ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 27, 2015

2

ಮೇಕಿಂಗ್ ಆಫ್ ಸೂಪರ್‍ಮ್ಯಾನ್

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

ಸೂಪರ್ಮ್ಯಾನ್ನಾನು ಶೇಕ್ ನಾಸಿರ್. ಕನಸಿನ ನಗರಿ ಮುಂಬೈಯಿಂದ ಬರೋಬ್ಬರಿ 296 ಕಿಲೋಮೀಟರ್ ದೂರದ ಮಾಲೆಗಾಂವ್ ಎಂಬ, ದಿನದ ಹನ್ನೆರಡು ಗಂಟೆ ಕರೆಂಟಿಲ್ಲದ ಪುಟ್ಟಹಳ್ಳಿಯ ಜಗತ್ಪ್ರಸಿದ್ಧ ಫಿಲ್ಮ್ ಡೈರೆಕ್ಟರ್. ನೀವು, ನಾನು ಮಾಡಿದ ಶೋಲೆ, ಶಾನ್ ಚಿತ್ರಗಳನ್ನು ನೋಡಿಯೇ ಇರುತ್ತೀರಿ. ನನ್ನ ವಿಶ್ವವಿಖ್ಯಾತ ಸೂಪರ್‍ಮ್ಯಾನ್ ಚಿತ್ರ ಕೂಡ. ಬಿಡಿ, ಸೂಪರ್‍ಮ್ಯಾನ್ ಕತೆ ಹೇಳೋ ಮೊದಲು, ನನ್ನ ಮತ್ತು ನಮ್ಮ ಹಳ್ಳಿಯ ಕತೆ ಸ್ವಲ್ಪ ಹೇಳ್ತೀನಿ. ಕತೆಗೆ ಮುನ್ನ ಪೀಠಿಕೆ, ಚಿತ್ರಕ್ಕೆ ಮುನ್ನ ಫ್ಲ್ಯಾಶ್‍ಬ್ಯಾಕ್ – ತುಸು ಇಂಟರೆಸ್ಟಿಂಗ್ ಆಗಿರುತ್ತೆ.

ಅಂದಹಾಗೆ, ನನ್ನೂರಿನ ಹೆಸರನ್ನು ನೀವು ಕೇಳಿರಬಹುದು, ಓದಿರಬಹುದು. ಕೋಮುಘರ್ಷಣೆಗೆ ಬಹಳ ಪ್ರಸಿದ್ಧವಾದ ಊರು ನನ್ನದು. ಹಳ್ಳಿಯ ನಡುಮಧ್ಯೆ ಗೌರಮ್ಮ ಬೈತಲೆ ತೆಗೆದ ಹಾಗೆ ಒಂದು ನದಿ ಹರಿಯುತ್ತೆ. ಅದರಾಚೆ ಹಿಂದೂಗಳು, ಈಚೆ ಮುಸ್ಲಿಮರು ಬದುಕ್ತಾ ಇದಾರೆ. ಇರೋರಲ್ಲಿ ಮುಕ್ಕಾಲುಭಾಗ ಮುಸ್ಲಿಮರೇ ಇರೋದು. ನಮ್ಮ ಬಿಕನಾಸಿ ಉದ್ಯೋಗಗಳಿಗೆ ಒಂದು ಹೆಸರು ಅಂತ ಕೂಡ ಇಲ್ಲ. ಗುಜರಿ, ಪೇಪರ್, ಚಾದಂಗಡಿ, ಗಾಡಿ ರಿಪೇರಿ, ಪಂಚರು, ಪ್ಲಂಬರ್, ಬಟ್ಟೆ ಅಂಗಡಿ, ಹಜಾಮತಿ – ಹೀಗೆ ಮಧ್ಯಾಹ್ನ ರೊಟ್ಟಿ ತಟ್ಟೋದಕ್ಕೆ ಆಗುವಷ್ಟು ಕೂಲಿ ಹುಟ್ಟಿದರೆ ಸಾಕು, ಅದೇ ಒಂದು ಉದ್ಯೋಗ. ಇವತ್ತು ಗಡ್ಡ ಹೆರೆದವನು ನಾಳೆ ಬೋರ್ಡು ಬರೀಬಹುದು, ನಿನ್ನೆ ಟೈರ್ ಹೊಲಿದು ಪಂಚರ್ ಹಾಕಿದೋನು ಇವತ್ತು ಟೈಲರ್ ಆಗಬಹುದು! ಒಟ್ಟಲ್ಲಿ ಹೇಳುವುದಾದರೆ, ಈ ಊರಿನ ಸಮಸ್ತರೂ ಸಕಲಕಲಾವಲ್ಲಭರು!

ಹರಿದ ಚಾಪೇಲಿ ಮಲಗಿದರೂ ಆಕಾಶದ ನಕ್ಷತ್ರ ಕಾಣದೆ ಇರುತ್ಯೇ? ನನ್ನೂರಿನ ಖುಷಿ, ಸಂಭ್ರಮ, ಶ್ರೀಮಂತಿಕೆಯನ್ನು ನೋಡಬೇಕಾದರೆ ಶುಕ್ರವಾರ ಬನ್ನಿ. ಜುಮ್ಮಾ ಮಸೀದಿಯಲ್ಲಿ ನಮಾಜ್ ಮುಗೀತಾ ಇದ್‍ಹಾಗೇ ಊರಿನ ಎಂಟು ಥಿಯೇಟರ್‍ಗಳಿಗೆ ಜನ ನುಗ್ಗೋ ಪರಿ ನೀವು ಕಣ್ಣಾರೆ ನೋಡಿಯೇ ತಿಳಿಯಬೇಕು. ಶಾಂತವಾಗಿ ಕೂತ ದೊಡ್ಡ ಗೂಡಿಗೆ ಗುರಿಯಿಟ್ಟು ಕಲ್ಲೆಸೆದರೆ ಹುಚ್ಚೆದ್ದು ಹಾರುವ ದುಂಬಿಗಳ ಹಾಗೆ, ಮಸೀದಿಯಲ್ಲಿ ಒಟ್ಟಾದ ಜನ ಇಲ್ಲಿ ಥಿಯೇಟರಿಗೆ ಓಡಿಬಂದು ಸೀಟುಹಿಡಿದು ಪಿಚ್ಚರ್ ನೋಡುತ್ತಾರೆ. ನಂಬ್ತೀರೋ ಬಿಡ್ತೀರೋ, ಹಳೇ ಅಜ್ಜಮ್ಮನ ಕಾಲದ ಅಗ್ನಿಪಥ್ ಚಿತ್ರ ನಮ್ಮ ಟಾಕೀಸಿನಲ್ಲಿ ಇನ್ನೂ ಓಡ್ತಾ ಇದೆ! ಟಾಕೀಸಿಗೆ ಟಾಕೀಸೇ ಕಾರ್ಗಿಲ್ಲಲ್ಲಿ ಬೇಲಿ ಎಳೆದ ಹಾಗೆ ಎರಡು ಗುಂಪುಗಳಾಗಿ ಒಡೆದುಹೋಗಿದೆ. ಒಂದು ಮಿಥುನ್ ದಾ ಫ್ಯಾನ್‍ಗಳ ಗುಂಪು, ಇನ್ನೊಂದು ಅಮಿತಾಬ್ ಬಚ್ಚನ್ ಗುಂಪು. ಇವೆರಡರಲ್ಲಿ ಯಾರು ಹೆಚ್ಚು ಬೊಬ್ಬೆ ಹೊಡೀತಾರೆ, ಸಿಳ್ಳೆ ಹಾಕ್ತಾರೆ ಅನ್ನೋ ಸ್ಪರ್ಧೆ ಬೇರೆ ನಡೆಯುತ್ತೆ. ಪಿಚ್ಚರ್ ನಡೀತಾ ಇದ್ದ ಹಾಗೆ, ಥಿಯೇಟರ್ ಒಳಗೆ ಮಾಲೆಪಟಾಕಿ ಹಚ್ಚಿ ಸಿಡಿಸ್ತಾರೆ. ನಮ್ಮನಮ್ಮ ಆರಾಧ್ಯದೈವಗಳಿಗೆ ಇಲ್ಲೇ ಗುಡೀನೂ ಕಟ್ಟಿಕೊಂಡಿದ್ದೇವೆ. ನೋಡಿ ಇದು- ಮಿಥುನ್ ಚಕ್ರವರ್ತಿ ದೇವರ ಗುಡಿ. ಹೇಗಿದೆ?

ಇಂಥಾ ಹುಚ್ಚುಊರಲ್ಲಿ ನಾನೊಂದು ಫಿಲ್ಮು ತೆಗೆದೆ. ಶೋಲೆ ಅಂತ! ಇದು ರಾಂಪುರದ್ದಲ್ಲ, ಮಾಲೆಗಾಂವಿನ ಶೋಲೆ. ಒಂದು ಬಸ್ಸನ್ನು ಏಳೆಂಟು ರೌಡಿಗಳು ಬೈಕಿನಲ್ಲಿ ಓಡಿಸಿಕೊಂಡು ಹೋಗಿ ದರೋಡೆ ಮಾಡುವುದೇ ಕಥಾವಸ್ತು. ಅದು ಹಿಟ್ಟಾದ ಪರಿಯನ್ನು ಹೇಗೆ ಅಂತ ಬಣ್ಣಿಸಲಿ! ಬಿಡುಗಡೆಯಾದ ಮೂರುತಿಂಗಳು ಕುಂತಲ್ಲಿ ನಿಂತಲ್ಲಿ ಮಲಗಿದಲ್ಲಿ ಉಚ್ಚೆಹೊಯ್ದಲ್ಲಿ ಬರೇ ಅದರದ್ದೇ ಮಾತು ಅನ್ನೋ ಹಾಗೆ ಆಗಿಹೋಯಿತು. ಮಾಲೆಗಾಂವಿಗೆ ಮಾಲೆಗಾಂವೇ ಮುಗಿಬಿದ್ದು ಹತ್ತತ್ತುಸಲ ಈ ಪಿಚ್ಚರ್ ನೋಡಿ ನನ್ನ ಜಲ್ಮವನ್ನು ಪಾವನ ಮಾಡಿತು. ತಿಕೀಟುಗಳು ಹೊರಗೆ ಬ್ಲ್ಯಾಕ್‍ನಲ್ಲಿ ಮಾರಾಟವಾದವು! ನಿರ್ದೇಶಕನಿಗೆ ಜೀವನದಲ್ಲಿ ಒಮ್ಮೆಯಾದರೂ ಇಂತಹ ಸೌಭಾಗ್ಯ ಅನುಭವಿಸೋದಕ್ಕೆ ಸಿಗಬೇಕು ನೋಡಿ!

ಶೋಲೆ ಆಯ್ತು, ಮುಂದೇನು ಮಾಡಲಿ ಅಂತ ಕಾಯುತ್ತಿದ್ದೆ. ನನಗೆ ಫಿಲ್ಮು ಹುಚ್ಚು ಬಿಟ್ಟಿರಲಿಲ್ಲ. ಬಿಡೋದೇನು, ಹುಚ್ಚಿರುವೆ ಮೈಗೆ ಹತ್ತಿದಂತೆ ಫಿಲ್ಮಿಜ್ವರ ಏರುತ್ತಲೇ ಇತ್ತು! ಬಾಲಿವುಡ್ ಚಿತ್ರಗಳನ್ನು ಮಾಡಿ ರೀಲು ಸುತ್ತಿ ಎಸೆದದ್ದಾಯಿತು, ಇನ್ನು ಹಾಲಿವುಡ್‍ನ ಯಾವದಾದರೂ ಪಿಚ್ಚರನ್ನು ರಿಮೇಕ್ ಮಾಡಬೇಕು ಅಂತ ಒಂದು ದಿನ ಮನಸ್ಸು ಹೇಳಿಬಿಟ್ಟಿತು. ಅದ್ಯಾವ ಗಳಿಗೆಯಲ್ಲಿ ಆ ಜ್ಞಾನೋದಯ ಆಯ್ತೋ ತಿಳಿವಲ್ದು. ಸರಿ ಅಂತ ನನ್ನ ಕನಸಿಗೆ ಮೀಸೆ ಬರೆದು ಕಿರೀಟ ಇಟ್ಟು ಸಿಂಗರಿಸುವ ಕೆಲಸ ಶುರು ಮಾಡಿದೆ. ಬ್ರೂಸ್‍ಲೀ, ಜಾಕಿಚಾನ್, ಅರ್ನಾಲ್ಡ್ ಶಿವಾಜಿನಗರ ಅಂತ ಹತ್ತಾರು ಹೀರೋ-ಸೂಪರ್‍ಹೀರೋಗಳ ಫಿಲ್ಮು, ಚಿತ್ರ, ಪೋಸ್ಟರು ಎಲ್ಲ ಗುಡ್ಡೆ ಹಾಕಿ ಕಣ್ಣುಗುಡ್ಡೆಗಳಿಗೆ ಎಣ್ಣೆ ಬಿಟ್ಟುಕೊಂಡು ಹಗಲುರಾತ್ರಿ ತಪಸ್ಸು ಮಾಡಿದೆ. ಕೊನೆಗೆ ಒಂದುದಿನ, ವಿಶ್ವಾಮಿತ್ರನಿಗೆ ಮೇನಕೆ ಇಳಿದು ಬಂದಹಾಗೆ, ನನ್ನೆದುರಿಗೆ ನನ್ನ ಭವಿಷ್ಯದ ಹೀರೋ ಬಂದೇಬಿಟ್ಟ! ಯಾರವನು ಅಂತೀರಿ? ಸೂಪರ್‍ಮ್ಯಾನ್! ಗಾಳಿಯಲ್ಲಿ ಹಾರಾಡುವ, ಇಂದ್ರಲೋಕಕ್ಕೆ ಕ್ಷಣಮಾತ್ರದಲ್ಲಿ ನೆಗೆಯುವ, ಪ್ಯಾಂಟ್ ಮೇಲೆ ಚಡ್ಡಿಹಾಕೋ ಸೂಪರ್‍ಮ್ಯಾನ್! ಮಾಡಿದರೆ ಈ ನನ್ಮಗನ ಪಿಚ್ಚರೇ ಮಾಡಬೇಕು ಅನ್ನುವ ಆವೇಶ ಮೈಮನಸ್ಸಿನಲ್ಲಿ ಅಫೀಮಿನ ಅಮಲಿನಂತೆ ತುಂಬಿಕೊಂಡಿತು.

ಕೂಡಲೇ ಮುಂಬೈ ರೈಲು ಹತ್ತಿದೆ. ಅಲ್ಲಿ ಗಲ್ಲಿಗಲ್ಲಿ ಅಲೆದಾಡಿದೆ. ಸೂಪರ್‍ಮ್ಯಾನ್ ಫಿಲ್ಮುಗಳು, ಪುಸ್ತಕಗಳನ್ನು ಕೊಂಡೆ. ಚೀಪಾಗಿ ಸಿಗುತ್ತೆ ಅಂತ ಹೋಲ್‍ಸೇಲ್ ಅಂಗಡಿಗೆ ಹೋಗಿ ಒಂದೊಂದು ಮೀಟರ್ ನೀಲಿ ಮತ್ತು ಕೆಂಪುಬಟ್ಟೆ ಕೊಂಡುತಂದೆ. ನಮ್ಮೂರ ಟೈಲರ್ ಕಮ್ ಫ್ಯಾಶನ್‍ಡಿಸೈನರ್ ಹಮೀದನ ಬಳಿ ಬಂದು ಆ ಬಟ್ಟೆಗಳನ್ನು ಕೊಟ್ಟು , ನಿಂತಲ್ಲೇ ಒಂದು ಚೀಟಿಯಲ್ಲಿ ಸೂಪರ್‍ಮ್ಯಾನ್ ಚಿತ್ರ ಬರೆದು ಅಂಗಿಪ್ಯಾಂಟುಚಡ್ಡಿ ಹೇಗೇಗೆ ಬರಬೇಕು ಅಂತ ವಿವರಿಸಿ ಕೂಡ್ಲೆ ಮಾಡು ಮಾರಾಯ ಅಂತ ಗೋಗರೆದು ಆರ್ಡರ್ ಕೊಟ್ಟೆ. ಮೂರುದಿನದಲ್ಲಿ ಕತ್ತರಿಸಿ ಹೊಲಿದು ಎಸೀತೀನಿ ಅಂತ ಭರವಸೆ ಕೊಟ್ಟ.

ನಾನೀಗ ಮಾಡಕ್ಕೆ ಹೊರಟಿರೋ ಫಿಲ್ಮು ಅಂತಿಂಥಾದ್ದಲ್ಲ ಕಣ್ರೀ, ಹಾಲಿವುಡ್ಡಿಂದು. ಆಂಗ್ಲರ ಸಿನೆಮ! ಸೂಪರ್‍ಮ್ಯಾನ್ ಹಾರೋದು, ನೆಗೆಯೋದನ್ನೆಲ್ಲ ಸ್ಪೆಷಲ್ಲಾಗಿ ನೈಜ ಅನ್ನುವಂತೆ ತೋರಿಸಬೇಕಾದರೆ ಕ್ರೋಮ್ ಅನ್ನುವ ತಂತ್ರಜ್ಞಾನ ಬೇಕು. ಅದಕ್ಕೂ ಒಬ್ಬ ಪರಿಚಯದ ಟೆಕ್ನಿಷಿಯನ್ ಅಂಗಡಿಗೆ ಹೋದೆ. ಅವನು ಎರಡುಲಕ್ಷ ಆಗುತ್ತೆ ಅಂದಾಗ, ‘ಸರಿ ಈಗ ಬರ್ತೀನಿ ಅರ್ಜೆಂಟ್ ಕೆಲಸ ಇದೆ’ ಎಂದು ಈಚೆ ಬಂದು ನೀರು ಕುಡಿದೆ. ಎರಡುಲಕ್ಷ ಚೆಲ್ಲೋದಾದರೆ ಇವನ ಹತ್ರ ಯಾಕ್ ಬರ್ತಿದ್ದೆ ಸ್ವಾಮಿ, ಅದೇ ದುಡ್ಡಲ್ಲಿ ನಾಕು ಫಿಲಮ್ ಮಾಡಿ ಚಿಂದಿ ಉಡಾಯಿಸ್ತಿದ್ದೆ! ಇವನ ಕ್ರೋಮ್ ಮನೆ ಹಾಳಾಗಲಿ ಅಂತ ಶಾಪಹಾಕಿ ಮತ್ತೆ ಹೋಲ್‍ಸೇಲ್ ಅಂಗಡಿಯಿಂದ ಒಂದು ದೊಡ್ಡ ಥಾನು ಹಸಿರುಬಟ್ಟೆ ಖರೀದಿಸಿದೆ. ಇದನ್ನು ಒಂದು ಲಾರಿಗೆ ಪರದೆಯಂತೆ ಇಳಿಬಿಟ್ಟರೆ, ಅದೇ ಕ್ರೋಮು!

ನಮ್ಮೂರಲ್ಲಿ ಅತಿಮಾನುಷ ವ್ಯಕ್ತಿಗಳಿಗೇನೂ ಬರವಿಲ್ಲ. ಶಫೀಕ್ ಶೇಖ್ ಕೂಡ ಅಂಥವನೇ. ಯಾಕೆಂದರೆ, ದೂರದಿಂದಾಗಲೀ ಹತ್ತಿರದಿಂದಾಗಲೀ ಯಾವ ಆಂಗಲ್‍ನಿಂದ ನೋಡಿದರೂ ಅವನು ಮನುಷ್ಯಪ್ರಾಣಿಯ ಹಾಗೆ ಕಾಣಿಸ್ತಾ ಇರಲಿಲ್ಲ!

ಬಟ್ಟೆಚಪ್ಪಲಿ ಸಮೇತ ಅವನನ್ನು ಎತ್ತಿ ತೂಕಕ್ಕೆ ಹಾಕಿದರೂ ಮೂವತ್ತು ಕೇಜಿ ದಾಟ್ತಿರಲಿಲ್ಲ! ಹಂಚಿಕಡ್ಡಿಗೆ ಪ್ಯಾಂಟು ಹಾಕಿದ ಹಾಗೆ ಓಡಾಡ್ತಿದ್ದ ಈ ಹುಡುಗನ ಒಳಗೆ ಫಿಲ್ಮ್ ಮಾಡಬೇಕು ಅನ್ನುವ ಆಸೆ ಮಾತ್ರ ಅದಮ್ಯವಾಗಿತ್ತು. ಒಂದು ದಿನ ಇವನನ್ನು ಹತ್ತಿರ ಕೂರಿಸಿಕೊಂಡು, ‘ನೋಡಯ್ಯ ನಾನೊಂದು ಪಿಚ್ಚರ್ ತೆಗೀತಿದ್ದೇನೆ.

ಮಾಲೆಗಾಂವಿನ ಸೂಪರ್‍ಮ್ಯಾನ್ ಅಂತ. ಹೀರೋ ಯಾರು ಹೇಳು? ನೀನೇ!’ ಅಂತ ಹೇಳಿ ಭುಜ ತಟ್ಟಲು ಹೋದರೆ, ಅವನು ಕರೆಂಟು ಶಾಕ್ ಹೊಡೆಸಿಕೊಂಡವರಂತೆ ಧಡ್ಡೆಂದು ನೆಲಕ್ಕೆ ಬಿದ್ದಿದ್ದ! ಆ ದಿನದ ನಂತರ ಹೋದಲ್ಲಿ ಬಂದಲ್ಲಿ ಕನಸಲ್ಲಿ ಎಚ್ಚರದಲ್ಲಿ ತಾನೇ ಸೂಪರ್‍ಮ್ಯಾನ್ ಅಂತ ಕನವರಿಸಿಕೊಂಡು, ಭ್ರಮೆಯಲ್ಲಿ ಅನ್ನೋಹಾಗೆ ಓಡಾಡುವುದನ್ನು ಶುರುಮಾಡಿದ.

ಮೂರುದಿನ ಬಿಟ್ಟು ಹಮೀದ್ ಹತ್ತಿರ ಹೋದರೆ, ಬಟ್ಟೆ ಎದುರಿಟ್ಟುಕೊಂಡು ತಲೆಕೆರೆಯುತ್ತ ಕೂತುಬಿಟ್ಟಿದಾನೆ ಬಡ್ಡೀಮಗ. “ಹೇಗೆ ಕತ್ತರಿಸಲಿ ಅಂತಾನೇ ತಿಳೀತಿಲ್ಲಣ್ಣ” ಅಂತ ತಿಪ್ಪೆ ಸಾರಿಸಿದ. ನನಗೆ ಕೋಪ ಬಂದರೂ ತೋರಿಸಿಕೊಳ್ಳದೆ, ಅವನಿಗೆ ಸೂಪರ್‍ಮ್ಯಾನ್‍ನ ಚಿತ್ರ, ಪೋಸ್ಟರ್ ಎಲ್ಲ ತೋರಿಸಿ, ಹೀಗೀಗೆ ಮಾಡಪ್ಪ ಅಂತ ಪುಸಲಾಯಿಸಿ ಅಲ್ಲೇ ಕೂತು ಬಟ್ಟೆ ಹೊಲಿಸಿಕೊಂಡೆ. ಪೂರ್ತಿ ಕೈಮುಚ್ಚುವ ನೀಲಿಅಂಗಿ, ಲೂಸುಲೂಸಾದ ನೀಲಿ ಪ್ಯಾಂಟ್, ಅದರ ಮೇಲೆ ಕೆಂಪು ಹನುಮಾನ್ ಚಡ್ಡಿ, ಅದಕ್ಕೊಂದು ಲಾಡಿ, ಕೆಂಪು ಸಾಕ್ಸು, ಬೆನ್ನ ಹಿಂದೆ ಬಾವುಟದಂತೆ ಹಾರಾಡೋ ಕೆಂಪುಶಾಲು – ಇವಿಷ್ಟು ಕೊನೆಗೂ ರೆಡಿಯಾದವು. ‘ಲೋ ಮಾರಾಯ, ಲೋ ಬಜೆಟ್ಟಿನ ಫಿಲ್ಮಿದು. ಇರೋದು ಒಂದೇ ಜೊತೆ ಬಟ್ಟೆ. ಚೆನ್ನಾಗಿ ನೋಡಿಕೋ’ ಅಂತ ಹೇಳಿ ಸೂಪರ್‍ಮ್ಯಾನ್ ಕೈಲಿ ಕೊಟ್ಟೆ. ಯಾವುದೋ ಅನ್ಯಲೋಕದ ಪರಮರಹಸ್ಯವನ್ನೇ ಗುರುವಿನಿಂದ ಪಡೆದ ಸೂಪರ್‍ಮ್ಯಾನ್‍ನ ಹಾಗೆ, ಬಹಳ ಭಯಭಕ್ತಿಯಿಂದ ಈ ಬಟ್ಟೆಯ ಕಟ್ಟು ತಗೊಂಡ!

ನಮ್ಮೂರಿನ ಹೈಕಳ ಸಮಯಪ್ರಜ್ಞೆಯೋ ಜಗದ್ವಿಖ್ಯಾತ. ಅವತ್ತು ಮುಂಜಾನೆ ಒಂದು ಲೊಕೇಶನ್ ಗೊತ್ತು ಮಾಡಿಕೊಂಡು ಮುಹೂರ್ತ ಇಟ್ಟುಕೊಂಡು ಕರೆದರೆ, ಒಬ್ಬೊಬ್ಬರೂ ಒಂದೊಂದು ಸಮಯಕ್ಕೆ ಕವಳ ಹಾಕ್ಕೊಂಡು ಕುಂಟುತ್ತಾ ಬರುವ ಅಜ್ಜಮ್ಮನ ಹಾಗೆ ನಿಧಾನವಾಗಿ ಪ್ರತ್ಯಕ್ಷರಾದರು. ಎಲ್ಲ ಬಂದ ಮೇಲೆ ಎಣಿಸಿನೋಡಿದರೆ ಒಂದು ತಲೆ ಕಡಿಮೆ ಇತ್ತು. ಬಡ್ಡೀಮಗ ಸೂಪರ್‍ಮ್ಯಾನೇ ಬಂದಿರಲಿಲ್ಲ! ಕನಸು ಕಾಣುತ್ತ ನಡೆಯುವಾಗ ಕನಸೇ ನಿಜವಾಗಿ ಆಕಾಶಕ್ಕೆ ಹಾರಿಹೋದನೋ ಅಥವಾ ತಲೆತಿರುಗಿ ಯಾವುದಾದರೋ ಹೊಂಡಕ್ಕೆ ಬಿದ್ದನೋ ಅಂತ ಎಲ್ಲರೂ ಚಿಂತಾಮಗ್ನರಾಗಿ ಹುಡುಕಲು ಶುರುಮಾಡಿ ಅರ್ಧಗಂಟೆಯಾದ ಮೇಲೆ ಗಾಳಿಗೆ ಸಿಕ್ಕಿದ ಕಂಗಿನಮರದಂತೆ ಓಲಾಡುತ್ತಾ ಬಂದ. ಉಗಿದು ಉಪ್ಪಿನಕಾಯಿ ಹಾಕಿದೆ. ಹೀಗೆ ಅಂತೂ ಇಂತೂ ಮುಹೂರ್ತ ಮುಗಿಯಿತು.

ಸೂಪರ್‍ಮ್ಯಾನ್ ಚಿತ್ರದ ಚಿತ್ರೀಕರಣ ಶುರುವಾಯಿತು. ನಮ್ಮ ಯುನಿಟ್ ಹೋದಲ್ಲೆಲ್ಲ ಜನವೋಜನ. ಇದ್ಯಾರು ನೀಲಿಬಟ್ಟೆಯ ಮೇಲೆ ಕೆಂಪುಚಡ್ಡಿ ಹಾಕ್ಕೊಂಡು ವೀರಾಧಿವೀರನಂತೆ ನಡೆದುಹೋಗೋನು ಅಂತ ಜನರಿಗೆ ಕುತೂಹಲ. ನಮ್ಮ ಫಿಲ್ಮು ನದಿಯಲ್ಲಿ, ಗುಡ್ಡದಲ್ಲಿ, ರೋಡಲ್ಲಿ, ಗ್ಯಾರೇಜಲ್ಲಿ ಎಲ್ಲೆಂದರಲ್ಲಿ ನಡೀತಾಇತ್ತು. ಖಳನಾಯಕನನ್ನು ಮಟ್ಟಹಾಕಬೇಕಾದರೆ ಸೂಪರ್‍ಮ್ಯಾನ್ ಹೀಗೆ ಮಾಲೆಗಾಂವಿನ ತುಂಬ ಓಡಾಡ್ತ ಹಾರಾಡ್ತ ಇರುವುದು ಅಗತ್ಯವೂ ಆಗಿತ್ತು. ಒಂದುದಿನ ನಮ್ಮ ಸೂಪರ್‍ಮ್ಯಾನ್, ಖಳನಾಯಕನನ್ನು ಹೊಡೆಯಲು ಲೈಟ್‍ಕಂಬ ಏರುವ ಸೀನು ಇಟ್ಟುಕೊಂಡಿದ್ದೆವು. ಆ ಕಂಬವೋ ಬುಡಗಟ್ಟಿಯಿಲ್ಲದೆ ಓಲಾಡುತ್ತಾ ಇತ್ತು. ಸುತ್ತ ನೆರೆದ ಇಡೀ ಹಳ್ಳಿ! ದೇವರ ಕೃಪೆಯಿಲ್ಲದೆ ಕಂಬ ಬಿದ್ದಿದ್ದರೆ ಹತ್ತಿರದ ಅಷ್ಟೂ ಜನ , ಸೂಪರ್‍ಮ್ಯಾನೂ ಸೇರಿ ಕರಟಿ ಇದ್ದಿಲಾಗಿ ಹೋಗುತ್ತಿದ್ದರು. ಪುಣ್ಯಕ್ಕೆ ಏನೂ ಆಗಲಿಲ್ಲ! ಮರುದಿನ ಈ ಇಡೀ ಚಿತ್ರೀಕರಣದ ಫೋಟೋ ಸಹಿತ ವರದಿ ನಮ್ಮೂರ ಪತ್ರಿಕೆಯಲ್ಲಿ ಬಂತು. ಆದರೆ, ವರದಿಯಲ್ಲಿ ನಮ್ಮ ಶಫೀಕನನ್ನು ಮಾತ್ರ ಸ್ಪೈಡರ್‍ಮ್ಯಾನ್ ಮಾಡಿಬಿಟ್ಟಿದ್ದರು!

ಸಿನೆಮ ಅಂದರೆ ನನ್ನ ಊರಿಗೇ ಊರೇ ತಲೆಕೆಟ್ಟು ಕುಣಿದರೂ, ನಾವ್ಯಾರೂ ಇಮಾಮ್‍ಸಾಬಿಯ ನಿಯಮಗಳನ್ನು ಮುರಿಯುವಂತಿಲ್ಲ. ಅದೆಂದರೆ, ಮಾಲೆಗಾಂವಿನ ಹೆಣ್ಣುಮಕ್ಕಳು ಸಿನೆಮಗಳಲ್ಲಿ ನಟಿಸುವುದಾಗಲೀ, ಥಿಯೇಟರಿಗೆ ಹೋಗಿ ಪಿಚ್ಚರು ನೋಡುವುದಾಗಲೀ ಸಂಪೂರ್ಣ ನಿಷಿದ್ಧ. ಇದಕ್ಕೆ ವಿರುದ್ಧವಾಗಿ ಹೋದವರೆಲ್ಲ ನಮ್ಮೂರಿನ ಖಬರಸ್ತಾನದಲ್ಲಿ ತಣ್ಣಗೆ ಮಲಗಿ ಆಕಾಶ ನೋಡ್ತಿದ್ದಾರೆ. ಸಾಯುವ ಮೊದಲು ಈ ಪಿಚ್ಚರು ಪೂರ್ತಿಮಾಡಬೇಕು ಅಂದುಕೊಂಡಿದ್ದರಿಂದ ನಾನು ನಿಯಮ ಮುರಿಯುವ ಸಾಹಸಕ್ಕೆ ಕೈಹಾಕದೆ, ಪಕ್ಕದೂರಿನಿಂದ ಒಂದು ಹುಡುಗಿಯನ್ನು ಎರಡು ದಿನದ ಮಟ್ಟಿಗೆ ಕರೆತಂದೆ. ಅವಳೇ ನಮ್ಮ ಪಿಚ್ಚರಿನ ಹೀರೋಯಿನ್! ನಮ್ಮ ಪಿಚ್ಚರು ಬಹಳ ಲೋ ಬಜೆಟ್ಟಿನದು. ನಿನಗೆ ಬಿಸ್ಲೆರಿಗಿಸ್ಲೆರಿ ಕೊಡೋದಕ್ಕೆ ನಮ್ಮಲ್ಲಿ ದುಡ್ಡಿಲ್ಲಮ್ಮ! ನಿನ್ನ ಊಟತಿಂಡಿಯ ವ್ಯವಸ್ಥೆ ನಿನ್ನದೇ. ಮೇಕಪ್ಪೂ ನಿನ್ನದೇ, ಬಟ್ಟೆಯೂ ನಿನ್ನದೇ – ಅಂತ ಗಾಳಿದೀಪಗಳೆಲ್ಲ ನಿನ್ನದೇ ಅನ್ನುವ ಪದ್ಯಹಾಡಿ ಅವಳ ಕೈಯಿಂದ ಕೆಲಸ ಮಾಡಿಸಿಕೊಂಡೆ. ಮಾಲೆಗಾಂವಿನ ಚಿತ್ರದಲ್ಲಿ ನಟಿಸಿದರೆ ಅವಕಾಶಗಳು ಹುಡುಕಿಕೊಂಡು ಬರ್ತವೆ ಅನ್ನುವ ನಂಬಿಕೆಯುಂಟು. ತುಟಿಪಿಟಕ್ಕೆನ್ನದೆ ಈ ಹುಡುಗಿ ನನ್ನ ಚಿತ್ರದಲ್ಲಿ ಎರಡು ದಿನ ನಟಿಸಿ ಹೋದಳು. ನಿಮ್ಮೆದುರಿಗೆ ಇದೆಲ್ಲ ಹೇಳಿಕೊಂಡರೆ ಶೋಷಣೆ ಅಂತ ಪಟ್ಟಿಕಟ್ಟುತ್ತೀರಿ. ಆದರೆ, ನನಗೂ ಆ ಹುಡುಗಿಗೂ ಇದು ಹೊಟ್ಟೆಪಾಡು, ಅಷ್ಟೇ.

ಇನ್ನು ವಿಲನ್ ಯಾರು ಅಂತೀರಿ? ನಮ್ಮ ಅಕ್ರಮ್ ಭಾಯಿಯೇ ವಿಲನ್! ಅವನೇ ನಮ್ಮ ಚಿತ್ರದ ಫೋಟೋಗ್ರಾಫರ್, ಎಡಿಟರ್, ಮ್ಯೂಸಿಕ್ ಡೈರೆಕ್ಟರ್ – ಎಲ್ಲವೂ! ಚಿತ್ರದ ಮೊದಲರ್ಧದ ಎಲ್ಲಾ ಕೆಲಸ ಚಕಾಚಕ್ ಮಾಡಿ ಒಂದು ಹಂತಕ್ಕೆ ಬಂದಾದ ಮೇಲೆ, ತಲೆಬೋಳಿಸಿಕೊಂಡು ವಿಲನ್ ಆದ. ಈ ವಿಲನ್ನಿಗೆ ಕೊಳಕು ಅಂದರೆ ಬಹಳ ಇಷ್ಟ. ಇಡೀ ಮಾಲೆಗಾಂವಿನಲ್ಲಿ ಜನ ಎಲ್ಲೆಂದರಲ್ಲಿ ಥೂಥೂ ಎಂದು ತುಪ್ಪುತ್ತಾ ಇರಬೇಕು, ಗುಟಕಾ ತಿಂದು ಇರೋಬರೋ ಗೋಡೆಗಳಲ್ಲಿ ಉಗುಳಬೇಕು ಅಂತ ಬಯಸುವ ದುಷ್ಟ ಅವನು. ಅಂತಹ ಖಳನನ್ನು ಹಿಡಿದು ತಲೆ ಒಡೆದು ಮಾಲೆಗಾಂವನ್ನು ರಕ್ಷಿಸುವವನು ಸೂಪರ್‍ಮ್ಯಾನ್. ಇದು ಕತೆ. ನಡುನಡುವೆ, ಖಳ ತನ್ನ ಬಲಿಪಶುಗಳಾಗಿ ಮಕ್ಕಳನ್ನು, ಹೆಂಗಸರನ್ನು ಬಳಸಿಕೊಳ್ಳುತ್ತಾನೆ. ಮಕ್ಕಳನ್ನು ಎತ್ತಿ ಬ್ರಿಜ್ ಮೇಲಿಂದ ನೀರಿಗೆ ಎಸೆಯುತ್ತಾನೆ. ಸೂಪರ್‍ಮ್ಯಾನ್ ಹೋಗಿ ಮಕ್ಕಳನ್ನು ನೀರಿಂದ ರಕ್ಷಿಸಿ ತರುತ್ತಾನೆ. ಮಕ್ಕಳೇನೋ ಖುಷಿಯಿಂದಲೇ ಜಿಗಿದು ನೀರಿಗೆ ಬಿದ್ದರು. ಆದರೆ ನಮ್ಮ ಶಫೀಕ್ ಸಾಹೇಬರಿಗೆ ಈಜೋದಕ್ಕೆ ಬರೋಲ್ಲವೆ! ಅವನು ನಾಯಿಯ ಬಾಯಿಂದ ಹಿಮ್ಮೆಟ್ಟುವ ಬೆಕ್ಕಿನ ಹಾಗೆ ನೀರು ನೋಡಿ ಹಿಂದೆ ಹಾರುತ್ತಿದ್ದ. ನಾವು ರೋಸಿಹೋಗಿ ಕೊನೆಗೆ ಅವನನ್ನು ಬಲಾತ್ಕಾರದಿಂದ ನೀರಿಗೆ ಹಾಕಿ ಶಾಟ್ ತಗೊಂಡೆವು. ಅದಾಗಿ ಎರಡುದಿನ ಸೂಪರ್‍ಮ್ಯಾನ್ ನಡುಗುತ್ತ “ಚಳಿಚಳಿ!” ಅಂತ ಕುಂಯ್‍ಗುಡುತ್ತಿದ್ದ!

ನಮ್ಮ ಪಿಚ್ಚರಿಗೆ ದುಡ್ಡಿನದೇ ಮುಗ್ಗಟ್ಟು. ಹೊರಗಿನ ಜನಕ್ಕೆ ಈ ಹುಡುಗರು ಬಹಳ ಖುಷಿಯಿಂದ ಓಡಾಡಿಕೊಂಡು ಶೂಟಿಂಗ್ ಮಾಡುತ್ತಿದ್ದಾರೆ ಅಂತ ಅನ್ನಿಸಿದರೂ ನಾವು – ಗೆಳೆಯರಿಗೆ, ಈ ಆರ್ಥಿಕಮುಗಟ್ಟಿನ ಚಿಂತೆಯೇ ತಲೆಯಲ್ಲಿ ತುಂಬಿಕೊಂಡಿತ್ತು. ಆಗ ಕೆಲವು ವರ್ತಕರು, ನಾವು ದುಡ್ಡು ಕೊಡ್ತೇವೆ, ಆದರೆ ನಮ್ಮ ಅಂಗಡಿ ಪಿಚ್ಚರಲ್ಲಿ ಬರಬೇಕು ಅಂತ ಹೇಳಿದರು. ಹೊಳೆಯಲ್ಲಿ ಬಿದ್ದವನಿಗೆ ಹಿಡಿಯಲು ಯಾವ ಜೊಂಡಾದರೇನು? ನಮ್ಮ ಸ್ಕ್ರಿಪ್ಟ್ ರೈಟರ್ ಫರೋಗ್, ಕತೆಯನ್ನು ಹೇಗೆ ಬೇಕಾದರೂ ತಿರುಚಿ ಬರೀತೇನೆ ಅಂತ ಹುರಿದುಂಬಿಸಿದ. ಲಲ್ಲೆ ಮಿಲ್ಕ್ ಸೆಂಟರ್ – ಮಾಲೆಗಾಂವಿನ ಜನಕ್ಕೆಲ್ಲ ಗೊತ್ತಿರುವ ಹಾಲಿನಂಗಡಿ. ಖಳನೆದುರು ಏಗಲಾಗದೆ ಬಳಲಿ ಬೆಂಡಾಗಿ ಕೂತ ಸೂಪರ್‍ಮ್ಯಾನಿಗೆ ಅವನ ತಂದೆ ಬಂದು “ಮಗಾ, ಲಲ್ಲೆ ಅಂಗಡಿಯ ಹಾಲು ಕುಡಿ. ಹಾರಲು ಶಕ್ತಿ ಬರುತ್ತೆ” ಅಂತ ಹೇಳುತ್ತಾನೆ. ಸೂಪರ್‍ಮ್ಯಾನ್, ಲಲ್ಲೆಗೆ ಹೋಗಿ ಹಾಲು ಕುಡಿದು ಭೀಮಬಲ ಪಡೆಯುತ್ತಾನೆ! ಲಲ್ಲೆಯ ಮಾಲೀಕ ಕೊಟ್ಟ ಎಂಟುಸಾವಿರದಿಂದ ನಮಗೂ ಭೀಮಬಲ ಬಂತು!

ನೀನು ಮಾಡ್ತಾಇರೋದು ಕಾಪಿ ಅಲ್ಲವಾ ಅಂತ ಕೇಳೋರಿಗೆ ನಾನು ಇಂತಹ ದೃಶ್ಯಗಳನ್ನು ತೋರಿಸ್ತೇನೆ. ಇದು ಹೇಗೆ ಸ್ವಾಮಿ ಕಾಪಿ ಆಗುತ್ತೆ? ಹಾಲಿವುಡ್ ಫಿಲ್ಮಲ್ಲಿ ಹಾಲು ಕುಡಿಯೋ ಸೂಪರ್‍ಮ್ಯಾನನ್ನು ತೊರಿಸಿ ನೋಡೋಣ! ಹೆಸರು ಎತ್ತಿಕೊಂಡ ಮಾತ್ರಕ್ಕೆ ಚಿತ್ರವೇ ಕಾಪಿ ಆಗಿಬಿಡುತ್ತಾ? ನಮ್ಮ ಸೂಪರ್‍ಮ್ಯಾನಿಗೆ ಟೈಟ್‍ಫಿಟ್ ಇಲ್ಲ, ದೊಗಳೆ ಅಂಗಿಪ್ಯಾಂಟುಗಳಿವೆ. ಎಸ್ ಅನ್ನೋ ಜಾಗದಲ್ಲಿ ಎಮ್ ಅನ್ನೋ ಅಕ್ಷರಾನ ಎದೇಲಿ ಕೊರೆದಿದ್ದೇವೆ. ಅವನು ಡ್ಯುಯೆಟ್ ಹಾಡೋದು, ಕುಣಿಯೋದು ಪಕ್ಕದ ಹಳ್ಳಿಯ ಲೋಕಲ್ ಸ್ಟಾರ್ ಜೊತೆ. ಅವನು ಹಾರಾಡಿದಾಗ ಕಾಣೋ ಊರು ನಮ್ಮದು. ನಮ್ಮ ಜನ, ನಮ್ಮ ಮನೆ, ನಮ್ಮ ಆಡು, ಕುರಿ, ಕೋಣ! ನಾವಿಲ್ಲಿ ಮಾತಾಡ್ತಾ ಇರೋದು ನಮ್ಮೂರ ಸಮಸ್ಯೆಗಳ ಬಗ್ಗೆ. ಉದಾಹರಣೆಗೆ ನಮ್ಮೂರಲ್ಲಿ ಮೊಬೈಲ್ ನೆಟ್‍ವರ್ಕಿನ ಸಿಗ್ನಲ್ ಸಮಸ್ಯೆ ಇದೆ. ಟವರ್ ಹತ್ತಿರ ಮೊಬೈಲಿನಲ್ಲಿ ಮಾತಾಡುವಾಗ ಸೂಪರ್‍ಮ್ಯಾನ್, ‘ಒಂದ್ನಿಮಿಷ ತಾಳು’ ಅಂತ ಹೇಳಿ ಟವರ್ ತುದಿಗೆ ಗಾಳಿಯಲ್ಲೇ ಹಾರಿಹೋಗಿ, ‘ಸರಿ ಈಗ ಹೇಳು’ ಅಂತಾನೆ! ಇದೂ ಕಾಪೀನಾ?

ಇರ್ಲಿ ಬಿಡಿ, ನಾನು ಇಂತಹ ಚಿಲ್ಲರೆ ವಿಷಯಗಳಿಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ನಿಜವಾಗಿ ತಲೆಕೆಡಿಸಿಕೊಳ್ಳಬೇಕಾದದ್ದು ನಮ್ಮ ಸೂಪರ್‍ಮ್ಯಾನ್ ತಂದಿಟ್ಟ ಸಮಸ್ಯೆಗೆ. ಹಗಲೂರಾತ್ರಿ ನಡೀತಿದ್ದ ಶೂಟಿಂಗಿನಲ್ಲಿಯೂ ಇರುತ್ತ, ಹಗಲು ಹೊತ್ತು ಮಿಲ್ಲಿನಲ್ಲಿ ಕೆಲಸ ಮಾಡುತ್ತ, ಸಿಗೋ ಎರಡುಮೂರು ಗಂಟೆ ನಿದ್ದೆಯಲ್ಲೂ ಬಣ್ಣದ ಕನಸುಗಳನ್ನು ಕಾಣುತ್ತ ಬಿಜಿಯಾಗಿದ್ದ ಶಫೀಕ್ – ಇಷ್ಟೇಲ್ಲ ಉಪದ್ವ್ಯಾಪಗಳ ನಡುವೆಯೇ ಹೆಣ್ಣು ಕೂಡ ನೋಡಿಕೊಂಡು ಬಂದು ಲಗ್ನ ಫಿಕ್ಸ್ ಮಾಡಿಕೊಂಡಿದ್ದ! ಇಂಥ ಸಣಕಲನಲ್ಲಿ ಅದೇನು ಕಂಡಳೋ, ಈಗಿಂದೀಗ ಈ ಸೂಪರ್‍ಮ್ಯಾನನ್ನು ವರಿಸಿ ಅತಿಮಾನುಷಳಾಗಿಬಿಡಬೇಕು ಅನ್ನುವ ತೆವಲು ಅವಳಿಗೂ ಹತ್ತಿದ್ದ ಹಾಗಿತ್ತು. ಶೂಟಿಂಗಿಗೆ ನಾಲ್ಕುದಿನ ವಿರಾಮ ಕೊಟ್ಟು ನಾವೆಲ್ಲ ಶಫೀಕನ ಮದುವೆಯಲ್ಲಿ ಸಂಭ್ರಮದಿಂದ ಓಡಾಡಿ ಹೋಳಿಗೆಯೂಟ ಉಂಡು ಬಂದೆವು. ಮದುವೆಗೌಜಲ್ಲಿ ಅರಿಷಿಣ ಪೂಸಿಕೊಂಡು ಮುಖ ಹಾಳು ಮಾಡಿಕೊಳ್ಳಬೇಡವೋ, ಶೂಟಿಂಗ್ ಇದೆ ಅಂತ ನೆನಪಿಸಿ ಶಫೀಕನಿಗೆ ಕಿವಿ ಹಿಂಡಿದೆ. ಚಿತ್ರೀಕರಣದ ಮುಂದುವರೆದ ಭಾಗವೋ ಎನ್ನುವ ಹಾಗೆ ಈ ಮದುವೆಯೂ ಫಿಲ್ಮಿಯಾಗಿ ಮುಗಿದುಹೋಯಿತು!

ಹೀಗೆ ಅನೇಕ ಸುಖದುಃಖಗಳ ನಡುವೆ, ದುಗುಡ-ದುರಂತಗಳ ನಡುವೆ, ವಿಭ್ರಮ-ವಿಹ್ವಲತೆಗಳ ನಡುವೆ ಶೂಟಿಂಗ್ ಮುಗಿಯಿತು. ಇಡೀ ರೀಲನ್ನು ಹದಿನೈದು ದಿನ ಹಿಂದೆಮುಂದೆ ಜಗ್ಗಾಡಿ ಅಕ್ರಮ್ ಎಡಿಟ್ ಮಾಡಿಕೊಟ್ಟ. ಹಾಡುಗಳನ್ನು ಹಾಕಿದೆವು. ಫೈಟಿಂಗ್ ದೃಶ್ಯಗಳಿಗೆ ಸೌಂಡ್ ಕಂಪೋಸ್ ಮಾಡಿದೆವು. ಅಂತೂ ಕೊನೆಗೆ ಪಿಚ್ಚರು ಅದ್ಭುತ ಅನ್ನುವಷ್ಟು ಅದ್ಭುತವಾಗಿ ಬಂತು. ಐದನೇ ಕ್ಲಾಸೂ ತುಳಿಯದ ಹುಡುಗರು ತಯಾರಿಸಿದ ಪಿಚ್ಚರು ಅಂತ ಹಾಲಿವುಡ್ಡಿನ ಹೈಕಳೂ ಹೇಳಲಿಕ್ಕಾಗದಷ್ಟು ಅದ್ಧೂರಿಯಾಗಿ ರೆಡಿಯಾಯಿತು. ನಮ್ಮ ಹಳ್ಳಿಯ ಟೆಂಟು ಥಿಯೇಟರಲ್ಲಿ ಬಿಡುಗಡೆಯೂ ಆಯಿತು. ಊರಿನ ಹತ್ತುಸಮಸ್ತರು ಬಂದು ಪಿಚ್ಚರ್ ನೋಡಿ ಚಪ್ಪಾಳೆ-ಶಿಳ್ಳೆ ಹೊಡೆದು ಪಟಾಕಿ ಹಚ್ಚಿ ಸಂಭ್ರಮಿಸಿದರು. ಖುಷಿಯಿಂದ ಹಾರಾಡುತ್ತ ನಮ್ಮ ಹಸನ್‍ಭಾಯಿ ‘ಊUಔS ಈUಐಐ’ ಅಂತ ಒಂದು ತಿಂಗಳಿಡೀ ಬೋರ್ಡು ನೇತಾಡಿಸಿದ.

ಪಿಚ್ಚರ್ ಮಾಡೋದಕ್ಕೆ ದುಡ್ಡು ಬೇಕು ಅಂತೀರಿ ನೀವು. ನಮ್ಮ ಪಿಚ್ಚರಿಗೆ ಎಲ್ಲ ಕೂಡಿಕಳೆದು ನಾವು ಸುರಿದದ್ದು ಒಂದು ಲಕ್ಷಕ್ಕೂ ಕಮ್ಮಿ! ಹತ್ತಿ ಇಳಿದು ಓಡಿ ನೆಗೆದು ಕುಣಿಯುತ್ತಿದ್ದ ನಮ್ಮ ಜಂಗಮ ಕ್ರ್ಯೂ ಜೊತೆ, ಒಂದು ಲಾರಿ, ಅದಕ್ಕೆ ನೇತುಹಾಕಿದ ಹಸಿರಿನ ಕ್ರೋಮ್, ಕ್ರೇನಾದ ಎತ್ತಿನ ಗಾಡಿ, ಟ್ರ್ಯಾಕಿಂಗಿಗೆ ಸೈಕಲ್ ಸ್ಥಾಯಿಯಾಗಿದ್ದುಕೊಂಡು ಸಾಥ್ ಕೊಟ್ಟವು. ಇನ್ನು ಶೂಟಿಂಗಿನಲ್ಲಿ ಒಂದು ಸಲ ಹೊಳೆಯ ನೀರಿಗೆ ಬಿದ್ದರೂ ರಿಪೇರಿಯಾಗಿ ಬಂದು ನನ್ನ ಕನಸು ಕಾಪಾಡಿದ ಕ್ಯಾಮೆರಕ್ಕೂ ನಾನು ಋಣಿಯಾಗಿರಬೇಕು. ಹೇಳಿಕೇಳಿ ಇಡೀ ಪಿಚ್ಚರನ್ನು ತೆಗೆದಿದ್ದೇ ಈ ಒಂದು ಕ್ಯಾಮೆರದಿಂದ, ಸ್ವಾಮಿ!

ಕನಸುಗಳಿಗೆ ಸರಪಳಿ ಬಿಗಿಯುವುದು ಸಾಧ್ಯವಿಲ್ಲ. ಅವು ಯಾರಪ್ಪನ ಸ್ವತ್ತೂ ಅಲ್ಲ. ಜೇಬಿನ ದುಡ್ಡು ಬರುತ್ತದೆ, ಹೋಗುತ್ತದೆ. ಆದರೆ, ಪುಟ್ಟ ಎದೆಗೂಡೊಳಗೆ ನಾವು ಸದಾ ಕಾಯ್ದುಕೊಳ್ಳಬೇಕಾದ ಬೆಂಕಿಯಂಥ ಕನಸಿನ ಹಕ್ಕಿ ಗರಿಬಿಚ್ಚಿದರೆ ಎಷ್ಟು ಎತ್ತರಕ್ಕೂ ದೂರಕ್ಕೂ ಹಾರಿಕೊಂಡು ಹೋಗಬಲ್ಲುದು. ಬಾಲಿವುಡ್ ಮಂದಿಗೆ ತೋರಿಸೋದಕ್ಕೆ ಅಂತ ನಮ್ಮ ಸಿನೆಮದ ಪ್ರೀಮಿಯರ್ ಶೋ ಇಟ್ಟುಕೊಂಡಿದ್ದ ದಿನ, ಶೋ ಮುಗಿದ ಮೇಲೆ ಸಂತೃಪ್ತಿಯಿಂದ ತನ್ನ ಬದುಕಿನ ಶೋ ಕೂಡ ಮುಗಿಸಿ ಹೊರಟುಹೋದ ಶಫೀಕನ ಕಣ್ಣುಗಳಲ್ಲೂ ಇದ್ದದ್ದು ಅದೇ ಬೆಂಕಿಯೇ. ಕ್ಯಾನ್ಸರ್ ಬಂದು ಜೀವ ಹಿಂಡಿದರೂ ಸೂಪರ್‍ಮ್ಯಾನಾಗಿ ಸತ್ತೆನಲ್ಲ ಅನ್ನುವ, ನವಿಲಿನ ಗರಿಯಂಥ ಕನಸಿನ ಬೆಂಕಿ ಅದು

Read more from ಲೇಖನಗಳು
2 ಟಿಪ್ಪಣಿಗಳು Post a comment
  1. ಆಗಸ್ಟ್ 28 2015

    Nice write up.

    ಉತ್ತರ
  2. ಸೆಪ್ಟೆಂ 3 2015

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments