ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 24, 2015

ಯು. ಆರ್. ಅನಂತಮೂರ್ತಿಯವರ “ಪ್ರಜ್ಞೆ ಮತ್ತು ಪರಿಸರ”

‍ನಿಲುಮೆ ಮೂಲಕ

ಡಾ. ಪ್ರವೀಣ ಟಿ. ಎಲ್,ಕುವೆಂಪು ವಿಶ್ವವಿದ್ಯಾನಿಲಯ

URAಕಳೆದ ವರ್ಷ ತುಂಬಾ ಚರ್ಚೆಯಲ್ಲಿದ್ದು, ಈಗ ನಮ್ಮೊಂದಿಗಿಲ್ಲದ ಹಿರಿಯ ಸಾಹಿತಿ ಯು. ಆರ್ ಅನಂತಮೂರ್ತಿ. ಅವರು ಮೋದಿ ವಿರುದ್ಧ ನೀಡಿದ ಹೇಳಿಕೆಯಿಂದ ಹಿಡಿದು, ಅವರ ಅಂತ್ಯ’ಸಂಸ್ಕಾರ’ದ ನಂತರವೂ ಸುದ್ದಿಯಲ್ಲಿದ್ದರು. ಆ ಸಂದರ್ಭದಲ್ಲಿ ಅವರನ್ನು ಅರ್ಥಮಾಡಿಕೊಳ್ಳಲು ಸ್ವತಃ ಅವರ ಸಮರ್ಥಕರಿಗೂ, ವಿಮರ್ಶಕರಿಗೂ ಸ್ವಲ್ಪ ತ್ರಾಸವೇ ಆಯಿತು. ಆಗ ಕೆಲವರು ಅನಂತಮೂರ್ತಿಯವರ ನಿಲುವನ್ನು ‘ಕಪಟತನ’ ಎಂದು ಒರಟಾಗಿಯೂ, ಇನ್ನು ಕೆಲವರು ‘ದ್ವಂಧ್ವ’ ಎಂದೂ ತೀರ್ಪಿತ್ತರು.  ಅವರ ಗ್ರಹಿಕೆಯ ಸಂಪೂರ್ಣ ಚಿತ್ರಣವನ್ನು ನೀಡುವುದು ಈ ಲೇಖನದ ವ್ಯಾಪ್ತಿಯಲ್ಲಿ ಅಸಾಧ್ಯ. ಆದರೆ ಅವರು ಹಿಂದೂ ಸಂಪ್ರದಾಯಗಳ ‘ಆಂತರಿಕ ವಿಮರ್ಶಕ’ರಾಗಿ ಜೀವನದುದ್ದಕ್ಕೂ ಅದರ ಆಚರಣೆಗಳನ್ನು ಟೀಕಿಸುತ್ತಾ ಬಂದವರು, ಕೊನೆಗೆ ಆ ಸಂಪ್ರದಾಯದಂತೆಯೇ ತನ್ನ ಸಂಸ್ಕಾರ ನಡೆಯಬೇಕೆಂದು ಇಚ್ಚಿಸಿದ್ದು ದೊಡ್ಡ ಚರ್ಚೆಗೆ ಗ್ರಾಸವಾಯಿತು. ಈ ನಡೆಯು ಅವರ ಪ್ರಗತಿಪರ ಮಿತ್ರರಿಗೆ ನುಂಗಲಾರದ ತುತ್ತಾಗಿದ್ದು ಈಗ ಇತಿಹಾಸ. (ಅವರ ಕಾದಂಬರಿಯ ನಾರಾಣಪ್ಪನವರ ಸಂಸ್ಕಾರದಂತೆ ತನ್ನ ಸಂಸ್ಕಾರ ದೊಡ್ಡ ಸವಾಲಾಗದಿರಲಿ ಎಂದು ಬ್ರಾಹ್ಮಣ ಪರಂಪರೆಯಂತೆ ತಮ್ಮ ಅಂತ್ಯಸಂಸ್ಕಾರವಾಗಬೇಕೆಂಬ ಇಚ್ಚೆಯನ್ನು ವ್ಯಕ್ತಪಡಿಸಿದರೇನೋ!!)  ಆದರೆ ಹೀಗ್ಯಾಕೆ ಮಾಡಿದರು ಎಂಬ ಪ್ರಶ್ನೆಗೆ ಬಹುತೇಕರು ಸಮರ್ಪಕ ಉತ್ತರ ಹುಡುಕುವ ಬದಲಿಗೆ, ಅದನ್ನು ಬ್ರಾಹ್ಮಣರ ಕುತಂತ್ರಕ್ಕೋ, ಕಪಟತನಕ್ಕೋ ಸಂಬಂಧ ಕಲ್ಪಿಸಿ ಕೈತೊಳೆದುಕೊಂಡರು. ಆದರೆ ಅದನ್ನು ಗ್ರಹಿಸಲು ಯತ್ನಿಸಿದ ಕೆಲವರು ‘ಮೇಷ್ಟ್ರು ನಮ್ಮ ನಂಬಿಕೆಗೆ ಮೋಸ ಮಾಡಿದರು’ ಎಂದು ಅಲವತ್ತುಕೊಳ್ಳುವಲ್ಲಿಯೇ ತೃಪ್ತಿಹೊಂದಿದರು. ಆ ದ್ವಂದ್ವವನ್ನು ಅರ್ಥೈಸುವ ಚಿಕ್ಕ ಪ್ರಯತ್ನವೇ ಈ ಬರಹ.

ಅನಂತಮೂರ್ತಿಯವರನ್ನು ಆರಂಭದಿಂದಲೂ ಒಂದಲ್ಲ ಒಂದು ವಿವಾದ ಸುತ್ತಿಕೊಳ್ಳುತ್ತಿತ್ತು. ಹಾಗೆಯೇ ಅವರನ್ನು ಬಹುತೇಕರು ಅನುಮಾನದಿಂದಲೇ ನೋಡುತ್ತಿದ್ದರು. ಅವರು ಸಾಮಾಜಿಕ ಚಳುವಳಿಗಳಲ್ಲಿ ಭಾಗವಹಿಸಿದರೆ, ಅವರನ್ನು ಗುಮಾನಿಯಿಂದಲೇ ಸ್ವಾಗತಿಸುತ್ತಿದ್ದರು. ಕಾರಣ ಈ ಬ್ರಾಹ್ಮಣನನ್ನು ನಂಬುವ ಹಾಗಿಲ್ಲ ಎಂಬ ಧೋರಣೆ. ಆದರೆ ಅನಂತಮೂರ್ತಿಯವರು ಹಿಂದೂ ಸಮಾಜ, ಜಾತಿ ಸಮಾಜ, ಬ್ರಾಹ್ಮಣ್ಯವನ್ನು ಕಟುವಾಗಿ ಟೀಕಿಸುತ್ತಿದ್ದರು. ಅವರ ಟೀಕೆಯ ಪರಿಯನ್ನು ನೋಡುವುದಾದರೆ,: “ನನ್ನ ದೃಷ್ಟಿಗೆ ಜಾತಿಪದ್ಧತಿ ದಕ್ಷಿಣ ಆಫ್ರಿಕಾದ ಅಪಾರ್ಥೈಡ್ ನಷ್ಟೆ ಘೋರ ಪಾತಕ; ನನ್ನ ಪಾಲಿಗೆ ಬ್ರಾಹ್ಮಣ ಧರ್ಮ ತನ್ನ ಎಲ್ಲಾ ಸತ್ವವನ್ನೂ ಕಳೆದುಕೊಂಡ ಪ್ರೇತ. ಅಲ್ಲದೇ ಅದು ಸತ್ವಶಾಲಿಯಾಗಿದ್ದ ಕಾಲದಲ್ಲೂ ಹೀನ ಜಾತಿಯರ ಬಗ್ಗೆ ತಾಳಿದ್ದ ನಿಲುವು ಅಪಾರ್ಥೈಡ್ ನಷ್ಟೇ ಖಂಡನಾರ್ಹ”. ಈ “ಜಾತಿಪದ್ಧತಿಯಿಂದಾಗಿ ಇಡೀ ದೇಶದ ಬಹುಪಾಲು ಜನ ಹಿಂದುಳಿದಿರುವುದರಿಂದ ಭಾರತವೇ ಹಿಂದುಳಿದುಬಿಟ್ಟಿದೆ. ಇದನ್ನು ನಿವಾರಿಸುವ ಯತ್ನದಲ್ಲಿ ಕೆಲವು ಅತಿರೇಕಗಳೇನಾದರೂ ಚಿಂತೆಯಿಲ್ಲ”. 

   ಹೀಗೆ ಭಾರತೀಯ ಸಮಾಜದ ಜಾತಿ ವ್ಯವಸ್ಥೆ, ಬ್ರಾಹ್ಮಣಧರ್ಮವನ್ನು ಟೀಕಿಸುವ ಅನಂತಮೂರ್ತಿಯವರು, ಹಲವು ಕಡೆಗಳಲ್ಲಿ ಇದಕ್ಕೆ ತದ್ವಿರುದ್ಧವಾದ ನಿಲುವುಗಳನ್ನು ಹೊಂದುತ್ತಾರೆ. ಅಂದರೆ ಭಾರತೀಯ ಸಮಾಜದ ಕುರಿತು ಸಕಾರಾತ್ಮಕ ಧೋರಣೆಯನ್ನು ವ್ಯಕ್ತಪಡಿಸುತ್ತಾರೆ. ಅಂತಹ  ಕೆಲವು ನಿದರ್ಶನಗಳು ಅವರ ಬರವಣಿಗೆಗಳಲ್ಲಿ ಸಿಗುತ್ತವೆ. ಒಮ್ಮೆ ಇಡೀ ಬುದ್ದಿಜೀವಿಗಳ ಪಡೆಯು ಬೆತ್ತಲೆ ಪೂಜೆಯನ್ನು ತೊಲಗಿಸಲು ಪಣತೊಟ್ಟು ನಿಂತಿದ್ದರು. ಆ ಸಮಯದಲ್ಲಿ ಅನಂತಮೂರ್ತಿಯವರು ಲೇಖನವೊಂದನ್ನು ಬರೆದರು. ಅದುವೇ “ಬೆತ್ತಲೆ ಪೂಜೆ ಏಕೆ ಕೂಡದು?”. ಅದರಲ್ಲಿ ಈ ರೀತಿಯಾದ ನಿಲುವನ್ನು ವ್ಯಕ್ತಪಡಿಸುತ್ತಾರೆ: “ವಸಾಹತುಶಾಹಿಯ ಫಲವಾದ ನಮ್ಮ ಮನಸ್ಸು ಲೌಕಿಕ ವ್ಯವಹಾರದಲ್ಲಿ ಪ್ರಾಪಂಚಿಕ ಯಶಸ್ಸಿಗಾಗಿ ಮಾಡುವ ಆಯ್ಕೆ ಒಂದಾಗಿ, ಭಾವುಕವಾಗಿ ಹಳಹಳಿಕೆಯಲ್ಲಿ ಮಾಡುವ ಆಯ್ಕೆ ಇನ್ನೊಂದಾಗಿ ಇಬ್ಬಗೆಯಲ್ಲಿ ವರ್ತಿಸುತ್ತ ಗೊಂದಲಮಯವಾಗಿದೆ. ಈ ಗೊಂದಲ ಹಿಪೋಕ್ರಸಿಗೂ ಕಾರಣವಾಗಬಹುದು; ಅಥವಾ ಚಾರಿತ್ರಿಕವಾಗಿ ಅನಿವಾರ್ಯವಾಗಿ ಬಿಟ್ಟ ಒಂದು ಪಾಡಿನ ಸೂಕ್ಷ್ಮ ಅರಿವೂ ಆಗಿರಬಹುದು. ಇಂಡಿಯಾ ಮತ್ತು ಭಾರತ ಎಂದು ಎರಡು ದೇಶಗಳೇ ಇಲ್ಲಿವೆ ಎಂಬುದು ನಿಜ. ಚಂದ್ರಗುತ್ತಿ ಪ್ರಕರಣದಲ್ಲಿ ಭಾರತವನ್ನು  ಇಂಡಿಯಾ ಎದುರಾಯಿತು. ಆಧುನಿಕವಾದ ಇಂಡಿಯಾ ಭಾರತದಿಂದ ಬಹುದೂರ ಹೋಗುತ್ತಿದೆ”.

   ಭಾರತೀಯ ಪರಂಪರೆಯನ್ನು ಕಟುವಾಗಿ ವಿರೋಧಿಸುವ, ದೇವರನ್ನೇ ನಂಬುವುದಿಲ್ಲ ಎಂಬಂತಿದ್ದ (ಬಾಲ್ಯದಲ್ಲಿ  ಭೂತದ ಕಲ್ಲಿನ ಮೇಲೆ ಮೂತ್ರ ವಿಸರ್ಜಿಸಿದ ಘಟನೆ), ಅನಂತಮೂರ್ತಿಯವರು ಇಂತಹ ಆಚರಣೆಯ ಕುರಿತು ಮೃದು ಧೋರಣೆ ಹೊಂದುವುದು ಆಶ್ಚರ್ಯ. ಅವರು ಆ ಕುರಿತ ಚರ್ಚೆಯಲ್ಲಿ ಕೆಲವು  ಪ್ರಶ್ನೆಗಳನ್ನು  ಎತ್ತುತ್ತಾರೆ: “ನಾವೂ ನೀವೂ ದುರದೃಷ್ಟವಶಾತ್ ಕಳೆದುಕೊಂಡಿರುವ ದೈವಿಕ ಶ್ರದ್ಧೆಯ ಉತ್ಕಟತೆಯನ್ನು ಆ ಬೆತ್ತಲೆಪೂಜೆಯವರಲ್ಲಿ ನೀವು ಯಾಕೆ ಕಾಣುವುದಿಲ್ಲ? ನಮಗೆ ಹೆಣ್ಣಿನ ಬೆತ್ತಲೆ ದೇಹ ಒಂದೋ ಕಾಮವನ್ನು ಕೆರಳಿಸುತ್ತದೆ; ಅಥವಾ ಒಬ್ಬ ಶಿಲ್ಪಿಯೋ, ಚಿತ್ರಕಾರನೋ ಅದನ್ನು ಬಿಡಿಸಿದರೆ ಕಲಾತ್ಮಕ ಅನುಭವ ಎನ್ನಿಸುತ್ತದೆ. ಆದರೆ ಬೆತ್ತಲೆಯಾಗಿ ಪೂಜಿಸುವವರಿಗೆ ಅದು ಕಲಾತ್ಮಕ ಅಭಿವ್ಯಕ್ತಿಯೂ ಅಲ್ಲ; ಕಾಮಪ್ರಚೋದಕವೂ ಅಲ್ಲ. ಇದಕ್ಕೆ ಏಕೆ ಭಾವನಾತ್ಮಕವಾಗಿ ನಾವು ಸ್ಪಂದಿಸುವುದಿಲ್ಲ? ಪ್ರಪಂಚದಲ್ಲಿ ಎಲ್ಲೂ ಇಲ್ಲದ್ದನ್ನು ಇಲ್ಲಿ ಕಾಣುತ್ತೇವೆ ಅಲ್ಲವೇ? ಬೆತ್ತಲೆದೇಹ ಪೂಜ್ಯವೆಂದು ಕಾಣುವುದು ಅಪರೂಪವಲ್ಲವೇ?”

   ಹಲವು ಸಮಾಜ ಸುಧಾರಣೆಯಂತಹ ಕಾರ್ಯಕ್ರಮಗಳ ಮುಂದಾಳುವೊಬ್ಬರು ಅದೇ ಸಮಾಜದ ಆಚರಣೆಗಳನ್ನು ಸಮರ್ಥಿಸುವ ಇಂತಹ ಪ್ರಶ್ನೆಗಳನ್ನು ಕೇಳಿದರೆ, ಅದನ್ನು ಅರ್ಥೈಸುವುದಾದರೂ ಹೇಗೆ? ವಿಮರ್ಶಕರಿಗೆ ಅವರ ನಿಲುವನ್ನು ‘ಹಿಪಾಕ್ರಸಿ’ ಎಂದು ನಿರ್ಣಯಿಸದೇ ವಿಧಿ ಇಲ್ಲ. ಆದರೆ ಇದು ಸರಿಯಾದ ನಿರ್ಣಯವಾಗಲಾರದು. ಅದನ್ನು ಸ್ವಲ್ಪ ಸಕಾರಾತ್ಮಕವಾಗಿ ನೋಡಿದವರು ‘ಯುಗ್ಮತೆ’ ಎಂದು ಕರೆದರು. ಆದರೆ ಇದನ್ನು ವಸಾಹತು ಪ್ರಜ್ಞೆ ಮತ್ತು ಅನುಭವದ ನಡುವಿನ ತಿಕ್ಕಾಟ ಎನ್ನುವುದು ಹೆಚ್ಚು ಸಮರ್ಪಕವಾಗಬಹುದು.

   ಹಿಂದೂ ಸಮಾಜದ ಕುರಿತ ಐರೋಪ್ಯ ಚಿಂತನೆ ಅವರನ್ನು ಗಾಢವಾಗಿ ಪ್ರಭಾವಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಅದನ್ನು ಅವರೂ ಸಹ ಹಲವು ಕಡೆಗಳಲ್ಲಿ ಒಪ್ಪಿದ್ದಾರೆ. ಆದರೆ ಈ ಐರೋಪ್ಯ ಚಿಂತನೆ ಭಾರತವನ್ನು ಅರ್ಥೈಸಿದ ಪರಿಯಲ್ಲಿ ಮೂಲಭೂತ ಸಮಸ್ಯೆಗಳು ಇವೆ. ಇದನ್ನು ಎಡ್ವರ್ಡ್ ಸಯ್ಯೀದ್ ಇಂದ ಎಸ್. ಎನ್. ಬಾಲಗಂಗಾಧರ ತನಕದ ಅಧ್ಯಯನಗಳು ಸ್ಪಷ್ಟವಾಗಿ ತೋರಿಸಿವೆ. ಈ ಐರೋಪ್ಯ ಚಿತ್ರಣಗಳು ಅವರ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಭಾರತವನ್ನು ಗ್ರಹಿಸಿದ ಪರಿಯಾಗಿದೆ. ಅವರ ಕ್ರಿಶ್ಚಿಯನ್ ರಿಲಿಜನ್ ಒದಗಿಸಿದ ಚೌಕಟ್ಟು ಇಲ್ಲಿನ ಜಾತಿವ್ಯವಸ್ಥೆಯ ಸೃಷ್ಟಿಗೂ, ಬ್ರಾಹ್ಮಣರ ಕುರಿತ ಟೀಕೆಗೂ(ಭ್ರಷ್ಟರು, ಕಪಟಿಗಳು, ಇತ್ಯಾದಿ) ಹಾಗೂ ನಮ್ಮ ಸಮಾಜ ಬದಲಾವಣೆಯ ಹೋರಾಟಗಳಿಗೂ ಆಧಾರವಾಗಿದೆ. ಭಾರತೀಯ ಸಮಾಜವು ಹಿಂದೂಯಿಸಂ ಎಂಬ ಭ್ರಷ್ಟ ರಿಲಿಜನ್ ಒಳಗೊಂಡಿದ್ದು, ಅದರ ಪ್ರೀಸ್ಟ್ ಗಳಾದ ಬ್ರಾಹ್ಮಣರು ಜಾತಿವ್ಯವಸ್ಥೆಯನ್ನು ಸೃಷ್ಟಿಸಿ, ಮೂಢಾಚರಣೆಗಳನ್ನು ಇತರರ ಮೇಲೆ ಹೇರುವ ಮೂಲಕ ಇಡೀ ಸಮಾಜವನ್ನು ಹಿಂದುಳಿಯುವಂತೆ ಮಾಡಿದ್ದಾರೆ. ಹೀಗೆ  ವಸಾಹತು ಕಥೆಯು ಮುಂದುವರೆಯುತ್ತದೆ. ಈ ಕಥೆಯನ್ನು ನಂಬುವುದೆಂದರೆ ವಸಾಹತು ಪ್ರಜ್ಞೆಯ ಕಪಿಮುಷ್ಠಿಯಲ್ಲಿರುವುದು ಎಂದರ್ಥ. ಈ ಪ್ರಜ್ಞೆಯು ಭಾರತೀಯ ಸಮಾಜವನ್ನು ಗ್ರಹಿಸಲು ನಿರ್ದಿಷ್ಟ ‘ಕನ್ನಡಕ’ವನ್ನು ಒದಗಿಸುತ್ತದೆ. ಆ ಮೂಲಕ ಭಾರತೀಯ ಸಮಾಜವನ್ನು ನೋಡಿದರೆ, ಜಾತಿಗಳು ಆಫ್ರಿಕಾದ ಅಪರ್ಥೈಡ್ ನಂತೆ ಕಾಣುವುದು ಸಹಜವೇ; ಬ್ರಾಹ್ಮಣ ಧರ್ಮ ತನ್ನೆಲ್ಲಾ ಸತ್ವವನ್ನು ಕಳೆದುಕೊಂಡ ಪ್ರೇತವೇ ಸರಿ; ಹಿಂದುಳಿದ ಭಾರತೀಯ ಸಮಾಜದ ಬದಲಾವಣೆ ಅಗತ್ಯವೂ ಹೌದು, ಅದರ ಬದಲಾವಣೆಗೆ ಅತಿರೇಕಗಳು ನಡೆಯುವುದು ಅನಿವಾರ್ಯವೂ ಹೌದು ಎನಿಸುತ್ತದೆ.

   ವಸಾಹತೋತ್ತರವಾದದ ಬೆಳವಣಿಗೆಯ ನಂತರ ಪೂರ್ವದ ಕುರಿತ ಐರೋಪ್ಯರ ಚಿಂತನೆಗಳೇ ಸತ್ಯ ಎಂಬ ನಿಲುವು ತಪ್ಪು ಎಂಬ ಧೋರಣೆ ಬೆಳೆಯುತ್ತದೆ. ಅದನ್ನು ಅನಂತಮೂರ್ತಿಯವರು ಗಮನಿಸಿದ್ದಾರೆ. ಹಾಗಾಗಿಯೇ ಮೇಲಿನ ಚರ್ಚೆಯಲ್ಲಿ ಅಂತಹ ಪ್ರಶ್ನೆಗಳನ್ನು ಎತ್ತಲು ಸಾಧ್ಯವಾದುದು, ‘ಸೂರ್ಯನ ಕುದುರೆ’ಯಂತಹ ಕಥೆಯನ್ನು ಬರೆಯಲು ಸಾಧ್ಯವಾಗಿರುವುದು. ವಸಾಹತೋತ್ತರವಾದದ ಕೆಲವು ಒಳನೋಟಗಳು ಇದ್ದಾಗ್ಯೂ ಸಹ ಅವರು ಐರೋಪ್ಯ ನಿಲುವುಗಳನ್ನು ತಪ್ಪು ಎಂದು ನಿಖರವಾಗಿ ಹೇಳಲು ಸಾಧ್ಯವಾಗಿಲ್ಲ. ಬೆತ್ತಲೆ ಪೂಜೆ ಚರ್ಚೆಯಲ್ಲಿಯೂ ನಿಖರ ನಿಲುವು ಸಾಧ್ಯವಾಗಿಲ್ಲ, ಕೆಲವು ಪ್ರಶ್ನೆಗಳನ್ನು ಕೇಳುವಲ್ಲಿ ಮಾತ್ರ ಯಶಸ್ವಿಯಾಗುತ್ತಾರೆ. ಭಾರತೀಯ ಸಮಾಜದಲ್ಲಿಯೂ ಕೆಲವು ಒಳ್ಳೆಯದಿದೆ ಎನ್ನುವ ಅವರು ಯಾವುದು ಒಳ್ಳೆಯದು ಎಂಬ ತೀರ್ಮಾನಕ್ಕೆ ಬರಲು ಕೊನೆಗೂ ಸಾಧ್ಯವಾಗುವುದಿಲ್ಲ. ಈ ಗೊಂದಲ ಅವರಂತೆಯೇ ಹಲವರಿಗೆ ಈಗಲೂ ಇದೆ. ಏಕೆಂದರೆ ಒಳ್ಳೆಯದನ್ನು ತೀರ್ಮಾನಿಸುವಾಗ ವಸಾಹತು ಪ್ರಜ್ಞೆಯು ನೈತಿಕತೆಯ ಪ್ರಶ್ನೆಯಾಗಿ ಗೋಚರಿಸುತ್ತದೆ. ಹಿಂದೂಯಿಸಂ, ಜಾತಿವ್ಯವಸ್ಥೆ, ಬ್ರಾಹ್ಮಣರ ಕುರಿತ ವಿವರಣೆಗಳು ನೈತಿಕ ಪ್ರಶ್ನೆಗಳೂ, ಐಡಿಯಾಲಜಿಯೂ ಆಗಿಬಿಡುತ್ತದೆ.

   ಈ ವಸಾಹತು ಪ್ರಜ್ಞೆಯು ಐಡಿಯಾಲಜಿಯೋ, ನೈತಿಕ ನಿಲುವೋ ಆಗುವುದರಿಂದ ತಮ್ಮ ಅನುಭವವನ್ನು ತಾವೇ ಅರ್ಥೈಸದಂತೆ/ ವ್ಯಕ್ತಪಡಿಸದಂತೆ ತಡೆಯುತ್ತದೆ. ಈ ಪ್ರಜ್ಞೆಗೊಳಗಾದವರು ಅನುಭವದಲ್ಲಿ ಜಾತಿಯನ್ನು ಅಪ್ಯಾಯವಾಗಿ ನೋಡುವವರೂ ಆಗಿರುತ್ತಾರೆ; ಸಮಾಜದ ಬಹುತೇಕ ಆಚರಣೆಗಳನ್ನು ನೆರವೇರಿಸುವವರೂ ಆಗಿರುತ್ತಾರೆ. ಆದರೆ ಸಮಾಜದ ಕುರಿತು ವಿವರಣೆ ನೀಡುವಾಗ, ವಿಶ್ಲೇಷಿಸುವಾಗ ಈ ಅನುಭವ ಅಧೀನವಾಗಿಬಿಡುತ್ತದೆ. ವಸಾಹತು ಪ್ರಜ್ಞೆಯು ನೈತಿಕತೆಯ ಪೋಷಾಕು ಧರಿಸಿ ಮುನ್ನೆಲೆಗೆ ಬರುತ್ತದೆ. ಇಲ್ಲಿ ಎರಡು ಘಟನೆಗಳು ಜರಗುತ್ತವೆ; ಒಂದು, ಚಿಂತಕರು ತಮ್ಮ ಅನುಭವದ ಕುರಿತು ಪರ್ಯಾಲೋಚಿಸದಂತೆ(reflection) ತಡೆಯುವುದು. ಎರಡು, ಅನುಭವವನ್ನು ಹೊರಹಾಕಿದರೆ ಅನೈತಿಕರಾಗಿಬಿಡುವ ಭಯವನ್ನು ಹುಟ್ಟುಹಾಕುತ್ತದೆ.  ಆಗ ಅನುಭವದಲ್ಲಿ ಸರಿ ಎನಿಸಿದ ಕೆಲವು ವಿಚಾರಗಳನ್ನು ವ್ಯಕ್ತಪಡಿಸಲಾಗದೇ, ಹಳೆಯ ವಸಾಹತು ವಿವರಣೆಗಳ ಬಲೆಯೊಳಗೆ ಬಂದಿಯಾಗುತ್ತೇವೆ. ಹಾಗಾಗಿಯೇ ವಸಾಹತೋತ್ತರ ವಾದದ ಒಳನೋಟಗಳಿದ್ದರೂ ಸಹ, ಆ ಹಿನ್ನೆಲೆಯಲ್ಲಿ ಸಮಾಜದ ಕುರಿತು ಹೊಸ ತಿಳುವಳಿಕೆಯನ್ನು ಸೃಷ್ಟಿಸಲು ಸಾಧ್ಯವಾಗುವುದಿಲ್ಲ. ಈ ಒಳನೋಟದ ಹಿನ್ನೆಲೆಯಲ್ಲಿ ತಮ್ಮ ಅನುಭವವನ್ನು ಒರೆಗೆ ಹಚ್ಚಲಾಗುವುದಿಲ್ಲ. ಹಾಗಾಗಿಯೇ ತಿಳುವಳಿಕೆಯಲ್ಲಿ ಬ್ರಾಹ್ಮಣ ಧರ್ಮ ತನ್ನೆಲ್ಲಾ ಸತ್ವಗಳನ್ನು ಕಳೆದುಕೊಂಡ ಪ್ರೇತವಾಗುತ್ತದೆ, ಅನುಭವದಲ್ಲಿ ವೈಧಿಕ ಸಂಪ್ರದಾಯದಂತೆ ಅಂತ್ಯ ಸಂಸ್ಕಾರವಾಗಬೇಕೆಂಬ ಇಚ್ಚೆ ಹುಟ್ಟುತ್ತದೆ.

  ಅನಂತಮೂರ್ತಿಯವರನ್ನೂ ಒಳಗೊಂಡಂತೆ ಹಲವು ಲೇಖಕರ ಪರಿಸ್ಥಿತಿಯು ಇಂತಹದ್ದೇ ಆಗಿದೆ. ಅವರ ಪ್ರಜ್ಞೆಗೂ, ಅನುಭವಕ್ಕೂ(ಪರಿಸರಕ್ಕೂ) ದೊಡ್ಡ ಕಂದರವಿದೆ. ಇದು ಕಪಟತನದ ಪ್ರಶ್ನೆಯಲ್ಲ ಬದಲಾಗಿ ವಸಾಹತು ಪ್ರಜ್ಞೆಯ ಪ್ರಭಾವ. ಅನುಭವ ತನ್ನ ಅಂತ್ಯಸಂಸ್ಕಾರವನ್ನು ವೈಧಿಕ ಪರಂಪರೆಯಂತೆ ಮಾಡಲಿ ಎಂಬ ಸೂಚನೆಯನ್ನು ನೀಡಿದೆ. ಆದರೆ ವಿಚಾರಕ್ಕೆ ಬಂದರೆ ವಸಾಹತು ಪ್ರಜ್ಞೆಯು ಪ್ರಧಾನವಾಗಿ, ಅನುಭವ ಅಧೀನವಾಗಿಬಿಡುತ್ತದೆ. ಇಂತಹ ಪ್ರಜ್ಞೆಯಿಂದ ಮುಕ್ತಿಪಡೆಯದ ಹೊರತು ಭಾರತೀಯರು ತಮ್ಮ ಜೀವನವನ್ನು ಅನುಭವಿಸಲು ಅಸಾಧ್ಯ; ನಮ್ಮ ಸಂಪ್ರದಾಯದ ಸತ್ವವನ್ನು ಗ್ರಹಿಸಲು ಸಾಧ್ಯವೇ ಆಗುವುದಿಲ್ಲ.

Read more from ಲೇಖನಗಳು

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments