ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 14, 2015

1

ನೂರರ ಹೊಸ್ತಿಲಲ್ಲಿ ಕನ್ನಡ ಸಾಹಿತ್ಯ ಪರಿಷತ್ತು

‍ನಿಲುಮೆ ಮೂಲಕ

– ರಾಜಕುಮಾರ.ವ್ಹಿ.ಕುಲಕರ್ಣಿ, ಮುಖ್ಯಗ್ರಂಥಪಾಲಕ
ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ

ಕನ್ನಡ ಸಾಹಿತ್ಯ ಪರಿಷತ್ತುಕನ್ನಡ ಸಾಹಿತ್ಯ ಪರಿಷತ್ತು ಈಗ ನೂರರ ಹೊಸ್ತಿಲಲ್ಲಿ ನಿಂತಿದೆ. 1915 ರಲ್ಲಿ ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತು ಅನೇಕ ಏಳು ಬೀಳುಗಳ ನಡುವೆಯೂ ನೂರು ವರ್ಷಗಳನ್ನು ಪೂರೈಸುತ್ತಿರುವುದು ಕನ್ನಡಿಗರಾದ ನಮಗೆಲ್ಲ ಅಭಿಮಾನದ ಸಂಗತಿಯಿದು. ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ರಕ್ಷಣೆ ಮತ್ತು ಬೆಳವಣಿಗೆಗಾಗಿ ಅಂದಿನ ಮೈಸೂರಿನ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಆದತ್ಯೆ ನೀಡಿದರು. ಇಂಥದ್ದೊಂದು ಕನ್ನಡ ಸಂಸ್ಥೆಯ ಸ್ಥಾಪನೆಗೆ ಆ ದಿನಗಳ ಅನೇಕ ಸಾಹಿತಿಗಳ ಬೇಡಿಕೆಯೂ ಇತ್ತು. ಸರ್ ಎಮ್.ವಿಶ್ವೇಶ್ವರಯ್ಯ ಮತ್ತು ಕರ್ಪೂರ ಶ್ರೀನಿವಾಸರಾವ್ ಕನ್ನಡ ಸಾಹಿತ್ಯದ ರಕ್ಷಣೆಗಾಗಿ ಪರಿಷತ್ತನ್ನು ಸ್ಥಾಪಿಸಲು ಕಂಕಣಬದ್ಧರಾಗಿ ದುಡಿದರು. ಒಟ್ಟಾರೆ ಎಲ್ಲರ ಪ್ರಯತ್ನ ಮತ್ತು ಆಸೆಯಂತೆ 05.05.1915 ರಂದು ಕನ್ನಡ ಸಾಹಿತ್ಯ ಪರಿಷತ್ತು ಅಸ್ತಿತ್ವಕ್ಕೆ ಬಂದಿತು. ಬೆಂಗಳೂರಿನ ಶಂಕರಪುರ ಬಡಾವಣೆಯಲ್ಲಿನ ಸಣ್ಣ ಕೊಠಡಿಯೊಂದರಲ್ಲಿ ಸ್ಥಾಪನೆಯಾದ ಪರಿಷತ್ತಿಗೆ ನಂತರದ ದಿನಗಳಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ, ಉತ್ತಂಗಿ ಚೆನ್ನಪ್ಪ, ಹಂ.ಪಾ.ನಾಗರಾಜಯ್ಯ, ಮೂರ್ತಿರಾವ್, ವೆಂಕಟಸುಬ್ಬಯ್ಯ, ಗೊರುಚ, ಚಂಪಾ ಅವರಂಥ ಖ್ಯಾತನಾಮ ಸಾಹಿತಿಗಳ ಅಧ್ಯಕ್ಷತೆ ಲಭ್ಯವಾಯಿತು. ಸಣ್ಣ ಕೊಠಡಿಯಿಂದ ಸ್ವತಂತ್ರ ಕಟ್ಟಡಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಸ್ಥಳಾಂತರಗೊಂಡು ಕನ್ನಡ ಸಾಹಿತ್ಯದ ಮತ್ತು ನಾಡಿನ ರಕ್ಷಣೆಯ ಕೆಲಸದಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಂಡಿತು. ಪುಸ್ತಕಗಳ ಪ್ರಕಟಣೆ, ಸಾಹಿತ್ಯ ಸಮ್ಮೇಳನದ ಏರ್ಪಾಡು, ದತ್ತಿ ಉಪನ್ಯಾಸ ಇತ್ಯಾದಿ ಚಟುವಟಿಕೆಗಳಿಂದ ಕನ್ನಡ ಸಾಹಿತ್ಯ ಪರಿಷತ್ತು ಬಹುಬೇಗ ಜನರಿಗೆ ಹತ್ತಿರವಾಯಿತು. ಪ್ರಾರಂಭದ ದಿನಗಳಲ್ಲಿ ದೊರೆತ ಸಾಹಿತ್ಯಾಸಕ್ತರ ನೆರವು ಮತ್ತು ಅವರುಗಳ ಪ್ರಾಮಾಣಿಕ ದುಡಿಮೆಯ ಪರಿಣಾಮ ಕನ್ನಡ ಸಾಹಿತ್ಯ ಪರಿಷತ್ತು ಬಹಳಷ್ಟು ಕನ್ನಡಪರ ಕಾರ್ಯಕ್ರಮಗಳನ್ನು ಸಂಘಟಿಸಲು ಹಾಗೂ ಯಶಸ್ಸನ್ನು ಕಾಣಲು ಸಾಧ್ಯವಾಯಿತು.

ಕನ್ನಡ ಸಾಹಿತ್ಯ ಪರಿಷತ್ತು ರಾಜಕಾರಣದ ರೂಪಾಂತರ ಹೊಂದಿದ ಮೇಲೆ ಪರಿಷತ್ತಿನ ನೀತಿ ನಿಲುವುಗಳಲ್ಲಿ ಮತ್ತು ಅದರ ಕಾರ್ಯಯೋಜನೆಗಳಲ್ಲಿ ಸಾಕಷ್ಟು ಬದಲಾವಣೆ ಕಾಣಿಸಿಕೊಂಡಿತು. ಕನ್ನಡ ಸಾಹಿತ್ಯ ಪರಿಷತ್ತಿಗೆ ಹರಿದು ಬರುವ ಸರ್ಕಾರದ ನೆರವು ಮತ್ತು ಸಾರ್ವಜನಿಕರ ದೇಣಿಗೆ ಅದು ಅನೇಕರು ಅಧ್ಯಕ್ಷ ಗಾದಿಗೆ ಹಪಾಹಪಿಸುವಂತೆ ಮಾಡಿತು. ಪರಿಷತ್ತಿನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಆಯ್ಕೆಯ ಚುನಾವಣೆಯಲ್ಲಿ ರಾಜಕೀಯದ ಖದರು ಗೋಚರಿಸತೊಡಗಿತು. ಈ ಮಾತು ಜಿಲ್ಲಾ ಮತ್ತು ತಾಲೂಕು ಮಟ್ಟದ ಪರಿಷತ್ತಿನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಆಯ್ಕೆಗೂ ಅನ್ವಯಿಸುತ್ತದೆ. ಪರಿಣಾಮವಾಗಿ ಪರಿಷತ್ತಿನ ಸದಸ್ಯರನ್ನು ಹುಡುಕಿಕೊಂಡು ಹೋಗುವ, ಅವರನ್ನು ಓಲೈಸುವ ಹಾಗೂ ಒಂದಿಷ್ಟು ಪ್ರಲೋಭನೆಯನ್ನೊಡ್ಡುವಂಥ ಅನೈತಿಕ ಕೆಲಸಗಳಿಗೆ ನಮ್ಮ ಬರಹಗಾರರು ಕೈಹಾಕತೊಡಗಿದರು. ಪರಿಷತ್ತಿನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಆಯ್ಕೆಯಲ್ಲಿ ಜಾತಿ ಮತ್ತು ಪಂಗಡಗಳು ನಿರ್ಣಾಯಕ ಪಾತ್ರವಹಿಸತೊಡಗಿದವು. ರಾಜಕಾರಣಿಗಳು ಸಹ ಕನ್ನಡ ಸಾಹಿತ್ಯ ಪರಿಷತ್ತನ್ನು ತಮ್ಮ ಹತೋಟಿಯಲ್ಲಿಟ್ಟುಕೊಳ್ಳಲು ಅನುಕೂಲವಾಗಲೆಂದು ಅಪರೋಕ್ಷವಾಗಿ ತಮ್ಮ ಅಭ್ಯರ್ಥಿಗಳನ್ನು ಬೆಂಬಲಿಸಲಾರಂಭಿಸಿದರು. ಜೊತೆಗೆ ಇನ್ನೊಂದು ಆತಂಕದ ಸಂಗತಿ ಎಂದರೆ ಅದು ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧವಿಲ್ಲದವರು ಸಹ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸತೊಡಗಿದ್ದು. ಕಳೆದ ಹಲವು ವರ್ಷಗಳ ಇತಿಹಾಸವನ್ನು ಕೆದಕಿ ನೋಡಿದಾಗ ಸಾಹಿತ್ಯ ಪರಿಷತ್ತಿಗೆ ಆಯ್ಕೆಯಾಗುತ್ತಿರುವವರಲ್ಲಿ ಹೆಚ್ಚಿನವರಿಗೆ ಸಾಹಿತ್ಯದ ಗಂಧಗಾಳಿಯೂ ಇಲ್ಲ. ಇಂಥ ಪದಾಧಿಕಾರಿಗಳು ಕನ್ನಡ ಸಾಹಿತ್ಯ ಪರಿಷತ್ತನ್ನು ರಾಜಕೀಯದ ಅಖಾಡ ಮಾಡಿಕೊಂಡಿರುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಈ ಮಾತಿಗೆ ಹಾವೇರಿಯಲ್ಲಿ ನಡೆಯಬೇಕಿದ್ದ 81 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಬೇರೆಡೆ ಏರ್ಪಡಿಸಿದ್ದು ಒಂದು ಉದಾಹರಣೆ. ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಜಿದ್ದಾಜಿದ್ದಿಯ ಪರಿಣಾಮ ಆ ಜಿಲ್ಲೆಯ ಸಾಹಿತ್ಯಾಸಕ್ತರಿಗೆ ನಿರಾಸೆಯುಂಟಾಯಿತು. ಇವರೇನು ಸಾಹಿತಿಗಳೇ ಅಥವಾ ರಾಜಕಾರಣಿಗಳೇ ಎಂದು ಜಿಲ್ಲೆಯ ಜನ ಅನುಮಾನದಿಂದ ನೋಡುವಂತಾಗಿದೆ.

ಪ್ರತಿವರ್ಷದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ರಾಜಕಾರಣಿಗಳಿಂದ ಮುಕ್ತವಾಗಿ ಸಂಘಟಿಸಲು ಇದುವರೆಗೂ ಕನ್ನಡ ಸಾಹಿತ್ಯ ಪರಿಷತ್ತಿಗೆ ಸಾಧ್ಯವಾಗಿಲ್ಲ. ಏಕೆಂದರೆ ಕನ್ನಡ ಸಾಹಿತ್ಯ ಸಮ್ಮೇಳನ ಎನ್ನುವುದು ನಮ್ಮ ರಾಜಕಾರಣಿಗಳ ಒಡ್ಡೋಲಗವಾಗಿ ಪ್ರತಿಬಿಂಬಿತವಾಗುತ್ತಿದೆ. ಸಾಹಿತ್ಯ ಸಮ್ಮೇಳನದಂಥ ಮಹತ್ವದ ವೇದಿಕೆಯನ್ನು ರಾಜಕಾರಣಿಗಳೇ ಹೆಚ್ಚಾಗಿ ಆಕ್ರಮಿಸಿಕೊಳ್ಳುತ್ತಿರುವರು. ಸಾಹಿತ್ಯ ಸಮ್ಮೇಳನದಂಥ ವೇದಿಕೆಯಲ್ಲಿ ನಾಡು ನುಡಿಗಿಂತ ರಾಜಕಾರಣಿಗಳ ಸ್ವಹಿತಾಸಕ್ತಿಯ ಮಾತುಗಳೇ ಹೆಚ್ಚಾಗಿ ಕೇಳಿ ಬರುತ್ತಿವೆ. ಚಂಪಾ ಅವರನ್ನು ಹೊರತುಪಡಿಸಿ ಸಾಹಿತ್ಯ ಪರಿಷತ್ತಿನ ಯಾವ ಅಧ್ಯಕ್ಷರೂ ರಾಜಕಾರಣಿಗಳಿಗೆ ಸಮ್ಮೇಳನದ ವೇದಿಕೆ ಹತ್ತಬೇಡಿ ಎಂದು ಗುಡುಗಿಲ್ಲ. ಮುಖ್ಯಮಂತ್ರಿ ಮತ್ತು ಸಂಬಂಧಿಸಿದ ಇಲಾಖೆಯ ಮಂತ್ರಿಗಳು ಬಿಡುಗಡೆ ಮಾಡುವ ಅನುದಾನ ನಮ್ಮ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಅದೊಂದು ಋಣದಂತೆ ಭಾಸವಾಗುತ್ತಿದೆ. ಅದಕ್ಕೆಂದೆ ರಾಜಕಾರಣಿಗಳನ್ನು ಓಲೈಸುವ ಹಾಗೂ ಅವರುಗಳೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುವ ಉಮೇದಿಯಲ್ಲಿ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಿಗೆ ಕನ್ನಡದ ಕೆಲಸ ಗೌಣವಾಗಿ ಕಾಣುತ್ತಿದೆ. ಈ ಕಾರಣದಿಂದಲೇ ಇರಬೇಕು ತೇಜಸ್ವಿ ಅವರಂಥವರು ಸಾಹಿತ್ಯ ಪರಿಷತ್ತು, ಸಮ್ಮೇಳನ, ಅಕಾಡೆಮಿ ಯಾವ ಗೊಡವೆಯೂ ಬೇಡವೆಂದು ದೂರದ ಕಾಡಿನಲ್ಲಿ ಕುಳಿತು ಸದ್ದಿಲ್ಲದೇ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡರು. ಆದರೆ ತೇಜಸ್ವಿ ಅವರಲ್ಲಿದ್ದ ಪದವಿ ಮತ್ತು ಪ್ರಶಸ್ತಿ ಕುರಿತಾದ ನಿರಾಸಕ್ತಿ ಬೇರೆ ಬರಹಗಾರರಲ್ಲಿ ಇಲ್ಲದೇ ಇದ್ದುದ್ದರಿಂದ ಅವರುಗಳು ಕನ್ನಡ ಸಾಹಿತ್ಯ ಪರಿಷತ್ತನ್ನು ಶುಚಿಗೊಳಿಸುವ ಕೆಲಸಕ್ಕೆ ಕೈಹಾಕಲೇ ಇಲ್ಲ. ಪರಿಣಾಮವಾಗಿ ಬರೆಯದೆ ಇರುವವರು, ಶ್ರೀಮಂತ ಕುಳಗಳು, ಹೋಟೆಲ್ ಉದ್ಯಮಿಗಳು ಸಾಹಿತ್ಯ ಪರಿಷತ್ತಿನ ಆಯಕಟ್ಟಿನ ಜಾಗವನ್ನು ಆಕ್ರಮಿಸಿಕೊಳ್ಳುವಂತಾಯಿತು.

ಕನ್ನಡ ಸಾಹಿತ್ಯ ಪರಿಷತ್ತು ಪುರುಷ ಪ್ರಧಾನ ನೆಲೆಯಲ್ಲೇ ವ್ಯವಹರಿಸುತ್ತ ಬಂದಿರುವುದಕ್ಕೆ ಪರಿಷತ್ತಿನ ಅಧ್ಯಕ್ಷರ ಆಯ್ಕೆಯೇ ಮಾನದಂಡವಾಗಿದೆ. ನೂರು ವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದುವರೆಗೆ 24 ಅಧ್ಯಕ್ಷರ ಸಾರಥ್ಯ ಲಭಿಸಿದೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಇದುವರೆಗೂ ಒಬ್ಬ ಮಹಿಳಾ ಸಾಹಿತಿ ಪರಿಷತ್ತಿನ ಅಧ್ಯಕ್ಷತೆಯ ಸ್ಥಾನ ಅಲಂಕರಿಸದಿರುವುದು. ಸಾಹಿತ್ಯ ಕ್ಷೇತ್ರದಲ್ಲಿ ಮಹಿಳಾ ಸಾಹಿತ್ಯ ಪರಂಪರೆಯನ್ನು ಮೊದಲಿನಿಂದಲೂ ಒಂದುರೀತಿಯ ಅಸಡ್ಡೆ ಹಾಗೂ ನಿರ್ಲಕ್ಷ್ಯದಿಂದ ಕಾಣುತ್ತಿರುವ ಮನೋಭಾವಕ್ಕೆ ಇದೊಂದು ದೃಷ್ಟಾಂತ. ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷಿಯ ಚುನಾವಣೆ ರಾಜಕೀಯ ಚುನಾವಣೆಯ ರೂಪುರೇಷೆ ಪಡೆಯುತ್ತಿರುವುದರಿಂದ ಮಹಿಳಾ ಲೇಖಕಿಯರು ಸಾಹಿತ್ಯ ಪರಿಷತ್ತಿನ ಚುನಾವಣಾ ಕಣದಿಂದ ಮಿಮುಖರಾಗುತ್ತಿರಬಹುದು. ಇಂಥದ್ದೊಂದು ತಾರತಮ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೂ ಅನ್ವಯಿಸಿ ಹೇಳಬಹುದು. ಏಕೆಂದರೆ ಇದುವರೆಗಿನ 80 ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಅಧ್ಯಕ್ಷತೆ ವಹಿಸಿದ ಮಹಿಳಾ ಲೇಖಕಿಯರ ಸಂಖ್ಯೆ ಕೇವಲ ನಾಲ್ಕು ಮಾತ್ರ. ಜಯದೇವಿತಾಯಿ ಲಿಗಾಡೆ, ಕಮಲಾ ಹಂಪಾನಾ, ಶಾಂತಾದೇವಿ ಮಾಳವಾಡ ಮತ್ತು ಗೀತಾ ನಾಗಭೂಷಣ ಮಾತ್ರ ಆ ಗೌರವಕ್ಕೆ ಪಾತ್ರರಾದ ಮಹಿಳಾ ಸಾಹಿತಿಗಳು. ಕನ್ನಡ ಸಾಹಿತ್ಯ ಸಮ್ಮೇಳನದಂಥ ಮಹತ್ವದ ವೇದಿಕೆಯನ್ನು ಅಧ್ಯಕ್ಷರಾಗಿ ಏರಲು ಮಹಿಳಾ ಲೇಖಕಿಯೊಬ್ಬಳು ತೆಗೆದುಕೊಂಡ ಸಮಯ ಸುದೀರ್ಘ 60 ವರ್ಷಗಳು. ಸಮ್ಮೇಳನದ ಅಧ್ಯಕ್ಷರ ಆಯ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಮಹತ್ವದ ಜವಾಬ್ದಾರಿಯಾಗಿರುವುದರಿಂದ ಇಂಥದ್ದೊಂದು ಆರೋಪ ಸಹಜವಾಗಿಯೇ ಕಸಾಪದ ಮೇಲಿದೆ. 1915 ರಿಂದಲೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪ್ರತಿವರ್ಷ ಏರ್ಪಡಿಸುವ ಸಂಪ್ರದಾಯಕ್ಕೆ ಚಾಲನೆ ದೊರೆತ ಮೇಲೆ ಮೊದಲ ಬಾರಿಗೆ ಮಹಿಳಾ ಲೇಖಕಿ ಸಮ್ಮೇಳನದ ಅಧ್ಯಕ್ಷರಾದದ್ದು 1974 ರಲ್ಲಿ ಮಂಡ್ಯದಲ್ಲಿ ನಡೆದ ಸಮ್ಮೇಳನದಲ್ಲಿ. ಪುರುಷ ಸಾಹಿತಿಗಳಷ್ಟೇ ಬರಹಗಾರ್ತಿಯರೂ ಅತ್ಯಂತ ಸಕ್ರಿಯವಾಗಿ ಬರವಣಿಗೆಯ ಕೃಷಿಯಲ್ಲಿ ತೊಡಗಿಸಿಕೊಂಡು ಅತ್ಯುತ್ತಮ ಸಾಹಿತ್ಯವನ್ನು ರಚಿಸುತ್ತಿದ್ದರೂ ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಲೇಖಕಿಯರನ್ನು ಸ್ತ್ರೀ ಎನ್ನುವ ತಾರತಮ್ಯದ ನೆಲೆಯಲ್ಲೇ ನಡೆಸಿಕೊಳ್ಳುತ್ತಿದೆ.

ಪುಸ್ತಕ ಪ್ರಕಟಣೆ ಸಾಹಿತ್ಯ ಪರಿಷತ್ತಿನ ಬಹುಮುಖ್ಯ ಚಟುವಟಿಕೆಯಾಗಬೇಕಿತ್ತು. ಆದರೆ ಪರಿಷತ್ತು ಪ್ರಕಟಿಸಿರುವ ಪುಸ್ತಕಗಳ ಸಂಖ್ಯೆಯನ್ನು ಗಮನಿಸಿದಾಗ ಪರಿಷತ್ತಿನಿಂದ ಪ್ರಕಟಣಾ ವಿಷಯವಾಗಿ ಗಮನಾರ್ಹವಾದ ಕೆಲಸ ಆಗುತ್ತಿಲ್ಲ ಎನ್ನುವುದು ತಿಳಿದು ಬರುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಇದುವರೆಗೂ ಪ್ರಕಟಿಸಿದ ಪುಸ್ತಕಗಳ ಸಂಖ್ಯೆ 1500. ನೂರು ವರ್ಷಗಳ ಇತಿಹಾಸವಿರುವ ಪರಿಷತ್ತು ವರ್ಷಕ್ಕೆ ಸರಾಸರಿ 15 ಪುಸ್ತಕಗಳನ್ನು ಪ್ರಕಟಿಸಿದೆ. ನವಕರ್ನಾಟಕ,ರಾಷ್ಟ್ರೋತ್ಥಾನ,ಲೋಹಿಯಾ ಪ್ರಕಾಶನ, ಸಪ್ನಾ, ಶ್ರೀ ಸಿದ್ಧಲಿಂಗೇಶ್ವರ ಇತ್ಯಾದಿ ಪ್ರಕಾಶನ ಸಂಸ್ಥೆಗಳು ಪ್ರತಿವರ್ಷ ನೂರಾರು ಪುಸ್ತಕಗಳನ್ನು ಪ್ರಕಟಿಸುತ್ತಿರುವಾಗ ಸರ್ಕಾರಿ ಅನುದಾನದ ಸಂಸ್ಥೆಯೊಂದು ಹೀಗೆ ಕನ್ನಡ ಪುಸ್ತಕಗಳ ಪ್ರಕಟಣೆಯಲ್ಲಿ ನಿರಾಸಕ್ತಿ ತೋರುತ್ತಿರುವುದು ಕನ್ನಡಿಗರು ಯೋಚಿಸಬೇಕಾದ ಸಂಗತಿ. ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕಗಳ ಪ್ರಕಟಣೆಯಲ್ಲಿ ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳ ಶಿಫಾರಸ್ಸು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಬಹುತೇಕ ಲೇಖಕರಿಗೆ ವಸೂಲಿ ಬಾಜಿ ಮೂಲಕ ಪರಿಷತ್ತಿನಿಂದ ಪುಸ್ತಕಗಳ ಪ್ರಕಟಣೆಯ ಭಾಗ್ಯ ಸಿಗುತ್ತಿದೆ. ಈ ವಿಷಯದಲ್ಲಿ ಲೇಖಕರು ಜಾತಿ, ಸಮುದಾಯ ಮತ್ತು ಪ್ರಾದೇಶಿಕತೆಯ ಕೋಟಾದಡಿ ಫಲಾನುಭವಿಗಳಾಗುತ್ತಿರುವುದು ದುರಂತದ ಸಂಗತಿ. ಪರಿಷತ್ತು ಕಳೆದ ಹಲವು ದಶಕಗಳಿಂದ ‘ಕನ್ನಡ ನುಡಿ’ ಎನ್ನುವ ಮಾಸಿಕ ಪತ್ರಿಕೆಯನ್ನು ಪ್ರಕಟಿಸುತ್ತಿದ್ದು ಅದು ನೆಪ ಮಾತ್ರಕ್ಕೆ ಎನ್ನುವಂತೆ ಪ್ರಕಟವಾಗುತ್ತಿದೆ. ಅದರಲ್ಲೂ ಕೆಲವೇ ಕೆಲವು ಲೇಖಕರು ಈ ಪತ್ರಿಕೆಗೆ ಬರೆಯುವ ಗುತ್ತಿಗೆ ತೆಗೆದುಕೊಂಡಂತೆ ಸರಣಿಯಲ್ಲಿ ಲೇಖನಗಳನ್ನು ಬರೆಯುತ್ತಿರುವರು. ಕೆಲವೇ ಪುಟಗಳಲ್ಲಿ ಪ್ರಕಟವಾಗುತ್ತಿರುವ ಪರಿಷತ್ತಿನ ಪತ್ರಿಕೆ ಸುಧಾ, ತರಂಗ, ಕರ್ಮವೀರ ಪತ್ರಿಕೆಗಳ ಗುಣಮಟ್ಟವನ್ನು ಮುಟ್ಟಲಾರದು. ಇನ್ನೊಂದು ಕಳವಳದ ಸಂಗತಿ ಎಂದರೆ ಈ ಮೊದಲು ಪ್ರತಿತಿಂಗಳು ಪ್ರಕಟವಾಗುತ್ತಿದ್ದ ‘ಕನ್ನಡ ನುಡಿ’ ಪತ್ರಿಕೆಯನ್ನು ಈಗ ಕೆಲವು ತಿಂಗಳುಗಳಿಂದ ತ್ರೈಮಾಸಿಕವಾಗಿ ಪ್ರಕಟಿಸಲಾಗುತ್ತಿದೆ. ಇದು ಪರಿಷತ್ತಿನ ಆರ್ಥಿಕ ದಾರಿದ್ರ್ಯವೋ ಅಥವಾ ವೈಚಾರಿಕ ದಾರಿದ್ರ್ಯವೋ ಎನ್ನುವುದು ಕನ್ನಡಿಗರಿಗೆ ಅರ್ಥವಾಗುತ್ತಿಲ್ಲ.

ಕನ್ನಡ ಸಾಹಿತ್ಯ ಪರಿಷತ್ತಿನ ಇನ್ನೊಂದು ಗಮನಾರ್ಹವಾದ ವಿಫಲತೆ ಎಂದರೆ ಅದು ನಾಡು ನುಡಿಯ ರಕ್ಷಣೆ ವಿಷಯವಾಗಿ ಪರಿಷತ್ತು ತಳೆದ ದಿವ್ಯ ಮೌನ ಮತ್ತು ನಿರ್ಲಕ್ಷ್ಯ. ಕನ್ನಡ ಭಾಷೆಯ ರಕ್ಷಣೆಗಾಗಿ ಈ ನೆಲದಲ್ಲಿ ಅನೇಕ ಚಳವಳಿಗಳನ್ನು ಸಂಘಟಿಸಿ ಯಶಸ್ವಿಯಾದ ಉದಾಹರಣೆಗಳಿವೆ. ಆದರೆ ಕನ್ನಡ ಸಾಹಿತ್ಯ ಪರಿಷತ್ತು ಯಾವತ್ತೂ ಮುಂಚೂಣಿಯಲ್ಲಿ ನಿಂತು ಚಳುವಳಿಗಳನ್ನು ಸಂಘಟಿಸಿದ ಉದಾಹರಣೆಯೇ ಇಲ್ಲ. ಗೋಕಾಕ ಚಳವಳಿಯ ಸಂದರ್ಭದಲ್ಲಿ ನಾಡಿನ ಸಮಸ್ತ ಜನತೆ ಚಳವಳಿಗೆ ಧುಮುಕಿದಾಗ ಕನ್ನಡ ಸಾಹಿತ್ಯ ಪರಿಷತ್ತು ತಟಸ್ಥ ನೀತಿಯನ್ನು ಅನುಸರಿಸಿತು. ಅದು ಕಾವೇರಿ ನೀರಿನ ವಿಷಯವಾಗಿರಬಹುದು, ಅನ್ಯಭಾಷಾ ಸಿನಿಮಾಗಳ ಪ್ರದರ್ಶನದ ವಿರುದ್ಧದ ಚಳವಳಿಯಾಗಿರಬಹುದು, ಡಬ್ಬಿಂಗ್ ವಿರೋಧಿ ನಿಲುವಾಗಿರಬಹುದು, ಮರಾಠಿಗರ ಕುತಂತ್ರದ ವಿರುದ್ಧದ ಹೋರಾಟವಾಗಿರಬಹುದು ಈ ಎಲ್ಲ ಸಂದರ್ಭಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮೌನದ ಮೊರೆಹೊಕ್ಕು ಹೋರಾಟಗಳಿಂದ ದೂರವೇ ಉಳಿದಿದೆ.  ಒಂದು ರಕ್ಷಣಾ ವೇದಿಕೆ ಮತ್ತು ಒಬ್ಬ ವಾಟಾಳ್ ನಾಗರಾಜಗೆ ಕನ್ನಡದ ನೆಲ ಮತ್ತು ನುಡಿಯ ಬಗ್ಗೆ ಇರುವಷ್ಟು ಬದ್ದತೆ ಪರಿಷತ್ತಿಗೆ ಇಲ್ಲದಿರುವುದು ಅತ್ಯಂತ ನಾಚಿಕೆಯ ಸಂಗತಿ. ವಿಪರ್ಯಾಸವೆಂದರೆ ಕೆಲವು ವರ್ಷಗಳ ಹಿಂದೆ ಸರ್ಕಾರಿ ಇಂಗ್ಲಿಷ್ ಶಾಲೆಗಳು ಪ್ರಾರಂಭವಾಗಬಾರದೆಂದು ಹೋರಾಟ ಮಾಡಿದ ಪರಿಷತ್ತಿನ ಪದಾಧಿಕಾರಿಗಳ ಮಕ್ಕಳು ಮತ್ತು ಮೊಮ್ಮಕ್ಕಳು ಓದುತ್ತಿರುವುದು ಇಂಗ್ಲಿಷ್ ಮಾಧ್ಯಮದ ದುಬಾರಿ ಖಾಸಗಿ ಕಾನ್ವೆಂಟ್ ಶಾಲೆಗಳಲ್ಲಿ. ಸರ್ಕಾರದ ಕೃಪಾಕಟಾಕ್ಷದಲ್ಲಿದ್ದೇನೆ ಎನ್ನುವ ಭಾವನೆಯೇ ಕನ್ನಡ ಸಾಹಿತ್ಯ ಪರಿಷತ್ತು ಚಳವಳಿಗಳು ಮತ್ತು ಹೋರಾಟಗಳಿಂದ ವಿಮುಖವಾಗಿರುವುದಕ್ಕೆ ಕಾರಣವಾಗಿರಬಹುದು. ಅದಕ್ಕೆಂದೇ ಪ್ರತಿವರ್ಷ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ನಮ್ಮ ಪರಿಷತ್ತಿನ ಪದಾಧಿಕಾರಿಗಳು ಶಾಸಕರು ಹಾಗೂ ಮಂತ್ರಿಗಳಿಗೆ ಮಣೆಹಾಕುವುದು ಸಂಪ್ರದಾಯದಂತೆ ನಡೆದುಕೊಂಡು ಬರುತ್ತಿದೆ.

ಇನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರ ಸಂಖ್ಯೆ ಗಮನಾರ್ಹವಾಗಿ ಬೆಳೆದಿಲ್ಲ. ಈ ವಿಷಯವಾಗಿ ನಾವು ಮತ್ತೆ ದೂಷಿಸುವುದು ಕಸಾಪವನ್ನೇ. ಏಕೆಂದರೆ ಪರಿಷತ್ತು ಚುನಾವಣಾ ಸಂದರ್ಭವನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಸದಸ್ಯತ್ವದ ನೊಂದಣಿ ವಿಷಯದಲ್ಲಿ ದಿವ್ಯ ನಿರ್ಲಿಪ್ತತೆಯನ್ನು ತಳೆಯುತ್ತ ಬಂದಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ನನ್ನದೇ ಅನುಭವದ ಕುರಿತು ಹೇಳುವುದಾದರೆ ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯನಾದದ್ದು ಹೀಗೆ ಚುನಾವಣೆ ಸಮೀಸುತ್ತಿರುವ ಘಳಿಗೆಯಲ್ಲಿ. ವಯಸ್ಸಾದ ಹಿರಿಯರೊಬ್ಬರು ನನ್ನನ್ನು ಸಂಪರ್ಕಿಸಿ ಆ ವರ್ಷ ಚುನಾವಣೆಗೆ ಸ್ಪರ್ಧಿಸುತ್ತಿರುವ ವ್ಯಕ್ತಿಯ ಕುರಿತಾಗಿ ಒಂದಿಷ್ಟು ಮಾತನಾಡಿ ತಮ್ಮ ಕೈಚೀಲದಲ್ಲಿರುವ ಅರ್ಜಿಯನ್ನು ನನಗೆ ಹಸ್ತಾಂತರಿಸಿದರು. ಅಚ್ಚರಿಯ ಸಂಗತಿ ಎಂದರೆ ಚುನಾವಣೆ ಸಂದರ್ಭದಲ್ಲಿ ಸ್ಪರ್ಧಿಸುತ್ತಿರುವ ವ್ಯಕ್ತಿಗಳೇ ಸದಸ್ಯತ್ವದ ಶುಲ್ಕವನ್ನು ಭರಿಸುವ ಪರಿಪಾಠವಿದೆ. ಹೀಗೆ ತಮ್ಮದೇ ಒಂದು ಮತಬ್ಯಾಂಕ್‍ನ್ನು ಸೃಷ್ಟಿಸಿಕೊಳ್ಳುವ ಇರಾದೆಯಿಂದ ಸದಸ್ಯತ್ವದ ಅಭಿಯಾನಕ್ಕೆ ಮುತುವರ್ಜಿವಹಿಸುವ ನಮ್ಮ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಸಾಹಿತಿಗಳು ಚುನಾವಣೆಯ ನಂತರ ನಿಷ್ಕ್ರಿಯರಾಗುತ್ತಾರೆ. ಇಲ್ಲಿ ಸದಸ್ಯತ್ವದ ಸಂಖ್ಯೆಯನ್ನು ಹೆಚ್ಚಿಸಿ ಕನ್ನಡ ಸಾಹಿತ್ಯ ಪರಿಷತ್ತನ್ನು ಬಲಪಡಿಸಬೇಕೆನ್ನುವ ಕಾಳಜಿಗಿಂತಲೂ ವೈಯಕ್ತಿಕ ಹಿತಾಸಕ್ತಿ ಬಹುಮುಖ್ಯವಾಗುತ್ತಿದೆ. ಇದೇ ಕಾರಣದಿಂದ ಏಳು ಕೋಟಿ ಕನ್ನಡಿಗರಿದ್ದೂ ಪರಿಷತ್ತಿನ ಸದಸ್ಯರ ಸಂಖ್ಯೆ ಒಂದೂವರೆ ಲಕ್ಷವನ್ನೂ ಮೀರಿಲ್ಲ.

ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಎಲ್ಲ ವರ್ಗದ ಮತ್ತು ಸಮುದಾಯದ ಸಾಹಿತ್ಯಿಕ ಆಶಯವನ್ನು ಪೂರೈಸುವ ಹಾಗೂ ಎಲ್ಲ ಸಮುದಾಯಗಳ ಬರಹಗಾರರ ಧ್ವನಿಗೆ ವೇದಿಕೆಯಾಗುವ ಅವಕಾಶವನ್ನು ಅತ್ಯಂತ ಪ್ರಜ್ಞಾಪೂರ್ವಕವಾಗಿ ನಿರಾಕರಿಸುತ್ತ ಬಂದಿದೆ ಎನ್ನುವ ಮಾತುಗಳು ಅನೇಕ ಸಂದರ್ಭಗಳಲ್ಲಿ ಕೇಳಿ ಬಂದಿವೆ. ಇದಕ್ಕೆ ಬಹುಮುಖ್ಯ ಕಾರಣ ಪರಿಷತ್ತಿನ ಪದಾಧಿಕಾರಿಗಳ ಸಂಕುಚಿತ ಮನಸ್ಸು ಮತ್ತು ಪೂರ್ವಾಗ್ರಹಪೀಡಿತ ಮನೋಭಾವ. ಸಾಮಾನ್ಯವಾಗಿ ಪರಿಷತ್ತಿನ ಪ್ರಕಟಣೆಯಲ್ಲಿ ಆಯಾ ಕಾಲದ ಪದಾಧಿಕಾರಿಗಳ ಜಾತಿ ಮತ್ತು ಸಮುದಾಯ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ತಮ್ಮದೇ ಜಾತಿ ಮತ್ತು ಸಮುದಾಯದ ಬರಹಗಾರರಿಗೆ ಈ ಪದಾಧಿಕಾರಿಗಳು ಮನ್ನಣೆ ನೀಡುವುದು ಹಾಗೂ ಪುಸ್ತಕ ಪ್ರಕಟಣೆಯಲ್ಲಿ ಆದ್ಯತೆ ನೀಡುವುದರಿಂದ ಎಲ್ಲ ವರ್ಗದ ಬರಹಗಾರರ ಆಶಯವನ್ನು ಪರಿಷತ್ತು ಪೂರೈಸುತ್ತಿಲ್ಲ. ಜೊತೆಗೆ ಪ್ರತಿವರ್ಷ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸಿದಾಗ ಅದಕ್ಕೆ ಪರ್ಯಾಯವಾಗಿ ದಲಿತ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುವುದು ಅದೊಂದು ಸಂಪ್ರದಾಯದಂತೆ ನಡೆದುಕೊಂಡು ಬರುತ್ತಿದೆ. ಪ್ರತಿವರ್ಷದ ಸಾಹಿತ್ಯ ಸಮ್ಮೇಳನದಲ್ಲಿ ದಲಿತ ಸಾಹಿತ್ಯಕ್ಕೆ ವೇದಿಕೆ ನೀಡದಿರುವುದೇ ಇದಕ್ಕೆ ಕಾರಣ ಎನ್ನುವ ಆರೋಪ ಕೇಳಿಬರುತ್ತಿದೆ. ದಲಿತ ಸಾಹಿತ್ಯ ಕನ್ನಡ ಸಾಹಿತ್ಯ ಪರಂಪರೆಯ ಬಹುಮುಖ್ಯ ಕಾಲಘಟ್ಟಗಳಲ್ಲೊಂದು. ದಲಿತ ಸಾಹಿತ್ಯವನ್ನು ಹೊರಗಿಟ್ಟು ಕನ್ನಡ ಸಾಹಿತ್ಯವನ್ನು ನೋಡುವುದು ಅಪೂರ್ಣ ಎಂದೇನಿಸುತ್ತದೆ. ಶರಣರ ಮತ್ತು ಸಂತರ ಸಾಹಿತ್ಯಕ್ಕೆ ವೇದಿಕೆ ಒದಗಿಸುವ ಪರಿಷತ್ತು ದಲಿತ ಸಾಹಿತ್ಯ ವಿಚಾರವಾಗಿ ದಿವ್ಯ ಮೌನ ತಳೆದಿರುವುದು ಇಡೀ ಕನ್ನಡ ಸಾಹಿತ್ಯಕ್ಕೆ ಮಾಡುತ್ತಿರುವ ಘೋರ ಅಪಚಾರ. ವರ್ಗ ಮತ್ತು ಸಮುದಾಯದ ವಿಚಾರವಾಗಿ ಪರಿಷತ್ತಿನ ಧೋರಣೆಗಳು ಬದಲಾಗಬೇಕಿದೆ.

ಕೊನೆಯ ಮಾತು :
ಕನ್ನಡ ಸಾಹಿತ್ಯ ಪರಿಷತ್ತು ಇವತ್ತು ರಾಜಕೀಯದ ಅಖಾಡವಾಗಿ ರೂಪಾಂತರಗೊಂಡಿದೆ ಎನ್ನುವುದಕ್ಕೆ 81 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಹಾವೇರಿಯಿಂದ ಶ್ರವಣಬೆಳಗೋಳಕ್ಕೆ ಸ್ಥಳಾಂತರಗೊಂಡಿದ್ದು ಒಂದು ನಿದರ್ಶನ. ಇದಕ್ಕೆಲ್ಲ ಕಾರಣ ನಮ್ಮ ಸಾಹಿತಿಗಳ ಮತ್ತು ಪರಿಷತ್ತಿನ ಪದಾಧಿಕಾರಿಗಳ ಸ್ವಾರ್ಥ ಮತ್ತು ಅವಕಾಶವಾದಿತನ. ಕನ್ನಡ ಸಾಹಿತ್ಯ ಪರಿಷತ್ತನ್ನು ನಾಡಿನ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ರಕ್ಷಿಸಿ ಬೆಳೆಸುವ ಒಂದು ಸಾಂಸ್ಕೃತಿಕ ಕೇಂದ್ರವಾಗಿಸುವುದಕ್ಕಿಂತ ಅದನ್ನು ತಮ್ಮ ತಮ್ಮ ಹಿತಾಸಕ್ತಿಗಳಿಗೆ ಅನುಕೂಲವಾಗುವಂತೆ ಬಳಸಿ ಕೊಳ್ಳುವುದರಲ್ಲೇ ಇವರಿಗೆ ಹೆಚ್ಚಿನ ಆಸಕ್ತಿ. ಜೊತೆಗೆ ಜಾತಿ ಮತ್ತು ಸಮುದಾಯಗಳು ಪರಿಷತ್ತಿನ ನಡೆಯನ್ನು ನಿರ್ಧರಿಸುತ್ತಿವೆ. ಹೀಗೆ ಅವರವರ ವೈಯಕ್ತಿಕ ಹಿತಾಸಕ್ತಿ ಹಾಗೂ ಜಾತಿ ಮತ್ತು ಸಮುದಾಯಗಳ ನಡುವೆ ಸಿಲುಕಿರುವ ನೂರುವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯ ಪರಿಷತ್ತು ಇವತ್ತು ಶಕ್ತಿಹೀನವಾಗಿದೆ. ಅದರ ಗತವೈಭವವನ್ನು ಮತ್ತೆ ಮರಳಿ ತರುವ ಹಾಗೂ ಪರಿಷತ್ತಿನ ಬೇರುಗಳನ್ನು ಗಟ್ಟಿಗೊಳಿಸುವ ಕೆಲಸ ನಾಡು ನುಡಿಯ ರಕ್ಷಣೆಯಿಂದ ಇವತ್ತಿನ ತುರ್ತು ಅಗತ್ಯವಾಗಿದೆ.

1 ಟಿಪ್ಪಣಿ Post a comment
  1. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments