ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 4, 2015

2

ಕನ್ನಡಿಯಲ್ಲಿ ಮುಖನೋಡಿಕೊಳ್ಳಿ ಬುದ್ಧಿಜೀವಿಗಳೇ

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

ವಿಧ್ವಂಸಕತೆಕಳೆದ ಭಾನುವಾರ ಕಲ್ಬುರ್ಗಿಯವರ ಹತ್ಯೆಯ ಸುದ್ದಿ ತಿಳಿದಾಗ ಆಘಾತವಾಯಿತು.ಹತ್ಯೆ ಯಾವ ಕಾರಣಕ್ಕಾಗಿದೆಯೋ ಅದು ತನಿಖೆಯಿಂದ ಹೊರಬರಲಿದೆ.ಆದಷ್ಟು ಬೇಗ ತನಿಖೆಯಾಗಿ ಸತ್ಯಹೊರಬಂದು ಅವರ ಕುಟುಂಬಕ್ಕೆ ನ್ಯಾಯ ಸಿಗಲೇಬೇಕು.ಕಲ್ಬುರ್ಗಿಯವರ ಐಡಿಯಾಲಜಿಗಳೇನೇ ಇದ್ದಿರಬಹುದು,ಆದರೆ ಅವರು ಈ ನಾಡಿನ ಸಂಶೋಧನಾ ಕ್ಷೇತ್ರದ ಪ್ರಮುಖ ವಿದ್ವಾಂಸರಲ್ಲೊಬ್ಬರಾಗಿದ್ದವರು.ಅವರ ಕೊಲೆ ಸಹಜವಾಗಿಯೇ ನಾಡಿನ ವೈಚಾರಿಕ ವಲಯದ ಆಕ್ರೋಶಕ್ಕೆ ಕಾರಣವಾಯಿತು.ಕ್ರೋಧ-ಆಕ್ರೋಶಕ್ಕೊಳಗಾದ ಮನಸ್ಸಿನಿಂದ ಒಳಿತಿಗಿಂತ ಹಾನಿಯೇ ಹೆಚ್ಚು ಎಂಬ ಮಾತಿನಂತೆ,ಈ ಘಟನೆಯ ಸುತ್ತ ದೊಡ್ಡವರು ಎನಿಸಿಕೊಂಡವರ ವರ್ತಿಸಿದ ರೀತಿಯೇ ಉದಾಹರಣೆ.ಸೂತಕದ ಮನೆಯಲ್ಲಿ ಸಂಭ್ರಮಿಸುವುದು ಎಷ್ಟು ವಿಕೃತವೋ,ಅದೇ ರೀತಿ ಸೂತಕದ ಮನೆಯಲ್ಲಿ ಸಂಯಮ ಕಳೆದುಕೊಳ್ಳುವುದು ಹಾಗೂ ರಾಜಕೀಯ ಮಾಡುವುದೂ ಸಹ!

ಮಾಧ್ಯಮಗಳಲ್ಲಿ ಹತ್ಯೆಯ ಸುದ್ದಿ ಹೊರಬರುತಿದ್ದಂತೆ ನಾಡಿನ ಕೆಲವು ಬುದ್ಧಿಜೀವಿಗಳು,ಇದೊಂದು ವೈಚಾರಿಕ ಕಾರಣಕ್ಕೇ ಆದ ಹತ್ಯೆ ಎಂಬಂತೆ ತೀರ್ಪುಕೊಡಲಾರಂಭಿಸಿದರು.ಬುದ್ಧಿಜೀವಿ,ಪ್ರಗತಿಪರರ ಗುಂಪಿನ ಈ ನಡೆ ಅವರ ಜೊತೆಯೇ ಗುರುತಿಸಿಕೊಳ್ಳುವ ಕೆಲವರಿಗೆ ಯಾವ ರೀತಿ ರೇಜಿಗೆ ಹುಟ್ಟಿಸಿತು ಎಂಬುದಕ್ಕೆ,ಪ್ರಜಾವಾಣಿಯಲ್ಲಿ ನಟರಾಜ್ ಹುಳಿಯಾರ್ ಅವರು ಬರೆದ ಲೇಖನವೇ ಸಾಕ್ಷಿ. ಲೇಖನದಲ್ಲಿ ದಾಖಲಿಸಿರುವಂತೆ, “ಇಂತ ಸಮಯದಲ್ಲಿ ನಾವು ಸ್ಟ್ರಾಟರ್ಜಿ ಮಾಡ್ಬೇಕ್ರಿ” ಎಂದು ಒಬ್ಬರು ಹೇಳಿದರು ಅಂದರೇ ಕರ್ನಾಟಕದ ಬುದ್ಧಿಜೀವಿ ವಲಯ ಬಂದು ನಿಂತಿರುವುದೆಲ್ಲಿ? ಇದನ್ನು ಸಾವಿನ ಮನೆಯ ರಾಜಕಾರಣ ಮಾಡುವ ಇವರನ್ನು ರಾಜಕಾರಣಿಗಳು ಎನ್ನೋಣವೆಂದರೆ, ನಮ್ಮ ರಾಜ್ಯದಲ್ಲಿ ಬಹಳಷ್ಟು ಸಹೃದಯಿ ರಾಜಕಾರಣಿಗಳಿದ್ದಾರೆ ಮತ್ತು ಖುದ್ದು ಈ ಕೇಸಿನಲ್ಲಿ ಅವರೇ ಎಲ್ಲೂ ರಾಜಕೀಯ ಮಾಡಿಲ್ಲ.ಆದರೆ ನಮ್ಮ ಬುದ್ದಿಜೀವಿ ವಲಯ ಮಾತ್ರ ರಾಜ್ಯದಲ್ಲಿ “ವೈಚಾರಿಕ ಅಸಹನೆ” ಹೆಪ್ಪುಗಟ್ಟಿದೆ ಎಂದು ಕೂಗಿಕೊಳ್ಳುತ್ತಿದೆ.

ನಾನು ಸಹ ಅವರ ಮಾತನ್ನು ಅನುಮೋದಿಸುತ್ತೇನೆ.ನಿಜಕ್ಕೂ ರಾಜ್ಯದಲ್ಲಿ “ವೈಚಾರಿಕ ಅಸಹನೆ” ಹೆಪ್ಪುಗಟ್ಟಿದೆ ಎಂಬುದಕ್ಕೆ ನಮ್ಮ ಕಣ್ಣಮುಂದೆಯೇ ಹಲವಾರು ಉದಾಹರಣೆಗಳಿವೆ.ಈ ಉದಾಹರಣೆಗಳನ್ನು ಹಿಂದೆಯೂ ಹಲವಾರು ಬಾರಿ ನೀಡಿದ್ದೇನೆ.ಶಿವಮೊಗ್ಗದ ಕುವೆಂಪು ವಿವಿಯ ಸಿ.ಎಸ್.ಎಲ್.ಸಿ ಸಂಶೋಧನಾ ಕೇಂದ್ರವನ್ನು ಮುಚ್ಚಿಸಿದ್ದು ಇದೇ ’ವೈಚಾರಿಕ ಅಸಹನೆ’. ಬುದ್ಧಿಜೀವಿಗಳನ್ನು ವೈಚಾರಿಕವಾಗಿ,ಬೌದ್ಧಿಕವಾಗಿ ಪ್ರಶ್ನಿಸುತ್ತಿರುವ ಕಾರಣಕ್ಕೇ ನಿಲುಮೆಯ ಮೇಲೆ ದಾಳಿಯಾಗಿದ್ದೂ ಸಹ ’ವೈಚಾರಿಕ ಅಸಹನೆ”ಯೇ.ಆದರೆ ವ್ಯಂಗ್ಯ ನೋಡಿ,ಯಾವ ಗುಂಪು ಇವತ್ತು ವೈಚಾರಿಕ ಅಸಹನೆಯ ಬಗ್ಗೆ ಮಾತನಾಡುತ್ತಿದೆಯೋ ಅದೇ ಗುಂಪಿನವರು ಮಾಡಿದ ಘನಂಧಾರಿ ಕಾರ್ಯಗಳಿವು.

ಹತ್ಯೆಯ ಸುದ್ದಿ ಹೊರಬಿದ್ದಾಗ ಹೇಗೆ ಕೆಲವು ಅರೆಬೆಂದ ಮಡಕೆಯಂತಹ ಹುಡುಗರು ಸಂಭ್ರಮ ವ್ಯಕ್ತಪಡಿಸಿ ಅಸಹ್ಯವೆನಿಸಿಕೊಂಡರೋ,ಅದೇ ರೀತಿ ಕೆಲವು ಬುದ್ದಿಜೀವಿ ಮಹಾಶಯರುಗಳು ಮುಂದಿನ ಲಿಸ್ಟ್ ಅಲ್ಲಿ ನಾನು ಇದ್ದೇನೆ ಎಂಬಂತೆ ಅಪಹಾಸ್ಯಕ್ಕಿಳಿದರು.ಎಲ್ಲಿಯ ಸಂಶೋಧಕ ಕಲ್ಬುರ್ಗಿ,ಎಲ್ಲಿಯ ಈ ಬಿರಿಯಾನಿ ಬಂಡಾಯಗಾರರು,ಕಬಾಬ್ ಕ್ರಾಂತಿಕಾರಿಗಳು!

ಈ ಹತ್ಯೆಯ ನಂತರ,ಕೆಲವು ಸಾಹಿತಿಗಳು ನಮಗೆ ಗನ್ ಕೊಡಿ ಎಂದಿದ್ದಾರೆ ಎನ್ನುವ ಸುದ್ದಿಯೊಂದು ಕೇಳ್ಪಟ್ಟೆ.ಕೈಯಲ್ಲಿ ಹಿಡಿದ ’ಪೆನ್’ನಿಂದಲೇ ಈ ಪರಿ ಸಮಾಜದಲ್ಲಿ ದ್ವೇಷ ಹರಡುವವರ ಕೈಗೆ ’ಗನ್’ ಕೊಟ್ಟರೇ ಏನಾದೀತು? “ಮರ್ಕಟಸ್ಯ ಸುರಾಪಾನಂ…” ನೆನಪಾಗುತ್ತಿದೆ.

ನಮ್ಮ ಸಂಸ್ಕೃತಿಯಲ್ಲಿ ಟೀಕೆಗಳಿಗೆ ಮುಕ್ತ ಸ್ಥಾನವಿದೆ.ಸಂಪ್ರದಾಯವಾದಿಗಳೆಂದು ಈ ವಿಷಯದಲ್ಲಿ ರಿಲಿಜನ್ ಅನುಯಾಯಿಗಳಂತೆ ಹಿಂಸಾಚಾರಕ್ಕಿಳಿಯುವುದಿಲ್ಲ.ಹಿಂದೂ ಸಂಪ್ರದಾಯ,ಸಂಸ್ಕೃತಿಯನ್ನು ನಮ್ಮ ನಡುವೆ ಆಚರಣೆಗಳ ನೆಪದಲ್ಲಿರುವ ಮೌಢ್ಯವನ್ನೂ ಸಾಹಿತಿಗಳೆನಿಸಿಕೊಂಡವರು ಟೀಕಿಸುತ್ತಿರುವುದು ಇದೇ ಮೊದಲೇನಲ್ಲವಲ್ಲ. ತೀರಾ ಸ್ವಾತಂತ್ರ್ಯದ ದಿನಗಳ ನಂತರವೇ ನೋಡಿದರೆ ಕುವೆಂಪು ಅವರಂತಹ ಮೇರು ಸಾಹಿತಿಯೇ ಮೊದಲಿಗೆ ಕಾಣಿಸುತ್ತಾರೆ. ಕುವೆಂಪು ಅವರು ಅಧ್ಯಾತ್ಮವಾದಿಯಾಗಿಯೂ,ನಮ್ಮ ಸಂಪ್ರದಾಯಗಳ ಟೀಕಾಕಾರರೂ ಆಗಿದ್ದರು.ಆದರೆ ಅವರ ಮೇಲೆ ಜನರಿಗೇಕೆ ’ಅಸಹನೆ’ ಹುಟ್ಟಲಿಲ್ಲ? ಕಾರಣವಿಷ್ಟೇ.ಅವರ ಟೀಕೆಗಳು ರಚನಾತ್ಮಕವಾಗಿರುತ್ತಿದ್ದವು.ಒಂದು ವೇಳೆ ಹಾಗಿಲ್ಲದ ಪಕ್ಷದಲ್ಲಿಯೂ ಸಹ,ಈಗೀನ ಕಾಲಘಟ್ಟದಂತೆ ವಿವಾದ ಹುಟ್ಟು ಹಾಕಲೆಂದೇ ಶತಮಾನದ ಕಳಪೆ ಲೇಖನ ಬರೆಯುವುದಾಗಲೀ,ಕಿಡಿ ಹಚ್ಚಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಹೇಳಿಕೆಗಳನ್ನಾಗಲಿ ಆ ಕಾಲ ಘಟ್ಟದ ಸಾಹಿತಿಗಳು ನೀಡುತ್ತಿರಲಿಲ್ಲ.ಅಷ್ಟರ ಮಟ್ಟಿಗಿನ ಸಾಮಾಜಿಕ ಜವಬ್ದಾರಿ ಅವರಿಗೆಲ್ಲ ಇತ್ತು.

ಆದರೆ,ಇವತ್ತಿನ ಈ ಬುದ್ಧಿಜೀವಿಗಳು ಎನಿಸಿಕೊಂಡವರ ಕೆಲವು ಹೇಳಿಕೆಗಳು ಹೇಗಿವೆ? ಪ್ರೊಫೆಸರ್ ಎಂಬ ಪದಕ್ಕೆ ಅವಮಾನವೆಂಬಂತೆ ವರ್ತಿಸುತ್ತಾ “ಭಗವದ್ಗೀತೆಯನ್ನು ಸುಡಬೇಕು,ಒಕ್ಕಲಿಗರಿಗೆ ಸಾಮಾಜಿಕ ಪ್ರಜ್ಞೆಯಿಲ್ಲ” ಎನ್ನುತ್ತಾ ಪತ್ರಿಕೆಗಳ ಮುಖಪುಟದಲ್ಲಿ ಕಾಣಿಸಿಕೊಳ್ಳಲು ಸಮಾಜದಲ್ಲಿ ವಿಷ ಬೀಜ ಬಿತ್ತುತ್ತಿರುವುದು ಯಾವ ಸೀಮೆಯ ವೈಚಾರಿಕತೆ? ಮತ್ತು ಇವರು ಯಾವ ಸೀಮೆಯ ವಿಚಾರವಂತ/ಬುದ್ಧಿಜೀವಿ? ಇಂತ ಹೇಳಿಕೆಯಿಂದ ಸಮಾಜಕ್ಕೆ ರಚನಾತ್ಮಕ ರೀತಿಯಲ್ಲಿ ಏನಾದರೂ ಪ್ರಯೋಜನವಾಗುತ್ತದೆಯೇ? ಹೋಗಲಿ.ಈ ರೀತಿ ಹೇಳಿಕೆ ನೀಡಿದ ಪ್ರೊಫೆಸರ್(!)ರನ್ನು ಚರ್ಚೆಗೆ ಬನ್ನಿ ಎಂದು ಕರೆದಾಗ ಅವರು ಓಡಿಹೋದರು,ಹೇಗೋ ಪೋನಿಗೆ ಸಿಕ್ಕಿದವರು ಮಾತನಾಡಿದ ರೀತಿ ಹೇಗಿತ್ತು? ಇಂಗ್ಲೀಷ್ ಬೋಧಿಸುವ ಈ ಮಹಾಶಯರು,ನಾನು ಲೇಖನ ಬರೆದಿದ್ದೇನೆ,ನೀವು ಲೇಖನದ ಮೂಲಕ “ATTACK” ಮಾಡಿ ಎನ್ನುತ್ತಾರಪ್ಪ. ATTACK ಮಾಡಲಿಕ್ಕೆ ಇದೇನೋ ಯುದ್ದವೇ? ಒಬ್ಬ ಇಂಗ್ಲೀಷ್ ಮೇಷ್ಟ್ರಿಗೆ ಕನಿಷ್ಟ “React” ಅಥವಾ “Respond” ಎನ್ನುವ ಪದಗಳು ಗೊತ್ತಿದೆಯೋ ಇಲ್ಲವೋ? ಅಥವಾ ಆ ಪ್ರೊಫೆಸರ್(!) ಮನಸ್ಸಿನ ಕಹಿಯೇ ATTACK ಎಂಬ ಪದದ ಮೂಲಕ ಹೊರಬರುತ್ತಿರಬಹುದೇ! ಇದೇ ಸಾಹೇಬರ “ಒಕ್ಕಲಿಗರಿಗೆ ಸಾಮಾಜಿಕ ಪ್ರಜ್ಞೆಯಿಲ್ಲ” ಎಂಬ ಘನಂಧಾರಿ ಹೇಳಿಕೆಯಿಂದ, ಒಕ್ಕಲಿಗರೇನಾದರೂ ಅಸಹನೆಯಿಂದ ವರ್ತಿಸಿದಿರೇ? ಇಂತಹ ನಾಲಾಯಕ್-ಬೇಜವಬ್ದಾರಿ ಹೇಳಿಕೆಗೆ ಒಕ್ಕಲಿಗರು ಒಂದು ಸಮಾಜವಾಗಿ ಎಷ್ಟು ಪ್ರಬುದ್ಧವಾಗಿ ವರ್ತಿಸಿದರು ಎಂಬುದಕ್ಕೆ,ಆ ಪ್ರೊಫೆಸರ್(!) ಜೊತೆ ಕೆಲ ಒಕ್ಕಲಿಗ ಹುಡುಗರು ಮಾಡಿದ ಟೆಲಿಪೋನ್ ಚರ್ಚೆಯೇ ಸಾಕ್ಷಿ,

ಬುದ್ಧಿಜೀವಿಯೆನಿಸಿಕೊಂಡ  ಸಾಹೇಬರ ಬಳಿ ಆ ಸಾಮಾನ್ಯ ಹುಡುಗರ ಪ್ರಶ್ನೆಗಳಿಗೇ ಉತ್ತರವೇ ಇಲ್ಲ. ಮತ್ತು ಆ ಹುಡುಗರ ಪ್ರಶ್ನೆಗಳೆಲ್ಲ ನಿಜವಾಗಿಯೂ ವಿಚಾರವಂತನೊಬ್ಬನನ್ನು ಯೋಚಿಸುವಂತೆ ಮಾಡುವಂತಾ ಪ್ರಶ್ನೆಗಳೇ ಆಗಿದ್ದವು.ಖಾಲಿ ಮಡಕೆ ಹೆಚ್ಚು ಸದ್ದು ಮಾಡುತ್ತದೆ ಎಂಬುದು ಆ ಸಂಭಾಷಣೆ ಕೇಳಿದವರಿಗೆ ಸ್ಪಷ್ಟವಾಗುತ್ತದೆ. ಸಂಭಾಷಣೆಯ ಮಧ್ಯದಲ್ಲಿ ಅನಗತ್ಯವಾಗಿ ಹೀರೋ ಆಗಲು ಹೊರಡುವ ಪ್ರೊಫೆಸರ್(!) ’ನನ್ನ ಕೊಂದು ಬಿಡಿ” ಎನ್ನುತ್ತಾರೆ.ಆಗ ಅತ್ತ ಬದಿಯ ಹುಡುಗ “ನಾಯಿಯೊಂದನ್ನು ಕೊಲ್ಲುವುದು ವೀರತನವಲ್ಲ” ಎನ್ನುವ ಅರ್ಥದಲ್ಲಿ ಉತ್ತರಿಸುತ್ತಾ, ತಮ್ಮ ಬೇಜವಬ್ದಾರಿ ಹೇಳಿಕೆಗಳಿಂದ ಈ ಸೋ-ಕಾಲ್ಡ್ ಬುದ್ಧಿಜೀವಿಗಳು ಸಾಮಾನ್ಯ ಜನರ ದೃಷ್ಟಿಯಲ್ಲಿ ಕೆಳಮಟ್ಟಕ್ಕಿಳಿಯುತ್ತಿರುವುದನ್ನು  ಮಾತಿನಲ್ಲಿಯೇ ಸೂಚಿಸುತ್ತಾನೆ.ಎಲ್ಲಿಯ ವಯಸ್ಸಿನ ಹಿರಿಯ ಪ್ರೊಫೆಸರ್(!),ಎಲ್ಲಿಯ ಆ ಕಿರಿಯ ಪ್ರಬುದ್ಧ ಯುವಕ! ಈ ಸಂಭಾಷಣೆ ನಾಡಿನ ಪ್ರಗತಿಪರರು-ಬುದ್ಧಿಜೀವಿಗಳು ಎನಿಸಿಕೊಳ್ಳುವವರ ಮತ್ತು ಜನಸಾಮಾನ್ಯರ ನಡುವಿನ ಯೋಚನಾಲಹರಿಗೊಂದು ಉದಾಹರಣೆಯಾಗಿದೆ. ಜನಸಾಮಾನ್ಯರಿಗಿರುವಷ್ಟು ವೈಚಾರಿಕ ಪ್ರಜ್ಞೆ,ಸಾಮಾಜಿಕ ಜವಬ್ದಾರಿಯಿಲ್ಲದ ಈ ಜನರು ಬಂದು ’ವೈಚಾರಿಕ ಅಸಹನೆ’ಯ ಬೊಬ್ಬೆ ಹೊಡೆಯುತ್ತಾರಲ್ಲ!

ಮೊನ್ನೆ ಮೊನ್ನೆ ಹಿರಿಯರೊಬ್ಬರು ’ನಾನು ಯೇಸು ಕ್ರಿಸ್ತನನ್ನು ಪೂಜಿಸುತ್ತೇನೆ’ಎಂದು ಒಂದು ಸಮಾರಂಭದಲ್ಲಿ ಹೇಳಿದರು.ಪೂಜೆ ಮಾಡಿಕೊಳ್ಳಿ ಸ್ವಾಮಿ ನಮಗೇನು ಅಂತ ಸುಮ್ಮನಾಗೋಣವೆಂದರೇ,ಈ ಹಿರಿಯರು ಮುಂದುವರಿದು ’ಕ್ರೈಸ್ತ ಧರ್ಮ ವಿಶ್ವವ್ಯಾಪಿ”ಯಾಗಬೇಕು ಎನ್ನುತ್ತಾರಲ್ಲ.ಇವರಿಗೇನು ಹೇಳೋಣ? ಈ ರೀತಿಯ ಹೇಳಿಕೆ ಸಾಮಾಜಿಕ ಜವಬ್ದಾರಿ ಇರುವವರು ಹೇಳುವಂತದ್ದೇ? ಆದರೂ ನಮ್ಮ ಜನ ಸಾಮಾನ್ಯರು ’ಸಹನೆ’ಯನ್ನೇ ಪ್ರದರ್ಶಿಸಿದರು.

ಇನ್ನು ಸಾಮಾಜಿಕ ಜಾಲತಾಣದಲ್ಲೂ ಈ ಗುಂಪಿನವರ ಬೇಜವಬ್ದಾರಿ ವರ್ತನೆ ಮುಂದುವರೆಯುತ್ತಲೇ ಇದೆ.ಇತ್ತೀಚೆಗಷ್ಟೇ ’ಏನಕೇನ ಪ್ರಕಾರೇಣ ಪ್ರಸಿದ್ದ… ’ ಎಂಬಂತೆ ಫೇಸ್ಬುಕ್ಕಿನ ಒಂದು ನಯಾಪೈಸೆ ಕಿಮ್ಮತ್ತಿಲ್ಲದ ಪೋಸ್ಟಿನಿಂದ ಚಾಲ್ತಿಗೆ ಬಂದ ಮಹಿಳಾ ಬುದ್ಧಿಜೀವಿಯೊಬ್ಬರು ಇತ್ತೀಚೆಗೆ “ಪ್ರಧಾನಿ ಮೋದಿಯವರು ಬಡವರ ಗ್ಯಾಸ್ ಸಿಲಿಂಡರಿನ ದುಡ್ಡು ನುಂಗಿ ಹಾಕಿದ್ದಾರೆ” ಎಂಬರ್ಥದಲ್ಲಿ ಪೋಸ್ಟ್ ಹಾಕಿಕೊಂಡಿದ್ದರು.ಗೆಳತಿಯೊಬ್ಬರು ನಿಮ್ಮ ಗ್ಯಾಸ್ ಏಜೆನ್ಸಿಯವ ಹೆಸರೇಳಿ ಎಂದು ಇವರಿಗೆ ಕೇಳಿದ ತಕ್ಷಣ ಈ ಬುದ್ಧಿಜೀವಿ ನಾಪತ್ತೆ.ಇದು ಈ ಜನರ ಸಾಮಾಜಿಕ ಜವಬ್ದಾರಿಗೊಂದು ಉದಾಹರಣೆ.ತಮ್ಮ ಐಡಿಯಾಲಜಿಯ ವಿರೋಧಿಯನ್ನು ದ್ವೇಷಿಸುವುದೇ ಈ ಜನರ ವೈಚಾರಿಕತೆಯೇ?

“ಹಿಂದೂ ಧರ್ಮಕ್ಕೆ ಅಪ್ಪ-ಅಮ್ಮ ಇಲ್ಲ ; ಮೂರ್ತಿಯ ಮೇಲೆ ಮೂತ್ರ ಮಾಡಿದರೆ ಏನೂ ಆಗುವುದಿಲ್ಲ ; ಭಗವದ್ಗೀತೆಯನ್ನು ಸುಡುತ್ತೇನೆ; ಒಕ್ಕಲಿಗರಿಗೆ ಸಾಮಾಜಿಕ ಪ್ರಜ್ಞೆಯಿಲ್ಲ ; ಕ್ರೈಸ್ತ ಧರ್ಮ ವಿಶ್ವವ್ಯಾಪಿಯಾಗಬೇಕು” ಇತ್ಯಾದಿ ಹೇಳಿಕೆಗಳಿಂದ (ಇದರಪ್ಪನಂತಹ ದ್ವೇಷಪೂರಿತ ಬುದ್ಧಿಜೀವಿ ಹೇಳಿಕೆಗಳೂ ಇವೆ) ಈ ಜನರು ಸಮಾಜಕ್ಕೆ ಏನು ಉಪಯೋಗ ಮಾಡುತಿದ್ದಾರೆ? ಈ ಹೇಳಿಕೆಗಳಲ್ಲಿ ನಯಾ ಪೈಸೆಯ ಬೌದ್ಧಿಕತೆಯಾಗಲೀ,ವೈಚಾರಿಕತೆಯಾಗಲೀ ಇದೆಯೇ? ಇಲ್ಲವೆಂದರೆ ಈ ಇವರನ್ನೇಕೆ ಸರ್ಕಾರ ತಲೆಯ ಮೇಲೆ ಕೂರಿಸಿಕೊಳ್ಳಬೇಕು? ಎಲುಬಿಲ್ಲದ ನಾಲಿಗೆಯನ್ನು ಎಗ್ಗು-ಸಿಗ್ಗಿಲ್ಲದೇ ಉಪಯೋಗಿಸಿ,ಈಗ ಸರ್ಕಾರದ ಬಳಿ ರಕ್ಷಣೆಗಾಗಿ ಅಂಗಲಾಚುವುದೇಕೆ? ಅದರ ಬದಲು ಸ್ವಲ್ಪ ಜವಬ್ದಾರಿಯಿಂದ ವರ್ತಿಸುವುದನ್ನು ಈ ಜನರು ಕಲಿಯಬಾರದೇ? ತಮ್ಮ ದ್ವೇಷಪೂರಿತ ಹೇಳಿಕೆಗಳಿಂದಾಗಿ ಸಾಮಾಜಿಕ ಅಸಹನೆಯನ್ನು ಹುಟ್ಟುಹಾಕುತ್ತಿರುವ ಈ ಬುದ್ಧಿಜೀವಿಗಳು ಮೊದಲು ಕನ್ನಡಿಯಲ್ಲಿ ತಮ್ಮ ಮುಖನೋಡಿಕೊಂಡು ಆ ನಂತರ ಜನರಿಗೆ ’ವೈಚಾರಿಕ ಸಹನೆ’ಯ ಪಾಠ ಹೇಳಿಕೊಡಲಿ. ನೀವುಗಳು ಸೋ-ಕಾಲ್ಡ್ ಬುದ್ಧಿಜೀವಿಗಳೇ ಇರಬಹುದು.ಆದರೆ ಜನಸಾಮಾನ್ಯರು ನಿಮ್ಮ ನಾಟಕಗಳನ್ನು ಅರ್ಥಮಾಡಿಕೊಳ್ಳದಷ್ಟೇನೂ ‘ದಡ್ಡ ಜೀವಿಗಳ’ಲ್ಲ. ನೆನಪಿಡಿ

2 ಟಿಪ್ಪಣಿಗಳು Post a comment
  1. ಸೆಪ್ಟೆಂ 4 2015

    ದೊಡ್ಡವರೆಲ್ಲಾ ಜಾಣರಲ್ಲ// ಚಿಕ್ಕವರೆಲ್ಲಾ ಕೋಣರಲ್ಲಾ…!! ಅನ್ನೋ ಹಾಡ್ ಗೆಪ್ತಿಗೆ ಬಂತು!

    ಉತ್ತರ
  2. ಸೆಪ್ಟೆಂ 5 2015

    I endorse your thoughts. Formerly the society would look at the Universities in case of any social problems. But now, the Universities have become our problems.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments