ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 23, 2015

24

ಅಕಾಡೆಮಿ “ಗೌರವ” ಮೂರಾಬಟ್ಟೆ

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

ಮೊನ್ನೆ ಸೆಪ್ಟೆಂಬರ್ 19ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ, ಕೆ.ಎಸ್.ಭಗವಾನ್ ಸೇರಿದಂತೆ ಒಟ್ಟು ಐವರಿಗೆ ಗೌರವ ಪ್ರಶಸ್ತಿ ಕೊಟ್ಟಿತು. ಜೊತೆಗೆ ಇನ್ನೂ ಹಲವು ಸಾಹಿತಿಗಳಿಗೆ ಅವರ ಪುಸ್ತಕಗಳನ್ನು ಆಯ್ದು ಪ್ರಶಸ್ತಿ ಕೊಟ್ಟಿತು.

ಕರ್ನಾಟಕ ಸಾಹಿತ್ಯ ಅಕಾಡೆಮಿ

ಕರ್ನಾಟಕ ಸಾಹಿತ್ಯ ಅಕಾಡೆಮಿ

ಈ ಆಯ್ಕೆ ನಾಡಿನಾದ್ಯಂತ ಹಲವು ಜನರ ಹುಬ್ಬೇರುವಂತೆ ಮಾಡಿತು. ಸಿದ್ದರಾಮಯ್ಯ ಆಡಳಿತದ ಸರಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ದಿನಕ್ಕೊಂದರಂತೆ ಅಸಂಬದ್ಧ ಹೇಳಿಕೆಗಳನ್ನು ಕೊಡುತ್ತ, ಬಹುಸಂಖ್ಯಾತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡುವುದಕ್ಕಾಗಿಯೇ ತಾನು ಬದುಕಿದ್ದೇನೆ ಎನ್ನುವುದನ್ನು ಮತ್ತೆಮತ್ತೆ ಹೇಳುತ್ತಿರುವ ಭಗವಾನ್ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಅರ್ಹರೇ ಎಂಬ ಪ್ರಶ್ನೆ ಅವರನ್ನು ವಿರೋಧಿಸುವವರು ಮಾತ್ರವಲ್ಲ ಬೆಂಬಲಿಗರ ಮನಸ್ಸಲ್ಲೂ ಒಂದು ಕ್ಷಣ ಹಾದುಹೋದದ್ದು ಸುಳ್ಳಲ್ಲ. ಭಗವಾನ್ ಮತ್ತು ಅವರ ಎಲ್ಲ ಅಪದ್ಧಗಳನ್ನೂ ಬೆಂಬಲಿಸುತ್ತ ಸಾಮಾಜಿಕ ಜಾಲತಾಣಗಳಲ್ಲಿ ರಾಡಿ ಎಬ್ಬಿಸುತ್ತಿರುವ ಶಿಷ್ಯರು ಕೂಡ ಈಗ “ಅವರ ಕಿರುಚಾಟಗಳನ್ನು ಪರಿಗಣ ಸಬಾರದು. ಕೇವಲ ಕೃತಿಗಳನ್ನಷ್ಟೇ ಎದುರಿಟ್ಟುಕೊಂಡು ಪ್ರಶಸ್ತಿ ಕೊಡಬೇಕು” ಎಂಬ ರಾಗ ಹಾಡಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ನಾವು ಸಾಹಿತ್ಯ ಅಕಾಡೆಮಿಯ ಏಕಪಕ್ಷೀಯ ತೀರ್ಮಾನದ ವಿರುದ್ಧ ಜನಮತ ರೂಪಿಸುವ ಕೆಲಸ ಕೈಗೆತ್ತಿಕೊಂಡೆವು. ಈ ಒಟ್ಟು ಹೋರಾಟದ ಒಂದು ಸ್ಥೂಲಸ್ವರೂಪವನ್ನು ಕನ್ನಡಿಗರು ಅರಿಯಬೇಕು ಎಂಬ ಕಾರಣಕ್ಕೆ ಈ ಲೇಖನ ಬರೆಯುತ್ತಿದ್ದೇನೆ.

ನಮ್ಮ ಹೋರಾಟದ ರೂಪುರೇಷೆಗಳು:
ನಮ್ಮದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ನಿರ್ಧಾರದ ವಿರುದ್ಧದ ಹೋರಾಟ. ಅಕಾಡೆಮಿ ಪ್ರಕಟಿಸಿರುವ ಪಟ್ಟಿಯು ಸಂಪೂರ್ಣವಾಗಿ ಏಕಪಕ್ಷೀಯವಾಗಿದೆ. ಇದನ್ನು ಸಿದ್ಧಪಡಿಸುವಾಗ ಯಾರ ಅಭಿಪ್ರಾಯವನ್ನೂ ಗಣನೆಗೆ ತೆಗೆದುಕೊಂಡಂತೆ ಕಾಣುವುದಿಲ್ಲ. ಪಟ್ಟಿಯಲ್ಲಿ ನಕ್ಸಲ್ ಚಳವಳಿಗೆ ಬೆಂಬಲ ಕೊಟ್ಟವರು, ನೇರವಾಗಿ ನಕ್ಸಲ್ ಹೋರಾಟಗಳಲ್ಲಿ ಭಾಗಿಯಾಗಿದ್ದವರು, ಎಡಪಂಥೀಯ ಚಿಂತನೆ ಇರುವವರು, ಸರಕಾರದ ವಿವಿಧ ಸವಲತ್ತುಗಳನ್ನು ಈಗಾಗಲೇ ಅನುಭವಿಸಿರುವವರು ಮತ್ತು ಸರಕಾರಕ್ಕೆ ಸದಾ ಸರ್ವದಾ ಬೆಂಬಲ ಸೂಚಿಸುತ್ತ ಜನರ ದಾರಿ ತಪ್ಪಿಸುತ್ತಿರುವವರು ಪ್ರಮುಖವಾಗಿ ತುಂಬಿಕೊಂಡಿದ್ದಾರೆ. ಕೆಲವರಂತೂ ಏನು ಬರೆದಿದ್ದಾರೆ, ಎಂಥಾ ಸಾಹಿತ್ಯ ಕೊಟ್ಟಿದ್ದಾರೆ, ಅವರು ಬರೆದಿದ್ದನ್ನು ಓದಲು ಸಾಧ್ಯವೇ ಎನ್ನುವುದನ್ನೂ ಅಕಾಡೆಮಿ ಗಣನೆಗೆ ತೆಗೆದುಕೊಂಡಿಲ್ಲ. ಸರಕಾರದ ಹಿಂಬಾಗಿಲಿನಲ್ಲಿ ಸದಾ ಓಡಾಡಿಕೊಂಡಿರುವ ಹಲವುಹತ್ತು “ಗಣ್ಯ”ರಿಗೆ ಈ ಬಾರಿಯ ಪ್ರಶಸ್ತಿಗಳನ್ನು ಪ್ರಸಾದ ಎಂಬಂತೆ ಹಂಚಲಾಗಿದೆ. ಇದು ಮೇಲ್ನೋಟಕ್ಕೇ ಸಿದ್ಧವಾಗುವ ಸಂಗತಿ. ಹಾಗಾಗಿ, ಈ ಸಲದ ಪ್ರಶಸ್ತಿಪಟ್ಟಿಯನ್ನು ಬಿಡುಗಡೆ ಮಾಡುವುದರ ಜೊತೆಗೆ ಸಾಹಿತ್ಯ ಅಕಾಡೆಮಿ ತನ್ನ ಗೌರವವನ್ನೇ ಮಣ್ಣುಗೂಡಿಸಿಕೊಂಡಿದೆ ಎಂದರೆ ತಪ್ಪಲ್ಲ. ಅಕಾಡೆಮಿ ಯಾವ ಮಾನದಂಡಗಳನ್ನು ಇಟ್ಟುಕೊಂಡು ಸಾಹಿತಿಗಳನ್ನು ಆರಿಸಿದೆ? ಆಯ್ಕೆ ಸಮಿತಿಯನ್ನು ಆರಿಸಿದವರು ಯಾರು? ಈ ಆಯ್ಕೆ ಸಮಿತಿಯನ್ನು ಆರಿಸಲಿಕ್ಕೆ ಏನು ಮಾನದಂಡಗಳನ್ನು ಇಟ್ಟುಕೊಂಡಿದ್ದರು? ನಕ್ಸಲ್ ಚಳವಳಿ, ಸಾಮಾಜಿಕ ಅಶಾಂತಿ ಉಂಟುಮಾಡುವುದು, ಬಹುಸಂಖ್ಯಾತರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವುದು – ಇವುಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಪ್ರಶಸ್ತಿ ಕೊಟ್ಟರೆ, ಮುಂದೆ ಇದೇ ದಾರಿ ಹಿಡಿದು ಪ್ರಶಸ್ತಿಗಾಗಿ ಹಂಬಲಿಸುವವರ ಸಂಖ್ಯೆ ಬೆಳೆಯುವುದಿಲ್ಲವೆ? ಸಾಹಿತ್ಯ ಅಕಾಡೆಮಿ ಯಾವ ಪರಂಪರೆಗೆ ನಾಂದಿ ಹಾಡುತ್ತಿದೆ? – ಇವು ನಮ್ಮ ಪ್ರಶ್ನೆಗಳು. ಇವನ್ನೇ ಮುಂದಿಟ್ಟುಕೊಂಡು ನಾವು ಪೆಟಿಶನ್ (ಸಹಿಸಂಗ್ರಹ ಅಭಿಯಾನ) ಪ್ರಾರಂಭಿಸಿದೆವು.

ಸಹಿ ಸಂಗ್ರಹ ಅಭಿಯಾನ:
ಚೇಂಜ್.ಆರ್ಗ್ ಎಂಬ ವೆಬ್‍ಸೈಟ್ ಮೂಲಕ ನಾವು “ಸಾಹಿತ್ಯ ಅಕಾಡೆಮಿ ತನ್ನ ಪಟ್ಟಿಯನ್ನು ಪರಿಷ್ಕರಿಸಬೇಕು” ಎಂಬ ಸಹಿ ಸಂಗ್ರಹ ಅಭಿಯಾನ ಆರಂಭಿಸಿದೆವು. ಅದು ಪ್ರಾರಂಭವಾಗಿ 24 ತಾಸುಗಳು ಕಳೆಯುವುದರೊಳಗೇ ಸುಮಾರು ಐದು ಸಾವಿರ ಜನ ಬೆಂಬಲ ಸೂಚಿಸಿ ಸಹಿ ಮಾಡಿದರು. ಹೀಗೆ ಸಹಿ ಮಾಡಿರುವ ಪ್ರತಿಯೊಬ್ಬರ ಹೆಸರಲ್ಲೂ ಒಂದೊಂದು ಪತ್ರ ಕರ್ನಾks-bhagwan_650x400_51441853310ಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಿಗೆ, ಕರ್ನಾಟಕ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತು ಕರ್ನಾಟಕ ರಾಜ್ಯಪಾಲರಿಗೆ ಹೋಗುತ್ತಿದೆ. ಸೆಪ್ಟೆಂಬರ್ 22ರ ಮುಂಜಾನೆ, ಈ ಅಭಿಯಾನ ಸುಮಾರು 8000 ಸಹಿಗಳನ್ನು ಸಂಗ್ರಹಿಸಿದೆ. ಅಂದರೆ ಇಷ್ಟೂ ಜನರ ಪತ್ರಗಳು ಈ ಮೇಲೆ ಹೇಳಿದ ಮೂರು ಜನಕ್ಕೆ ತಲುಪಿವೆ. ಆದರೆ, ನಮ್ಮ ಅಭಿಯಾನವನ್ನು ಲೇವಡಿ ಮಾಡಿರುವ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿಯವರು “ಇದು ಪೂರ್ಣಯೋಚನೆ ಮಾಡದ, ಅರೆಬೆಂದ ಮನಸ್ಥಿತಿಯ ಯುವಕರ ಪ್ರಲಾಪ” ಎಂದಿದ್ದಾರೆ. ಮುಂದುವರೆದು “ಭಗವಾನರಿಗೆ ಪ್ರಶಸ್ತಿ ಕೊಟ್ಟಿರುವುದನ್ನು ಸಹಿಸದ ಕೆಲವರು ಇದ
ಕ್ಕೆ ರಾಜಕೀಯ ಬಣ್ಣ ಲೇಪಿಸುತ್ತಿದ್ದಾರೆ” ಎಂದೂ ಗಂಭೀರವಾದ ಆರೋಪ ಮಾಡಿದ್ದಾರೆ. ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಥಾನದಲ್ಲಿರುವ ವ್ಯಕ್ತಿಯಿಂದ ನಾವು ಇಂಥ ಕೀಳುಮಟ್ಟದ ಭಾಷಾಪ್ರಯೋಗವನ್ನೂ ನಿಂದನೆಯನ್ನೂ ನಿರೀಕ್ಷಿಸಿರಲಿಲ್ಲ. ಆದರೆ, ಅವರ ಬಗ್ಗೆ ನಾವು ಯಾವ ಬಗೆಯ ಪ್ರತಿನಿಂದನೆಯನ್ನೂ ಮಾಡುವವರಲ್ಲ. ಮನುಷ್ಯರು ತಮ್ಮ ಸಂಸ್ಕøತಿಗೆ ತಕ್ಕಂತೆ ತಮ್ಮ ನಾಲಗೆಯನ್ನು ಬಳಸುವುದು ಸ್ವಾಭಾವಿಕ. ಎರಡೇ ದಿನಗಳಲ್ಲಿ ಸಹಿಸಂಗ್ರಹ ಅಭಿಯಾನ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡತೊಡಗಿದೆ. ರಾಷ್ಟ್ರೀಯ ವೃತ್ತಪತ್ರಿಕೆಗಳು ಈ ಅಭಿಯಾನದ ಬಗ್ಗೆ ಸ್ವಯಂಪ್ರೇರಿತರಾಗಿ ಸುದ್ದಿ ಪಡೆದು ಪ್ರಕಟಿಸಲಾರಂಭಿಸಿವೆ. ದೆಹಲಿಯಲ್ಲಿರುವ ಕನ್ನಡಿಗರು ತಮ್ಮ ವಾಟ್ಸಾಪ್ ಗ್ರೂಪ್‍ಗಳಲ್ಲಿ ಅಭಿಯಾನದ ಲಿಂಕ್ ಅನ್ನು ಹಂಚಿಕೊಳ್ಳುತ್ತಿದ್ದಾರೆ. ದೂರದ ಅಮೆರಿಕದಲ್ಲಿರುವ ಕನ್ನಡಿಗರು ಇದನ್ನೊಂದು ಸ್ವಂತ ಜವಾಬ್ದಾರಿ ಎಂಬಂತೆ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. ತಾವು ಸಹಿ ಮಾಡುವುದಲ್ಲದೆ ತಮ್ಮ ಎಲ್ಲ ಗೆಳೆಯರಿಗೂ ಮಾಹಿತಿ ನೀಡಿ ಅವರನ್ನೂ ಸಹಿ ಹಾಕುವಂತೆ ಪ್ರೇರೇಪಿಸುತ್ತಿದ್ದಾರೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನ ಸರಕಾರ ಮತ್ತು ರಾಜ್ಯಪಾಲರಿಗೆ ಪತ್ರ ಬರೆದ ಮೇಲೂ, ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ತಮ್ಮನ್ನು ಸಮರ್ಥಿಸಿಕೊಳ್ಳುತ್ತಾರಾ? ಹಾಗಾದರೆ ಜನಾಭಿಪ್ರಾಯಕ್ಕೆ ಏನು ಬೆಲೆ? ರಾಜ್ಯದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಜನ ಪ್ರಶ್ನೆಗಳನ್ನು ಕೇಳಿದರೂ ಅವಾವುದಕ್ಕೂ ಉತ್ತರಿಸದೆ ತನ್ನ ಮೂಗಿನ ನೇರಕ್ಕೆ ನಡೆದರೆ ಸಾಹಿತ್ಯ ಅಕಾಡೆಮಿ ತನ್ನ ವಿಶ್ವಾಸಾರ್ಹತೆಯನ್ನು ನೆಲಕ್ಕೆ ಕೊಡವಿದ ಹಾಗೆ ಅಲ್ಲವೆ? ಪ್ರಜಾಪ್ರಭುತ್ವ ಎನ್ನುವುದಕ್ಕೆ ಅರ್ಥ ಏನು? ಇದು ನಮ್ಮ ಪ್ರಶ್ನೆ. ಸಹಿ ಸಂಗ್ರಹ ಅಭಿಯಾನದಲ್ಲಿ ಇನ್ನಷ್ಟು ಮತ್ತಷ್ಟು ಸಾವಿರಗಳು ಜಮೆಯಾಗುತ್ತಾ ಹೋದಂತೆಲ್ಲ ನಮ್ಮ ಪ್ರಶ್ನೆಗಳಿಗೂ ಹೆಚ್ಚುಹೆಚ್ಚಿನ ಬಲ ಬರುತ್ತಾ ಹೋಗುತ್ತದೆ.

ಇದು ಪ್ರಾರಂಭ:
ಕೆಲವರು ನಾವೇಕೆ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳ ಬಗ್ಗೆ ಇಷ್ಟೊಂದು ತಲೆಕೆಡಿಸಿಕೊಂಡಿದ್ದೇವೆ ಎನ್ನುವುದರ ಬಗ್ಗೆಯೇ ತಲೆಕೆಡಿಸಿಕೊಂಡಿದ್ದಾರೆ! “ಅಯ್ಯೋ ಬಿಡಿ ಸಾರ್, ನೀವು ಸುದ್ದಿ ಮಾಡದೇ ಹೋಗಿದ್ದರೆ ಈ ಪ್ರಶಸ್ತಿಪಟ್ಟಿ ಬಂದುಹೋದದ್ದೂ ನಮಗೆ ತಿಳಿಯುತ್ತಿರಲಿಲ್ಲ. ನೀವ್ಯಾಕೆ ಇದರ ಬಗ್ಗೆ ಚಿಂತೆ ಮಾಡುತ್ತೀರಿ. ಯಾರೋ ಒಂದಷ್ಟು ಜನ ಪಡೆಯುತ್ತಾರೆ, ಜನ ಮರೆಯುತ್ತಾರೆ. ಬಿಟ್ಟುಬಿಡಿ” ಎಂದು ಕೆಲವರು ಸಲಹೆ ಕೊಟ್ಟರು. ಆದಾಗ್ಯೂ ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣ ಸಲು ಯೋಚಿಸಿದ್ದೇವೆ. ಯಾಕೆಂದರೆ, ಈ ಪ್ರಶಸ್ತಿ, ಪದವಿ ಇತ್ಯಾದಿಗಳೆಲ್ಲವೂ ಒಂದು ದೊಡ್ಡ ಆಟದ ಸಣ್ಣಸಣ್ಣ ಭಾಗಗಳಷ್ಟೆ.

ಗಮನಿಸಿ:
ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಮತ್ತು ಸದಸ್ಯರನ್ನು ಕರ್ನಾಟಕ ಸರಕಾರ ಆರಿಸುತ್ತದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ನೇರವಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕೈಕೆಳಗೆ ಬರುವ ಸಂಸ್ಥೆ. ಅಂದರೆ, ಇಲ್ಲಿ ಸರಕಾರದ ಹಸ್ತಕ್ಷೇಪ ಇಲ್ಲ ಎನ್ನುವುದಕ್ಕೆ ಯಾವ ಕಾರಣವೂ ಇಲ್ಲ. ಕಳೆದ ಒಂದೆರಡು ವರ್ಷಗಳಿಂದ ನಮ್ಮ ಸರ್ಕಾರದ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತ ಬಂದಿದ್ದರೆ ನಿಮಗೆ, ಅಕಾಡೆಮಿ ವ್ಯವಹಾರದಲ್ಲಿ ಸರಕಾರ ಹೇಗೆ ಮೂಗು ತೂರಿಸಿರಬಹುದು ಎಂಬ ಅಂದಾಜು ಸಿಕ್ಕಿರಬಹುದು. ತಾನು ಅಧಿಕಾರದಲ್ಲಿರುವಾಗ ತನ್ನ ಹಿಂಬಾಲಕರಿಗೆ, ಹೊಗಳುಭಟರಿಗೆ ಪ್ರಶಸ್ತಿ-ಪುರಸ್ಕಾರ ಕೊಟ್ಟು ಸಂಪ್ರೀತಗೊಳಿಸಬೇಕೆನ್ನುವುದು ಈ ಸರಕಾರದ ಧೋರಣೆ. ಸಾಹಿತ್ಯ ಅಕಾಡೆಮಿಯನ್ನು ಅದಕ್ಕಾಗಿ ವೇದಿಕೆಯಾಗಿ ಬಳಸಿಕೊಳ್ಳುವ; ತನ್ನ ಬೆಂಬಲಕ್ಕೆ ನಿಂತಿರುವುದಕ್ಕಾಗಿ ಸಾಹಿತಿಗಳಿಗೆ ಅಕಾಡೆಮಿ ಪ್ರಶಸ್ತಿಗಳನ್ನು ಕೃತಜ್ಞತಾರೂಪದಲ್ಲಿ ಹಂಚುವ ಕೆಲಸವನ್ನು ಈ ಸರಕಾರ ಮಾಡುವುದು ನಿಚ್ಚಳ. ಭಗವಾನ್ ಮತ್ತಿತರಿಗೆ ಪ್ರಶಸ್ತಿ ಸಿಕ್ಕಿರುವುದು ಈ ಆಧಾರದ ಮೇಲೆ ಎನ್ನುವುದೇ ಬಹುಜನರ ಊಹೆ.
ಕಳೆದ ಎರಡು-ಮೂರು ವರ್ಷಗಳಿಂದಲೂ ಭಗವಾನ್ ನೀಡಿರುವ ಹೇಳಿಕೆಗಳೆಲ್ಲವೂ ರಾಮಾಯಣ, ಭಗವದ್ಗೀತೆ, ಮಹಾಭಾರತ ಮತ್ತು ಹಿಂದೂ ಧರ್ಮಕ್ಕೆ ಸಂಬಂಧಪಟ್ಟವು. ಒಂದು ಎಲೆಕ್ಟ್ರಾನಿಕ್ ಅಂಗಡಿಯ ಉದ್ಘಾಟನೆ ಕಾರ್ಯಕ್ರಮಕ್ಕೆ ಕರೆದರೂ ಈ ವ್ಯಕ್ತಿ “ರಾಮಾಯಣ ಸುಳ್ಳು, ರಾಮನಿಗೆ ಅಪ್ಪ ಇಲ್ಲ, ಆತ ಹೆಂಗಸರೊಂದಿಗೆ ಮದ್ಯ ಸೇವಿಸುತ್ತಿದ್ದ, ಮಹಾಭಾರತ ವ್ಯಭಿಚಾರದ ಕೃತಿ, ಕೃಷ್ಣ ನಮ್ಮನ್ನು ಯುದ್ಧಕ್ಕೆ ಪ್ರೇರೇಪಿಸುತ್ತಾನೆ” ಇತ್ಯಾದಿ ವಿಷಯಗಳನ್ನೇ ಹೇಳುತ್ತಾರೆಂದು ಜನ ಊಹಿಸುವ ಮಟ್ಟಿಗೆ ಅವರು ಸಮಾಜದಲ್ಲಿ ಕುಖ್ಯಾತರಾಗಿದ್ದಾರೆ. ಅಂದರೆ, ಯಾವುದೋ ಒಂದು ನಿರ್ಧಿಷ್ಟ ಪಂಗಡ ಈ ವ್ಯಕ್ತಿಯ ಬೆನ್ನಹಿಂದೆ ನಿಂತು ಬಹುಸಂಖ್ಯಾತರ ಭಾವನೆಗಳ ಜೊತೆ ಆಟವಾಡುವುದನ್ನು ಉದ್ಯೋಗ ಮಾಡಿಕೊಂಡಿದೆ ಎಂದು ಹೇಳಬೇಕಾಗಿದೆ. ಪ್ರೊ. ನಾರಾಯಣಾಚಾರ್ಯರು ಬರೆದ “ವಾಲ್ಮೀಕಿ ಯಾರು?” ಪುಸ್ತಕವನ್ನು ನಿಷೇಧಿಸಬೇಕೇ ಬೇಡವೇ ಎಂದು ನಿರ್ಧರಿಸುವ ಸಮಿತಿಯಲ್ಲೂ ವಾಲ್ಮೀಕಿ ರಾಮಾಯಣ ಓದದ, ಸಂಸ್ಕøತ ಗೊತ್ತಿಲ್ಲದ ಮತ್ತು ರಾಮಾಯಣದ ಬಗ್ಗೆ ನಿತ್ಯನಿರಂತರ ದ್ವೇಷ ಕಾರುತ್ತಿರುವ ಭಗವಾನ್ ಸ್ಥಾನ ಪಡೆದಿದ್ದಾರೆ ಎಂದರೆ ನಮ್ಮ ಸರಕಾರ ಒಬ್ಬ ವಿಕೃತ ಚಿಂತನೆಯ ವ್ಯಕ್ತಿಯನ್ನು ಯಾವ ಪರಿಯಲ್ಲಿ ಬೆಂಬಲಿಸುತ್ತಿದೆ, ಜನಸಾಮಾನ್ಯರು ಗಮನಿಸಬಹುದು.

ಸರಕಾರದ ಜೊತೆ ಸೇರಿಕೊಂಡಿರುವ ಕೆಲವು ದುಷ್ಟಶಕ್ತಿಗಳು ಮಾಧ್ಯಮರಂಗವನ್ನು ತಮ್ಮ ಆಡುಂಬೊಲವಾಗಿ ಬಳಸಿಕೊಳ್ಳುತ್ತಿವೆ. ಜನ ಪೋಲೀಸ್ ಶಕ್ತಿಗೆ ಹೆದರುತ್ತಾರೆ ಎಂದು ನಂಬಿರುವ ಸರಕಾರ ಎಂದು ತನ್ನ ಮಾತಿನಲ್ಲಿ ಶಕ್ತಿ ಇಲ್ಲವೆಂದು ಮನವರಿಕೆ ಮಾಡಿಕೊಳ್ಳುತ್ತದೋ ಅಂದಿನಿಂದ ಪೋಲೀಸ್ ಭಾಷೆಯಲ್ಲಿ ಮಾತಾಡತೊಡಗುತ್ತದೆ. ಸಾರ್ವಜನಿಕ ವೇದಿಕೆಯಲ್ಲಿ ಅಸಹ್ಯ ಹುಟ್ಟಿಸುವ ಶಬ್ದಗಳನ್ನು ಬಳಸಿದ್ದ ಸರಕಾರದ ಒಬ್ಬ ಮುಖ್ಯ ಅಧಿಕಾರಿ, ನಿಲುಮೆ ಫೇಸ್‍ಬುಕ್ ಪೇಜಿನಲ್ಲಿ ನಡೆದ ಚರ್ಚೆಯನ್ನೇ ಆಧಾರವಾಗಿಟ್ಟುಕೊಂಡು ಹಲವು ಜನರ ಮೇಲೆ ಕೇಸ್ ಹಾಕಿ ಅಭಿವ್ಯಕ್ತಿಸ್ವಾತಂತ್ರ್ಯವನ್ನು ಬಗ್ಗುಬಡಿಯಲು ನೋಡಿದ್ದು ಇನ್ನೂ ಹಸಿರಾಗಿದೆ. ಈಗಲೂ ಅಷ್ಟೆ, ಭಗವಾನ್ ಆಯ್ಕೆಯನ್ನು ಪ್ರಶ್ನಿಸಿ ಸಾತ್ವಿಕ ಹೋರಾಟ ಮಾಡುತ್ತಿರುವವರ ಧೈರ್ಯ ಕುಂದಿಸಲು ಇವರು ಪತ್ರಿಕೆಗಳನ್ನು ಬಳಸಿಕೊಳ್ಳತೊಡಗಿದ್ದಾರೆ. ಇಲ್ಲಿ ಸರಕಾರವನ್ನು ಪ್ರಶ್ನಿಸಿದವನು ಖಳನಾಗುತ್ತಾನೆ; ದುಷ್ಕರ್ಮಿಯಾಗುತ್ತಾನೆ! ಭಗವಾನ್ ಮೇಲೆ ಕೇಸು ದಾಖಲಾದ ಮೇಲೆ, ಸರಕಾರ ಅವರಿಗೆ ಗನ್‍ಮ್ಯಾನ್ ಸೌಲಭ್ಯ ಒದಗಿಸುತ್ತದೆ! ಭಗವಾನ್, ಕರ್ನಾಟಕದಿಂದ ಪಾರಾಗಿ ಕೇರಳ ರಾಜ್ಯಕ್ಕೆ ಹೋಗಲು ಸರಕಾರವೇ ಮುಂದೆ ನಿಂತು ಸಹಕರಿಸುತ್ತದೆ. ಇದು ಇಲ್ಲಿನ ಸದ್ಯದ ಪರಿಸ್ಥಿತಿ. ಇದಕ್ಕಿಂತ ಜಂಗಲ್ ರಾಜ್ ಎಷ್ಟೋ ಪರವಾಯಿಲ್ಲ ಎನ್ನಬಹುದು!

ಬಹುಶಃ ನಮ್ಮ ರಾಜ್ಯ ಸರಕಾರಕ್ಕೆ ಕೋಮುಸೌಹಾರ್ದ ಬೇಕಾಗಿಲ್ಲ. ರಾಜ್ಯದಲ್ಲಿ ಹೇಗಾದರೂ ಮಾಡಿ ಒಂದು ಕೋಮುಗಲಭೆ ಎಬ್ಬಿಸಬೇಕು ಮತ್ತು ಅದಕ್ಕೆ ಹಿಂದೂಗಳನ್ನೂ ಬಿಜೆಪಿಯನ್ನೂ ಕೇಂದ್ರ ಸರಕಾರವನ್ನೂ ಗುರಿಯಾಗಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಬೇಕು ಎಂದು ರಾಜ್ಯ ಸರಕಾರ ಭಾವಿಸಿದಂತಿದೆ. ಜಾತಿದ್ವೇಷ, ಧರ್ಮದ್ವೇಷದ ಹೇಳಿಕೆಗಳನ್ನು ನಿರಂತರ ಹೇಳುವ ಭಗವಾನ್‍ರಿಗೆ ಸರಕಾರವೇ ಮುಂದೆ ನಿಂತು ಪೋಲೀಸ್ ರಕ್ಷಣೆ ಒದಗಿಸುತ್ತಿದೆ. ಭಗವಾನ್ ಮೇಲೆ ದಾಖಲಾಗಿರುವ ಹಲವು ಪೋಲೀಸ್ ಕೇಸುಗಳನ್ನು ತಣ್ಣಗಾಗಿಸಲಾಗಿದೆ. ಇದು ಸರ್ವಾಧಿಕಾರವಲ್ಲದೆ ಬೇರೇನೂ ಅಲ್ಲ. ಕಲ್ಬುರ್ಗಿ ಕೊಲೆ ನಡೆದಾಗ ಒಬ್ಬ ತರುಣ ಟ್ವೀಟ್ಟರ್‍ನಲ್ಲಿ 140 ಅಕ್ಷರ ಬರೆದುಕೊಂಡ ಎಂಬ ವಿಷಯಕ್ಕೇ ಅವನನ್ನು ಬಂಧಿಸಿ ಪೋಲೀಸ್ ಟ್ರೀಟ್‍ಮೆಂಟ್ ಕೊಡುವ ಸರಕಾರ, ವರ್ಷಗಳಿಂದ ನೂರಾರು ಅಸಂಬದ್ಧ ಹೇಳಿಕೆಗಳನ್ನು ಕೊಟ್ಟರೂ ಭಗವಾನ್ ಯಾವುದೇ ವಿಚಾರಣೆಗೆ ಗುರಿಯಾಗದಂತೆ ನೋಡಿಕೊಳ್ಳುತ್ತಿದೆ. ಇದು ಕುಂಭಕರ್ಣನನ್ನು ಸಾಕಿದ ರಾವಣರಾಜ್ಯದ ಕತೆಗಿಂತ ಬೇರೆಯಾಗಿದೆಯೇ? ಮಾತೆತ್ತಿದರೆ ಪ್ರಜಾಪ್ರಭುತ್ವ, ಸಂವಿಧಾನ, ಸಾಮಾಜಿಕ ಸಮಾನತೆಗಳ ಬಗ್ಗೆ ಭಾಷಣ ಬಿಗಿಯುವ ಸರಕಾರದ ನಾಯಕರು ಭಗವಾನ್‍ಗೆ ನೀಡಿರುವ ಸವಲತ್ತುಗಳ ಬಗ್ಗೆ ಯಾವ ಸ್ಪಷ್ಟೀಕರಣ ಕೊಡುತ್ತಾರೆ?

ಸರಕಾರೀ ಕಚೇರಿಗಳು, ಇಲಾಖೆಗಳು, ಶಿಕ್ಷಣಸಂಸ್ಥೆ, ನಿಗಮ, ಪ್ರಾಧಿಕಾರ ಮತ್ತು ಮಾಧ್ಯಮ ರಂಗಗಳಲ್ಲಿ ಹಿಂದೂ ಭಾವನೆಗಳನ್ನು ತುಳಿಯುವ ಮನಸ್ಥಿತಿ ಇರುವ ವ್ಯಕ್ತಿಗಳನ್ನೇ ಚಾಣಾಕ್ಷತನದಿಂದ ತುಂಬಿಸುತ್ತಿರುವ ಸರಕಾರ, ತನ್ನನ್ನು ಹೊಗಳುವ, ಬೆಂಬಲಿಸುವ, ಬಹುಪರಾಕ್ ಎನ್ನುವವರ ಬಳಗವನ್ನು ಬೆಳೆಸುತ್ತಿದೆ. ಇದು ಏಕಚಕ್ರಾಧಿಪತ್ಯದ ಲಕ್ಷಣ. ಸರಕಾರೀ ಕಚೇರಿಗಳೂ ಇಲಾಖೆಗಳೂ ಸದ್ಯಕ್ಕೆ ಬುದ್ಧಿಜೀವಿಗಳ ಒಡ್ಡೋಲಗಗಳಾಗಿವೆ. ಇವರು ಮಾಡುತ್ತಿರುವ ರಾಜಕೀಯವಂತೂ ಅತ್ಯಂತ ಹೊಲಸು. ಸ್ವಜಾತಿಗೇ ಮೊದಲ ಮಣೆ. ದಲಿತ, ಅಹಿಂದ ಇತ್ಯಾದಿ ಪದಗಳನ್ನು ಉದುರಿಸಿದರೆ ಸಾಕು ಮಾನ-ಸನ್ಮಾನ. ತಾನು ಪ್ರಗತಿಪರ, ತಳಸ್ಪರ್ಶಿ ಹೋರಾಟಗಾರ ಎಂದು ಬಿಂಬಿಸಿಕೊಂಡರೆ ಸಾಕು, ಅವರಿಗೆ ಹಾರತುರಾಯಿ. ಕನ್ನಡಪ್ರಭದಂಥ ಪತ್ರಿಕೆಯಲ್ಲಿ ಬಲಪಂಥೀಯ ಚಿಂತನೆಗಳಿಗೂ ಜಾಗ ಕೊಡುತ್ತಿದ್ದ ವಿಶ್ವೇಶ್ವರ ಭಟ್ಟರಂಥ ಸಂಪಾದಕರು ಅನಿವಾರ್ಯವಾಗಿ ಕೆಲಸ ಬಿಡಬೇಕಾದಾಗ ಕರ್ನಾಟಕದ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರು “ಈಗ ಕನ್ನಡಪ್ರಭ ಓದುವಂತಾಗಿದೆ” ಎಂದು ನಿಟ್ಟುಸಿರುಬಿಡುತ್ತ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಅಂದರೆ, ಇವರಿಗೆ ತಮ್ಮದಲ್ಲದ ಯಾವುದೇ ವಿಚಾರಧಾರೆಗಳನ್ನು ಸಹಿಸಿಕೊಳ್ಳಲು ಆಗುವುದಿಲ್ಲ ಎನ್ನುವುದು ಅತ್ಯಂತ ಸ್ಪಷ್ಟವಾಗಿದೆ.ಇಂಥ ಒಂದು ಸರ್ವಾಧಿಕಾರಿ ಸರಕಾರದ ವಿವಿಧ ಯೋಜನೆಗಳಲ್ಲಿ ಇಂಥ ಅಕಾಡೆಮಿ ಪ್ರಶಸ್ತಿಗಳೂ ಬರುತ್ತವೆ ಎನ್ನುವುದನ್ನು ಜನ ಅರ್ಥ ಮಾಡಿಕೊಳ್ಳಬೇಕಾಗಿದೆ. ಹಾಗಾಗಿ, ನಾವು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಪಟ್ಟಿಯನ್ನು ಹೇಗೆ ವಿರೋಧಿಸುತ್ತೇವೋ ಹಾಗೆಯೇ ಅದಕ್ಕೆ ಬೆಂಗಾವಲಾಗಿ ನಿಂತಿರುವ ಸರಕಾರದ ಡಿಕ್ಟೇಟರ್‍ಶಿಪ್ ಅನ್ನೂ ವಿರೋಧಿಸುತ್ತೇವೆ. ನಮ್ಮ ಹೋರಾಟ ಯಾವುದೇ ಒಂದು ವ್ಯಕ್ತಿಗೆ ಸೀಮಿತವಾದದ್ದಲ್ಲ.

ಹೋರಾಟ ಯಾರಿಂದ?
ನಾವು ಹುಟ್ಟುಹಾಕಿರುವ ಹೋರಾಟ ಸಂಪೂರ್ಣವಾಗಿ ಜನಪರ. ಜನರಿಂದಲೇ ಹುಟ್ಟಿರುವ ಆಂದೋಲನ ಇದು. ನಾವು ಯಾರನ್ನೂ ಈ ಆಂದೋಲನದಲ್ಲಿ ಕೈಜೋಡಿಸಲು ಬಲವಂತಪಡಿಸಿಲ್ಲ. ಸಮಾಜದ ಗಣ್ಯವ್ಯಕ್ತಿಗಳು ನಮ್ಮ ಜೊತೆ ಕೈ ಜೋಡಿಸಿದರೆ ಅದಕ್ಕೆ ನಮ್ಮ ಬೆಂಬಲ ಇದೆ. ಪತ್ರಿಕೆಗಳು, ಟಿವಿ ಚಾನೆಲ್‍ಗಳು ಇದು ತಮ್ಮ ಜವಾಬ್ದಾರಿಯೂ ಹೌದು ಎಂದು ಅರಿತು ನಮ್ಮ ಹೋರಾಟಕ್ಕೆ ಬೆಂಬಲ ಕೊಟ್ಟರೆ ಅದನ್ನು ಸ್ವಾಗತಿಸುತ್ತೇವೆ. ಆದರೆ, ಇದರಲ್ಲಿ ಪಾಲ್ಗೊಂಡಿರುವ ಯಾರಿಗೂ ರಾಜಕೀಯ ಹಿತಾಸಕ್ತಿಗಳು ಇಲ್ಲ. ಪ್ರಗತಿಪರರು, ಬುದ್ಧಿಜೀವಿಗಳು ಸಂಶಯಪಡುವಂತೆ ಹಿಡನ್ ಅಜೆಂಡಗಳು ಇಲ್ಲ. ಸಾಹಿತ್ಯ ಅಕಾಡೆಮಿ ಅಪಾತ್ರರಿಗೆ ಪ್ರಶಸ್ತಿಗಳನ್ನು ದಾನ ಮಾಡಿದೆ; ಅದನ್ನು ತಡೆಹಿಡಿಯಬೇಕು ಮತ್ತು ಇಡೀ ಪಟ್ಟಿಯನ್ನು ಪರಿಷ್ಕರಿಸಬೇಕು – ಇದಷ್ಟೇ ನಮ್ಮ ಬೇಡಿಕೆ.ಅತ್ಯಂತ ಧನಾತ್ಮಕ ತಿರುವು ಏನೆಂದರೆ, ಕನ್ನಡದ ಪ್ರಸಿದ್ಧ ಲೇಖಕರೂ ಗಣ್ಯವ್ಯಕ್ತಿಗಳೂ ಇದೀಗ ತಮ್ಮ ಮೌನ ಮುರಿದು “ನೀವು ಮಾಡುತ್ತಿರುವ ಹೋರಾಟ ಸರಿದಾರಿಯಲ್ಲಿ ನಡೆಯುತ್ತಿದೆ” ಎಂಬ ಪ್ರೋತ್ಸಾಹದ ಮಾತುಗಳನ್ನು ಆಡತೊಡಗಿದ್ದಾರೆ. ಅದು ನಮಗೂ ಉತ್ಸಾಹ, ಪ್ರೇರಣೆ ಕೊಟ್ಟಿದೆ. ಹೋರಾಟದ ದಾರಿಯಲ್ಲಿ ಇಂತಹ ತಣ ್ಣೀರ ಚಿಲುಮೆಗಳಿರುವುದು ಚೇತೋಹಾರಿ.

ಮುಂದೇನು?
ನಾವು ನಮ್ಮ ಹೋರಾಟವನ್ನು ತಾತ್ವಿಕ ಅಂತ್ಯ ಕಾಣುವವರೆಗೂ ನಿಲ್ಲಿಸುವುದಿಲ್ಲ. ಭಗವಾನ್ ಮತ್ತು ಉಳಿದ ಅಪಾತ್ರರ ವಿರುದ್ಧ ನಮ್ಮ ಹೋರಾಟ ಜಾರಿಯಲ್ಲಿರುತ್ತದೆ. ಪ್ರಜೆಗಳಿಂದ ಆಯ್ಕೆಯಾಗಿ ಹೋದ ಸರಕಾರದ ಶಿಶುವಾಗಿರುವ ಸಾಹಿತ್ಯ ಅಕಾಡೆಮಿ ಜನಾಭಿಪ್ರಾಯಕ್ಕೆ ಮನ್ನಣೆ ಕೊಡುವುದೇ ಇಲ್ಲವೆಂದು ಪಟ್ಟು ಹಿಡಿದರೆ ಅದನ್ನು ರಾಜ್ಯಪಾಲರು ಮತ್ತು ಕೇಂದ್ರದ ಗಮನಕ್ಕೂ ತರುವುದು ನಮ್ಮ ಮುಂದಿನ ಹೆಜ್ಜೆ. ಏನೇ ಇರಲಿ, ಸರ್ವಾಧಿಕಾರವನ್ನು ಅಂತ್ಯಗೊಳಿಸಬೇಕು; ಈ ಸರಕಾರಕ್ಕೆ ತಾನು ಜನರಿಂದ ಆಯ್ಕೆಗೊಂಡು ಹೋಗಿರುವ ಸಂಸ್ಥೆ ಎನ್ನುವುದರ ನೆನಪು ಮಾಡಿಸಬೇಕು. ಅದಾಗುವವರೆಗೆ ವಿರಮಿಸೆವು.

ರೋಹಿತ್ ಚಕ್ರತೀರ್ಥ

ಚಿತ್ರ ಸೌಜನ್ಯ: ಕರ್ನಾಟಕ ಸಾಹಿತ್ಯ ಅಕಾಡೆಮಿ ಜಾಲತಾಣ ಹಾಗೂ ಮುಕ್ತ ಅಂತರ್ಜಾಲ

24 ಟಿಪ್ಪಣಿಗಳು Post a comment
 1. Sandeep BU
  ಸೆಪ್ಟೆಂ 24 2015

  ಬರೀ ನಾವೇ ಹೋರಾಟ ಮಾಡಿದ್ರೆ ಸಾಕ?BJP RSS ಎಲ್ಲಾ ಎಲ್ಲೋದ್ರು?ಕಾಂಗ್ರೆಸ್ನೋರು ಎಲೆಕ್ಷನ್‌ ಟೈಮಲ್ಲಿ ಟೋಪಿ ಹಾಕೊಳೊ ಹಾಗೆ ಈ bjpಯವರು ಎಲೆಕ್ಷನ್‌ ಟೈಮ್ನಲ್ಲಿ ಚಡ್ಡಿ ಹಾಕಿಕೊಂಡು ಹಿಂದೂ ಪಕ್ಷ ಅಂತ ಭಾಷಣ ಮಾಡಿದ್ರೆ ಅವರಿಗೂ ಇವರಿಗೂ ಏನ್ ವ್ಯತ್ಯಾಸ? ಸಿ ಟಿ ರವಿ ಒಬ್ಬರು ಸ್ಟೇಟ್ಮೆಂಟ್ ಕೊಟ್ರೆ ಸಾಕ?

  ಉತ್ತರ
 2. ಸೆಪ್ಟೆಂ 24 2015

  ಈಹೋರಾಟವನ್ನು ರಾಜಕಿಯದಿಂದ ದೂರವಿಟ್ಟು ಪಕ್ಷಾತೀತವಾಗಿ ಮುಂದುವರಿಸಿದರೆ ಬಿಜೆಪಿ ಕೋಂಗ್ರೆಸ್ಸ್ ಎಂಬ ದೊಂಬರಾಟದಲ್ಲಿ ನಮ್ಮನ್ನು ಎಳೆಯಲಿಕ್ಕಾಗುವದಿಲ್ಲ. ಇಲ್ಲವಾದಲ್ಲಿ ನಮ್ಮನ್ನು ಒಂದ್ ರಾಜಕೀಯ ಪಕ್ಷದ ಜೊತೆ ಹೊಲಿಸಿ ಕೇಸರೆರಚಲು ಅವರಿಗೆ ಅನುಕೂಲವಾಗುವದು

  ಉತ್ತರ
 3. Deviprasad M S Gowda
  ಸೆಪ್ಟೆಂ 25 2015

  ಇತ್ತೀಚೆಗೆ ಪ್ರಚಾರಕ್ಕೋಸ್ಕರ ಕೆಲವು ಬುದ್ದಿಜೀವಿಗಳು ಹಿಂದೂ ಧಾರ್ಮಿಕ ಗ್ರಂಥಗಳ ಬಗ್ಗೆ, ಪುರಾಣ ಪುರುಷರ ಬಗ್ಗೆ ಅವಹೇಳನ ಮಾಡಿ ಅವುಗಳನ್ನು ಸುಡಬೇಕೆಂಬ ಹೇಳಿಕೆಯನ್ನು ಬಹಿರಂಗವಾಗಿ ಮಾದ್ಯಮದ ಮುಂದೆ ಹೇಳಿಕೆ ನೀಡಿದರು. ನಮ್ಮ ಮಾದ್ಯಮದವರು ಅದನ್ನು ಪದೇ ಪದೇ ಪ್ರಸಾರ ಮಾಡಿ ವೈಭವೀಕರಿಸಿದರು. ಅದನ್ನು ಆತನ ವ್ಯಕ್ತಿಗತ ಅಭಿಪ್ರಾಯ ಎಂದು ಸುಮ್ಮನಿರುವುದು ಬಿಟ್ಟು ಆತನ ವಿರುಧ್ಧ ಸಾಮಾಜಿಕ ತಾಣದಲ್ಲಿ ಎಲ್ಲರೂ ಬರೆಯತೊಡಗಿದರು. ಹಿಂದೂ ಧರ್ಮ ನಮ್ಮದು, ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಹೇಳುತ್ತಿರುವ ಎಲ್ಲರಲ್ಲಿಯೂ ಕೆಲವೊಂದು ಪ್ರಶ್ನೆ ಕೇಳಬೇಕೆನಿಸುತ್ತಿದೆ.
  1. ತಾವು ಹಿಂದೂ ಎಂದು ಹೇಳಿಕೊಳ್ಳುವ ಎಲ್ಲರ ಮನೆಯಲ್ಲಿ ಭಗವದ್ಗೀತೆ ಗ್ರಂಥ ಇದೆಯಾ? ಎಷ್ಟು ಜನ ಓದಿದ್ದಾರೆ?
  2. 18 ಪುರಾಣಗಳನ್ನು ಓದುವುದು ಬಿಡಿ ಅದರ ಹೆಸರಾದರೂ ತಿಳಿದಿದೆಯಾ?
  3. ಹಿಂದಿನ ಕಾಲದಂತೆ ವೇದ ಮತ್ತು ಉಪನಿಷತ್ತು ಓದಲು ಯಾರೂ ಅಡ್ಡಿಪಡಿಸುತ್ತಿಲ್ಲ, ಹೀಗಿದ್ದರೂ ಆ ಗ್ರಂಥಗಳ ಸಾರವಾದರೂ ತಿಳಿದಿದೆಯಾ?
  4. ರಾಮಾಯಣ ಮತ್ತು ಭಾರತ ಇನ್ನೆರಡು ಗ್ರಂಥಗಳು. ಇವು ಎಷ್ಟು ಜನರ ಮನೆಯಲ್ಲಿ ಇದೆ (ಲೇಖಕ ಯಾರೇ ಇರಲಿ), ಎಷ್ಟು ಜನರ ಮನದಲ್ಲಿ ಇದೆ?
  5. ವರ್ಣಾಶ್ರಮದ ನಿಜವಾದ ಆಶಯ, ನಿಜವಾದ ಅರ್ಥ ಎಷ್ಟು ಜನ ತಿಳಿದಿದ್ದಾರೆ?
  6. ದೈನಂದಿನ ಬದುಕನಲ್ಲಿ ಭಗವಂತನ ಚಿಂತನೆಗೆ ಎಷ್ಟು ಸಮಯ ಮೀಸಲಿಡುತ್ತಾರೆ? ಅದರ ಅವಶ್ಯಕತೆಯ ಬಗ್ಗೆ ತಿಳಿದಿದ್ದಾರೆಯಾ?
  ಸಕಾರಾತ್ಮಕ ಉತ್ತರ ಶೇಕಡಾ ಒಂದು ಕೂಡ ಇರಲಿಕ್ಕಿಲ್ಲ. ಈಗ ಹೇಳಿ, ನಿಮಗೆ ಬೇಡವಾದ ನಿಮ್ಮ ಧರ್ಮದ ಗ್ರಂಥವನ್ನು ಸುಡಬೇಕು ಎಂದು ಯಾವನೋ ಒಬ್ಬ ಹೇಳಿದರೆ ನಿಮಗಾದ ತೊಂದರೆ ಏನು?
  ಪ್ರತಿಯೊಬ್ಬ ಹಿಂದೂ ಹದಿನೆಂಟು ಪುರಾಣಗಳಲ್ಲಿ ಒಂದನ್ನು ಓದಿದರೂ ಸಾಕು, ಹಿಂದೂ ಸಮಾಜ ತನ್ನಿಂದ ತಾನೆ ಉಧ್ಧಾರವಾಗುತ್ತದೆ. ಇದು ಸನಾತನ ಧರ್ಮ, ಇದರ ಉಳಿವಿಗೆ ಹೋರಾಡುವುದು ಪ್ರತಿಯೊಬ್ಬ ಹಿಂದೂವಿನ ಕರ್ತವ್ಯವಾಗ ಬೇಕು. ಆದರೆ ಅನ್ಯ ಧರ್ಮೀಯರನ್ನು ಸದೆ ಬಡಿದು ಅಲ್ಲ, ವಿರೋಧಿಗಳನ್ನು ಧಿಕ್ಕರಿಸಿ ಅಲ್ಲ. ತನ್ನನ್ನು ತಾನು ಧಿಕ್ಕರಿಸಬೇಕು, ಅಂತರಂಗ ಶುದ್ಧಿಮಾಡ ಬೇಕು.
  ಪುರಾಣಗಳು ನಮ್ಮ ಸೃಷ್ಠಿಯ ಉದ್ದೇಶ ಏನು? ನಾವು ಹೇಗೆ ಬದುಕ ಬೇಕು? ನಮ್ಮ ದೇಹ, ಮನಸ್ಸು ಮತ್ತು ಬುದ್ದಿಯನ್ನು ಹೇಗೆ ಕಾಪಾಡುವುದು? ಎಲ್ಲವನ್ನೂ ಬಿಡಿಸಿ ಬಿಡಿಸಿ ಹೇಳಿವೆ. ಪದ್ಮಪುರಾಣವನ್ನು ಒಂದನ್ನು ಓದಿ ಅದರಂತೆ ಬದುಕಿದರೆ ಈ ಕೊಲೆ, ಸುಲಿಗೆ, ಅತ್ಯಾಚಾರ ಎಲ್ಲವೂ ಮರೆಯಾಗಬಹುದು. ನಮ್ಮ ಮಕ್ಕಳಿಗೆ ನಾವು ನಮ್ಮ ಗ್ರಂಥಗಳನ್ನು ಓದುವಂತೆ ಪ್ರೇರೇಪಿಸ ಬೇಕು. ಅವರಿಗೆ ಈ ಗ್ರಂಥಗಳನ್ನು ಎಷ್ಟೇ ಕಷ್ಟವಾದರೂ ಒದಗಿಸ ಬೇಕು. ಮನೆಯಲ್ಲಿ ದೇವರ ಕೋಣೆಯಲ್ಲಿ ಚಿಕ್ಕ ಗ್ರಂಥಾಲಯ ಮಾಡಿ ಅವರಿಗೆ ಅದರ ಬಗ್ಗೆ ಒಲವು ಮೂಡಿಸ ಬೇಕು. ಮಕ್ಕಳಿಗೇ ಯಾಕೆ ತರಬೇತಿ ನೀಡಬೇಕೆಂದರೆ, ಮಕ್ಕಳ ಮನಸ್ಸು ಅತೀ ಸೂಕ್ಷ್ಮ, ಒಳ್ಳೆಯ ವಿಚಾರಗಳನ್ನೇ ಅವರ ಮುಂದೆ ಪ್ರಸ್ತುತ ಪಡಿಸಿದರೆ ಒಳ್ಳೆಯ ದಾರಿಯಲ್ಲೇ ನಡೆಯುತ್ತಾರೆ. ಎಲ್ಲ ಮಕ್ಕಳೂ ಒಳ್ಳೆಯ ದಾರಿಯಲ್ಲಿ ನಡೆದರೆ ಮುಂದೆ ಸಮಾಜವೂ ಒಳ್ಳೆಯ ಪಥದಲ್ಲೇ ಸಾಗುತ್ತದೆ.
  ಪ್ರಚೀನ ಕಾಲದಲ್ಲಿ ಬೌಧಿಕ ಶಕ್ತಿ ಭಾರತ ದೇಶದ ಅತೀ ದೊಡ್ಡ ಶಕ್ತಿ ಆಗಿತ್ತು. ನಮ್ಮ ಶಕ್ತಿಯನ್ನು ಹುಟ್ಟಡಗಿಸಲು ಮೆಕಾಲೆ ಎಂಬ ಆಂಗ್ಲ ವ್ಯಕ್ತಿ ನಮ್ಮ ಶಿಕ್ಷಣ ವ್ಯವಸ್ತೆಯನ್ನೇ ಬದಲಾಯಿಸಿದ. ಇಂದು ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಅದು ಅನಿವಾರ್ಯವಾಗಿದೆ. ಆದರೆ ನಮ್ಮ ದುರಾದೃಷ್ಠ ಉತ್ತಮ ಪಠ್ಯಕ್ರಮವನ್ನು ಸಿದ್ದಪಡಿಸುವಾಗಲೂ ಜಾತ್ಯಾತೀತ ನೀತಿ ಅಳವಡಿಸುತ್ತಿದ್ದಾರೆ. ಒಂದು ಉದಾಹರಣೆಗೆ, ನನ್ನ ಪ್ರಾಥಮಿಕ ಶಿಕ್ಷಣದ 3 ನೇ ತರಗತಿಯಲ್ಲಿ ಕನ್ನಡ ಪಾಠದಲ್ಲಿ ಒಂದು ಹಾಡು ಇತ್ತು. ಅದನ್ನು ಸುಶ್ರಾವ್ಯವಾಗಿ ಹಾಡಲೂ ಬಹುದು. ಅದು ಬದುಕಿನಲ್ಲಿ ಸತ್ಯದ ದಾರಿಯಲ್ಲಿ ನಡೆದರೆ ಎಂದಿಗೂ ಸೋಲೆಂಬುದು ಇಲ್ಲ ಮತ್ತು ಯಾರಿಗೂ ಹೆದರಬೇಕಿಲ್ಲ ಎಂಬ ಸಂದೇಶವನ್ನು ನೀಡುತ್ತದೆ. ಮಕ್ಕಳು ಭಾವುಕರಾಗಿ ಆ ಹಾಡನ್ನು ಹಾಡಿ ನಲಿಯುತ್ತಿದ್ದರು, ಮತ್ತು ಆ ಹಾಡು ಮತ್ತು ಹಾಡಿನ ಸಂದೇಶ ಆ ಮಕ್ಕಳ ಮೇಲೆ ಅಗಾಧ ಪರಿಣಾಮ ಬೀರುತ್ತಿತ್ತು. ಆ ಹಾಡೇ ಗೋವಿನ ಹಾಡು (ಧರಣಿ ಮಂಡಲ ಮಧ್ಯದೊಳಗೆ). ಈ ಕತೆ ಪದ್ಮಪುರಾಣದಲ್ಲಿ ವಿಸ್ತಾರವಾಗಿ ಹೇಳಲಾಗಿದೆ. ಇದು ನಂದಾ ಎನ್ನುವ ಗೋವು ಮತ್ತು ಹುಲಿಯ (ಪ್ರಭಂಜನ ಎನ್ನುವ ಶಾಪಗ್ರಸ್ತ ರಾಜನ) ಕತೆ. ಇದನ್ನು ಯಾವನೋ ಒಬ್ಬ ಕವಿ ಕನ್ನಡದಲ್ಲಿ ಹಾಡಾಗಿ ಬರೆದ, ಅದನ್ನು ನಮ್ಮ ಪ್ರಾಥಮಿಕ ಶಿಕ್ಷಣ ಇಲಾಖೆ ಪಠ್ಯ ಕ್ರಮದಲ್ಲಿ ಸೇರಿಸಿತು. ಯಾಕೆಂದರೆ ಇದರಲ್ಲಿ ಮಕ್ಕಳಿಗೆ ಅರ್ಥವಾಗುವ ಹಾಗೆ ಸತ್ಯದ ಮಹತ್ವ ತಿಳಿಸಲಾಗಿತ್ತು. ಆದರೆ ನಮ್ಮ ಸರಕಾರ ಆ ಹಾಡು ಜಾತ್ಯಾತೀತ ನೀತಿಗೆ ವಿರುದ್ಧವಾಗಿದೆ ಎಂಬ ಕಾರಣ ನೀಡಿ ಅದನ್ನು ಪಠ್ಯಕ್ರಮದಿಂದ ತೆಗೆದು ಹಾಕಿತು. ನಮ್ಮ ಸರಕಾರಗಳಿಗೆ ಮಕ್ಕಳಿಗೆ ಬದುಕಿನ ನೀತಿ ಹೇಳುವುದಕ್ಕಿಂತಲೂ ಜಾತ್ಯಾತೀತ ನೀತಿಯೇ ಮುಖ್ಯವಾದಾಗ ನಮ್ಮ ಮಕ್ಕಳಿಗೆ ನೀತಿ ಪಾಠದ ಬೋಧನೆ ನಾವೇ ಮಾಡ ಬೇಕಲ್ಲವೇ?
  ಇಂದು ನಮ್ಮ ಹಿಂದೂ ಸಮಾಜ ನಮ್ಮ ಬೌದ್ಧಿಕ ಆಸ್ತಿಯನ್ನು ಮರೆಯುತ್ತಿದೆ. ಕೇವಲ ಹತ್ತು ಜನದ ಮುಂದೆ ಭಾಷಣ ಬಿಗಿಯಲು ತನ್ನ ಬುದ್ಧಿವಂತಿಗೆ ಪ್ರದರ್ಶನ ಮಾಡಲು, ಚಪ್ಪಾಲೆ ಗಿಟ್ಟಿಸಲು ಟೀ.ವೀ, ಪತ್ರಿಕೆಯಲ್ಲಿ ಉಧ್ಗೋಷಿತವಾಗುವ ಕೆಲವೊಂದು ಶ್ಲೋಕ (ಅರ್ಥ ತಿಳಿಯದಿದ್ದರೂ) ತಪ್ಪು ತಪ್ಪಾಗಿ ಉಚ್ಚರಿಸಿ ಅರ್ಥ ಹೇಳಿ ತಾನು ಎಲ್ಲವನ್ನೂ ಅರೆದು ಕುಡಿದಿದ್ದೇನೆ, ತಾನು ಮಹಾ ಬುದ್ಧಿವಂತ ಎಂದು ತೋರ್ಪಡಿಸಿಕೊಳ್ಳುವುದನ್ನು ನೋಡಿ ಹೇಸಿಗೆ ಅನಿಸುತ್ತದೆ. ಇನ್ನು ದೂರದರ್ಶನದಲ್ಲಿ ಪ್ರಸಾರವಾಗುವ ನಮ್ಮ ಪುರಾಣ ಆದಾರಿತ ಸೀರಿಯಲ್ನಲ್ಲಿ ರವಾನೆಯಾಗುವ ತಪ್ಪು ಸಂದೇಶವನ್ನೇ ನಿಜವಾದ ಸತ್ಯ ಎನ್ನುವ ಮಟ್ಟಿಗೆ ನಮ್ಮ ಸಮಾಜಕ್ಕೆ ಮಂಕು ಕವಿದಿದೆ. ರಮಾನಂದ ಸಾಗರಂತಹ ವ್ಯಕ್ತಿಗಳು ಗ್ರಂಥಗಳನ್ನು ಓದಿ ಸಂಶೋಧನೆ ಮಾಡಿ ರಾಮಾಯಣದಂತಹ ಮಹಾಕಾವ್ಯಗಳನ್ನು (ಮೂಲ ಕತೆಯಲ್ಲಿರುವಂತೆಯೇ ) ಕಿರುತೆರೆಗೆ ತಂದಿದ್ದರು. ಇಂದು ಅಂಥಹ ವ್ಯಕ್ತಿಗಳಿಲ್ಲ. ಕೇವಲ ಹಣಗಳಿಕೆಯೇ ಎಲ್ಲರ ಉದ್ದೇಶವಾಗಿದೆ.
  ಇಂತಹ ವಿಷಯಗಳನ್ನು ಪಟ್ಟಿಮಾಡುತ್ತಾ ಹೋದರೆ ಅದಕ್ಕೆ ಅಂತ್ಯವಿಲ್ಲ. ಇದನ್ನು ಅಂತ್ಯಮಾಡಬೇಕಾದರೆ ನಾವು ಮಾಡ ಬೇಕಾದ ಕಾರ್ಯಗಳನ್ನು ಈ ಕೆಳಗಿನಂತೆ ಪಟ್ಟಿಮಾಡಿದ್ದೇನೆ. ಮತ್ತು ನಾನು ಅವುಗಳನ್ನು ಅಳವಡಿಸಿಕೊಂಡು ಸಾಗುತ್ತಿದ್ದೇನೆ.
  1. ನಮ್ಮ ಪುರಾಣಗಳು, ಭಾರತ ಮತ್ತು ರಾಮಾಯಣ ಕಾವ್ಯವನ್ನು ಇಂದೇ ಓದಲು ಆರಂಭಿಸುವುದು.
  2. ಮನೆಯಲ್ಲಿ ಚಿಕ್ಕ ಗ್ರಂಥಾಲಯ ಮಾಡುವುದು.
  3. ನಮ್ಮ ಮಕ್ಕಳನ್ನು ಸತ್ಸಂಗಕ್ಕೆ ಕರೆದುಕೊಂಡು ಹೋಗುವುದು.
  4. ಮಕ್ಕಳಿಂದ ಪ್ರತಿದಿನ ಮನೆಯಲ್ಲಿ ಭಜನೆ, ಕೀರ್ತನೆ ಮಾಡಿಸುವುದು.
  5. ನಮ್ಮ ಮಕ್ಕಳಿಗೆ ಮಾತೃ ಭಾಷೆಯಲ್ಲಿಯೇ ಶಿಕ್ಷಣ ನೀಡುವುದು ( ಯಾಕೆಂದರೆ ಮಾತೃ ಭಾಷೆಯಲ್ಲಿ ಎಲ್ಲಾ ಕತೆ, ಪುರಾಣಗಳು ಸುಲಭವಾಗಿ ಅರ್ಥವಾಗುತ್ತದೆ)
  6. ನಮ್ಮ ಸಂಪಾದನೆಯನ್ನು ಇತರರ ಜೊತೆ ಸಮೀಕರಿಸಿ ನೋಡುವುದನ್ನು ಬಿಟ್ಟು ದೇವರು ದಯಪಾಲಿಸಿದ್ದನ್ನು ವಿನಮ್ರವಾಗಿ ಸ್ವೀಕರಿಸುವುದು.
  7. ಸಾದ್ಯವಾದಷ್ಟು ಯಾವುದೇ ವ್ಯಾಪಾರ ವ್ಯವಹಾರಗಳನ್ನು ಹಿಂದೂಗಳೊಂದಿಗೆ ಮಾತ್ರ ಮಾಡುವುದು (1 ರೂಪಾಯಿ ನಮಗೆ ನಷ್ಟವಾದರೂ ಪರವಾಗಿಲ್ಲ)
  8. ಹಿಂದೂ ಧರ್ಮೀಯರ ಬಗ್ಗೆ ಹೆಚ್ಚು ಒಲವಿರುವಂತಹವರಿಗೆ, ಮತ್ತು ಅಂತಹ ಪಕ್ಷಕ್ಕೆ ಮತನೀಡುವುದು ( ಎಲ್ಲಾ ಚುನಾವಣೆಗಳಲ್ಲಿ)

  ಉತ್ತರ
  • ಸೆಪ್ಟೆಂ 25 2015

   ಬಹಳ ಉನ್ನತ ಆಲೋಚನೆ ನಿಮ್ಮದು.
   ಇಲ್ಲಿ ಒಂದು ವಿಚಾರ ಗಮನಿಸಿ :
   ಈ ಅವಹೇಳನ ಸುಮ್ಮನೆ ಮಾಡುಉತ್ತಿರುವುಲ್ಲ. ಇದರ ಹಿಂದೆ ದುರುದ್ದೇಶದ ಒಂದು ದೊಡ್ಡ ಲಾಬಿ ಇದೆ.
   ಹಿಂದೂ ಸಮಾಜವನ್ನು ಒಡೆದು,ಗೊಂದಲ ಮೂಡಿಸಿ ಇಡೀ ಭಾರತದಲ್ಲಿ ಕ್ಷೋಭೆ ಮೂಡಿಸುವ ಹುನ್ನಾರ ಇದೆ.

   ನಮ್ಮ ಆಂತರ್ಯದಲ್ಲಿ ನೀವು ಹೇಳಿದ ಸಾತ್ವಿಕ ಮಾರ್ಗ ಅನುಸರಿಸುವ ಅವಶ್ಯಕತೆ ಎಷ್ಟಿದೆಯೋ ಬಹಿರಂಗದಲ್ಲಿ ಬೌದ್ಧಿಕ ವಾಗಿ ಈ ವಧ್ವಂಸಕರ ಅಟ್ಟಹಾಸವನ್ನು ಮಟುಕುವುದೂ ಅಷ್ಟೇ ಅವಶ್ಯಕ.
   ಬೌದ್ಧಿಕ ಕ್ಷತ್ರಿಯರಾಗಬೇಕಿದೆ.

   ಉತ್ತರ
   • Deviprasad M S Gowda
    ಸೆಪ್ಟೆಂ 25 2015

    ಬಹುತೇಕ ಹಿಂದುಗಳು ಹಿಂದೂ ಪರ ಹೋರಾಟವನ್ನು ಹೋರಾಟಗಾರರನ್ನು ಅಂತರಂಗದಲ್ಲಿ ಇಷ್ಟಪಡುತ್ತಾರೆ. ಆದರೆ ಬಹಿರಂಗವಾಗಿ ಯಾರೂ ತುಟಿ ಪಿಟಕ್ ಎನ್ನುವುದಿಲ್ಲ. ಕಾರಣ ನಮ್ಮ ಕಾನೂನು. ಹೋರಾಟಗಾರರನ್ನು ದಮನಿಸುವ ರೀತಿಯನ್ನು ನೋಡಿ ಯಾರೂ ಆ ಸಾಹಸಕ್ಕೆ ಕೈ ಹಾಕುವುದಿಲ್ಲ.
    ನಿಮ್ಮ ಹೋರಾಟದ ಜೊತೆಗೆ ಪ್ರತಿ ಮನೆಗೆ ಭಗವದ್ಗೀತೆ ಅಥವಾ ರಾಮಾಯಣ ಗ್ರಂಥವನ್ನು ಹಂಚುವ ಅಭಿಯಾನವನ್ನು ಕೂಡಾಮಾಡಿ. ಅನುಕೂಲಸ್ಥರಲ್ಲಿ ಅವರಿಗೆ ಮನವರಿಕೆ ಮಾಡಿ ಪುಸ್ತಕದ ಹಣ ಪಡೆದುಕೊಳ್ಳಿ. ಸಾದಾರಣ ಅನುಕೂಲಸ್ತರಲ್ಲಿ ಪುಸ್ತಕದ ಮುಖಬೆಲೆಯ ಅರ್ದದಷ್ಟು ಹಣ ಪಡೆದುಕೊಳ್ಳಿ. ಬಡವರಿಗೆ ಮತ್ತು ಉದಾರವಾಗಿ ನೀಡಿ. ಮೊದಲು ಒಂದು ಚಿಕ್ಕ ಗ್ರಾಮವನ್ನು ಆಯ್ಕೆ ಮಾಡಿ ಒಂದೆರಡು ತಿಂಗಳ ನಂತರ ಅದರ ಪರಿಣಾಮ ನೋಡಿ. ಸಂಪನ್ಮೂಲಕ್ಕಾಗಿ ಯಾವುದಾದರೂ ಮಠವನ್ನು ಸಂಪರ್ಕಿಸಿ. 10 ಮಠಗಳಲ್ಲಿ ಒಂದಾದರೂ ಸಹಕಾರ ಮಾಡಬಹುದು ಎಂಬ ನಂಬಿಕೆ ನನಗಿದೆ.
    ಶುಭವಾಗಲಿ

    ಉತ್ತರ
    • ಸೆಪ್ಟೆಂ 25 2015

     ನೀವು ಮೇಲೆ ಪಟ್ಟಿ ಮಾಡಿರುವ ೭ ಕಾರ್ಯಗಳನ್ನು ವಿದೇಶದಲ್ಲಿದ್ದುಕೊಂಡು ಮಾಡುತ್ತಿದ್ದೇನೆ. ನಮ್ಮ ಕನ್ನಡ ಸಂಘದಲ್ಲಿಯೂ ಮಾಡಲು ಪ್ರೇರೇಪಣೆ ನೀಡುತ್ತಿದ್ದೇವೆ. ಕಾರ್ಯ ಕಠಿಣ. ಬಹುತೇಕರಿಗೆ ಧೈರ್ಯವೇ ಇಲ್ಲ,ಅಭಿಮಾನವೂ ಇಲ್ಲ.ಇದರ ಮೇಲೆ ಕೀಳರಿಮೆ ಬೇರೆ.
     ನೀವು ಈ ನಿಟ್ಟಿನಲ್ಲಿ ಮಾಡುವ ಕೆಲಸಕ್ಕೆ ನೇರವಾಗಿಯಲ್ಲದಿದ್ದರೂ ಪರೋಕ್ಷವಾಗಿ ಕೈ ಜೋಡಿಸಬಲ್ಲೆ.su

     ಉತ್ತರ
 4. ಸೆಪ್ಟೆಂ 25 2015

  this is really untolerable, who is he to bite our hindu gods ? we learnt lot from our yelders regarding moral. we respect allways the right path. we are living on this earth to share love and good things with others. this is because of ramayana & mahabharat. I personally condemn the attitube of bledy k.s. bhagavan

  ಉತ್ತರ
 5. Deviprasad M S Gowda
  ಸೆಪ್ಟೆಂ 25 2015

  ಬಹುತೇಕ ಹಿಂದುಗಳು ಹಿಂದೂ ಪರ ಹೋರಾಟವನ್ನು ಹೋರಾಟಗಾರರನ್ನು ಅಂತರಂಗದಲ್ಲಿ ಇಷ್ಟಪಡುತ್ತಾರೆ. ಆದರೆ ಬಹಿರಂಗವಾಗಿ ಯಾರೂ ತುಟಿ ಪಿಟಕ್ ಎನ್ನುವುದಿಲ್ಲ. ಕಾರಣ ನಮ್ಮ ಕಾನೂನು. ಹೋರಾಟಗಾರರನ್ನು ದಮನಿಸುವ ರೀತಿಯನ್ನು ನೋಡಿ ಯಾರೂ ಆ ಸಾಹಸಕ್ಕೆ ಕೈ ಹಾಕುವುದಿಲ್ಲ.
  ನಿಮ್ಮ ಹೋರಾಟದ ಜೊತೆಗೆ ಪ್ರತಿ ಮನೆಗೆ ಭಗವದ್ಗೀತೆ ಅಥವಾ ರಾಮಾಯಣ ಗ್ರಂಥವನ್ನು ಹಂಚುವ ಅಭಿಯಾನವನ್ನು ಕೂಡಾಮಾಡಿ. ಅನುಕೂಲಸ್ಥರಲ್ಲಿ ಅವರಿಗೆ ಮನವರಿಕೆ ಮಾಡಿ ಪುಸ್ತಕದ ಹಣ ಪಡೆದುಕೊಳ್ಳಿ. ಸಾದಾರಣ ಅನುಕೂಲಸ್ತರಲ್ಲಿ ಪುಸ್ತಕದ ಮುಖಬೆಲೆಯ ಅರ್ದದಷ್ಟು ಹಣ ಪಡೆದುಕೊಳ್ಳಿ. ಬಡವರಿಗೆ ಮತ್ತು ಉದಾರವಾಗಿ ನೀಡಿ. ಮೊದಲು ಒಂದು ಚಿಕ್ಕ ಗ್ರಾಮವನ್ನು ಆಯ್ಕೆ ಮಾಡಿ ಒಂದೆರಡು ತಿಂಗಳ ನಂತರ ಅದರ ಪರಿಣಾಮ ನೋಡಿ. ಸಂಪನ್ಮೂಲಕ್ಕಾಗಿ ಯಾವುದಾದರೂ ಮಠವನ್ನು ಸಂಪರ್ಕಿಸಿ. 10 ಮಠಗಳಲ್ಲಿ ಒಂದಾದರೂ ಸಹಕಾರ ಮಾಡಬಹುದು ಎಂಬ ನಂಬಿಕೆ ನನಗಿದೆ.
  ಶುಭವಾಗಲಿ

  ಉತ್ತರ
 6. nagaraja shetty
  ಸೆಪ್ಟೆಂ 26 2015

  ಭಗವಾನರು ಗೀತೆಯ ಯಾವುದೋ ಕೆಲವು ಪುಟಗಳನ್ನು ಸುಡಬೇಕೆಂದು ಹೇಳಿದ್ದಕ್ಕೆ ಅತಿಯಾದ ರಾದ್ಧಾಂತ ಎಬ್ಬಿಸಬೇಕಾದ ಅಗತ್ಯವಿಲ್ಲ. ಅವರೇನೂ ಬೇರೆಯವರ ಮನೆಯಲ್ಲಿರುವ ಅಥವಾ ಅಂಗಡಿಯಲ್ಲಿರುವ ಭಗವದ್ಗೀತೆ ಸುಡಬೇಕೆಂದು ಹೇಳಿಲ್ಲ. ಹೀಗಿರುವಾಗ ಯಾರಿಗೆ ಏನು ತೊಂದರೆ? ಅವರು ಭಗವದ್ಗೀತೆ ಓದುವವರ ಮೇಲೆ ಹಲ್ಲೆ ಮಾಡಲು ಅಥವಾ ಕೊಲೆ ಮಾಡಲು ಹೋಗಿಲ್ಲ ತಾನೇ?

  ಉತ್ತರ
  • ಸೆಪ್ಟೆಂ 26 2015

   First he said he woukd burn the book
   Next he changed to few pages
   He continues his baseless assault on the religion
   He started painting our scriptures with bad brush
   All this is not with good intention:
   1. To gain personal favours
   2. To divide the society

   They are all part of a bigger agenda fuelled by the divisive forces.
   Read: Breaking India by Rajiv Malhotra, it is available in Kannada as BHARaTA BHSNJANA.

   They are being paid, supported to push the agendas.
   The Christian NGOs and missionaries know very well that if they break people’s convictions on RAMAYANA, MAHABHARATA AND BHAGAVADGITA, then it is easy to turn them away from their religion.

   Wake up guys. Do not just see the surface, scratch a bit, you will see the filth.s

   ಉತ್ತರ
   • nagaraja shetty
    ಸೆಪ್ಟೆಂ 26 2015

    ದಲಿತ ಹಾಗೂ ಶೋಷಿತರ ಪರ (ಶೂದ್ರ ಪರ) ಹೋರಾಟದಲ್ಲಿ ಪೆರಿಯಾರ್ ರಾಮಸ್ವಾಮಿಯವರು ರಾಮನ ಚಿತ್ರವನ್ನು ಸಾರ್ವಜನಿಕವಾಗಿ ೧೯೫೫ರಲ್ಲಿ ಸುಟ್ಟು ಹಾಕಿ ಬಂಧನಕ್ಕೊಳಗಾದರು. ವರ್ಣಾಶ್ರಮ ಪದ್ಧತಿಯನ್ನು ವಿರೋಧಿಸಿ ಹಾಗೂ ಶೂದ್ರರ (ದ್ರಾವಿಡರ) ಜಾಗೃತಿಗಾಗಿ ಪೆರಿಯಾರ್ ಅವರು ವೈದಿಕ ದೇವರುಗಳಾದ ರಾಮ ಹಾಗೂ ಕೃಷ್ಣರ ಚಿತ್ರಗಳನ್ನು ಕಾಲಿನಿಂದ ತುಳಿದು ಶೂದ್ರರಲ್ಲಿ ಅವರ ಮೂಲಧರ್ಮದ ಬಗ್ಗೆ ಜಾಗೃತಿ ಮೂಡಿಸಿದರು. ಪೆರಿಯಾರ್ ಅವರ ಪತ್ನಿ ಮಣಿಯಮ್ಮಾಯಿ ೧೯೭೩ರಲ್ಲಿ ರಾಮಲೀಲಾ ಆಚರಣೆಯಲ್ಲಿ ರಾವಣ, ಕುಂಭಕರ್ಣ, ಇಂದ್ರಜಿತು (ಇವರು ಬುಡಕಟ್ಟು ದ್ರಾವಿಡರ ದೇವರುಗಳು) ಅವರ ಪ್ರತಿಕೃತಿಗಳನ್ನು ಸುಡುವ ಪದ್ಧತಿಗೆ ಪ್ರತಿಯಾಗಿ ರಾಮ, ಲಕ್ಷ್ಮಣ, ಸೀತೆಯ ಪ್ರತಿಕೃತಿಗಳನ್ನು ಸುಟ್ಟು ದ್ರಾವಿಡ ಹಾಗೂ ಶೂದ್ರರಲ್ಲಿ ತಮ್ಮ ಧರ್ಮದ ಬಗ್ಗೆ ಜಾಗೃತಿ ಮೂಡಿಸಿ ಬಂಧನಕ್ಕೊಳಗಾದರು.

    ಅಂಬೇಡ್ಕರ್ ಅವರು ತಾವು ಹಿಂದೂ ಧರ್ಮವನ್ನು ತೊರೆದು ಬೌದ್ಧ ಧರ್ಮವನ್ನು ಸೇರಿದಾಗ “ಹಿಂದೂ ಧರ್ಮ ಮಾನವೀಯತೆಯ ವಿರೋಧಿ. ಅದು ಮಾನವೀಯತೆಯ ಬೆಳವಣಿಗೆಯನ್ನೂ ಸಹಿಸುವುದಿಲ್ಲ. ಕಾರಣ ಹಿಂದೂ ಧರ್ಮ ಅಸಹಾಯಕತೆಯ ಸೌಧದ ಮೇಲೆ ನಿಂತಿದೆ. ಹಾಗಾಗಿ ನಾನು ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದೇನೆ” ಹೇಳಿದರು ಹಾಗೂ ಇದು ಅವರು ಆ ಸಂದರ್ಭದಲ್ಲಿ ತೆಗೆದುಕೊಂಡ ಪ್ರತಿಜ್ಞೆಯ ಒಂದು ಅಂಶವಾಗಿತ್ತು. ಇದನ್ನೆಲ್ಲಾ ಯಾವುದೋ ಬೇರೆ ಧರ್ಮಗಳ ಜನರ ಚಿತಾವಣೆಯಿಂದ ಅವರು ಮಾಡಿದ್ದಲ್ಲ. ಶೂದ್ರ ಹಾಗೂ ದಲಿತರಲ್ಲಿ ಜಾಗೃತಿಗಾಗಿ ಮಾಡಿದ್ದು. ಇಂಥ ಹೋರಾಟದ ಭಾಗವಾಗಿಯೇ ಭಗವಾನರ ಕೃತಿಗಳು ಮೂಡಿಬಂದಿವೆ. ಇವು ದಲಿತ ಹಾಗೂ ಶೂದ್ರರ ಆತ್ಮಜಾಗೃತಿಯನ್ನು ಜಾಗೃತಿಗೊಳಿಸಲು ಮೂಡಿಬಂದಿವೆ ಹಾಗೂ ವೈಚಾರಿಕ ಜಾಗೃತಿಯನ್ನು ಮೂಡಿಸುತ್ತವೆ. ಹಿಂದೂಗಳು ಇದಕ್ಕೆಲ್ಲಾ ಬೊಬ್ಬೆ ಹೊಡೆಯುವ ಬದಲು ತಮ್ಮ ಧರ್ಮದಲ್ಲಿರುವ ಕೆಟ್ಟ ಅಂಶಗಳ ಬಗ್ಗೆ ಸ್ವವಿಮರ್ಶೆ ಮಾಡಿಕೊಳ್ಳಬೇಕಾದ ಅಗತ್ಯ ಇದೆ.

    ಉತ್ತರ
  • ಸೆಪ್ಟೆಂ 28 2015

   ನಿಜ ನಾಗರಾಜ ಅವರೆ,,,, ಭಗವಾನ್‌ ಹೇಳಿದ್ದು ಬೇರೆಯವರ ಮನೆಯಲ್ಲಿರುವ ಅಥವಾ ಅಂಗಡಿಯಲ್ಲಿರುವ ಭಗವದ್ಗೀತೆ ಸುಡಬೇಕೆಂದು ಹೇಳಿಲ್ಲ. ಭಗವದ್ಗೀತೆ ಸುಡಬೇಕು ಎಂದು ಹೇಳಿದ್ದಾರೆ. ಆದರೆ ಇಲ್ಲಿ ಒಂದು ವಿಷಯ ಗಮನಿಸಿ ಭಗವದ್ಗೀತೆ ಎನ್ನುವುದು ಅವರ ಮನೆಯ ಸೊತ್ತಲ್ಲ. ಸುಟ್ಟು ಹಾಕಿ ಎಂದು ಹೇಳಲು. ಅದು ಬಹುಸಂಖ್ಯಾತ ಸಮುದಾಯ ನಂಬಿರುವ ಪವಿತ್ರ ಗ್ರಂಥ. ನಾಳೆ ಎನ್ನೊಬ್ಬ ಸಾರ್ವಜನಿಕವಾಗಿ ಕೆಲವು ಸಮುದಾಯಕ್ಕೆ ಕರೆ ನೀಡುತ್ತಾರೆ ನಿಮ್ಮಲ್ಲಿರುವ ಖುರಾನ್‌ ಅಥವಾ ಬೈಬಲ್‌ ಸುಟ್ಟುಹಾಕಿ ಅದು ಸರಿಯಿಲ್ಲ ಎಂದು. ಆಗ ಉಂಟಾಗುವ ಪರಿಣಾಮದ ಬಗ್ಗೆ ವಿಚಾರ ಮಾಡಿದ್ದೀರಾ..? ಹಿಂದೂಗಳು ವಿರೋಧಿಸಿದರೆ ಟೀಕೆ. ಆದರೆ ಅವರ ವಿರುದ್ಧ ಮಾತನಾಡಿದರೆ ಕೋಮುವಾದ. ಇದೇನಾ ಸಾಮಾಜಿಕ ನ್ಯಾಯ..? ಒಬ್ಬ ಬುದ್ಧಿಜೀವಿ ಅಥವಾ ವಿಚಾರವಾದಿ ಎಂದುಕೊಂಡವನು ಸಮಾಜದಲ್ಲಿ ಅಶಾಂತಿಗೆ ಕಾರಣವಾಗಬಾರದು. ಬದಲಾಗಿ ಸ್ವಾಸ್ಥ್ಯ ಸಮಾಜದ ನಿಮಾರ್ಣಕ್ಕೆ ಶ್ರಮಿಸಬೇಕು. ಈ ರೀತಿಯ ಅಸಂಭದ್ದ ಹಾಗೂ ಸಮಾಜದ ಅಶಾಂತಿಗೆ ಕಾರಣಗಾಗುವಂಥ ಹೇಳಿಕೆ ನೀಡಬಾರದು.

   ಉತ್ತರ
 7. shivarama bhat
  ಸೆಪ್ಟೆಂ 26 2015

  ತಮಗೆ ಸಮ್ಮತವಲ್ಲದ ವಿಚಾರಗಳನ್ನು ಪ್ರತಿಪಾದಿಸುವವರಿಗೆ ಪ್ರಶಸ್ತಿ ಕೊಡಬಾರದು, ಕೊಟ್ಟ ಪ್ರಶಸ್ತಿಯನ್ನು ಹಿಂದೆಗೆದುಕೊಳ್ಳಬೇಕು ಎಂದು ಅಂತರ್ಜಾಲದಲ್ಲಿ ಪಿಟಿಷನ್ ಹಾಕಿರುವುದು ಒಂದು ಅತ್ಯಂತ ಕೆಟ್ಟ ಬೆಳವಣಿಗೆ. ಇಂಥ ಕೆಟ್ಟ ಪರಂಪರೆ ಇದುವರೆಗೆ ಕನ್ನಡದಲ್ಲಿ ಕಂಡುಬಂದಿರಲಿಲ್ಲ. ಇದು ವೈಚಾರಿಕ ಅಸಹನೆಯನ್ನು ತೋರಿಸುತ್ತದೆ ಹಾಗೂ ಭವಿಷ್ಯದಲ್ಲಿ ಬೇರೆಯವರಿಗೂ ತಮಗೆ ಸಮ್ಮತವಲ್ಲದ ವಿಚಾರಗಳನ್ನು ಪ್ರತಿಪಾದಿಸುವ ಸಾಹಿತಿಗಳಿಗೆ ಪ್ರಶಸ್ತಿ ಬಂದಾಗ ಇದೇ ರೀತಿಯ ಪಿಟಿಷನ್ ಹಾಕುವಿಕೆಗೆ ಮಾರ್ಗದರ್ಶನ ಹಾಕಿಕೊಟ್ಟಂತೆ ಆಗುತ್ತದೆ. ಇಂಥ ಕೆಟ್ಟ ಪರಂಪರೆಗೆ ನಿಲುಮೆ ವೇದಿಕೆ ಒದಗಿಸಿರುವುದು ವಿಷಾದನೀಯ.

  ಉತ್ತರ
  • ಸೆಪ್ಟೆಂ 28 2015

   ಆತ್ಮೀಯ ಶಿವರಾಮ್‌ ಭಟ್ ಅವರೆ, ನಿಮ್ಮ ಅಭಿಪ್ರಾಯ ನೋಡಿ ನನಗೆ ವಿಚಿತ್ರ ವೆನಿಸುತ್ತಿದೆ. ನಿಮ್ಮ ಪ್ರಕಾರ ಒಂದು ಕೋಮಿನ ಧಾರ್ಮಿಕ ಭಾವನೆಗೆ ದಕ್ಕೆ ತಂದು, ಸಮಾಜದಲ್ಲಿ ಅಶಾಂತಿ ಹುಟ್ಟು ಹಾಕುವಂತೆ ಮಾಡುವುದು ಸರಿಯೇ..? ನಿಮ್ಮ ಪ್ರಕಾರ ಕೇವಲ ಎಡಪಂತೀಯರು ಮಾತ್ರ ತಮ್ಮ ಮನಸ್ಸಿಗೆ ಬಂದಂತೆ ಹೇಳಿಕೆ ನೀಡಬಹುದೇ..? ನಿಮಗೆ ಈ ಸಂದರ್ಭದಲ್ಲಿ ಒಂದು ಘಟನೆಯನ್ನು ನೆನಪು ಮಾಡಿಕೊಡಲು ಇಷ್ಟಪಡುತ್ತೇನೆ. ಈ ಹಿಂದೆ ಖ್ಯಾತ ಸಾಹಿತಿಗಳಲ್ಲೊಬ್ಬರಾದ ಎಸ್‌ ಎಲ್‌ ಭೈರಪ್ಪ ಅವರಿಗೆ ಏಕೆ ಯಾವುದೇ ಪ್ರಶಸ್ತಿ ನೀಡಿಲ್ಲ. ಎಸ್‌ ಎಲ್‌ ಭೈರಪ್ಪ ಅವರ ಆವರಣ ಕೃತಿ ಬಂದಾಗ ಏನಾಯಿತು ಎನ್ನುವುದು ನೆನಪಿಲ್ಲವೇ..? ಆವರಣ ಕೃತಿಯನನ್ನೇ ನಿಷೇಧಿಸಲಾಯಿತು. ಎಲ್‌ ಎಲ್‌ ಭೈರಪ್ಪ ಕೇವಲ ಬಲಪಂಥೀಯ ನಿಲುವು ಹೊಂದಿದ್ದಾರೆ ಎನ್ನುವ ಕಾರಣಕ್ಕೆ ನಿಷೇಧಿಸಲಾಯಿತು. ಪ್ರಶಸ್ತಿ ಎನ್ನುವುದು ಕೇವಲ ಎಡಪಂಥೀಯ ನಿಲುವಿಗೆ ಮಾತ್ರ ಸೀಮಿತವೇ..? ಎಸ್‌ ಎಲ್‌ ಬೈರಪ್ಪ ಬಲಪಂಥೀಯ ನಿಲುವು ಹೊಂದಿರುವುದರಿಂದಲೇ ಅವರನ್ನು ಜ್ಞಾನಪೀಠ ಪ್ರಶಸ್ತಿಯೂ ಪರಿಗಣಿಸದೇ ಕಡೆಗಣಿಸಲಾಗಿದೆಯಲ್ಲ. ಭಗವಾನ್‌ಗೆ ಪ್ರಶಸ್ತಿ ನೀಡುವುದಾದರೆ ಎಸ್‌ ಎಲ್‌ ಬೈರಪ್ಪ ಅವರಿಗೇಕಿಲ್ಲ. ಈಗ ನೀವೇ ಹೇಳಿ ಯಾವುದು ಕೆಟ್ಟ ಪರಂಪರೆ..?

   ಉತ್ತರ
   • shivarama bhat
    ಆಕ್ಟೋ 1 2015

    ಸಾಹಿತ್ಯ ಅಕಾಡೆಮಿ ಎಂಬುದು ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು ಪ್ರಶಸ್ತಿಗೆ ಸಾಹಿತಿಗಳನ್ನು ಆಯ್ಕೆ ಮಾಡುವಾಗ ನಿರ್ದಿಷ್ಟ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಭಗವಾನ್ ಅವರಿಗೆ ಪ್ರಶಸ್ತಿ ಕೊಟ್ಟದ್ದು ರಾಜಕೀಯ ಒತ್ತಡ, ಶಿಫಾರಸುಗಳಿಗೆ ಮಣಿದು ಅಲ್ಲ. ಪ್ರಶಸ್ತಿಗೆ ಅರ್ಹ ಸಾಹಿತಿಗಳ ಹೆಸರು ಸೂಚಿಸುವಂತೆ ೨೫ ಹಿರಿಯ ಸಾಹಿತಿಗಳನ್ನು ಕೇಳಿಕೊಳ್ಳಲಾಗಿತ್ತು ಹಾಗೂ ಅತಿ ಹೆಚ್ಚು ಸಾಹಿತಿಗಳು ಭಗವಾನ್ ಅವರ ಹೆಸರು ಸೂಚಿಸಿದ್ದರು ಎಂದು ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ. ವಡ್ಡಗೆರೆ ನಾಗರಾಜಯ್ಯ ತಮ್ಮ ಲೇಖನದಲ್ಲಿ ತಿಳಿಸಿದ್ದಾರೆ (http://vbnewsonline.com/Writer/198588/). ಅಕಾಡಮಿ ಸರ್ವ ಸದಸ್ಯರ ಸಭೆಯಲ್ಲಿ ನಡೆದ ಚರ್ಚೆಗಳಲ್ಲಿಯೂ ಹಿರಿಯ ಸಾಹಿತಿ ಭಗವಾನರ ಸಾಹಿತ್ಯ ಸಾಧನೆಯ ಕುರಿತು ಒಮ್ಮತದ ಸಾಮೂಹಿಕ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಸದರಿ ಹೆಸರನ್ನು ಅಂತಿಮಗೊಳಿಸಲಾಯಿತು. ಹೀಗಾಗಿ ತಮಗೆ ಇಷ್ಟವಿಲ್ಲದ ಸಾಹಿತಿ ಎಂದು ಸಾಹಿತ್ಯ ಅಕಾಡೆಮಿಯನ್ನು ಕೀಳುಗರೆಯುವುದು ಒಳ್ಳೆಯ ಲಕ್ಷಣವಲ್ಲ. ಅಂತರ್ಜಾಲದಲ್ಲಿ ಪ್ರಶಸ್ತಿ ವಾಪಾಸ್ ಪಡೆಯಬೇಕು ಎಂದು ಅಂತರ್ಜಾಲದಲ್ಲಿ ಪಿಟಿಷನ್ ಹಾಕುವುದು ಆರೋಗ್ಯಕರ ಬೆಳವಣಿಗೆ ಅಲ್ಲ.

    ಜ್ಞಾನಪೀಠ ಪ್ರಶಸ್ತಿ ಎಂಬುದು ಸರ್ಕಾರ ನೀಡುವ ಪ್ರಶಸ್ತಿ ಅಲ್ಲ. ಅದು ಖಾಸಗಿ ಉದ್ಯಮಿಯೊಬ್ಬರು ಸ್ಥಾಪಿಸಿದ ಟ್ರಸ್ಟ್ ನೀಡುವ ಪ್ರಶಸ್ತಿ. ಅದರಲ್ಲಿ ಆಯ್ಕೆ ಪ್ರಕ್ರಿಯೆಗೆ ಅವರದ್ದೇ ಆದ ಮಾನದಂಡಗಳಿವೆ. ಹೀಗಾಗಿ ತಮಗೆ ಇಷ್ಟವಾದ ಸಾಹಿತಿಗೆ ಪ್ರಶಸ್ತಿ ಸಿಕ್ಕಿಲ್ಲ ಎಂದು ದೂರುವುದು ಸೂಕ್ತವಲ್ಲ. ಅವರು ತಮ್ಮ ಮಾನದಂಡಗಳ ಅನುಸಾರ ಪ್ರಶಸ್ತಿ ನೀಡುತ್ತಾರೆ.

    ಉತ್ತರ
  • ಶೂದ್ರ ಸತೀಶ
   ಸೆಪ್ಟೆಂ 30 2015

   ಶಿವರಾಮ ಭಟ್ ರೇ.ಮೈಕಾಸುರನ ಮುಂದೆ ನಿಂತು ದ್ವೇಷವನ್ನೇ ಉಗುಳುತ್ತಾ ಸಮಾಜದ ಶಾಂತಿ ಭಂಗಕ್ಕೆ ಪ್ರಚೋದನೆ ನೀಡುತ್ತಿರುವವನಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿಹುದಲ್ಲವೇನು.ಹಾಗೆಯೇ ಈ ಹುಡುಗರಿಗೂ ಯಾಕೆ ಇರಲಿಕ್ಕೆಬಾರದು? ಈ ಮೊದಲೂ ಅಕಾಡೆಮಿ ಇಂತ ಮಹಾನುಭಾವರಿಗೆ ಅವಾರ್ಡ್ ಕೊಟ್ಟಿರಲಿಲ್ಲ,ಕೊಟ್ಟಿದ್ದರೇ ಆಗಲೇ ಈ ರೀತಿ ಆಗುತ್ತಿದ್ದಿರಬಹುದೇನೋ

   ಉತ್ತರ
 8. ಸೆಪ್ಟೆಂ 26 2015

  ASK YOURSELF:
  Why people have decided to fight leaving aside all the work?
  Who are fighting this?
  Is there anything that the fighters are gaining from this?

  AND ASK ONCE AGAIN:
  Who is that they are gighting
  What are the credentials of the man
  What precedent this act of government would set
  What message will this give to the society
  What is the agenda of this government

  No one is asking it because his beliefs are different from us. We are upset because it us being given to a orrson who is not worth it both for his literature and for his public conduct.

  If a protest has not happened before, it is not a justification for that not to happen in future or oresent. We also didn’t not have a government like this before. We also didn’t have a chief minister like this before.
  Things change, perspectives change, principles remain the same.

  ಉತ್ತರ
  • Anonymous
   ಸೆಪ್ಟೆಂ 28 2015

   Now you’ve made it to MSM!! See:
   _http://www.hindustantimes.com/india/on-the-hitlist-11-karnataka-intellectuals-under-right-wing-fire/story-T7KZxWSE8pRVFHPFToE5BL.html

   ಉತ್ತರ
 9. Deviprasad M S Gowda
  ಸೆಪ್ಟೆಂ 26 2015

  ಯಾವುದೇ ಧರ್ಮದ ಮೂಲ ತತ್ವ ಸ್ವಾಸ್ತ್ಯ ಸಮಾಜದ ನಿರ್ಮಾಣ. ಅದು ದೈಹಿಕ ಮತ್ತು ಮಾನಸಿಕ ಸ್ವಾಸ್ತ್ಯ ಎರಡನ್ನೂ ಸೇರಿಸಿ. ಧರ್ಮವು ಜೀವದ ಜೀವನ ವಿಧಾನಕ್ಕೆ ಸಹಕಾರಿಯಾಗ ಬೇಕು. ಮಾರ್ಗಧರ್ಶನ ನೀಡ ಬೇಕು. ಸ್ವರ್ಗ ನರಕದ ಕಲ್ಪನೆ ಎಲ್ಲಾ ಧರ್ಮದಲ್ಲೂ ಇದೆ. ಅದು ಕಾಲ್ಪನಿಕವೇ ಆಗಿರಬಹುದು, ಆದರೆ ಮನುಷ್ಯನಿಗೆ ತಪ್ಪು ಮಾಡ ಬಾರದೆಂಬ ಸಂದೇಶವನ್ನಂತೂ ನೀಡುತ್ತದೆ. ದೇವರು ಧರ್ಮದ ಅಂಗವಾಗಬೇಕೇ ಹೊರತು ಧರ್ಮದ ಆತ್ಮವೇ ದೇವರಾಗ ಬಾರದು. ಹಾಗೆಯೇ ಆತ್ಮದ ಮುಕ್ತಿಯೇ ಧರ್ಮದ ಮೂಲ ಉದ್ಧೇಶವಾಗಬಾರದು. ನಿಜವಾದ ಧರ್ಮ ಮನುಷ್ಯನ ಹೃದಯದಲ್ಲಿ ಇರಬೇಕೆ ಹೊರತು ಶಾಸ್ತ್ರದಲ್ಲಿ ಅಲ್ಲ. ಮಾನವೀಯತೆ ಮತ್ತು ನೈತಿಕತೆ ಧರ್ಮದ ಆತ್ಮವಾದಾಗ ಮಾತ್ರ ಶಾಂತಿಯುತವಾದ ಸಮಾಜದ ನಿರ್ಮಾಣವಾಗುತ್ತದೆ. ಚಂಚಲವಾದ ಮನಸ್ಸಿನ ಮನುಷ್ಯನಲ್ಲಿ ನೈತಿಕತೆಯನ್ನು ಬೆಳೆಸಲು ಉಳಿಸಲು ಸ್ವರ್ಗ ನರಕದ ಕಲ್ಪನೆ ಬೇಕೇ ಬೇಕು. ಸ್ವರ್ಗ ಮತ್ತು ನರಕದ ಕಲ್ಪನೆ ಮಾಡಿದಾಗ ಅಲ್ಲೊಬ್ಬ ದೇವರು ಇರಲೇಬೇಕು. ಎಲ್ಲಾ ಧರ್ಮದ ಹುಟ್ಟಿನ ಮೂಲ ಇದೇ ಆಗಿರಬಹುದು ಎಂದು ನಾನು ಕಂಡು ಕೊಂಡ ಸತ್ಯ. ಅದು ಇತರರಿಗೆ ಪತ್ಯವಾಗಬೇಕೆಂದು ನಾನು ಬಯಸುವುದೂ ಇಲ್ಲ.
  ಹಾಗಾಗಿ ಪ್ರತೀ ಮನುಷ್ಯನಿಗೆ ಧರ್ಮವೆಂಬುದು ಬೇಕೇ ಬೇಕು. ಅದು ಯಾವುದೇ ಧರ್ಮವಾಗಬಹುದು. ಆ ಧರ್ಮವನ್ನು ಅನುಸರಿಸ ಬೇಕಾದರೆ, ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಸಂವಹನವಾಗಬೇಕಾದರೆ ಅಲ್ಲೊಂದು ಧರ್ಮ ಗ್ರಂಥ ಇದ್ದರೆ ಧರ್ಮದ ಉಧ್ದೇಶ ಸುಲಭಸಾದ್ಯ. ಆ ಗ್ರಂಥವನ್ನು, ಧರ್ಮವನ್ನು ಗ್ರಹಿಸಲು ಒಬ್ಬ ಗುರುವಿದ್ದರೆ, ಪ್ರಚಾರಕನಿದ್ದರೆ ಅದು ಇನ್ನೂ ಸುಲಭಸಾದ್ಯ. ಆದರೆ ಎಲ್ಲಾ ಧರ್ಮಗಲೂ ಎಡವಿದ್ದು ಇಲ್ಲಿಯೇ. ಗುರು ಅಥವಾ ಪ್ರಚಾರಕ ಸ್ವಾರ್ಥಿಯಾದ. ತನ್ನ ಪೀಳಿಗೆಗೆ ಇದರ ಮೂಲಕ ಆಸ್ತಿ ಮಾಡಲು ಹೊರಟರು. ತಮಗೆ ಬೇಕಾದ ಹಾಗೆ ಧರ್ಮವನ್ನು ಅನುಷ್ಠಾನ ಮಾಡಿದರು. ಸಮಾಜದಲ್ಲಿ ಸಮಾನತೆ ಮಾಯವಾಯಿತು. ಇದು ಹಿಂದೂ ಧರ್ಮದ ದುರಾದೃಷ್ಠ. ಸಮಾಜದಲ್ಲಿ ಶೂದ್ರರನ್ನು ನಿಕೃಷ್ಠ ಮಾಡಲಾಯಿತು (ಮಹಾಭಾರತದಲ್ಲಿ ಯಕ್ಷ ಪ್ರಶ್ನೆಯ ಪ್ರಸಂಗದಲ್ಲಿ ಯುದಿಷ್ಠಿರ ಎಲ್ಲರೂ ಸಮಾನರು ಎಂದು ಉತ್ತರಿಸಿದ ಮತ್ತು ನಿಜವಾದ ವರ್ಣಾಶ್ರಮನ್ನು ವಿವರಿಸಿ ತನ್ನ ತಮ್ಮಂದಿರನ್ನು ಬದುಕಿಸಿದ). ಕಾಲಕ್ರಮೇಣ ಶೂದ್ರರ ಜೊತೆಗೆ ದಲಿತ ವರ್ಗವಂಬ ಪ್ರತ್ಯೇಕ ಪಂಗಡ ಕೂಡಾ ನಿರ್ಮಾಣವಾಯಿತು. ಆದರೆ ಭಾರತದ ಅದೃಷ್ಠವೆಂದರೆ ಗಾಂದಿಯೆಂಬ ಮಹಾಪುರುಷನ ಅವತಾರವಾಯಿತು. ಅಂದು ಗಾಂದಿ ಮಾಡಿದ ಸಮಾಜ ಸುದಾರಣೆಯಿಂದಾಗಿ ಇಂದು ಸಮಾಜದಲ್ಲಿ ಸಮಾನತೆ ಸಾದಿಸುವತ್ತ ಭಾರತ ಸಾಗುತ್ತಿದೆ. ಆದರೆ ವಿಪರ್ಯಾಸವೆಂದರೆ ಜೀವನಕ್ಕೆ ದಾರಿದೀಪವಾಗಬೇಕಿದ್ದ ಧರ್ಮವನ್ನು ಎಲ್ಲರೂ ಮರೆತರು ಮತ್ತು ಈ ರೀತಿಯಿಂದಾಗಿ ಎಲ್ಲರೂ ಮಾನಸಿಕವಾಗಿ ಸಮಾನರಾಗಿ ಧರ್ಮಭಾಹಿರರಾದರು. ಪರಿಣಾಮ ದೇವರನ್ನು ಮರೆತರು, ದೇವರನ್ನು ಮರೆತಾಗ ಸ್ವರ್ಗ ನರಕದ ಕಲ್ಪನೆ ಕೇವಲ ಕಟ್ಟು ಕತೆಯಾಯಿತು. ಸ್ವರ್ಗ ನರಕದ ಕಲ್ಪನೆ ಮರೆಯಾದಾಗ ನೈತಿಕತೆ ಕುಸಿಯಿತು. ನೈತಿಕತೆ ಉಳಿಸಲು ಸಹಕಾರಿಯಾಗಿದ್ದ ಧರ್ಮಗ್ರಂಥಗಳನ್ನು ಮರೆತರು. ನೈತಿಕತೆ ಮರೆಯಾದ ಪರಿಣಾಮವೇ ಇಂದು ನಾವು ನೋಡುತ್ತಿರುವ ಸುಲಿಗೆ, ಅತ್ಯಾಚಾರ, ಕೊಲೆ ಮತ್ತು ವಂಚನೆಗೆ ಕಾರಣ
  ಮತ್ತೆ ಸಮಾಜದಲ್ಲಿ ನೈತಿಕತೆ ಮೂಡಿಸಬೇಕಾದರೆ ಜನರು ಮತ್ತೆ ಧಾರ್ಮಿಕರಾಗಬೇಕು. ಸ್ವರ್ಗ ನರಕದ ಕಲ್ಪನೆಗೆ ಮರುಜೀವ ನೀಡಬೇಕು, ದೇವರನ್ನು ಹೀಯಾಳಿಸುವ ಬದಲು ಪೂಜಿಸುವತ್ತ ಮನಪರಿವರ್ತನೆ ಮಾಡಬೇಕು. ಅದಕ್ಕೆ ಸಹಕಾರಿಯಾದ ಧರ್ಮಗ್ರಂಥಗಲನ್ನು ಎಲ್ಲರಿಗೂ ಸಿಗುವಂತಾಗಬೇಕು. ಎಲ್ಲರಿಗೂ ಧಾರ್ಮಿಕ ಶಿಕ್ಷಣ ಸಿಗಬೇಕು. ಧರ್ಮ ಯಾವುದೇ ಇರಲಿ, ಅವರವರ ಧರ್ಮದ ಮೂಲ ತತ್ವವನ್ನು ಅವರವರ ಜೀವನದಲ್ಲಿ ಅಲವಡಿಸಿ ಎಲ್ಲರೂ ಮಾನವರಾಗಬೇಕು.
  ಅಂಕು ಡೊಂಕಿರುವುದು ಹಿಂದೂ ಸಮಾಜದಲ್ಲಿ, ಹಿಂದೂ ಧರ್ಮದಲ್ಲಿ ಅಲ್ಲ. ಅದನ್ನು ಮೆಟ್ಟಿನಿಲ್ಲಬೇಕಾದಾರೆ ಎಲ್ಲರೂ ಸಮಾನರಾಗ ಬೇಕು. ಸಮಾನತೆ ಸಾದಿಸುವುದು ಎಲ್ಲರೂ ಧರ್ಮ ಬಾಹಿರರಾಗಿ ಅಲ್ಲ, ಎಲ್ಲರೂ ಧಾರ್ಮಿಕರಾಗಿ ಸಮಾನರಾಗಬೇಕು. ಶೂದ್ರ , ದಲಿತ ಎಂಬ ಪದವೇ ಅನಗತ್ಯ. ಎಲ್ಲರೂ ಸಮಾನರು. ಅಂಬೇಡ್ಕರ್ ಚಳುವಳಿ ಮತ್ತು ದ್ರಾವಿಡ ಚಳುವಳಿ ನಿಜವಾಗಿಯೂ ಅಂದಿನ ಅತೀ ಅಗತ್ಯವಾಗಿತ್ತು. ಇದರಿಂದ ಹಿಂದೂ ಧರ್ಮಕ್ಕೆ ಲಾಭವಾಗಿದೆ ಎಂದೇ ನಾನು ನಂಬುತ್ತೇನೆ. ಆದರೆ ಇಂದು ದ್ರಾವಿಡ ಚಳುವಳಿ ಅಪ್ರಸ್ತುತ. ಯಾಕೆಂದೆ ಇಂದು ಅಂಥಹ ಅಸಮಾನತೆ ಮರೆಯಾಗಿದೆ. ಮಾನ್ಯ ಅಂಬೇಡ್ಕರ್ ಇಂದು ಬದುಕಿರುತ್ತಿದ್ದರೆ ಅವರು ಬೌಧ ಧರ್ಮ ಸ್ವೀಕಾರ ಮಾಡುತ್ತಿರಲಿಲ್ಲ. ಅಷ್ಟರಮಟ್ಟಿಗೆ ಸಮಾಜ ಸುಧಾರಣೆ ಆಗಿದೆ. ಹಿಂದೆ ಆದ ತಪ್ಪನ್ನು ಸಾದಿಸುವುದು ತಪ್ಪು. ಆದರೆ ಆ ಚಳುವಳಿಗಳಿಂದ ಆ ಪಂಗಡಗಳಿಗೆ ಬಹುಳವಾದ ನಷ್ಟವಾಗಿದೆ. ಯಾಕೆಂದೆ ಸಮಾಜದಲ್ಲಿ ಸಮಾನತೆ ಮೂಡುತ್ತಾ ಇದ್ದರು ಆ ಪಂಗಡಗಳು ತಮ್ಮ ಪ್ರತ್ಯೇಕ ಅಸ್ತಿತ್ವಕ್ಕೆ ಹೋರಾಡುತ್ತಿವೆ. ಇದರಿಂದ ನಿಜವಾದ ಧರ್ಮ, ಜ್ಞಾನವನ್ನು ತೊರೆಯುತ್ತಿದ್ದಾರೆ. ಧರ್ಮ ಮತ್ತು ಜ್ಙಾನದ ಬಾಹಿರರಾದರೆ ನೈತಿಕತೆ ಎಲ್ಲಿಂದ ಬರುತ್ತದೆ? ಹಾಗಾಗಿ ನಮ್ಮ ಧರ್ಮಗ್ರಂಥಗಳು ಅವರ ಮನೆ, ಮನ ಎರಡನ್ನೂ ತಲುಪಿ ಅವರೂ ಇತರರಂತೆ ಜ್ಞಾನದಿಂದ ಬ್ರಾಹ್ಮಣರಾದಾಗ ಮಾತ್ರ ಹಿಂದೂ ಸಮಾಜದ ಉತ್ತಾನವಾಗುತ್ತದೆ. ಈ ಕಾರ್ಯವನ್ನು ಸರಕಾರ ಮಾಡಲು ಸಾದ್ಯವಿಲ್ಲ, ಹಿಂದೂಗಳೆ ತಮ್ಮ ಪರಿತ್ಯಕ್ತ ಹಿಂದೂ ಸಮಾಜಕ್ಕೆ ಸಹಕಾರಿಯಾಗಬೇಕು. 65 ವರುಷ ಹಳೆಯ ನಮ್ಮ ಸಂವಿದಾನಕ್ಕೇ ಎಷ್ಟೊಂದು ತಿದ್ದುಪಡಿ ಆಗಿದೆ. ಹಾಗಾಗಿ ನಮ್ಮ ಮನಸ್ಸು ಮತ್ತು ದೇಹವನ್ನು ಸ್ವಾಸ್ತ್ಯವಾಗಿ ಇಡಲು ಎಷ್ಟೋ ಮಾಹಿತಿ ನೀಡ ಬಲ್ಲ ಜ್ಞಾನದ ಆಗರವಾದ ನಮ್ಮ ಧರ್ಮಗ್ರಂಥಗಲ್ಲಿ ಇರುವ ನ್ಯೂನತೆಗಳನ್ನು ಅದರಷ್ಟಕ್ಕೆ ಬಿಟ್ಟು ಒಳ್ಳೆಯ ವಿಷಯಗಳನ್ನು ಸ್ವೀಕರಿಸಿಕೊಂಡು ಹೋಗುವುದು ಉತ್ತಮವಲ್ಲವೇ?
  ಬ್ರಾಹ್ಮಣ ಎನ್ನುವುದು ಜನ್ಮದಿಂದ ಅಲ್ಲ, ಆಚಾರದಿಂದ, ಜ್ಞಾನದಿಂದ ಎನ್ನುವ ಸತ್ಯವನ್ನು ನಿಜವಾಗಿಸೋನ. ತಮಸೋಮಾ ಜ್ಯೋತಿರ್ಗಮಯ….

  ಉತ್ತರ
 10. nagaraja shetty
  ಸೆಪ್ಟೆಂ 28 2015

  ದೇವರನ್ನು ಅತಿಯಾಗಿ ನಂಬುವ ರಾಜಕಾರಣಿಗಳು ಹಾಗೂ ಆಡಳಿತಗಾರರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಪಾಪ ಪುಣ್ಯಗಳನ್ನು, ಸ್ವರ್ಗ ನರಕಗಳನ್ನು ನಂಬುವ ಇವರನ್ನು ಆ ನಂಬಿಕೆಗಳು ಭ್ರಷ್ಟಾಚಾರ ಮಾಡದಂತೆ ತಡೆಯುವಲ್ಲಿ ಯಶಸ್ವಿಯಾಗಿಲ್ಲ. ಸಮಾಜಕ್ಕೆ ಮಾರ್ಗದರ್ಶನ ನೀಡುವ ಸ್ಥಾನದಲ್ಲಿರುವ ದೇವಮಾನವರು ಹಾಗೂ ಸ್ವಾಮೀಜಿಗಳು ದೇವರ ಹೆಸರಿನಲ್ಲಿ ಅತ್ಯಾಚಾರ ಮಾಡಿರುವ ಘಟನೆಗಳು ಇತ್ತೀಚೆಗೆ ನಡೆಯುತ್ತಿವೆ. ದೇವರು, ಪಾಪ ಪುಣ್ಯಗಳ ಬಗ್ಗೆ ಉಪದೇಶ ಕೊಡುವ ಸ್ವಾಮೀಜಿಗಳೇ ಅತ್ಯಾಚಾರದಂಥ ಹೀನ ಕೃತ್ಯಗಳಲ್ಲಿ ತೊಡಗಿರುವಾಗ ಅಂಥ ಸ್ವಾಮೀಜಿಗಳನ್ನು ರಕ್ಷಿಸಲು ಸಮಜದದ ಗಣ್ಯ ವಕೀಲರು, ಮಾಧ್ಯಮಗಳು ಹಾಗೂ ಪತ್ರಕರ್ತರು ಟೊಂಕ ಕಟ್ಟಿ ನಿಂತಿರುವಾಗ ದೇವರು, ಪಾಪ ಪುಣ್ಯ, ಸ್ವರ್ಗ ನರಕದ ಕಲ್ಪನೆಗಳು ನಿರುಪಯೋಗಿಯಾಗಿ ಕಂಡುಬರುತ್ತವೆ. ಭಗವಾನರಂಥ ವಿಚಾರಶೀಲರ ಮೇಲೆ ಹಾರಾಡುವ, ವೀರಾವೇಶ ತೋರುವ ಹಿಂದೂ ಸಂಘಟನೆಗಳು ಅತ್ಯಾಚಾರದಲ್ಲಿ ತೊಡಗಿರುವ ಸ್ವಾಮೀಜಿಗಳ ಬಂಧನಕ್ಕೆ ವೀರಾವೇಶ ತೋರಿಸದೆ ಇರುವುದು ವಿಚಿತ್ರವಾಗಿ ಕಾಣುತ್ತದೆ. ದೆಹಲಿಯ ನಿರ್ಭಯ ಅತ್ಯಾಚಾರ ನಡೆದಾಗ ನಡೆದ ಹೋರಾಟದ ಒಂದು ಅಂಶದಷ್ಟೂ ಹೋರಾಟ ಸ್ವಾಮೀಜಿಗಳು ಅತ್ಯಾಚಾರ ಮಾಡಿದಾಗ ನಡೆಯಲಿಲ್ಲ. ಇದು ನಮ್ಮ ಸಮಾಜದಲ್ಲಿ ಕಂಡುಬರುವ ಪಾಪ ಪುಣ್ಯಗಳ ವಿವೇಚನೆ.

  ಸಮಾಜದಲ್ಲಿ ನ್ಯಾಯ ನೆಲೆಗೊಳ್ಳಬೇಕಾದರೆ ಆಡಳಿತ ನಡೆಸುವವರು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ನ್ಯಾಯಾಂಗ ಪಕ್ಷಪಾತವಿಲ್ಲದೆ ನ್ಯಾಯ ನಿರ್ಣಯ ಮಾಡಬೇಕು. ಇವುಗಳು ಸಮರ್ಪಕವಾಗಿ ಸಂವಿಧಾನಬದ್ಧವಾಗಿ ಕೆಲಸ ಮಾಡದೆ ಇಂದು ಸ್ವರ್ಗ ನರಕದ ಪರಿಕಲ್ಪನೆಯಿಂದ, ಪಾಪ ಪುಣ್ಯದ ನಂಬಿಕೆಗಳಿಂದ ಸಮಾಜ ಸರಿದಾರಿಯಲ್ಲಿ ನಡೆಯಲಾರದು. ತಪ್ಪು ಮಾಡಿದವರನ್ನು ರಕ್ಷಿಸಲು ನಾಚಿಕೆಯಿಲ್ಲದ ರಕ್ಷಕರು ಇರುವಲ್ಲಿವರೆಗೆ ಇಂಥ ಅನ್ಯಾಯಗಳನ್ನು ತಪ್ಪಿಸಲು ಸಾಧ್ಯವಿಲ್ಲ. ನ್ಯಾಯ ಅನ್ಯಾಯಗಳ ವಿಚಾರದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಮಾನದಂಡ ಅನುಸರಿಸುವ ಆಶಾಢಭೂತಿ ಧರ್ಮಗಳಿಂದ ಸಮಾಜದಲ್ಲಿ ನ್ಯಾಯ ಮರೀಚಿಕೆಯಾಗಿಯೇ ಕಾಣುತ್ತದೆ.

  ಉತ್ತರ
  • ಸೆಪ್ಟೆಂ 30 2015

   ನಾಗರಾಜ ಶೆಟ್ಟಿ ಅವರೆ ನಿಮ್ಮ ಪ್ರಕಾರ ಹಿಂದೂಗಳ ವಿರುದ್ಧ ಮಾತನಾಡಿದರೆ ಅದು ವಿಚಾರಶೀಲ. ಇದೇ ರೀತಿ ಅಲ್ಪಸಂಖ್ಯಾತರ ವಿರುದ್ಧ ಮಾತನಾಡಿದರೆ ಏಕೆ ವಿಚಾರಶೀಲವಾಗುವುದಿಲ್ಲ. ವಿಚಾರಶೀಲ ಎನ್ನುವಂಥದ್ದು ಸಮಾಜವನ್ನು ಒಡೆಯುವಂತಿರಬಾರು. ಒಂದು ಧರ್ಮ ಇನ್ನೊಂದು ಧರ್ಮವನ್ನು ಪರಸ್ಪರ ಗೌರವಿಸಿದರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಅದನ್ನು ಬಿಟ್ಟು ಒಂದು ಧರ್ಮದ ಜನರನ್ನು ಅವರ ನಂಬಿಕೆಯನ್ನು ಹೀಯಾಳಿಸುವ ಮೂಕ ಅವರ ಧಾರ್ಮಿಕ ಭಾವನೆಗೆದಕ್ಕೆ ಉಂಟುಮಾಡುವುದು ಸರಿಯೇ..? ಇನ್ನು ಸ್ವಾಮೀಜಿಗಳು ಅತ್ಯಾಚಾರದಲ್ಲಿ ತೊಡಗಿದ್ದಾರೆ ಎಂದು ಏಕ ಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ತೀರ್ಮಾನಿಸಿಬಿಟ್ಟಿದ್ದೀರಿ. ಆರೋಪ ಬಂದಾಕ್ಷಣ ಅಪರಾಧಿಯಾಗುವುದಿಲ್ಲ. ಸ್ವಾಮೀಜಿ ಅಪರಾಧಿ ಎಂದು ನೀವು ಹೇಗೆ ನಿರ್ಧರಿಸಿದಿರಿ. ನೀವೇನು ನೋಡಿದ ಸಾಕ್ಷಿಯೇ..ನ್ಯಾಯಾಲಯ ಎನ್ನುವ ಒಂದು ವ್ಯವಸ್ಥೆ ನಮ್ಮ ದೇಶದಲ್ಲಿ ಇನ್ನೂ ಜೀವಂತವಾಗಿದೆ. ತಪ್ಪು ಎಂದು ಸಾಬೀದಾದ ಮೇಲೆ ಹೇಳುವುದರಲ್ಲಿ ಒಂದು ಅರ್ಥವಿದೆ.

   ಉತ್ತರ
 11. nagaraja shetty
  ಸೆಪ್ಟೆಂ 30 2015

  ಸಿಐಡಿ ಸಲ್ಲಿಸಿದ ಎಫ್ ಐ ಆರ್ ನಲ್ಲಿ ಸ್ವಾಮೀಜಿ ಮೇಲೆ ಅತ್ಯಾಚಾರ ಆರೋಪ ಮಾಡಿರುವ ವ್ಯಕ್ತಿಯ ಒಳ ಉಡುಪಿನಲ್ಲಿ ದೊರಕಿದ ವೀರ್ಯದ ಕಲೆಯ ಡಿಎನ್ಎ ಸ್ವಾಮೀಜಿಯ ಡಿಎನ್ಎ ಜೊತೆ ಹೊಂದಾಣಿಕೆಯಾಗಿದೆ. ಇದು ಅತ್ಯಾಚಾರ ನಡೆದಿರುವುದರ ಪ್ರಬಲ ಸಾಕ್ಷ್ಯವಾಗಿದೆ. ನ್ಯಾಯಾಂಗ ಸಮರ್ಪಕವಾಗಿ ಕೆಲಸಮಾಡಿದರೆ ಈ ವೈಜ್ಞಾನಿಕ ಸಾಕ್ಷ್ಯ ಸಾಕು ಸ್ವಾಮೀಜಿ ಅಪರಾಧಿ ಎಂದು ಸಾಬೀತುಪಡಿಸಲು. ಇನ್ನೊಂದು ಸಾಕ್ಷ್ಯ ಎಂದರೆ ಅತ್ಯಾಚಾರಕ್ಕೀಡಾದ ಮಹಿಳೆ ಸ್ವಾಮೀಜಿಯ ಗುಪ್ತ ಭಾಗಗಳಲ್ಲಿ ಇರುವ ಮಚ್ಚೆಯ ಕುರಿತು ಸಿಐಡಿಗೆ ಮಾಹಿತಿ ನೀಡಿದ್ದಾರೆ. ಇದರ ಪರೀಕ್ಷೆ ನಡೆಸಲು ವೈದ್ಯಕೀಯ ಪರೀಕ್ಷೆಗೆ ಸ್ವಾಮೀಜಿ ತಪ್ಪಿಸಿಕೊಳ್ಳುತ್ತಿರುವುದೇ ಅಲ್ಲಿ ಅತ್ಯಾಚಾರ ನಡೆದಿದೆ ಎಂಬುದಕ್ಕೆ ಇನ್ನೊಂದು ಪ್ರಬಲ ಸಾಕ್ಷಿ. ಸ್ವಾಮೀಜಿಯ ಗುಪ್ತ ಭಾಗಗಳಲ್ಲಿ ಇರುವ ಮಚ್ಚೆಯ ಉಳಿದವರಿಗೆ ಅದೂ ಮಹಿಳೆಗೆ ಗೊತ್ತಾಗುವ ಸಾಧ್ಯತೆ ಲೈಂಗಿಕ ಕ್ರಿಯೆ ನಡೆದಿರದ ಹೊರತು ಗೊತ್ತಾಗುವ ಸಾಧ್ಯತೆ ಇಲ್ಲ.
  ಕೆಲವರು ಇದು ಅತ್ಯಾಚಾರವಲ್ಲ, ಒಪ್ಪಿಗೆಯ ಮೇಲೆ ನಡೆದ ಲೈಂಗಿಕ ಕ್ರಿಯೆ ಎಂಬ ವಾದ ಮುಂದಿಡುತ್ತಿದ್ದಾರೆ. ಇದು ಒಪ್ಪಿಗೆಯ ಮೇಲೆ ನಡೆದ ಲೈಂಗಿಕ ಕ್ರಿಯೆಯಾದರೂ ಇದು ಅನೈತಿಕ ಕ್ರಿಯೆಯಾಗುತ್ತದೆ. ಇದಕ್ಕೆ ಇಂಡಿಯನ್ ಪೀನಲ್ ಕೋಡಿನಲ್ಲಿ ೫ ವರ್ಷಗಳ ಜೈಲು ಹಾಗೂ ದಂಡದ ಶಿಕ್ಷೆ ಇದೆ.

  ಸ್ವಾಮೀಜಿ ಇಂಥ ಅನೈತಿಕ ಕ್ರಿಯೆಯಲ್ಲಿ ತೊಡಗಿದ್ದರೂ ನೈತಿಕ ಪೋಲೀಸ್ ಗಿರಿಯಲ್ಲಿ ತೊಡಗಿರುವ ಹಿಂದೂ ಸಂಘಟನೆಗಳು ಈಗ ಮೌನವಾಗಿರುವುದು ಆಷಾಢಭೂತಿತನದ ಪರಮಾವಧಿ. ಬೇರೆ ಬೇರೆ ಧರ್ಮದ ಇಬ್ಬರು ಹುಡುಗ ಹುಡುಗಿಯರು ಒಟ್ಟಿಗೆ ಕಂಡಾಗ ಅಥವಾ ಒಂದೇ ಧರ್ಮದ ಹುಡುಗ ಹುಡುಗಿಯರು ಲಾಡ್ಜ್ ಒಂದರಲ್ಲಿ ಕಂಡುಬಂದರೆ ಅನೈತಿಕತೆಯ ಬೊಬ್ಬೆ ಹಾಕಿ ದಾಳಿ ಮಾಡುವ ಸಂಘಟನೆಗಳು ಈಗೇಕೆ ಕನಿಷ್ಠ ಪ್ರತಿಭಟನೆಯನ್ನೂ ಮಾಡುತ್ತಿಲ್ಲ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

  ನ್ಯಾಯಾಂಗ ತೀರ್ಪು ನೀಡದೆ ಅಪರಾಧಿ ಅಲ್ಲ ಎಂಬ ಥಿಯರಿ ನಿತ್ಯಾನಂದ ಸ್ವಾಮಿಯ ಮೇಲೆ ಏಕೆ ಅನ್ವಯವಾಗುವುದಿಲ್ಲ? ಕೋರ್ಟಿನ ತೀರ್ಪು ಬರುವ ಮೊದಲೇ ಆತನನ್ನು ಮಾಧ್ಯಮಗಳು ಅಪರಾಧಿ ತರಹ ಬಿಂಬಿಸಿರಲಿಲ್ಲವೇ? ಬಾಂಬ್ ಸ್ಫೋಟ ನಡೆದಾಗಲೆಲ್ಲ ಮುಸ್ಲಿಮರನ್ನು ಅಪರಾಧಿ ಎಂದು ಕೋರ್ಟಿನ ತೀರ್ಪು ಬರುವ ಮೊದಲೇ ಬೊಬ್ಬೆ ಹಾಕುವ ಮಾಧ್ಯಮಗಳು ಸ್ವಾಮೀಜಿ ವಿಷಯದಲ್ಲಿ ಬಲವಾದ ವೈಜ್ಞಾನಿಕ ಆಧಾರಗಳಿದ್ದರೂ ಏಕೆ ಸ್ವಾಮೀಜಿಯ ಬಂಧನಕ್ಕೆ ರಾಜ್ಯ ಹಾಗೂ ದೇಶವ್ಯಾಪಿ ಜಾಗೃತಿ ಮೂಡಿಸುತ್ತಿಲ್ಲ ಎಂಬುದು ಕೂಡ ಮಾಧ್ಯಮಗಳು ಯಾರ ಪರ ಇವೆ ಎಂಬುದನ್ನು ತೊರಿಸುತ್ತದೆ.

  ಉತ್ತರ
  • ಸೆಪ್ಟೆಂ 30 2015

   ವಿಷಯಾಂತರವಾಯಿತು

   ಉತ್ತರ
   • Ckvmurthy
    ಸೆಪ್ಟೆಂ 30 2015

    Discussing in this platform is ‘khali timepsss’.This will have no effect on any problem.Every thing is going as usual and it has gained popularity and spread ing like wild fire.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments