ಸಂಲೇಖನಾ-ಸಂಥರಾ ಆತ್ಮಹತ್ಯೆಯೆ?
– ಡಾ| ಜಿ. ಭಾಸ್ಕರ ಮಯ್ಯ
ಇತ್ತೀಚೆಗೆ ರಾಜಸ್ತಾನ್ ಹೈಕೋರ್ಟ್ “ಸಂಲೇಖನಾ-ಸಂಥರಾ”ವನ್ನು ಕಾನೂನು ಬಾಹಿರಗೊಳಿಸಿರುವ ವಿಚಾರ ಜೈನ ಸಮುದಾಯದ ಸಾತ್ವಿಕ ಆಕ್ರೋಶಕ್ಕೆ ಕಾರಣವಾಗಿದೆ. ಜನಸಂಖ್ಯೆಯಲ್ಲಿ 1 ಶೇ.ದಷ್ಟೂ ಇರದ ಜೈನ ಸಮುದಾಯದ ಧಾರ್ಮಿಕ ಆಚರಣೆಯ ಮೇಲೆ ಇದು ನಿಜಕ್ಕೂ ತಾಲಿಬಾನ್ ಮಾದರಿಯ ವ್ಯವಹಾರವಾಗಿದೆ. ನಮ್ಮ ಮಾನವ ಹಕ್ಕು ಹೋರಾಟಗಾರರು ಹಾಗೂ ಪ್ರಾಣಿದಯಾ ಸಂಘದ ಮಹಾಮಹಿಮರಿಗೆ ಇರುವುದು ಕುರುಡು ಸಿದ್ಧಾಂತ ಪ್ರೀತಿ ಹೊರತು ಮಾನವ ಪ್ರೀತಿಯಲ್ಲ. ತಮ್ಮಷ್ಟಕ್ಕೆ ತಾವಿದ್ದು, ದೇಶದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡಿದ ಹಾಗೂ ನೀಡುತ್ತಿರುವ ಜೈನ ಸಮುದಾಯಕ್ಕೆ ನೋವುಂಟು ಮಾಡುವ ಈ ಕೆಲಸ ನಿಜಕ್ಕೂ ನೀಚತನದ್ದಾಗಿದೆ.
ನಾನೀಗ ಈ ಆಚರಣೆಯ ಸಂಕ್ಷಿಪ್ತ ವಿವರವನ್ನು ನೀಡುತ್ತೇನೆ:-
ಈ ಆಚರಣೆಯನ್ನು ಜೈನ ದಿಗಂಬರ ಪರಂಪರೆಯಲ್ಲಿ “ಸಂಲೇಖನಾ” ಎಂತಲೂ ಶ್ವೇತಾಂಬರದಲ್ಲಿ “ಸಲ್ಲೇಖನಾ” ಎಂತಲೂ ಕರೆಯುತ್ತಾರೆ. ಇದು ಜೈನರ ಹಲವಾರು ವ್ರತಗಳಲ್ಲಿ ಅತಿಶ್ರೇಷ್ಠವಾದ ವ್ರತರಾಜ.ಸಂಲೇಖನಾ ಮನಸ್ಸಿನ ಸಾಧನೆಯ ಒಂದು ಉಚ್ಚತಮ ಆಧ್ಯಾತ್ಮಿಕ ಸ್ಥಿತಿ.
ಮರಣದ ವಿಧಗಳು: ಮರಣಗಳಲ್ಲಿ ಪ್ರಮುಖವಾಗಿ ಎರಡು ವಿಧ. ಬಾಲ ಮರಣ ಮತ್ತು ಪಂಡಿತ ಮರಣ.ಇದನ್ನು ಇನ್ನೊಂದು ಬಗೆಯಲ್ಲಿ-ಅಕಾಮ ಮರಣ (ವಿವೇಕ ರಹಿತ, ಹಲವು ಬಾರಿ) ಹಾಗೂ ಸಕಾಮ ಮರಣ(ವಿವೇಕ ಸಹಿತ, ಒಂದೇ ಬಾರಿ) ಎಂತಲೂ ಕರೆಯುತ್ತಾರೆ.”ಗುಮ್ಮಟಸಾರ”ದ ಪ್ರಕಾರ ಬಾಲ ಮರಣವು ಚ್ಯುತ ಮತ್ತು ಚ್ಯಾವಿತವೆಂದು ಎರಡು ಬಗೆ. ಚ್ಯುತವೆಂದರೆ ಆಯುಷ್ಯ ತೀರಿದ ಬಳಿಕ ಬರುವ ಸಾವು. ಚ್ಯಾವಿತವೆಂದರೆ ವಿಷ, ರಕ್ತಕ್ಷಯ, ಧಾತುಕ್ಷಯ ಶಸ್ತಾಘಾತ, ಅಗ್ನಿದಾಹ,ಜಲದಿಂದ ಬರುವ ಸಾವು. ಇನ್ನೊಂದು ಬಗೆಯ ಮರಣಕ್ಕೆ ‘ತ್ಯಕ್ತ’ ಎನ್ನುತ್ತಾರೆ. ತ್ಯಕ್ತವೆಂದರೆ ರೋಗದಿಂದಉಂಟಾದ ಅಸಾಧ್ಯ ಮಾರಣಾಂತಿಕ ಪರಿಸ್ಥಿತಿಯಲ್ಲಿ ವಿವೇಕದಿಂದ ಶರೀರ ತ್ಯಾಗ ಮಾಡುವುದು.
ಜೈನ ಉತ್ತರಾಧ್ಯಯನ ಸೂತ್ರದ ಪ್ರಕಾರ ಪಂಡಿತ ಮರಣ – ವಲಯ, ವಸಟ್ಟ, ಅತ್ತೊಸಲ್ಲ, ತಭ್ಬವ ಗಿರಿಪಡಿಣ, ತರುಪಡಿಣ, ಜಲಪ್ಪವೇಸ, ಜಲಣಪ್ಪವೇಸ, ವಿಷಭಕ್ಖಣ, ಸತ್ಥೊವಾಡಣ, ವೇಹಾಣಸ, ಗಿದ್ದಪಿಟ್ಠ. ಈ ಹನ್ನೆರಡು ಬಾಲಮರಣ. ಅಂತೆಯೇ ಭಕ್ತಪ್ರತ್ಯಾಖ್ಯಾನ, ಇಂಗಿಣೀ ಮತ್ತು ಪಾದೋಪಗಮನ ಈ ಮೂರು ವಿಧಗಳನ್ನು ಪಂಡಿತ ಮರಣವೆಂದು ಕರೆಯಲಾಗುತ್ತದೆ.
ಜೈನ ಆಚರಣೆಯ ಸಂಲೇಖನಾ, ಅಥವಾ ಸಮಾಧಿಮರಣವು ನಿಜಕ್ಕೂ ಒಂದು ವಿಶಿಷ್ಟ ಆಚರಣೆ.ಜಗತ್ತಿನ ತತ್ವಶಾಸ್ತ್ರಜ್ಞರೆಲ್ಲಾ ಜೀವಿಸುವ ಕಲೆಯ ಬಗ್ಗೆ ಚಿಂತಿಸಿದ್ದಾರೆ. ಸಾವಿನ ಬಗೆಗೂ ಅತ್ಯಂತ ಗಂಭೀರವಾಗಿ ಚಿಂತಿಸಿದ್ದಾರೆ. ಆದರೆ ಯಾರೂ ಸಾವಿನ ಕಲೆಯ ಬಗೆ ಇಷ್ಟೊಂದು ಗಂಭೀರವಾಗಿ ಅಧ್ಯಯನ ನಡೆಸಿಲ್ಲ.ಜೈನದರ್ಶನವೊಂದೇ ಆ ಮಹಾನ್ ಕೊಡುಗೆಯನ್ನು ನೀಡಿದೆ. ಅದು ಮೃತ್ಯುಕಲೆಯನ್ನು ನಿಜಕ್ಕೂ ಅನ್ವೇಷಿಸಿದೆ.ಸಾವು ನಾನಾ ರೀತಿಯಿಂದ ಸಂಭವಿಸುತ್ತದೆ. ಆದರೆ, ಸಾವನ್ನು ವಿವೇಕದಿಂದ ಸ್ವೀಕರಿಸುವ ಕಲೆಯನ್ನು ಹಾಗೂ ಸ್ವಾಗತಿಸುವ ಕ್ರಮವನ್ನು ಜಗತ್ತಿನಲ್ಲಿ ಇದೊಂದೇ ದರ್ಶನ ನಮಗೆ ನೀಡುತ್ತದೆ.
ಸಂಲೇಖನಾ ಎಂದರೇನು?
ಜೀವನ ಮತ್ತು ಮರಣದ ಆಟ ಅನಂತ ಕಾಲದವರೆಗೂ ನಡೆಯುತ್ತಿರುತ್ತದೆ. ಆದರೆ, ಯಾವ ಸಾಧಕನು ಮೃತ್ಯುಕಲೆಯನ್ನು ಸಮ್ಯಕ್ ಅಧ್ಯಯನ ಮಾಡಿರುತ್ತಾನೊ ಆತ ಸಂತೋಷದಿಂದ ಶಾಂತಿಪೂರ್ವಕವಾಗಿ ಪ್ರಾಣ ತ್ಯಾಗ ಮಾಡುತ್ತಾನೆ. ಇದು ಮೃತ್ಯುವನ್ನು ಆಕಸ್ಮಿಕವಾಗಿ ಸ್ವೀಕರಿಸುವುದೂ ಅಲ್ಲ, ಅಂತೆಯೇ ಮೃತ್ಯುವಿಗೆ ಆಹ್ವಾನವೂ ಅಲ್ಲ. ಜೀವನದ ಅಂತಿಮ ಕ್ಷಣದವರೆಗೆ ಅತ್ಯಂತ ಜಾಗೃತೆಯಿಂದ ಕಳೆಯುವುದು. ಉದಾ:ಮೃತ್ಯುವನ್ನು ಹೀಗೆ ಸಂಬೋಧಿಸಿದಂತೆ-“ಬಾ ಮಿತ್ರ, ನಾನು ನಿನ್ನನ್ನು ಸ್ವಾಗತಿಸುತ್ತೇನೆ. ನನಗೆ ಶರೀರದ ಮೇಲೆ ಮೋಹವಿಲ್ಲ ನಾನು ನನ್ನ ಕರ್ತವ್ಯವನ್ನು ಪೂರ್ಣಗೊಳಿಸಿದ್ದೇನೆ” ಸಲ್ಲೇಖನಾ ಜೀವನದ ಅಂತಿಮ ಅವಶ್ಯಕ ಸಾಧನೆ. ಅದು ಜೀವನ ಮಂದಿರದ ಸುಂದರ ಕಲಶ.
ಯಾವ ಕ್ರಿಯೆಯಿಂದ ಶರೀರ ಮತ್ತು ಕಷಾಯಗಳು (ಕ್ರೋಧ, ಮಾನ, ಮಾಯಾ ಮತ್ತು ಲೋಭವೆಂಬ ಚತುಷ್ಟಯ) ದುರ್ಬಲ ಮತ್ತು ಕೃಶವಾಗುತ್ತದೊ ಅದು ಸಲ್ಲೇಖನಾ. ‘ಸಮ್’ ಎಂದರೆ, ಚೆನ್ನಾಗಿ ‘ಲೇಖನಾ’ ಎಂದರೆ ಕೃಶಗೊಳಿಸು. ಚಾವುಂಡರಾಯನ ‘ಚರಿತ್ರಸಾರ’ದ ಪ್ರಕಾರ-“ಬಾಹ್ಯ ಶರೀರದ ಮತ್ತು ಆಂತರಿಕ ಕಷಾಯಗಳ ಕಾರಣಗಳನ್ನು ಕಡಿಮೆಗೊಳಿಸುತ್ತಾ ಕ್ರಮೇಣ ಕ್ಷೀಣವಾಗಿಸುವುದು ಸಲ್ಲೇಖನಾ. “ಉತ್ತರಾಧ್ಯಯನ’ದ ಪ್ರಕಾರ “ಜೀವನದ ರಹಸ್ಯವನ್ನು ಗುರುತಿಸದವ ಮೃತ್ಯುವಿನ ರಹಸ್ಯವನ್ನೂ ಗುರುತಿಸಲಾರ. ಸಂಲೇಖನದಲ್ಲಿ ಸಾಧಕ ತನ್ನ ಶರೀರ ಮತ್ತು ಕಷಾಯಗಳನ್ನು ಎಷ್ಟೊಂದು ಕೃಶಗೊಳಿಸಿಕೊಳ್ಳುತ್ತಾನೆಂದರೆ ಅವನ ಅಂತರಮನದಲ್ಲಿ ಯಾವೊಂದು ಕಾಮನೆಯೂ ಉಳಿದಿರುವುದಿಲ್ಲ. ಅನಶನದಿಂದ ಪೂರ್ಣ ರೂಪದ ಸ್ಥೈರ್ಯವುಂಟಾಗುತ್ತದೆ.ಶ್ರಾವಕನ ದ್ವಾಶದವ್ರತಗಳಲ್ಲಿ ನಾಲ್ಕು ಶಿಕ್ಷಾವ್ರತಗಳಿವೆ. ಆಚಾರ್ಯ ಕುಂದಕುಂದರ ಪ್ರಕಾರ ಸಂಲೇಖನಾ ನಾಲ್ಕನೆಯ ಶಿಕ್ಷಾವ್ರತ. ಆದರೆ ಉಮಾಸ್ವಾತಿಯೇ ಮೊದಲಾದ ಉಳಿದ ಆಚಾರ್ಯರು ಇದನ್ನು ಒಪ್ಪುವುದಿಲ್ಲ.ಶಿಕ್ಷಾವ್ರತವನ್ನು ಅಧ್ಯಯನ ಮಾಡಲಾಗುತ್ತದೆ. ಆದರೆ ಸಂಲೇಖನಾ ಎಂಬುದು ಮೃತ್ಯುಸಮಯವು ಉಪಸ್ಥಿತವಾದಾಗ ಕೈಗೊಳ್ಳುವ ವ್ರತ. ಹಾಗಾಗಿ ಅದರಲ್ಲಿ ಅಭ್ಯಾಸಕ್ಕೆ ಎಡೆಯಿಲ್ಲ.
ಸಂಲೇಖನಾ ಆತ್ಮಹತ್ಯೆಯಲ್ಲ
ಸಂಲೇಖನಾವನ್ನು ಸತೀಪದ್ಧತಿ, ಆತ್ಮಹತ್ಯೆಗೆ ಹೋಲಿಸುವವರು ಜೈನ ದರ್ಶನದ ಅರಿವಿಲ್ಲದವರು.ಪರಿಸ್ಥಿತಿಗಳಿಂದ ಉತ್ಪೀಡಿತನಾದ ವ್ಯಕ್ತಿ ಆತ್ಮಹತ್ಯೆಮಾಡಿಕೊಳ್ಳುತ್ತಾನೆ. ಆತನ ಮನೋಕಾಮನೆಗಳುಪೂರ್ಣವಾಗಿರುವುದಿಲ್ಲ. ಆತ ಉದ್ವಿಗ್ನನಾಗಿರುತ್ತಾನೆ. ಆತ ಸಂಘರ್ಷಗಳಿಂದ ಪಲಾಯನ ಮಾಡುವ ಸ್ಥಿತಿಯಲ್ಲಿರುತ್ತಾನೆ. ಅಪಮಾನ, ಜಗಳ, ಸಾಲಬಾಧೆ, ಪ್ರೇಮವೈಫಲ್ಯ, ಜಗಳ, ಸೇಡು, ಕುಡಿತ-ಇತ್ಯಾದಿ ನಾನಾ ಕಾರಣಗಳಿಂದ ಬಾವಿಗೆ ಬಿದ್ದೊ, ನೇಣು ಹಾಕಿಕೊಂಡೊ, ವಿಷ ಕುಡಿದೊ, ಬೆಂಕಿ ಹಚ್ಚಿಕೊಂಡೊ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯ ಮನೋವೃತ್ತಿಯೊಂದಿಗೆ ಸಮಾಧಿ ಮರಣಹೊಂದುವ ವ್ಯಕ್ತಿಯನ್ನು ಹೋಲಿಸುವುದು ಮೂರ್ಖತನದ ಪರಮಾವಧಿ.
ಏಕೆಂದರೆ ಸಂಲೇಖನಾ ವ್ರತಧಾರಿಗೆ ಜೀವಿಸುವ ಇಚ್ಛೆ ಹೇಗೆ ಇರಕೂಡದೋ ಸಾಯುವ ಇಚ್ಛೆ ಕೂಡಾ ಇರಕೂಡದು. ಜೀವನ ಮತ್ತು ಮರಣ-ಇವು ಎರಡರ ಕುರಿತೂ ಆತ ಅನಾಸಕ್ತನಾಗಿರಬೇಕು. ವಾಸನಾ ಮುಕ್ತನಾಗಿರಬೇಕು. ಸಂಲೇಖನಾ ಎಂಬುದು ವಿಧಿಪೂರ್ವಕವಾಗಿ ಮಾಡುವ ಕ್ರಿಯೆ. ಸಂಲೇಖನದ ಉತ್ಕೃಷ್ಟ ಕಾಲಾವಧಿಯೆಂದರೆ 12 ವರ್ಷಗಳು. ಮಧ್ಯಮ ಕಾಲಾವಧಿ ಒಂದು ವರ್ಷ. 6 ತಿಂಗಳಲ್ಲಿ ಮುಗಿಯುವ ಸಂಲೇಖನವನ್ನು ಜಘನ್ಯವೆಂದು ತಿಳಿಯಲಾಗುತ್ತದೆ. ಆತ್ಮಹತ್ಯೆಗೆ ಒಂದು ನಿಮಿಷ ಸಾಕು. ಆದರೆ, ಸಲ್ಲೇಖನಾ ವಿಧಿವತ್ ಆಚರಣೆಯ ದೀರ್ಘ ಪ್ರಕ್ರಿಯೆ.
ಸಂಲೇಖನಾ ವ್ರತ ನಡೆಸಲು ಆಯುಸ್ಸು ಸರಿಸುಮಾರು ಎಷ್ಟಿದೆ ಎಂಬುದರ ತಿಳುವಳಿಕೆ ಸಾಧಕನಿಗೆ ಅಗತ್ಯ. ನಿರೋಗಿಯಾಗಿರುವ, ದೀರ್ಘಾಯುಸ್ಸು ಇರುವ ವ್ಯಕ್ತಿಯು ಸಲ್ಲೇಖನಾ ಮಾಡುವಂತಿಲ್ಲ. ರೋಗವಿದ್ದು ಜೀವಿತಾವಧಿಯು ದೀರ್ಘವಾಗಿದ್ದಲ್ಲಿ ಆತನಿಗೂ ಈ ವ್ರತವನ್ನು ಕೈಗೊಳ್ಳುವ ಅಧಿಕಾರವಿಲ್ಲ. ದಿಗಂಬರ ಪರಂಪರೆಯ ಅತ್ಯಂತ ತೇಜಸ್ವೀ ಆಚಾರ್ಯ ಸಮಂತಭದ್ರರಿಗೆ “ಭಸ್ಮರೋಗ” ಪೀಡಿಸುತ್ತಿತ್ತು. ಅವರು ಸಲ್ಲೇಖನ ಕೈಗೊಳ್ಳಲು ಬಯಸಿದ್ದರು. ಆದರೆ ಅವರ ಗುರುಗಳು ಅನುಮತಿ ನೀಡಲಿಲ್ಲ.
ಹಾಗಿದ್ದರೆ ಯಾರು ಪಂಡಿತ ಮರಣವನ್ನು ಸ್ವೀಕರಿಸಬಹುದು?
ಇನ್ನು ಯಾವುದೇ ಕರ್ಮ ಮಾಡಲು ಅಶಕ್ತನಾಗಿರುವ ಜೀವನದ ಸಂಧ್ಯಾಕಾಲದಲ್ಲಿರುವ ವ್ಯಕ್ತಿ, ಯಾವ ರೀತಿಯಿಂದಲೂ ಚಿಕಿತ್ಸೆ ಅಸಾಧ್ಯವಾದ ಸ್ಥಿತಿಯಲ್ಲಿರುವ ವ್ಯಕ್ತಿ. ಕಣ್ಣು ಶ್ರವಣಶಕ್ತಿ ಮಂಕಾಗಿ ಕೈಕಾಲು ಆಡಿಸುವುದೇ ಕಷ್ಟಕರವಾಗಿರುವ ವ್ಯಕ್ತಿ, ಭಯಂಕರ ದುಷ್ಕಾಲದಲ್ಲಿ ಭಿಕ್ಷೆಗೂ ಗತಿಯಿಲ್ಲದಿರುವಾಗ ಕರ್ಮ ಮಾಡಲು ಅಶಕ್ತನಾದ ವ್ಯಕ್ತಿ ಮಾತ್ರವೇ ಸಂಲೇಖನವನ್ನು ಕೈಗೊಳ್ಳಬಹುದು. ಅಲ್ಲದೇ ಸ್ವೇಚ್ಛೆಯಿಂದ ಈ ನಿರ್ಣಯವನ್ನು ಮಾಡಬೇಕು. ಅಂದರೆ ಯಾರದ್ದೇ ಒತ್ತಡ ಅಥವಾ ಸ್ವರ್ಗ ಕಾಮನೆಯಿಂದ ಸಂಲೇಖನಾ ಮಾಡಬಾರದು.
ಮಿರ್ಜಿ ಅಣ್ಣಾರಾಯರು ತಮ್ಮ “ಜೈನಧರ್ಮ” ಎಂಬ ಗ್ರಂಥದಲ್ಲಿ ಕೊಟ್ಟ ವಿವರಣೆ ಹೀಗಿದೆ:- “ಪೂಜ್ಯಪಾದ ಸ್ವಾಮಿಯವರು ಈ ವಿಷಯವನ್ನು ವಿವರಿಸುತ್ತಾ “ಸರ್ವಾರ್ಥಸಿದ್ಧಿ”ಯಲ್ಲಿ ಒಂದು ಉದಾಹರಣೆಯನ್ನು ಕೊಡುವರು: ಒಬ್ಬ ಗೃಹಸ್ಥನ ಮನೆಯಲ್ಲಿ ಮುತ್ತುರತ್ನಾದಿಗಳಿವೆ. ಆ ಮನೆಗೆ ಒಮ್ಮಿಂದೊಮ್ಮೆಗೆ ಬೆಂಕಿ ಬಿದ್ದಿದೆ. ಆಗ ಮನುಷ್ಯ ಮೊದಲು ಬೆಂಕಿಆರಿಸಲು ಪ್ರಯತ್ನಿಸುತ್ತಾನೆ. ಅದು ಅಸಾಧ್ಯವಾಗಲು ಮನೆಯನ್ನು ಕೆಡವಿಯಾದರೂ ಅಮೂಲ್ಯ ದ್ರವ್ಯಗಳನ್ನು ಹೊರಗೆ ತೆಗೆಯಲು ಬಯಸುವನು. ಆಗ ಅವನನ್ನು ಮನೆಯ ವಿಧ್ವಂಸಕನೆಂದು ಕರೆಯಲಿಕ್ಕೆ ಬರುವುದಿಲ್ಲ. ಎಲ್ಲಿಯವರೆಗೆ ಮನೆಯನ್ನು ರಕ್ಷಿಸುವುದು ಸಾಧ್ಯವಿತ್ತೊ ಅಲ್ಲಿಯವರೆಗೆ ಅದನ್ನಾತ ಉಳಿಸಲು ಯತ್ನಿಸಿದನು. (ಇಲ್ಲಿ ಮನೆಯೆಂದರೆ ‘ಶರೀರ’) ಅದು ಅಶಕ್ಯವೆನಿಸಲು ಅದರ ಮೇಲಿನ ಮಮತೆಯನ್ನು ತೊರೆದನು. ತನ್ನ ಬೆಲೆಯುಳ್ಳ ಒಡವೆಗಳನ್ನು ರಕ್ಷಿಸಲಿಕ್ಕೆ ಮುಂದುವರಿದನು. (ಒಡವೆಗಳೆಂದರೆ ಇಲ್ಲಿ ‘ಆತ್ಮ’) ಇದರಂತೆ ಸಾಧಕನು ಕೂಡಾ ಸುಮ್ಮ ಸುಮ್ಮನೆ ದೇಹತ್ಯಾಗ ಮಾಡಲಿಕ್ಕೆ ಸಿದ್ಧನಾಗುವುದಿಲ್ಲ. ಶರೀರವು ಆತ್ಮಕಲ್ಯಾಣದ ಸಾಧನವೆಂದು ಅವನು ತಿಳಿದಿರುತ್ತಾನೆ. ಆದರೆ,ಅದರಿಂದ ಈ ಕಾರ್ಯವು ನಡೆಯದಂತಾಗುವುದೋ, ರೋಗರುಜಿನಗಳಿಗೆ ತುತ್ತಾಗಿ ಆತ್ಮಧ್ಯಾನಕ್ಕೆ ತೊಡಕಾಗಿ ನಿಲ್ಲುವುದೊ ಅಂದು ಅವನ್ನು ನಿರ್ಮಮತ್ವ ಭಾವದಿಂದ ತ್ಯಜಿಸಲಿಕ್ಕೆ ಸಿದ್ಧನಾಗುತ್ತಾನೆ”.
ಸಂಲೇಖನಕ್ಕಿರುವ ಶರ್ತಗಳು
ಸಂಲೇಖನ ವ್ರತಧಾರಿಯು ವ್ರತ ಕೈಗೊಳ್ಳುವ ಮುಂಚೆ ಎಲ್ಲ ಬಂಧನಗಳನ್ನು ಕಳಚಿಕೊಂಡಿರಬೇಕು. ಆಂತರಿಕ ಕಷಾಯಗಳನ್ನು ಬಿಡಬೇಕು.ಗುರುವಿನೊಡನೆ ಯಾವ ಸಂಕೋಚನವೂ ಇಲ್ಲದೆ ಆಲೋಚಿಸಬೇಕು.ಶರೀರವು ಪರೀಷಹಗಳನ್ನು (ಬಾಯಾರಿಕೆ, ಹಸಿವೆ, ಶೀತ, ಉಷ್ಣ, ಆಕ್ರೋಶ, ಇತ್ಯಾದಿ 22 ಬಾಧೆಗಳು) ಸಹಿಸಲು ಶಕ್ತವಾಗಿರಬೇಕು. ಆಹಾರ ಸೇವನೆಯಲ್ಲಿ ವಾತಪಿತ್ತ ಕಫವು ವಿಕ್ಷುಬ್ಧವಾಗದಂತೆ ನೋಡಿಕೊಳ್ಳಬೇಕು. ವಾಸನಾ ಮುಕ್ತನಾಗಿರಬೇಕು. ವ್ರತಕ್ಕೆ ಮುಂಚೆ ಯಾವುದೇ ಬಗೆಯ ವೈಮನಸ್ಸಿದ್ದರೆ ಆ ಕುರಿತು ಕ್ಷಮೆಯಾಚಿಸಿ,ಉಳಿದವರಿಗೂ ಕ್ಷಮಾದಾನ ಮಾಡಬೇಕು. ವಿಷಮಭಾವ ಸ್ವಲ್ಪವೂ ಇರಕೂಡದು. ಸಮಭಾವದ ಮಂದಾಕಿನಿಯು ನಿರಂತರ ಹರಿಯುತ್ತಿರಬೇಕು. ಸಾಧಕ ತನ್ನ ದರ್ಶನಕ್ಕೆ ಬರುವವರಿಗಾಗಿ ಕಾದುಕುಳಿತುಕೊಳ್ಳುವ ಸ್ಥಿತಿಯಲ್ಲಿರಬಾರದು. ಅರ್ಥಾತ್ ಸಂಲೇಖನವನ್ನು ಎಷ್ಟು ಮಾತ್ರಕ್ಕೂ ವೈಭವೀಕರಿಸಬಾರದು.
ಇದು ಎಂದಾದರೂ ಆತ್ಮಹತ್ಯೆಗೆ ಸಮನಾಗುತ್ತದೆಯೆ? ಸತೀಪದ್ಧತಿಯನ್ನು ನಿಲ್ಲಿಸಿದ ವಿಲಿಯಂ ಬೆಂಟಿಂಕ್ ಸಂಲೇಖನವನ್ನು ಕಾನೂನು ಬಾಹಿರವೆನ್ನಲಿಲ್ಲ. ಎರಡೂವರೆ ಸಾವಿರ ವರ್ಷಗಳಿಂದ ಜೈನರಲ್ಲಿ ಆಚರಣೆಯಲ್ಲಿರುವ ಈ ಪದ್ಧತಿಯನ್ನು ಅರ್ಥ ಮಾಡಿಕೊಳ್ಳದೇ ಬಾಲಿಶವಾಗಿ ತೀರ್ಮಾನ ಕೊಡುವುದು ಎಷ್ಟು ಸರಿ? ಇಷ್ಟಕ್ಕೂ ಎಷ್ಟೋ ಸಂತರು ಸ್ವಾಮಿಗಳು ತಮ್ಮ ಜೀವಿತದ ಸಂಧ್ಯಾಕಾಲದಲ್ಲಿ ವೃಂದಾವನದಲ್ಲಿ ಸಮಾಧಿ ಹೊಂದುವುದು ಸಂಲೇಖನಾ ಅಥವಾ ಸಮಾಧಿ ಮರಣವೇ ಅಲ್ಲವೆ? ಇದನ್ನೆಲ್ಲಾ ನೋಡುವಾಗ ಭಾರತದ ನ್ಯಾಯಾಲಯಗಳೂ ಕೂಡಾ ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕುಗಳನ್ನು ತುಳಿಯುತ್ತಿರುವಂತೆ ಭಾಸವಾಗುತ್ತಿದೆ!
ಟಿಪ್ಪಣಿ :
ಕುವೆಂಪು ಕಾಲದ ಬಹುದೊಡ್ಡ ಲೇಖಕ ದೇ.ಜ.ಗೌ. ಸಲ್ಲೇಖನಕ್ಕೆ ಮನಸ್ಸು ಮಾಡಿರುವುದು ಸಲ್ಲೇಖನದ ಮಹತ್ವವನ್ನು ಜಗತ್ತಿಗೇ ಜಾಹೀರುಪಡಿಸುತ್ತದೆ. ಅವರು ಜೈನರಲ್ಲ. ಆದರೂ, ಅವರ ಪರಿಸ್ಥಿತಿಗಳು ಅದಕ್ಕಾಗಿ ತುಡಿಯುವಂತೆ ಭಾಸವಾಗುತ್ತಿದೆ. ಡಾ|| ಮಳಲಿ ವಸಂತರಾಯರಂತಹ ಅಪ್ರಬುದ್ಧ, ಅವಿವೇಕಿ ವಿಮರ್ಶಕರು ಇದನ್ನು ವಿರೋಧಿಸುತ್ತಿದ್ದಾರೆ. ನಾನು ನಿರೀಶ್ವರವಾದಿ. ‘ಆತ್ಮ’ ಒಂದು ತಾತ್ವಿಕ ತಪ್ಪು ಕಲ್ಪನೆಯೆನ್ನುವವನು. ಆದರೆ,ಮಾನವೀಯ ನೆಲೆಯಲ್ಲಿ ಜೈನ ಸ್ಯಾದ್ವಾದದ ಹಿನ್ನೆಲೆಯಲ್ಲಿ ಖಂಡಿತವಾಗಿಯೂ ಸಂಲೇಖನವನ್ನು ನಾನು ಗೌರವಿಸುತ್ತೇನೆ.