“ನೀನು” ಯಾರು? ಸತ್ಯ ಶೋಧನೆಗೆ ಸಮಿತಿ
– ಪ್ರವೀಣ್ ಕುಮಾರ್ ಮಾವಿನಕಾಡು
ಇತ್ತೀಚೆಗಷ್ಟೇ ವಾಲ್ಮೀಕಿ ಯಾರು ಎನ್ನುವ ಕೃತಿಯನ್ನು ಮುಟ್ಟುಗೋಲು ಹಾಕಿಕೊಂಡು ಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡ ಸರ್ಕಾರ, ಹೇಗಾದರೂ ಮಾಡಿ ಮತ್ತೆ ಆ ಪುಸ್ತಕ ಜನರನ್ನು ತಲುಪಲು ಬಿಡಬಾರದು ಎನ್ನುವ ಕಾರಣಕ್ಕಾಗಿ ಆಯ್ದ ವ್ಯಕ್ತಿಗಳಿಂದ ಕೂಡಿದ ಸತ್ಯ ಶೋಧನಾ ಸಮಿತಿಯೊಂದನ್ನು ರಚಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಈಗ ಉಪೇಂದ್ರ ನಿರ್ದೇಶಿಸಿ ನಟಿಸಿದ ಉಪ್ಪಿ2 ಚಿತ್ರದಲ್ಲಿ ಬರುವ ‘ನೀನು’ ಅಂದರೆ ಯಾರು ಎನ್ನುವ ಬಗ್ಗೆ ಸತ್ಯಶೋಧನೆ ಕೈಗೊಳ್ಳಲು ಹಂಪೆನಾಗ್ ಅವರ ನೇತೃತ್ವದಲ್ಲಿ ಸರಕಾರ ಇನ್ನೊಂದು ಸತ್ಯಶೋಧನಾ ಸಮಿತಿಯನ್ನು ರಚಿಸಿದೆ! ಅಲ್ಲದೇ ಉಪೇಂದ್ರ ಅವರು ತಮ್ಮ ಚಿತ್ರಕ್ಕೆ ಉಪ್ಪಿಟ್ಟು ಎನ್ನುವ ಹೆಸರನ್ನೇ ಏಕೆ ಇಟ್ಟರು,ಬಹುಜನರು ಸೇವಿಸುವ ಇತರ ಮಾಂಸಾಹಾರದ ಹೆಸರನ್ನು ಏಕೆ ಇಡಲಿಲ್ಲ ಎನ್ನುವ ಬಗ್ಗೆಯೂ ಸಮಿತಿ ಚರ್ಚಿಸಿ ಸರ್ಕಾರಕ್ಕೆ ತನ್ನ ವರದಿ ಒಪ್ಪಿಸಲಿದೆ.
ಈ ಮೊದಲು ಕೆಲವು ಕಾರಣಗಳಿಗಾಗಿ ಉಪೇಂದ್ರ ರವರ ಈ ಚಿತ್ರದ ಪ್ರದರ್ಶನಕ್ಕೆ ತಡೆ ನೀಡಲು ಸರ್ಕಾರ ಅಂದುಕೊಂಡಿತ್ತಾದರೂ ನಂತರ,ನ್ಯಾಯಾಲಯವು ಸರ್ಕಾರ ಕೊಡಲಿದ್ದ ಕಾರಣಗಳನ್ನು ಒಪ್ಪುವ ಸಾಧ್ಯತೆಗಳು ತೀರಾ ಕಮ್ಮಿ ಎನ್ನುವ ತಜ್ಞರ ಸಲಹೆಯ ಮೇರೆಗೆ ಈ ಸತ್ಯ ಶೋಧನಾ ಸಮಿತಿಯನ್ನು ರಚಿಸಿ ಆ ಸಮಿತಿಯಿಂದ ತಮಗೆ ಬೇಕಾದ ರೀತಿಯಲ್ಲಿ ವರದಿಯನ್ನು ಪಡೆದು ನಂತರ ಚಿತ್ರ ಪ್ರದರ್ಶನ ರದ್ದು ಮಾಡಲು ತೀರ್ಮಾನಿಸಿದೆ.ಆದ್ದರಿಂದ ಶ್ರೀ ಹಂಪೆನಾಗರಾಜು ಅವರ ನೇತೃತ್ವದಲ್ಲಿ ಆರು ಜನ ಸದಸ್ಯರನ್ನೊಳಗೊಂಡ ಸಮಿತಿ ರಚಿಸಲಾಗಿದೆ.
ಶೀಘ್ರದಲ್ಲೇ ಆ ನಿರ್ದೇಶಕರ ಅಧಿಕೃತ ಜಾತಿ ಪ್ರಮಾಣ ಪತ್ರವನ್ನು ತರಿಸಿಕೊಂಡು ಪರಿಶೀಲಿಸಿ ನಂತರ ಯಾವ ದೃಷ್ಠಿಕೋನದಲ್ಲಿ ಸತ್ಯ ಶೋಧನೆ ನಡೆಸಬೇಕು ಎನ್ನುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಸಮಿತಿಯ ಅಧ್ಯಕ್ಷರು ತಮ್ಮ ಪ್ರಥಮ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ನಿರ್ದೇಶಕನೇ ಸ್ವತಹ “ನೀನು ಅನ್ ನೌನು” ಎಂದು ಚಿತ್ರದ ಹೆಸರಿನ ಟ್ಯಾಗ್ಲೈನ್ ನಲ್ಲೇ ಹೇಳಿಕೊಂಡಿರುವುದರಿಂದ,ಸ್ವತಹ ಅವರಿಗೇ ಗೊತ್ತಿಲ್ಲದ ನೀನು ಅನ್ನೋನ ಬಗ್ಗೆ ಹೇಳಿ ನಾಡಿನ ಅವಿದ್ಯಾವಂತರಿಗೆ (ಮಾನ್ಯ ಸಚಿವರ ಪ್ರಕಾರ ಕಾಂಗ್ರೆಸ್ ಮತದಾರರಿಗೆ) ದಾರಿ ತಪ್ಪಿಸುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದ್ದು, ಈ ಚಿತ್ರವನ್ನು ನಿಷೇಧಿಸುವುದೇ ಸೂಕ್ತ ಎನ್ನುವುದು ಸದ್ಯದ ನಮ್ಮ ಅಭಿಪ್ರಾಯ ಎಂದೂ ಸಹಾ ಇದೇ ಸಂಧರ್ಭದಲ್ಲಿ ಅವರು ಮಾಧ್ಯಮಗಳಿಗೆ ತಿಳಿಸಿದರು.
ಸಮಿತಿ ವಿವರ:ಶ್ರೀ ಹಂಪೆನಾಗ್(ಅಧ್ಯಕ್ಷರು),ಸದಸ್ಯರು:ಶ್ರೀಮತಿ/ಕುಮಾರಿ ಬಾಯ್ಕಟ್ ಬೇಬಿ ಅಲಿಯಾಸ್ ಕಾಡಿನರಾಣಿ,ಪ್ರೊ.ದನವಿಂದ ರಾವ್,ಪ್ರೊ.ಭಾಗ್ ವಾನರ ಅಲಿಯಾಸ್ ಭಗವದ್ಗೀತೆ ಬಗ್ಗಿ,ಶ್ರೀಮತಿ.ವಿಭಾ ಬಿಳಿದಲೆ,ಬಂಜೆ ರಾಜಾ ಮತ್ತು ಹೋಗ್ ಲಾ..(ಹೊಚ್ಚ ಹೊಸಾ ಪರಿಚಯ).
ಇನ್ನು ಈ ಬಗ್ಗೆ ಹೇಳಿಕೆ ನೀಡಿದ ಸರಕಾರದ ಮುಖ್ಯ ಕಾರ್ಯದರ್ಶಿಯವರು,ಈ ಸಮಿತಿಯನ್ನು “ರಾಜ್ಯ ಬುದ್ಧಿಜೀವಿಗಳ ಗಂಜಿ ಭದ್ರತಾ ಮಸೂದೆ-೨೦೧೩”ರ ಅಡಿಯಲ್ಲಿ ರಚಿಸಲಾಗಿದ್ದು ಮುಂದಿನ ಎರಡು ವರ್ಷಗಳ ಕಾಲ ಕಾರ್ಯ ನಿರ್ವಹಿಸಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ ಎಂದರು.ಈ ಸಮಯದಲ್ಲಿ ಸಮಿತಿಯ ಪ್ರತೀ ಸದಸ್ಯರಿಗೂ ಬೆಂಗಳೂರಿನಲ್ಲಿ ಒಂದು ಬಂಗಲೆ,ಕಾರು,ದಿನಭತ್ಯೆಗಳ ಜೊತೆಗೆ ಮೂರು ಹೊತ್ತು ಗಂಜಿಯನ್ನೂ ಸಹಾ ಸರ್ಕಾರದ ವತಿಯಿಂದಲೇ ನೀಡಲಾಗುವುದು ಎಂದು ಅವರು ತಿಳಿಸಿದರು.
*ವಿ.ಸೂ:ಈ ಸುದ್ದಿಯು ಕೇವಲ ಸುಳ್ಸುದ್ದಿ ಹಾಗೂ ಕಾಲ್ಪನಿಕವಾಗಿದ್ದು,ಸರ್ಕಾರಗಳು ಇತ್ತೀಚಿಗೆ ತಮಗೆ ಬೇಕಾದಂತೆ ವರದಿಗಳನ್ನು ಪಡೆಯಲು ಬೇಕಾಬಿಟ್ಟಿ ಸತ್ಯ ಶೋಧನಾ ಸಮಿತಿಗಳನ್ನು ರಚಿಸುತ್ತಿರುವುದನ್ನು ನೋಡಿ ಕಲ್ಪಿಸಿಕೊಂಡಿದ್ದಾಗಿರುತ್ತದೆ. ಈ ಸುದ್ದಿಯು ಕೇವಲ ಮನರಂಜನೆಗಾಗಿ ಮಾತ್ರ.
ಅತ್ಯತ್ತಮ ಲೇಖನ!