!
“in India alone, from 2011 to 2013, some 25,000 Saudi clerics arrived bearing more than $250 million to build mosques and universities and hold seminars.”
http://theweek.com/articles/570297/how-saudi-arabia-exports-radical-islam
ಭಾರತದಲ್ಲಿ ಬೌದ್ಧರ ಅವನತಿಗೆ ಯಾವುದೇ ದಾಳಿಗಳು ಕಾರಣವಲ್ಲ.ಅಂಬೇಡ್ಕರರು ಯಾರನ್ನು ಆಧರಿಸಿ ಹಾಗೆ ಹೇಳುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ಭಾರತದೊಳಗೆ ಮುಸ್ಲಿಂ ಆಕ್ರಮಣವಾದದ್ದೇ 12ನೆಯ ಶತಮಾನದ ಅಂತ್ಯಕ್ಕೆ. ಆಗ ಪೂರ್ವಭಾರತದ ಬಿಹಾರ, ಬೆಂಗಾಲ, ಓರಿಸಾಗಳಲ್ಲಿ ಮಾತ್ರ ಕೆಲವು ಬೌದ್ಧ ಕೇಂದ್ರಗಳಿದ್ದವು. ಅವುಗಳಲ್ಲಿ ವಿಕ್ರಮಶಿಲಾ ವಿಹಾರವು ಪ್ರಮುಖವಾಗಿತ್ತು. ಭಾರತದ ಈ ಗಡಿಭಾಗದಲ್ಲಿ ನೇಪಾಳದತ್ತ ಚಲಿಸಿದಂತೆ ಬೌದ್ಧರ ಸಂಖ್ಯೆ ಜಾಸ್ತಿಯಾಗಿತ್ತು. ಘೋರಿ ಮಹಮ್ಮದನ ದಂಡನಾಯಕ ಭಕ್ತಿಯಾರ ಖಲ್ಜಿ ಎಂಬವನು ಈ ಪ್ರದೇಶಗಳಲ್ಲೆಲ್ಲ ದಂಡಯಾತ್ರೆ ನಡೆಸಿಅಲ್ಲಿನ ಬೌದ್ಧ ವಿಹಾರಗಳನ್ನು ಧ್ವಂಸಗೊಳಿಸಿದನು. ವಿಕ್ರಮಶಿಲೆಯನ್ನು ನಾಶಮಾಡಿ ಬೌದ್ಧ ಭಿಕ್ಷುಗಳ ನರಮೇಧ ಮಾಡಿದ್ದಾನೆಂಬುದಾಗಿ ಇತಿಹಾಸ ತಿಳಿಸುತ್ತದೆ. ಆದರೆ ಭಾರತದ ಉಳಿದ ಭಾಗದಲ್ಲಿ ಬೌದ್ಧ ಮತದ ಕೆಲವೇ ಬೆರಳೆಣಿಕೆಯಷ್ಟು ಕೇಂದ್ರಗಳಿದ್ದವು. ಅಲ್ಲೆಲ್ಲ ಮುಸ್ಲಿಮರು ಅವುಗಳ ಮೇಲೆ ದಾಳಿ ಮಾಡಿದ್ದು ಕಂಡುಬರುವುದಿಲ್ಲ. ಅದಕ್ಕಿಂತಲೂ ಹೆಚ್ಚಾಗಿ 13ನೆಯ ಶತಮಾದಷ್ಟು ಹೊತ್ತಿಗೆ ಅವುಗಳೆಲ್ಲ ನಾಮಶೇಷವಾಗಿದ್ದವು. ಬೌದ್ಧ ಮತದ ಅವನತಿಯು ಒಂದು ಐತಿಹಾಸಿಕ ಪ್ರಕ್ರಿಯೆ. ಅದು ದಾಳಿಗಳಂಥ ನಾಟಕೀಯ ಬೆಳವಣಿಗೆಯಿಂದ ಆದುದಲ್ಲ. ಅದಕ್ಕೆ ಸಮರ್ಪಕವಾದ ವಿವರಣೆಯನ್ನು ನಾವಿನ್ನೂ ಹುಡುಕಬೇಕಾಗಿದೆ.
ಸರ್, ಶಂಕರಾಚಾರ್ಯರು ತಮ್ಮ ಭಾಷ್ಯದಲ್ಲಿ ಸಾಂಖ್ಯರೇ ತಮ್ಮ ಮುಖ್ಯ ಪ್ರತಿಪಕ್ಷದವರು, ಅವರನ್ನು ವಾದದಲ್ಲಿ ಗೆದ್ದರೆ ಉಳಿದವರನ್ನು ಗೆದ್ದಂತೆ ಎಂಬ ಅರ್ಥದಲ್ಲಿ ಅವರನ್ನು ಪ್ರಧಾನಮಲ್ಲ ಎಂದು ಕರೆದಿದ್ದಾರೆ. ಆದರೆ ಇಂದು ಸಾಂಖ್ಯಮತದವರು ಪ್ರಧಾನಮಲ್ಲರಾಗುವಷ್ಟು ಸಂಖ್ಯೆಯಲ್ಲಿ ಉಳಿದಿಲ್ಲ. ಅಂದರೆ ಸಾಂಖ್ಯರಿಗಿಂತ ಮೊದಲೇ ಬೌದ್ಧ ಧರ್ಮ ಕ್ಷೀಣಿಸಲು ಆರಂಭಿಸಿತ್ತೇ? ಶಂಕರಾಚಾರ್ಯರ ಭಾಷ್ಯಗಳಿಗಿಂತ ಮುಂಚೆಯೇ ಬೌದ್ಧಮತದಿಂದ ಜನರು ದೂರಸರಿಯಲಾರಂಭಿಸಿದ್ದರೇ? ಕುಮಾರಿಲಭಟ್ಟರ ಕಥೆಯ ಪ್ರಕಾರ ಅವರು ಬೌದ್ಧದರ್ಶನಗಳನ್ನು ಕಲಿಯಲು ಮಾರುವೇಶದಲ್ಲಿ ಹೋಗಬೇಕಾಯಿತು. ಅಂದರೆ ಆಗ ಪೌರಾಣಿಕ ಕಥೆಗಳು ಮತ್ತು ಅದರ ಹಿಂದಿನ ತತ್ತ್ವಗಳು ಜನರನ್ನು ತಲುಪಿದಷ್ಟು ಮುಕ್ತವಾಗಿ ಬೌದ್ಧ ದರ್ಶನಗಳು ಜನರಿಗೆ ತಲುಪುತ್ತಿರಲಿಲ್ಲವೇ? ಈ ಎಲ್ಲ ಎಳೆಗಳು ಸಾಂಖ್ಯ ಮತ್ತು ಬೌದ್ಧ ಮತದ ಅವನತಿಯನ್ನು ವಿವರಿಸಲು ಸಹಾಯವಾಗಬಹುದೇ?
ಬೌದ್ಧ ಮತ ಕ್ಷೀಣಿಸಲು ಕಾರಣ ಅದರ ಜೀವವಿರೋಧಿ ಧೋರಣೆ ಅಂತ ಭೈರಪ್ಪನವರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನೊಂದು ಕಾರಣ ಬೌದ್ಧ ಮತ ಮಿಕ್ಕ ಮತಗಳಿಗಿಂತ ಹೆಚ್ಚು ಪುರೋಹಿತಶಾಹಿ ಆಗಿದ್ದು ನಮ್ಮ ಸಮಾಜಕ್ಕೆ ರುಚಿಸದೇ ಇದ್ದಿರಬಹುದು.
ವಿನಾಯಕ ಹಂಪಿಹೊಳಿ ಅವರಿಗೆ, ಶಂಕರರ ಕಾಲಮಾನವನ್ನು ಸ್ಥೂಲವಾಗಿ 8ನೆಯ ಶತಮಾನದಲ್ಲಿ ಗುರುತಿಸುತ್ತಾರೆ. ಅಷ್ಟರಲ್ಲಾಗಲೇ ಬೌದ್ಧಮತವು ಭಾರತದಲ್ಲಿ ತನ್ನ ಪ್ರಾಧಾನ್ಯವನ್ನು ಕಳೆದುಕೊಂಡಿತ್ತು. ಏಳನೆಯ ಶತಮಾನದಲ್ಲಿ ಭಾರತಕ್ಕೆ ಬಂದ ಚೈನೀ ಪ್ರವಾಸಿ ಹ್ಯೂಯೆನ್ ತ್ಸಾಂಗನ ಚಿತ್ರಣದ ಪ್ರಕಾರ ಪ್ರಮುಖ ಬೌದ್ಧ ನೆಲೆಗಳೆಲ್ಲ ಅದಾಗಲೇ ಹಾಳುಬಿದ್ದಿದ್ದವು. ಆದರೆ ನಲಂದಾ ಇನ್ನೂ ಪ್ರಮುಖ ಬೌದ್ಧ ವಿಹಾರವಾಗಿ ಬೆಳೆಯತೊಡಗಿತ್ತು. ನಲಂದಾವನ್ನು ನಾವು ವಿಶ್ವವಿದ್ಯಾಲಯ ಎಂಬ ಪರಿಭಾಷೆಯಿಂದ ಅರ್ಥೈಸುತ್ತಿರುವುದರಿಂದ ಅನೇಕ ಗೊಂದಲಗಳು ಉಂಟಾಗಿವೆ. ಅದರಲ್ಲಿ ನೀವು ಕೇಳಿದ ಪ್ರಶ್ನೆಯೂ ಒಂದು. ಅದನ್ನು ಅಲ್ಲಿನ ಶಾಸನಗಳು ಪ್ರಬೌದ್ಧ ವಿಹಾರ ಎಂಬುದಾಗಿ ಕರೆಯುತ್ತವೆ. ಅದರರ್ಥ ಅದೊಂದು ಬೌದ್ಧ ಶಿಕ್ಷಣ ಕೇಂದ್ರವಾಗಿತ್ತು. ಅದಕ್ಕೆ ದೇಶ ವಿದೇಶಗಳಿಂದ ಬರುತ್ತಿದ್ದ ವಿದ್ಯಾರ್ಥಿಗಳು ಬೌದ್ಧರೇ ಆಗಿದ್ದರು. ಏಳನೆಯ ಶತಮಾನದಲ್ಲಿ ಚೀನಾ, ಮಧ್ಯ ಏಶಿಯಾ, ಆಗ್ನೇಯ ಏಶಿಯಾ, ಶ್ರೀಲಂಕಾ ಹೀಗೇ ಅನೇಕ ದೇಶಗಳಲ್ಲಿ ಬೌದ್ಧರು ಇದ್ದರು. ಆದರೆ ಅವರು ಓದುತ್ತಿದ್ದ ಬೌದ್ಧ ಗ್ರಂಥಗಳು ಪಾಳಿ, ಸಂಸ್ಕೃತಗಳ್ಲಲಿದ್ದವು. ಅವರಿಗೆ ಬೌದ್ಧ ದರ್ಶನವನ್ನು ಮೂಲಭಾಷೆಯಲ್ಲಿ ಕಲಿಯಲು, ಕಾಲಾಂತರಗಳಲ್ಲಿ ಹುಟ್ಟಿದ ತ್ಪಪು ಓದುಗಳನ್ನು ಸರಿಪಡಿಸಿಕೊಳ್ಳಲು ನಲಂದಾದಂಥ ಭಾರತೀಯ ವಿಹಾರಗಳಿಗೇ ಬರಬೇಕಿತ್ತು. ಆರನೆಯ ಶತಮಾನದಿಂದ ೆಂಟನೆಯ ಶತಮಾನಗಳ ವರೆಗೆ ಭಾರತ್ಕಕೆ ಬಂದ ಬೌದ್ಧ ಪ್ರವಾಸಿಗಳೆಲ್ಲ ಇಂಥ ಶಿಕ್ಷಣಕ್ಕಾಗಿ ಬಂದವರೇ ಹೊರತೂ ಪ್ರವಾಸಕ್ಕಲ್ಲ. ಹ್ಯೂಯೆನ್ ತ್ಸಾಂಗನ ಕಾಲಕ್ಕೆ ಚೀನಾದಲ್ಲಿ ಮಹಾಯಾನ ಬೌದ್ಧರ ಸಂಸ್ಕೃತ ಗ್ರಂಥಗಳು ಇದ್ದರೂ ಯಾರಿಗೂ ಅವುಗಳನ್ನು ಓದಲಿಕ್ಕೆ ಬರುತ್ತಿರಲಿಲ್ಲ. ತತ್ವ ಜಿಜ್ಞಾಸೆಯನ್ನು ಮಾಡಬೇಕಾದರೆ ಹುಟ್ಟಿದ ಸಂದೇಹಗಳನ್ನು ಪರಿಹರಿಸಿಕೊಳ್ಳುದು ಕಷ್ಟವಾಯಿತು. ಅದಕ್ಕಾಗಿ ಅವನೇ ಸ್ವತಃ ಭಾರತ್ಕಕೆ ಬಂದು, ಕಲಿತು, ನೂರಾರು ಗ್ರಂಥಗಳನ್ನು ಹುಟ್ಟೂರಿಗೆ ತೆಗೆದುಕೊಂಡು ಹೋಗಿ ಅವನ್ನು ಚೀನೀ ಭಾಷೆಗೆ ಭಾಷಾಂತರಿಸಿಯೇ ಜೀವ ಬಿಟ್ಟನು. ಬೌದ್ಧೇತರರಿಗೆ ಅಲ್ಲಿ ಹೋಗಿ ಕಲಿಯುವಂಥದ್ದು ಏನಿದೆ? ಇಂದಾದರೆ ಯಾರಾದರೂ ಯಾವ ಡಿಗ್ರಿಯನ್ನಾದರೂ ಮಾಡಬಹುದು. ಅಂದು ಅದು ಅರ್ಥಹೀನ ಕೆಲಸವಾಗಿತ್ತು ಅಷ್ಟೆ. ಅದೇ ರೀತಿ ತಮ್ಮ ಮತಾನುಯಾಯಿಗಳಿಗಲ್ಲದೇ ಉಳಿದವರಿಗೆ ಅವನ್ನು ಹೇಳಿಕೊಡುವ ಪ್ರಶ್ನೆಯೂ ಇರಲಿಲ್ಲ.
ಮಾಹಿತಿಗಾಗಿ ಧನ್ಯವಾದಗಳು ಸರ್…
ಆತ್ಮೀಯ ರಾಜಾರಾಂ ಸರ್ ಅವರಿಗೆ, ಭಾರತವು ನಮಗೆ ತಿಳಿದಂತೆ ಬೌದ್ಧ ಮತದ ತವರೂರು. ಮತ್ತು ಜನಪ್ರೀಯ ಹಾಗೂ ರಾಜರುಗಳಿಂದ ಮಾನ್ಯತೆ ಪಡೆದ ಧರ್ಮ. ಇಂಥ ಧರ್ಮ ಭಾರತದಲ್ಲೇ ಅವನತಿ ಯಾಕೆ ಹೊಂದಿತು. ಮುಸ್ಲೀಂ ದಾಳಿಗಳು ಕಾರಣವಲ್ಲವೆಂದು ಹಾಗೂ ಶಂಕರರು ಕಾರಣರಲ್ಲವೆಂದು ನೀವೇ ಹೇಳಿರುವಿರಿ. ಅಂದ ಮೇಲೆ ಯಾರು ಕಾರಣರು? ಇನ್ನು ಸಂಸ್ಕೃತವು ಜನಸಾಮಾನ್ಯರಿಗೆ ತಿಳಿಯುವದಿಲ್ಲವೆಂಬ ಕಾರಣಕ್ಕೆ ಬೌದ್ಧ ದರ್ಶನಗಳನ್ನೆಲ್ಲಾ ಅವತ್ತಿನ ಆಡು ಭಾಷೆಯಾದ ಪಾಳಿಯಲ್ಲಿ ಬರೆಯಲಾಯಿತೆಂದು ಹೇಳುತ್ತಾರೆ. ನೀವು ಸಂಸ್ಕೃತದಲ್ಲೂ ಬೌದ್ಧ ದರ್ಶನ ಬರೆದಿದ್ದಾರೆನ್ನುತ್ತೀರಿ. ಅವರೇಕೆ ಸಂಸ್ಕೃತದಲ್ಲಿ ಬರೆದರು? ಯಾಕೆಂದರೆ ಅವರ ಉದ್ದೇಶ ಜನಸಾಮಾನ್ಯರನ್ನು ಅವರ ಧರ್ಮ ತಲುಪುವದೇ ಆಗಿತ್ತು. ಮತ್ತೆ ಸಂಸ್ಕೃತವನ್ನೇಕೆ ಆರಿಸಿಕೊಳ್ಳಬೇಕಿತ್ತು? ಇನ್ನು ನಳಂದಾದಲ್ಲಿ ಕೇವಲ ಬೌದ್ಧರಷ್ಟೇ ಕಲಿಯುತ್ತಿದ್ದರೆ? ವೈದಿಕರು ಕಲಿಯುತ್ತಿದ್ದರೆಂದು ಕೆಲವರು ಹೇಳುತ್ತಾರಲ್ಲಾ? ವೇದೋಪನಿಷತ್ತುಗಳನ್ನು ಕಲಿಯುವವರಿಗೂ ಅವಕಾಶವಿತ್ತೆಂದು ನನಗೆ ಓದಿದ ನೆನಪು.
ವಿನಾಯಕ ಅವರಿಗೆ [[ಅಂದರೆ ಆಗ ಪೌರಾಣಿಕ ಕಥೆಗಳು ಮತ್ತು ಅದರ ಹಿಂದಿನ ತತ್ತ್ವಗಳು ಜನರನ್ನು ತಲುಪಿದಷ್ಟು ಮುಕ್ತವಾಗಿ ಬೌದ್ಧ ದರ್ಶನಗಳು ಜನರಿಗೆ ತಲುಪುತ್ತಿರಲಿಲ್ಲವೇ? ಈ ಎಲ್ಲ ಎಳೆಗಳು ಸಾಂಖ್ಯ ಮತ್ತು ಬೌದ್ಧ ಮತದ ಅವನತಿಯನ್ನು ವಿವರಿಸಲು ಸಹಾಯವಾಗಬಹುದೇ?]] ಹೀಗೆಂದು ನೀವು ಪ್ರಶ್ನಿಸಿರುವಿರಿ. ಆದರೆ ಬೌದ್ಧ ಮತವು ಆಚರಣೆಯಲ್ಲೂ ಮತ್ತು ತಿಳಿದುಕೊಳ್ಲಲೂ ಸರಳವಾಗಿದ್ದರಿಂದಲೇ ಅದು ಜನಪ್ರೀಯವಾಗಲು ಸಾಧ್ಯವಾಯಿತೆನ್ನುವರಲ್ಲವೆ? ಮತ್ತು ಅದರ ದರ್ಶನಗಳು ಜನರಾಡುವ ಪಾಳಿಯಲ್ಲಿದ್ದುದರಿಂದ ಇನ್ನೂ ಹೆಚ್ಚು ಜನರನ್ನು ತಲುಪಲು ಸಾಧ್ಯವಾಯಿತಲ್ಲವೆ? ಹೀಗಿದ್ದರೂ ನೀವು ಅವುಗಳು ಮುಕ್ತವಾಗಿ ಜನರನ್ನು ತಲುಪುತ್ತಿರಲಿಲ್ಲ ಎನ್ನುವಿರಲ್ಲಾ? ವಿವರವಾಗಿ ವಿವರಿಸಲು ಸಾಧ್ಯವೆ?
valavi ಅವರೇ,
೧. ಅವರ (ಬೌದ್ಧರ) ಉದ್ದೇಶ ಜನಸಾಮಾನ್ಯರನ್ನು ಅವರ ಧರ್ಮ ತಲುಪುವದೇ ಆಗಿತ್ತು. ಮತ್ತೆ ಸಂಸ್ಕೃತವನ್ನೇಕೆ ಆರಿಸಿಕೊಳ್ಳಬೇಕಿತ್ತು?
ಈ ಪ್ರಶ್ನೆ ಬೌದ್ಧದರ್ಶನ ಶುರುವಾದಾಗಿನಿಂದ ಹಿಡಿದು ವಸಾಹತು ಆಳ್ವಿಕೆ ಶುರುವಾಗುವವರೆಗೂ ಯಾರೂ ಕೇಳಿರಲಿಲ್ಲ, ಈಗ ಕೇಳುತ್ತಿದ್ದೇವೆ ನಾವು, ಕಾರಣ ಬೌದ್ಧ ದರ್ಶನ ಸಂಸ್ಕೃತ ಮತ್ತು ಪುರೋಹಿತಶಾಹಿಯನ್ನು ಮೆಟ್ಟಿ ನಿಂತ ಸಾಮಾಜಿಕ ಚಳುವಳಿ ಎಂದು ಓದಿದ್ದೇವೆ. ಆದರೆ ಬೌದ್ಧ ದರ್ಶನವು ಪಾಳಿ/ಸಂಸ್ಕೃತ ಎರಡರಲ್ಲೂ ಸಾಹಿತ್ಯವನ್ನು ರಚಿಸಿಕೊಂಡಿತು. ಇದನ್ನು ಸಾಮಾಜಿಕ ಚಳುವಳಿಯನ್ನಾಗಿ ನೋಡಿದರೆ ಸಂಸ್ಕೃತದಲ್ಲಿನ ಬೌದ್ಧ ಸಾಹಿತ್ಯ ಒಗಟಾಗಿ ಕಾಣಿಸುತ್ತದೆ. ಬೌದ್ಧರಲ್ಲಿ ತರ್ಕವಿತ್ತು. ವೇದಾಂತ-ನ್ಯಾಯಗಳಲ್ಲಿನ ತರ್ಕವನ್ನು ಅವರು ಜಗನ್ಮಿಥ್ಯಾತ್ವವಾದಕ್ಕೆ (ಜಗತ್ತು ಸುಳ್ಳು ಎಂಬ ವಾದಕ್ಕೆ) ಉಪಯೋಗಿಸಿಕೊಂಡಿದ್ದರು. ಈಗ ಹೇಗೆ ವಿಜ್ಞಾನ ಇಂಗ್ಲೀಷಿನಲ್ಲಿದೆಯೋ, ಹಾಗೆ ಹಿಂದೆ ತರ್ಕಶಾಸ್ತ್ರ ಸಂಸ್ಕೃತದಲ್ಲಿತ್ತು, ಹೀಗಾಗಿ ಅದಕ್ಕಾದರೂ ಅವರಿಗೆ ಸಂಸ್ಕೃತದ ಅಗತ್ಯತೆ ಇತ್ತು.
ಉದಾಹರಣೆಗೆ ಮುಂಚೆ ಸತ್ಯನಾರಾಯಣ ಕಥೆಯ ಮೂಲ ಸಂಸ್ಕೃತದಲ್ಲೇ ಇದೆ. ಆದರೆ ಜನರಿಗೆ ಕಥೆ ಮುಟ್ಟಲಿ ಎಂದು, ಈಗ ಪ್ರಾದೇಶಿಕ ಭಾಷೆಗಳಲ್ಲೆಲ್ಲ ಬಂದಿದೆ. ಇದಕ್ಕೆ ಸಾಮಾಜಿಕ ಚಳುವಳಿ ಎಂಬ ಪಟ್ಟಕಟ್ಟುವ ಅಗತ್ಯತೆ ಇದೆಯೇ? ತುಳಸಿ ರಾಮಾಯಣವಾಗಲೀ, ಕುಮಾರವ್ಯಾಸ ಭಾರತವಾಗಲೀ ಕವಿಯ ಸಾಹಿತ್ಯಿಕ ಕೃತಿಯೇ ಹೊರತು, “ಬ್ರಾಹ್ಮಣರ ಸೊತ್ತಿನಲ್ಲಿದ್ದ ರಾಮಾಯಣ/ಭಾರತಗಳ ತತ್ತ್ವಗಳನ್ನು ಅವರ ಕಪಿಮುಷ್ಟಿಯಿಂದ ಬಿಡಿಸಿ, ಜನಸಾಮಾನ್ಯರಿಗೆ ಆಡುಭಾಷೆಯಲ್ಲಿ ನೀಡಿದ ಮಹಾನ್ ಚಳುವಳಿ” ಎಂದು ಅರ್ಥೈಸುವದು ಸರಿಯೇ? ಕುಮಾರವ್ಯಾಸನ ಭಾರತವನ್ನು ಆಗ ಓದಿದವರು ಅದನ್ನೊಂದು ಚಳುವಳಿಯೆಂದು ಪರಿಗಣಿಸಿದ್ದರೇ? ಬೌದ್ಧದರ್ಶನ/ವಚನಸಾಹಿತ್ಯಗಳು ಆಡುಭಾಷೆಯಲ್ಲಿ ಹೇಳಲ್ಪಟ್ಟ ಆಧ್ಯಾತ್ಮಿಕ ಮಾರ್ಗಗಳೇ ಹೊರತು ಸಾಮಾಜಿಕ ಚಳುವಳಿಯಲ್ಲ, ಕಾರಣ ೧೯ನೇ ಶತಮಾನದವರೆಗೂ ಬೌದ್ಧದರ್ಶನ/ವಚನಸಾಹಿತ್ಯಗಳ ಕುರಿತು ಬಂದ ಕೃತಿಗಳು ಅದನ್ನು ಸಾಮಾಜಿಕ ಚಳುವಳಿ ಎಂದು ಹೇಳಲೇ ಇಲ್ಲ. ಹಾಗೆ ಹೇಳಿದ್ದು ವಸಾಹತು ಅಳ್ವಿಕೆಯಲ್ಲಿ ಬ್ರಿಟಿಷರು ನೀಡಿದ ಶಿಕ್ಷಣ, ಅವರು ನಮ್ಮ ಸಮಾಜವನ್ನು ಹೇಗೆ ಅಧ್ಯಯನ ಮಾಡಿದರೋ ನಾವು ಅದನ್ನು ಹಾಗೆಯೇ ಒಪ್ಪಿಕೊಂಡುಬಿಟ್ಟಿದ್ದೇವೆ ಅಷ್ಟೇ.
೨. ವೈದಿಕರು ಕಲಿಯುತ್ತಿದ್ದರೆಂದು ಕೆಲವರು ಹೇಳುತ್ತಾರಲ್ಲಾ? ವೇದೋಪನಿಷತ್ತುಗಳನ್ನು ಕಲಿಯುವವರಿಗೂ ಅವಕಾಶವಿತ್ತೆಂದು ನನಗೆ ಓದಿದ ನೆನಪು.
ನಿಜ. ಇವೆಲ್ಲ ನಾನೂ ಕೂಡ ಸಮಾಜವಿಜ್ಞಾನದಲ್ಲಿ ಓದಿದ್ದೇನೆ. ಆದರೆ ನಾಲಂದಾದಲ್ಲಿ ವೈದಿಕ ವಿದ್ಯೆ ನೀಡಲಾಗುತ್ತಿತ್ತು ಎಂಬುದಕ್ಕೆ ಅಲ್ಲಿ ಬಂದ ಬೌದ್ಧರ ವರ್ಣನೆಗಳಲ್ಲೂ ಆಧಾರವಿಲ್ಲ, ವೈದಿಕ ಪರಂಪರೆಯವರಲ್ಲೂ ಆಧಾರವಿಲ್ಲ. ಈಗಿನ ಸಮಾಜವಿಜ್ಞಾನದಲ್ಲಿ ಹೇಳಿರುವಂತೆ ನಾಲಂದಾ ಒಂದು ವಿಶ್ವವಿದ್ಯಾಲಯವಾಗಿತ್ತು ಎಂದು ಕಲ್ಪಿಸುವದರಿಂದ ನಾವು ಹೀಗೆ ಊಹಿಸುತ್ತಿದ್ದೇವೆ ಅಷ್ಟೇ. ನಾಲಂದಾದಲ್ಲಿ ವೇದಗಳನ್ನು ತಾರ್ಕಿಕವಾಗಿ ವಿರೋಧಿಸುವದನ್ನು ಕಲಿಸುತ್ತಿದ್ದಿರಬಹುದು. ಆ ಸಂದರ್ಭದಲ್ಲಿ ವೇದಗಳ ಕುರಿತಾಗಿ ಹೇಳುತ್ತಿದ್ದಿರಬಹುದು. ಆದರೆ ವೇದವಿದ್ಯಾರ್ಜನೆಗೆ ಅವಕಾಶ ಇರಲಿಲ್ಲ ಎಂಬ ಅಂಶ ರಾಜಾರಾಮ ಅವರು ಹೇಳಿದ್ದಾರೆ.
೩. ಬೌದ್ಧ ಮತವು ಆಚರಣೆಯಲ್ಲೂ ಮತ್ತು ತಿಳಿದುಕೊಳ್ಲಲೂ ಸರಳವಾಗಿದ್ದರಿಂದಲೇ ಅದು ಜನಪ್ರೀಯವಾಗಲು ಸಾಧ್ಯವಾಯಿತೆನ್ನುವರಲ್ಲವೆ? ಮತ್ತು ಅದರ ದರ್ಶನಗಳು ಜನರಾಡುವ ಪಾಳಿಯಲ್ಲಿದ್ದುದರಿಂದ ಇನ್ನೂ ಹೆಚ್ಚು ಜನರನ್ನು ತಲುಪಲು ಸಾಧ್ಯವಾಯಿತಲ್ಲವೆ?
ನಿಮ್ಮ ಈ ಪ್ರಶ್ನೆಯೂ ಕೂಡ ಬೌದ್ಧಮತವು ಒಂದು ಸಾಮಾಜಿಕ ಚಳುವಳಿ ಎಂಬ ಸಮಾಜವಿಜ್ಞಾನದ ಕಲ್ಪನೆಯ ಮೇಲೆ ನಿಂತಿದೆ, ಪುರಾಣಗಳ ರಚನೆ ಏಕೆ ಆಗಿದ್ದೇ ಆಧ್ಯಾತ್ಮ ಸರಳವಾಗಿ ಜನಸಾಮಾನ್ಯರಿಗೆ ಮುಟ್ಟಲಿ ಎಂಬ ಕಾರಣಕ್ಕೆ ಎಂದು ಸ್ವತಃ ವೇದವ್ಯಾಸರೇ ಸ್ಪಷ್ಟಪಡಿಸಿದ್ದಾರೆ. ಯಾವ ಪೌರಾಣಿಕ ಕಥೆಯೂ ಆಧ್ಯಾತ್ಮಿಕ ತತ್ತ್ವಗಳನ್ನು ಒಳಗೊಳ್ಳದೇ ಬರುವದಿಲ್ಲ. ಇಂದು ೨೧ನೇ ಶತಮಾನದಲ್ಲಿಯೂ, ರಸ್ತೆ, ಮೊಬೈಲು, ವಾಹನಗಳು ಇಲ್ಲದ ಹಳ್ಳಿಗಳಲ್ಲಿ ಪುರಾಣಗಳು ಎಂದೋ ತಲುಪಿಯಾಗಿವೆ. ಕಾರಣ ಅದು ಪುರಾಣಗಳ ರಚನೆಯ ವಿಶೇಷತೆಯೇ ಹಾಗಿದೆ. ನೃತ್ಯ-ಸಾಹಿತ್ಯ-ಸಂಗೀತಗಳ ಮೂಲಕ, ಸಂಸ್ಕೃತದಲ್ಲಿ, ಪ್ರಾದೇಶಿಕಭಾಷೆಗಳಲ್ಲಿ ಪುರಾಣಗಳು ಜನಮಾನಸವನ್ನು ಮುಟ್ಟುವಲ್ಲಿ ಯಶಸ್ವಿಯಾಗಿವೆ.
nanna prashnege vivaravaada uttara nIdiddakke dhanyavadagalU. vinayakare.
ಬುದ್ಧ ಮತ ಅವನತಿಗೊಳ್ಳಲು ಎರಡು ಪ್ರಮುಖ ಕಾರಣಗಳು –
೧. ಬುದ್ಧ ಮತದ ಅತಿಯಾದ ನೈರಷ್ಯಾವಾದ (Pessimism). ಜೀವ ವಿಮುಖತೆ.
೨. ಕ್ರಿ.ಶ. ೧೨೦೦ ರಲ್ಲಿ ಮುಸ್ಲಿಂ ದಂಡುಕೋರ ಖಿಲ್ಜಿ ನಳಂದ ವಿಶ್ವವಿದ್ಯಾಲಯವನ್ನು ನಾಶಪಡಿಸಿದ್ದು,ಮುಂದಕ್ಕೆ ಬುದ್ಧ ಧರ್ಮದ ಅವನತಿಗೆ ಕಾರಣವಾಯಿತು.
ಈ ಬಗ್ಗೆ ಎಡ ಚಿಂತಕರಾದ ಅಮರ್ತ್ಯ ಸೇನ್ ದಿ ಹಿಂದೂ ಪತ್ರಿಕೆಯಲ್ಲಿ ಹೀಗೆ ಹೇಳಿದ್ದಾರೆ “Nalanda was violently destroyed in an Afghan attack, led by the ruthless conqueror, Bakhtiyar Khilji, in 1193, shortly after the beginning of Oxford University and shortly before the initiation of Cambridge….” (The Hindu,January 14, 2011).
ಭಾರತಕ್ಕೆ ಏಳನೇ ಶತಮಾನದಲ್ಲಿ ಬಂದ ಪ್ರವಾಸಿ ಹ್ಯೂ-ಎನ್ -ತ್ಸ್ಯಾಂಗನ ಪ್ರಕಾರ ಆಗಲೆ ಬೌದ್ಧರ ಅವನತಿ ಆಗಿತ್ತಂತೆ (ಮೇಲೆ ರಾಜಾರಾಂ ಸರ್ ಬರೆದಿದ್ದಾರೆ) ಅಂದ ಮೇಲೆ ಮುಸ್ಲೀಂ ದಾಳಿಕೋರರ ಮೇಲೆ ಯಾಕೆ ಗೂಬೆ?
ಭಕ್ತಿಯಾರ್ ಖಿಲ್ಜಿಯು ನಲಂದಾ ಹಾಗೂ ವಿಕ್ರಮಶಿಲಾಗಳ ಮೇಲೆ ದಾಳಿ ಮಾಡಿದ ಕಾಲದಲ್ಲಿಅವೆರಡೂ ಬೌದ್ಧರ ಪ್ರಮುಖ ಕೇಂದ್ರಗಳಾಗಿದ್ದವು. ಹಾಗೆಂದಾಕ್ಷಣ ಬೌದ್ಧಮತವು ಭಾರತದಲ್ಲಿ ಜನಪ್ರಿಯವಾಗಿತ್ತು ಎಂದಲ್ಲ. ಬೌದ್ಧ ಮತದ ಜನಪ್ರಿಯತೆಯು ಏಳನೆಯ ಶತಮಾನದ ವೇಳೆಗೇ ಕಾಣೆಯಾಗಿತ್ತು ಎಂಬುದು ಪ್ರಾಕ್ತನ ಆಧಾರಗಳಿಂದ ಸಿದ್ಧವಾಗುತ್ತದೆ. ಉದಾಹರಣೆಗೆ ಕ್ರಿ.ಪೂ ಎರಡನೆಯ ಶತಮಾನದಿಂದ ಕ್ರಿ. ಶ. ನಾಲ್ಕನೆಯ ಶತಮಾನದ ವರೆಗೆ ಉತ್ತರ ಹಾಗೂ ದಕ್ಷಿಣ ಭಾರತದ ನಗರಗಳು, ವ್ಯಾಪಾರೀ ಮಾರ್ಗಗಳಗುಂಟ ಇರುವ ವಸತಿಗಳಲ್ಲಿ ನಮಗೆ ಸಿಗುವುದು ಕೇವಲ ಬೌದ್ಧಾವಶೇಷಗಳು ಮಾತ್ರ. ಅವು ಸ್ತೂಪಗಳು, ವಿಹಾರಗಳು, ಚೈತ್ಯಗಳು ಹಾಗೂ ಅವುಗಳಲ್ಲಿ ಇರುವ ಸಹಸ್ರಾರು ಶಾಸನಗಳ ರೂಪದಲ್ಲಿ ಇವೆ. ಆದರೆ ನಾಲ್ಕನೆಯ ಶತಮಾನದಿಂದ ಕ್ರಮೇಣವಾಗಿ ಶೈವ ವೈಷ್ಣವ ಹಾಗೂ ಇತರ ಹಿಂದೂ ಅವಶೇಷಗಳು ಅವುಗಳ ಬದಲಾಗಿ ಇಂಥ ಸ್ಥಳಗಲ್ಲಿ ಸಿಗತೊಡಗುತ್ತವೆ. ಏಳನೆಯ ಶತಮಾನದ ನಂತರ ಬಿಹಾರ ಹಾಗೂ ಬೆಂಗಾಲಗಳಲ್ಲಿ ಮಾತ್ರ ನಲಂದಾ, ವಿಕ್ರಮಶಿಲಾಗಳಂಥ ಕೇಂದ್ರಗಳಿದ್ದವು ಅಷ್ಟೆ., ಹಾಗಂತ ಅಪರೂಪಕ್ಕೆ ಅವು ಕರ್ನಾಟಕವನ್ನೂ ಹಿಡಿದು ದಕ್ಷಿಣ ಭಾರತದಲ್ಲೂ ಆ ಕಾಲದಲ್ಲಿ ಇದ್ದವು. ಆದರೆ ಅದರ ಜನಪ್ರಿಯತೆ ಕಳೆದುಹೋಗಿತ್ತು. ಅದರ ಅವನತಿಗೂ ಶಂಕರಾಚಾರ್ಯರಿಗೂ, ಮುಸ್ಲಿಮರಿಗೂ ಸಂಬಂಧವಿರಲಿಕ್ಕೆ ಸಾಧ್ಯವೇ ಇಲ್ಲ..
ಕ್ರಿಸ್ತ ಶಕದ ನಂತರ ಬೌದ್ಧ ಮತವು ಒಂದು ಪೂಜಾಚರಣೆಯ ಮತವಾಗಿ ಪರಿವರ್ತನೆಗೊಂಡಿದ್ದು ಪ್ರಾಕ್ತನ ಆಧಾರಗಳಲ್ಲಿ ಸ್ಪಷ್ಟವಾಗಿದೆ.ಬುದ್ಧನ ಬೋಧಿಸತ್ವರ ಮೂರ್ತಿಗಳು, ಬೌದ್ಧ ದೇವತಾವಿಶ್ವ ಹಾಗೂ ಪುರಾಣಗಳು, ದೇವಾಲಯಗಳು, ಮಂತ್ರ ತಂತ್ರಗಳು ಇವೆಲ್ಲ ಅದಕ್ಕೆ ಆಧಾರವಾಗಿವೆ. ಇದರ ಜೊತೆಗೇ ಬೌದ್ಧ ಗ್ರಂಥಗಳನ್ನು ಸಂಸ್ಕೃತದಲ್ಲಿ ರಚಿಸತೊಡಗಿದರು. ಇದನ್ನು ಮಹಾಯಾನ ಬೌದ್ಧಮತ ಎಂಬುದಾಗಿ ಕರೆಯುತ್ತಾರೆ. ಅಶ್ವಘೋಷ, ನಾಗಾರ್ಜುನ,ಮುಂತಾದಅನೇಕರು ಸಂಸ್ಕೃತದಲ್ಲೇ ಬರೆದಿದ್ದಾರೆ. ಈ ಕಾಲದಲ್ಲಿ ಪಾಳಿಯ ಉಪಯೋಗವೇ ನಿಂತುಹೋಯಿತು. ಹಾಗೂ ಆಗ್ನೇಯ ಹಾಗೂ ಮಧ್ಯ ಏಶಯಾಗಳಿಗೆ ಪ್ರಸಾರವಾದ ಬೌದ್ಧಮತವು ಈ ಮಹಾಯಾನ ಮತವಾಗಿದೆ. ಆರನೆಯ ಶತಮಾನದ ನಂತರ ಭಾರತದಲ್ಲಿ ವಜ್ರಯಾನ ಎಂಬ ಪಂಥವು ಪ್ರಚಲಿತದಲ್ಲಿ ಬಂದಿತು. ಇದರ ಜೊತೆಗೆ ಬೌದ್ಧ ಮತವು ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿತು. ಈ ಪಂಥವು ತಾಂತ್ರಿಕ ಪಂಥವಾಗಿದೆ. ಪಂಚ ಮಕಾರಗಳ ಸಾಧನೆ ಕೂಡ ಮಹತ್ವ ಪಡೆಯಿತು. ಎಂಟನೆಯ ಶತಮಾನದ ನಂತರ ಭಾರತದಾದ್ಯಂತ ಇದ್ದ ಬೌದ್ಧ ಕೇಂದ್ರಗಳು ಈ ಪಂಥಕ್ಕೆ ಸಂಬಂಧ ಪಟ್ಟಿವೆ. ಬಹುಶಃ ಅವುಗಳ ಗುಹ್ಯಆಚರಣೆಗಳಿಂದಾಗಿ ಅವು ಜನಪ್ರಿಯತೆಯನ್ನು ಕಳೆದುಕೊಂಡವು.
ಅಂದರೆ ಬೌದ್ಧ ಮತದ ಜನಪ್ರಿಯತೆಗೂ ಅದು ಮಹಾಯಾನವಾಗಿ ಬೆಳೆದದ್ದಕ್ಕೂ ಸಂಬಂಧವಿದೆ. ಬುದ್ಧನು ಪ್ರತಿಪಾದಿಸಿದ ಮಾರ್ಗವ್ನನು ಹೀನಯಾನಎನ್ನುತ್ತಾರೆ. ಅದು ಶ್ರಮಣರ ಮಾರ್ಗ. ಸಂಸಾರ ಬಿಟ್ಟವರ ಮಾರ್ಗ. ಅದು ಜನಪ್ಮರಿಯವಾಗಿರಲಿಲ್ಲ, ಹಾಗಾಗೇ ಅದು ಹೀನಯಾನ (ಚಿಕ್ಕ ಯಾನ). ಮಹಾಯಾನವು ಸಂಸಾರಸ್ಥರನ್ನೂ ಒಳಗೊಂಡಿತು.ಹಾಗಾಗೇ ಅದು ಮಹಾಯಾನ(ಬೃಹತ್ ಯಾನ)). ಅದರ ಜೊತೆಗೇ ಪೂಜೆ, ದೇವಾಲಯ,ಸಂಸ್ಕೃತ ಇತ್ಯಾದಿಗಳು ಕೂಡ ಮುಖ್ಯವಾದವು. ನಿಮಗೆ ಆಶ್ಚರ್ಯವಾಗಬಹುದು, ಭಾರತೀಯ ಭಕ್ತಿ ಹಾಗೂ ಪೂಜಾಚರಣೆಗಳಿಗೆ ಅತ್ಯಂತ ಪ್ರಾಚೀನ ಪ್ರಾಕ್ತನಆಧಾರಗಳು ಬೌದ್ಧರವು. ಉಪವೀತಾಕಾರದಲ್ಲಿ ಉತ್ತರೀಯವನ್ನು ಹೊದ್ದುಕೊಳ್ಳುವುದು, ಪ್ರದಕ್ಷಿಣೆ, ಧೂಪ ದೀಪ ನೈವೇದ್ಯ ಿತ್ಯಾದಿಗಳ ಸಮರ್ಪಣೆ ಇವೆಲ್ಲವೂ ಬೌದ್ಧ ಶಿಲ್ಪಗಳಲ್ಲಿ ಕಾಣುತ್ತವೆ. ವರಾಹ ಮಿಹಿರನು ಮೂರ್ತಿ ಪೂಜೆಯನ್ನು ಉಲ್ಲೇಖಿಸುವಾಗ ಬೌದ್ಧಮೂರ್ತಿಪೂಜೆಯನ್ನೂ ಸೇರಿಸುತ್ತಾನೆ ಹಾಗೂ ಅವರೂ ಕೂಡ ಹೋಮ ಹವನಾದಿಗಳ ಮೂಲಕ ಪ್ರತಿಷ್ಠೆ, ಪೂಜೆ ಇತ್ಯಾದಿಗಳನ್ನು ಮಾಡುತ್ತಿದ್ದುದಕ್ಕೆ ಸೂಚನೆ ನೀಡುತ್ತಾನೆ. ಬೌದ್ಧರಿಗೆ ಕೂಡ ಆಗಮ ಶಾಸ್ತ್ರಗಳಿದ್ದವು.ಇಂತಹ ಪಂಥವು ವೇದ, ುಪನಿಷತ್ತು ಇತ್ಯಾದಿಗಳನ್ನು ತನ್ನ ಶಿಕ್ಷಣದ ಭಾಗವಾಗಿ ಕಲಿತಿದ್ದರಲ್ಲಿ ಆಶ್ಚರ್ಯವಿಲ್ಲ.
ನಂತರಅದು ತಾಂತ್ರಿಕ ಪಂಥವಾದಾಗ ಪೂರ್ವಭಾರತದಲ್ಲಿ ಹಾಗೂ ನೇಪಾಳ, ಟಿಬೇಟು ಇತ್ಯಾದಿ ಗುಟ್ಟಗಾಡು ಪ್ರದೇಶದಲ್ಲಿ ಹಬ್ಬಿತೇ ವಿನಃ ಕೃಷಿ ಸಂಸ್ಕೃತಿಗಳ ಹಳ್ಳಿಗಳಲ್ಲಲ್ಲ. ಹನ್ಒಂದನೆಯ ಶತಮಾನದ ನಂತರ ದು ಉಳಿದುಕೊಂಡಿದ್ದು ಹಿಮಾಲಯದ ತಪ್ಪಲಿನಲ್ಲಿ ಮಾತ್ರ. ಬಹುಶಃ ಭಾರತದ ುಳಿದ ಭಾಗಗಳಲ್ಲಿ ಮಹಾಯಾನವನ್ನು ಅನುಸರಿಸುತ್ತಿದ್ದ ಸಂಸಾರಸ್ಥರನ್ನು ಶೈವ ವೈಷ್ಣವ ಭಕ್ತಿ ಹಾಗೂ ಪೂಜಾ ಪಂಥಗಳು ತಮ್ಮೊಳಗೆ ಅರಗಿಸಿಕೊಂಡಂತೆ ಕಾಣುತ್ತದೆ. ಇದೇ ಪ್ರಕ್ರಿಯೆಯ ಭಾಗವಾಗಿ ಬುದ್ಧನು ವಿಷ್ಣುವಿನ ಅವತಾರವಾಗಿ ಬದಲಾಗಲು ತೊಡಕಾಗಲಿಲ್ಲ.
ಇಂದು ನಾವು ಕಲಿಯುವ ಬೌದ್ಧಇತಿಹಾಸವು ಹತ್ತೊಂಭತ್ತನೆಯ ಶತಮಾನದಲ್ಲಿ ಪಾಶ್ಚಾತ್ಯರು ಪ್ರೊಟೆಸ್ಟಾಂಟ ಮಾದರಿಯಲ್ಲಿ ಕಟ್ಟಿಕೊಟ್ಟ ಇತಿಹಾಸವಾಗಿದೆ.ಅದರಲ್ಲಿ ಬುದ್ಧನ ಜೀವನವನ್ನು ಬಿಟ್ಟರೆ ಮತ್ತೇನೂ ಇಲ್ಲ ಆದರೆ ಬುದ್ಧನ ಕುರಿತು ನಮಗೆ ಸಿಗುವ ಅತ್ಯಂತ ಪ್ರಾಚೀನ ಆಧಾರಗಳಾದ ಪಾಳಿ ಗ್ರಂಥಗಳು ಅವನ ನಂತರ ಸುಮಾರು ಮುನ್ನೂರು ವರ್ಷಗಳ ನಂತರ ಸಂಗ್ರಹವಾದವು. ಅವುಗಳಲ್ಲಿ ನಮಗೆ ಸಿಗುವುದು ಬುದ್ಧನ ಪುರಾಣ ಮಾತ್ರ.ಆ ಕಥೆಗೂ ಪುರಾಣ ಕಥೆಗಳಿಗೂ ಏನೂ ವ್ಯತ್ಯಾಸವಿಲ್ಲ. ಅವು ಬುದ್ಧನು ಮಾಯಾದೇವಿಯ ಕಂಕುಳಿನಿಂದ ಹುಟ್ಟಿದ ಎನ್ನುತ್ತವೆ. ಅದೂ ಆಕೆ ಲುಂಬಿಣಿವನದಲ್ಲಿ ವೃಕ್ಷವನ್ನು ಹಿಡಿದು ನಿಂತಾಗ. ಬುದ್ಧನು ನೂರಾರು ಹಿಂದಿನ ಜನ್ಮಗಳನ್ನು ತಳೆದಿದ್ದನು, ಅದರಲ್ಲಿ ಪಶು ಪಕ್ಷಿ ಜನ್ಮಗಳೂ ಇದ್ದವು. ಇಂಥ ಸಾಹಿತ್ಯವನ್ನು ಇಟ್ಟುಕೊಂಡು ಪ್ರೊಟೆಸ್ಟಾಂಟ್ ಇತಿಹಸವನ್ನು ಕಟ್ಟಲಾಗಿದೆ. ಶುದ್ಧಆಧ್ಯಾತ್ಮಿಕ ಅರ್ಥವುಳ್ಳ ಕಥೆಗಳನ್ನು ವಚನಗಳ ಹಾಗೇ ಸಂದರ್ಭದಿಂದ ಕಳಚಿ ಆಧುನಿಕ ಚಳವಳಿಯನ್ನಾಗಿ ಮಾಡಲಾಗಿದೆ., ಹಾಗಾಗಿ ಈ ಆಧುನಿಕಇತಿಹಾಸವು ತಿಳಿಸುವ ಕಥೆಯು ಬುದ್ಧನದಲ್ಲ, ಪ್ರೊಟೆಸ್ಟಾಂಟಿಸಂನದ್ದು. ಅವನು ಪಾಳಿಯಲ್ಲಿ ಬೋಧಿಸಿದ್ದು ಕೂಡ ಹಾಗೇ. ಏಕೆಂದರೆ ಪಾಳಿ ಆಡು ಭಾಷೆಯಲ್ಲ, ಮಾಗಧೀ, ಪ್ರಾಕೃತ ಇತ್ಯಾದಿಗಳು ಗಂಗಾ ಬಯಲಿನಲ್ಲಿ ಆಡುಭಾಷೆಗಳಾಗಿದ್ದವು. ಪಾಳಿ ಗ್ರಾಂಥಿಕ ಭಾಷೆ.
ತುಂಬ ವಿವರವಾಗಿ ಬರೆದಿದ್ದೀರ. ಧನ್ಯವಾದಗಳು.
………..
ವಿಷ್ಣುವಿನ 9ನೇ ಅವತಾರ “ಬುದ್ದ ” ಎಂದರೆ ಗೌತಮ ಬುದ್ದ ಅಲ್ಲ . ಅದು ತ್ರಿಪುರಾಸುರ ನಾಶಕ್ಕೆ ಬೆತ್ತಲು ನಿಂತ ಬೋಧಿವೃಕ್ಷ ಸ್ವರೂಪ. ಈ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲ ಇದೆ. ಯಾರಾದರೂ ಈ ಬಗ್ಗೆ ಚೆನ್ನಾಗಿ ಬರೆದರೆ ದಾಖಲೆ ಉಳಿಯುತ್ತದೆ.
ಸುದರ್ಶನ ರಾವ್ ಅವರೆ, ಬುದ್ಧಾವತಾರವೆಂದು ಪುರಾಣಗಳು ತಿಳಿಸುವುದು ಖಂಡಿತ ಗೌತಮ ಬುದ್ಧಅಲ್ಲ.ಆದರೆ ಮಹಾಯಾನ ಬೌದ್ಧ ಮೂರ್ತಿಯ ಪೂಜೆ ಹಾಗೂ ಪಂಥಗಳು ಅದನ್ನು ರೂಪಿಸಿವೆ ಎಂಬುದು ಸ್ಪಷ್ಟ.ಏಕೆಂದರೆ ಬುದ್ಧಾವತಾರವು ರೂಪುಗೊಳ್ಳುವಾಗ ಈ ಪೂಜಾಪಂಥವೇ ವೈಷ್ಣವರಿಗೆ ಗೊತ್ತಿದ್ದದ್ದು. ಅವನನ್ನು ಅವನ ಪೂಜಕರು ಭಗವಂತ ಎಂದು ಕರೆಯುತ್ತಿದ್ದರು. ವೈಷ್ಣವ ಪಂಥವನ್ನು ರೂಪಿಸಿದವರು ಭಾಗವತರು, ಅವರಿಗೆ ವಿಷ್ಣು ಭಗವಂತ.ಆ ಎರಡೂ ಭಗವಂತರೂ ಕ್ರಿಸ್ತ ಶಕದ ಆರಂಭದಲ್ಲಿ ಸಮಾಂತರವಾಗಿ ಪೂಜೆಗೆ ಒಳಪಟ್ಟಿದ್ದರು. ಕ್ರಮೇಣವಾಗಿ ಬುದ್ಧನು ವಿಷ್ಣುವಿನದೇ ಒಂದು ಅವತಾರ ೆಂಬ ನಿರೂಪಣೆಯನ್ನು ವೈಷ್ಣವರು ಮಾಡಿಕೊಂಡರು. ಆದರೆ ಬುದ್ಧನು ನಾಸ್ತಿಕ ವಾದಿ ಎಂಬುದು ಅವರಿಗೆ ಗೊತ್ತಿತ್ತು. ನಾಸ್ತಿಕವಾದಿಯಾದರೂ ಭರತಖಂಡದಲ್ಲಿ ಅತ್ಯಂತ ಜನಪ್ರಿಯ ದೇವತೆಯಾಗಿ ಹೇಗೆ ಅವನು ಪೂಜೆಗೊಳ್ಳಲು ಸಾಧ್ಯ? ವಿಷ್ಣುವಿನ ಅವತಾರವಾಗಲು ಹೇಗೆ ಸಾಧ್ಯ?ಎಂಬ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ವೈಷ್ಣವ ಪುರಾಣಗಳಿಗೆ ಮುಖ್ಯವಾಗಿತ್ತು. ಅದಕ್ಕೆ ವೈಷ್ಣವರು ಹೇಗೆ ನಿರೂಪಣೆ ಮಾಡಿಕೊಂಡರೆಂದರೆ ವಿಷ್ಣುವು ಮಾಯಾಮೋಹ ರೂಪವನ್ನು ತಾಳಿ ನಗ್ನನಾಗಿ ಬಂದು ಅಸುರರನ್ನು ತನ್ನ ನಾಸ್ತಿಕ ಉಪದೇಶದಿಂದ ಸಮ್ಮೋಹನಗೊಳಿಸಿ ನಾಶ ಮಾಡಿದನು ಅಂತ. ಇದು ಒಂದು ನಿರೂಪಣೆ. ಉಳಿದವೂ ಹೀಗೇ ಇವೆ. ಈ ಅವತಾರವು ವೈಷ್ಣವ ಪುರಾಣಗಳಲ್ಲಿ ದಾಖಲಾದರೂ ಮಧ್ಯ ಕಾಲದ ನಂತರ ವೈಷ್ಣವರಿಗೆ ಹಾಗೂ ಶಿಲ್ಪಿಗಳಿಗೆ ಬುದ್ಧನೇ ಮರೆತುಹೋಗಿದ್ದ. ಹಾಗಾಗಿ ಅವರು ತಾವು ನೋಡಿದ ಜಿನಮೂರ್ತಿಗಳನ್ನು ಕಲ್ಪಿಸಿಕೊಂಡು ಅದನ್ನು ಅರ್ಥಮಾಡಿಕೊಂಡರು, ಹಾಗೂ ಶಿಲ್ಪಗಳಲ್ಲಿ ಕೆತ್ತಿದರು. ಹಾಗಾಗಿ ಅವನ್ನನು ನಗ್ನ ೆಂದು ಕರೆದುಕೊಂಡರು. ವೈಷ್ಣವರಿಗೆ ಬುದ್ಧನ ಕುರಿತ ಪ್ರೊಟೆಸ್ಟಾಂಟ್್ ಕಥೆಗಳು ಗೊತ್ತಿರಲಿ್ಕೆ ಸಾಧ್ಯವೇ ಇಲ್ಲ. ಹಾಗಾಗಿ ಅವರು ತಮ್ಮ ಭಾಗವತ ಪಂಥಕ್ಕೆ ಅನುಕೂಲವಾಗುವಂತೆ ನಿರೂಪಿಸಿಕೊಂಡರು
ಧನ್ಯವಾದಗಳು.
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ