ಸ್ವಾತಂತ್ರ್ಯದ ಜಾಡಿನಲ್ಲಿ ಕಾಡು ಜನರ ಹಾಡು
– ರಾಕೇಶ್ ಶೆಟ್ಟಿ
ಶಾಲಾ ದಿನಗಳಲ್ಲಿ ಜನವರಿ ೨೬ ಮತ್ತು ಆಗಸ್ಟ್ ೧೫ ಬಂದರೇ ಏನೋ ಒಂದು ರೀತಿಯ ಸಡಗರ.ಆ ಸಡಗರಕ್ಕೆ ಸಾತಂತ್ರ್ಯದ ಹಬ್ಬ ಅನ್ನುವ ಪುಟ್ಟ ಖುಷಿಯೂ ಕಾರಣವಾದರೆ,ದೊಡ್ಡ ಮಟ್ಟದಲ್ಲಿ ಕಾರಣವಾಗುತಿದಿದ್ದು “ನೃತ್ಯ,ಡ್ರಿಲ್” ಇತ್ಯಾದಿಗಳ ರಿಹರ್ಸಲ್ ನೆಪದಲ್ಲಾದರೂ ಮೇಷ್ಟ್ರುಗಳ ಪಾಠದಿಂದ ತಪ್ಪಿಸಿಕೊಳ್ಳಬಹುದಲ್ಲ ಅನ್ನುವುದು.ಆಟದ ಒಂದೇ ಒಂದು ಪಿರಿಯಡ್ ಅನ್ನೂ ಇಡದೇ ಯಾವಾಗಲೂ ಪಾಠ ಪಾಠ ಅನ್ನುತಿದ್ದ ನಮ್ಮ ಶಾಲೆಯ ಮಕ್ಕಳಿಗಂತೂ ಸ್ವಾತಂತ್ರ್ಯದ ಹಬ್ಬ ಅಕ್ಷರಶಃ ಸಾತಂತ್ರ್ಯವನ್ನೇ (ತರಗತಿಯಿಂದ ಹೊರಬರುವ) ತರುತಿತ್ತು.
ಪ್ರತಿವರ್ಷ ಜನವರಿ ೨೬ ಮತ್ತು ಆಗಸ್ಟ್ ೧೫ಕ್ಕೆ ನಮ್ಮ ಶಾಲೆಯಿಂದ ಡ್ರಿಲ್ ನಲ್ಲಿ ಭಾಗವಹಿಸುತಿದ್ದೆವು.ಆದರೆ ನಾವು ೭ನೇ ತರಗತಿಗೆ ಬಂದಾಗ (ಬಹುಷಃ ೧೯೯೬ ಇಸವಿ ಇರಬೇಕು) ಈ ಬಾರಿ ಯಾವುದಾದರೂ ನೃತ್ಯವನ್ನು ಮಾಡೋಣ ಅನ್ನುವ ನಿರ್ಧಾರ ಮಾಡಿದ್ದರು ಮೇಷ್ಟ್ರುಗಳು.’ರಾಯರು ಬಂದರು ಮಾವನ ಮನೆಗೆ’ ಚಿತ್ರದಿಂದ “ಅಡವಿ ದೇವಿಯ ಕಾಡು ಜನಗಳ ಈ ಹಾಡು” ಹಾಡನ್ನು ಆಯ್ಕೆ ಮಾಡಿದರು.
ತರಬೇತಿಯೂ ಶುರುವಾಯಿತು.ಪ್ರತಿವರ್ಷ ಡ್ರಿಲ್ ಮಾಡಿ ಸಾಕಾಗಿದ್ದ ನಮಗೆ ಇದು ಹೊಸತಾಗಿಯೇ ಕಾಣಿಸಿತು.ಅದರ ಜೊತೆಗೆ ಬೋನಸ್ ನಂತೆ ಇದರ ತರಬೇತಿಗೆಂದೇ ತುಸು ಹೆಚ್ಚೇ ಸಮಯವೂ ಸಿಗಲಾರಂಭಿಸಿತ್ತು.ಒಂದು ದಿನ ಬೆಳಗ್ಗಿನ ತರಬೇತಿಯನ್ನು ಮುಗಿಸಿಕೊಂಡು ಮಧ್ಯಾಹ್ನದ ಊಟ ಮುಗಿಸಿ ಆಟವಾಡುತಿದ್ದೆವು.ಶಾಲೆಯಲ್ಲಿದ್ದ ಪುಟ್ಟ ಹುದೋಟದಲ್ಲಿನ ಹಳದಿ ಬಣ್ಣದ (ಸೂರ್ಯಕಾಂತಿಯಂತಿರುವ)ಹೂವು ನೋಡಿದವನಿಗೆ ಕೀಳೋಣ ಅನ್ನಿಸಿತು.ಕಿತ್ತ ಮೇಲೆ ಮುಡಿದು ಕೊಳ್ಳಲು ಜಡೆಯಿಲ್ಲವಲ್ಲ! ಏನು ಮಾಡೋದು ಅನ್ನುವಾಗ ಗೆಳೆಯನ ಬೆನ್ನು ಕಾಣಿಸಿತು.ಬೆರಳುಗಳ ನಡುವೆ ಹೂವಿನ ತೊಟ್ಟನ್ನು ಇಟ್ಟುಕೊಂಡು ಹೂವನ್ನು ಗೆಳೆಯನ ಬಿಳಿ ಬಣ್ಣದ ಶರ್ಟಿಗೆ ಪಟೀರ್ ಎನ್ನುವಂತೆ ಬಡಿದೆ.ಏನಾಶ್ಚರ್ಯ! ಅವನ ಬಿಳಿ ಬಣ್ಣದ ಶರ್ಟಿನಲ್ಲಿ ಹಳದಿ ಬಣ್ಣದ ಹೂವಿನ ಫೋಟೋ ಕಾಪಿ ಮೂಡಿತ್ತು.
“ಯಾಕ್ಲಾ ವೊಡ್ದೆ” ಅಂತ ಸಿಟ್ಟಿನಲ್ಲಿ ನನ್ನ ಕಡೆಗೆ ತಿರುಗಿದ ಗೆಳೆಯನಿಗೆ “ಲೇ ಇಲ್ಲ್ ನೋಡ್ಲಾ ಹೂವಿನ್ ಚಿತ್ರ ಬಿಡಿಸಿದ್ದೀನಿ ನಿನ್ ಶರ್ಟ್ ಮೇಲೆ” ಅಂದೆ.ಬದಿಗೆ ಹೋಗಿ ಶರ್ಟ್ ನೋಡಿಕೊಂಡವನು ಚೆನ್ನಾಗೈತೆ ಅಂತ ಖುಷಿಯಾದ.ಆಮೇಲೆ ಇಬ್ಬರೂ ಶರ್ಟಿಡಿ ಹೂವಿನ ಚಿತ್ತಾರ ಮಾಡಿಕೊಂಡೆವು.ನಮ್ಮ ಬಿಳಿ ಬಣ್ಣದ ಶರ್ಟು ಈಗ ಸಿನೆಮಾ ಹಿರೋಗಳ ಬಣ್ಣ ಬಣ್ಣದ ಬಟ್ಟೆಯಂತೆ ಕಾಣುತಿತ್ತು.ನಮ್ಮಿಬ್ಬರ ಬಟ್ಟೆ ನೋಡಿದ ಉಳಿದ ಗೆಳೆಯರು “ಇದೆಂಗ್ ಮಾಡ್ಕಂಡ್ರೋ,ನಮ್ಗೂ ಹೇಳ್ರೋ ನಮ್ಗೂ ಹೇಳ್ರೋ” ಅಂತ ಕೇಳೋಕೆ ಶುರು ಮಾಡಿದ್ರು.
ಸರಿ,ಎಲ್ಲರ ಶರ್ಟಿನ ಮೇಲೂ ಹೂವು ಹಿಡಿದು ಬಡಿಯೋಕೆ ಶುರು ಮಾಡಿದೆವು.ನೋಡುತ್ತ ನೋಡುತ್ತ ನಮ್ಮ ಸೆಕ್ಷನ್ನಿನ ಅಷ್ಟೂ ಹುಡುಗರ ಬಿಳಿ ಬಣ್ಣದ ಶರ್ಟು ಹಳದಿಮಯವಾಗಿತ್ತು.ನಮ್ಮ ಮಂಗಾಟವನ್ನು ನೋಡಿದ ಯಾರೋ ಹೋಗಿ ಹೆಡ್ ಮಾಸ್ಟರ್ ಅವರ ಕಿವಿಯೂದಿದರು.ಎಲ್ಲರನ್ನೂ ಕರೆದು ಸಾಲಾಗಿ ನಿಲ್ಲಿಸಿ ಮುಖಕ್ಕೆ ಮಂಗಳಾರತಿ ಮಾಡಿದವರೇ ಸಾಲಾಗಿ ಬಂದು ಎರಡೂ ಕೈ ಮುಂದೆ ಚಾಚುವಂತೆ ಮಾಡಿ ಬೆತ್ತದ ಕೋಲಿನ ಪ್ರಸಾದವನ್ನೂ ಕೊಟ್ಟು ಕಳಿಸಿದರು.ಹೂವಿನಿಂದಾಗಿ ಬಟ್ಟೆ ಹಳದಿಯಾಗಿದ್ದರೆ,ಮೇಷ್ಟ್ರ ಬೆತ್ತದಿಂದಾಗಿ ಕೈ ಕೆಂಪಾಗಿತ್ತು.
ಈ ನಡುವೆ ನಮ್ಮ ನೃತ್ಯ ತರಬೇತಿಯೂ ಚೆನ್ನಾಗಿಯೇ ನಡೆದಿತ್ತು.ಆಗಸ್ಟ್ ೧೫ಕ್ಕೆ ೩-೪ ದಿನಗಳಿರುವಂತೆ,ನಮ್ಮ ರಿಹರ್ಸಲ್ ಅನ್ನು ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿಯೇ ನಡೆಸುವುದು ರೂಢಿ.ಅಲ್ಲಿ ಮೊದಲ ದಿನದ ರಿಹರ್ಸಲ್ ನಡೆಯಲು ಶುರುವಾಗಿತ್ತು.ನಮ್ಮದು ಕಾಡು ಜನರ ಹಾಡಾಗಿದ್ದರಿಂದ ಕುಣಿಯುವವರ ನಡುವೆ ಒಂದಿಷ್ಟು ಜನ ಗಿಡ ಮರಗಳಂತೆ ನಿಲ್ಲುವ ಮತ್ತು ಇನ್ನೊಂದಿಷ್ಟು ಜನರು ಬೇರೆ ಬೇರೆ ಪ್ರಾಣಿಗಳ ಮುಖವಾಡ ಹಾಕಿಕೊಂಡು ಅಡ್ಡಾಡುವಂತೆ ನಿರ್ದೇಶನ ಮಾಡಲಾಗಿತ್ತು.ಮೊದಲ ದಿನಕ್ಕೆ ೫-೬ ಪ್ರಾಣಿಗಳು, ೬-೭ ಮರಗಳು ಇದ್ದವು.ಎಲ್ಲಾ ಸರಿಯಾಗಿತ್ತು.ಆ ದಿನದ ರಿಹರ್ಸಲ್ ಮುಗಿದ ನಂತರ ನಾವೊಂದಿಷ್ಟು ಗೆಳೆಯರು ನಮ್ಮೊಳಗೆ ಮಾತಾಡಿ ಕೊಂಡೆವು.ಕುಣಿಯೋದಕ್ಕಿಂತ ಪ್ರಾಣಿಗಳ ಮುಖವಾಡ ಹಾಕಿಕೊಂಡು ಅಡ್ಡಾಡೋದೇ ಸುಲಭ ಅಂತ.ಮರುದಿನ ಬರುವಾಗ ಬಹಳಷ್ಟು ಜನರ ಬಳಿ ಜಾತ್ರೆಯಲ್ಲಿ ಸಿಗುವ ೫-೧೦ ರೂಪಾಯಿಯ ಹುಲಿ ಮುಖವಾಡವಿತ್ತು.ಶಾಲೆಯಿಂದ ಹೊರಡುವಾಗ ಎಲ್ಲಾ ಜೋಪಾನವಾಗಿ ಅದನ್ನು ತೆಗೆದುಕೊಂಡು ಹೋಗಿದ್ದೆವು.
ಹಾಸನದ ಕ್ರೀಡಾಂಗಣದಲ್ಲಿ ನಮ್ಮ ಎರಡನೇ ದಿನದ ರಿಹರ್ಸಲ್ ಶುರುವಾಯಿತು.ಮೊದಲ ದಿನದಂತೆ ೫-೬ ಪ್ರಾಣಿಗಳು, ೬-೭ ಮರಗಳು ಕುಣಿಯುವವರ ನಡುವೆ ಇದ್ದವು.ಅರ್ಧ ಹಾಡು ಇನ್ನೂ ಆಗಿಲ್ಲ ಆಗಲೇ ಒಬ್ಬೊಬ್ಬರೇ ಜೇಬಿನಿಂದ ಹುಲಿಯ ಮುಖವಾಡವನ್ನು ಹೊರತೆಗೆದು ಹಾಕಿಕೊಂಡು ಮಂಗಗಳಂತೆ ಅತ್ತಿಂದಿತ್ತ ಇತ್ತಿಂದತ್ತ ಓಡಾಡಲಿಕ್ಕೆ ಶುರು ಮಾಡಿದೆವು.ನೋಡುತ್ತಲೇ ಕುಣಿಯಬೇಕಿದ್ದ ಕಾಡು ಜನರೆಲ್ಲ ಮಾಯವಾಗಿ ಹುಲಿಗಳೇ ಹೆಚ್ಚಾಗಿ ಆವತ್ತಿನ ರಿಹರ್ಸಲ್ ಹಳಿ ಬಿಟ್ಟ ರೈಲಿನಂತಾಗಿತ್ತು.ರಿಹರ್ಸಲ್ ಮುಗಿಸಿ ಶಾಲೆಗೆ ವಾಪಸ್ ಆದಾಗ ಮೇಷ್ಟ್ರು ಆ ದಿನದ “ಹುಲಿ”ಗಳನ್ನೆಲ್ಲಾ ಕರೆದು ಸಾಲಾಗಿ ನಿಲ್ಲಿಸಿದರು. ನೀನೆನ್ಲಾ ಹುಲಿಯ ಮುಖವಾಡ ಹಾಕಿದ್ದೋನು ಎಂದು ವಿಚಾರಿಸಿಕೊಂಡು,ಎರಡೂ ಕೈಗಳಿಗೆ ಬೆತ್ತದ ಪ್ರಸಾದ ನೀಡಿ ತೆಪ್ಪಗೆ “ಕಾಡು ಜನಂತೆ ಕುಣಿಯಿರಿ” ಅಂದರು.
ನಮ್ಮೆಲ್ಲ ಮಂಗಾಟಗಳ ನಡುವೆಯೂ ನಾವು ಬಹಳ ಚೆನ್ನಾಗಿಯೇ ಕುಣಿಯುತಿದ್ದೆವು.ಅದಕ್ಕೆ ತಕ್ಕಂತೆ ದೇವಿಯ ದೊಡ್ಡ ವಿಗ್ರಹವೂ ತಯಾರಾಗಿತ್ತು.ಎಲ್ಲರಿಗೂ ಆಗಸ್ಟ್ ೧೪ರಂದು ಅವರವರ ಪಾಲಿನ ಸೊಪ್ಪುಗಳನ್ನು (ಕಾಡುಜನರ ಕಾಸ್ಟ್ಯೂಮ್) ತರಲಿಕ್ಕೆ ಹೇಳಿದ್ದರು.ನಾನು ಅಣ್ಣನ ಜೊತೆ ಹೋಗಿ ಅಟ್ಲಾಸ್ ಸೈಕಲ್ಲಿನಲ್ಲಿ ದಂಡಿಯಾಗಿಯೇ ಸೊಪ್ಪು ತೆಗೆದುಕೊಂಡು ಬಂದಿದ್ದೆ.ಮರುದಿನ ಬೆಳಿಗ್ಗೆ ೪ ಘಂಟೆಗೆಲ್ಲ ಶಾಲೆ ತಲುಪಿಕೊಂಡವರೇ ತಯಾರಾಗಲು ಶುರುವಾದೆವು.ಒಳ ಉಡುಪೊಂದು ಬಿಟ್ಟರೆ ಮೈ ತುಂಬಾ ಬರಿ ಸೊಪ್ಪೇ ತುಂಬಿತ್ತು.ಎಲ್ಲಾ ತಯಾರಿ ಮುಗಿದ ಮೇಲೆ ನಮ್ಮ ಕಪಿ ಸೈನ್ಯಕ್ಕೆ ಸಹಜವಾಗಿಯೇ ಒಂದು ಪ್ರಶ್ನೆ ಮೂಡಿತ್ತು.”ಅಲ್ಲಾ ಕಣ್ಲಾ,ಡ್ಯಾನ್ಸ್ ಮುಗಿದ್ಮೇಲೆ ವಾಪಸ್ ಹೆಂಗ್ಲಾ ಬರೋದು?”
ತಟ್ಟನೇ ಒಂದು ಐಡಿಯಾ ಮಾಡಿ ಸೊಂಟಕ್ಕೆ ಶರ್ಟ್ ಸುತ್ತಿಕೊಂಡು ಕಾಣದಂತೆ,ಅದರ ಮೇಲೆ ಸೊಪ್ಪು ಸುತ್ತಿಕೊಳ್ಳುವ ಬಗ್ಗೆ ಸರ್ವ ಸಮ್ಮಥದ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.ಯಾವಾಗಲೂ ನಮ್ಮ ಗುಂಪಿನ ಮೇಲೆ ವಿಶೇಷ ಗಮನ ಕೊಡುತಿದ್ದ ರಂಗಪ್ಪ ಮೇಷ್ಟ್ರು ಎಲ್ಲರ ಕಾಸ್ಟ್ಯೂಮ್ ಅನ್ನು ನೋಡಿಕೊಂಡು ಬರುವಾಗಲೇ,ಏನೋ ಕಾದಿದೆ ಅನ್ನುವ ಅನುಮಾನವಾಯಿತು.ನನ್ನ ಬಳಿ ಬಂದರು.ನಾನು ಒಳಗೆ ಜೀನ್ಸ್ ಚಡ್ಡಿ ಹಾಕಿದ್ದೆ.ಅದರ ಜೇಬು ತುಸು ದೊಡ್ಡದೇ ಇದ್ದಿದ್ದರಿಂದ ಶರ್ಟನ್ನು ಸೊಂಟಕ್ಕೆ ಸುತ್ತಿಕೊಳ್ಳದೇ ಅದರೊಳಗೆ ತುರುಕಿದ್ದೆ.ಎಲ್ಲರನ್ನೂ ಪರಿಕ್ಷೀಸುತ್ತಾ ಹತ್ತಿರ ಬಂದ ರಂಗಪ್ಪ ಮೇಷ್ಟ್ರು, ‘ಇದೇನ್ಲಾ ಊದ್ಕಂಡೈತೆ ಒಂದ್ ಕಡೆ’ ಅಂದ್ರು.’ಅದು, ಸಾ ಸಾ’ ಅನ್ನುವಾಗ ತೆಗಿ ತೆಗಿ ಅಂದ್ರು.ತೆಗೆದು ಶರ್ಟ್ ತೋರಿಸಿದೆ.ತಲೆ ಮೇಲೋಂದು ಮೊಟಕಿ.’ಇನ್ನು ಯಾರ್ ಯಾರ್ ಹಿಂಗ್ ಇಟ್ಕಂಡಿದ್ದೀರಿ ತೆಗೆದು ಬಿಸಾಕ್ರಲ್ಲ ಒದೆ ತಿನ್ನಕ್ಕೂ ಮೊದ್ಲು’ ಅಂದ್ರು.ನಾವೆಲ್ಲ ಮೇಷ್ಟ್ರಿಗೊಂದಿಷ್ಟು ಬಯ್ಕೊಂಡು ಕ್ರೀಡಾಂಗಣಕ್ಕೆ ಹೋದೆವು.
ಅಂದುಕೊಂಡದ್ದಕ್ಕಿಂತ ಬಹಳ ಚೆನ್ನಾಗಿಯೇ ನೃತ್ಯ ಮೂಡಿಬಂತು.ಎಲ್ಲರ ಮೆಚ್ಚುಗೆಗಳಿಸಿ ಮೊದಲ ಸ್ಥಾನವನ್ನು ನಮ್ಮ ಶಾಲೆ ಪಡೆಯಿತು.ನೃತ್ಯವನ್ನು ಮುಗಿಸಿ, ಕಾಡುಜನರ ಕಾಸ್ಟ್ಯೂಮನ್ನು ಕಿತ್ತು ಬಿಸಾಕಿ,ವಿದ್ಯಾರ್ಥಿಗಳಿಗೆ ಫ್ರೀಯಾಗಿ ಸಿಗುತಿದ್ದ ನಂದಿನಿ ಪೇಡಾವನ್ನು ಚಪ್ಪರಿಸಿದ ಮೇಲೆ,”ಲೋ ಈಗ ಹೆಂಗ್ಲಾ ವಾಪಸ್ ಸ್ಕೂಲಿಗ್ ಹೋಗೊದು” ಅನ್ನೋ ಪ್ರಶ್ನೆ ಕಾಡಲಾರಂಭಿಸಿತು.
ಬೇರೆ ದಾರಿ ಆದ್ರೂ ಯಾವುದಿತ್ತು.೫-೬ ಜನರ ಗುಂಪು ಮಾಡಿಕೊಂಡು ಚಡ್ಡಿಯಲ್ಲೇ ಕ್ರೀಡಾಂಗಣದಿಂದ ನಮ್ಮ ಶಾಲೆಯವರೆಗೂ “ಯಾರೇ ಕೂಗಾಡಲಿ” ಅಂತ ರಾಜಾರೋಷವಾಗಿ ನಡೆದು ಹೋಗುತ್ತಲಿದ್ದೆವು.ನಮ್ಮ ವೇಷ ನೋಡಿದ ಆಟೋ ಡ್ರೈವರಣ್ಣ ಒಬ್ಬ,ಬರ್ರೋ ಅಂತ ಕರೆದು ಶಾಲೆವರೆಗೂ ಬಿಟ್ಟಿದ್ದ ಪುಣ್ಯಾತ್ಮ.
ಈಗ ಆಗಸ್ಟ್ ೧೫ ಬಂದರೆ ತರಗತಿ ಮಿಸ್ ಆಗುವ ಸಂಭ್ರಮವಂತೂ ನನ್ನ ಪಾಲಿಗಿಲ್ಲ.ಆದರೆ ಆ ದಿನ ಮಕ್ಕಳೆಲ್ಲ ಖುಷಿಯಿಂದ ಹೋಗುವುದು ನೋಡಿದಾಗಲೆಲ್ಲ ನನ್ನ ಮನಸ್ಸೂ ಸ್ವಾತಂತ್ರ್ಯದ ಜಾಡಿನಲ್ಲಿ ನಾವು ಹಾಡಿದ್ದ ಕಾಡು ಜನರ ಹಾಡನ್ನು ಮತ್ತೆ ಮತ್ತೆ ನೆನಪಿಸುತ್ತದೆ.
(೨೦೧೪ರ ಅಕ್ಕ ಸಮ್ಮೇಳನದಲ್ಲಿ ಬಿಡುಗಡೆಯಾದ ’ಹರಟೆ ಕಟ್ಟೆ’ ಪುಸ್ತಕದಲ್ಲಿ ಪ್ರಕಟಿತ)
ಚಿತ್ರಕೃಪೆ : http://www.graphicsfactory.com
ನಿಮ್ಮ ಅನುಭವಗಳು ಎಲ್ಲಾ ಸಂತೋಷಮಯ. ನಿಮಗೆ ಶಾಲೆಯಲ್ಲಿ ಯಾರೂ ಅವಾಚ್ಯ ಬೈಗುಳ ಕೊಟ್ಟ ಹಾಗಿಲ್ಲ. ನೀವು ನೋಟ್ಬುಕ್ ನಲ್ಲಿ ಬರ್ಕೊಂಡು ಅಭ್ಯಾಸ ಮಾಡಿದ್ಹಾಗಿಲ್ಲ. ಜೀವಂತಿಕೆ ಕುಂಡದಲ್ಲಿ ಬೆಳೆದ ಹೂವಿನ ಸಸಿ ಅಲ್ಲ ಬಿಡಿ.
ಬರೀ ಶಿಸ್ತು, ಡ್ಯನ್ಸು ಇದ್ದ ಅದು ಜೀವಪರ ಶಾಲೆ ಅಲ್ಲವೇ ಅಲ್ಲ.
+100
ಉತ್ತಮ ಲೇಖನ