ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 20, 2015

ಮಲ್ಟಿಪ್ಲೆಕ್ಸ್ ಗಳಲ್ಲಿನ್ನು ಕನ್ನಡ ರೀ-ಮೇಕ್ ಚಿತ್ರಗಳ ಪ್ರದರ್ಶನ ಕಡ್ಡಾಯ!

‍ನಿಲುಮೆ ಮೂಲಕ

– ಪ್ರವೀಣ್ ಕುಮಾರ್ ಮಾವಿನಕಾಡು

Nilume Sulsuddi - Kannada Film Dubbingರಾಜ್ಯದ ಎಲ್ಲಾ ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ರೀ ಮೇಕ್ ಚಿತ್ರಗಳ ಪ್ರದರ್ಶನ ಮಾಡಲೇಬೇಕು ಎಂದು ಮಲ್ಟಿಪ್ಲೆಕ್ಸ್ ಮಾಲೀಕರಿಗೆ ಸಿ.ಎಂ.ತಾಕೀತು ಮಾಡಿದ್ದಾರೆ.ಅಲ್ಲದೇ ಟಿಕೆಟ್ ದರ ಕೂಡ ಕಡಿಮೆ ಮಾಡುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.ಅಷ್ಟೇ ಅಲ್ಲದೇ ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ರೀಮೇಕ್ ಚಿತ್ರ ಪ್ರದರ್ಶನ ಮತ್ತು ಅದರ ದರ ನಿಗದಿ ಮಾಡುವ ಸಂಬಂಧ ವಾರ್ತಾ ಮತ್ತು ಪ್ರಚಾರ ಖಾತೆ ಸಚಿವರವರ ನೇತೃತ್ವದಲ್ಲಿ ಶೀಘ್ರದಲ್ಲೇ ಸಮಿತಿ ರಚಿಸಲಾಗುವುದು ಎಂದು ಮಾನ್ಯ ಮುಖ್ಯಮಂತ್ರಿಗಳು ನಿರ್ಮಾಪಕರಿಗೆ ಭರವಸೆ ನೀಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ವಿವಾದ ಭುಗಿಲೆದ್ದಿರುವ ಬೆನ್ನಲ್ಲೇ ತಮ್ಮ ಇನ್ನೂ ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕನ್ನಡ ಚಲನ ಚಿತ್ರ ನಿರ್ಮಾಪಕರ ಸಂಘದ ವತಿಯಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗದಲ್ಲಿ ಕಳೆದ ೧೦ ದಿನಗಳಿಂದ ಸರಣಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ನೂರಾರು ನಿರ್ಮಾಪಕರನ್ನು ಖುದ್ದು ಮುಖ್ಯಮಂತ್ರಿಗಳೇ ಭೇಟಿ ಮಾಡಿ ತುರ್ತುಸಭೆ ನಡೆಸಿದ ಸಂದರ್ಭದಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.ಇದರಿಂದ ಕನ್ನಡಿಗರೂ ಮಲ್ಟಿಪ್ಲೆಕ್ಸ್ ಗಳಿಗೆ ಹೋಗಬಹುದು” ಎಂದು ಚಲನಚಿತ್ರ ನಿರ್ಮಾಪಕರ ಸಂಘದ ಸದಸ್ಯ R.S.ಬಾಬು ಹರ್ಷ ವ್ಯಕ್ತಪಡಿಸಿದರು.

ನಂತರ ಧರಣಿನಿರತ ನಿರ್ಮಾಪಕರೊಂದಿಗೆ ನಡೆದ ಸಭೆಯಲ್ಲಿ ತಮಿಳುನಾಡಿನಲ್ಲಿ ಚಾಲ್ತಿಯಲ್ಲಿರುವ ‘ಅಮ್ಮಾ ಥಿಯೇಟರ್’ ಮಾದರಿಯಲ್ಲಿ ಕರ್ನಾಟಕದಲ್ಲೂ ‘ಅಯ್ಯಾ ಥಿಯೇಟರ್’ ಆರಂಭಿಸಿ ಕಡಿಮೆ ಟಿಕೆಟ್ ದರದಲ್ಲಿ ಅಥವಾ ತಿಂಗಳಿಗೊಮ್ಮೆ ಉಚಿತವಾಗಿ ಜನಸಾಮಾನ್ಯರಿಗೆ ರೀಮೇಕ್ ಸಿನಿಮಾಗಳನ್ನು ತೋರಿಸುವ ಬಗ್ಗೆಯೂ ಮಾತುಕತೆ ನಡೆಯಿತು.ಈಗಾಗಲೇ ಇದಕ್ಕಾಗಿ ಸುಮಾರು 26 ಕೋಟಿ ಮೊತ್ತದ ಕ್ರಿಯಾಯೋಜನೆ ಸಿದ್ದವಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ಮಾನ್ಯ ವಾರ್ತಾ ಮತ್ತು ಪ್ರಚಾರ ಸಚಿವರು ಸಭೆಯಲ್ಲಿ ಹಾಜರಿದ್ದ ಮಾಧ್ಯಮಗಳಿಗೆ ತಿಳಿಸಿದರು .

ನಿರ್ಮಾಪಕರ ಬೇಡಿಕೆಗಳು ಏನೇನು ?

ಸ್ಟಾರ್ ನಟರು ಜಾಹೀರಾತುಗಳು ಮತ್ತು ರಿಯಾಲಿಟಿ ಷೋ ಗಳಲ್ಲಿ ನಟಿಸಬಾರದು.ಇದರಿಂದಾಗಿ ಪ್ರೇಕ್ಷಕರು ಅವರ ಮುಖ ನೋಡಲು ಸಿನಿಮಾ ಮಂದಿರಗಳಿಗೆ ಬರುತ್ತಿಲ್ಲ.ಕಲಾವಿದರು ಕಡಿಮೆ ಸಂಭಾವನೆಗೆ ಕೆಲಸ ಮಾಡಬೇಕು,ತಾವು ಕೊಟ್ಟ ಚೆಕ್ಕುಗಳು ಬೌನ್ಸ್ ಆದರೆ ಕಲಾವಿದರು ಕೇಸು ದಾಖಲಿಸಬಾರದು,ಹೀರೋಗಳು ಒಂದು ಸಿನಿಮಾ ಫ್ಲಾಪ್ ಆದಲ್ಲಿ ಅದೇ ನಿರ್ಮಾಪಕರ ಇನ್ನೊಂದು ರೀಮೇಕ್ ಚಿತ್ರದಲ್ಲಿ ಉಚಿತವಾಗಿ ನಟಿಸಬೇಕು,ಇನ್ನೂ ಮುಂತಾದ ಹಲವು  ಬೇಡಿಕೆಗಳನ್ನು ವಾಣಿಜ್ಯ ಮಂಡಳಿಯ ಮುಂದಿಟ್ಟಿದ್ದಾರೆ .

ಇದಕ್ಕೂ ಮುನ್ನ ಮುಖ್ಯಮಂತ್ರಿಗಳೊಂದಿಗೆ ತಮ್ಮ ಅಳಲನ್ನು ತೋಡಿಕೊಂಡ ನಿರ್ಮಾಪಕರೊಬ್ಬರು,ಒಂದು ಸಿನಿಮಾ ರೀಮೇಕ್ ಮಾಡಲು ನಾವು ತಮಿಳು, ತೆಲುಗು,ಮಲಯಾಳಮ್,ಹಿಂದಿ,ಇಂಗ್ಲಿಷ್ ಸೇರಿದಂತೆ ಹತ್ತಾರು ಭಾಷೆಯ ನೂರಾರು ಸಿನಿಮಾಗಳ ಸೀಡಿಗಳನ್ನು ತಂದುಕೊಂಡು ನೋಡಬೇಕಾಗುತ್ತದೆ.ಈಗಿನ ಮಾರುಕಟ್ಟೆ ಬೆಲೆಯಲ್ಲಿ ಸೀಡಿಗಳನ್ನು ಕೊಂಡುಕೊಳ್ಳಬೇಕಾದರೆ ನಿರ್ಮಾಪಕರ ಜೇಬಿನಿಂದ ಹತ್ತಾರು ಸಾವಿರ ರೂ.ಗಳು ಖರ್ಚಾಗುತ್ತಿದೆ ಎಂದರು. ನಾವು ರೀಮೇಕ್ ಹಕ್ಕುಗಳಿಗಾಗಿ ಪರಭಾಷಾ ನಿರ್ಮಾಪಕರಿಗೆ ಕೋಟ್ಯಂತರ ರೂ.ಗಳನ್ನು ಸುರಿಯುತ್ತಿದ್ದೇವೆ.ಇಷ್ಟೇ ಅಲ್ಲದೇ ಬಾಲಿವುಡ್ ಗಾಯಕ ಗಾಯಕಿಯರನ್ನು ಕರೆತಂದು ಹಾಡಿಸಲು ಮತ್ತು ಮುಂಬೈ ಬೆಡಗಿಯರ ಕಾಲ್ ಶೀಟ್ ಗಾಗಿ ಮತ್ತಷ್ಟು ಕೋಟಿಗಳನ್ನು ಸುರಿಯಲೇಬೇಕಿದೆ.ಆದರೆ ಸೀಮಿತ ಮಾರುಕಟ್ಟೆ ಹೊಂದಿರುವ ಕನ್ನಡ ಚಿತ್ರರಂಗದಲ್ಲಿ ಹಾಕಿದ ಬಂಡವಾಳ ಮರಳಿ ಗಳಿಸಲು ತಿಣುಕಾಡಬೇಕಾದ ಪರಿಸ್ಥಿತಿ ಇದೆ.ಆದ್ದರಿಂದ ರೀಮೇಕ್ ಹಕ್ಕುಗಳ ಖರೀದಿಗೆ ಸರ್ಕಾರ ಕನಿಷ್ಠ ಶೇ.80ರಷ್ಟಾದರೂ ಸಹಾಯಧನ ನೀಡಬೇಕು ಎಂದು ಮನವಿ ಮಾಡಿದರು.ಇದಕ್ಕೆ ಕೂಡಲೇ ಸ್ಪಂದಿಸಿದ ಮುಖ್ಯಮಂತ್ರಿಗಳು ನಿರ್ಮಾಪಕರ ಈ ಮನವಿಗೆ ಒಪ್ಪಿಗೆ ಸೂಚಿಸಿದರು.ಆದರೆ ಪರಭಾಷಾ ಚಿತ್ರಗಳ ರೀಮೇಕ್ ಹಕ್ಕುಗಳನ್ನು ಖರೀದಿಸಲು ಸಬ್ಸಿಡಿ ಪಡೆಯಬಯಸುವ ನಿರ್ಮಾಪಕರು ರಾಜ್ಯಸರ್ಕಾರದ ಹಲವಾರು ಭಾಗ್ಯ ಯೋಜನೆಗಳ ಕುರಿತಾಗಿ ಸಿದ್ಧಪಡಿಸಿದ 3 ನಿಮಿಷಗಳ ಜಾಹೀರಾತುಗಳನ್ನು ಪ್ರತಿ 15 ನಿಮಿಷಗಳಿಗೊಮ್ಮೆ ತಮ್ಮ ಚಿತ್ರಪ್ರದರ್ಶನದ ಮದ್ಯೆ ಪ್ರದರ್ಶಿಸಲೇಬೇಕು ಎಂಬ ಶರತ್ತನ್ನು ವಿಧಿಸುವುದಾಗಿ ತಿಳಿಸಿದರು.ಇದಕ್ಕೆ ಬಹುತೇಕ ನಿರ್ಮಾಪಕರು ಸ್ಥಳದಲ್ಲೇ ತಮ್ಮ ಒಪ್ಪಿಗೆಯನ್ನು ಸೂಚಿಸಿದರು.

ಇನ್ನು ರೀಮೇಕ್ ಬದಲು ಕನ್ನಡದ ಕಥೆ,ಕಾದಂಬರಿಗಳನ್ನೇ ತಮ್ಮ ಚಿತ್ರಗಳಿಗೆ ಬಳಸಿಕೊಳ್ಳಬಹುದಲ್ಲವೆ ಎನ್ನುವ ಪತ್ರಕರ್ತರ ಪ್ರಶ್ನೆಗೆ “ಕನ್ನಡದ ಕಥೆಗಳಲ್ಲಿ ಪ್ರೇಕ್ಷಕರಿಗೆ ಬೇಕಾದ ಧಂ ಇರುವುದಿಲ್ಲ”ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನಿರ್ಮಾಪಕರೊಬ್ಬರು ಉತ್ತರಿಸಿದರು. .

ಹಲವಾರು ಚಿತ್ರಗಳ ಹಂಚಿಕೆದಾರರೂ,ಖ್ಯಾತ ನಿರ್ಮಾಪಕರೂ,ರಾಜಕಾರಣಿಗಳೂ ಆದ ಶ್ರೀ.ಕೆ.ಸ್ವಾಮಿಯವರೂ ಸಹ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.ಅವರು ಈ ಸಂದರ್ಭದಲ್ಲಿ  ಮಾತನಾಡುತ್ತಾ ಅತ್ತ ನಮ್ಮ ತಂದೆಯವರು ಪಕ್ಷದ ಕಛೇರಿ ಕಟ್ಟಲು ಬಡ ರೈತರಿಂದ ದೇಣಿಗೆ ಸಂಗ್ರಹಿಸುತ್ತಿದ್ದರೆ,ಇಲ್ಲಿ ನಾವು ಕನ್ನಡದ ಉಳಿವಿಗಾಗಿ ಒಂದು ಅದ್ದೂರಿ ರೀಮೇಕ್  ಚಿತ್ರವನ್ನು ತಯಾರಿಸಲು ಕಷ್ಟಪಟ್ಟು ಕಟ್ಟಿದ ಟೀವಿ ಚಾನಲ್ಲನ್ನು OLX ನಲ್ಲಿ ಮಾರಬೇಕಾಯಿತು.ಅಲ್ಲದೇ ಕೊನೆಗೆ ಹೀರೋಗಳಿಗೆ ಕೊಡಲೂ ಸಹಾ ಹಣವಿಲ್ಲದೇ ನನ್ನ ಮಗನನ್ನೇ ಹಾಕಿಕೊಂಡು ಸಿನಿಮಾ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಕಣ್ಣೀರಿಟ್ಟರು. ಚಿತ್ರರಂಗದ ಇಂದಿನ ಈ ದುಸ್ಥಿತಿಗೆ ಕಾರಣರು ಯಾರ್ಯಾರು,ಯಾರ್ಯಾರು ಯಾವ ಯಾವ ಕಾಲದಲ್ಲಿ ಏನೇನು ಮಾಡಿದ್ದಾರೆ ಎಂಬ ಎಲ್ಲ ಮಾಹಿತಿಗಳೂ ನನ್ನ ಬಳಿ ಇದ್ದು ಸೂಕ್ತ ಸಂದರ್ಭದಲ್ಲಿ ದಾಖಲೆ ಬಿಡುಗಡೆ ಮಾಡುವುದಾಗಿ ಎಚ್ಚರಿಸಿದರು.

ತಮ್ಮ ಬಳಿ ಇದ್ದ ಅಷ್ಟೂ ಹಣವನ್ನು ರೀಮೇಕ್ ಹಕ್ಕುಗಳಿಗಾಗಿ ಸುರಿದು,ಕೊನೆಗೆ ಹೀರೋಗಳಿಗೆ ಕೊಡಲೂ ಕಾಸಿಲ್ಲದೆ ಅನಿವಾರ್ಯವಾಗಿ ಹೀರೋಗಳಿಗಿರಬೇಕಾದ ಯಾವ ಲಕ್ಷಣ/ಪ್ರತಿಭೆಗಳೂ ಇಲ್ಲದ ತಮ್ಮ ಮಕ್ಕಳನ್ನೇ ಹೀರೋವಾಟಿಕೆಯ ಕೂಪಕ್ಕೆ ತಳ್ಳಬೇಕಾಗಿ ಬಂದ ಬಗ್ಗೆ ಮತ್ತು ಹಣವನ್ನೂ ಕಳೆದುಕೊಂಡ ಬಗ್ಗೆ ಹಲವು ನಿರ್ಮಾಪಕರು ಹೇಳಿಕೊಂಡು ಗೋಳಾಡುತ್ತಿದ್ದ ದೃಶ್ಯ ಒಂದು ಕ್ಷಣ ಎಂಥವರ ಕರುಳನ್ನೂ ಚುರ್ರ್ ಎನ್ನಿಸುವಂತಿತ್ತು.

ಇನ್ನೊಂದೆಡೆ ಇದೆಲ್ಲಾ ವಿವಾದಗಳಿಂದ ಬಹಳ ದೂರವೇ ಉಳಿದಿರುವ ಕೋಟಿ ನಿರ್ಮಾಪಕರೆಂದೇ ಖ್ಯಾತಿ ಗಳಿಸಿರುವ ಮಾಮು ಅವರನ್ನು ಪತ್ರಿಕೆ ಸಂಪರ್ಕಿಸಿದಾಗ,ಇಂದಿನ ಹೀರೋಗಳ ದುಬಾರಿ ಸಂಭಾವನೆಯ ವಿಷಯದಲ್ಲಿ ನನಗೆ ಯಾವುದೇ ಸಮಸ್ಯೆ ಇಲ್ಲ.ಯಾಕೆಂದರೆ ನನ್ನ ನಿರ್ಮಾಣದ ಎಲ್ಲ ಚಿತ್ರಗಳಲ್ಲೂ ನನ್ನ ಪತ್ನಿ ಶ್ರೀಮತಿ.ಮಾಮಾಶ್ರೀಯನ್ನೇ ನಾಯಕನನ್ನಾಗಿ ಬಳಸಿಕೊಳ್ಳುತ್ತಿದ್ದೇನೆ ಎಂದರು.ಹಾಗೆಯೇ ರೀಮೇಕ್ ಹಕ್ಕುಗಳ ಖರೀದಿಯಲ್ಲಿಯೂ ಸಹಾ ಈವರೆಗೆ ನಾನು ಹೆಚ್ಚು ಖರ್ಚು ಮಾಡಿಲ್ಲ.ತಾನು ಯಾವುದೇ ಚಿತ್ರದ ರೀಮೇಕ್ ಹಕ್ಕುಗಳನ್ನೂ ಖರೀದಿಸುವುದಿಲ್ಲ.ಬದಲಾಗಿ ಬೇರೆಬೇರೆ ಭಾಷೆಯ ಹತ್ತಾರು ಚಿತ್ರಗಳ ದೃಶ್ಯಗಳನ್ನಷ್ಟೇ ಹಾರಿಸಿಕೊಂಡು ಅದನ್ನೇ ಚಿತ್ರವನ್ನಾಗಿಸುತ್ತೇನೆ.ಇದರಿಂದಾಗಿ ತನಗೆ ಕೋಟ್ಯಂತರ ರೂ.ಹಣ ಉಳಿತಾಯವಾಗುತ್ತದೆ ಎಂದು  ತನ್ನ ಜಾಣನಡೆ ಪ್ರದರ್ಶಿಸಿದರು .

ತಾವು ನಡೆಸುತ್ತಿದ್ದ ಪ್ರತಿಭಟನೆಯ ಯಶಸ್ಸಿನ ನಂತರ ಮಾತನಾಡಿದ ನಿರ್ಮಾಪಕರ ಸಂಘದ ಅಧ್ಯಕ್ಷರು,ಆರುಕೋಟಿ ಕನ್ನಡಿಗರೂ ಪರಭಾಷಾ ಚಿತ್ರಗಳನ್ನು ಬಹಿಷ್ಕರಿಸಿ ಕನ್ನಡ ರೀಮೇಕ್ ಚಿತ್ರಗಳನ್ನೇ ನೋಡಿ ಕನ್ನಡ ನಿರ್ಮಾಪಕರನ್ನು,ಆ ಮೂಲಕ ಕನ್ನಡ ಚಿತ್ರರಂಗವನ್ನೂ ಉಳಿಸಬೇಕೆಂದು ಮನವಿ ಮಾಡಿದರು.

*ವಿ.ಸೂ:ಈ ಸುದ್ದಿಯು ಕೇವಲ ಸುಳ್ಸುದ್ದಿ ಹಾಗೂ ಕಾಲ್ಪನಿಕವಾಗಿದ್ದು,ಪರ ಭಾಷೆಯ ಹಳಸಲು ತಂದು ಬಡಿಸಿ ಇಲ್ಲಿಯ ಜನ ತಿನ್ನಲಿಲ್ಲ ಎಂದು ಗೋಳಾಡುವ ನಿರ್ಮಾಪಕರುಗಳನ್ನು ನೋಡಿ ಕಲ್ಪಿಸಿಕೊಂಡಿದ್ದಾಗಿರುತ್ತದೆ.ಈ ಸುದ್ದಿಯು ಕೇವಲ ಮನರಂಜನೆಗಾಗಿ ಮಾತ್ರ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments