ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 28, 2015

ಜಾತಿವಿನಾಶಕ್ಕಾಗಿ ಜಾತಿಸಂಘಟನೆಗಳೇ?

‍CSLC Ka ಮೂಲಕ

– ವೀಣಾ. E, ಕುವೆಂಪು ವಿಶ್ವವಿದ್ಯಾನಿಲಯ. 

ಪ್ರಸ್ತುತ ಪ್ರತೀ ಜಾತಿಯೂ ಸಂಘಟನೆಯನ್ನು ಮಾಡಿಕೊಳ್ಳುವ ಪ್ರವೃತ್ತಿ ಕಂಡುಬರುತ್ತಿದೆ. ಈ ಜಾತಿ ಸಂಘಟನೆಯ ರಚನೆಗೆ ಎರಡು ಕಾರಣಗಳನ್ನು ನೀಡಲಾಗುತ್ತದೆ: 1. ಜಾತಿಗಳ ಅಸ್ಮಿತೆ(identity)ಯನ್ನು ಬಲಪಡಿಸಿಕೊಳ್ಳುವುದು. 2. ತಾರತಮ್ಯವನ್ನು ಹುಟ್ಟುಹಾಕುತ್ತಿರುವ ಜಾತಿವ್ಯವಸ್ಥೆಯನ್ನು ನಾಶಮಾಡುವುದು. ಆದರೆ ಮೇಲ್ನೋಟಕ್ಕೇ ಗೋಚರಿಸುವಂತೆ ಇವೆರಡೂ ಕಾರಣಗಳು ಪರಸ್ಪರ ತದ್ವಿರುದ್ಧವಾಗಿವೆ. ಅಂದರೆ ಜಾತಿ ಅಸ್ಮಿತೆಯನ್ನು ಬಲಪಡಿಸಿದರೆ ಜಾತಿವ್ಯವಸ್ಥೆ ನಾಶವಾಗುವುದಿಲ್ಲ. ಜಾತಿವ್ಯವಸ್ಥೆಯನ್ನು ನಾಶಮಾಡಬೇಕೆಂದರೆ ಜಾತಿ ಅಸ್ಮಿತೆಯನ್ನು ಬಲಪಡಿಸುವಂತಿಲ್ಲ. ಏಕೆಂದರೆ, ಜಾತಿಗಳ ಅಸ್ಮಿತೆಯನ್ನು ಗಟ್ಟಿಗೊಳಿಸುವುದು ಹೇಗೆ ಜಾತಿವ್ಯವಸ್ಥೆಯನ್ನು ನಾಶಾಮಾಡಿದಂತಾಗುತ್ತದೆ?

ಜಾತಿಸಂಘಟನೆಗಳ ರಚನೆಗೆ ಒತ್ತುಕೊಡುವ ಈ ಎರಡು ಅಂಶಗಳನ್ನು ಒಂದೊಂದಾಗಿ ಪರಿಶೀಲಿಸುವ. ಮೊದಲನೆಯದಾಗಿ, ಜಾತಿ ಅಸ್ಮಿತೆಯನ್ನು ಬಲಪಡಿಸುವುದು: ಒಂದು ಸಮುದಾಯಕ್ಕೆ ಸೇರಿದ ಹಲವಾರು ಜಾತಿಗಳು ಬೇರೆ ಬೇರೆ ಪ್ರದೇಶಗಳಲ್ಲಿ ವಿಭಿನ್ನ ಹೆಸರುಗಳ ಮೂಲಕ ಗುರುತಿಸಿಕೊಳ್ಳುತ್ತಿವೆ. ಅವುಗಳನ್ನೆಲ್ಲಾ ಒಟ್ಟುಗೂಡಿಸಿ ಒಂದು ಪ್ರಬಲ ಅಸ್ಮಿತೆಯಾಗಿ ಬಲಪಡಿಸಲು ಸಂಘಟನೆಗಳು ಅಗತ್ಯ ಎನ್ನುತ್ತಾರೆ. ಉದಾಹರಣೆಗೆ ನೊಣಬ, ಸಾಧರು, ಪಂಚಮಸಾಲಿ, ಜಂಗಮ ಮುಂತಾದವುಗಳನ್ನು ಲಿಂಗಾಯತ ಎಂದು ಮತ್ತು ಬಿಲ್ಲವರು, ದೀವರು, ಪೂಜಾರಿಗಳು, ಗಮಲ್ಲಾ ಇನ್ನೂ ಕೆಲವು ಜಾತಿಗಳನ್ನು ಈಡಿಗ ಎಂಬ ಒಂದು ಅಸ್ಮಿತೆಯ ಅಡಿಯಲ್ಲಿ ಐಕ್ಯಗೊಳಿಸುವ ಯತ್ನಗಳು ನಡೆದಿವೆ. ಈ ರೀತಿಯಾಗಿ ಬ್ರಾಹ್ಮಣ, ಒಕ್ಕಲಿಗ, ಕುರುಬ, ದಲಿತ ಇತ್ಯಾದಿ ಜಾತಿಗಳು ಸಂಘಟನೆಗಯಾಗುತ್ತಿರುವ ಪ್ರಕ್ರಿಯೆ ಇತ್ತಿಚೆಗೆ ಸಾಮಾನ್ಯ ಎನಿಸಿಬಿಟ್ಟಿದೆ. ಆಯಾ ಜಾತಿಗಳ ವೃತ್ತಿ, ಕತೆ-ಪುರಾಣಗಳು, ಆಚರಣೆಗಳನ್ನು ಆಧಾರವಾಗಿ ಇಟ್ಟುಕೊಂಡು ಹಲವು ಜಾತಿಗಳನ್ನು ಒಂದು ಅಸ್ಮಿತೆಯ ಒಳಗೆ ತರುವ ಪ್ರಯತ್ನಗಳು ನಡೆಯುತ್ತಿವೆ. ಆದರೆ, ಈ ಹಲವು ಜಾತಿಗಳು ನಿಜವಾಗಿಯೂ ಒಂದು ಅಸ್ಮಿತೆಗೆ ಬದ್ಧವಾಗಿವೆಯೇ? ಸಂಘಟನೆಗಳು ಇವುಗಳ ಅಸ್ಮಿತೆಯನ್ನು ಬಲಪಡಿಸಲು ಯಶಸ್ವಿಯಾಗಿವೆಯೇ? ಎಂದು ಪರಿಶೀಲಿಸದರೆ ಸಿಗುವ ಉತ್ತರ ಮಾತ್ರ ನಕಾರಾತ್ಮಕವಾಗಿದೆ. ಇದಕ್ಕೆ ಈಡಿಗ ಜಾತಿಸಮುದಾಯ ಒಂದು ದೃಷ್ಟಾಂತವಾಗಿದೆ.

ಬಿಲ್ಲವ, ಹಳೇಪೈಕ, ಗಮಲ್ಲಾ, ದೀವರು ಮೊದಲಾದ ಜಾತಿಗಳನ್ನು ಒಟ್ಟುಗೂಡಿಸಿ ಸರ್ಕಾರ  ಈಡಿಗ ಎಂದು ಗುರುತಿಸಿದೆ. ಈ ಜಾತಿಗಳು ಒಂದೇ ಐತಿಹಾಸಿಕ ಮೂಲವನ್ನು ಹೊಂದಿರುವ ಹೆಂಡ ಇಳಿಸುವ ವೃತ್ತಿಯನ್ನು ಮಾಡುವ ಜಾತಿಗಳಾಗಿದ್ದು, ಸಾಮಾನ್ಯವಾಗಿ ಒಂದೇ ವೃತ್ತಿ, ಐತಿಹ್ಯ, ಆಚರಣೆಗಳು ಹಾಗೂ ಪರಸ್ಪರ ಸಂಬಂಧವನ್ನು ಹೊಂದಿರುವ ಗುಂಪುಗಳಾಗಿವೆ. ಇದನ್ನು ವಸಾಹತು ಕಾಲಘಟ್ಟದಲ್ಲಾದ ಜನಾಂಗ ಅಧ್ಯಯನಗಳು ಸ್ಪಷ್ಟಪಡಿಸುತ್ತವೆ. ಆದ್ದರಿಂದ ಇವುಗಳನ್ನು ಈಡಿಗ ಎಂದು ಗುರುತಿಸಬಹುದು ಎನ್ನಲಾಗುತ್ತಿದೆ. ಆದರೆ ಈ ಜಾತಿಗಳು ಬೇರೆ ಬೇರೆ ವೃತ್ತಿ ಮತ್ತು ಐತಿಹ್ಯವನ್ನು ಹೊಂದಿರುವುದಾಗಿ ಆ ಜಾತಿಗಳ ಪ್ರತ್ಯೇಕ ವಿವರಣೆಗಳು ತಿಳಿಸುತ್ತವೆ. ಅಷ್ಟೆ ಅಲ್ಲದೇ ತಾವು ಈಡಿಗರಿಗಿಂತ ಬೇರೆ, ತಮ್ಮನ್ನು ಈಡಿಗ ಎಂದು ಗುರುತಿಸದೇ ಪ್ರತ್ಯೇಕವಾಗಿ ಗುರುತಿಸುವಂತೆ ಸರ್ಕಾರದ ಮೊರೆಹೋಗಿದ್ದೂ ಉಂಟು. ಜೊತೆಗೆ ಆ ಅಸ್ಮಿತೆಯನ್ನು ಬಲಪಡಿಸಿಕೊಳ್ಳಲು ಈಡಿಗ ಸಂಘಟನೆಗೆ ಹೊರತಾದ ಪ್ರತ್ಯೇಕ ಸಂಘಟನೆಗಳನ್ನೂ ಮಾಡಿಕೊಳ್ಳುತ್ತಿವೆ. ಉದಾಹರಣೆಗೆ ಅಖಿಲ ಭಾರತ ಬಿಲ್ಲವ ಸಂಘಟನೆ. ಹೀಗೆ ಈ ಜಾತಿಗಳನ್ನು ಈಡಿಗ ಎಂದು ಸಂಘಟಿಸಲು ಯಾವ ಅಂಶಗಳನ್ನು ಆಧಾರವಾಗಿ ಕೊಡಲಾಗುತ್ತಿದೆಯೋ ಆ ಅಂಶಗಳನ್ನೇ ಆಧಾರವಾಗಿಟ್ಟುಕೊಂಡು ತಾವು ಈಡಿಗರಿಗಿಂತ ಬೇರೆ ಎಂದು ಹೇಳಿಕೊಳ್ಳುತ್ತಿವೆ. ಅಂದರೆ ಜಾತಿಸಂಘಟನೆಗೆ ಆಧಾರವಾಗಿ ನೀಡುವ ಸಂಗತಿಗಳೇ ಅವಗಳ ಸಂಘಟನೆಗೆ ಅಡ್ಡಿಯಾಗಿವೆ. ಈ ಕುರಿತು ಜನಾಂಗೀಯ ಅಧ್ಯಯನಗಳಲ್ಲಿಯೂ ಹಲವಾರು ನಿಜಾಂಶಗಳು ದೊರಕುತ್ತವೆ.

ಜನಾಂಗೀಯ ಅಧ್ಯಯನಕಾರರಲ್ಲಿ ಪ್ರಮುಖರಾದ ಎಡ್ಗರ್ ಥರ್ಸ್ಟನ್, ಎಂಥೋವೆನ್, ಹರ್ಬಟ್ ರಿಸ್ಲೆ ಮೊದಲಾದವರ ಅಧ್ಯಯನಗಳಲ್ಲಿ ಈಡಿಗ ಅಸ್ಮಿತೆಯು ಒಳಗೊಂಡ ಜಾತಿಗಳ ಕುರಿತು ಗಮನಿಸಿದಾಗ ಕಂಡುಬರುವ ಸಂಗತಿಗಳೆಂದರೆ; 1. ಈಡಿಗ ಸಮುದಾಯದಲ್ಲಿನ ಹಳೇಪೈಕ, ಕಲಾಲ್, ಬಿಲ್ಲವ ಮೊದಲಾದವುಗಳನ್ನು ಜಾತಿಗಳೆಂದೇ ಗುರುತಿಸಿರುವುದು (ಥರ್ಸ್ಟನ್, 2001, 36. VOL-VII, Crooke, ಘ. 1999, 319). 2. ಈ ಜಾತಿಗಳು ಪ್ರತ್ಯೇಕ ಉಪಗುಂಪುಗಳನ್ನು ಹೊಂದಿರುವುದು (ಏಂಥೋವೆನ್, 1990: 35 ಥರ್ಸ್ಟನ್, 2001, 367). 3. ವೈವಾಹಿಕ ಸಂಬಂಧಗಳು ಆಯಾ ಜಾತಿಗಳಲ್ಲಿ ಮಾತ್ರ ನಡೆಯುವುದು ಹಾಗೂ ಬಿಲ್ಲವ, ದೀವರು ಮೊದಲಾದವುಗಳು ವೈವಾಹಿಕ ಸಂಬಂಧಗಳಿಗೆ ಸಂಬಂಧಿಸಿದ ಬೇರೆ ಬೇರೆ ಬಳಿಗಳನ್ನು ಹೊಂದಿರುವುದು (ಥರ್ಸ್ಟನ್, 2001, 243-244, Enthoven, 1990, Vo-II, -, 36-37). 4. ಹೆಂಡ ಇಳಿಸುವ ವೃತ್ತಿಯೊಂದೇ ಅಲ್ಲದೇ ಬೇರೆ ಬೇರೆ ವೃತ್ತಿಯನ್ನು ಮಾಡುವುದು ಹಾಗೂ ಆ ವೃತ್ತಿ ಹೆಸರಿನಲ್ಲಿಯೇ ಗುರುತಿಸಿಕೊಳ್ಳುತ್ತಿರುವುದು (ಥರ್ಸ್ಟನ್,, 2001, 244). 5. ಈಡಿಗ ಅಸ್ಮಿತೆಯಡಿಯಲ್ಲಿಯೇ ಗುರುತಿಸಿರುವ ಈ ಜಾತಿಗಳು ಒಂದು ಜಾತಿ ಮತ್ತೊಂದು ಜಾತಿಗಿಂತ ಮೇಲು-ಕೀಳು ಎಂದು ಗುರುತಿಸಿಕೊಳ್ಳುವುದು.

ಹೀಗೆ ಜನಾಂಗೀಯ ಅಧ್ಯಯನಕಾರರ ವಿವರಣೆಗಳನ್ನು ಗಮನಿಸಿದಾಗ ಈಡಿಗ ಜಾತಿಗಳ ನಡುವೆ ಹಲವಾರು ವ್ಯತ್ಯಾಸಗಳಿರುವುದು ಸ್ಪಷ್ಟವಾಗುತ್ತದೆ. ಇನ್ನೂ ಕೆಲವೊಮ್ಮೆ ಅಧ್ಯಯನಕಾರರು ಇದರಲ್ಲಿನ ಕೆಲವು ಜಾತಿಗಳ ನಡುವೆ ಸಾಮ್ಯತೆ ಇದೆ ಎನ್ನುವ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ ಈ ಅಭಿಪ್ರಾಯಗಳನ್ನೇ ಆಧಾರವಾಗಿಟ್ಟುಕೊಂಡು ಇವೆಲ್ಲಾ ಈಡಿಗ ಜಾತಿಗಳು ಎಂದು ಒಂದೊಮ್ಮೆ ಸಾಭೀತುಪಡಿಸುವುದಾದರೆ, ಇದಕ್ಕೆ ವ್ಯತಿರಿಕ್ತವಾಗಿರುವ ಅವರದೇ ಅಭಿಪ್ರಾಯಗಳ ಮೂಲಕ ಇವುಗಳು ಈಡಿಗ ಸಮುದಾಯದ ಜಾತಿಗಳಾಗಲು ಸಾಧ್ಯವಿಲ್ಲ ಎಂದು ವಾದಿಸಲೂ ಅವಕಾಶವಿದೆ. ಅಂದರೆ, ಜಾತಿ ನಿರ್ಧಾರಕ ಅಂಶಗಳೆಂದು ಹೇಳುವ ವೃತ್ತಿಯನ್ನು ಆಧಾರವಾಗಿ ತೆಗೆದುಕೊಂಡರೆ, ಒಂದೊಂದು ಜಾತಿ ಒಂದೊಂದು ವೃತ್ತಿ ಮೂಲವನ್ನು ಹೊಂದಿವೆ. ಇದಕ್ಕನುಗುಣವಾಗಿ ಬೇರೆ ಬೇರೆ ಐತಿಹ್ಯವನ್ನೂ ಹೊಂದಿವೆ. ಈ ಜಾತಿಗಳ ನಡುವೆ ವೈವಾಹಿಕ ಸಂಬಂಧಗಳೂ ನಡೆಯುವುದಿಲ್ಲ. ಜೊತೆಗೆ ಜಾತಿ, ಉಪಜಾತಿ, ಉಪವಿಭಾಗಗಳ ಕುರಿತು, ಅವುಗಳನ್ನು ನಿರ್ಧರಿಸುವ ಅಂಶಗಳ ಕುರಿತು ಯಾರಿಗೂ ಸ್ಪಷ್ಟತೆ ಇಲ್ಲ್ಲ.

ಹೀಗಿದ್ದರೂ ಈ ಜಾತಿಗಳ ನಡುವಿನ ಭಿನ್ನತೆಯನ್ನು ನಗಣ್ಯಮಾಡಿ ಈಡಿಗ ಎಂದು ಸಂಘಟಿಸುವ ಪ್ರಯತ್ನ ನಡೆಯುತ್ತಿದೆ. ಈ ಜಾತಿಗಳನ್ನು ಈಡಿಗ ಎಂಬ ಒಂದು ಅಸ್ಮಿತೆಯಡಿಯಲ್ಲಿ ತರುವ ಮೂಲಕ ಜಾತಿಗಳು ಸಾಂಪ್ರದಾಯಿಕವಾಗಿ ಹಿಂದಿನಿಂದ ಗುರುತಿಸಿಕೊಂಡು ಬರುತ್ತಿದ್ದ ಅಸ್ಮಿತೆಯನ್ನೇ ನಗಣ್ಯಮಾಡಲಾಗುತ್ತಿದೆ. ಒಂದೊಮ್ಮೆ ಜಾತಿಗಳ ನಡುವಿನ ಭಿನ್ನತೆಯನ್ನು ನಿರ್ಲಕ್ಷಿಸಿ, ಅವುಗಳೆಲ್ಲ ಒಂದು ಅಸ್ಮಿತೆ ಅಡಿಯಲ್ಲಿ ರೂಪುಗೊಳ್ಳಬೇಕೆಂದಾದರೆ ಅವು ತಮ್ಮ ಮೂಲ ಅಸ್ಮಿತೆಯಿಂದ ಕಳಚಿಕೊಳ್ಳಬೇಕಾಗುತ್ತದೆ. ಆಗ ಕ್ರಮೇಣ ಆ ಅಸ್ಮಿತೆ ನಾಶವಾಗಬಹುದು. ಹಾಗಾದರೆ ಸಂಘಟನೆಗಳು ತಮ್ಮ ಉದ್ದೇಶಕ್ಕೆ ವಿರುದ್ಧವಾಗಿರುವುದನ್ನೇ ಸಾಧಿಸಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ತಮ್ಮ ಮೂಲ ಅಸ್ಮಿತೆಯನ್ನು ಕಾಪಾಡಿಕೊಳ್ಳಲು ಕೆಲವು ಜಾತಿಗಳು ಪ್ರಯತ್ನಿಸುತ್ತಿವೆ. ಉದಾಹರಣೆಗೆ ದೀವರು ತಾವು ಈಡಿಗರಿಗಿಂತ ವೃತ್ತಿ, ಆಚರಣೆಯಲ್ಲಿ ಭಿನ್ನವಾಗಿರುವ ಕಾರಣ ನಮ್ಮನ್ನು ದೀವರೆನ್ನುವ ಹೆಸರಿನೊಂದಿಗೆ ಗುರುತಿಸಬೇಕೆಂದು ಗಣಪತಿಯಪ್ಪನವರ ನೇತೃತ್ವದಲ್ಲಿ ಸಕರ್ಾರಕ್ಕೆ ಮನವಿ ಸಲ್ಲಿಸಿದ್ದಾರೆ. ವಾಸ್ತವ ಹೀಗಿರುವಾಗ ಈ ಸಂಘಟನೆಗಳು ಏನು ಮಾಡುತ್ತಿವೆ. ಜಾತಿಗಳ ಅಸ್ಮಿತೆಯನ್ನು ಬಲಪಡಿಸುತ್ತಿವೆಯೋ? ಅಥವಾ ಅವುಗಳ ಸಾಂಸ್ಕೃತಿಕ ಅಸ್ಮಿತೆಯನ್ನು ನಾಶಮಾಡುತ್ತಿವೆಯೋ? ಸಂಘಟನೆಗಳ ಕಾರ್ಯವೈಖರಿಯನ್ನು ನೋಡಿದರೆ ಜಾತಿಗಳ ಅಸ್ಮಿತೆಯನ್ನು ಬಲಪಡಿಸುವುದರ ಬದಲಾಗಿ, ಒಂದು ಪ್ರಬಲ ಅಸ್ಮಿತೆಯಾಗಿ ರಚನೆಯಾಗಬೇಕೆನ್ನುವ ಮೂಲಕ ಕೆಲವು ಜಾತಿಗಳು ಸಾಂಪ್ರದಾಯಿಕವಾಗಿ ಬಂದ ಅಥವಾ ತಮ್ಮ ಸಾಂಸ್ಕೃತಿಕ ಅಸ್ಮಿತೆಯನ್ನು ಕಳೆದುಕೊಳ್ಳಬೇಕೆಂಬ ಒತ್ತಡವನ್ನು ಸೃಷ್ಟಿಸುತ್ತಿವೆ. ಅಂದರೆ ಜಾತಿ ಅಸ್ಮಿತೆಯನ್ನು ಗಟ್ಟಿಗೊಳಿಸುವ ಬದಲಿಗೆ ಅವುಗಳ ಅಸ್ಮಿತೆಯ ನಾಶಕ್ಕೆ ಕಾರಣವಾಗುತ್ತಿವೆ.

ಈಗ ಜಾತಿಸಂಘಟನೆಗಳ ಅಸ್ತಿತ್ವದ ಎರಡನೆಯ ಕಾರಣಕ್ಕೆ ಬರುವುದಾದರೆ, ಈ ಜಾತಿಸಂಘಟನೆಗಳು ಜಾತಿವ್ಯವಸ್ಥೆಯನ್ನು ನಾಶಮಾಡುತ್ತಿವೆಯೆ? ಜಾತಿವ್ಯವಸ್ಥೆಯ ವಿವರಣೆಯ ಪ್ರಕಾರ, ಹಲವಾರು ಬಿಡಿ ಬಿಡಿ ಜಾತಿಗಳು (ಬಿಡಿ ಬಿಡಿ ಘಟಕಗಳು) ಸೇರಿ ಒಂದು ವ್ಯವಸ್ಥೆಯ ರೂಪದಲ್ಲಿ ಕಾರ್ಯ ನಿರ್ವಹಿಸುತ್ತವೆ. ಈ ವ್ಯವಸ್ಥೆಯಲ್ಲಿ ಕೆಲವು ಜಾತಿಗಳದ್ದು ಶ್ರೇಷ್ಟ ಸ್ಥಾನವಾದರೆ, ಇನ್ನು ಕೆಲವುಗಳದ್ದು ಕನಿಷ್ಟ (ಮೇಲು-ಕೀಳು). ಜಾತಿ, ಉಪಜಾತಿ, ಉಪಉಪಜಾತಿಗಳು ಎಂಬ ವಿಭಾಗಗಳಿರುತ್ತವೆ. ಜಾತಿಗಳು ಆಂತರಿಕ ವಿವಾಹ ಪದ್ಧತಿಯನ್ನು ಹೊಂದಿರುತ್ತವೆ. ಜಾತಿ ಆಧಾರಿತ ವೃತ್ತಿಯನ್ನೇ ಮಾಡಬೇಕಾಗಿರುತ್ತದೆ. ಇವುಗಳನ್ನು ನಿಯಮಾನುಸಾರವಾಗಿ ಜಾರಿಗೆ ತರಲು ಸೂಚಿಸುವ ಗ್ರಂಥಗಳಿರುತ್ತವೆ. ಈ ಜಾತಿಗಳನ್ನು, ಹಾಗೂ ಅವುಗಳ ನಿಯಮಗಳನ್ನು ನಿರ್ದೇಶಿಸುವ ಸಂಸ್ಥೆಗಳಿರುತ್ತವೆ ಇತ್ಯಾದಿ… ಒಂದೊಮ್ಮೆ ಜಾತಿಸಂಘಟನೆಗಳು ಈ ಜಾತಿವ್ಯವಸ್ಥೆಯನ್ನು ನಾಶಮಾಡುತ್ತಿವೆ ಎಂದಾದರೆ ಈ ಸಂಗತಿಗಳನ್ನು ನಿರಾಕರಿಸುವುದು ಸಂಘಟನೆಗಳಿಗೆ ಪೂರ್ವನಿಬಂಧನೆಯಾಗುತ್ತದೆ. ಆದರೆ ಸಂಘಟನೆಗಳು ಈ ನಿಟ್ಟಿನಲ್ಲಿ ತೊಡಗಿಕೊಂಡಿವೆಯೆ? ಇಲ್ಲ. ಏಕೆಂದರೆ ಜಾತಿಗಳನ್ನು ವೃತ್ತಿ, ಆಂತರಿಕ ವಿವಾಹ ಗುಂಪುಗಳು, ಉಪಗುಂಪುಗಳು ಇವುಗಳ ಆಧಾರದ ಮೇಲೆಯೇ ಒಟ್ಟುಗೂಡಿಸಲು ಪ್ರಯತ್ನಿಸುತ್ತಿವೆ. ಅಂದರೆ  ಯಾವ ಅಂಶಗಳನ್ನು ಅಲ್ಲಗಳೆಯಬೇಕಾಗಿತ್ತೊ ಅವುಗಳನ್ನೇ ಸಂಘಟನೆಗೆ ಆಧಾರಗಳಾಗಿ ಬಳಸಿಕೊಳ್ಳುತ್ತಿವೆ. ತಾವು ಸಾಮಾಜಿಕವಾಗಿ ಹಿಂದುಳಿದಿರುವ ಅಥವಾ ಜಾತಿಕನಿಷ್ಠರೆಂದು, ಬಿಡಿ ಬಿಡಿಯಾಗಿರುವ ಜಾತಿಗಳನ್ನು ಒಟ್ಟುಗೂಡಿಸಿ, ಅವುಗಳಿಗೆ ಒಂದಿಷ್ಟು ಸಾಮಾನ್ಯ ನೀತಿ, ನಿಯಮಗಳನ್ನು ರೂಪಿಸುವ, ಆ ಮೂಲಕ ಜಾತಿಗಳನ್ನು ನಿರ್ದೇಶಿಸುವ ಹೊಸ ಪ್ರವೃತ್ತಿಗಳು ಆರಂಭವಾಗಿವೆ. ಈ ಮೂಲಕ ಅಸ್ತಿತ್ವದಲ್ಲಿಲ್ಲದ ‘ಜಾತಿವ್ಯವ್ಯವಸ್ಥೆಯ ನಿರ್ಮೂಲನೆಗಾಗಿ ಹುಟ್ಟಿಕೊಂಡ ಜಾತಿ ಸಂಘಟನೆಗಳು ನಿರ್ಮೂಲನೆಯ ಬದಲಾಗಿ ಹೊಸ ವ್ಯವಸ್ಥೆಯ ಸೃಷ್ಟಿಗೆ ಕಾರಣವಾಗುತ್ತಿವೆ. ಈ ಅರ್ಥದಲ್ಲಿ, ಕೇವಲ ಸಿದ್ಧಾಂತದ ಹಂತದಲ್ಲಿರುವ ‘ ಜಾತಿವ್ಯವ್ಯವಸ್ಥೆಯನ್ನು ವಾಸ್ತವವಾಗಿ ಸೃಷ್ಟಿಸುವ ಪ್ರಕ್ರಿಯೆಗಳು ಆರಂಭವಾಗಿವೆ ಎನ್ನಬಹುದು. ಅವುಗಳ ರಚನೆಗೆ ನೀಡಿದ ವಿವರಣೆಗಳಲ್ಲಿನ ದೋಷಗಳು ಸ್ಪಷ್ಟ. ಹಾಗಾದರೆ ಜಾತಿ ಸಂಘಟನೆಗಳ ರಚನೆಯ ಅನಿವಾರ್ಯತೆ ಏನು? ಉತ್ತರಕ್ಕೆ ನಮ್ಮ ರಾಜಕೀಯ ವ್ಯವಸ್ಥೆಯ ಕಡೆಗೆ ದೃಷ್ಟಿ ಹರಿಸಬೇಕಿದೆ.

ಪ್ರಸ್ತುತ ರಾಜಕೀಯ ವ್ಯವಸ್ಥೆಯ ಸ್ವರೂಪವನ್ನು ಗಮನಿಸಿದರೆ ಪ್ರಭುತ್ವದ ಪ್ರತಿಯೊಂದು ಯೋಜನೆಗಳೂ ಜಾತಿಯಾಧಾರಿತವಾಗಿಯೇ ಇರುತ್ತವೆ. ಸಂವಿಧಾನದ ಮೂಲಕ ನೀಡಲಾಗಿರುವ ಮೀಸಲಾತಿಯಿಂದ ಹಿಡಿದು ಕೆಲವು ಜನಪ್ರಿಯ ಯೋಜನೆಗಳೂ ಸಹ ಜಾತಿಯಾಧಾರಿತವಾಗಿಯೇ ಇರುತ್ತವೆ. ಜೊತೆಗೆ ರಾಜಕಾರಣಿಗಳ ಆಯ್ಕೆಯಿಂದ ಅವರಿಗೆ ಅಧಿಕಾರ ನೀಡುವವರೆಗೂ ಅವರ ಜಾತಿ ಮತ್ತು ಜಾತಿಯ ಸಂಖ್ಯಾಬಲವನ್ನು ಪರಿಗಣಿಸಲಾಗುತ್ತದೆ. ಆದ್ದರಿಂದ ಜನರು ತಮ್ಮ ಪ್ರತಿನಿಧಿತ್ವಕ್ಕಾಗಿ ಅಥವಾ ರಾಜಕೀಯ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಲು ಹಾಗೂ ಸರ್ಕಾರದ ಸೌಲಭ್ಯವನ್ನು ಪಡೆದುಕೊಳ್ಳಲು ತಮ್ಮ ಜಾತಿಯ ಸಂಖ್ಯಾಬಲವನ್ನು ಮತ್ತು ಜಾತಿಯ ಅಸ್ಮಿತೆಯನ್ನು ಬಲಪಡಿಸಿಕೊಳ್ಳಲೇ ಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದೆ. ಈ ನಿಟ್ಟಿನಲ್ಲಿ ಜಾತಿ ಸಂಘಟನೆಗಳಾಗುತ್ತಿವೆ. ಅಂದರೆ ಪ್ರಭುತ್ವದ ನೀತಿಯೇ ಜಾತಿಸಂಘಟನೆಗಳು ರಚನೆಯಾಗುವಂತೆ ಮಾಡುತ್ತಿವೆ. ಜಾತಿ ಸಂಘಟನೆಗಳ ಬೇಡಿಕೆಗಳೂ ಇದೇ ಸ್ವರೂಪದಲ್ಲಿರುವುದು ಇದನ್ನು ಮತ್ತಷ್ಟು ಪುಷ್ಟೀಕರಿಸುತ್ತವೆ.

ಈ ರಾಜಕೀಯ ಅನಿವಾರ್ಯತೆಯಿಂದಾಗಿ ಅಸ್ತಿತ್ವಕ್ಕೆ ಬಂದಿರುವ ಜಾತಿಸಂಘಟನೆಗಳು ಆ ಅನಿವಾರ್ಯತೆಯನ್ನು ಈಡೇರಿಸಿಕೊಳ್ಳಲು ತಮ್ಮ ಜಾತಿ ಅಸ್ಮಿತೆಯನ್ನು ಬಲಪಡಿಸಿಕೊಳ್ಳಲೇ ಬೇಕಾಗುತ್ತದೆ. ಅಷ್ಟೆ ಅಲ್ಲದೇ ಜಾತಿಗಳು ಸಂಖ್ಯಾಬಲದ ಆಧಾರದ ಮೇಲೆ ಒಂದೋ ಪ್ರಬಲ ಜಾತಿಯೆಂದು, ಇಲ್ಲವೇ ಅಲ್ಪಸಂಖ್ಯಾತರೆಂದು ಗುರುತಿಸಿಕೊಳ್ಳಬೇಕೆನ್ನುವ ಪರಿಸ್ಥಿತಿ ಇಂದು ನಿರ್ಮಿತವಾಗಿದೆ. ಆದ್ದರಿಂದ ಜಾತಿಬಲವನ್ನು ಹೆಚ್ಚಿಸಿಕೊಳ್ಳಲು ಸಂಘಟನೆಗಳು ಹೋಲಿಕೆ ಇರುವ ಜಾತಿಗಳನ್ನು ಒಂದೇ ಸಮುದಾಯಕ್ಕೆ ಸೇರಿದವರೆಂದು, ಅವುಗಳನ್ನು ಒಂದು ಅಸ್ಮಿತೆಯಡಿಯಲ್ಲಿ ತರುತ್ತಿವೆ. ಆದರೆ ಜಾತಿಗಳ ನಡುವಿನ ವ್ಯತ್ಯಾಸವನ್ನು ಗಣಿಸದೇ ಅವುಗಳನ್ನು ಒಂದು ಅಸ್ಮಿತೆ ಅಡಿಯಲ್ಲಿ ತರುವುದರಿಂದ ಅವುಗಳು ರಾಜಕೀಯ ಸಮುದಾಯಗಳಾಗಿ ಮಾತ್ರ ರಚನೆಯಾಗುತ್ತವೆಯೇ ವಿನಃ ಸಾಮಾಜಿಕ ಸಮುದಾಯಗಳಾಗಿ ಉಳಿಯುವುದಿಲ್ಲ. ಆದ್ದರಿಂದಲೇ ಆ ಜಾತಿಗಳು ತಮ್ಮ ಸಾಮಾಜಿಕ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿಕೊಳ್ಳುತ್ತಿವೆ. ಆದರೆ ಇದನ್ನು ‘ಮೀಸಲಾತಿಯಿಂದಾಗಿ ಜಾತಿಗಳೊಳಗೇ ಉಪಪಂಗಡಗಳು ಏರ್ಪಟ್ಟು ಅವುಗಳೂ ಸಹ ತಮ್ಮ ಅಸ್ತಿತ್ವವನ್ನು ಪ್ರತಿಪಾದಿಸತೊಡಗಿವೆ’ (ಪ್ರಜಾವಾಣಿ ಜಾತಿಸಂವಾದ) ಎನ್ನಲಾಗುತ್ತಿದೆ. ಅವೆಲ್ಲಾ ಒಂದೇ ಜಾತಿಯಾಗಿದ್ದರೆ ಪ್ರತ್ಯೇಕ ಅಸ್ತಿತ್ವದ ಮೂಲಕ ಮೀಸಲಾತಿಯನ್ನು ಪಡೆಯಬೇಕು, ತಮ್ಮ ಜಾತಿಯ ಸೌಲಭ್ಯಗಳು ಬೇರೆಯವರ ಪಾಲಾಗುತ್ತಿವೆ ಎಂಬ ಮಾತುಗಳು ಬರುವುದಕ್ಕೂ ಸಾಧ್ಯವಿರುತ್ತಿರಲಿಲ್ಲ.

ಇನ್ನೊಂದೆಡೆ, ಯಾವ ತಾರತಮ್ಯವನ್ನು ಹೋಗಲಾಡಿಸಲು ಜಾತಿವ್ಯವಸ್ಥೆಯನ್ನು ನಾಶಮಾಡಬೇಕು ಎನ್ನಲಾಗುತ್ತದೆಯೋ ಆ ವ್ಯವಸ್ಥೆಯನ್ನು ರಾಜಕೀಯ ವ್ಯವಸ್ಥೆಯೇ ತನ್ನ ಯೋಜನೆಗಳಿಂದಾಗಿ ಹುಟ್ಟುಹಾಕುತ್ತಿದೆ. ಪ್ರಭುತ್ವದ ನೀತಿಗಳು ಜಾತಿವ್ಯವಸ್ಥೆಯ ಮೇಲುಕೀಳು ವಿವರಣೆಗಳನ್ನು ಆಧಾರಿಸಿ ಜಾತಿ ಆಧಾರಿತ ಅದರಲ್ಲೂ ‘ಕೆಳಜಾತಿ’ಗಳಿಗೆ ಹೆಚ್ಚಿನ ಸೌಲಭ್ಯ ನೀಡಬೇಕೆಂದು ಹೇಳುತ್ತವೆ. ಈ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದರೆ ತಾವು ಕೆಳಜಾತಿ ಎಂದು ಹೇಳಿಕೊಳ್ಳಬೇಕಾಗುತ್ತದೆ. ಪ್ರಚಲಿತದಲ್ಲಿ ರಾಜಕೀಯ ವ್ಯವಸ್ಥೆಯೊಳಗೆ ಯಾವೊಂದೂ ಜಾತಿಯೂ ತಾವು ಶ್ರೇಷ್ಠವೆಂದು ಹೇಳಿಕೊಳ್ಳುವುದಿಲ್ಲ. ಬದಲಾಗಿ ತಾವು ಕೆಳಜಾತಿಯವರು, ಸಾಮಾಜಿಕವಾಗಿ ಹಿಂದುಳಿದವರು ಎಂದೇ ಹೇಳಿಕೊಳ್ಳುತ್ತವೆ. ಹೀಗೆ ಹೇಳಿಕೊಂಡರೇ ಮಾತ್ರ ಆ ಯೋಜನೆಗಳಿಗೆ ಭಾಜನರಾಗಲು ಸಾಧ್ಯ. ಈ ರೀತಿ ಜಾತಿಶ್ರೇಣೀಕರಣ ಪರಿಕಲ್ಪನೆಯನ್ನು ಗಟ್ಟಿಗೊಳಿಸುವಂತಹ ಮತ್ತು ಜಾತಿಗಳನ್ನು ರಾಜಕೀಯ ಸಮುದಾಯಗಳನ್ನಾಗಿ ರೂಪಿಸುವ ಮೂಲಕ ಸಾಂಸ್ಥಿಕವಾಗಿ ಜಾತಿವ್ಯವಸ್ಥೆಯನ್ನು ಹುಟ್ಟುಹಾಕುತ್ತಿದೆ. ಹಾಗಾಗಿ ಜಾತಿಸಂಘಟನೆಗಳು ಜಾತಿ ಅಸ್ಮಿತೆ ಮತ್ತು ಜಾತಿವಿನಾಶವೆಂಬ ತದ್ವಿರುದ್ಧವಾದ ಕೆಲಸದಲ್ಲಿ ತೊಡಗಿಸಿಕೊಂಡಿರುವುದಕ್ಕೆ ಪ್ರಭುತ್ವವೇ ಸೂತ್ರಧಾರಿಯಾಗಿದೆ.

Read more from ಲೇಖನಗಳು

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments