ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 22, 2015

16

ವಸಾಹತುಪ್ರಜ್ಞೆಯ ಪ್ರಾಯೋಜಿತ ಪಂದ್ಯಾವಳಿಗಳು – ಭಾಗ ೧

‍ನಿಲುಮೆ ಮೂಲಕ

– ವಿನಾಯಕ ಹಂಪಿಹೊಳಿ

ಸಂಸ್ಕೃತ v/s ಆಡುಭಾಷೆ, ಶಾಸ್ತ್ರೀಯ v/s ಜಾನಪದ, ಪುರೋಹಿತ v/s ಭಕ್ತ, ಆರ್ಯ v/s ದ್ರಾವಿಡ … – ಭಾಗ ೧

Colonial Consciousnessಕ್ರಿ.ಶ. ೧೪೦೦ರ ತನಕ ಬೈಬಲ್ಲಿನ ಹಳೇ ಒಡಂಬಡಿಕೆ ಮತ್ತು ಹೊಸ ಒಡಂಬಡಿಕೆಗಳು ಹಿಬ್ರೂ, ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳಲ್ಲಿ ಇದ್ದವು. ಆಕ್ಸಫರ್ಡ್ ಪ್ರೊಫೆಸರ್ ಆಗಿದ್ದ ಜಾನ್ ವಿಕ್ಲಿಫ್ ಎಂಬಾತನು ೧೩೮೦ರಲ್ಲಿ ಮೊದಲ ಬಾರಿಗೆ ಬೈಬಲ್ಲಿನ ಇಂಗ್ಲೀಷ್ ಭಾಷಾಂತರವನ್ನು ಮಾಡಿದ್ದ ಎಂದು ಹೇಳಬಹುದು. ಇದಕ್ಕಿಂತ ಹಿಂದೆಯೂ ಭಾಷಾಂತರಗಳಾಗಿರಬಹುದಾದರೂ ಐತಿಹಾಸಿಕ ಸಾಕ್ಷ್ಯವಾಗಿ ಇದೊಂದು ದೊರಕುತ್ತದೆ. ಇದು ಪೋಪನ ಕೋಪಕ್ಕೆ ಗುರಿಯಾಗಿ, ವಿಕ್ಲಿಫ್ ತೀರಿಕೊಂಡಾಗ ಆತನ ಎಲುಬುಗಳನ್ನು ಪುಡಿ ಮಾಡಿಸಿ ಪೋಪ್ ನದಿಯಲ್ಲಿ ಹಾಕಿಸಿದ್ದ ಎಂದು ಕಥೆ.

ವಿಕ್ಲಿಫ್ ನಂತರ ಆತನ ಅನುಯಾಯಿಯಾದ ಜಾನ್ ಹಸ್ ಎಂಬಾತನು ವಿಕ್ಲಿಫ್ ಯೋಚನೆಗಳನ್ನು ಇನ್ನಷ್ಟು ಪ್ರಚುರಪಡಿಸಿದನು. ಪ್ರತಿಯೋರ್ವನಿಗೂ ಆತನ ಮಾತೃಭಾಷೆಯಲ್ಲಿ ಬೈಬಲ್ಲನ್ನು ಓದಲು ಅವಕಾಶ ನೀಡಬೇಕು ಎಂಬುದು ಆತನ ಆಗ್ರಹವಾಗಿತ್ತು. ಲ್ಯಾಟಿನ್ನೇತರ ಭಾಷೆಯಲ್ಲಿ ಬೈಬಲ್ಲಿನ ಪ್ರತಿಯನ್ನು ಹೊಂದಿದ್ದರೆ ಮರಣದಂಡನೆ ವಿಧಿಸುವದಾಗಿ ಹೇಳಿದ್ದ ಚರ್ಚಿನ ನಿರ್ಧಾರವನ್ನು ವಿರೋಧಿಸಲು ಜನರಿಗೆ ಕರೆಯಿತ್ತಿದ್ದನು. ೧೪೧೫ರಲ್ಲಿ ಆತನನ್ನು ವಿಕ್ಲಿಫ್ ನ ಇಂಗ್ಲೀಷ್ ಬೈಬಲ್ಲಿನ ಪ್ರತಿಗಳೊಂದಿಗೆ ಜೀವಂತವಾಗಿ ಸುಡಲಾಯಿತು. ಆತನ ಕೊನೆಯ ಮಾತುಗಳು “ಯಾರ ಸುಧಾರಣೆಯ ಕರೆಯನ್ನು ತುಳಿಯಲಾಗದೋ ಅಂತ ಮನುಷ್ಯನೊಬ್ಬನನ್ನು ದೇವನು ಬೆಳೆಸುವನು” ಎಂದು ಪ್ರತೀತಿ.

೧೪೫೦ರಲ್ಲಿ ಪ್ರಿಂಟಿಂಗ್ ಪ್ರೆಸ್ ಕಂಡುಹಿಡಿದ ಜೊಹನ್ ಗುಂಟನ್ಬರ್ಗ್ ಲ್ಯಾಟಿನ್ನಿನಲ್ಲಿದ್ದ ಬೈಬಲ್ಲಿನ ಮೊದಲ ಪ್ರತಿಯನ್ನು ತಂದನು. ಇದು ಪ್ರೊಟೆಸ್ಟಂಟ್ ಸುಧಾರಣೆಗೆ ಮೊದಲ ಅಡಿಗಲ್ಲಾಯಿತು. ನಂತರ ಎರಾಸ್ಮಸ್ ಅದರಲ್ಲಿನ ತಪ್ಪುಗಳನ್ನು ಸರಿಪಡಿಸಿ ಇನ್ನೊಂದು ಮುದ್ರಿತ ಪ್ರತಿಯೊಂದನ್ನು ತಂದನು. ೧೪೯೦ರಲ್ಲಿ ಥೊಮಸ್ ಲಿನೇಕರ್ ಬೈಬಲ್ಲಿನ ಭಾಷಾಂತರದ ಪರವಾಗಿ ವಾದಿಸಿದನು. ೧೪೯೬ರಲ್ಲಿ ಜಾನ್ ಕೋಲೆಟ್ ಎಂಬ ಇನ್ನೊಬ್ಬ ಆಕ್ಸಫರ್ಡ್ ಪ್ರೊಫೆಸರ್ ಹೊಸ ಒಡಂಬಡಿಕೆಯನ್ನು ಇಂಗ್ಲೀಷಿನಲ್ಲಿ ಭಾಷಾಂತರಿಸಲು ಯತ್ನಿಸಲು ಚರ್ಚು ಅದನ್ನು ವಿರೋಧಿಸಿತು. ಅಷ್ಟರೊಳಗಾಗಲೇ ವಿಲಿಯಮ್ ಟಿಂಡೇಲ್ ಎಂಬ ಸುಧಾರಣಾ ಚಳುವಳಿಗಾರರ ಮುಖಂಡ ಮೊದಲ ಬಾರಿಗೆ ಹೊಸ ಒಡಂಬಡಿಕೆಯನ್ನು ಇಂಗ್ಲೀಷಿನಲ್ಲಿ ಮುದ್ರಿಸಿದನು. ಹೀಗಾಗಿ ಆತನನ್ನು ಇಂಗ್ಲೀಷ್ ಭಾಷೆಯ ಆರ್ಕಿಟೆಕ್ಟ್ ಎಂದೂ ಕರೆಯಲಾಗುತ್ತದೆ. ಈ ಎಲ್ಲ ಬೆಳವಣಿಗೆಗಳನ್ನು ಚರ್ಚ್ ವಿರೋಧಿಸುತ್ತಲೇ ಬಂದಿತು.

ಜಾನ್ ಹಸ್ ೧೪೧೫ರಲ್ಲಿ ಸಾಯುವಾಗ ಕೊನೆಗೆ ಹೇಳಿದ್ದ ಮಾತುಗಳನ್ನು ದೇವನು ಕೇಳಿಸಿಕೊಂಡು ಈಡೇರಿಸಿದನೇನೋ ಎಂಬಂತೆ ನೂರು ವರ್ಷಗಳ ನಂತರ ೧೫೧೭ರಲ್ಲಿ ಮಾರ್ಟಿನ್ ಲೂಥರ್ ರೋಮನ್ ಕೆಥೊಲಿಕ್ ಚರ್ಚಿನ ಮೇಲೆ ೯೫ ದೋಷಗಳನ್ನು ಹೇರಿದನು. ಬೈಬಲ್ಲು ಜರ್ಮನಿ ಭಾಷೆಗೆ ಭಾಷಾಂತರವಾಯಿತು. ಅದೇ ವರ್ಷ, ದೇವನ ಪ್ರಾರ್ಥನೆಯನ್ನು ಲ್ಯಾಟಿನ್ ಬದಲು ಇಂಗ್ಲೀಷಿನಲ್ಲಿ ಮಾಡಿದ್ದಕ್ಕೆ ಕಾಥೊಲಿಕ್ ಚರ್ಚು ೭ ಜನರನ್ನು ಸಜೀವದಹನಕ್ಕೆ ನೂಕಿತು. ದೇವವಾಣಿಯನ್ನು ದೇವಭಾಷೆಯಿಂದ ಹೊರತಂದು ಮಾನವಭಾಷೆಗೆ ತಂದಿದ್ದು ಚರ್ಚಿಗೆ ಇಷ್ಟವಾಗಿರಲಿಲ್ಲ. ನಂತರ ಪ್ರಿಂಟಿಂಗ್ ಪ್ರೆಸ್ಸುಗಳು ಅನೇಕ ಬೈಬಲ್ ಪ್ರತಿಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಹೊರತಂದಿತು. ಕ್ಯಾಥೊಲಿಕ್ ಚರ್ಚಿಗೆ ಇದು ಒಪ್ಪಿಗೆಯಿರಲಿಲ್ಲವಾದರೂ, ಜನರ ಚಳುವಳಿಯಿಂದಾಗಿ ಪ್ರೊಟೆಸ್ಟೆಂಟ್ ವಾದವು ಜನಪ್ರಿಯವಾಯಿತು. ಬೈಬಲ್ ಹೀಗೆ ಅನೇಕ ಭಾಷೆಗಳಲ್ಲಿ ಭಾಷಾಂತರಗೊಂಡಿತು.

ಈ ಕಥೆಯಲ್ಲಿ ಯಾವೆಲ್ಲ ಅಂಶಗಳು ಎದುರು ಬದುರಾಗಿ ನಿಂತು ಯುದ್ಧ ಮಾಡಿದವು ಎನ್ನುವದನ್ನು ಗಮನ ಹರಿಸೋಣ. ದೇವಭಾಷೆ ಎಂದೆನಿಸಿಕೊಂಡ ಹಿಬ್ರೂ, ಗ್ರೀಕ್ ಮತ್ತು ಲ್ಯಾಟಿನ್ ಗಳಲ್ಲೇ ದೇವವಾಣಿಯು ಇರಬೇಕು ಎಂಬ ಧೋರಣೆ ಒಂದು ಕಡೆಯಾದರೆ, ಜರ್ಮನ್, ಇಂಗ್ಲೀಷ್ ನಂಥ ಆಡುಭಾಷೆಗಳಿಗೆ ದೇವವಾಣಿಯು ಭಾಷಾಂತರವಾಗಬೇಕು ಎಂಬ ಆಗ್ರಹ ಇನ್ನೊಂದೆಡೆ. ದೇವವಾಣಿಯ ಕುರಿತಾದ ಗ್ರಂಥಗಳು, ಅನ್ವಯಗಳು, ಪ್ರವಚನಗಳು, ಪ್ರಾರ್ಥನೆಗಳು ಕೇವಲ ಶಾಸ್ತ್ರೀಯ ಭಾಷೆಯಲ್ಲೇ ಇರಬೇಕು ಎಂಬ ಧೋರಣೆ ಒಂದೆಡೆಯಾದರೆ, ಇವು ಆಡುಭಾಷೆಗಳಲ್ಲೂ ಬರಬೇಕು ಎಂಬ ಆಗ್ರಹ ಇನ್ನೊಂದೆಡೆ. ದೇವವಾಣಿಯು ಮೂಲತಃ ಚರ್ಚಿನ ಮತ್ತು ಪ್ರೀಸ್ಟಿನ ಹಿಡಿತದಲ್ಲಿರಬೇಕು ಎಂಬ ಧೋರಣೆ ಒಂದು ಕಡೆಯಾದರೆ, ಬೈಬಲ್ಲಿನ ತತ್ತ್ವಗಳು ಜನರಿಗೆ ನೇರವಾಗಿ ಮುಟ್ಟಬೇಕು ಎಂಬ ಆಗ್ರಹ ಇನ್ನೊಂದೆಡೆ. ಈ ರೀತಿ ದೇವಭಾಷೆ v/s ಆಡುಭಾಷೆ, ಶಾಸ್ತ್ರೀಯ v/s ಜಾನಪದ ಮತ್ತು ಕ್ಯಾಥೊಲಿಕ್ ಪ್ರೀಸ್ಟ್ ಹುಡ್ v/s ಪ್ರೊಟೆಸ್ಟಂಟ್ ಚಳುವಳಿ ಎಂಬ ಮೂರು ಯುದ್ಧಗಳನ್ನು ನಾವು ಪಟ್ಟಿ ಮಾಡಬಹುದು. ಬ್ರೀಟಿಷರು ಭಾರತಕ್ಕೆ ಬರುವ ಮುನ್ನ ಬೈಬಲ್ ಲೋಕದಲ್ಲಿ ನಡೆದ ವಿದ್ಯಮಾನಗಳ ಕಥೆ ಇಂತಿಷ್ಟು.

ಇನ್ನು ನಮ್ಮ ದೇಶಕ್ಕೆ ಬರೋಣ. ನಮ್ಮ ದೇಶದಲ್ಲಿ ಅದೆಷ್ಟೋ ಭಾಷೆಗಳು. ಊರಿಗೊಂದು, ಜಾತಿಗೊಂದು ಆಡುಭಾಷೆ, ಸಂಪ್ರದಾಯಗಳಿಗಂತೂ ಲೆಕ್ಕವಿಲ್ಲ. ಕಲೆ, ಸಾಹಿತ್ಯ, ಸಂಗೀತ, ನೃತ್ಯಗಳಲ್ಲಿ ಅನೇಕ ಪ್ರಕಾರಗಳು. ಜಾತಿಗಳು, ಅವುಗಳಲ್ಲಿ ಉಪಜಾತಿಗಳು, ಕುಲಕಸುಬು ಸಮುದಾಯಗಳು, ಬುಡಕಟ್ಟು ಜನಾಂಗಗಳು, ಪ್ರತಿಯೊಂದು ಮನೆಗೂ ಅದರದೇ ಪರಂಪರೆಗಳು, ಅನೇಕ ದೇವತಾ ಕಲ್ಪನೆಗಳು, ಪೂಜಾ ಪದ್ಧತಿಗಳು, ಕಟ್ಟುಪಾಡುಗಳು. ಎರಡು ಜಾತಿಗಳ ನಡುವೆ ಅಸ್ಪೃಶ್ಯತೆ, ತರತಮಗಳು, ಈ ಸಮಾಜ ಒಂದೆಡೆಯಾದರೆ, ಇನ್ನೊಂದೆಡೆ ಅನೇಕ ರೀತಿಯ ಸನ್ಯಾಸ ಪ್ರಭೇದಗಳು, ವೇದಾಂತ, ಬೌದ್ಧ, ವಚನಗಳಾದಿಯಾಗಿ ಅನೇಕ ದರ್ಶನಗಳು, ಎಲ್ಲ ಭೇದಗಳನ್ನು ತಿರಸ್ಕರಿಸಿ ಆತ್ಮವನ್ನರಸುವ ಸಂಘಗಳು, ಪ್ರತಿಯೊಂದು ಭಾಷೆಯಲ್ಲಿಯೂ ದಾರ್ಶನಿಕ ತತ್ತ್ವಗಳ ಕುರಿತ ವಿವರಣೆಗಳು. ಅವುಗಳ ಅನುಯಾಯಿಗಳು ಇನ್ನೊಂದೆಡೆ.

ಮುಖ್ಯವಾಗಿ ಸಮಾಜದಲ್ಲಿ ಎರಡು ರೀತಿಯ ಜನರನ್ನು ಗುರುತಿಸಬಹುದಾಗಿತ್ತು. ಒಂದಾನೊಂದು ಕರ್ಮದಲ್ಲಿ ಸ್ವಂತ ಆಸಕ್ತಿಯಿಂದಲೋ ಇಲ್ಲವೇ ಪರಂಪರಾಗತವಾಗಿಯೋ ತೊಡಗಿಕೊಂಡು ಒಂದಾನೊಂದು ಜಾತಿಯ ಭಾಗವಾಗಿ, ಧನವನ್ನು ಸಂಪಾದಿಸಿ, ಕುಟುಂಬಕ್ಕಾಗಿ ವ್ಯಯಿಸಿ, ದಾನಗಳನ್ನು ಮಾಡಿ, ನಂತರ ಆಸ್ತಿಯನ್ನು, ತಮ್ಮ ಕಸುಬನ್ನೂ, ತಮ್ಮ ಜೀವನದ ಪರಂಪರೆಗಳನ್ನು ಮುಂದಿನ ತಲೆಮಾರಿಗೆ ದಾಟಿಸುವ ಸಾಮಾಜಿಕ ರಚನೆಯಲ್ಲಿ ಇರುವ ಜನರು ಒಂದು ಬಗೆಯವರು. ಇನ್ನೊಂದು ಬಗೆಯ ಜನರು, ತಮ್ಮೆಲ್ಲ ಕರ್ಮಗಳನ್ನೂ ತ್ಯಜಿಸಿ, ಮೊದಲ ವರ್ಗದ ಜನರು ನೀಡುವ ದಾನದ ಆಧಾರದ ಮೇಲೆ ತಮ್ಮ ಮೂಲ ಅವಶ್ಯಕತೆಗಳನ್ನು ನೀಗಿಸಿಕೊಂಡು, ಅಲೆಮಾರಿಗಳಾಗಿ ಆಧ್ಯಾತ್ಮ ಸಾಧನೆಯಲ್ಲಿ ತೊಡಗಿ, ತಮ್ಮ ಜ್ಞಾನದಿಂದ ಮೊದಲ ವರ್ಗದ ಜನರಿಗೆ ಆಧ್ಯಾತ್ಮಿಕ ಜ್ಞಾನವನ್ನು ನೀಡುವ ಮತ್ತು ತಮ್ಮ ಶಿಷ್ಯರಿಗೆ ತಮ್ಮ ಜ್ಞಾನವನ್ನು ದಾಟಿಸುವ ಸಾಮಾಜಿಕ ರಚನೆಯಲ್ಲಿ ಇರುವವರು. ಎರಡೂ ಸಾಮಾಜಿಕ ರಚನೆಗಳಲ್ಲೂ ಹಲವಾರು ಪ್ರಭೇದಗಳು ಮತ್ತು ಅನೇಕ ಮಾರ್ಗಗಳು. ಜನರು ಮೊದಲ ಸಮಾಜದಲ್ಲಿ, ಎರಡು ಜಾತಿಗಳ ನಡುವಿನ ತರತಮವನ್ನು ಎಷ್ಟು ಸಹಜವಾಗಿ ಒಪ್ಪಿಕೊಂಡಿದ್ದರೋ, ಅಷ್ಟೇ ಸಹಜವಾಗಿ ಎರಡನೇ ಸಮಾಜದಲ್ಲಿ ಜಾತಿಭೇದವನ್ನು ಮತ್ತು ತಾರತಮ್ಯವನ್ನು ನಿರಾಕರಿಸಿದ್ದರು. ಉದಾಹರಣೆಗೆ ವೈದಿಕರ ಜ್ಞಾನಮಾರ್ಗದಲ್ಲಿ ಪಯಣಿಸಲಿಚ್ಛಿಸುವವನು ಆತ್ಮಶ್ರಾದ್ಧವನ್ನು ಮಾಡಿಕೊಂಡೇ ಹೋಗಬೇಕು. ಜಾತಿಯ ಮಾತು ಹಾಗಿರಲಿ, ದೇಹಾಭಿಮಾನವನ್ನೂ ಬಿಟ್ಟೇಳಬೇಕಾದದ್ದು ಜ್ಞಾನಮಾರ್ಗದಲ್ಲಿ ಹೋಗುವವನ ಮೊದಲ ಕರ್ತವ್ಯ.

ಪಾಶ್ಚಿಮಾತ್ಯರ ಸಮಾಜಕ್ಕೆ ವಿಲಕ್ಷಣವಾಗಿದ್ದ ಇಂಥದೊಂದು ಸಮಾಜದಲ್ಲಿ ಬ್ರಿಟೀ಼ಷರು ವಸಾಹತುವನ್ನಾರಂಭಿಸಿದರು. ಕಾಥೊಲಿಕ್ ಮತ್ತು ಪ್ರೊಟೆಸ್ಟಂಟ್ ಎಂಬ ಕಾಮಾಲೆಯಿಂದ ಕೂಡಿದ್ದ ಬ್ರಿಟೀಷರಿಗೆ ಈ ಲೋಕವೂ ಅವರ ಲೋಕದಂತೆ ಹಳಿದಿಯಾಗೇ ಕಂಡಿತು. ಅತ್ಯಂತ ವಿರಳವಾಗಿ ಆಡುಭಾಷೆಯಾಗಿ ಬಳಕೆಯಲ್ಲಿದ್ದ ಆದರೆ ಅತಿ ಹೆಚ್ಚು ಶಾಸ್ತ್ರಗಳಿಗೆ ಭಾಷೆಯಾಗಿದ್ದ, ಬಹುಜನರಿಗೆ ಅನಗತ್ಯವಾಗಿದ್ದ ಆದರೆ ಬಹುಜನರಿಗೆ ಕಲಿಯಲು ಅವಕಾಶವೂ ಇಲ್ಲದಿದ್ದ ಸಂಸ್ಕೃತ ಭಾಷೆ ಸರಳವಾಗಿ ದೇವಭಾಷೆ ಅಥವಾ Classical ಭಾಷೆಯ ಸ್ಥಾನವನ್ನು ಪಡೆದುಕೊಂಡಿತು. ಅದರ ಕಟ್ಟುನಿಟ್ಟಾದ ವ್ಯಾಕರಣದ ಪರಿಪಾಲನೆಯೂ ಕಾರಣವಾಗಿರಬಹುದು.

ಸಂಸ್ಕೃತ ಭಾಷೆಯಲ್ಲಿ ಅತಿ ಹೆಚ್ಚು ಪ್ರಾಮಾಣ್ಯತೆ ಮತ್ತು ಪವಿತ್ರತೆಯನ್ನು ಹೊಂದಿದ್ದ ವೇದಗಳು ಬೈಬಲ್ಲಿನಂತೆ ಕಂಡುಬಂದವು. ವೇದಗಳಲ್ಲಿ ಬರುವ ೫ ರೀತಿಯ ಜನರ ವರ್ಣನೆ, ಚಾತುರ್ವರ್ಣ್ಯಗಳ ಸೃಷ್ಟಿಯ ಕುರಿತ ಹೇಳಿಕೆಗಳನ್ನು ಜಾತಿಗಳಿಗೆ ಆಧಾರವೆಂದು ಪರಿಗಣಿಸಿದರು. ಸಂಸ್ಕೃತದಲ್ಲಿ ಬೆಳೆದ ನಾಟಕಗಳು, ಭರತಮುನಿಯ ನಾಟ್ಯಶಾಸ್ತ್ರದ ಆಧಾರದಲ್ಲಿ ಬೆಳೆದ ಭರತನಾಟ್ಯ, ಹಿಂದುಸ್ತಾನಿ-ಕರ್ನಾಟಕ ಸಂಗೀತಗಳು ಇವೆಲ್ಲವೂ Classical ಎನಿಸಿಕೊಂಡವು. ನಾವು ಅವಗಳನ್ನು ಶಾಸ್ತ್ರೀಯ ಎಂದು ಅನುವಾದಿಸಿಕೊಂಡೆವು. ವ್ಯಾಕರಣದಿಂದ ಬೆಳೆದ ಛಂದೋಬದ್ಧ ಕಾವ್ಯಗಳು ಸಾಹಿತ್ಯಗಳೆಲ್ಲವೂ ಶಾಸ್ತ್ರೀಯ ಸ್ಥಾನವನ್ನು ಗಿಟ್ಟಿಸಿಕೊಂಡವು. ಹೀಗೆ ಒಂದಾನೊಂದು ಶಾಸ್ತ್ರಗ್ರಂಥವನ್ನು ಪರಿಪಾಲಿಸುವ ಕಲೆಗಳೆಲ್ಲವೂ ಶಾಸ್ತ್ರೀಯವಾಗಿಬಿಟ್ಟವು. ವೈದಿಕ ಶಾಸ್ತ್ರಗಳು ಸಹಜವಾಗಿ ಕ್ಯಾಥೊಲಿಕ್ ಸ್ಥಾನವನ್ನು ಆಕ್ರಮಿಸಿಕೊಂಡವು.

ಬ್ರಿಟೀಷರು ಭಾರತದ ಇನ್ನಿತರ ಪ್ರಾದೇಶಿಕ ಭಾಷೆಗಳ ಕುರಿತೂ ಅಧ್ಯಯನ ಮಾಡಿದರು. ಆ ಭಾಷೆಗಳಲ್ಲಿಯೂ ಅವುಗಳದೇ ವಿಶಿಷ್ಟವಾದ ಸಾಹಿತ್ಯ, ಸಂಗೀತ, ನೃತ್ಯಕಲೆಗಳಿದ್ದವು. ಆದರೆ ಇವುಗಳ ಕುರಿತಾದ ಯಾವುದೇ ಶಾಸ್ತ್ರಗಳು ಸಿಗಲಿಲ್ಲ. ಹೀಗಾಗಿ ಸಹಜವಾಗಿ ಇವೆಲ್ಲ Folk ಎಂದು ಕರೆಯಿಸಿಕೊಂಡಿತು. ಅದನ್ನು ನಾವು ಜಾನಪದವೆಂದು ಭಾಷಾಂತರಿಸಿಕೊಂಡೆವು. ಸರಿ ಎರಡು ಪ್ರಕಾರಗಳು ಇವೆಯೆಂದಾದ ಮೇಲೆ ಈ Classical ಮತ್ತು Folk ನಡುವೆ ಯುದ್ಧವೊಂದಿರಲೇಬೇಕಾಯಿತಲ್ಲವೇ? ವೈದಿಕ ಕರ್ಮಗಳನ್ನು ನಿಂದಿಸುವ ವಾಕ್ಯಗಳು ಇಲ್ಲಿನ ಪ್ರಾದೇಶಿಕ ಭಾಷೆಗಳ ಆಧ್ಯಾತ್ಮಿಕ ಸಾಹಿತ್ಯಗಳಲ್ಲಿ ಹೇರಳವಾಗಿ ಕಂಡಿತು. ಸಹಜವಾಗಿ ಅವುಗಳು ಪ್ರೊಟೆಸ್ಟೆಂಟ್ ಸ್ಥಾನವನ್ನು ಪಡೆದವು. ಸಂಸ್ಕೃತದ ವೇದಗಳನ್ನು ಅರಿತಿದ್ದ ಬ್ರಾಹ್ಮಣರು ಪ್ರೀಸ್ಟ್ ಹುಡ್ ಸ್ಥಾನವನ್ನು ಪಡೆಯಲು ಹೆಚ್ಚು ಸಮಯ ಬೇಕಾಗಲೇ ಇಲ್ಲ. ಆಡುಭಾಷೆಯಲ್ಲಿ ಅಧ್ಯಾತ್ಮವನ್ನು, ರಾಮಾಯಣ ಭಾರತವನ್ನು ಬರೆದವರು ಸಹಜವಾಗಿ ಸಾಮಾಜಿಕ ಚಳುವಳಿಗಾರರಾದರು.

ಈ ರೀತಿ ನಮ್ಮ ದೇಶದಲ್ಲಿಯೂ ಸಂಸ್ಕೃತ ಮತ್ತು ಆಡುಭಾಷೆಗಳ ನಡುವೆ ಯುದ್ಧವಿದೆ, ಶಾಸ್ತ್ರೀಯ ಮತ್ತು ಜಾನಪದಗಳ ನಡುವೆ ವೈರತ್ವವಿದೆ, ಭಕ್ತನು ನೇರವಾಗಿ ಭಗವಂತನನ್ನು ಸೇರದಂತೆ ಪುರೋಹಿತ ರಿಲಿಜನ್ನಿನ ಡಾಕ್ಟ್ರಿನ್ನುಗಳನ್ನು ತನ್ನ ಕೈಯಲ್ಲಿ ಹಿಡಿದಿಟ್ಟುಕೊಂಡಿದ್ದಾನೆ ಎಂಬ ಅದೇ ಮೂರು ಯುದ್ಧಗಳು ಅವರಿಗೆ ಕಂಡವು. ವೈದಿಕ ಕರ್ಮಗಳನ್ನು ವಿರೋಧಿಸುವ ವೇದದ ಭಾಗವೇ ಆಗಿರುವ ಉಪನಿಷತ್ತುಗಳನ್ನು ಹೊರತುಪಡಿಸಿ ಉಳಿದವೆಲ್ಲವನ್ನೂ ಅವರು ತಮ್ಮದೇ ನೆಲೆಗಟ್ಟಿನಲ್ಲಿ ಅರ್ಥೈಸಿಕೊಂಡರು. ಅವರು ಸಮಾಜದಲ್ಲಿ ಕಂಡುಕೊಂಡ ವೈರುಧ್ಯಗಳನ್ನು ವಿವರಿಸಲು ಆರ್ಯ ಮತ್ತು ದ್ರಾವಿಡ ಸಿದ್ಧಾಂತಗಳನ್ನೂ ಹಾಕಿಕೊಂಡರು. ಆರ್ಯರಿಂದ ಸಂಸ್ಕೃತ, ಶಾಸ್ತ್ರೀಯ ಗ್ರಂಥಗಳು, ಪೌರೋಹಿತ್ಯಗಳು ಬಂದಿವೆ ಎಂದು ತಿಳಿದುಕೊಂಡರು.

ದ್ರಾವಿಡರಿಂದ ಆಡುಭಾಷೆಗಳು, ಬೌದ್ಧ, ಶರಣ ಮುಂತಾದ ಸಾಮಾಜಿಕ ಮತ್ತು ಭಕ್ತಿ ಚಳುವಳಿಗಳು ನಡೆದವು ಎಂಬುದನ್ನೂ ಅರಿತರು. ಅವರ ಈ ದೃಷ್ಟಿಕೋನಕ್ಕೆ ಹೊಂದಿಕೆಯಾಗದ ಉಪನಿಷತ್ತುಗಳು ಬೌದ್ಧಮತದ ಜನಪ್ರಿಯತೆಯನ್ನು ಕಸಿಯುವ ಬ್ರಾಹ್ಮಣರ ಹುನ್ನಾರವಾದವು ಮತ್ತು ಪುರಾಣಗಳು ಭಕ್ತಿಚಳುವಳಿಯನ್ನು ಪುರೋಹಿತಶಾಹಿಯಡಿಯಲ್ಲಿ ತರುವ ಹುನ್ನಾರದ ಭಾಗಗಳಾದವು. ಭಾರತದಲ್ಲಿ ಇರುವ ಸಾವಿರಾರು ಜಾತಿಗಳ ಹಿಂದೆ ಜಾತಿವ್ಯವಸ್ಥೆಯಿದೆಯೆಂದು ಊಹಿಸಿದರು. ವೇದದಲ್ಲಿ ಬರುವ ೫ ರೀತಿಯ ಜನಾಂಗದ ಕುರಿತಾದ ವಾಕ್ಯಗಳು, ವರ್ಣವ್ಯವಸ್ಥೆಯ ಕುರಿತಾದ ವಾಕ್ಯಗಳು ಈ ಜಾತಿವ್ಯವಸ್ಥೆಗೆ ಕಾರಣಗಳಾದವು. ವೇದಗಳು ಅದಾಗಲೇ ಹಿಂದೂ ರಿಲಿಜನ್ನಿನ ಡಾಕ್ಟ್ರಿನ್ನುಗಳಾಗಿದ್ದರಿಂದ ವೇದಗಳಲ್ಲಿಲ್ಲದ ಅನೇಕ ಆಚರಣೆಗಳು ಮೂಢನಂಬಿಕೆ ಎಂದೆನಿಸಿಕೊಂಡವು. ಆರ್ಯ-ದ್ರಾವಿಡ ವೈರುಧ್ಯ ಉಳಿದೆಲ್ಲ ವೈರುಧ್ಯಗಳನ್ನು ವಿವರಿಸುವದರಲ್ಲಿ ಬಹುತೇಕ ಸಫಲವಾಯಿತು. ಹೀಗೆ ಪ್ರೊಟೆಸ್ಟೆಂಟ್ ಯುಗದಲ್ಲಿ ನಡೆದ ಯುದ್ಧಗಳು ನಮ್ಮಲ್ಲೂ ನಡೆದವು ಎಂಬುದನ್ನು ಸಾಬೀತುಪಡಿಸಿದರು. ಸಂಸ್ಕೃತ v/s ಆಡುಭಾಷೆ ಎಂಬ ಯುದ್ಧ, ಶಾಸ್ತ್ರೀಯ v/s ಜಾನಪದ ಎಂಬ ಯುದ್ಧ ಮತ್ತು ಪುರೋಹಿತ v/s ಭಕ್ತ ಎಂಬ ಯುದ್ಧಗಳು ನಮ್ಮಲ್ಲೂ ಕಾಲಕಾಲಕ್ಕೆ ನಡೆದಿವೆ ಎಂದು ಅವರು ಅರಿತುಕೊಂಡರು.

ಇದೆಲ್ಲ ಅವರಿಗೆ ಸಹಜವಾಗಿಯೇ ಕಂಡಿತು ಎಂದೇ ಭಾವಿಸೋಣ. ಅವರು ಹಾಗೆ ಯೋಚಿಸಲು ಕಾರಣ ಅವರು ಬಂದಿದ್ದ ಸಾಮಾಜಿಕ ಚರಿತ್ರೆ ಅವರನ್ನು ಹಾಗೆ ಯೋಚಿಸುವಂತೆ ಮಾಡಿತ್ತು. ಆದರೆ ಇವರಿಗೆ ಸಹಜವಾಗಿ ಕಂಡ ದೃಷ್ಟಿಕೋನವು ನಮಗೆ ಸಹಜವೇ ಎಂಬುದು ಪ್ರಶ್ನೆ. ರಾಮಾಯಣ ಭಾರತಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಬರೆದವರು ಜನರಿಗೆ ಸರಳವಾಗಿ ಅರ್ಥವಾಗಲಿ ಎಂದೇ ಬರೆದಿದ್ದಾರಾದರೂ ಅವರಲ್ಲಿ ಯಾರಿಗಾದರೂ, ರಾಮಾಯಣ ಭಾರತಗಳನ್ನು ಸಂಸ್ಕೃತದ ಕಪಿಮುಷ್ಟಿಯಿಂದ ಬಿಡಿಸುವ ಉದ್ದೇಶಕ್ಕಾಗಿ ಬರೆಯುತ್ತಿದ್ದೇನೆ ಎಂಬ ಕಲ್ಪನೆ ಬಂದಿದೆಯೇ? ಯಾರಾದರೂ ಹಾಗೆ ಹೇಳಿಕೊಂಡಿದ್ದಾರೆಯೇ? ಪ್ರಾದೇಶಿಕ ಭಾಷೆಗಳಲ್ಲಿ ಇತಿಹಾಸಗಳು (ರಾಮಾಯಣ ಮತ್ತು ಮಹಾಭಾರತವನ್ನು ಇತಿಹಾಸ ಎಂದು ಪರಂಪರೆಯಲ್ಲಿ ಹೇಳಲಾಗಿದೆ) ಬಂದಾಗ ಬ್ರಾಹ್ಮಣರು ಅದನ್ನು ಸ್ವೀಕರಿಸಿ ಪ್ರೋತ್ಸಾಹಿಸಿದರೋ ಅಥವಾ ಹಾಗೆ ಬರೆದವರನ್ನು ಬೆಂಕಿಗೆ ದೂಡಿದರೋ? ಸಂಸ್ಕೃತಕ್ಕೂ ಮತ್ತು ಆಡುಭಾಷೆಗೂ ಒಂದು ದೊಡ್ಡ ಯುದ್ಧವಿತ್ತು ಎಂಬುದನ್ನು ಒಪ್ಪಬಹುದೇ? ಏಕೆಂದರೆ ಸಂಸ್ಕೃತ ನಾಟಕಕಾರರು ಪ್ರಾಕೃತ ಭಾಷೆಗಳನ್ನು ಹೇರಳವಾಗಿ ಉಪಯೋಗಿಸಿರುವಾಗ ಸಂಸ್ಕೃತಕ್ಕೂ ಮತ್ತು ಆಡುಭಾಷೆಯಾದ ಪ್ರಾಕೃತಕ್ಕೂ ಯುದ್ಧವಿತ್ತು ಎನ್ನುವದನ್ನು ಒಪ್ಪುವದು ಹೇಗೆ?

ಕುಮಾರವ್ಯಾಸ ಸ್ವತಃ ಬ್ರಾಹ್ಮಣನಾಗಿದ್ದು ಮಹಾಭಾರತವನ್ನು ಅನುವಾದಿಸಿದ್ದನ್ನು ಈ ಸಾಮಾಜಿಕ ಸಿದ್ಧಾಂತವು ವಿವರಿಸಬಲ್ಲದೇ? ಪುರಂದರದಾಸರು ವೈದಿಕರ ಕರ್ಮಠತೆಯನ್ನು ನಿಂದಿಸಿದ್ದನ್ನು ಈ ಸಿದ್ಧಾಂತವು ವಿವರಿಸಬಲ್ಲದೇ? ಬುದ್ಧ ಅಥವಾ ಶರಣರು ಹೇಳುವ ನಿಜವಾದ ಬ್ರಾಹ್ಮಣ್ಯದ ಕಲ್ಪನೆ, ಕೀಳುಜಾತಿಯ ಹೆಸರುಗಳನ್ನು ಬೈಗುಳವಾಗಿ ಬಳಸಿದ್ದು ಇವೆಲ್ಲವನ್ನೂ ವಿವರಿಸಬಲ್ಲದೇ? ಕೆಳಜಾತಿಗಳಲ್ಲೇ ಬಲಗೈ ಎಡಗೈಗಳ ಅಸ್ತಿತ್ವವನ್ನು ವಿವರಿಸಬಲ್ಲದೇ? ವೈದಿಕ ಕರ್ಮಗಳಲ್ಲಿ ಅಧಿಕಾರವಿಲ್ಲದ ಸ್ತ್ರೀ ಶೂದ್ರರಿಗಾಗಿ ಪುರಾಣ ಇತಿಹಾಸಗಳ ರಚನೆಯಾಗಿದೆ ಎಂಬ ವ್ಯಾಸವಾಣಿಯನ್ನು ಇದು ವಿವರಿಸಬಲ್ಲದೇ? ಉಪನಿಷತ್ತುಗಳಲ್ಲಿ ಎಲ್ಲರಿಗೂ ಅಧಿಕಾರವಿದೆ ಎಂಬ ಶಂಕರಾಚಾರ್ಯರ ನಿಲುವನ್ನು ಹೇಗೆ ವಿವರಿಸುವದು? ಪ್ರಾದೇಶಿಕ ಭಾಷೆಯಲ್ಲಿ ಜ್ಞಾನವನ್ನೇ ತಲುಪಿಸುವದು ಬೌದ್ಧದರ್ಶನದ ಉದ್ದೇಶವಾಗಿದ್ದರೆ, ಬೌದ್ಧರು ಸಂಸ್ಕೃತದಲ್ಲಿ ಗ್ರಂಥಗಳನ್ನೇಕೆ ಬರೆದರು? ಅಲ್ಲಿಗೆ ಶಾಸ್ತ್ರೀಯ ಮತ್ತು ಜಾನಪದಗಳ ನಡುವೆ ದೊಡ್ಡ ಯುದ್ಧವಿತ್ತು ಎಂಬುದನ್ನು ಒಪ್ಪಬಹುದೇ?

16 ಟಿಪ್ಪಣಿಗಳು Post a comment
 1. Udaya Dharmasthala
  ಸೆಪ್ಟೆಂ 23 2015

  ಎಲ್ಲಾ ಸರಿಯಾದ ಸಂಗತಿಗಳು. ಆದರೆ ಅವುಗಳನ್ನು ಅಸಂಗತವನ್ನಾಗಿಸುವುದು ಇಂದಿನ ದುರಂತ ud

  ಉತ್ತರ
 2. ಸೆಪ್ಟೆಂ 23 2015

  Dear Vinayaka,
  You say: “ವೈದಿಕ ಕರ್ಮಗಳಲ್ಲಿ ಅಧಿಕಾರವಿಲ್ಲದ ಸ್ತ್ರೀ ಶೂದ್ರರಿಗಾಗಿ ಪುರಾಣ ಇತಿಹಾಸಗಳ ರಚನೆಯಾಗಿದೆ ಎಂಬ ವ್ಯಾಸವಾಣಿ…”.

  Could you please give me the reference and the citation please. Thank you.

  ಉತ್ತರ
  • ಸೆಪ್ಟೆಂ 23 2015

   ಸರ್ ಬಾಲಗಂಗಾಧರರೇ,

   ಶ್ರೀಮಧ್ಭಾಗವತ ೧.೪.೨೪ ಮತ್ತು ೧.೪.೨೫

   ತ ಏವ ವೇದಾ ದುರ್ಮೇಧೈರ್ಧಾರ್ಯಂತೇ ಪುರುಷೈರ್ಯಥಾ | ಎವಂ ಚಕಾರ ಭಗವಾನ್ ವ್ಯಾಸಃ ಕೃಪಣವತ್ಸಲಃ | ೨೪
   ಸ್ತ್ರೀಶೂದ್ರದ್ವಿಜಬಂಧೂನಾಂ ತ್ರಯೀ ನ ಶ್ರುತಿಗೋಚರಾ | ಕರ್ಮಶ್ರೇಯಸಿ ಮೂಢಾನಾಂ ಶ್ರೇಯ ಏವಂ ಭವೇದಿಹ | ಇತಿ ಭಾರತಮಾಖ್ಯಾನಂ ಕೃಪಯಾ ಮುನಿನಾ ಕೃತಮ್ || ೨೫

   ಅಲ್ಲದೇ ಶಂಕರಾಚಾರ್ಯರು ಅಪಶೂದ್ರಾಧಿಕರಣದ ಕೊನೆಯ ಸಾಲಿನಲ್ಲಿ ಶಾಂತಿಪರ್ವದ ಮೋಕ್ಷಧರ್ಮದ ಸಾಲಿನ ಭಾವವನ್ನು ಉಲ್ಲೇಖಿಸಿದ್ದಾರೆ.

   ಯೇಷಾಂ ಪುನಃ ಪೂರ್ವಕೃತ ಸಂಸ್ಕಾರವಶಾತ್ ವಿದುರ ಧರ್ಮವ್ಯಾಧಪ್ರಭೃತೀನಾಂ ಜ್ಞಾನೋತ್ಪತ್ತಿಃ ತೇಷಾಂ ನ ಶಕ್ಯತೇ ಫಲಪ್ರಾಪ್ತಿಃ ಪ್ರತಿಷೇದ್ಧುಮ್ | ಜ್ಞಾನಸ್ಯ ಐಕಾಂತಿಕ ಫಲತ್ವಾತ್, “ಶ್ರಾವಯೇಚ್ಚತುರೋ ವರ್ಣಾನ್” (ಮೋಕ್ಷಧರ್ಮ ೩೨೭-೪೯) ಇತಿ ಚ ಇತಿಹಾಸಪುರಾಣಾಧಿಗಮೇ, ಚಾತುರ್ವರ್ಣಸ್ಯ ಅಧಿಕಾರ ಸ್ಮರಣಾತ್ | ವೇದಪೂರ್ವಕಸ್ತು ನಾಸ್ತಿ ಅಧಿಕಾರಃ ಶೂದ್ರಾಣಾಮ್ ಇತಿ ಸ್ಥಿತಮ್ ||

   ಉತ್ತರ
 3. ಸೆಪ್ಟೆಂ 24 2015

  “ಅವರು ಸಮಾಜದಲ್ಲಿ ಕಂಡುಕೊಂಡ ವೈರುಧ್ಯಗಳನ್ನು ವಿವರಿಸಲು ಆರ್ಯ ಮತ್ತು ದ್ರಾವಿಡ ಸಿದ್ಧಾಂತಗಳನ್ನೂ ಹಾಕಿಕೊಂಡರು. ”
  ಆರ್ಯ ದ್ರಾವಿಡ ಸಿದ್ಧಾಂತಕ್ಕೂ ಹಾಗೂ ವಸಾಹತು ಪ್ರಜ್ಞೆಗೂ ಸಂಬಂಧವಿಲ್ಲ (ಬಾಲಗಂಗಾಧರರೂ ಹಾಗೆ ಹೇಳಿದ್ದರೆಂದು ನನಗನಿಸುವದಿಲ್ಲ).
  ಹಾಗೂ ಯುರೋಪ್ ನಲ್ಲಿನ ಶಾಸ್ತ್ರೀಯ ಭಾಷೆ ಹಾಗೂ ಆಡು ಭಾಷೆಗಳ ನಡುವಿನ ವಿರೋಧವನ್ನು ಕಾಥೊಲಿಕ್ vs ಪ್ರೊಟೆಸ್ಟಂಟ್ ನಡುವಿನ ಸಮರಕ್ಕೆ ಸಮೀಕರಿಸುವದು ತೀರಾ ಬಾಲಿಶ.

  ಉತ್ತರ
  • ಸೆಪ್ಟೆಂ 25 2015

   “ಆರ್ಯ ದ್ರಾವಿಡ ಸಿದ್ಧಾಂತಕ್ಕೂ ಹಾಗೂ ವಸಾಹತು ಪ್ರಜ್ಞೆಗೂ ಸಂಬಂಧವಿಲ್ಲ (ಬಾಲಗಂಗಾಧರರೂ ಹಾಗೆ ಹೇಳಿದ್ದರೆಂದು ನನಗನಿಸುವದಿಲ್ಲ).”
   => ವಿವರಿಸಿ.
   “ಹಾಗೂ ಯುರೋಪ್ ನಲ್ಲಿನ ಶಾಸ್ತ್ರೀಯ ಭಾಷೆ ಹಾಗೂ ಆಡು ಭಾಷೆಗಳ ನಡುವಿನ ವಿರೋಧವನ್ನು ಕಾಥೊಲಿಕ್ vs ಪ್ರೊಟೆಸ್ಟಂಟ್ ನಡುವಿನ ಸಮರಕ್ಕೆ ಸಮೀಕರಿಸುವದು ತೀರಾ ಬಾಲಿಶ”
   => ಬೈಬಲ್ಲಿನ ಭಾಷಾಂತರಗಳ ಕುರಿತ ಕಥೆಯನ್ನು ಈಗಾಗಲೇ ಕೊಟ್ಟಿದ್ದೇನೆ. ಅದರ ಆಧಾರದ ಮೇಲೆ ನಾನು ಮಾಡಿರುವ ವ್ಯಾಖ್ಯಾನ ನಿಮಗೆ “ಬಾಲಿಶ”ವೆಂದೆನಿಸಿದರೆ, ದಯವಿಟ್ಟು ಅದೇ ಕಥೆಯ ಮೇಲೆ ನಿಮ್ಮ “ಪ್ರೌಢ” ವ್ಯಾಖ್ಯಾನ ಏನು ಎಂಬುದನ್ನು ತಿಳಿಸುವದು. ಇಂಗ್ಲೀಷಿನಲ್ಲಿ ಚರ್ಚು ಪ್ರಾರ್ಥನೆಯನ್ನು ವಿರೋಧಿಸಲು ಮತ್ತು ಜನರು ಅದಕ್ಕಾಗಿ ಆಗ್ರಹಿಸಲು ಕಾರಣವನ್ನು ತಿಳಿಸುವದು.

   ಉತ್ತರ
   • Anonymous
    ಸೆಪ್ಟೆಂ 25 2015

    troll ಗೆ trollinಗಾ???? ಭೇಷ್ ಭೇಷ್ …..

    ಉತ್ತರ
   • ಸೆಪ್ಟೆಂ 26 2015

    ಆರ್ಯ ದ್ರಾವಿಡ ಸಿದ್ಧಾಂತವು ವಸಾಹತುಶಾಹಿ ಪ್ರಜ್ಞೆಯ ಸ್ವರೂಪವೆಂದು ಬಾಲಗಂಗಾಧರರು ಎಲ್ಲಿಯೂ ಹೇಳಿಲ್ಲ. ಒಂದು ವೇಳೆ ಹಾಗೆ ಹೇಳಿದ್ದರೆ ಬಾಲಗಂಗಾಧರರ ಕೃತಿಯಿಂದ ಅದನ್ನು ಉಲ್ಲೆಕಿಸುವಿರಾ?
    ಒಂದು ವೇಳೆ ನಿಮ್ಮ ವಾದ ಬಾಲು ಅವರ ವಾದಕ್ಕಿಂತ ಭಿನ್ನವಾಗಿದ್ದರೆ ನಿಮ್ಮನ್ನು ಅಭಿನಂದಿಸಲೇಬೇಕು. ಆದರೆ ಸಿಎಸ್ ಎಲ್ ಸಿ ತನ್ನ ಸತ್ಯ ಶೋಧನೆಯಲ್ಲಿ ಇನ್ನೂ ಮುಂದಕ್ಕೆ ಹೋಗಬಹುದೆಂದು ನನಗನ್ನಿಸುವದಿಲ್ಲ(ಅಥವಾ ಬಾಲು ಅವರ ವಾದಕ್ಕಿಂತ ಭಿನ್ನವಾದ ವಾದವನ್ನು ಒಪ್ಪಿಕೊಳ್ಳಬಹುದೆಂದು ನನಗನ್ನಿಸುವದಿಲ್ಲ). Because cslc had already set its boundary; that’s, balu is the only last and true prophet. 🙂

    “ಬೈಬಲ್ಲಿನ ಭಾಷಾಂತರಗಳ ಕುರಿತ ಕಥೆಯನ್ನು ಈಗಾಗಲೇ ಕೊಟ್ಟಿದ್ದೇನೆ. ಅದರ ಆಧಾರದ ಮೇಲೆ ನಾನು ಮಾಡಿರುವ ವ್ಯಾಖ್ಯಾನ ನಿಮಗೆ “ಬಾಲಿಶ”ವೆಂದೆನಿಸಿದರೆ, ದಯವಿಟ್ಟು ಅದೇ ಕಥೆಯ ಮೇಲೆ ನಿಮ್ಮ “ಪ್ರೌಢ” ವ್ಯಾಖ್ಯಾನ ಏನು ಎಂಬುದನ್ನು ತಿಳಿಸುವದು.”

    ನಿಮ್ಮ ಎರಡು ಹೇಳಿಕೆಗಳನ್ನು ನೀವೆ ಗಮನಿಸಿ:
    ೧. ಕ್ರಿ.ಶ. ೧೪೦೦ರ ತನಕ ಬೈಬಲ್ಲಿನ ಹಳೇ ಒಡಂಬಡಿಕೆ ಮತ್ತು ಹೊಸ ಒಡಂಬಡಿಕೆಗಳು ಹಿಬ್ರೂ, ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳಲ್ಲಿ ಇದ್ದವು.
    ೨. ೧೪೫೦ರಲ್ಲಿ ಪ್ರಿಂಟಿಂಗ್ ಪ್ರೆಸ್ ಕಂಡುಹಿಡಿದ ಜೊಹನ್ ಗುಂಟನ್ಬರ್ಗ್ ಲ್ಯಾಟಿನ್ನಿನಲ್ಲಿದ್ದ ಬೈಬಲ್ಲಿನ ಮೊದಲ ಪ್ರತಿಯನ್ನು ತಂದನು.

    ಇವೆರಡು ವಾಖ್ಯಗಳನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ನೀವೆ ಹೇಳಿ? ಲ್ಯಾಟಿನ್ ಭಾಷೆಯಲ್ಲಿದ್ದ ಬೈಬಲ್ ೧೪೦೦ ರರ ತನಕವೂ ಇತ್ತು ಅಂತಾದರೆ ೧೪೫೦ ರಲ್ಲಿ ಮೊದಲ ಬಾರಿಗೆ ಬರಲು ಹೇಗೆ ಸಾಧ್ಯ? ಇವೆರಡೂ ಸರಿ ಎಂದಾದರೆ ಅದು ಕ್ರಿ.ಶ ಅಲ್ಲ, ಕ್ರಿ.ಪೂ ಅಂತ ಆಗಿರಬೇಕೆನೊ!
    ಇನ್ನು ಜಾನ್ ವಿಕ್ಲಿಫ್ ಸಾವಿನ ಬಗ್ಗೆ ಹೇಳುವದಾದರೆ ಆತನು ಇಂಗ್ಲೀಷಿಗೆ ಬೈಬಲ್ಲನ್ನು ಭಾಷಾಂತರ ಮಾಡಿದ್ದಕ್ಕಾಗಿ ಪೋಪನ ಕೋಪಕ್ಕೆ ಗುರಿಯಾಗಬೇಕಾಯಿತು ಎಂದು ಹೇಳಿದ್ದೀರಿ. ಇದು ಅಪ್ಪಟ ಸುಳ್ಳು. ಜಾನ್ ವಿಕ್ಲಿಫ್ ಬಗ್ಗೆ ಚರ್ಚಿಗೆ ಅಸಮಧಾನ ಇದ್ದಿದ್ದು ‘ಇಂಗ್ಲಿಷಿನ’ ಭಾಷಾಂತರದ ಕಾರಣಕ್ಕಲ್ಲ, ಭಾಷಾಂತರದಲ್ಲಿ ಆತ ಬೈಬಲ್ಲಿನ ಅನುಕರಣೆಗೆ ಮಹತ್ವ ನೀಡಿ, ಚರ್ಚಿನ ಬೈಬಲ್ ವಿವರಣೆಯನ್ನು ಹಾಗೂ ಅದರ ಅಧಿಕಾರವನ್ನು ಪ್ರಶ್ನಿಸಿದ್ದರಿಂದ.

    ಉತ್ತರ
    • ಸೆಪ್ಟೆಂ 26 2015

     Because cslc had already set its boundary; that’s, balu is the only last and true prophet.

     => Proof please… (who, in which article or in which speech, has stated or declared this)

     ೨. ೧೪೫೦ರಲ್ಲಿ ಪ್ರಿಂಟಿಂಗ್ ಪ್ರೆಸ್ ಕಂಡುಹಿಡಿದ ಜೊಹನ್ ಗುಂಟನ್ಬರ್ಗ್ ಲ್ಯಾಟಿನ್ನಿನಲ್ಲಿದ್ದ ಬೈಬಲ್ಲಿನ ಮೊದಲ ಪ್ರತಿಯನ್ನು ತಂದನು.

     => ಮುದ್ರಿತ ಪ್ರತಿಯನ್ನು ತಂದನು ಎಂದು ಬರೆದಿದ್ದರೆ ಬಹುಶಃ ಈ ಪ್ರಶ್ನೆ ನೀವು ಕೇಳುತ್ತಿರಲಿಲ್ಲ. ೧೪೦೦ರಲ್ಲಿ ಇದ್ದಿದ್ದು ಹಸ್ತಪ್ರತಿಗಳು, ೧೪೫೦ರಲ್ಲಿ ಪ್ರಿಂಟಿಂಗ್ ಪ್ರೆಸ್ ನಂತರ ಮೊದಲ ಮುದ್ರಿತ ಪ್ರತಿಯನ್ನು ತರಲಾಯಿತು. ವಾಕ್ಯದಲ್ಲಿ ಪ್ರಿಂಟಿಂಗ್ ಪ್ರೆಸ್ ಶಬ್ದವಿರುವದರಿಂದ ಅದು ಮೊದಲ ಮುದ್ರಿತ ಪ್ರತಿಯ ಕುರಿತಾಗಿದೆ ಎಂಬುದನ್ನರಿಯಬಹುದಿತ್ತು. ಇರಲಿ. ಮುಂದಿನ ಬಾರಿ ಈ ರೀತಿಯ ಅಂಶಗಳನ್ನು ಗಮನದಲ್ಲಿಟ್ಟು ಬರೆಯುತ್ತೇನೆ. ಧನ್ಯವಾದಗಳು

     ಜಾನ್ ವಿಕ್ಲಿಫ್ ಬಗ್ಗೆ ಚರ್ಚಿಗೆ ಅಸಮಧಾನ ಇದ್ದಿದ್ದು ‘ಇಂಗ್ಲಿಷಿನ’ ಭಾಷಾಂತರದ ಕಾರಣಕ್ಕಲ್ಲ, ಭಾಷಾಂತರದಲ್ಲಿ ಆತ ಬೈಬಲ್ಲಿನ ಅನುಕರಣೆಗೆ ಮಹತ್ವ ನೀಡಿ, ಚರ್ಚಿನ ಬೈಬಲ್ ವಿವರಣೆಯನ್ನು ಹಾಗೂ ಅದರ ಅಧಿಕಾರವನ್ನು ಪ್ರಶ್ನಿಸಿದ್ದರಿಂದ.

     => ಚರ್ಚಿಗೆ ಭಾಷಾಂತರದ ವಿರೋಧವಿರಲಿಲ್ಲವೆಂದಾದರೆ, ಅದೇ ಸ್ವತಃ ತನ್ನ ವಿವರಣೆಗೆ ತಕ್ಕಂತೆ ಭಾಷಾಂತರವೇಕೆ ಮಾಡಲಿಲ್ಲ? ಇಂಗ್ಲೀಷಿನಲ್ಲಿ ಪ್ರಾರ್ಥನೆ ಮಾಡಿದವರನ್ನು ಬೆಂಕಿಗೆ ನೂಕಲು ಕಾರಣ?

     ಏನೇ ಇರಲಿ, ಯುರೋಪಿನ ಶಾಸ್ತ್ರೀಯ-ಪ್ರಾದೇಶಿಕ ಭಾಷೆಗಳ ನಡುವಿನ ಜಗಳವನ್ನು ಕ್ಯಾಥೊಲಿಕ್-ಪ್ರೊಟೆಸ್ಟಂಟಿಗೆ ಸಮೀಕರಿಸುವದೂ ಬಿಡುವದೂ ಅವರವರ ಊಹೆಗೆ ಬಿಟ್ಟದ್ದು. ಆದರೆ ಆ ಊಹೆಯಡಿಯಲ್ಲಿ, ಈಗ ನಮ್ಮ ದೇಶದಲ್ಲಿ ನಡೆಯುತ್ತಿರುವ ಗೊಂದಲಗಳಿಗೆ ವಿವರಣೆ ಸಿಗುತ್ತದೆ. (Principle of Equivalence ಎಂಬ ಊಹೆ ಜನರಲ್ ರಿಲೇಟಿವಿಟಿಗೆ ಮಾಡಿಕೊಂಡಿದೆ. ಆ ಊಹೆ ಸತ್ಯವೋ ಸುಳ್ಳೋ ಎಂಬುದು ವೈಜ್ಞಾನಿಕ ಸಿದ್ಧಾಂತದಲ್ಲಿ ಪ್ರಸ್ತುತವಲ್ಲ. ಆ ಊಹೆ ಭೌತಿಕ ಕ್ರಿಯೆಗಳನ್ನು ವಿವರಿಸುವಲ್ಲಿ ಎಷ್ಟು ಸಫಲವಾಗುತ್ತದೆ ಎಂಬುದು ಪ್ರಸ್ತುತವಾಗುತ್ತದೆ) ಹೀಗಾಗಿ ಪ್ರೊಟೆಸ್ಟಂಟ್ ಊಹೆಯ ಸತ್ಯಾಸತ್ಯತೆಯನ್ನು ಪಕ್ಕಕ್ಕಿಟ್ಟು ಅದರ ಆಧಾರದ ಮೇಲೆ ನೀಡಿದ ವಿವರಣೆಯಲ್ಲಿ ನೀವು ದೋಷ ಪಟ್ಟಿ ಮಾಡಿದರೆ ನಾನು ಸಹಜವಾಗಿಯೇ ನನ್ನ ಪ್ರೊಟೆಸ್ಟಂಟ್ ಊಹೆಯನ್ನು ಬಿಟ್ಟುಬಿಡುತ್ತೇನೆ. ಸಂಸ್ಕೃತಕ್ಕೂ-ಕನ್ನಡಕ್ಕೂ ಒಂದಾನೊಂದು ಯುದ್ಧವು ಮುಂಚಿನಿಂದಲೂ ಇತ್ತು, ಆರ್ಯ-ದ್ರಾವಿಡ ಎಂಬ ಎರಡು ಬೇರೆ ಬೇರೆ ಜನಾಂಗದ ಜ್ಞಾನವು ಮುಂಚಿನಿಂದಲೂ ಇತ್ತು. ಕನ್ನಡ-ತಮಿಳು ಭಾಷೆಯು ದ್ರವಿಡ ಫ್ಯಾಮಿಲಿಗೆ ಸೇರಿದ್ದು, ಸಂಸ್ಕೃತ-ಹಿಂದಿ ಆರ್ಯ ಫ್ಯಾಮಿಲಿಗೆ ಸೇರಿದ್ದು ಎಂಬ ವಾದ ಮುಂಚಿನಿಂದಲೂ ಇತ್ತು ಎಂದು ಸಾಧಿಸಿಬಿಡಿ. ಆಗಲೂ ಈ ವಾದವನ್ನು ಬಿಟ್ಟುಬಿಡುತ್ತೇನೆ.

     ಉತ್ತರ
     • ಸೆಪ್ಟೆಂ 26 2015

      Douay–Rheims Bible ಎಂಬ ಇಂಗ್ಲಿಷ್ ಭಾಷೆಯ ಕ್ಯಾಥೊಲಿಕ್ ಬೈಬಲ್ ಭಾಷಾಂತರಿಸಲ್ಪಟ್ಟದ್ದು ೧೬ ನೆ ಶತಮಾನದಲ್ಲಿ. ಇಂಗ್ಲಿಷ್ ಭಾಷೆಯ ಬಗ್ಗೆ ಅಸಮಧಾನವಿದ್ದಿದ್ದರೆ ೧೬ ನೆ ಶತಮಾನದಲ್ಲಿ ಇಂಗ್ಲಿಷ್ ಬೈಬಲ್ ನ ಹೊತ್ತಿಗೆಯನ್ನು ಚರ್ಚ್ ಸಿದ್ಧಮಾಡುತ್ತಲೆ ಇರಲಿಲ್ಲ. ಅಲ್ಲದೆ ಇಂಗ್ಲೆಂಡಿನಲ್ಲಿನ ಕ್ಯಾಥೊಲಿಕ್ ಚರ್ಚುಗಳಲ್ಲಿ ಕ್ಲರ್ಜಿಗಳು ಸ್ವತಃ ಇಂಗ್ಲಿಷಿನಲ್ಲಿಯೇ ವ್ಯವಹರಿಸುತ್ತಿದ್ದರು. ಜಗಳವಿದ್ದುದು ಅಲ್ಲಿನ ಭಾಷೆಗಳ ನಡುವೆ ಅಲ್ಲ. ಜಗಳವಿದ್ದರೂ ಅದು ಕ್ಯಾಥೊಲಿಕ್-ಪ್ರಾಟೆಸ್ಟಂಟ್ ಜಗಳಕ್ಕೆ correlate ಆದದ್ದಲ್ಲ. ಆದರೆ ಕ್ಯಾಥೊಲಿಕ್ ಚರ್ಚ್ ಗೆ ಅಸಮಧಾನವಿದ್ದುದು ಪ್ರಾಟೆಸ್ಟಂಟರಿಂದ ಭಾಷಾಂತರಿಸಲ್ಪಟ್ಟ ಬೈಬಲ್ ಬಗ್ಗೆ.

      ” ಆ ಊಹೆ ಭೌತಿಕ ಕ್ರಿಯೆಗಳನ್ನು ವಿವರಿಸುವಲ್ಲಿ ಎಷ್ಟು ಸಫಲವಾಗುತ್ತದೆ ಎಂಬುದು ಪ್ರಸ್ತುತವಾಗುತ್ತದೆ. ಹೀಗಾಗಿ ಪ್ರೊಟೆಸ್ಟಂಟ್ ಊಹೆಯ ಸತ್ಯಾಸತ್ಯತೆಯನ್ನು ಪಕ್ಕಕ್ಕಿಟ್ಟು ಅದರ ಆಧಾರದ ಮೇಲೆ ನೀಡಿದ ವಿವರಣೆಯಲ್ಲಿ ನೀವು ದೋಷ ಪಟ್ಟಿ ಮಾಡಿದರೆ ನಾನು ಸಹಜವಾಗಿಯೇ ನನ್ನ ಪ್ರೊಟೆಸ್ಟಂಟ್ ಊಹೆಯನ್ನು ಬಿಟ್ಟುಬಿಡುತ್ತೇನೆ”

      ಒಂದು ಊಹೆ ಭೌತಿಕ ಕ್ರಿಯೆಗಳನ್ನು ವಿವರಿಸಿದರೆ ಅದು ಊಹೆ ಯಾಗಿಯೇ ಇರುವದೆ ಹೊರತು, ವೈಜ್ಞಾನಿಕ ವಿವರಣೆಯಾಗಲಾರದು. ಆರ್ಯ-ದ್ರಾವಿಡ ಥಿಯರಿಯೂ ಒಂದು ಊಹೆಯಾಗಿಯೇ ವಿವರಣೆಯನ್ನು ನೀಡತೊಡಗಿದ್ದು. ಹಾಗೆಂದಾಕ್ಷಣ ಅದನ್ನು ಸತ್ಯವೆಂದು ಒಪ್ಪಿಕೊಳ್ಳಬಹುದೆ?
      ಸರಿ, ನಾವೊಮ್ಮೆ ಇದನ್ನು ನೀವು ಹೇಳಿದ ವಿವರಣೆಯಲ್ಲಿಯೆ ಅವಲೋಕಿಸೋಣ. ನೀವು ಹೇಳಿದ ಪ್ರಕಾರ, ಯುರೋಪ್ ನಲ್ಲಿ ಪ್ರಾದೇಶಿಕ ಹಾಗೂ ದೇವ ಭಾಷೆಯ ನಡುವಿನ ಜಗಳದಂತೆ ಇಲ್ಲಿಯೂ ಶಾಸ್ತ್ರೀಯ ಭಾಷೆ vs ಪ್ರಾದೇಶಿಕ ಭಾಷೆಗಳ ನಡುವೆ ಜಗಳ ಇರಬೇಕು. ಹಾಗಿದ್ದಲ್ಲಿ, ಆ ಜಗಳ ಶಾಸ್ತ್ರೀಯ ಭಾಷೆಯೆನ್ನಲಾದ ಸಂಸ್ಕೃತ ಹಾಗೂ ಇತರ ಪ್ರಾದೇಶಿಕ ಭಾಷೆಗಳ ನಡುವೆ ಇರುತ್ತಿತ್ತೆ ಹೊರತೂ, ಪ್ರಾದೇಶಿಕ ಭಾಷೆಗಳ ಒಳಗೊಳಗೆ ಇರುತ್ತಿರಲಿಲ್ಲ. ಅಂದರೆ ಹಿಂದಿ ಹಾಗೂ ಸಂಸ್ಕೃತದ ನಡುವೆ ಜಗಳವೇರ್ಪಡಬೇಕಿತ್ತೆ ಹೊರತೂ ಹಿಂದಿ ಹಾಗೂ ಇತರ ಪ್ರಾದೇಶಿಕ ಭಾಷೆಗಳ ನಡುವೆ ಅಲ್ಲ. ಆದರೆ ನಮಗಿಲ್ಲಿ ಕಾಣುವದು ಬೇರೆಯೇ. ಹಿಂದಿ ಹಾಗೂ ಸಂಸ್ಕೃತದ ನಡುವೆ ಕಂದಕವಿಲ್ಲ, ಆದರೆ ಹಿಂದಿ ಹಾಗೂ ಕೆಲವು ಪ್ರಾದೇಶಿಕ ಭಾಷೆಗಳ ನಡುವೆ ಇದೆ. ಅಂದರೆ ಪ್ರಾದೇಶಿಕ ಭಾಷೆ vs ಪ್ರಾದೇಶಿಕ ಭಾಷೆ ಆಗಿದೆ. ಆದ್ರೆ ಇದು ಎಲ್ಲಾ ಕಡೆಯೂ ಇಂತಹ ಪರಿಸ್ಥಿತಿ ಇದ್ದಂತಿಲ್ಲ. ಹಿಂದಿ ಹಾಗೂ ಉತ್ತರ ಭಾರತದ ಅನೇಕ ಭಾಷೆಗಳ ನಡುವೆ(ಉದಾ: ಭೋಜಪುರಿ) ಈ ಕಂದಕ ಇಲ್ಲ. ಹಾಗಾಗಿ ನಿಮ್ಮ ಪ್ರಾಟೆಸ್ಟಂಟ್ ಮಾದರಿಯ ವಿವರಣೆ ಈ ವಿಭಿನ್ನ ಪರಿಸ್ಥಿತಿಯನ್ನು ವಿವರಿಸಲು ಅಸಫಲವಾಗಿದೆ.
      ಇನ್ನು ಆರ್ಯ-ದ್ರಾವಿಡ ನಿರೂಪಣೆ ಪಶ್ಚಿಮದಿಂದ ಬಂದಿದ್ದು ನಿಜ. ಆದರೆ ಪಶ್ಚಿಮದಿಂದ ಬಂದಿದ್ದೆಲ್ಲವೂ ವಸಾಹತು ಪ್ರಜ್ಞೆ ಅಲ್ಲ. ಮತ್ತದೇ ಪ್ರಶ್ನೆ ಕೇಳುತ್ತೇನೆ. ಆರ್ಯ ದ್ರಾವಿಡ ಸಿದ್ಧಾಂತವು ವಸಾಹತುಶಾಹಿ ಪ್ರಜ್ಞೆಯ ಸ್ವರೂಪವೆಂದು ಬಾಲಗಂಗಾಧರರು ಎಲ್ಲಿಯೂ ಹೇಳಿಲ್ಲ. ಒಂದು ವೇಳೆ ಹಾಗೆ ಹೇಳಿದ್ದರೆ ಬಾಲಗಂಗಾಧರರ ಕೃತಿಯಿಂದ ಅದನ್ನು ಉಲ್ಲೆಕಿಸುವಿರಾ?

      ಉತ್ತರ
      • Naani
       ಸೆಪ್ಟೆಂ 26 2015

       Click to access 5845677.pdf

       ಕಿರಣ್ ಬಾಟ್ನಿಯಾಗಿ ಈಗಾಗಲೇ ಆರ್ಯ-ದ್ರಾವಿಡ ಸಿದ್ದಾಂತದ ಬಗ್ಗೆ ಗುದ್ದಾಡಿ (ಇಲ್ಲಿನೋಡಿ: https://groups.yahoo.com/neo/groups/TheHeathenInHisBlindness/conversations/topics/5056) ಈಗ ಏನೂ ಗೊತ್ತಿಲ್ಲದವರಂತೆ (ಬಹುಷಃ ಅರ್ಥವೇ ಆಗದಿರುವುದಿರಿಂದಲೂ ಇರಬಹುದು) ಹಂಪಿಹೊಳಿಯವರೊಂದಿಗೆ ‘ಪ್ರಜ್ಞಾ’ಪೂರ್ವಕವಾದ ‘ಆನಂದ’ ಕ್ಕಾಗಿ ಎರಡನೇ ಇನ್ನಿಂಗ್ಸ್ ಆರಂಬಿಸಿದ್ದಾರೆ.

       ಹಂಪಿಯೊಳಿಯವರೆ ನಿಮಗೆ ಬಹಳ ಪುರಸೊತ್ತಿರೊ ತರ ಕಾಣ್ತಿದೆ ವಿತಂಡಿ/ಡಯೊಂದಿಗೆ……… 😀 😀 😀 😀

       ಉತ್ತರ
       • Naani
        ಸೆಪ್ಟೆಂ 26 2015

        ಈ ಯಮ್ಮ/ಪ್ಪ “ಆರ್ಯ ದ್ರಾವಿಡ ಸಿದ್ಧಾಂತವು ವಸಾಹತುಶಾಹಿ ಪ್ರಜ್ಞೆಯ ಸ್ವರೂಪವೆಂದು ಬಾಲಗಂಗಾಧರರು ಎಲ್ಲಿಯೂ ಹೇಳಿಲ್ಲ.” ಯಾಕಂದ್ರೆ ‘ವಸಾಹತುಶಾಹಿ ಪ್ರಜ್ಞೆ’ ಮತ್ತು ‘ಆರ್ಯ-ದ್ರಾವಿಡ’ ಶಬ್ದಗಳನ್ನು ಜೊತೆಜೊತೆಯಾಗಿ ಉಪಯೋಗಿಸಿಯೇ ಅವರು ಉಪಯೋಗಿಸಿಯೇ ಇಲ್ಲ ಅಂತ ಕ್ಯಾತೆ ತೆಗೀಬಹುದು…..:-) ಅದಕ್ಕೆ ವಸಾಹತುಶಾಹಿ ಪ್ರಜ್ಞೆಯ ಶಬ್ದ ಉಪಯೋಗಿಸಿ ಬರೆದ ಲೇಖನದಲ್ಲಿಯೂ ಇದನ್ನು ಹೇಳಿದ್ದಾರೆ ಅನ್ನೋಕೆ ಬಾಲು ಶಿಷ್ಯರಾದ ಜೇಕಬ್ ಬರೆದಿರೋ ಇದನ್ನು ತೋರ್ಸಿ : http://www.hipkapi.com/2013/04/03/colonial-consciousness-m-n-srinivas-and-sanskritization/

        ಉತ್ತರ
        • ಸೆಪ್ಟೆಂ 26 2015

         ಧನ್ಯವಾದಗಳು..

         ಉತ್ತರ
        • ಸೆಪ್ಟೆಂ 27 2015

         ಈಗ ಆರ್ಯ ದ್ರಾವಿಡ ಸಿದ್ಧಾಂತಕ್ಕೆ ಬರೋಣ. ಆರ್ಯ ದ್ರಾವಿಡ ಸಿದ್ಧಾಂತ ವಸಾಹತುಶಾಹಿ ಪ್ರಜ್ಞೆಯಿಂದ ಬಂದಿದ್ದೆಂದು ಬಾಲು ಅವರು ಎಲ್ಲಿಯೂ ಉಲ್ಲೆಕಿಸಿಲ್ಲ. ಆದರೆ ಅವರ ಶಿಷ್ಯರು ಸಂಶೋಧಿಸಿದ್ದಾರೆಂದು ಈಗಲೆ ಓದಲ್ಪಟ್ಟೆ. ಜಾಕೊಬ್ ಅವರ ಪ್ರಕಾರ ಆರ್ಯ-ದ್ರಾವಿಡ ಥಿಯರಿಯೂ ಕ್ರಿಶ್ಚಿಯನ್ ಥಿಯಾಲಜಿಯಿಂದ ಹುಟ್ಟಿಕೊಂಡಿದ್ದು ಅಥವಾ ಬೈಬಲ್ ವರ್ಶನ್ ನ ಇತಿಹಾಸದಿಂದ ಹುಟ್ಟಿಕೊಂಡಿದ್ದು(ಇದು ಸಾಮಾನ್ಯ ಬಿಡಿ. ಯಾವುದೇ ಪೂಜೆಯ ಮೊದಲು ಗಂಟೆ ಬಾರಿಸುವಂತೆ, ಅದಕ್ಕೆ ಕಾರಣ, ಇದಕ್ಕೆ ಕಾರಣ ಎಲ್ಲದಕ್ಕೂ ಕ್ರೈಸ್ತ ಥಿಯಾಲಜಿಯೆ ಕಾರಣ ಎನ್ನುವದು ಈ ವಯ್ಕಳ ಸಂಶೋದನೆಯ ಮಾದರಿಯ ಕಡ್ಡಾಯ ಗುಣ ಬಿಡಿ).
         ಇಲ್ಲಿಯೇ ನಾನು ಪ್ರಶ್ನಿಸುವದು ಅಂದರೆ, ಯಾವ ಆರ್ಯ- ದ್ರಾವಿಡ ಥಿಯರಿ ಬೈಬಲ್ ವರ್ಷನ್ ನ ಹಿಸ್ಟರಿಯನ್ನು ಪ್ರತಿಪಾದಿಸಿದೆ? ಆರ್ಯ-ದ್ರಾವಿಡ ಕಲ್ಪನೆಯನ್ನು ಹುಟ್ಟುಹಾಕಿದ ವಿಲಿಯಂ ಜೋನ್ಸ್ ನಿಗೆ ಕಾರಣವಾಗಿ ಸಿಕ್ಕಿದ್ದು ಭಾರತೀಯ ಹಾಗೂ ಯುರೋಪಿಯನ್ ಭಾಷೆಗಳಲ್ಲಿನ ಸಾಮ್ಯತೆಯೇ ಹೊರತೂ ಕ್ರೈಸ್ತ ಥಿಯಾಲಜಿಯಲ್ಲ. ನಿಜವಾಗಿ ಹೇಳಬೇಕೆಂದರೆ, ಆರ್ಯ ದ್ರಾವಿಡ ಥಿಯರಿಯಲ್ಲಿನ ಪ್ರತಿಪಾದಿಸುವ ಅಂಶಗಳು (ಇತಿಹಾಸ, ಕಾಲಮಾನ ಇತ್ಯಾದಿ) ಕ್ಯಾಥೊಲಿಕ್ಕರಾಗಲೀ ಪ್ರಾಟೆಸ್ಟಂಟರಾಗಲೀ ಸ್ವೀಕರಿಸಲು ಸಾಧ್ಯವೇ ಇಲ್ಲದಷ್ಟು ಬೈಬಲ್ ಹಿಸ್ಟರಿಗೆ ವ್ಯತಿರಿಕ್ತವಾಗಿದೆ. ಆದಾಗ್ಯೂ ಆರ್ಯ-ದ್ರಾವಿಡ ಥಿಯರಿಗೆ ಕ್ರೈಸ್ತ ಥಿಯಾಲಜಿಯೆಕಾರಣ ಎನ್ನಬೇಕಾದರೆ ವಿಲಿಯಂ ಜೋನ್ಸನ ಆರ್ಯ ದ್ರಾವಿಡ ವಿಚಾರದಲ್ಲಿ ಕ್ರೈಸ್ತ ಥಿಯಾಲಜಿ ಪೂರ್ವಭಾವಿಯಾಗಿ ಇತ್ತೆಂದು ನಿರೂಪಿಸಬೇಕು. ಶಿಷ್ಯಕೋಟಿಗಳಿಗೆ ನನ್ನದೊಂದು ಸವಾಲ್.

         ಉತ್ತರ
      • ಸೆಪ್ಟೆಂ 26 2015

       ಒಂದು ಊಹೆ ಭೌತಿಕ ಕ್ರಿಯೆಗಳನ್ನು ವಿವರಿಸಿದರೆ ಅದು ಊಹೆ ಯಾಗಿಯೇ ಇರುವದೆ ಹೊರತು, ವೈಜ್ಞಾನಿಕ ವಿವರಣೆಯಾಗಲಾರದು.
       => ವೈಜ್ಞಾನಿಕ ವಿವರಣೆಯಲ್ಲಿ hypothesis (ಊಹೆ) ಇರುತ್ತದೆ. ಅದರ ಮೇಲೆ prediction ಕೂಡ ಮಾಡಲಾಗುತ್ತದೆ. ಅದನ್ನು observation ಜೊತೆ ಸಮೀಕರಿಸಿ ನೋಡಲಾಗುತ್ತದೆ.

       ನೀವು ಹೇಳಿದ ಪ್ರಕಾರ, ಯುರೋಪ್ ನಲ್ಲಿ ಪ್ರಾದೇಶಿಕ ಹಾಗೂ ದೇವ ಭಾಷೆಯ ನಡುವಿನ ಜಗಳದಂತೆ ಇಲ್ಲಿಯೂ ಶಾಸ್ತ್ರೀಯ ಭಾಷೆ vs ಪ್ರಾದೇಶಿಕ ಭಾಷೆಗಳ ನಡುವೆ ಜಗಳ ಇರಬೇಕು. ಹಾಗಿದ್ದಲ್ಲಿ, ಆ ಜಗಳ ಶಾಸ್ತ್ರೀಯ ಭಾಷೆಯೆನ್ನಲಾದ ಸಂಸ್ಕೃತ ಹಾಗೂ ಇತರ ಪ್ರಾದೇಶಿಕ ಭಾಷೆಗಳ ನಡುವೆ ಇರುತ್ತಿತ್ತೆ ಹೊರತೂ, ಪ್ರಾದೇಶಿಕ ಭಾಷೆಗಳ ಒಳಗೊಳಗೆ ಇರುತ್ತಿರಲಿಲ್ಲ.
       => ಸಂಸ್ಕೃತ v/s ಕನ್ನಡ ಯುದ್ಧ ವಸಾಹತುಪೂರ್ವ ಇರಲಿಲ್ಲ. ಈಗ ಬುದ್ಧಿಜೀವಿಗಳು ಶುರುಹಚ್ಚಿದ್ದಾರೆ. ಇದಕ್ಕೆ ಕಾರಣ ವಸಾಹತುಪ್ರಜ್ಞೆ.

       ಆರ್ಯ-ದ್ರಾವಿಡ ಥಿಯರಿಯೂ ಒಂದು ಊಹೆಯಾಗಿಯೇ ವಿವರಣೆಯನ್ನು ನೀಡತೊಡಗಿದ್ದು. ಹಾಗೆಂದಾಕ್ಷಣ ಅದನ್ನು ಸತ್ಯವೆಂದು ಒಪ್ಪಿಕೊಳ್ಳಬಹುದೆ?
       => ಒಂದು ಊಹೆಯ ಮೇಲೆ ನಿಂತ ವಿವರಣೆಗಳು ಅನುಭವಕ್ಕೆ ಸರಿಹೊಂದಿದರೆ ಆ ಊಹೆಯು ಸರಿಯಾಗಿರಬಹುದಾದ ಸಂಭವನೀಯತೆ ಹೆಚ್ಚುತ್ತದೆಯಷ್ಟೇ ಹೊರತು ಅದೇ ಸತ್ಯವೆಂದೇನೂ ಸಾಬೀತಾಗುವದಿಲ್ಲ. ಆದರೆ ವಿವರಣೆಯು ಪ್ರತ್ಯಕ್ಷಕ್ಕೆ ವಿರುದ್ಧವಾದರೆ, ಅಥವಾ ಸಂಪೂರ್ಣ ಸಮೀಕರಣವಾಗದಿದ್ದರೆ ಆಗ ಆ ಊಹೆಯನ್ನು ಕೈಬಿಡಬೇಕು ಇಲ್ಲವೇ ಅದರಲ್ಲಿ ಅಗತ್ಯ ಬದಲಾವಣೆ ಮಾಡಬೇಕು. ಆರ್ಯ-ದ್ರಾವಿಡ ಥಿಯರಿ ರೆಜೆಕ್ಟ್ ಆಗಲು ಅದು ನೀಡಿದ ವಿವರಣೆಗಳಲ್ಲಿ ಪ್ರತ್ಯಕ್ಷಕ್ಕೆ ಸಮೀಕರಿಸುವ ಅಂಶಗಳಿಗಿಂತ, ಪ್ರತ್ಯಕ್ಷಕ್ಕೆ ಸಮೀಕರಣವಾಗದ ಅಂಶಗಳೇ ಹೇರಳವಾಗಿವೆ. ಮೂಲತಃ ೨೫೦೦ರಲ್ಲಿ ಆರ್ಯರು ಬಂದರು ಎಂಬುದಕ್ಕೆ ವಿರುದ್ಧವಾದ ಸಾಕ್ಷಿಗಳು ಸಿಕ್ಕಿರುವಾಗ ಆ ಊಹೆಯನ್ನು ಇಟ್ಟುಕೊಳ್ಳುವದರಲ್ಲಿ ಯಾವ ಅರ್ಥವೂ ಇಲ್ಲ.

       ಹಿಂದಿ ಹಾಗೂ ಕೆಲವು ಪ್ರಾದೇಶಿಕ ಭಾಷೆಗಳ ನಡುವೆ ಇದೆ. ಅಂದರೆ ಪ್ರಾದೇಶಿಕ ಭಾಷೆ vs ಪ್ರಾದೇಶಿಕ ಭಾಷೆ ಆಗಿದೆ.
       => Proof please.. ಒಂದು ಭಾಷೆಯಲ್ಲಿರುವ ವಿಷಯವು ಇನ್ನೊಂದು ಭಾಷೆಗೆ ಹೋಗದಂತೆ ಆಗ್ರಹಿಸುವದು, ಭಾಷೆಯ ಯುದ್ಧವಾಗುತ್ತದೆ. ಇಷ್ಟಾಗಿ ಆ ರೀತಿಯ ಯುದ್ಧ ಈಗ ವಸಾಹತುಪ್ರಜ್ಞೆಯಿಂದ ಆರಂಭವಾಗಿದೆ ಎನ್ನುವದೇ ನನ್ನ ಅಭಿಪ್ರಾಯವೇ ಹೊರತು ಮುಂಚಿಂದಲೂ ಯುದ್ಧವಿತ್ತು ಎಂಬುದನ್ನು ಒಪ್ಪಿಯೇ ಇಲ್ಲ.

       ಉತ್ತರ
       • ಸೆಪ್ಟೆಂ 27 2015

        “ಅದನ್ನು observation ಜೊತೆ ಸಮೀಕರಿಸಿ ನೋಡಲಾಗುತ್ತದೆ.”
        ಹೌದು ಇಲ್ಲಿ ಆಬ್ಸರ್ವೇಶನ್ ತಾಳೆಯಾಗುತ್ತಿಲ್ವಲ್ಲ!

        ಕನ್ನಡ vs ಸಂಸ್ಕೃತದ ನಡುವೆ ಯುದ್ಧ ಇದೆ ಎಂದಿರಿ, ಹಾಗೂ ಯುದ್ಧದ ಬಗ್ಗೆ ನಿಮ್ಮ ವಿವರಣೆ ಹೀಗೆ ಇದೆ:
        ‘ಒಂದು ಭಾಷೆಯಲ್ಲಿರುವ ವಿಷಯವು ಇನ್ನೊಂದು ಭಾಷೆಗೆ ಹೋಗದಂತೆ ಆಗ್ರಹಿಸುವದು, ಭಾಷೆಯ ಯುದ್ಧವಾಗುತ್ತದೆ’. ಈ ವಿವರಣೆಯನ್ನು ನೀಡಿದವರ್ಯಾರು? ಬಾಲುವವರಾಗಲೀ ಅಥವಾ ಅವರ ಶಿಷ್ಯಕೋಟಿಗಳೆನಾದರೂ ಈ ವಿವರಣೆಯನ್ನು ನೀಡಿದ್ದರೆ?[ಶಿಷ್ಯಕೋಟಿಗಳು ಉತ್ತರಿಸಬೇಕಾಗಿ ವಿನಂತಿ]
        ಸರಿ ನಿಮ್ಮ ವಿವರಣೆಯಂತೆ ಒಂದು ಭಾಷೆಯಲ್ಲಿರುವ ವಿಷಯವು ಇನ್ನೊಂದು ಭಾಷೆಗೆ ಹೋಗದಂತೆ ಆಗ್ರಹಿಸುವದು, ಭಾಷೆಯ ಯುದ್ಧವಾದರೆ, ಆ ಯುದ್ಧ ಹಿಂದಿ vs ಕನ್ನಡ, ಹಿಂದಿ vs ತಮಿಳ್ ನಡುವೆಯೂ ಇದೆ. ನೀವು ಹೇಳುವ ಅದೇ ಬುದ್ಧಿಜೀವಿ ವರ್ಗ ಸಂಸ್ಕೃತವನ್ನು ವಿರೋಧಿಸಿದ ಹಾಗೆ (ವಿರೋಧದ ರೂಪು ರೇಷೆ ಗೊತ್ತಿಲ್ಲ) ಹಿಂದಿಯ ಹೇರಿಕೆಯನ್ನು ವಿರೋಧಿಸಿಲ್ಲವೇ? ಈ ಎರಡು ಪ್ರಾದೇಶಿಕ ಭಾಷೆಗಳ ನಡುವಿನ ಯುದ್ಧವು (ನಿಮ್ಮ ವಿವರಣೆಯ ‘ಯುದ್ಧ’) ವಸಾಹತುಶಾಹಿ ಪ್ರಜ್ಞೆಯೇ?(ವಸಾಹತುಶಾಹಿ ಪ್ರಜ್ಞೆ ಎಂದಾದರೆ ನಿಮ್ಮ Principle of Equivalence ತೋಪಾಗುತ್ತದೆ. ಯಾಕೆಂದರೆ ಇದು ಪ್ರಾದೇಶಿಕ ಭಾಷೆ vs ಪ್ರಾದೇಶಿಕ ಭಾಷೆ)
        ಇನ್ನೂ ಮುಖ್ಯವಾಗಿ, ವಸಾಹತು ಪ್ರಜ್ಞೆಯಿಂದ ದೇವ ಭಾಷೆ vs ಪ್ರಾದೇಶಿಕ ಭಾಷೆಗಳ ನಡುವೆ ಯುದ್ಧ ಇದೆ ಎಂದಾದರೆ ಹಿಂದಿ vs ಸಂಸ್ಕೃತದ ನಡುವೆ ಯಾಕಿಲ್ಲ? Principle of Equivalence ಇಲ್ಲಿಯೂ ತೋಪಾಕ್ಕೊಂಡಿತೆ? ಅಥವಾ ಉತ್ತರ ಭಾರತದಲ್ಲಿ ಪ್ರಾದೇಶಿಕ ಭಾಷೆ ಹಾಗೂ ದೇವ ಭಾಷೆಗಳ ನಡುವಿನ ಯುದ್ಧವನ್ನು ತಡೆಯಲು, ಅವರನ್ನು ವಸಾಹತು ಪ್ರಜ್ಞೆಯಿಂದ ಬಿಡಿಸಲು ಶಿಷ್ಯಕೋಟಿಗಳು ನೆರವಿಗೆ ಧಾವಿಸಿದ್ದರೆ? Mysterious case of prophet and shishya-kOtis. 😀
        ಒಟ್ಟಾರೆ ಸಾರಾಂಶ:
        ಯುರೋಪ್ ನಲ್ಲಿ ಭಾಷೆಗಳ ನಡುವಿನ ಯುದ್ಧ(ನಿಮ್ಮ ವಿವರಣೆಯ ಯುದ್ಧ, ಹಾಗೆ ಇತ್ತೆಂದಾದರೆ) ಅದು ಕ್ಯಾಥೋಲಿಕ್ vs ಪ್ರಾಟೆಸ್ಟಂಟ್ ರ ಜಗಳದಿಂದ ಶುರುವಾಯಿತೆಂಬುದಕ್ಕೆ ಯಾವುದೇ ಆಧಾರವಿಲ್ಲ. ಒಂದು ವೇಳೆ ಇತ್ತೆಂದಾದರೂ, ಅಲ್ಲಿನ Principle of Equivalence ಭಾರತದ ಭಾಷೆಗಳ ಸ್ಥಿತಿಗತಿಗೆ ತಾಳೆಯಾಗುವದಿಲ್ಲ(ಅದನ್ನು ಈಗಾಗಲೆ ವಿವರಿಸಿದ್ದೇನೆ). ಅಷ್ಟಕ್ಕೂ Principle of Equivalence ಗೆ ಯಾವ ವೈಜ್ಞಾನಿಕ ವಿವರಣೆಯನ್ನು ನೀವು ನೀಡಿಲ್ಲ. ಅದನ್ನು ಬೇಕಾಬಿಟ್ಟಿ ಬಳಸುವದು ಶುದ್ಧ ತಪ್ಪು.

        ಉತ್ತರ
 4. hypothica
  ಸೆಪ್ಟೆಂ 27 2015

  ‘hypothesis’ ಅನ್ನ್ನು ‘ಊಹಾಸಿದ್ಧಾಂತ’ ಅಂತ ಅನುವಾದಿಸಿಕೊಳ್ಳುವುದೇ ಸೂಕ್ತ.

  ಅದನ್ನು ‘ಊಹೆ’ ಅಂತ ಅನುವಾದಿಸಿಕೊಳ್ಳುವುದರಿಂದ (ಅಥವಾ shorthand ಮಾಡಿಕೊಳ್ಳುವುದರಿಂದ) ಯಾವುದೇ ವಿಶೇಷ ಅನುಕೂಲವೂ ಆಗದು; ಬದಲು ಬರೀ ಅನಾವಶ್ಯಕ ಗೊಂದಲಗಳಾಗುತ್ತವೆ.

  ಗೊಂದಲಗಳು ಯಾಕಾಗುತ್ತವೆಯೆಂದರೆ:
  ೧) hypothesis = ಊಹಾಸಿದ್ಧಾಂತ ಎನ್ನುವ ಅನುವಾದ ಈಗಾಗಲೇ ರೂಢಿಯಲ್ಲಿ ಇದೆ.
  ೨) ಕನ್ನಡದಲ್ಲಿ ‘ಊಹೆ’ ಅನ್ನುವುದು ಆಂಗ್ಲದ ‘guess’ ಅನ್ನುವುದಕ್ಕೆ ಸಮನಾಂತರವಾಗಿ ಬಳಕೆಯಲ್ಲಿದೆ. ‘guess’ಗೂ ‘hypothesis’ಗೂ ಅಜಗಜಾಂತರ ವ್ಯತ್ಯಾಸವಿದೆ.

  ಉತ್ತರ

ನಿಮ್ಮದೊಂದು ಉತ್ತರ Prajna Anand ಗಾಗಿ ಪ್ರತ್ಯುತ್ತರವನ್ನು ರದ್ದುಮಾಡಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments