ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 18, 2015

19

ಬುದ್ಧಿಜೀವಿಗಳ ಬ್ರಾಹ್ಮಣ ಥಿಯರಿಗಳು ಬರುತ್ತಿರುವುದೆಲ್ಲಿಂದ? – ಭಾಗ ೨

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

ಬುದ್ಧಿಜೀವಿಗಳ ಬ್ರಾಹ್ಮಣ ಥಿಯರಿಗಳು ಬರುತ್ತಿರುವುದೆಲ್ಲಿಂದ? – ಭಾಗ ೧

ಬ್ರಾಹ್ಮಣಎಲ್ಲ ವಿಷಯಗಳಲ್ಲೂ, ಇಪ್ಪತ್ತೊಂದನೆ ಶತಮಾನದ ಸಂದರ್ಭವನ್ನು ನೋಡಿ ಎನ್ನುವ ನಾವು ಬ್ರಾಹ್ಮಣ ಮತ್ತು ಉಳಿದ ಜಾತಿಗಳ ನಡುವಿನ ಸಂಬಂಧಗಳ ವಿಷಯ ಬಂದಾಗ ಮಾತ್ರ ಇತಿಹಾಸಕ್ಕೆ ಹಾರುವುದು ಯಾಕೆ ಎನ್ನುವುದು ಸದ್ಯದ ಯುಗದಲ್ಲಿ ಬದುಕುತ್ತಿರುವ ನನ್ನಂಥವರಿಗೆ ಬಿಡಿಸಲಾರದ ಒಗಟಾಗಿದೆ. ಇಪ್ಪತ್ತೊಂದನೆ ಶತಮಾನದ ಬ್ರಾಹ್ಮಣ, ಉಳಿದ ಜಾತಿ-ಪಂಥದ ಜನರಿಗಿಂತ ಯಾವ ವಿಷಯದಲ್ಲೂ ಹೆಚ್ಚಿನ ಸವಲತ್ತುಗಳನ್ನು ಪಡೆದು ಹುಟ್ಟಿಬಂದ ಸೂಪರ್‍ಮ್ಯಾನ್ ಅಲ್ಲ. ನಿಜಕ್ಕಾದರೆ, ಅವನು ನೂರಾರು ಹರಿತಖಡ್ಗಗಳನ್ನು “ಬ್ರಾಹ್ಮಣ”ನೆಂಬ ತನ್ನ ಮೊಂಡುಗತ್ತಿಯಿಂದ ಎದುರಿಸಬೇಕಾಗಿದೆ. ತನ್ನ ಬಾಲ್ಯ, ಶಾಲೆ, ಕಾಲೇಜುಗಳಲ್ಲಿ ಒಂದು ದಿನವೂ ಜಾತೀಯತೆ ಆಚರಿಸದ ಬ್ರಾಹ್ಮಣನಿಗೆ ಕೂಡ ಅಂಥದೊಂದು ವಿಷಸರ್ಪದ ಮೊದಲ ಕಡಿತದ ಅನುಭವವಾಗುವುದು, ಕಾಲೇಜಿನ ಫೀಸ್ ಕಟ್ಟುವಾಗ. ಪ್ರವಾಸಿಸ್ಥಳಗಳಲ್ಲಿ, “ಭಾರತೀಯರಿಗೆ 5 ರುಪಾಯಿ ಟಿಕೇಟು; ವಿದೇಶಿಯರಿಗೆ 50 ರುಪಾಯಿ” ಎಂದು ಬೋರ್ಡ್ ಬರೆದಿರುವಂತೆ, ಬೇರೆ ಜಾತಿಯವನು ಕಟ್ಟಿದ ಫೀಸಿಗೆ ಎರಡೋ ಮೂರೋ ಸೊನ್ನೆ ಸೇರಿಸಿ ವಿಧಿಸುವ ದೊಡ್ಡಮೊತ್ತವನ್ನು ತಾನು ಕಟ್ಟಬೇಕಾಗಿ ಬಂದಾಗ, ಅವನಿಗೆ ಜಾತೀಯತೆಯ ಮೊದಲ ಮುಖದರ್ಶನವಾಗುತ್ತದೆ. ಆದರೆ, ಈ ಸರಕಾರೀ ಜಾತೀಯತೆಯ ಬಗ್ಗೆ ಎಲ್ಲಾದರೂ ಆತ ಪ್ರತಿಭಟಿಸಲು ಅವಕಾಶ ಇದೆಯೆ?

ಭಾರತೀಯ ವಿಜ್ಞಾನ ಸಂಸ್ಥೆಯಂತಹ ಸರಕಾರೀ ಸಂಸ್ಥೆಗಳಲ್ಲಿ, ಪದವಿ/ಪಿಎಚ್‍ಡಿ ಕೋರ್ಸುಗಳ ಸಂದರ್ಶನಕ್ಕೆ ಆಯ್ಕೆಯಾದ ಕೆಲವೊಂದು ಜಾತಿಯ ವಿದ್ಯಾರ್ಥಿಗಳು ಸಂದರ್ಶನಕ್ಕೆ ಎರಡು ದಿನ ಮೊದಲು ಸಂಸ್ಥೆಗೆ ಬಂದು, “ತರಬೇತಿ” ಪಡೆಯುವ ಅವಕಾಶ ಇದೆ. ಪ್ರತಿಭೆಯೊಂದೇ ಮಾನದಂಡವೆಂದು ಪರಿಗಣಿಸಬೇಕಿದ್ದ ಇಂತಹ ಉನ್ನತ ಸಂಸ್ಥೆಗಳಲ್ಲಿ ಕಾಣಸಿಗುವ ಈ ಜಾತೀಯತೆಯನ್ನು ಬ್ರಾಹ್ಮಣವಟು ಎಂದಾದರೂ ಪ್ರಶ್ನೆ ಮಾಡಿದ್ದಿದೆಯೆ? ಇನ್ನು ಉದ್ಯೋಗದ ವಿಷಯಕ್ಕೆ ಬಂದಾಗ ನಮ್ಮ ದೇಶದಲ್ಲಿ ನಡೆಯುವ “ಸರಕಾರೀ ಜಾತೀಯತೆ”ಯ ಅಂದಾಜು ಮಾಡುವುದು ಯಾವ ಬ್ರಹ್ಮನಿಗೂ ಸಾಧ್ಯವಿಲ್ಲದ ಮಾತು. ಮೀಸಲಾತಿ, ವಿಶೇಷ ಸವಲತ್ತು, ಸಬಲೀಕರಣಗಳ ಹೆಸರಿನಲ್ಲಿ ಹುಟ್ಟುಹಾಕಿದ ಈ ಯಾವ ವ್ಯವಸ್ಥೆಯನ್ನೂ ನಾವು ಜಾತೀಯತೆ ಎಂದು ಪರಿಗಣಿಸದೇ ಇರುವಾಗ, ಶತಶತಮಾನಗಳ ಹಿಂದೆ ಬ್ರಾಹ್ಮಣ ಮಾಡಿದ್ದಾನೆನ್ನಲಾದ ತಾರತಮ್ಯ ಮಾತ್ರ “ಜಾತೀಯತೆ” ಆಗುವುದು ಹೇಗೆ? ನನಗಂತೂ ಗೊತ್ತಿಲ್ಲದ ರಹಸ್ಯ ಇದು!

ನನ್ನ ಈ ಬರಹದ ಉದ್ಧೇಶ, ಬ್ರಾಹ್ಮಣರ ಪರವಾಗಿ ಗುರಾಣಿ ಹಿಡಿದು ಹೋರಾಡುವುದಲ್ಲ. ಅಥವಾ ಆ ವರ್ಗದ ಪರವಾಗಿ ಸಿಂಪತಿ, ಕರುಣೆಗಳನ್ನು ಗಿಟ್ಟಿಸುವುದೂ ಅಲ್ಲ. ಬ್ರಾಹ್ಮಣನ ಮೇಲೆ ನಮ್ಮ ಪ್ರಗತಿಪರ ಚಿಂತಕರು ಹೂಡುತ್ತಿರುವ ಬಾಣಗಳಿಗೆ ನಿಜವಾಗಿಯೂ ಕಾರಣಗಳಿವೆಯೆ ಎನ್ನುವುದನ್ನು ಪರಿಶೀಲಿಸುವುದರಲ್ಲಷ್ಟೆ ನನ್ನ ಆಸಕ್ತಿ ಮತ್ತು ನಾನು ಈ ಸಮಸ್ಯೆಯನ್ನು ನನ್ನ ಹುಟ್ಟಿಬೆಳೆದ ಪರಿಸರದ ಹಿನ್ನೆಲೆಯಲ್ಲಿ ನೋಡಬಹುದೇ ಹೊರತು ಪ್ರಗತಿಪರರು ಭಾವಿಸಿಕೊಂಡ ಒಂದು ಕಪೋಲಕಲ್ಪಿತ ಗ್ರಾಮವ್ಯವಸ್ಥೆಯಲ್ಲಿ ಅಲ್ಲ. ನಮ್ಮೂರಲ್ಲಿ ನಾವು ಜಾತಿವ್ಯವಸ್ಥೆ, ಪುರೋಹಿತಶಾಹಿ – ಇವುಗಳೆಲ್ಲ ಇದೆಯೆನ್ನುವುದೇ ತಿಳಿಯದೆ ಬಾಲ್ಯ, ಯೌವನಗಳನ್ನು ಕಳೆದೆವು! ಒಂದು ಜಾತಿ ಇನ್ನೊಂದನ್ನು ತುಳಿಯುತ್ತಿದೆ ಎಂಬುದನ್ನಾಗಲೀ ಶ್ರೇಣೀಕೃತವೆಂಬ ಉಸಿರುಗಟ್ಟುವ ವ್ಯವಸ್ಥೆಯೊಳಗೆ ನಾವು ಬದುಕುತ್ತಿದ್ದೇವೆನ್ನುವುದನ್ನಾಗಲೀ ನನ್ನಜ್ಜ ಅಥವಾ ಕೊರಗರ ತನಿಯ – ಇಬ್ಬರೂ ಒಪ್ಪಿಕೊಳ್ಳುತ್ತಿರಲಿಲ್ಲ. ಊರ ನಾಗಬನದಲ್ಲಿ ಪಂಚಮಿಗೆ ಪೂಜೆ ಮಾಡಿ ತೀರ್ಥಪ್ರಸಾದ ಹಂಚುವುದು ಅಜ್ಜಯ್ಯನ ಹಕ್ಕು ಹೇಗಾಗಿತ್ತೋ ಹಾಗೆಯೇ ಕಾಡಿನ ಮರ ಹತ್ತಿ ಜೇನಿಳಿಸುವುದು ತನಿಯನ ಹಕ್ಕಿನ ಕೆಲಸವಾಗಿತ್ತು. ನಮ್ಮ ಹಳ್ಳಿಗಳಲ್ಲಿ ಶ್ರೇಣೀಕೃತ ವ್ಯವಸ್ಥೆಯಿತ್ತು ಎನ್ನುವ ಆಧುನಿಕ ಚಿಂತಕರು ಇಂದು ಲೆಕ್ಚರರ್-ರೀಡರ್-ಪ್ರೊಫೆಸರ್-ಡೀನ್ ಎಂಬ ಉದ್ದಾನುದ್ದ ಸರಪಳಿಯ ಕಾಲೇಜಿನ ಶ್ರೇಣೀಕೃತ ವ್ಯವಸ್ಥೆಗಳಲ್ಲಿ ಅಥವಾ ಕಂಪನಿಗಳ ನೌಕರ ಮತ್ತು ಬಾಸು ಎಂಬ ಕೂಲಿ-ಮಾಲೀಕ ವ್ಯವಸ್ಥೆಯ ಭಾಗವಾಗಿರುವುದು ಏನನ್ನು ಸೂಚಿಸುತ್ತದೆ? ದಲಿತರನ್ನು ಬ್ರಾಹ್ಮಣರು ಅಮಾನುಷವಾಗಿ ನಡೆಸಿಕೊಂಡರು; ಕೈಮುಟ್ಟದಂತೆ ಎತ್ತರದಿಂದ ಪ್ರಸಾದ ಎಸೆದರು ಎನ್ನುವ ಬುದ್ಧಿಜೀವಿಗೆ ತಾನು ಕುಡಿದು ಮೇಜಿನ ಮೇಲಿಟ್ಟ ಕಾಫಿಲೋಟವನ್ನು ಎತ್ತಿ ಕೊಂಡೊಯ್ಯುವ ಆಫೀಸ್‍ಬಾಯ್ ಕಾಣುವುದಿಲ್ಲ! ನಮ್ಮ ಪ್ರಗತಿಪರ ಚಿಂತಕರು ಹೇಳುತ್ತಿರುವ ಶೋಷಣೆ, ಶ್ರೇಣಿಗಳು, ಗುಲಾಮಗಿರಿ, ವಸಾಹತುಶಾಹಿ, ಪುರೋಹಿತಶಾಹಿ, ಅಸಮಾನ ವೇತನ, ದಬ್ಬಾಳಿಕೆಯಂತಹ ಹಲವುಹತ್ತು ಸಮಸ್ಯೆಗಳೆಲ್ಲ ಇಂದು ಅವರು ಕಲ್ಪಿಸಿಕೊಂಡ “ಗ್ರಾಮವ್ಯವಸ್ಥೆ”ಗಳಿಗಿಂತಲೂ ಹೆಚ್ಚು ಢಾಳಾಗಿ ಆಧುನಿಕ ವ್ಯವಸ್ಥೆಗಳಲ್ಲಿ ಕಾಣಸಿಗುತ್ತವೆ ಎನ್ನುವುದು ವಿಪರ್ಯಾಸ.

-4-

ಮತ್ತೆ ಹಳ್ಳಿಯ ಸಂದರ್ಭಕ್ಕೆ ಮರಳುವುದಾದರೆ, ಬ್ರಾಹ್ಮಣರು ದಲಿತರನ್ನು ಶೋಷಿಸಿದರು ಎನ್ನುವ “ಬುದ್ಧಿಜೀವಿ ಪ್ರಣೀತ” ವಾದ ಎಷ್ಟು ಬಲಹೀನ ಎನ್ನುವುದನ್ನು ನೋಡಿ:

1. ಇವರ ಪ್ರಕಾರ, ಹಿಂದೆ ಬ್ರಾಹ್ಮಣರು “ಹಿಂದುಳಿದ” ವರ್ಗದ ಜನರನ್ನು ತುಳಿದರು. ಸರಿ, ಆದರೆ ಹೇಗೆ? ಬ್ರಾಹ್ಮಣರು ದೇವಸ್ಥಾನಗಳ ಗುತ್ತಿಗೆ ಹಿಡಿದವರಾಗಿದ್ದರೆ, ಅವರಿಗೆ ಮತ್ತು ಕಾಡಿನ ದೈವಭೂತಗಳನ್ನು ತಮ್ಮದೇ ಕ್ರಮದಲ್ಲಿ ಆರಾಧನೆ ಮಾಡುತ್ತಿದ್ದ ಆದಿವಾಸಿಗಳು ಹಾಗೂ ದಲಿತರಿಗೆ ಯಾವ ಬಗೆಯ ಸಂಘರ್ಷ ಹುಟ್ಟಲು ಸಾಧ್ಯವಿತ್ತು? ಬ್ರಾಹ್ಮಣರು ಇತರ ಜಾತಿಯವರನ್ನು ಮುಟ್ಟಿಸಿಕೊಳ್ಳಲಿಲ್ಲ ಎನ್ನುವ ವಾದ ಮಾಡುವ ಯೂನಿವರ್ಸಿಟಿ ಬುದ್ಧಿಜೀವಿಗಳು ಬಹುಶಃ ದೇವಸ್ಥಾನಗಳಲ್ಲಿ ನಡೆಯುವ ಆಚರಣೆಗಳನ್ನು ಸೂಕ್ಷ್ಮವಾಗಿ ಗಮನಿಸಿಲ್ಲ ಎನ್ನಬೇಕಾಗುತ್ತದೆ. ಯಾಕೆಂದರೆ, ಅಲ್ಲಿ ದೇವರನ್ನು ಪೂಜಿಸುವ ಅರ್ಚಕ, ತನ್ನೊಡನೆ ಮಡಿಯಲ್ಲಿರುವ ಒಂದಷ್ಟು ವ್ಯಕ್ತಿಗಳನ್ನು ಬಿಟ್ಟರೆ ಮಿಕ್ಕವರ್ಯಾರನ್ನೂ ಮುಟ್ಟಿ ಮಾತಾಡಿಸುವುದಿಲ್ಲ. ಭಕ್ತರ ಸಮೂಹದಲ್ಲಿರುವ ಬ್ರಾಹ್ಮಣರು ಕೂಡ ಆ ಸಮಯದಲ್ಲಿ ಉಳಿದೆಲ್ಲರಂತೆ ಸಾಮಾನ್ಯರೇ (ಮತ್ತು ಅಸ್ಪೃಶ್ಯರೇ). ದೇವಸ್ಥಾನಕ್ಕೆ ದೇವರ ದರ್ಶನಕ್ಕಾಗಿ ಹೋಗುವ ಬ್ರಾಹ್ಮಣನಿಗೆ ಆತನ ಜಾತಿಯಿಂದ ವಿಶೇಷ ಸೌಕರ್ಯಗಳೇನೂ ಸಿಗುವುದಿಲ್ಲ. ಉಡುಪಿಯ ಕೃಷ್ಣ, ಧರ್ಮಸ್ಥಳದ ಮಂಜುನಾಥ, ತಿರುಪತಿಯ ತಿಮ್ಮಪ್ಪ, ತಿರುವನಂತಪುರದ ಅನಂತ ಪದ್ಮನಾಭ, ಮಥುರೆಯ ಕೃಷ್ಣ, ಪುರಿಯ ಜಗನ್ನಾಥ, ಕೊಲ್ಹಾಪುರದ ದುರ್ಗೆ, ಕಾಮಾಖ್ಯದ ಕಾಳಿ – ಈ ಯಾವ ದೇವಸ್ಥಾನಗಳಲ್ಲೂ ಬ್ರಾಹ್ಮಣರಿಗೆ ವಿಶೇಷ ದರ್ಶನಭಾಗ್ಯ ಕರುಣಿಸಿದ್ದನ್ನು ನಾನಂತೂ ನೋಡಿಲ್ಲ. ದೇಶದ 99% ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಬರುವ ಭಕ್ತರ ಜಾತಿ ಕೇಳಲ್ಪಡುವುದಿಲ್ಲ.

2. ಬುದ್ಧಿಜೀವಿಗಳ ಪ್ರಕಾರ,ದೇಶದ ಬಹುಪಾಲು ಕೃಷಿಭೂಮಿ ಮೇಲ್ವರ್ಗದವರ ಕೈಯಲ್ಲಿತ್ತು. ಆ ಮೂಲಕ ಅವರು ಉಳಿದವರನ್ನು ಶೋಷಿಸಿದರು. ಬಹುಶಃ ಈ ಅಜೆಂಡಾ ಇಟ್ಟುಕೊಂಡೇ ಇಂದಿರಾ ಗಾಂಧಿ ಸರಕಾರ “ಉಳುವವನೇ ಹೊಲದೊಡೆಯ” ಎಂಬ ಕಾಯ್ದೆ ಜಾರಿಗೆ ತಂದಿತು. ಸರಕಾರ ಅಂದುಕೊಂಡಂತೆ, ಉಳುವ ಜಮೀನನ್ನು ಬ್ರಾಹ್ಮಣರು ಮುಷ್ಟಿಯಲ್ಲಿಟ್ಟುಕೊಂಡದ್ದೇ ಎಲ್ಲ ಹಿನ್ನೆಡೆಗೆ ಪ್ರಮುಖ ಕಾರಣವಾಗಿದ್ದರೆ, ಕಾಯ್ದೆ ಜಾರಿಯಾಗಿ ಮೂರು ದಶಕಗಳು ಕಳೆದ ಮೇಲಾದರೂ ನಮ್ಮ ದೇಶದಲ್ಲಿ ದಲಿತರ ದೌರ್ಜನ್ಯ ಎಂಬ ಪದಪುಂಜ ಸವಕಲಾಗಬೇಕಿತ್ತು. ಆದರೆ ಹಾಗಾಗಿಲ್ಲ ಎನ್ನುವುದೇ ಅಚ್ಚರಿಯ ವಿಷಯ! ದಲಿತರಿಗೆ ಬೇಕಾದ ಎಲ್ಲ ಸವಲತ್ತು, ಕಾಯ್ದೆಗಳು ಬಂದ ಮೇಲೂ ನಮ್ಮ ದೇಶದಲ್ಲಿ ಬುದ್ಧಿಜೀವಿಗಳು ಕಲ್ಪಿಸಿಕೊಳ್ಳುತ್ತಿರುವ “ದಲಿತ ಶೋಷಣೆ” ಇನ್ನೂ ಮುಂದುವರಿದೇ ಇದೆ! ಹಾಗಾದರೆ ಕಾಯ್ದೆ ಸರಿಯಾಗಿ ಜಾರಿಯಾಗಲಿಲ್ಲವೆ? ಅಥವಾ ಕಾಯ್ದೆಯಿಂದ ಬ್ರಾಹ್ಮಣರ ಜಮೀನನ್ನು ಕಸಿದು ಭೂಮಿಯಿಲ್ಲದವರಿಗೆ ಕೊಡುತ್ತೇವೆಂದು ಸರಕಾರ ಹೇಳಿದ್ದೇ ಒಂದು ದೊಡ್ಡ ಸುಳ್ಳಿನ ಕಂತೆಯಾಗಿತ್ತೆ? ಉಳುವವನು ಹೊಲದೊಡೆಯ ಎಂದು ಸರಕಾರ ಹೇಳಿದಾಗ ಕೊರಗಿದ ಬ್ರಾಹ್ಮಣರು ಖಂಡಿತವಾಗಿಯೂ ಇದ್ದರು. ಇದುವರೆಗೆ ತಮ್ಮ ಜೀವನೋಪಾಯಕ್ಕಾಗಿ ಇದ್ದ ಅಲ್ಪಸ್ವಲ್ಪ ಜಮೀನನ್ನೂ ಈಗ ಕಾಯಿದೆಯ ಹೆಸರಲ್ಲಿ ಸರಕಾರ ಕಸಿದುಕೊಳ್ಳುತ್ತಿದೆಯಲ್ಲ ಎಂಬ ನೋವು ಅವರಿಗಿತ್ತು. ಆದರೆ, ಕಾಯ್ದೆಯನ್ನು ವಿರೋಧಿಸಿ ಬೀದಿಗಿಳಿದು ದೊಡ್ಡದನಿ ತೆಗೆಯುವ ಕೌಶಲವಾಗಲೀ, ಆಸಕ್ತಿಯಾಗಲೀ ಬ್ರಾಹ್ಮಣರಿಗಿರಲಿಲ್ಲ. ಹೊಲದ ಕೆಲಸದಲ್ಲಿ ತೊಡಗಿಕೊಂಡಿದ್ದ ಬ್ರಾಹ್ಮಣರ ಮಕ್ಕಳು, ಮುಂದೆ ತಮಗೆ ಜಮೀನಿಲ್ಲ ಎನ್ನುವ ವಾಸ್ತವವನ್ನು ಒಪ್ಪಿಕೊಂಡು ಬೇರೆ ಉದ್ಯೋಗಗಳನ್ನು ನೋಡಿಕೊಂಡರು. ನಗರಗಳಿಗೆ ವಲಸೆ ಬಂದರು. ವೈದ್ಯ, ಇಂಜಿನಿಯರಿಂಗ್ ಉದ್ಯೋಗಗಳಿಗೆ ಸೇರಿಕೊಂಡರು. ಹಳ್ಳಿಯ ಜೀವನಕ್ಕೆ ಗುಡ್‍ಬೈ ಹೇಳಿದರು. ಒಂದರ್ಥದಲ್ಲಿ ಸರಕಾರದ ಕಾಯಿದೆ ಪರೋಕ್ಷವಾಗಿ ಬ್ರಾಹ್ಮಣರ ನಗರವಲಸೆಗೆ ಕುಮ್ಮಕ್ಕು ಕೊಟ್ಟಿತು ಎಂದು ಹೇಳಬಹುದು. 1970ರಲ್ಲಿ ಹಳ್ಳಿಗಳಲ್ಲಿದ್ದ ಬ್ರಾಹ್ಮಣ ಸಮುದಾಯದ ಅರ್ಧದಷ್ಟೂ ಇಂದು ಗ್ರಾಮೀಣ ಭಾಗದಲ್ಲಿ ಇಲ್ಲ ಎಂದು ಧೈರ್ಯವಾಗಿ ಹೇಳಬಹುದು. ಇಷ್ಟಾದರೂ ಹಳ್ಳಿಗಳಲ್ಲಿ ದಲಿತರ ಮೇಲೆ ಬ್ರಾಹ್ಮಣರ ದೌರ್ಜನ್ಯ ಕಡಿಮೆಯಾಗಿಲ್ಲ ಎಂದರೆ, ಅದು ಯಾವ ಬಗೆಯ ದೌರ್ಜನ್ಯ ಎಂದು ಬುದ್ಧಿಜೀವಿಗಳೇ ವಿವರಿಸಬೇಕು! ತಮ್ಮ ಕೈಯಲ್ಲಿ ಉಳುವ ಭೂಮಿ ಇಲ್ಲದೇ ಇದ್ದರೂ ಈ ಬ್ರಾಹ್ಮಣರು ಯಾವ ವಿಷಯ ಇಟ್ಟುಕೊಂಡು ದಲಿತರನ್ನು ಗೋಳುಹುಯ್ದುಕೊಳ್ಳುತ್ತಿದ್ದಾರೆ?

3. ಬ್ರಾಹ್ಮಣ ದಲಿತನನ್ನು ತುಳಿದ ಎನ್ನುವ ಬುದ್ಧಿಜೀವಿಗಳು, ಆಗಿನ ಕಾಲದಲ್ಲಿ ಬದುಕಿದ್ದದ್ದೇ ಈ ಎರಡು ವರ್ಗಗಳು ಎಂದು ತಿಳಿದಿದ್ದಾರೆಯೇ ಎಂದು ಅಚ್ಚರಿಯಾಗುತ್ತದೆ. ಯುರೋಪಿನ ಧಣಿ-ಗುಲಾಮ ಎಂಬ ಪುಸ್ತಕದ ಬದನೆಕಾಯಿಯನ್ನು ಭಾರತದ ಸಂದರ್ಭಕ್ಕೆ ನೇರವಾಗಿ ತರ್ಜುಮೆ ಮಾಡಿಕೊಂಡು ನಮ್ಮ ದೇಶದ “ಸಮಾಜ-ಆರ್ಥಿಕ” ವ್ಯವಸ್ಥೆಯನ್ನು ಅರ್ಥೈಸಿಕೊಳ್ಳಲು ತಿಣುಕಾಡಿದ ಪ್ರಗತಿಪರರು, ತಮ್ಮ ಸಂಶೋಧನೆಗಾಗಿ ಒಮ್ಮೆಯಾದರೂ ಹಳ್ಳಿಗಳ ಮಣ್ಣು ತುಳಿದಿದ್ದರೆ ಸತ್ಯ ಗೋಚರಿಸುತ್ತಿತ್ತು. ಹಳ್ಳಿಗಳಲ್ಲಿ ದಲಿತರ ಜೊತೆ ಇನ್ನೂ ಹಲವು ಜಾತಿ-ಪಂಗಡಗಳು ನೆಮ್ಮದಿಯಿಂದ ಬದುಕಿದ್ದವು. ಬ್ರಾಹ್ಮಣ, ನಾಡವ, ಬಿಲ್ಲವ, ಕೊರಗ ಎಂಬ ಜಾತಿಗಳಿದ್ದವೇ ಹೊರತು ಯಾರಿಗೂ ಕೆಳಜಾತಿ-ಮೇಲ್ಜಾತಿ ಎಂಬ ಹಣೆಪಟ್ಟಿಗಳಿರಲಿಲ್ಲ. ದಲಿತ ಎಂಬ ಜಾತಿಯನ್ನು ಬ್ರಾಹ್ಮಣರು ಶೋಷಣೆ ಮಾಡಿದರು ಎಂದರೆ ಉಳಿದವರು ಆ ಸಮಯದಲ್ಲಿ ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಬರುತ್ತದೆ! ದಲಿತರಿಗೆ ಉಳಿದ ಯಾವ ಜಾತಿಯೊಂದಿಗೂ ಕೊಡು-ಕೊಳ್ಳು ಸಂಬಂಧ ಇರಲಿಲ್ಲವೆ? ಅವರು ನೇರವಾಗಿ ಬ್ರಾಹ್ಮಣರ ಸಂಪರ್ಕಕ್ಕೆ ಮಾತ್ರ ಬರಲು ಕಾರಣವೇನು? ಹಳ್ಳಿಯ ಜೀವನವನ್ನು ಹತ್ತಿರದಿಂದ ಕಂಡಿರುವ ಯಾರಿಗೇ ಆದರೂ, ಕೊರಗ ಜನಾಂಗಕ್ಕೆ ಅಬ್ರಾಹ್ಮಣ ಜಾತಿಗಳ ಜೊತೆಗೇ ಹೆಚ್ಚು ವ್ಯವಹಾರಗಳು ಇರುತ್ತಿದ್ದವು; ಅವರು ಬ್ರಾಹ್ಮಣರ ಸಂಪರ್ಕಕ್ಕೆ ಬರಬೇಕಾದ ಸನ್ನಿವೇಶಗಳು ಅತ್ಯಂತ ಕಡಿಮೆ ಇದ್ದವು ಎನ್ನುವುದು ಸುಲಭವಾಗಿ ಗೋಚರಿಸುವ ಸತ್ಯ. ಹಾಗಿರುವಾಗ, ನಮ್ಮ ಸಮಾಜವಿಜ್ಞಾನ ಪಠ್ಯಗಳನ್ನು ಬರೆದ ಬುದ್ಧಿಜೀವಿ ಚಿಂತಕರಿಗೆ ದಲಿತ ಮತ್ತು ಬ್ರಾಹ್ಮಣ ವರ್ಗಗಳ ನಡುವೆ ಮಾತ್ರ ಸಂಘರ್ಷ ಕಾಣಲು ಕಾರಣ ಏನು? ಸಮಾಜದಲ್ಲಿ ಇವೆರಡೇ ವರ್ಗಗಳು ಬದುಕುತ್ತಿದ್ದವು ಎನ್ನುವುದಾದರೆ, ಉಳಿದ ಜಾತಿ-ಪಂಗಡದ ಜನ ಆ ಕಾಲದಲ್ಲಿ ಯಾವ ಗ್ರಹದಲ್ಲಿ ವಾಸ್ತವ್ಯ ಹೂಡಿದ್ದರು?! ನಮ್ಮ ಸಮಾಜಶಾಸ್ತ್ರದ ಚಿಂತಕರು ಇನ್ನೂ ಮುಂದುವರಿದು, ವೇದ ಕೇಳಲು ಬಯಸಿದ ದಲಿತರ ಕಿವಿಗಳಿಗೆ ಬ್ರಾಹ್ಮಣರು ಕಾದ ಸೀಸ ಸುರಿಯುತ್ತಿದ್ದರು ಎಂಬ ಘನಘೋರ ಮತ್ತು ಹೃದಯವಿದ್ರಾವಕ ಚಿತ್ರಣವನ್ನು ಕೊಡುತ್ತಾರೆ. ಬ್ರಾಹ್ಮಣರ ವೇದಪಠಣದ ಬಗ್ಗೆ ದಲಿತರು ಮಾತ್ರ ಇಂಥ ಅನುಪಮವಾದ ಆಸಕ್ತಿಯನ್ನು ತೋರಿಸಲು ಕಾರಣ ಏನು ಎನ್ನುವುದರ ಕುರಿತು ಒಂದು ತಳಸ್ಪರ್ಶಿಯಾದ ಸಾಮಾಜಿಕ ಅಧ್ಯಯನ ನಡೆಯುವ ಅಗತ್ಯ ಇದೆ.

4. ಬುದ್ಧಿಜೀವಿಗಳು ಮುಂದಿಡುವ ಇನ್ನೊಂದು ವಾದ ಮನುಸ್ಮೃತಿಯದ್ದು. ಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ನ್ಯಾಯತೀರ್ಮಾನ ಮನುಸ್ಮೃತಿಯ ಆಧಾರದ ಮೇಲೆ ನಡೆಯುತ್ತಿತ್ತು ಎಂದು ಪ್ರಗತಿಪರ ಚಿಂತಕರು ಹೇಳುತ್ತಾರೆ. ತಮ್ಮ ವಾದ ನಿಜಕ್ಕೂ ವೈಜ್ಞಾನಿಕವಾಗಿದೆ ಎನ್ನುವುದನ್ನು ತೋರಿಸಬೇಕಾದರೆ ಅವರು ಹಾಗೆ ಮನುಸ್ಮೃತಿಯ ಆಧಾರದಲ್ಲಿ ನ್ಯಾಯತೀರ್ಮಾನವಾದ ಒಂದಾದರೂ ಉದಾಹರಣೆಯನ್ನು ಕಳೆದ ಮೂರುಸಾವಿರ ವರ್ಷಗಳ ಭಾರತದ ಇತಿಹಾಸದಲ್ಲಿ ತೋರಿಸಬೇಕಾಗುತ್ತದೆ. ಇದುವರೆಗೆ ಅಂಥ ಒಂದಾದರೂ ಸನ್ನಿವೇಶವನ್ನು ಎತ್ತಿತೋರಿಸಲು ನಮ್ಮ ಚಿಂತಕರು ಯಶಸ್ವಿಯಾಗಿಲ್ಲ ಎನ್ನುವುದು ಏನನ್ನು ಸೂಚಿಸುತ್ತದೆ? ಮನು ಮತ್ತು ಭಾರತದ “ಪುರೋಹಿತಶಾಹಿ” ಅದು ಹೇಗೆ ಜೊತೆಗೆ ತಳುಕು ಹಾಕಿಕೊಂಡರು ಎಂದು ಇನ್ನೂ ತಲೆಕೆಡಿಸಿಕೊಳ್ಳುತ್ತಿರುವ ನನ್ನಂಥವರಿಗೆ ಒಂದಿಷ್ಟು ಇತಿಹಾಸ ಇಲ್ಲಿದೆ: ವಿಲಿಯಂ ಜೋನ್ಸ್ ಎಂಬ ಇಂಗ್ಲೀಷ್ ಪಂಡಿತ ಮತ್ತು ಬಹುಭಾಷಾವಿಶಾರದ, ಬ್ರಿಟಿಷ್ ಆಡಳಿತವಿದ್ದ ಭಾರತಕ್ಕೆ ಸರ್ವೋಚ್ಛ ನ್ಯಾಯಾಲಯದ ಜಡ್ಜ್ ಆಗಿ ಬಂದಾಗ, ಅವನಿಗೆ ಸಹಜವಾಗಿಯೇ ಇದ್ದ ಕುತೂಹಲವೇನೆಂದರೆ, ಭಾರತದಲ್ಲಿ ಯಾವ ಕಾನೂನು ಪುಸ್ತಕವನ್ನು ಬಳಸುತ್ತಿದ್ದಾರೆ -ಎನ್ನುವುದು. ಯುರೋಪಿನ ದೇಶಗಳಲ್ಲಿದ್ದಂತೆ, ಒಂದು ದೇಶಕ್ಕೆ ಒಂದು ನ್ಯಾಯಪುಸ್ತಕ ಇರಬೇಕು ಎಂಬ ಪೂರ್ವಗ್ರಹದಿಂದ ಹುಟ್ಟಿದ ಕುತೂಹಲ ಇದು. ಆದರೆ, ಭಾರತದಲ್ಲಿ ನ್ಯಾಯತೀರ್ಮಾನವಾಗುತ್ತಿದ್ದದ್ದೇ ಬೇರೆ ಬಗೆಯಲ್ಲಿ. ಇಲ್ಲಿ ಪ್ರತಿಯೊಂದು ಸಮಸ್ಯೆಯನ್ನೂ ಒಂದು ವಿಶೇಷ ಪ್ರಕರಣ ಎಂದೇ ಭಾವಿಸಿ ಪ್ರಾಜ್ಞರು ಆಯಾ ಸಂದರ್ಭಕ್ಕೆ ತಕ್ಕ ನ್ಯಾಯತೀರ್ಮಾನ ಮಾಡುತ್ತಿದ್ದರು. ಊರಿನೊಳಗಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಪಂಚಾಯ್ತಿಕಟ್ಟೆಗಳಿದ್ದವು. ತುಸು ದೊಡ್ಡಮಟ್ಟದ ಸಮಸ್ಯೆಗಳ ವಿಲೇವಾರಿಗೆ ಸಾಮಂತರು, ಮಾಂಡಲಿಕರು, ಮತ್ತು ರಾಜರ ವ್ಯವಸ್ಥೆ ಇತ್ತು. ಪಂಚಾಯ್ತಿಕಟ್ಟೆಗಳಲ್ಲಾಗಲೀ ರಾಜನ ಆಸ್ಥಾನದಲ್ಲಾಗಲೀ ಯಾವುದೇ ಒಂದು ನಿರ್ಧಿಷ್ಟ ಪುಸ್ತಕವನ್ನು ನ್ಯಾಯದ ಪುಸ್ತಕ ಎಂದು ಆಧಾರವಾಗಿಟ್ಟುಕೊಂಡ ಉದಾಹರಣೆ ಸಿಗುವುದಿಲ್ಲ. ಆದರೆ, ಭಾರತ ದೇಶಕ್ಕೆ ಸಾರ್ವತ್ರಿಕವಾಗಿ ಒಂದು ನ್ಯಾಯಸಂಹಿತೆ ಇರಲೇಬೇಕೆಂದು ಭಾವಿಸಿ ಅನ್ವೇಷಿಸಹೊರಟ ಜೋನ್ಸನಿಗೆ ಆಗಿನ ಕಾಲದ ಪಂಡಿತರು “ಹಾಗೊಂದುವೇಳೆ ಅಂಥದೊಂದು ಪುಸ್ತಕ ಇರಲೇಬೇಕೆಂದಿದ್ದರೆ, ಮನುಸ್ಮೃತಿಯನ್ನು ಆಧಾರವಾಗಿ ತೆಗೆದುಕೊಳ್ಳಬಹುದು” ಎಂದು ಸಲಹೆ ಮಾಡಿದರು. ಸಂಸ್ಕೃತ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಇದ್ದ ಜೋನ್ಸ್, ವಿನಷ್ಟವಾಗಿಹೋಗುವುದರಲ್ಲಿದ್ದ ಮನುಸ್ಮೃತಿಯನ್ನು ಹುಡುಕಿ ತೆಗೆಸಿ, ಇಂಥ ಪ್ರಾಚೀನದಾಖಲೆಗಳು ನಶಿಸಿಹೋಗಬಾರದೆಂಬ ಕಾರಣದಿಂದ ಇಂಗ್ಲೀಷಿಗೆ ತರ್ಜುಮೆ ಮಾಡಿ ಪ್ರಕಟಿಸಿದ. ಸ್ಮೃತಿ ಅಥವಾ ಸಂಹಿತೆ ಎಂಬ ಶಬ್ದಕ್ಕೆ ಸಂವಾದಿಯಾದ ಇಂಗ್ಲೀಷ್ ಶಬ್ದ ಸಿಕ್ಕದೆ ಕೊನೆಗೆ “ದ ಹಿಂದೂ ಬುಕ್ ಆಫ್ ಲಾ ಆಫ್ ಇಂಡಿಯಾ” ಎಂಬ ಶಿರೋನಾಮೆ ಕೊಟ್ಟ. ನಮ್ಮ ಬುದ್ಧಿಜೀವಿಗಳ ಎಲ್ಲ ಮನೋಸಮಸ್ಯೆಗಳ ಮೂಲ ಇದೇ!

ಮನುಸ್ಮೃತಿಯ ಬಗ್ಗೆ ಬುದ್ಧಿಜೀವಿಗಳು ಬೆಳೆಸಿಕೊಂಡಿರುವ ಕೆಲವೊಂದು ಮೂಢನಂಬಿಕೆಗಳಿವೆ. ಅವುಗಳೆಂದರೆ,
(ಅ) ಮನುಸ್ಮೃತಿಯನ್ನು ಬರೆದವನು ಒಬ್ಬ ಬ್ರಾಹ್ಮಣ ಋಷಿ.
(ಆ) ಇಡೀ ಪುಸ್ತಕದಲ್ಲಿ ಅಬ್ರಾಹ್ಮಣರನ್ನು ಹೇಗೆ ಅಮಾನವೀಯವಾಗಿ ನಡೆಸಿಕೊಳ್ಳಬೇಕೆಂಬ ವಿಷವನ್ನು ತುಂಬಲಾಗಿದೆ. ಹೆಣ್ಣುಗಳನ್ನು ಮನುಷ್ಯರೆಂದು ಪರಿಗಣಿಸಬಾರದು ಎಂದು ಹೇಳಿದೆ.
(ಇ) ಮನುಸ್ಮೃತಿಯನ್ನು ಭಾರತದಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿತ್ತು. ಇಲ್ಲಿನ ರಾಜರು, ಆಡಳಿತಗಾರರು ತಮ್ಮೆಲ್ಲ ನ್ಯಾಯಸಮಸ್ಯೆಗಳಿಗೂ ಮನುಸ್ಮೃತಿಯಲ್ಲಿ ಉತ್ತರ ಹುಡುಕುತ್ತಿದ್ದರು.
(ಈ) ಮನುಸ್ಮೃತಿಯಲ್ಲಿ ಹೇಳಿದ ಅಂಶಗಳನ್ನು ಭಾರತದ ಎಲ್ಲ ಬ್ರಾಹ್ಮಣರೂ ಓದಿಕೊಂಡಿದ್ದಾರೆ
(ಉ) ಹಳ್ಳಿಗಳಲ್ಲಿ ಮನುಸ್ಮೃತಿಯ ಮೂಲಕವೇ ನ್ಯಾಯತೀರ್ಮಾನ ನಡೆಯುತ್ತಿದೆ. ಬ್ರಾಹ್ಮಣರು ಈ ಪುಸ್ತಕದ ಮೂಲಕವೇ ಇಡೀ ಜನತೆಯನ್ನು ನಿಯಂತ್ರಿಸಲು ಯತ್ನಿಸುತ್ತಿದ್ದಾರೆ.

ಸತ್ಯಸಂಗತಿ ಇದು: ಈ ಪುಸ್ತಕವನ್ನು ಬರೆದವನು ಒಬ್ಬ ಋಷಿಯಲ್ಲ; ರಾಜ. ಮತ್ತು ಅವನು ಮೂಲತಃ ಬ್ರಾಹ್ಮಣನಾಗಿರಬೇಕಾದ ಅವಶ್ಯಕತೆಯೇನಿಲ್ಲ. ವೇದಗಳಲ್ಲಿ ಉಕ್ತವಾದ ವರ್ಣಾಶ್ರಮದ ಪ್ರಕಾರ ರಾಜನಾದವನ ವರ್ಣ ಕ್ಷತ್ರಿಯ. ಹಾಗಾಗಿ, ಮನುಸ್ಮೃತಿಯನ್ನು ಬರೆದ ಮನುವಿಗೂ ಬ್ರಾಹ್ಮಣ ಮತ್ತು ಬ್ರಾಹ್ಮಣ್ಯಕ್ಕೂ ಸಂಬಂಧ ಇಲ್ಲ. ಮನುಸ್ಮೃತಿಯನ್ನು ತಮ್ಮ ಬಗಲಲ್ಲಿಟ್ಟುಕೊಂಡು ಈ ದೇಶದಲ್ಲಿ ರಾಜರು ನ್ಯಾಯತೀರ್ಮಾನ ಮಾಡಿದ ಬಗ್ಗೆ ಯಾವುದೇ ದಾಖಲೆ ನಮಗೆ ಸಿಗುವುದಿಲ್ಲ. ಯಾವ ಕಾವ್ಯ-ನಾಟಕ-ಸಾಹಿತ್ಯದಲ್ಲೂ ಇದರ ಉಲ್ಲೇಖ ಬರುವುದಿಲ್ಲ. “ಮನುಸ್ಮೃತಿಯಲ್ಲಿ ಹೀಗೆ ಹೇಳಿದೆ. ಹಾಗಾಗಿ ನಾನು ಹೀಗೆ ನಡೆದುಕೊಳ್ಳುತ್ತಿದ್ದೇನೆ” ಎಂದು ಹೇಳಿದ್ದು ಎಲ್ಲೂ ಸಿಗುವುದಿಲ್ಲ. ಪ್ರಾಚೀನರಿರಲಿ ಅರ್ವಾಚೀನರಿರಲಿ, “ನಮ್ಮ ಧರ್ಮಗ್ರಂಥಗಳು” ಎನ್ನುವಾಗ ಉದಾಹರಿಸುವುದು ಮಹಾಭಾರತ, ರಾಮಾಯಣ, ಭಾಗವತ, ವೇದ, ಉಪನಿಷತ್ತುಗಳನ್ನೇ ಹೊರತು ಮನುಸ್ಮೃತಿಯನ್ನಲ್ಲ. ಇನ್ನು, ಹೇಗೆ ನಮ್ಮಲ್ಲಿ ಹತ್ತುಹಲವು ಪುರಾಣಗಳು, ಉಪನಿಷತ್ತುಗಳು ಇವೆಯೋ ಹಾಗೆಯೇ ಹಲವು ಸ್ಮೃತಿಗಳೂ ಇವೆ. ಮನುಸ್ಮೃತಿಯಂತೆಯೇ ಯಾಜ್ಞವಲ್ಕ್ಯ, ಪರಾಶರ ಮುಂತಾದ ಪೌರಾಣಿಕ ವ್ಯಕ್ತಿಗಳ ಹೆಸರಲ್ಲೂ ಸ್ಮೃತಿಗಳು ಬರೆಯಲ್ಪಟ್ಟಿವೆ. ಸ್ಮೃತಿ ಎನ್ನುವುದು ನ್ಯಾಯದ ಪುಸ್ತಕ ಎನ್ನುವುದಾದರೆ, ಭಾರತಕ್ಕೆ ಒಂದಲ್ಲ; ಹಲವು ಅಂಥ ಪುಸ್ತಕಗಳು ಇದ್ದವು ಎಂದು ಒಪ್ಪಬೇಕಾಗುತ್ತದೆ. ಇನ್ನು, ಮನುಸ್ಮೃತಿಯಲ್ಲಿ ಏನು ಬರೆದಿದೆ ಎನ್ನುವುದು ಅದರ ವಾರಸುದಾರರು ಎಂದು ಬೇರೆಯವರಿಂದ ಗುರುತಿಸಲ್ಪಟ್ಟ ಬ್ರಾಹ್ಮಣರಿಗೂ ಗೊತ್ತಿಲ್ಲ! ಯಾಕೆಂದರೆ, ಯಾವುದೇ ಶಾಸ್ತ್ರಶಿಕ್ಷಣದಲ್ಲಿ ಅವರಿಗೆ ಮನುಸ್ಮೃತಿಯನ್ನು ಓದುವುದು ಕಡ್ಡಾಯವಲ್ಲ. ಮನುವಿಗಿಂತಲೂ ಯಾಜ್ಞವಲ್ಕ್ಯನ ಹೆಸರನ್ನೇ ನಾವು ಹೆಚ್ಚಾಗಿ ಕೇಳಿರುವುದು, ಓದಿರುವುದು. “ಪ್ರಾಚೀನ ಭಾರತದಲ್ಲಿ ಹಿಂದೊಮ್ಮೆ ಇದ್ದಿರಬಹುದಾದ ನ್ಯಾಯವ್ಯವಸ್ಥೆಗೆ ಆಧಾರಭೂತವಾಗಿದ್ದಿರಬಹುದಾದ ಮನುಸ್ಮೃತಿ ವಿನಾಶದ ಅಂಚಲ್ಲಿ ಇರುವುದರಿಂದ ಅದನ್ನು ಪ್ರಕಟಿಸಿ ಉಪಕಾರ ಮಾಡುತ್ತಿದ್ದೇನೆ” ಎಂದು ವಿಲಿಯಂ ಜೋನ್ಸ್ ಹೇಳುತ್ತಾನೆಯೇ ಹೊರತು “ಈ ದೇಶದ ಎಲ್ಲೆಲ್ಲೂ ಆಚರಣೆಯಲ್ಲಿರುವ ಕಾನೂನು ಪುಸ್ತಕವನ್ನು ನಾನು ಹೊಸದಾಗಿ ಅಚ್ಚುಹಾಕಿಸುತ್ತಿದ್ದೇನೆ” ಎಂದೇನೂ ಹೇಳುವುದಿಲ್ಲ ಎನ್ನುವುದನ್ನು ನಾವು ಗಮನಿಸಬೇಕು. ಹಾಗಿರುವಾಗ ಬುದ್ಧಿಜೀವಿಗಳು ಮನುಸ್ಮೃತಿಯನ್ನು ಅನುಸರಿಸಿ ನ್ಯಾಯತೀರ್ಮಾನ ಕ್ರಮ ಭಾರತದಲ್ಲಿ ವ್ಯಾಪಕವಾಗಿತ್ತು ಎನ್ನುವುದರ ಅರ್ಥವೇನು?

ಇನ್ನೂ ಮುಂದುವರಿದು ಹೇಳುವುದಾದರೆ ಮನು ಎಂಬ ರಾಜ ಸ್ಮೃತಿಯನ್ನು ಬರೆದಿರಬಹುದಾದ ಸಮಯದಲ್ಲಿ ಭಾರತದಲ್ಲಿ ಹಿಂದೂ ಎಂಬ ರಿಲಿಜನ್ ಇರಲಿಲ್ಲ. ಬಿಡಿ, ರಿಲಿಜನ್ ಎಂಬ ಕಲ್ಪನೆಯೇ ಇರಲಿಲ್ಲ! ಹಾಗಿರುವಾಗ, ಆತ ಹಿಂದೂ ಎಂಬ ಇಲ್ಲದ ರಿಲಿಜನ್ನಿಗಾಗಿ ನ್ಯಾಯಸಂಹಿತೆಯೊಂದನ್ನು ರಚಿಸಿದ ಎಂದು ಹೇಳುವುದು ಎಷ್ಟೊಂದು ಹಾಸ್ಯಾಸ್ಪದ ಸಂಗತಿ! ಇದು ಹೇಗಿದೆಯೆಂದರೆ, ನೆಲ ಅಗೆಯುವಾಗ ಸಿಕ್ಕಿದ ಆನೆಯ ಮೂಳೆಯೊಂದನ್ನು ಹಿಡಿದ ವಿಜ್ಞಾನಿ “ಇದು ಪುರಾತನ ಕಾಲದಲ್ಲಿ ಮನುಷ್ಯರನ್ನು ತಿನ್ನುತ್ತಿದ್ದ ಪ್ರಾಣಿಯಾಗಿರಬಹುದು” ಎಂದದ್ದನ್ನೇ ಲೋಕವೆಲ್ಲ ನಿಜವೆಂದು ಭ್ರಮಿಸಿ, ಹೊಸದೊಂದು ರಾಕ್ಷಸ ಜೀವಿಯನ್ನು ಕಲ್ಪನೆಯಿಂದ ಸೃಷ್ಟಿಮಾಡಿದಂತಿದೆ!

ಮತ್ತೆ ಹಳ್ಳಿಯ ಸಂದರ್ಭಕ್ಕೆ ಬನ್ನಿ. ಭಾರತದ ಯಾವ ಹಳ್ಳಿಯ ಪಂಚಾಯ್ತಿಕಟ್ಟೆಯಲ್ಲಿ ಮನುಸ್ಮೃತಿಯನ್ನು ಬಳಸಿ ನ್ಯಾಯತೀರ್ಮಾನ ಮಾಡಲಾಗಿದೆ? ಮತ್ತು ಹಳ್ಳಿಯ ಯಾವ ಪಂಚಾಯ್ತಿಯನ್ನು ಊರ ಬ್ರಾಹ್ಮಣ ಏಕಾಂಗಿಯಾಗಿ ಮಾಡಿದ ನಿದರ್ಶನ ಇದೆ? ನಾವು ಹಳ್ಳಿಗಳಲ್ಲಿ ನೋಡಿರುವ ಪ್ರಕಾರ, ಪಂಚಾಯ್ತಿಕಟ್ಟೆಯಲ್ಲಿ ಕನಿಷ್ಠ ಐದುಜನ ನ್ಯಾಯನಿರ್ಣಾಯಕರು ಇರಬೇಕು. ಐದಲ್ಲದೆ ಹೋದರೆ ಮೂವರಾದರೂ ಇರಬೇಕು. ಈ ಐವರು/ಮೂವರಲ್ಲಿ ಒಬ್ಬ ಆ ಊರಿನ ಅಥವಾ ಹಳ್ಳಿಯ ಪ್ರಮುಖ ಸೆಟ್ಟಿ/ಜಮೀನ್ದಾರ/ಗೌಡ ಆಗಿರುತ್ತಿದ್ದ. ಮತ್ತು ಮೂವರಲ್ಲಿ ಒಬ್ಬನಾಗಿ ಬ್ರಾಹ್ಮಣ ನಿಂತಿರುತ್ತಿದ್ದ. ಅದೂ ಕೂಡ, ಆತ ಬಹಳಷ್ಟು ಓದಿಕೊಂಡ ಪ್ರಾಜ್ಞನಾಗಿದ್ದರೆ ಮಾತ್ರ ಅವನಿಗಲ್ಲಿ ಸ್ಥಾನ. ಇಲ್ಲವಾದರೆ ಬ್ರಾಹ್ಮಣನ ಮಾತಿಗೆ ಕೂಡ ಪಂಚಾಯ್ತಿಯಲ್ಲಿ ಬೆಲೆ ಇಲ್ಲ. ಎರಡೂ ಕಡೆಯ ವಾದವಾಗ್ವಾದಗಳನ್ನು ಶಾಂತವಾಗಿ ಆಲಿಸಿ ಕೊನೆಗೆ ಆ ಊರಿನ ಮೂರ್ನಾಲ್ಕು ಜನ ಸಮಾಲೋಚಿಸಿ ತಮಗೆ ಸರಿಕಂಡ ಒಂದು ನ್ಯಾಯವನ್ನು ಮಂಡಿಸುತ್ತಿದ್ದರು. ಇದಕ್ಕೆ ಮನುಸ್ಮೃತಿಯ ಪುಟಗಳನ್ನು ಎಡತಾಕುವ ಪ್ರಮೇಯ ಎಂದೂ ಬರುತ್ತಿರಲಿಲ್ಲ. ಅಲ್ಲದೆ, ಲೋಕದ ಎಲ್ಲ ಸಮಸ್ಯೆಗಳಿಗೆ ಅದರಲ್ಲಿ ಉತ್ತರ ಸಿಗುತ್ತದೆ ಎನ್ನುವುದು ಕೂಡ ಮೂರ್ಖತನವಾಗುತ್ತದೆ. ವಿಷಯ ಹೀಗಿರುವಾಗ, ನಮ್ಮ ಬುದ್ಧಿಜೀವಿಗಳು ಹೇಳುವಂತೆ ಬ್ರಾಹ್ಮಣರು ಮಾತ್ರ “ಮನುವಾದಿ”ಗಳಾಗಲು ಕಾರಣವೇನು? ಮನುಸ್ಮೃತಿಯನ್ನು ಬರೆದಿರಬಹುದಾದ ಕಾಲಘಟ್ಟವನ್ನು ಕೂಡ ಪರಿಗಣಿಸದೆ ಅಥವಾ ಜಾಣತನದಿಂದ ಮರೆಮಾಚಿ ಅದರಲ್ಲಿ ಬಂದಿರುವ “ನ ಸ್ತ್ರೀ ಸ್ವಾತಂತ್ರ್ಯಮರ್ಹತಿ” ಎಂಬ ಒಂದು ಸಾಲನ್ನೇ ಹಿಡಿದು ಜೀಕಾಡುತ್ತಿರುವ ಬುದ್ಧಿಜೀವಿಗಳು ಹೆಣ್ಣಿನ ಬಗ್ಗೆ ಉಳಿದ ಮತಗ್ರಂಥಗಳು ಏನು ಹೇಳುತ್ತವೆ ಎನ್ನುವ ಪ್ರಶ್ನೆ ಬಂದಾಗ ಅಂತರ್ಧಾನರಾಗುತ್ತಾರಲ್ಲ, ಕಾರಣ ಏನಿರಬಹುದು?

5. ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಲಾಯಿತು ಎನ್ನುವ ಅಂಶವನ್ನು ಅಗತ್ಯಮೀರಿ ಬೆಳೆಸುವ ಪ್ರಗತಿಪರ ಚಿಂತಕರು, ಅದಕ್ಕಾಗಿ ಗಾಂಧೀಜಿಯನ್ನು ಎಳೆದುತರುವುದು ತೀರ ಸಾಮಾನ್ಯವಾಗಿಬಿಟ್ಟಿದೆ. ಗಾಂಧಿ ಹರಿಜನರ ದೇಗುಲ ಪ್ರವೇಶವನ್ನು ಪ್ರತಿಭಟನೆಗಿಂತಲೂ ಹೆಚ್ಚಾಗಿ ಅತ್ಯಂತ ತುರ್ತು ಅಗತ್ಯ ಎನ್ನುವ ನೆಲೆಯಲ್ಲಿ ಮಾಡಿದರು. ದೇಶದ ಕೆಲವೊಂದು ಭಾಗಗಳಲ್ಲಿ, ದಲಿತರಿಗೆ ದೇವಸ್ಥಾನ ಪ್ರವೇಶ ಇರಲಿಲ್ಲ ಎನ್ನುವ ಐತಿಹಾಸಿಕ ಸತ್ಯವನ್ನು ಒಪ್ಪೋಣ. ಆದರೆ, ಆ ಸಮಸ್ಯೆಯನ್ನು ಆಳವಾಗಿ ಚಿಂತಿಸಿದಾಗ ನಮಗೆ ಕೆಲವು ಸಂಗತಿಗಳು ಸ್ಪಷ್ಟವಾಗುತ್ತವೆ. ಒಂದು, ದೇಗುಲ ಪ್ರವೇಶ ಇಲ್ಲವಾದ್ದರಿಂದ ದಲಿತರು ಕಳೆದುಕೊಳ್ಳುವಂಥಾದ್ದು ಏನೂ ಇರಲಿಲ್ಲ. ಯಾಕೆಂದರೆ, ಅವರಿಗೆ ಅವರದ್ದೇ ಆದ ದೇವ-ದೈವರ ಗುಡಿಗಳು ಇದ್ದೇ ಇದ್ದವು. ಮತ್ತು ಇಂಥ ಪೂಜಾಸ್ಥಾನಗಳಲ್ಲಿ ಹೆಚ್ಚಿನ ಸಮಯ, ದಲಿತರೇ ಪೂಜಾವಿಧಿಗಳನ್ನೂ ಇತರ ಆಚರಣೆಗಳನ್ನೂ ನೆರವೇರಿಸುತ್ತಿದ್ದರು. (ಗಮನಿಸಿ: ದಲಿತರಿಗೆ ತಮ್ಮದೇ ಆದ ಪೂಜಾಸ್ಥಾನಗಳಿದ್ದವು ಎನ್ನುವುದು ಅವರ ದೇಗುಲಪ್ರವೇಶ ನಿರಾಕರಣೆಗೆ ಯಾವ ರೀತಿಯಲ್ಲೂ ಸಮರ್ಥನೆಯಲ್ಲ. ಆದರೆ, ದೇಗುಲಕ್ಕೆ ಪ್ರವೇಶ ನಿರಾಕರಿಸಿದ ಕಾರಣಕ್ಕೆ ಅವರು ಕಳೆದುಕೊಳ್ಳುವುದು ಏನೂ ಇರಲಿಲ್ಲ ಎನ್ನುವುದಷ್ಟೇ ಇಲ್ಲಿನ ವಾದ) ಇನ್ನು ಎರಡನೆಯದಾಗಿ, ದಲಿತರು ದೇವಸ್ಥಾನ ಪ್ರವೇಶಿಸದಂತೆ ನಿರ್ಬಂಧ ಹೇರಿದವರು ಕೇವಲ ಬ್ರಾಹ್ಮಣರಲ್ಲ. ಅದು ದಲಿತರಲ್ಲದ ಎಲ್ಲಾ ಜಾತಿಗಳ ಸಮಷ್ಠಿ ನಿರ್ಣಯವಾಗಿತ್ತೆನ್ನುವುದನ್ನು ನಾವು ಗಮನಿಸಬೇಕು. ಆದರೆ, ನಮ್ಮ ಚಿಂತಕರು, ಬುದ್ಧಿಜೀವಿಗಳು ದಲಿತರಿಗೆ ಕೇವಲ ಬ್ರಾಹ್ಮಣರನ್ನು ಮಾತ್ರ ವಿರೋಧಿಗಳು ಎಂಬಂತೆ ಬಿಂಬಿಸಿ, ಉಳಿದೆಲ್ಲ ಜಾತಿ-ಪಂಗಡಗಳನ್ನೂ ಆ ಸನ್ನಿವೇಶದಿಂದ ಮಾಯ ಮಾಡಿಬಿಟ್ಟರು. ಹಾಗಾಗಿ, ದೇಗುಲ ನಿರಾಕರಣೆಯ ಸನ್ನಿವೇಶವನ್ನು ತಮ್ಮ ಜೀವನದಲ್ಲಿ ಎದುರಿಸದ ಮತ್ತು ಅದನ್ನು ಕೇವಲ ಚರಿತ್ರೆಯ ಪುಸ್ತಕಗಳಲ್ಲಿ ಮಾತ್ರ ಓದಿಕೊಂಡ ಈ ಶತಮಾನದ ದಲಿತರು ಕೂಡ ತಮ್ಮನ್ನು ಕೇವಲ ಬ್ರಾಹ್ಮಣರು ತಡೆದರು ಎಂಬ ಸಂಕುಚಿತ ಭಾವನೆಯನ್ನು ಬೆಳೆಸಿಕೊಂಡಿದ್ದಾರೆ. ಸಮಾಜದ ಎಲ್ಲ ಸಮಸ್ಯೆಗಳನ್ನೂ ಕಪ್ಪು-ಬಿಳಿ ಮಟ್ಟಕ್ಕೆ ಇಳಿಸಿ ಸರಳೀಕರಣ ಮಾಡುವ ಬುದ್ಧಿಜೀವಿ ಚಿಂತಕರಿಗೆ ದಲಿತರನ್ನು ಒಂದು ತಕ್ಕಡಿಯಲ್ಲಿ ಹಾಕಿ, ಅವರ ವಿರೋಧಿಗಳು ಎಂದು ಇನ್ನೊಂದು ತಕ್ಕಡಿಯಲ್ಲಿ ಹಾಕಲು ಬ್ರಾಹ್ಮಣರಷ್ಟು ಸುಲಭದಲ್ಲಿ ಸಿಗುವವರು ಬೇರೆ ಯಾರಿಲ್ಲ!

ದೇವಸ್ಥಾನಗಳಿಗೆ ಪ್ರವೇಶ ನಿರಾಕರಣೆ ಎಂಬ ಸಮಸ್ಯೆಯಲ್ಲಿ ನಮ್ಮ ಈಗಿನ ಬುದ್ಧಿಜೀವಿಗಳ ಇನ್ನೊಂದು ವಿಕೃತಿಯನ್ನೂ ನೋಡಬಹುದು. ಅದೇನೆಂದರೆ, ಒಂದು ಸಾಮಾಜಿಕ ಸಮಸ್ಯೆಗೆ ಅಗತ್ಯಕ್ಕಿಂತ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟು ಅದು ಸದ್ಯಕ್ಕೆ ನಮ್ಮನ್ನು ಕಾಡುತ್ತಿರುವ ಅತ್ಯಂತ ದೊಡ್ಡ ಮತ್ತು ಗಂಭೀರ ಪಿಡುಗು ಎನ್ನುವಂತೆ ಬಿಂಬಿಸುವುದು. ಮತ್ತು ಒಂದು ಸಮಸ್ಯೆ ಅಷ್ಟೇನೂ ದೊಡ್ಡದಲ್ಲ ಎಂದು ತಮಗೇ ಚೆನ್ನಾಗಿ ಗೊತ್ತಿದ್ದರೂ (ಮತ್ತು ಗೊತ್ತಾದಾಗ), ಅದು ನಿಜವಾಗಿಯೂ ಘನಘೋರ ಸಮಸ್ಯೆ ಎಂದು ಬಿಂಬಿಸಲು ಅದಕ್ಕೆ ಸಾಮಾಜಿಕ, ಆರ್ಥಿಕ, ಧಾರ್ಮಿಕ, ಚಾರಿತ್ರಿಕ, ಭಾವನಾತ್ಮಕ ಆಯಾಮಗಳನ್ನು ಜೋಡಿಸುವುದು. ದೇವಸ್ಥಾನದ ಪ್ರವೇಶ ನಿರ್ಬಂಧದಲ್ಲಿ ಬುದ್ಧಿಜೀವಿಗಳು ಮಾಡಿದ್ದು ಇದನ್ನೇ. ತಮಗೆ ರಾಜಕೀಯವಾದ ಮೈಲೇಜ್ ದೊರಕಿಸಿಕೊಳ್ಳಲು ಅವರು ಅದನ್ನೊಂದು ರಾಷ್ಟ್ರೀಯ ಪಿಡುಗು ಎಂಬಂತೆ ಬಿಂಬಿಸಿ, ಇದೆಲ್ಲವೂ ಬ್ರಾಹ್ಮಣರ ಹುನ್ನಾರ ಎಂದು ಹುಯಿಲೆಬ್ಬಿಸಿದರು. ಮತ್ತು ದೇಗುಲ ಪ್ರವೇಶ ಮಾತ್ರವಲ್ಲ; ಗರ್ಭಗುಡಿಯ ದೇವರ ಮೇಲೂ ತಮಗೆ ಅಧಿಕಾರವಿದೆ ಎಂದು ದಲಿತರು ಭಾವಿಸುವಂತೆ ಅವರನ್ನು ಪ್ರೇರೇಪಿಸಿದರು. ಇದೊಂದು ರೀತಿಯಲ್ಲಿ, ಆಸ್ಪತ್ರೆ ಪ್ರವೇಶ ನಿರಾಕರಿಸಲ್ಪಟ್ಟ ವ್ಯಕ್ತಿ ಅದಕ್ಕಾಗಿ ಪ್ರತಿಭಟನೆ ಮಾಡುತ್ತ, “ನನಗೆ ಆಸ್ಪತ್ರೆಯ ಒಳಹೋಗಲು ಮಾತ್ರವಲ್ಲ, ಅಲ್ಲಿನ ಆಪರೇಶನ್ ಥಿಯೇಟರಿಗೂ ಹೋಗಿ ಬರುವುದಕ್ಕೆ ಅವಕಾಶ ಮತ್ತು ಅಧಿಕಾರ ಬೇಕು” ಎಂದು ಕೇಳಿಕೊಂಡಂತೆ ಆಯಿತು. ದಲಿತರನ್ನು ಮುಂದಿಟ್ಟುಕೊಂಡು ಮಾಡಿದ ಈ ಹೋರಾಟದಲ್ಲಿ ಬುದ್ಧಿಜೀವಿಗಳಿಗೆ ರಾಜಕೀಯವಾಗಿ ಮೈಲೇಜ್ ದೊರಕಿಸಿಕೊಳ್ಳುವ ವೈಯಕ್ತಿಕ ಹಿತಾಸಕ್ತಿಗಳು ಬಿಟ್ಟರೆ ಬೇರೇನೂ ಇರಲಿಲ್ಲ ಎನ್ನುವುದು ಸ್ಪಷ್ಟ. ಇಲ್ಲವಾದರೆ, ದೇಗುಲ ಪ್ರವೇಶಕ್ಕಿಂತ ಹೆಚ್ಚು ಪ್ರಾಮುಖ್ಯ ಪಡೆಯಬೇಕಾಗಿದ್ದ ವರದಕ್ಷಿಣೆ ಪಿಡುಗು (ಇದು ದಲಿತರಲ್ಲೂ ಇದೆ), ಮದ್ಯಪಾನ, ಅನಕ್ಷರತೆ, ನಿರುದ್ಯೋಗಗಳ ಬಗ್ಗೆ ಬುದ್ಧಿಜೀವಿಗಳು ಹೋರಾಟ ಮಾಡಬೇಕಾಗಿತ್ತು. ಆ ನಿಟ್ಟಿನಲ್ಲಿ ನೋಡುವುದಾದರೆ, ದೇಗುಲ ಪ್ರವೇಶಕ್ಕಿಂತಲೂ ಶಾಲೆಯನ್ನು ಪ್ರವೇಶಿಸಿ ಶಿಕ್ಷಣ ಪಡೆಯುವುದು ದಲಿತರ ಮುಖ್ಯ ಗುರಿ ಆಗಬೇಕಾಗಿತ್ತು. ಆದರೆ, ಅಂತಹ ಇತರ ಹೋರಾಟಗಳಲ್ಲಿ ನಮ್ಮ ಬುದ್ಧಿಜೀವಿಗಳಿಗಾಗಲೀ ದಲಿತ ಮುಖಂಡರಿಗಾಗಲೀ ಹೆಚ್ಚು ಆಸಕ್ತಿ ಇದ್ದದ್ದು ದಾಖಲಾಗಿಲ್ಲ. ಪ್ರಸಿದ್ಧಿಗೆ ಸುಲಭದಾರಿಯಾಗಿ ಅವರು ದೇವಸ್ಥಾನಗಳ ಮೇಲೆ ಹರಿಹಾಯ್ದರು ಎಂದು ನಾವು ಅರ್ಥ ಮಾಡಿಕೊಳ್ಳಬೇಕು ಅಷ್ಟೆ.

6. ಬ್ರಾಹ್ಮಣರು ತಮ್ಮ ಎಲ್ಲ ಜ್ಞಾನವನ್ನೂ ಸಂಸ್ಕೃತದಲ್ಲಿ ಬಚ್ಚಿಟ್ಟರು – ಎನ್ನುವ ಇನ್ನೊಂದು ವಿಚಿತ್ರ ವಾದ ಇದೆ. ಇದು ಕೂಡ ನಮ್ಮ ಬುದ್ಧಿಜೀವಿಗಳಿಗೆ ಪರದೇಶಗಳಿಂದ ದಕ್ಕಿದ ಜ್ಞಾನದ ಎಂಜಲು ಎಂದು ಹೇಳಬೇಕಾಗುತ್ತದೆ. ಪಾಶ್ಚಾತ್ಯ ದೇಶಗಳಲ್ಲಿ ಎಲ್ಲ ಜ್ಞಾನವನ್ನೂ ಲ್ಯಾಟಿನ್ ಭಾಷೆಯಲ್ಲಿ ಬರೆಯಲಾಯಿತು; ಜ್ಞಾನಸಂಪಾದನೆಗಾಗಿ ಲ್ಯಾಟಿನ್ ಕಲಿಯುವುದು ಅಗತ್ಯವಾಗಿತ್ತು ಎಂಬುದನ್ನು ಓದಿಕೊಂಡವರಿಗೆ, ಭಾರತದಲ್ಲಿ ಅಂತಹ ಸ್ಥಾನವನ್ನು ಪಡೆದಿರುವ ಭಾಷೆ ಸಂಸ್ಕೃತ; ಮತ್ತು ಅದನ್ನು ಗುತ್ತಿಗೆ ಹಿಡಿದವರು ಬ್ರಾಹ್ಮಣರು ಎಂಬ “ಸತ್ಯ” ಕಾಣಿಸಿತು! ಪರದೇಶಗಳ ಲ್ಯಾಟಿನ್ ಮೋಹಕ್ಕೂ, ಭಾರತದ ಸಂಸ್ಕೃತದ ಪರಿಸ್ಥಿತಿಗೂ ಅಜಗಜಗಳ ವ್ಯತ್ಯಾಸ ಇದೆ ಎನ್ನುವುದನ್ನು ಬುದ್ಧಿಜೀವಿಗಳು ತಿಳಿಯಲಿಲ್ಲ; ಅಥವಾ ತಿಳಿದರೂ ತಮ್ಮ ಎಂದಿನ ಜಾಣತನದಿಂದ ಮುಚ್ಚಿಟ್ಟರು. ಯುರೋಪಿನ ದೇಶಗಳಲ್ಲಿ ಲ್ಯಾಟಿನ್ ಎಲ್ಲ ಜ್ಞಾನಮಾರ್ಗಗಳ ಬಹುಮುಖ್ಯ ಸಂವಹನ ಭಾಷೆಯಾಗಿತ್ತು. ನಿತ್ಯಜೀವನದಲ್ಲಿ ಜರ್ಮನ್, ಫ್ರೆಂಚ್, ಇಂಗ್ಲೀಷ್ ಭಾಷೆಗಳನ್ನು ಬಳಸುತ್ತಿದ್ದ ಪಂಡಿತರು ತಮ್ಮ ಪುಸ್ತಕಗಳನ್ನು ಮಾತ್ರ ಲ್ಯಾಟಿನ್ ಭಾಷೆಯಲ್ಲಿ ಬರೆದುಕೊಳ್ಳುತ್ತಿದ್ದರು. ನ್ಯೂಟನ್‍ನಂತಹ ಆಧುನಿಕ ವಿಜ್ಞಾನಿ ಕೂಡ ಪ್ರಿನ್ಸಿಪಿಯಾ ಮ್ಯಾಥಮೆಟಿಕಾ ಎಂಬ ತನ್ನ ಜೀವಮಾನದ ಉದ್ಗ್ರಂಥವನ್ನು ಲ್ಯಾಟಿನ್‍ನಲ್ಲಿ ಬರೆದ. ಅಂದರೆ, ಅವರಿಗೆ ಲ್ಯಾಟಿನ್ ಎಂಬುದು “ಯೂನಿವರ್ಸಿಟಿ ಭಾಷೆ”ಯಾಗಿತ್ತು. ವಿಜ್ಞಾನ, ಇತಿಹಾಸ, ಸಾಹಿತ್ಯ, ಭೂಗೋಳ – ಯಾವುದೇ ಇರಲಿ, ಅದರಲ್ಲಿ ಕನಿಷ್ಠಮಟ್ಟದ ಜ್ಞಾನಸಂಪಾದನೆ ಮಾಡಬೇಕಾದರೂ ಲ್ಯಾಟಿನ್ ತಿಳಿದಿರಬೇಕು ಎನ್ನುವ ಪರಿಸ್ಥಿತಿ ಇತ್ತು. ಹದಿನಾರನೇ ಶತಮಾನದಲ್ಲಿ ಶೇಕ್ಸ್ ಪಿಯರ್ ಇಂಗ್ಲೀಷಿನಲ್ಲಿ ಬರೆಯಲು ಶುರುಮಾಡಿದಾಗ, ಅದಿನ್ನೂ ಕಾಡುಜನರ ಭಾಷೆಗಿಂತ ದೊಡ್ಡ ಗೌರವವನ್ನೇನೂ ಪಡೆದಿರಲಿಲ್ಲ ಎನ್ನುವುದನ್ನು ನಾವು ನೆನಪಿಡಬೇಕು.

ಆದರೆ, ಇದನ್ನೇ ಭಾರತದ ಪರಿಸ್ಥಿತಿಗಳಿಗೆ ಹೋಲಿಸಬಹುದೆ ಎನ್ನುವುದು ಸದ್ಯದ ಪ್ರಶ್ನೆ. ಯುರೋಪಿನಲ್ಲಿ ಲ್ಯಾಟಿನ್ ವಹಿಸಿದ ಪಾತ್ರವನ್ನು ನಮ್ಮಲ್ಲಿ ಸಂಸ್ಕೃತವೂ ವಹಿಸಿಕೊಂಡಿತ್ತು ಎನ್ನುವುದನ್ನು ಒಪ್ಪೋಣ. ವೇದ, ಉಪನಿಷತ್ತುಗಳೆಲ್ಲ ಸಂಸ್ಕೃತದಲ್ಲೇ ಬಂದವು ಎನ್ನುವುದನ್ನೂ ಒಪ್ಪೋಣ. ಆದರೆ, ಆಡುಮಾತಿಗೆ ಬೇರೆ ಭಾಷೆ, ಜ್ಞಾನಸಂಗ್ರಹಕ್ಕೆ ಮಾತ್ರ ಸಂಸ್ಕೃತ – ಎಂಬ ಇಬ್ಬಗೆಯ ನೀತಿ ನಮ್ಮ ದೇಶದಲ್ಲಿ ಬೆಳೆದುಬಂದದ್ದನ್ನು ನಾವು ಕಾಣಲಾರೆವು. ನಮ್ಮ ದೇಶದಲ್ಲಿ ಹಲವು ಶತಮಾನಗಳಿಂದ ಉಳಿದು ಬೆಳೆದು ಬಂದಿರುವ ತಮಿಳು, ಕನ್ನಡ, ಮಲಯಾಳಂ, ಪ್ರಾಕೃತ, ಬಂಗಾಳಿ, ಸಿಂಧಿ ಮುಂತಾದ ಭಾಷೆಗಳಲ್ಲಿ ಅತ್ಯಂತ ಪ್ರಾಚೀನ ಕಾಲದಿಂದಲೂ ಕಾವ್ಯ-ನಾಟಕ, ವಿಜ್ಞಾನ, ಇತಿಹಾಸಗಳು ಲಿಖಿತರೂಪದಲ್ಲಿ ಬಂದದ್ದನ್ನು ನಾವು ನೋಡುತ್ತೇವೆ. ಅದೂ ಅಲ್ಲದೆ, ಭಾರತದ ಯಾವ ಜನಪದ ಪ್ರಕಾರವನ್ನೂ ಸಂಸ್ಕೃತ ಹಾಳುಮಾಡಿದ, ನಾಶಮಾಡಿದ ಉದಾಹರಣೆ ನಮಗೆ ಸಿಗುವುದಿಲ್ಲ. ಕರ್ನಾಟಕದ ವಿಷಯವನ್ನೇ ತೆಗೆದುಕೊಳ್ಳುವುದಾದರೂ ಈ ಮಾತು ಸತ್ಯ. ಹಳೆ ಮೈಸೂರು ಕಡೆಯಲ್ಲಿ ಮಲೆಕುಡಿಯರು ಹಾಡುವ ಜನಪದ ಮೌಖಿಕ ಕಾವ್ಯಗಳಿರಬಹುದು, ತುಳುವರು ಹಾಡುವ ಪಾಡ್ದನಗಳಿರಬಹುದು ಅಥವಾ ಯಕ್ಷಗಾನದಂತಹ ಜನಪದ ಕಲಾಪ್ರಕಾರಗಳಿರಬಹುದು – ಇವೆಲ್ಲ ಸಂಸ್ಕೃತದ ಸಂಸರ್ಗವಿಲ್ಲದೆಯೂ ಸ್ವತಂತ್ರ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿವೆ. ಯುರೋಪಿನ ಪರಿಸ್ಥಿತಿಯಲ್ಲಿ ಇಂತಹ ಭಾಷಾಸ್ವಾತಂತ್ರ್ಯವನ್ನು ಆ ಕಾಲದಲ್ಲಿ ಕಲ್ಪಿಸಿಕೊಳ್ಳುವುದು ಕಷ್ಟವಾಗಿತ್ತು.

ಭಾರತದಲ್ಲಿ ಸಂಸ್ಕೃತ ಮತ್ತು ಬ್ರಾಹ್ಮಣರ ನಡುವಿನ ಸ್ನೇಹ ಕೇವಲ ಮಂತ್ರಗಳ ಮಟ್ಟಕ್ಕೆ ನಿಂತಿದೆ. ರಾಮಾಯಣ, ಮಹಾಭಾರತದಂತಹ ಉಳಿದ ವಿಷಯಗಳನ್ನು ಸಂಸ್ಕೃತದಲ್ಲೇ ಓದಬೇಕಾದ ಅನಿವಾರ್ಯತೆ ಏನೂ ಇಲ್ಲ. ಈಗಲ್ಲ; ಹಿಂದೆಯೂ ಇರಲಿಲ್ಲ. ವಾಲ್ಮೀಕಿಯ ರಾಮಾಯಣ ಎಷ್ಟು ಜನಪ್ರಿಯವೋ ಬ್ರಿಜ್ ಭಾಷೆಯಲ್ಲಿ ಬರೆಯಲ್ಪಟ್ಟ ತುಳಸೀದಾಸರ ರಾಮಚರಿತಮಾನಸವೂ ಅಷ್ಟೇ, ಅಥವಾ ಅದಕ್ಕಿಂತ ಹೆಚ್ಚು ಜನಪ್ರಿಯ. ಒಂದು ತಕ್ಕಡಿ ಮಾಡಿಸಿ, ಸಂಸ್ಕೃತ ಸಾಹಿತ್ಯವನ್ನೂ ಉಳಿದ ಭಾಷೆಯ ಸಾಹಿತ್ಯಗಳನ್ನೂ ತೂಗಿದರೆ, ಖಂಡಿತವಾಗಿಯೂ ಸಂಸ್ಕೃತೇತರ ಭಾಷೆಗಳಲ್ಲಿ ಬಂದ ಸಾಹಿತ್ಯಕ್ಕೆ ಫಣಿರಾಯನೂ ತಿಣುಕುವ ಪರಿಸ್ಥಿತಿ ಬಂದೀತು! ಇನ್ನೊಂದು ಸ್ವಾರಸ್ಯಕರ ಅಂಶ ನೋಡಿ: ಬ್ರಾಹ್ಮಣರು ತಮ್ಮ ಸಂಧ್ಯಾವಂದನೆ, ಪೂಜೆಗಳಿಗೆ ಬೇಕಾದಷ್ಟು ಸಂಸ್ಕೃತವನ್ನು ನೆಚ್ಚಿಕೊಂಡಿದ್ದಾರೆಯೇ ಹೊರತು, ಹೊರಜಗತ್ತಿನ ವ್ಯವಹಾರಗಳಲ್ಲಿ ಆಯಾ ಪ್ರದೇಶಗಳ ಜನರಾಡುವ ಮಾತನ್ನೇ ಬಳಸಿಕೊಂಡು ಬಂದಿದ್ದಾರೆ. ತುಳುನಾಡ ಭೂತಕೋಲದ ಸಮಯದಲ್ಲಿ, ಬ್ರಾಹ್ಮಣ ಕೂಡ ದೈವದ ಜೊತೆ ತುಳುವಲ್ಲೇ ಸಂಭಾಷಿಸಬೇಕು. ದೇವಸ್ಥಾನಗಳಲ್ಲಿ, ನಾಗಬನಗಳಲ್ಲಿ ದೇವರಲ್ಲಿ ಪ್ರಾರ್ಥನೆ ಮಾಡುವಾಗ ಪುರೋಹಿತರು ಕನ್ನಡ ಅಥವಾ ಆಯಾ ಸ್ಥಳೀಯ ಭಾಷೆಯಲ್ಲೇ ಮಾತಾಡುತ್ತಾರೆ. ಉಡುಪಿಯ ಮಠದ ಸ್ವಾಮಿಗಳಾದ ವಾದಿರಾಜರು ಅಬ್ರಾಹ್ಮಣರು ಆಡುವ ತುಳುಭಾಷೆಯಲ್ಲಿ ಹಾಡುಗಳನ್ನು ಬರೆದರು. ಮದುವೆಮಂಟಪದಲ್ಲಿ ಹೆಂಗಸರು ಹಾಡುವ ಲಕ್ಷ್ಮೀ ಶೋಭಾನೆಯಂತಹ ಕೃತಿಗಳನ್ನು ಕನ್ನಡದಲ್ಲಿ ರಚಿಸಿದರು. ಎಲ್ಲ ಜ್ಞಾನವನ್ನೂ ಸಂಸ್ಕೃತದಲ್ಲಿ ಬಚ್ಚಿಡಬೇಕೆಂದಿದ್ದರೆ, ಮಠದ ಸ್ವಾಮಿಗಳು ಅದನ್ನು ಬಿಟ್ಟು ಬೇರೆ ಭಾಷೆಯನ್ನು ಬಳಸುವುದೇ ಮಹಾಪರಾಧವಾಗುತ್ತಿತ್ತಲ್ಲ? ಸಂಸ್ಕೃತದ ಬಗ್ಗೆ ಪೂರ್ವಗ್ರಹಪೀಡಿತ ಸಂಶೋಧನೆ ಮಾಡಿರುವ ಬುದ್ಧಿಜೀವಿಗಳು ಹಳ್ಳಿಗಳತ್ತ ಕತ್ತೆತ್ತಿಯೂ ನೋಡಿಲ್ಲ ಎನ್ನುವುದು ಸೂರ್ಯಪ್ರಕಾಶದಷ್ಟು ಸ್ಪಷ್ಟವಾಗಿದೆ.

-5-

ಬುದ್ಧಿಜೀವಿಗಳಿಗೆ ಬ್ರಾಹ್ಮಣರು ಯಾಕೆ ಪ್ರತಿಸ್ಪರ್ಧಿಗಳಾಗಿದ್ದಾರೆ; ಯಾಕೆ ಅವರು ಬ್ರಾಹ್ಮಣರಂತೆ ಬೇರೆ ಜಾತಿಗಳನ್ನು ಟಾರ್ಗೆಟ್ ಮಾಡುತ್ತಿಲ್ಲ ಎನ್ನುವುದಕ್ಕೆ ಮುಖ್ಯವಾಗಿ ಎರಡು ಕಾರಣಗಳನ್ನು ಯೋಚಿಸಬಹುದು. ಮೊದಲನೆಯದಾಗಿ, ಬ್ರಾಹ್ಮಣರ ಅಲ್ಪಸಂಖ್ಯೆ ಬುದ್ಧಿಜೀವಿಗಳಿಗೊಂದು ವರದಾನ. ದೇಶದ ಯಾವ ರಾಜ್ಯದಲ್ಲೂ ಶೇಕಡಾ 4ನ್ನು ದಾಟದ ಬ್ರಾಹ್ಮಣರು, ಆ ಕಾರಣಕ್ಕಾಗಿಯೇ ಸಾಫ್ಟ್ ಟಾರ್ಗೆಟ್. ಜನಸಂಖ್ಯೆಯ ದೃಷ್ಟಿಯಿಂದಲೂ, ತೋಳ್ಬಲದ ದೃಷ್ಟಿಯಿಂದಲೂ! ಅಲ್ಪಸಂಖ್ಯಾತ ಎಂಬ ಟ್ಯಾಗ್ ಹಾಕಿಕೊಂಡು ದೇಶದ ಪ್ರಮುಖ ಕೋಮುಗಳಾಗಿ ಬೆಳೆಯುತ್ತಿರುವ ಜನರ ವಿರುದ್ಧ ಮಾತಾಡಿ ಜೀವಕ್ಕೆ ಕುತ್ತು ತಂದುಕೊಳ್ಳುವುದಕ್ಕಿಂತ, ನಿಜಕ್ಕೂ ಅಲ್ಪಸಂಖ್ಯಾತರಾಗಿರುವ ಬ್ರಾಹ್ಮಣರನ್ನು ಚುಚ್ಚಿ, ಅವರೇ ಈ ದೇಶದ ಎಲ್ಲ ಸಮಸ್ಯೆಗಳಿಗೂ ಹೇತು ಎನ್ನುವುದರಲ್ಲಿ ಬುದ್ಧಿಜೀವಿಗಳಿಗೆ ರಾಜಕೀಯ ಲಾಭ ಇದೆ.

ಇನ್ನು ಎರಡನೆಯದಾಗಿ, ಬ್ರಾಹ್ಮಣ ಎಂಬ ಪದ ಬುದ್ಧಿವಂತಿಕೆಗೆ ಪರ್ಯಾಯವಾಗಿ ಬಳಕೆಯಾಗುವುದರಿಂದ, ಬುದ್ಧಿಜೀವಿಗಳು ಬ್ರಾಹ್ಮಣರನ್ನು ತಮ್ಮ ಪ್ರತಿಸ್ಪರ್ಧಿಗಳು ಎಂದು ತಿಳಿದಿದ್ದಾರೆ. (ಬುದ್ಧಿವಂತಿಕೆಗೂ ಬ್ರಾಹ್ಮಣ ಜಾತಿಗೂ ಸಂಬಂಧ ಕಲ್ಪಿಸಿರುವವರೂ ನಮ್ಮ ಬುದ್ಧಿಜೀವಿಗಳೇ! ವೇದಗಳಲ್ಲಿ ಎಲ್ಲ ಜ್ಞಾನ ಅಡಕವಾಗಿದೆ ಎಂಬ ಮೂಢನಂಬಿಕೆಯಿಂದ ಹುಟ್ಟಿದ ಮೂಢಸಿದ್ಧಾಂತ ಇದು) ಇತಿಹಾಸದಲ್ಲಿ ಆಗಿಹೋಗಿರುವ ಅನೇಕ ರಾಜಕೀಯ ನಾಯಕರಿಗೆ ಮತ್ತು ಸಾಹಿತಿಗಳಿಗೆ ತಮ್ಮ ಬುದ್ಧಿವಂತಿಕೆ, ಪಾಂಡಿತ್ಯ, ಜಾಣ್ಮೆಗಳನ್ನು ತಮ್ಮ ಬ್ರಾಹ್ಮಣ ಗೆಳೆಯರಿಂದ ಪ್ರಶಂಸಿಸಿಕೊಳ್ಳುವ ತೆವಲು ಇದ್ದದ್ದನ್ನು ನಾವು ನೋಡಿದ್ದೇವೆ. ಬಹುಶಃ ನಮ್ಮ ಸಮಾಜದ ಪ್ರಗತಿಪರ, ಜೀವಪರ, ತಳ ಸಮುದಾಯಪರ ಚಿಂತಕರಿಗೆ ಬ್ರಾಹ್ಮಣರನ್ನು ಟಾರ್ಗೆಟ್ ಮಾಡಿದರೆ ತಮ್ಮ ಅಹಮ್ಮುಗಳನ್ನು ತಣಿಸಿಕೊಳ್ಳಬಹುದೆಂಬ ಭ್ರಮೆ ಇದ್ದಿರಬಹುದು. ಹಾಗಾಗಿಯೇ ಬ್ರಾಹ್ಮಣರನ್ನು ಗುರಿ ಮಾಡಿದಾಗೆಲ್ಲ ಈ ಚಿಂತಕರು “ಹಾರುವ”, “ಗಿಂಡಿಮಾಣಿ”, “ಜನಿವಾರ”, “ಭಟ್ಟ” ಮುಂತಾದ ಪದಗಳನ್ನು ಎಗ್ಗಿಲ್ಲದೆ, ತಾವೊಂದು ಜನಾಂಗವನ್ನು ಹೀಯಾಳಿಸುತ್ತಿದ್ದೇವೆನ್ನುವ ಪರಿವೆ ಇಲ್ಲದೆ ಬಳಸುತ್ತಾರೆ. ಇದೇ ಜೀವಪರ ಹೋರಾಟಗಾರರು ಮತ್ತು ಟ್ಯಾಬ್ಲಾಯ್ಡ್ ಬರಹಗಾರರು ಬೇರೆ ಜಾತಿಗಳನ್ನು ಹಾಗೆ ನೇರವಾಗಿ ಟಾರ್ಗೆಟ್ ಮಾಡಿದ್ದನ್ನು ಯಾರೂ ಕಂಡಿಲ್ಲ, ಕೇಳಿಲ್ಲ. ಬ್ರಾಹ್ಮಣರಂತೆಯೇ ಮುಸ್ಲಿಮ್ ಅಥವಾ ಕ್ರಿಶ್ಚಿಯನ್ ಮತಗಳವರನ್ನು “ಟೋಪಿ”, “ಹಲಾಲ್”, “ಶಿಲುಬೆ” ಎಂದೆಲ್ಲ ಬರೆಯಹೋದರೆ ಅದಾಗಿ ಒಂದೆರಡು ದಿನಗಳ ಒಳಗೇ ತಮ್ಮ ಹೆಣಗಳು ಉರುಳುತ್ತವೆ ಎಂದು ಈ “ಜೀವಪರ” ಚಿಂತಕರಿಗೆ ಚೆನ್ನಾಗಿ ಗೊತ್ತಿದೆ. ಅದಿರಲಿ, ಹಿಂದೂ ಧರ್ಮದ ಒಳಗಿನ ಬೇರೆ ಜಾತಿಗಳಿಗೆ ಕೂಡ ಇವರು ಅಂತಹ ಯಾವ ವಿಶೇಷಣಗಳನ್ನೂ ಬಳಸಲಾರರು. ಲಿಂಗಾಯತ, ವೀರಶೈವ, ಬಂಟ, ಕುರುಬ, ಒಕ್ಕಲಿಗ ಮುಂತಾದ ಸಮುದಾಯಗಳಿಗೆ ಹೇಯಪದಗಳನ್ನು ಬಳಸಿದರೂ ಅಷ್ಟೇ, ಈ ಜೀವಪರರ ಜೀವ ಪರಲೋಕಕ್ಕೆ ಹೋಗುತ್ತದೆ. ಹಾಗಾಗಿ, ಇವರೆಲ್ಲರ ತೆವಲು, ತೀಟೆಗಳು ಬ್ರಾಹ್ಮಣ ಸಮುದಾಯಕ್ಕೆ ಮಾತ್ರ ಸೀಮಿತವಾಗಿವೆ. ಅಂದರೆ, ನಮ್ಮ ಬುದ್ಧಿಜೀವಿಗಳ ಬರಹ ಮತ್ತು ಬಳಸುವ ಭಾಷೆಯಲ್ಲಿ ಸಮಾಜ ಹಿತಕ್ಕಿಂತಲೂ ತಮ್ಮ ಜೀವ ಉಳಿಸಿಕೊಳ್ಳುವ ಮತ್ತು ತಮ್ಮೊಳಗಿನ ಆದಿಮ ಪ್ರವೃತ್ತಿಗಳನ್ನು ತಣಿಸಿಕೊಳ್ಳುವ ಹಿತಾಸಕ್ತಿಗಳೇ ಮುಖ್ಯ ಎಂದಾಯಿತು.

ಈ ಲೇಖನದ ಉಪಸಂಹಾರಕ್ಕಾಗಿ ಮತ್ತೆ ಹಳ್ಳಿಗಳ ವಿಷಯಕ್ಕೆ ಬರುವುದಾದರೆ, ಹಳ್ಳಿಗಳಲ್ಲಿ ಬ್ರಾಹ್ಮಣ ಇತರ ಜಾತಿಗಳೊಂದಿಗೆ ತಾನಾಗಿ ಜಗಳಕ್ಕಿಳಿದ, ಅವರನ್ನು ದ್ವೇಷದಿಂದ ಕಂಡ ಉದಾಹರಣೆಗಳು ಸಿಕ್ಕುವುದು ಅಪರೂಪ. ಅವನೂ ಸಮಾಜದ ಒಂದು ಭಾಗವೇ ಆಗಿರುವುದರಿಂದ, ಅವನಿಗೆ ಉಳಿದ ಜಾತಿಯ ವ್ಯಕ್ತಿಗಳೊಂದಿಗೆ ಜಗಳಾಡಿ ಆಗಬೇಕಾದ್ದಾದರೂ ಏನು? ಇನ್ನೂ ಮುಂದುವರಿದು ಹೇಳುವುದಾದರೆ, ಸಮಾಜದ ಉಳಿದೆಲ್ಲ ಜಾತಿಯ ಜನರನ್ನು ಎಲ್ಲರಿಗಿಂತ ಹೆಚ್ಚು ಅವಲಂಭಿತನಾದವನು ಬ್ರಾಹ್ಮಣನೇ. ಅವನು ಉಳಿದವರ ಹಗೆ ಕಟ್ಟಿಕೊಂಡು ಏಕಾಂಗಿಯಾಗಿ ಬದುಕುವುದು ಸಾಧ್ಯವಿಲ್ಲದ ಮಾತು. ಹಳ್ಳಿಗಳನ್ನು ಬಿಟ್ಟು ಸಿಟಿಗಳಲ್ಲಿ ಬದುಕು ಕಟ್ಟಿಕೊಂಡಿರುವ ಬ್ರಾಹ್ಮಣರೂ ಅಷ್ಟೇ; ತಮ್ಮ ಓರಗೆಯ ಗೆಳೆಯರ ಜೊತೆ, ಸಹೋದ್ಯೋಗಿಗಳ ಜೊತೆ ಜಾತಿಯ ವಿಷಯದಲ್ಲಿ ಮನಸ್ತಾಪ ಮಾಡಿಕೊಳ್ಳುವುದು ದೂರದ ಸಂಗತಿ. ಹಾಗಂತ, ಆತ ತನ್ನ ಆತ್ಮಾಭಿಮಾನ ಬಿಟ್ಟು ತಲೆಬಾಲಗಳಿಲ್ಲದ ಪಶುವಿನಂತೆ ಬದುಕಬೇಕೆಂದೂ ಅರ್ಥವಲ್ಲ. ತನ್ನ ಜಾತಿಯ ಬಗ್ಗೆ ಅಭಿಮಾನ ಇಟ್ಟುಕೊಂಡೇ ಉಳಿದವರ ಬಗ್ಗೆ ಸಹನೆ, ಪ್ರೀತಿಗಳಿಂದ ಇರುವುದು ಬ್ರಾಹ್ಮಣನಿಗೆ ಸಾಧ್ಯವಿದೆ. ನಮ್ಮ ಹಳ್ಳಿಗಳಲ್ಲಿ ಬಾಳುವ ಪ್ರತಿಯೊಬ್ಬ ಶಾಸ್ತ್ರಿ, ಭಟ್ಟ, ಜೋಯಿಸ, ಪೂಜಾರಿ, ಶೆಟ್ಟಿ, ಸಮಗಾರ, ರಫೀಕ, ಫೆರ್ನಾಂಡಿಸ್‍ನಿಗೂ ಹಾಗೆ ತನ್ನ ಜಾತಿಯ ಮೇಲೆ ಅಭಿಮಾನ ಮತ್ತು ಪರಜಾತಿಗಳ ಬಗ್ಗೆ ಗೌರವ, ಸಹನೆ ಇದ್ದೇಇದೆ. ಅದನ್ನು ನಮ್ಮ ಬುದ್ಧಿಜೀವಿಗಳು ಪಶ್ಚಿಮಬುದ್ಧಿಗಳಾಗಿ ಪಾಂಡಿತ್ಯ ಗಳಿಸಿ ನಮ್ಮ ಹಳ್ಳಿಗರಿಗೆ ಬೋಧಿಸಹೊರಟಿರುವುದು ಅತ್ಯಂತ ಹಾಸ್ಯಾಸ್ಪದ. ಎಲ್ಲರಿಗಿಂತ ಮೊದಲು ಸಹನೆ, ಕರುಣೆ, ಪ್ರೀತಿ, ಗೌರವ ಮತ್ತು ಆತ್ಮಗೌರವಗಳನ್ನು ಕಲಿಯಬೇಕಿರುವುದು ಬುದ್ಧಿಜೀವಿಗಳೇ ಹೊರತು ಹಳ್ಳಿಯ ಬೋರೇಗೌಡನಲ್ಲ.

19 ಟಿಪ್ಪಣಿಗಳು Post a comment
 1. ನವೀನ ಗಂಗೋತ್ರಿ
  ಆಗಸ್ಟ್ 18 2015

  ನಾವು ಬದುಕಿರುವ ಕಾಲದಲ್ಲಿ ನಮ್ಮ ಸುತ್ತ ಪಸರಿಸಿರುವ ವಿಚಾರಳು ನಮ್ಮನ್ನು ಯಾವೆಲ್ಲ ಬಗೆಯಲ್ಲಿ ಬಂಧಿಗಳನ್ನಾಗಿಸುತ್ತದೆ ಎನ್ನುವುದಕ್ಕೆ ಇವತ್ತಿನ ಬುದ್ಧಿ ಜೀವಿಗಳು ಉತ್ತಮ ಉದಾಹರಣೆ. ಬ್ರಾಹ್ಮಣರೆಂದರೆ ಸಮಾಜದ ಮೇಲ್ವರ್ಗವಾಗಿದ್ದು, ಉಳಿದವರನ್ನೆಲ್ಲ ಕೊಂದು ತಿಂದೇ ಬದುಕಿದ ಜನಾಂಗ ಎಂದು ನಂಬಿಕೊಂಡಿರುವ ಇವರ ನಂಬುಗೆಯನ್ನು ಯಾವುದೇ ಸತ್ಯ ಸಂಗತಿಯೂ ಬದಲಿಸಲಾರದು. ತಮ್ಮದೇ ಕುಕೂನ್ ನಲ್ಲಿ ಬಂಧಿಯಾಗಿರುವ ಇವರನ್ನೆಲ್ಲ ಕಂಡರೆ ಅಯ್ಯೋ ಅನ್ನಿಸುತ್ತದೆ. ಆದರೆ, ಅದೇನು ಮಾಡಲಾದೀತು, ಸ್ವಯಂಕೃತ ಅಪರಾಧ ಅದು.

  ಫೇಸ್ ಬುಕ್ಕಲ್ಲಿ ನೋಡಿ. ಬ್ರಾಹ್ಮಣರ ವಿರುದ್ಧ ಸಧೃಢವಾದ ಟೀಕೆ ಮಾಡುವವರಲ್ಲಿ ಮುಕ್ಕಾಲು ಪಾಲು ಬ್ರಾಹ್ಮಣರೇ ಇರುವುದು. ತಮ್ಮನ್ನು ತಾವು ಸೆಲ್ಕ್ಯುಲರ್ ಎಂದೂ, ಜೈ ಭೀಮ್ ಎಂದೂ, ದಲಿತರೆಂದೂ ಕರೆದುಕೊಂಡು ಓರಾಟದ ಮಾತಾಡುವ ಇವತ್ತಿನ ಹೊಸತಲೆಮಾರಿನ ಯುವಕರಲ್ಲಿ ಸರಿಯಾದ ನಿಲುಮೆಯಾಗಲೀ, ಗಟ್ಟಿಯಾದ ಭಾಷೆಯಾಗಲೀ, ವಿಚಾರಗಳ ಅಧ್ಯಯನವಾಗಲೀ, ಯಾವುದೊಂದರ ಕುರಿತಾದ ರಚನಾತ್ಮಕ ಬದ್ಧತೆಯಾಗಲೀ ಇಲ್ಲ. ರಾಕೇಶ್ ಶೆಟ್ಟಿಯವರ ವಿರೋಧವಾಗಿ ಅಮೀನ್ ಮಟ್ಟುರವರು ಟಿ ವಿ ಚಾನೆಲ್ ಗೆ ಬರುವವರೆಗೂ ಆ ಪಾಳೆಯದಲ್ಲಿ ಅವರೊಬ್ಬ ಅಧ್ಯಯನ ಇರುವ ಮತ್ತು ಮಾತಿನ ಮೇಲೆ ಹಿಡಿತ ಇರುವ ವ್ಯಕ್ತಿ ಅಂದುಕೊಂಡಿದ್ದೆ. ಆ ಚರ್ಚೆಯೊಂದಿಗೆ ’ಹಾಗೇನೂ ಇಲ್ಲ’ ಎನ್ನುವುದು ಸಾಬೀತಾಯಿತು.

  ಒಟ್ಟಿನಲ್ಲಿ ಜುಟ್ಟದವನನ್ನು ಎಷ್ಟೇ ಜಿಗುಟಿದರೂ ಸಂಧ್ಯಾವಂದನೆಯ ಸಮಯಕ್ಕೆ ಜಗಳಕ್ಕೆ ನಿಲ್ಲದೆ ತನ್ನ ಕರ್ಮದ ಕರೆಗೆ ಓಗೊಡುವುದನ್ನು ಕಂಡು ಎಂದೋ ಒಂದಿನ ಸುಮ್ಮನಾದಾರು ಬಿಡಿ.

  ಉತ್ತರ
 2. Murali Shastry
  ಆಗಸ್ಟ್ 18 2015

  ಹಳ್ಳಿಗಳಲ್ಲಿ ಈಗಲೂ ಬೇರೆ ಜಾತಿಯವರು ದಲಿತರನ್ನು ಒಳಗಡೆ ಬಿಟ್ಟು ಕೊಳ್ಳುವುದಿಲ್ಲ,ಅದರ ಬಗ್ಗೆ ಗೊತ್ತಿದ್ದರೂ ಇವರುಗಳ ಜಾಣ ಮೌನ,ಯಾವುದಾದರು ಒಂದು ದೊಡ್ಡ ಜನಾಂಗದ ತಪ್ಪಿನ ಬಗ್ಗೆ ಅಥ್ವಾ ಅವರ ಯಾವುದೇ ನಡೆಯ ಬಗ್ಗೆ ಇವರು ಗಳು ತಾಕತ್ತಿದ್ದರೆ ಚ ಕಾರ ಎತ್ತಲಿ ನೋಡೋಣ..!!!

  ಉತ್ತರ
 3. ಆಗಸ್ಟ್ 18 2015

  ಸರ್ ಈ ಬುದ್ಧಿಜೀವಿಗಳಿಗೆ ಎಷ್ಟು ಹೇಳಿದರು ತಿಳಿಯುವುದಿಲ್ಲ ಬಿಡಿ. ಸುಮ್ಮನೆ ನಮ್ಮ ಸಮಯ ಹಾಳು

  ಉತ್ತರ
 4. rajaram hegde
  ಆಗಸ್ಟ್ 18 2015

  ರೋಹಿತ್ ನಿಮ್ಮ ಲೇಖನವನ್ನು ಓದಿ ಖುಷಿಯಾಯಿತು. ಬಹುಶಃ ಇದುವರೆಗೆ ಈ ಕುರಿತು ಬಂದ ಲೇಖನಗಳೆಲ್ಲವಕ್ಕಿಂತ ತುಂಬಾ ಸುದೀರ್ಘವಾಗಿ ಸಾಧಾರವಾಗಿ ನಿಮ್ಮ ವಿಚಾರಗಳನ್ನು ಇಟ್ಟಿದ್ದೀರಾ. ಅದೇ ವೇಳೆಗೆ ನಮ್ಮ ಸಾಂಪ್ರದಾಯಿಕ ಸಮಾಜ ಹಾಗೂ ಆಧುನಿಕ ವಿಚರವಾದಿಗಳ ಎರಡು ಪ್ರತ್ಯೇಕ ವಾಸ್ತವಗಳ ಕುರಿತೂ ವ್ಯತ್ಯಾಸಗಳನ್ನು ಗುರುತಿಸುತ್ತ ನೀವು ನಿಮ್ಮ ವಿಷಯವನ್ನು ಇಟ್ಟದ್ದು ಕೂಡ ಮನದಟ್ಟಾಗುವಂತಿದೆ. ಅದಕ್ಕಿಂತಲೂ ಯಾವ ಜಾತಿಯನ್ನೂ ಸಮರ್ಥನೆ ಮಾಡಿಕೊಳ್ಳುವ ಉದ್ದೇಶವಿಲ್ಲದೇ, ಆಗುತ್ತಿರುವ ತಪ್ಪುಗಳ ಕುರಿತು ಗಮನ ಸೆಳೆಯುವುದರಲ್ಲೇ ನೀವು ನಿಮ್ಮ ಲಕ್ಷ್ಯವನ್ನು ಕೇಂದ್ರೀಕರಿಸಿದ್ದೀರಿ. ನನಗೆ ಸಂತೋಷವಾದದ್ದು ಕನ್ನಡ ಭಾಷೆಯ ಜನಪ್ರಿಯ ಬರವಣಿಗೆಗಳಲ್ಲಿ ಇಂಥ ಲೇಖನಗಳು ಬರುವಂತಾಗಿದೆಯಲ್ಲಾ ಅಂತ. ಬಹುಶಃ ಆ ಮಟ್ಟಿಗೆ ಇಂದು ಭಾರತೀಯ ಭಾಷೆಗಳಲ್ಲೇ ಕನ್ನಡ ಭಾಷೆಯು ನಮ್ಮ ಸಂಸ್ಕೃತಿ ಚಿಂತನೆಯ ಕುರಿತ ಹೊಸ ಆಯಾಮಗಳನ್ನು ದಕ್ಕಿಸಿಕೊಳ್ಳುತ್ತಿರುವ ಭಾಷೆ ಎಂಬುದು ನಿರ್ವಿವಾದ.
  ನೀವು ಅರ್ಥಮಾಡಿಕೊಳ್ಳಲು ಯತ್ನಿಸುತ್ತಿರುವ ವಿಷಯವು ನಮ್ಮಾಧುನಿಕ ಸಮಾಜ ಶಾಸ್ತ್ರೀಯ ತಿಳಿವಳಿಕೆಯಲ್ಲಿ ಹಾಸು ಹೊಕ್ಕಾಗಿರುವಒಂದು ಎಳೆ ಮಾತ್ರ. ಈ ಎಳೆಯು ಇನ್ನೂ ಚೆನ್ನಾಗಿ ಸ್ಪಷ್ಟವಾಗಬೇಕಾದರೆ ಈ ಕುರಿತು ವ್ಯವಸ್ಥಿತವಾಗಿ ತಿಳಿವಳಿಕೆಯನ್ನು ಬೆಳೆಸುತ್ತ ಸಾಗಬೇಕಾಗುತ್ತದೆ. ನೀವೇಕೆ ಸಂಶೋಧನೆಗೆ ತೊಡಗಬಾರದು? ಬಹುಶಃ ನಿಮಗೆ ಅದು ಮತ್ತೂ ರೋಚಕವಾಗಬಹುದು.

  ಉತ್ತರ
 5. Venkatesh Murthy V S
  ಆಗಸ್ಟ್ 19 2015

  Rohit
  Nimma lekhana oodi khushi aayitu.. Bahala vichaaragalannu bicchittidderi. Brahmana yennuwa samudaayya vannu tulidu maadiruwa tappugalalli pragatiparara paatra Bahala….. Adaranteye aahaara bitta.. Antarapichaachigalantiruva brahmanaru kaaranikartare.. Idu aaduwawara munde jaaribiddante yemba maatu nenapaaguttade… Aadaru indina dina powrohityawannu bittu, nagaragalannu seriruwa eshtooo brahmanara jeevana matta arthika stiti sudhariside…. Adu ondu drushtiyalli oleyade…. Ene Aadaru.. Eshte tulidaadidaru… So called “bhuddijevigala” “pragatiparara” antarika acharane… Kashta bandaaga shati.. Pooje maadsakke idhe purohitara kaalige belittare… Kaapaadi anta bobbidtaare annodu sullalla….

  ಉತ್ತರ
 6. ಆಗಸ್ಟ್ 19 2015

  NAMAGE ANYAYA MADIDA MADUTHIRUVA ELLARIGU DIKKARA..NAVU YARIGU ANYAYA MADILLA ADAKKE..ANEKA CHIGURUGALANNU HOSEDU HAKIDA SARKARAKKU NANU BELE KODUVUDILLA..NAMMALLIYAYA SREEMANTHARU VEDAVODIDA NAMAGE SARKARADALLI ANYAYA MADALU KAIGUDISIDDARE

  ಉತ್ತರ
 7. ಆಗಸ್ಟ್ 19 2015

  ಇನ್ನೂ ಸಂಪುರ್ಣವಾಗಿ ಓದಿಲ್ಲ.. ಅದರೂ ಓದಿದ ಒಂದೆರಡು ವಿಚಾರದ ಮೇಲೆ ಬರೆಯುತ್ತೇನೆ. ನೀವು ಹೇಳುವುದು ಖಾಂಡಿತಾ ನಿಜ. ಆದರೆ ಬುದ್ಧಿ ಜೀವಿಯಂತೆ ಬ್ರಾಹ್ಮಣರೂ ಬುದ್ಧಿಯನ್ನು ಬದಿಗಿಟ್ಟಿರುವುದರಿಂದ ಈ ಅಪದ್ಧಗಳು ಇವೆ. ಮೊದಲೇನಯದಾಗಿ ಎಲ್ಲರಲ್ಲೂ ಆತ್ಮ ಮನೆ ಮಾಡಿದೆ (ಶಂಕರರ ಮನೀಷ ಸ್ತ್ರೋತ್ರ ನೋಡೀ) ಈ ಹಿನ್ನಲೆಯಲ್ಲಿ … ೧) ಮುಟ್ಟಿಸಿಕೊಳ್ಳುವುದು – ಇಲ್ಲದಿರುವುದು..ಏತಕ್ಕೆ? ಬರೀ ಬೂಟಾಟಿಕೆಯೇ ಅಥವಾ ಅದಕ್ಕೆ ಅಧಾರವಿದೆಯೆ? ಇದನ್ನೂ ತಿಳಿಯಬೇಡವೆ? ೨) ದೇವಸ್ಥಾನ ವೆಂದರೆ ಏನು? ೩) ಅಲ್ಲಿನ ಆಚಾರವೇನು? ಅಭಿಷೇಕ ಏಕೆ ಇದನ್ನೆಲ್ಲ ತಿಳಿದು ಕೊಳ್ಳುವ ಕಾಲ ಮುಗಿದು ಹೋಯಿತೆ? ೪) ವೇದ ಮಂತ್ರ ದೃಷ್ಟರಲ್ಲಿ ಎಲ್ಲ ಕೋಮು ಎಲ್ಲಾವರ್ಗ ಜನಗಳಿರಲಿಲ್ಲವೇ? (ಹೆಂಗಸರೂ ಸಹ). ಬರೀ ಅಾಚಾರ ಎಂದು ಅದರ ಹಿನ್ನಲೆಯ್ಯನ್ನು ಮರೆತರೆ ಈ ವಿಪರೀತಗಳು ನಡೆಯುವುದಿಲ್ಲವೇ… ಇನ್ನೂ ಬಹಳವಿದೆ ವಿಪ್ರ ಎಂದರೆ ಪಶ್ಚಿಮ ಬುದ್ದಿಯುಳ್ಳವರೂ ಎನ್ನುತ್ತಾರೆ – ಇದರ ಅರ್ಥ Westernize ಆದರೂ ಅಂತಲ್ಲ… ವಿಪ್ರರ ಪಶ್ಚಿಮ ಬುದ್ದಿ ಬಿಟ್ಟಿದ್ದೇವೆ… ಮತ್ತೇ ಪಡೆಯೋಣ…ಆಗ ಸೂಕ್ತ ಉತ್ತರಗಳನ್ನು ಕೊಡಬಹುದು…

  ಉತ್ತರ
 8. c somashekhara
  ಆಗಸ್ಟ್ 20 2015

  Super ರೋಹಿತ್ ಚಕ್ರತೀರ್ಥ ಸರ್ ನಿಮ್ಮ ಬರವಣಿಗೆ ನೈಜತೆಯಿಂದ ಕೂಡಿದೆ

  ಉತ್ತರ
 9. ಆಗಸ್ಟ್ 20 2015

  Dalit catholic christian sangha endare enu endu yaaraadaroo vivarisuvire? 🙂

  ಉತ್ತರ
 10. ಆಗಸ್ಟ್ 20 2015

  ಅಧ್ಯಯನ ಮಾಡಿ ಬರೆದ ಅಪೂರ್ವ ಲೇಖನ .’ಬುದ್ದಿ ಜೀವಿಗಳ ‘ ಆತಾತೊಪಗಳನ್ನು ಎದುರಿಸಲು ಇನ್ನೂ ಪ್ರಖರವಾದ ಲೇಖನ ತಮ್ಮ ಲೇಖನಿಯಿಂದ ಮೂಡಿಬರಲಿ .

  ಉತ್ತರ
 11. Balu
  ಆಗಸ್ಟ್ 21 2015

  All these years since independence.. our politicians fooled the country in the name of social justice..
  Divide & rule is the name of the game ..

  ಉತ್ತರ
 12. C.K. Chandra Shekhar
  ಆಗಸ್ಟ್ 22 2015

  Facts Sri Rohit, hats off! You have done a marvelous job which was needed long back. I was wondering all these days why such an article blasting the bogus theories of the fake scholars had not yet emerged. Better late than never. This needs to be published by Brahmana Mahasabha so that the wrong notion gets evaporated. Another issue you may mention is that majority of fake scholars are from Brahmins, starting from Nehru and including Govinda Rao, Anantha Murthy, Ki. Ram. Nagaraj, etc. Also many reformers belong to Brahmin Community, to quote in particular, Sri Kudmul Ranga Rao. Yours truly, ChandraShekhar

  ಉತ್ತರ
 13. Anil
  ಆಗಸ್ಟ್ 22 2015

  Childish and meaningless argument…. It proves nothing of points but your ignorance, arrogance and attitude.

  ಉತ್ತರ
 14. ಅನಾರ್ಸೆನಿಕ
  ಆಗಸ್ಟ್ 23 2015

  ಈ ಲೇಖನದ ಒಟ್ಟು ಸ್ವರೂಪವೆಂದರೆ *ಅನುಕೂಲಸಿಂಧು ನೀತಿಯಲ್ಲಿ ಸತ್ಯಗಳ ಅರ್ಧಭಾಗಗಳನ್ನು ಮಾತ್ರ ಬಳಸಿ ಮಸಾಲೆಗಲಿಂದ ಭರಪೂರವಾದ ಫಾಸ್ಟ್`ಫುಡ್ ತೀರ್ಮಾನಗಳನ್ನು ಉಡಾಫೆಯಾಗಿ ಉಣಬಡಿಸುವುದು*. ಎಲ್ಲಾ ‘ಫ್ಯಾಕ್ಟ್’ಗಳಾಗಲೀ, ಆ ಫ್ಯಾಕ್ಟುಗಳ ಎಲ್ಲಾ ಮುಖ್ಯವಾದ ಮಗ್ಗಲುಗಳಾಗಲೀ ಇಲ್ಲಿ ಚರ್ಚಿತವಾಗಿಲ್ಲ. ಅಂತಹ ಕೆಲವು ಅಂಶಗಳು:

  ೧) ಅದೊಂದು ಕಾಲದಲ್ಲಿ ದೇಗುಲ ಪ್ರವೇಶವಷ್ಟೇ ಅಲ್ಲ, ದಲಿತರಿಗೆ ಬ್ರಾಹ್ಮಣರಾಗುವ, ಅರ್ಚಕರಾಗುವ, ಸಂಸ್ಕೃತ ಕಲಿಯುವ ಅಧಿಕಾರವೂ ಸರ್ವತ್ರ ನಿಷೇಧಿಸಲ್ಪಟ್ಟಿತ್ತು. ಈ ನಿಷೇಧದ ಹಿಂದೆ ಬ್ರಾಹ್ಮಣರನ್ನು ಒಳಗೊಂಡ ಮೇಲ್ವರ್ಗ/ಪುರೋಹಿತಶಾಹಿ/ಏನಾದರೂಕರೆಯಿರಿ ಆ ವರ್ಗವೇ ಇದ್ದದ್ದು. ಇದು ಕೇವಲ ಆಪರೇಷನ್ ಥಿಯೇಟರಿನೊಳಗೆ ಪ್ರವೇಶ ನಿರಾಕರಿಸಿದುದಕ್ಕಿಂದತಲೂ ವೈದ್ಯಕೀಯ ವಿಧ್ಯಾಭ್ಯಾಸವನ್ನೇ ಒಂದು ವರ್ಗ/ಜನಾಂಗಕ್ಕೆ ನಿಷೇಧಿಸುವುದಕ್ಕೆ ಹೆಚ್ಚು ಸಮೀಪವಾಗುತ್ತೆ.

  ೨) “ಈ ಸಮಸ್ಯೆಯನ್ನು ನನ್ನ ಹುಟ್ಟಿಬೆಳೆದ ಪರಿಸರದ ಹಿನ್ನೆಲೆಯಲ್ಲಿ ನೋಡಬಹುದೇ ಹೊರತು ಪ್ರಗತಿಪರರು ಭಾವಿಸಿಕೊಂಡ ಒಂದು ಕಪೋಲಕಲ್ಪಿತ ಗ್ರಾಮವ್ಯವಸ್ಥೆಯಲ್ಲಿ ಅಲ್ಲ…”
  ಹೌದೌದು, ಇಡೀ ಭಾರತದಲ್ಲಿ ಇವರು ಬೆಳೆದ ಗ್ರಾಮವೊಂದು ಮಾತ್ರಾ ಇರುವುದು. ಬೇರೇ ಗ್ರಾಮಗಳಿದ್ದರೂ ಅವುಗಳೆಲ್ಲವೂ ಹೆಚ್ಚೂಕಡಿಮೆ ಇವರ ಊರಿನ ಪಡಿಯಚ್ಚೇ ಆಗಿರುತ್ತವೆ. ಮತ್ತು ಭಾರತೀಯರೆಲ್ಲರ ಅನುಭವಗಳೂ ಹೆಚ್ಚೂಕಡಿಮೆ ಈ ಲೇಖಕರ ಅನುಭವಗಳ ಪಡಿಯಚ್ಚೇ ಆಗಿರುತ್ತವೆ – ಎಂದು ಭಾವಿಸಿ ಇಡೀ ಭಾರತದ ಸಾಮಾಜಿಕ ನ್ಯಾಯವ್ಯವಸ್ಥೆಯನ್ನು ತೀರ್ಮಾನಿಸತಕ್ಕದ್ದು. “ನಾನು ನನ್ನ ಅನುಭವವನ್ನು ಮಾತ್ರಾ ಚರ್ಚಿಸಬಲ್ಲೆ, ಆದರೂ ಅದನ್ನು ಬೆಕ್ಕಿನಂತೆ ಕಣ್ಣುಮುಚ್ಚಿಕೊಂಡು ಸಾರ್ವತ್ರೀಕರಿಸಿ ಇಡೀ ಪ್ರಪಂಚಕ್ಕೇ ಅನ್ವಯಿಸಬಲ್ಲೆ. ಉಳಿದ ಬೆಕ್ಕುಗಳು ಇದಕ್ಕೆ ಮ್ಯಾವ್ ಎಂದರೆ ಅಷ್ಟೇ, ಸಾರ್ಥಕವಾಯಿತು!”

  ೩) “…ಕಾಲೇಜಿನ ಶ್ರೇಣೀಕೃತ ವ್ಯವಸ್ಥೆಗಳಲ್ಲಿ ಅಥವಾ ಕಂಪನಿಗಳ ನೌಕರ ಮತ್ತು ಬಾಸು ಎಂಬ ಕೂಲಿ-ಮಾಲೀಕ ವ್ಯವಸ್ಥೆಯ ಭಾಗವಾಗಿರುವುದು ಏನನ್ನು ಸೂಚಿಸುತ್ತದೆ?..”
  ಲೇಖಕರ ಹಾದಿತಪ್ಪಿಸುವ ಪ್ರಯತ್ನವನ್ನು ಸೂಚಿಸುತ್ತದೆ. ಕಾಲೇಜು ಯಾ ಕಂಪನಿಗಳ ಶ್ರೇಣೀಕೃತ ವ್ಯವಸ್ಥೆಗಳು (ಕ.ಪ. ತಾತ್ವಿಕವಾಗಿ) ಹುಟ್ಟನ್ನು ಆಧರಿಸಿ ಮಾಡಿದುದಲ್ಲ, ಒಂದು ಹುದ್ದೆಗೇ ವ್ಯಕ್ತಿಯೋರ್ವರನ್ನು ನಿರ್ಭಂಧಿಸಿ ಕೂಡಿಸುವ ಪ್ರಯತ್ನದಲ್ಲೂ ಇಲ್ಲ. ಸಮಾಜದಲ್ಲಿರುವ ಜಾತಿ ವ್ಯವಸ್ಥೆ ಜನ್ಮಾಧಾರಿತವಾಗಿ ಒಂದು ಶ್ರೇಣಿಯಿಂದ ಇನ್ನೊಂದು ಶ್ರೇಣಿಗೆ ವ್ಯಕ್ತಿಯ ಚಲನೆಯನ್ನು ನಿರ್ಭಂಧಿಸುವಂತಹದ್ದು.

  ೪)”ನಮ್ಮ ಪ್ರಗತಿಪರ ಚಿಂತಕರು ಹೇಳುತ್ತಿರುವ ಶೋಷಣೆ, ಶ್ರೇಣಿಗಳು, ಗುಲಾಮಗಿರಿ, ವಸಾಹತುಶಾಹಿ, ಪುರೋಹಿತಶಾಹಿ, ಅಸಮಾನ ವೇತನ, ದಬ್ಬಾಳಿಕೆಯಂತಹ ಹಲವುಹತ್ತು ಸಮಸ್ಯೆಗಳೆಲ್ಲ ಇಂದು ಅವರು ಕಲ್ಪಿಸಿಕೊಂಡ “ಗ್ರಾಮವ್ಯವಸ್ಥೆ”ಗಳಿಗಿಂತಲೂ ಹೆಚ್ಚು ಢಾಳಾಗಿ ಆಧುನಿಕ ವ್ಯವಸ್ಥೆಗಳಲ್ಲಿ ಕಾಣಸಿಗುತ್ತವೆ ಎನ್ನುವುದು ವಿಪರ್ಯಾಸ.”
  ಖಂಡಿತವಾಗಿಯೂ ವಿಪರ್ಯಾಸವೇ. ಆದರೆ ಈ ವಿಪರ್ಯಾಸವು ಜಾತ್ಯಾಧಾರಿತ ತರತಮಗಳಂತಹ ಇನ್ನಿತರ ವಿಪರ್ಯಾಸಗಳ ಪ್ರಭಾವವನ್ನು ನಗಣ್ಯ ಮಾಡುತ್ತದೆಯೆ?

  ೫) “…ದೇವಸ್ಥಾನಕ್ಕೆ ದೇವರ ದರ್ಶನಕ್ಕಾಗಿ ಹೋಗುವ ಬ್ರಾಹ್ಮಣನಿಗೆ ಆತನ ಜಾತಿಯಿಂದ ವಿಶೇಷ ಸೌಕರ್ಯಗಳೇನೂ ಸಿಗುವುದಿಲ್ಲ. …ದೇಶದ 99% ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಬರುವ ಭಕ್ತರ ಜಾತಿ ಕೇಳಲ್ಪಡುವುದಿಲ್ಲ”
  ಎಲ್ಲಾ ಕಾಲದಲ್ಲಿಯೂ ಹಾಗೇ ಇತ್ತೇ? ಜನ್ಮತಃ ಬ್ರಾಹ್ಮಣನಿರುವ ಓರ್ವನಿಗೆ ತಾತ್ವಿಕವಾಗಿಯಾದರೂ ಇದರಲ್ಲಿನ ಹಲಾವಾರು ದೇವಸ್ಥಾನಗಳಲ್ಲಿ (ಮಡಿಯಾಗಿಯಾದರೂ) ಗರ್ಭಗುಡಿ ಪ್ರವೇಶಿಸುವ ಸಂಭಾವ್ಯತೆ (ಕೆಲವೆಡೆ ಅರ್ಚಕನಾಗುವ ಸಂಭಾವ್ಯತೆ ಕೂಡ) ಇದೆ. ಈ ಅವಕಾಶ ದಲಿತರಿಗೆ ತಾತ್ವಿಕವಾಗಿಯಾದರೂ ಇದೆಯೇ?

  ೬) ಉಳುವವನೇ ಭೂಮಿಗೊಡೆಯ ಅನ್ನುವ ಕಾಯ್ದೆಯಿಂದ ಬಹುತೇಕವಾಗಿ ‘ಬಡಬ್ರಾಹ್ಮಣರು’ ಸಂತ್ರಸ್ತರಾದರು ಅನ್ನುವ ಹಳಹಳಿಕೆಯ ವಾದ ‘ಫ್ಯಾಕ್ಚುವಲೀ ರಾಂಗ್’. ಜಮೀನಿಗೊಡೆಯ ಮತ್ತು ಒಡೆಯನಲ್ಲದ ಊಳುವವ ಎಂಬ ಎರಡೂ ವರ್ಗದಲ್ಲೂ ಎಲ್ಲ ಜಾತಿಯವರೂ ಇದ್ದರು. ಬಹುತೇಕವಾಗಿ ಜಮೀನಿನೊಡೆಯರರು ಮೇಲ್ವರ್ಗದವರೇ ಆಗಿದ್ದರು ಎನ್ನುವುದೇನೋ ಸತ್ಯ. ಹಾಗೆ ಮೇಲ್ವರ್ಗದಲ್ಲಿ ಬ್ರಾಹ್ಮಣರ ವಿಚಾರಕ್ಕೆ ಬಂದರೆ, ಸ್ವಲ್ಪ ಬ್ರಾಹ್ಮಣರಿಗೆ ಭೂಮಿ ಬಂತು, ಇನ್ನು ಕೆಲವರಿಗೆ ಭೂಮಿ ಹೋಯ್ತು, ಅಷ್ಟೇ. “ಸರಕಾರದ ಕಾಯಿದೆ ಪರೋಕ್ಷವಾಗಿ ಬ್ರಾಹ್ಮಣರ ನಗರವಲಸೆಗೆ ಕುಮ್ಮಕ್ಕು ಕೊಟ್ಟಿತು” ಅಂತ ಸಾರಸಗಟಾಗಿ ಹೇಳಲಾಗದು.

  ೭) “ಬ್ರಾಹ್ಮಣರು ತಮ್ಮ ಎಲ್ಲ ಜ್ಞಾನವನ್ನೂ ಸಂಸ್ಕೃತದಲ್ಲಿ ಬಚ್ಚಿಟ್ಟರು” ಎಂಬಿತ್ಯಾದಿ ವಾದಗಳಲ್ಲಿ ಹುರುಳಿಲ್ಲ ಅಂತ ಈ ಲೆಖನದಲ್ಲಿ ತೀರ್ಪು ನೀಡಲಾಗಿದೆ. ಲ್ಯಾಟಿನ್ ಭಾಷೆಯ ಉದಾಹರಣೆಯನ್ನೂ ಹರಿಬಿಡಲಾಗಿದೆ.
  ಇಲ್ಲಿ ನಮ್ಮ ಸಮಸ್ಯೆ *ಮೂಲದಲ್ಲಿ ‘ಜ್ಞಾನ’ವನ್ನು ದಕ್ಕಿಸಿಕೊಂಡವರು* ಅದನ್ನು ಸಂಸ್ಕೃತ ಯಾ ಲ್ಯಾಟಿನ್ ಎಂಬಿತ್ಯಾದಿ ‘ಸೂಕ್ತ/ಸಮರ್ಥ ಭಾಷೆಯಲ್ಲಿ ಅಳವಡಿಸಿಟ್ಟಿದ್ದು’ (ಹಾಗಂತಲೇ ಭಾವಿಸೋಣ) ಅಲ್ಲ, ಬದಲಾಗಿ ಅಂತಹಾ ಜ್ನಾನ ಮತ್ತು ಭಾಷೆಗಳನ್ನು ಉಳಿದ ಜನಸಾಮಾನ್ಯರಿಗೆ ಮುಕ್ತವಾಗಿ ತೆರದಿಡೆದೇ ಇದ್ದಿದ್ದು. ಈ ಐತಿಹಾಸಿಕ ಅಪಚಾರಕ್ಕೆ ಬ್ರಾಹ್ಮಣರೂ ಸೇರಿಸಿದಂತೆ ಆಯಾಯಾ ಕಾಲದ ಎಲ್ಲಾ ಆಳುವ/ಪ್ರಭಾವೀ ವರ್ಗದವರೂ ಕಾರಣರೇ.

  ೮) ಲೇಖನದ ‘ಉಪಸಂಹಾರ’ದಲ್ಲಿ ಹಲವು ಅಪಸವ್ಯಗಳನ್ನು ಲೇಖಕರ ವೈಯಕ್ತಿಕ ಅನುಭವವನ್ನು ಮಾತ್ರ ಆಧರಿಸಿ ‘ಅಪರೂಪ’, ‘ದೂರದ ಸಂಗತಿ’ ಎಂಬಿತ್ಯಾದಿಯಾಗಿ ಬಿಂಬಿಸಲಾಗಿದೆ.
  ಇಡೀ ಭಾರತದಲ್ಲಿ ಕೆಲವರ ಅನುಭವವಾದರೂ ಹಾಗಿರುವುದು ಆಶಾದಾಯಕ ಸಂಗತಿಯಷ್ಟೇ ಆಗಬಲ್ಲದು. ಹೊರತೂ ಇಡೀ ದೇಶದ ಎಲ್ಲರ ಅನುಭವದ ಮಾತೂ ಹೆಚ್ಚೂಕಡಿಮೆ ಅದೇ ಆಗಿರುತ್ತದೆ ಎಂದು ಹೇಳಲಾಗದು.

  ಒಟ್ಟಾರೆಯಾಗಿ ಈ ಲೇಖನದಲ್ಲಿ ಹಳೆಯ ತಪ್ಪುಗಳಲ್ಲಿ ಸರಿಯನ್ನೂ ಹೊಸ ಸರಿಗಳಲ್ಲಿ ತಪ್ಪನ್ನು ಮಾತ್ರವೇ ಹುಡುಕುವ ಋಣಾತ್ಮಕ ಧೋರಣೇಯೇ ಜಾಸ್ತಿ ಇದೆ. ಸಮಾನತೆ ತರುವ ಹಲವು ಸಂವಿಧಾನಾತ್ಮಕ ಪ್ರಯತ್ನಗಳು ಇನ್ನೂ ಫಲಕಾರಿಯಾಗಿಲ್ಲ ಎಂಬುದು ಖಂಡಿತ ಒಪ್ಪತಕ್ಕಂತಹ ಮಾತು. ಅವುಗಳ ಕುರಿತು ರಚನಾತ್ಮಕ ಚರ್ಚೆ-ತಿದ್ದುಪಡಿಗಳಾಗಬೇಕು ನಿಜ. ಆದರೆ ಆ ಪ್ರಯತ್ನಗಳನ್ನು ಸಂಪೂರ್ಣ ರಿವರ್ಸ್ ಮಾಡಬೇಕು ಅನ್ನುವ ರೀತಿಯ ಸಾರಸಗಟು ತೀರ್ಮಾನಕ್ಕೆ ಬೀಳಿಸುವುದಾ? ಇದು ಹೇಗಾಯಿತೆಂದರೆ, ಪೇಶಂಟು ಅದು ಹೇಗೋ ಕೋಮಾದಲ್ಲಿದ್ದಾನೆ. ಅದರಲ್ಲಿ ಬೃಹತ್`ಬ್ರಹ್ಮಾಂಡನೊಬ್ಬ ಪುನ: ಮಧ್ಯ ಪ್ರವೇಶಿಸಿ ಪೇಷಂಟಿನ ಮುಗ್ಧ ಕುಟುಂಬಸ್ಥರಿಗೆ ಸಿಟಿಯ ಡಾಕ್ಟರರ ಔಷಧಕ್ಕೆ ಶರಣಾದ ಪಾಪವೇ ಇದಕ್ಕೆ ಕಾರಣವೆಂದು ಹೆದರಿಸಿ ಪುನ: ಎಂಜಲೆಲೆಮೇಲೆ ಹೊರಳುವ ಹರಕೆಯನ್ನು ಹೊರಿಸುತ್ತಾನೆ. ಇಲ್ಲಿ ಪೇಶಂಟು ಎಂದರೆ ಕುಂಟುತ್ತಿರುವ ಭಾರತೀಯ ಸಮಾಜ, ಡಾಕ್ಟರರು ಎಂದರೆ ಪ್ರಸ್ತುತ ಭಾರತೀಯ ಸಂವಿಧಾನ. ಇಲ್ಲಿನ ಬೃಹತ್`ಬ್ರಹ್ಮಾಂಡರುಗಳೆಂದರೆ ಪ್ರಸ್ತುತ ಲೇಖನದಲ್ಲಿರುವಂತಹ ತೀರ್ಪುತೀರ್ಮಾನಗಳನ್ನು ಹೊರಡಿಸುತ್ತಿರುವವರು.

  ಉತ್ತರ
 15. MADHU
  ಸೆಪ್ಟೆಂ 14 2015

  BRAHMINS ARE SOFT TARGET ….VERY TRUE

  ಉತ್ತರ
 16. Suhas BG
  ಜನ 10 2016

  ೧. ಆ ಕಾಲದಲ್ಲಿ ರಾಜರು ಬ್ರಾಹ್ಮಣರಿಗೆ ಮಠ ಕಟ್ಟಲು ಜಾಗೆ ಕೊಡುತ್ತಿದ್ದರು. ಮುತ್ತು ಕನಕಗಳನ್ನು ಸುರಿಯುತ್ತಿದ್ದರು…ಕೊಡಲಿ ಬೇಡ ಅಂತ ಅಲ್ಲ. ಆದರೆ , ಹಿಂದುಳಿದ ವರ್ಘಕ್ಕೆ ಏನು ಮಾಡಿದ್ದಾರೆ ರಾಜರು ? ಅವರು ಶೋಷಣೆಗೆ ಒಳಗಾಗಿದ್ದು ನಿಜವೆ…(ಆದರೆ ಬರಿಯ ಬ್ರಾಹ್ಮಣರನ್ನು ದೂರುವುದು ಸರಿ ಅಲ್ಲ…ಇದಕ್ಕೆ ಇತರರು ಇದ್ದಾರೆ…)

  ೨. ಮಾಂಸ ತಿನ್ನುವ ಕ್ಷತ್ರಿಯರಿಗೆ ವೇದ ಅಧಿಕಾರದ ಮೇಲೆ ಹಕ್ಕು ಇದ್ದಾರೆ, ಶುದ್ರರಿಗೆ ಯಾಕೆ ಹಕ್ಕು ಇಲ್ಲ ?

  ೩. ಬಡಕೊರಗ ಸಮುದಾಯದವರು ಎಂಜಲು ತಿನ್ನುತ್ತಿದ್ದಾಗ ಅದನ್ನು ತಡೆಯಬಹುದಿತ್ತು ಅಲ್ವಾ ? ಬೇರೆ ಊಟ ಆದರು ಕೊಡಬಹುದಿತ್ತು ಅಲ್ವಾ ?

  ೪. ಶೂದ್ರರು ಹಿಂದಿನ ಕಾಲದಲ್ಲಿ ದೇವಸ್ಥಾನಕ್ಕೆ ಬಂದರೆ ಅವರಿಗೆ ತೀರ್ಥ ಸಿಗುತಿತ್ತ ? ಶೂದ್ರರು ಬೇರೆಯಾಗಿ ಆರಾಧನೆ ಅವರ ಅವರ ಸ್ಥಳಗಲ್ಲಿ ಮಾಡುತ್ತಿದ್ದರು ಎಂದು ಹೇಳಿದ್ದಿರಿ..ದೇವಸ್ಥಾನದ ಒಳಗಡೆ ಬರೆದೆ ಇರುವ ಕಾರಣಗಳು ಏನು ? THIS IS NOTHING BUT ISOLATION OF DALITH COMMUNITY FROM REST OF THEM .

  ೫. ಸಂಸ್ಕೃತ ಜ್ಞಾನವನ್ನು ಬ್ರಾಹ್ಮಣರು ಹಿಡಿದು ಇಟ್ಟುಕೊಂಡಿಲ್ಲ ಅಂತ ಹೇಳಿದ್ದಿರಿ, ಹಾಗಿದ್ದ ಮೇಲೆ ಕನಕದಾಸ ಹೊರೆತುಪಡೆಸಿ, ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಗಳಿಸಿದ ಶುದ್ರರನ್ನು ಹೆಸರಿಸಿ…

  ೬. ಬ್ರಾಹ್ಮಣ ಹುಡುಗನ ಹೆಚ್ಚಿನ ತಂದೆ ತಾಯಂದಿರು ತಮ್ಮ ಮಕ್ಕಳಿಗಿಂತ ಹೆಚ್ಚಾಗಿ ಅನ್ಯ ಜಾತಿಯ ಹುಡುಗರು marks ಪಡೆದುಕೊಂಡಾಗ, : ” ಒಹ್ ! ಅವನು ಶುದ್ರನಾದಾರು ಒಳ್ಳೆಯ ಮಾರ್ಕ್ಸ್ ಪಡೆದುಕೊಂಡ ” ಎಂದು ಹೇಳುತ್ತಾರೆ…ಹಾಗಿದ್ದ ಮೇಲೆ ಮಾರ್ಕ್ಸ್ ಎನ್ನುವುದು ಬರಿಯ ಬ್ರಾಹ್ಮಣರ ಆಸ್ತಿಯೆ ?

  ೭. ದಲಿತರು ಸುಮ್ನೇ ಆದರು ಕ್ರೈಸ್ತ ಧರ್ಮಕ್ಕೆ ಮತಾಂತರ ಆದರೆ ?

  ಪ್ರಗತಿಪರ ಚಿಂತಕರ ಕೆಲವು ವಿಷಯಗಳು ಸರಿಯಾಗಿದೆ …ಆದರೆ ಅವರು ಹೋಗುತ್ತಿರುವ ದಾರಿ ಸರಿ ಇಲ್ಲ….ದಲಿತರಿಗೆ ಹಿಂದೂ ಧರ್ಮದಲ್ಲಿ ಇದ್ದು ಉತ್ಸಾಹ ತುಂಬಿಸುವ ಬದಲು , ದ್ವೇಷದ ಭಾವನೆಯನ್ನು ಇನ್ನಷ್ಟು ಕೆರಳಿಸುತ್ತಾರೆ…ಕ್ರೈಸ್ತ ಹಾಗು ಮುಸಲ್ಮಾನ ಧರ್ಮದವರನ್ನು ಸಂತೋಷ ಗೊಳಿಸಲು ಮುಂದಾಗುತ್ತಿದ್ದಾರೆ…ಇದುವೇ ದೊಡ್ಡ ದುರಂತ,…

  ಉತ್ತರ
  • Guru Nandikal
   ಆಕ್ಟೋ 23 2018

   Suhas BG ಅವರೇ ನಿಮ್ಮ ಎಲ್ಲಾ ಪ್ರಶ್ನೆಗೂ ಉತ್ತರ ಕೊಡಲು ನನಗೆ ತಿಳದಿಲ್ಲ. ತಿಳಿದಷ್ಟು ಹೇಳುತ್ತೇನೆ.
   ೧. ಮಠ ಅಂದ್ರೆ ಬರೀ ಬ್ರಾಹ್ಮರಷ್ಟೇ ಅಲ್ಲ, ಅಲ್ಲೂ ಕೂಡ ಎಲ್ಲಾ ಪಂಗಡದವರೂ ಇದ್ದು ತಮ್ಮ ತಮ್ಮ ಕೆಲಸ ಮಾಡುತ್ತಿದ್ದರು. ಮತ್ತು ಕೆರೆ-ಕಟ್ಟೆಗಳೇನು ಯಾವುದೇ ಕೆಲವರಿಗೆ ಸೀಮಿತವಾಗಿರಲಿಲ್ಲ.
   ೨.ಕ್ಷತ್ರಿಯರಿಗೆ ಇದ್ದದ್ದು ಕೇವಲ ರಾಜ್ಯ ಮತ್ತು ಆಡಳಿತಕ್ಕೆ ಸಂಭದಪಟ್ಟ ಶಾಸ್ತ್ರಗಳು ಮಾತ್ರ. ವ್ಯಾಪಾರಿಗಳಿಗು ಅವರಿಗೆ ಸಂಭದಪಟ್ಟವುಗಳನ್ನು ತಿಳಿದುಕೊಂಡಿರುತ್ತಿದ್ದರು.
   ೩. ಸಂಸ್ಕೃತ ಜ್ಞಾನವನ್ನು ಯಾರೂ ಹಿಡಿದು ಇಟ್ಟುಕೊಂಡಿರಲಿಲ್ಲ. ಹೆಚ್ಚಿನ ಶಾಸ್ತ್ರಗಳನ್ನು ಬ್ರಾಹ್ಮಣೇತರರೇ ರಚಿಸಿದ್ದು. ಎಲ್ಲರಿಗೂ ತಿಳಿದಿರುವಂತೆ ರಾಮಾಯಣ ಬರೆದಿದ್ದು ಒಬ್ಬ ಬೇಡ ಮೂಲದವರಾದ ವಾಲ್ಮೀಕಿ. ಅವೆಲ್ಲಾ ಸಂಸ್ಕೃತದಲ್ಲೇ ಇದ್ದಿದ್ದು.

   ಬುದ್ಧಿಜೀವಿಗಳು ಹೆಸರಿಗೆ ತಕ್ಕಂತೆ ಜನರಿಗೆ ಇತಿಹಾಸವನ್ನು ತಿರುಚದೆ, ಯಾರ ಪರವಾಗಿಯೂ ಇರದೇ ಸತ್ಯವಾದುದ್ದನ್ನು ಹೇಳಿದರೆ ಭವಿಷ್ಯದಲ್ಲಿಯಾದರೂ ಸುಂದರವಾಗಿರುತ್ತಿತ್ತು.

   ಉತ್ತರ
 17. ಅದ್ಭುತ ಜೀ ನಿಮ್ಮ ಪದಬಳಕೆ ಹಾಗೂ ನಿಮ್ಮ ವಾಕ್ಯ ರಚನೆ ಅಮೋಘ ಹಾಗೂ ತರ್ಕಬದ್ಧ… ಅದ್ಭುತ ನಾನು ನಿಮ್ಮಿಂದ ಇಂತಹ ಲೇಖನಗಳು ಇನ್ನೂ ಹೆಚ್ಚು ಬರಲ್ಲಿ ಅಂತ ಆ ಸರಸ್ವತಿ ಮಾತೆಯನ್ನು ಪಾರ್ಥಿಸುತ್ತೆನೆ ……

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments