ಆನುದೇವಾ ಹೊರಗಣವನು ಸೆಕ್ಯುಲರಿಸಂನಿಂದ
– ರಾಕೇಶ್ ಶೆಟ್ಟಿ
ಅರಸರ ಆಡಳಿತದಲ್ಲಿದ್ದು ಆ ನಂತರ ದಶಕಗಳಿಗೂ ಹೆಚ್ಚು ಕಾಲದ ಮಾವೋವಾದಿಗಳ ಹಿಂಸಾಚಾರದ ನಂತರ ಅರಸರ ಆಡಳಿತಕ್ಕೆ ತಿಲಾಂಜಲಿಯಿಟ್ಟು ಪ್ರಜಾಪ್ರಭುತ್ವವನ್ನು ಅಪ್ಪಿಕೊಂಡ ನೇಪಾಳಿಗಳು ಮತ್ತು ನೇಪಾಳ ಹೆಜ್ಜೆ-ಹೆಜ್ಜೆಗೂ ಸವಾಲುಗಳನ್ನು ಎದುರಿಸುತ್ತಲೇ ಸಾಗುತ್ತಲಿದೆ.ಪ್ರಜಾಪ್ರಭುತ್ವಕ್ಕೆ ಕಾಲಿಟ್ಟಂತೆ,ಹೊಸ ಸಂವಿಧಾನ ರಚಿಸುವ ನಿರ್ಧಾರಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಬಂದಿದ್ದರೂ ೨೦೦೬ರಿಂದ ಈ ಪ್ರಕ್ರಿಯೆ ನಾನಾ ವಿಘ್ನಗಳಿಂದ ಕುಂಟುತ್ತಲೇ ಸಾಗಿದೆ.ಇತ್ತೀಚೆಗೆ ನಡೆದ ಪ್ರಬಲ ಭೂಕಂಪದ ನಂತರ ದೊಡ್ಡ ಮನಸ್ಸು ಮಾಡಿ ಎಲ್ಲಾ ರಾಜಕೀಯ ಪಕ್ಷಗಳೂ ಒಗ್ಗೂಡಿ ಮತ್ತೆ ಈ ಕಾರ್ಯಕ್ಕೆ ಜೈ ಎಂದಿದ್ದವು.ಈಗ ಕಾರ್ಯ ಶುರುವಾದಂತೆ ಬಹಳಷ್ಟು ಪರ-ವಿರೋಧ ಪ್ರತಿಭಟನೆ ಚರ್ಚೆಗಳು ಶುರುವಾಗಿವೆ.
ಅವುಗಳಲ್ಲಿ ಒಂದು,ನೇಪಾಳದ ಭಾಗಗಳನ್ನು ಜನರ ಆಚರಣೆ-ಭಾಷೆಯ ಮೇಲೆ ಪ್ರತ್ಯೇಕವಾಗಿಸುವುದನ್ನು ವಿರೋಧ ವ್ಯಕ್ತವಾಗುತ್ತಿದೆ.ಈ ನಡೆ ಮುಂದೆ ನೇಪಾಳವನ್ನು ಇನ್ನಷ್ಟು ಚೂರು ಚೂರು ಮಾಡಲಿದೆ ಎಂಬ ದೂರದೃಷ್ಟಿಯುಳ್ಳವರು ನೇಪಾಳದಲ್ಲಿರುವುದು ನೇಪಾಳಿಗಳ ಪುಣ್ಯವೇ ಸರಿ.ಬಹುಷಃ ಅವರು ಭಾರತದ ಸ್ಥಿತಿಯಿಂದ ಪಾಠ ಕಲಿತಿರಬಹುದು.ಅದರಲ್ಲೂ ಮುಖ್ಯವಾಗಿ ಭಾರತದ ಈಶಾನ್ಯ ರಾಜ್ಯಗಳನ್ನು ನೋಡಿ.ಒಂದೆಡೆ ಮಿಷನರಿಗಳ ಚಿತಾವಣೆ,ಮತ್ತೊಂದೆಡೆ ಜನಾಂಗೀಯ ಆಧರಿತ ಉಗ್ರಪಡೆಗಳ ಹಿಂಸಾಚಾರಗಳಿಂದ ಈಗಾಗಲೇ ಎಂಟು ರಾಜ್ಯಗಳಾಗಿರುವ ಈಶಾನ್ಯ ಭಾಗವೂ ಇನ್ನೂ ಚೂರುಚೂರಾಗುವ ಆಂತಕವಿದ್ದೇ ಇದೆ.ಈಶಾನ್ಯ ರಾಜ್ಯಗಳ ಉದಾಹರಣೆಯೇಕೆ.ನೆರೆಯ ತಮಿಳುನಾಡಿನಲ್ಲಿಯೇ ಭಾಷೆ ಮತ್ತು ನಮ್ಮ ಸಂಸ್ಕೃತಿಯಗೇ ಪರಕೀಯವಾದ ’ದ್ರಾವಿಡ ಜನಾಂಗೀಯ’ ಎಂಬ ಹುಚ್ಚು ಕಲ್ಪನೆಯ ಚಳುವಳಿಯ ನೆಪದಲ್ಲಿ ಏನೆಲ್ಲಾ ಅಧ್ವಾನಗಳಾಯಿತು ಎಂಬುದನ್ನು ನೋಡಿದರೆ ಸಾಕಲ್ಲವೇ? ಈ ನಿಟ್ಟಿನಲ್ಲಿ ನೋಡಿದಾಗ ನೇಪಾಳಿಗಳ ಆತಂಕ ಸರಿಯಾಗಿದೆ ಎನಿಸುತ್ತದೆ.
ಇದಕ್ಕಿಂತ ಪ್ರಬಲ ವಿರೋಧ ವ್ಯಕ್ತವಾಗುತ್ತಿರುವ ಇನ್ನೊಂದು ಬಹುಮುಖ್ಯ ವಿಷಯವಿದೆ.ಅದು ನೇಪಾಳದಲ್ಲಿ ತರಲು ಹೊರಟಿರುವ “ಸೆಕ್ಯುಲರ್ ಸಂವಿಧಾನ”ದ ಕುರಿತು.ಇದನ್ನು ಅಲ್ಲಿನ ಮುಸ್ಲಿಮರೇ ವಿರೋಧಿಸುತಿದ್ದಾರೆ.ನೇಪಾಳವನ್ನು ಹಿಂದೂರಾಷ್ಟ್ರವನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.ಸೆಕ್ಯುಲರ್ ಸಂವಿಧಾನಕ್ಕಿಂತಲೂ ಹಿಂದೂರಾಷ್ಟ್ರದ ಸಂವಿಧಾನದಲ್ಲೇ ಸುರಕ್ಷಿತವಾಗಿರುತ್ತೇವೆ ಎಂದು ನೇಪಾಳದಲ್ಲಿರುವ ಮುಸ್ಲಿಮರು ಹೇಳಿದ್ದಾರೆ.ಅವರ ಹೇಳಿಕೆಗಳ ಕೆಲ ಸ್ಯಾಂಪಲ್ ಇಲ್ಲಿದೆ.
- “ಇಸ್ಲಾಂ ಮತವನ್ನು ಕಾಪಾಡುವುದಕ್ಕೆ ಹಿಂದೂ ರಾಷ್ಟ್ರದಿಂದ ಮಾತ್ರ ಸಾಧ್ಯ.ನನ್ನ ಸ್ವಧರ್ಮವನ್ನು ಕಾಪಾಡುವುದಕ್ಕಾಗಿ ನೇಪಾಳವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸಬೇಕೆಂದು ಒತ್ತಾಯಿಸುತ್ತೇನೆ ಎಂದು ನೇಪಾಳದ ರಪ್ತಿ ಮುಸ್ಲಿಂ ಸೊಸೈಟಿ ಅಧ್ಯಕ್ಷ ಅಮ್ಜದ್ ಅಲಿ ಹೇಳಿದ್ದಾರೆ.
- ಸಿಪಿಎನ್- ಯುಎಂಎಲ್ ನ ಸದಸ್ಯೆಯಾಗಿರುವ ಅನಾರ್ಕಲಿ ಮಿಯಾ ನೇಪಾಳವೆನಾದರು ಸೆಕ್ಯುಲರ್ ಸಂವಿಧಾನವನ್ನು ಅಳವಡಿಸಿಕೊಂಡಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ಬಹುದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
- ನೇಪಾಳವನ್ನು ಸೆಕ್ಯುಲರ್ ದೇಶವನ್ನಾಗಿ ಮಾಡುವುದರ ಹಿಂದೆ ಹಿಂದೂ- ಮುಸ್ಲಿಮರ ನಡುವಿನ ಅಂತರವನ್ನು ಹೆಚ್ಚು ಮಾಡುವ ಹುನ್ನಾರವಿದೆ. ಅದ್ದರಿಂದ ನೇಪಾಳದ ಅತಿ ಪುರಾತನ ಪರಂಪರೆಯಾದ ಹಿಂದೂಧರ್ಮವನ್ನು ಹಾಗೆಯೇ ಉಳಿಸಿಕೊಂಡು ಹಿಂದೂರಾಷ್ಟ್ರವನ್ನಾಗಿಸಬೇಕಾದ ಅನಿವಾರ್ಯತೆ ಇದೆ.ಹಿಂದೂರಾಷ್ಟ್ರಕ್ಕಿಂತ ಸೆಕ್ಯುಲರ್ ರಾಷ್ಟ್ರವಿರಲು ಸಾಧ್ಯವಿಲ್ಲ, ನೇಪಾಳವನ್ನು ಹಿಂದೂರಾಷ್ಟ್ರ ಎಂದೇ ಗುರುತಿಸಬೇಕು, ಹಾಗಾದಲ್ಲಿ ಮಾತ್ರ ಎಲ್ಲರಿಗೂ ಭದ್ರತೆ ಇರಲಿದೆ.ಅಲ್ಲದೇ ನೇಪಾಳದಲ್ಲಿರುವ ಶೇ.80 ಮುಸ್ಲಿಮರು ನೇಪಾಳವನ್ನು ಹಿಂದೂರಾಷ್ಟ್ರ ಎಂದು ಘೋಷಿಸುವುದಕ್ಕೆ ಬೆಂಬಲಿಸಿದ್ದಾರೆ ಎಂದು ರಾಷ್ಟ್ರವಾದಿ ಮುಸ್ಲಿಂ ಮಂಚ್ ನೇಪಾಳ್ ಗಂಜ್ ನ ಅಧ್ಯಕ್ಷ ಬಾಬು ಖಾನ್ ಪಠಾಣ್ ಹಿಮಾಯಲನ್ ಟೈಮ್ಸ್ ಗೆ ಹೇಳಿಕೆ ನೀಡಿದ್ದಾರೆ.
- ನೇಪಾಳದಲ್ಲಿ ಕ್ರೈಸ್ತ ಮತದ ಪ್ರಚಾರ ಹೆಚ್ಚುತ್ತಿರುವುದರಿಂದ ಹಿಂದೂರಾಷ್ಟ್ರವನ್ನಾಗಿ ಘೋಷಿಸಬೇಕೆಂದು ಮುಸ್ಲಿಂ ಮುಕ್ತಿ ಮೋರ್ಚಾದ ಸಹ ಸಂಸ್ಥೆ ಯುಸಿಪಿಎನ್ ನ(ಮಾವೋ ವಾದಿ) ಅಧ್ಯಕ್ಷ ಉದ್ಬುದ್ದೀನ್ ಫ್ರು ಕೂಡ ಆಗ್ರಹಿಸಿದ್ದಾರೆ.”
ಒಂದೆಡೆ “ಸೆಕ್ಯುಲರಿಸಂ” ಎಂಬುದು ಸರ್ವಶ್ರೇಷ್ಟವಾದದ್ದು ಎಂಬುದು ಭಾರತೀಯ ಬುದ್ದಿಜೀವಿಗಳ ನಂಬಿಕೆಯಾದರೇ,ಇನ್ನೊಂದೆಡೆ ನೆರೆಯ ನೇಪಾಳದ ಸಾಮಾನ್ಯ ಮುಸ್ಲಿಮರೇಕೆ ಸೆಕ್ಯುಲರ್ ಸಂವಿಧಾನವನ್ನು ವಿರೋಧಿಸುತಿದ್ದಾರೆ? ಏಕೆಂದರೆ ಹಿಂದೂ ಸಂಪ್ರದಾಯಗಳು ಎಂದಿಗೂ ಇಸ್ಲಾಂ ಅಥವಾ ಯಾವುದೇ ರಿಲಿಜನ್ ಗಳ ಪ್ರತಿಸ್ಪರ್ಧಿಗಳಲ್ಲ.ಸಂಪ್ರದಾಯವಾದಿಯೊಬ್ಬನಿಗೆ ಭಿನ್ನ ರಿಲಿಜನ್ನು,ಸಂಪ್ರದಾಯಗಳು ಸತ್ಯವನ್ನು ಕಂಡುಕೊಳ್ಳುವ ಭಿನ್ನ ಹಾದಿಗಳು ಎಂಬ ನಂಬಿಕೆಯಿರುತ್ತದೆ. ಹಾಗಾಗಿ ಸಂಪ್ರದಾಯಗಳಿಂದ ರಿಲಿಜನ್ನಿನ ಅನುಯಾಯಿಗಳಿಗೆ ತೊಂದರೆಯಾಗುವುದಿಲ್ಲ.ಆದರೆ ರಿಲಿಜನ್ನುಗಳ ವಿಷಯದಲ್ಲಿ ಇದು ನಿಜವಲ್ಲ.ರಿಲಿಜನ್ನುಗಳಿಗೆ ಅವುಗಳ ಹಾದಿಯೊಂದೇ ಸರಿ ಉಳಿದವರದ್ದಲ್ಲ.ಹಾಗಾಗಿ ರಿಲಿಜನ್ನುಗಳ ಪರಸ್ಪರ ಪ್ರತಿಸ್ಪರ್ಧಿಗಳಾಗಿರುತ್ತವೆ.ಒಂದು ವೇಳೆ ನೇಪಾಳವೇನಾದರೂ ಸೆಕ್ಯುಲರ್ ರಾಷ್ಟ್ರವಾದರೇ,ಕ್ರಿಶ್ಚಿಯನ್ ಮಿಷನರಿಗಳಿಂದ ಪ್ರತಿಸ್ಪರ್ಧೆ ಎದುರಿಸಬೇಕಾಗುತ್ತದೆಂಬ ಆತಂಕ ಅವರನ್ನು ಕಾಡುತ್ತಿದೆ. ಸೆಕ್ಯುಲರ್ ನೀತಿ ಮತಾಂತರಕ್ಕೆ ಪೋಷಣೆ ನೀಡುವುದರಿಂದ ಅದನ್ನೇ ಪೂರ್ಣಕಾಲಿಕ ಉದ್ಯೋಗವಾಗಿಸಿಕೊಂಡಿರುವ ಕ್ರಿಶ್ಚಿಯನ್ ಮಿಷನರಿಗಳಿಂದ ನೇಪಾಳಿ ಮುಸ್ಲಿಮರ ಅಪಾಯವನ್ನು ಕಾಣುತ್ತಿದ್ದಾರೆ! ಅದೇ ಹಿಂದೂ ಸಂಪ್ರದಾಯಗಳು ಮತಾಂತರಕ್ಕೆ ಕುಮ್ಮಕ್ಕು ನೀಡದೆ,ಇನ್ನೊಬ್ಬರ ನಂಬಿಕೆಗಳಲ್ಲಿ ಮೂಗುತೂರಿಸದೇ ಎಲ್ಲಾ ಸಮುದಾಯದವರೂ ಅವರವರ ಆಚರಣೆಗಳನ್ನು ಅನುಸರಿಸಿಕೊಂಡು ಹೋಗಲು ಅವಕಾಶ ನೀಡುತ್ತದೆ. ಈ ನೆಲೆಯಲ್ಲಿ ಮುಸ್ಲಿಮರು ಸೆಕ್ಯುಲರ್ ನೀತಿಯಿಂದ ಆತಂಕವನ್ನೂ,ಹಿಂದೂ ಪ್ರಭುತ್ವದಡಿಯಲ್ಲಿ ತಮ್ಮ ಸುರಕ್ಷತೆಯನ್ನು ಕಾಣುತ್ತಿದ್ದಾರೆ.
ಭಾರತದ ಸಮಾಜಕ್ಕಿಂತ ನೇಪಾಳವೂ ಭಿನ್ನವಲ್ಲ.ಅವರ ಸಮಸ್ಯೆಯೂ ಭಿನ್ನ ಸಂಪ್ರದಾಯಗಳ ನಡುವೆ ಭಿನ್ನ ರಿಲಿಜನ್ನುಗಳ ತಿಕ್ಕಾಟವೇ.ರಿಲಿಜನ್ನುಗಳ ಮತಾಂತರದ ಹಾವಳಿಯಿಂದ ಸಮಾಜದ ಸ್ವಾಸ್ಥ್ಯ ಕೆಡದಂತೆ ನೋಡಿಕೊಳ್ಳಬೇಕಾದ ಹೊಣೆಯೂ ಅಲ್ಲಿನ ಪ್ರಭುತ್ವದ ಮೇಲೆ ಇರಲಿದೆ.ಹಾಗೆಯೇ ದೇಶದ ಜನರಿಗೆಲ್ಲ ಅನ್ವಯವಾಗುವ ಕಾನೂನುಗಳನ್ನು ಸೃಷ್ಟಿಸಬೇಕಾಗುತ್ತದೆ.ಪ್ರಸ್ತುತ ನಾವು ಅಳವಡಿಸಿಕೊಂಡಿರುವ ಪಾಶ್ಚಾತ್ಯ ಲಿಬರಲ್ ಸಂವಿಧಾನದಿಂದ ಈ ಸಮಸ್ಯೆಗಳು ಪರಿಹಾರವಾಗಲಾರವು.ತಮ್ಮ ರಿಲಿಜನ್ನು ಮಾತ್ರವೇ ಏಕಮೇವ ಸತ್ಯವೆಂದು ಪ್ರತಿಪಾದಿಸುತ್ತ ಪರಸ್ಪರ ಸ್ಪರ್ಧಿಗಳಾಗುವ ಸೆಮೆಟಿಕ್ ರಿಲಿಜನ್ನುಗಳೇ ಇರುವ ದೇಶದಲ್ಲಿ ಪ್ರಭುತ್ವವು ರಿಲಿಜನ್ನಿನ ವಿಷಯದಲ್ಲಿ ತಟಸ್ಥ ಧೋರಣೆ ಅನುಸರಿಸಬೇಕು ಎನ್ನುವ ಧೋರಣೆಯ ಪಾಶ್ಚಾತ್ಯ ಸಂವಿಧಾನದಿಂದ ಸಮಸ್ಯೆಯಾಗುವುದಿಲ್ಲ.ಆದರೆ ಭಾರತ ಮತ್ತು ನೇಪಾಳದಂತಹ “ರಿಲಿಜನ್ ಇಲ್ಲ”ದೆಯೇ ಎಲ್ಲವನ್ನೂ ಗೌರವಿಸುವ ಮತ್ತು ತಮ್ಮ ಪಾಡಿಗೆ ತಾವಿರಲು ಬಯಸುವ ಬಹು ಸಂಪ್ರದಾಯಗಳ ಜನರಿರುವ ದೇಶದಲ್ಲಿ ಈ ಪಾಶ್ಚಾತ್ಯ ಸಮಾಜ ಆಧಾರಿತ ಲಿಬರಲ್ ಸಂವಿಧಾನ ನಮ್ಮ ಸಮಾಜಕ್ಕೆ ಹೊಂದಿಕೆಯಾಗುವುದಿಲ್ಲ.ನೇಪಾಳಿ ಮುಸ್ಲಿಮರಿಗೆ ಅರಿವಾದಂತಿರುವ ಈ ಸತ್ಯ,ನಮ್ಮ ಸೆಕ್ಯುಲರ್ ಮಹಾಶಯರಿಗೆ ಅರ್ಥವಾದಂತಿಲ್ಲ. ಅರ್ಥವಾಗಿದ್ದರೆ,ಈ ಜನರು “ಸೆಕ್ಯುಲರಿಸಂ” ಎಂಬ ಐಡಿಯಾಲಜಿಯ ಹಿಂದೆ ನಿಂತು ಮುಸ್ಲಿಂ ಮೂಲಭೂತವಾದಕ್ಕೆ ನೀರೆರೆಯುತ್ತಲಿರಲಿಲ್ಲ. ಈ ಮಾತಿಗೆ ಉದಾಹರಣೆಯಾಗಿ,ಮೊನ್ನೆಯ “ಉಗ್ರ ಯಾಕೂಬ್ ಗಲ್ಲು” ಪ್ರಕರಣವನ್ನು ತೆಗೆದುಕೊಂಡರೇ ಸಾಕು.
ಯಾಕೂಬ್ ಮೆನನ್ ಇಂತದ್ದೇ ದಿನ ನೇಣುಗಂಬವೇರಲಿದ್ದಾನೆ ಎಂಬುದು ಸುದ್ದಿಯಾಗುತ್ತಲೇ, ವೋಟ್ ಬ್ಯಾಂಕ್ ರಾಜಕಾರಣಿಗಳು,ಸೆಕ್ಯುಲರ್,ಮಾನವ ಸಂಘಟನೆಯವರೆಲ್ಲ ಎದ್ದು ಮೇಕಪ್ ಹಾಕಿಕೊಂಡು,ಮುಂದಿನ ಹಂತದ ನಾಟಕ್ಕೆ ಸಜ್ಜಾಗತೊಡಗಿದರು.ಬಾಯಿ ತೆಗೆದರೆ ದ್ವೇಷವನ್ನೇ ಕಾರುವ ಓವೈಸಿ,ಈ ದೇಶದಲ್ಲಿ ಮುಸ್ಲಿಮರನ್ನು ಮಾತ್ರ ಗಲ್ಲಿಗೇರಿಸಲಾಗುತ್ತಿದೆ ಎಂದ.ಅವನ ಹಿಂದೆಯೇ ಒಂದಿಷ್ಟು ಬ್ಯಾಂಡ್ ಬಾಜಾಗಳು ಸದ್ದು ಮಾಡಲಾರಂಭಿಸಿದವು. ಯಾಕೂಬನಿಗಿಂತ ಮೊದಲು ನೇಣು ಗಂಬಕ್ಕೇರಿದ ಇತ್ತೀಚಿನವರಿಬ್ಬರೂ ಮುಸಲ್ಮಾನರಾಗಿದ್ದರು ಎಂಬುದೇ ಒವೈಸಿಯವರ ಮಾತನ್ನು ಒಪ್ಪಲು ಕೆಲವರಿಗೆ ಸಾಕಾಗಿರಬಹುದು.ಆದರೆ,ಕಸಬನಿಗಿಂತ ಹಿಂದೆ ನೇಣಿಗೇರಿದ್ದ ಧನಜಂಯ ಚಟರ್ಜಿಯ ಧರ್ಮ ಯಾವುದಾಗಿತ್ತು ಎಂದು ೨೦೦೪ರಲ್ಲಿ (ವಾಜಪೇಯಿಯವರ ಅಧಿಕಾರಾವಧಿಯಲ್ಲಿ) ಗಲ್ಲಿಗೇರಿಸುವಾಗ ಯಾರೂ ಕೇಳಿರಲಿಲ್ಲ.ಸ್ವಾತಂತ್ರ್ಯಾನಂತರ ಎಷ್ಟು ಜನರನ್ನು ಗಲ್ಲಿಗೇರಿಸಲಾಗಿದೆ ಎನ್ನುವುದರ ಕುರಿತು ನಿಖರ ಮಾಹಿತಿ ಇಲ್ಲವಾದರೂ,ಇತ್ತೀಚೆಗೆ ದೆಹಲಿಯ ನ್ಯಾಷನಲ್ ಲಾ ಯುನಿವರ್ಸಿಟಿ ಹೊರಗಿಟ್ಟ ಮಾಹಿತಿಯ ಪ್ರಕಾರ ೧,೪೧೪ ಅಪರಾಧಿಗಳನ್ನು ಗಲ್ಲಿಗೇರಿಸಲಾಗಿದೆ,ಅವರಲ್ಲಿ ೭೨ ಅಪರಾಧಿಗಳು ಮುಸ್ಲಿಮರಾಗಿದ್ದಾರೆ! ಹೀಗಿದ್ದಾಗ್ಯೂ,ಮುಸ್ಲಿಮರನ್ನು ಮಾತ್ರ ಟಾರ್ಗೆಟ್ ಮಾಡಲಾಗುತ್ತಿದೆ ಎನ್ನುವವರು ಎರಡು ನಾಲಗೆಯ ಜನರೇ?
ಈ ನಡುವೆ ಕಾಂಗ್ರೆಸ್ಸಿನ ರಾಜಕಾರಣಿಗಳೂ ಯಾಕೂಬ್ ಪರ ನೇರವಾಗಿ ಅಲ್ಲದಿದ್ದರೂ ಮರಣದಂಡನೆಯ ವಿರುದ್ಧ ನಮ್ಮ ವಾದ ಎಂದು ಮಾತನಾಡಲಾರಂಭಿಸಿದರು.ಆದರೆ,ಹೀಗೆ ಮಾತನಾಡುವಾಗ ಇವರದೇ ಸರ್ಕಾರ ‘ಕಸಬ್ ಮತ್ತು ಅಫ್ಜಲ್’ರನ್ನು ರಾತ್ರೋ ರಾತ್ರಿ ಕದ್ದುಮುಚ್ಛಿ ಗಲ್ಲಿಗೇರಿಸಿದ್ದರ ಬಗ್ಗೆ ಬಾಯಿಬಿಡುವುದಿಲ್ಲ.ದುರ್ಬಲ ಸರ್ಕಾರವೊಂದು ನಡೆದುಕೊಳ್ಳುವ ಬಗೆ ಹೇಗೆ ಎಂಬುದಕ್ಕೆ ಉದಾಹರಣೆಯಾಗಿತ್ತದು.ಆದರೆ,ಯಾಕೂಬ್ ವಿಷಯದಲ್ಲಿ ಈ ರೀತಿ ಕದ್ದು ಮುಚ್ಚಿ ನಡೆಸುವ ವ್ಯವಹಾರವನ್ನೇನೂ ಈಗೀನ ಸರ್ಕಾರ ತೋರಲಿಲ್ಲ.ಸ್ವಾತಂತ್ರ್ಯಾನಂತರ ಹೆಚ್ಚು ಕಾಲ ಅಧಿಕಾರದಲ್ಲಿದ್ದದ್ದು ಇವರದೇ ಸರ್ಕಾರವೇ ತಾನೇ? ಆಗ ಇವರಿಗೆ ಇವೆಲ್ಲ ನೆನಪಾಗಿರಲಿಲ್ಲವೇ? ನೇಣಿಗೇರ ಹೊರಟವನು ಮುಸ್ಲಿಮ್ ಅವನ ಪರವಾಗಿ ಒಂದಿಷ್ಟು ಮೊಸಳೆ ಕಣ್ಣಿರು ಸುರಿಸಿದರೆ,ಪುಡಿ ವೋಟುಗಳು ದಕ್ಕಬಹುದು ಎಂಬ ಸೆಕ್ಯುಲರ್ ದುರಾಸೆ.ಸುಪ್ರೀಂ ಕೋರ್ಟು ಎಲ್ಲಾ ಮೇಲ್ಮನವಿಗಳನ್ನು ತಿರಸ್ಕರಿಸಿದರೂ ಮಧ್ಯರಾತ್ರಿಯಲ್ಲಿ ಯಾಕೂಬನ ಪರವಾಗಿ ಅರ್ಜಿ ಸಲ್ಲಿಸುವವರಿದ್ದಾರಲ್ಲಾ,ಈ ಜನರ ಉದ್ದೇಶವಾದರೂ ಏನು? ಎಷ್ಟೋ ಬಡವರ ಕೇಸುಗಳು ವರ್ಷಗಳಿಂದ ಕೊಳೆಯುತ್ತಿದ್ದರೂ ಕೇಳುವವರು ದಿಕ್ಕಿಲ್ಲದ ನ್ಯಾಯಾಲಯಗಳೂ ಸಹ ಅರ್ಧ ರಾತ್ರಿಯಲ್ಲಿ ಅರ್ಜಿಯ ವಿಚಾರಣೆ ಮಾಡುತ್ತವೆ.ಇಷ್ಟೆಲ್ಲಾ ನಾಟಕಕ್ಕೆ ಕಾರಣನಾದ ಈ ಯಾಕೂಬನೇನು ಮಹಾತ್ಮನೇ? ಮುನ್ನೂರಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಮುಂಬೈ ಬಾಂಬ್ ಬ್ಲಾಸ್ಟಿನ ಪಾಪಿಗಳಾದ ದಾವೂದ್,ಟೈಗರ್ ಮೆಮನ್ ಜೊತೆಗೆ ಮುಂಚೂಣಿಯಲ್ಲಿದ್ದು ಸಂಚು ರೂಪಿಸಿದ್ದ ಪಾತಕಿ.ಸರಣಿ ಬಾಂಬ್ ಬ್ಲಾಸ್ಟಿಗೆ ಬೇಕಾಗಿದ್ದ ಹಣಕಾಸಿನ ನಿರ್ವಹಣೆ,ಪಾಕಿಸ್ತಾನಕ್ಕೆ ಯುವಕರನ್ನು ವಿಧ್ವಂಸಕ ತರಬೇತಿಗೆ ಕಳುಹಿಸುವುದು,ವಿಧ್ವಂಸಕ ಶಸ್ತ್ರಾಸ್ತ್ರಗಳನ್ನು ಜೋಪಾನ ಮಾಡುವುದು ಇತ್ಯಾದಿ ಘನಕಾರ್ಯವನ್ನು ಮಾಡಿದವನು.ಇಂತವನನ್ನು ಮಾನವೀಯತೆಯ ಹೆಸರಿನಲ್ಲಿ ಬೆಂಬಲಿಸುವವರು ಹೊಟ್ಟೆಗೆ ಏನು ತಿನ್ನಬಹುದು?
ಹ್ಮ್.ಈ ಮಹನುಭಾವರ ಗುಂಪಿನಿಂದ ಇನ್ನೊಂದು ವಾದವಿತ್ತು. ಬಾಂಬ್ ಇಟ್ಟಿದ್ದು ಪ್ರತಿಕ್ರಿಯೆ.ಅದಕ್ಕೆ ಕಾರಣವಾಗಿದ್ದು ಮುಂಬೈ ಗಲಭೆ ಮತ್ತು ಮುಂಬೈ ಗಲಭೆಗೆ ಕಾರಣವಾಗಿದ್ದು ಬಾಬರಿ ಮಸೀದಿಯ ಧ್ವಂಸ.ಈ ಜನರ ಇಬ್ಬಗೆ ನೀತಿ ನೋಡಿ – ಸಾಬರಮತಿ ರೈಲಿಗೆ ಬೆಂಕಿ ಇಟ್ಟವರ ಬಗ್ಗೆ ಈ ರೋಗಗ್ರಸ್ತ ಮನಸ್ಸುಗಳು ಇವತ್ತಿಗೂ ಬಾಯಿ ತೆಗೆಯುವುದಿಲ್ಲ.ಬದಲಿಗೆ ಹಾಗೇ ಬೆಂಕಿ ಬೀಳಲಿಕ್ಕೂ ರೈಲಿನಲ್ಲಿದ್ದವರ ದುರ್ನಡತೆಯೇ ಕಾರಣವೆನ್ನುತ್ತಾರೆ.ಇವರ ವಾದದಂತೆಯೇ ನೀವೇನಾದರೂ,ಸಾಬರಮತಿ ರೈಲಿಗೆ ಬೆಂಕಿಯಿಟ್ಟಿದ್ದರ ಪ್ರತಿಕ್ರಿಯೆಯೇ ಗುಜರಾತ್ ಗಲಭೆ ಎಂದಿರೋ,ಮುಗಿಯಿತು! ನಿಮ್ಮ ಮೇಲೆ ಮುಗಿ ಬಿದ್ದು ಮುಕ್ಕಿಬಿಡುತ್ತಾರೆ.
ಅಸಲಿಗೆ,ಮುಂಬೈ ಗಲಭೆಗೆ ಬಾಬರಿ ಮಸೀದಿಯೊಂದೇ ಕಾರಣವಾಯಿತಾ? ಫರ್ಸ್ಟ್ ಪೋಸ್ಟ್ ವೆಬ್ಸೈಟಿನಲ್ಲಿ ಸಂಜೀವ್ ನಾಯರ್ ಬರೆದ ಲೇಖನದಲ್ಲಿ ಗಲಭೆಗೆ ಮುಂಚಿನ ಬೆಳವಣಿಗೆಗಳನ್ನು ವಿವರಿಸುತ್ತಾರೆ.ಮುಖ್ಯಮಂತ್ರಿಯಾಗಿದ ಶರದ್ ಪವಾರ್ ಕೇಂದ್ರ ಮಂತ್ರಿಯಾದಾಗ ಅವರ ಜಾಗಕ್ಕೆ ಬಂದವರು ಸುಧಾಕರ್ ರಾವ್ ನಾಯಕ್.೧೯೯೨ರ ಆ ಸಮಯದಲ್ಲಿ ಮುಂಬೈನ ಮುನ್ಸಿಪಾಲ್ ಡೆಪ್ಯುಟಿ ಕಮೀಷನರ್ ಆಗಿದ್ದ ಜಿ.ಅರ್ ಖೈರ್ನಾರ್ ಅಕ್ರಮ ಕಟ್ಟಡಗಳನ್ನು ಉರುಳಿಸುತಿದ್ದರು.ಸೆಕ್ಯುಲರ್ ದುರ್ದೈವಕ್ಕೆ ಆ ಕಟ್ಟಡಗಳೆಲ್ಲವೂ ಭೂಗತ ಜಗತ್ತಿಗೆ ಸೇರಿದ ಕ್ರಿಮಿನಲ್ಲುಗಳದ್ದಾಗಿತ್ತು. ಸೆಕ್ಯುಲರ್ ದುರ್ವೈವದ ಪರಾಕಾಷ್ಟೆಯೋ ಎಂಬಂತೆ ಆ ಕ್ರಿಮಿನಲ್ಲುಗಳು ಮುಸಲ್ಮಾನರಾಗಿದ್ದರು.ಅಕ್ರಮ ಆಸ್ತಿ ಕಳೆದುಕೊಂಡ ಕ್ರಿಮಿನಲ್ ಎಲಿಮೆಂಟುಗಳು ಕೊತಕೊತ ಕುದಿಯಲಾರಂಭಿಸಿದಾಗಲೇ,ಬಾಬರಿ ಮಸೀದಿಯ ಧ್ವಂಸದ ಸುದ್ದಿ ಬಂತು.ಹಳೆಯ ಸೇಡು ತೀರಿಸಿಕೊಳ್ಳಲು ಹೊಸ ವೇದಿಕೆ ಸಿಕ್ಕಂತಾಯಿತು.ಮೊದಲಿಗೆ ನಡೆದಿದ್ದು ಮುಸ್ಲಿಂ ಮತ್ತು ಪೋಲಿಸರ ನಡುವಿನ ಸಂಘರ್ಷ,ಯಾವಾಗ ರಸ್ತೆಯ ಮೇಲೆ ನಮಾಜು ಶುರುವಾಯ್ತೋ ಅದನ್ನು ವಿರೋಧಿಸಿ ಶಿವಸೇನೆಯವರು ಮಹಾ ಆರತಿಯನ್ನು ಶುರುವಿಟ್ಟುಕಂಡರು.ಕಿಡಿ ದೊಡ್ಡದಾಗುತ್ತಾ ಹೋಯಿತು,ಕಡೆಗೆ ಕೂಲಿ ಕೆಲಸದವರನ್ನೂ ಹಾಗೂ ಮುಸಲ್ಮಾನರೇ ಹೆಚ್ಚಿರುವ ಜಾಗವಾದ ಜೋಗೇಶ್ವರಿಯಲ್ಲಿ ಮನೆಗೆ ಕೊಳ್ಳಿಯಿಟ್ಟು ೫ ಹೆಣ್ಣುಮಕ್ಕಳು ಸೇರಿದಂತೆ ಆರು ಜನರನ್ನು ಸುಟ್ಟು ಹಾಕಿದ್ದು ಗಲಭೆಯನ್ನು ದೊಡ್ಡದಾಗಿಸಿತು.ವಿಪರ್ಯಾಸ ನೋಡಿ ಇವತ್ತಿಗೂ ಕೌಸರ್ ಬಾನುವನ್ನು ನೆನಪಿಸಿಕೊಳ್ಳುವ ಸೆಕ್ಯುಲರ್ ಮಹಾನುಭಾವರ ಬಾಯಿಯಿಂದ ಈ ಸುಟ್ಟುಕರಕಲಾದ ಹೆಣ್ಣುಮಕ್ಕಳ ಬಗ್ಗೆ ಒಂದು ಮಾತು ಕೇಳಿರಲಾರಿರಿ.ಈ ಕೇಸಿನಲ್ಲಿ ಸಿಕ್ಕಿ ಬಿದ್ದವರ ಕಾನೂನು ಸಹಾಯಕ್ಕೆ ನಿಂತಿದ್ದು ಸೆಕ್ಯುಲರ್ ಸಮಾಜವಾದಿ ಪಕ್ಷದ ಅಬು ಅಜ್ಮಿ! ಗಲಭೆ ಹೇಗೆ ಶುರುವಾಯಿತು ಎಂಬುದನ್ನು ಚರ್ಚಿಸುವುದಕ್ಕಿಂತ ಹೋದ ಪ್ರಾಣಗಳು ಮತ್ತೆ ಬರಲಾರವು ಅದು ಹಿಂದುವೋ,ಮುಸಲ್ಮಾನನೋ,ಮತ್ತೊಬ್ಬನೋ ಎಲ್ಲರ ಬದುಕು ಬೆಲೆಕಟ್ಟಲಾಗದ್ದೇ ತಾನೇ? ಆದರೆ,ಸೆಕ್ಯುಲರ್ ಚಿಂತಕರಿಗೆ ಕಿಡಿ ಹಚ್ಚುವುದೇ ಕೆಲಸವೇ ಹೊರತು,ಆ ಕಿಡಿಯಿಂದ ಸುಟ್ಟು ಕರಕಲಾದವರ ಬದುಕಲ್ಲ!
ಒಂದು ವೇಳೆ ಕಿಡಿ ಹಚ್ಚುವ ಕೆಲಸ ಇವರದಲ್ಲವಾಗಿದ್ದರೇ,ಮುಂಬೈ ಗಲಭೆಯನ್ನು,ಗುಜರಾತ್ ಗಲಭೆಯನ್ನು ಮತ್ತೆ ಮತ್ತೆ ಕೆದಕಿ ಜನರನ್ನು ಉದ್ರೇಕಿಸುತ್ತಲಿರಲಿಲ್ಲ.೨೦೦೪ರಲ್ಲಿ ಧನಂಜಯ ಚಟರ್ಜಿಯನ್ನು ಗಲ್ಲಿಗೇರಿಸಿದಾಗ ಅವನ ಮೃತ ದೇಹವನ್ನು ಯಾರೂ ಮೆರವಣಿಗೆ ಮಾಡಲಿಲ್ಲ,ಜನರೂ ಸೇರಲಿಲ್ಲ.ಆದರೆ,ಯಾಕೂಬನ ಅಂತ್ಯ ಸಂಸ್ಕಾರಕ್ಕೆ ಸೇರಿದ್ದ ಜನರೆಷ್ಟು? ಸೇರಿದ್ದ ಆ ಸಮುದಾಯದ ಬಗ್ಗೆ ಯಾವ ರೀತಿಯ ಚಿಂತನೆ ಸಮಾಜದ ಇತರೆ ಸಮುದಾಯದ ಜನರಲ್ಲಿ ಹುಟ್ಟೀತೂ? ಅಲ್ಲಿದ್ದ ಸೇರಿದ್ದ ಜನರ ಮನಸ್ಥಿತಿಗಿಂತಲೂ,ಅವರನ್ನೂ ಅಲ್ಲಿ ಸೇರುವಂತೆ ಮಾಡಿದ್ದ ಸೆಕ್ಯುಲರ್ ಮನಸ್ಥಿತಿಯ ಜನರು ನನಗೆ ಹೆಚ್ಚು ಅಪಾಯಕಾರಿಯಾಗಿ ಕಾಣಿಸುತ್ತಾರೆ.ಯಾಕೂಬನನ್ನು ನೇಣಿಗೇರಿಸಿದ ದಿನವೇ, ಜನಸಾಮಾನ್ಯರ ರಾಷ್ಟ್ರಪತಿಯಾಗಿದ್ದಂತಹ ಅಬ್ದುಲ್ ಕಲಾಂ ಅವರ ಅಂತ್ಯ ಸಂಸ್ಕಾರ ನಡೆಯುತಿತ್ತು.ಆದರೆ,ಕೆಲವು ಬೇಜವಬ್ದಾರಿ ಮಾಧ್ಯಮಗಳು ಯಾಕುಬನ ಸುದ್ದಿಯನ್ನೇ ತೋರಿಸುತಿದ್ದವು.ಮುಂಬೈನಲ್ಲಿ ಪೋಲಿಸ್ ಜಮಾವಣೆಯಾಗುತ್ತಿದೆ ಅಂತೆಲ್ಲಾ ತೋರಿಸಿ ಆತಂಕ ಹುಟ್ಟುಹಾಕುವ ಪ್ರಯತ್ನದಲ್ಲಿದ್ದರು.ಅಂದ ಹೀಗೆ ತೋರಿಸುತಿದ್ದ ಮೀಡಿಯಾದ ಮುಖ್ಯಸ್ಥರೆಲ್ಲ ಈ ದೇಶದ ಲೀಡಿಂಗ್ ಸೆಕ್ಯುಲರ್ ಗಳು. ಇವರು ಸುರಿದ ತುಪ್ಪಕ್ಕೆ ಬೆಂಕಿ ಹೊತ್ತುಕೊಂಡು ಮುಂಬೈ ನರಳಿದ್ದರೆ ಅದರ ಗೂಬೆಯನ್ನು ಅಲ್ಲಿನ ಬಿಜೆಪಿ ಸರ್ಕಾರದ ಮೇಲೆ ಹೊರಿಸಿ ಮತ್ತೊಂದು ಗುಜರಾತ್ ಮಾದರಿಯ ದ್ವೇಷದ ಕ್ಯಾಂಪೇನ್ ಮಾಡುವ ಸೆಕ್ಯುಲರ್ ಹುನ್ನಾರ ವಿಫಲವಾಗಿದ್ದು ದೇಶದ ಸೌಭಾಗ್ಯ ಮತ್ತು ಸೆಕ್ಯುಲರ್ ದೌರ್ಭಾಗ್ಯ!
ಸೆಕ್ಯುಲರಿಸಂ ಹೆಸರಿನಲ್ಲಿ ಹೀಗೆ ಹಿಂದೂ ಸಮುದಾಯವನ್ನು ಕೆರಳಿಸುತ್ತಾ,ಮುಸ್ಲಿಂ-ಕ್ರಿಶ್ಚಿಯನ್ ಸಮುದಾಯವನ್ನು ಓಲೈಸುವ ಕ್ರಿಯೆ ಅಪಾಯಕಾರಿಯಲ್ಲವೇ? ಈ ಸೆಕ್ಯುಲರಿಸಂ ಭಾರತಕ್ಕೆ ಕಾಲಿಟ್ಟಿದ್ದು ಯಾವಾಗ? ಅದಕ್ಕೂ ಮೊದಲು ಇಲ್ಲಿದ್ದ ಭಿನ್ನ ಸಂಪ್ರದಾಯಗಳು,ರಿಲಿಜನ್ನುಗಳು ನೆಮ್ಮದಿಯಾಗಿರಲಿಲ್ಲವೇ? ಮೊದ-ಮೊದಲು ಇಲ್ಲಿನ ಜನರ ಆಚರಣೆಗಳಲ್ಲಿ ಮೂಗು ತೂರಿಸುತಿದ್ದ ಬ್ರಿಟಿಷ್ ಪ್ರಭುತ್ವಕ್ಕೆ ೧೮೫೭ರ ಸ್ವಾತಂತ್ರ್ಯ ಸಂಗ್ರಾಮ ಭರ್ಜರಿಯಾಗಿಯೇ ಬಿಸಿ ಮುಟ್ಟಿಸಿತ್ತು.ಆಗಲೇ ಬ್ರಿಟನ್ ಸರ್ಕಾರ ಇಲ್ಲಿನ ’ಹಿಂದೂ ಸಂಪ್ರದಾಯ’ ಹಾಗೂ “ಇಸ್ಲಾಂ ರಿಲಿಜನ್’ ಆಚರಣೆಗಳ ಕುರಿತು ಪ್ರಭುತ್ವ ತಟಸ್ಥ ನೀತಿ ಅನುಸರಿಸಬೇಕು ಎಂಬ ನಿರ್ಧಾರಕ್ಕೆ ಬಂದಿದ್ದು.ಆ ನಂತರವೇ ಹಿಂದೂ- ಮುಸ್ಲಿಂ ಒಗ್ಗಟ್ಟು ಅಪಾಯಕಾರಿಯೆನಿಸಿ ಮುಸ್ಲಿಂ ಲೀಗ್ ಸೃಷ್ಟಿಸುವ ಮೂಲಕ,ಒಂದರ್ಥದಲ್ಲಿ ಈ ದೇಶದಲ್ಲಿರುವ ಹಲವಾರು ಜಾತಿಗಳ ಆಚರಣೆಯಂತೇ ಬಹುಷಃ ಇನ್ನೊಂದು ಜಾತಿಯಾಗಿಯೇ ಬದುಕುತಿದ್ದ ಮುಸ್ಲಿಮರಲ್ಲೂ ಮೂಲಭೂತವಾದಿತನವನ್ನು ತುಂಬಲಾರಂಭಿಸಿತು.ರಾಜಕೀಯ ಮಹತ್ವಾಕಾಂಕ್ಷೆಯಿದ್ದ ಜಿನ್ನಾ ನೇತೃತ್ವ ಸಿಕ್ಕ ಮೇಲಂತೂ ಮೂಲಭೂತವಾದ ದ್ವೇಷರೂಪ ತಾಳಿತು.
ಸ್ವಾತಂತ್ರ್ಯಾ ನಂತರ ನೆಹರೂ ಮಹಾಶಯರ ಕಾಲದಲ್ಲಿ ಶುರುವಾದ ಮುಸ್ಲಿಂ ಓಲೈಕೆಯ ಸೆಕ್ಯುಲರ್ ರಾಜಕಾರಣದಿಂದಾಗಿ ಹಿಂದೂಗಳ ಹಿತ ಕಾಪಾಡುವ ರಾಜಕೀಯ ಪಕ್ಷವೊಂದರ ಅಗತ್ಯ ಹೆಚ್ಚಾಗಿತ್ತು.ಜನಸಂಘ/ಬಿಜೆಪಿ ಮುನ್ನೆಲೆಗೆ ಬಂದಿತು.ಸೆಕ್ಯುಲರ್ ಓಲೈಕೆಯು ಪರಾಕಾಷ್ಟೆ ತಲುಪಿದ್ದು ನೆಹರೂ ಮೊಮ್ಮಗ ರಾಜೀವ್ ಗಾಂಧಿ ಕಾಲದಲ್ಲಿ. ಶಾ ಬಾನು ಪ್ರಕರಣದಲ್ಲಿ,ಮುಸ್ಲಿಂ ಸಮುದಾಯವನ್ನು ಒಲಿಸಿಕೊಳ್ಳಲಿಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತಂದು,ಸುಪ್ರೀಂ ಕೋರ್ಟ್ ತೀರ್ಪೇ ಜಾರಿಯಾಗದಂತೆ ನೋಡಿಕೊಂಡ ಕಾಂಗ್ರೆಸ್ಸಿನ ತುಷ್ಟೀಕರಣ ನೀತಿಯ ವಿರುದ್ಧ ಸಹಜವಾಗಿಯೇ ಹಿಂದೂ ಸಮುದಾಯ ದನಿಯೆತ್ತಿತು.ಕಡೆಗೆ ಹಿಂದೂಗಳನ್ನು ಸಮಾಧಾನಪಡಿಸಲಿಕ್ಕಾಗಿ ಅಯೋಧ್ಯೆಯ ರಾಮ ಮಂದಿರದ ಬಾಗಿಲು ತೆಗೆಸಿದ ರಾಜೀವ್ ಗಾಂಧಿ ಮುಂದೆ ನಡೆದ ಎಲ್ಲಾ ಘಟನೆಗಳಿಗೆ ಮುನ್ನುಡಿ ಬರೆದಿದ್ದರು. ಮುಂಬೈ ಗಲಭೆಯ ಬಗ್ಗೆ ಅಬ್ಬರಿಸಿ ಬೊಬ್ಬಿರಿವ ಸೆಕ್ಯುಲರ್ ಮಹಾಶಯರು ಇವತ್ತಿಗೂ ಬಾಬರಿ ಮಸೀದಿಯ ಬಗ್ಗೆ ಮಾತನಾಡುತ್ತಾರೆಯೇ ಹೊರತು,ರಾಮಮಂದಿರ ಬಾಗಿಲು ತೆಗೆಸಲು ಕಾರಣವಾದ ಶಾ ಬಾನು ಪ್ರಕರಣ ಮತ್ತು ರಾಜೀವ್ ತುಷ್ಟೀಕರಣದ ನೀತಿಯ ವಿರುದ್ಧ ಅಪ್ಪಿ ತಪ್ಪಿಯೂ ಮಾತನಾಡುವುದಿಲ್ಲ.
ಅವಕಾಶವಾದಿತನದ ಇನ್ನೊಂದು ಮುಖವೇ ಸೆಕ್ಯುಲರಿಸಂ ಎಂಬಂತಾಗಿದೆ ಸದ್ಯದ ಪರಿಸ್ಥಿತಿ.ಸೆಕ್ಯುಲರ್ರುಗಳ ಪದಬಳಕೆಯನ್ನು ಸೂಕ್ಷ್ಮವಾಗಿ ಗಮನಿಸಿ.ಧಾರ್ಮಿಕ ವಿಷಯಗಳ ಬಗ್ಗೆ ಮಾತನಾಡುವ ಸಂದರ್ಭದಲ್ಲಿ “ಸಂವಿಧಾನವೇ ಅಂತಿಮ, ಸಂವಿಧಾನವೇ ಧರ್ಮಗ್ರಂಥ” ಇತ್ಯಾದಿ ಮಾತುಗಳು ಇವರಿಂದ ಬರುತ್ತವೆ.ಸಂವಿಧಾನದಲ್ಲೇನಾದರೂ ಪ್ರಶ್ನೆ ಮಾಡಿದರೇ,ಮುಗಿದೇ ಹೋಯಿತು ಅಂಬೇಡ್ಕರ್ ಅವರನ್ನು ಅವಮಾನಿಸುತಿದ್ದೀರಿ ಎಂದು ಗುಲ್ಲೆಬ್ಬಿಸುತ್ತಾರೆ. ಅದೇ,ಯಾಕೂಬನ ವಿಷಯದಲ್ಲಿ ಅವರ ಹೇಳಿಕೆಗಳನ್ನು ಗಮನಿಸಿ,ಅವರೇ ಪ್ರತಿಪಾದಿಸುವ ಧರ್ಮ ಗ್ರಂಥವಾದ ಸಂವಿಧಾನಕ್ಕೇ ಬದ್ಧವಾಗಿ ನ್ಯಾಯಾಲಯಗಳು ಉಗ್ರನೊಬ್ಬನನ್ನು ಗಲ್ಲಿಗೇರಿಸಿದರೆ,ನ್ಯಾಯಾಂಗವನ್ನು ಪ್ರಶ್ನಿಸುತ್ತಾರೆ. ಅಲ್ಪಸಂಖ್ಯಾತರನ್ನು ಮಾತ್ರ ಗುರಿಮಾಡಲಾಗುತ್ತಿದೆ ಎಂದು ಹಲುಬುತ್ತಾರೆ.ಆದರೆ,ಇವರ ಜಾಣತನ ಹೇಗಿರುತ್ತದೆಯೆಂದರೇ,ಅಪ್ಪಿ-ತಪ್ಪಿಯೂ “ಸಂವಿಧಾನ” ಪದವನ್ನು ಇಂತ ಸಂದರ್ಭದಲ್ಲಿ ಬಳಸುವುದಿಲ್ಲ.ಇವರ ಪಾಲಿಗೆ “ಅಂಬೇಡ್ಕರ್,ಸಂವಿಧಾನ” ಇತ್ಯಾದಿಗಳು ಅವಶ್ಯಕತೆಗಳಷ್ಟೇ, ಅನಿವಾರ್ಯವಲ್ಲ!
ಈ ಇಬ್ಬಗೆ ನೀತಿಯನ್ನೆಲ್ಲ ಕೇಳಿದ ಮೇಲೆ,ಸಮಸ್ಯೆ “ಸೆಕ್ಯುಲರ್”ಗಳದ್ದು,”ಸೆಕ್ಯುಲರಿಸಂ”ನದ್ದಲ್ಲಾ ಅನ್ನಿಸಬಹುದೇನೋ ಅಲ್ಲವೇ? ಆದರೆ,ನಿಜವಾಗಿಯೂ ಈ ಸೆಕ್ಯುಲರಿಸಂ ಎಂಬುದು ಎಲ್ಲಾ ದೇಶಗಳಲ್ಲೂ ಇರಲೇಬೇಕೆ? ಇಂತ ಸೆಕ್ಯುಲರಿಸಂನ ಅವಶ್ಯಕತೆ ನಮಗಿದೆಯೇ? ಅಂತ ಒಂದಷ್ಟು ಪ್ರಶ್ನೆಗಳನ್ನು ಹಾಕಿಕೊಳ್ಳುವ ಸಮಯವಿದು. ಯುರೋಪಿಯನ್ ಸಮಾಜದಲ್ಲಿ ಕ್ಯಾಥೋಲಿಕ್-ಪ್ರೊಟೆಸ್ಟಂಟರ ನಡುವೆ ಹೊತ್ತಿಕೊಂಡ ಬೆಂಕಿಗೆ ಪರಸ್ಪರರ ಆಸ್ತಿ-ಪಾಸ್ತಿಗಳು ಹಾನಿಯಾಗಲಾರಂಭಿಸಿದಾಗ ’ರಿಲಿಜಿಯಸ್ ಟಾಲರೆನ್ಸ್’ ಅಂತೊಂದು ವಿದ್ಯಾಮಾನ ಹುಟ್ಟುಕೊಂಡಿತು (Religious toleration is when people allow other people to think about god(s) in ways that they do not think are true. They tolerate religious beliefs and practices which are different from their own beliefs or lack of beliefs.) ಹಾಗೆಯೇ ಪ್ರಭುತ್ವದ ಆಡಳಿತದಲ್ಲಿ ಚರ್ಚು ಮತ್ತು ಚರ್ಚಿನ ಮುಖ್ಯಸ್ಥರ ವಿಪರೀತವೆನಿಸಿದ ಮೂಗು ತೂರಿಸುವಿಕೆಯನ್ನು ವಿರೋಧಿಸುತ್ತಾ,ರಾಜಕೀಯದಿಂದ ರಿಲಿಜನ್ ಮತ್ತು ರಿಲಿಜಿಯಸ್ ಸಂಸ್ಥೆ/ಸಂಘಟನೆಗಳನ್ನು ದೂರ ಇಡುವ “ಸೆಕ್ಯುಲರಿಸಂ” ನೀತಿಯನ್ನು ಮುನ್ನಲೆಗೆ ತರಲಾಯಿತು.
ಯುರೋಪಿನಲ್ಲಿ ಚರ್ಚುಗಳು,ಸರ್ಕಾರದ ಆಡಳಿತದಲ್ಲಿ ಮೂಗು ತೂರಿಸಬಾರದು ಎನ್ನುವ ತಾಟಸ್ಥ್ಯ ನೀತಿಯನ್ನು ನಮ್ಮ ಘನ ಪಂಡಿತರು “ಧರ್ಮ ನಿರಪೇಕ್ಷ” ಆಡಳಿತ ಎಂಬ ಘನಂಧಾರಿ ಅನುವಾದ ಮಾಡಿಕೊಂಡಿದ್ದಾರೆ.ನಮ್ಮ ಸಂಸ್ಕೃತಿಯಲ್ಲಿನ ಧರ್ಮನಿರಪೇಕ್ಷ ಆಡಳಿತಕ್ಕೆ ಉದಾಹರಣೆಯಾಗಿ “ದುರ್ಯೋಧನ,ರಾವಣ”ನಂತವರು ಬರುತ್ತಾರೆ ಎಂಬುದು ಈ ಪಂಡಿತರಿಗೆ ತಿಳಿದಿದೆಯೋ ಇಲ್ಲವೋ? ನಮ್ಮ ಸಂಸ್ಕೃತಿಯಲ್ಲಿ ಧಾರ್ಮಿಕ ಸಂಘ ಸಂಸ್ಥೆಗಳು ಸರ್ಕಾರದ/ರಾಜರ ಆಡಳಿತದಲ್ಲಿ ಸಲಹೆಗಳನ್ನು ನೀಡುತಿದ್ದವೇ ಹೊರತೂ,ಚರ್ಚುಗಳಂತೆ ನಿರ್ದೇಶನಗಳನ್ನು ನೀಡುತ್ತಲಿರಲಿಲ್ಲ.ಹೀಗಿದ್ದಾಗ “ಧರ್ಮ ನಿರಪೇಕ್ಷತೆ” ಎಂಬುದಕ್ಕೆ ನಮ್ಮ ಸಂಸ್ಕೃತಿಯಲ್ಲಿ ಅರ್ಥವಿದೆಯೇ?
ಧರ್ಮ ನಿರಪೇಕ್ಷತೆ ಪಕ್ಕಕ್ಕಿರಲಿ,ನಮ್ಮ ಸಂಸ್ಕೃತಿಯಲ್ಲಿ ರಿಲಿಜಿಯಸ್ ಟಾಲರೆನ್ಸ್ ಎಂಬುದಕ್ಕೆ ಏನಾದರೂ ಸ್ಥಾನವಿದೆಯೇ? ನಮ್ಮ ಅನುಭವದ ಆಧಾರದ ಮೇಲೆ ಪ್ರಶ್ನೆ ಹಾಕಿಕೊಂಡರೆ,ರಾಮನ ದೇವಸ್ಥಾನಕ್ಕೋ,ಕೃಷ್ಣನ ದೇವಸ್ಥಾನಕ್ಕೋ ಹೋಗುವವನ ಪಕ್ಕದ ಮನೆಯಲ್ಲಿ ವಾಸವಿರುವ ಶಿವ ಭಕ್ತನಿಗೆ ಏನಾದರೂ ಕಿರಿಕಿರಿಯಾಗುತ್ತದೆಯೇ? ಅವನು ಯಾವ ದೇವಸ್ಥಾನಕ್ಕೆ ಹೋಗುತ್ತಾನೆ ಅನ್ನೋದು ಕಟ್ಕೊಂಡು ನನಗೇನು ಆಗಬೇಕ್ರಿ ಅನ್ನುವ ಭಾವನೆ ಇರಬಹುದಷ್ಟೇ.ಇನ್ನು ದೇವಸ್ಥಾನ,ಮಸೀದಿ,ಚರ್ಚುಗಳೆಲ್ಲ ಅಕ್ಕ-ಪಕ್ಕ ಇರುವ ಜಾಗಗಳು ನಮ್ಮಲ್ಲಿ ಮೊದಲಿನಿಂದಲೂ ಇಲ್ಲವೇ? ಅಕ್ಕ-ಪಕ್ಕ ಇರುವುದು ಬಿಡಿ,ಧರ್ಮಸ್ಥಳದಂತ ಹಿಂದೂ ಸಂಪ್ರದಾಯದ ಕ್ಷೇತ್ರವನ್ನು ನೋಡಿಕೊಳ್ಳುವುದು ಜೈನ ಸಂಪ್ರದಾಯದ ಹೆಗ್ಗಡೆಯವರ ಕುಟುಂಬವಲ್ಲವೇ? ಅಯೋಧ್ಯೇ ವಿವಾವದ ಮಧ್ಯಂತರ ತೀರ್ಪು ಬರುವ ಸಮಯಕ್ಕೆ ಬಂದು ಒಂದು ಸುದ್ದಿ ಹೀಗಿತ್ತು : ಹಿಂದೂಗಳೇ ಹೆಚ್ಚಿರುವ ಹಳ್ಳಿಯೊಂದರಲ್ಲಿ,ಕೂಲಿ ಮಾಡಿಕೊಂಡ ಜೀವನ ಸಾಗಿಸುತ್ತಿರುವ ಮುಸ್ಲಿಂ ಕುಟುಂಬಗಳಿಗೆ,ಅಲ್ಲಿನ ಹಿಂದೂಗಳೇ ಮುಂದೆ ನಿಂತು ಮಸೀದಿ ಕಟ್ಟಿಸಿಕೊಟ್ಟಿದ್ದರು.ಇತಿಹಾಸದಲ್ಲಿ ಹುಡುಕಿದರೆ ನಮಗೇ ಇನ್ನಷ್ಟು ಇಂತ ಉದಾಹರಣೆಗಳು ಸಿಗುತ್ತವೆ.ತೀರಾ ಇತ್ತೀಚಿನ ಇನ್ನೊಂದು ಉದಾಹರಣೆಯಿದೆ. ಬಿಹಾರದಲ್ಲಿ ಕಟ್ಟಲು ಉದ್ದೇಶಿಸಲಾಗಿರುವ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯಕ್ಕೆ,ಮುಸ್ಲಿಮ್ ಸಮುದಾಯದವರೂ ಭೂದಾನ ಮಾಡಿದ್ದರೆ,ಈ ಬೃಹತ್ ದೇವಸ್ಥಾನದ ನಿರ್ಮಾಣ ಹೊಣೆಹೊತ್ತುಕೊಂಡಿರುವುದು ಜೈನ ಸಮುದಾಯದ ಟ್ರಸ್ಟ್!
ಈ ಸೆಕ್ಯುಲರ್ ಮಹಾನುಭಾವರು ಬಂದು ನಮಗೆ “ರಿಲಿಜಿಯಸ್ ಟಾಲರೆನ್ಸ್” ಪಾಠ ಹೇಳಿಕೊಡುವುದಕ್ಕಿಂತಲೂ ಮೊದಲು ನಮ್ಮ ಸಂಸ್ಕೃತಿಯಲ್ಲಿ ಬೆಳೆದುಬಂದಿರುವ ಲಕ್ಷಣವೇ ನಮಗೆ ಸಂಬಂಧವಿರದ ಭಿನ್ನ ಸಂಪ್ರದಾಯದ ಆಚರಣೆಗಳ ಕುರಿತು ನಿರಾಸಕ್ತಿ ಅಥವಾ ನಿರ್ಲಿಪ್ತ ಭಾವನೆ ಜೊತೆಗೆ ಅವುಗಳನ್ನು ಗೌರವದಿಂದ ಕಾಣುವೂದು ಆಗಿತ್ತು.
ಧರ್ಮನಿರಪೇಕ್ಷತೆ,ರಿಲಿಜಿಯಸ್ ಟಾಲರೆನ್ಸ್ ಗಳ ಬಗ್ಗೆ ಮಾತನಾಡುವ ನಮ್ಮ ಸೆಕ್ಯುಲರ್ ಪಂಡಿತರು,ಅದೇ ಸೆಕ್ಯುಲರಿಸಂ ಪ್ರತಿಪಾದಿಸುವ ಏಕರೂಪ ಕಾನೂನಿನ ಬಗ್ಗೆ ತುಟಿ ಬಿಚ್ಚುವುದಿಲ್ಲ.ಏಕರೂಪ ಕಾನೂನು ಜಾರಿಗೆ ಬರಲಿ ಎನ್ನುವವರನ್ನು ಇದೇ ಜನರು ಸೇರಿಕೊಂದು ಕೋಮುವಾದಿಗಳು ಎನ್ನುತ್ತಾರೆ.ಇವರ ಈ ವರ್ತನೆಗೆ ಒಂದೋ ಇವರಿಗೆ ಸೆಕ್ಯುಲರಿಸಂ ಎಂಬುದೇ ಅರ್ಥವಾಗಿಲ್ಲ ಅಥವಾ ಅವಕಾಶವಾದ ಎಂಬುದು ಈ ಜನರನ್ನು ಧ್ವಂದ್ವ ಮನಸ್ಥಿತಿಯಲ್ಲಿರುವಂತೆ ಮಾಡುತ್ತಿದೆ.ಆದರೆ,ಈ ಜನರ ಅವಕಾಶವಾದಿತನಕ್ಕೆ ಸಮಾಜವೊಂದು ಬಲಿಯಾಗಬೇಕೇ? ನಮ್ಮ ಜೀವನಾ ವಿಧಾನಕ್ಕೆ ಅರ್ಥವೇ ಆಗದ ಈ ಪಾಶ್ಚಾತ್ಯ ಮಾದರಿಯ ಸೆಕ್ಯುಲರಿಸಂ ಅನ್ನು ಅಳವಡಿಸಿಕೊಂಡಿರುವ ನಮ್ಮ ಸ್ಥಿತಿ ‘ಇರಲಾರದೇ ಇರುವೆ ಬಿಟ್ಟುಕೊಂಡರು’ ಎಂಬಂತಾಗಿದೆ.
“I have a horror of all isms, especially those that attach themselves to proper names” ಎಂದಿದ್ದರು ಮಹಾತ್ಮ ಗಾಂಧೀಜಿ.ತಮ್ಮ ಅನುಭವದ ಮೂಲಕವೇ ಸತ್ಯವನ್ನು ಹುಡುಕಿಕೊಳ್ಳುತಿದ್ದ ಮತ್ತು ತಮ್ಮೆಲ್ಲ ರಾಜಕೀಯ ಇಬ್ಬಂದಿತನದ ನಡುವೆಯೂ ಈ ನೆಲದ ಸಂಸ್ಕೃತಿಯನ್ನು ಅರ್ಥ ಮಾಡಿಕೊಂಡಿದ್ದ ಗಾಂಧೀಜಿಯವರಿಗೆ “ಐಡಿಯಾಲಜಿ” ಗಳೆಷ್ಟು ಅಪಾಯಕಾರಿ ಎಂಬುದರ ಅರಿವು ಆಗಲೇ ಆಗಿತ್ತು.ಅದರಲ್ಲೂ “proper name”ನ ಜೊತೆ ಕೂಡಿಕೊಂಡ ಐಡಿಯಾಲಜಿಯಂತೂ ಭಯಂಕರ ಎನ್ನುತ್ತಾರೆ.ಬಹುಶಃ ಅವರು “Secularism” ಅನ್ನು ಉದ್ದೇಶಿಸಿ ಮಾತನಾಡಿದ್ದರೋ ಇಲ್ಲವೋ ಗೊತ್ತಿಲ್ಲ.ಆದರೆ,ಗಾಂಧೀಜಿಯವರ ಮಾತು ಸತ್ಯವಾಗುತ್ತಿರುವುದನ್ನು ಭಾರತ ಸ್ವಾತಂತ್ರ್ಯ ಪಡೆದ ಮೇಲೆ ನಾವು ನೋಡುತ್ತಲೇ ಬಂದಿದ್ದೇವೆ.ಐಡಿಯಾಲಜಿಗಳ ಅಪಾಯವನ್ನೂ ನಮ್ಮ ಕಣ್ಣ ಮುಂದೆಯೇ ನಾವು ನೋಡುತಿದ್ದೇವೆ. ಹಿಂದೂ-ಮುಸ್ಲಿಂ ಸಮುದಾಯಗಳ ನಡುವೆ ಎಷ್ಟೇ ತಿಕ್ಕಾಟಗಳಿದ್ದರೂ ಕಾಲಾಂತರದಲ್ಲಿ ಎರಡೂ ಸಮುದಾಯಗಳು ಸಹಬಾಳ್ವೆಯ ಹಾದಿಯನ್ನು ಕಂಡುಕೊಂಡಿದ್ದವು.ಬ್ರಿಟಿಷ್ ವಸಹಾತುಕಾಲದಲ್ಲಿ ಶುರುವಾದ ಸೆಕ್ಯುಲರಿಸಂ ಐಡಿಯಾಲಜಿಯೂ ದಿನೇ ದಿನೇ ಈ ಎರಡೂ ಸಮುದಾಯಗಳ ನಡುವೆ ಕಂದಕವನ್ನು ಸೃಷ್ಟಿಸುತ್ತಲೇ ಸಾಗಿತು.ನೆಹರೂ ಕಾಲದ ಮುಸ್ಲಿಂ ಓಲೈಕೆ ಮತ್ತು ಆ ನಂತರ ಮುಸ್ಲಿಂ ಸಮುದಾಯವನ್ನು ಕೇವಲ ವೋಟ್ ಬ್ಯಾಂಕುಗಳಾಗಿ ಪರಿಗಣಿಸಿದ ಸೆಕ್ಯುಲರ್ ರಾಜಕೀಯ ಪಕ್ಷಗಳಿಂದಾಗಿ ಇವತ್ತಿಗೆ ಒವೈಸಿಯಂತವರು ಹುಟ್ಟಿಕೊಂಡಿದ್ದಾರೆ.ಮುಸ್ಲಿಂ ಮೂಲಭೂತವಾದವನ್ನು ಪೋಷಿಸುತ್ತಿರುವ ಸೆಕ್ಯುಲರಿಸಂನಿಂದಾಗಿ ಶತಮಾನಗಳ ಕಾಲ ಸಹಬಾಳ್ವೆ ನಡೆಸುತಿದ್ದ ಸಮುದಾಯಗಳು ಇವತ್ತು ಪರಸ್ಪರ ವಿರುದ್ಧ ನಿಲ್ಲಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.
ಇಂತಹ ಸೆಕ್ಯುಲರಿಸಂನ ಜೊತೆ ಗುರುತಿಸಿಕೊಂಡು ನಾನೊಬ್ಬ ಸೆಕ್ಯುಲರ್ ಎಂದು ಕರೆದುಕೊಳ್ಳುವುದಕ್ಕಿಂತ “ಆನುದೇವಾ ಹೊರಗಣವನು ಸೆಕ್ಯುಲರಿಸಂ” ನಿಂದ ಎಂದು ಹೇಳಿಕೊಳ್ಳುವುದೇ ಮೇಲು.
ಉತ್ತಮ ಬರಹ ರಾಕೇಶ್.
ನಾಗಶೆಟ್ಟಿಯೇ ಮೊದಲಾದ ಅನಾಮಿಕರ ನಗಾರಿಗಳು ಸದ್ದಿಲ್ಲದಡಗಿದವೇ???? ಅಕಟಕಟ