ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 23, 2015

6

ವಸಾಹತುಪ್ರಜ್ಞೆಯ ಪ್ರಾಯೋಜಿತ ಪಂದ್ಯಾವಳಿಗಳು – ಭಾಗ ೨

‍ನಿಲುಮೆ ಮೂಲಕ

– ವಿನಾಯಕ ಹಂಪಿಹೊಳಿ

ಸಂಸ್ಕೃತ v/s ಆಡುಭಾಷೆ, ಶಾಸ್ತ್ರೀಯ v/s ಜಾನಪದ, ಪುರೋಹಿತ v/s ಭಕ್ತ, ಆರ್ಯ v/s ದ್ರಾವಿಡ … – ಭಾಗ ೧

ಸಂಸ್ಕೃತ v/s ಆಡುಭಾಷೆ, ಶಾಸ್ತ್ರೀಯ v/s ಜಾನಪದ, ಪುರೋಹಿತ v/s ಭಕ್ತ, ಆರ್ಯ v/s ದ್ರಾವಿಡ … – ಭಾಗ ೨

Colonial Consciousnessಇದೇ ಪ್ರಶ್ನೆಯು ಪುರೋಹಿತ ಮತ್ತು ಭಕ್ತನ ನಡುವಿನ ಯುದ್ಧಕ್ಕೂ ಅನ್ವಯವಾಗುತ್ತದೆ. ಹಾಗೊಂದು ವೇಳೆ ಅಷ್ಟೊಂದು ಅಸಹನೆ/ಶೋಷಣೆಗಳು ಇದ್ದರೆ ಜಾತಿಜಾತಿಗಳ ನಡುವೆ ಯುದ್ಧವೇ ಜರುಗಿ ಎಲ್ಲ ಜಾತಿಗಳೂ ನಾಶವಾಗಬೇಕಿತ್ತು. ಆದರೆ ಎಲ್ಲ ಜಾತಿಗಳೂ ಒಂದೇ ಹಳ್ಳಿಯಲ್ಲಿ ತಮ್ಮಷ್ಟಕ್ಕೆ ತಾವಿರುವದು ಏಕೆ? ಈ ಎಲ್ಲ ಪ್ರಕ್ರಿಯೆಗಳನ್ನು ಈ ಸಿದ್ಧಾಂತವು ವಿವರಿಸಿಲ್ಲ.

ಆದರೂ ಬ್ರಿಟೀಷರು ನೀಡಿದ ವಸಾಹತುಪ್ರಜ್ಞೆಯನ್ನು ಶಿರಸಾ ಹೊತ್ತುಕೊಂಡು ಅವರ ಸಿದ್ಧಾಂತಗಳನ್ನು ಒಪ್ಪಿಕೊಂಡಿದ್ದೇವೆ. ಜಾತಿಗೊಂದು, ಕೇರಿಗೊಂದು, ಊರಿಗೊಂದು ಭಾಷಾವೈವಿಧ್ಯತೆಯಿರುವಲ್ಲಿ ಯೂರೋಪಿನಂತೆ ಭಾಷಾವಾರು ಪ್ರಾಂತ್ಯಗಳನ್ನು ಮಾಡಿಕೊಂಡಿದ್ದೇವೆ. ಇಡೀ ಸಹಸ್ರಮಾನದಲ್ಲಿ ಎಂದೂ ನಡೆಯದ ಮಹಾಪ್ರಾಣಗಳ ಅಗತ್ಯತೆಯ ಕುರಿತ ಚರ್ಚೆಗಳು ಈಗೀಗ ನಡೆಯುತ್ತಿವೆ. ಕನ್ನಡಿಗರಿಗೆ ಎಂದಿಗೂ ವಿರುದ್ಧವಾಗಿ ಕಾಣದ, ಕರ್ನಾಟಕದ ೫ ವೀರಶೈವ ಪೀಠಗಳು ಪ್ರಗತಿಪರರ ದೃಷ್ಟಿಯಲ್ಲಿ, ಏಕಾಏಕೀ ಶರಣ ಚಳುವಳಿಗೆ ವಿರುದ್ಧವಾದ ಬೆಳವಣಿಗೆಗಳಾಗಿಬಿಟ್ಟಿವೆ. ಕರ್ನಾಟಕ ಸಂಗೀತವನ್ನು ವಿರೋಧಿಸುವ ಅಂಶಗಳು ಜಾನಪದ ಸಂಗೀತದಲ್ಲಿ ಎಲ್ಲೆಲ್ಲಿ ಕಂಡುಬಂದಿವೆ ಎಂಬ ಚಿತ್ರವಿಚಿತ್ರ ಸಂಶೋಧನೆಗಳು ಬರುತ್ತಿವೆ. ಆರ್ಯ-ದ್ರಾವಿಡ ವಾದದಲ್ಲಿನ ದೋಷಗಳ ಕುರಿತು ಚರ್ಚೆ ಶುರುಮಾಡಿದರೂನೂ, ಅದು ಪುರೋಹಿತಶಾಹಿಯ ಹುನ್ನಾರವಾಗಿಬಿಡುತ್ತದೆ.

ಇವೆಲ್ಲದಕ್ಕೂ ಮುಖ್ಯವಾಗಿ ಪಾಶ್ಚಿಮಾತ್ಯರು ನಮ್ಮಲ್ಲಿ ಯಾವೆಲ್ಲ ವೈರುಧ್ಯಗಳನ್ನು ಕಂಡರೋ, ಅವುಗಳನ್ನು ವಿವರಿಸಲು ಆಧರಿಸಿದ ಆರ್ಯ-ದ್ರಾವಿಡ ಸಿದ್ಧಾಂತದ ಬುಡಕ್ಕೇ ಇಂದು ವಿಜ್ಞಾನ ಕೊಡಲಿ ಪೆಟ್ಟನ್ನು ನೀಡಿದೆ. ಜೈವಿಕವಾಗಿ, ಭೌತಿಕವಾಗಿ ಇಂದು ಸಿಗುವ ಎಲ್ಲ ವೈಜ್ಞಾನಿಕ ಸಾಕ್ಷಿಗಳು ಈ ಸಿದ್ಧಾಂತವನ್ನು ಕಸದ ಬುಟ್ಟಿಗೆ ಎಸೆದಿವೆ. ಸರಸ್ವತಿ ನದಿಯ ಅಸ್ತಿತ್ವ, ದ್ವಾರಕೆಯ ಅವಶೇಷಗಳು, ಮುಂತಾದ ಭೌತಿಕ ಸಾಕ್ಷಿಗಳು ಒಂದೆಡೆಯಾದರೆ, ಡಿ.ಎನ್.ಎ. ಆಧಾರಿತ ವಲಸೆಯ ವರದಿಗಳನ್ನು ಹೇಳುವ ಜೈವಿಕ ಸಾಕ್ಷಿಗಳು ಇನ್ನೊಂದೆಡೆ. ಹೀಗಾಗಿ ವೈಜ್ಞಾನಿಕವಾಗಿ ಸಾಬೀತಾಗದ ಈ ಆರ್ಯರ ವಲಸೆಯಾಗಲೀ, ಅದರ ಆಧಾರದ ಮೇಲೆ ಹೇಳಲಾಗುವ ಅನುಭವಕ್ಕೇ ಬಾರದ ಸಾಮಾಜಿಕ ವೈರುಧ್ಯ, ಚಳುವಳಿಗಳು ಶಾಲೆಗಳಲ್ಲಿ ಕಲಿಯಲೂ ಯೋಗ್ಯವಲ್ಲ. ಕಲಿಸಲೂ ಯೋಗ್ಯವಲ್ಲ.

ನಮ್ಮಲ್ಲಿ ಈಗ ಲಭ್ಯವಿರುವ ಶಾಸ್ತ್ರಗಳಲ್ಲಿ ಮುಖ್ಯವಾದ ಒಂದು ಅಂಶವನ್ನು ಗುರುತಿಸುವದನ್ನು ಮರೆತು ಬಿಟ್ಟಿದ್ದೇವೆ. ಹಾಗೆಯೇ, ಆ ಅಂಶವು ಶಾಸ್ತ್ರವೆಂದು ಕರೆಯಿಸಿಕೊಳ್ಳದ, ಪರಂಪರಾಗತವಾಗಿ ಹರಿದು ಬಂದ ಸಂಪ್ರದಾಯಗಳಲ್ಲಿಯೂ ಕಂಡು ಬರುವದೇ ಎಂಬ ಅಧ್ಯಯನವನ್ನೂ ಬಿಟ್ಟುಬಿಟ್ಟಿದ್ದೇವೆ. ಆ ಅಂಶವೇ ಅನುಬಂಧ ಚತುಷ್ಟಯ ಎಂಬ ಪರಿಕಲ್ಪನೆ. ಸಂಸ್ಕೃತದಲ್ಲಿ ಈಗ ಕಂಡು ಬರುವ ಎಲ್ಲ ಶಾಸ್ತ್ರಗಳಲ್ಲೂ ಆರಂಭವಾಗುವದೇ ಅನುಬಂಧ ಚತುಷ್ಟಯದಿಂದ. ಏನಿದು ಅನುಬಂಧ ಚತುಷ್ಟಯ? ಒಂದು ಶಾಸ್ತ್ರವನ್ನು ಬರೆಯುವಾಗ ಲೇಖಕನು ಆ ಶಾಸ್ತ್ರವನ್ನು ಅಧ್ಯಯನ ಮಾಡುವ ಅಧಿಕಾರಿ ಯಾರು, ಶಾಸ್ತ್ರದಲ್ಲಿ ಪ್ರತಿಪಾದಿಸಲ್ಪಡುವ ವಿಷಯವು ಯಾವದು, ಅದನ್ನು ಅಧ್ಯಯನ ಮಾಡಿದರೆ ಪಡೆಯುವ ಪ್ರಯೋಜನವೇನು ಮತ್ತು ಅಧಿಕಾರಿ, ವಿಷಯ ಮತ್ತು ಪ್ರಯೋಜನಗಳ ನಡುವಿನ ಸಂಬಂಧವೇನು ಈ ನಾಲ್ಕು ಅಂಶಗಳನ್ನು ಸ್ಪಷ್ಟಪಡಿಸುವದು ಕಂಡುಬರುತ್ತದೆ. ಈ ಅಧಿಕಾರಿ-ವಿಷಯ-ಪ್ರಯೋಜನ-ಸಂಬಂಧಗಳನ್ನೇ ಅನುಬಂಧ ಚತುಷ್ಟಯ ಎಂದು ಕರೆಯಲಾಗುತ್ತದೆ. ಮನುಸ್ಮೃತಿಯೇ ಆಗಲಿ, ಯೋಗಸೂತ್ರ-ಬ್ರಹ್ಮಸೂತ್ರಗಳೇ ಆಗಲಿ, ವೇದಾಂತವೇ ಆಗಲಿ, ಭಾಷಾಶಾಸ್ತ್ರಗಳಾಗಲೀ, ತರ್ಕ ನ್ಯಾಯಶಾಸ್ತ್ರಗಳಾಗಲೀ, ಇವೆಲ್ಲವೂ ಅನುಬಂಧ ಚತುಷ್ಟಯಗಳನ್ನು ಇಟ್ಟುಕೊಂಡೇ ಹೊರಡುತ್ತವೆ. ಹೀಗಾಗಿ ಸಹಜವಾಗಿ ಶಾಸ್ತ್ರಗಳಲ್ಲಿನ ವಾಕ್ಯಗಳು ಕೇವಲ ಅಧಿಕಾರಿಗಳಿಗೆ ಮಾತ್ರ ಸಂಬಂಧವೇ ಹೊರತು ಅದಕ್ಕೆ ಸಂಬಂಧವಿರದ ಅನಧಿಕಾರಿಗಳಿಗೆ ಆ ಶಾಸ್ತ್ರದಿಂದ ಆಗಬೇಕಾದದ್ದೇನೂ ಇಲ್ಲ.

ನಾವು ಆ ಅಧಿಕಾರಿ ಎಂಬ ಅಂಶವನ್ನು ತೆಗೆದು ಅದು ಇಡೀ ಸಮಾಜಕ್ಕೆ ಅನ್ವಯವಾಗುತ್ತದೆ ಎಂದುಕೊಂಡು ಹೊರಟರೆ ಆ ಶಾಸ್ತ್ರವು ಅರ್ಥವಾಗುವದಿಲ್ಲ. ಅಷ್ಟೇ ಅಲ್ಲ, ಅದೇ ಶಾಸ್ತ್ರದ ಬೇರೆ ಬೇರೆ ವಾಕ್ಯಗಳು ಪರಸ್ಪರ ವಿರುದ್ಧವೂ ಆಗಬಹುದು. ಉದಾಹರಣೆಗೆ, ವೇದದ ಸಂಹಿತೆಯು ಪ್ರವೃತ್ತಿಮಾರ್ಗಿಗಳಿಗೆ ಮತ್ತು ಉಪನಿಷತ್ತು ನಿವೃತ್ತಿಮಾರ್ಗಿಗಳಿಗೆ ಎಂಬ ಅಧಿಕಾರ ಭೇದವನ್ನು ನಾವು ವೈದಿಕರಲ್ಲಿ ಕಾಣುತ್ತೇವೆ. ಸಂಹಿತೆಯಲ್ಲಿ ನೂರು ವರ್ಷಗಳ ತನಕವೂ ಅಗ್ನಿಹೋತ್ರ ಮಾಡಿಕೊಂಡಿರಬೇಕು ಎಂಬ ಮಾತಿದೆ. ಉಪನಿಷತ್ತಿನಲ್ಲಿ ಕರ್ಮಸನ್ಯಾಸವಿಲ್ಲದೇ ಮೋಕ್ಷವಿಲ್ಲ ಎಂಬ ಮಾತಿದೆ. ಇವೆರಡೂ ಮಾತುಗಳು ಬೇರೆ ಬೇರೆ ಅಧಿಕಾರಿಗಳ ಕುರಿತು ಹೇಳಿರುವ ಅಂಶವು. ಹೀಗಾಗಿ ಅಧಿಕಾರಿ ಎಂಬ ಅಂಶವನ್ನು ತೆಗೆದುಬಿಟ್ಟರೆ, ಸಂಹಿತೆಯ ವಾಕ್ಯಗಳು ಉಪನಿಷತ್ತಿನ ವಾಕ್ಯಗಳಿಗೆ ಸ್ಪಷ್ಟವಾಗಿ ವಿರೋಧವಾಗಿ ನಿಲ್ಲುತ್ತವೆ.

ಶಿಸ್ತುಬದ್ಧವಾಗಿ ಬರೆಯಲ್ಪಟ್ಟ ಶಾಸ್ತ್ರಗಳಲ್ಲಿ ಈ ಚತುಷ್ಟಯವಿರುವದನ್ನೇನೋ ಒಪ್ಪಬಹುದು. ಆದರೆ ಪರಂಪರಾಗತವಾಗಿ ಬಂದ ಸಂಪ್ರದಾಯಗಳು, ಜನಪದ ಸಾಹಿತ್ಯ ಕಲೆಗಳು, ವಚನಸಾಹಿತ್ಯಗಳು ಇವುಗಳಿಗೂ ಚತುಷ್ಟಯವನ್ನು ಕಲ್ಪಿಸಲು ಬರುತ್ತದೆಯೋ? ಕೊನೇ ಪಕ್ಷ ನಾನು ಕಂಡ ಯಕ್ಷಗಾನದಲ್ಲಿ, ನನ್ನ ಮನೆಯಲ್ಲಿ ಬಂದ ಕೆಲವು ವಿಶಿಷ್ಟ ಪರಂಪರೆಗಳು, ಊರಿನ ಜಾತ್ರೆಯ ಸಮಯದಲ್ಲಿ ನಡೆಯುವ ಸಂಪ್ರದಾಯಗಳನ್ನು ಗಮನಿಸಿ ಹೇಳುವದಾದರೆ ಇದು ನಿಜ ಎಂದೇ ಅನಿಸುತ್ತದೆ. ಆದರೆ ನಮ್ಮಲ್ಲಿ ಕಂಡುಬರುವ ಎಲ್ಲ ಸಂಪ್ರದಾಯಗಳ ಕುರಿತು ಅನುಬಂಧ ಚತುಷ್ಟಯವನ್ನು ರಚಿಸುವದರ ಕುರಿತು ಎಲ್ಲಿಯೂ ಅಧ್ಯಯನಗಳೇ ನಡೆದಿಲ್ಲ. ಬೌದ್ಧದರ್ಶನವು ಯಾರನ್ನು ಅಧಿಕಾರಿ ಎಂದು ತಿಳಿಸುತ್ತದೆ ಎಂಬುದನ್ನು ಕುರಿತು ಅಧ್ಯಯನ ಮಾಡದೇ, ಅದು ಇಡೀ ಸಮಾಜಕ್ಕೆ ಏನು ಮಾಡ ಹೊರಟಿದೆ ಎಂಬುದರ ಕುರಿತು ನಮ್ಮ ಅಧ್ಯಯನ ಸಾಗುತ್ತದೆ. ಇದೇ ಮಾತು ಶರಣಸಾಹಿತ್ಯಕ್ಕೂ ಅನ್ವಯವಾಗುತ್ತದೆ. ವಚನಸಾಹಿತ್ಯದಲ್ಲಿ ಭಕ್ತರಿಗಾಗಿ ಕೆಲವು ವಿಧಿ/ನಿಷೇಧಗಳಿವೆ, ಪ್ರಸಾದಿಗಳಿಗಾಗಿಯೇ ವಚನಗಳಿವೆ. ಶರಣರಿಗಾಗಿ ವಚನಗಳಿವೆ. ಈ ಷಟ್ ಸ್ಥಲವನ್ನು ಪಕ್ಕಕ್ಕಿಟ್ಟು ಇಡೀ ವಚನ ಸಾಹಿತ್ಯ ಇಡೀ ಸಮಾಜಕ್ಕೆ ಏನೋ ಹೇಳಹೊರಟಿದೆ ಎಂದು ಹೊರಟರೆ ಒಂದು ವಚನ ಅದೇ ವಚನಕಾರನ ಇನ್ನೊಂದು ವಚನಕ್ಕೆ ವಿರುದ್ಧವಾಗಿ ನಿಲ್ಲುತ್ತದೆ. ಹೀಗೆ ಅಧಿಕಾರಿಯನ್ನು ಸ್ಪಷ್ಟಪಡಿಸುವ ಅನುಬಂಧ ಚತುಷ್ಟಯವನ್ನು ಪಕ್ಕಕ್ಕಿಟ್ಟು ಒಂದು ತತ್ತ್ವವನ್ನು ಇಡೀ ಸಮಾಜದ ಮೇಲೆ ಹೇರಹೊರಡುವದು ವಸಾಹತುಪ್ರಜ್ಞೆಯ ಲಕ್ಷಣವಾಗುತ್ತದೆ.

ಮೇಲೆ ಹೇಳಿದ ಎರಡು ಸಮಾಜಗಳಲ್ಲಿ ಮೊದಲ ಸಮಾಜದಲ್ಲಿ ಕಂಡು ಬರುವ ಸಂಪ್ರದಾಯಗಳಲ್ಲಿ, ಕುಲಕಸುಬುಗಳಲ್ಲಿ, ಪರಂಪರಾಗತ ಶಾಸ್ತ್ರಗಳಲ್ಲಿ, ಕಲೆಗಳಲ್ಲಿ ಮನೆತನದ ಪೀಳಿಗೆಗಳು ಮತ್ತು ಶಿಷ್ಯರು ಮುಖ್ಯವಾದ ಅಧಿಕಾರಿಗಳಾಗಿರುತ್ತಿದ್ದರು. ಕುಂಬಾರನ ಮಗನಿಗೆ, ಸಹಜವಾಗಿಯೇ ಮಡಕೆ ಮಾಡುವ ವಿದ್ಯೆಯನ್ನು ಕಲಿಯುವ ಅಧಿಕಾರ ತಂದೆಯಿಂದಲೇ ಸಿಗುತ್ತಿತ್ತು. ಬ್ರಾಹ್ಮಣರು ತಮ್ಮ ಪೂಜಾವಿಧಾನವನ್ನು ತಲೆತಲಾಂತರದಿಂದ ಹೇಗೆ ರಕ್ಷಿಸಿಕೊಂಡು ಬರುತ್ತಿದ್ದರೋ, ಅದೇ ವಿಧಾನದಲ್ಲಿ, ಕುಂಬಾರರು, ಕಮ್ಮಾರರು ತಮ್ಮ ತಮ್ಮ ವಿದ್ಯೆಗಳನ್ನು ಹಾಗೆಯೇ ಕಾಯ್ದುಕೊಂಡು ಬರುತ್ತಿದ್ದರು. ಅಂತೆಯೇ, ಅನಧಿಕಾರಿಗಳ ಕೈಗೆ ತಮ್ಮ ವಿದ್ಯೆ ಸಿಗದಂತೆ ರಕ್ಷಿಸುವದೂ ಅವರ ಕಾರ್ಯವಾಗಿತ್ತು. ಆಗಿನ ಕಾಲದಲ್ಲಿ ವಿದ್ಯೆಯನ್ನು ಕ್ರಿಯಾಜ್ಞಾನದಿಂದಲೇ ಪಡೆಯಬೇಕಾಗಿದ್ದುದರಿಂದ ಅಂಥ ವಿದ್ಯೆಗಳು ಶ್ರದ್ಧೆಯಿಂದ ಕಲಿಯಲ್ಪಡುವ ಮತ್ತು ಕಲಿಸಲ್ಪಡುವ ವಾತಾವರಣವನ್ನು ಕಟ್ಟುವ ನಿಟ್ಟಿನಲ್ಲಿ ಅತ್ಯಂತ ಸುವ್ಯವಸ್ಥಿತವಾದ ಈ ಸಾಮಾಜಿಕ ರಚನೆಯನ್ನು ಜನರು ಮಾಡಿಕೊಂಡಿದ್ದರು.

ಈ ಅನುಬಂಧ ಚತುಷ್ಟಯ ಎಂಬ ಕಲ್ಪನೆ ನಮ್ಮೆಲ್ಲ ಸಂಪ್ರದಾಯಗಳಿಗೂ ಮತ್ತು ಕ್ರಿಯಾಜ್ಞಾನದಿಂದ ಹೊರಡುವ ವಿದ್ಯೆಗಳಿಗೂ ಅನ್ವಯವಾಗುತ್ತದೆ ಎಂದಿಟ್ಟುಕೊಂಡರೆ ಅದು ಸಮಾಜದಲ್ಲಿ ಕಾಣುವ ಬಹಳಷ್ಟು ಪ್ರಕ್ರಿಯೆಗಳನ್ನು ವಿವರಿಸುತ್ತದೆ ಎಂಬುದು ನನ್ನ ಅನಿಸಿಕೆ. ಏಕೆ ನಮ್ಮಲ್ಲಿ ಜಾತಿಯಿಂದ ಜಾತಿಗೆ ಭಾಷೆಗಳು ಭಿನ್ನ, ಒಂದು ಜಾತಿಯವರ ಭಾಷೆಯನ್ನು ಇನ್ನೊಬ್ಬರು ಏಕೆ ಕಲಿಯುತ್ತಿರಲಿಲ್ಲ, ಆಡುಭಾಷೆಗಳು ವ್ಯಾಕರಣಬದ್ಧ ಗ್ರಾಂಥಿಕ ಭಾಷೆಗಿಂತ ಏಕೆ ಭಿನ್ನವಾಗಿವೆ ಎಂಬುದನ್ನೆಲ್ಲ ನಾವು ತಕ್ಕಮಟ್ಟಿಗೆ ವಿವರಿಸಬಹುದು. ಕಾಳಿದಾಸನ ಅಭಿಜ್ಞಾನಶಾಕುಂತಲದಲ್ಲಿ ದುಷ್ಯಂತ ಸಂಸ್ಕೃತದಲ್ಲಿ ಕೇಳುತ್ತಿದ್ದರೆ, ಶಾಕುಂತಲೆ ಪ್ರಾಕೃತದಲ್ಲಿ ಉತ್ತರಿಸುತ್ತಿದ್ದಳು. ಹಾಗೆಯೇ, ಈಗಲೂ ಉತ್ತರಕನ್ನಡದ ಹಳ್ಳಿಗಳಲ್ಲಿ ಹವ್ಯಕ ಬ್ರಾಹ್ಮಣ ತನ್ನ ಆಡುಭಾಷೆಯಲ್ಲಿ ಪ್ರಶ್ನಿಸುತ್ತಾನೆ, ಗೌಡತಿ ತನ್ನ ಆಡುಭಾಷೆಯಲ್ಲಿ ಉತ್ತರಿಸುತ್ತಾಳೆ. ವೈರುಧ್ಯವೂ ಇಲ್ಲ, ಅಸಹನೆಯೂ ಇಲ್ಲ. ಇರುವದು ಕೇವಲ ತಮ್ಮ ಭಾಷೆಯನ್ನು ಮತ್ತು ತಮ್ಮತನವನ್ನು ತಮ್ಮಲ್ಲಿಯೇ ಇಟ್ಟುಕೊಳ್ಳುವ ಪ್ರವೃತ್ತಿ ಅಷ್ಟೇ. ಇದೇ ರೀತಿ ಸಂಪ್ರದಾಯಗಳು ಏಕೆ ತಮ್ಮ ಕುಲಕಸುಬುಗಳ ವಿದ್ಯೆಯನ್ನು ಏಕೆ ಮಾರಾಟಕ್ಕಿಟ್ಟಿರಲಿಲ್ಲ ಎಂದು ನಾವು ಈ ಅಧಿಕಾರಿ ಎಂಬ ಕಲ್ಪನೆಯಡಿ ಸುಲಭವಾಗಿ ಗ್ರಹಿಸಬಹುದು. ಕಲೆಗಳಲ್ಲಾಗಲೀ, ಸಾಹಿತ್ಯದಲ್ಲಾಗಲೀ ಪ್ರತಿಯೊಂದು ಸಂಪ್ರದಾಯವೂ ತನ್ನದೇ ಒಂದು ವಿಶಿಷ್ಟತೆಯನ್ನು ಏಕೆ ರೂಪಿಸಿಕೊಂಡಿತ್ತು ಎಂಬುದನ್ನು ನಾವು ಸುಲಭವಾಗಿ ಅರಿಯಬಹುದು. ಪ್ರತಿಯೊಂದು ಸಂಪ್ರದಾಯವೂ ತನ್ನ ವಿದ್ಯೆಯ ವಿಷಯವನ್ನು ತನ್ನ ಅಧಿಕಾರಿಗೆ ಮಾತ್ರ ದಾಟಿಸುವ ಪ್ರಕ್ರಿಯೆಯನ್ನು ರೂಪಿಸಿಕೊಂಡಿತ್ತು ಎನ್ನಬಹುದು.

ಭಾಷೆಯ ಕುರಿತು ಹೇಳುವದಾದರೆ, ಕೇವಲ ಗ್ರಂಥವನ್ನು ಬರೆಯುವ ಅಗತ್ಯವಿರುವವರು ಮಾತ್ರ ವ್ಯಾಕರಣವನ್ನು ಕಲಿಯುತ್ತಿದ್ದರು. ಆದರೆ ಉಳಿದ ವಿದ್ಯೆಗಳನ್ನು ಕಲಿಯುವವರಿಗೆ ಸಂಧಿ-ಸಮಾಸಗಳ ವ್ಯಾಕರಣಜ್ಞಾನದಿಂದ ಆಗಬೇಕಾದದ್ದೇನೂ ಇರುವದಿಲ್ಲ. ವ್ಯಾಕರಣ ಕಲಿತಿಲ್ಲ ಎಂಬ ಮಾತ್ರಕ್ಕೆ ಕ್ರಿಯಾಜ್ಞಾನದಿಂದಲೇ ಕಲಿತ ಮಾತೃಭಾಷೆಯೇನೂ ಕೆಟ್ಟಿರುವದಿಲ್ಲ. ಉದಾಹರಣೆಗೆ ಸಂಸ್ಕೃತಕ್ಕೂ ಮತ್ತು ಪ್ರಾಕೃತಕ್ಕೂ ಇರುವ ವ್ಯತ್ಯಾಸವು, ಪಂಪ-ರನ್ನರ ಹಳೆಗನ್ನಡಕ್ಕೂ ಮತ್ತು ನನ್ನ ಪ್ರದೇಶದಲ್ಲಿ ಕಂಡು ಬರುವ ಹವ್ಯಕ ಭಾಷೆಗೂ ಇರುವ ವ್ಯತ್ಯಾಸದಲ್ಲೂ ಕಂಡು ಬರುತ್ತದೆ. ಗ್ರಾಂಥಿಕ ಕನ್ನಡಕ್ಕೆ ವ್ಯಾಕರಣಶಾಸ್ತ್ರವಿದೆ. ಹವ್ಯಕ ಕನ್ನಡವೂ ಒಂದಾನೊಂದು ವ್ಯಾಕರಣವನ್ನು ಪಾಲಿಸುತ್ತದೆ. ಹವ್ಯಕ ಕನ್ನಡವನ್ನು ಕಲಿತ ಮಗುವೂ ಶಬ್ದಗಳನ್ನು ಕ್ರಿಯಾಜ್ಞಾನದ ಅನುಭವಾನುಸಾರವಾಗಿ ಪ್ರತ್ಯಯಗಳನ್ನು ಹಚ್ಚಿ ಮಾತಾಡುತ್ತದೆ. ಆದರೆ ಇಂದು ಅದರ ವ್ಯಾಕರಣದ ಕುರಿತಾದ ಅಧ್ಯಯನಗಳು ನಡೆಯುವದು ಕಡಿಮೆ. ಕಾರಣ, ಯೂರೋಪಿನಂತೆ ಭಾಷಾವಾರು ಪ್ರಾಂತ್ಯ ಮಾಡಿಕೊಂಡು ಗ್ರಾಂಥಿಕ ಕನ್ನಡವನ್ನು ಮಾತೃಭಾಷೆಯನ್ನಾಗಿ ನಾವು ಮಾಡಿಕೊಂಡಿದ್ದೇವೆ. ಹೀಗಾಗಿ ಹವ್ಯಕ ಭಾಷೆಯ ಪದಗಳು ಇಂದು ಲುಪ್ತವಾಗುತ್ತಿವೆ. ಈಗಾಗಲೇ ತುಳುಭಾಷಿಕರಲ್ಲಿ ಪ್ರತ್ಯೇಕತೆಯ ಕೂಗು ಎದ್ದಿದೆ. ಸಂಕೇತಿಯಂಥ ಇನ್ನೂ ಹಲವಾರು ಆಡುಭಾಷೆಗಳ ಅಸ್ತಿತ್ವ ಕುಸಿಯುತ್ತಿದೆ. ಇದು ಚಿಂತಿಸಬೇಕಾದ ವಿಷಯ ಎಂದು ಬುದ್ಧಿಜೀವಿಗಳಿಗೆ ಏಕೆ ಅನಿಸಿಲ್ಲವೋ ನನಗೆ ತಿಳಿಯದು.

ಕುಲಕಸುಬುದಾರರಿಗೆ ಗ್ರಾಂಥಿಕ ಭಾಷೆಯ ಅಗತ್ಯವೂ ಇರಲಿಲ್ಲ. ಹೀಗಾಗಿ ಅವರು ಅಧಿಕಾರಿಯೂ ಆಗಿರಲಿಲ್ಲ. ಕೇವಲ ಸಾಹಿತ್ಯವನ್ನು ಬರೆಯುವವರಲ್ಲಿ, ಆಧ್ಯಾತ್ಮಿಕ ಗ್ರಂಥಗಳನ್ನು ಬರೆಯುವವರಲ್ಲಿ ಗ್ರಾಂಥಿಕ ಭಾಷೆಗಳು ಉಳಿದವು. ಹಾಗೆ ನೋಡಿದರೆ ಈಗ ಬರೆಯಲು ನಾನು ಉಪಯೋಗಿಸುತ್ತಿರುವ ಕನ್ನಡ ಒಂದು ರೀತಿ ಗ್ರಾಂಥಿಕ ಭಾಷೆಯೇ ಏಕೆಂದರೆ ಈ ಭಾಷೆಯನ್ನು ಯಾವ ಕನ್ನಡಿಗನೂ ಮಾತನಾಡುವದಿಲ್ಲ. ಇದೇ ಮಾತು ಸಂಸ್ಕೃತಕ್ಕೂ ಪ್ರಾಕೃತಕ್ಕೂ ಅನ್ವಯಿಸುತ್ತದೆ. ಇಲ್ಲಿ ಭಾಷೆಗಳ ನಡುವೆ ಯುದ್ಧವಿಲ್ಲ. ಸಂಪ್ರದಾಯಗಳ ನಡುವೆಯೂ ಯುದ್ಧವಿಲ್ಲ.

ಇನ್ನು ಇಂಥ ಸಮಾಜದಲ್ಲಿ ಪ್ರೀಸ್ಟ್ ಹುಡ್ ಕಲ್ಪನೆಯಿಂದ ಬಂದ ಪುರೋಹಿತಶಾಹಿಯನ್ನು ಅರಸುವದು ಒಂದು ರೀತಿ ಕತ್ತಲೆಯಲ್ಲಿ ಕಲ್ಲಿದ್ದಲ ಕೋಣೆಯೊಂದರಲ್ಲಿ ಇಲ್ಲದಿರುವ ಕರಿಬೆಕ್ಕನ್ನು ಹುಡುಕುವ ಕೆಲಸ. ಏಕೆಂದರೆ ಬ್ರಾಹ್ಮಣರು ತಮ್ಮ ವೇದವಿದ್ಯೆಯನ್ನು ತಮ್ಮ ಅಧಿಕಾರಿಗಳಿಗೆ ಮಾತ್ರ ವರ್ಗಾಯಿಸುವದನ್ನು ಮಾತ್ರ ಪುರೋಹಿತಶಾಹಿ ಎಂದು ಕರೆಯುವದಾದರೆ, ಅದೇ ಅರ್ಥದಲ್ಲಿ ಕಮ್ಮಾರಶಾಹಿ, ಕುಂಬಾರಶಾಹಿ, ಎಂಬ ಶಬ್ದಗಳನ್ನೂ ಹುಟ್ಟಿಸಬೇಕಾಗುತ್ತದೆ.

ಹೀಗಾಗಿ ನಮ್ಮ ಸಮಾಜದ ರಚನೆಯಲ್ಲಿ ಅಧಿಕಾರಿ ಎಂಬ ಕಲ್ಪನೆಯೊಂದು ಅಸ್ತಿತ್ವದಲ್ಲಿದೆ ಎಂಬುದನ್ನು ನಾವು ಪರಿಶೀಲಿಸಿ ಒಪ್ಪಿಕೊಳ್ಳಬಹುದು ಎಂದು ನನ್ನ ಅನಿಸಿಕೆ. ಏಕೆಂದರೆ ಆ ಅಧಿಕಾರಿ ಎಂಬ ಅಂಶವನ್ನು ಪಕ್ಕಕ್ಕಿಟ್ಟರೆ ಸಂಸ್ಕೃತ v/s ಆಡುಭಾಷೆ, ಶಾಸ್ತ್ರೀಯ v/s ಜನಪದ ಮತ್ತು ಪುರೋಹಿತಶಾಹಿ v/s ಭಕ್ತ ಎಂಬ ಇಲ್ಲದ ವೈರುಧ್ಯಗಳು ಕಾಣಿಸತೊಡಗುತ್ತವೆ. ಆ ಕಲ್ಪನೆಯನ್ನು ಇಟ್ಟುಕೊಂಡರೆ, ಎಲ್ಲ ವೈರುಧ್ಯಗಳೂ ಮಾಯವಾಗಿ ಸಹಜವಾಗಿ ವಿವರಿಸಲು ಸಾಧ್ಯವಾಗುವಂಥ ಒಂದು ಸಾಮಾಜಿಕ ಊಹಾಸಿದ್ಧಾಂತ ನಮ್ಮೆದುರು ತೆರೆದುಕೊಳ್ಳುತ್ತದೆ.

ಆಧಾರ:

೧. ಸ್ಮೃತಿ-ವಿಸ್ಮೃತಿ: ಭಾರತೀಯ ಸಂಸ್ಕೃತಿ (ಮೂಲ: ಪ್ರೊ. ಬಾಲಗಂಗಾಧರ. ಅನುವಾದ: ಪ್ರೊ. ರಾಜಾರಾಮ ಹೆಗಡೆ
೨. ಬೌದ್ಧಿಕ ದಾಸ್ಯದಲ್ಲಿ ಭಾರತ (ಮೂಲ: ಪ್ರೊ. ಬಾಲಗಂಗಾಧರ. ಅನುವಾದ: ಪ್ರೊ. ರಾಜಾರಾಮ ಹೆಗಡೆ)
೩. ಬುದ್ಧಿಜೀವಿಗಳ ಮೂಢನಂಬಿಕೆಗಳು (ಮೂಲ: ಪ್ರೊ. ಬಾಲಗಂಗಾಧರ. ಅನುವಾದ: ಪ್ರೊ. ರಾಜಾರಾಮ ಹೆಗಡೆ)
೪. ಕೊಟ್ಟಕುದುರೆಯನೇರಲರಿಯದೆ (ಸಂಪಾದನೆ: ರಾಜಾರಾಮ ಹೆಗಡೆ ಮತ್ತು ಷಣ್ಮುಖ ಎ)

ವಿನಾಯಕ ಹಂಪಿಹೊಳಿ

6 ಟಿಪ್ಪಣಿಗಳು Post a comment
 1. ನವೀನ ಗಂಗೋತ್ರಿ
  ಸೆಪ್ಟೆಂ 23 2015

  ಅಧ್ಯಯನಕ್ಕೆ ಎಂದೇ ಹೊರಟಾಗ ನಮ್ಮ ನಮ್ಮ ಮನೆಯಲ್ಲಿ ಊರುಗಳಲ್ಲಿ ವಿವಿಧ ಸಮುದಾಯಗಳ ಮಧ್ಯೆ ನಡೆಯುವ ಸಂಭಾಷಣೆಯಲ್ಲಿ ಭಾಷೆಯ ಭಿನ್ನತೆ ನಮ್ಮ ಗಮನಕ್ಕೆ ಬರುತ್ತದೆ. ಅದಿಲ್ಲದಿದ್ದರೆ, ದೈನಂದಿನ ಬದುಕಿನಲ್ಲಿ ಇದೆಲ್ಲ ತಿಳಿಯುವುದೇ ಇಲ್ಲ. ಅಷ್ಟರ ಮಟ್ಟಿಗೆ ಸಹಜವಾದ ಬದುಕೊಂದನ್ನು ಸಾಮಾನ್ಯ ಜನ ಬದುಕುತ್ತಿದ್ದಾರೆ. ಪ್ರತಿಯೊಂದು ಪಂಥದ ಹುಟ್ಟೂ ಇನ್ನೊಂದನ್ನು ವಿರೋಧಿಸಲಾಗಿಯೇ ಆಗಿದೆ ಎನ್ನುವ ಪರಿಕಲ್ಪನೆಯಲ್ಲೇ ತೊಡಕಿದೆ ಎನ್ನುವ ಸತ್ಯ ಯಾಕೆ ಬುದ್ಧಿಜೀವಿಗಳಿಗೆ ತೋರದು?

  ಕನ್ನಡದಲ್ಲಿ ಶುದ್ಧ ಚಿಂತನೆಯನ್ನು ಒಳ್ಳೆ ಭಾಷೆಯಲ್ಲಿ ಕಟ್ಟಿಕೊಡುವ ನಿಲುಮೆಯ ನಿಲುವಿಗೆ ಋಣಿ.

  ಉತ್ತರ
 2. ಸೆಪ್ಟೆಂ 23 2015

  They do not want to know or concede the fact. It is about personal gain and agenda.Nothing to do with betterment of the society.They very well know it.
  Example of the group working to exclude MAHAPRANA letters from kannada language is a good example,.
  They all are getting aid from the vested interests to divide the society. This started in late eighties and we are seeing the out put now.

  ಉತ್ತರ
 3. rajaram hegde
  ಸೆಪ್ಟೆಂ 23 2015

  ತುಂಬಾ ವಿಚಾರಪೂರ್ಣವಾಗಿದೆ ವಿನಾಯಕ್. ನೀವು ಒಂದು ಆಸಕ್ತಿ ಪೂರ್ಣವಾದ ಸಮಸ್ಯೆಯೊಂದರ ರೂಪುರೇಷೆಯನ್ನು ಪ್ರಸ್ತುತ ಪಡಿಸಿದ್ದೀರಿ. ಈ ವಿಷಯವನ್ನು ಹೆಚ್ಚಿನ ಅಧ್ಯಯನದಿಂದ ವ್ಯವಸ್ಥಿತವಾಗಿ ಬೆಳೆಸುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಪ್ರಯತ್ನಿಸಿ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments