ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 18, 2015

8

ವಿಷ್ಣುವರ್ಧನ್: ಅವಕಾಶವಾದಿಗಳ ನಡುವೆ ನಲುಗಿದ ನಟ

‍ನಿಲುಮೆ ಮೂಲಕ

– ರಾಜಕುಮಾರ.ವ್ಹಿ.ಕುಲಕರ್ಣಿ,
ಮುಖ್ಯಗ್ರಂಥಪಾಲಕ, ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ

ವಿಷ್ಣುವರ್ಧನ್ವಿಷ್ಣುವರ್ಧನ್ ನಿಧನರಾದಾಗ ಸಿನಿಮಾವನ್ನು ಬಹುವಾಗಿ ಪ್ರೀತಿಸುವ ಪ್ರೇಕ್ಷಕರು ‘ಇನ್ನು ಮುಂದೆ ಭಾವನಾತ್ಮಕ ಪಾತ್ರಗಳಲ್ಲಿ ನಾವುಗಳು ಯಾರನ್ನು ನೋಡುವುದು’ ಎಂದು ಉದ್ಘರಿಸಿದರು. ಏಕೆಂದರೆ ಆ ಹೊತ್ತಿಗಾಗಲೆ ವಿಷ್ಣುವರ್ಧನ್ ಭಾವನಾತ್ಮಕ ಪಾತ್ರಗಳಲ್ಲಿ ಅಭಿನಯಿಸಿ ಕನ್ನಡಿಗರ ಮನಸ್ಸುಗಳಲ್ಲಿ ನೆಲೆಯೂರಿದ್ದರು. ಆಶ್ಚರ್ಯದ ಸಂಗತಿ ಎಂದರೆ ಈ ನಟನಿಗೆ ‘ಸಾಹಸ ಸಿಂಹ’ ಎನ್ನುವ ಬಿರುದಿನಿಂದ ಕನ್ನಡ ಚಿತ್ರರಂಗದಲ್ಲಿ ಐಡೆಂಟಿಟಿ ಸಿಕ್ಕರೂ ಅವರು ತಮ್ಮ ಭಾವನಾತ್ಮಕ ಪಾತ್ರಗಳಿಂದಲೇ ಕನ್ನಡ ಪ್ರೇಕ್ಷಕರಿಗೆ ಹತ್ತಿರವಾದರು. ಹೊಂಬಿಸಲು, ಬಂಧನ, ಸುಪ್ರಭಾತ, ಲಾಲಿಯಂಥ ಭಾವಪ್ರಧಾನ ಸಿನಿಮಾಗಳು ವಿಷ್ಣುವರ್ಧನ್ ಅವರಲ್ಲಿನ ಮನೋಜ್ಞ ಅಭಿನಯದ ಕಲಾವಿದನನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಜಗತ್ತಿಗೆ ಪರಿಚಯಿಸುವಲ್ಲಿ ಯಶಸ್ವಿಯಾದವು. ವಿಷ್ಣುವರ್ಧನ್ ನಟನಾ ವೃತ್ತಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದರಿಂದಲೇ ಅವರು ತಮ್ಮ ಸಿನಿಮಾ ಬದುಕಿನ ಯಶಸ್ಸಿನ ಉತ್ತುಂಗದಲ್ಲಿದಾಗಲೇ ಹೊಸದೊಂದು ಬದಲಾವಣೆಗೆ ತಮ್ಮನ್ನು ತಾವು ತೆರೆದುಕೊಂಡರು. ಹೀಗೆ ಪ್ರಯತ್ನಿಸದೆ ಹೋಗಿದ್ದರೆ ಅವರೊಳಗಿನ ಕಲಾವಿದ ಒಂದೇ ಪ್ರಕಾರದ ಪಾತ್ರಗಳಿಗೆ ಬ್ರ್ಯಾಂಡ್ ಆಗುವ ಅಪಾಯವಿತ್ತು. ಅನೇಕ ನಟ ನಟಿಯರು ತಮ್ಮ ವೃತ್ತಿಬದುಕಿನುದ್ದಕ್ಕೂ ಒಂದೇ ಪ್ರಕಾರದ ಪಾತ್ರಗಳಿಗೆ ಜೋತುಬಿದ್ದು ಆ ಒಂದು ಏಕತಾನತೆಯ ನಡುವೆ ಅವರೊಳಗಿನ ಕಲಾವಿದ ಕಳೆದು ಹೋಗಿರುವುದಕ್ಕೆ ಬಹಳಷ್ಟು ಉದಾಹರಣೆಗಳಿವೆ. ಅಂಥದ್ದೊಂದು ಸಮಸ್ಯೆಯಿಂದ ಕಳಚಿಕೊಳ್ಳುವಲ್ಲಿ ವಿಷ್ಣುವರ್ಧನ್ ಯಶಸ್ವಿಯಾದರೂ ಅವರೊಳಗಿನ ಪರಿಪೂರ್ಣ ಕಲಾವಿದನನ್ನು ಪರಿಚಯಿಸುವಲ್ಲಿ ಕನ್ನಡ ಚಿತ್ರರಂಗ ಸೋತಿದೆ ಎನ್ನುವುದು ಪ್ರಜ್ಞಾವಂತ ಪ್ರೇಕ್ಷಕರ ಅಭಿಮತ. ಇನ್ನು ಕೆಲವು ವರ್ಷಗಳ ಕಾಲ ವಿಷ್ಣುವರ್ಧನ್ ನಮ್ಮೊಡನಿದ್ದರೆ ಅವರನ್ನು ನಾವು ಒಬ್ಬ ಪರಿಪೂರ್ಣ ಮತ್ತು ಮಾಗಿದ ಕಲಾವಿದನಾಗಿ ನೋಡಲು ಸಾಧ್ಯವಿತ್ತೇನೋ. ಆದರೆ ಸಾವಿನ ರೂಪದಲ್ಲಿ  ಬಂದ ವಿಧಿ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿತು. ಬದುಕಿದ್ದರೆ ಈ ದಿನ (ಸೆಪ್ಟೆಂಬರ್, 18) ವಿಷ್ಣುವರ್ಧನ್ ತಮ್ಮ 65 ನೆ ಜನ್ಮದಿನ ಆಚರಿಸಿಕೊಳ್ಳುತ್ತಿದ್ದರು.

ವಿಷ್ಣುವರ್ಧನ್ ಆಕಸ್ಮಿಕವಾಗಿ ಸಿನಿಮಾ ರಂಗಕ್ಕೆ ಬಂದವರಲ್ಲ. ನಟನೆಯ ಒಂದಿಷ್ಟು ತಯ್ಯಾರಿ ಮಾಡಿಕೊಂಡೆ ಈ ನಟ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದು. ವಿದ್ಯಾರ್ಥಿಯಾಗಿದ್ದಾಗ ನಾಟಕಗಳಲ್ಲಿನ ಅಭಿನಯ ಸಿನಿಮಾ ಪ್ರಪಂಚಕ್ಕೆ ಕರೆತಂದಿತು. ಅಭಿನಯಿಸಿದ ಮೊದಲ ಸಿನಿಮಾ ‘ವಂಶ ವೃಕ್ಷ’. ಬಿ.ವಿ.ಕಾರಂತರ ಗರಡಿಯಲ್ಲಿನ ಸಿನಿಮಾ ಅಭಿನಯದ ತಾಲೀಮು ನಂತರದ ದಿನಗಳಲ್ಲಿ ಅಭಿನಯ ಪ್ರವೃತ್ತಿಗೆ ಭದ್ರಬುನಾದಿ ಹಾಕಿತು. ಹೆಸರು ಬದಲಿಸಿಕೊಂಡು ಕುಮಾರನಿಂದ ವಿಷ್ಣುವರ್ಧನನಾಗಿ ಪೂರ್ಣಪ್ರಮಾಣದ ನಾಯಕನಾಗಿ ಅಭಿನಯಿಸಿದ ಪ್ರಥಮ ಚಿತ್ರ ‘ನಾಗರ ಹಾವು’. ಪುಟ್ಟಣ್ಣ ಕಣಗಾಲ ಆ ಹೊತ್ತಿಗಾಗಲೇ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಿರ್ದೇಶಕನೆಂದು ಗುರುತಿಸಿಕೊಂಡಿದ್ದರು. ಗೆಜ್ಜೆಪೂಜೆ, ಶರಪಂಜರ, ಬೆಳ್ಳಿಮೋಡದಂಥ ನಾಯಕಿ ಪ್ರಧಾನ ಸಿನಿಮಾಗಳನ್ನು ನಿರ್ದೇಶಿಸಿ ಸಿನಿಮಾ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದ್ದರು. ತಮ್ಮ ನಿರ್ದೇಶನದ ಸಿನಿಮಾಗಳಲ್ಲಿ ಅಭಿನಯಿಸುವ ಕಲಾವಿದರಿಗೆ ಸ್ಟಾರ್ ವ್ಯಾಲ್ಯೂ ತಂದುಕೊಡುವ ನಿರ್ದೇಶಕ ಈ ಪುಟ್ಟಣ್ಣ ಕಣಗಾಲ್ ಎನ್ನುವ ಮಾತುಗಳು ಆ ದಿನಗಳಲ್ಲಿ ಕನ್ನಡ ಸಿನಿಮಾರಂಗದಲ್ಲಿ ದಟ್ಟವಾಗಿ ಕೇಳಿಬರುತ್ತಿದ್ದವು. ಜೊತೆಗೆ ಈ ನಿರ್ದೇಶಕ ನಿರ್ದೇಶಿಸಿದ ಬಹಳಷ್ಟು ಸಿನಿಮಾಗಳು ನಾಯಕಿ ಪ್ರಧಾನ ಸಿನಿಮಾಗಳೇ ಆಗಿರುತ್ತಿದ್ದವು. ಈಶ್ವರಿ ಸಂಸ್ಥೆಯ ಎನ್.ವೀರಾಸ್ವಾಮಿ ನಾಯಕ ಪ್ರಧಾನ ಸಿನಿಮಾ ಮಾಡಲು ಹೊರಟಾಗ ಈ ಸಂಸ್ಥೆಯ ಜನಪ್ರಿಯತೆ ಮತ್ತು ಅವರಲ್ಲಿನ ಸಿನಿಮಾ ನಿರ್ಮಾಣ ಕುರಿತಾದ ಬದ್ಧತೆಯ ಪರಿಣಾಮ ಪುಟ್ಟಣ್ಣ ಕಣಗಾಲ್ ಸಿನಿಮಾ ಮಾಡಿಕೊಡಲು ಒಪ್ಪಿದರು. ತರಾಸು ಅವರ ಕಾದಂಬರಿ ‘ನಾಗರ ಹಾವು’ ಸಿನಿಮಾದ ಕಥಾವಸ್ತುವಾಯಿತು. ಹೊಸನಟನೊಬ್ಬನನ್ನು ನಾಯಕನಾಗಿ ಪರಿಚಯಿಸಬೇಕೆನ್ನುವ ನಿರ್ದೇಶಕರ ಮತ್ತು ನಿರ್ಮಾಪಕರ ಮಹತ್ವಾಕಾಂಕ್ಷೆಯಿಂದಾಗಿ ವಿಷ್ಣುವರ್ಧನ್ ಎನ್ನುವ ಪ್ರತಿಭೆ ಕನ್ನಡ ಸಿನಿಮಾ ರಂಗದಲ್ಲಿ ಅರಳಿಕೊಂಡಿತು. ಆರತಿ, ಜಯಂತಿ, ಅಶ್ವತ್ಥ, ಲೀಲಾವತಿ, ಎಂ.ಪಿ.ಶಂಕರ ಅವರಂಥ ಪ್ರತಿಭಾನ್ವಿತರು ಅಭಿನಯಿಸಿದ ‘ನಾಗರ ಹಾವು’ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿತು. ಕನ್ನಡ ಸಿನಿಮಾರಂಗದಲ್ಲಿ ರಾಜಕುಮಾರ ನಂತರ ಹೊಸ ಸೂಪರ್ ಸ್ಟಾರ್ ವಿಷ್ಣುವರ್ಧನ್ ರೂಪದಲ್ಲಿ ಜನ್ಮತಳೆದ.

ವಿಷ್ಣುವರ್ಧನ್ ವೃತ್ತಿ ಬದುಕಿಗೆ ‘ನಾಗರ ಹಾವು’ನಂಥ ಹಿಟ್ ಸಿನಿಮಾದ ಮೂಲಕ ಭದ್ರ ಬುನಾದಿ ಒದಗಿಸಿದ ನಿರ್ದೇಶಕ ಪುಟ್ಟಣ್ಣ ಕಣಗಾಲ್ ತಮ್ಮ ವೃತ್ತಿ ಬದುಕಿನಲ್ಲಿ ಅದೇ ವಿಷ್ಣುವರ್ಧನ್‍ಗಾಗಿ ಮತ್ತೊಂದು ಸಿನಿಮಾ ನಿರ್ದೇಶಿಸಲೇ ಇಲ್ಲ. ಪುಟ್ಟಣ್ಣ ಕಣಗಾಲ್ ಚಿತ್ರರಂಗಕ್ಕೆ ಪರಿಚಿಯಸಿದ ಅನೇಕ ಕಲಾವಿದರು ಮತ್ತೆ ಮತ್ತೆ ಅವರ ನಿರ್ದೇಶನದ ಸಿನಿಮಾಗಳಲ್ಲಿ ಅಭಿನಯಿಸಿದ ಉದಾಹರಣೆಗಳಿವೆ. ಆದರೆ ವಿಷ್ಣುವರ್ಧನ್ ವಿಷಯದಲ್ಲಿ ಮಾತ್ರ ಈ ಮಾತು ಸುಳ್ಳಾಯಿತು. ತಾನೊಬ್ಬ ಸ್ಟಾರ್ ನಿರ್ದೇಶಕ ಎನ್ನುವ ಅಹಂ ಪುಟ್ಟಣ್ಣ ಕಣಗಾಲರಿಗಿದ್ದಂತೆ ನಾಯಕನಾಗಿ ಅಭಿನಯಿಸಿದ ಪ್ರಥಮ ಚಿತ್ರದಲ್ಲೇ ದೊರೆತ ಅದ್ಭುತ ಯಶಸ್ಸು ವಿಷ್ಣುವರ್ಧನ್‍ಗೂ ತಾನೊಬ್ಬ ಜನಪ್ರಿಯ ನಟ ಎನ್ನುವ ಅಹಂಗೆ ಕಾರಣವಾಯಿತೇನೋ? ಪರಸ್ಪರರಲ್ಲಿನ ಈ ಅಹಂಕಾರದ ಗುಣವೆ ಅವರಿಬ್ಬರೂ ಮತ್ತೆ ಜೊತೆಗೂಡಿ ಮತ್ತೊಂದು ಯಶಸ್ಸನ್ನು ಕೊಡಲು ಸಾಧ್ಯವಾಗಲಿಲ್ಲ. ಜೊತೆಗೆ ಆ ಹೊತ್ತಿಗಾಗಲೆ ವಿಷ್ಣುವರ್ಧನ್ ಸುತ್ತ ಅವಕಾಶವಾದಿ ನಿರ್ಮಾಪಕರ ಒಂದು ಪಡೆ ಭದ್ರಕೋಟೆಯನ್ನೇ ನಿರ್ಮಿಸಿತ್ತು. ಆ ಕೋಟೆಯಿಂದ ಹೊರಬರಲು ವಿಷ್ಣುವರ್ಧನ್‍ಗೆ ಬಹಳಷ್ಟು ಸಮಯ ಬೇಕಾಯಿತು.

ವಿಷ್ಣುವರ್ಧನ್ ‘ಗಂಧದ ಗುಡಿ’ ಸಿನಿಮಾದಲ್ಲಿ ಖಳನ ಪಾತ್ರದಲ್ಲಿ ನಟಿಸಿದ್ದು ನನ್ನನ್ನು ಆ ನಟನ ವಿಷಯವಾಗಿ ಇವತ್ತಿಗೂ ಕಾಡುವ ಸಂಗತಿಗಳಲ್ಲೊಂದು. ಹಾಗೆಂದ ಮಾತ್ರಕ್ಕೆ ಕಲಾವಿದನಾದವನು ಒಂದೇ ರೀತಿಯ ಪಾತ್ರಗಳಿಗೆ ತನ್ನ ನಟನೆಯನ್ನು ಸೀಮಿತಗೊಳಿಸಿಕೊಳ್ಳಬೇಕು ಎನ್ನುವುದು ನನ್ನ ವಾದವಲ್ಲ. ಆದರೆ 1970 ರ ದಶಕದಲ್ಲಿ ಒಂದು ಇಮೇಜಿಗಾಗಿ ಹಂಬಲಿಸುತ್ತಿದ್ದ ನಾಯಕನಟರು ಯಾವತ್ತೂ ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಬಯಸುತ್ತಿರಲಿಲ್ಲ. ಹಾಗೊಂದು ವೇಳೆ ನಾಯಕನಟನನ್ನು ನೆಗೆಟಿವ್ ಪಾತ್ರದಲ್ಲಿ ತೋರಿಸುವುದು ಸಿನಿಮಾ ಕಥೆಗೆ ಅನಿವಾರ್ಯವಾದರೆ ಆಗ ದ್ವಿಪಾತ್ರದ ಸೃಷ್ಟಿಯಾಗುತ್ತಿತ್ತು. ಈಗ ನಾನು ಮತ್ತೆ ವಿಷ್ಣುವರ್ಧನ್ ವಿಷಯಕ್ಕೆ ಬರುತ್ತೇನೆ. ನಾಯಕ ನಟನಾಗಿ ಅಭಿನಯಿಸಿದ ಮೊದಲ ಸಿನಿಮಾ ಅಪಾರ ಜನಪ್ರಿಯತೆ ಮತ್ತು ಅದ್ಭುತ ಯಶಸ್ಸನ್ನು ತಂದುಕೊಟ್ಟಿತ್ತು. ಅನೇಕ ಸಿನಿಮಾಗಳಲ್ಲಿ ನಾಯಕನಾಗಿ ಅಭಿನಯಿಸಲು ಚಿತ್ರರಂಗದ ಅವಕಾಶದ ಬಾಗಿಲು ತೆರೆದುಕೊಂಡಿತ್ತು. ಸಿನಿಮಾರಂಗದಲ್ಲಿ ಭದ್ರವಾಗಿ ನೆಲೆಯೂರುವ ಎಲ್ಲ ಲಕ್ಷಣಗಳು ನಿಚ್ಚಳವಾಗಿದ್ದವು. ಹೀಗಿದ್ದೂ ‘ಗಂಧದ ಗುಡಿ’ ಚಿತ್ರಕ್ಕೆ ವಿಷ್ಣುವರ್ಧನ್ ಅವರನ್ನು ಖಳನ ಪಾತ್ರಕ್ಕೆ ಆಯ್ಕೆ ಮಾಡಿದ್ದು ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕರ ತಪ್ಪು ಎಂದಾದರೆ, ವಿಷ್ಣು ಆ ಪಾತ್ರವನ್ನು ಒಪ್ಪಿಕೊಂಡಿದ್ದು ಇನ್ನೊಂದು ತಪ್ಪು. ಪಾತ್ರದ ಆಯ್ಕೆಯಲ್ಲಿ ಎಡವಿದ ಈ ಒಂದು ಘಟನೆ ಆ ನಟನ ದುಡುಕಿನ ನಿರ್ಧಾರ ಎಂದೆನಿಸಿದರೂ ಎಲ್ಲೋ ಕೆಲವರ ಋಣದ ಭಾರ ಆ ಸಂದರ್ಭ ವಿಷ್ಣುವರ್ಧನ್‍ಗೆ ಅಂಥದ್ದೊಂದು ಪಾತ್ರ ಒಪ್ಪಿಕೊಳ್ಳುವಂತೆ ಮಾಡಿತು ಎನ್ನುವುದು ಸಿನಿಮಾ ವಲಯದಲ್ಲಿ ಇವತ್ತಿಗೂ ಕೇಳಿಬರುತ್ತಿರುವ ಮಾತಿದು. ಒಟ್ಟಿನಲ್ಲಿ ಆ ಪಾತ್ರವನ್ನು ಒಪ್ಪಿಕೊಂಡು ಅಭಿನಯಿಸಿದ ನಂತರ ವಿಷ್ಣುವರ್ಧನ್ ಖಾಸಗಿ ಮತ್ತು ವೃತ್ತಿ ಬದುಕುಗಳೆರಡರಲ್ಲೂ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು.

ವಿಷ್ಣುವರ್ಧನ್ ಕನ್ನಡ ಚಿತ್ರರಂಗ ಕಂಡ ಅತ್ಯಂತ ಸ್ಪುರದ್ರೂಪಿ ನಟ. ‘ನಾಗರ ಹಾವು’ ಸಿನಿಮಾದ ಯಶಸ್ಸು ಅವರಿಗೆ ಅವಕಾಶಗಳ ಮಳೆಯನ್ನೇ ಸುರಿಸಿತು. ನಾಗರ ಹೊಳೆ, ಭಾಗ್ಯಜ್ಯೋತಿ, ಬಂಗಾರದ ಗುಡಿ, ಸಿರಿತನಕ್ಕೆ ಸವಾಲ್‍ನಂಥ ಅನೇಕ ಹಿಟ್ ಸಿನಿಮಾಗಳು ಅವರನ್ನು ಜನಪ್ರಿಯತೆ ಮತ್ತು ಯಶಸ್ಸಿನ ಉತ್ತುಂಗಕ್ಕೇರಿಸಿದವು. ಹೀಗೆ ಯಶಸ್ಸಿನ ಏಣಿಯನ್ನು ಹತ್ತಿ ಕುಳಿತ ಈ ನಟ ಕನ್ನಡ ಚಿತ್ರರಂಗದ ಎರಡನೆ ನಾಯಕನಾಗಿ ತನ್ನ ಅಸ್ತಿತ್ವವನ್ನು ಗುರುತಿಸಿಕೊಂಡರು. ಈ ಸಂದರ್ಭದಲ್ಲೇ ವಿಷ್ಣುವರ್ಧನ್ ಪ್ರಬಲ ಪೈಪೋಟಿಯನ್ನು ಎದುರಿಸಬೇಕಾಯಿತು. ವಿಷ್ಣುವರ್ಧನ್ ಆಗಮನ ವೇಳೆಗಾಗಲೆ ರಾಜಕುಮಾರ ನೂರನಲವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡ ಚಿತ್ರರಂಗದ ಏಕಮೇವಾದ್ವಿತಿಯ ನಾಯಕನಾಗಿ ಪ್ರತಿಷ್ಠಾಪನೆಗೊಂಡಿದ್ದರು. ಕನ್ನಡ ನಾಡಿನ ಅಬಾಲವೃದ್ಧರಾದಿಯಾಗಿ ಎಲ್ಲ ವಯೋಮಾನದ ಪ್ರೇಕ್ಷಕರು ರಾಜಕುಮಾರರ ಅಭಿನಯವನ್ನು ಮೆಚ್ಚಿಕೊಂಡಿದ್ದರು. ಎರಡು ದಶಕಗಳಿಗೂ ಹೆಚ್ಚು ಕಾಲ ಪೈಪೋಟಿಯನ್ನೆ ಕಾಣದಿದ್ದ ರಾಜಕುಮಾರ ಸಿನಿಮಾಗಳಿಗೆ ವಿಷ್ಣುವರ್ಧನ್ ಸಿನಿಮಾಗಳು ಪ್ರಬಲ ಸ್ಪರ್ಧೆಯೊಡ್ಡಲಾರಂಭಿಸಿದವು. ರಾಜಕುಮಾರ ಗುಂಪಿನ ಖಾಯಂ ನಿರ್ದೇಶಕರು, ನಿರ್ಮಾಪಕರು ಮತ್ತು ಕಲಾವಿದರು ಹೊಸ ನಟನೊಬ್ಬನ ಆಗಮನದ ಪರಿಣಾಮ ಅವನನ್ನು ಹುಡುಕಿಕೊಂಡು ವಲಸೆ ಹೋಗಲಾರಂಭಿಸಿದರು. ಆಗಲೇ ರಾಜಕುಮಾರ ಆಸ್ಥಾನದ ಖಾಯಂ ಹೊಗಳು ಭಟ್ಟರಾಗಿ ಠಳಾಯಿಸಿದ್ದ ನಿರ್ಮಾಪಕರು ಮತ್ತು ನಿರ್ದೇಶಕರು ಎಚ್ಚೆತ್ತುಕೊಂಡರು. ರಾಜಕುಮಾರ ಅವರನ್ನು ಓಲೈಸುತ್ತ ತಮ್ಮ ಹಣದ ಥೈಲಿಯನ್ನು ತುಂಬಿಕೊಂಡ ನಿರ್ಮಾಪಕರಿಗೆ ಮತ್ತು ಸಿನಿಮಾ ವಿತರಕರಿಗೆ ವಿಷ್ಣುವರ್ಧನ್ ಆಗಮನ ಮತ್ತು ಬೆಳವಣಿಗೆ ತೊಡಕಾಗಿ ಪರಿಣಮಿಸಿತು.ಇನ್ನೊಂದೆಡೆ ರಾಜಕುಮಾರ ಅವರನ್ನು ಹಾಕಿಕೊಂಡು ಸಿನಿಮಾಗಳನ್ನು ನಿರ್ಮಿಸಲು ಅವಕಾಶ ವಂಚಿತರಾದ ನಿರ್ಮಾಪಕರ ಪಾಲಿಗೆ ವಿಷ್ಣುವರ್ಧನ್ ಹೊಸ ಭರವಸೆಯಾಗಿ ಗೋಚರಿಸತೊಡಗಿದರು. ಹೀಗೆ ರಾಜಕುಮಾರ ಪರ ಮತ್ತು ವಿರೋಧಿ ಗುಂಪುಗಳು ವಿಷ್ಣುವರ್ಧನ್ ಅವರನ್ನು ಕೇಂದ್ರವಾಗಿಟ್ಟುಕೊಂಡು ಪೈಪೋಟಿಯ ನಾಟಕ ಹೆಣೆಯತೊಡಗಿದರು. ಅಂಥದ್ದೊಂದು ನಾಟಕಕ್ಕೆ ರಾಜಕುಮಾರ ಮತ್ತು ಅವರ ಕುಟುಂಬ ವರ್ಗ ಆವತ್ತೇ ತೆರೆ ಎಳೆದಿದ್ದರೆ ವಿಷ್ಣುವರ್ಧನ್ ವೃತ್ತಿ ಬದುಕು ಅನೇಕ ತಿರುವುಗಳನ್ನು ಪಡೆದುಕೊಳ್ಳುತ್ತಿರಲಿಲ್ಲ. ಜೊತೆಗೆ ಅಸುರಕ್ಷತೆಯ ಭಯ ಈ ನಟನನ್ನು ಬದುಕಿನ ಕೊನೆಯ ದಿನಗಳವರೆಗೂ ಕಾಡುತ್ತಿರಲಿಲ್ಲ.

ಪೈಪೋಟಿ ಮತ್ತು ಸ್ಪರ್ಧೆಯ ಪರಿಣಾಮ ವಿಷ್ಣುವರ್ಧನ್‍ಗೆ ರಾಜಕುಮಾರ ಅವರ ಪ್ರಭಾವಳಿಯಿಂದ ಹೊರಬರಲು ಸಾಧವಾಗದೆ ಹೋಯಿತು. ರಾಜಕುಮಾರ ಪಾತ್ರಗಳ ನೆರಳು ಸೋಕದಂತೆ ಅಭಿನಯಿಸುವ ಅವಕಾಶವನ್ನು ಅವರನ್ನು ಸುತ್ತುವರಿದ ನಿರ್ದೇಶಕರು ಮತ್ತು ನಿರ್ಮಾಪಕರುಗಳು ಮಾಡಿಕೊಡಲೇ ಇಲ್ಲ. ಮತ್ತೊಬ್ಬ ರಾಜಕುಮಾರನನ್ನು ಸೃಷ್ಟಿಸುವ ಭರಾಟೆಯಲ್ಲಿ ಅವರೆಲ್ಲ ವಿಷ್ಣುವರ್ಧನ್ ಎನ್ನುವ ನಟನನ್ನು ರಾಜಕುಮಾರ ನಡೆದ ದಾರಿಯಲ್ಲೇ ನಡೆಯುವಂತೆ ಮಾಡಿದರು. ಪರಿಣಾಮವಾಗಿ ಇಬ್ಬರ ಸಿನಿಮಾಗಳು ಒಂದೇ ರೀತಿಯ ಕಥೆ ಮತ್ತು ಪಾತ್ರಗಳಿಂದ ಸೊರಗಿಹೋದವು. ಒಬ್ಬರು ಸಾಹಸಸಿಂಹನಾದರೆ ಇನ್ನೊಬ್ಬರು ಕೆರಳಿದ ಸಿಂಹ ಎಂದು ಘರ್ಜಿಸಿದರು. ಒಬ್ಬ ನಟ ಸಂಪತ್ತಿಗೆ ಸವಾಲು ಹಾಕಿದರೆ ಇನ್ನೊಬ್ಬ ನಟ ಸಿರಿತನಕ್ಕೆ ಸವಾಲು ಎಂದು ತೊಡೆ ತಟ್ಟಿದರು. ಒಟ್ಟಿನಲ್ಲಿ ರಾಜಕುಮಾರ ಮತ್ತು ವಿಷ್ಣುವರ್ಧನ್ ಒಂದೇ ದೋಣಿಯ ಪಯಣಿಗರಾದರು. ಇಲ್ಲಿ ವಿಷ್ಣುವರ್ಧನ್‍ಗೆ ಒಬ್ಬ ಪರಿಪೂರ್ಣ ಕಲಾವಿದನಾಗಿ ಬೆಳೆಯುವ ಅವಕಾಶಗಳಿದ್ದರೂ ಆ ನಟನನ್ನು ಸುತ್ತುವರಿದ ಅವಕಾಶವಾದಿಗಳಿಗೆ ಅವರನ್ನು ರಾಜಕುಮಾರಗೆ ಪ್ರಬಲ ಸ್ಪರ್ಧೆಯೊಡ್ಡುವ ನಟನಾಗಿ ಬೆಳೆಸುವುದರಲ್ಲೇ ಹೆಚ್ಚಿನ ಆಸಕ್ತಿಯಿತ್ತು. ಇಂಥ ಅವಕಾಶವಾದಿಗಳಿಂದಾಗಿಯೇ ಪುಟ್ಟಣ್ಣ ಕಣಗಾಲ್, ಗೀತಪ್ರಿಯರಂಥ ಪ್ರತಿಭಾನ್ವಿತ ನಿರ್ದೇಶಕರ ಒಂದೊಂದು ಸಿನಿಮಾಕ್ಕೆ ಮಾತ್ರ ವಿಷ್ಣುವರ್ಧನ್ ಅಭಿನಯ ಸೀಮಿತವಾಯಿತು. ಇಂಥದ್ದೊಂದು ನಿರಾಸೆಯ ನಡುವೆಯೂ ರಾಜೇಂದ್ರಸಿಂಗ್ ಬಾಬು, ಸುನೀಲಕುಮಾರ ದೇಸಾಯಿ, ದಿನೇಶ್ ಬಾಬು, ಎಸ್.ನಾರಾಯಣ ಈ ನಿರ್ದೇಶಕರು ವಿಷ್ಣುವರ್ಧನ್ ಅವರೊಳಗಿನ ಕಲಾವಿದನನ್ನು ಸಮರ್ಥವಾಗಿ ದುಡಿಸಿಕೊಂಡರು. ಬಂಧನ, ಮುತ್ತಿನಹಾರ, ಸುಪ್ರಭಾತ, ಲಾಲಿ, ಸಿರಿವಂತ, ವೀರಪ್ಪ ನಾಯ್ಕ ಸಿನಿಮಾಗಳು ಕನ್ನಡದ ಸರ್ವಕಾಲಿಕ ಶ್ರೇಷ್ಠ ಸಿನಿಮಾಗಳು ಎನ್ನುವ ಗೌರವಕ್ಕೆ ಪಾತ್ರವಾಗಿವೆ.

ವಿಷ್ಣುವರ್ಧನ್ ಅವರಂಥ ಪ್ರತಿಭಾನ್ವಿತ ಕಲಾವಿದನನ್ನು ಅತ್ಯಂತ ಅರ್ಥಪೂರ್ಣವಾಗಿ ಬಳಸಿಕೊಳ್ಳಲು ಕನ್ನಡ ಚಿತ್ರರಂಗ ಎಡವಿತು ಎನ್ನುವ ಮಾತು ಸತ್ಯಕ್ಕೆ ಹತ್ತಿರವಾಗಿದೆ. ವೃತ್ತಿ ಬದುಕಿನ ಆರಂಭದಲ್ಲಿ ಸಾಹಸ ಪ್ರಧಾನ ಪಾತ್ರಗಳಿಗೆ ಸೀಮಿತವಾಗಿದ್ದ ತಮ್ಮ ಅಭಿನಯದ ಇತಿಮಿತಿಯಿಂದ ಹೊರಬರಲು ವಿಷ್ಣುವರ್ಧನ್‍ಗೆ ಹಲವು ವರ್ಷಗಳೇ ಬೇಕಾದವು. ಬಂಧನ ಸಿನಿಮಾದಿಂದ ವಿಷ್ಣುವರ್ಧನ್ ವೃತ್ತಿ ಬದುಕು ಬೇರೊಂದು ಮಗ್ಗುಲು ಹೊರಳಿದರೂ ಆ ಸಿನಿಮಾದ ಯಶಸ್ಸನ್ನೇ ಬಂಡವಾಳವಾಗಿಟ್ಟುಕೊಂಡು ನಿರ್ಮಾಪಕರು ಮತ್ತು ನಿರ್ದೇಶಕರು ಆ ನಟನನ್ನು ಮತ್ತೆ ಮತ್ತೆ ಬಂಧನದಂಥ ಪಾತ್ರದಲ್ಲೆ ಚಿತ್ರಿಸತೊಡಗಿದರು. ಇದು ವಿಷ್ಣುವರ್ಧನ್ ವೃತ್ತಿಬದುಕಿನ ದುರುಂತಗಳಲ್ಲೊಂದು. ಯಜಮಾನ ಸಿನಿಮಾದ ಯಶಸ್ಸಿನ ನಂತರ ವಿಷ್ಣುವರ್ಧನ್‍ಗೆ ಮತ್ತೆ ಅಂಥದ್ದೇ ಪಾತ್ರಗಳು ಸಿಗತೊಡಗಿದವು. ಅವರ ವೃತ್ತಿ ಬದುಕಿನ ಕೊನೆಯ ಸಿನಿಮಾ ‘ಆಪ್ತ ರಕ್ಷಕ’ ಕೂಡ ‘ಆಪ್ತಮಿತ್ರ’ ದ ಯಶಸ್ಸಿನ ಮುಂದುವರೆದ ಭಾಗ ಎನ್ನುವುದು ಇಲ್ಲಿ ಗಮನಿಸಬೇಕಾದ ಸಂಗತಿ. ಜೊತೆಗೆ ವಿಷ್ಣುವರ್ಧನ್ ವಯಸ್ಸಿಗೊಪ್ಪಿವ ಪಾತ್ರಗಳಲ್ಲಿ ಅಭಿನಯಿಸಿದ್ದು ತುಂಬ ಕಡಿಮೆ. ಇಲ್ಲೂ ರಾಜಕುಮಾರ ವೃತ್ತಿ ಬದುಕಿನ ಪ್ರಭಾವವನ್ನು ಕಾಣುತ್ತೇವೆ. ರಾಜಕುಮಾರ ಹೇಗೆ ಕೊನೆಯವರೆಗೂ ಮರಸುತ್ತುವ ಪಾತ್ರಗಳಲ್ಲೆ ಕಾಣಿಸಿಕೊಂಡರೋ ವಿಷ್ಣುವರ್ಧನ್ ಸಹ ಅಚಿಥದ್ದೆ ಪಾತ್ರಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಂಡರು. ವಯೋಸಹಜ ಪಾತ್ರಗಳಲ್ಲಿ ಅಭಿನಯಿಸಿದ್ದರೆ ಕನ್ನಡ ಚಿತ್ರರಂಗದಲ್ಲಿ ವಿಷ್ಣುವರ್ಧನ್ ಅವರಿಂದ ಇನ್ನಷ್ಟು ಚಾರಿತ್ರಿಕ ಪಾತ್ರಗಳು ಸೃಷ್ಟಿಯಾಗುತ್ತಿದ್ದವು.

ಕಲಾತ್ಮಕ ಸಿನಿಮಾಗಳಿಗೆ ವಿಮುಖರಾಗಿ ನಡೆದದ್ದು ಕೂಡ ವಿಷ್ಣುವರ್ಧನ್ ಅವರ ವೃತ್ತಿಬದುಕಿನ ವಿರೋದಾಭಾಸಗಳಲ್ಲೊಂದು. ವಿಷ್ಣುವರ್ಧನ್ ಅಭಿನಯದ ಮೊದಲ ಸಿನಿಮಾ ‘ವಂಶ ವೃಕ್ಷ’ ಅದೊಂದು ಕಲಾತ್ಮಕ ಸಿನಿಮಾ. ಹೆಸರು ಮತ್ತು ಹಣ ಮಾಡುವುದಕ್ಕಿಂತ ಮೊದಲು ಸಿನಿಮಾ ಅಭಿನಯಕ್ಕಾಗಿ ಹಂಬಲಿಸುತ್ತಿದ್ದ ಈ ನಟ ಕಲಾತ್ಮಕ ಸಿನಿಮಾದಲ್ಲಿ ಅವಕಾಶ ದೊರೆತಾಗ ಅದನ್ನು ಸಹಜವಾಗಿಯೇ ಒಪ್ಪಿಕೊಂಡರು. ಆ ನಂತರದಲ್ಲಿ ದೊರೆತ ಜನಪ್ರಿಯತೆ ಅವರನ್ನು ಕಲಾತ್ಮಕ ಸಿನಿಮಾಗಳಿಂದ ವಿಮುಖವಾಗಿಸಿತು. ಇಮೇಜಿಗೆ ಧಕ್ಕೆ ಬರಬಹುದೆನ್ನುವ ಕಾರಣದಿಂದ ವಿಷ್ಣುವರ್ಧನ್ ಒಂದೇ ಒಂದು ಕಲಾತ್ಮಕ ಸಿನಿಮಾದಲ್ಲಿ ನಟಿಸಲಿಲ್ಲ. ಗಿರೀಶ್ ಕಾಸರವಳ್ಳಿ, ಲಕ್ಷ್ಮಿ ನಾರಾಯಣ ಅವರಂಥ ಸೃಜನಶೀಲ ನಿರ್ದೇಶಕರು ಈ ಕಲಾವಿದನನ್ನು ನಿರ್ದೇಶಿಸಲು ಸಾಧ್ಯವಾಗಲೇ ಇಲ್ಲ. ಶಂಕರ್ ನಾಗ್, ಅನಂತನಾಗ್, ಗಿರೀಶ್ ಕಾರ್ನಾಡ್ ರಂಥ ಕಲಾವಿದರು ಕಲಾತ್ಮಕ ಮತ್ತು ಕಮರ್ಷಿಯಲ್ ಎರಡೂ ಪ್ರಕಾರದ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡ ಉದಾಹರಣೆ ಕಣ್ಣೆದುರೇ ಇರುವಾಗ ವಿಷ್ಣುವರ್ಧನ್ ಮಾತ್ರ ನಟಿಸುವ ಮನಸು ಮಾಡಲೇ ಇಲ್ಲ. ಬೇಡವೆಚಿದರೂ ಇಲ್ಲೂ ಅದೇ ರಾಜಕುಮಾರ ನೆರಳು ವಿಷ್ಣುವರ್ಧನ್ ವೃತ್ತಿ ಬದುಕಿನ ಮೇಲೆ ತನ್ನ ಮೈ ಚಾಚಿಕೊಳ್ಳುತ್ತದೆ. ರಾಜಕುಮಾರ ಒಂದೇ ಒಂದು ಕಲಾತ್ಮಕ ಸಿನಿಮಾದಲ್ಲಿ ನಟಿಸದೆ ಇದ್ದದ್ದು ವಿಷ್ಣುವರ್ಧನ್‍ಗೆ ಆದರ್ಶವಾಗಿಯೋ ಇಲ್ಲವೇ ಪೈಪೋಟಿಯಾಗಿಯೋ ಕಾಣಿಸಿರಲೂಬಹುದು.

ರಾಜಕುಮಾರ ವೃತ್ತಿ ಬದುಕಿಗೆ ಪಾರ್ವತಮ್ಮನವರ ಕಾವಲಿತ್ತು. ವರದಪ್ಪನವರಂಥ ಸಹೋದರನ ಬೆಂಬಲವಿತ್ತು. ಚಿನ್ನೇಗೌಡ, ಗೋವಿಂದ ರಾಜ್, ಸಾ.ರಾ.ಗೋವಿಂದು ಅವರ ಬೆಂಗಾವಲು ಪಡೆಯಿತ್ತು. ಸ್ವಾಮಿ ನಿಷ್ಠೆ ತೋರುವ ನಿರ್ಮಾಪಕರು ಮತ್ತು ನಿರ್ದೇಶಕರಿದ್ದರು. ಒಟ್ಟಿನಲ್ಲಿ ರಾಜಕುಮಾರ ಮತ್ತು ಅವರೊಳಗಿನ ಕಲಾವಿದ ಈ ಇಬ್ಬರೂ ಅತ್ಯಂತ ಸುರಕ್ಷಿತ ವಲಯದೊಳಗಿದ್ದರು. ಆದರೆ ವಿಷ್ಣುವರ್ಧನ್‍ಗೆ ಇಂಥದ್ದೊಂದು ಸುರಕ್ಶತೆಯ ಕೊರತೆ ಅವರ ವೃತ್ತಿ ಬದುಕಿನುದ್ದಕ್ಕೂ ಕಾಡುತ್ತಿತ್ತು. ಕೆಲವು ಅವಕಾಶವಾದಿಗಳು ಸುರಕ್ಷತೆಯ ಭಾವನೆ ಮೂಡಿಸಲು ಹತ್ತಿರ ಬಂದರಾದರೂ ಅವರೆಲ್ಲ ತಮ್ಮ ತಮ್ಮ ಹಣದ ಥೈಲಿಯನ್ನು ತುಂಬಿಕೊಂಡು ಬದುಕನ್ನು ಹಸನಾಗಿಸಿಕೊಂಡರೆ ವಿನ: ವಿಷ್ಣುವರ್ಧನ್‍ಗೆ ನೆರವು ನೀಡಿದ್ದು ಕಡಿಮೆ. ಆದ್ದರಿಂದಲೇ ಈ ನಟ ತಮ್ಮ ಬದುಕಿನ ಕೊನೆಯ ದಿನಗಳಲ್ಲಿ ಅಧ್ಯಾತ್ಮದ ನೆಲೆಯಲ್ಲಿ ನಿಂತು ಸಾವನ್ನು ಕುರಿತು ಧ್ಯಾನಿಸುತ್ತಿದ್ದರು.

8 ಟಿಪ್ಪಣಿಗಳು Post a comment
  1. hemapathy
    ಸೆಪ್ಟೆಂ 18 2015

    ಏನೆಲ್ಲಾ ಮಾಡಿದರೂ, ಎಷ್ಟು ಸಂಪಾದಿಸಿದರೂ, ಒಂದಲ್ಲಾ ಒಂದು ದಿನ ಸತ್ತು ಈ ಸ್ವಾರ್ಥಿಗಳಿಂದ ತುಂಬಿದ ಪ್ರಪಂಚವನ್ನು ಬಿಟ್ಟು ಹೋಗಲೇಬೇಕು. ಇದುವೆ ಜೀವ, ಇದು ಜೀವನ. ಜೀವನವೊಂದು ಮಾಲಾಪ್ರಬಂಧ.

    ಉತ್ತರ
  2. Aryaan
    ಸೆಪ್ಟೆಂ 18 2015

    ರಾಜ್ ಹೋಲಿಕೆ ಸರಿಯಲ್ಲ . ವಿಷ್ಣುವರ್ಧನ್ ಮತ್ತು ರಾಜ್ ನಡುವೆ ಅಜಗಜಂತರ ವ್ಯತಸವಿದೆ, ಪೌರಣಿಕ, ಸಾಮಾಜಿಕ, ತರೆವಾರಿ ಪಾತ್ರಗಳು ಎಲ್ಲರಿಗು ಸಾದ್ಯವಿಲ್ಲ

    ಉತ್ತರ
  3. vasudevamurthy
    ಸೆಪ್ಟೆಂ 19 2015

    ಒಬ್ಬ ನಟ ಕೇವಲ ನಟನಾದರೆ ಸಾಲದು ತನಗೆ ಸೂಕ್ತವಾದ ಕತೆ ಮತ್ತು ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ವಿವೇಕವೂ ಅವನಿಗಿರಬೇಕು. ಆ ವಿವೇಕ ಇಲ್ಲದೆ ಹೋದಲ್ಲಿ ಅವನು ಹಣ ಗಳಿಸಬಹುದು. ಆದರೆ ವೃತ್ತಿ ಬದುಕು ಪೂರ್ತಿಯಾಗಿ ವಿಕಾಸಗೊಳ್ಳದೆ ಹೋಗುತ್ತದೆ. ಈ ವಿಷಯದಲ್ಲಿ ರಾಜ್ ಮತ್ತು ವಿಷ್ಣು ಇಬ್ಬರೂ ನತದೃಷ್ಟರೇ. ಸಂಪತ್ತಿಗೆ ಸವಾಲ್ ನಂತರ ರಾಜ್‌ಕುಮಾರ್ ಮತ್ತು ಅವರ ಕುಟುಂಬ ತಮ್ಮದೇ ನಿರ್ಮಾಣ ಸಂಸ್ಥೆ ಪ್ರಾರಂಭಿಸಿ ತನ್ನ ಭಟ್ಟಂಗಿಗಗಳಿಂದಲೇ ಸಿದ್ಧ ಮಾದರಿಯ ಕತೆ, ನಿರ್ದೇಶನಗಳನ್ನು ಮಾಡಿಸುತ್ತ ತಮ್ಮ ಪ್ರತಿಭೆಯನ್ನು ವ್ಯರ್ಥ ಮಾಡಿಕೊಂಡರೆ, ವಿಷ್ಣುವರ್ಧನ್ ರಾಜ್‌ಕುಮಾರ್ ಬದುಕಿರುಷ್ಟೂ ಕಾಲ, ನೀವೇ ಹೇಳುವಂತೆ, ಅವರನ್ನು ಅನುಕರಿಸುತ್ತಿದ್ದರು (ಬಂಧನ, ಮುತ್ತಿನ ಹಾರದಂತಹ ಕೆಲವು ಅಪವಾದಗಳಿರಬಹುದು) ಮತ್ತು ರಾಜ್ ಸತ್ತ ಮೇಲೆ ತಮಿಳಿನ ರಜಿನೀಕಾಂತ್‌ನ ವಿಚಿತ್ರ ಶೈಲಿಯ ಚಿತ್ರಗಳನ್ನು ಅನುಕರಿಸುತ್ತ ತಮ್ಮ ಪ್ರತಿಭೆಯನ್ನು ವ್ಯರ್ಥ ಮಾಡಿಕೊಂಡರು. ಇಂಥವರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಪ್ರತಿಭಾವಂತ ನಿರ್ದೇಶಕರುಗಳ ಕೈಕೆಳಗೆ ಕೆಲಸ ಮಾಡಬೇಕಾಗಿತ್ತು. (ಇಂದು ಅಮಿತಾಬ್ ಬಚ್ಚನ್ ಸಾಲುಸಾಲಾಗಿ ನಟಿಸುತ್ತಿರುವ ಹೊಸ ಅಲೆಯ ಚಿತ್ರಗಳನ್ನು ಒಮ್ಮೆ ಗಮನಿಸಿ). ಅದು ಬಿಟ್ಟು ತಮ್ಮ ಸುತ್ತ ಕೋಟೆಗಳನ್ನು ಕಟ್ಟಿಕೊಳ್ಳಬಾರದಿತ್ತು ಅಥವಾ ಕೀಳುಮಟ್ಟದ ಅನುಕರಣೆಗೆ ತೊಡಗಬಾರದಿತ್ತು. ಇವರಿಬ್ಬರ ಪ್ರತಿಭೆ ಪೂರ್ತಿಯಾಗಿ ಅನಾವರಣವಾಗದೆ ಹೋದುದು ಕನ್ನಡ ಸಿನಿಮಾರಂಗದ ದುರದೃಷ್ಟವೇ ಸರಿ. ಆದರೆ ಅದಕ್ಕೆ ಅನ್ಯರನ್ನು ಹೊಣೆಗಾರರನ್ನಾಗಿ ಮಾಡಲು ಬರುವುದಿಲ್ಲ. ಅನ್ಯರನ್ನೇ ದೂರುವುದಾದರೆ ಹಳ್ಳಿ ಹೈದ.. ಕಾರ್ಯಕ್ರಮದ ಮೂಲಕ ಸಿನಿಮಾಗೆ ಬಂದು ದುರಂತಮಯವಾಗಿ ಸಾವನ್ನಪ್ಪಿದ ಅಮಾಯಕ ಹುಡುಗ ರಾಜೇಶ್‌ಗೂ ಈ ರಾಜ್‌ಕುಮಾರ್, ವಿಷ್ಣುವರ್ಧನ್‌ಗಳಿಗೂ ಏನು ವ್ಯತ್ಯಾಸವಿದೆ?

    ಉತ್ತರ
  4. ಸೆಪ್ಟೆಂ 19 2015

    ರಾಜ್‍ಕುಮಾರ್ ಹಾಗೂ ವಿಷ್ಣುವದ‍್ರನ್ ಕನ್ನಡದ ಶ್ರೇಷ್ಠ ನಟರು ಎನ್ನುವುದರಲ್ಲಿ ಎರಡು ಮಾತಿಲ್ಲ. ವಿಷ್ಣು ಅವರು ಅವಕಾಶವಾದಿಗಳಿಂದ ಮೋಸ ಹೋದರು, ಬಲಿಪಶುವಾದರು ಎಂದು ಹೇಳುವುದು ಸಮಂಜಸವಲ್ಲ.

    ಉತ್ತರ
  5. anonymous
    ಸೆಪ್ಟೆಂ 19 2015

    Rajkumar & Vishnu were both popular actors – great entertainers but not great artists. They couldn’t slip effortlessly into any role but roles were tailored for their limited acting skills. Raj’s acting more often than not reflected the influence of company dramas on him. Vishnu got carried away by his characteristic style. Both were best suited for big banner movies with seasoned directors, good music, script tuned to popular taste, beautiful actresses and good supporting cast. Since both were contestants for popularity and resulting power and box office gains, they had a strained and frictional coexistence.

    ಉತ್ತರ
    • Aryaan
      ಸೆಪ್ಟೆಂ 23 2015

      I think amitab may be good artists ?????

      ಉತ್ತರ
  6. Rakshith Gowda
    ಜನ 27 2017

    Dr visnhuvardan so great

    ಉತ್ತರ
  7. ಸುಜಗ (ಸು.ಜಗದೀಶ್)
    ಮಾರ್ಚ್ 3 2017

    ಕನ್ನಡ ಚಲನಚಿತ್ರ ರಂಗದ ಅಪ್ಪಟ ಕಲಾವಿದರಾಗಿದ್ದ ಮೇರು ನಟರು ಕಷ್ಟದಲ್ಲಿ ಅರಳಿದ ಕಲಾರತ್ನ….
    ಗೌರವಾನ್ವಿತ ಡಾ.ವಿಷ್ಣುವರ್ದನ ರವರು

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments