ಭಾರತೀಯ ಸಂಸ್ಕೃತಿಯಲ್ಲಿ ಎಲ್ಲವೂ ಇತ್ತೆನ್ನುವ ವ್ಯಾಮೋಹವೇಕೆ ?
– ಶಿವಕುಮಾರ ಪಿ.ವಿ. ಕುವೆಂಪು ವಿಶ್ವವಿದ್ಯಾನಿಲಯ.
ಭಾರತೀಯ ಸಮಾಜವು ಅನಿಷ್ಟಗಳ ಆಗರವೆಂದು ಜರಿಯುತ್ತಾ ಇಡೀ ಸಮಾಜವನ್ನೇ ಬದಲಾಯಿಸಬೇಕೆಂದು ಪಶ್ಚಿಮದ ಸಮಾಜವನ್ನು ಮಾದರಿಯಾಗಿಟ್ಟುಕೊಳ್ಳುವ ವಾದವು ಒಂದೆಡೆಯಿದೆ. ಇದಕ್ಕೆ ಪ್ರತಿಯಾಗಿ, ಮತ್ತೊಂದೆಡೆ, ಭಾರತದಲ್ಲಿ ಎಲ್ಲವೂ ಇತ್ತು ಎಂದು ಅದರ ಸಾಂಸ್ಕೃತಿಕ ಶ್ರೇಷ್ಠತೆಯನ್ನು ಸಾರುವ ವಾದವೂ ಇದೆ. ಆದರೆ, ಈ ಎರಡನೆಯ ವಾದವು ಇಲ್ಲಿನ ಸಾಂಸ್ಕೃತಿಕ ಶ್ರೇಷ್ಠತೆಯನ್ನು ತೋರಿಸುವ ಭರದಲ್ಲಿ ಇಲ್ಲಿನ ಪರಿಕಲ್ಪನೆಗಳನ್ನು ಪಾಶ್ಚಾತ್ಯ ತತ್ವಗಳ ಮೂರನೇ ದರ್ಜೆಯ ನಕಲುಗಳನ್ನಾಗಿ ಮಾಡಿ ಸಾಂಸ್ಕೃತಿಕ ಅನನ್ಯತೆಗೇ ಸಂಚಕಾರ ತರುತ್ತಿದೆ. ಇದನ್ನು ಭಾರತದಲ್ಲಿ ಸೆಕ್ಯುಲರಿಸಂನ ಚರ್ಚೆಯ ಒಂದು ದೃಷ್ಟಾಂತದ ಮೂಲಕ ನೋಡಿದರೆ ಹೆಚ್ಚು ಸ್ಪಷ್ಟವಾಗಬಹುದು.
ಕೆಲವರು ವಿಶ್ವಕ್ಕೆ ಸೆಕ್ಯುಲರಿಸಂ ಅನ್ನು ಮೊದಲು ಪರಿಚಯಿಸಿದ್ದೇ ಭಾರತ ಎಂಬ ವಾದವನ್ನು ಮುಂದಿಡುತ್ತಿದ್ದಾರೆ. ಅವರ ಪ್ರಕಾರ ಸೆಕ್ಯುಲರಿಸಂ ವಸುದೈವ ಕುಟುಂಬಕಂ, ಸರ್ವೇಜನಾಃ ಸುಖಿನೋ ಭವಂತು ಎಂಬ ರೂಪದಲ್ಲಿ ಬಹಳ ಹಿಂದೆಯೇ ಭಾರತದಲ್ಲಿತ್ತು. ಅದನ್ನು ಯಾವುದೋ ಕಾಲಘಟ್ಟದಲ್ಲಿ ಪಾಶ್ಚಿಮಾತ್ಯರು ತೆಗೆದುಕೊಂಡುಹೋಗಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡಿದ್ದಾರೆ. ಆದರೆ, ಈಗ ಪಾಶ್ಚಿಮಾತ್ಯರ ಸೆಕ್ಯುಲರಿಸಂನ್ನು ಭಾರತದಲ್ಲಿ ಅಳವಡಿಸಿಕೊಂಡಿರುವುದರಿಂದ ನಮ್ಮ ಆಚರಣೆಗಳೆಲ್ಲ ದಮನಕ್ಕೆ ಒಳಗಾಗುತ್ತಿವೆ. ಆದ್ದರಿಂದ ನಮಗೆ ನೈಜ ಸೆಕ್ಯುಲರಿಸಂ ಬೇಕೆಂಬುದು ಅವರ ಕಾಳಜಿ. ಇಂಥ ಹೇಳಿಕೆಗಳನ್ನು ಕೇಳಿದಾಗ ಎರಡು ಪ್ರಶ್ನೆಗಳು ಏಳುತ್ತವೆ: ಸೆಕ್ಯುಲರಿಸಂ ಹಾಗೂ ವಸುದೈವ ಕುಟುಂಬಕಂ, ಸರ್ವೇಜನಾಃ ಸುಖಿನೋ ಭವಂತು ಇವು ಒಂದೇ ಅರ್ಥ ಸೂಚಿಸುತ್ತವೆಯೇ? ಒಂದೇ ಅರ್ಥವನ್ನು ಸೂಚಿಸದಿದ್ದರೆ ತೊಂದರೆಯೇನು?
ಇಲ್ಲಿ ಸೆಕ್ಯುಲರಿಸಂನ್ನು ವಿರೋಧಿಸುತ್ತ ಮತ್ತೊಂದೆಡೆ ಅದನ್ನೇ ಭಾರತದಲ್ಲಿರುವ ವಿಭಿನ್ನ ಪರಿಕಲ್ಪನೆಗಳ ಜೊತೆಗೆ ತಳುಕುಹಾಕಿ ಸಮರ್ಥಿಸಿಕೊಳ್ಳಲಾಗುತ್ತಿದೆ. ಹಾಗಾಗಿ, ಸೆಕ್ಯುಲರಿಸಂನ ನೈಜ ಸ್ವರೂಪವೇನೆಂದು ತಿಳಿದರೆ ವಸುದೈವ ಕುಟುಂಬಕಂ ಮತ್ತು ಸೆಕ್ಯುಲರಿಸಂ ಎರಡು ಒಂದೇ ರೀತಿಯ ಅರ್ಥ ಸೂಚಿಸುತ್ತವೆಯೇ ಎಂಬುದು ಸ್ಪಷ್ಟವಾಗುತ್ತದೆ.
ರಾಜಕೀಯ ವಿಜ್ಞಾನದ ಪ್ರಕಾರ ಸೆಕ್ಯುಲರಿಸಂ ಎಂದರೆ ರಾಜ್ಯವು ಜನರ ರಿಲಿಜನ್ನಿನ ವಿಚಾರಗಳಿಗೆ ಸಂಬಂಧಿಸಿದಂತೆ ತಟಸ್ಥವಾಗಿ ಉಳಿಯುವುದು. ಇದರ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ಪಾಶ್ಚಿಮಾತ್ಯ ರಿಲಿಜನ್ನಿನ ಸಂಸ್ಕೃತಿಯ ಕಡೆಗೆ ಕಣ್ಣು ಹಾಯಿಸಬೇಕು. ಅಲ್ಲಿನ ಕ್ರಿಶ್ಚಿಯನ್ ಬಿಲೀಫ್ನಂತೆ ಜಗತ್ತು ಗಾಡ್ನ ಸೃಷ್ಟಿಯಾಗಿದ್ದು, ಅದು ರಿಲಿಜನ್(ಅಲೌಕಿಕ) ಮತ್ತು ಸೆಕ್ಯುಲರ್(ಲೌಕಿಕ) ಎಂದು ವಿಭಜಿಸಲ್ಪಟ್ಟಿದೆ. ಅಲೌಕಿಕ ವಿಚಾರಗಳು ಜನರ ಮತ್ತು ಗಾಡ್ ನಡುವಿನ ಸಂಬಂಧವಾಗಿದ್ದು, ಜನರು ರಿಲಿಜನ್ನನ್ನು ಆಚರಿಸಲು ಸರ್ವ ಸ್ವತಂತ್ರರಾಗಿರುತ್ತಾರೆ. ಹಾಗೆಯೇ, ರಾಜ್ಯವು ಜನರ ಲೌಕಿಕ ಜಗತ್ತಿಗೆ ಸೇರಿದ ವಿಚಾರಗಳ ಕುರಿತಾಗಿ ವ್ಯವಹರಿಸುವ ಸಂಸ್ಥೆಯಾಗಿದ್ದು ಕಾನೂನು ನಿಯಮಗಳ ತಳಹದಿಯ ಮೇಲೆ ನಿಂತಿರುತ್ತದೆ.
ಆದರೆ, ಪಾಶ್ಚಾತ್ಯ ಸಮಾಜದ ಒಂದು ವಿಶಿಷ್ಟ ಕಾಲಘಟ್ಟದಲ್ಲಿ ಚರ್ಚ್ ಶ್ರೇಷ್ಠವೋ ಅಥವಾ ರಾಜ್ಯ ಶ್ರೇಷ್ಠವೋ? ಯಾವುದು, ಯಾವುದಕ್ಕೆ ಅಧೀನವಾಗಿರಬೇಕು? ಎಂಬ ಸಮಸ್ಯೆ ಎದುರಾಯಿತು. ಹಾಗೂ ಪ್ರೊಟೆಸ್ಟಾಂಟಿಸಂ ಕ್ಯಾಥೋಲಿಕ್ ಕ್ರಿಶ್ಚಿಯಾನಿಟಿಯ ಮೇಲೆ ಮಾಡಿದ ಟೀಕಾ ಪ್ರಹಾರಗಳು, ಸುಧಾರಣಾ ಚಳವಳಿ ಮತ್ತು ಕ್ಯಾಥೋಲಿಕ್ಕರ ಪ್ರತಿ ಸುಧಾರಣೆಯ ಪರಿಣಾಮವಾಗಿ ರಿಲಿಜನ್ ಮತ್ತು ರಾಜಕೀಯ ವಿಷಯಗಳು ಕಗ್ಗಂಟಾದವು. ಈ ಹಿನ್ನೆಲೆಯಲ್ಲಿ ರಾಜ್ಯವು ಯಾವ ನಿಯಮಗಳನ್ನು ಅನುಸರಿಸಬೇಕು, ಯಾವ ರಿಲಿಜನ್ನಿಗೆ ಮಾನ್ಯತೆ ನೀಡಬೇಕು ಎಂಬ ಮತ್ತೊಂದು ಸಮಸ್ಯೆ ಎದುರಾಯಿತು. ಸಹಬಾಳ್ವೆಯ ಸಮಸ್ಯೆಯ ಈ ಸಂದರ್ಭದಲ್ಲಿ ರಾಜ್ಯವು ಬಹುಮುಖ್ಯವಾಗಿ ರಿಲಿಜನ್ನಿನ ವಿಷಯದಲ್ಲಿ ತಟಸ್ಥವಾಗಿರಬೇಕು, ಸಹಿಷ್ಣುವಾಗಿರಬೇಕು, ರಿಲಿಜಿಯಸ್ ಸ್ವಾತಂತ್ರಕ್ಕೆ ಮಾನ್ಯತೆ ನೀಡಬೇಕು ಹಾಗೂ ರಿಲಿಜನ್ನುಗಳನ್ನು ಸಮಾನವಾಗಿ ಪರಿಗಣಿಸಬೇಕು ಎನ್ನುವ ಸೆಕ್ಯುಲರ್ ರಾಜಕೀಯ ನೀತಿಯನ್ನು ರೂಪಿಸಿಕೊಂಡು ರಿಲಿಜನ್ನಿನ ವಿಚಾರಗಳಿಗೆ ತಲೆಹಾಕದೇ ಉಳಿದುಕೊಳ್ಳುವ ಉಪಾಯ ಕಂಡುಕೊಂಡಿತು. ಹೀಗೆ ರಾಜ್ಯ ಮತ್ತು ರಿಲಿಜನ್ನಿನ ವಲಯಗಳ ಮಧ್ಯೆ ವಿಭಜನೆ ಇರಬೇಕು. ರಿಲಿಜನ್ನಿನ ವಿಚಾರಗಳಿಗೆ ಸಂಬಂಧಿಸಿದಂತೆ ರಾಜ್ಯಕ್ಕೆ ಯಾವ ಅಧಿಕಾರಗಳೂ ಇಲ್ಲವೆಂಬ ಚಿಂತನೆಗಳು ಹರಳುಗಟ್ಟಿದವು.
ಈ ರೀತಿಯಾಗಿ ರಾಜ್ಯವು ರಿಲಿಜನ್ನಿನ ವಿಷಯದಲ್ಲಿ ಮೂಗು ತೂರಿಸದಂತೆ ಇರುವುದೇ ಸೆಕ್ಯುಲರ್ ಪರಿಕಲ್ಪನೆಯ ತಿರುಳು. ಹೀಗೆ ಸೆಕ್ಯುಲರಿಸಂ ಪಾಶ್ಚಿಮಾತ್ಯ ರಿಲಿಜನ್ನಿನ ಸಾಂಸ್ಕೃತಿಕ, ಐತಿಹಾಸಿಕ ಹಿನ್ನೆಲೆಯಲ್ಲಿ ಬೆಳೆದುಕೊಂಡು ಬಂದಿದೆ. ಇಂತಹ ಒಂದು ನೈಜ ಸೆಕ್ಯುಲರಿಸಂ ಭಾರತಕ್ಕೆ ಬೇಕೆಂಬುದು ಸೆಕ್ಯುಲರಿಸಂ ಭಾರತದಲ್ಲೇ ಇತ್ತು ಎನ್ನುವವರ ಕಾಳಜಿಯೇ? ಪಾಶ್ಚಿಮಾತ್ಯ ಹಿನ್ನೆಲೆಯ ಈ ಸೆಕ್ಯುಲರಿಸಂಗೂ ‘ವಸುದೈವ ಕುಟುಂಬಕಂ’ ಎಂಬ ಪರಿಕಲ್ಪನೆಗೂ ಏನು ಸಂಬಂಧ? ಇವೆರಡೂ ಒಂದೇ ಸ್ವರೂಪದವೇ?
‘ವಸುದೈವ ಕುಟುಂಬಕಂ’ ಎಂಬ ಪದದ ಹಿಂದೆ ಹೋದರೂ, ಹೇಗೆ ನೋಡಿದರೂ ಕೂಡ ಇದು ಪಾಶ್ಚಾತ್ಯ ಸೆಕ್ಯುಲರಿಸಂನ ಸ್ವರೂಪದಲ್ಲಿ ಕಾಣುವುದೇ ಇಲ್ಲ. ಬದಲಾಗಿ, ಅದಕ್ಕೆ ತದ್ವಿರುದ್ಧವಾದ ಅರ್ಥ ಪಡೆಯುತ್ತದೆ. ಜಗತ್ತಿನಲ್ಲಿರುವ ಎಲ್ಲರೂ ಪರಿಚಿತರೋ, ಅಪರಿಚಿತರೋ ಒಟ್ಟಿನಲ್ಲಿ ನಾವೆಲ್ಲರೂ ಒಂದು ಎನ್ನುವ, ಭೂಮಿಯ ಮೇಲಿನ ಎಲ್ಲರನ್ನೂ ಅವರ ಎಲ್ಲ ರಾಜಕೀಯ, ರಿಲಿಜನ್, ಸಂಪ್ರದಾಯ ಹಾಗೂ ಇತ್ಯಾದಿ ವಿಚಾರಗಳನ್ನು ಒಳಗೊಳ್ಳುವ ರೀತಿಯ ಅರ್ಥ ಹೊಮ್ಮುತ್ತದೆ. ಹಾಗೂ ಮಾನವನಲ್ಲಿರಬೇಕಾದ ಒಂದು ಗುಣವೆಂಬಂತೆ ಪರಿಗಣಿಸಲ್ಪಡುತ್ತದೆ. ಇನ್ನು ‘ಸರ್ವೇಜನ ಸುಖಿನೋ ಭವಂತು’ ಎಂಬುದರ ಅರ್ಥವೂ ಕೂಡ ಎಲ್ಲರಿಗೂ ಒಳಿತನ್ನು ಬಯಸುವುದೇ ಆಗಿದೆ. ಹೀಗೆ, ಎಲ್ಲ ಮಾನವರು ಅವರ ಎಲ್ಲ ವಿಚಾರಗಳು ಒಟ್ಟಾಗಿ ಬರುವ, ಸಮಸ್ತ ಜನರೂ ಒಂದೇ ಎನ್ನುವ ವಸುದೈವ ಕುಟುಂಬಕಂಗೂ ಹಾಗೂ ಪಾಶ್ಚಾತ್ಯ ಸೆಕ್ಯುಲರಿಸಂ ಹೇಳುವಂತೆ ರಿಲಿಜನ್ ಮತ್ತು ರಾಜ್ಯ ಬೇರೆ ಬೇರೆ, ರಾಜ್ಯವು ರಿಲಿಜನ್ನಿನ ವಿಷಯದಿಂದ ಹೊರಗಿರಬೇಕೆಂದು ಅವುಗಳನ್ನು ಇಬ್ಬಾಗಿಸುವುದಕ್ಕೂ ಮೂಲಭೂತ ವ್ಯತ್ಯಾಸವಿಲ್ಲವೇ? ಹಾಗಾಗಿ, ಸೆಕ್ಯುಲರಿಸಂ ಭಾರತದಲ್ಲಿ ಮೊದಲೇ ಇತ್ತು, ಆಮೇಲೆ ಯುರೋಪಿಗೆ ಹೋಯಿತು, ಆನಂತರ ವಿರೂಪಗೊಂಡು ಭಾರತಕ್ಕೆ ಬಂದಿತು ಎಂಬುದು ಅಸಮಂಜಸವಾದ ಕಟ್ಟುಕತೆಯಲ್ಲದೇ ಮತ್ತೇನೂ ಅಲ್ಲ.
ಆದರೆ, ಸೆಕ್ಯುಲರಿಸಂ ನಮಗೆ ಪರಕೀಯವಾದ ತತ್ವವಾಗಿದ್ದರೂ ಅದು ನಮ್ಮಲ್ಲಿಯೇ ಇತ್ತು ಎಂದುಕೊಳ್ಳುವ ಅಥವಾ ಹೇಗಾದರು ಮಾಡಿ ಇತ್ತೂ ಎಂದು ತೋರಿಸುವ ವ್ಯಾಮೋಹವೇಕೆ? ಅಥವಾ ಅದು ನಮ್ಮಲ್ಲಿ ಇರಲಿಲ್ಲ ಎನ್ನಲು ತೊಂದರೆಯೇನು? ಸೆಕ್ಯುಲರಿಸಂ ಇಲ್ಲಿಯೇ ಇತ್ತು ಎಂದು ತೋರಿಸುವ ಹಪಾಹಪಿಯಿಂದ ಭಾರತಕ್ಕೆ ಯಾವ ಉಪಕಾರವೂ ಆಗಲಾರದು. ಅದು ಭಾರತದ ಬಗ್ಗೆ ದಿವ್ಯ ಅಜ್ಞಾನವನ್ನು ಪ್ರದರ್ಶಿಸುತ್ತದೆಯಷ್ಟೇ. ಅಮೇರಿಕದ ಯಾವುದೋ ಒಂದು ಪ್ರಾಣಿಗೆ ಕನ್ನಡದ ಹೆಸರಿಟ್ಟರೆ ಅದು ಹೇಗೆ ನಮ್ಮದಾಗಿಬಿಡುವುದಿಲ್ಲವೋ ಹಾಗೆಯೇ ಸೆಕ್ಯಲರಿಸಂ ಕೂಡ.
ಪಾಶ್ಚಾತ್ಯ ಸಂಸ್ಕೃತಿಯ ಹಿರಿಮೆಯ ಪ್ರಶ್ನೆ ಬಂದಾಗ ನಾವು ನಮ್ಮಲ್ಲಿಯೂ ಶ್ರೇಷ್ಠ ತತ್ವಗಳಿವೆ ಎಂದು ತೋರಿಸುವ ಒತ್ತಡಕ್ಕೊಳಗಾಗುತ್ತೇವೆ. ಅದಕ್ಕೆ ಸೆಕ್ಯುಲರಿಸಂ ನಮ್ಮಲ್ಲಿಯೇ ಇತ್ತು ಎನ್ನುವುದು ಒಂದು ನಿದರ್ಶನವಷ್ಟೇ. ಆದರೆ, ಹೀಗೆ ವಾದಿಸುವವರು ನಮ್ಮಲ್ಲಿನ ಪರಿಕಲ್ಪನೆಗಳೂ ಶ್ರೇಷ್ಠ ಎಂದು ತೋರಿಸುವ ಆತುರದಲ್ಲಿ ಒಂದೆಡೆ, ನಿಜವಾಗಿಯೂ ಇಲ್ಲಿರುವ ಅನೇಕ ಪರಿಕಲ್ಪನೆಗಳನ್ನೇ ವಿರೂಪಗೊಳಿಸುತ್ತಾ, ಗೊತ್ತಿದ್ದೋ ಗೊತ್ತಿಲ್ಲದೆಯೋ ಸಾಂಸ್ಕೃತಿಕ ವಿನಾಶಕ್ಕೆ ಕಾರಣರಾಗುತ್ತಿರುತ್ತಾರೆ. ಮತ್ತೊಂದೆಡೆ, ಪಾಶ್ಚಾತ್ಯ ತತ್ವಗಳು ಶ್ರೇಷ್ಠವಾದವುಗಳು ಮತ್ತು ಅವು ತೀರಾ ಅಗತ್ಯವಾದವುಗಳೆಂದು ಒಪ್ಪಿಕೊಳ್ಳುವ ವೈರುಧ್ಯಮಯ ವಿಚಾರದಲ್ಲಿ ತೊಡಗಿರುತ್ತಾರೆ. ಇದು ನಮ್ಮಲ್ಲಿರುವ ವಸಾಹತುಶಾಹಿ ದಾಸ್ಯದ ಮನೋಭಾವನೆಯನ್ನೇ ಸೂಚಿಸುತ್ತದೆ. ಸೆಕ್ಯುಲರಿಸಂ ಅನ್ನು ಅನುಸರಿಸದಿದ್ದರೆ ಬಹುತ್ವ ಸಂಸ್ಕೃತಿಯ ಸಮಾಜಗಳು ಘರ್ಷಣೆಗೆ ಒಳಗಾಗಬೇಕಾಗುತ್ತದೆ ಎಂಬುದು ವಸಾಹತುಶಾಹಿಗಳಲ್ಲಿರುವ ನಂಬಿಕೆ. ಇದು ಭಾರತದಲ್ಲಿ ಇಲ್ಲದಿರುವ ‘ಹಿಂದೂಯಿಸಂ’ ಎಂಬ ರಿಲಿಜನ್ನನ್ನು ಪೂರ್ವಭಾವಿಯಾಗಿ ಕಲ್ಪಿಸಿಕೊಳ್ಳುತ್ತದೆ. ಈ ವಸಾಹತುಶಾಹಿ ಶಿಕ್ಷಣದ ಫಲವಾಗಿ ನಮಗೆ ಸೆಕ್ಯುಲರಿಸಂ ಒಂದು ಮಾದರಿ ಮೌಲ್ಯವಾಗಿ, ಅಗತ್ಯ ತತ್ವವೆಂಬಂತೆ ಕಾಣುತ್ತಿದೆಯಷ್ಟೇ. ಹಾಗಾಗಿ, ಸೆಕ್ಯುಲರಿಸಂ ಮತ್ತು ವಸುದೈವ ಕುಟುಂಬಕಂ ಎರಡೂ ಒಂದೇ ಎಂದು ಹೇಳುವುದು ಎಷ್ಟು ಅಸಂಬದ್ಧವೋ, ಅದು ನಮ್ಮಲ್ಲಿಯೇ ಇತ್ತು ಎನ್ನುವುದು ಕೂಡಾ ಅಷ್ಟೇ ಅನಗತ್ಯ.
ಹೀಗೆ ಭಾರತದಲ್ಲಿ ಎಲ್ಲವೂ ಇತ್ತು ಎಂದು ತೋರಿಸುವ ಪ್ರವೃತ್ತಿಯು ನಮ್ಮಲ್ಲಿನ ಅನೇಕ ಪರಿಕಲ್ಪನೆಗಳನ್ನು ವಿರೂಪಗೊಳಿಸಿ ಪಾಶ್ಚ್ಚಾತ್ಯ ತತ್ವಗಳ ತೀರಾ ಕೆಳದರ್ಜೆಯ ನಕಲುಗಳನ್ನಾಗಿಸುತ್ತಿದೆ. ಇದು ಪಾಶ್ಚಾತ್ಯ ಹಾಗೂ ಭಾರತೀಯ ತತ್ವಗಳ ಅಥವಾ ಈ ಎರಡು ಸಂಸ್ಕೃತಿಗಳ ನಡುವಿನ ವ್ಯತ್ಯಾಸವನ್ನೇ ಅಳಿಸಿ, ಅವುಗಳೆರಡೂ ನಮಗೆ ಅರ್ಥವೇ ಆಗದಂತೆ ಮಾಡುತ್ತಿದೆ. ಇಂತಹ ವಾದಗಳು ಇಲ್ಲಿನ ಸಾಂಸ್ಕೃತಿಕ ಅನನ್ಯತೆ ಮತ್ತು ವೈವಿದ್ಯತೆಗೆ ಮುಳುವಾಗುವ ಜೊತೆಗೆ ನಮ್ಮ ಸಮಾಜದ ಕುರಿತು ಪರ್ಯಾಲೋಚನೆಗೆ ಅಡ್ಡಗಾಲಾಗುತ್ತವೆ. ಈ ಹಂತದಲ್ಲಿ ನಮ್ಮ ಸಮಾಜವು ಸರಿಯಿಲ್ಲ ಎಂದು ಜರೆಯುವವರಿಗಿಂತ ಎಲ್ಲವೂ ಇದೆ ಎನ್ನುವವರ ಕೈ ಮೇಲಾಗುತ್ತದೆ. ಆದರೆ ಪರಿಣಾಮ ಮಾತ್ರ ಅಪಾಯಕಾರಿಯಾಗಿದೆ.
ಮಾನವ ಸಮಾಜದ ಸಹಬಾಳ್ವೆಗೆ ಹೊರಗಿಡುವ ಸಂಗತಿಗಿಂತ ಎಲ್ಲವನ್ನೂ ಒಳಗೊಳ್ಳುವ ಸಂಗತಿಯು ಯುಕ್ತವೆನಿಸುತ್ತದೆ. ಮಾನವ ಸಮಾಜದ ವಿಚಾರಗಳನ್ನು ಇಬ್ಬಾಗಿಸುವ ಸೆಕ್ಯುಲರಿಸಂಗೆ ಎಲ್ಲವನ್ನೂ ಒಳಗೊಳ್ಳಬೇಕೆನ್ನುವ “ವಸುದೈವ ಕುಟುಂಬಕಂ”, “ಸರ್ವೇಜನ ಸುಖಿನೋ ಭವಂತು” ಪರಿಕಲ್ಪನೆಗಳನ್ನು ಸಮೀಕರಿಸುವುದು ನಮ್ಮ ಸಂಸ್ಕೃತಿಯ ಹೆಗ್ಗಳಿಕೆಯಂತೂ ಆಗಲಾರದು. ಹಾಗಾಗಿ, ಸೆಕ್ಯುಲರಿಸಂ ಇಲ್ಲದಿದ್ದರೂ ಸಹ ಸಾವಿರಾರು ವರ್ಷಗಳಿಗಳಿಂದ ಭಾರತದ ವೈವಿಧ್ಯಮಯ ಸಂಪ್ರದಾಯಗಳು ಹೇಗೆ ಉಳಿದುಕೊಂಡು ಬಂದವು? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವುದು ಅತ್ಯಂತ ಮುಖ್ಯವೆನಿಸುತ್ತದೆ. ಅದು ಇಲ್ಲಿನ ಬಹು ಸಂಪ್ರದಾಯಗಳ ಸಹಬಾಳ್ವೆಯನ್ನು ಸಾಧ್ಯಮಾಡಿದ ಸಂಗತಿಯನ್ನು ಬೆಳಕಿಗೆ ತರಲು ಸಹಕಾರಿಯಾಗುವ ಜೊತೆಗೆ ಸೆಕ್ಯುಲರಿಸಂಗೆ ಪರ್ಯಾಯವೂ ಆಗಬಲ್ಲದು. ಅದಕ್ಕೂ ಪೂರ್ವದಲ್ಲಿ ಸೆಕ್ಯುಲರಿಸಂ ಅನ್ನು ಅಪ್ಪಿಕೊಳ್ಳುವಂತೆ ಮಾಡಿರುವ ವಸಾಹತುಶಾಹಿ ಪ್ರಜ್ಞೆಯ ಇರುವಿಕೆಯ ಕುರಿತೇ ಅರಿವುಂಟಾಗಬೇಕಾಗಿದೆ. ಇದು ನಮ್ಮೆದುರಿಗಿರುವ ಸವಾಲು.
ವಸುದೈವ ಅಂದರೆ ವಾಸುದೇವ ಅಂದರೆ ವಿಷ್ಣು
ವಿಷ್ಣುವಿನ ಕುಟುಂಬ ಅಂದರೆ ಬ್ರಾಹ್ಮಣರ ಕುಟುಂಬ
😀 😀 😀