ಡಾ. ಯು.ಆರ್ ಅನಂತಮೂರ್ತಿ ನೆನಪಿನಲ್ಲಿ
– ರಾಜಕುಮಾರ.ವ್ಹಿ.ಕುಲಕರ್ಣಿ
ಮುಖ್ಯಗ್ರಂಥಪಾಲಕ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ
ಕನ್ನಡದ ಶ್ರೇಷ್ಟ ಬರಹಗಾರ ಮತ್ತು ಚಿಂತಕ ಡಾ.ಯು.ಆರ್.ಅನಂತಮೂರ್ತಿ ನಿಧನರಾಗಿ ಅಗಸ್ಟ್ 22 ಕ್ಕೆ ಒಂದು ವರ್ಷವಾಯಿತು. ತಮ್ಮ ಸಮಗ್ರ ಸಾಹಿತ್ಯದ ಮೂಲಕ ಕನ್ನಡಕ್ಕೆ ಆರನೆ ಜ್ಞಾನಪೀಠ ತಂದುಕೊಟ್ಟು ಕನ್ನಡ ಸಾಹಿತ್ಯದ ಹಿರಿಮೆಯನ್ನು ಹೆಚ್ಚಿಸಿದ ಡಾ.ಯು.ಆರ್.ಅನಂತಮೂರ್ತಿ ಅವರು ಸಂಸ್ಕಾರ, ಭವ, ಘಟಶ್ರಾದ್ಧ, ಬರ ಹೀಗೆ ಸಂಖ್ಯಾತ್ಮಕ ದೃಷ್ಟಿಯಿಂದ ಬೆರಳೆಣಿಕೆಯ ಕಾದಂಬರಿಗಳನ್ನು ಮತ್ತು ಕೆಲವು ಕಥಾ ಸಂಕಲನಗಳನ್ನು ಬರೆದು ಬರೆದದ್ದು ಕಡಿಮೆ ಎಂದೆನಿಸಿದರೂ ಅವರು ಬರೆದದ್ದೆಲ್ಲ ತುಂಬ ಮೌಲಿಕವಾದದ್ದು. 1960 ರ ದಶಕದಲ್ಲಿ ‘ಸಂಸ್ಕಾರ’ದಂಥ ಸಂಪ್ರದಾಯ ವಿರೋಧಿ ಕಾದಂಬರಿಯನ್ನು ಅದು ಕುರುಡು ನಂಬಿಕೆಗಳು ಅತ್ಯಂತ ಪ್ರಸ್ತುತವಾಗಿದ್ದ ದಿನಗಳಲ್ಲಿ ಬರೆಯಲು ಸಾಧ್ಯವಾಗಿದ್ದು ಮೂರ್ತಿಗಳಲ್ಲಿದ್ದ ಸಮಾಜದ ಕುರಿತಾದ ಕಳಕಳಿಗೆ ನಿಜವಾದ ದೃಷ್ಟಾಂತ. ಸಂಪ್ರದಾಯವನ್ನು ವಿರೋಧಿಸಿ ಬರೆಯಲು ತಮಗೆ ಹೇಗೆ ಸಾಧ್ಯವಾಯಿತು ಎನ್ನುವುದನ್ನು ತಮ್ಮ ಆತ್ಮಕಥನ ‘ಸುರಗಿ’ಯಲ್ಲಿ ಹೀಗೆ ಹೇಳಿಕೊಂಡಿರುವರು ‘ಅಪ್ಪ ಅಸ್ಪೃಶ್ಯ ಸಮುದಾಯಕ್ಕೆ ಸೇರಿದ್ದ ಹೊಲದ ಕೆಲಸದ ಆಳನ್ನು ತಮ್ಮ ಸಮಕ್ಕೆ ಕೂಡಿಸಿಕೊಂಡು ಊಟ ಹಾಕುತ್ತಿದ್ದ ಅಂದಿನ ಮನೆಯ ವಾತಾವರಣವೇ ನಾನು ಬದುಕುತ್ತಿದ್ದ ವ್ಯವಸ್ಥೆಯನ್ನು ವಿರೋಧಿಸಿ ಬರೆಯಲು ಸ್ಪೂರ್ಥಿ ನೀಡಿತು’. ಸಂಪ್ರದಾಯಗಳು ಜಡ್ಡುಗಟ್ಟಿದ ಆ ದಿನಗಳಲ್ಲೇ ಅನಂತಮೂರ್ತಿ ಅವರು ಅಂತರ್ ಧರ್ಮೀಯ ವಿವಾಹವಾಗಿದ್ದು ಅವರೊಳಗಿನ ಸಾಮಾಜಿಕ ಬದ್ಧತೆಗೆ ಸಾಕ್ಷಿಯಾಗಿದೆ. ಕೇವಲ ಉಪದೇಶಿಸದೆ ಹೇಳಿದ್ದನ್ನು ಸ್ವತ: ಕಾರ್ಯಗತ ಮಾಡಿತೋರಿಸಿದ ಅವರೊಳಗಿನ ಈ ಧಾಡಸಿತನದ ಗುಣವೇ ಅವರನ್ನು ವಿರೋಧಿಸುವವರಂತೆ ಮೆಚ್ಚುವ ಮತ್ತು ಅಭಿಮಾನಿಸುವ ಅಭಿಮಾನಿಗಳ ಪಡೆಯನ್ನೇ ಸೃಷ್ಟಿಸಿತು. ಡಾ.ಯು.ಆರ್.ಅನಂತಮೂರ್ತಿ ವೈಚಾರಿಕವಾಗಿ ಅತ್ಯಂತ ಪ್ರಬುದ್ಧರಾಗಲು ಮತ್ತು ತಾನು ಬದುಕುತ್ತಿದ್ದ ವ್ಯವಸ್ಥೆಯ ಅಪಸವ್ಯಗಳನ್ನು ವಿರೋಧಿಸುವಂತಾಗಲು ಅವರು ಪಡೆದ ಇಂಗ್ಲಿಷ್ ಶಿಕ್ಷಣವೂ ಕಾರಣವಾಯಿತು. ಬರ್ಮಿಂಗ್‍ಹ್ಯಾಮ್ ಯುನಿವರ್ಸಿಟಿಯಲ್ಲಿನ ಇಂಗ್ಲಿಷ್ ಶಿಕ್ಷಣ ಅವರನ್ನು ಬರಹಗಾರನ ಜೊತೆಗೆ ಒಬ್ಬ ಚಿಂತಕನನ್ನಾಗಿಯೂ ರೂಪಿಸಿತು. ಅದಕ್ಕೆಂದೇ ಅವರು ತಮ್ಮ ಬರಹ ಮತ್ತು ವೈಚಾರಿಕ ಚಿಂತನೆಗಳಿಂದ ತಾವು ಬದುಕುತ್ತಿದ್ದ ಸಮಾಜವನ್ನು ಕಾಲಕಾಲಕ್ಕೆ ಜಾಗೃತಗೊಳಿಸುತ್ತಲೇ ಬಂದರು. ಬರಹಗಾರನೊಬ್ಬ ಸಮಾಜದ ಸಮಸ್ಯೆಗಳು ಮತ್ತು ವ್ಶೆರುಧ್ಯಗಳಿಗೆ ಸದಾಕಾಲ ಮುಖಾಮುಖಿಯಾಗಿರಬೇಕು ಎನ್ನುವ ನಿಲುವು ಅವರದಾಗಿತ್ತು. ಉತ್ತಮವಾದದ್ದನ್ನು ಉತ್ತೇಜಿಸಿ ಮಾತನಾಡುತ್ತಿದುದ್ದಕಿಂತ ತಮಗೆ ಸರಿಕಾಣದ್ದನ್ನು ಅವರು ಖಂಡಿಸಿ ಮಾತನಾಡಿದ್ದೇ ಹೆಚ್ಚು. ಲೇಖಕ ಸತ್ಯನಾರಾಯಣ ಅವರು ಹೇಳುವಂತೆ ಲೇಖಕನಾದವನ ಕೆಲಸ ಸದಾಕಾಲ ಓದುಗರಿಗೆ ಪ್ರಿಯವಾದದ್ದನ್ನೇ ಹೇಳುವುದಲ್ಲ ಎನ್ನುವ ಮಾತು ಅನಂತಮೂರ್ತಿ ಅವರಿಗೆ ಹೆಚ್ಚು ಅನ್ವಯವಾಗುತ್ತದೆ. ಈ ಕಾರಣದಿಂದಲೇ ಅವರು ‘ಬರಹಗಾರ ಏನನ್ನೂ ಸುಲಭವಾಗಿ ಒಪ್ಪಿಕೊಳ್ಳದೆ ಎಲ್ಲವನ್ನೂ ಅನುಮಾನದಿಂದ ನೋಡಬೇಕು’ ಎಂದು ಯುವಬರಹಗಾರರಿಗೆ ಕಿವಿಮಾತು ಹೇಳುತ್ತಿದ್ದರು.
ಅನಂತಮೂರ್ತಿ ಅವರು ಶ್ರೇಷ್ಟ ಬರಹಗಾರನಾದಂತೆ ಅವರೊಬ್ಬ ಶ್ರೇಷ್ಟ ವಾಗ್ಮಿಯೂ ಆಗಿದ್ದರು.ಅವರಲ್ಲಿದ್ದ ವಾಕ್‍ಪಟುತ್ವವೆ ಅವರು ಅನೇಕರಿಗೆ ಹತ್ತಿರವಾಗಲು ಜೊತೆಗೆ ಕೆಲವರ ಶತ್ರುತ್ವವನ್ನು ಕಟ್ಟಿಕೊಳ್ಳಲು ಕಾರಣವಾಯಿತು. ತಮಗೆ ಅನಿಸಿದ್ದನ್ನು ಕೇಳುಗರು ಒಪ್ಪಿಕೊಳ್ಳುವಂತೆ ತಮ್ಮ ವಿಚಾರಗಳನ್ನು ಪ್ರಸ್ತುತಪಡಿಸುವ ಕಲೆ ಅವರಿಗೆ ಕರಗತವಾಗಿತ್ತು. ಒಂದೊಂದು ಸಲ ಅವರ ಚಿಂತನೆಗಳು ಅವರೊಬ್ಬ ಗಾಂಧಿಯ ಕಡುವ್ಯಾಮೋಹಿ ಎನ್ನುವಂತೆ ಬಿಂಬಿತವಾಗುತ್ತಿದ್ದವು. ಈ ಮಾತಿಗೆ ಪುಷ್ಟಿ ಕೊಡುವಂತೆ ಅವರು ಗಾಂಧೀಜಿಯ ಸರ್ವೋದಯದ ಕಲ್ಪನೆಯನ್ನು ಬೆಂಬಲಿಸಿ ಮಾತನಾಡುತ್ತಿದ್ದರು. ಈಗಿನ ರಾಜಕಾರಣಿಗಳು ಮಾಡುತ್ತಿರುವ ಕೈಗಾರೀಕರಣ ಹಾಗೂ ಐಟಿ ಬಿಟಿಗಳ ಅಭಿವೃದ್ಧಿ ಅವರ ದೃಷ್ಟಿಯಲ್ಲಿ ಅಭಿವೃದ್ಧಿ ಅಲ್ಲವಾಗಿತ್ತು. ಒಂದು ಆರ್ಥಿಕ ಬೆಳವಣಿಗೆ ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಬದುಕುವ ಚೈತನ್ಯ ನೀಡಬೇಕು ಅದು ಮಾತ್ರ ಆರ್ಥಿಕ ಅಭಿವೃದ್ಧಿ ಎನ್ನುವುದು ಅವರ ನಿಲುವಾಗಿತ್ತು. ಇದು ಸಾಧ್ಯವಾಗುವುದು ಅದು ಗಾಂಧೀಜಿಯ ಸರ್ವೋದಯದ ಕಲ್ಪನೆಯಿಂದ ಮಾತ್ರ ಎನ್ನುವ ಸಿದ್ಧಾಂತಕ್ಕೆ ಮೂರ್ತಿಗಳು ಕೊನೆಯವರೆಗೂ ಅಂಟಿಕೊಂಡಿದ್ದರು. ನಗರೀಕರಣ ಮತ್ತು ಮಾಲ್ ಸಂಸ್ಕೃತಿಯನ್ನು ವಿರೋಧಿಸುತ್ತಲೇ ನರೇಂದ್ರ ಮೋದಿಯಂಥ ಕೆಳಸಮುದಾಯದ ಹಾಗೂ ಸಾಮಾನ್ಯ ಕುಟುಂಬದಿಂದ ಬಂದ ವ್ಯಕ್ತಿ ದೇಶದ ಪ್ರಧಾನಿಯಾಗಲು ಸಾಧ್ಯವಾಗುವುದು ಅದು ಗಾಂಧಿ ಕಟ್ಟಿದ (ಪ್ರಣೀತ) ಭಾರತದಲ್ಲಿ ಮಾತ್ರ ಸಾಧ್ಯ ಎನ್ನುವ ಅಚ್ಚರಿಯನ್ನು ವ್ಯಕ್ತಪಡಿಸುತ್ತಿದ್ದರು.
ಅನಂತಮೂರ್ತಿ ಅವರು ಯಾವತ್ತೂ ತಾನು ಬಂದ ಸಮುದಾಯದ ಜಡ ಸಿದ್ಧಾಂತಗಳಿಗೆ ಮತ್ತು ಸಂಪ್ರದಾಯಗಳಿಗೆ ಕುರುಡು ನಂಬಿಕೆಗಳಿಂದ ಕಟ್ಟಿಬಿದ್ದವರಲ್ಲ. ಬೇರುಗಳಿಗೆ ಅಂಟಿಕೊಳ್ಳದೆ ಬೇರುರಹಿತವಾಗಿ ಬದುಕುವ ಕಲೆ ಮತ್ತು ಮನೋಧಾರ್ಡ್ಯ ಪ್ರತಿಯೊಬ್ಬರಲ್ಲಿ ಬಲವಾದಾಗಲೇ ವಿಶ್ವಮಾನವ ಕಲ್ಪನೆ ಸಾಧ್ಯ ಎಂದೆನ್ನುತ್ತಿದ್ದರು. ಒಂದರ್ಥದಲ್ಲಿ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎನ್ನುವ ಬಸವಣ್ಣನ ಸಂದೇಶವನ್ನು ಅವರು ಸ್ವತ: ಪಾಲಿಸಿಕೊಂಡು ಬಂದರು. ಜೊತೆಗೆ ಸ್ಥಾವರವಾಗದೆ ಜಂಗಮರಾಗಿರಿ ಎನ್ನುವ ಸಂದೇಶವನ್ನು ಸಮಾಜಕ್ಕೆ ನೀಡಿದರು. ಅನಂತಮೂರ್ತಿ ಅವರನ್ನು ಬಸವಶ್ರೀ ಪ್ರಶಸ್ತಿಗೆ ಆಯ್ಕೆಮಾಡಿದ್ದರ ಹಿಂದಿನ ಮಾನದಂಡ ಅವರೊಳಗಿನ ಜಂಗಮ ಕಲ್ಪನೆಯೇ ಆಗಿತ್ತು. ಅದನ್ನು ಅರ್ಥಮಾಡಿಕೊಳ್ಳದೆ ಕೆಲವರು ವಚನಗಳನ್ನು ಬರೆಯದೆ ಇರುವ ಅನಂತಮೂರ್ತಿ ಅದು ಹೇಗೆ ಬಸವ ಪ್ರಶಸ್ತಿಗೆ ಆಯ್ಕೆಯಾದರು ಎಂದು ವಿವಾದವನ್ನು ಸೃಷ್ಟಿಸಿ ಅವರ ವ್ಯಕ್ತಿತ್ವದ ತೇಜೋವಧೆಗೆ ಪ್ರಯತ್ನಿಸಿದರು.
ಅನಂತಮೂರ್ತಿ ಅವರು ಸಿದ್ಧಾಂತದ ನೆಲೆಗಟ್ಟಿನಲ್ಲಿ ವಿರೋಧಿಸುತ್ತಿದ್ದರೆ ವಿನ: ಯಾವತ್ತೂ ವೈಯಕ್ತಿಕವಾಗಿ ಯಾರನ್ನೂ ವಿರೋಧಿಸಿದವರಲ್ಲ. ಬರಹಗಾರರು, ಚಿಂತಕರು, ಮಠಾಧೀಶರು, ರಾಜಕಾರಣಿಗಳು, ಧಾರ್ಮಿಕ ಮುಖಂಡರು, ವಿಮರ್ಶಕರು ಹೀಗೆ ಮೂರ್ತಿಗಳ ನಿಲುವನ್ನು ಪ್ರತಿಭಟಿಸುವ ದೊಡ್ಡ ಪಡೆಯೇ ಇತ್ತು. ಹೀಗಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಅಪಾರ ಪ್ರಮಾಣದ ಪ್ರತಿಭಟನೆಯನ್ನು ಎದುರಿಸಿದ ಬರಹಗಾರ ಯು.ಆರ್.ಅನಂತಮೂರ್ತಿ ಅವರನ್ನು ಬಿಟ್ಟರೆ ಬೇರೊಬ್ಬರಿಲ್ಲ. ಅವರು ತಮಗೆ ಎದುರಾಗುವ ಪ್ರತಿಭಟನೆಯನ್ನು ಸಮರ್ಥವಾಗಿಯೇ ನಿಭಾಯಿಸುತ್ತಿದ್ದರು. ತಮ್ಮೊಳಗಿದ್ದ ವಿಶ್ಲೇಷಣಾತ್ಮಕ ಮತ್ತು ವಿಮರ್ಶಾತ್ಮಕ ಗುಣಗಳಿಂದಾಗಿ ಅವರು ಯಾವುದನ್ನೂ ಸುಲಭವಾಗಿ ಒಪ್ಪಿಕೊಳ್ಳದೆ ಎಲ್ಲವನ್ನೂ ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದರು ಮತ್ತು ತಾವು ಅನುಮಾನಿಸಿದ್ದನ್ನು ಸೈದ್ಧಾಂತಿಕ ನೆಲೆಯಲ್ಲಿ ಪ್ರಶ್ನಿಸುತ್ತಿದ್ದರು. ಅವರ ಈ ಗುಣ ಅನೇಕರಿಗೆ ವಿತಂಡವಾದಿಯಂತೆ ಗೋಚರಿಸುತ್ತಿತ್ತು. ಈ ಕಾರಣದಿಂದಲೇ ಅನಂತಮೂರ್ತಿ ಅವರ ಪ್ರತಿಹೇಳಿಕೆ ಮತ್ತು ಬರವಣಿಗೆಯನ್ನು ಅದು ಅಗತ್ಯವಿರಲಿ ಇಲ್ಲದಿರಲಿ ಒಂದು ಗುಂಪಿನ ಜನ ಸದಾಕಾಲ ಪ್ರತಿಭಟಿಸುತ್ತಿದ್ದರು. ಅಂಥ ಪ್ರತಿರೋಧಗಳನ್ನು ಸಮರ್ಥವಾಗಿಯೇ ನಿಭಾಯಿಸುತ್ತಿದ್ದ ಅನಂತಮೂರ್ತಿ ಅವರಿಗೆ ತಮ್ಮ ಬದುಕಿನ ಕೊನೆಯ ದಿನಗಳಲ್ಲಿ ಎರಡು ಪ್ರತಿರೋಧಗಳನ್ನು ಮಾತ್ರ ನಿಭಾಯಿಸಲು ಸಾಧ್ಯವಾಗದೇ ಹೋಯಿತು. ಕುಂವೀ ಕನ್ನಡಕ್ಕೆ ಬಂದ ಎಂಟು ಜ್ಞಾನಪೀಠಗಳಲ್ಲಿ ಎರಡನ್ನು ಕುರಿತು ಅಪಸ್ವರದ ಮಾತನಾಡಿದಾಗ (ಆ ಎರಡರಲ್ಲಿ ಅನಂತಮೂರ್ತಿ ಅವರದೂ ಒಂದು) ಅನಂತಮೂರ್ತಿ ಆ ಪ್ರತಿರೋಧವನ್ನು ನಿಭಾಯಿಸದೆ ‘ಕುಂವೀ ದೈಹಿಕವಾಗಿ ಬಲಾಢ್ಯರು ಅವರೊಡನೆ ಕುಸ್ತಿ ಮಾಡುವುದು ಅಸಾಧ್ಯದ ಸಂಗತಿ’ ಎಂದು ಹೇಳಿಕೆ ನೀಡಿ ಸುಮ್ಮನಾದರು. ಇನ್ನೊಂದು ಸಂದರ್ಭ ಮೋದಿ ಆಳುವ ಭಾರತದಲ್ಲಿ ನಾನಿರಲಾರೆ ಎಂದು ಹೇಳಿಕೆ ನೀಡಿದಾಗಲೂ ಅವರ ಈ ಮಾತಿಗೆ ಸಾಕಷ್ಟು ಪ್ರತಿರೋಧ ವ್ಯಕ್ತವಾಯಿತು. ಆಗಲೂ ಅನಂತಮೂರ್ತಿ ಅವರು ಏನನ್ನೂ ಪ್ರತಿಕ್ರಿಯಿಸಲಿಲ್ಲ. ಇಲ್ಲಿ ಎರಡು ಸಂಗತಿಗಳು ವ್ಯಕ್ತವಾಗುತ್ತವೆ ಒಂದು ಆ ಎರಡು ಘಟನೆಗಳ ಸಂದರ್ಭ ಅನಂತಮೂರ್ತಿ ಅವರಿಗೆ ವಯಸ್ಸಾಗಿದ್ದು ಸಾಕಷ್ಟು ದೈಹಿಕ ತೊಂದರೆಗಳು ಕಾಣಿಸಿಕೊಂಡಿದ್ದವು. ಜೊತೆಗೆ ವ್ಯವಸ್ಥೆಯನ್ನು ವಿರೋಧಿಸುವ ಗುಣ ಅವರಲ್ಲಿದ್ದುದ್ದರಿಂದ ತೀರ ವ್ಯಕ್ತಿಗತ ಪ್ರತಿಭಟನೆಯಾಗಬಹುದೆಂದು ಅವರು ಪ್ರತಿಕ್ರಿಯಿಸದೆ ಹೋಗಿರಬಹುದು. ಅನಂತಮೂರ್ತಿ ಅವರು ಮೋದಿ ಅವರನ್ನು ಆರ್.ಎಸ್.ಎಸ್ ಸಂಘಟನೆಯ ಹಿನ್ನೆಲೆಯಿಂದ ಬಂದವರೆಂಬ ಕಾರಣದಿಂದ ವಿರೋಧಿಸುವುದಕ್ಕಿಂತ ಅವರು ಮೋದಿ ಅವರ ಅಭಿವೃದ್ಧಿಯನ್ನು ವಿರೋಧಿಸುತ್ತಿದ್ದುದ್ದೆ ಹೆಚ್ಚು.ಬಹು ರಾಷ್ಟ್ರೀಯ ಕಂಪನಿಗಳಿಗೆ ಕೆಂಪುಗಂಬಳಿ ಹಾಸಿ ಅವರಿಗೆ ಸಕಲ ಸವಲತ್ತುಗಳನ್ನು ಕೊಟ್ಟು ಭಾರತಕ್ಕೆ ಆಹ್ವಾನಿಸುವ ಮೋದಿ ಅವರ ಈ ಗುಣ ಅನಂತಮೂರ್ತಿ ಅವರಿಗೆ ಅದೊಂದು ಅಪಾಯದಂತೆ ಗೋಚರಿಸುತ್ತಿತ್ತು. ಹೀಗೆ ವ್ಯಾಪಾರದ ನೆಪದಲ್ಲಿ ಭಾರತಕ್ಕೆ ಬಂದ ಈಸ್ಟ್ ಇಂಡಿಯಾ ಕಂಪನಿ ಭಾರತವನ್ನು ಎರಡು ನೂರು ವರ್ಷಗಳ ಕಾಲ ಆಳಿದ ಉದಾಹರಣೆ ನಮ್ಮೆದುರಿರುವಾಗ ಈ ಬಹುರಾಷ್ಟ್ರೀಯ ಕಂಪನಿಗಳು ಭಾರತವನ್ನು ಮತ್ತೆಲ್ಲಿ ದಾಸ್ಯಕ್ಕೆ ದೂಡುತ್ತವೆಯೋ ಎನ್ನುವ ಅನುಮಾನ ಮತ್ತು ಆತಂಕ ಅವರಲ್ಲಿತ್ತೆಂದು ಕಾಣುತ್ತದೆ. ಈ ಕಾರಣದಿಂದಲೇ ಅವರು ಗಾಂಧೀಜಿ ಅವರ ಸರ್ವೋದಯದ ಕಲ್ಪನೆಯನ್ನು ಬೆಂಬಲಿಸುತ್ತ ಮೋದಿ ಅವರ ಅಭಿವೃದ್ಧಿಯನ್ನು ವಿರೋಧಿಸುತ್ತಿದ್ದರು. ಆದರೆ ಅವರ ತಾತ್ವಿಕ ನಿಲುವನ್ನು ಅರ್ಥಮಾಡಿಕೊಳ್ಳದೆ ಕೆಲವು ಸಂಘಟನೆಗಳು ನಿನ್ನೆ ಅವರ ನಿಧನದ ಸುದ್ದಿ ಕೇಳಿ ಪಟಾಕಿ ಸಿಡಿಸಿ ಸಂಭ್ರಮಿಸಿದವು.ಸೂತಕದ ಮನೆಯಲ್ಲಿ ಸಂಭ್ರಮಿಸುವ ಗುಣ ಇದೊಂದು ಅನಾಗರಿಕ ವರ್ತನೆ ಮತ್ತು ನಮ್ಮ ನೆಲದ ಸಂಸ್ಕೃತಿಗೆ ವಿರೋಧವಾದದ್ದು.
ಜಿ.ಎಸ್.ಶಿವರುದ್ರಪ್ಪನವರನ್ನು ಕುರಿತು ಅನಂತಮೂರ್ತಿ ಅವರು ಹೀಗೆ ಬರೆಯುತ್ತಾರೆ ‘ಜಿ.ಎಸ್.ಶಿವರುದ್ರಪ್ಪನವರ ಸಾಹಿತ್ಯವನ್ನು ಓದಿಕೊಂಡು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡವರ ಸಂಖ್ಯೆ ಕನ್ನಡದಲ್ಲಿ ಅಸಂಖ್ಯ. ಅವರ ಬದುಕು ಮತ್ತು ಬರಹವನ್ನು ಗಮನಿಸುತ್ತಲೇ ಬರಹಗಾರರಾದವರಿದ್ದಾರೆ. ಅದಕ್ಕೆಂದೇ ಜಿ.ಎಸ್.ಎಸ್ ಅವರನ್ನು ನಮ್ಮ ಕಾಲದ ದ್ರೋಣರೆಂದು ಕರೆಯುವುದು ಹೆಚ್ಚು ಸಮಂಜಸವೆನಿಸುತ್ತದೆ’. ಅನಂತಮೂರ್ತಿ ಅವರು ಶಿವರುದ್ರಪ್ಪನವರ ಕುರಿತು ಹೇಳಿದ ಈ ಮಾತು ಸ್ವತ: ಅವರಿಗೂ ಅನ್ವಯಿಸುತ್ತದೆ. ಅನಂತಮೂರ್ತಿ ಅವರ ಕಥೆ, ಕಾದಂಬರಿಗಳು ಮತ್ತು ವೈಚಾರಿಕ ಲೇಖನಗಳನ್ನು ಓದಿ ತಮ್ಮ ಬರವಣಿಗೆಯನ್ನು ಹದಗೊಳಿಸಿಕೊಂಡ ಅನೇಕ ಲೇಖಕರು ಕನ್ನಡದಲ್ಲಿರುವರು. ಜೊತೆಗೆ ಅನಂತಮೂರ್ತಿ ಅವರ ಪ್ರಭಾವದ ಪರಿಣಾಮ ಸಮಾಜದ ಸಮಸ್ಯೆಗಳಿಗೆ ಪ್ರತಿಕ್ರಿಯಿಸಿ ಬರೆಯುವ ಮತ್ತು ಸಮಾಜಮುಖಿಯಾಗಿ ನಿಲ್ಲುವ ಬರಹಗಾರರು ಕನ್ನಡ ಸಾಹಿತ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹುಟ್ಟಿಕೊಂಡರು. ಲೇಖರೋರ್ವರು ಹೇಳುವಂತೆ ಅನಂತಮೂರ್ತಿ ಅವರು ಒಂದು ತಲೆಮಾರಿನ ಲೇಖಕರಿಗೆ ಪ್ರಶ್ನಿಸುವುದನ್ನು ಕಲಿಸಿದರು ಮತ್ತು ಪ್ರತಿಭಟಿಸುವುದನ್ನು ಹಕ್ಕೆಂದು ತೋರಿಸಿಕೊಟ್ಟರು. ಸಂವಾದ, ವಾಗ್ವಾದ, ಪ್ರಶ್ನಿಸುವಿಕೆಯ ಮೂಲಕ ಲೇಖಕನಾದವನು ತನ್ನ ಪ್ರತಿಭಟನೆಯ ಕಾವನ್ನು ನಿರಂತರವಾಗಿ ಕಾಯ್ದುಕೊಳ್ಳಬೇಕೆನ್ನುವುದನ್ನು ತಮ್ಮ ನಂತರದ ಪೀಳಿಗೆಯ ಬರಹಗಾರರಿಗೆ ಕಲಿಸಿಕೊಟ್ಟ ಮೇಷ್ಟ್ರು ಅವರು.
ಡಾ.ಯು.ಆರ್.ಅನಂತಮೂರ್ತಿ ಅವರು ನಮ್ಮ ಮುಂದಿನ ಪೀಳಿಗೆಗೆ ಯಾವರೀತಿ ಪರಿಚಿತರಾಗಬೇಕು ಎನ್ನುವ ಪ್ರಶ್ನೆ ಎದುರಾದಾಗ ಲೇಖಕ ಜೋಗಿ ‘ಅನಂತಮೂರ್ತಿ ಅವರು ಬರಹಗಾರರಾಗಿ ಅಲ್ಲದಿದ್ದರೂ ಹೋರಾಟಗಾರನಾಗಿ ಮತ್ತು ಚಿಂತಕನಾಗಿ ನಮ್ಮ ನಂತರದ ಪೀಳಿಗೆಗೆ ಪರಿಚಿತರಾಗಿ ಉಳಿಯುವುದು ಖಂಡಿತ ಸಾಧ್ಯ’ ಎನ್ನುವ ಭರವಸೆಯ ಮಾತುಗಳನ್ನಾಡುತ್ತಾರೆ. ಆದ್ದರಿಂದ ಅನಂತಮೂರ್ತಿ ಅವರ ಬರಹ ಮತ್ತು ಚಿಂತನೆಯನ್ನು ಪೀಳಿಗೆಯಿಂದ ಪೀಳಿಗೆಗೆ ದಾಟಿಸುವ ಕೆಲಸವಾಗಬೇಕು. ಅವರ ಅನುಮಾನದ ಮತ್ತು ಸಂದೇಹದ ನೋಟದಲ್ಲೇ ನಾವು ಬದುಕುತ್ತಿರುವ ಸಮಾಜವನ್ನು ನೋಡುವ ಹಾಗೂ ಪ್ರತಿಭಟಿಸುವ ಜೊತೆಗೆ ಎಲ್ಲವನ್ನೂ ಪ್ರಶ್ನಿಸುವ ಮನೋಭಾವ ಮೂಡುವಂತಾಗಲು ಅನಂತಮೂರ್ತಿ ಅವರ ಒಟ್ಟು ಬರಹವನ್ನು ಸಂರಕ್ಷಿಸಿಟ್ಟು ಅದನ್ನು ದಾಟಿಸುವ ಕೆಲಸವಾಗಬೇಕಿದೆ. ನಮ್ಮ ಮುಂದಿನ ಪೀಳಿಗೆಯ ಬದುಕನ್ನು ಒಂದಿಷ್ಟು ಸಹನೀಯವಾಗಿಸಲು ಇದು ಇವತ್ತಿನ ತುರ್ತು ಅಗತ್ಯವಾಗಿದೆ ಎನ್ನುವ ಭಾವನೆ ನನ್ನದು.
ಮಾನ್ಯ ಯು.ಆರ್.ಅನಂತಮೂರ್ತಿಯವರ ಬಗ್ಗೆ ಲೇಖಕರ ಅಭಿಪ್ರಾಯ, ಅಭಿಮತ, ಅನಿಸಿಕೆಗಳು ಶ್ಲಾಘನೀಯ. ಕೆಲಸಕ್ಕೆ ಬಾರದ, ಅನುಕೂಲವಲ್ಲದ, ದ್ವೇಷಕ್ಕೆ ಕಾರಣವಾಗುವ ಅಮಾನವೀಯ, ನಿರುಪಯೋಗೀ ಮೂಢ ನಂಬಿಕೆಗಳನ್ನು ದೂರಗೊಳಿಸದೇ ನಮ್ಮ ದೇಶ ಮುಂದುವರಿಯುವುದು ಸಾಧ್ಯವೇ ಇಲ್ಲದ ಮಾತು. ಸರ್ವರನ್ನೂ ಸಮಾನವಾಗಿ ಭಾವಿಸುವ ದಿನಗಳು ಬೇಗನೇ ಬರಲೆಂದು ನಾನು ಆಶಿಸುತ್ತೇನೆ. ನಾನೂ ಕೂಡ ಮೂರ್ತಿಯವರಂತೆ, ಬಸವಣ್ಣನವರಂತೆ ಸಿಡಿದೆದ್ದು ವಿಶ್ವಮಾನವನಾದವನು. ಜಾತ್ಯಾತೀತ ರಾಷ್ಟ್ರದಲ್ಲಿ ಜಾತಿಗಳನ್ನು ತುಂಬಿ ಮೆರೆಯುತ್ತಿರುವ ರಾಜಕಾರಣಿಗಳಿಗೆ ಮಹಾಜನರು ಬುದ್ಧಿಕಲಿಸದೇ ಹೋದರೆ, ಈ ದೇಶಕ್ಕೆ ಅನಾಹುತವಾಗುವುದು ನಿಶ್ಚಿತ.
ಅನಂತಮೂರ್ತಿ-ದ್ವಂದ್ವ ಚಿಂತನೆಗಳು
ಕನ್ನಡ ಸಾಹಿತ್ಯದಲ್ಲಿ ಕೇಳಿಬರುವ ಪ್ರಮುಖ ಹೆಸರು ಅನಂತ ಮೂರ್ತಿಯವರದ್ದು. ಅವರು ಸಾಹಿತ್ಯದಂತೆಯೇ ತಮ್ಮ ಹೇಳಿಕೆಗಳಿಂದಲೂ ತಮ್ಮ ಸುತ್ತ ಪ್ರಭಾಯನ್ನು ನಿರ್ಮಿಸಿಕೊಂಡವರು.ರಾಜಕುಮಾರ ಕುಲಕರ್ಣಿಯವರು ಅಶಿಸಿದಂತೆ ಅವರ ವರ್ಶ್ಹಬ್ಧಿಕದಲ್ಲಿ ಅವರನ್ನು ನೆನೆಯುವುದು ಸೂಕ್ತವಾಗಿದೆ.
ಪ್ರಸ್ತುತ ಅವರ ಎಲ್ಲ ಲೇಖನಗಳು, ಕಥೆ ಕಾದಂಬರಿಗಳು kanaja.in ಎಂಬ ಜಾಲತಾಣದಲ್ಲಿ ಉಚಿತವಾಗಿ, ಪರಿಪೂರ್ಣ ರೂಪದಲ್ಲಿ ದೊರೆಯುತ್ತವೆ. ಹಾಗಾಗಿ ಓದಬೇಕೆಂದವರಿಗೆ, ಸುಲಭ ರೂಪದಲ್ಲಿ ಲಭ್ಯ.
ಕುಲಕರ್ಣಿಯವರು ಮೂರ್ತಿಯವರ ಸಾಧನೆಗಳನ್ನು ಕುರಿತು ವಿವರವಾಗಿ ಚರ್ಚಿಸಿದ್ದಾರೆ. ಒಬ್ಬ ವ್ಯಕ್ತಿಯನ್ನು ನೆನೆಯುವಾಗ ಕೇವಲ ಅವರ ಧನಾತ್ಮಕ ವಿಮರ್ಶೆ ಮಾಡಬೇಕೆ ಅಥವಾ ಸಮಗ್ರ ಪರಿಗಣನೆ ಮಾಡಬೇಕೆ ಎಂಬುದು ನನ್ನ ಜಿಜ್ಞಾಸೆ. ನನಗೆ ಮೂರ್ತಿಯವರ ಕುರಿತು ಸಾಕಷ್ಟು ತಕರಾರುಗಳಿವೆ.
ಸಾಹಿತಿಯಾಗಿ ಅವರು ರಚಿಸಿದ ಕೃತಿಗಳು ಉತ್ತಮ ಮಟ್ಟದ್ದೆಂದು ಬಹಳ ಜನರ ಅನಿಸಿಕೆಯಾದರೂ ನನಗೆ ಯಾಕೋ ಅವು ರುಚಿಸಲಿಲ್ಲ. ನಾನು ಸಾಹಿತ್ಯದ ವಿದ್ಯಾರ್ಥಿಯಲ್ಲ. ಹಾಗಾಗಿ ನನಗೆ ಅದರ ಸಂಕೀರ್ಣತೆಗಳು, ಒಳ ಹರಿವುಗಳು ದಕ್ಕದೇ ಹೋಗಿರಬಹುದು. ಬದುಕಿನ ಘಟನೆಗಳ ಯಥಾವತ್ ನಿರೂಪಣೆಯಂತೆ ಹಾಗೂ ನೀರಸವಾಗಿ ಕಂಡುಬರುತ್ತವೆ. ಒಂದೆರೆಡು ಹಾಗಿರಬಹುದು, ಪೂರ್ತಿ ನೋಡೇ ಬಿಡುವ ಎಂದು ಅವರ ಬಹುತೇಕ ಎಲ್ಲ ಕಥಾ ಸಂಕಲನ, ಕಾದಂಬರಿ ಓದಿದೆ. ಕಡೆಗೂ ಅದೇ ಅನಿಸಿಕೆ ಉಳಿಯಿತು!! ಅವರ ಪುಸ್ತಕಗಳು ಓದುಗ ವಲಯದಲ್ಲಿ ಹೆಚ್ಚು ಮಾರಾಟವಾಗದ ಕಾರಣ ಇದೇ ಇರಬಹುದೇ? ಯೋಚಿಸಬೇಕಾದ ವಿಶಯ.
ಇನ್ನು ಅವರ ವೈಚಾರಿಕ ಲೇಖನಗಳು ನಿಜಕ್ಕೂ ಚೆನ್ನಾಗಿವೆ. ಒಂದು ವಿಚಾರವನ್ನು ಬೆಳೆಸುವ ಪರಿ ನನಗೆ ಇಷ್ಟವಾಯಿತು. ಸಾಹಿತ್ಯದಲ್ಲಿ ಸಾಕಷ್ಟು ಸಾಧನೆ ಮಾಡಿರುವವರು ಈ ಬಗ್ಗೆ ಇನ್ನೂ ಹೆಚ್ಚಿನ ಬೆಳಕು ಬೀರಿಯಾರು.
ಸೃಜನಾತ್ಮಕವಾಗಿ ಒಬ್ಬ ವ್ಯಕ್ತಿ ಏನನ್ನು ಸೃಷ್ಟಿಸಬಹುದು ಎಂಬುದು ಅವರ ಪ್ರತಿಭೆ, ಅನುಭವ, ಗಹನ ಶೀಲತೆ ಇತ್ಯಾದಿಗಳನ್ನು ಅವಲಂಬಿಸಿರುವುದರಿಂದ ಹಾಗೂ ಅದು ಹೆಚ್ಚು ಕಡಿಮೆ ಜನ್ಮಜಾತ ಪ್ರತಿಭೆಯಾದ ಕಾರಣ ನಮ್ಮ ಅನಿಸಿಕೆಗಳನ್ನು ನಾವು ಹೇಳಬಹುದೇ ವಿನಃ ಅದು ತಪ್ಪು ಸರಿ ಎಂದು ವಾದಿಸುವುದು ಸೂಕ್ತವಲ್ಲ. ಹಾಗಾಗಿ ಸಾಹಿತಿಯಾಗಿ ಅನಂತಮೂರ್ತಿ, ಅನಂತಮೂರ್ತಿಯೇ . ಭೈರಪ್ಪನವರೊಂದಿಗೆ ಹೋಲಿಸುವುದು ಕೂಡಾ ಬಾಲಿಶವಾಗುತ್ತದೆ. ಆದರೂ ಈ ನಿಟ್ಟಿನಲ್ಲಿ ಸಾಕಷ್ಟು ಬರವಣಿಗೆ-ಭಾಷಣಗಳು ಬಂದಿವೆ.
ನನ್ನ ಪ್ರಮುಖ ತಕರಾರು ಅನಂತಮೂರ್ತಿ ತನಗೆ ತಾನೇ ಆರೊಪಿಸಿಕೊಂಡ ಇನ್ನೊಂದು ಪಾತ್ರ- ಅದು ಬುದ್ಧಿಜೀವಿ ಎಂಬ ಸಮಾಜ ಸುಧಾರಕನ ಪಾತ್ರ. ಇಲ್ಲಿ ಅವರು ದ್ವಂದ್ವ ನೀತಿಯನ್ನೂ, ಎಡಬಿಡಂಗಿತನವನ್ನೂ, ತಮ್ಮ ಅನುಕೂಲವನ್ನು ಸಾಧಿಸಿಕೊಂಡರು ಎಂಬುದು. ಇಲ್ಲಿ ನಂಬಿಕೆ ಸಂಪ್ರದಾಯಗಳನ್ನು ಪ್ರಶ್ನಿಸುವ ಪುರೋಗಾಮಿ ಕೆಲಸ ಮಾಡುವಾಗ ಜನರಿಗೆ ಅರ್ಧ ಸತ್ಯವನ್ನು/ಅರ್ಧ ಸುಳ್ಳನ್ನು ಮಾತ್ರವೇ ಹೇಳಿದರು. ಸಮಸ್ಯೆಗಳನ್ನು ಎತ್ತಿದರೇ ವಿನಃ ಅವುಗಳಿಗೆ ಪರಿಹಾರ ಮಾರ್ಗಗಳನ್ನು ಸೂಚಿಸಲಿಲ್ಲ. ಸಮಾಜವೆಂಬ ಸಂಕೀರ್ಣ ವ್ಯವಸ್ಥೆ ಒಂದು ಬದಲಾವಣೆಗೆ ತಯಾರಾಗಿದೆಯೇ ಇಲ್ಲವೇ ಎಂಬುದರ ಪರಿವೆ ಅವರಿಗಿರಲಿಲ್ಲ. ಪರಸ್ಪರ ಪೈಪೋಟಿಗಿಳಿದಿರುವ ಮೂರು ಪ್ರಮುಖ ಧರ್ಮಗಳಿರುವ ಸಮಾಜದಲ್ಲಿ ಒಂದು (ಸನಾತನ) ಧರ್ಮವನ್ನು ಕುರಿತಾದ ಏಕಮುಖಿ ಆರೋಪಗಳನ್ನು ಮಾಡುವಲ್ಲಿ ಹಿಂದೆ ಬೀಳದಿದ್ದರೂ, ಸನಾತನ ಧರ್ಮದ ಒಂದು ಪದ್ಧತಿ ಆಚರಣೆಯ ಹಿಂದಿರುವ ಆಶಯವನ್ನು ಗುರುತಿಸದೇ ಹೋದರು; ಅಥವಾ ತಮ್ಮ ಉದ್ದೇಶ ಸಾಧನೆಗೆ ಭಂಗ ಬರುವುದೆಂಬ ಕಾರಣಕ್ಕೆ ಅದನ್ನು ಹೇಳದೇ ಹೋದರು. ತಾವೇ ಹೇಳಿಕೊಂಡಿರುವಂತೆ ಪುರುಶಸೂಕ್ತವನ್ನು ಬಾಯಿ ಪಾಠ ಮಾಡಿದ್ದ ಅವರಿಗೆ ನಮ್ಮ ಆಚರಣೆಗಳ ಹಿಂದಿನ ಆಶಯ ಅರ್ಥವಾಗದೇ ಹೋದದ್ದು ವಿಪರ್ಯಾಸ.
ಒಂದು ಉದಾಹರಣೆ: ದೇವರ ಮೂರ್ತಿಯ ಮೇಲೆ ಉಚ್ಚೆ ಮಾಡಿದ್ದು. ದೇವರ ಸಾಕ್ಷಾತ್ಕಾರ ಎಲ್ಲ ಕಡೆಗೂ ಇದೆ ಎಂದು ಬೋಧಿಸುವ ಸನಾತನ ಧರ್ಮ ಮೂರ್ತಿ ಪೂಜೆಯನ್ನು ಅಳವಡಿಸಿಕೊಂಡದ್ದರ ವೈಜ್ಞಾನಿಕ ಸತ್ಯವನ್ನು ಹೇಳಬೇಕಿತ್ತು. ಅದನ್ನು ಮಾಡದೆ ನಾನು ಉಚ್ಚೆ ಹೊಯ್ದು ದೇವರು ಇಲ್ಲವೆಂದು ತೋರಿಸಿದೆ. ಹಿಂದೂ ಧರ್ಮಾಚರಣೆಗಳು ಕೆಲಸಕ್ಕೆ ಬಾರದವು ಎಂಬ ಸಂದೇಶವನ್ನು ರವಾನಿಸಿದರು.
ಕಲಿಕೆಯ ವಿವಿಧ ಹಂತಗಳಲ್ಲಿ ಮೊದಲನೆಯದು ಮೂರ್ತ ರೂಪದಲ್ಲಿ ಕಲಿಯುವುದೇ ಅಗಿದೆ. ಪ್ರಜ್ಞಾ ಪೂರ್ವಕವಾಗಿ ನಾವು ಅಕ್ಷರಗಳನ್ನು ತಿದ್ದಿ ಕಲಿಯುವ ಮಗು ಕ್ರಮೇಣ ಅದನ್ನು ಅಮೂರ್ತವಾಗಿ ಚಿಂತಿಸುವ ನೆಲೆಗೆ ಏರುತ್ತದೆ,. ಹಾಗಾಗಿ ನಾವು ಪ್ರಬುದ್ಧ ಓದುಗರಾಗುವಷ್ಟರಲ್ಲಿ ಅಕ್ಷರಗಳು ಇದ್ದರೂ ಇಲ್ಲದಂತೆ ತಮ್ಮ ಮೂಲಕ ಅರಿವನ್ನು ಮೂಡಿಸುತ್ತಾ ಹೋಗುತ್ತವೆ.
ದೇವರ -ಧ್ಯಾನದ ಕಲ್ಪನೆಯೂ ಅಷ್ಟೆ.ಮಗುವಿಗೆ ಮೊದಲು ಮೂರ್ತರೂಪವನ್ನು ತೋರಿಸಿ ಅಭಿಜ್ನಾನವನ್ನು ಬೆಳೆಸಿ ಅನಂತರ ಅಮೂರ್ತ ಚಿಂತನೆಯಲ್ಲಿ ತೊಡಗಿಸುವ ಅದ್ಭುತ ಮನೋವೈಜ್ಞಾನಿಕ ಪರಿಕಲ್ಪನೆ ಇದು. ಅದೇ ಕಾರಣಕ್ಕ್ಕೆ ದೇವರ ಮೂರ್ತಿಯ ಹಿಂಭಾಗ ಸಮತಟ್ಟಾಗಿ ಯಾವ ಲಕ್ಷಣಗಳನ್ನು ಕಾಣಿಸುವುದಿಲ್ಲ.ಇದು ಆಗಮಗಳಲ್ಲಿ ವಿವರವಾಗಿ ಚರ್ಚಿತವಾಗಿದೆಯಂತೆ. ರೂಪ-ಆಕಾರಗಳನ್ನು ಮೀರಿದ ನಿರಾಕಾರ ಕಲ್ಪನೆಗೆ ಅಲ್ಲಿಯೇ ಅವಕಾಶವಿದೆ. ಇದನ್ನು ಹೇಳದೆ ಇನ್ನೊಂದು ಭಾಗವನ್ನು ಮಾತ್ರ ದೂರುತ್ತಾ, ವಿಡಂಬಿಸುತ್ತಾ ಹೇಳುವುದು ಕಾರ್ಯಸಾಧಕತನವಾಗಿ ನನಗೆ ಕಾಣಿಸುತ್ತದೆ.
ಇನ್ನು ಹಿಂದೂ ಧರ್ಮದ ಬಗ್ಗೆ ಪುಂಖಾನುಪುಂಖವಾಗಿ ಟೀಕೆ ಟಿಪ್ಪಣಿಗಳನ್ನು ಅರೆಬೆಂದ ರೀತಿಯಲ್ಲಿ ಸಮಾಜಕ್ಕೆ ಉಣಬಡಿಸಿದ ಅವರ ಪಟಾಲಂ ಉಳಿದ ಧರ್ಮಗಳ ಬಗ್ಗೆ, ಹಾಗೇ ಇರುವ ಧೋರಣೆಯನ್ನು ತೋರದಿದ್ದದ್ದು ಸಮಾಜಕ್ಕೆ ಅವರು ಮಾಡಿದ ಬಹುದೊಡ್ಡ ಆಘಾತ. ಒಂದು ಧರ್ಮದವರು ನಿಷ್ಕಾರಣವಾಗಿ ಕೀಳರಿಮೆ ಅನುಭವಿಸುವಂತಾದದ್ದು ನನ್ನ ದೃಷ್ಟಿಯಲ್ಲಿ ಅಕ್ಷಮ್ಯ. ಇಂತಹ ಪ್ರತಿಯೊಂದು ಹೇಳಿಕೆ-ಧೋರಣೆ-ಕೆಲಸಗಳಿಂದ ಧಾರ್ಮಿಕ-ಸಾಮಾಜಿಕ-ರಾಜಕೀಯ ಲಾಭ ಪಡೆಯುವ ಶಕ್ತಿಗಳಿರುತ್ತವೆ,ಅದರಿಂದ ಒಂದು ವರ್ಗ ಹಾನಿಗೊಳಗಾಗುತ್ತದೆಂಬ ಕಿಂಚಿತ್ ಕಲ್ಪನೆ ಅವರಿಗೆ ಬರಲಿಲ್ಲವೆಂಬುದು ಇಲ್ಲಿ ಉಲ್ಲೇಖಾರ್ಹ.
ಯಾವುದೇ ಸಮಾಜದಲ್ಲಿ,ಅಂದಿನ ಪರಿಸ್ತ್ಥಿತಿಗಳಿಗನುಸಾರವಾಗಿ ಕೆಲವು ಆಚರಣೆಗಳು ಹುಟ್ಟಿಕೊಂಡಿರುತ್ತವೆ.ಅಲ್ಲಿ ವೈಜ್ಞಾನಿಕ ವಿಚಾರ ಕೆಲಸ ಬಹುತೇಕ ಸಂದರ್ಭಗಳಲ್ಲಿ ಮಾಡಿರುತ್ತದೆ. ಅವುಗಳಲ್ಲಿ ಕೆಲವು ಸಾರ್ವಕಾಲಿಕವಾಗಿಯೂ ಸಲ್ಲುವಂತಹವು. ಇನ್ನು ಕೆಲವು ಬದಲಾವಣೆ ಬೇಡುವಂತಹವು. ವಿಚಾರವಾದಿಗಳ ಕೆಲಸೆ ಇವುಗಳ ಸಮಗ್ರತೆ -ಪ್ರಸ್ತುತತೆಗಳನ್ನು ಪರಿಗಣಿಸಿ ಮೌಲಿಕವಾದ ಸಂದೇಶವನ್ನು ಸಮಾಜಕ್ಕೆ ರವಾನಿಸುವುದಾಗಿರುತ್ತದೆ.ಕಾರಣ ಸಮಾಜದ ಪ್ರತಿಶತ ೭೦% ಜನರು ಹೆಚ್ಚೇನೂ ಯೋಚಿಸುವ ಗೊಡವೆಗೆ (ನಾನಾ ಕಾರಣಗಳಿಗೆ) ಹೋಗದವರು. ಇವರನ್ನು ಅವರ ಭಾವನೆಗಳಿಗೆ ನೋವಾಗದಂತೆ ತಿದ್ದುವ ಕೆಲಸ ಚಿಂತಕರಿಂದ ಆಗಬೇಕು. ಇದನ್ನು ಅನಂತ ಮೂರ್ತಿಯವರು ಎಷ್ಟು ಸಮರ್ಥವಾಗಿ ಮಾಡಿದರು ಎಂಬುದರ ಮೇಲೆ ನನ್ನ ತಕರಾರು. ಮಾಡಿಲ್ಲವೆಂದರೆ ಕ್ರಾಂತಿಕಾರಿ ವಿಚಾರವಾದಿಯಾಗಿ ಅವರು ಸ್ತುತ್ಯರ್ಹರೇ ಎಂಬುದು ಪ್ರಶ್ನೆ.
ಇವರುಗಳು ಹಾಕಿಕೊಟ್ಟ ಮೇಲ್ಪಂಕ್ತಿಯ ಮೇಲೆ ಇಂದು ಸನಾತನ ಧರ್ಮದ ಮೇಲೆ ಅವ್ಯಾಹತ ದಾಳಿನಡೆಸುವ ಹಿತಶತ್ರುಗಳ ತಂಡವೇ ಸೃಶ್ಟಿಯಾಗಿಬಿಟ್ಟಿದೆ. ಬೇಕಿದ್ದು ಬೇಡದ್ದು ಎಲ್ಲವನ್ನೂ ನಕಾರಾತ್ಮಕವಾಗಿ ನೋಡುವ, ಪುರೋಹಿತಶಾಹಿಯನ್ನು ದೂರುವ, ಉಳಿದ ಧರ್ಮದವರು ಇದರ ದುರ್ಲಾಭ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಶತಮಾನಗಳಿಂದ ಹೊರಗಿನವರ ನಿಂದೆ-ದಬ್ಬಾಳಿಕೆಗೊಳಗಾಗಿ ನಲುಗಿದ ಧರ್ಮ ಮತ್ತೆ ವಿನಾಕಾರಣ ಶೋಷಣೆಗೆ- ಅದೂ ತನ್ನವರಿಂದಲೇ ಎಂಬಂಥ ವಿಷಮ ಸ್ಥಿತಿ ಇಂದಿದೆ. ಅತ್ಮಸ್ಥೈರ್ಯವಿಲ್ಲದ ಮನೆಗಳು/ಕುಟುಂಬಗಳು ನೆಲಕಚ್ಚಿದ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಕಾರಣ ಅ ಪರಿಸ್ಥಿತಿಯ ಲಾಭಕ್ಕೆ ಹಲವರು ಕಾದುಕುಳಿತಿರುತ್ತಾರೆ.ನಮ್ಮ ಧರ್ಮವೂ ಅದಕ್ಕೆ ಹೊರತಲ್ಲ. ಅದರ ಬದಲು ಎಲ್ಲಾ ಧರ್ಮಗಳನ್ನೂ ಸಮಾನವಾಗಿ ಟೀಕಿಸಿ , ಟೀಕಿಸಿದ ವಿಷಯಕ್ಕೆ ಮೌಲಿಕವಾದ ಪರಿಹಾರೋಪಾಯಗಳನ್ನು ಸೂಚಿಸಿದ್ದರೆ ಸೂಕ್ತವಾಗಿರುತ್ತಿತ್ತು. ಅನಂತಮೂರ್ತಿಯವರಿಗೆ ಸಮಾಜದಲ್ಲಿದ್ದ ಸ್ಥಾನಮಾನಗಳನ್ನು ಅವರು ರಚನಾತ್ಮಕವಾಗಿ ಬಳಸಬಹುದಿತ್ತು; ಆದರೆ ಅದು ಅವರು ಮಾಡಲಿಲ್ಲ.
ಇಂತಹ ಹಲವಾರು ಉದಾಹರಣೆಗಳನ್ನು ಅವರ ವ್ಯಕ್ತಿ-ವಿಚಾರದಿಂದ ಹೆಕ್ಕಿ ಕೊಡಬಲ್ಲೆ.
ನಮ್ಮ ಧರ್ಮವನ್ನು (ಉಳಿದೆಲ್ಲ ಬುದ್ಧಿ ಜೀವಿಗಳಂತೆ) ಒಳಗಿನಿಂದ ನೋಡದೆ ಹೊರಗಿನಿಂದ ಅದೂ ಪಾಶ್ಚಾತ್ಯರ semetic ರಿಲಿಜನ್ ನ ಕನ್ನಡಕದಿಂದ ನೋಡುತ್ತಾ ಅದೇ ಸತ್ಯವೆಂಬಂತೆ ಬಿಂಬಿಸಿ, ನಂಬಿಸಿದರೇ ವಿನಃ ಸಾರ್ವತ್ರಿಕ ಹಿತದ ಕೆಲಸ ಮಾಡಲಿಲ್ಲ. ಆ ಮೂಲಕ ತಮಗೆ ಲೌಕಿಕ ಅನುಕೂಲಗಳನ್ನಂತೂ ಮಾಡಿಕೊಂಡರು.ಜೊತೆಗೆ ತಮ್ಮ ಸಂಸ್ಕಾರ ಸಾಂಪ್ರದಾಯಿಕ ವೈದಿಕ ಧರ್ಮಾಚರಣೆಗಲ ಮೂಲಕವೇ ಆಗಬೇಕೆಂದು ಆಶಯವನ್ನು ವ್ಯಕ್ತಪಡಿಸಿ ಇಹಕ್ಕೂ ಪರಕ್ಕೂ ದಾರಿಮಾಡಿಕೊಂದರು. ಇಲ್ಲಿರುವವರನ್ನು ಮಾತ್ರ ದ್ವಂದ್ವದಲ್ಲಿ ಬಂಧಿಸಿದರು.
ಇವೆಲ್ಲವನ್ನೂ ಅವರು ಮಾಡದಿದ್ದರೆ ಕೇವಲ ಸಾಹಿತಿಯಾಗಿ ತಮ್ಮ ಛಾಪು ಮೂಡಿಸಬಲ್ಲವರಾಗಿದ್ದರೇ ಅಥವಾ ಇತರ ಕೆಲಸಗಳಿಗೆ ತಲೆಗೊಟ್ಟು ತಮ್ಮ ಸಾಹಿತ್ಯ ಸೃಷ್ಟಿಯ ಗಟ್ಟಿತನವನ್ನು ಕಳೆದುಕೊಂಡರೇ ಎಂಬುದು ನನ್ನ ಪ್ರಶ್ನೆ. ಆದರೆ ಅವರ ‘ಸಂಸ್ಕಾರ’ ಓದಿ ಮುಗಿಸುವಲ್ಲಿ ನನ್ನ ಸಂಸ್ಕಾರ ಆದಂತೆ ಒದ್ದಾಡಿದ್ದಂತೂ ನನ್ನ ಮಟ್ಟಿಗೆ ಒಂದು ಅನುಭವವೇ.
ಇವು ನನ್ನ ಅನಿಸಿಕೆಗಳು. ತಾತ್ವಿಕ ನೆಲೆಯಲ್ಲಿ ಚರ್ಚಿಸಲು ಸ್ವಾಗತ.
ಸರಿಯಾಗಿ ಹೇಳಿದ್ದೀರಿ ಸುದರ್ಶನ್ ! ನಾನಂತೂ ನನ್ನ ಮುಂದಿನ ಪೀಳಿಗೆಗಾಗಲೀ ಓರಗೆಯವರಿಗಾಗಲೀ ಅವರ ಬರಹಗಳನ್ನು ಶಿಫಾರಸು ಮಾಡುವುದಿಲ್ಲ. ಅದು ಉದಾಸೀನ ಮಾಡಬಹುದಾದ ಒಂದು ಅವಕಾಶವಾದೀ ಪ್ರತಿಭೆ !
“ಕೆಲವು ಸಂಘಟನೆಗಳು ನಿನ್ನೆ ಅವರ ನಿಧನದ ಸುದ್ದಿ ಕೇಳಿ ಪಟಾಕಿ ಸಿಡಿಸಿ ಸಂಭ್ರಮಿಸಿದವು.ಸೂತಕದ ಮನೆಯಲ್ಲಿ ಸಂಭ್ರಮಿಸುವ ಗುಣ ಇದೊಂದು ಅನಾಗರಿಕ ವರ್ತನೆ ಮತ್ತು ನಮ್ಮ ನೆಲದ ಸಂಸ್ಕೃತಿಗೆ ವಿರೋಧವಾದದ್ದು.”
ಲಾಡೆನ್ ಸತ್ತುದಕ್ಕೂ ಅಳುವವರಿದ್ದಾರೆ ! ಸಂಭ್ರಮಿಸುವವರು ಬಹಳಿದ್ದಾರೆ ! ನರಕಾಸುರ ಸಂಹಾರದ ಸಂಭ್ರಮದ ದ್ಯೋತಕವೇ ದೀಪಾವಳಿ. ಈ ಪ್ರಸಂಗದಲ್ಲೂ ಒಬ್ಬ ಸಾಂಸ್ಕೃತಿಕ ಭಯೋತ್ಪಾದಕನ ಅನ್ತ್ಯವಾಯಿತೆಂದು ತುಂಬಾ ಜನ ಅಂದುಕೊಂಡರೆ, ಆ ಭಾವನೆಗಳನ್ನೂ ಗೌರವಿಸಬೇಕಾಗುತ್ತದೆ.