ಸುಳ್ಸುದ್ದಿ : ಉದ್ಯಮಿಗಳಿಬ್ಬರ ದೇವರ ಕೋಣೆಗಳು ಇನ್ನು ಮುಜರಾಯಿ ಇಲಾಖೆಯ ವಶಕ್ಕೆ!!
– ಪ್ರವೀಣ್ ಕುಮಾರ್ ಮಾವಿನಕಾಡು
ಹೂವು,ಹಣ್ಣು,ಅಗರಬತ್ತಿ,ಕರ್ಪೂರ ಮುಂತಾದ ಪೂಜಾ ಸಾಮಗ್ರಿಗಳ ಖರೀದಿಯ ಲೆಕ್ಕ ಪತ್ರಗಳನ್ನು ಸರಿಯಾಗಿ ನಿರ್ವಹಿಸದ ಕಾರಣ ನೀಡಿ ಬೆಂಗಳೂರಿನ ಇಬ್ಬರು ಉದ್ಯಮಿಗಳ ಪೂಜಾ ಗೃಹಗಳನ್ನು ಮುಜರಾಯಿ ಇಲಾಖೆಯ ವಶಕ್ಕೆ ಪಡೆಯುವ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ! ಉದ್ಯಮಿಗಳ ವಿರುದ್ದ ಅವರ ಹೆಂಡತಿ ಹಾಗೂ ಮಕ್ಕಳಿಂದ ಸಲ್ಲಿಕೆಯಾಗಿರುವ ದೂರುಗಳ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತರು ಮತ್ತು ಜಿಲ್ಲಾಧಿಕಾರಿ ಮಟ್ಟದಲ್ಲಿ ಪರಿಶೀಲನೆ ನಡೆಸಿದ ನಂತರ ಮುಂದಿನ ಕ್ರಮಗಳು ಜರುಗಲಿವೆ.ಈ ಬಗ್ಗೆ ಈಗಾಗಲೇ ಇಲಾಖೆಯ ಕಾನೂನು ತಜ್ಞರಿಂದ ಅಭಿಪ್ರಾಯ ನಿರೀಕ್ಷಿಸಲಾಗುತ್ತಿದ್ದು,ಅವರಿಂದ ಶಿಫಾರಸು ಬಂದ ನಂತರ ಇಲಾಖೆಯ ಆಯುಕ್ತರು ಅಗತ್ಯ ಕಾನೂನು ಕ್ರಮಕೈಗೊಳ್ಳುತ್ತಾರೆ ಎಂದು ಮುಜರಾಯಿ ಸಚಿವರು ತಿಳಿಸಿದರು.
ಇದಕ್ಕೂ ಮುನ್ನ ಒಬ್ಬ ಉದ್ಯಮಿಯ ಪತ್ನಿ,ತನ್ನ ಪತಿ ನನ್ನನ್ನು ತುಂಬಾ ಹಣ ಖರ್ಚಾಗುತ್ತದೆ ಎನ್ನುವ ಕಾರಣವೊಡ್ಡಿ ಶಾಪಿಂಗ್ ಗೆ ಕರೆದು ಕೊಂಡು ಹೋಗುವುದಿಲ್ಲ, ಆದರೆ ಪ್ರತೀ ತಿಂಗಳೂ ಸಂಕಷ್ಟ ಹರ ಗಣಪತಿ ವ್ರತಕ್ಕಾಗಿ ಸಾವಿರಾರು ರೂ.ಖರ್ಚು ಮಾಡುತ್ತಾರೆ.ಜೊತೆಗೆ ಖರ್ಚು ಮಾಡಿದ ಹಣದ ಲೆಕ್ಕ ಕೊಡಿ ಎಂದರೆ ಅದನ್ನೂ ಕೊಡುತ್ತಿಲ್ಲ ಎಂದು ದೂರು ದಾಖಲಿಸಿದ್ದರು.
ಇನ್ನೊಬ್ಬ ಉದ್ಯಮಿಯ ಪುತ್ರ,ನನ್ನ ತಂದೆ ತುಂಬಾ ಹಣ ಖರ್ಚಾಗುತ್ತದೆ ಎಂದು ನನ್ನ ಬಹು ದಿನದ ಬೇಡಿಕೆಯಾದ ಸೈಕಲ್ ಕೊಡಿಸಿರಲಿಲ್ಲ.ಆದರೆ ಮೊನ್ನೆ ಮೊನ್ನೆ ವರಮಹಾ ಲಕ್ಷ್ಮಿ ಹಬ್ಬಕ್ಕೆ ಸುಮಾರು ಹತ್ತು ಸಾವಿರ ರೂ.ಗಳಿಗಿಂತಾ ಹೆಚ್ಚು ಹಣ ಖರ್ಚು ಮಾಡಿದ್ದಾರೆ ಮತ್ತು ಇದ್ಯಾವುದಕ್ಕೂ ಸರಿಯಾದ ಲೆಕ್ಕ ಪತ್ರವನ್ನೂ ಇಟ್ಟಿಲ್ಲ ಎಂದು ದೂರು ದಾಖಲಿಸಿದ್ದನು.
ಆದರೆ ಆಕೆ ಮತ್ತು ಆ ಹುಡುಗ ಆಡಳಿತ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದು,ಕಳೆದ ಚುನಾವಣೆಯಲ್ಲಿ ಪಕ್ಷದ ಪರವಾಗಿ ಚುನಾವಣಾ ಪ್ರಚಾರ ಮಾಡಿದ್ದು,ಜೊತೆಗೆ ಈ ರೀತಿ ದೂರು ನೀಡಲು ಅವರಿಗೆ ಆಮಿಷ ಒಡ್ಡಲಾಗಿದೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ! ಈ ಬಗ್ಗೆ ಮಾತನಾಡಿದ ಮಾನ್ಯ ಸಚಿವರು,ಆ ಉದ್ಯಮಿಗಳ ವಿರುದ್ಧ ದೇವರುಗಳಿಗಾಗಿ ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡುತ್ತಿರುವ ಬಗ್ಗೆ ಕೆಲವು ದೂರುಗಳು ಸಲ್ಲಿಕೆಯಾಗಿದ್ದ ಕಾರಣ ಈ ಕ್ರಮ ಕೈಗೊಳ್ಳಬೇಕಾಯಿತು ಎಂದರು.ಒಮ್ಮೆ ಅವರ ಮನೆಯ ದೇವರ ಕೋಣೆಗಳು ಸರ್ಕಾರದ ವಶವಾದರೆ ದೇವರುಗಳ ಪೂಜೆಗಾಗಿ ಅನಗತ್ಯವಾಗಿ ಖರ್ಚು ಮಾಡುವ ಆ ಹಣವನ್ನು ಭಕ್ತಿಯಿಂದ ದರ್ಶನ ಮಾಡಲು ವಿದೇಶಗಳಿಗೆ ತೆರಳುವ ಬಡಬಾಂಧವರಿಗೆ ವಿಮಾನ ಪ್ರಯಾಣದ ಸಮಯದಲ್ಲಿ ಬಿರಿಯಾನಿ ನೀಡಲು ಬಳಸಬಹುದಾಗಿದೆ ಎಂದು ತಿಳಿಸಿದರು.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಮಾನ್ಯ ಕಂದಾಯ ಸಚಿವರ ಹೇಳಿಕೆ ಹೀಗಿದೆ: ”ಇದೊಂದು ಸ್ವಾಗತಾರ್ಹ ಬೆಳವಣಿಗೆ.ಸಾವಿರಾರು ರೂಪಾಯಿಗಳನ್ನು ಇಲ್ಲದ ದೇವರ ಪೂಜೆಗಾಗಿ ಖರ್ಚು ಮಾಡುವ ಬದಲು ಅದೇ ಹಣವನ್ನು ಬಡಬಾಂಧವರ ಮದುವೆ ಭಾಗ್ಯ,ಮಂಚ ಭಾಗ್ಯ,ಸೀರೆ ಭಾಗ್ಯ,ಲುಂಗಿಭಾಗ್ಯಗಳಿಗೆ ಉಪಯೋಗಿಸಬಹುದು. ಇದೇ ರೀತಿ ಪೆಟ್ರೋಲ್,ಡೀಸಲ್ ಮತ್ತು ಮೈಂಟೆನೆನ್ಸ್ ಗಳ ಬಗ್ಗೆ ಸರಿಯಾದ ಲೆಕ್ಕವಿಡದ ವಾಹನ ಮಾಲೀಕರ ವಾಹನಗಳನ್ನೂ ಸರ್ಕಾರ ವಶಕ್ಕೆ ಪಡೆದು ಮಂತ್ರಿ ಮಹೋದಯರ,ನಿಗಮ/ಮಂಡಳಿಗಳ ಅಧ್ಯಕ್ಷರ,ಉನ್ನತ ಅಧಿಕಾರಿಗಳ ಓಡಾಟಕ್ಕೆ ಅವುಗಳನ್ನು ಬಳಸಿಕೊಳ್ಳಬೇಕು.ಇದರಿಂದ ಗುತ್ತಿಗೆ ಆಧಾರದಲ್ಲಿ ಸರ್ಕಾರ ಪಡೆಯುವ ವಾಹನಗಳಿಗಾಗಿ ಖರ್ಚು ಮಾಡುವ ನೂರಾರು ಕೋಟಿ ಹಣ ಉಳಿತಾಯವಾಗಲಿದೆ”.
ಇದೇ ಸಮಯದಲ್ಲಿ,ಸರ್ಕಾರದ ಬಗ್ಗೆಯೂ ಹಲವಾರು ದೂರುಗಳಿವೆಯಲ್ಲಾ..ಹಾಗಾದರೆ ಸರ್ಕಾರವನ್ನು ಯಾರ ವಶಕ್ಕೆ ಒಪ್ಪಿಸುತ್ತೀರಿ ಎನ್ನುವ ಪತ್ರಕರ್ತರೊಬ್ಬರ ಪ್ರಶ್ನೆಗೆ ಒಂದು ಕ್ಷಣ ತಬ್ಬಿಬ್ಬಾದ ಸಚಿವರು ನಂತರ ಪೋಲೀಸರ ಮೂಲಕ ಆತನನ್ನು ಪತ್ರಿಕಾ ಗೋಷ್ಠಿಯ ಸ್ಥಳದಿಂದ ಹೊರ ಹಾಕಿಸಿದರು!!
ಇನ್ನು,ಈ ಇಬ್ಬರ ಮನೆಯ ದೇವರ ಕೋಣೆಗಳು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಲ್ಲಿ ನಂತರ ದೇವರ ಕೋಣೆಯಬೀಗದ ಕೀ ಗಳು ತಹಸೀಲ್ದಾರರ ವಶದಲ್ಲಿರಲಿದ್ದು, ಹಬ್ಬ,ಹರಿದಿನ ಮುಂತಾದ ವಿಶೇಷ ಸಂದರ್ಭಗಳಲ್ಲಿ ಮುಂಚಿತವಾಗಿ ತಿಳಿಸಿದಲ್ಲಿ ತಹಶೀಲ್ದಾರರು,ಮಾಲೀಕರ ಸಮ್ಮುಖದಲ್ಲಿ ಬೀಗವನ್ನು ತೆರೆದು ದೇವರ ಪೂಜೆಗೆ ಅವಕಾಶ ನೀಡಲಿದ್ದಾರೆ.ನಂತರ ಅವರೇ ಎಲ್ಲ ವಿಗ್ರಹಗಳನ್ನೂ ಪರಿಶೀಲಿಸಿ ಎಲ್ಲವೂ ಸರಿಯಾಗಿದೆ ಎನ್ನುವುದನ್ನು ಖಾತ್ರಿಪಡಿಸಿಕೊಂಡ ನಂತರ ಬಾಗಿಲನ್ನು ಭದ್ರಗೊಳಿಸಿ ಬೀಗ ಜಡಿಯಲಿದ್ದಾರೆ!
*ವಿ.ಸೂ:ಈ ಸುದ್ದಿಯು ಕೇವಲ ಸುಳ್ಸುದ್ದಿ ಹಾಗೂ ಕಾಲ್ಪನಿಕವಾಗಿದ್ದು,ಇತ್ತೀಚಿಗೆ ಉತ್ತಮ ಆದಾಯವಿರುವ ಹಿಂದೂ ದೇವಾಲಯಗಳನ್ನು ಗುರುತಿಸಿ ಅವುಗಳನ್ನು ಬೇರೆ ಬೇರೆ ಮಾರ್ಗಗಳ ಮೂಲಕ ಮುಜರಾಯಿ ಇಲಾಖೆಯ ವಶಕ್ಕೆ ಪಡೆಯುವ ಸರ್ಕಾರದ ಪ್ರಯತ್ನಗಳನ್ನು ನೋಡಿ ಕಲ್ಪಿಸಿಕೊಂಡಿದ್ದಾಗಿರುತ್ತದೆ.ಈ ಸುದ್ದಿಯು ಕೇವಲ ಮನರಂಜನೆಗಾಗಿ ಮಾತ್ರ.