ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 16, 2015

1

ಲಿಫ್ಟ್ ಎಂಬ ಮಾಯಾ ಪೆಟ್ಟಿಗೆ

‍ನಿಲುಮೆ ಮೂಲಕ

– ನಾಗೇಶ್ ಕುಮಾರ್ ಸಿ ಎಸ್,ಚೆನ್ನೈ

ಲಿಫ್ಟ್ನಮ್ಮ ಇಂದಿನ ನಾಗರೀಕತೆಯ ಕುರುಹಾಗಿ ಎಲ್ಲೆಲ್ಲೂ ಕಾಂಕ್ರೀಟ್ ಜಂಗಲ್ ಎಂಬ ತೆಗಳಿಕೆಗೆ ಗುರಿಯಾದ ಬಹು ಅಂತಸ್ತಿನ ಕಟ್ಟಡಗಳೊಂದಿಗೇ ಅವಶ್ಯಕವಾಗಿ ಒದಗಿಬಂದ ಸೌಕರ್ಯ: ಲಿಫ್ಟ್ ಅಥವಾ ಎಲಿವೇಟರ್ ಎಂಬ ಏರುವ, ಇಳಿಯುವ ಏಣಿ…ಮಿಂಚಿನ ವೇಗದಲ್ಲಿ ಹಿತವಾಗಿ ಸುಯ್ಯೆಂದು ನಮಗೆ ಹಲವು ಮಹಡಿಗಳನ್ನು ಶ್ರಮವಿಲ್ಲದೇ ಏರಿಸಿ ಇಳಿಸಿಬಲ್ಲ ಈ ಉಪಯುಕ್ತ ಸಾಧನ ಯಾರಿಗೆ ಬೇಡ?

ಬ್ರಿಟಿಷ್ ಇಂಗ್ಲೀಶಿನಲ್ಲಿ “ಲಿಫ್ಟ್” ಎಂದೂ, ಅಮೆರಿಕನ್ ಪರಿಭಾಷೆಯಲ್ಲಿ “ಎಲಿವೇಟರ್” ಎಂದೂ ಕರೆಯಲ್ಪಡುವ ಈ ಹಾರುವ ಪೆಟ್ಟಿಗೆಗೆ ಒಂದು ಅಂತಸ್ತಿನಿಂದ ಇನ್ನೊಂದಕ್ಕೆ ಕೇವಲ ಸಾಮಾನು ಸರಂಜಾಮು ಸಾಗಿಸಲು ಮಾತ್ರ ಬಳಸಿದರೆ “ ಡಂಬ್ ವೇಯ್ಟರ್”( ಮೂಕ ಮಾಣಿ?) ಎಂದೂ  ಹೆಸರಿಸಿದ್ದಾರೆ.

“ನಿಮ್ಮ ಆರೋಗ್ಯಕ್ಕೆ ಒಳ್ಳೆಯದು, ಮೆಟ್ಟಿಲೇರಿ..” ಎಂದು ನಿಮ್ಮ ವೈದ್ಯರು ಎಷ್ಟೇ ಬೋಧಿಸಿದರೂ. ಅದನ್ನು ಮನೆಯಲ್ಲೆ ಮರೆತು,, ಆ ಸಾಲು ಸಾಲು ಲಿಫ್ಟ್‌ಗಳನ್ನು ಬಹು ಅಂತಸ್ತಿನ ಕಚೇರಿಗಳಲ್ಲಿ ಕಂಡ ಒಡನೆಯೇ ಬಟನ್ ಪ್ರೆಸ್ ಮಾಡಿ ಅದರ ಸಂಖ್ಯೆಯನ್ನು ಕಾತರದಿಂದ ಶಬರಿಯಂತೆ ಕಾಯುತ್ತ ನಿಲ್ಲುವ ಪೀಳಿಗೆ ನಮ್ಮದು…

ಈಗೀಗಂತೂ ಬಹು ರಾಷ್ಟೀಯ ಸಂಸ್ಥೆಗಳಿರುವ ಐಟಿ ಪಾರ್ಕಿನ ಬಹುಮಹಡಿ ಕಟ್ಟಡಗಳಲ್ಲಿ ಕೆಲವು ನಿರ್ದಿಷ್ಟ ಅಂತಸ್ತುಗಳಿಗೆ ಮಾತ್ರವೆ ಸೀಮಿತವಿರುವ, ತಡೆರಹಿತ ಲಿಫ್ಟ್ಸ್‌ಗಳೂ ಇವೆ..ನಮ್ಮ ರಾಜ್ಯ ಸಾರಿಗೆ ಬಸ್ ಸಂಸ್ಥೆಯ ಶಟಲ್ ಬಸ್, ನಾನ್ ಸ್ಟಾಪ್ ತರಹದ ಸೇವೆಗಳನ್ನು ನೆನಪಿಗೆ ತರುವಂತೆ!…ಇದೂ ಪೀಕ್ ಅವರ್ ರಶ್ ತಡೆಯುವ ಕ್ರಮವಂತೆ…ನಾನಂತೂ ಹತ್ತಿರದ ಅಂತಸ್ತಿಗೆ ಹೋಗುವ ಲಿಫ್ಟ್ ಸಿಕ್ಕರೂ ತಕ್ಷಣ ಹತ್ತಿಬಿಡುತ್ತೇನೆ,,ವೈದ್ಯರ ಮಾತಿಗೆ ಕಿಂಚಿತ್ತಾದರೂ ಬೆಲೆ ಕೊಡುವಂತೆ!..

ಇನ್ನೂ ಕೆಲವರಿದ್ದಾರೆ… ಬಹಳ ಹೆಚ್ಚು ರಶ್ ಇದ್ದು ಆ ಲಿಫ್ಟ್ ಸದ್ಯಕ್ಕೆ ಖಾಲಿ ಸಿಕ್ಕುವುದು ದುಸ್ತರವೆಂದು ಗೊತ್ತಾಗಿಬಿಟ್ಟಿತೆಂದರೆ, ತಾವೂ ಮೇಲೇರಬೇಕಿದ್ದರೂ, ಕೆಳಗೆ ಹೋಗುವ ಲಿಫ್ಟಿನಲ್ಲಿಯೇ ನುಗ್ಗಿ,ಮುಂಗಡ ಬುಕಿಂಗ್ ಮಾಡಿದವರಂತೆ, ಜಂಬದ ನಗೆ ನಗುತ್ತ ಮತ್ತೆ ಆರಾಮವಾಗಿ ಮೇಲೇರಿ ಬರುವಂತಾ ಭೂಪರಾಗಿದ್ದಾರೆ…ಇದೆಲ್ಲಾ ಇವರಿಗೆ ನಗರದ ಸಿಟಿ ಬಸ್ ಮತ್ತು ಲೋಕಲ್ ಟ್ರೈನ್ಸ್ ಕಲಿಸಿದ ಅನುಭವದ ಪಾಠವೇ ಇರಬೇಕು..

ಇನ್ನು ಒಮ್ಮೆ ಲಿಫ್ಟಿನ ಬಾಗಿಲು ಮುಚ್ಚಿಕೊಂಡ ನಂತರ ಆ ಪೆಟ್ಟಿಗೆಯ ಜಾಲಕ್ಕೆ ಸಿಕ್ಕಿಬಿದ್ದ ಅಪರಿಚಿತರೆಲ್ಲಾ  ತಂತಮ್ಮ ಮಹಡಿಯ ಬಟನ್ ಒತ್ತಿ, ಬತ್ತಿ ಬೆಳಗಿಸಿಬಿಟ್ಟರೆಂದರೆ ಮುಗಿಯಿತು.. ಶಾಂತವಾಗಿ ಮಾತಿಲ್ಲದೇ ( ಡಮ್ಭ್ ವೇಯ್ಟರ್ಸ್ ತರಹ!) ಕಣ್ಮುಚ್ಚಿ ನಿಂತು, ಅದ್ಯಾವುದೋ ಚಡಪಡಿಕೆಯಿಂದ ತಮ್ಮ ಗುರಿ ಮುಟ್ಟುವವರೆಗೂ ಕಾಲ ಹಾಕುವುದು ಸಾಮಾನ್ಯ ದೃಶ್ಯ.., ನೀವೇ ಈ ಅಸಹನೀಯ ಮೌನಕ್ಕೆ ಕಾರಣ ಊಹಿಸಿ ನೋಡಿದರೆ ಮೊದಲಿಗೆ ಹೊಳೆಯುವುದು:-ಪಾಪ, ಕಚೇರಿಯಲ್ಲಿ ಬಾಸ್ ಒತ್ತಡವೋ,  ಇಲ್ಲವೇ, ಹೊರಡುವಾಗ ಮಡದಿಯೊಂದಿಗೆ ಜಗಳವಾಡಿ ಲಂಚ್ ಬಾಕ್ಸ್ ಬಿಟ್ಟು ಬಂದ ವ್ಯಸನವೋ, ಅಥವಾ ಆಸ್ತಿಕತೆ ಇದ್ದಕ್ಕಿದ್ದಂತೆ ನೆನಪಾಗಿ ದೇವರ ಶ್ಲೋಕ ಪಠಿಸುತ್ತಲೋ ಪಯಣಿಸುವ ಭಕ್ತರೋ ಎಂಬೆಲ್ಲಾ ಎಂಬ ದೊಡ್ಡ ಪಟ್ಟಿಯೇ ಸಿಗುತ್ತದೆ.. ಈ ಕೊನೆಯ ಮಾದರಿಯ ಜನರ ಪ್ರತಿನಿಧಿಯೊಬ್ಬರು ನನಗೆ ಒಮ್ಮೆ ಹೇಳಿದಂತೆ  ‘ಅವರು ಪ್ರತಿ ಬಾರಿ ವಿಮಾನ ಕೆಳಗಿಳಿಯುವಾಗ ದೇವರ ಧ್ಯಾನ ಮಾಡುವಂತೆ, ಲಿಫ್ಟ್ ಇಳಿಯುವಾಗಲೂ ಅದ್ಯಾವುದೊ ಅವ್ಯಕ್ತ ಭಯದ ಬಲಕ್ಕೆ ಬಿದ್ದು ಮಂತ್ರ ’ ಪಠಿಸಿಕೊಳ್ಳುತ್ತಾರಂತೆ..ಕೆಲವರಿಗಂತೂ ಎರಡೂ ಫ್ಲೋರುಗಳ ನಡುವೆ ಈ ಲಿಫ್ಟ್ ಪೆಟ್ಟಿಗೆ  ಯಾಂತ್ರಿಕ ತೊಂದರೆಯಿಂದಲೋ, ವಿದ್ಯುತ್ ವ್ಯತ್ಯಯದಿಂದಲೋ ಸಿಕ್ಕಿಹಾಕಿಕೊಂಡು ಬಿಟ್ಟರೆ ಎಂತಾ ಪೇಚಾಟ ಎಂಬ ಆತಂಕ..ಅದರಲ್ಲೂ ಯಾರೂ ತಮ್ಮ ಸಹಾಯಕ್ಕೆ ಬರದಿದ್ದರೆ, ಅದರಲ್ಲೇ ಉಸಿರು ಕಟ್ಟಿ ಸಾಯುವಂತಾದರೆ ಎಂಬ ಕ್ಲಾಸ್ಟ್ರೋಫೋಬಿಕ್  ಭಯ ಕೂಡಾ ಅಪರೂಪವೇನಲ್ಲ..ಅದೇ ಲಿಫ್ಟಿನಲ್ಲಿ ಎಮರ್ಜೆನ್ಸಿ ಫೋನ್ ಇದ್ದೂ, ಅದು ವಿದ್ಯುತ್ ಸರಬರಾಜು ನಿಂತರೂ ಹತ್ತಿರದ ಮಹಡಿಗೆ ಹೋಗಿಯೇ ನಿಲ್ಲುವುದೆಂಬ ಲಿಫ್ಟ್ ಕಂಪನಿಯ ಆಶಾದಾಯಕ ಸೂಚನಾ ಫಲಕ ಇದ್ದರೂ ಸಹಿತಾ…!

ಇನ್ನು ಲಿಫ್ಟ್ ಪ್ರಯಾಣದ ಬಗ್ಗೆ ನನ್ನ ಚಿಕ್ಕ ಪುಟ್ಟ ದೂರುಗಳೂ ಉಂಟು…ಲಿಫ್ಟ್ ಅಲ್ಲ, ಅದರ ಬಳಕೆದಾರರ ಬಗ್ಗೆ ಎಂದರೆ ಸೂಕ್ತವಾದೀತು…. ಈಗಿನ ಐ ಟಿ ಪೀಳಿಗೆ ಪ್ರಜೆಗಳ ಪಾಲಿಗಂತೂ  ಈ ಕಚೇರಿಗಳ ಲಿಫ್ಟ್ ಕೂಡಾ ಒಂದು ಸಾಮಾಜಿಕ ಜಾಲ ತಾಣದಂತೆ  ’ಜಾಲಿ ’ಯಾಗಿ ವ್ಯವಹರಿಸುವ ಸ್ಥಳವಾಗಿ ಮಿಕ್ಕವರಿಗೆ ಇವರ ವರ್ತನೆಯಿಂದ ಮುಜುಗುರವಾಗುವ ಸ್ಥಿತಿ ಬಂದು ಬಿಟ್ಟಿದೆ ..ಇಂದಿನ ಮಾಡರ್ನ್ ನವಯುವಕ-ಯುವತಿಯರಲ್ಲಿ ಹಲವರು ಲಿಫ್ಟ್ ಮ್ಯಾನರ್ಸ್ ಇಲ್ಲದೇ ಎಗ್ಗಿಲ್ಲದೇ ಸ್ನೇಹಿತರೊಂದಿಗೆ ತೀರಾ ಪರ್ಸನಲ್/ ಖಾಸಾ ಜೋಕ್ಸ್ ಮಾಡಿಕೊಂಡು, ಕಿಸಿ ಕಿಸಿ ನಗುತ್ತಾ, ಕೇಕೆ ಹಾಕುತ್ತ, ಒಬ್ಬರ ಬೆನ್ನು ಇನ್ನೊಬ್ಬರು ಚಪ್ಪರಿಸುತ್ತಾ ವ್ಯವಹರಿಸಿದರೆ, ಮೈಗೆ ಮೈ ತಗುಲಿಸಿ ನಿಲ್ಲಬೇಕಾದ ಅನಿವಾರ್ಯತೆಯಿದ್ದ  ಮಿಕ್ಕ ಸಹ-ಪ್ರಯಾಣಿಕರಿಗೆ ಎಷ್ಟು ಜಿಗುಪ್ಸೆ ತರುತ್ತದೆ ಎಂದರಿಯದ ಹುಂಬರು ಇವರು. ಸುಮಾರು ಹತ್ತು ಮಹಡಿ ಏರಲು ಬೇಕಾಗುವ ಆ ಎರಡೇ ನಿಮಿಷದಲ್ಲೇ ಎಲ್ಲರ ಕಿವಿಗೂ ಬೀಳುವಂತೆ ಇವರ ಖಾಸಗಿ ಜೀವನದ ಗುಟ್ಟುಗಳು, ಬಾಸ್- ಸಹಯೋಗಿಗಳ ಬಗೆಗಿನ ರಹಸ್ಯಗಳು,ಗಾಸಿಪ್, ಇವರು ವೀಕ್ಷಿಸಿದ ಚಲನ ಚಿತ್ರ/ ಭೇಟಿಯಿತ್ತ ಹೊಟೆಲ್ ಬಗೆಗಿನ ಸಿಲ್ಲಿ ವಿಮರ್ಶೆಗಳು, ಇವೆಲ್ಲಾ ಬೇರೆಯೇ ಕಚೇರಿಗೆ ಹೊರಟ ಅದೇ ಲಿಫ್ಟಿನ ಸಹಪ್ರಯಾಣಿಕರಿಗೆ ಯಾಕೆ ತಾನೆ ಬೇಕು?..ಶಬ್ದ ಮಾಲಿನ್ಯ, ಪರಿಸರ ಮಾಲಿನ್ಯ ಎಂಬುದರ ಜತೆಗೆ “ಲಿಫ್ಟ್ ಮಾಲಿನ್ಯ” ಎಂಬ ಪರಿಕಲ್ಪನೆಯನ್ನೂ ಇನ್ನು ಮೇಲೆ ಆ ಗುಂಪಿಗೆ ಸೇರಿಸಬೇಕಾದೀತು..

ಇನ್ನು ಧೂಮ್ರಪಾನಿಗಳದೊಂದು ಗೋಳು…ಈಗೆಲ್ಲಾ ಹವಾನಿಯಂತ್ರಿತ ಕಚೇರಿಗಳಲ್ಲಿ ಧೂಮಪಾನ ಮಾಡಲು ಅವಕಾಶವಿಲ್ಲದಿರುವುದರಿಂದ,ಲಿಫ್ಟ್ ನಲ್ಲಿ ಇಳಿದು ಹೊರಗೆ ಹೋಗಿ, ಸಿಗರೇಟ್ ಸೇದಿ ಅದೇ ಕೊಳಕು ವಾಸನೆಯ ಬಾಯಿಟ್ಟುಕೊಂಡು ಮತ್ತೆ ಲಿಫ್ಟ್ ಹತ್ತಿ ಪಕ್ಕದಲ್ಲಿ ಮಾತಾಡುತ್ತಾ ನಿಂತರೆ ಮಿಕ್ಕವರಿಗೆ ಹೇಗಾಗಬೇಡ?…

ಇಂತ ಸೂಕ್ಷ್ಮ ತಿಳಿಯದ  ಈ ’ಮಾಹಿತಿ ತಂತ್ರಜ್ಞರ”  ತಮ್ಮ ಮಿತಿಮೀರಿದ ವರ್ತನೆಯಿಂದ ನಮ್ಮ ಪರ್ಸನಲ್ ಸ್ಪೇಸ್ ಅನ್ನು ದಾಟಿ ಮಾನಸಿಕವಾಗಿ, ದೈಹಿಕವಾಗಿ ದಾಳಿಮಾಡಿದಾಗ, ’ನಮ್ಮ ಫ್ಲೋರ್ ಬಂದರೆ ಸಾಕಪ್ಪ, ಇಳಿದು ತೊಲಗೋಣಾ ’ ಎಂದು ಪರಿತಪಿಸುವಂತಾಗುತ್ತದೆ.

ಮುಂದೊಂದು ದಿನ “ಲಿಫ್ಟ್ ಕೋಡ್ ಆಫ್ ಕಾಂಡಕ್ಟ್” ಎಂಬ ಮಸೂದೆಯನ್ನು ಸಂಸತ್ತಿನಲ್ಲಿ ತರಬಹುದೋ, ವಿರೋಧಪಕ್ಷದವರು ಅವಕಾಶ ಮಾಡಿಕೊಟ್ಟರೆ? ಲಿಫ್ಟ್ ಒಂದು ಸಾಧನವೇ ಆಗಿರಬಹುದು, ಆದರೆ ಅದನ್ನು ಸಹಪ್ರಯಾಣಿಕರಿಗೆ ಸಂಧಿಗ್ಧ/ ತೊಂದರೆಯಾಗದಂತೆ ಸರಿಯಾಗಿ ಬಳಸುವ ಸಾಧನೆಯೂ ಅಷ್ಟೇ ಮುಖ್ಯವಲ್ಲವೆ?…

Read more from ಲೇಖನಗಳು
1 ಟಿಪ್ಪಣಿ Post a comment
  1. Suraj B Hegde
    ಆಗಸ್ಟ್ 27 2015

    ಹ್ಹೆ ಹ್ಹೆ ಹ್ಹೆ! ಲಿಫ್ಟಿನ ಬಗ್ಗೆ ಥೀಸಿಸ್‌ ಮಾಡಿ ಬರೆದ ಹಾಗಿದೆ 😀
    ಮುಂದಿನ ಬರಹಕ್ಕೆ ಕಾದಿದ್ದೇನೆ @ನಾಗೇಶ್ ಕುಮಾರ್ ಸಿ
    🙂

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments