ಅಂಬೇಡ್ಕರ್ ಮತ್ತು ಮಾರ್ಕ್ ವಾದ
– ಡಾ. ಜಿ. ಭಾಸ್ಕರ ಮಯ್ಯ
ಬಹಳ ಕಾಲದಿಂದಲೂ ಬುದ್ಧಿಜೀವಿಗಳ ವಲಯದಲ್ಲಿ ಅಂಬೇಡ್ಕರ್ ಮತ್ತು ಮಾರ್ಕ್ಸ್ ವಾದದ ಬಗೆಗೆ ಚರ್ಚೆಯಿದೆ. ಮಾರ್ಕ್ಸ್ ವಾದಿ ಕಮ್ಯೂನಿಸ್ಟ್ ಪಕ್ಷದ ಬುದ್ಧಿಜೀವಿಗಳು ಅಂಬೇಡ್ಕರರ ಕೊಡುಗೆ ಮತ್ತು ಭಾರತದ ಇತಿಹಾಸದಲ್ಲಿ ಅವರ ಸ್ಥಾನಮಾನಗಳ ಕುರಿತು ಸ್ಪಷ್ಟವಾಗಿ ಚರ್ಚಿಸಿದ್ದಾರೆ. ಈ ಕುರಿತು ಬಿ.ಟಿ. ರಣದಿವೆಯವರ “ಜಾತಿ ಮತ್ತು ವರ್ಗ” ಕೃತಿಯನ್ನು ನೋಡಬಹುದು. ಆದರೆ, ಬಹಳಷ್ಟು ಇತರೇ ಬುದ್ಧಿಜೀವಿಗಳಿಗೆ ಅಂಬೇಡ್ಕರ್ ಅವರು ಮಾರ್ಕ್ಸ್ ವಾದಕ್ಕೆ ಅತಿನಿಕಟ ಎಂತಲೊ ಅಥವಾ ಅಂಬೇಡ್ಕರ್‍ರದ್ದೇ ನಿಜವಾದ ಮಾರ್ಕ್ಸ್ ವಾದ ಎಂತಲೊ ಭ್ರಮೆಯಿದೆ.
ಇತ್ತೀಚೆಗೆ ವಿಜಯಕರ್ನಾಟಕದಲ್ಲಿ ಬರಗೂರು ರಾಮಚಂದ್ರಪ್ಪನವರ “ಕೆರಳಿದ ಕರುಳ ಧ್ವನಿ ಅಂಬೇಡ್ಕರ್” ಎಂಬ ಲೇಖನ ಪ್ರಕಟವಾಗಿದೆ. ಇಲ್ಲಿಯೂ ಅಂತಹ ಒಂದು ವಿಲಕ್ಷಣ ಭ್ರಮಾಪ್ರಯತ್ನವನ್ನು ನೋಡಬಹುದು. ಈ ಕುರಿತು ಒಂದು ಚರ್ಚೆ ಪ್ರಸ್ತುತ ಲೇಖನದ ಉದ್ದೇಶ. ಮೊದಲಿಗೆ ಬರಗೂರರು ಅಂಬೇಡ್ಕರರ ಮೂರು ಹೇಳಿಕೆಗಳನ್ನು (ಅವುಗಳಲ್ಲಿ 2, 3 ಮಾರ್ಕ್ಸ್ ವಾದವನ್ನು ಎತ್ತಿ ಹಿಡಿಯುತ್ತವೆ) ಉಲ್ಲೇಖಿಸಿ ಅದರ ಮೇಲೆ ತಮ್ಮ ಚರ್ಚೆಯನ್ನು ಆರಂಭಿಸುತ್ತಾರೆ.
ಗಾಂಧೀಜಿ ವರ್ಗರಹಿತ ಸಮಾಜದ ಪ್ರತಿಪಾದಕರಲ್ಲ
ಗಾಂಧೀಜಿಯವರ ಕುರಿತು ಬರಗೂರು “ಆರಂಭದಲ್ಲಿ ಜಾತಿವರ್ಣಗಳನ್ನು ತಮ್ಮದೇ ವ್ಯಾಖ್ಯಾನದ ಮೂಲಕ ಸಮರ್ಥಿಸುತ್ತಿದ್ದ ಗಾಂಧೀಜಿ ಆನಂತರ ಜಾತಿ ಮತ್ತು ವರ್ಗರಹಿತ ಸಮಾಜದ ನಿರ್ಮಾಣವನ್ನು ಪ್ರತಿಪಾದಿಸಿದರು” ಎಂದಿದ್ದಾರೆ. ಜಗತ್ತಿನ ಯಾವ ಮಾರ್ಕ್ಸ್ ವಾದಿಯೂ ಮೈಮರೆತು ಕೂಡಾ ಗಾಂಧೀಜಿ ವರ್ಗರಹಿತ ಸಮಾಜದ ಪ್ರತಿಪಾದಕರು ಎಂದು ಹೇಳಿಲ್ಲ. ಏಕೆಂದರೆ ಗಾಂಧೀಜಿ ಎಂದೂ ವರ್ಗರಹಿತ ಸಮಾಜ ನಿರ್ಮಾಣದ ಕನಸು ಕಂಡಿಲ್ಲ. ಭಾರತದ ಅತ್ಯುನ್ನತ ಮಟ್ಟದ ಮಾರ್ಕ್ಸ್ ವಾದಿಗಳಾದ ಡಾಂಗೆ, ಯಶ್‍ಪಾಲ್,ಇಎಂಎಸ್ ನಂಬೂದಿರಿ ಪಾಡ್-ಎಲ್ಲರೂ ಗಾಂಧೀಜಿಯ ಒಟ್ಟು ಐತಿಹಾಸಿಕ ಪಾತ್ರ ಬಂಡವಾಳಿಗರ ವರ್ಗವನ್ನು ಹೇಗೆ ಪ್ರತಿನಿಧಿಸುತ್ತಿತ್ತು ಎಂಬುದನ್ನೇ ವಿಶದೀಕರಿಸಿದ್ದಾರೆ. ಗಾಂಧೀಜಿಯವರ ಅತ್ಯಂತ ಯಥಾರ್ಥ
ಮೌಲ್ಯಮಾಪನವನ್ನು ಇಎಂಎಸ್ ತಮ್ಮ “ಗಾಂಧಿ ಎಂಡ್ ಹಿಸ್ ಇಸಮ್” ಕೃತಿಯಲ್ಲಿ ವಿವರವಾಗಿ ದಾಖಲಿಸಿದ್ದಾರೆ. ನನಗನ್ನಿಸುವಂತೆ ಬಹಳಷ್ಟು ಬುದ್ಧಿಜೀವಿಗಳಿಗೆ “ವರ್ಗ” ಎಂಬ ವಿಶೇಷ ಪದದ ಅರ್ಥವೇ ತಿಳಿದಿಲ್ಲ! ಅದರಿಂದಾಗಿಯೇ ಇಂತಹ ಅವಾಂತರಗಳು ಉಂಟಾಗುತ್ತವೆ.
ಚಾರಿತ್ರಿಕವಾಗಿ ಅಂಬೇಡ್ಕರ್ ಮತ್ತು ಗಾಂಧಿ ಹೇಗೆ ಮುಖ್ಯ ಎಂಬುದನ್ನು ಬರಗೂರಪ್ಪನವರು ಒಂದು ರೂಪಕದ ಮೂಲಕ ನಿರೂಪಿಸುತ್ತಾರೆ:- ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿ ಫುಲ್‍ಸೂಟ್ ಧರಿಸಿದ್ದರು. ಭಾರತಕ್ಕೆ ಬಂದಮೇಲೆ ಕೊನೆಯವರೆಗೂ ಅರೆಬತ್ತಲೆ ಫಕೀರರಾಗಿದ್ದರು. ಇದಕ್ಕೆ ಕಾರಣ ಅವರೆನ್ನುವಂತೆ ಗಾಂಧೀಜಿಯವರ “ಪಾಪ ಪ್ರಜ್ಞೆ”. ಆದರೆ, ಪ್ರಾಥಮಿಕ ಶಾಲೆಯ ಮಕ್ಕಳಿಗೂ ಗೊತ್ತಿರುವ ವಿಚಾರವೆಂದರೆ ಭಾರತದ ಬಡಜನತೆ ಬಟ್ಟೆಗೂ ಗತಿಯಿಲ್ಲದ ದಯನೀಯ ಸ್ಥಿತಿಯಲ್ಲಿರುವಾಗ ತಾನು ಮೈಪೂರ್ತಿ ಬಟ್ಟೆ ಧರಿಸುವುದು ನೈತಿಕವಾಗಿ ಪಾಪಕಾರ್ಯವೆಂದು ಗಾಂಧೀಜಿ ಭಾವಿಸಿದ್ದರು. ಇದನ್ನವರು ಲಂಡನ್ನಲ್ಲಿ ಸ್ಪಷ್ಟಪಡಿಸಿದ್ದರು ಕೂಡಾ. ಆದರೆ, ಬರಗೂರರಿಗೆ ಅದು “ಪಾಪಪ್ರಜ್ಞೆ”ಯಾಗಿ ಕಾಣಿಸಿತು! ಏಕೆಂದರೆ ಅವರಿಗೆ ಅಂಬೇಡ್ಕರ್‍ರ “ಜಾಗೃತಪ್ರಜ್ಞೆ”ಯ ಬಾವುಟವನ್ನು ಎತ್ತಿಹಿಡಿಯಬೇಕಿತ್ತು. ಅವರೆನ್ನುತ್ತಾರೆ: “ಅಂಬೇಡ್ಕರ್ ಎತ್ತರಕ್ಕೆ ಬೆಳೆಯುತ್ತಾ ಫುಲ್‍ಸೂಟ್ ಧರಿಸಿದರು”. ಗಾಂಧೀಜಿ ಯಾರ ಮತ್ತು ಯಾವ ಪಾಪಕ್ಕೆ ತಮ್ಮನ್ನು ಹೊಣೆಗಾರರನ್ನಾಗಿ ಮಾಡಿಕೊಂಡಿದ್ದರು?
ಅಂಬೇಡ್ಕರಂತೆ ಗಾಂಧೀಜಿ ಎತ್ತರೆತ್ತರಕ್ಕೆ ಬೆಳೆಯದೆ ಕೆಳಕೆಳಗೆ ತಗ್ಗಿನತ್ತ ಮುಗ್ಗರಿಸಿದ್ದರಿಂದ ಅವರನ್ನು “ಪಾಪ ಪ್ರಜ್ಞೆ” ಆವರಿಸಿತೆ? ಅಂತೆಯೇ ಅಂಬೇಡ್ಕರ್ ಅವರದ್ದು “ಜಾಗೃತಪ್ರಜ್ಞೆ”ಯೇ ಏಕಾಗಬೇಕು? ಅದು ತಮ್ಮ ಬಾಲ್ಯದ ಪರಿಸ್ಥಿತಿ ಹಾಗೂ ತಮ್ಮವರ ದಾರುಣ ಜೀವನಪರಿಸ್ಥಿತಿಗಳಿಂದುಂಟಾದ Inferiority Complexನ ಫಲವಾಗಿ ಸೂಟು ಬೂಟು ಧರಿಸಿದರು ಎಂದು ಮೂರ್ಖನೊಬ್ಬ ವ್ಯಾಖ್ಯಾನಿಸಿದರೆ ನಮಗೆ ಹಿತವಾಗುತ್ತದೆಯೆ?ಸಹ್ಯವಾಗುತ್ತದೆಯೆ? ಖಂಡಿತವಾಗಿಯೂ ಇಲ್ಲ. ಚಾರಿತ್ರಿಕವಾಗಿ ಉನ್ನತದ ಸ್ಥಾನದಲ್ಲಿರುವ ಮಹಾತ್ಮರ ಬಗ್ಗೆ ಹೀಗೆಲ್ಲಾ “ಪಾಪ ಪ್ರಜ್ಞೆ”, “ಜಾಗೃತ ಪ್ರಜ್ಞೆ” ಎಂದೆಲ್ಲಾ ಅರ್ಥೈಸುವುದು ನಿಜಕ್ಕೂ “ಪತಿತ ಪ್ರಜ್ಞೆ” !
ಮಾರ್ಕ್ಸ್ ವಾದ ಮತ್ತು ಅಂಬೇಡ್ಕರ್
ಬರಗೂರರು “ಅಂಬೇಡ್ಕರ್‍ವಾದಿಗಳಿಗೆ ಗಾಂಧೀಯ ಕುರಿತು ವಿರೋಧವಿರುವಂತೆಯೇ ಕಮ್ಯುನಿಸಮ್ ಬಗೆಗೂ ಕಟುವಿರೋಧವಿದೆ” ಎಂದು ಬರೆಯುತ್ತಾ ಅಂಬೇಡ್ಕರ್‍ವಾದಿಗಳು ಅಂಬೇಡ್ಕರರವರನ್ನು ಸರಿಯಾಗಿ ಅರ್ಥಮಾಡಿಕೊಂಡಿಲ್ಲ ಎಂದು ವಿಶಾದಿಸುತ್ತಾರೆ. ಅಂಥ ಕಮ್ಯುನಿಸ್ಟ್ ವಿರೋಧ ತಪ್ಪು ಮತ್ತು ಅಂಬೇಡ್ಕರರಿಗೂ ಮಾರ್ಕ್ಸ್ ವಾದಕ್ಕೂ ಅವಿನಾ ಸಂಬಂಧವಿದೆ ಎಂದು ಬಲವಾಗಿ ನಂಬಿರುವ ಬರಗೂರರ ಈ ಹೇಳಿಕೆಗಳನ್ನು ಗಮನಿಸಿ :
1) ಅಂಬೇಡ್ಕರ್ ಅವರು ಕಮ್ಯುನಿಸಮ್‍ನ ಕೆಲ ಅಂಶಗಳನ್ನು ವಿರೋಧಿಸಿದ್ದರೂ ಮಾರ್ಕ್ಸ್ ವಾದವೇ ಅಂತಿಮವಾಗಿ ಮದ್ದು ಎಂದು ಬರೆದಿದ್ದರು.
2) ಅಂಬೇಡ್ಕರ್ ಕಮ್ಯುನಿಸಮ್ ಬಗ್ಗೆ ಮಾಡಿದ ಆಂಶಿಕ ಟೀಕೆಗಳನ್ನಷ್ಟೇ ಪರಿಗಣಿಸಿ ಅವರ ಸಕಾರಾತ್ಮಕ ಅಂಶಗಳನ್ನು ಕೆಲವರು ಗಮನಿಸದೇ ಹೋಗಿದ್ದಾರೆ.
3) ನಾನು ಉಲ್ಲೇಖಿಸಿದ ಅಂಬೇಡ್ಕರ್ ಅವರ 2 ಮತ್ತು 3ನೆಯ ಹೇಳಿಕೆಗಳು ಮಾರ್ಕ್ಸ್ ವಾದ ಪ್ರತಿಪಾದಿಸುವ ಆರ್ಥಿಕ ಸಮಾನತೆಯನ್ನು ಸ್ಪಷ್ಟವಾಗಿ ಒಪ್ಪುತ್ತದೆ.
4) ಇಷ್ಟೇ ಅಲ್ಲ, ಅಂಬೇಡ್ಕರ್ ಅವರು ದಲಿತಪರ ಹೋರಾಟಗಾರರಷ್ಟೇ ಅಲ್ಲ, ಇಡೀ ಶೋಷಿತ ಜನಾಂಗದ ಹೋರಾಟಗಾರರೆನ್ನುವುದನ್ನು ಮನವರಿಕೆ ಮಾಡಿಕೊಡುತ್ತದೆ.
5) ಅಂಬೇಡ್ಕರರು “ಆರ್ಥಿಕ ವ್ಯಾಖ್ಯಾನವೇ ಇತಿಹಾಸದ ಏಕೈಕ ವಿವರಣೆಯಲ್ಲ” ಎಂದರು. ಆದರೆ “ಬಂಡವಾಳಶಾಹಿಗಳನ್ನು, ಭೂಮಾಲಿಕರನ್ನು ಮಹಿಳಾಪೀಡಕರನ್ನು ವಿರೋಧಿಸಿದರು”. “ರಷ್ಯಾದಲ್ಲಿ ಕಮ್ಯುನಿಸ್ಟ್ ಸರಕಾರ ಅದ್ಭುತ ಸಾಧನೆ ಮಾಡಿದೆ” ಎಂದು ಹೊಗಳಿದರಷ್ಟೇ ಅಲ್ಲ, “ಎಲ್ಲ ಹಿಂದುಳಿದ ದೇಶಗಳಿಗೂ ಸ್ವಲ್ಪ ಕಾಲವಾದರೂ ರಷ್ಯಾ ಮಾದರಿಯ ಸರ್ವಾಧಿಕಾರ ಒಳ್ಳೆಯದು ಎಂದೂ ಅಭಿಪ್ರಾಯ ಪಟ್ಟರು”. ಇತ್ಯಾದಿಯಾಗಿ ಬರಗೂರರು ವ್ಯಾಖ್ಯಾನಿಸುತ್ತಾರೆ.
ಅಂಬೇಡ್ಕರ್ ಮಾರ್ಕ್ಸ್ ವಾದಿಯೆ?
ನಿಜಕ್ಕೂ ಅಂಬೇಡ್ಕರ್ ಅವರ ನಿಲುವು ಮಾರ್ಕ್ಸ್ ವಾದದ ಕುರಿತು ಏನಾಗಿತ್ತು ಎಂಬುದನ್ನು ನೋಡೋಣ:
ಭಾರತದ ಮಹಾನ್ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಂಬೇಡ್ಕರ್ ಕಾಣಸಿಗುವುದಿಲ್ಲ ಅಂದರೆ, ಅವರು ಬ್ರಿಟಿಷರೊಂದಿಗೆ ದಲಿತಪರ ವಕಾಲತ್ತು ಮಾಡುತ್ತಾ, ಸಂವಿಧಾನದ ಸಂರಚನೆಯಲ್ಲಿ ಮುಖ್ಯ ಪಾತ್ರವಹಿಸಿ ದಲಿತರ ಮಹಾನ್ ನಾಯಕರಾದರು. ಬರಗೂರರು ಅಂಬೇಡ್ಕರರನ್ನು ಸಮಸ್ತ ಶೋಷಿತ ಜನರ ನಾಯಕರೆಂದು ಬಣ್ಣಿಸುತ್ತಾರೆ. ಅಂತೆಯೇ ಅವರು ಮಾರ್ಕ್ಸ್ ವಾದದ ಅಂತಃಸತ್ವವನ್ನು ಮೈಗೂಡಿಸಿಕೊಂಡ ನೇತಾರರೆಂದೂ ವಿಶ್ಲೇಷಿಸುತ್ತಾರೆ.
ಈ ನಿಟ್ಟಿನಲ್ಲಿ ಪ್ರಾಯಃ ಅಂಬೇಡ್ಕರರ ಬಗ್ಗೆ ಬರಗೂರರು ಗಮನಿಸದ ಕೆಲವು ಪ್ರಮುಖ ಸಂಗತಿಗಳು ಇಂತಿವೆ:
1. 1956ರ ಸುಮಾರಿಗೆ ಅಂಬೇಡ್ಕರ್ ಅವರು ಬರೆದ “ಬುದ್ಧ ಅಥವಾ ಕಾರ್ಲ್ ಮಾರ್ಕ್ಸ್ಸ್?” ಪ್ರಕಟಿಸಿದ ಕಾಲದಲ್ಲೆ “ಬುದ್ಧ ಮತ್ತು ಅವರ ಧರ್ಮ” ಕೃತಿ ರಚಿಸಿದ್ದರು. ಅದರಲ್ಲಿ ಹಾಗೂ ಆ ಮುಂಚಿನ ಕೃತಿಯಲ್ಲಿ ಸಾಮ್ಯವಾದವನ್ನು ಮಾರ್ಕ್ಸ್ಸ್ ಗಿಂತ ಮೊದಲೆ ಅಂದರೆ 2500 ವರ್ಷಗಳಿಗೂ ಹಿಂದೆಯೇ ಬುದ್ಧ ಹೇಳಿದ್ದ.ಇಬ್ಬರೂ ಒಂದೇ ವಿಚಾರ ಹೇಳಿದ್ದರು ಇಬ್ಬರ ಗುರಿಯೂ ಒಂದೇ ಆಗಿತ್ತು. ಗುರಿ ಸಾಧಿಸುವಲ್ಲಿ ಅವರಲ್ಲಿ ಭಿನ್ನಾಭಿಪ್ರಾಯವಿತ್ತು. ಮಾರ್ಕ್ಸ್ಸ್ ಹೇಳಿದ ಮಾರ್ಗ ಸಂಪೂರ್ಣವಾಗಿ ತಪ್ಪಾಗಿತ್ತು. ಬೌದ್ಧ ಮಾರ್ಗವೇ ಸರ್ವೋತ್ತಮ.
2. ಅಂಬೇಡ್ಕರ್ ಮತ್ತೆ ಮತ್ತೆ ಹೇಳುವುದೇನೆಂದರೆ ಮಾರ್ಕ್ಸ್ಸ್ ನ ಸಂಘರ್ಷಮಾರ್ಗಕ್ಕಿಂತ ಬುದ್ಧನ ಅಷ್ಟಾಂಗ ಮಾರ್ಗ ಶ್ರೇಷ್ಠ. ಅಷ್ಟಾಂಗಮಾರ್ಗ ಬಲಪ್ರಯೋಗ ಮಾಡದೆ ಮನುಷ್ಯನ ಹೃದಯವನ್ನು ಅಭ್ಯಂತರವಾಗಿ ರೂಪಾಂತರಿಸುತ್ತದೆ. ಇದನ್ನು ಅಂಬೇಡ್ಕರ್ ಬಗೆ ಬಗೆಯಾಗಿ ವಿವರಿಸುತ್ತಾರೆ. ಹಾಗಿದ್ದಲ್ಲಿ ಗಾಂಧೀಜಿಯವರ “ಹೃದಯ ಪರಿವರ್ತನಾ ಸಿದ್ಧಾಂತ”ಕ್ಕಿಂತ ಅಂಬೇಡ್ಕರ್ ಹೇಳುವ ಈ ಬುದ್ಧನ “ಪರಿವರ್ತನಾ ಸಿದ್ಧಾಂತ” ಹೇಗೆ ಭಿನ್ನ? ಗಾಂಧೀಜಿಯವರ ಹೃದಯ ಪರಿವರ್ತನಾ ಸಿದ್ಧಾಂತವನ್ನು ಹೊತ್ತುಕೊಂಡು ಅವರ ಮಹಾನ್ ಶಿಷ್ಯ ವಿನೋಬಾ ಭೂದಾನ ಚಳವಳಿ ಮಾಡಿದರು. ಕೆಲವು ರೈತರಿಗೆ ಬಂಜರು ಭೂಮಿಯಷ್ಟೇ ಸಿಕ್ಕಿತು.ನೀರಿಲ್ಲ, ಬೀಜವಿಲ್ಲ, ಬೇರಾವ ಸೌಕರ್ಯವು ಇಲ್ಲದೇ ಅದೊಂದು ಅರ್ಥಹೀನ ಆಂದೋಲನವಾಗಿ ಕೇವಲ ಶೂನ್ಯ ಮಾತ್ರ ಸಂಪಾದನೆಯಾಯಿತು. ಬುದ್ಧನ ಕಾಲದಲ್ಲಿ ಯಾವನಾದರೂ ರಾಜನು ತನ್ನ ರಾಜ್ಯವನ್ನು ಶೋಷಿತರಿಗಾಗಿ ತ್ಯಾಗ ಮಾಡಿದ ಉದಾಹರಣೆಯಿದೆಯೇ? ವ್ಯಾಪಾರಿ ತನ್ನ ಸಂಪತ್ತನ್ನು ಹಂಚಿದ ಉದಾಹರಣೆಯಿದೆಯೇ? ಅಷ್ಟಾಂಗ ಮಾರ್ಗದಿಂದ ಯಾರ ಹೃದಯ ಬದಲಾಗಿದೆ?
ಮಹಾಮಹಿಮ ಬಿಂಬಸಾರ ಬೌದ್ಧಧರ್ಮವನ್ನು ಸ್ವೀಕರಿಸುತ್ತಾನೆ. ಆತನ 500 ಜನ ಹೆಂಡಿರು, ರಾಜಸತ್ತೆ,ಗುಲಾಮರು ಎಲ್ಲಾ ಮುಂಚಿನಂತೆಯೇ ಇರುತ್ತಾರೆ. ರೈತರು ಕಂದಾಯವನ್ನು ಎಂದಿನಂತೆಯೇ ಕೊಡುತ್ತಾ ಹೋಗುತ್ತಾರೆ. ರಾಜನ ಪ್ರತಿಯೊಂದು ಕೆಲಸವೂ ಅನಿರ್ಬಂಧಿತವಾಗಿ ನಡೆಯುತ್ತದೆ. ಆ ಬಿಂಬಸಾರನನ್ನು ಅವನ ಮಗ ಅಜಾತಶತ್ರುವೇ ಕೊಂದ. ಅಂತ ಅಜಾತಶತ್ರುವನ್ನು ಬುದ್ಧ ಆರಾಮವಾಗಿ ತನ್ನ ಸಂಘಕ್ಕೆ ಸೇರಿಸಿಕೊಳ್ಳುತ್ತಾನೆ. ಇದೆಂತಹ ನೈತಿಕತೆಯೆಂದು ಪ್ರಶ್ನಿಸಬೇಕಾದ್ದಿಲ್ಲ. ಏಕೆಂದರೆ, “ಅಜಾತಶತ್ರು ಭಯಂಕರ ಪಶ್ಚಾತ್ತಾಪದಿಂದ ಬೆಂದು ಹೋಗಿದ್ದಾನೆ” ! ಆದರೆ, ಅವನ ರಾಜಸತ್ತೆಯಂತೂ ಹಾಗೆಯೇ ಎಂದಿನಂತೆಯೇ ಮುಂದುವರಿಯುತ್ತದೆ.
ಬುದ್ಧನಿಗೆ ದುಃಖದ ನಿಜವಾದ ಕಾರಣ ನಿಜಕ್ಕೂ ತಿಳಿದಿರಲಿಲ್ಲ. ತಿಳಿದಿದ್ದರೆ ಆತ ಗುಲಾಮರಿಗೆ ತನ್ನ ಮಾಲಿಕರ ವಿರುದ್ಧ ಬಂಡೇಳಲು ಕರೆಕೊಡುತ್ತಿದ್ದ, ಬುದ್ಧನ ಪ್ರಕಾರ ದುಃಖ ಸ್ವಯಂ ನಿರ್ಮಿತ. ದೇವರಿಲ್ಲದೇ ಇರಬಹುದು. ಆದರೆ, ಮನುಷ್ಯ ತನ್ನ ಸ್ವಯಂಕೃತ ಕರ್ಮಫಲದಿಂದ ಗುಲಾಮನಾಗಿ ಹುಟ್ಟುತ್ತಾನೆ. ತನ್ನ ಗುಲಾಮತ್ವದಿಂದ ಮುಕ್ತನಾಗಲು ಗುಲಾಮ “ಅಷ್ಟಾಂಗಮಾರ್ಗ”ವನ್ನು ಅನುಸರಿಸಬೇಕು. ರಾಜರೂ, ಮಹಾರಾಜರೂ, ವ್ಯಾಪಾರಿಗಳಿಗೂ, ಶ್ರೀಮಂತರಿಗೂ ಒಂದೇ ಮಾರ್ಗ! ವ್ಯವಸ್ಥೆಯಲ್ಲಿ (ಅಂದರೆ ವರ್ಗವ್ಯವಸ್ಥೆಯಲ್ಲಿ) ಯಾವುದೇ ಬದಲಾವಣೆ ಮಾಡಬೇಕಾಗಿಲ್ಲ. ರಾಜನು ಒಳ್ಳೆಯ ರಾಜನಾಗಿದ್ದರೆ ಸಾಕು.ಅಂತೆಯೇ ಗುಲಾಮನು ಒಳ್ಳೆಯ ಗುಲಾಮನಾಗಿರಬೇಕು. ಇದುವೇ ಬುದ್ಧನ ಮಾರ್ಗ. ಅಂಬೇಡ್ಕರ್ ಅವರ ಪ್ರಕಾರ ಇದುವೇ ಮಾರ್ಕ್ಸ್ ವಾದ! ಇದೇ ಮಾರ್ಕ್ಸ್ ವಾದವನ್ನು ಬುದ್ಧ 2ಳಿ ಸಾವಿರ ವರ್ಷಗಳಿಗಿಂತ ಮುಂಚೆಯೇ ಹೇಳಿದ್ದಾನೆ!!
ಆದರೆ, ಬುದ್ಧನ ದರ್ಶನದ ಪ್ರಕಾರ ಮನುಷ್ಯನ ಅಸ್ತಿತ್ವಕ್ಕೆ ಆತನ ಜೀವನದ ಭೌತಿಕ ಅಥವಾ ಸಾಮಾಜಿಕ ಪರಿಸ್ಥಿತಿಗಳೊಂದಿಗೆ ಯಾವುದೇ ಸಂಬಂಧವಿಲ್ಲ. ಸಮಾಜದಲ್ಲಿ ಯಾರು ಬಡವನೋ, ಶೋಷಿತರೋ, ಗುಲಾಮರೋ ಅವರ ಮುಕ್ತಿಗೆ ಬುದ್ಧನ ಬಳಿ ಯಾವುದೇ ದಾರಿಯಿಲ್ಲ. ಬಹಳಷ್ಟು ಜನ ಸಾಲಗಾರರಾಗಿದ್ದರು. ಸಾಲ ತೀರಿಸಲಾಗದೆ ಅವರು ಗುಲಾಮರಾಗಿಬಿಟ್ಟಿದ್ದರು. ಬುದ್ಧನಿಗೆ ಸಾಲ ಕೊಟ್ಟವರ ಭಯವಿತ್ತು. ಅದಕ್ಕೇ ಆತನೆಂದ-“ಋಣಿಗಳಿಗೆ (ಸಾಲ ಮಾಡಿದವರಿಗೆ) ಪ್ರರ್ವಜ್ಯಾ ಕೊಡಲಾಗುವುದಿಲ್ಲ” ಈ ರೀತಿ ಸಾಲದ ಕುಣಿಕೆಗೆ ಬಿದ್ದು ಸಾಯುತ್ತಿರುವವರನ್ನು ತನ್ನ ಭಿಕ್ಷುಸಂಗದಿಂದ ಹೊರ ಹಾಕಿದ. ಗುಲಾಮರು ಭಿಕ್ಷುಗಳಾಗಲು ಬಯಸುತ್ತಿದ್ದರು. ಗುಲಾಮರೊಡೆಯರು ವಿರೋಧವ್ಯಕ್ತಪಡಿಸಿದರು. ಆಗ ಬುದ್ಧ ಘೋಷಿಸಿದ-“ಗುಲಾಮರಿಗೆ ಪ್ರರ್ವಜ್ಯಾ ಕೊಡಲಾಗುವುದಿಲ್ಲ” ಬಹಳಷ್ಟು ಸೈನಿಕರು ರಾಜನ ಯುದ್ಧೋನ್ಮಾದದಿಂದ ಬೇಸತ್ತು ಸನ್ಯಾಸಿಗಳಾಗಲು ಬಯಸಿದರು. ಬುದ್ಧ ಘೋಷಿಸಿದ-“ರಾಜಸೈನಿಕರಿಗೆ ಪ್ರರ್ವಜ್ಯಾ ಕೊಡ ಕೂಡದು”. ಗೌತಮ ಬುದ್ಧ ಸಮಾಜದ ಶೋಷಿತ ಜನರನ್ನು ತನ್ನ ಸಂಘದಿಂದ ಹೊರಗಿಟ್ಟ. ಬುದ್ಧನ “ದುಃಖ”ದ ಸಿದ್ಧಾಂತ ಶ್ರೀಮಂತರ ಹಿತಕ್ಕೆ ಒಂದು ಚೂರೂ ಧಕ್ಕೆ ಮಾಡುತ್ತಿರಲಿಲ್ಲ!!
ಪುನರ್ಜನ್ಮ ಮತ್ತು ಪರಲೋಕದ ಸಿದ್ಧಾಂತವನ್ನು ಹೊಸ ವೇಷಭೂಷಣಗಳಿಂದ ಮಂಡಿಸಿದ ಬುದ್ಧ ಸಾಮಾಜಿಕ ಪ್ರಗತಿಯ ಮಾರ್ಗವನ್ನು ತಡೆಗಟ್ಟಿದ. ಇದರಿಂದಾಗಿಯೇ ಬುದ್ಧನ ಬಾವುಟದಡಿ ದೊಡ್ಡ ದೊಡ್ಡ ರಾಜರು, ಸಾಮ್ರಾಟರು, ಸೇಠರು ಸಾಹುಕಾರರು ಅಣಿ ನೆರೆದರು. ಶ್ರೀಲಂಕಾ, ಜಪಾನ್, ಚೀನಾ ಹೀಗೆ ವಿದೇಶಗಳಲ್ಲಿ ಬೌದ್ಧಧರ್ಮವನ್ನು ಪ್ರಚಾರ ಪ್ರಸಾರ ಮಾಡಿದವರು ರಾಜರು ಮತ್ತು ವ್ಯಾಪಾರಿಗಳು, ಮಹಾಪಂಡಿತ ರಾಹುಲ ಸಾಂಕ್ರತ್ಯಾಯನರು ಸ್ವತಃ ಬೌದ್ಧ ಭಿಕ್ಷುವಾಗಿ ಶ್ರೀಲಂಕಾ ವಿದ್ಯಾಲಂಕಾರ ಪರಿವೇಣ ವಿಶ್ವವಿದ್ಯಾಲಯದಲ್ಲಿ ಪ್ರಾಚಾರ್ಯರಾಗಿ ಕೆಲಸ ಮಾಡಿದವರು. ಶೇರುವಾಸ್ಕಿ ಮತ್ತು ಸಾಂಕ್ರತ್ಯಾಯನರು ವಿಶ್ವದ ಸರ್ವಶ್ರೇಷ್ಠ ಬೌದ್ಧ ವಿದ್ವಾಂಸರು.
ಸಾಂಕ್ರತ್ಯಾಯನರ ಪ್ರಕಾರ “ಬೌದ್ಧಧರ್ಮವು ಶಾಸಕವರ್ಗದ ಏಜೆಂಟಿನ ಪಾತ್ರವನ್ನು ನಿರ್ವಹಿಸಿದೆ. ವರ್ಗ ಸ್ವಾರ್ಥವನ್ನು ನಿವಾರಿಸದೆ ಬೌದ್ಧಧರ್ಮವು ತನ್ನನ್ನು ನ್ಯಾಯಪಕ್ಷಪಾತಿಯೆಂದು ತೋರಿಸಿಕೊಳ್ಳುತ್ತದೆ”.
ಹೀಗಿರುವಾಗ ಅಂಬೇಡ್ಕರ್ ಮಾರ್ಕ್ಸ್ ವಾದದ ಆರ್ಥಿಕ ಸಮಾನತೆಯನ್ನು ಒಪ್ಪುತ್ತಾರೆಂದರೆ ಅದಕ್ಕಿಂತ ಹಾಸ್ಯಾಸ್ಪದ ವಿಚಾರ ಇನ್ನೊಂದಿದೆಯೆ? ಅಂಬೇಡ್ಕರ್‍ವಾದಿಗಳು ಅಂಬೇಡ್ಕರ್ ಅವರನ್ನು ಸರಿಯಾಗಿ ಅರ್ಥಮಾಡಿಕೊಂಡಿಲ್ಲ ಎನ್ನುವ ಬರಗೂರರು ಮೊದಲು ಅಂಬೇಡ್ಕರ್ ಅವರನ್ನು ಸರಿಯಾಗಿ ಓದಿಕೊಳ್ಳುವುದು ಅಗತ್ಯ. ಬುದ್ಧವಾದ ಮತ್ತು ಮಾರ್ಕ್ಸ್ ವಾದ-ಎರಡನ್ನೂ ಏಕಕಾಲದಲ್ಲಿ ಒಪ್ಪಿಕೊಳ್ಳುವುದು ಸಾಧ್ಯವೇ ಇಲ್ಲ.
ಏಕೆಂದರೆ ಒಂದು ಶೋಷಕರ ಸಿದ್ಧಾಂತ, ಇನ್ನೊಂದು ಶೋಷಿತರ ಸಿದ್ಧಾಂತ!!
ಚಿತ್ರಕೃಪೆ :www.thequint.com