ನಿಮಗೆ ನಮಸ್ಕಾರ
– ತೇಜಸ್ವಿನಿ ಹೆಗಡೆ,ಬೆಂಗಳೂರು
ಕೆ.ಎಸ್.ನರಸಿಂಹ ಸ್ವಾಮಿಯವರ ಕವನಗಳ ಕಡೆ ನನ್ನ ಗಮನ ಮೊತ್ತ ಮೊದಲ ಬಾರಿ ಹೋಗಿದ್ದು ನಾನು ಹೈಸ್ಕೂಲ್‍ನಲ್ಲಿದ್ದಾಗ. ಅವರ ಪ್ರಥಮ ಕವನ ಸಂಕಲನವಾದ `ಮೈಸೂರು ಮಲ್ಲಿಗೆ’ಯ ಕವಿತೆಗಳನ್ನು ಬಳಸಿಕೊಂಡು, ಅದೇ ಸಂಕಲನದ ಶೀರ್ಷಿಕೆ ಹಾಗೂ ಸುಮಧುರ ಸಂಗೀತದೊಂದಿಗೆ ಹೊರಬಂದ ಜನಪ್ರಿಯ ಕನ್ನಡ ಚಲಚಿತ್ರವನ್ನು ನೋಡಿದ ಮೇಲೇ! ಆವರೆಗೂ ಈ ಕವಿಯ ಹೆಸರು ಕೇಳಿದ್ದೆನಾದರೂ, ಹೆಚ್ಚು ಓದಿರಲಿಲ್ಲ. `ಮೈಸೂರು ಮಲ್ಲಿಗೆ’ ಕನ್ನಡ ಚಲನಚಿತ್ರದಲ್ಲಿ `ದೀಪವು ನಿನ್ನದೆ ಗಾಳಿಯೂ ನಿನ್ನದೇ ಆರದಿರಲಿ ಬೆಳಕು…’ ಅನ್ನೋ ಹಾಡನ್ನು ಸುಧಾರಾಣಿ ಕಣ್ತುಂಬಿಕೊಂಡು ಹಾಡಿದ್ದು ಕಂಡು ನನ್ನ ಕಣ್ಣೂ ಒದ್ದೆಯಾಗಿತ್ತು. ಚಿತ್ರದಲ್ಲಿ ಬರುವ ಘಟನೆಯ ತೀವ್ರತೆಗೂ ಮೀರಿ ಕೆ.ಎಸ್.ಎನ್ ಅವರ ಆ ಹಾಡು ನನ್ನ ಎದೆ ತಟ್ಟಿ, ಬೇರಾವುದೋ ಘಟ್ಟಕ್ಕೆ ಕೊಂಡೊಯ್ದು, ಮುಂದೆ ಅವರ ಇನ್ನಷ್ಟು ಕವಿತೆಗಳ ಓದುವಿಕೆಗೆ ಕಾರಣವಾಗಿತ್ತು. ಹಾಗಿತ್ತು ಆ ಕವಿತೆಯ ಸಾಹಿತ್ಯದ ಶಕ್ತಿ! ಚಲನಚಿತ್ರದಲ್ಲಿ ಒಂದು ಸೀಮಿತ ಘಟನೆಗಷ್ಟೇ ಈ ಹಾಡನ್ನು ಬಳಸಿಕೊಳ್ಳಲಾಗಿದ್ದು, ಅದರಿಂದಾಗಿ ಒಂದು ನಿರ್ಧಿಷ್ಟ ಪರಿಮಿತಿಯ ಅರ್ಥ ಪಡೆದುಕೊಂಡ ಈ ಅದ್ಭುತ ಕವಿತೆಯನ್ನು ಯಾವೆಲ್ಲಾ ಆಯಾಮದಲ್ಲಿ ಅರ್ಥೈಸಿಕೊಳ್ಳಬಹುದು, ಈ ಕವಿತೆಯ ಒಳಾರ್ಥ ಅದೆಷ್ಟು ತೀವ್ರವಾಗಿದೆ ಎಂಬುದನ್ನೆಲ್ಲಾ ಚಿಂತಿಸಿದಾಗ ಹೊಳೆದ ಅರ್ಥಗಳು ಇಲ್ಲಿವೆ. ನಾನಿಲ್ಲಿ ಅವರ ಎರಡು ಸುಂದರ ಕವಿತೆಗಳನ್ನು ವಿಶ್ಲೇಷಿಸುವ ದೊಡ್ಡ ಸಾಹಸಕ್ಕೆ ಕೈ ಹಾಕುತ್ತಿದ್ದೇನೆ. ಇದು ನನ್ನ ಸೀಮಿತ ಪರಿಮಿತಿಗೆ ದಕ್ಕಿದ್ದು ಎಂಬುದನ್ನೂ ಮೊದಲೇ ಹೇಳಿಬಿಡುತ್ತಿರುವೆ.
ಕೆ.ಎಸ್.ನ ಅವರ ಹುಟ್ಟು, ವಿದ್ಯಾಭ್ಯಾಸ, ವೃತ್ತಿ, ಪ್ರವೃತ್ತಿ, ಅವರ ಸಂಕಲನಗಳ ವಿವರಣೆ, ಅವರ ಅಸೀಮ ಪ್ರತಿಭೆಗೆ ಸಿಕ್ಕ ಪುರಸ್ಕಾರಗಳು, ಪ್ರಶಸ್ತಿಗಳು ಎಲ್ಲವೂ ಸವಿವರವಾಗಿ ಎಲ್ಲೆಡೆ ಲಭ್ಯವಿವೆ. ಅವರ `ಮೈಸೂರು ಮಲ್ಲಿಗೆ’, `ಉಂಗುರ’, `ದೀಪದ ಮಲ್ಲಿ’ ಇತ್ಯಾದಿ ಸಂಕಲನಗಳಲ್ಲಿರುವ ಕವಿತೆಗಳೆಲ್ಲಾ ಭಾವಗೀತೆಗಳಾಗಿದ್ದು, ನವೋದಯ ಶೈಲಿಯಲ್ಲಿವೆ. `ತೆರೆದ ಬಾಗಿಲು’ ಸಂಕಲನದಿಂದ ಅವರು ನವ್ಯ ಶೈಲಿಗೆ ಹೊರಳಿದ್ದನ್ನು ಗುರುತಿಸಬಹುದಾಗಿದೆ. ಅವರೇ ಹೇಳಿಕೊಂಡಂತೆ ಅವರು ಬರೆದದ್ದರಲ್ಲಿ ಹೆಚ್ಚಿನವು ದಾಂಪತ್ಯ ಗೀತೆಗಳು. ಅವರನ್ನು ಪ್ರೇಮ ಕವಿ, ಒಲವಿನ ಕವಿ ಎಂದೆಲ್ಲಾ ಹೊಗಳಿದರೂ, ಅವರದ್ದು ದಾಂಪತ್ಯದ ಚೌಕಟ್ಟಿನೊಳರಳಿದ ಪ್ರೇಮದ ಲಾಲಿತ್ಯ ಎನ್ನಬಹುದು. ಜನಪದದ ಸೊಗಡು, ಅಲ್ಲಿಯ ಮಣ್ಣಿನ ಕಂಪು, ಪುಟ್ಟ ಗಂಡ-ಹೆಂಡಿರ ಬೆಚ್ಚನೆಯ ಪ್ರೀತಿ, ವಿರಹ, ಶಾನುಭೋಗರ ಮಗಳ ಚೆಲುವು ಆಹಾ ಎಲ್ಲವೂ ಸೊಗಸು, ಸುಂದರ, ಆಹ್ಲಾದಕರ! ಅವರ ಆ ಕವಿತೆಗಳನ್ನೋದುವಾಗ ಆಗುವ ರಸಾನುಭೂತಿ ಅನಿರ್ವಚನೀಯ! ಹಾಗಾಗಿಯೇ ಅವರ `ಮೈಸೂರು ಮಲ್ಲಿಗೆ’ ಕವನ ಸಂಕಲನ ಅತಿ ಹೆಚ್ಚು ಜನಪ್ರಿಯತೆ ಪಡೆಯಿತು, ಈಗಲೂ ಜನರ ಮನೆ-ಮನಗಳಲ್ಲಿ ಹಾಡಾಗಿದೆ.
ಪ್ರಸ್ತುತ ನಾನು ಇಲ್ಲಿ ನರಸಿಂಹ ಸ್ವಾಮಿ ಅವರ `ಉಂಗುರ’ ಕವನ ಸಂಕಲನದಿಂದ `ಪ್ರಥಮ ರಾಜನಿಗೆ’ ಹಾಗೂ `ಉಂಗುರ’ ಕವಿತೆಗಳ ಕುರಿತು ನನ್ನ ಬುದ್ಧಿಯ ಮಿತಿಗೆ ನಿಲುಕಿದ ವಿಶ್ಲೇಷಣೆಯನ್ನು, ವಿಮರ್ಶೆಯನ್ನು ಬರೆಯಲೆತ್ನಿಸಿದ್ದೇನೆ. ಕೆ.ಎಸ್.ನ ಅವರ ಕವಿತೆಗಳು ಯಾವುದೇ ನಿರ್ಧಿಷ್ಟ ವಿಶ್ಲೇಷಣೆಗೆ ಸಿಲುಕುವಂಥವಲ್ಲ. ಅವರ ಬೇರೆ ಬೇರೆ ಸ್ಥರಗಳನ್ನೇರಿ ತುತ್ತ ತುದಿಯನ್ನು ಹೊಂದುವಂಥವೇ. ಈ ಕಷ್ಟವನ್ನರಿತೇ ನಾನಿಲ್ಲಿ ಕವಿಯ ಮರೆತು, ಈ ಕವಿತೆಗಳ ರಚನೆಯ ಹಿನ್ನೆಲೆ, ಮುನ್ನಲೆಗಳ ಗೋಜಲಿಗೆ ಹೋಗದೇ, ಕೇವಲ ಕವಿತೆಗಳನ್ನಷ್ಟೇ ಗಮನದಲ್ಲಿಟ್ಟುಕೊಂಡು, ಅಭ್ಯಸಿಸಿ ಬರೆಯಲೆತ್ನಿಸಿರುವೆ. ಇಷ್ಟಕ್ಕೂ ಕವಿತೆ ಎಂದರೆ ಅವರವರ ಭಾವಕ್ಕೆ ನಿಲುಕಿದ್ದು. ಇದಮಿತ್ಥಂ ಅನ್ನುವ ಪರಿಧಿಯ ಹಂಗು ಅವುಗಳಿಗಿಲ್ಲ, ಹಾಕಲೂ ಬಾರದು. ಹಾಗಾಗಿಯೇ ಈ ಕವಿತೆಯನ್ನೋದಿದಾಗ ನನ್ನೊಳಗೆ ಯಾವೆಲ್ಲಾ ಭಾವಗಳು ಸ್ಪುರಣಗೊಂಡವೋ, ಯಾವೆಲ್ಲಾ ಅರ್ಥಗಳು ಅರಿವಿಗೆ ಸಿಲುಕಿದವೋ, ಅವನ್ನೆಲ್ಲಾ ನಿರ್ಭಯಳಾಗಿ, ಹಿಂಜರಿಕೆಗಳ ಬಿಟ್ಟು, ಹರಿಯ ಬಿಟ್ಟಿದ್ದೇನೆ.
~~~~~~~~~~~~~~~~
1) `ಪ್ರಥಮ ರಾಜನಿಗೆ’
ಕವಿತೆಯ ಪೂರ್ಣ ಪಾಠ ಹೀಗಿದೆ
ದೀಪವೂ ನಿನ್ನದೆ, ಗಾಳಿಯೂ ನಿನ್ನದೆ,
– ಆರದಿರಲಿ ಬೆಳಕು!
ಕಡಲೂ ನಿನ್ನದೆ, ಹಡಗೂ ನಿನ್ನದೆ,
– ಮುಳುಗದಿರಲಿ ಬದುಕು!
ಬೆಟ್ಟವೂ ನಿನ್ನದೆ, ಬಯಲೂ ನಿನ್ನದೆ,
– ಹಬ್ಬಿ ನಗಲಿ ಪ್ರೀತಿ!
ನೆಳಲೋ ಬಿಸಿಲೋ, ಎಲ್ಲವೂ ನಿನ್ನವೆ
– ಇರಲಿ ಏಕರೀತಿ!
ಆಗೊಂದು ಸಿಡಿಲು, ಈಗೊಂದು ಮುಗಿಲು
– ನಿನಗೆ ಅಲಂಕಾರ.
ಅಲ್ಲೊಂದು ಹಕ್ಕಿ, ಇಲ್ಲೊಂದು ಮುಗುಳು
– ನಿನಗೆ ನಮಸ್ಕಾರ.
ಅಲ್ಲಿ ರಣದುಂದುಭಿ, ಇಲ್ಲೊಂದು ವೀಣೆ
– ನಿನ್ನ ಪ್ರತಿಧ್ವನಿ ;
ಆ ಮಹಾಕಾವ್ಯ, ಈ ಭಾವಗೀತೆ
– ನಿನ್ನ ಪದಧ್ವನಿ.
ಅಲ್ಲೊಂದು ಯುದ್ಧ, ಇಲ್ಲೊಬ್ಬ ಬುದ್ಧ,
– ಕೀರ್ತಿ ಇವು ನಿನಗೆ.
ಆ ಮಧ್ಯರಾತ್ರಿ, ಈ ಉದಯಸೂರ್ಯ
– ಮೂರ್ತಿ ಇವು ನಿನಗೆ.
ಕ್ಷಾಮ, ತುಷ್ಟಿ, ನಿನ್ನದೆ ಈ ಸೃಷ್ಟಿ
– ಕಡೆಗೆ ಎಲ್ಲಾ ಒಂದೆ.
ಹಿಡಿವುದೆಲ್ಲವನು ನಿನ್ನ ತಾಯ್‍ದೃಷ್ಟಿ,
– ನಿನಗೆ ಎಲ್ಲಾ ಒಂದೆ.
ಈ ಸೃಷ್ಟಿಗೆಲ್ಲ ಕರ್ತಾರನಾಗಿ,
– ಅಧ್ಯಕ್ಷನಾಗಲೊಲ್ಲೆ!
ಈ ಸೃಷ್ಟಿಗೆಲ್ಲ ಅಧಿಕಾರಿಯಾಗಿ,
– ಕಣ್ಗಿಲ್ಲವಾದೆ, ಅಲ್ಲೆ!
ಪ್ರಜೆಗಳನು ಕರೆದು ಇದೊ ರಾಜ್ಯವಿಹುದು;
ಆಳಬಹುದೆಂದು ನುಡಿದೆ;
ಅರಮನೆಯ ತೊರೆದು ಬಾಗಿಲನು ತೆರೆದು
ತಿರುಗಿ ನೋಡದೆಯೆ ನಡೆದೆ.
ಸರ್ವಶಕ್ತಿಯೇ ಸರ್ವತ್ಯಾಗದ
ಗಂಗೆಯಾಗಿ ಹಾರಿದೆ;
ಮುತ್ತಿನ ಕಿರೀಟ, ಮುಳ್ಳಿನ ಕಿರೀಟ
– ಯಾವುದೂ ಇಲ್ಲ ನಡೆದೆ.
ನಿನ್ನಂಥ ರಾಜ ಒಳಗಿದ್ದು ದೂರ;
– ಇನ್ನೆಲ್ಲೋ ನೀನು!
ರಾಜರಹಿತ ರಾಜ್ಯಾಂಗ ಶಾಸನದ
ಪ್ರಾಣಶಕ್ತಿಯೇ ನೀನು!
-`ಉಂಗುರ’ ಕವನ ಸಂಕಲನದಿಂದ (1949)
ಸಂಪೂರ್ಣ ಕವಿತೆಯನ್ನೋದಿದಾಗ ನನಗೆ ಹಲವು ಮಜಲುಗಳು ಈ ಕವಿತೆಯಲ್ಲಿ ಕಂಡು ಬಂದವು. ಮೊದಲೇ ಹೇಳಿರುವಂತೇ ಚಲನ ಚಿತ್ರದ ಹಾಡಿನಲ್ಲಿ ಈ ಕವಿತೆಯನ್ನು ಪತ್ನಿ, ಪತಿಯ ಅಗಲಿಕೆಯ ವಿರಹದಲ್ಲಿ ಹಾಡುವ ಸನ್ನಿವೇಶದಲ್ಲಿ ಬಳಸಿಕೊಳ್ಳಲಾಗಿದೆ. ಅಲ್ಲದೇ ಕವಿತೆಯಿಂದ ಕೇವಲ ಮೊದಲ ನಾಲ್ಕು ಚರಣಗಳನ್ನಷ್ಟೇ ಹಾಡಿನಲ್ಲಿ ಬಳಸಿಕೊಂಡಿದ್ದು, ಇದರಿಂದ ಹೆಚ್ಚಿನ ಕೇಳುಗರು/ನೋಡುಗರು ಅದಷ್ಟೇ ಪೂರ್ಣ ಪ್ರಮಾಣದ ಕವಿತೆಯೆಂದು ನಂಬಿದ್ದಾರೆ. ಆದರೆ ಸಂಪೂರ್ಣ ಕವಿತೆಯನ್ನು ಓದಿದಾಗ ಅದು ಪ್ರತಿ ಪದಗಳ ಅರ್ಥದ ಹಂಗಿಗೆ ಬೀಳದೆ ಹಲವಾರು ಭಾವಾರ್ಥಗಳನ್ನು ಓದುಗನಿಗೆ ಕೊಡುತ್ತಾ ಹೋಗುತ್ತದೆ.
ನನ್ನ ಪ್ರಕಾರ ಇದೊಂದು, ಬದುಕು, ಭಗವಂತ, ಗಾಂಧೀಜಿಯವರ ಅಂತ್ಯದ ವಿಷಾದ, ಅವರ ತತ್ತ್ವ/ಚಿಂತನೆ ಮತ್ತು ಆಧ್ಯಾತ್ಮ ಇವೆಲ್ಲವುಗಳನ್ನೊಳಗೊಂಡ ಅದ್ಭುತ ಕವಿತೆ.
ಮೊದಲ ನಾಲ್ಕು ಚರಣಗಳಲ್ಲಿ ಬದುಕೆಷ್ಟು ಹೊಯ್ದಾಟದಿಂದ ಕೂಡಿದೆ ಎನ್ನುವುದರ ಜೊತೆಗೆ, ಮನಸ್ಸು ಎರಡು ತೀವ್ರತೆಗಳ ನಡುವೆ ಹಾಗೊಮ್ಮೆ ಹೀಗೊಮ್ಮೆ ಓಲಾಡುತ್ತಿರುತ್ತದೆ ಎನ್ನುವ ಅರ್ಥ ಹೊಮ್ಮಿಸುತ್ತದೆ. ದೀಪದ ಜೊತೆಗೇ ಅದನ್ನಾರಿಸುವ ಬಿರುಗಾಳಿಯ ಆತಂಕವೂ ಸಹಜವಾದದ್ದು. ಜೀವ ಎಂದೊಡನೆಯೇ ಸಾವೂ ಇದ್ದೇ ಇರುತ್ತದೆ. ಆದರೆ ಅಕಾಲಿಕ ಅಂತ್ಯ, ಕೇವಲ ತಮಸ್ಸನ್ನಷ್ಟೇ ಹೊಂದಿದ ಮನಸ್ಸು- ಇವುಗಳು ಬೇಡ ಎನ್ನುವ ಕವಿ ಆಶಯ ಕಂಡು ಬರುತ್ತದೆ. ಕಡಲು ಅಂದರೆ ಇಹಲೋಕ, ಇದರಲ್ಲಿರುವ ಜೀವಿಗಳೆಲ್ಲಾ ಅವ ಸೃಷ್ಟಿಸಿದ ಹಡುಗಗಳೇ. ಇಹಲೋಕದಲ್ಲಿ ಬದುಕನ್ನು ಸೃಷ್ಟಿಸಿ ದಡ ಸೇರುವ ಮುನ್ನವೇ ತಳ ಸೇರಿಸಬೇಡವೆನ್ನುವ ದೈನ್ಯತೆಯ ವಿನಂತಿಯೂ ಇದೆ. ಇದು ಭಗವಂತನ ದೃಷ್ಟಿಯಲ್ಲಿ ನೋಡಿದಾಗ ಕಂಡು ಬರುವ ಅಂಶಗಳಾದರೆ, ಮನುಜನ ಮನಸಿನಾಟದ ದೃಷ್ಟಿ ಕೋನದಿಂದ ನೋಡಿದಾಗ ಬೇರೇ ರೀತಿಯಲ್ಲಿ ಕಾಣಿಸುತ್ತದೆ. ಸಮಸ್ಯೆಗಳು ಹಾಗೂ ಪರಿಹಾರ ಜೊತೆ ಜೊತೆಯಲ್ಲೇ ಇರುತ್ತವೆ. ಆಘಾತ-ಆಶಯಗಳು, ನಿರಾಸೆ-ನಿರೀಕ್ಷೆಗಳು ಎಲ್ಲವೂ ಅವನ (ಮನುಜನ) ಮನಸ್ಸನ್ನೇ ಅವಲಂಬಿಸಿದ್ದು. ಬದುಕು ಮುಳುಗದಂತೇ, ಜೀವನ ಜ್ಯೋತಿ ನಂದಂತೇ, ಕಾಪಿಡುವ ಸಾಮರ್ಥ್ಯ ಅವನ ಮನಸ್ಸಿನೊಳಗೇ ಇರುತ್ತದೆ. ಒಮ್ಮೆ ಬೆಟ್ಟದಂಥ ಚಿಂತೆಗಳ ಕೆಡವಿ ನಿಶ್ಚಿಂತೆಯ ಬಯಲ ಕಟ್ಟುವುದು, ಬದುಕಲ್ಲೆದುರಾಗುವ ಸಮಸ್ಯೆಗಳ ಬಿಸಿಲಿಗೆ ಧೈರ್ಯದ ನೆರಳು ಕಾಣಿಸುವುದು, ಎಲ್ಲವೂ ದೈವಿಚ್ಛೆಯ ಜೊತೆಗೇ ನಮ್ಮ ಮನಸಿನಿಚ್ಛೆಯನ್ನೂ ಅವಲಂಬಿಸಿರುತ್ತದೆ ಎನ್ನುವ ಸೂಚ್ಯ ಇಲ್ಲಿ ಸಿಗುತ್ತದೆ. ತೇನ ವಿನಾ ತೃಣಮಪಿ ನ ಚಲತಿ ಎನ್ನುವ ಸಂದೇಶವನ್ನು ಮನಸು ಮತ್ತು ಅಂಥಾ ಮನಸುಗಳ ಸೃಷ್ಟಿಕರ್ತನಿಗೆ ಸಮೀಕರಿಸಿರುವುದನ್ನು ಕಾಣಬಹುದಾಗಿದೆ. ಯಾವುದೂ ಶಾಶ್ವತವಲ್ಲ, ಕಷ್ಟ-ಕಾರ್ಪಣ್ಯಗಳ ಸಿಡಿಲು ಗುಡುಗಳ ನಡುವೆಯೂ ನಗುವಿದೆ, ಆ ನಂಬಿಕೆಯ, ಭರವಸೆಯ ನಗುವಿನ ಸಾಕ್ಷಾತ್ಕಾರಕ್ಕೆ ಕವಿ ನಮನವನ್ನೂ ಕಾಣಬಹುದು. ಏನೇ ಆದರೂ ನೋವು-ನಲಿವು ಏಕರೀತಿಯಲ್ಲಿರಲಿ, ಎಂಬ ಪ್ರಾರ್ಥನೆಯಿದೆ.
ಮುಂದಿನ ಕೆಲವು ಚರಣಗಳಲ್ಲಿ ಸ್ವಾತಂತ್ರ್ಯದ ಕರಿ ಛಾಯೆ, ಆ ದಿನಗಳ ಪರಿತಾಪಗಳು, ಸಾವು ನೋವುಗಳು, ಅವು ತಂದ ಯಾತನೆಗಳು – ಇವೆಲ್ಲವುದರ ಚಿತ್ರಣಗಳು ಕಂಡು ಬರುತ್ತದೆ. ಮೇಲಿನ ಚರಣಗಳಲ್ಲಿ ಎಲ್ಲವೂ ದೈವಿಚ್ಛೆಯ ಜೊತೆಗೆ ಮನುಷ್ಯನ ಮನೋಶಕ್ತಿಯ ದ್ರಷ್ಟಾಂತಗಳ ಕೊಡುತ್ತಾ, ಏನೇ ಬಂದರೂ ಸ್ವೀಕರಿಸುವ, ಎಲ್ಲವನ್ನೂ ಸಮಾನತೆಯಲ್ಲಿ ಕಾಣುವ ಸಂಕಲ್ಪವನ್ನು ಕಣಿಸುತ್ತಾ, ಇದನ್ನು ದಾಸ್ಯದಲ್ಲಿದ್ದ ಭಾರತ ಹಾಗೂ ಭಾರತೀಯರ ಹೋರಾಟದ ಜೊತೆಗೆ, ಅದರಲ್ಲೂ ವಿಶೇಷವಾಗಿ ಗಾಂಧೀಜಿಯವರ ತ್ಯಾಗ, ಚಿಂತನೆಗಳ ಜೊತೆಗೆ ಬಹು ಸೂಕ್ಷ್ಮವಾಗಿ ಬೆಸೆಯುತ್ತಾರೆ ಕವಿ. ಸ್ವಾತಂತ್ರ್ಯದ ಹೋರಾಟದ ಕಹಳೆಯ ಪ್ರತಿಧ್ವನಿ ಪ್ರತಿಯೊಬ್ಬನ ಎದೆಯೊಳಗೂ ವೀಣೆಯ ತಂತಿಯಂತೇ ಮಿಡಿಸಿದವರು ಗಾಂಧೀಜಿಯವರು. ಕ್ರಾಂತಿಯ ನಡುವೆಯೇ, ಶಾಂತಿ ಪ್ರತಿಪಾದಿಸಿದ ಬುದ್ಧನಂಥ ಗಾಂದೀಜಿಯವರ ನೇತೃತ್ವದಲ್ಲಿ ಅರ್ಧರಾತ್ರಿಯಲ್ಲಿ ಅಂತೂ ಇಂತೂ ಮೂರ್ತ ರೂಪ ಪಡೆದು ಉದಯಿಸಿದ ಭಾರತ/ಭಾರತೀಯನ ಸ್ವಾತಂತ್ರ್ಯ, ಇದಕ್ಕಾಗಿ ತೆರೆಬೇಕಾದ ಜೀವಗಳ ಬೆಲೆ ಇವೆಲ್ಲವುದರ ಚಿತ್ರಣ ಸಿಗುತ್ತಾ ಹೋಗುತ್ತದೆ. ತಾವು ಯಾವ ದೇಶದ ಬಿಡುಗಡೆಗಾಗಿ ಸರ್ವತ್ಯಾಗ ಮಾಡಿ ಹೋರಾಡಿದರೋ, ಅದನಾಳುವ ಸಮಯ ಬಂದಾಗ ನಿರ್ವಿಕಾರ ಚಿತ್ತರಾಗಿ ಎಲ್ಲವನೂ ಬಿಟ್ಟು, ಪರಿತ್ಯಜಿಸಿ ಅಂತರ್ಧರಾದ ಮಹಾತ್ಮರ ಬಗ್ಗೆ ಕವಿಯ ನೋವನ್ನು ಕಾಣುತ್ತೇವೆ. ರಾಜ್ಯಭಾರದ, ಅಧಿಕಾರದ ಲಾಲಸೆಯಾಗಲೀ, ಆ ಅಧಿಕಾರ ಕೊಡುವ ಶಕ್ತಿಯ ಸುಖದ ಮುತ್ತಿನ ಕಿರೀಟವನ್ನೂ ಸ್ವೀಕರಿಸದೇ, ಅಧಿಕಾರದ ಜೊತೆ ಜೊತೆಗೆ ಲಭ್ಯವಾಗುವ ಜವಾಬ್ದಾರಿಯುತ ಹೊಣೆಯ ಮುಳ್ಳಿನ ಕಿರೀಟವನ್ನೂ ತೊಡದೇ ಎಲ್ಲವನೂ ತೊರೆದವರ ಪ್ರತಿ ಒಂದು ಅರಿಯದ ಬೆರಗು, ಶ್ಲಾಘನೆ, ನೋವು ಎಲ್ಲವನ್ನೂ ಕವಿ ಪ್ರಕಟಿಸಿದ್ದಾನೆ ಎಂದೆನಿಸುತ್ತದೆ.
ಆದರೆ ನನ್ನ ಬಹುವಾಗಿ ಕಾಡಿದ್ದು ಈ ಕವಿತೆಯ ಕೊನೆಯ ಚರಣ! ಸ್ವತಂತ್ರ ಭಾರತದ ರಾಜ್ಯಾಂಗ ಶಾಸನದ ಸ್ವತಂತ್ರ ಶಕ್ತಿಯಾಗಿದ್ದ ಗಾಂಧೀಜಿ, ಯಾವುದೇ ಹುದ್ದೆ ಹೊಂದದೆಯೂ, ಘೋಷಿತ ರಾಜನಾಗದೆಯೂ, ಆತನೇ ನಮ್ಮೆಲ್ಲರ ಪ್ರಥಮ ರಾಜ, ಪ್ರಾಣ ಶಕ್ತಿ ಎಂಬ ಅರ್ಥೈಸುವಿಕೆ ಮೇಲ್ನೋಟಕ್ಕೆ ಈ ಕೊನೆಯ ಚರಣದಲ್ಲಿ ಕಂಡು ಬಂದರೂ, ಆಂತರ್ಯದಲ್ಲಿ ನನಗೆ ಈ ಚರಣದ ಸಾಲುಗಳೊಳಗೆ ಆತ್ಮನ ಪ್ರತಿಫಲನವೇ ಬಹು ಮುಖ್ಯವಾಗಿ ಕಂಡು ಬಂದಿತು. ದೇಹದೊಳಗೆ ಲಿಪ್ತವಾಗಿದ್ದೂ ಹೇಗೆ ಆತ್ಮ ಅಲಿಪ್ತನೋ, ದೇಹ ತೊರೆದಾಕ್ಷಣ ಎಂತು ಆತ್ಮ ನಿರ್ವಿಕಾರ, ನಿರ್ಮೋಹಿಯಾಗಿ ದೂರವಾಗುವನೋ, ಹೇಗಾತ (ಆತ್ಮ) ಯಾವುದೇ ಒಂದು ದೇಹದೊಳಗೆ ಬಂಧಿತನಾಗಿ ಉಳಿಯದೇ, ಸಕಲ ಜೀವಿಗಳ ಚೈತನ್ಯದೊಳು ತುಂಬುವ ಪ್ರಾಣ ಶಕ್ತಿಯೇ ಆಗಿಹನೋ, ಅಂಥಾ ರಾಜ್ಯ ರಹಿತ ಒಡೆಯನಾದ ಆತ್ಮನಂತೇ ಈ ದೇಶದ, ಪ್ರಜಾತಂತ್ರದ ರಾಜ ನೀನು ಎಂದು ಗಾಂಧೀಜಿಗೆ ತಮ್ಮ ಈ ಅಪೂರ್ವ ಭಾವಗೀತೆಯ ಮೂಲಕ ನಮನ ಸಲ್ಲಿಸಿದ್ದಾರೆ, ಶ್ರದ್ಧಾಂಜಲಿಯನ್ನಿದ್ದಾರೆ ಎಂದೆನಿಸಿತು.
ಹೀಗೆ ಬಹುಮುಖವುಳ್ಳ ಈ ಕವಿತೆ ಹಲವು ಸ್ಥರಗಳಲ್ಲಿ ನನ್ನ ಸೆಳೆಯಿತು. ಒಂದು ಕಡೆಯಿಂದ ನೋಡಿದರೆ ಇಡೀ ಕವನವೇ ಸೃಷ್ಟಿಕರ್ತನ ಕುರಿತು ಹೇಳುತ್ತಿರುವಂತೇ, ಆ ಭಗವಂತನ ಮಾಯೆಯ, ಅವನಾಟಗಳ ಮೇಲೆ ಬರೆದಂತೇ ಅನಿಸುತ್ತದೆ. ಇನ್ನೊಂದೆಡೆ ಎಲ್ಲವೂ ಸ್ವಯಂ ಕೃತ ಎಂದು ನಮಗೇ (ಮನುಷ್ಯನಿಗೆ) ಕವಿ ಹೇಳುತ್ತಿರುವಂತೆ ಭಾಸವಾಗುತ್ತದೆ. ಕೊನೆ ಕೊನೆಗೆ ನಮಗಾಗಿ ಪ್ರಾಣ ತ್ಯಾಗ ಮಾಡಿದ ಅಸಂಖ್ಯಾತ ಸ್ವಾತಂತ್ರ್ಯ ಯೋಧರಿಗೆಲ್ಲಾ ಸಮರ್ಪಿತವೇನೋ ಎಂದೆನಿಸಿದರೆ, ಎಲ್ಲೋ ಒಂದೆಡೆ ಮಹಾತ್ಮನಿಗಾಗಿಯೇ ಬರೆದಿರುವರೇನೋ ಎಂದೆನಿಸಿ ಬಿಟ್ಟಿತು. ಬೇಂದ್ರೆಯವರೊಂದು ಕಡೆ ಹೇಳಿದ್ದಾರಂತೆ.. ಎಲ್ಲೋ ಕೇಳಿದ್ದೇನೆ… `ನನ್ನ ಒಂದು ಕವಿತೆಯನ್ನು ಐನೂರು ಜನರು ಓದಿ, ಅದಕೆ ಐನೂರು ಅರ್ಥವನ್ನು ಕೊಟ್ಟರೆ, ಆ ಅಷ್ಟೂ ಅರ್ಥವನ್ನೂ ಆ ಕವಿತೆ ಹೊಂದಿರುತ್ತದೆ’ ಎಂದು. ಅಂತೆಯೇ ಈ ಒಂದು ಕವಿತೆಯೇ ನನ್ನಂಥ ಓರ್ವ ಓದುಗಳಲ್ಲಿ ಇಷ್ಟೆಲ್ಲಾ ಭಾವಾನುಭೂತಿಯ ಸ್ಪುರಣೆಗೆ ಕಾರಣೀಭೂತವಾಗುತ್ತದೆ ಎಂದರೆ ಇದು ಈ ಒಂದು ಕವಿತೆಯೊಳಗಿನ ಶಕ್ತಿಯೇ ಸರಿ ಎಂದೆನಿಸಿ ಬಿಟ್ಟಿತು! ಇಂಥಾ ಸುಂದರ, ಅನೂಹ್ಯ ಕವಿತೆಯನ್ನು ಕೊಟ್ಟು, ಅನನ್ಯ ಅನುಭೂತಿಗೆ ಕಾರಣನಾದ ಆ ಕವಿ ಮಹಾಶಯನಿಗೆ ನಮೋನ್ನಮಃ.
~~~~~
2) `ಉಂಗುರ’
ಕವಿತೆಯ ಪೂರ್ಣ ಪಾಠ ಹೀಗಿದೆ.
ಗಾಳಿ ಆಡಿದರೆ ಬನವೂ ಆಡಿ
ಹೂವಿನುಂಗುರ;
ಮಳೆ ಮೂಡಿದರೆ ಕೆರೆಯೂ ಆಡಿ
ನೀರಿನುಂಗುರ;
ತಾರೆ ಧುಮುಕಿದರೆ ಬಾನಿಗೆ ಬಾನೆ
ಬೆಳಕಿನುಂಗುರ;
ಕಣ್ಣ ತುಂಬಿ ಬಹ ನಿದ್ದೆಯ ಬೆರಳಿಗೆ
ಕನಸಿನುಂಗುರ;
ತುಂಬದ ಒಡಲಿಗೆ ತಾಂಬೂಲದ ತುಟಿ
ಬೆಂಕಿಯುಂಗುರ;
ಬಾಳ ಕಾಣದಿಹ ಕಲ್ಲ ಕಣ್ಣಿನಲಿ
ಮಣ್ಣಿನುಂಗುರ;
ಒಲ್ಲದ ಹೆಣ್ಣಿನ ಸಲ್ಲದ ಬಯಕೆಗೆ
ಎಲ್ಲೋ ದೂರದ
ಕನಸನೂಡಿಸುವ ಕೊರಗಿನ ಬೆರಳಿಗೆ
ಆಸೆಯುಂಗುರ;
ಎದೆಯ ಕತ್ತಲೆಯ ಪೊದೆಯಲಿ, ಕಮಲಾ,
ವಜ್ರದುಂಗುರ;
ನಿನ್ನ ಕೆನ್ನೆಯಲಿ ಮೆಲ್ಲಗೆ ನನ್ನಾ
ಪ್ರೇಮದುಂಗುರ.
-ಉಂಗುರ’ ಕವನ ಸಂಕಲನದಿಂದ (1949)
ಈ ಕವಿತೆಯಲ್ಲಿ ಲಹರಿಯೊಂದು ಬೇರೆ ಬೇರೆ ದೃಶ್ಯಗಳ ಮೂಲಕ ಸುಮಧುರವಾಗಿ, ಸುಶಾಂತವಾಗಿ ಹರಿದಿರುವುದು ಕಂಡುಬರುತ್ತದೆ. ಹಾಗಾಗಿ ಇದನ್ನೊಂದು ದೃಶ್ಯ ಲಹರಿಯ ಕಾವ್ಯ ಎನ್ನಬಹುದು. ಪ್ರತಿಯೊಂದು ಚರಣದಲ್ಲೂ ಒಂದೊಂದು ವಿಶಿಷ್ಟ, ವಿಭಿನ್ನ ದೃಶ್ಯವನ್ನು ಕಟ್ಟಿಕೊಡುತ್ತಾರೆ ಕವಿ. ಆ ಚಿತ್ರಣದ ತುಂಬೆಲ್ಲಾ ಚೇತೋಹಾರಿ ಲಹರಿಯೊಂದು ಅಲೆಯಲೆಯಾಗಿ ಹರಿದು ಮನದೊಳಗೆ ಭಾವನೆಗಳ ಉಂಗುರವನ್ನು ಸೃಷ್ಟಿಸುತ್ತದೆ.
ಗಾಳಿ ಅಲೆಯಲೆಯಾಗಿ ಬೀಸುವಾಗ, ಅರಳಿದ ಕುಸುಮಗಳು ಅದರ ನಾದಕ್ಕೆ ತಲೆಯಾಡಿಸಿ, ಅದು ಸುಯ್ಯಂದಂತೇ, ತಾವೂ ಮೆಲ್ಲನೆ ತಿರುಗಿ ಚಕ್ರಾವರ್ತನೆಯನ್ನುಂಟುಮಾಡುವ ಸುಂದರ ದೃಶ್ಯ, ಅಂತೆಯೇ ಮಳೆಯ ಹನಿಗಳು ಕೆರೆಯೊಳಗೆ ಬಿದ್ದಾಗ ಉಂಟಾಗುವ ನೀರಿನ ತರಂಗಗಳ ಚಿತ್ರಣ – ಇವೆಲ್ಲವನ್ನೂ ಮೊದಲ ಚರಣ ಬಹಳ ಮನೋಹರವಾಗಿ ಕಟ್ಟಿಕೊಡುತ್ತದೆ. ಬಾನಂಚಿನಲ್ಲಿ ಸುರುಳಿಯಾಗಿ ಬೀಳುವ ಧೂಮಕೇತುವಿನ ಸೊಬಗು, ನಿದ್ದೆ ಕಂಗಳೊಳಗಿಳಿವ ಕನಸೆಬ್ಬಿಸುವ ಚೆಲುವು, ಎಲ್ಲವೂ ಕಣ್ಣಿಗೆ ಕಟ್ಟುವಂತಿದೆ.
ಮೂರನೆಯ ಚರಣವನ್ನು ಎರಡು ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು. ಮೊದಲ ರೀತಿಯಲ್ಲಿ ಹೇಳಬೇಕೆಂದರೆ, ತುಂಬದ ಒಡಲು ಎಂಬುದನ್ನು ಹಸಿವಿನಿಂದ ಕೆಂಗೆಟ್ಟ, ಒಡಲಾಗ್ನಿಗೆ ಹೋಲಿಸಿಲಾಗಿದೆ. ಬರಿದಾದ ಒಡಲಿಗೆ ತಾಂಬೂಲ ರುಚಿಸದು, ಅದು ಮತ್ತಷ್ಟು ಹಸಿವನ್ನು ಕೆರಳಿಸುತ್ತದೆ! ಹಸಿದವನಿಗೆ ಆಹಾರವಷ್ಟೇ ತೃಪ್ತಿ ತರುತ್ತದೆಯೇ ವಿನಃ ತುಟಿ ಸವರುವ ತಾಂಬೂಲವಲ್ಲ ಎಂಬರ್ಥದಲ್ಲಿ ತೆಗೆದುಕೊಳ್ಳಬಹುದು. ಕೇವಲ ಮಾತಿನಿಂದ ಹೊಟ್ಟೆ ತುಂಬದು ಎನ್ನುವ ಭಾವವೂ ಇದರಲ್ಲಡಗಿದೆ. ಇದೇ ಸಾಲನ್ನು ಹೀಗೂ ತಿಳಿಯಬಹುದು – ತುಂಬದ ಒಡಲು ಎಂದರೆ ತಾಯ್ತನದ ಭಾಗ್ಯದಿಂದ ವಂಚಿತ ಹೆಣ್ಣಿಗೆ ಹೋಲಿಸಿಕೊಂಡರೆ, ಬರಿದಾದ ಮಡಿಲ ಕೊರಗಿನಲ್ಲಿರುವ ಹೆಣ್ಣಿಗೆ, ಮಿಲನ ಸಂತೃಪ್ತಿಯ ಕೊಡದೇ ಎದೆಯೊಳಗೆ ಬೆಂಕಿಯನ್ನೇ ಎಬ್ಬಿಸುತ್ತದೆ. ಮಿಲನದ ಫಲ ಸಿಗದೇ, ಅದರ ಪರಿಪೂರ್ಣತೆ ದಕ್ಕದೇ, ಅತೃಪ್ತಿಯಲ್ಲಿ ಬೇಯುವ ಹೆಣ್ಮನಸಿಗೆ ಸಾಂಗತ್ಯ ರುಚಿಸದು ಎಂಬರ್ಥವನ್ನೂ ಕಾಣಬಹುದಾಗಿದೆ. ಒಟ್ಟಿನಲ್ಲಿ ಹಸಿವಿರಲಿ, ಸಂತಾನ ವಿಹೀನತೆ ಇರಲಿ… ಆ ನೋವಿನ ಯಾತನೆಯ ಅಲೆಯಿಂದ ಬದುಕೇ ಬರಡೆಂದೆನಿಸಿ, ನೋಡುವ ನೋಟಕೆಲ್ಲಾ ಬರೀ ಮಣ್ಣು, ನಿರ್ಥಕವೆಂದೆನಿಸಿಬಿಡುತ್ತದೆ. ನಿಶ್ಚೇಚಿತ ಕಣ್ಗಳಲ್ಲಿ ಸಂಚಲನೆ ಕಾಣದು ಎಂಬುದನ್ನು ಕವಿ ಹೇಳುತ್ತಿದ್ದಾರೆ.
ಮುಂದಿನ ಚರಣದಲ್ಲಿ ಪರಿತ್ಯಕ್ತ ಹೆಣ್ಣು ಅಥವಾ ಒಲವು ಸಿಗದ ಹೆಣ್ಣಿನ ಮನಸಿನ ಚಿತ್ರಣವಿದೆ. ಈವರೆಗೂ ತನಗೆ ದಕ್ಕದ, ಪ್ರೀತಿಯ ಹಪಹಪಿಕೆಯ ಜೊತೆಗೇ, ಆ ಒಲವು ಇನ್ನೆಲ್ಲೋ ತನಗೆ ಸಿಗಬಹುದೆಂಬ ಆಶಯದ ತುಡಿತವಿದೆ. ಒಲವ ವಂಚಿತೆಯ ಆ ಕೊರಗಿನ ತುದಿಯಲ್ಲೆಲ್ಲೋ ಕನಸಿನ, ನಿರೀಕ್ಷೆಯ ಉಂಗುರವಿದೆ, ಎನ್ನುವ ಆಶಾಭಾವದ ಲಹರಿಯನ್ನು ಕಾಣಬಹುದಾಗಿದೆ. ಈ ಸಾಲುಗಳು ಯಾವುದೋ ಯಾಚನೆಯ ದಿಟ್ಟಿಯನ್ನು ಬೀರುತ್ತಾ ನಿಂತ ಹೆಣ್ಣಿನ ಕಡೆದಿಟ್ಟ ಶಿಲ್ಪದ ಚಿತ್ರಣವನ್ನೋ ಇಲ್ಲಾ ಚಿತ್ರಕಾರನೋರ್ವ ನಿರೀಕ್ಷೆಯಲ್ಲಿ ಸೋತರೂ ಕಣ್ಗಳಲ್ಲಿ ಕನಸ ಸಣ್ಣ ಬೆಳಕ ಚಿಮ್ಮಿ ಬಿಟ್ಟ ಅದ್ಭುತ ಚಿತ್ರದ ಪರಿಕಲ್ಪನೆಯನ್ನೋ ಕಟ್ಟಿಕೊಡುವಷ್ಟು ಸಶಕ್ತವಾಗಿವೆ.
ಕೊನೆಯ ಚರಣ ಮತ್ತೂ ಸುಂದರವಾಗಿದೆ. ಏಕಾಂತದಲಿ ಒಲಿದು ಬಂದ ನಲ್ಲೆಯ ಮೊಗ ಕತ್ತಲೆಯಲಿ ಕಾಣಿಸದೇ, ಅವಳ ಧರಿಸಿದ್ದ ಉಂಗುರದೊಳಗಿನ ವಜ್ರದ ಹರಳು ಪ್ರತಿಫಲಿಸಿ, ಅವಳ ಇರುವನ್ನು ಕಾಣಿಸಿದಾಗ, ನಲ್ಲ ಮೆಲ್ಲನೆ ಅವಳ ಗಲ್ಲದ ಮೇಲೊಂದು ಪ್ರೇಮದುಂಗುರವನ್ನಿತ್ತ ಎನ್ನುವ ಸುಂದರ ದೃಶ್ಯವನ್ನು ಕಾಣಿಸುವುದರ ಮೂಲಕ ಕವಿತೆಗೊಂದು ಚೆಲುವಾದ ಅಂತ್ಯವನ್ನು ಕಾಣಿಸಿದ್ದಾರೆ ಕವಿ. ಇದನ್ನು ಹೀಗೂ ಅರ್ಥೈಸಿಕೊಳ್ಳಬಹುದೆನ್ನಿಸಿತು. ನಲ್ಲನ ಎದೆಯ ಕತ್ತಲೆಯ ಪೆÇದೆಯಲಿ ಎಂದರೆ ಹರವಾದ ಎದೆ ತುಂಬಿಹ ಕಪ್ಪು ರೋಮಗಳ ರಾಶಿಯಲಿ ತನ್ನ ಮುಖಾರವಿಂದವನ್ನು ಹುದುಗಿಸಿದ ನಲ್ಲೆಯ ಮೂಗುತಿಯ ವಜ್ರದ ಹರಳು ಮಿಂಚಿದಾಗ, ಆತ ಅವಳಿಗಿತ್ತ ಮುತ್ತಿನುಂಗುರ!
ಈ ರೀತಿ `ಉಂಗುರ’ ಕವಿತೆಯೊಳಗಿನ ದೃಶ್ಯ ಲಹರಿಗಳೆಲ್ಲಾ, ಓದುಗನ ಮನಸೊಳಗೆ ನವಿರಾದ ಕಂಪನದುಂಗುರಗಳನ್ನೇರ್ಪಡಿಸುವಲ್ಲಿ ಸಫಲವಾಗುತ್ತವೆ. ಪ್ರತಿಯೊಂದು ಚರಣದೊಳಗೂ ಹೊಕ್ಕರೆ ಬೇರೆಯದೇ ಪ್ರಪಂಚದ ಆವರಣ, ಎಲ್ಲವೂ ಹೊಸ ಹೊಸ ಅನುಭೂತಿಗಳನ್ನು ಪ್ರೇರೇಪಿಸುವಂಥವೇ. ಈ ಕವಿತೆ ಕಿರು ಬೆರಳಿಗೆ ತೊಡಿಸಿ ಸಂಭ್ರಮಿಸುವ ಉಂಗುರದಷ್ಟೇ ಸುಂದರ, ಅದರ ಹಿನ್ನಲೆಯಷ್ಟೇ ಸುಮಧುರ. ಹಾಗೇ ನೆನಪು-ಕನಸುಗಳ ಆವರ್ತನವನ್ನು ಪ್ರತಿಫಲಿಸುವ, ಒಂದು ಪರಿಪೂರ್ಣತೆಯನ್ನು ತೋರುವ ಚಿತ್ರಣಗಳೊಳಗೊಂಡ ಹರಿವ ಲಹರಿ.