ಕಲಾಂ, ಕಯ್ಯಾರ, ಕೃಷ್ಣಪ್ಪ
– ರೋಹಿತ್ ಚಕ್ರತೀರ್ಥ
“You either die a hero or you live long enough to see yourself become the villain” ಅಂತ ಇಂಗ್ಲೀಷಿನಲ್ಲೊಂದು ಜಾಣ್ನುಡಿ. ಮಹಾಸಾಧನೆ ಮಾಡಿದವರು ಬೇಗನೆ ತೀರಿಕೊಂಡರೆ ಜಗತ್ತು ಅವರನ್ನು ಹಾಡಿಹೊಗಳುತ್ತದೆ. “ಏನು ಪ್ರತಿಭೆಯ ಬೀಸು ಕಣ್ರಿ! ಇನ್ನೊಂದಿಷ್ಟು ವರ್ಷ ಬದುಕಿದ್ದರೆ ಚಿಂದಿ ಉಡಾಯಿಸಿಬಿಡ್ತಾ ಇದ್ರು!” ಎಂದು ಜನ ಹೇಳುವುದನ್ನು ಕೇಳಿದ್ದೇವೆ. ಆದರೆ, ಪ್ರಾಯ ಆಗುತ್ತಾಹೋದಂತೆ ನಮ್ಮಲ್ಲಿ ಹೆಚ್ಚಿನವರು ಅಪ್ರಸ್ತುತರಾಗುತ್ತಾ ಹೋಗುತ್ತಾರೆ. ಒಂದು ಕಾಲದಲ್ಲಿ ಅವರ ಸಾಧನೆ ಎಂದು ಕಂಡದ್ದು ಈಗ ಜನಕ್ಕೆ ಸಾಮಾನ್ಯ ಸಂಗತಿ ಅನ್ನಿಸತೊಡಗುತ್ತದೆ. ಅವರ ಬಗ್ಗೆ ಇಲ್ಲಸಲ್ಲದ ಶಂಕೆ, ಅವಮಾನ, ಹೀಯಾಳಿಕೆಗಳು ಹುಟ್ಟಿಕೊಳ್ಳುತ್ತವೆ. ಒಂದೊಮ್ಮೆ ಜೋರಾಗಿ ಉರಿದಿದ್ದ ದೊಂದಿ ಇದೀಗ ಎಣ್ಣೆ ಬತ್ತಿ, ಬತ್ತಿ ಕರಟಿ ಯಾರಿಗೂ ಬೇಡದ ಕಮಟು ಹೊಗೆಯಾಗಿ ತನ್ನ ಬದುಕು ಮುಗಿಸುತ್ತದೆ. ಇಂಥ ಮಾತಿಗೆ ಉದಾಹರಣೆಯಾಗದೆ ಕೊನೆವರೆಗೂ ತಮ್ಮ ಜೀವನ, ಚಾರಿತ್ರ್ಯ, ಪ್ರತಿಭೆ ಮತ್ತು ಮೌಲ್ಯಗಳ ಪ್ರತಿಪಾದನೆಯಲ್ಲಿ ಕಿಂಚಿದೂನವಾಗದಂತೆ ನೋಡಿಕೊಂಡು ಸಾರ್ಥಕವಾಗಿ ಇಹದ ವ್ಯಾಪಾರ ಮುಗಿಸುವವರು ವಿರಳ. ಎರಡು ವಾರದ ಅಂತರದಲ್ಲಿ ನಮ್ಮನ್ನು ಬಿಟ್ಟು ತೆರಳಿದ ವಿಜ್ಞಾನಿ ಡಾ. ಅಬ್ದುಲ್ ಕಲಾಂ, ಕವಿ ಕಯ್ಯಾರ ಕಿಞ್ಞಣ್ಣ ರೈ ಮತ್ತು ಆರ್‍ಎಸ್‍ಎಸ್ ಮಾರ್ಗದರ್ಶಿ ನ. ಕೃಷ್ಣಪ್ಪ ಮೇಲಿನ ಇಂಗ್ಲೀಷ್ ನುಡಿಗೆ ಸವಾಲೆನ್ನುವಂತೆ ಬದುಕಿ, ಗಾದೆಗಳನ್ನೂ ಸುಳ್ಳು ಮಾಡಬಹುದು ಎಂದು ತೋರಿಸಿದರು.
ಮಹಾತ್ಮರು ತೀರಿಕೊಂಡಾಗೆಲ್ಲ ನನಗೆ ನೆನಪಿಗೆ ಬರುವ ಕವಿತೆ ನಿಸಾರ್ ಅಹಮದರ “ರಾಮನ್ ಸತ್ತ ಸುದ್ದಿ”. ಅದು ಶುರುವಾಗುವುದು ಹೀಗೆ:
ರಾಮನ್ ಸತ್ತ ಸುದ್ದಿ ಓದಿದ ಬೆಳಿಗ್ಗೆ ಶಿವಮೊಗ್ಗೆಗೆ
ದರಿದ್ರ ಥಂಡಿ; ಅಸ್ತಿತ್ವದ ಅಸ್ಪಷ್ಟ ಜಿಜ್ಞಾಸೆ, ಗುರುತಿಸಲಾಗದ
ಕಸಿವಿಸಿ, ಮುಜುಗರ ತಾಳದೆ ವಾಕಿಂಗ್ ಹೊರಟೆ; ಬೀದಿ-
ಗದೇ ಮಾಮೂಲು ಭಂಗಿ; ಯಾರೂ ದುಃಖಿಸುತ್ತಿಲ್ಲವೆನ್ನಿಸಿ
ದುಃಖವಾಯಿತು.
ಹೀಗೆ ಹೊಟ್ಟೆಯಲ್ಲಿ ಚಿಟ್ಟೆಗಳು ತಟವಟ ರೆಕ್ಕೆ ಬಡಿಯುತ್ತಿರುವಂತೆಯೆ, ವಿಷಾದ ಹೆಪ್ಪುಗಟ್ಟಿದಂಥ ಚಳಿಯಲ್ಲಿ ಮುಂಜಾನೆ ವಾಕಿಂಗ್ ಹೊರಡುವ ಕವಿಗೆ, ಹನುಮ ಗೋಚರಿಸುತ್ತಾನೆ. ಮೋಟು ಬೀಡಿಯ, ತುಂಡು ಬಟ್ಟೆಯ ಸಾಮಾನ್ಯ ಹನುಮನಿಗೆ ತನ್ನ ಸಂಕಟ ಅರ್ಥವಾದೀತೇ ಎನ್ನುವ ದುಗುಡವೆದ್ದು ಕವಿಗೆ ದುಃಖದ ಕೆರೆಯಲ್ಲಿ ತನ್ನನ್ನು ಇನ್ನಷ್ಟು ಮುಳುಗಿಸಿಕೊಂಡಂತಾಗುತ್ತದೆ. ಒಬ್ಬರು ಸತ್ತರೆನ್ನುವ ಬೇಸರ ಬೇರೆ; ಆ ಸಾವು ಈ ಜಗತ್ತನ್ನು ಅಲುಗಿಸಿಹಾಕಲಿಲ್ಲವಲ್ಲಾ ಎಂಬ ಪರಮದುಮ್ಮಾನದ ಆಳವೇ ಬೇರೆ. ನಮ್ಮೆದುರು ನಿಂತಿದ್ದ ಬಹುದೊಡ್ಡ ಆದರ್ಶವೊಂದು ಕರ್ಪೂರದಂತೆ ಕರಗಿಹೋದಾಗ ಆಗುವ ದುಃಖದಲ್ಲಿ ಕೆಲವು ಸಲ ನಮಗೆ ಕಣ್ಣೀರು ಬರುವುದಿಲ್ಲ. ಆದರೆ, ರಕ್ತ ಒಸರದಂತೆ ಮೈಯನ್ನು ಪುಡಿಗುಟ್ಟಿದ ಅನುಭವವಾಗುತ್ತದೆ. ಅಂಥವರು ಸತ್ತಾಗ ಬದುಕಿರುವುದೇ ಪಾಪ ಅನಿಸುತ್ತದೆ. ಒಂದು ಕಾಲಕ್ಕೆ ಬಹುದೊಡ್ಡ ವ್ಯಕ್ತಿತ್ವವಾಗಿ ಬೆಳೆದ ನೆಹರೂ ಸತ್ತಾಗ ಕವಿಯೊಬ್ಬರು ಬರೆದರು: “ಅವರು ಅತ್ತರು ಇವರು ಅತ್ತರು ನಾನು ಅಳಲಿಲ್ಲ, ಧಕ್ಕೆಗೊಳಲಿಲ್ಲ. ಬರೇ ನನ್ನ ಒಳಗಿಂದ ಏನೊ ಒಂದಿಷ್ಟು ಹೊರಟು ಹೋದಂದ ಅನಿಸತೊಡಗಿತ್ತು. ಆ ನಿಮಿಷದಿಂದ ನಾ ಮೊದಲಿಗಿಂತ ಕಡಿಮೆ ಉದಾರ ಅನಿಸುತಿದೆ ಅಷ್ಟೆ”.
ಕಲಾಂ, ಕಯ್ಯಾರ ಮತ್ತು ಕೃಷ್ಣಪ್ಪ – ಈ ಮೂವರೂ ತೀರಿಕೊಂಡಾಗ ಪತ್ರಿಕೆಗಳು ಹಲವು ಪುಟಗಳ ವಿವರಗಳನ್ನು ಕಟ್ಟಿಕೊಟ್ಟವು. ಈ ವ್ಯಕ್ತಿಗಳು ಎಲ್ಲಿ ಹುಟ್ಟಿದರು, ಏನು ಸಾಧನೆ ಮಾಡಿದರು ಎಂಬ ಬಗ್ಗೆ ಭರಪೂರ ಮಾಹಿತಿ ಸಿಕ್ಕಿತು. ಒಂದು ಲೆಕ್ಕದಲ್ಲಿ, ಅವರ ಓದುಬರಹ, ಸಾಧನೆ, ಯಾವ್ಯಾವ ಸಂಘಸಂಸ್ಥೆಗಳಲ್ಲಿ ಕೆಲಸ ಮಾಡಿದರು, ಎಷ್ಟು ಊರುಗಳಲ್ಲಿ ಓಡಾಡಿದರು ಎನ್ನುವುದೆಲ್ಲ ಅಷ್ಟೊಂದು ಪ್ರಮುಖ ಸಂಗತಿಯೇನಲ್ಲ. ಒಂದೆರಡು ದಿನಗಳ ನಂತರ ಆ ವಿವರಗಳನ್ನು ನಾವು ಮರೆತುಬಿಟ್ಟರೂ ಅಂಥ ತಕರಾರೇನಿಲ್ಲ. ಆದರೆ ಈ ಮೂರೂ ಜನರ ಬದುಕಲ್ಲಿ ನಮಗೊಂದು ಮರೆಯಲಾಗದ, ಮರೆಯಲೇಬಾರದ ಬಹುದೊಡ್ಡ ಸಂದೇಶ ಇದೆ. ಅದನ್ನು ಎರಡೇ ಅಕ್ಷರಗಳಲ್ಲಿ ಹಿಡಿದಿಡಬಹುದು. ’ಕಿರಿದರಲಿ ಪಿರಿದರ್ಥ’ ಹೇಳುವೆನೆಂದ ಕವಿಯ ಹಾಗೆ ಈ ಮೂರು ಮಹಾತ್ಮರು ತಮ್ಮ ಬದುಕಿನ ಸಾರಸರ್ವಸ್ವವನ್ನೂ ಆ ಎರಡು ಪದಗಳಲ್ಲಿ ತುಂಬಿ ಹೋಗಿದ್ದಾರೆ. ಅದುವೇ “ಮೌಲ್ಯಕ್ಕಾಗಿ ಬದುಕು” ಎನ್ನುವುದು. ಮೌಲ್ಯ ಎಂಬ ಪದ ಸವಕಲಾಗಿ, ಅಪಮೌಲ್ಯಗೊಳ್ಳುತ್ತಿರುವ ವಿಷಮ ಕಾಲಘಟ್ಟದಲ್ಲಿ ನಿಂತಿರುವ ಹನುಮನಂಥ ನಮಗೆ ಈ ಮೂವರ ಅಂತ್ಯದೊಂದಿಗೆ ಅದೆಂಥ ದೊಡ್ಡ ಮಾದರಿ ಕಳಚಿಬಿದ್ದಿದೆ ಎನ್ನುವ ಅಂದಾಜೂ ಸಿಕ್ಕುತ್ತಿಲ್ಲವಲ್ಲ? ಎಂಥ ದುರ್ದೈವ ನಮ್ಮದು!
***
ಕಲಾಂ ರಾಮೇಶ್ವರದ ಕಡಲ ತಡಿಯಲ್ಲಿ ಹುಟ್ಟಿದವರು. ಅಪ್ಪ ಸಣ್ಣ ದೋಣಿ ಇಟ್ಟುಕೊಂಡು ಪ್ರತಿದಿನ ಮೀನು ಹಿಡಿಯಲು ಸಮುದ್ರಕ್ಕಿಳಿಯುತ್ತಿದ್ದ ಮುಸ್ಲಿಮ್ ಬೆಸ್ತ. ಆದರೆ ಬಾಲಕ ಕಲಾಂ, ತಲೆಗೆ ಟೋಪಿ ಹಾಕಿಯೂ ದಿನಕ್ಕೈದು ಬಾರಿ ನಮಾಜು ಮಾಡಿಯೂ ಬ್ರಾಹ್ಮಣ ಹುಡುಗರೊಡನೆ ಬೆರೆಯುತ್ತಿದ್ದ. ರಾಮನಾಥಸ್ವಾಮಿಯ ಮಂದಿರದಿಂದ ಕೇಳಿಬರುತ್ತಿದ್ದ ಬೆಳಗಿನ ಪ್ರಾರ್ಥನಾ ಗೀತೆಗಳಿಗೆ ಈ ಹುಡುಗ ಕಿವಿಯಾಗುತ್ತಿದ್ದ. ಮಂತ್ರಗಳನ್ನು ತನ್ಮಯನಾಗಿ ಕೇಳುತ್ತಿದ್ದ. ದೇವಸ್ಥಾನದ ಮುಖ್ಯ ಅರ್ಚಕರ ಮಗನೊಂದಿಗೆ ಬೆಂಚು ಹಂಚಿಕೊಳ್ಳುತ್ತಿದ್ದ. ಓರಗೆಯ ಹುಡುಗರೊಡನೆ ಗೋಲಿಯಾಡುತ್ತಿದ್ದ. ಅದೊಂದು ದಿನ ಶಾಲೆಗೆ ಬಂದ ಹೊಸ ಮೇಷ್ಟರು ಕಲಾಂನನ್ನು ಅವನ ಸಹಪಾಠಿಯಿಂದ ಬೇರ್ಪಡಿಸಿ ಬೇರೆಯಾಗಿ ಕೂರಿಸಿದರು. ಅರ್ಚಕನ ಮಗನೊಂದಿಗೆ ಕೂರುವುದಕ್ಕೆ ನಿನಗೆಷ್ಟು ಕೊಬ್ಬು ಎಂಬ ಸಹಸ್ರನಾಮಾರ್ಚನೆಯೂ ಆಯಿತು. ಬಾಲಕ ಕುಸಿದುಹೋದ. ಅಂದು ಶಾಲೆಯಿಂದ ಮನೆಯವರೆಗೆ ಬರುವ ದಾರಿಯಲ್ಲಿ ಜನಿವಾರದ ಮಾಣಿ ಮತ್ತು ಟೋಪಿಯ ಸಾಬಿಹುಡುಗ ಕಣ್ಣೀರು ಹಾಕುತ್ತಲೇ ಬಂದರು. ಇಬ್ಬರೂ ತಮಗಾದ ಅನುಭವವನ್ನು ತಂತಮ್ಮ ತಂದೆಯವರಿಗೆ ಹೇಳಿಕೊಂಡರು.
ಅರ್ಚಕರು ಶಾಲೆಯ ಮೇಷ್ಟರನ್ನು ಕರೆಸಿದರು. ತನ್ನ ಮಗನ ಜೊತೆ ಕ್ಲಾಸಿನಲ್ಲಿ ಇದುವರೆಗೆ ಜೊತೆಯಾಗಿ ಕೂರುತ್ತಿದ್ದ ಕಲಾಂನನ್ನೂ ಕರೆಸಿದರು. ಇನ್ನೇನು ಇವರೆಲ್ಲ ಸೇರಿ ತನ್ನ ಬೆನ್ನ ಮೂಳೆ ಎಣಿಸಬಹುದೆಂದು ಭಯಪಡುತ್ತ ಥರಗುಟ್ಟುತ್ತ ಹೋಗಿ ಅಂಗಳದಲ್ಲಿ ನಿಂತ ಬಾಲಕ ಕಲಾಂನ ಎದುರಿಗೆ ದೇವಸ್ಥಾನದ ಮುಖ್ಯ ಅರ್ಚಕರು “ಮೇಷ್ಟ್ರೇ, ನೀವಾಗಿ ಆ ಹುಡುಗನ ಬಳಿ ಕ್ಷಮೆ ಕೇಳುತ್ತೀರೋ ಅಥವಾ ನಾನೇ ಮುಂದಾಗಿ ನಿಂತು ನಿಮ್ಮನ್ನು ಶಾಲೆಯಿಂದ ಬಿಡಿಸಿ ಪರವೂರಿಗೆ ಕಳಿಸಿಬಿಡಲೋ?” ಎಂದು ಕೇಳಿದರು! ಈ ಒಂದು ಘಟನೆ ಕಲಾಂ ಜೀವನದಲ್ಲಿ ಬೀರಿದ ಪ್ರಭಾವ ಅಗಾಧವಾದದ್ದು. ಬಹುಶಃ ನಮ್ಮ ದೇಶದ ಧರ್ಮಸಹಿಷ್ಣುತೆ, ಜಾತ್ಯತೀತತೆ, ವಿವಿಧತೆಯಲ್ಲಿ ಏಕತೆ ಮತ್ತು ಇನ್ನೂ ಏನೇನು ವಿಷಯಗಳ ಬಗ್ಗೆ ಪುಟಗಟ್ಟಲೆ ಬರೆದರೂ ಅವ್ಯಾವುದೂ ಈ ಘಟನೆಯಲ್ಲಿ ಮಿಂಚಿಹೋಗುವ ಅನುಭವವನ್ನು ಸರಿಗಟ್ಟಲಾರವೆಂದೇ ನನ್ನ ಅನಿಸಿಕೆ. ಕಲಾಂ ಮುಂದೆ ತನ್ನ ಸುದೀರ್ಘ ಬದುಕಿನಲ್ಲಿ ಕಟ್ಟಿಕೊಂಡ ಮೌಲ್ಯಗಳ ಮಹಾಮನೆಗೆ ಗಟ್ಟಿಪಂಚಾಂಗವಾಗಿ ನಿಂತದ್ದು ಈ ಘಟನೆ ಎಂದು ಹೇಳಬಹುದು. ಕಲಾಂ ಒಬ್ಬ ಧರ್ಮನಿಷ್ಠ ಮುಸ್ಲಿಮನಾಗಿದ್ದರು. ಹಾಗೆಯೇ ಭಗವದ್ಗೀತೆಯನ್ನೂ ಓದಿಕೊಂಡರು. ಮುಲ್ಲಾನ ಮಾತುಗಳಿಗೆ ಕಿವಿಕೊಡುವುದರ ಜೊತೆಗೆ ತ್ಯಾಗರಾಜರನ್ನೂ ತನ್ನೊಳಗಿಳಿಸಿಕೊಂಡರು. ದೇವಸ್ಥಾನಗಳ ಒಳಹೋಗುವುದನ್ನು ಅವರೆಂದೂ ಅಸಹಜ ಎಂಬರ್ಥದಲ್ಲಿ ನೋಡಲಿಲ್ಲ. ಸ್ವಾಮೀಜಿಗಳನ್ನು, ದೇವಸ್ಥಾನದ ಪೂಜಾರಿಗಳನ್ನು ಭೇಟಿಯಾಗುವುದು ಕೃತಕವಾಗುತ್ತದೆಂದು ಅವರಿಗನ್ನಿಸಲಿಲ್ಲ. ಅವರಿಗೂ ಅವರನ್ನು ತಮ್ಮವರನ್ನಾಗಿ ಮಾಡಿಕೊಂಡ ಉಳಿದವರಿಗೂ ಜಾತಿಮತಗಳ ಪ್ರಶ್ನೆಯೇ ಅಲ್ಲಿ ಇರುತ್ತಿರಲಿಲ್ಲ. ಲೌಕಿಕ ಜಗತ್ತಿನ ಎಲ್ಲ ಗಡಿರೇಖೆಗಳನ್ನು ಮೀರಿದ ಅಮೃತತ್ವದ ಸ್ಥಿತಿಯದು.
***
ಬಾಯೆತ್ತಿದರೆ ನಮ್ಮ ಚಿಂತಕರು “ಹಿಂದಿನ ಕಾಲದಲ್ಲಿ ಒಂದು ನಿರ್ಧಿಷ್ಟ ವರ್ಗವನ್ನು ಹೊರತುಪಡಿಸಿದರೆ ಬೇರಾರಿಗೂ ಶಿಕ್ಷಣ, ಅದರಲ್ಲೂ ಸಂಸ್ಕೃತ ಶಿಕ್ಷಣ ಸಿಗುತ್ತಿರಲಿಲ್ಲ; ಹಾಗೆ ಆ ಭಾಷೆಯ ಮಂತ್ರಗಳನ್ನು ಕೇಳಿಸಿಕೊಳ್ಳಲು ಹೋದವರಿಗೆ ಚಿತ್ರಹಿಂಸೆ ಕೊಡಲಾಗುತ್ತಿತ್ತು” ಎಂಬ ಮೂಢನಂಬಿಕೆಯೊಂದನ್ನು ಲಾಗಾಯ್ತಿನಿಂದ ಪ್ರಚುರಪಡಿಸುತ್ತ ಬಂದಿದ್ದಾರೆ. ಇದೇ ಚಿಂತಕರು ಹೇಳುವ ಕಾಲದಲ್ಲಿ ತನ್ನ ವಿದ್ಯಾಭ್ಯಾಸ ಶುರುಮಾಡಿದ ಕಾಸರಗೋಡಿನ ಒಂದು ಹಳ್ಳಿಯ ಹುಡುಗ ಕಿಞ್ಞಣ್ಣ, ಜಾತಿಯಿಂದ ಬ್ರಾಹ್ಮಣನಾಗಿರಲಿಲ್ಲ. ಆದರೂ, ಅವನಿಗೆ ಕಾಲೇಜಿನವರೆಗೆ ಕಲಿತು ಸಂಸ್ಕೃತದಲ್ಲಿ ವಿದ್ವಾನ್ ಪದವಿ ಪಡೆಯಲು ಯಾವ ತೊಡಕುಗಳೂ ಆಗಲಿಲ್ಲ! ಯಾರೂ ಆತನನ್ನು ಹಿಡಿದುಹಾಕಿ ಕಿವಿಗೆ ಕಾದ ಲೋಹವನ್ನು ಸುರಿಯಲಿಲ್ಲ! ಕಯ್ಯಾರ ಕಿಞ್ಞಣ್ಣ ರೈಗಳು, ಒಂದರ್ಥದಲ್ಲಿ ಮೂರುಭಾಷೆಗಳ ತ್ರಿವೇಣಿಸಂಗಮದಂತಿದ್ದರು. ಹೆತ್ತ ತಾಯಿ ನುಡಿಸಿದ ತುಳು, ಶಾಲೆ-ಕಾಲೇಜಿನಲ್ಲಿ ಕಲಿತ ಸಂಸ್ಕೃತ ಮತ್ತು ತನಗೊಂದು ಅಸ್ಮಿತೆಯನ್ನೂ ಅನ್ನವನ್ನೂ ಕೊಟ್ಟ ಕನ್ನಡ – ಈ ಮೂರೂ ಭಾಷೆಗಳನ್ನು ಕಯ್ಯಾರರು ಸರಿಸಮವಾಗಿ ಕಂಡರು. ವೇದಗಳ ನಂತರ ಬರೆಯಲ್ಪಟ್ಟ ಉಪನಿಷತ್ ಸಾಹಿತ್ಯದಲ್ಲಿ ಅತ್ಯಂತ ಪ್ರಮುಖ ಮತ್ತು ಪ್ರಬುದ್ಧ ಚಿಂತನೆಗಳು ಹರಳುಗಟ್ಟಿರುವ ಐದು ಉಪನಿಷತ್ತುಗಳನ್ನು ಆಯ್ದುಕೊಂಡು, ಅಷ್ಟೇ ಸಮರ್ಥವಾಗಿ ಕನ್ನಡಕ್ಕೆ ತಂದು ಬನ್ನಂಜೆಯಂಥ ಸಂಸ್ಕೃತ ವಿದ್ವಾಂಸರಿಂದಲೂ ಸೈ ಅನ್ನಿಸಿಕೊಂಡವರು ಕಯ್ಯಾರರು. ಆ ನಿಟ್ಟಿನಲ್ಲಿ, ಅವರ “ಪಂಚಮಿ” ಕೃತಿ ಕನ್ನಡಕ್ಕೆ ಅವರಿತ್ತ ಒಂದು ಅಪೂರ್ವ ಕೊಡುಗೆ.
ಇದೇ ಕಯ್ಯಾರರು “ಕೊರಗ” ಎಂಬ ಬಂಡಾಯದ ಕೂಗಿನಂತಿರುವ ಕವಿತೆಯನ್ನೂ ಬರೆದರು. ತನ್ನ ಸುತ್ತ ನಡೆಯುವ ಘಟನೆ, ಸಂಘರ್ಷಗಳಿಗೆ ದನಿಯಾಗುತ್ತ ಹೋದ; ತನ್ನ ಕಾಲಘಟ್ಟದ ಸಾಕ್ಷಿಪ್ರಜ್ಞೆಯಾಗಿ ಬದುಕಿದ ಕಯ್ಯಾರರ ಬದುಕು ಮತ್ತು ಮೌಲ್ಯ – ಎರಡೂ ದೊಡ್ಡವು. ಕನ್ನಡದ ಇತರ ಸಾಹಿತಿಗಳು ತಮ್ಮ ಕಾಲವನ್ನು ನವೋದಯ, ನವ್ಯೋತ್ತರ ಎಂದು ವಿಂಗಡಿಸಿಕೊಂಡು ಹಾವು-ಚೇಳೆನ್ನುತ್ತ ಕಚ್ಚಾಡಿಕೊಂಡಿದ್ದಾಗ, ಬೆಂಗಳೂರೆಂಬ ಶಕ್ತಿಕೇಂದ್ರದಿಂದ ದೂರವುಳಿದು ತನ್ನ ಕೆಲಸ ಮಾಡುತ್ತಾ ಹೋದ ಕಯ್ಯಾರರು; ಒಂದು ರೀತಿಯಲ್ಲಿ ಆ ಕಾಲದ ಉಳಿದೆಲ್ಲ ಸಾಹಿತಿಗಳಿಗಿಂತಲೂ ಮೇಲ್ಮಟ್ಟದಲ್ಲಿದ್ದವರು. ಅವರ ಸಾಹಿತ್ಯದಲ್ಲಿ ಅಣಕ ಇಲ್ಲ; ವ್ಯಂಗ್ಯ ಇಲ್ಲ; ಒಬ್ಬೊಬ್ಬರಿಗೂ ಇದು ತಮ್ಮನ್ನು ಹೊಗಳುವ ಬರಹವೇ ಇರಬೇಕೆಂಬ ಭ್ರಮೆ ಹುಟ್ಟಿಸುವ ಶಬ್ದಹಾದರವನ್ನೂ ಕಾಣಲಾರೆವು. ಕಯ್ಯಾರರು ಸರಳವಾಗಿ ಬರೆದರು. ದೇಶಭಕ್ತಿ, ಗಾಂಧಿ, ತಾಯ್ನಾಡು, ತಾಯಿಭಾಷೆ, ಸಹೋದರತೆ, ಸತ್ಯ-ಶಾಂತಿಗಳಂಥ ಸಾರ್ವಕಾಲಿಕ ಮೌಲ್ಯಗಳು – ಹೀಗೆ ತಾವು ಯಾವುದನ್ನು ಮೆಚ್ಚಿಕೊಂಡರೋ ಆರಾಧಿಸಿದರೋ ಅವನ್ನು ಕುರಿತಾಗಿ ತಮಗನ್ನಿಸಿದ್ದನ್ನು ಬರೆಯುತ್ತ ಹೋದರು. ಗೋವಿಂದ ಪೈಗಳ ಕಾವ್ಯನಿಷ್ಠೆ ಮತ್ತು ಡಿವಿಜಿಯವರ ಮೌಲ್ಯನಿಷ್ಠೆಗಳನ್ನು ಮೇಳೈಸಿಕೊಂಡು ಬದುಕಿದ ಕನ್ನಡದ ಕೊನೆಯ ಜೀವ ಕಯ್ಯಾರರು ಎನ್ನಬಹುದು.ಬರಹ ಮತ್ತು ಬದುಕನ್ನು ಒಂದು ಐತಿಹಾಸಿಕ ಹೋರಾಟಕ್ಕೆ ಮುಡಿಪಾಗಿಟ್ಟ ಕಯ್ಯಾರ ಕಡೆವರೆಗೂ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ತನ್ನ ದನಿಯನ್ನು ಮೆತ್ತಗಾಗಿಸಲು ನೋಡಿದ ಯಾವ ರಾಜಕೀಯ ಪಕ್ಷಗಳೊಡನೆಯೂ ಗುರುತಿಸಿಕೊಳ್ಳಲಿಲ್ಲ. ಅವರ ಹೋರಾಟಕ್ಕೆ ಯಾವ ರಾಜಕೀಯ ಹಿತಾಸಕ್ತಿಗಳೂ ಇರಲಿಲ್ಲ. ಮನಸ್ಸು ಮಾಡಿದ್ದರೆ, ಅವರು ಕಾಸರಗೋಡು ವಿಲೀನದ ವಿಷಯವನ್ನು ರಾಜಕೀಯಕ್ಕೆ ಎಳೆದುತಂದು ಕಲಸುಮೇಲೋಗರವಾಗಿಸಿ ಆ ಮೂಲಕವೇ ವಿಧಾನಸಭೆಗೆ ಹತ್ತಿರವಾಗಬಹುದಿತ್ತು. ಅಥವಾ ಆ ಹೋರಾಟದ ಮೂಲಕವೇ ಕರ್ನಾಟಕ ಮತ್ತು ಕೇರಳ – ಎರಡೂ ರಾಜ್ಯಗಳನ್ನು ಆಡಿಸಿಕೊಂಡು ತನ್ನ ಬುತ್ತಿಯ ಚೀಲ ತುಂಬಿಸಿಕೊಳ್ಳಬಹುದಾಗಿತ್ತು. ಅಥವಾ, ಸರಕಾರಗಳಿಗೆ ಮಗ್ಗುಲ ಮುಳ್ಳಾಗಿ ಕಾಸರಗೋಡು ಇನ್ನೊಂದು ನಕ್ಸಲ್ ಚಳುವಳಿಯಂಥ ಸನ್ನಿವೇಶಕ್ಕೆ ವೇದಿಕೆಯಾಗುವಂತೆ ನೋಡಿಕೊಳ್ಳಬಹುದಿತ್ತು. ಇವೆಲ್ಲ ಲಾಭಕೋರ ದಾರಿಗಳಿದ್ದರೂ ಅವಾವುದನ್ನೂ ತುಳಿಯಲಿಲ್ಲ ಎನ್ನುವ ಕಾರಣಕ್ಕೆ ಕಯ್ಯಾರರು ಮುಖ್ಯವಾಗುತ್ತಾರೆ. ಅವರಿಗೆ ತನ್ನ ಕಾಸರಗೋಡು-ಕರ್ನಾಟಕ ವಿಲೀನ, ಸ್ವಂತ ಅಸ್ತಿತ್ವದ ಪ್ರಶ್ನೆಯಾಗಿ ಕಾಡುತ್ತಿತ್ತು. ಕನ್ನಡಿಗರ ಹಿತ ಕಾಯುವ ಅಭಿಲಾಷೆ ಬಿಟ್ಟರೆ ಅಲ್ಲಿ ಬೇರೇನೂ ಇರಲಿಲ್ಲ! ದುಷ್ಟಶಕ್ತಿಗಳು ಹತ್ತಾರು ದಿಕ್ಕಿನಿಂದ ಮೈಲಿಗೆ ಮಾಡಲು ಹವಣಿಸಿದರೂ ಇಷ್ಟೊಂದು ನಿಷ್ಕಲ್ಮಶ ಹೃದಯವನ್ನು ಕೊನೆವರೆಗೆ ಅವರು ಹೇಗೆ ಕಾಪಾಡಿಕೊಂಡರು ಎನ್ನುವುದು ನಿಜಕ್ಕೂ ಸೋಜಿಗ.
***
ಆರ್‍ಎಸ್‍ಎಸ್ ಹಿರಿಯ ಪ್ರಚಾರಕ ನ. ಕೃಷ್ಣಪ್ಪ ಅವರು ತೀರಿಕೊಂಡದ್ದು ಆಕಸ್ಮಿಕ ಸುದ್ದಿಯಾಗಿರಲಿಲ್ಲ. ಹತ್ತಿರದಿಂದ ಬಲ್ಲ ಹಲವರಿಗೆ ಅವರು ಮರಣಮುಖಿಯಾಗಿರುವುದು ತಿಳಿದಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಸ್ವತಃ ಕೃಷ್ಣಪ್ಪರಿಗೇ ಈ ವಿಚಾರ ತಿಳಿದಿತ್ತು! ಅದಕ್ಕಾಗಿ ಅವರು ತನ್ನ ಶ್ರಾದ್ಧವನ್ನೂ ಮೊದಲೇ ಪೂರೈಸಿಕೊಂಡು ಆ ಕಷ್ಟವನ್ನೂ ಉಳಿದವರು ತೆಗೆದುಕೊಳ್ಳಬಾರದೆಂದು ಹೇಳಿದರಂತೆ! ತನ್ನ ಹತ್ತನೆ ವಯಸ್ಸಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕಕ್ಕೆ ಬಂದ ಕೃಷ್ಣಪ್ಪ, ಇಪ್ಪತ್ತೆರಡನೆ ವಯಸ್ಸಿನಲ್ಲಿ ಸಂಸ್ಕೃತದಲ್ಲಿ ಬಿ.ಎ. ಆನರ್ಸ್ ಮುಗಿಸಿಕೊಂಡ ಮೇಲೆ ಪೂರ್ಣಾವಧಿ ಸ್ವಯಂಸೇವಕರಾದರು. ಕರ್ನಾಟಕವನ್ನು ಹಲವು ಸಲ ಸುತ್ತಿದರು. ಹೋದಲ್ಲೆಲ್ಲ ಸಂಘಟನೆಯ ಕೆಲಸ ಮಾಡಿದರು. ದೇಶದ ಮಹಾತ್ಮರ ಕತೆಗಳನ್ನು ಹೇಳಿದರು. ಹಲವು ಮನಸ್ಸುಗಳನ್ನು ತಮ್ಮ ಮಾತು-ಕೃತಿಗಳ ಮೂಲಕ ಮುಟ್ಟಿದರು. ಕೃಷ್ಣಪ್ಪ ಯಾವುದನ್ನೂ ಇದು ನನ್ನದಲ್ಲ ಎಂದು ಬದಿಗಿಡಲಿಲ್ಲ. ಎಲ್ಲವನ್ನೂ ಎಲ್ಲರನ್ನೂ ಓದಿಕೊಂಡರು. ಹಿಂದುತ್ವದ ಚಿಂತನೆಗಳನ್ನು ಓದುವ ಅದೇ ತುಡಿತ, ಹುಮ್ಮಸ್ಸು ಮತ್ತು ವೇಗದಲ್ಲಿ ಜೆಪಿ, ಲೋಹಿಯಾ, ಅಂಬೇಡ್ಕರ್ ಚಿಂತನೆಗಳನ್ನೂ ಓದಿಕೊಂಡರು.ಸಂಸ್ಕೃತ ಓದಿಕೊಂಡವರಿಗೆ “ಅನೋ ಭದ್ರಾಃ ಕೃತವೋ ಯಂತು ವಿಶ್ವತಃ” ಎಂಬ ಮಾತು ತಿಳಿದಿರಲಿಲ್ಲ ಎನ್ನಲಾದೀತೇ?
ಕೃಷ್ಣಪ್ಪನವರು ಒಂದು ಸಂಸ್ಥೆಯೊಂದಿಗೆ ಗುರುತಿಸಿಕೊಂಡರೂ ಅವರ ವಿಚಾರಗಳನ್ನು ಯಾವ ಸಂಸ್ಥೆಯೂ ಬಂಧಿಸಿಡಲು ಸಾಧ್ಯವಿರಲಿಲ್ಲ. ನದಿ ತನ್ನ ದಾರಿಯನ್ನು ತಾನಾಗಿ ಹುಡುಕಿಕೊಂಡು ಮುಂದುವರಿಯುತ್ತದೆ; ಅದಕ್ಕೆ ಹರಿಯಲು ಅವಕಾಶ ಮಾಡಿಕೊಟ್ಟದ್ದಷ್ಟೇ ನೆಲದ ಭಾಗ್ಯ. ಹಾಗೆ ಕೃಷ್ಣಪ್ಪನವರು ತನ್ನ ನೀತಿ-ಸಿದ್ಧಾಂತಗಳನ್ನು ಪ್ರಚುರವಪಡಿಸಲು ಸಂಘವನ್ನು ವೇದಿಕೆಯಾಗಿ ಬಳಸಿಕೊಂಡರು. ಮತ್ತು ಸಂಘದಂಥ ದಪ್ಪಚೌಕಟ್ಟು, ಆವರಣ ಇದ್ದದ್ದರಿಂದಲೇ ಕೃಷ್ಣಪ್ಪನವರ ಕೆಲಸಕಾರ್ಯಗಳಿಗೂ ಒಂದು ಸುಸಂಬದ್ಧ ಏಕಸೂತ್ರತೆ ಬಂತು ಎಂದೂ ಹೇಳಬಹುದು. ಅಂದರೆ, ಕೃಷ್ಣಪ್ಪ ಮತ್ತು ಸಂಘ ಇಬ್ಬರೂ ಒಬ್ಬರಿಗೊಬ್ಬರು ಪೂರಕಶಕ್ತಿಗಳಂತೆ ಕೆಲಸ ಮಾಡುತ್ತಹೋದರು; ತಂತಿ ಇಲ್ಲದೆ ವಿದ್ಯುತ್ತು ಹರಿಯುವುದಿಲ್ಲ ವಿದ್ಯುತ್ತಿಲ್ಲದೆ ತಂತಿಗೆ ಬೆಲೆ ಇಲ್ಲ – ಎಂದಂತೆ! ಸ್ವಾರಸ್ಯವೆಂದರೆ, ಕೃಷ್ಣಪ್ಪನವರಿಗೆ ಅವರ ಸಿದ್ಧಾಂತಕ್ಕೆ ಭಿನ್ನವಾದ ದಾರಿಯಲ್ಲಿ ನಡೆದವರ ಜೊತೆಗೂ ಆಪ್ಯಾಯವೆನ್ನುವಂತಹ ಸ್ನೇಹವಿತ್ತು. ಮತ್ತು ಈ ಸ್ನೇಹ ತೋರಿಕೆಯದ್ದಲ್ಲ. ತಂತಮ್ಮ ಕೋಟೆಗಳನ್ನು ರಕ್ಷಿಸಿಕೊಳ್ಳಲು ವೈರಿಗಳು ಅನುಸರಿಸುವ ಶಿಷ್ಟಾಚಾರದ ಕಪಟ ಗೆಳೆತನವೂ ಅದಾಗಿರಲಿಲ್ಲ. ಅವರು ತಮ್ಮ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬನನ್ನೂ ಮನುಷ್ಯನೆಂಬ ನೆಲೆಯಲ್ಲಿ ನೋಡಿ ಮಾತಾಡಿ ವ್ಯವಹರಿಸಿದರು. ಎಂಟೊಂಬತ್ತು ವಯಸ್ಸಿನ ಎಳೆಹುಡುಗರಿಗೂ ಕೃಷ್ಣಪ್ಪ ಸಲಹೆ ಸೂಚನೆ ಕೊಡುತ್ತ ಪತ್ರ ಬರೆಯುತ್ತಿದ್ದರು. ತಮ್ಮ ಮಾತುಗಳನ್ನು ತಳ್ಳಿಹಾಕಿದವರ ಬಗ್ಗೆ ಬೇಸರಿಸುತ್ತಿರಲಿಲ್ಲ. ಜಗತ್ತಿನ ಎಲ್ಲ ನೋವುಗಳೂ ಒಂದೇ; ಎಲ್ಲ ಮನೆಯಲ್ಲಿ ಬೇಯುವ ಅನ್ನವೂ ಒಂದೇ; ಎಲ್ಲರ ಮೈಯಲ್ಲಿ ಹರಿಯುವ ರಕ್ತವೂ ಒಂದೇ ಎಂದು ಅವರು ಹೇಳುತ್ತಿದ್ದರು. ವೇದಿಕೆಗಳಲ್ಲಿ ಭಾಷಣ ಕುಟ್ಟುವ ಮಹಾನುಭಾವರು ಇಂದು ನಮ್ಮ ಜೊತೆ ಬಹಳ ಮಂದಿ ಇದ್ದಾರೆ. ಆದರೆ, ಕೃಷ್ಣಪ್ಪನವರು ತಾನು ಹೇಳಿದ್ದಕ್ಕೆ ವಿರುದ್ಧವಾಗಿ ನಡೆದರು ಎಂದು ಮನುಷ್ಯರು ಮಾತ್ರವಲ್ಲ; ಕಛೇರಿಯಲ್ಲಿ ಓಡಾಡುವ ಬೆಕ್ಕುಗಳು ಕೂಡ ಹೇಳಲು ಸಾಧ್ಯವಿರಲಿಲ್ಲ. ಶುದ್ಧ ಏಕಾಂತದಲ್ಲೂ ತಪ್ಪು ಮಾಡದ ಮನುಷ್ಯನೇ ನಿಜವಾದ ಮಹಾತ್ಮ ಎನ್ನುವುದಾದರೆ ಇವರಿಗೆ ಆ ಅಭಿದಾನ ಒಪ್ಪುತ್ತದೆ.
***
ಈ ಮೂವರೂ ನಮ್ಮನ್ನು ಬಿಟ್ಟುಹೋಗಿದ್ದಾರೆ. ಆಟಿಯ ಬಿರುಮಳೆಗೆ ಉರುಳಿಬೀಳುವ ಮಹಾವೃಕ್ಷಗಳಂತೆ ಮೂವರೂ ಒಂದೆರಡು ವಾರಗಳ ಆಸುಪಾಸಿನಲ್ಲಿ ಈ ಜಗತ್ತಿಗೆ ಮುಕ್ತಾಯ ಹಾಡಿದರು. ವಿಪರ್ಯಾಸವೋ ಏನೋ, ಇದೇ ಕಾಲದಲ್ಲಿ ನಾವು ಮೌಲ್ಯಗಳ ಅಧಃಪತನವಾಗುತ್ತಿರುವುದನ್ನೂ ಅವುಗಳ ವ್ಯಾಖ್ಯೆ ಬದಲಾಗುತ್ತಿರುವುದನ್ನೂ ಕಾಣುತ್ತಿದ್ದೇವೆ. ತಮ್ಮ ಜೀವನವನ್ನು ಹಿಂದು, ಮುಸ್ಲಿಮ, ಬ್ರಾಹ್ಮಣ, ಬಂಟ, ಕೊರಗ ಎಂದೆಲ್ಲ ಕತ್ತರಿಸಿಕೊಳ್ಳದೆ ಒಂದೇ ಮನುಷ್ಯಕುಲದ ಪ್ರಜೆಗಳೆಂಬಂತೆ ಬದುಕಿಹೋದವರ ಅದೇ ಜಗತ್ತಿನಲ್ಲಿ ಈಗ ಜಾತಿಗಳನ್ನು ಮುಂದಿಟ್ಟುಕೊಂಡು ತಾರಾಮಾರ ಜಗಳಾಗುತ್ತಿದೆ. ದೇಶದ ಇನ್ನೂರೈವತ್ತು ನಾಗರಿಕರನ್ನು ಕೊಂದವನು ರಾಷ್ಟ್ರಭಕ್ತನ ಪಟ್ಟಕ್ಕೆ ಏರುತ್ತಿದ್ದಾನೆ. ಭಾಷೆಗಳನ್ನು ಜಾತಿಮತಗಳಿಗೆ ಅಂಟಿಸುವ ಕೆಲಸಕ್ಕೆ ಕೂತುಬಿಟ್ಟಿದ್ದೇವೆ. ಅರ್ಥವಾಗದ ಭಾಷೆಯಲ್ಲಿದೆ ಎನ್ನುವ ಕಾರಣಕ್ಕಾಗಿ ಧರ್ಮಗ್ರಂಥಗಳನ್ನು ಸುಟ್ಟುಹಾಕಲು ಕೈಯಲ್ಲಿ ದೊಂದಿ ಹಿಡಿದು ನಿಂತಿದ್ದೇವೆ. ಕಾಮ ದೇಶದ ಹೊಸ ಭಾಷೆಯಾಗಿದೆ. ಅಶ್ಲೀಲತೆ ನಮಗೆ ಬೇಕೆಂದು ಅಲ್ಲಲ್ಲಿ ಚಳುವಳಿಯಾಗುತ್ತಿದೆ. ಭ್ರಷ್ಟಾಚಾರ ನಾಚಿಕೆಪಡುವಂಥ ಸಂಗತಿ ಎಂಬ ಭಾವನೆ ಹೋಗಿದೆ. ಲೋಕಾಯುಕ್ತರು ತನ್ನ ಕುರ್ಚಿಯಲ್ಲಿ ಕೂತೇ ಡೀಲ್‍ಗಳನ್ನು ಕುದುರಿಸುವ, ನೂರಾರು ಕೊಟಿಗಳನ್ನು ಜೇಬಿಗಿಳಿಸುವ ಸನ್ನಿವೇಶ ಇದೆ. ದಿನಕ್ಕೈದರಂತೆ ರೈತರು ಆತ್ಮಹತ್ಯೆ ಮಾಡಿಕೊಂಡರೂ ನಮ್ಮನ್ನಾಳುವ ಪ್ರಭುಗಳಿಗೆ ಅದರ ಕೂಗು ಕೇಳಿಸುತ್ತಿಲ್ಲ. ಕಿವಿ ಕಿರುಡಾಗಿದೆ. ಹೃದಯ ಬರಡಾಗಿದೆ. ಮೌಲ್ಯ? ಹಾಗೆಂದರೇನು? ಎಂದು ಕೇಳುತ್ತಿದ್ದೇವೆ!
ಈ ದೇಶವನ್ನು ಮತ್ತೆ ಕಲಾಂ ಅಜ್ಜನಂತೆ ಭಕ್ತಿಯಿಂದ, ನಿಷ್ಕಪಟದಿಂದ, ಹೃದಯಾಂತರಾಳದಿಂದ ಪ್ರೀತಿಸುವ ಇನ್ನೊಬ್ಬ ಸಿಕ್ಕಾನೆ? ನಮಗೆ ಪ್ರತ್ಯೇಕ ರಾಜ್ಯ ಕೊಡಿ ಎಂದು ಕೇಳುವವರೇ ಹೆಚ್ಚಾಗಿರುವ ಕಾಲದಲ್ಲಿ ನಮ್ಮ ಊರನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳಿ; ಆಗಿರುವ ಅನ್ಯಾಯ ಸರಿಪಡಿಸಿ ಎನ್ನುತ್ತ ಒಂದೇ ಒಂದು ಹೋರಾಟಕ್ಕಾಗಿ ಬದುಕನ್ನು ಶ್ರೀಗಂಧದಂತೆ ತೇಯ್ದ ಕಯ್ಯಾರರಂಥ ಪರಿಶುದ್ಧ ಹೋರಾಟಗಾರ ಮತ್ತೆ ನಮಗೆ ಸಿಕ್ಕಿಯಾನೆ? ತನ್ನ ಜೀವನಪೂರ್ತಿ ಕುಟುಂಬ ಮೌಲ್ಯಗಳನ್ನು ಪ್ರತಿಪಾದಿಸುತ್ತ ಸೇವೆಯಲ್ಲೆ ಸಂತೃಪ್ತಿ ಕಂಡ ಕೃಷ್ಣಪ್ಪರಂಥ ಮಾನವತಾವಾದಿ ದಕ್ಕಿಯಾನೆ? ಮೂವರೂ ತಮ್ಮ ನಡೆನುಡಿಗಳ ಬಗ್ಗೆ ಪ್ರಶ್ನೆ ಬರುವಂಥ ಕಟ್ಟರ್ ಜಾತಿಮತಗಳಲ್ಲಿ ಹುಟ್ಟಿಯೂ, ಅವುಗಳನ್ನು ಮೀರಿ ಮನುಷ್ಯರಾದರು. ಹಾಗೆಂದು ಮೂವರೂ ತಾವು ಹುಟ್ಟಿದ ಧರ್ಮಗಳನ್ನು ಬಿಡಲಿಲ್ಲ. ಒಬ್ಬ ಮುಸ್ಲಿಮ್ ತಾನೊಬ್ಬ ಮುಸ್ಲಿಮ್ ಆಗಿ ಉಳಿದೂ ಈ ದೇಶದ ಪ್ರೀತಿವಿಶ್ವಾಸ ಗಳಿಸಬಹುದು ಎನ್ನುವುದನ್ನು ಕಲಾಂ ತೋರಿಸಿಕೊಟ್ಟರು. ಮೇಲ್ವರ್ಗದಲ್ಲಿ ಹುಟ್ಟಿದ ಮಾತ್ರಕ್ಕೆ ತಾನು ತಿನ್ನುವ ಅನ್ನ ಬೇರೆಯಾಗುವುದಿಲ್ಲ ಎನ್ನುವುದನ್ನು ಕೃಷ್ಣಪ್ಪ ತೋರಿಸಿಕೊಟ್ಟರು. ಎಲ್ಲ ವರ್ಗಗಳನ್ನು ಮೀರಿ ವಿಶ್ವಮಾನವರಾಗುವುದು ಸಾಧ್ಯವಿದೆ ಎನ್ನುವುದಕ್ಕೆ ಕಯ್ಯಾರ ತಾನೇ ಮಾದರಿಯಾದರು. ಮೂವರೂ ರಾಜಕೀಯ ಮತ್ತು ಪ್ರಭುತ್ವಗಳಿಗೆ ತೀರ ಹತ್ತಿರದಲ್ಲಿ ಕೂತಿದ್ದರೂ ಪದ್ಮಪತ್ರ ಮತ್ತು ನೀರಿನ ಹನಿಗಳ ಸಂಬಂಧದಂತೆ, ಅವನ್ನು ತಮ್ಮ ಬದುಕಿನೊಳಗೆ ಬರಗೊಡಲಿಲ್ಲ. ವಿಸೀ ಅವರ ಅಭೀಃ ಎನ್ನುವ ಕವಿತೆಯಲ್ಲಿ ಬರುವ “ಮಣಿಯದಿಹ ಮನವೊಂದು, ಸಾಧಿಸುವ ಹಠವೊಂದು; ನಿಜದ ನೇರಕೆ ನಡೆವ ನಿಶ್ಚಲತೆಯೊಂದು; ಅನ್ಯಾಯಕೆಂದೆಂದು ಬಾಗದೆಚ್ಚರವೊಂದು; ಮರುಕಕ್ಕೆ, ಪ್ರೇಮಕ್ಕೆ ಚಿರತೆರೆದ ಎದೆಯೊಂದು…” ಎಂಬ ಸಾಲುಗಳೇ ಮೂರ್ತರೂಪ ಧರಿಸಿ ಈ ಭೂಮಿಯಲ್ಲಿ ಬದುಕಿ ಬಾಳಿ ಹೋದವೋ ಎನ್ನುವಂತೆ ಭಾಸವಾಗುತ್ತಿದೆ. ಇಂಥವರು ಕಣ್ಮುಚ್ಚಿದಾಗ “ಪುರದ ಪುಣ್ಯವೆ ಪುರುಷರೂಪಿಂದೆ ಪೋಗುತಿದೆ” ಎನ್ನಿಸುವುದು ಸುಳ್ಳಲ್ಲ. ಎಣ್ಣೆ ಕಂತಿದ ದೀಪ ಹಿಡಿದು ಬೆಳಕಿಗಾಗಿ ಕಾದಿದ್ದೇವೆ ನಾವು. ಎಂದು ಕಂಡೀತು ಮುಂದಿನ ತಾರೆ?
ಎಷ್ಟು ಚನ್ನಾಗಿ ಬರೆದಿದ್ದೀರ ರೋಹಿತ್!!. ಓದಿ ಧನ್ಯಭಾವ ದುಃಖ,ತಳಮಳ ಎಲ್ಲಾ ಅನುಭವಿಸಿದೆ.
“ಧನ್ಯಭಾವ ದುಃಖ,ತಳಮಳ ಎಲ್ಲಾ ಅನುಭವಿಸಿದೆ”
LoL.
ಧನ್ಯತಾಭಾವ ಇರುವಲ್ಲಿ ದುಃಖ ತಳಮಳ ಇರುವುದು ಸಾಧ್ಯವೇ? ;-P
ಧನ್ಯತಾ ಭಾವ, ಅವರು ಬದುಕಿದ ಕಾಲಘಟ್ಟದಲ್ಲಿ ನಾವೂ ಇದ್ದೆವೆಂಬುದಕ್ಕೆ. ಉಳಿದ ಭಾವಗಳು, ಸಂವೇದನೆ ಇದ್ದರೆ ಯಾಕೆಂದು ತಿಳಿಯುವುದು.
Lol ಮಾಡಿದರೆ ಹೊರಗೆ ಉಳಿಯುತ್ತದೆ